Sunday 21 April 2024

ಸಾವಿರದ ಕವಿಯೇ.....

 

ಅಂಬಾರದೊಡಲಿಂದ  ಅಂಬರಕೆ ನೆಗೆದ

ಬಾಳ  ಮರವೇ

ಅಂತರಂಗ  ಬಹಿರಂಗದ  ಗಡಿಮೀರಿ

ಗಂಗಾತರಂಗವಾಗಿ  ಮೆರೆದ  ಹರಿವೇ

ಹಟ್ಟಿಯ  ಹುಟ್ಟಿಗೆ  ಹೊಸ  ಹುಟ್ಟು ನೀಡಿ

ಹಿಡಿಯೊಳಗೆ  ಹಡಗ, ಎದೆಯಲ್ಲಿ ಗುಡುಗ

ಹಿಡಿದು ಗುಡುಗಿದ  ಗಾಡಿಗ ತನವೇ

ಬಹತ್ತರದಲ್ಲೂ ಬುಹು ಎತ್ತರ

ಬಾ...ಹತ್ತಿರ   ಎಂಬ  ದನಿಯೇ...

ಒಳಗಿಳಿ

ದರೆ  ಕಾಣುವುದು  ಒಂದಿಷ್ಟು ಅಕ್ಕರೆ

ಸಿಡಿಮಿಡಿಯ  ತುಡಿತದಲ್ಲೂ  ಸಿಕ್ಕರೆ

ಅದು  ಸವಿ  ಸಕ್ಕರೆ.

     ನೋವು  ಪ್ರೀತಿಯ  ನಡುವಲ್ಲೂ

     ಬೆಳದಿಂಗಳು.

     ಮುಗುಳು  ನಕ್ಕರೆ.

     ಹತ್ತು ಅವತರಣ, ಹೊತ್ತು ಗೊತ್ತಿದೆ.

     ಅದಕೆ  ಗತ್ತಿದೆ

     ಅದಕೆಲ್ಲ  ಕಾರಣ  ಅವಧಾರಣ.

ಕಾಡ  ಕವಿತೆಗಳು  ಕಾದು  ಕುಳಿತಿವೆ

ಕಾಯ  ಬೇಕು  ಎಂದು.

ಭೂತ  ಗಾಯಗಳು  ಕೀತು ಕುಳಿತಿವೆ

ಇನ್ನಾದರೂ  ಮಾಯಬೇಕೆಂದು.

    ==============

     ನೆರಳು  ನರಳುವಲ್ಲಿ  ನಿಜಗೊರಳ

    ಮೊಳಗಿಸಿದ

     ನೂರೆಂಟು  ಕಿಟಕಿಗಳ  ತಂಗಾಳಿಯೇ...

     ಎದೆಗೆ  ಬಿದ್ದಕ್ಷರಕೆ  ಬೆದೆಬರಿಸಿ  ಭುವಿಯಲ್ಲಿ

ಸಾವಿರದ ಸಸಿ ಬೆಳೆದ  ಸಿರಿ  ಗೂಳಿಯೇ

ಸಾಗರವ  ಮೀರಿ  ಗೌರೀಶಂಕರಕ್ಕೇರಿದ

ನ್ಯಗ್ರೋಧ  ಬೀಜವೇ

ದಿನಕರನ  ಕಿರಣ ಪ್ರವಾಹವೇ

ಹಾಲಕ್ಕಿ  ಹಾಲುಂಡು, ಹೊಲೆತನವ  ತೊಳೆದಿಕ್ಕಿ

ಹಾಲಾಹಲಕೂ  ಎದುರಾಗಿ

ಎದ್ದ  ಹಚ್ಚ  ಹಸಿರೇ

 

     ಬಾಳ ಮರ  ಅಮರವಾಗಲೇ  ಬೇಕು.

     ವಿಷ್ಣು  ಜಿಷ್ಣು  ಸಹಿಷ್ಣು

     ಕವಿತೆಯುಳಿಸಲು  ನೀನೂ  ಬೇಕು  ಬೇಕು.

     ಅಕ್ಷರದ  ಅಂಬಲಿ,ಎಲ್ಲೆಲ್ಲೂ  ಹಂಬಲು

     ಶತಮಾನ  ಸಂಕಲ್ಪ  ಈಡೇರಬೇಕು.

 

(20 -10 -2018.  ಶಿರಸಿಯ  ನೆಮ್ಮದಿಯಲ್ಲಿ,  ವಿಷ್ಣುನಾಯಕರ  ಎಪ್ಪತ್ತರ  ಅಭಿನಂದನಾ  ಸಭೆಯಲ್ಲಿ  ಪ್ರಸ್ತುತ  ಪಡಿಸಿದ  ಅಭಿನಂದನಾ  ನುಡಿ. )

 

 

 

ಚಿತ್ರದೊಡನೆ – ಚೈತ್ರದೆಡೆಗೆ. ( munnudi )

 

ತ್ರಾಣವೊಂದಿಲ್ಲದಾ  ತಾಣದಲಿ, ನಿಶೆಯ  ಗಾಢಾಂಧಕಾರದೊಳು ಗುರಿಯಿಟ್ಟು

ಅರಿಯದ  ಅಂಧ ತಮಸ್ಸಿನೊಳು  ಅಡಿಯಿಟ್ಟು,  ತರಣಿಯೊಂದನೇರಿ 

ವೈತರಣಿಯನು  ದಾಟು.  ಮೃತ್ಯುವಿನ  ಮಹಾದ್ವಾರವನು  ಮೀಟು.

ಸಾವಿನಾ  ಸಂತೆಯಂತಿರುವಾ   ಸಾಮ್ರಾಜ್ಯದಲಿ  ಸೂತ್ರಧಾರನನೇ  ಸೋಲಿಸಿ

ಸನ್ಮಾನಿತನಾಗು.                 ( ಮಹರ್ಷಿ  ಅರವಿಂದರು.   ಅನು- ಕಿಶೋರ್‌,  ಕಾಸಾರ )

 

                ʻʻ ಹನೇಹಳ್ಳಿʼʼ    ಹಳ್ಳಿಯ  ಹೆಸರೇ  ರೋಮಾಂಚನ ಗೊಳಿಸುವಂಥದ್ದು.  ಕನ್ನಡ   ಕಾವ್ಯ- ಕಥನ  ಪ್ರಪಂಚವನ್ನು  ಫಲವತ್ತಾಗಿಸಿದ  ಯಶವಂತ  ಚಿತ್ತಾಲ,  ಗಂಗಾಧರ  ಚಿತ್ತಾಲ ರಂಥ  ಮಹಾನ್‌  ಸೃಜನಶೀಲ  ವ್ಯಕ್ತಿತ್ವವನ್ನು ಸೃಷ್ಟಿಸಿದ  ಮಹತ್ವಪೂರ್ಣ  ನೆಲ  ಅದು.   ಅಂತಹ  ನೆಲದ  ಗುಣಧರ್ಮವುಂಡು    ರಾಜ್ಯಮಟ್ಟದ  ಶ್ರೇಷ್ಠ ಚಿತ್ರ ಕಲಾವಿದರಾಗಿ  ಬೆಳೆಯುತ್ತಿರುವ ಯುವಕ  ನಾಗರಾಜ  ಹನೇಹಳ್ಳಿ  ನಮ್ಮ ಉತ್ತರಕನ್ನಡ  ಜಿಲ್ಲೆಯ   ಒಬ್ಬ  ಸಾಂಸ್ಕೃತಿಕ  ಸಂಪನ್ಮೂಲವಾಗಿ   ಮಿಂಚುತ್ತಿದ್ದಾರೆ.   ರೇಖೆ  ಮತ್ತು ಬಣ್ಣಗಳಲ್ಲಿ   ತಮ್ಮದೇ  ಆದ  ವಿಶಿಷ್ಟ  ಕಲಾವಂತಿಕೆಯಲ್ಲಿ,  ಸಂತಸವನ್ನು  ಹಂಚುತ್ತಿದ್ದಾರೆ.   ತಾತ್ವಿಕತೆ  ವೈಚಾರಿಕತೆ,  ಆಧ್ಯಾತ್ಮಿಕತೆಗಳ  ಸುವರ್ಣಸಂಗಮಗಳ,  ನೂರಾರು  ಚಿತ್ರಿಕೆಗಳು  ಈಗಾಗಲೇ  ರಾಜ್ಯದ  ಚಿತ್ರಸಮುದಾಯದಲ್ಲಿ  ಸಂಚಲನ  ಸೃಷ್ಟಿಸಿವೆ.

      ಇದೀಗ  ನಾಗರಾಜರ  ಬದುಕಿನ  ಮತ್ತೊಂದು   ವಿಶಿಷ್ಟ ಆಯಾಮ  ʻʻ ಚಿತ್ರ ಚಾಮರʼʼ ಎಂಬ  ಕಾವ್ಯಸಂಕಲನದ  ಮೂಲಕ  ಅನಾವರಣಗೊಳ್ಳುತ್ತಿರುವುದು,  ನಿಜಕ್ಕೂ  ಖುಷಿತರುವ  ಕ್ಷಣವಾಗಿದೆ.

        ಕವಿಯಾಗದೇ  ಯಾವ ವ್ಯಕ್ತಿಯೂ  ಕಲಾವಿದನಾಗಲಾರ.  ಕಾವ್ಯವಿಲ್ಲದ  ಯಾವ ಕಲೆಯೂ  ಕಾಲದಲ್ಲಿ  ಉಳಿಯದು.   ಕವಿತನ, ಮತ್ತು  ಕಲಾವಂತಿಕೆ   ಎರಡೂ  ವೈಶಿಷ್ಟ್ಯಗಳನ್ನು  ಹೊಂದಿದ  ನಾಗರಾಜ  ತಮ್ಮ ಅಭಿವ್ಯಕ್ತಿಯ   ಮಾಧ್ಯಮಗಳಿಗೆ   ಹೊಸ  ಮೆರಗು ನೀಡುವ  ಪ್ರಕ್ರಿಯೆಯಲ್ಲಿ  ನಿರತರಾಗಿದ್ದಾರೆ.

       ಕವಿ  ಬೇಂದ್ರೆಯವರೆಂದಂತೆ,  ಕಾಣುವುದು ಬೇರೆ. ಕಂಡುಕೊಳ್ಳುವುದು ಬೇರೆ. ಕಂಡಿದ್ದನ್ನು ಒಳಕೊಳ್ಳುವ ಪ್ರಕ್ರಿಯೆ  ಸೃಷ್ಟಿಸುವ  ಅನುಭವಕ್ಕೆ ಅನನ್ಯತೆ  ಪ್ರಾಪ್ತವಾಗುತ್ತದೆ.  ಜೀವಸತ್ಯದ  ತಾತ್ವಿಕ  ದರ್ಶನ  ಕವಿಗುಂಟಾದಾಗ   ಸತ್ಯದ  ಮತ್ತೊಂದು  ಆಯಾಮಕ್ಕೆ  ಕೊಂಡೊಯ್ಯುತ್ತದೆ.

      ಇಲ್ಲಿ  ಕವಿ  ರೇಖಾ ಸಾಂಗತ್ಯದಿಂದ  ಕೊಂಚಕಾಲ  ವಿರಮಿಸಿ,  ತನ್ನ ಸುತ್ತಲಿನ  ಸಮುದಾಯದ  ಸುಖ ದುಃಖ,  ನಿಸರ್ಗ,  ಮಾನವ ವರ್ತನೆಗಳ  ವಿಕ್ಷಿಪ್ತ ಚಟುವಟಿಕೆ,  ಸ್ವಾರ್ಥ  ಮೋಹ, ಗಳ  ನಡುವೆ  ಮಿಂಚುವ  ಸ್ನೇಹ  ಕರುಣೆ  ಗಳಂಥ  ಆಪ್ತ  ಸಂಗತಿಗಳ  ದಿಕ್ಕಿಗೆ  ದೃಷ್ಟಿ ಹಾಯಿಸುತ್ತಾರೆ.   ಬಾಳ ಬುಟ್ಟಿಯಲಿ  ಸುತ್ತಿಟ್ಟ ಮಲ್ಲಿಗೆ  ಮಡಿಯ  ಪರಿಮಳವನ್ನು  ಆಘ್ರಾಣಿಸುತ್ತಲೇ     ಕಟು ವರ್ತಮಾನದ  ಸಮುದಾಯ   ಪ್ರಪಾತದಂಚಿಗೆ  ಸಾಗುವ  ಪರಿಯನ್ನು  ಪರಿಣಾಮಕಾರಿಯಾಗಿ  ಬಿಂಬಿಸುತ್ತಾರೆ.

 

                         ಭಾಷೆಯನು  ಹಲವಿತ್ತು / ವಿವಿಧ  ವೇಷವ ಕೊಟ್ಟು /

                          ಮನುಜರೆಲ್ಲರ  ಒಂದೇ  ಜಗದಲ್ಲಿ ಬಿಟ್ಟು /

                          ದಿನವೆಲ್ಲ  ಹೊಡೆದಾಟ / ಬದುಕೆಲ್ಲ  ಪರದಾಟ /

                         ಜಗದಲ್ಲಿ  ವ್ಯಾಕುಲತೆ , ಎಲ್ಲಿಹುದು  ಏಕತೆ....?

 

ಎಂಬ  ಪ್ರಶ್ನೆಗಳಿಗೆ  ಮುಖಾಮುಖಿಯಾಗುತ್ತಾರೆ.   ಒಡೆದು ಆಳಲು  ಜಾತಿ, /  ಜಾತಿ  ಮೀಸಲು ಪಟ್ಟಿ /   ಕೀಚಕನ  ರಾಜ್ಯದಿ  ರಾಮನಾದರ್ಶದ  ಪಟ್ಟಿ /

ಎಂದು  ರಾಜಕೀಯ  ಸ್ವಾರ್ಥ,  ಧಾರ್ಮಿಕ ಭೃಷ್ಠತೆ, ಸಾಮಾನ್ಯರ  ತಿಕ್ಕಲುತನಗಳನ್ನೆಲ್ಲ  ಪಟ್ಟಿಮಾಡುತ್ತ,  ಎಚ್ಚರವುಳ್ಳ  ಸಕ್ರಿಯ  ಜಾತ್ಯತೀತ  ಸಮುದಾಯವೊಂದರ  ಸೃಷ್ಟಿಗೆ  ಹಾರೈಸುತ್ತಾರೆ.

       ಕವಿ  ಅಂತರ್ಮುಖಿಯಲ್ಲ.  ಬಾಹ್ಯವನ್ನು ಸ್ವಚ್ಛಗೊಳಿಸದೇ  ಆಂತರ್ಯದ  ಶುದ್ಧಿ ಹೇಗಾದೀತು.  ಅದಕ್ಕಾಗಿಯೇ  ರಾಜಬೀದಿ  ಬಿಟ್ಟು, ಕವಲುದಾರಿಗಳಲ್ಲಿ  ನೆರೆದಿರುವ  ಕೂಲಿಗಳು  ಕಾರ್ಮಿಕರು,  ರೈತಾಪಿ ಹಿಂಡುಗಳು,  ದರ್ಜಿ  ಮೋಚಿ  ಅಂಬಿಗರು,  ವೃದ್ದ ವೃದ್ಧೆಯರ ಬಳಿಗೆ  ಕವಿ  ಸಾಗುತ್ತಾರೆ.   ರಾಜಬೀದಿಯಲ್ಲಿ  ಬೆಳ್ಳಂ ಬೆಳಕು.  ಕವಲು  ದಾರಿಗಳಲ್ಲೆಲ್ಲ  ಕತ್ತಲು – ಬೆತ್ತಲು. ಬೆವರು  ಕಣ್ಣೀರು.

       ಹುಟ್ಟಿದ್ದೇ ನಿನ  ಕರ್ಮ /  ಕಾಯಕವೇ  ನಿನ ಧರ್ಮ /  ಬದುಕಿದ್ದರೆ  ಅದು  ಸತ್ಕರ್ಮ /  ಸತ್ತೆಯಾದರೆ  ಮಾತ್ರ  ಬರೀ  ಕ್ರಿಯಾ ಕರ್ಮ / ( ಬಂದಾರೆ ಬರಲಿ )

       ಎಂದು  ವ್ಯಾಕುಲವಾಗಿ  ವಾಸ್ತವವನ್ನು  ಧ್ಯಾನಿಸುತ್ತ,  ಕೇವಲ  ಕನಸ ಮಾರುತ್ತ,  ಸ್ವಾರ್ಥಸಾಧಿಸಿಕೊಳ್ಳುತ್ತಿರುವ   ಆಳುವ  ವ್ಯವಸ್ಥೆಯ  ವಿರುದ್ಧ  ಸಿಡಿದೇಳುತ್ತಾರೆ.

     

        ಏರಿದೊಡನೆ  ಗತ್ತು / ಉನ್ಮತ್ತತೆಯ  ಸ್ವತ್ತು /

        ಹಿಂದೆ  ತೆವಳಿದ್ದ  ಮರೆತು / ಹಾರುತಿಹೆ    ಹೊತ್ತು /

        ಅಧಿಕಾರದ  ದಾಹವೋ /  ಹಣದ  ವ್ಯಾಮೋಹವೋ /

        ಹುದ್ದೆ  ಇನ್ನೆಷ್ಟು  ದಿನದ್ದು...?   ( ಹುದ್ದೆ..... )

ಎಂದು  ಕೇಳುತ್ತಾರೆ.

       

       ಕಲೆಯ  ಉದ್ದೇಶವೇ  ಸಾತ್ವಿಕ  ಪ್ರತಿಭಟನೆ.  ತನ್ನೊಂದಿಗೆ  ತಾನು  ಸಂವಾದಿಸುತ್ತ, ಸಂಘರ್ಷಿಸುತ್ತ,  ತನ್ನನ್ನು  ತಾನು  ಶುದ್ಧಿಗೊಳಿಸಿಕೊಳ್ಳುತ್ತ,  ಸಮುದಾಯದ  ಹೃದಯಕ್ಕೆ  ಲಗ್ಗೆಯಿಡುವವನೇ  ನಿಜವಾದ  ಕವಿ.  ಕಲಾವಿದ.   ಕವಿ  ಸುತ್ತಲಿನ  ಜಡತೆ,  ನಿಷ್ಕ್ರಿಯ  ಮೌನ ದ  ವಾತಾವರಣ  ಕಂಡು  ಕನಲುತ್ತಾರೆ.

        ಬರದವರ  ಬಾರೆಂದು / ಬಂದವರ  ತಡೆಯದಿರು /

        ಇದ್ದವರೆ  ನಿನ್ನವರು / ಇರುವ ವರೆಗೆ /  ( ಬಂದಾರೆ  ಬರಲಿ )

 

ಎಂದೆನ್ನುತ್ತ  ಏಕಾಕಿಯಾಗಿ  ಬೀದಿಗಿಳಿಯುತ್ತಾರೆ.

        ಗೆಳೆಯ  ನಾಗರಾಜ  ಹನೇಹಳ್ಳಿ  ಶಾಲಾ  ಶಿಕ್ಷಕರಾಗಿರಲಿ,  ವೈಯಕ್ತಿಕ  ವಸತಿಯಲ್ಲಿರಲಿ,  ಕೈಯಲ್ಲಿ  ಕುಂಚ, ಕಣ್ಣೆದುರು  ಕ್ಯಾನವಾಸು.  ಇದ್ದಲ್ಲಿಯೇ  ಅಲ್ಲಿ ಕಲಾಲೋಕವೊಂದು  ಸೃಷ್ಟಿಯಾಗುತ್ತದೆ.   ಮನೆಯ  ಪ್ರತಿ  ಗೋಡೆಯೂ  ಚಿತ್ರಮಯ.  ಎದುರು  ಮೇಜಿನ ಮೇಲೆ ಒಂದಿಷ್ಟು ಬಿಳಿಹಾಳೆ.  ಅದರ  ತುಂಬೆಲ್ಲ  ಕವನಗಳ  ತುಣುಕು.

      ಚಿತ್ರಮಯ  ಪ್ರಪಂಚದಿಂದ   ಕಾವ್ಯಲೋಕಕ್ಕೆ  ಇದೀಗತಾನೆ  ದಾಂಗುಡಿಯಿಟ್ಟ  ಕವಿ, ಚೊಚ್ಚಲ  ಸಂಕಲನದ  ಹೆರಿಗೆಗೆ  ಸಿದ್ಧಗೊಂಡಿದ್ದಾರೆ.   ಸಂವೇದನಾಶೀಲ  ಪ್ರವೃತ್ತಿ,  ಹುಡುಕಾಟದ  ತಹ ತಹ,   ಹಾಡಿಕೊಳ್ಳುವ  ಹುರುಪು,  ತನ್ನೊಳಗಿನ  ತಾಕಲಾಟವನ್ನು  ಅಭಿವ್ಯಕ್ತಿಸಲೇ  ಬೇಕೆಂಬ  ಛಲದಲ್ಲಿ,   ಕಾವ್ಯಲೋಕಕ್ಕೆ  ಮೌನವಾಗಿ  ಪ್ರವೇಶಿಸುತ್ತಿದ್ದಾರೆ.

      ಭಾವ  ಎಂದೂ  ಮೂಕ,  ನೆನಪುಗಳು  ವಾಚಾಳಿ.  ಉತ್ಕಟ  ಭಾವವಿದ್ದೂ ಭಾಷೆ  ಕರಗತವಾಗದಿದ್ದರೆ   ಕಾವ್ಯ  ಸೊರಗಬಹುದು.  ಭಾವ  ಮತ್ತು ಭಾಷೆಗಳ  ಸುವರ್ಣಸಂಗಮವಾಗುವುದು  ನಿತ್ಯ ನಿರಂತರದ  ಅಕ್ಷರ  ಸಾಂಗತ್ಯದಲ್ಲಿ.  ಬಣ್ಣ ಮತ್ತು ಕುಂಚ ಸಾಂಗತ್ಯದಿಂದ  ಇದೀಗ  ತಾನೆ  ಅಕ್ಷರದ  ತೆಕ್ಕೆಗೆ  ಬಂದಿರುವ  ನಾಗರಾಜರಲ್ಲಿ,  ಕವಿತನವಿದೆ. ಭಾವತೀವ್ರತೆಯಿದೆ.  ಆಂತರ್ಯದಲ್ಲಿ  ಕುದಿವ  ಅನುಪಮ ಭಾವಗಳ  ಸುಂದರ  ನೆಳಲುಗಳು  ಇಲ್ಲಿ  ಮೂಡಿವೆ.  ಸಾಮಾನ್ಯ ಬದುಕಿನ ಅನುಭವಗಳೇ  ಇಲ್ಲಿ  ಕಾವ್ಯವಾಗಿ  ರೂಪುಗೊಂಡು, ಅದರಾಚೆಯ  ಮಾನವೀಯ  ನೆಲೆಯನ್ನು  ಸ್ಪರ್ಶಿಸಲು  ಹೋರಾಡುತ್ತವೆ.   ಇಲ್ಲಿ  ಹಿರಿಯ  ವಿಮರ್ಶಕ  ರಾಜೇಂದ್ರ  ಚೆನ್ನಿಯವರ  ಮಾತುಗಳು  ನೆನಪಿಗೆ  ಬರುತ್ತವೆ.

 

     ʻʻ ಕನ್ನಡ ಸಂಪ್ರದಾಯದಲ್ಲಿ ನಮ್ಮ ಪ್ರತಿಭಾವಂತ  ಕವಿಗಳ  ಸೃಷ್ಟಿ,  ಜನಾಂಗದ  ಅನುಭವ  ಸಾಮಗ್ರಿಯನ್ನು ಸ್ಪಂದಿಸುವ  ಬಗೆಗಳನ್ನು, ಕಾವ್ಯದ  ಹಿಡಿತಕ್ಕೆ  ತಂದು  ಜನಾಂಗದ  ಸಂವೇದನೆಯನ್ನು ಹಿಗ್ಗಿಸುವ  ಕಡೆಗೆ, ವಿಸ್ತೃತ  ಗೊಳಿಸುವ  ದಿಕ್ಕಿಗೆ, ದುಡಿದಿದೆ.  ತೀರಾ ಹೊಸದಾದ  ನುಡಿಗಟ್ಟನ್ನು ಬಳಕೆಗೆ ತರುವ  ಪ್ರಯೋಗಶೀಲತೆಗಿಂತ ರೂಢಿಯಲ್ಲಿದ್ದ  ಪರಿಚಿತವಾದ  ನುಡಿಗಟ್ಟು  ಮತ್ತು ರಚನೆಗಳಲ್ಲಿಯೇ  ಹೆಚ್ಚಿನ  ಸೂಕ್ಷ್ಮತೆ  ಸಂಕೀರ್ಣತೆಯನ್ನು  ಸಾಧಿಸುವ  ಕಡೆಗೆ  ನಮ್ಮ ಸೃಷ್ಟಿಶೀಲರು  ಒಲವು ತೋರಿದ್ದಾರೆ ʼʼ

  

       ಅವರೆಂದಂತೆ   ನಾಗರಾಜರೂ  ತಮ್ಮ ರಚನೆಗಳಲ್ಲಿ  ಸುತ್ತಲಿನ  ವಾಸ್ತವದ  ಸಾಮಾನ್ಯಬದುಕಿನ  ವಿವಿಧ ಮಜಲುಗಳನ್ನು  ಪ್ರವೇಶಿಸುತ್ತ,  ಹೊಸ  ಅರ್ಥದ  ಅನ್ವೇಷಣೆಗೆ  ತೊಡಗುತ್ತಾರೆ.   ಕವಿಯ  ತಾತ್ವಿಕ ತುಡಿತ  ಗಾಢವಾಗಿದ್ದರೂ,  ಭಾಷಾಶರೀರ  ಇನ್ನಷ್ಟು ಶಕ್ತಿಯನ್ನು  ಅಪೇಕ್ಷಿಸುತ್ತದೆ.  ರಚನೆಯಿಂದ  ರಚನೆಗೆ  ಮತ್ತೂ  ಎತ್ತರದ  ಆಯಾಮಕ್ಕೆ  ಪ್ರವೇಶಿಸಬಲ್ಲರು  ಎಂಬುದಕ್ಕೆ  ಪ್ರಸ್ತುತ  ಸಂಕಲನದ  ಹಲವು  ಕವನಗಳು  ಸಾಕ್ಷಿ ನುಡಿಯುತ್ತಿವೆ.

        ಚಿತ್ರಗಳು  ರೇಖಾ ಕಾವ್ಯವಾದರೆ,  ,  ಕವಿತೆಗಳು   ಅಕ್ಷರ ಚಿತ್ರಗಳಲ್ಲಿ  ಅವತರಿಸುತ್ತವೆ. ಭಾವಗಳಿಗೆ  ಬಣ್ಣ,  ಸಂವೇದನೆಗಳಿಗೆ  ಚಲನೆ,  ಪದಗಳಿಗೆ  ಅರ್ಥವಿಸ್ಥಾರ,  ದೊರಕಿದರೆ, ಸಹೃದಯನ   ಮನದಲ್ಲಿ  ತಾತ್ವಿಕತೆಯ  ಸಿಂಚನವಾಗುತ್ತದೆ.   ಚಿತ್ರಕ ಶಕ್ತಿ,  ಅಭಿವ್ಯಕ್ತಿಯ  ಸಾಮರ್ಥ್ಯ  ಎರಡೂ  ಶಕ್ತಿ ಪಡೆದಿರುವ   ನಾಗರಾಜರ   ಕಲಾಲೋಕದ  ದ್ವಿಪಾತ್ರ  ಇನ್ನೂ  ಯಶಪಡೆಯಲಿ,  ಕಲೆಗೆ  ಕಾವ್ಯಕ್ಕೆ  ಹೊಚ್ಚಹೊಸ  ಆಯಾಮ  ದೊರೆಯಲಿ  ಎಂದು  ಈ ಮೂಲಕ  ಹಾರೈಸುತ್ತಿದ್ದೇನೆ.

                                                                 ಗೌರವಾದರ ಗಳೊಂದಿಗೆ..............

 

ತಾ- ೨೦ – ೪ – ೨೦೨೪.                                 ಸುಬ್ರಾಯ  ಮತ್ತೀಹಳ್ಳಿ.

 

ನಾಗರಾಜ  ಹನೇಹಳ್ಳಿ ಯವರ   ಕವನ ಸಂಕಲನಕ್ಕೆ   ಮುನ್ನುಡಿ.