Monday 25 March 2024

ಜೀವಂತ ಜ್ಞಾನ ಕುಂಭ !! ಶಂ. ಬಾ.ʼʼ

 

    ಪ್ರಾಥಮಿಕ ಶಾಲಾ ಉಪಾಧ್ಯಾಯನೊಬ್ಬ,  ಸಾಂಸ್ಕೃತಿಕ ಚಿಂತನೆಯ  ಮೇರು ವ್ಯಕ್ತಿಯಾಗಿ,  ತನ್ನ ಭಾಷೆ ಮತ್ತು ಪರಂಪರೆಯ ಬಗೆಗೆ  ಯಾರೂ  ಪ್ರವೇಶಿಸದ  ವಿಶಿಷ್ಟ ಮಾರ್ಗವೊಂದನ್ನು ಸೃಷ್ಟಿಸಿ,   ಸಂಸ್ಕ್ರತಿ  ಶೋಧನಾ ರಂಗದಲ್ಲಿ  ದೇಶದಲ್ಲೇ ಮಹಾನ್‌ ಸಾಧಕನಾಗಿ  ರೂಪುಗೊಂಡಿದ್ದು,  ನಮ್ಮ ಕನ್ನಡಮಣ್ಣಿನ ಸೌಭಾಗ್ಯ.  ಅವರೇ (ಶಂಕರ ಬಾಳಾ ಜೋಶಿ) ಡಾ|| ಶಂ.ಬಾ. ಜೋಶಿ. ( ೧೮೯೬ ೧೯೯೧ )

   ಕವಿರಾಜ ಮಾರ್ಗಕಾರ ಒಂಬತ್ತನೆಯ ಶತಮಾನದಲ್ಲೇ ಕಂನಾಡಿನ ಗಡಿ ಗೋದಾವರಿಯಿಂದ ಕಾವೇರಿಯ ವರೆಗೆ. ಎಂದು ಘೋಷಿಸಿದರೆ, ಶಂ.ಬಾ. ಅಲ್ಲಿಗೇ ಅಲ್ಲ, ಅದರಾಚೆ ನರ್ಮದೆಯಾಚೆಗೂ ಕನ್ನಡದ ಗಡಿಯಿದೆ. ಗುಜರಾತ ಬಂಗಾಲ, ಕಾಶ್ಮೀರ ಬಲೂಚಿಸ್ಥಾನಗಳಲ್ಲೂ ಕನ್ನಡದ ಕಂಪು ಪಸರಿಸಿತ್ತು, ಎಂದು ಸಾಕ್ಷಾಧಾರಗಳೊಂದಿಗೆ  ಸಾಬೀತು ಪಡಿಸುತ್ತಾರೆ.  ಇತಿಹಾಸ ಕೇವಲ ಶಾಸನಗಳಲ್ಲೊಂದೇ ಅಲ್ಲ. ಪುರಾಣ, ದಂತಕತೆ, ಧರ್ಮ, ಪೂಜಾವಿಧಾನ, ಅಂತ್ಯಕ್ರಿಯೆ, ಮತ್ತು ಊರು ಕೇರಿಯ ಹೆಸರುಗಳು, ಮತ್ತು ಆಡುನುಡಿಯ ಹರಿವಿನ ನಡುವಣ ಶಬ್ಧಗಳಲ್ಲಿ  ಚರಿತ್ರೆ ಅಡಗಿರುತ್ತದೆ, ಎಂಬ ಆಶ್ಚರ್ಯಜನಕ  ಸತ್ಯವನ್ನು ತಮ್ಮ ಪ್ರತಿಪಾದನೆಯಿಂದ ಅನಾವರಣ ಗೊಳಿಸಿದ್ದು, ಜಗತ್ತಿನ ಶ್ರೇಷ್ಠ  ಇತಿಹಾಸ ಸಂಶೋಧಕರಲ್ಲೊಬ್ಬರಾಗಿ ಮಿಂಚಲು ಸಹಾಯವಾಯಿತೆನ್ನಬಹುದು.

  ನಮ್ಮ ದೇಶದ ಪ್ರಾಚೀನ ಭಾಷೆಯಾದ ತಮಿಳು ಮತ್ತು ಕನ್ನಡ,(ಕಂದಮಿಳು)  ಇಡೀ  ಭಾರತವನ್ನು ಒಂದುಕಾಲದಲ್ಲಿ ವ್ಯಾಪಿಸಿದ್ದರೂ, ಯಾವಕಾರಣದಿಂದ ಸಂಕುಚಿತವಾಯಿತು. ಸಂಸ್ಕೃತ, ಪ್ರಾಕೃತ ಬಲೂಚಿ, ಗ್ರೀಸ್‌ ಭಾಷೆಗಳ ಮೇಲೂ ಗಾಢ ಪ್ರಭಾವ ಬೀರಿದ ನಮ್ಮ ನುಡಿ, ಹಿಂದೆ ಸರಿಯಲು ಕಾರಣಗಳೇನು, ಎಂಬ ಆತಂಕಮಯ ಪ್ರಶ್ನೆಯನ್ನೇ ಎದುರಿಟ್ಟುಕೊಂಡು  ಪ್ರಾರಂಭಿಸಿದ  ಶಂ.ಬಾ ಅವರ  ಹುಡುಕಾಟ, ಇತಿಹಾಸ ಸಂಶೋಧನಾ ಕ್ಷೇತ್ರಕ್ಕೊಂದು ಅನುಪಮ ಮಾರ್ಗವನ್ನೇ ಸೃಷ್ಟಿಸಿತು. ಮಾನವ ಜಗತ್ತಿನ ಯಾವುದೇ ಭಾಷೆಯ ಮೂಲಕ ಸಾವಿರ ಸಾವಿರ ವರ್ಷಗಳ ಚರಿತ್ರೆಯನ್ನು ಕಣ್ಣೆದುರು ಕಟೆದು ನಿಲ್ಲಿಸಬಹುದೆಂಬ ಸತ್ಯವನ್ನು ಶಂ.ಬಾ ತಮ್ಮ ಶೋಧನಾ ಚಟುವಟಿಕೆಗಳ ಮೂಲಕ ಬಿಂಬಿಸಿದರು.

   ಅವರೊಬ್ಬ  ಆಧುನಿಕ ಜಗತ್ತಿನ ಏಕಲವ್ಯ. ಅವರು ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು ಕೇವಲ ಮೂಲ್ಕಿಯವರೆಗೆ.( ಏಳನೆಯ ತರಗತಿ). ಸ್ವಯಂ ಅಧ್ಯಯನ, ಚಿಂತನೆ, ಕ್ಷೇತ್ರ ಸಂದರ್ಶನಗಳ ಮೂಲಕವೇ, ಜಾಗತಿಕ ಮಟ್ಟದ ಸಂಶೋಧಕರಾಗಿ ಹೊರಹೊಮ್ಮಿದ  ಅಪ್ರತಿಮ ಮೇಧಾವಿ. ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕದಲ್ಲಿ ಯಾವ ಆರ್ಥಿಕ ಬಲವಾಗಲೀ,  ಅಧ್ಯಯನದ ಸೌಲಭ್ಯವಾಗಲೀ ಇಲ್ಲದ  ಶೂನ್ಯತೆಯಲ್ಲೇ ತಮ್ಮ ಆಸಕ್ತಿಯನ್ನು ಉಜ್ವಲವಾಗಿ ಬೆಳೆಸಿಕೊಂಡು, ಸಾವಿರ ಸಾವಿರ ಪುಟಗಳಲ್ಲಿ ಸತ್ಯಶೋಧನೆಯ  ಹೆಜ್ಜೆಗುರುತುಗಳನ್ನು ಮೂಡಿಸಿರುವುದು ನಿಜಕ್ಕೂ ಕನ್ನಡದ ಸೌಭಾಗ್ಯ.

   ವ್ಯಕ್ತಿಯಾಗಲೀ, ಸಮುದಾಯವಾಗಲೀ, ಅಥವಾ ಒಂದು ರಾಷ್ಟ್ರವಾಗಲಿ, ತಾನು  ಮತ್ತು  ತನ್ನ ಪರಂಪರೆ ಬೆಳೆದುಬಂದ ದಾರಿಯ ಬಗೆಗಿನ ಕನಿಷ್ಠ ಅರಿವನ್ನು ತನ್ನ ಬದುಕಿನ ಸ್ಮೃತಿಕೋಶದಲ್ಲಿ ಜೀವಂತವಾಗಿ ಇರಿಸಿಕೊಳ್ಳದಿದ್ದರೆ ಭವಿಷ್ಯಕಟ್ಟಲು ಎಂದೂ ಸಾಧ್ಯವಾಗದು. ಇತಿಹಾಸ ಚರಿತ್ರೆ  ಪರಂಪರೆ ಎಂದು ಯಾವ ಅರ್ಥದಲ್ಲಿಯೇ  ಇರಬಹುದು, ಅದರ ನೆನಹು ನಮ್ಮ ಸಂಸ್ಕೃತಿಯನ್ನು ಉಜ್ವಲವಾಗಿಸಬಹುದು. ನಮ್ಮ ತಾತ್ವಿಕ ಆಧ್ಯಾತ್ಮಿಕ ವಿಕಾಸಕ್ಕೆ,  ಮಾನವೀಯ  ಸಂಬಂಧಗಳ ಜೋಡಣೆಗೆ ಅರ್ಥಪೂರ್ಣ ಚೈತನ್ಯವಾಗಬಹುದು. ಆದರೆ ಈ ಆಧುನಿಕ ಯಾಂತ್ರಿಕ ಬದುಕಿನ ಅತ್ಯುನ್ಮಾದದಲ್ಲಿ, ನಮ್ಮ ಪರಂಪರೆ ಮಾಸುತ್ತಿದೆ. ವಿಚಿತ್ರ ವಿಸ್ಮೃತಿಯಲ್ಲಿ ಬಳಲುತ್ತಿದೆ.

   ʻʻ ಸಂಭವಾಮಿ ಯುಗೇ ಯುಗೇʼʼ ಉದ್ಗೋಷದಂತೇ ಶತಮಾನಗಳಿಗೆ ಒಬ್ಬರಾದರೂ, ನಮ್ಮ ಗತವನ್ನು ಅಗೆದು ತೆಗೆದು, ನಮ್ಮ ಕಣ್ಣೆದುರು ದರ್ಶಿಸುವ  ಸೂಕ್ಷ್ಮಮತಿಗಳು ಬಂದೇ ಬರುತ್ತಾರೆ  ಎಂಬುದಕ್ಕೆ ಡಾ- ಶಂಬಾ ಜೋಶಿ ಸಾಕ್ಷಿಯಾಗುತ್ತಾರೆ.

   ಶಂ ಬಾ ರವರ  ಸರಿಸುಮಾರು ಎಪ್ಪತ್ತು ವರ್ಷಗಳ  ಸಂಶೋಧನಾ ಬದುಕಿನಲ್ಲಿ, ಅವರಿಂದ ಸೃಷ್ಟಿಯಾದ ಸಾಹಿತ್ಯ ನಾಲ್ಕು ಸಾವಿರ ಪುಟಗಳನ್ನೂ ಮೀರುತ್ತದೆ. ಅವುಗಳಲ್ಲಿ ಇಂಗ್ಲಿಶ್‌ ಮತ್ತು ಮರಾಠಿ ಕೃತಿಗಳೂ ಸೇರುತ್ತವೆ. ೧೯೨೧ ರಿಂದ ೧೯೮೬ ರ ವರೆಗಿನ ಅವರ ಕಾಲಮಾನದಲ್ಲಿ ಇಷ್ಟೆಲ್ಲ ರಚನೆಯಾಯಿತು. ಅವರೇ ಒಂದು ನಡೆದಾಡುವ ವಿಶ್ವವಿದ್ಯಾಲಯ.  ಅವರು ಪ್ರಾರಂಭಿಸಿದ  ಜಗತ್ತಿನಲ್ಲೇ ಪ್ರಥಮವೆನ್ನಬಹುದಾದ, ಸಂಶೋಧನಾ ಮಾರ್ಗದಲ್ಲಿ  ಮುಂದೆ ಅಂಥ ಸಮರ್ಥರು ಈವರೆಗೆ  ಯಾರೂ ಬಾರದೇ  ಶಂಬಾ ಸಂಶೋಧನಾ ಪ್ರವಾಹ ಅಲ್ಲಿಯೇ  ನಿಂತಿದೆ.  ಮತ್ತೊಬ್ಬ ಶಂಬಾರಂಥ ಸಂಶೋಧಕರನ್ನು ಕಾಯುತ್ತಿದೆ.

   ವೇದಪೂರ್ವ ಕಾಲದಲ್ಲೂ  ಮೂಡಿಕೊಂಡಿದ್ದ ನಮ್ಮ ಕಂದಮಿಳ ಹೆಜ್ಜೆಗುರುತುಗಳನ್ನು,  ದ್ರಾವಿಡ ಸಂಸ್ಕೃತಿಯ ವೈಶಿಷ್ಟ್ಯವನ್ನು,  ಮಾತೃಪ್ರಧಾನ ಸಂಸ್ಕೃತಿಯ ಹಿರಿಮೆಯನ್ನು,  ದ್ರಾವಿಡರ ಜಲಸಂಸ್ಕೃತಿ, ಆರ್ಯರ ಅಗ್ನಿಸಂಸ್ಕೃತಿಗಳ  ಸಂಘರ್ಷ- ಸಂಧಾನಗಳ ರೋಚಕ ವಿವರಗಳನ್ನು, ಶಂಬಾರವರ  ಋಗ್ವೇದ ಸಾರ,  ಸತ್‌ ತ್ಯ-ಸತ್ಯ,  ಹಾಲುಮತ ದರ್ಶನ,  ಕಣ್ಮರೆಯಾದ ಕನ್ನಡ,  ಕನ್ನಡದ ನೆಲೆ,  ಪ್ರವಾಹ ಪತಿತರ ಕರ್ಮ, ಹಿಂದೂ ಎಂಬ ಧರ್ಮ,  ಮಾನವ ಧರ್ಮದ ಆಕೃತಿ,  ಯಕ್ಷ ಪ್ರಶ್ನೆ, ಕಂನಾಡ ಕತೆ,  ಮುಂತಾದ ಇನ್ನೂ ಅನೇಕ ಸಂಶೋಧನಾ ಕೃತಿಗಳಲ್ಲಿ ಆಧಾರ ಪೂರ್ವಕವಾಗಿ ಮಂಡಿಸಿದ್ದಾರೆ.

   ನಮ್ಮ ಕರ್ನಾಟಕ ಸರಕಾರದ ಉದಾರ ಸಹಾಯದಿಂದ, ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೯ ರಲ್ಲೇ  ಆರು ಬೃಹತ್‌ ಸಂಪುಟಗಳಲ್ಲಿ, ರಿಯಾಯತಿ ಬೆಲೆಯಲ್ಲಿ, ಶಂ.ಬಾ ರವರ ಸುಮಾರು ೩೨ ಕೃತಿಗಳನ್ನು ಪ್ರಕಟಿಸಿ ಪುಣ್ಯಕಟ್ಟಿಕೊಂಡಿದೆ.

   ಶಂ.ಬಾ ಕೃತಿ ಸಂಪುಟಗಳ  ಸಂಪಾದಕರಾದ ಮಲ್ಲೇಪುರಂ ವೆಂಕಟೇಶ್‌ ರವರು,  ತಮ್ಮ ಅಧ್ಯಯನ ಪೂರ್ಣ ಪೀಠಿಕೆಯಲ್ಲಿ,  ಶಂ.ಬಾ ರವರ  ಜ್ಞಾನದ ಆಳ, ಅಗಲ, ಮತ್ತು, ಸಂಶೋಧನೆಯ ವಿಶಿಷ್ಟ ಮಾರ್ಗದ ಬಗೆಗೆ ಬೆಳಕು ಚೆಲ್ಲಿದ್ದಾರೆ.

   ʻʻ ಶಂಬಾ ಅವರ ಕಾಲದ ಅಥವಾ ಅವರ ಕೃತಿಗಳ ಹಿಂದೆ ಇರುವ ಮುಖ್ಯ ನಿಲುವೆಂದರೆ  ಮನುಷ್ಯನ ಮನಸ್ಸಿನ ಬಗೆಗೆ  ಮತ್ತು ಒಟ್ಟೂ ಮಾನವ ಸಂಸ್ಕೃತಿಯ ತಳಹದಿಯ ರಚನಾ ಕ್ರಮದ ವಿವಿಧ ನೆಲೆಗಳ ಬಗೆಗೆ, ಶಂಬಾ ಅವರ ಸಂಸ್ಕೃತಿ ಚಿಂತನದ ಬೇರುಗಳು, ನವೋದಯ ಪೂರ್ವದಿಂದ ಹಿಡಿದು ಎಲ್ಲಾ ಮಜಲುಗಳಲ್ಲೂ ಹಾಯ್ದು ಬಂದಿದೆ.  ಆದರೆ ಅವು ತಳಸೇರಿದ್ದು ಇನ್ನೆಲ್ಲಿಯೋ..?. ಅವರ ಬರೆಹಗಳಲ್ಲಿ ಈ ಬೇರುಗಳ ಮೂಲದಲ್ಲಿರುವ ಸ್ತರಗಳು ಹೊರಚಾಚಿ ಎದ್ದು ಕಾಣುತ್ತವೆ. ಶಂಬಾ ಅವರ ಚಿಂತನೆಯ ಮೂಲವಿರುವುದು, ಸಂಸ್ಕೃತಿಯ ಕೇಂದ್ರವಾಗಿ ತೋರುವ ಮುಖ್ಯ ಪ್ರವಾಹದಲ್ಲಿ ತಾನೇ..?. ಆದ್ದರಿಂದ ಅವರ ಸಂಸ್ಕೃತಿ ಚಿಂತನದ ಹಿಂದೆ ತೀರ ವೈದಿಕ ಸಂಸ್ಕೃತಿಯ ಛಾಯೆಯೂ ಇಲ್ಲ. ಪಶ್ಚಿಮ ಸಂಸ್ಕೃತಿಯ ನಿಲುವುಗಳ ಮಾದರಿ ರೂಪಗಳೂ ಇಲ್ಲ.  ಅವರ ಸಂಶೋಧನೆಯ ಮುಖ್ಯ ಎಳೆ ಇರುವುದೇ ಜನಾಂಗಗಳ ಸ್ಮೃತಿಗಳಲ್ಲಿ.ʼʼ

      ಶಂಬಾ ಕೃತಿ ಸಂಪುಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ-ಎಚ್.ಜೆ.ಲಕ್ಕಪ್ಪಗೌಡರು ತಮ್ಮ ಮುನ್ನುಡಿಯಲ್ಲಿ ಶಂಬಾ ಬಗೆಗೆ ಹೀಗೆನ್ನುತ್ತಾರೆ.

    ʻʻಶಂಬಾ ಅವರ ಆಸಕ್ತಿ, ಅಧ್ಯಯನ, ಸಂಶೋಧನೆ, ಮತ್ತು ಚಿಂತನೆಗಳ ಬೀಸು ತುಂಬಾ ವ್ಯಾಪಕವಾದುದು.  ಈ ಕಾರಣ ಅವರು ಇತಿಹಾಸದ ಭಾಷಾ ವಿಶ್ಲೇಷಣಾ ಪದ್ಧತಿಯನ್ನು ಕರುನಾಡಿನ ಎಡೆಗಳ  ಹೆಸರುಗಳ, ದೇವತಾ ಪ್ರತಿರೂಪಗಳ, ಸಾಂಕೇತಿಕ ನೆಲೆಗಳ, ಮನೋವೈಜ್ಞಾನಿಕ ಶೋಧನೆಗಳ, ಧಾರ್ಮಿಕ ಚಿಂತನೆಗಳ, ಸಂಕೀರ್ಣ ಪಥವನ್ನು ಹಿಡಿದು ನಡೆದರು. ತಿರುವು ಮರುವು ಆಗಿರುವ ಸಮಕಾಲೀನ ಮೌಲ್ಯಗಳ ಜೊತೆಗೆ ಪ್ರಾಚೀನ ಸಂಸ್ಕೃತಿಯ ಸಾಧಾರ ವಿವರಗಳನ್ನಿಟ್ಟು  ತೌಲನಿಕವಾಗಿ ನೋಡಿದ್ದು  ಮತ್ತು ವಿಶ್ಲೇಷಿಸಿದ್ದು ಜಾಗತಿಕ ಸಾಂಸ್ಕೃತಿಕ ಅಧ್ಯಯನದ  ಅಖಂಡ ಇತಿಹಾಸದಲ್ಲೇ ಇದು ಹೊಸ ಬಗೆಯದು ಹೀಗಾಗಿ  ಆಧುನಿಕ ಸಮಾಜದ ಬಹುಮುಖ ನೆಲೆಗಳನ್ನು ಅರಿಯಲು  ಮತ್ತು ಅರ್ಥೈಸಲು ಪ್ರಾಚೀನ ಆಕರಗಳನ್ನು ಯಥೇಚ್ಛವಾಗಿ ಬಳಸಿಕೊಂಡು ಮುನ್ನಡೆದ ಶಂಬಾ ಅವರು  ಹೊಸ ಅರ್ಥಗ್ರಹಣ ಪದ್ಧತಿಯನ್ನೇ ತಮ್ಮ ಬರೆಹಗಳ ಮೂಲಕ ನಮಗೆ ನೀಡಿದ್ದಾರೆ.ʼʼ

   ಶಂಬಾ ಕಾಲವಾಗಿಯೇ ಕಾಲು ಶತಮಾನ ಕಳೆಯಿತು. ಚರಿತ್ರೆಯ ಸಂಶೋಧನೆಗೇ ಹೊಸ ಹರಿವು ಹೊಸ ಆಯಾಮ ನೀಡಿ, ಕನ್ನಡ ಸಂಸ್ಕೃತಿಗೆ ಜಾಗತಿಕ ಪ್ರತಿಷ್ಠೆಯನ್ನು ದೊರಕಿಸಿಕೊಟ್ಟ ಶಂಬಾ ರವರ ಮಾರ್ಗವನ್ನುಳಿಸಲು, ವಿಶ್ವವಿದ್ಯಾಲಯಗಳಲ್ಲಿ  ಶಂಬಾ ಅಧ್ಯಯನ ಪೀಠವನ್ನೇ ಸ್ಥಾಪಿಸ ಬೇಕಿತ್ತು. ಇನ್ನಾದರೂ ವಿಶ್ವವಿದ್ಯಾವಂತರಿಗೆ ಜ್ಞಾನೋದಯವಾದರೆ  ಶಂಬಾ ಬದುಕು ಸಾರ್ಥಕ ಗೊಂಡೀತು.

 ಸುಮಸಂಪದ  ಅಂಕಣಕ್ಕೆ,  ಸಂಪದ ಸಾಲು ಪತ್ರಿಕೆ.  ತಾ- ೨೪-೩-೨೪.

ಸುಮ-ಸಂಪದ ಅಂಕಣಕ್ಕೆ.                  ಸುಬ್ರಾಯ ಮತ್ತೀಹಳ್ಳಿ.  ತಾ- ೨೪-೩-೨೪.

Wednesday 28 February 2024

ಸಂಗೀತದ ಸಾನ್ನಿಧ್ಯದಲ್ಲಿʼʼ

 

     ಸಂಗೀತ  ಎಂದರೇನೆ  ಮೈ ನವಿರೇಳಿಸುವ  ಸಂಗತಿ.  ಪ್ರಕೃತಿ  ಮೌನಿಯಲ್ಲ, ಸದಾ  ವಿವಿಧ  ನಾದಗಳಿಂದ  ಮೈದುಂಬಿಕೊಂಡಿರುವ  ಒಂದು  ವಿಸ್ಮಯದ  ಜಗತ್ತು  ಅದು.  ಸ್ಥಬ್ಧ ಜಗತ್ತನ್ನು  ಊಹಿಸಲೂ  ಸಾಧ್ಯವಾಗದು. ಗಾಳಿಗೆ  ನೀರಿಗೆ  ನದಿಗೆ  ಸಾಗರಕ್ಕೆ, ಮಳೆಗೆ  ಮೋಡಕ್ಕೆ, ಕಾನನಕ್ಕೆ  ಜೀವಸಂಕುಲಕ್ಕೆ  ಅದರದರದ್ದೇ  ಲಯವಿದೆ.  ನಾದವಿದೆ.  ಸರ್ವಂ  ನಾದಮಯಂ  ಜಗತ್.‌  

     ಆದರೆ    ಲಯದ, ಆ ನಾದದ ಸೂಕ್ಷ್ಮ ಧ್ವನಿಯನ್ನು  ಕೇಳುವ  ಆಸ್ವಾದಿಸುವ  ಮನಸ್ಸು ಮಾತ್ರ  ಬದುಕಿನ  ಸೂಕ್ಷ್ಮಗಳನ್ನು  ಅರಿತೀತು.  ಜೀವನದ  ನಿಜವಾದ  ಅರ್ಥವನ್ನು  ಶೋಧಿಸೀತು.   ಹಾಗೆಂದು  ಎಲ್ಲ ಲಲಿತ ಕಲೆಗಳ  ಮೂಲಧ್ಯೇಯವೂ  ಮಾನವ  ಬದುಕಿನ  ನಿಜವಾದ  ತಾತ್ವಿಕ ಶೋಧನೆಯೇ ಆಗಿದೆ.

     ಪ್ರಕೃತಿ  ಜೀವಿಗಳಿಗೆ ನೀಡಿದ  ಚೈತನ್ಯದಾಯಕ  ವರವೇ  ಸಂಗೀತ.  ಶೃತಿ  ಲಯ ವಿಲ್ಲದ  ಒಂದು  ಕ್ಷಣವೂ  ಪ್ರಕೃತಿಯಲ್ಲಿಲ್ಲ. ತಾಳ  ಭೌತಿಕ  ಶರೀರವಾದರೆ  ರಾಗ  ಅದರ  ಆತ್ಮ. ʻʻ ಸ ರಿʼʼ ಅಂದರೆ  ದೋಣಿ. ʻʻಗ ಮʼʼ ಅಂದರೆ  ಚಲಿಸು  ಎಂದು  ಅರ್ಥೈಸುವುದಿದೆ.   ಘೋರ ಭವಸಾಗರವನ್ನುತ್ತರಿಸಲು  ಜೀವನದ ದೋಣಿ  ಸುರಕ್ಷಿತವಾಗಿ  ಚಲಿಸಬೇಕು. ಎದುರಾಗುವ, ಬಿರುಗಾಳಿ  ಚಂಡಮಾರುತ  ಗಳ  ಏರಿಳಿತಗಳೊಂದಿಗೆ  ಸೆಣಸಾಡುತ್ತ ಧೃಢವಾದ ನೆಲೆಗೆ  ಸೇರಲು, ಸಂಗೀತ  ಜೀವಧಾತುವಾಗಿ  ಸಹಕರಿಸುತ್ತದೆ. 

 

        ನಮ್ಮ ದೇಹವೂ  ಸಹ  ಪ್ರಕೃತಿಯ  ಒಂದು ಸಂಗೀತದ  ಉಪಕರಣವೇ  ಆಗಿದೆ.  ರಕ್ತದ  ಚಲನೆ, ಹೃದಯದ  ಬಡಿತ, ನಿರ್ದಿಷ್ಠ  ಲಯದಲ್ಲಿದ್ದರೇನೆ  ಸುರಕ್ಷೆ.  ನಮ್ವ ನುಡಿವಳಿ, ನಡಾವಳಿಗೂ  ಲಯವೇ  ಸೌಂದರ್ಯ. 

          ವರಕವಿ  ಬೇಂದ್ರೆ  ತಮ್ಮ ಲೇಖನವೊಂದರಲ್ಲಿ  ನಾದದ  ಬಗೆಗೆ  ಪ್ರಸ್ಥಾಪಿಸುತ್ತಾರೆ.  ನಾ... ಎಂದರೆ  ಪ್ರಾಣವಾಯು.  ದ.... ಎಂದರೆ  ಪ್ರಾಣಾಗ್ನಿ.  ಅವೆರಡೂ  ಸಂಧಿಸಿದಾಗ  ಆಗುವ  ಸ್ಫೋಟವೇ  ನಾದ.  ಅಂದರೆ  ನಮ ಸೃಷ್ಟಿ.  ಇತ್ತೀಚಿನ  ಬಿಗ್‌  ಬ್ಯಾಂಗ್‌  ಥಿಯರಿಯೂ  ಸಹ,    ಜಗತ್ತು  ಒಂದು ಸ್ಫೋಟದ  ಮೂಲಕ  ಸೃಷ್ಟಿಯಾಯಿತು  ಎಂಬುದನ್ನು  ಸಾಬೀತು ಗೊಳಿಸಿದೆ.  ನಾದದ  ಮೂಲಕ  ಸೃಷ್ಟಿಯಾದ    ಜಗತ್ತಿನ  ಎಲ್ಲ ಜೀವಿಗಳು, ತಿಳಿದೋ  ತಿಳಿಯದೆಯೋ  ನಾದಕ್ಕೆ  ಸ್ಪಂದಿಸುತ್ತವೆ.  ಅತ್ಯಂತ  ಪುರಾತನ  ತಾತ್ವಿಕ  ಗ್ರಂಥವಾದ  ವೇದ,  ಮೂಲಭೂತವಾಗಿ  ಸ್ವರವನ್ನೇ  ಅವಲಂಬಿಸಿದೆ.  ಭಾರತೀಯ  ಸಂಗೀತವೂ  ವೇದದಿಂದಲೇ  ಜನ್ಮಿಸಿತು  ಎಂಬ  ನಂಬುಗೆ  ನಮ್ಮದು.

          ಸಂಗೀತ  ಕೇವಲ  ಸಂಗೀತಗಾರನ  ಸ್ವತ್ತಲ್ಲ.  ಸಹೃದಯನ  ಸ್ವತ್ತೂ  ಹೌದು.  ಕಲಾವಿದನ  ಪ್ರಸ್ತುತಿ  ಏಕಕಾಲದಲ್ಲಿ,  ಕಲಾವಿದನನ್ನು  ತಣಿಸುತ್ತ,  ಕೇಳುಗನ  ಹೃದಯದಾಳಕ್ಕೂ  ಪ್ರವೇಶಿಸುತ್ತದೆ.   ಬುದ್ಧಿ ಭಾವಗಳನ್ನು  ಪ್ರಚೋದಿಸುತ್ತದೆ.  ಅರಿವು  ಭಾವನೆ  ವರ್ತನೆಗಳಮೇಲೆ  ಸಕಾರಾತ್ಮಕ  ಪರಿಣಾಮವನ್ನು ಬೀರುತ್ತದೆ.  ಮನೋದೈಹಿಕ  ಖಾಯಿಲೆಗಳು  ಸಂಗೀತ ಚಿಕಿತ್ಸೆಯ  ಮೂಲಕ  ಗುಣ ಕಾಣುವುದನ್ನು, ಚಿಕಿತ್ಸಕರು  ಕಂಡುಕೊಂಡಿದ್ದಾರೆ. 

       ಲಲಿತ  ಕಲೆಗಳು  ಮನುಷ್ಯರನ್ನು  ಮತ್ತಷ್ಟು  ಮಾನವೀಯತೆಯ  ದಿಕ್ಕಿಗೆ  ಕೊಂಡೊಯ್ಯುತ್ತವೆ  ಎಂಬುದಕ್ಕೆ  ವಿದೇಶದ  ಸಮೀಕ್ಷೆಯೊಂದು  ಸಾಕ್ಷಿನುಡಿಯುತ್ತದೆ.   ಸಾಮಾನ್ಯ  ಜನರಲ್ಲಿ  ಇರಬಹುದಾದ  ಮೋಸ  ವಂಚನೆ  ಕಪಟ  ಅಪರಾಧ  ಪ್ರವೃತ್ತಿಯ  ಶೇಕಡಾವಾರು ಪ್ರಮಾಣಕ್ಕಿಂತ,  ಕಲಾವಿದ  ಮತ್ತು ಕಲೆಯ  ಆಸ್ವಾದಕರಲ್ಲಿ  ಅತ್ಯಂತ  ಕಡಿಮೆ  ಪ್ರಮಾಣದಲ್ಲಿರುತ್ತದೆ,  ನೈತಿಕ ಗುಣಗಳು  ಜಾಗ್ರತವಾಗಿರುತ್ತವೆ,  ಎಂಬ  ಸತ್ಯವನ್ನು    ಸಮೀಕ್ಷೆಯಲ್ಲಿ  ಕಂಡುಕೊಂಡಿದ್ದಾರೆ.   ಅಂದರೆ  ಕಲೆ  ಕೇವಲ  ರಂಜನೆಯನ್ನು  ಒದಗಿಸುವುದೊಂದೇ  ಅಲ್ಲ,  ನಮ್ಮ ಅಂತರಂಗದ  ಅಮಾನವೀಯ ಗುಣಗಳನ್ನು   ದೌರ್ಬಲ್ಯಗಳನ್ನು  ನಾಶಪಡಿಸುತ್ತದೆ, ಎಂಬುದು  ಸಿದ್ಧಗೊಂಡಂತಾಯಿತು.

        ಮಾನವ ಸಂಸ್ಕೃತಿ  ಬನಿಗೊಳ್ಳುವುದು  ಹರಳುಗಟ್ಟುವುದು  ಕಲೆಯ ಒಡಲಿನಲ್ಲಿ. ಒಂದು ಸಮುದಾಯದ  ಅಸ್ಮಿತೆ  ನೆಲೆಗೊಂಡಿರುವುದೇ  ಕಲಾತ್ಮಕ  ಚಟುವಟಿಕೆಗಳಲ್ಲಿ. ಯಾವ  ಜನಾಂಗ  ಕಲೆ ಸಾಹಿತ್ಯ ಸಂಸ್ಕೃತಿ  ಮತ್ತು ವಿಜ್ಞಾನಕ್ಕೆ   ಮಹತ್ವಕೊಡುವುದೋ  ಅದು ಶ್ರೇಷ್ಠಾತಿ  ಶ್ರೇಷ್ಟ ಜನಾಂಗ  ಎನ್ನಬಹುದಾಗಿದೆ.  ನಮ್ಮ ಇತಿಹಾಸದ  ಸಹಸ್ರಾರು  ರಾಜರುಗಳಲ್ಲಿ  ಕಲಾಚಟುವಟಿಕೆಯನ್ನು ಪ್ರೀತಿಸಿ,  ಪ್ರೋತ್ಸಾಹಿಸಿರುವ  ಅನೇಕ  ಅರಸುಗಳು  ಕಾಣಸಿಗುತ್ತಾರೆ.  ಅವರ  ಆಡಳಿತವೂ  ಜನಪರತೆ  ಮಾನವೀಯತೆಯಿಂದ  ಕೂಡಿತ್ತು ಎಂಬ  ವಿವರಗಳು  ದೊರಕುತ್ತವೆ. ಕೃಷ್ಣದೇವರಾಯ,  ಅಕ್ಬರ್‌, ನಮ್ಮ ಮೈಸೂರ  ಅರಸುಗಳು,  ಮುಂತಾದವರು,  ಸಂಗೀತ ನೃತ್ಯಗಳಿಗೆ  ನೀಡಿದ  ಕೊಡುಗೆ  ಸದಾ ಸ್ಮರಣೀಯ.

     ಹಿಂದೂಸ್ಥಾನೀ  ಸಂಗೀತದ  ಸಾಮ್ರಾಟನಾಗಿ  ಮಿಂಚಿದ್ದ,  ಈಗಲೂ  ಆದರಣೀಯ  ಸ್ಥಾನವನ್ನಲಂಕರಿಸಿರುವ  ʻʻತಾನಸೇನ ʼʼ ಅಕಬರ ಆಸ್ಥಾನದ  ಮಹಾನ್‌ ಸಂಗೀತಗಾರನಾಗಿದ್ದ. ತಾನಸೇನ್‌   ಅಕ್ಬರ ಬಾದಶಹನಿಗೆ  ಸಂಗೀತದ  ಹುಚ್ಚನ್ನೇ  ಹಿಡಿಸಿದ್ದ  ಎಂಬುದು  ಸರ್ವ ವಿದಿತ. ತಾನಸೇನ  ಹಾಡತೊಡಗಿದರೆ, ಇಡೀ  ಸಭೆ ಮೈ ಮರೆಯುತ್ತಿತ್ತು.  ಆಸ್ಥಾನದ  ನರ್ತಕಿಯರು  ಉತ್ಸಾಹ  ತಡೆಯಲಾಗದೇ  ಬಂದು  ಅಪ್ಪಿಕೊಳ್ಳುತ್ತಿದ್ದರು.  ಆತನ  ಸಂಗೀತ  ಕೇಳಲು  ಜನ  ತುದಿಗಾಲಲ್ಲಿ  ನಿಂತಿರುತಿದ್ದರು.  ಅಕ್ಬರನಿಗಿಂತಲೂ   ತಾನಸೇನ  ರಾಜ್ಯದಲ್ಲಿ  ಜನಪ್ರಿಯನಾಗಿದ್ದ.   ಇದನ್ನು ಸಹಿಸದ  ಅಕಬರನ  ಮಗ  ಸಲೀಮ   ತಾನಸೇನನಿಗೆ  ವಿಷಪ್ರಾಶನ  ಮಾಡಿಸಲೂ  ಹೇಸಲಿಲ್ಲ.  ಆದರೂ  ತಾನಸೇನ್‌  ಬದುಕಿದ.

      ಸುಪ್ರಸಿದ್ಧ  ಲೇಖಕ  ದಿ. ಶಂಕರ ಮುಖಾಶಿ  ಪುಣೇಕರ   ತಮ್ಮ  ಬಿಲಾಸಖಾನ್‌  ಎಂಬ  ಲೇಖನವೊಂದರಲ್ಲಿ,  ತಾನಸೇನರ  ಸಮಗ್ರ  ಜೀವನ ವೃತ್ತಾಂತ ವನ್ನು,  ಅದ್ಭುತವಾಗಿ  ಚಿತ್ರಿಸಿದ್ದಾರೆ.  ಲೇಖನದಲ್ಲಿಯ  ಒಂದು  ಘಟನೆಯನ್ನು  ಉದಹರಿಸಲೇ  ಬೇಕಾಗಿದೆ.

      ಸುಲ್ತಾನನ  ಮಗ  ಸಲೀಮನ  ಮದುವೆಯ  ಅದ್ದೂರಿ  ತಯಾರಿ  ನಡೆಯುತ್ತಿತ್ತು.  ಮದುವೆಯ  ಹಿಂದಿನ  ದಿನ   ಬಾದಶಹ  ತಾನಸೇನನನ್ನು  ಕರೆದು,  ʻʻಶಾದಿ ಮುಬಾರಕ್‌  ಆಗುವಂತ  ನಿನ್ನದೇ  ಆದ  ಚೀಜ್‌  ಹಾಡು.   ಹಳೆಯ  ಸಂಸ್ಕೃತ   ಅವಧಿ ಭಾಷೆಗಳ  ಹಾಡುಗಳನ್ನು  ಕೇಳಿ  ಕೇಳಿ ಬೇಸರ ಬಂದಿದೆ.   ನಿನ್ನ  ಪ್ರಸಿದ್ಧಿಗೆ  ಭೂಷಣವಾಗುವಂತೇ   ಕರಾಮತ್‌  ತೋರಿಸುʼʼ  ಎಂದು   ಆಜ್ಞಾಪಿಸಿದ.

     ʻʻ ನಾನು  ಹಾಡುತ್ತೇನೆ.  ಸ್ವೀಕರಿಸುವುದು  ಬಿಡುವುದು  ಹುಜೂರರಿಗೆ  ಸೇರಿದ್ದುʼʼ  ತಾನಸೇನ  ನಮ್ರನಾಗಿ  ಉತ್ತರಿಸಿದ.

     ಇದೀಗ  ಬಿಗಿ ಬಂದಿತು.  ಇಷ್ಟು ದಿನವೂ  ದರ್ಬಾರಿನ  ಪ್ರಥಮ ಗಾಯಕನೆಂದು  ದಶದಿಕ್ಕುಗಳಲ್ಲಿ  ಹೆಸರಾದರೂ, ಸ್ವಂತದ  ಕೃತಿ ರಚಿಸಿರಲಿಲ್ಲ.  ಏನೇಆಗಲಿ  ಸುದೈವದಿಂದ  ಬಾದಶಹರು  ಹೊಸ ರಾಗ ರಚಿಸಲು  ಕೇಳಿಕೊಳ್ಳಲಿಲ್ಲ. ನನ್ನ ಪುಣ್ಯ  ಹೊಸ  ಚೀಜು  ರಚಿಸಲು  ಮಾತ್ರ  ಹೇಳಿದ್ದಾರೆ.   ಆದರೂ  ಆತಂಕದಲ್ಲಿ  ನರಳಿದ.    ಸಂಗಾತಿ  ರಹಮತ್‌ ಖಾನರು  ಧೈರ್ಯ  ನೀಡಿದರು.  ಬಾದಶಹನ  ಮಾತನ್ನೇ  ಚೀಜನ್ನಾಗಿ  ಪರಿವರ್ತಿಸಿ  ರಾತ್ರಿಯಿಡೀ  ರಿಯಾಜ್‌  ಮಾಡಿದರು.  ಬಾದಶಹರಿಗೆ  ಅತ್ಯಂತ ಪ್ರಿಯವಾದ  ದರ್ಬಾರಿ  ರಾಗದ  ಸ್ವರಗಳ  ಪ್ರಾರಂಭ  ಬೆಳವಣಿಗೆ  ಮುಕ್ತಾಯಕ್ಕೆ  ಅನುಗುಣವಾಗುವಂತೇ   ಹರುಕು  ಮುರುಕು  ಅರ್ಥಹೀನ  ಶಬ್ದಗಳನ್ನೇ  ಕೂಡಿಸಿ  ಹಾಡಿದರು.  ಈಗಲೂ  ಅತ್ಯಂತ  ಪ್ರಸಿದ್ಧವಾಗಿ  ಬಳಕೆಯಲ್ಲಿರುವ  ಚೀಜ್‌  ಹೀಗಿದೆ.

            ಸೋ  ಸೋ  ಮುಬಾರಕ್‌  ಬಾದಿಯಾ/ ಶಾದಿಯಾ /

             ಐಸೇ  ಶಾದಿ  ಹೋ /  ಲಾಖೋ  ಹಜಾರ್‌ /  ಸೋ... ಸೋ   ಮುಬಾರಕ್‌ .../

( ವಿವಾಹಕ್ಕೆ  ನೂರು  ನೂರು  ಶುಭಾಶಯ.  ಇಂಥಹ  ಸಾವಿರ  ಸಾವಿರ  ಮದುವೆಗಳಾಗಲಿ )

 

        ಹಿಂದೂಸ್ಥಾನೀ  ಸಂಗೀತಕ್ಕೆ  ಹೊಸ  ಹರಹು, ಹೊಸ ಮೆರಗು  ನೀಡಿದ  ತಾನಸೇನ್‌, ತನ್ನ ಮಗ  ಬಿಲಾಸಖಾನ  ಸತ್ತಾಗ  ಅತೀವ  ದುಃಖದಿಂದ,  ಅವನ  ಕಳೇಬರದೆದುರು,  ತೋಡಿ  ರಾಗವನ್ನು ಸೃಷ್ಟಿಸಿ  ಹಾಡುತ್ತಾನೆ.  ಅದೇ  ʻʻಬಿಲಾಸಖಾನೀ  ತೋಡಿ ʼʼ  ಎಂಬ  ಹೆಸರಿನಲ್ಲಿ, ಇಂದಿಗೂ  ಸುಪ್ರಸಿದ್ಧವಾಗಿದೆ.

     ಭಾರತೀಯ  ಶಾಸ್ತ್ರೀಯ  ಸಂಗೀತ ಪ್ರಪಂಚ,  ಅಸಂಖ್ಯಾತ ಸಂಗೀತಗಾರರ  ಕತೆ, ದಂತಕಥೆಗಳಿಂದ  ಕಿಕ್ಕಿರಿದಿದೆ.  ಅದೇ ಒಂದು ಮಹಾಕಾವ್ಯವಾಗುವಷ್ಟು  ಸಮೃದ್ಧವಾಗಿದೆ.  ಅಲ್ಲಿ ಮಾನವ ಪ್ರತಿಭೆಯ ಉತ್ತುಂಗವಿದೆ.  ಅಮಾನವೀಯತೆಯ  ಕಟು ಸತ್ಯವೂ ಇದೆ.  ಪ್ರೀತಿ  ಪ್ರೇಮ ಪ್ರಣಯ ವ್ಯಭಿಚಾರ  ಸಂಘರ್ಷಗಳ  ಮುಖಾಮುಖಿಯಿದೆ.  ಜೊತೆಯಲ್ಲಿಯೇ  ಸಂಗೀತದ  ಮಹೋನ್ನತ ಸಾಧನೆಯ  ಪರಾಕಾಷ್ಠೆ ತಲುಪಿ  ಜಗತ್ತಿನ  ಶ್ರೀಮಂತ ಕಲೆಯಾಗಿ  ವಿಜ್ರಂಭಿಸುತ್ತಿದೆ.

    ಸಂಗೀತ  ಚರಿತ್ರೆಯ  ಕರುಣಾಪೂರ್ಣ  ಘಟನೆಯೊಂದನ್ನು ನಾನಿಲ್ಲಿ ಪ್ರಸ್ಥಾಪಿಸಲೇ ಬೇಕಿದೆ. ಕನ್ನಡದ  ಸುಪ್ರಸಿದ್ಧ ಸಂಗೀತ ವಿಮರ್ಶಕರೆಂದು  ಹೆಸರಾದ  ಬಿ.ವಿ.ಕೆ.ಶಾಸ್ತ್ರಿ  ಕಲೆಯ ಗೊಂಚಲು   ಎಂಬ  ತಮ್ಮ ಕೃತಿಯಲ್ಲಿ ಹಲವಾರು ಸಂಗೀತ ದಿಗ್ಗಜರ  ಜೀವನ ವೃತ್ತಾಂತವನ್ನು  ಸಂಗ್ರಹಿಸಿ ಕೊಟ್ಟಿದ್ದಾರೆ.  ಅದರಲ್ಲಿ ಶತಮಾನದ  ಹಿಂದೆ  ಆಗಿಹೋದ  ಮಹಾನ್‌  ಹಿಂದುಸ್ಥಾನಿ  ಕಲಾವಿದ  ʻʻಬಾಬಾ  ದೀಕ್ಷಿತ್‌ʼʼ  ಒಬ್ಬರು.

     ತಾನ್ಸೇನ ನ  ಜನ್ಮಭೂಮಿಯೆಂದೇ  ಪ್ರಸಿದ್ಧವಾದ  ಗ್ವಾಲಿಯರ್‌ ಗೆ  ಸಂಗೀತ ಕಲಿಯಲಾಗಿಯೇ  ಒಬ್ಬ ಬಡ ಬಾಲಕ  ಅದಮ್ಯ  ಆಕಾಂಕ್ಷೆಯಿಂದ  ಒಂಟಿಯಾಗಿ   ಬರುತ್ತಾನೆ.  ಗ್ವಾಲಿಯರ್‌  ಖಾನದಾನಿಯ  ಸ್ಥಾಪಕರೆಂದೇ  ಹೆಸರಾದ  ಹದ್ದೂಖಾನ್‌  ಹಸ್ಸೂಖಾನ್‌  ಸಹೋದರರಲ್ಲಿ  ಸಂಗೀತ  ಕಲಿಯುವ  ಆಸೆ  ಆ ಬಾಲಕನಿಗೆ.  ಹದ್ದೂಖಾನ್‌  ಸಹೋದರರು  ಗ್ವಾಲಿಯರ್‌  ಸಂಸ್ಥಾನದ  ಮಹಾರಾಜರಾದ  ಜಿಯಾಜಿರಾವ್‌  ಸಿಂಧಿಯಾ  ರವರ  ಆಸ್ಥಾನ ಗಾಯಕರು.  ಸಂಗೀತಗಾರರ  ಮನೆಯ ಪಕ್ಕದಲ್ಲಿರುವ  ಛತ್ರದಲ್ಲಿ  ಉಳಿದುಕೊಂಡ  ಬಾಲಕ  ಹಲವು ತಿಂಗಳುಗಳ ಕಾಲ  ಸಂಗೀತದ  ಪಾಠಗಳನ್ನು  ಶ್ರದ್ಧೆಯಿಂದ ಹೊರಗೇ  ನಿಂತು  ಆಲಿಸುತ್ತಾನೆ.  ಛತ್ರದಲ್ಲಿ ಉಳಿದುಕೊಂಡು  ರಾತ್ರಿಯಿಡೀ  ಅಭ್ಯಸಿಸುತ್ತ, ರಾಗಗಳನ್ನು  ಆತ್ಮಸಾಥ್‌  ಮಾಡಿಕೊಳ್ಳುತ್ತಾನೆ.  ಅಲ್ಲಲ್ಲಿ  ಹಾಡಲೂ  ಪ್ರಾರಂಭಿಸುತ್ತಾನೆ.  ಕೆಲವೇ ದಿನಗಳಲ್ಲಿ  ಬಾಲಕನ  ಜನಪ್ರಿಯತೆಯನ್ನು  ಗಮನಿಸಿದ  ಖಾನ್‌ ಸಹೋದರರು,  ಆತ  ಹಾಡುವುದನ್ನು  ಗಮನಿಸುತ್ತಾರೆ.  ಆಶ್ಚರ್ಯಚಕಿತರಾಗುತ್ತಾರೆ.

      ತಮ್ಮ ಶಿಷ್ಯನಲ್ಲದಿದ್ದರೂ  ಈತ  ತಮ್ಮ ಪರಂಪರೆಯ  ಸಂಗೀತವನ್ನು ಇಷ್ಟು ಸುಂದರವಾಗಿ  ಹಾಡುತ್ತಾನೆ  ಎಂಬುದೇ  ಅರ್ಥವಾಗದ  ಸ್ಥಿತಿ  ಅವರಿಗೆ.  ಬಾಲಕನನ್ನು  ಬಳಿಗೆ  ಕರೆದು,  ವಿಚಾರಿಸಿ  ತಮ್ಮ ಸಂಗೀತ ಶಾಲೆಗೆ  ಸೇರಿಸಿಕೊಳ್ಳುತ್ತಾರೆ.  ಆತನೇ  ʻʻ ಬಾಬಾ ದೀಕ್ಷಿತ್‌ʼʼ

     ಹತ್ತು ವರ್ಷ  ಅವಿರತವಾಗಿ  ಖಾನ್‌ ಸಹೋದರರ  ಗರಡಿಯಲ್ಲಿ  ಸಿದ್ಧಗೊಂಡ  ಬಾಬಾ ದೀಕ್ಷಿತ್‌  ಮಹಾರಾಜರಿಂದಲೂ  ಸಮ್ಮಾನಿತಗೊಳ್ಳುತ್ತಾನೆ.  ಇಡೀ  ಗ್ವಾಲಿಯರ್‌ ನಗರದಲ್ಲಿ  ಬಾಬಾ  ಮನೆಮಾತಾಗುತ್ತಾನೆ.

     ಒಂದು ದಿನ  ಸಂಗೀತ  ಶಿಕ್ಷಣ  ಮುಗಿಸಿ  ಬಾಬಾ  ಹೊರಟು ನಿಂತಾಗ,  ಹಸ್ಸೂಖಾನ್‌  ಶಿಷ್ಯನನ್ನು ಕರೆದು  ಕುಳ್ಳಿರಿಸಿ,  ಗುರುಕಾಣಿಕೆಯನ್ನು  ಏನು  ಕೊಡುತ್ತೀಯಾ  ಎಂದು  ಕೇಳುತ್ತಾರೆ.  ಶಿಷ್ಯ  ನಾನು  ಬಡವ.  ಒಂಟಿ.  ನಾನೇನು  ಕೊಡಬಲ್ಲೆ  ಗುರುಗಳೇ   ಎಂದು  ಕೇಳುತ್ತಾನೆ. 

     ನಿನ್ನಿಂದ  ಸಾಧ್ಯವಾಗುವುದನ್ನೇ  ಕೇಳುತ್ತೇನೆ,  ಕೊಡುತ್ತೀಯಾ...?  ಎಂದು  ಕೇಳಿದಾಗ  ಖುಷಿಯಿಂದ  ಹುಡುಗ  ಹೂಂ  ಗುಡುತ್ತಾನೆ.

     ಗಂಭೀರವಾಗಿ  ಗುರು  ಹಸ್ಸೂಖಾನ್‌  ತನ್ನ ಬೇಡಿಕೆಯನ್ನು  ಮಂಡಿಸುತ್ತಾನೆ.  ʻʻ  ನೀನು  ಇಂದಿನಿಂದ  ಸಾರ್ವಜನಿಕವಾಗಿ  ಎಲ್ಲೂ  ಎಂದೂ  ಹಾಡಕೂಡದು.  ರಾಜನ ಆಸ್ಥಾನದಲ್ಲೂ  ಸಹ.   ಆದರೆ  ದೇವಾಲಯದಲ್ಲಿ  ಹಾಡಲು  ಯಾವ  ತಡೆಯಿಲ್ಲʼʼ   ಎಂಬ  ನಿಯಮವನ್ನು  ಕೇಳಿದಾಗ  ಬಾಬಾ  ಒಮ್ಮೆ ಬೆಚ್ಚಿಬೀಳುತ್ತಾನೆ.   ಅದುರುವ  ಧ್ವನಿಯಲ್ಲೇ   ʻʻ  ಯಾಕೆ  ಇಷ್ಟು ಕಠಿಣ  ನಿಯಮ  ಗುರುಗಳೇ...?ʼʼ  ಎಂದು  ಪ್ರಶ್ನಿಸಿದಾಗ,   ಹಸ್ಸೂಖಾನ್‌   ʻʻ  ಇದು  ನನ್ನ ಮಕ್ಕಳ ಭವಿಷ್ಯದ  ಪ್ರಶ್ನೆ.  ನೀನು ಹಾಡುತ್ತಿದ್ದರೆ  ನನ್ನ ಮಕ್ಕಳು  ಅನಾಥರಾಗುತ್ತಾರೆ.  ನಮ್ಮ ವಂಶದ    ಕಲೆ ಅವರಿಗೇ  ದಕ್ಕದಂತಾಗುತ್ತದೆ.  ನಾನು  ಕೇಳುತ್ತಿರುವುದು  ಗುರು ದಕ್ಷಿಣೆಯನ್ನಲ್ಲ,  ನಿನ್ನಿಂದ  ಭಿಕ್ಷೆʼʼ  ಎಂದಾಗ,  ಬಾಬಾ ದೀಕ್ಷಿತ್‌ ನ  ಕಣ್ಣಲ್ಲಿ ನೀರು ತುಂಬುತ್ತದೆ.  ಎದೆ ಭಾರವಾಗುತ್ತದೆ.  ಕೃಷ್ಣಾರ್ಪಣ  ಎಂದು ಉದ್ಗರಿಸುತ್ತ, ಗುರು ದಕ್ಷಿಣೆಯನ್ನು  ಸ್ವೀಕರಿಸಿ,  ಎಂದೆನ್ನುತ್ತ  ನಮಸ್ಕರಿಸುತ್ತಾನೆ.

     ಆಗ  ಬಾಬಾನಿಗೆ  ಕೇವಲ  ಇಪ್ಪತ್ಮೂರು  ವರ್ಷ.  ಅಲ್ಲಿಂದ  ಕಾಶಿಗೆ  ಪ್ರಯಾಣಿಸಿದ  ದೀಕ್ಷಿತ್‌  ತಮ್ಮ ತೊಂಬತ್ತು  ವರ್ಷದ  ಸುದೀರ್ಘ  ಸಂಗೀತ  ಜೀವನದಲ್ಲಿ  ಒಮ್ಮೆಯೂ  ಸಾರ್ವಜನಿಕವಾಗಿ  ಹಾಡಲೇ  ಇಲ್ಲ.  ದೀಕ್ಷಿತರ  ಅಭಿಮಾನಿ  ಗ್ವಾಲಿಯರ್‌  ಮಹಾರಾಜ  ಸಹ, ಬಾಬಾ  ಇದ್ದಲ್ಲೇ  ಬಂದು  ಕಾಶಿ  ವಿಶ್ವನಾಥ  ಮಂದಿರದಲ್ಲಿ  ಸಂಗೀತವನ್ನಾಲಿಸಿ  ತೃಪ್ತಿ ಪಟ್ಟ.  

    ನೂರಾರು  ಪ್ರತಿಭೆಗಳನ್ನು  ಸೃಷ್ಟಿಸುತ್ತ,  ಗ್ವಾಲಿಯರ್‌  ಸಂಗೀತ  ಪರಂಪರೆ  ಉಳಿದು ಬೆಳೆಯಲು  ಕೊನೆಗೂ  ಬಾಬಾ ನೇ  ಕಾರಣನಾದ.

     ವೇದ  ಉಪನಿಷತ್‌, ಕುರಾನ್‌, ಬೈಬಲ್‌ ಗಳಂತೇ  ಎಲ್ಲ ಸಂಗೀತ  ಪರಂಪರೆಗಳೂ  ಇಡೀ  ಮಾನವ ಲೋಕಕ್ಕೆ  ಸಮರ್ಪಣೆಯಾಗಬೇಕೇ  ಹೊರತು, ಯಾವುದೇ ಒಂದು ವಂಶದ  ಆಸ್ತಿಯಾಗುವುದಲ್ಲ.  ಮಹಾಭಾರತದ  ಭೀಷ್ಮಪ್ರತಿಜ್ಞೆ,  ಅಥವಾ  ಏಕಲವ್ಯ ಪ್ರಕರಣವನ್ನು  ನೆನಪಿಸುವ    ಸಂಗತಿ,  ಸಂಗೀತ ಚರಿತ್ರೆಯಲ್ಲಿ  ಒಂದು  ವಿಷಾದಪೂರ್ಣ ಘಟನೆ.

      ಕಲೆಯನ್ನೇ  ಉಸಿರಾಗಿಸಿಕೊಂಡು  ಬದುಕಿಡೀ  ಸಂಗೀತ ಸಾಧನೆಯಲ್ಲೇ  ನಿರತರಾಗಿದ್ದ,  ಪಂಡಿತ್‌  ಕುಮಾರ ಗಂಧರ್ವರು  ತಮ್ಮ ಕೃತಿಯೊಂದರಲ್ಲಿ, ಹೇಳುತ್ತಾರೆ,

      ʻʻ ನಾನೊಬ್ಬ  ಅಲೆಮಾರಿ.  ಹಾಡುಗಾರಿಕೆ  ಒಂದು   ಅಂತ್ಯವಿಲ್ಲದ  ಪಯಣ.  ರಾಗದ  ಬಗೆ ಬಗೆಯ ರೂಪಗಳನ್ನು  ನೋಡುವುದು,  ನಿರ್ಮಾಣ ಮಾಡುವುದು  ನನ್ನ ಜಾಯಮಾನ.  ಒಂದು ರಾಗ ಒಂದೇ ಬಗೆಯಲ್ಲಿ  ಸುಂದರವಾಗಿದೆ ಎಂದು ಭಾವಿಸದೇ   ರಾಗದ  ವೈವಿಧ್ಯಮಯ  ಸೌಂದರ್ಯವನ್ನು ಶೋಧಿಸುತ್ತಲೇ ಇರುತ್ತೇನೆ.  ಯಾವುದು ನನಗೆ  ಸಂಪೂರ್ಣ ಕರಗತವಾಗುವುದಿಲ್ಲವೋ  ಅದನ್ನು ಸಂಪೂರ್ಣ  ಸ್ವಾಧೀನ ಪಡಿಸಿಕೊಳ್ಳಲು  ಪ್ರಯತ್ನಿಸುತ್ತೇನೆ. ನಾನು ಎಂದು ತೃಪ್ತನಾಗುತ್ತೇನೆಯೋ  ಅಂದೇ ನನ್ನ ಹಾಡುಗಾರಿಕೆ  ಮುಕ್ತಾಯವಾಗುತ್ತದೆ.  ನಾನು  ಸದಾ ಅತೃಪ್ತ.  ಅಂತೆಯೇ  ನಾನು  ಹಾಡುತ್ತಲೇ ಇರುತ್ತೇನೆ. ʼʼ

     ಎಂದು  ಉದ್ಗರಿಸಿದ   ಕುಮಾರ ಗಂಧರ್ವರು  ಕೇವಲ  ಹಾಡಲಿಲ್ಲ.  ನಾದದ ಮೂಲಕ್ಕೆ ಸಾಗಿದರು.  ಇಪ್ಪತ್ತಕ್ಕೂ ಹೆಚ್ಚು ನವರಾಗಗಳನ್ನು  ಸೃಷ್ಟಿಸಿ,  ನಾದಲೋಕವನ್ನು ಸಮೃದ್ಧ ಗೊಳಿಸಿದರು.  ಅವುಗಳಲ್ಲಿ  ʻʻ ಗಾಂಧೀ ಮಲ್ಹಾರ್‌ʼʼ ರಾಗ  ವಿವಾದ  ಮತ್ತು ಪ್ರಸಿದ್ಧಿ ಎರಡನ್ನೂ ಪಡೆಯಿತು.  ಸಂಕೀರ್ಣವಾದ  ಮಲ್ಹಾರ್‌  ರಾಗಕ್ಕೆ  ಹೊಸ  ಆಯಾಮ, ಹೊಸ ಹೊಳಪು, ಹೊಸ ಹರಿವುಗಳನ್ನು ನೀಡಿದರು. ತೀವ್ರ ಮಧ್ಯಮ  ಸ್ವರವು  ಇಡೀ ರಾಗಕ್ಕೆ  ಸುಕೋಮಲ  ಸ್ಪರ್ಶವನ್ನು  ನೀಡಿತು.  ರಾಗದ  ಆಳದಲ್ಲಿ  ಮಹಾತ್ಮರ  ಸತ್ಯ  ಅಹಿಂಸೆ  ಮತ್ತು ಭಕ್ತಿ ಭಾವಗಳು ತುಂಬಿ  ಹರಿಯುತ್ತಿತ್ತು.

     ಭಾರತೀಯ  ಗುರುಶಿಷ್ಯ ಪರಂಪರೆಯ  ಶಿಕ್ಷಣವನ್ನು ಶಾಸ್ತ್ರೀಯ  ಕಲೆಗಳು, ಇನ್ನೂ ಜೋಪಾನವಾಗಿ  ತನ್ನ ಒಡಲೊಳಗಿಟ್ಟು  ಪೋಷಿಸುತ್ತಿದೆ.  ಸಾಕಷ್ಟು ಅತ್ಯುನ್ನತ  ಕಲಾವಿದರುಗಳನ್ನು  ನೀಡುತ್ತಿದೆ.  ಹಾಗೆಂದು,  ಆಧುನಿಕವೆಂಬ  ವರ್ತಮಾನದ  ಸಂಗೀತ ವಿಶ್ವವಿದ್ಯಾಲಯಗಳಿಂದ  ಒಂದೇ ಒಂದು  ಹೆಸರಿಸಬಹುದಾದ  ಪ್ರತಿಭೆ  ಸೃಷ್ಟಿಯಾಗಿಲ್ಲ.

      ನಾದಲೋಕಕ್ಕೆ  ಅದು ನೀಡುವ  ಮೋದಕ್ಕೆ  ನನ್ನದೊಂದು  ಸಲಾಮ್.‌

 

 

        

              ʻ ಸುಮ-ಸಂಪದʼ  ಅಂಕಣಕ್ಕೆ.  ೨೮-೨- ೨೦೨೪.     

               ಸುಬ್ರಾಯ  ಮತ್ತೀಹಳ್ಳಿ. 9483647887. Whatsup.

    

 

Tuesday 23 January 2024

ನೆರೆಯ ನೇಹಿಗೆ......

 

ಮಳೆಯ ಮಾತೆ  ಮಾರಿಯಾದಳೋ  ಹಸಿರು  ಹಾಸನು  ಹರಿದಳೋ

ಹಸಿವ ಹಿಂಗಿಸುವಾತನನ್ನು  ಹೊಸೆದು  ಕ್ರೋಧದಿ  ಮೆರೆದಳೋ

 

ಬಯಲು ಬಾಳು  ಬತ್ತಲಾಯಿತು  ಕೊರಳ ಕುಣಿಕೆ  ಬಿಗಿಯಿತು

ಹಾಡು ಹಗಲೇ  ಕತ್ತಲಾಯಿತು  ಬದುಕು ಬತ್ತಿ ಬೊಬ್ಬಿರಿಯಿತು.

 

ಎಂಥ ಕೋಪ  ಅದೆಂಥ ಶಾಪ ..? ಹಸಿರು ಸಂತನ ಸೆಳೆಯಿತು

ಬರದ ನಾಡಿನ  ನೀರ ಧ್ಯಾನಕೆ  ಭಾರಿ  ಬವಣೆಯ  ನೀಡಿತು.

 

ಇಂತ  ಮಾರಣ  ಎಂಥ  ದಾರುಣ  ಏನು ಕಾರಣ      ಸ್ಥಿತಿಗೆ

ಏಕೆ ಎರಗಿತು  ಈ ಪರಿಸ್ಥಿತಿ   ನಮ್ಮ     ಕ್ಷಿತಿಗೆ.

 

ಅವನಿ  ಆಯಿಯ  ಅರಿವೆ ಸೆಳೆದ  ದುಃಶ್ಶಾಸನರ  ಕೃತ್ಯವೇ..?

ನಭವ  ಧೂಮದ ನರಕ  ಗೈದ  ನಾರಕಿಗಳ  ನೃತ್ಯವೇ....

 

ಭೂಮಿ ಉತ್ತಿ  ಬೀಜ ಬಿತ್ತಿ  ಬೆವರ ಗೋಪುರ  ಕಟ್ಟಿದ

ಹೊಟ್ಟೆ ಬಟ್ಟೆ ಕಟ್ಟಿ ನೆಟ್ಟ,  ಕಲ್ಪವೃಕ್ಷವೇ  ನೆಲ ಕಚ್ಚಿತೋ

 

ನೆರೆಯ  ನೇಹಿಯೇ  ಧರೆಯ  ದೊರೆಯೇ

ಗುರುತನದ  ಸ್ಥಾನ  ನಿಂದು.

 

ಧೈರ್ಯಗೆಡದಿರು  ಇದು  ಕ್ಷಣಿಕ

ನಾವಿರುವೆವು  ನಿನ್ನ  ಹಿಂದು  ಮುಂದು.

 

ಅನ್ನ ನೀಡುವ  ನಿನ್ನ ಚಿನ್ನಕೆ  ಕನ್ನಹಾಕುವ  ದುಷ್ಟರು

ಶೀಷ್ಠರಂತೇ  ವೇಷಧರಿಸಿದ  ದುಷ್ಟ   ಪಾಪಿಷ್ಟರು.

 

ಬೆಚ್ಚಗಿರುವ  ಹುಚ್ಚಸಂತತಿ  ಹೆಚ್ಚಿದೆ  ನಿನ್ನ  ಕಚ್ಚಿದೆ

ಎಚ್ಚರಕೆ  ನಾವೇರಿ  ಬೆಚ್ಚಿಸುವ  ಕಾಯಕಕೆ

ಹೊಚ್ಚ ಹೊಸ ದಾರಿಯ   ಹುಡುಕುವಾಸೆಯು  ಹೆಚ್ಚಿದೆ.

 

             ( ಮಹಾ ಮಳೆಗೆ  ಪ್ರತಿಕ್ರಿಯೆ.  ೨೦೨೦ರ  ಮಳೆಗಾಲ)

Tuesday 26 December 2023

ಮಾತು – ಮಾತೆ ʼʼ

 

ಕರುನಾಡ  ನುಡಿಗುಡಿಯ ಮಡಿಲಲ್ಲಿ ಮಿಡಿಯುತಿಹ

ನುಡಿಕಿರಣ  ನಾಡಿಗಳೇ  ಇಲ್ಲಿ ಕೇಳಿ

ಸಮರಸದ ಸಿರಿಪಥದಿ  ಸುಮನಸದ ಸುಮ ಸೂಸಿ

ಸೌಜನ್ಯಸಾಗರದಿ  ತೇಲಿ ತೇಲಿ.

   ಭಾರತಾಂಬೆಯ  ಹಿರಿಕುವರಿ ಕನ್ನಡತಿ

   ದೇಶಭಾಷೆಗೆ  ಇವಳೆ ಒಡತಿ.

   ಕನ್ನಡದ  ಕಣ್ಣಿನಲಿ ಭಾರತಿಯ ಪ್ರತಿಬಿಂಬ

   ತಾಯ್ತನದ ಕರುಣೆಯಾ  ದಿವ್ಯಾಕೃತಿ.

ಮಾತು ಮಾತೆ ಎರಡೂ ಒಂದೇ

ನುಡಿಯೆ  ನಾಡಿನ  ಅಸ್ಮಿತೆ.

ಮಾತು ಜೀವ, ಜೀವಮಾತೆ

ಮನುಜ ಕುಲದಾ  ಸಂಹಿತೆ.

    ಮಣ್ಣು  ಕನ್ನಡ, ಮಾನ ಕನ್ನಡ

    ನಮ್ಮ ಮಾತೇ  ಕನ್ನಡ,

   ನಮ್ಮ ಮನದ  ನಮ್ಮ ತನುವಿನ

   ಯಶದ  ಮಾನವೇ  ಕನ್ನಡ.

ತಾಯ್ನುಡಿಯ ಏಣಿಯಲಿ, ಏರು ತಾರಾಪಥಕೆ

ಎಲ್ಲ ತಾರೆಗಳು  ಇಲ್ಲಿ ಬರಲಿ.

ಸಹೃದಯದ  ಸಡಗರದ, ಸ್ನೇಹ ಜಲ ಚಿಮ್ಮಲಿ

ಸ್ವಾಭಿಮಾನದ ಜ್ಯೋತಿ  ಕಂಗೊಳಿಸಲಿ.

   ಸಾವಿರದ  ನುಡಿಯಲ್ಲಿ  ಭಾವಬರ ಬರದಿರಲಿ

   ನಾವಿರುವ ನೆಲದಲ್ಲಿ  ಸತ್ವ ನೆಲೆಯೂರಲಿ.

   ನೂರು ನುಡಿ ಗಡಣದಲಿ ಮಿಂಚಲಿ ಚೆನ್ನುಲಿ

   ಮೇರು ಪರ್ವತವಾಗಿ ಮೆರೆದಾಡಲಿ.

(೭-೧-೨೦೧೮  ರಂದು  ಶಿರಸಿಯಲ್ಲಿ  ಜರುಗಿದ ರಾಜ್ಯ ಸುಗಮ ಸಂಗೀತ ಸಮ್ಮೇಳನದಲ್ಲಿ   ಸು, ಸಂ. ಪ. ಅಧ್ಯಕ್ಷ  ಕಿಕ್ಕೇರಿ  ಕೃಷ್ಣಮೂರ್ತಿಯವರಿಂದ  ಪ್ರಸ್ತುತವಾಗಿದ್ದು. )

 

 

 

Friday 1 December 2023

ಪರ್ವತೇಶ್ವರ ಪುರಾಣವುʼʼ (ಕತೆ.)

 

       ಶಿರಪುರದಲ್ಲಿ   ಸಂಭ್ರಮವೋ  ಸಂಭ್ರಮ.   ಸುತ್ತಲಿನ  ಹತ್ತಾರು  ಗ್ರಾಮಗಳ  ಸಾವಿರಾರು  ಭಕ್ತಶ್ರೇಷ್ಠರು   ಒಂದೆರಡು  ತಿಂಗಳಿನಿಂದಲೇ   ಅಲ್ಲಿ  ಬೀಡು  ಬಿಟ್ಟು  ಹಗಲೂ  ರಾತ್ರಿ  ತಮ್ಮ  ್ತವ್ಯದಲ್ಲಿ  ನಿರತರಾಗಿದ್ದರು.   ಎಲ್ಲರಲ್ಲೂ  ಧನ್ಯತಾ  ಭಾವ.  ಆದಿನ  ರಾಜ್ಯದ  ಇಡೀ  ಮಂತ್ರಿಮಂಡಳವೇ  ಬೀಡು  ಬಿಟ್ಟಿತ್ತು.  ಸ್ವಥಃ  ಮುಖ್ಯಮಂತ್ರಿ  ಶಂಭುಲಿಂಗಯ್ಯ ನವರೇ  ಪತ್ನೀ  ಮಕ್ಕಳೊಂದಿಗೆ  ರೇಶಿಮೆ  ಮಡಿಯುಟ್ಟು,  ವಿಶೇಷ  ಪೂಜಾಕೈಂರ್ಯಗಳಲ್ಲಿ  ಪಾಲ್ಗೊಂಡಿದ್ದರು.  ನೂರಾರು  ಸಂಖ್ಯೆಯ  ಪೋಲೀಸರು,  ಅಧಿಕಾರಿಗಳು  ಪಕ್ಷದ  ಕರ್ಯರ್ತರು  ರಾಜ್ಯದ  ಮಹಾ  ಮಹಾ  ಉದ್ಯಮಿಗಳು   ಉನ್ನತ ಗುಣ ಗಣಿಗಳು,  ಸಂಭ್ರಮಕ್ಕೊಂದು  ಭಯಮಿಶ್ರಿತ  ಗಾಂಭರ್ಯವನ್ನೊದಗಿಸಿದ್ದರು. 

        ಇಷ್ಟೆಲ್ಲ  ಸಂಭ್ರಮಕ್ಕೆ  ಕಾರಣ    ಗಗನ ಚುಂಬೀ  ್ವತಸಾಲುಗಳು,  ಹೆಮ್ಮರಗಳ  ದಟ್ಟಕಾನನದ  ನಟ್ಟ  ನಡುವೆ  ಶೋಭಾಯಮಾನವಾಗಿ   ಕಣ್ದುಂಬುತ್ತಿರುವ   ಶಿರಪುರವೆಂಬ  ಹಳ್ಳಿಯ  ್ವತೇಶ್ವರ  ದೇವಾಲಯದ  ಬೆಳ್ಳಿಮಹೋತ್ಸವದ  ಸುರ್ಣ  ಕ್ಷಣ.     ಊರು   ಶತಮಾನಗಳಿಂದ  ಯಾವ  ರಾಜರನ್ನೂ  ಕಂಡಿಲ್ಲ.  ಮಂತ್ರಿಮಹೋದಯರು  ಬಿಡಿ, ಪುಡಿ  ರಾಜಕಾರಣಿಯೂ  ಇತ್ತ  ತಲೆಹಾಕಿರಲಿಲ್ಲ.   ದಟ್ಟ ಕಾಡು, ಭಯಂಕರ  ಮಳೆ,  ಕಾಡುಪ್ರಾಣಿಗಳ  ಜೊತೆಗೇ  ಸಂಧಾನಗೈದು  ಜೀವನಸಾಗಿಸುತ್ತಿದ್ದ  ಇಲ್ಲಿಯ  ಜನಪದಕ್ಕೆ,  ವರವಾಗಿ  ಅವತರಿಸಿದವ    ಊರಿನ  ್ವತೇಶ್ವರ.   ್ವತಗಳಲ್ಲೇ  ರಾಜನಾದ  ಇಂದ್ರರ್ವತದ  ತಳದಲ್ಲಿ   ವಿರಾಜಮಾನನಾಗಿರುವ  ್ವತೇಶ್ವರ  ದೇವರು  ಭಕ್ತರನ್ನು  ಆರ್ಷಿಸಲು ತೊಡಗಿದ್ದೇ   ಕಳೆದ  ಕೇವಲ  ಇಪ್ಪತ್ತೈದು  ್ಷಗಳ  ಹಿಂದೆ  ಎಂದರೆ  ಯಾರಿಗೂ  ಆಶ್ರ್ಯವಾಗಬಹುದು.  ಆದರೆ  ಇದು  ಸತ್ಯ.    ಕಲಿಯುಗದಲ್ಲೂ  ಇಂಥ  ಪವಾಡ  ಸದೃಷ  ದೇವರು  ಇದ್ದಾನೆಂದರೆ  ಅದು  ಜನತೆಯ  ಸೌಭಾಗ್ಯವೇ  ಸರಿ.

       ಹೆದ್ದಾರಿಯಿಂದ   ಮೂವತ್ತು  ಮೈಲಿ  ಗುಡ್ಡ  ಹತ್ತಿಳಿದು,  ಹೊಳೆದಾಟಿ,  ಮೈತುಂಬ  ಕಚ್ಚಿ ರಕ್ತಹೀರುವ  ಉಂಬಳಗಳ  ಕಾಟದಲ್ಲೂ   ಪಾದಯಾತ್ರಿಯಾಗಿ  ಆಗಮಿಸಿದ  ಸತ್ನಾರಾಣ್   ಭಟ್ಟರಿಗೆ   ಸ್ವಥಃ  ್ವತೇಶ್ವರನೇ  ಕನಸಿನಲ್ಲಿ  ಬಂದು,  ʻʻತಾನು  ಇಂಥ  ಘೋರಾರಣ್ಯದಲ್ಲಿ  ಪೂಜೆ  ಪುನಸ್ಕಾರವಿಲ್ಲದೇ  ಅನಾಥವಾಗಿದ್ದೇನೆ.  ನೀನು  ಬಾ ʼʼ ಎಂದು  ಆದೇಶ  ನೀಡಿದನಂತೆ.   ಅವರು  ಬಂದು  ಅರಣ್ಯದಲ್ಲಿ  ಶೋಧಿಸಿದಾಗ   ಅದೇ  ್ವತದಿಂದ  ಎಂದೋ  ಉರುಳಿ  ಬಂದ  ಬೃಹದಾಕಾರದ,   ಪಾಣೀಪೀಠ  ಸಹಿತದ  ಲಿಂಗರೂಪಿ ಶಿಲಾಶಿವ  ್ಶನವಿತ್ತನಂತೆ.   ಸುತ್ತಲಿನ  ಮರ  ಪೊದೆ  ಸವರಿದ  ಭಟ್ಟರು  ಅಂದೇ    ಉದ್ಭವ ರೂಪೀ  ಶಿವನಿಗೆ  ಪೂಜೆ  ಪ್ರಾರಂಭಿಸಿಯೇ  ಬಿಟ್ಟರು. 

     ಸುತ್ತಲಿನ  ಹಳ್ಳಿ  ಹಳ್ಳಿಗಳಲ್ಲಿ  ಸುತ್ತಾಡಿ  ಶಿವನ  ಸಂಗತಿಯನ್ನು  ್ಣಿಸಿದಾಗ,  ಹಳ್ಳಿಯೂ  ಕೈಗೂಡಿಸಿತು. ʻʻಹೌದಲ್ರಾ..   ಭಟ್ರು  ್ದೇಹೋದ್ರೆ  ನಮ್ಗೆ  ಗೊತ್ತೇ  ಆಗ್ತರ್ನಿಲ್ಲಾʼʼ  ಎಂದು ಹಳ್ಳಿಯ  ಗುಡಿಸಲುಗಳೆಲ್ಲಾ ವಟಗುಟ್ಟಿದವು.  ಹಿಡಿದ  ಕೆಲಸ ಬಿಟ್ಟು  ಊರಿನ  ಜನಗಳು  ಅಲ್ಲೇ  ಮರಕಡಿದು ಪುಟ್ಟ  ಗುಡಿ  ಕಟ್ಟಿಯೇ ಬಿಟ್ಟರು.     ್ಚಕರಿಗೆ  ವಸತಿ  ನರ್ಮಾಣಗೊಂಡಾಗ,  ಅದಕ್ಕೊಂದು  ರೂಪವೊದಗಿತು. 

      ಕೆಲವೇ  ದಿನಗಳಲ್ಲಿ  ಭಟ್ಟರಿಗೆ  ಶಿವನ  ಬುಡದಲ್ಲೇ  ಒಂದಿಷ್ಟು ತಾಡವೋಲೆಯ  ಪ್ರತಿಗಳು  ದೊರಕಿದಾಗ,  ಅದನ್ನು  ಓದಲು  ತೊಡಗಿದರು.   ಅದೊಂದು  ಅನಾದಿಕಾಲದ  ್ವತಪುರಾಣವೆಂಬ  ಗ್ರಂಥದ  ಹಾಳೆಗಳು. 

      ತ್ರೇತಾಯುಗದಲ್ಲಿ  ್ವತಗಳಿಗೆಲ್ಲ  ರೆಕ್ಕೆಗಳಿದ್ದವಂತೆ.  ಅವೆಲ್ಲ  ರೆಕ್ಕೆ  ಬೀಸಿಕೊಂಡು  ಎಲ್ಲೆಂದರಲ್ಲಿ  ಹಾರಾಡುತ್ತ,  ಜನವಸತಿಯಮೇಲೆಲ್ಲ  ಕುಳಿತು  ಬಿಡುತ್ತಿದ್ದವಂತೆ. ಜನಗಳೆಲ್ಲ  ಹುಳುಗಳಂತೇ  ಸತ್ತರಂತೆ. ಜನರೆಲ್ಲ  ಇಂದ್ರನಲ್ಲಿ  ಮೊರೆಯಿಡಲು  ತೊಡಗಿದರು.  ಇಂದ್ರ  ತನ್ನ  ವಜ್ರಾಯುಧದಿಂದ  ್ವತಗಳ  ರೆಕ್ಕೆಯನ್ನು  ತುಂಡರಿಸಿದನಂತೆ.   ಸಾಲು  ಸಾಲಾಗಿ  ಕುಳಿತಿದ್ದ  ್ವತಗಳೆಲ್ಲದರ  ರೆಕ್ಕೆ  ನಾಶವಾದುದರಿಂದ  ಅಲ್ಲಿಯೇ  ಉಳಿದುವಂತೆ.  ಅದೇ  ಈಗ  ನಾವು  ಕಾಣುವ  ಸಹ್ಯಾದ್ರಿರ್ವತಗಳು.

      ಹಾಗೆ  ರೆಕ್ಕೆ  ಕಳೆದುಕೊಂಡ  ್ವತಗಳಲ್ಲಿ  ಉನ್ನತವಾಗಿದ್ದ    ್ವತಕ್ಕೆ  ಇಂದ್ರರ್ವತವೆಂದೇ  ಹೆಸರಾಯಿತು.  ಕಡಿದ  ರೆಕ್ಕೆ  ಪಕ್ಕದ  ತಗ್ಗಿನಲ್ಲಿ  ಹೋಗಿ  ಬಿದ್ದಿತು.   ಅದೇ   ಒಂದು   ನದಿಯರೂಪ  ತಳೆಯಿತು. ನದಿಯ  ಬಂಡೆಗಳಮೇಲೆ  ಕತ್ತರಿಸಿದ  ರಕ್ಕೆಗಳು  ಹೋಗಿ ಬಿದ್ದವು.  ಆಗ  ಶಿವ  ಪ್ರತ್ಯಕ್ಷನಾಗಿ  ಅಲ್ಲಿದ್ದ  ಅತಿಯೆತ್ತರದ  ್ವತಕ್ಕೆ  ಇಂದ್ರ  ್ವತವೆಂದೂ,  ಪಕ್ಕದಲ್ಲಿ  ಹರಿಯುವ  ನದಿಗೆ  ಇಂದ್ರ ನದಿಯೆಂದೂ  ಹೆಸರಿಸಿದನಂತೆ.              

 

       ಸತ್ನಾರಾಣ್    ಭಟ್ರು  ರೋಮಾಂಚಿತರಾದರು.  ಶುದ್ದ  ಸುಂದರ  ಕನ್ನಡಲಿಪಿಯಲ್ಲಿ   ್ವತಪುರಾಣವನ್ನು  ಬರೆಯತೊಡಗಿದರು.  ಆಗಾಗ  ಬರುವ  ಭಕ್ತರಿಗೆ  ಮನಮುಟ್ಟುವಂತೇ  ್ಣಿಸತೊಡಗಿದರು.  ಕಾಡು ಅಲೆಯಲು  ಬಂದ  ಪೇಟೆ  ಜನಗಳಿಗೆ    ವಿವರ  ತಿಳಿದದ್ದೇ  ತಡ,  ಕೊಡಿ  ನಾವು  ಇದನ್ನು  ಪುಸ್ತಕಮಾಡುತ್ತೇವೆ  ಎಂದಾಗ,  ಭಟ್ಟರು  ಒಪ್ಪಿಗೆಯಿತ್ತರು.  ಪುರಾಣ  ಪುಸ್ತಕ  ್ಣಮಯವಾಗಿ  ಭಟ್ಟರ  ಕೈತಲುಪಿ   ಸುತ್ತಲೆಲ್ಲ  ಹರಡಿ  ಪರಿಮಳ  ಸೂಸಿತು.  ಜನಕ್ಕೂ  ತಮ್ಮೂರು  ಪುರಾಣಪ್ರಸಿದ್ಧವಾದುದು  ಎಂದು  ತಿಳಿದು  ಹೆಮ್ಮೆಯಿಂದ  ಬೀಗಿದರು.  ಸುಪ್ರಸಿದ್ಧ  ಪತ್ರಿಕೆಯೊಂದರ  ಸಂಪಾದಕರ  ಗಮನಕ್ಕೂ  ಪುರಾಣ  ಕಣ್ಣಿಗೆ  ಬಿದ್ದಾಗ  ಅವರೂ  ಸ್ಥಳ ಸಂಶೋಧನೆ ಗೈದು,  ಒಂದಕ್ಷರ ಬಿಡದೇ  ಪುರಾಣವನ್ನು  ಪ್ರಕಟಿಸಿದ್ದಲ್ಲದೇ,  ಸ್ವಥಃ  ಭಕ್ತರೂ  ಆದರು.

     ್ವತೇಶ್ವರ  ಹರಕೆಗೂ  ಪ್ರಸಿದ್ಧನಾದ.  ಸ್ವಥಃ  ಮುಖ್ಯಮಂತ್ರಿ  ಶಂಭುಲಿಂಗಯ್ಯನವರಿಗೆ  ನಾಲ್ಕು  ಹೆಣ್ಣುಮಕ್ಕಳಾದರೂ  ಗಂಡು  ಸಂತತಿಯಿಲ್ಲದೇ  ಜಗತ್ತಿನೆಲ್ಲ  ದೇವರಿಗೆ  ಹರಕೆ  ಹೊತ್ತಿದ್ದರು.ಇಡೀ  ರಾಜ್ಯವೇ  ನಮಗೊಬ್ಬ  ಉತ್ತರಾಧಿಕಾರಿಯಿಲ್ಲವಲ್ಲಾ  ಎಂದು  ವ್ಯಥೆಯಲ್ಲಿ  ಕೃಷರಾಗಿದ್ದರು.  ಮುಖ್ಯಮಂತ್ರಿಗಳ  ಆಪ್ತರು  ್ವತೇಶ್ವರನ  ಹರಕೆ  ಮಹಿಮೆಯನ್ನು  ಅರುಹಿ, ಪುರಾಣ  ಪುಸ್ತಿಕೆಯನ್ನೂ  ಪ್ರಸಾದರೂಪದಲ್ಲಿ  ನೀಡಿದ್ದು  ಮುಖ್ಯ  ಮಂತ್ರಿಗಳ  ಕಣ್ಣು  ತೆರೆಸಿತು.  ಮನದುಂಬಿ  ಹರಕೆ  ಹೊತ್ತು  ಹತ್ತು  ತಿಂಗಳಿಗೆ  ಸರಿಯಾಗಿ  ್ವ ಲಕ್ಷಣ  ಸಂಪನ್ನ  ವರಪುತ್ರ  ಜನಿಸಿದ.  ಮುಂದೆ  ರಾಜ್ಯಕ್ಕೆ  ಬೆಳಕಾಗುವ  ಮಹಾ ನಾಯಕನಾಗುತ್ತಾನೆಂದು  ಜ್ಯೋತಿಷಿಗಳು  ಭವಿಷ್ಯ  ನುಡಿದ  ಸಂಗತಿ  ಕೇಳಿ  ಇಡೀ  ರಾಜ್ಯದ  ಜನತೆ  ರೋಮಾಂಚನಗೊಂಡರು.

   ದೇವರಲ್ಲಿ  ಹರಕೆಯಿಂದ,  ನಷ್ಟದಿಂದ  ಬಳಲುವವರು  ಲಾಭಹೊಂದತೊಡಗಿದರು.  ಎಂತೆಂಥ  ರೋಗಗಳೂ  ಶಮನಗೊಂಡವು.  ಸ್ಥಳೀಯ  ಚುನಾವಣಾ  ಅಭ್ರ್ಥಿಗಳೂ  ಗೆಲ್ಲತೊಡಗಿದರು.  ಕ್ರಮೇಣ   ಇಲ್ಲಿ  ಭಕ್ತಿಯಿಂದ  ನಡೆದುಕೊಂಡ  ಅಭ್ರ್ಥಿಗಳೂ  ಶಾಸಕರಾಗಿ  ಮಿಂಚತೊಡಗಿದಾಗ,  ದೇವರೆಡೆಗೆ  ಭಕ್ತಸಮುದಾಯದ  ದಂಡಿಗೆ  ದಂಡೇ  ಬರತೊಡಗಿತು.

     ಗೆದ್ದ  ಅಭ್ರ್ಥಿಗಳ್ಯಾರೂ  ಅಪ್ರಾಮಾಣಿಕರಲ್ಲ.  ಅವರ  ಪ್ರಜಾಭಕ್ತಿಗೆ  ಮೆಚ್ಚಿ  ಸುತ್ತಲಿರುವ  ಸಾವಿರಾರು  ಮರಗಳು  ಸ್ವ ಇಚ್ಛೆಯಿಂದ  ಸ್ಥಳದಾನ  ಮಾಡಿದವು. ದೇವಾಲಯಕ್ಕೆ  ಬರಲು  ರಸ್ತೆಯಾಯಿತು.  ದೇವಾಲಯಕ್ಕೆ  ಸ್ಥಳದ  ಕೊರತೆಯಾದಾಗ,  ನೆಲ ಸಮಗೊಳಿಸಿ   ಪುಟ್ಟ  ಪುಟ್ಟ ಕಟ್ಟಡಗಳ  ವ್ಯವಸ್ಥೆಯಾಯಿತು.

    ಭಕ್ತ  ಅರಣ್ಯಾಧಿಕಾರಿಗಳ  ಸಹಕಾರದಲ್ಲಿ,  ಸುತ್ತಲ  ಸ್ಥಳಗಳಲ್ಲಿ,  ಪುಷ್ಟವನ, ಔಷಧವನ,ಗಳು  ನರ್ಮಾಣವಾದವು.  ಆಗಮಿಸುವ  ಭಕ್ತರ ಸೇವೆಗಾಗಿ  ಸೌಲಭ್ಯಗಳ  ಕೊರತೆಯಾದಾಗ   ಮತ್ತೆ  ಪ್ರತಿನಿಧಿಗಳನ್ನೇ   ಅವಲಂಭಿಸಬೇಕಾಯಿತು.  ವಸತಿ  ಸಂಕರ್ಣದ  ವ್ಯವಸ್ಥೆ  ತನ್ನಂತಾನೇ   ಅಪರಿಚಿತ  ಉದ್ಯಮಿಯೊಬ್ಬನಿಂದ  ನರ್ಮಾಣವಾದಾಗ,  ಆಹಾ  ನಮ್ಮ  ದೇವರು  ಅದೆಷ್ಟು  ಶಕ್ತಿವಂತ  ಎಂದು  ಜನ  ಮಾತನಾಡಿಕೊಂಡರು.

    ಸತ್ನಾರಾಣ್  ಭಟ್ರಿಗೆ  ಈಗ  ಎಲ್ಲಿಲ್ಲದ  ಒತ್ತಡ.  ಪೂಜಾಕೈಂರ್ಯಕ್ಕೆ   ದೇವಾಲಯದ  ಉಸ್ತುವಾರಿಗೆ  ಎಂದು  ಅದೆಷ್ಟು  ಜನರನ್ನು  ನಿಯಮಿಸಿದರೂ  ಕಡಿಮೆಯೇ.  ದಿನದಿಂದ  ದಿನಕ್ಕೆ  ಭಕ್ತರ  ದಂಡು.  ್ವತೇಶ್ವರನ  ಆಶರ್ವಾದದಿಂದಲೇ  ಆಯ್ಕೆಯಾದ  ಶಾಸಕರು  ಮಂತ್ರಿಗಳನ್ನು  ಕಂಡು   ದೇವಾಲಯದ  ಸಮಸ್ಯೆ  ನಿವೇದಿಸಿಕೊಂಡರು.  ದೂರದಿಂದಲೇ  ದೇವಾಲಯ  ಕಾಣುವಂತಾಗಬೇಕೆಂದರೆ  ಎದುರಿನ  ತಗ್ಗು ದಿನ್ನೆಗಳು  ಸಮತಟ್ಟಾಗಬೇಕು   ಅದು  ವ್ರ್ಥವಾಗಲಿಲ್ಲ.  ಅಚ್ಚುಕಟ್ಟಾದ  ರಸ್ತೆ   ಬೇಕಷ್ಟು  ಕಟ್ಟಡಗಳು  ತಲೆಯೆತ್ತಿದವು. 

     ಸ್ಥಳೀಯ  ಜನರೂ  ಜಾಗ್ರತರಾದರು.  ಬರುವ  ಭಕ್ತರಿಗಾಗಿ  ಇಂದ್ರನದಿಯಂಚಿನಲ್ಲಿ  ನೂರಾರು  ಕುಟೀರಗಳು  ನರ್ಮಾಣಗೊಂಡವು.  ಸುತ್ತಮುತ್ತಲೆಲ್ಲ  ರಾಕ್ಷಸ ಯಂತ್ರಗಳ  ಪ್ರವೇಶದ  ್ಕಶ  ಶಬ್ದ  ಊರು  ಅರಣ್ಯದ  ತುಂಬೆಲ್ಲ  ಮೊಳಗತೊಡಗಿತು,    ಕಲ್ಲು  ಅರೆಗಳಿಗೆ  ಸ್ಪೋಟಕ  ಸಿಡಿಸುವ  ಭಾರೀ  ಶಬ್ಧ ವೋ  ಶಬ್ಧ. ಪ್ರಾಣಿ  ಪಕ್ಷಿಗಳು  ಸಮೂಹಕ್ಕೆ  ಸಮೂಹವೇ  ಇಲ್ಲಿ  ಇನ್ನು  ನಮಗೇನು  ಕೆಲಸ  ಎಂದು  ಕೈಲಾಸ ಕ್ಕೆ ಬಿಜಯಂಗೈದವು.

      ಇದೇ  ಸಂರ್ಭದಲ್ಲೇ  ಶಿವಕುಮಾರ್ ಸಾಳ್ವೆ  ಎಂಬ  ವಿಚಿತ್ರ  ವ್ಯಕ್ತಿ  ಪ್ರವೇಶವಾದ.  ಅವರೊಂದಿಗೆ  ನಾಲ್ಕಾರು  ಸಂಗಾತಿಗಳು  ಜೊತೆಯಲ್ಲಿದ್ದರು.ʻʻ ಅದೆಷ್ಟು  ಸುಂದರ  ಅರಣ್ಯಪ್ರದೇಶವನ್ನು  ನಾಶಮಾಡುತ್ತಿದ್ದೀರಿ.  ಭೂಮಿಯನ್ನು  ಯದ್ವಾ ತದ್ವಾ ಅಗೆದು  ಧ್ವಂಸ  ಗೊಳಿಸುತ್ತಿದ್ದೀರಿ.  ದೇವರ  ಹೆಸರಿನಲ್ಲಿ  ಅರಣ್ಯ  ಸವರಿ  ತೋಟ ಪಟ್ಟಿ  ಮಾಡುತ್ತಿದ್ದೀರಿ.  ನಿಮ್ಮ  ಅಭಿವೃದ್ಧಿಯಲ್ಲ  ಇದು.  ವಿನಾಶ.  ನಿಮ್ಮ  ಸಮಾಧಿ  ನೀವೇ  ತೋಡುತ್ತಿದ್ದೀರಿʼʼ ಎಂದು  ಉಚ್ಛ ಕಂಠದಲ್ಲಿ  ಸಾಳ್ವೆ  ಹೇಳತೊಡಗಿದಾಗ,  ಅಲ್ಲಿ  ಸೇರಿದ  ಭಕ್ತವೃಂದ  ಬೆಚ್ಚಿತು. ಅಲ್ಲೇ  ಕೆಲವರು  ನಮ್ಮ    ಕುಗ್ರಾಮಗಳು  ಉದ್ಧಾರವಾಗೋದನ್ನ  ನೋಡೋಕೆ  ನಿಮಗಾಗುತ್ತಿಲ್ಲ.  ನಿಮ್ಮ  ಉಪದೇಶ  ನಮಗೆ  ಬೇಕಿಲ್ಲ.  ನಮ್ಮೂರು  ಕರೆಂಟ್  ಕಂಡ್ರೆ,  ರಸ್ತೆ  ಕಂಡ್ರೆ, ಅದಕ್ಕೆ    ್ವತೇಶ್ವರ  ಸ್ವಾಮಿಯೇ  ಕಾರಣ.   ಯಾವ್ದೋ  ಊರಿಂದ  ಬಂದ  ಕಿತಾಪತಿಗಳು  ನಮಗೆ ಬುದ್ಧಿಹೇಳ್ತಾರೆʼʼ  ಎಂದು  ಅರಚಿದಾಗ, ಸಾಳ್ವೆ  ಮೌನಿಯಾದ.   ಸತ್ನಾರಾಣ್  ಭಟ್ರು  ಸಣ್ಣದಾಗಿ  ನಕ್ಕರು.

      ಸಾಳ್ವೆ,  ಶಿರಪುರದ  ಶರವೇಗದ  ಬೆಳವಣಿಗೆಯನ್ನ  ಅದರಿಂದಾಗುವ  ಅಪಾಯವನ್ನ  ತಲಸ್ರ್ಶೀಯಾಗಿ  ಪತ್ರಿಕೆಗಳಲ್ಲಿ  ಬರೆದ.  ಅದಕ್ಕೆ  ಕೆಲವು  ರಾಜಕಾರಣಿಗಳು,  ಉಗ್ರವಾಗಿ  ಪ್ರತಿಭಟಿಸಲು  ಪ್ರಾರಂಭಿಸಿದರು.  ʻʻಇರ್ಯಾರೋ  ಪರಿಸರ ವ್ಯಾಧಿಗಳು.  ನಮ್ಮನ್ನು  ಇನ್ನೂ  ಹಿಂದೆಯೇ  ಕೊಂಡೊಯ್ಯುವ  ಪ್ರಯತ್ನದಲ್ಲಿದ್ದಾರೆʼʼ ಎಂದು  ಟೀಕಿಸ ತೊಡಗಿದರು.

      ಆದಿನ    ದೊಡ್ಡ  ಉದ್ಯಮಿ  ದೇವಾಲಯಕ್ಕೆ  ಆಗಮಿಸಿದ. ್ಚಕರು  ವಿಶೇಷ  ಪೂಜೆ  ಮಾಡಿ, ಪುರಾಣವನ್ನೂ  ್ಣಿಸುತ್ತ,  ್ವತೇಶ್ವರನ  ಪೂಜೆಗೆ  ನೀರಿನ  ಅವಶ್ಯಕತೆಯ  ಬಗೆಗೆ  ಬೇಡಿಕೆಯಿತ್ತರು. ಉದ್ಯಮಿಯೂ  ಕೊಡುಗೈ ದಾನಿ.  ತಜ್ಞರ ದಂಡೇ  ಆಗಮನವಾಯಿತು.  ಐದುನೂರು  ಅಡಿಎತ್ತರದ  ಇಂದ್ರ  ್ವತದ  ನೆತ್ತಿಯಮೇಲೆ  ಸರೋವರವೊಂದು  ತಿಂಗಳಲ್ಲಿಯೇ  ನರ್ಮಾ:ಣಗೊಂಡು, ್ವತೇಶ್ವರನ  ತಲೆಯಮೇಲೆ  ಸದಾ  ಗಂಗೆಯ ಅಭಿಷೇಕ  ವಾಗುತ್ತಿರುವ  ಅದ್ಭುತವಾದ  ದೃಶ್ಯ  ಸೃಷ್ಟಿಯಾಯಿತು.  ್ವತದ  ನೆತ್ತಿಯಮೇಲೆ  ಇಂದ್ರನದಿಯ  ನೀರು  ತಲುಪಿ  ಸುಂದರ  ಪುಷ್ಕರಣಿ  ನರ್ಮಾಣಗೊಂಡಮೇಲೆ,  ಗಂಗಾಂಬಿಕೆಯ  ದೇವಾಲಯವಿಲ್ಲದಿದ್ದರೆ  ದೋಷವಾದೀತಲ್ಲವೇ... ಮತ್ತೊಬ್ಬ  ಉದ್ಯಮಿಯೋ   ಉದ್ಯಮಿಯ  ಗೆಳೆಯ  ಮಂತ್ರಿಯೋ  ಗಂಗಾಂಬಿಕೆಯ  ನಯನಮನೋಹರ  ಮರ್ತಿಯನ್ನು  ್ವತಕ್ಕೆ  ಕರೆತಂದೇ  ಬಿಟ್ಟ.  ್ವತಕ್ಕೆ  ಸರ ತೊಡಿಸಿದಂತೇ  ಅಚ್ಚುಕಟ್ಟಾದ  ಸುರುಳಿ  ಸುರುಳಿ  ರಸ್ತೆ  ನರ್ಮಾಣಗೊಂಡಾಗ  ಸ್ರ್ಗವೇ  ಇಳಿದು  ಬಂದ  ಅನುಭವ  ಭಕ್ತರಿಗಾಯಿತು.  ್ವತದ  ತುಂಬೆಲ್ಲ  ವಸತಿ  ಸಂಕರ್ಣ,  ಸರಕಾರೀ  ಅರಣ್ಯಾಭಿವೃದ್ದಿ ಕೇಂದ್ರ,  ಉಪಾಹಾರದ  ಕಟ್ಟಡಗಳು, ಮಹತ್ಮಾನಂದ  ಸ್ವಾಮಿಗಳ  ಅಧ್ಯಾತ್ಮಕೇಂದ್ರ,  ಎಂದು  ಇಂದ್ರ ್ವತ  ಇಂದ್ರ  ನಗರಿಯಂತೇ  ಜಗದ್ವಿಖ್ಯಾತವಾಯಿತು. 

       ದೇವಾಲಯದ  ಪಕ್ಕದಲ್ಲೇ  ನರ್ಣಭಟ್ಟರ  ಬಂಗಲೆಯಂತ  ವೈಭವಪರ್ಣ  ಅಧ್ಯಾತ್ಮ ಕುಟೀರ  ತಲೆಯೆತ್ತಿತು.  ಅಲ್ಲಿಯೇ  ಸುಭದ್ರವಾದ  ನೆಲಮಾಳಿಗೆ ಹೊಂದಿದ  ಕೋಣೆಯೊಂದು  ದೇವರ  ಬೆಲೆಬಾಳುವ  ಒಡವೆಗಳು,  ವಜ್ರವೈಢರ್ಯಗಳ ರಕ್ಷಣೆಗಾಗಿ  ನರ್ಮಾಣಗೊಂಡಿತು.

       ್ವತೇಶ್ವರ  ಮಹಾತ್ಮೆ  ಎಂಬ  ಯಕ್ಷಗಾನವನ್ನೂ  ಅದ್ಯಾವುದೋ  ಕವಿಗಳು  ರಚಿಸಿ  ಪ್ರಯೋಗಗೊಂಡಾಗ,  ಸಿನಿಮಾ  ಕ್ಷೇತ್ರವೂ  ಜಾಗ್ರತಗೊಂಡು  ಚಿತ್ರನರ್ಮಾಣಕ್ಕೂ  ತೊಡಗಿಕೊಂಡಿತು. ಭೂಮಿಯಿಂದ  ಧಿಗ್ಗನೆದ್ದು  ಆಕಾಶವನ್ನಪ್ಪಿಕೊಂಡಿರುವ, ರುದ್ರ ರಮ್ಯರ್ವತ ಪರಿಸರದ  ದೃಶ್ಯಗಳು.  ಸುಪ್ರಸಿದ್ಧ  ನಟರ  ನಟನೆಯಲ್ಲಿ  ಚಿತ್ರ  ಬಿಡುಗಡೆಯಾದಾಗ,  ರಾಜ್ಯಪ್ರಶಸ್ತಿಯನ್ನೂ  ಪಡೆದುಕೊಂಡಿತು.  ್ವತೇಶ್ವರನ  ಮಹಿಮೆಯಿಂದ  ಚಿತ್ರನರ್ಮಾಪಕ  ಹಿಂದೆ  ಆದ ನಷ್ಟವನ್ನೆಲ್ಲ  ತುಂಬಿಕೊಂಡ.  ದೇವರ  ಶಾಶ್ವತ  ಭಕ್ತನಾದ.

  ಪುತ್ರ  ಜನಿಸಿದರೆ  ದೇವರಿಗೆ  ಬಂಗಾರದ  ಕಿರೀಟ,  ಬೆಳ್ಳಿಯ  ಮಹಾದ್ವಾರ ನೀಡುತ್ತೇನೆಂದು  ಮುಖ್ಯಮಂತ್ರಿ  ಶಂಭುಲಿಂಗಯ್ಯ  ಹರಕೆ  ಹೊತ್ತಿದ್ದರಂತೆ.  ದೇವರು  ಅದೆಷ್ಟು  ಸಂಪ್ರೀತಗೊಂಡನೆಂದರೆ,  ಅತ್ಯಧಿಕ  ಮತದಿಂದ  ಆಯ್ಕೆಯಾದದ್ದೊಂದಲ್ಲ, ಪವಾಡ ಸದೃಷವಾಗಿ  ಮತ್ತೊಮ್ಮೆ ರಾಜ್ಯದ  ಮುಖ್ಯಮಂತ್ರಿಯೂ  ಆಗಿದ್ದರಿಂದ,  ಅನಿವರ್ಯವಾಗಿ  ್ವತೇಶ್ವರನ  ಸನ್ನಿಧಾನಕ್ಕೆ  ಬರಲೇ ಬೇಕಾಯಿತು. 

     ಪರಮ ಧರ್ಮಿಕ,  ನೀತಿನಿಷ್ಠ   ದೀನಜನಬಂಧು  ಅಭಿವೃದ್ಧಿಯ  ಹರಿಕಾರ,  ಎಂಬ  ನೂರಾರು  ಬಿರುದು  ಬಾವಲಿಗಳು  ನನಗಲ್ಲ,  ಅವೆಲ್ಲ  ್ವತೇಶ್ವರನಿಗೆ  ಸಲ್ಲತಕ್ಕದ್ದು.  ಎಂಬ  ಪ್ರಾಮಾಣಿಕ  ಅಭಿಪ್ರಾಯ  ಮಾನ್ಯ  ಮುಖ್ಯಮಂತ್ರಿಗಳದ್ದು. 

    ದಂಪತಿ ಸಮೇತ, ಆಗಮಿಸುವ  ಮುಖ್ಯ  ಮಂತ್ರಿಗಳ  ಸ್ವಾಗತಕ್ಕೆ  ದೇವಾಲಯ  ಅದ್ದೂರಿಯಾಗಿ  ಸಜ್ಜುಗೊಂಡಿತ್ತು. ರಾಷ್ಟ್ರೀಯ  ಅಂತಾರಾಷ್ಟ್ರೀಯ  ಸುದ್ದಿಮಾಧ್ಯಮಗಳು  ಮುಖ್ಯಮಂತ್ರಿಗಳ  ಬಾಲದಂತೇ   ಸಾಲುಸಾಲಾಗಿ  ಬರತೊಡಗಿದವು.

      ಮುಖ್ಯಮಂತ್ರಿಗಳ  ಸರಳ  ನಡೆನುಡಿ,  ಭಕ್ತಿ, ಕಂಡ  ಜನ  ಬೆರಗಾದರು.  ವೈಷಾಖದ  ಬಿಸಿಲಲ್ಲಿ  ತಂಗಾಳಿ  ಬೀಸಿದಂತಾಯಿತು.  ಇಡೀ  ಶಿರಪುರ  ಧನ್ಯವಾಯಿತು.

   

       ಜ್ಯೇಷ್ಠಮಾಸ  ತುಂತುರು ವಾಗಿ  ಪ್ರವೇಶವಾಯಿತು.  ್ವತದಂತ  ಮೋಡಗಳ  ಸಾಲು ಸಾಲು  ಇಂದ್ರರ್ವತದ  ಪ್ರದಕ್ಷಿಣೆಗೆ  ಪ್ರಾರಂಭಿಸಿದವು.  ಎಷ್ಟೆಂದರೂ  ಮಲೆನಾಡಿನ  ಮಳೆ. ಗುಡುಗು  ಸಿಡಿಲಿನರ್ಭಟ.  ಪ್ರಕೃತಿಯೂ  ್ವತಲಿಂಗದ  ಪೂಜೆಗೆ  ತೊಡುಗುವಂತೇ   ತನ್ನ  ಭಕ್ತಿಯನ್ನು  ತರ್ಪಡಿಸತೊಡಗಿತು.ʻʻ ಗುಡ್ಡ  ಗುಡ್ಡ  ಸ್ಥಾವರ  ಲಿಂಗಾ  ಅವಕೇ  ಅಭ್ಯಂಗಾʼʼ  ಎಂದು  ವಿಲಂಬಿತದಲ್ಲಿ  ಪ್ರಾರಂಭವಾದ   ಮಳೆ,  ಆಷಾಢಕ್ಕೆ  ಮಧ್ಯಲಯ  ಬಿಟ್ಟು  ನೇರ  ತಾರಕಕ್ಕೇರತೊಡಗಿತು.

ಯಾಕೋ    ್ಷದ  ಆಷಾಢ  ಮೊದಲಿನ  ಹಾಗಿಲ್ಲ  ಎಂದು  ಮೊದಲು  ಸತ್ಯನರ್ಣಭಟ್ರೀಗೆ  ಅನ್ನಿಸತೊಡಗಿತು.  ಒಂದೊಂದು  ಮಳೆ  ಸುರಿಯತೊಡಗಿತು  ಎಂದರೆ  ಒಮ್ಮೆಲೇ  ್ವತವೇ  ನಗ್ನವಾಗುತ್ತದೆಯೇನೋ  ಅನ್ನಿಸತೊಡಗಿತ್ತು.  ಮುಂಜಾನೆ  ಮಳೆ  ಪ್ರಾರಂಭಗೊಂಡರೆ  ಹಗಲು  ರಾತ್ರಿ  ಉಧೋ  ಎಂದು  ಆಕಾಶದಿಂದಲೇ  ಜಲಪಾತವಾಗತೊಡಗಿತು. 

     ನರ್ಣಭಟ್ಟರ  ಎದೆಯಲ್ಲೂ  ಚಂಡಮಾರುತವೇಳ  ತೊಡಗಿತ್ತು.  ಮನೆಯಲ್ಲಿದ್ದ  ಹೆಂಡತಿಯೂ  ವಿದೇಶದಲ್ಲಿರುವ  ಮಕ್ಕಳ  ಮನೆಗೆ  ಹೋಗಿಯಾಗಿತ್ತು.  ದೂರವಾಣಿ ಯೂ  ಮಳೆಯಬ್ಬರದಲ್ಲಿ  ಬೆದರಿ  ಮೌನವಾಗಿತ್ತು. ಸುತ್ತಲೆಲ್ಲ  ತಾವೇ  ಸೃಷ್ಟಿಸಿದ   ಅಡಿಕೆ  ಕಾಪಿ  ತೆಂಗು  ಯಾಲಕ್ಕಿ  ತೋಟಗಳಿಗೆ  ಬರುವ  ಕೂಲಿಗಳೂ   ಮಳೆಗೆ  ಬೆದರಿರಬೇಕು.  ಯಾರೂ  ತಮ್ಮ  ಗುಡಿಸಲುಗಳಿಂದ   ್ವತವೇರಿ  ಬಂದಿರಲಿಲ್ಲ.

ಶಿರಪುರಕ್ಕೆ  ಬರುವ  ಘಟ್ಟದ  ಸುಭದ್ರ  ರಸ್ತೆಗಳೂ   ಇಂಥ  ಮಮ್ಮೇರಿ  ಮಳೆಗೆ  ಬಿರುಕು ಬಿಟ್ಟು  ಆಕಾಶ  ನೋಡತೊಡಗಿದಂತೇ,   ಮತ್ತೆ  ಸಾಗಾಟಕ್ಕೆ  ಕಾಲ್ನಡುಗೆಯೇ  ಗತಿಯೇನೋ  ಎನ್ನಿಸಿ,  ಭಟ್ಟರು  ಬೆಚ್ಚಿದರು.

      ನರ್ಣಭಟ್ಟರ  ಜೀವನದಲ್ಲೇ  ಅಂಥ  ಭೀಕರ  ಮಳೆಗಾಲವನ್ನು  ಕಂಡಿರಲಿಲ್ಲ.  ನೋಡನೋಡುತ್ತಲೇ  ಮನೆ  ದೇವಾಲಯದೆದುರಿನ   ಸಪಾಟು  ಅಂಗಳ  ಎತ್ತರದಿಂದ  ಪ್ರವಾಹದಂತೇ  ಹರಿದುಬರುತ್ತಿರುವ  ಮಳೆನೀರಲ್ಲಿ  ಕೊಚ್ಚಿಹೋಗುತ್ತಿರುವುದನ್ನು  ಕಾಣತೊಡಗಿದರು.  ಯಂತ್ರದಿಂದ  ಗುಡ್ಡಕಡಿದು  ತುಂಬಿದ  ಮಣ್ಣು  ನೀರಿನೊಂದಿಗೆ ಸೇರಿ  ಮಣ್ಣಿನದೇ  ನದಿಯಾಗಿ  ತಗ್ಗಿಗೆ  ಧುಮುಕತೊಡಗಿದಾಗ  ದೇವಾಲಯದ  ಮೆಟ್ಟಿಲವರೆಗೂ  ಬಹುದೊಡ್ಡ  ಕಂದರವೇ  ನರ್ಮಾಣಗೊಳ್ಳತೊಡಗಿತು.   ....................................................................................................................................

         

            ರಾತ್ರಿಯಿಡೀ  ಭಟ್ಟರಿಗೆ  ಭೀಕರ  ಮಳೆಯದ್ದೇ  ಸದ್ದಿನಲ್ಲಿ  ನಿದ್ದೆ  ಸುಳಿಯಲೇ ಇಲ್ಲ.  ಚುಮು ಚುಮು  ಬೆಳಗಾಗುತ್ತಿದ್ದಂತೇ  ಮಳೆಯ  ಸದ್ದನ್ನೂ  ಮೀರಿದ  ಧ್ವನಿಯೊಂದು  ಮನೆಯ  ಹೊರಾವರಣದಿಂದ  ಕೇಳಿಬಂದಾಗ  ಭಟ್ಟರು  ಎದ್ದು ಹೊರಗೋಡಿ  ಬಂದರು. ʻʻ ಭಟ್ರೇ  ಭಟ್ರೇ  ಗುಡ್ಡದ್ ತಲೇ  ಗುಡಿಂದ  ಪೂಜಾರಪ್ನೋರು  ಕೆಳಗಿಳ್ದು  ಓಡೋಗಾರೆ.  ಗಂಗಮ್ಮನ  ಕೆರೆ  ತುಂಬಿ  ಬರ್ಕ ಬಿಡ್ತಾ  ಐತೆ  ಮಾರಾಯ್ರೆ.  ಅದು  ಒಡ್ದೋತು  ಅಂದ್ರೆ  ತಳ್ದಾಗಿನ್  ದೇವಾಲ್ಯಕ್ಕೂ  ನೀರ್  ನುಗ್ಯಾತು.   ಬನ್ನಿ  ಬನ್ನಿ  ಭಟ್ರೇ ದೂರ  ಹೋಗಾಣ ʼʼ  ಎಂದು  ಒಂದೇ  ಉಸುರಿನಲ್ಲಿ  ಅರಚಿದ.  ದೇವಸ್ಥಾನದೆಡೆಗೆ  ಕಣ್ಣು  ಹಾಯಿಸಿದರೆ  ಯಾರ  ಸುಳಿವೂ  ಕಾಣಲಿಲ್ಲ.  ಭಟ್ಟರು  ಒಮ್ಮೆಲೇ  ದಿಗ್ಭ್ರಮೆಯಿಂದ  ಬೆವರಿದರು.  ದೇವಾಲಯ  ದೆದುರು,  ಮಣ್ಣು  ಸುರುವಿ  ನರ್ಮಿಸಿದ  ವಿಶಾಲ  ಅಂಗಳದ  ಸುಳಿವೂ  ಸಿಗದಷ್ಟು  ಕೊಚ್ಚಿಕೊಂಡು  ಹೋಗಿತ್ತು.  ಅದೆಷ್ಟೋ  ್ಷಗಳ  ಹಿಂದಿನ  ಕಂದಕ  ಮತ್ತೆ  ನಗ್ನವಾಗಿ  ಬಿದ್ದುಕೊಂಡಿತ್ತು. 

     ಭಟ್ರು  ಒಮ್ಮೆಲೇ  ಎದ್ದು  ವಿದೇಶದಲ್ಲಿರೋ  ಮೊಮ್ಮಕ್ಕಳ  ನೆನಪಾಗಿ  ಚಿತ್ರಕರೆ ಮಾಡಲು  ಹವಣಿಸಿದರು.  ಪೋನ್  ಮೌನವಾಗಿತ್ತು. 

     ಅಷ್ಟರಲ್ಲಾಗಲೇ  ಅದೆಲ್ಲಿಂದಲೋ  ಒಂದಿಷ್ಟು  ಜನರೊಂದಿಗೆ  ಪೋಲೀಸರೂ  ಬಂದ  ಸನ್ನಿವೇಶವನ್ನು  ಭಟ್ಟರು  ಕಾಣತೊಡಗಿದರು.  ಸಾಹಸದಿಂದ  ಮನೆಯೆದುರಿನ  ಕಂದಕವನ್ನಿಳಿದು  ಕೆಸರು  ರಾಡಿಯಲ್ಲೇ  ಮನೆಯನ್ನು ಪೋಲೀಸರು ಪ್ರವೇಶಿಸಿ,ʻʻ ಭಟ್ರೇ ಈಗಂದೀಗ  ಇಲ್ಲಿಂದ  ಹೊರಡಿ.  ಹಿಂದಿನ  ಗುಡ್ಡವೇ  ಮಳೆಯ  ರಭಸದಲ್ಲಿ ಇಬ್ಭಾಗವಾಗುತ್ತಿದೆ.  ರಾತ್ರಿಯೇ  ಇಲ್ಲಿರುವ  ಜನರೆಲ್ಲಾ    ಸ್ಥಳ  ತೊರೆದಿದ್ದಾರೆ. ಈಗಂದೀಗ  ಜಾಗ ಖಾಲಿಮಾಡಿ.ʼʼ  ಎಂದು  ಆತುರಪಡಿಸಿದರು. 

    ʻʻ ್ವತೇಶ್ವರ  ನನ್ನನ್ನೇನೂ  ಮಾಡಲಾರ,  ನಾನು  ಬರಲಾರೆʼʼ  ಎಂದು  ಖಡಾಖಂಡಿತವಾಗಿ  ನುಡಿಯುತ್ತ  ಸತ್ನಾರಾಣ್  ಭಟ್ಟರು  ಅಲ್ಲಿಂದಲೇ  ್ವತೇಶ್ವರ  ಸ್ವಾಮಿ  ದೇವಾಲಯದ  ಗೋಪುರ ತುದಿಯ  ಸುರ್ಣ ಕಲಶವನ್ನೊಮ್ಮೆ  ಆಳವಾಗಿ  ದೃಷ್ಟಿಸಿದರು.  ಅದು  ಅಂಥ  ಮಳೆಯಲ್ಲೂ  ಫಳ  ಫಳ  ಮಿಂಚುತ್ತಿತ್ತು.  ಸರಕ್ಕನೇ  ಮನೆಯೊಳ  ಹೊಕ್ಕು  ನೆಲಮಾಳಿಗೆಯೆಡೆಗೆ  ಧಾವಿಸಿದರು.  ಮಳೆ  ಪ್ರವಾಹ  ಮತ್ತು  ಮತ್ತೂ  ವೇಗ  ಪಡೆಯುತ್ತಲೇ  ಇದ್ದುದರಿಂದ,   ಭಯಪೀಡಿತ  ಪೋಲೀಸರು  ಕೆಲವು ಸಮಯ  ಕಾದು  ನಿರುಪಾಯರಾಗಿ  ಮರಳಿದರು.  

.  ನೆಲಮಾಳಿಗೆ  ಪ್ರವೇಶಿಸಿದ   ಸತ್ನಾರಾಣ್  ಭಟ್ರು  ಶ್ರೀದೇವರ  ಆಭರಣಗಳ  ಒಂದೆರಡು  ಕಬ್ಬಿಣದ  ಕಪಾಟುಗಳೊಂದಿಗೆ  ಮರೆಯಲ್ಲಿರುವ  ಭಟ್ಟರದ್ದೇ  ಆದ  ಇನ್ನೆರಡು  ಕಬ್ಬಿಣದ  ಭದ್ರ  ಪೆಟ್ಟಿಗೆಯನ್ನೊಮ್ಮೆ  ದೃಷ್ಟಿಸಿ  ಅಲ್ಲಿಯೇ  ಕುಸಿದು  ಕುಳಿತರು.

      ್ವತಕ್ಕೆ  ಮತ್ತೆ ರೆಕ್ಕೆ  ಮೂಡಿತ್ತು.  ಅಷ್ಟೆತ್ತರದ  ್ವತ  ಇಬ್ಭಾಗವಾಗಿ,  ಶಿರದಲ್ಲಿದ್ದ  ಗಂಗಾಂಬಿಕಾ  ಪುಷ್ಕರಣಿ  ಬಾಯಿತೆರೆದು, ಗಂಗೆ  ರೌದ್ರಾಕಾರದಿಂದ   ್ವತದ  ಸಂದಿಯಲ್ಲಿ  ನುಗ್ಗಿತು.  ನೋಡ ನೋಡುವಷ್ಟರಲ್ಲಿ   ಇಡೀ  ್ವತ  ತನ್ನ  ಮೈಮೇಲಿರುವ  ಎಲ್ಲ  ವಸತಿಗಳೊಂದಿಗೆ  ಗಂಗಾಮಾತೆಯ  ದೇಗುಲವನ್ನೂ  ಒಡಗೊಂಡು  ತಳಕ್ಕೆ  ಭೀಕರವಾಗಿ  ಜಾರತೊಡಗಿತು.  ಮಹಾ  ಸ್ಫೋಟದ  ಭಯಂಕರ  ಶಬ್ಧದೊಂದಿಗೆ  ಅಷ್ಟೆತ್ತರದ  ಒಂದು ಭಾಗ  ಇದ್ದಕ್ಕಿದ್ದಂತೇ  ತುಂಡಾಗಿ  ್ವತೇಶ್ವರದೇವಾಲಯದ  ಸಮುಚ್ಛಯವನ್ನೇ  ಮುಚ್ಚಿಹಾಕಿತು.  ನೂರಾರು ಅಡಿ  ಕೆಸರು  ಮಣ್ಣಿನಡಿಯಲ್ಲಿ  ್ವತೇಶ್ವರ ದೇವರು,  ಭಟ್ಟರು  ಮತ್ತು  ನೆಲಮಾಳಿಗೆಯಲ್ಲಿಯ  ಎಲ್ಲಪೆಟ್ಟಿಗೆಗಳೂ  ಪಾತಾಳಕ್ಕೆ  ಲಗ್ಗೆಯಿಟ್ಟವು.

 

==================================================================================

                         

                                         ಸುಬ್ರಾಯ  ಮತ್ತೀಹಳ್ಳಿ. 

ತಾ-  ೧೩-೧೦-೨೦೨೨                          ಅಂಚೆ- ತ್ಯಾಗಲಿ.  ತಾಲೂಕು- ಸಿದ್ದಾಪುರ.

                                                    ಉತ್ತರಕನ್ನಡ   ಜಿಲ್ಲೆ.  ೫೮೧೩೪೦

                                                   ಚರವಾಣಿ   ೯೪೮೩೬೪೭೮೮೭   ( ತಿಚಿಣsuಠಿ ಛಿಚಿಟಟ  oಟಿಟಥಿ )