Tuesday 19 September 2023

ಅಕ್ಕಮಹಾದೇವಿಯ ಅನುಪಮ ಯಾನ - ಬೆಳಗಿನೊಳಗು, ಕಾದಂಬರಿ.

 

          ʻʻಬತ್ತಲೆಗಂಟಿಕೊಳ್ಳುವುದು ಬಟ್ಟೆಗಂಟಿಕೊಳ್ಳುವುದು  ಎರಡೂ ನನ್ನ ಉದ್ದೇಶವಲ್ಲ. ಸ್ತನ ನಿತಂಬ ಲಲಾಟಗಳ ಚೆಲುವಿಕೆಯ ರೂಪವನ್ನಷ್ಟೇ ಹೆಣ್ಣೆಂದು, ಹೆಂಡತಿಯೆಂದು ಭಾವಿಸಿದ್ದನ್ನು ಅಲ್ಲ ಅಲ್ಲವೆನ್ನಲು ಎಲ್ಲ ಕಿತ್ತೊಗೆದೆ. ಕಾಯಮೀರಿದ ಇರುವಿಕೆಯೂ ಹೆಣ್ಣಿಗಿದೆ ಎಂದು ಹೇಳಲು ತಕ್ಷಣಕ್ಕೆ ಸಂಭವಿಸಿದ್ದು ದಿಗಂಬರತ್ವ.ʼ      ʻʻಗೋಡೆಯ ಹಿಂದೆ ದೀಪವಿದೆ. ದೀಪದ ಬೆಳಕು ಬೇಕೆಂದರೆ ಗೋಡೆ ಸರಿಸಬೇಕು. ಅಥವಾ ಒಡೆಯಬೇಕು. ಈ ಬಟ್ಟೆಯೆಂಬುದೊಂದು ಗೋಡೆ. ಅಂಟು ನಂಟುಗಳೆನ್ನುವುದು ಒಂದು ಗೋಡೆ. ಅದರ ಹಿಂದಿರುವ ಸ್ವಸ್ವರೂಪವೆಂಬ ದೀಪವನ್ನರಸುತ್ತ ನಡೆದಿರುವೆ ಅಕ್ಕಗಳಿರಾ,ʼʼ       (ಅಕ್ಕಮಹಾದೇವಿ )

        ಉಡುತಡಿಯಿಂದ  ಕದಳೀವನದ  ವರೆಗಿನ   ಪಾದಯಾತ್ರಾ  ಪಥದ  ಸಾಂಸ್ಕೃತಿಕ ಶ್ರೀಮಂತಿಕೆ, ಪರಿಸರ, ಜನಾಂಗೀಯ  ವೈವಿಧ್ಯ, ಪಕ್ಷಿ ಪ್ರಾಣಿಗಳ ವಿವರ, ಧಾರ್ಮಿಕ ಸಂ ಘರ್ಷ,ಗಳ  ಪ್ರತ್ಯಕ್ಷದರ್ಶನದ  ಬಹುದೀರ್ಘ  ಪಯಣವೊಂದು   ಹನ್ನೆರಡನೆಯ ಶತಮಾನಕ್ಕೇ ಕೊಂಡೊಯ್ಯುವ  ತಾಕತ್ತನ್ನು ಒಂದು ಕೃತಿ  ಓದುಗನಿಗೆ  ನೀಡುತ್ತಿರುವ  ಅರ್ಥಪೂರ್ಣ  ಸಂದರ್ಭ  ನಮಗೆದುರಾಗುತ್ತಿದೆ.

    ಇತ್ತೀಚಿನ  ವರ್ಷಗಳಲ್ಲಿ ಇಷ್ಟು ಸುದೀರ್ಘವಾದ   ಐತಿಹಾಸಿಕ ಭಿತ್ತಿಯ  ಮೇಲೆ  ಚಿತ್ರಣಗೊಂಡ  ಒಂದು  ಜೀವನಪ್ರವಾಹವನ್ನು  ನಾವು  ಕಂಡಿರಲಿಲ್ಲ.  ಅದು  ಡಾ|| ಎಚ್.ಎಸ್.‌ ಅನುಪಮಾ ರವರ  ಬೆಳಗಿನೊಳಗು  ಎಂಬ  ಕಾದಂಬರಿಯ  ಮೂಲಕ  ಸಾಕಾರಗೊಂಡಿದೆ . ಏಳುನೂರಾ  ಐವತ್ತು ಪುಟಗಳಷ್ಟು ವಿಶಾಲವಾದ  ಸಮೃದ್ಧ ಪುಟಗಳಲ್ಲಿ  ಹಬ್ಬಿಕೊಂಡ  ಪ್ರಸ್ತುತ  ಕೃತಿ,  ಅಧ್ಯಾಯ ದಿಂದ  ಅಧ್ಯಾಯಕ್ಕೆ  ಮಾನವ  ಬದುಕಿನ  ನಗ್ನಸತ್ಯವನ್ನು  ಅನಾವರಣ ಗೊಳಿಸುತ್ತಲೇ  ಸಾಗುವ  ಗದ್ಯಮಹಾಕಾವ್ಯವಾಗಿ  ರೂಪುಗೊಂಡಿದೆ.  ಕುವೆಂಪು ನಿಸರ್ಗ,  ಕಾರಂತರ ಜೀವನಶ್ರದ್ಧೆ, ಪರಂಪರೆಯ  ಆಧ್ಯಾತ್ಮಿಕ ದೃಷ್ಟಿಮತ್ತು  ಆಧುನಿಕ ವೈಚಾರಿಕತೆಗಳ  ಸುವರ್ಣಸಂಗಮವಾಗಿರುವ  ಪ್ರಸ್ತುತ  ʻʻಬೆಳಗಿನೊಳಗುʼʼ ಕೃತಿ  ಕಾದಂಬರಿಯಾಗಿ ಒಂದೇ ಅಲ್ಲ, ಅದನ್ನೂ ಮೀರಿದ ಒಂದು ಶ್ರೇಷ್ಟ ಗದ್ಯಕಾವ್ಯವಾಗಿ  ರೂಪುಗೊಂಡಿದೆ.

     ಕರ್ನಾಟಕದ  ಮಟ್ಟಿಗೆ  ಹನ್ನೆರಡನೆಯ  ಶತಮಾನ   ತಾತ್ವಿಕ  ಧಾರ್ಮಿಕ  ಸಂಘರ್ಷದ  ಕಾಲ.  ಹತ್ತು ಹಲವು  ಸೈದ್ಧಾಂತಿಕ  ಗೊಂದಲದಲ್ಲಿ  ಸಾಮಾನ್ಯ ಜೀವನ  ನರಳುತ್ತಿರುವ  ವಿಕ್ಷಿಪ್ತ ಸಮಯ.   ಅದೇ  ಸಂದರ್ಭಕ್ಕೆ  ಮುಖಾಮುಖಿಯಾಗಿ  ಬಸವಣ್ಣನವರ  ಸಾಮಾಜಿಕ  ಆಧ್ಯಾತ್ಮಿಕ  ಕ್ರಾಂತಿ , ಸಂಚಲನವನ್ನುಮೂಡಿಸಿದ   ಅಪೂರ್ವ ಕಾಲ.  ಪ್ರಜಾಪ್ರಭುತ್ವದ  ಮೂಲಪಾಠವನ್ನು ರೋಚಕವಾಗಿ  ಜಗತ್ತಿಗೆ  ಅದೇ  ಪ್ರಥಮಬಾರಿಗೆ  ದರ್ಶಿಸಿದ  ಅನುಪಮ  ಕ್ಷಣ.          ಏಕ ಕಾಲದಲ್ಲಿ ನೂರಾರು  ಶರಣ ಶರಣೆಯರನ್ನು ಸೃಷ್ಟಿಸಿ,   ಅಪರೂಪವಾದ  ತಾತ್ವಿಕ  ಪ್ರವಾಹವನ್ನುಂಟು  ಮಾಡಿದ  ವಚನಚಳುವಳಿ,  ಈ ವರ್ತಮಾನದ  ವಿಜ್ಞಾನದ  ಆಧುನಿಕತೆಯ  ಅಹಮಿಕೆಗೆ  ಸರಿಯಾದ ಏಟು ಕೊಡುತ್ತಿರುವುದಂತೂ  ಸತ್ಯ. ಕಲ್ಯಾಣದ  ಕ್ರಾಂತಿ  ಅದೊಂದು  ಬೆರಗು.  ಅದೊಂದು ವಿಸ್ಮಯ.

          ವಚನ  ಚಳುವಳಿ  ಅದೊಂದು  ಪ್ರಜಾಪ್ರಭುತ್ವಾತ್ಮಕ  ಪ್ರವಾಹ.  ಯಾವುದೋ  ಗುಹೆಯಲ್ಲೋ  ಮರದಡಿಯಲ್ಲೋ  ಉದ್ಭವಗೊಂಡಿದ್ದಲ್ಲ.  ಅಪ್ಪಟ  ಮಣ್ಣಿನಿಂದೆದ್ದ  ಸಾಮಾನ್ಯ ಬದುಕಿನ  ಸಾರವನ್ನು ಹೀರಿಕೊಂಡ,  ಲೌಕಿಕತೆಯಲ್ಲೇ  ಉಸಿರಾಡುತ್ತ, ಆಧ್ಯಾತ್ಮಿಕತೆಯನ್ನು  ಮೈಗೂಡಿಸಿಕೊಂಡ  ತಾತ್ವಿಕ  ಆಂಧೋಲನ. ಮಾನವೀಯ  ಮೌಲ್ಯದ  ಸಂಚಲನ.  ಅದರಲ್ಲಿಯೂ  ಮಹಿಳೆಯರ  ಆಂತರಿಕ ಬದುಕಿನ  ನೋವು ತಲ್ಲಣಗಳು  ಅನಾವರಣಗೊಂಡಿದ್ದು,  ಮಹಿಳೆಯರಲ್ಲೂ  ತಾತ್ವಿಕ  ಜಾಗ್ರತಿ  ಮೂಡಿದ್ದು ಇದೇ ಸಂದರ್ಭದಲ್ಲಿ ಎಂಬುದನ್ನು ಗಮನಿಸಲೇ ಬೇಕಿದೆ.

     ಇತಿಹಾಸದ ಪುಟಗಳಲ್ಲಿ  ಪುರುಷ ಆಧ್ಯಾತ್ಮಿಕ  ಸಾಧಕರು  ಸಾಕಷ್ಟು ಸಂಖ್ಯೆಯಲ್ಲಿ ವಿಜ್ರಂಭಿಸಿದ್ದಾರೆ.  ಆದರೆ  ಅಕ್ಕಮಹಾದೇವಿಯಂತಹ  ಅದೆಷ್ಟೋ  ಸಾಧಕರು  ಇನ್ನೂ  ಕಾನನ ಕುಸುಮಗಳಾಗಿಯೇ  ಇರುವಂತಾಗಿದ್ದು  ವಿಷಾದನೀಯ.   ಪುರುಷ  ಪ್ರಭುತ್ವದೆದುರು  ಶಿವ  ಶರಣೆಯರ  ಸಾತ್ವಿಕ  ಪ್ರತಿರೋಧ  ಪ್ರಪಂಚಕ್ಕೊಂದು   ಅತ್ಯಮೂಲ್ಯ  ಸಂದೇಶವಾದರೂ,  ಜಾಗತಿಕ  ಸ್ತ್ರೀವಾದದ ಇತಿಹಾಸದಲ್ಲಿ  ಸೂಕ್ತ  ಸ್ಥಾನ  ಪಡೆಯದಿರಲು,  ಅದು  ಕನ್ನಡಭಾಷೆಯಲ್ಲಿ  ಘಟಿಸಿದ್ದು  ಒಂದು  ಕಾರಣವಾದರೆ,  ಕನ್ನಡಿಗರ  ದಿವ್ಯ  ನಿರ್ಲಕ್ಷವೂ  ಪ್ರಮುಖ  ಕಾರಣವೇನೋ.

       ನೆಲೆಯಲ್ಲಿ  ಕನ್ನಡದ  ಸೃಜನಶೀಲ  ಆಯಾಮಕ್ಕೆ   ಬೆಳಗಿನೊಳಗು  ಕೃತಿ  ಪ್ರವೇಶವಾದುದು  ಒಂದು  ರೋಚಕ  ಬೆಳವಣಿಗೆ.   ನಮ್ಮ ಪುರಾಣ ಇತಿಹಾಸಗಳಲ್ಲಿ  ಪುರುಷ  ದೇವರುಗಳ,  ರಾಜಮಹಾರಾಜರುಗಳ   ಬಾಲ್ಯದ  ಪವಾಡಪೂರ್ಣ  ವರ್ಣನೆಗಳು  ಸಾಕಷ್ಟು  ಸಂಖ್ಯೆಯಲ್ಲಿ  ಇಡಕಿರಿದಿವೆ.  ರಾಮ,  ಕೃಷ್ಣರ  ಬಾಲ್ಯದ  ವಿವರವಗಳಂತೂ  ಕಣ್ಣುಕುಕ್ಕುವಷ್ಟು  ತುಂಬಿಕೊಂಡಿವೆ.  ಹಾಗೆಂದು  ಸರಸ್ವತಿ,  ಲಕ್ಷ್ಮಿ ಪಾರ್ವತಿ,  ಸೀತೆ, ದ್ರೌಪದಿಯಂತಹ  ಪುರಾಣ ಪಾತ್ರಗಳ  ಬಾಲಲೀಲೆಗಳು  ಎಲ್ಲೂ ಕಾಣದು.

  ಕೊರತೆಯನ್ನು  ಅಕ್ಕಮಹಾದೇವಿ  ತುಂಬಿಕೊಟ್ಟಿದ್ದಾಳೆ.   ಪ್ರಸ್ತುತ  ಕೃತಿಯಲ್ಲಿ  ಸರಿಸುಮಾರು  ಅರ್ಧದಷ್ಟು  ಸ್ಥಳ   ಅಕ್ಕಮಹಾದೇವಿಯ  ಆಸಕ್ತಿಪೂರ್ಣ  ಬಾಲ್ಯ ಮತ್ತು ಯೌವನಗಳ  ಸುಂದರ  ವಿವರಗಳು  ಮೂಡಿಕೊಂಡಿವೆ.   ಪುಟ್ಟ ಬಾಲಕಿ  ಮಾದಿ  ಸಾಮಾನ್ಯ ಹೆಣ್ಣುಮಕ್ಕಳಂತಲ್ಲದೇ  ಹೆಜ್ಜೆ ಹೆಜ್ಜೆಗೆ  ಸುತ್ತಲಿನ  ಪರಿಸರವನ್ನು, ಹಿರಿಯರ  ಚಟುವಟಿಕೆಗಳನ್ನು,  ಸೂಕ್ಷ್ಮವಾಗಿ  ಗಮನಿಸುತ್ತಾ, ಧೈರ್ಯದಿಂದ  ಪ್ರಶ್ನೆಗಳ  ಮಳೆಸುರಿಸುತ್ತಾ,  ಕೆಲವೊಮ್ಮೆ  ಹಿರಿಯರನ್ನೇ  ಬೆರೆಗಾಗಿಸುತ್ತ  ಬೆಳೆಯುತ್ತಾಳೆ. ಜಾತಿ ಜಾತಿಗಳಲ್ಲಿ  ಮೇಲು  ಕೀಳು, ಧಾರ್ಮಿಕ  ಸಾಂಸ್ಕೃತಿಕ  ವ್ಯಾವಹಾರಿಕ  ಕ್ಷೇತ್ರದಲ್ಲಿ  ಹೆಣ್ಣು ಗಂಡು ಭೇದ,  ಮುಂತಾದ  ತರತಮಗಳನ್ನು  ಪುಟ್ಟಬಾಲೆ  ಗಮನಿಸುತ್ತಾಳೆ.  ಪ್ರಶ್ನಿಸುತ್ತಾಳೆ.  ಪ್ರತಿಭಟಿಸುತ್ತಾಳೆ.  ಪಾಲಕರಿಂದ  ಶಿಕ್ಷೆಗೂ  ಒಳಗಾಗುತ್ತಾಳೆ.

        ಆ ಕಾಲದ  ಸಾಮಾನ್ಯ ಜನಜೀವನ  ಅದೆಷ್ಟೇ  ಕಷ್ಟ ನಷ್ಟದಿಂದ, ತರತಮ ಮೇಲುಕೀಳಿಂದ  ತುಂಬಿರಲಿ,  ಪ್ರತಿಯೊಬ್ಬರಲ್ಲೂ ಸಾಂಸ್ಕೃತಿಕ  ತುಡಿತ ಜೀವಪಡೆದು  ವಿಜ್ರಂಭಿಸುತ್ತಿತ್ತು  ಎಂಬುದನ್ನು ಪುಟ್ಟ ಬಾಲೆ  ಮಾದಿ  ಗಮನಿಸುವ  ಬತ್ತ ಕುಟ್ಟಿ ಅಕ್ಕಿಮಾಡುವ  ಶ್ರಮಿಕ  ಮಹಿಳೆಯರಿಂದ  ಹಾಡಲ್ಪಡುವ  ಜನಪದ ಹಾಡು  ಅನಾವರಣಗೊಳಿಸುತ್ತದೆ.

.   ʻʻಅಂದು ಬೆಳಿಗ್ಗೆ ಬತ್ತಕುಟ್ಟುವ ಕೆಲಸ ಆರಂಭವಾಯಿತು. ಒಬ್ಬರಾದ ಮೇಲೊಬ್ಬರು  ಹಾಂ ಹೂಂ ಎನ್ನುತ್ತ, ಕಾಲಿಂದ  ಬತ್ತ ತಳ್ಳುತ್ತ ಹಾಡತೊಡಗಿದರು. .........ಹಾಡಿನಸೊಲ್ಲು ಕೇಳಿದ್ದೇ  ಹಾಡು ಹುಚ್ಚಿನ ಪುಟ್ಟಿ  ಬತ್ತದ ಒಳಾಲಿನಲ್ಲಿ ಸ್ಥಾಪನೆಯಾದಳುʼʼ

       ನಮ್ಮನೀ ಸುತ್ತಲೂ  ಕೆಮ್ಮಣ್ಣಿನ  ಪಾಗಾರ / ಧೂಳ ಕಾಲವರೇ ಬರಬೇಡಿ / ಧೂಳ ಕಾಲವರೇ ಬರಬೇಡಿ ನಮ್ಮನೆಗೆ / ಚಿನ್ನದ ಕಾಲ್‌ ಒಡೆಯರು ಬರುತಾರೆ / ಹ್ಯಾಂ ಹ್ಙೂಂ   ಹ್ಯಾಂ ಹೂಂ||

         ಬತ್ತ ತೋಳು ಕೈಗೆ ಬೈಯ್ಣಿ ಮುಳ್ಳು ಹೆಟ್ಟಿತ / ಮದ್ದಿಗೆ  ಹ್ವಾದಣ್ಣ ಬರಲಿಲ್ಲಾ/ ಮದ್ದೀಗ್‌ ಹ್ವಾದಣ್ಣಾ ಬರಲಿಲ್ಲ ಬಸ್ರೂರ್‌ / ಸೂಳಿ ಕಂಡಲ್ಲೇ ಒರಗೀದಾ./  ಹ್ಯಾಂ ಹ್ಙೂಂ ||

      ಹಾದಿ ಮ್ಯಾಲ್‌ ಹ್ವಾಪರೆ  ಹಾಡೆಂದು ಕಾಣಬೇಡಿ/  ಹಾಡಲ್ಲ ನನ್ನ ಒಡಲೂರಿ/  ಹಾಡಲ್ಲ ನನ್ನ ಒಡಲೂರಿ  ದೇವರೇ /  ಬೆವರಲ್ಲ ನನ್ನ ಕಣ್ಣೀರು./  ಹ್ಯಾಂ  ಹೂಂ ||

      ಬಾಲೆ  ಮಹಾದೇವಿ  ಪ್ರೌಢೆಯಾಗುತ್ತಲೇ  ಸಾಂಪ್ರದಾಯಿಕವಾದ  ಬದುಕು  ಪ್ರಾರಂಭಗೊಳ್ಳುತ್ತದೆ. ಹೆಣ್ಣಿನ ತಂದೆ- ತಾಯಿಯರ  ಸಹಜವಾದ ಪ್ರಕ್ರಿಯೆ  ಪ್ರಾರಂಭಗೊಳ್ಳುತ್ತದೆ.  ಲಿಂಗಾಯತಳಾದ ಮಹದೇವಿಯ  ಜಾಣತನ  ಜ್ಙಾನ  ಕವಿತನ  ಚುರುಕುತನ, ಮತ್ತು  ಸೌಂದರ್ಯದಿಂದ  ಆಕರ್ಷಿತನಾದ  ಸ್ಥಳೀಯ  ಸಂಸ್ಥಾನಿಕ  ಜೈನಧರ್ಮಿ ಕಸಪಯ್ಯ  ಅವಳನ್ನು ಮದುವೆಯಾಗಲು ಅಪೇಕ್ಷಿಸುತ್ತಾನೆ.  ಹದಿಹರೆಯದ  ಮಹದೇವಿ  ಆಗಲೇ  ಆಧ್ಯಾತ್ಮಿಕತೆಯನ್ನು ತನ್ನೊಳಗೆ ಪೋಷಿಸಿಕೊಂಡು, ನಿಜವಾದ  ಭಕ್ತಿಯೆಂದರೇನು  ಬದುಕೆಂದರೇನು ಎಂಬ ಅನ್ವೇಷಣೆಯಲ್ಲಿ  ತೊಡಗಿಕೊಂಡವಳು. ತನ್ನ ವಯಸ್ಸನ್ನೂ ಮೀರಿದ  ಜ್ಙಾನ ಪಿಪಾಸುವಾದ ಅವಳಲ್ಲಿ  ಆಗಲೇ ಸುತ್ತಲೂ ಕವಿದಿರುವ  ಮೂಢ ಆಚಾರಗಳು, ಜಾತಿಸಂಘರ್ಷ, ಧರ್ಮಸಂಘರ್ಷ, ಗಳ ಬಗೆಗೆ  ತೀವ್ರ ಅಸಹನೆಯನ್ನು  ಬೆಳೆಸಿಕೊಂಡವಳು.

     ತನ್ನನ್ನು  ವಿವಾಹವಾಗ ಬಯಸುವ  ಕಸಪಯ್ಯನಲ್ಲಿ  ತನ್ನ ಧೋರಣೆಯನ್ನು  ಸ್ಪಷ್ಟವಾಗಿ  ಧೈರ್ಯದಿಂದ  ಮಂಡಿಸುತ್ತಾಳೆ. ತನ್ನ ವೈಯಕ್ತಿಕ ನಂಬಿಗೆಗೆ  ಎಂದೂ  ತಡೆಯುಂಟುಮಾಡಬಾರದೆಂಬ  ಶರತ್ತು ವಿಧಿಸುತ್ತಾಳೆ.  ಅದೆಲ್ಲಕ್ಕೂ ಒಪ್ಪಿಗೆಯಿತ್ತ  ಕಸಪಯ್ಯನನ್ನು  ವರಿಸುತ್ತಾಳೆ.  ಮಾನವ ಸಹಜ  ಕಾಮ ಪ್ರೇಮಗಳಿಂದ  ಮಹದೇವಿ ವಂಚಿತಳಲ್ಲ. ತನ್ನ ಮತದಿಂದ  ಹೊರತಾಗಿ  ಜೈನಧರ್ಮಿಯನ್ನು ವರಿಸಿಯೂ,  ಅದನ್ನು ಗೌರವಿಸುತ್ತಲೇ  ತನ್ನ ಶೈವತನವನ್ನು ಜಾಗ್ರತವಾಗಿ  ಕಾಯ್ದುಕೊಳ್ಳುತ್ತಾಳೆ.

    ಆದರೆ  ಅವಳ ಗಂಡ ಮತ್ತು ಅವನ ಪರಿವಾರ, ಕ್ರಮೇಣ  ಮಹದೇವಿಯ ನಿತ್ಯದ ಅನುಷ್ಠಾನಕ್ಕೆ ಭಂಗ ತರಲು ತೊಡಗಿದಾಗ,  ಸಿಡಿಮಿಡಿ ಗೊಳ್ಳುತ್ತಾಳೆ.  ಗಂಡನ ಅಧಿಕಾರ, ಶ್ರೀಮಂತಿಕೆಯ ಪ್ರತಿಷ್ಠೆ, ಜನಸಾಮಾನ್ಯರಿಂದ ದೂರಮಾಡುತ್ತಿರುವುದನ್ನು ಆಕೆ ಸಹಿಸದಾದಳು.  ಅದೆಲ್ಲವನ್ನೂ ಮೀರಿ  ಕಸಪಯ್ಯ ಪ್ರೇಮಿಯಾಗುವ ಬದಲು ಕಾಮಿಯಾಗಿ, ಗೆಳೆಯನಾಗುವ ಬದಲು ಒಡೆಯನಾಗಿ ದರ್ಪಮೆರೆಯತೊಡಗಿದಾಗ,  ಮಹಾದೇವಿಯ  ತಾತ್ವಿಕ ಕನಸುಗಳೆಲ್ಲ ನುಚ್ಚುನೂರಾಗಲು ಪ್ರಾರಂಭವಾಗುತ್ತದೆ. 

   ಶಾಕ್ತಸಂಪ್ರದಾಯದ  ನಗ್ನಮೂರ್ತಿ ಲಜ್ಜಾಗೌರಿ, ದೇವಾಲಯದ ಲೈಂಗಿಕ ಶಿಲ್ಪ, ನಗ್ನ ಪ್ರಾಣಿ ಪಕ್ಷಿಗಳು,  ಮುಂತಾದ ದೃಶ್ಯಗಳು ಮಹದೇವಿ ಬಾಲ್ಯದಿಂದಲೇ ನೋಡುತ್ತ ಬೆಳೆದವಳು. ಎಲ್ಲೆಂದರಲ್ಲಿ ಕಾಣಸಿಗುವ ನಗ್ನ ಜೈನಮುನಿಗಳ ದಂಡನ್ನು ಕಂಡು ಅಚ್ಚರಿಪಟ್ಟವಳು. ಪುರುಷ ಸನ್ಯಾಸಿಗಳು ಮಾತ್ರ ಏಕೆ ನಗ್ನರಾಗಿರುತ್ತೀರಿ, ಹೆಣ್ಣು ಸಾಧಕರೇಕೆ ಬಟ್ಟೆ ತೊಡುತ್ತಾರೆ...? ಎಂದು ಧೈರ್ಯದಿಂದಲೇ ಪ್ರಶ್ನಿಸುತ್ತಾಳೆ.   ತನ್ನೊಳಗೇ ಶಿವನನ್ನು ಸ್ಥಾಪಿಸಿಕೊಂಡು ಭಕ್ತಿ ಮತ್ತು ಪ್ರೇಮದಿಂದ ಆರಾಧಿಸುತ್ತಿರುವ.  ಇಂಥ  ಮಹದೇವಿಯ ಆತ್ಮ, ಶ್ರೀಮಂತನ ಅತಿ ಲೌಕಿಕ, ಭೋಗಮುಖೀ ಬದುಕು ರೇಜಿಗೆಯುಂಟುಮಾಡುತ್ತದೆ. ಸ್ವತಂತ್ರ ಚಿಂತನೆಯ  ಮಹದೇವಿಗೆ  ಅವಳ ಅರಮನೆಯೇ ಬಂಗಾರದ ಪಂಜರವಾಗಿ ಪರಿಣಮಿಸುತ್ತಿರುವಾಗಲೇ,  ಅವಳ ಬದುಕಿನ ಮಹಾತಿರುವು ಘಟಿಸುತ್ತದೆ.

     ತನ್ನ ಬಾಲ್ಯದ ಗೆಳತಿ, ಕುರುಬರ ಚಂದ್ರಿಯನ್ನು  ಅದೆಷ್ಟೋ ತಿಂಗಳಿಂದ ಭೇಟಿಯಾಗದೇ ಬೇಸರ ಒಂಟಿತನ ಕಾಡತೊಡಗಿದಾಗ, ಅವಳನ್ನು ಒಮ್ಮೆ ಕಂಡುಬರುವ ಆಸೆಯನ್ನು ಗಂಡನೆದುರು ಮಂಡಿಸಿದಾಗ, ಆತ ತಿರಸ್ಕರಿಸುತ್ತಾನೆ. ರಾಣಿಯಾಗಿ  ಸಾಮಾನ್ಯರನ್ನು ಅವರ ಮನೆಗೇ ಹೋಗಿ ಮಾತನಾಡುವುದೆಂದರೆ ಭಾರೀ ಅವಮಾನವೆಂದು ತಿಳಿಯುತ್ತಾನೆ.

    ಆದರೂ  ಮಹದೇವಿ ಆತನ ಆಜ್ಞೆಯನ್ನೂ ಧಿಃಕರಿಸಿ  ಚಂದ್ರಿಯ ಗುಡಿಸಲಿಗೆ ಹೋಗುತ್ತಾಳೆ. ಕಸಪಯ್ಯ ಉಗ್ರವಾಗಿ ಪ್ರತಿಭಟಿಸಿ,  ನೀನು  ನನ್ನವಳು, ನಿನ್ನ ಮೇಲಿರುವ  ಆಭರಣಗಳು ನನ್ನದು, ನೀ ಉಟ್ಟ ಬಟ್ಟೆ ನನ್ನದು,  ನೀನುಳಿದ ಅರಮನೆ ನನ್ನದು, ಆಜ್ಞೆ ನನ್ನದು, ಎಂದು ಅರಚುತ್ತಾ, ಹಲ್ಲೆಮಾಡುತ್ತಾನೆ. ಹೆಣ್ಣು ಅಂದರೆ ಆಸ್ತಿ, ಎಂಬ ಪುರುಷಾಹಂಕಾರದಲ್ಲಿ ಗರ್ಜಿಸುತ್ತಾನೆ.

    ಮಹದೇವಿ, ಮೌನವಾಗಿ  ಆಭರಣವನ್ನು ಕಳಚಿ ಎಸೆಯುತ್ತಾಳೆ. ಉಟ್ಟ ಒಂದೊಂದೇ ಉಡುಗೆಯನ್ನು ಕಳಚಿ ಎಸೆಯುತ್ತಾಳೆ.  ಸಂಪೂರ್ಣ ನಗ್ನಳಾಗಿ,  ಇನ್ನು ನಾನು ಸ್ವತಂತ್ರ,  ಎಂದು ಘೋಷಿಸುತ್ತಾಳೆ. ನಗ್ನತೆಯನ್ನು  ನೋಡಲಾಗದ ಗೆಳತಿ ಚಂದ್ರಿ ಕಂಬಳಿಯೊಂದನ್ನು ಅವಳಮೈಮೇಲೆ ಎಸೆಯುತ್ತಾಳೆ.

   ಮುಕ್ತಳಾದ  ಮಹಾದೇವಿ ಬರಿಮೈ  ಬರಿಗಾಲಲ್ಲಿ ತನ್ನ ಮಹಾಪಯಣವನ್ನು ಪ್ರಾರಂಭಿಸುತ್ತಾಳೆ. ಮಲೆನಾಡಲ್ಲಿ ಹುಟ್ಟಿದ  ಸ್ತ್ರೀ ತಾತ್ವಿಕತೆ  ಚಿಲುಮೆಯಾಗಿ  ತೊರೆಯಾಗಿ  ಮಹಾನದಿಯಾಗಿ  ಬಯಲೆಲ್ಲ ಪಸರಿಸುತ್ತದೆ. ಹೆಜ್ಜೆ ಹೆಜ್ಜೆಗೆ ಲೌಕಿಕ ಬದುಕಿನ ನಡುವೆ  ಹೆಣ್ಣಿನ ದಯನೀಯತೆಯ  ತಲ್ಲಣಗಳನ್ನು ಅನುಭವಿಸುತ್ತ, ಅನುಭಾವದೆತ್ತರಕ್ಕೆ ಬೆಳೆಯುತ್ತಾಳೆ. ಅಷ್ಟೇನೂ ದೀರ್ಘವಲ್ಲದ ಅವಳ ಅನುಭಾವದ ಬದುಕಿನ  ಪುಟ್ಟ ಅವಧಿಯಲ್ಲೇ  ಅಸಂಖ್ಯಾತ ವಚನಗಳ ಕದಳೀ ವನವನ್ನೇ ಸೃಷ್ಟಿಸುತ್ತಾಳೆ. 

    ಕಲ್ಯಾಣದ ಬಸವಣ್ಣ, ಅಲ್ಲಮ, ಚನ್ನಬಸವಣ್ಣ ರಂಥ  ಶೈವ ಸಾಧಕರನ್ನೂ ಪ್ರಶ್ನಿಸುತ್ತ,  ತತ್ವಮರೆತು ಕೇವಲ ಆಚಾರಕ್ಕೇ ಅಂಟಿಕೊಂಡ  ಅದೆಷ್ಟೋ  ಶರಣರ ಢಾಂಬಿಕತೆಯನ್ನೂ ಅನಾವರಣಗೊಳಿಸುತ್ತ, ಲಿಂಗವಂತಳಾಗಿಯೂ  ಧರಿಸಿದ ಲಿಂಗವನ್ನೂ ತ್ಯಜಿಸಿ, ಬಯಲಾಗುತ್ತಾಳೆ  ಮಹಾದೇವಿ.  ಹಿರಿಯ ಕಿರಿಯ ಶರಣರೆಲ್ಲರ ಪೂಜನೀಯ ಅಕ್ಕನಾಗುತ್ತಾಳೆ. ಅನುಭವ ಮಂಟಪ, ದೇವಾಲಯ, ಮಠಮಾನ್ಯಗಳನ್ನೆಲ್ಲವನ್ನೂ ತೊರೆದು, ನಿಗೂಢ ಕದಳೀವನದ ಗುಹೆಸೇರಿ, ತನ್ನ ಆರಾಧ್ಯದೈವ ಚನ್ನಮಲ್ಲಿಕಾರ್ಜುನನಲ್ಲಿ  ಐಕ್ಯವಾಗುತ್ತಾಳೆ.

   ಗುಂಪು ಕಟ್ಟಲಿಲ್ಲ, ಮಠಸ್ಥಾಪಿಸಲಿಲ್ಲ. ದೇವಾಲಯದ ಗೋಡೆಗಳ ನಡುವೆ ಬಂಧಿಯಾಗಲಿಲ್ಲ. ಎಲ್ಲ ಲೌಕಿಕತೆ ತೊರೆದು, ಬದುಕಿನ ನಿಜದ ಅನ್ವೇಷಣೆಯಲ್ಲಿ ಒಂಟಿ ಹೋರಾಟಗಾರಳಾಗಿ, ತನ್ನ ಬದುಕನ್ನೇ ಒಂದು ಅದ್ಭುತ ಸಂದೇಶವನ್ನಾಗಿಸಿ  ತನ್ನ ವಚನಗಳ ನಡುವೆ ಜೋಪಾನವಾಗಿರಿಸಿ  ತನ್ನ ತಾತ್ವಿಕ ಗುಹೆಯಲ್ಲೇ ನಿರ್ವಾಣಗೈದ  ಅಕ್ಕಮಹಾದೇವಿ,  ಪ್ರಸ್ತುತ ಕೃತಿಯಲ್ಲಿ  ಮತ್ತೆ ಜೀವಪಡೆದಿದ್ದಾಳೆ.  ಆ ಕಾಲದಿಂದ  ಈಕಾಲದ ವರೆಗೂ ಸಾಧನೆಗೆ ಬತ್ತಲುತನ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಯನ್ನು ಜೀವಂತವಾಗಿಯೇ ಇಟ್ಟು  ಬಿಟ್ಟಿದ್ದಾಳೆ.

    ಕೃತಿ ಸಂಪೂರ್ಣ  ಹೆಣ್ಣ ಕಣ್ಣಿಂದ ಕಂಡ ಹೆಣ್ಣೊಬ್ಬಳ ಅಸಾಮಾನ್ಯ ಹೋರಾಟದ ಕಥನ. ಅಂದಿನ ಸಮಾಜವಾಗಲೀ, ಇಂದಿನದ್ದಾಗಲೀ  ಪುರುಷ ಲೋಕದ ಪ್ರವೃತ್ತಿ ಒಂದೇ ಆಗಿದೆ. ಸಂಪೂರ್ಣ ನಗ್ನಳಾಗಿಯೇ ಸಮುದಾಯದ ನಡುವೆ ಬದುಕುವುದು ಕಷ್ಟ ಸಾಧ್ಯ.  ಅದರಲ್ಲೂ  ಹೆಣ್ಣುಪ್ರಕೃತಿಯದ್ದೇ ಆದ, ಸಾಕಷ್ಟು ಸಮಸ್ಯೆಗಳಿದ್ದೇ ಇವೆ. ರಜಸ್ವಲೆಯಾಗುವ ಸಂದರ್ಭದಲ್ಲಿ ಬಟ್ಟೆಯ ಅನಿವಾರ್ಯತೆ ಯಿದ್ದೇ ಇದೆ. ಸಂಪೂರ್ಣ ಕೂದಲಲ್ಲೆ ಮುಚ್ಚಿಕೊಳ್ಳುತ್ತೇನೆನ್ನುವುದು  ಹಾಸ್ಯಾಸ್ಪದ. ಅದಕ್ಕಾಗಿಯೇ  ಕೃತಿಕಾರರು, ಮೈಮುಚ್ಚಲು ಕಂಬಳಿ, ಮಾನಮುಚ್ಚಲು ತುಂಡು ಬಟ್ಟೆನೀಡಿ, ಹೆಣ್ಣು ಸಮಸ್ಯೆಗೊಂದು ಪರಿಹಾರ ಕಂಡುಕೊಂಡಿದ್ದಾರೆ.

     ಪ್ರಸ್ತುತ ಕೃತಿ ಕೇವಲ ಅಕ್ಕನ ಜೀವನ ವೃತ್ತಾಂತವಾಗಿಲ್ಲ.  ಶರಣ ಕ್ರಾಂತಿಯ ಸೋಲು ಗೆಲುವು, ಶಕ್ತಿ ದೌರ್ಬಲ್ಯಗಳ ವಿಮರ್ಶೆಯಾಗುತ್ತ,  ಸಮಕಾಲೀನ ಧಾರ್ಮಿಕ  ಸಾಮಾಜಿಕ  ವ್ಯಾವಹಾರಿಕ, ಮತ್ತು ಸಾಂಸ್ಕೃತಿಕತೆಯ  ವಾಸ್ತವದ ಮತ್ತು ಸಂಘರ್ಷದ ಮಾರ್ಮಿಕ ಚಿತ್ರಣವಾಗಿಯೂ ರೂಪುಗೊಂಡಿದೆ.

    ಸುದೀರ್ಘ ಕ್ಷೇತ್ರ ಕಾರ್ಯ, ನೂರಾರು ಗ್ರಂಥಗಳ ಅಧ್ಯಯನಗಳ ಜೊತೆಗೆ,  ಚರ್ಚೆಗೆ ವಚನಗಳನ್ನೇ ಮುಖಾಮುಖಿಯಾಗಿಸಿ, ಸತ್ಯಶೋಧನೆಗಿಳಿದ  ರೀತಿ ಬೆರಗುಮೂಡಿಸುತ್ತದೆ.  ನೂರಾರು ಶರಣೆಯರ ಪಾರಂಪರಿಕತೆಯ ವಿರುದ್ಧದ ಸಾತ್ವಿಕ ಪ್ರತಿರೋಧ ವರ್ತಮಾನವನ್ನ ಚುಚ್ಚಿ ಎಚ್ಚರಿಸುತ್ತದೆ.

   ಮೈ ನವಿರೇಳಿಸುವ ನಿಸರ್ಗವರ್ಣನೆ  ಕಾವ್ಯದ ಸ್ಪರ್ಶ ನೀಡಿದರೆ, ಕತೆಯ ಹರಿವಿನ ನಡುವೆ ವಾಚ್ಯತೆಯೂ  ಹಣಕಿಕ್ಕುತ್ತದೆ.

ಉಡುತಡಿ (ಶಿಕಾರಿಪುರ) ಯಿಂದ  ಕದಳೀವನದ ವರೆಗಿನ  ಸರಿಸುಮಾರು ಆರುನೂರು ಕಿಲೋಮೀಟರ್‌  ಅಕ್ಕನ ಪಾದಯಾತ್ರೆಯ  ಮಾರ್ಗನಕ್ಷೆಯೊಂದನ್ನು ಕೃತಿಯಲ್ಲಿ ನೀಡಿದ್ದರೆ  ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು ಎಂದೆನ್ನಿಸುತ್ತದೆ.

 

                               ಸುಬ್ರಾಯ ಮತ್ತೀಹಳ್ಳಿ. ತಾ- ೨೫-೬-೨೦೨೩.

 

ʻʻಬೆಳಗಿನೊಳಗು, ಮಹಾದೇವಿಯಕ್ಕ.ʼʼ -------  ಕಾದಂಬರಿ.

ಲೇಖಕಿ:  ಡಾ. ಎಚ್.‌ ಎಸ್. ಅನುಪಮಾ.

ಪ್ರ---  ಲಡಾಯಿ ಪ್ರಕಾಶನ. ಗದಗ. ೨೦೨೨.

ಪುಟ: ೭೭೬.  ಬೆಲೆ:- ರೂ- ೬೫೦-೦೦.

No comments:

Post a Comment