Wednesday 28 February 2024

ಸಂಗೀತದ ಸಾನ್ನಿಧ್ಯದಲ್ಲಿʼʼ

 

     ಸಂಗೀತ  ಎಂದರೇನೆ  ಮೈ ನವಿರೇಳಿಸುವ  ಸಂಗತಿ.  ಪ್ರಕೃತಿ  ಮೌನಿಯಲ್ಲ, ಸದಾ  ವಿವಿಧ  ನಾದಗಳಿಂದ  ಮೈದುಂಬಿಕೊಂಡಿರುವ  ಒಂದು  ವಿಸ್ಮಯದ  ಜಗತ್ತು  ಅದು.  ಸ್ಥಬ್ಧ ಜಗತ್ತನ್ನು  ಊಹಿಸಲೂ  ಸಾಧ್ಯವಾಗದು. ಗಾಳಿಗೆ  ನೀರಿಗೆ  ನದಿಗೆ  ಸಾಗರಕ್ಕೆ, ಮಳೆಗೆ  ಮೋಡಕ್ಕೆ, ಕಾನನಕ್ಕೆ  ಜೀವಸಂಕುಲಕ್ಕೆ  ಅದರದರದ್ದೇ  ಲಯವಿದೆ.  ನಾದವಿದೆ.  ಸರ್ವಂ  ನಾದಮಯಂ  ಜಗತ್.‌  

     ಆದರೆ    ಲಯದ, ಆ ನಾದದ ಸೂಕ್ಷ್ಮ ಧ್ವನಿಯನ್ನು  ಕೇಳುವ  ಆಸ್ವಾದಿಸುವ  ಮನಸ್ಸು ಮಾತ್ರ  ಬದುಕಿನ  ಸೂಕ್ಷ್ಮಗಳನ್ನು  ಅರಿತೀತು.  ಜೀವನದ  ನಿಜವಾದ  ಅರ್ಥವನ್ನು  ಶೋಧಿಸೀತು.   ಹಾಗೆಂದು  ಎಲ್ಲ ಲಲಿತ ಕಲೆಗಳ  ಮೂಲಧ್ಯೇಯವೂ  ಮಾನವ  ಬದುಕಿನ  ನಿಜವಾದ  ತಾತ್ವಿಕ ಶೋಧನೆಯೇ ಆಗಿದೆ.

     ಪ್ರಕೃತಿ  ಜೀವಿಗಳಿಗೆ ನೀಡಿದ  ಚೈತನ್ಯದಾಯಕ  ವರವೇ  ಸಂಗೀತ.  ಶೃತಿ  ಲಯ ವಿಲ್ಲದ  ಒಂದು  ಕ್ಷಣವೂ  ಪ್ರಕೃತಿಯಲ್ಲಿಲ್ಲ. ತಾಳ  ಭೌತಿಕ  ಶರೀರವಾದರೆ  ರಾಗ  ಅದರ  ಆತ್ಮ. ʻʻ ಸ ರಿʼʼ ಅಂದರೆ  ದೋಣಿ. ʻʻಗ ಮʼʼ ಅಂದರೆ  ಚಲಿಸು  ಎಂದು  ಅರ್ಥೈಸುವುದಿದೆ.   ಘೋರ ಭವಸಾಗರವನ್ನುತ್ತರಿಸಲು  ಜೀವನದ ದೋಣಿ  ಸುರಕ್ಷಿತವಾಗಿ  ಚಲಿಸಬೇಕು. ಎದುರಾಗುವ, ಬಿರುಗಾಳಿ  ಚಂಡಮಾರುತ  ಗಳ  ಏರಿಳಿತಗಳೊಂದಿಗೆ  ಸೆಣಸಾಡುತ್ತ ಧೃಢವಾದ ನೆಲೆಗೆ  ಸೇರಲು, ಸಂಗೀತ  ಜೀವಧಾತುವಾಗಿ  ಸಹಕರಿಸುತ್ತದೆ. 

 

        ನಮ್ಮ ದೇಹವೂ  ಸಹ  ಪ್ರಕೃತಿಯ  ಒಂದು ಸಂಗೀತದ  ಉಪಕರಣವೇ  ಆಗಿದೆ.  ರಕ್ತದ  ಚಲನೆ, ಹೃದಯದ  ಬಡಿತ, ನಿರ್ದಿಷ್ಠ  ಲಯದಲ್ಲಿದ್ದರೇನೆ  ಸುರಕ್ಷೆ.  ನಮ್ವ ನುಡಿವಳಿ, ನಡಾವಳಿಗೂ  ಲಯವೇ  ಸೌಂದರ್ಯ. 

          ವರಕವಿ  ಬೇಂದ್ರೆ  ತಮ್ಮ ಲೇಖನವೊಂದರಲ್ಲಿ  ನಾದದ  ಬಗೆಗೆ  ಪ್ರಸ್ಥಾಪಿಸುತ್ತಾರೆ.  ನಾ... ಎಂದರೆ  ಪ್ರಾಣವಾಯು.  ದ.... ಎಂದರೆ  ಪ್ರಾಣಾಗ್ನಿ.  ಅವೆರಡೂ  ಸಂಧಿಸಿದಾಗ  ಆಗುವ  ಸ್ಫೋಟವೇ  ನಾದ.  ಅಂದರೆ  ನಮ ಸೃಷ್ಟಿ.  ಇತ್ತೀಚಿನ  ಬಿಗ್‌  ಬ್ಯಾಂಗ್‌  ಥಿಯರಿಯೂ  ಸಹ,    ಜಗತ್ತು  ಒಂದು ಸ್ಫೋಟದ  ಮೂಲಕ  ಸೃಷ್ಟಿಯಾಯಿತು  ಎಂಬುದನ್ನು  ಸಾಬೀತು ಗೊಳಿಸಿದೆ.  ನಾದದ  ಮೂಲಕ  ಸೃಷ್ಟಿಯಾದ    ಜಗತ್ತಿನ  ಎಲ್ಲ ಜೀವಿಗಳು, ತಿಳಿದೋ  ತಿಳಿಯದೆಯೋ  ನಾದಕ್ಕೆ  ಸ್ಪಂದಿಸುತ್ತವೆ.  ಅತ್ಯಂತ  ಪುರಾತನ  ತಾತ್ವಿಕ  ಗ್ರಂಥವಾದ  ವೇದ,  ಮೂಲಭೂತವಾಗಿ  ಸ್ವರವನ್ನೇ  ಅವಲಂಬಿಸಿದೆ.  ಭಾರತೀಯ  ಸಂಗೀತವೂ  ವೇದದಿಂದಲೇ  ಜನ್ಮಿಸಿತು  ಎಂಬ  ನಂಬುಗೆ  ನಮ್ಮದು.

          ಸಂಗೀತ  ಕೇವಲ  ಸಂಗೀತಗಾರನ  ಸ್ವತ್ತಲ್ಲ.  ಸಹೃದಯನ  ಸ್ವತ್ತೂ  ಹೌದು.  ಕಲಾವಿದನ  ಪ್ರಸ್ತುತಿ  ಏಕಕಾಲದಲ್ಲಿ,  ಕಲಾವಿದನನ್ನು  ತಣಿಸುತ್ತ,  ಕೇಳುಗನ  ಹೃದಯದಾಳಕ್ಕೂ  ಪ್ರವೇಶಿಸುತ್ತದೆ.   ಬುದ್ಧಿ ಭಾವಗಳನ್ನು  ಪ್ರಚೋದಿಸುತ್ತದೆ.  ಅರಿವು  ಭಾವನೆ  ವರ್ತನೆಗಳಮೇಲೆ  ಸಕಾರಾತ್ಮಕ  ಪರಿಣಾಮವನ್ನು ಬೀರುತ್ತದೆ.  ಮನೋದೈಹಿಕ  ಖಾಯಿಲೆಗಳು  ಸಂಗೀತ ಚಿಕಿತ್ಸೆಯ  ಮೂಲಕ  ಗುಣ ಕಾಣುವುದನ್ನು, ಚಿಕಿತ್ಸಕರು  ಕಂಡುಕೊಂಡಿದ್ದಾರೆ. 

       ಲಲಿತ  ಕಲೆಗಳು  ಮನುಷ್ಯರನ್ನು  ಮತ್ತಷ್ಟು  ಮಾನವೀಯತೆಯ  ದಿಕ್ಕಿಗೆ  ಕೊಂಡೊಯ್ಯುತ್ತವೆ  ಎಂಬುದಕ್ಕೆ  ವಿದೇಶದ  ಸಮೀಕ್ಷೆಯೊಂದು  ಸಾಕ್ಷಿನುಡಿಯುತ್ತದೆ.   ಸಾಮಾನ್ಯ  ಜನರಲ್ಲಿ  ಇರಬಹುದಾದ  ಮೋಸ  ವಂಚನೆ  ಕಪಟ  ಅಪರಾಧ  ಪ್ರವೃತ್ತಿಯ  ಶೇಕಡಾವಾರು ಪ್ರಮಾಣಕ್ಕಿಂತ,  ಕಲಾವಿದ  ಮತ್ತು ಕಲೆಯ  ಆಸ್ವಾದಕರಲ್ಲಿ  ಅತ್ಯಂತ  ಕಡಿಮೆ  ಪ್ರಮಾಣದಲ್ಲಿರುತ್ತದೆ,  ನೈತಿಕ ಗುಣಗಳು  ಜಾಗ್ರತವಾಗಿರುತ್ತವೆ,  ಎಂಬ  ಸತ್ಯವನ್ನು    ಸಮೀಕ್ಷೆಯಲ್ಲಿ  ಕಂಡುಕೊಂಡಿದ್ದಾರೆ.   ಅಂದರೆ  ಕಲೆ  ಕೇವಲ  ರಂಜನೆಯನ್ನು  ಒದಗಿಸುವುದೊಂದೇ  ಅಲ್ಲ,  ನಮ್ಮ ಅಂತರಂಗದ  ಅಮಾನವೀಯ ಗುಣಗಳನ್ನು   ದೌರ್ಬಲ್ಯಗಳನ್ನು  ನಾಶಪಡಿಸುತ್ತದೆ, ಎಂಬುದು  ಸಿದ್ಧಗೊಂಡಂತಾಯಿತು.

        ಮಾನವ ಸಂಸ್ಕೃತಿ  ಬನಿಗೊಳ್ಳುವುದು  ಹರಳುಗಟ್ಟುವುದು  ಕಲೆಯ ಒಡಲಿನಲ್ಲಿ. ಒಂದು ಸಮುದಾಯದ  ಅಸ್ಮಿತೆ  ನೆಲೆಗೊಂಡಿರುವುದೇ  ಕಲಾತ್ಮಕ  ಚಟುವಟಿಕೆಗಳಲ್ಲಿ. ಯಾವ  ಜನಾಂಗ  ಕಲೆ ಸಾಹಿತ್ಯ ಸಂಸ್ಕೃತಿ  ಮತ್ತು ವಿಜ್ಞಾನಕ್ಕೆ   ಮಹತ್ವಕೊಡುವುದೋ  ಅದು ಶ್ರೇಷ್ಠಾತಿ  ಶ್ರೇಷ್ಟ ಜನಾಂಗ  ಎನ್ನಬಹುದಾಗಿದೆ.  ನಮ್ಮ ಇತಿಹಾಸದ  ಸಹಸ್ರಾರು  ರಾಜರುಗಳಲ್ಲಿ  ಕಲಾಚಟುವಟಿಕೆಯನ್ನು ಪ್ರೀತಿಸಿ,  ಪ್ರೋತ್ಸಾಹಿಸಿರುವ  ಅನೇಕ  ಅರಸುಗಳು  ಕಾಣಸಿಗುತ್ತಾರೆ.  ಅವರ  ಆಡಳಿತವೂ  ಜನಪರತೆ  ಮಾನವೀಯತೆಯಿಂದ  ಕೂಡಿತ್ತು ಎಂಬ  ವಿವರಗಳು  ದೊರಕುತ್ತವೆ. ಕೃಷ್ಣದೇವರಾಯ,  ಅಕ್ಬರ್‌, ನಮ್ಮ ಮೈಸೂರ  ಅರಸುಗಳು,  ಮುಂತಾದವರು,  ಸಂಗೀತ ನೃತ್ಯಗಳಿಗೆ  ನೀಡಿದ  ಕೊಡುಗೆ  ಸದಾ ಸ್ಮರಣೀಯ.

     ಹಿಂದೂಸ್ಥಾನೀ  ಸಂಗೀತದ  ಸಾಮ್ರಾಟನಾಗಿ  ಮಿಂಚಿದ್ದ,  ಈಗಲೂ  ಆದರಣೀಯ  ಸ್ಥಾನವನ್ನಲಂಕರಿಸಿರುವ  ʻʻತಾನಸೇನ ʼʼ ಅಕಬರ ಆಸ್ಥಾನದ  ಮಹಾನ್‌ ಸಂಗೀತಗಾರನಾಗಿದ್ದ. ತಾನಸೇನ್‌   ಅಕ್ಬರ ಬಾದಶಹನಿಗೆ  ಸಂಗೀತದ  ಹುಚ್ಚನ್ನೇ  ಹಿಡಿಸಿದ್ದ  ಎಂಬುದು  ಸರ್ವ ವಿದಿತ. ತಾನಸೇನ  ಹಾಡತೊಡಗಿದರೆ, ಇಡೀ  ಸಭೆ ಮೈ ಮರೆಯುತ್ತಿತ್ತು.  ಆಸ್ಥಾನದ  ನರ್ತಕಿಯರು  ಉತ್ಸಾಹ  ತಡೆಯಲಾಗದೇ  ಬಂದು  ಅಪ್ಪಿಕೊಳ್ಳುತ್ತಿದ್ದರು.  ಆತನ  ಸಂಗೀತ  ಕೇಳಲು  ಜನ  ತುದಿಗಾಲಲ್ಲಿ  ನಿಂತಿರುತಿದ್ದರು.  ಅಕ್ಬರನಿಗಿಂತಲೂ   ತಾನಸೇನ  ರಾಜ್ಯದಲ್ಲಿ  ಜನಪ್ರಿಯನಾಗಿದ್ದ.   ಇದನ್ನು ಸಹಿಸದ  ಅಕಬರನ  ಮಗ  ಸಲೀಮ   ತಾನಸೇನನಿಗೆ  ವಿಷಪ್ರಾಶನ  ಮಾಡಿಸಲೂ  ಹೇಸಲಿಲ್ಲ.  ಆದರೂ  ತಾನಸೇನ್‌  ಬದುಕಿದ.

      ಸುಪ್ರಸಿದ್ಧ  ಲೇಖಕ  ದಿ. ಶಂಕರ ಮುಖಾಶಿ  ಪುಣೇಕರ   ತಮ್ಮ  ಬಿಲಾಸಖಾನ್‌  ಎಂಬ  ಲೇಖನವೊಂದರಲ್ಲಿ,  ತಾನಸೇನರ  ಸಮಗ್ರ  ಜೀವನ ವೃತ್ತಾಂತ ವನ್ನು,  ಅದ್ಭುತವಾಗಿ  ಚಿತ್ರಿಸಿದ್ದಾರೆ.  ಲೇಖನದಲ್ಲಿಯ  ಒಂದು  ಘಟನೆಯನ್ನು  ಉದಹರಿಸಲೇ  ಬೇಕಾಗಿದೆ.

      ಸುಲ್ತಾನನ  ಮಗ  ಸಲೀಮನ  ಮದುವೆಯ  ಅದ್ದೂರಿ  ತಯಾರಿ  ನಡೆಯುತ್ತಿತ್ತು.  ಮದುವೆಯ  ಹಿಂದಿನ  ದಿನ   ಬಾದಶಹ  ತಾನಸೇನನನ್ನು  ಕರೆದು,  ʻʻಶಾದಿ ಮುಬಾರಕ್‌  ಆಗುವಂತ  ನಿನ್ನದೇ  ಆದ  ಚೀಜ್‌  ಹಾಡು.   ಹಳೆಯ  ಸಂಸ್ಕೃತ   ಅವಧಿ ಭಾಷೆಗಳ  ಹಾಡುಗಳನ್ನು  ಕೇಳಿ  ಕೇಳಿ ಬೇಸರ ಬಂದಿದೆ.   ನಿನ್ನ  ಪ್ರಸಿದ್ಧಿಗೆ  ಭೂಷಣವಾಗುವಂತೇ   ಕರಾಮತ್‌  ತೋರಿಸುʼʼ  ಎಂದು   ಆಜ್ಞಾಪಿಸಿದ.

     ʻʻ ನಾನು  ಹಾಡುತ್ತೇನೆ.  ಸ್ವೀಕರಿಸುವುದು  ಬಿಡುವುದು  ಹುಜೂರರಿಗೆ  ಸೇರಿದ್ದುʼʼ  ತಾನಸೇನ  ನಮ್ರನಾಗಿ  ಉತ್ತರಿಸಿದ.

     ಇದೀಗ  ಬಿಗಿ ಬಂದಿತು.  ಇಷ್ಟು ದಿನವೂ  ದರ್ಬಾರಿನ  ಪ್ರಥಮ ಗಾಯಕನೆಂದು  ದಶದಿಕ್ಕುಗಳಲ್ಲಿ  ಹೆಸರಾದರೂ, ಸ್ವಂತದ  ಕೃತಿ ರಚಿಸಿರಲಿಲ್ಲ.  ಏನೇಆಗಲಿ  ಸುದೈವದಿಂದ  ಬಾದಶಹರು  ಹೊಸ ರಾಗ ರಚಿಸಲು  ಕೇಳಿಕೊಳ್ಳಲಿಲ್ಲ. ನನ್ನ ಪುಣ್ಯ  ಹೊಸ  ಚೀಜು  ರಚಿಸಲು  ಮಾತ್ರ  ಹೇಳಿದ್ದಾರೆ.   ಆದರೂ  ಆತಂಕದಲ್ಲಿ  ನರಳಿದ.    ಸಂಗಾತಿ  ರಹಮತ್‌ ಖಾನರು  ಧೈರ್ಯ  ನೀಡಿದರು.  ಬಾದಶಹನ  ಮಾತನ್ನೇ  ಚೀಜನ್ನಾಗಿ  ಪರಿವರ್ತಿಸಿ  ರಾತ್ರಿಯಿಡೀ  ರಿಯಾಜ್‌  ಮಾಡಿದರು.  ಬಾದಶಹರಿಗೆ  ಅತ್ಯಂತ ಪ್ರಿಯವಾದ  ದರ್ಬಾರಿ  ರಾಗದ  ಸ್ವರಗಳ  ಪ್ರಾರಂಭ  ಬೆಳವಣಿಗೆ  ಮುಕ್ತಾಯಕ್ಕೆ  ಅನುಗುಣವಾಗುವಂತೇ   ಹರುಕು  ಮುರುಕು  ಅರ್ಥಹೀನ  ಶಬ್ದಗಳನ್ನೇ  ಕೂಡಿಸಿ  ಹಾಡಿದರು.  ಈಗಲೂ  ಅತ್ಯಂತ  ಪ್ರಸಿದ್ಧವಾಗಿ  ಬಳಕೆಯಲ್ಲಿರುವ  ಚೀಜ್‌  ಹೀಗಿದೆ.

            ಸೋ  ಸೋ  ಮುಬಾರಕ್‌  ಬಾದಿಯಾ/ ಶಾದಿಯಾ /

             ಐಸೇ  ಶಾದಿ  ಹೋ /  ಲಾಖೋ  ಹಜಾರ್‌ /  ಸೋ... ಸೋ   ಮುಬಾರಕ್‌ .../

( ವಿವಾಹಕ್ಕೆ  ನೂರು  ನೂರು  ಶುಭಾಶಯ.  ಇಂಥಹ  ಸಾವಿರ  ಸಾವಿರ  ಮದುವೆಗಳಾಗಲಿ )

 

        ಹಿಂದೂಸ್ಥಾನೀ  ಸಂಗೀತಕ್ಕೆ  ಹೊಸ  ಹರಹು, ಹೊಸ ಮೆರಗು  ನೀಡಿದ  ತಾನಸೇನ್‌, ತನ್ನ ಮಗ  ಬಿಲಾಸಖಾನ  ಸತ್ತಾಗ  ಅತೀವ  ದುಃಖದಿಂದ,  ಅವನ  ಕಳೇಬರದೆದುರು,  ತೋಡಿ  ರಾಗವನ್ನು ಸೃಷ್ಟಿಸಿ  ಹಾಡುತ್ತಾನೆ.  ಅದೇ  ʻʻಬಿಲಾಸಖಾನೀ  ತೋಡಿ ʼʼ  ಎಂಬ  ಹೆಸರಿನಲ್ಲಿ, ಇಂದಿಗೂ  ಸುಪ್ರಸಿದ್ಧವಾಗಿದೆ.

     ಭಾರತೀಯ  ಶಾಸ್ತ್ರೀಯ  ಸಂಗೀತ ಪ್ರಪಂಚ,  ಅಸಂಖ್ಯಾತ ಸಂಗೀತಗಾರರ  ಕತೆ, ದಂತಕಥೆಗಳಿಂದ  ಕಿಕ್ಕಿರಿದಿದೆ.  ಅದೇ ಒಂದು ಮಹಾಕಾವ್ಯವಾಗುವಷ್ಟು  ಸಮೃದ್ಧವಾಗಿದೆ.  ಅಲ್ಲಿ ಮಾನವ ಪ್ರತಿಭೆಯ ಉತ್ತುಂಗವಿದೆ.  ಅಮಾನವೀಯತೆಯ  ಕಟು ಸತ್ಯವೂ ಇದೆ.  ಪ್ರೀತಿ  ಪ್ರೇಮ ಪ್ರಣಯ ವ್ಯಭಿಚಾರ  ಸಂಘರ್ಷಗಳ  ಮುಖಾಮುಖಿಯಿದೆ.  ಜೊತೆಯಲ್ಲಿಯೇ  ಸಂಗೀತದ  ಮಹೋನ್ನತ ಸಾಧನೆಯ  ಪರಾಕಾಷ್ಠೆ ತಲುಪಿ  ಜಗತ್ತಿನ  ಶ್ರೀಮಂತ ಕಲೆಯಾಗಿ  ವಿಜ್ರಂಭಿಸುತ್ತಿದೆ.

    ಸಂಗೀತ  ಚರಿತ್ರೆಯ  ಕರುಣಾಪೂರ್ಣ  ಘಟನೆಯೊಂದನ್ನು ನಾನಿಲ್ಲಿ ಪ್ರಸ್ಥಾಪಿಸಲೇ ಬೇಕಿದೆ. ಕನ್ನಡದ  ಸುಪ್ರಸಿದ್ಧ ಸಂಗೀತ ವಿಮರ್ಶಕರೆಂದು  ಹೆಸರಾದ  ಬಿ.ವಿ.ಕೆ.ಶಾಸ್ತ್ರಿ  ಕಲೆಯ ಗೊಂಚಲು   ಎಂಬ  ತಮ್ಮ ಕೃತಿಯಲ್ಲಿ ಹಲವಾರು ಸಂಗೀತ ದಿಗ್ಗಜರ  ಜೀವನ ವೃತ್ತಾಂತವನ್ನು  ಸಂಗ್ರಹಿಸಿ ಕೊಟ್ಟಿದ್ದಾರೆ.  ಅದರಲ್ಲಿ ಶತಮಾನದ  ಹಿಂದೆ  ಆಗಿಹೋದ  ಮಹಾನ್‌  ಹಿಂದುಸ್ಥಾನಿ  ಕಲಾವಿದ  ʻʻಬಾಬಾ  ದೀಕ್ಷಿತ್‌ʼʼ  ಒಬ್ಬರು.

     ತಾನ್ಸೇನ ನ  ಜನ್ಮಭೂಮಿಯೆಂದೇ  ಪ್ರಸಿದ್ಧವಾದ  ಗ್ವಾಲಿಯರ್‌ ಗೆ  ಸಂಗೀತ ಕಲಿಯಲಾಗಿಯೇ  ಒಬ್ಬ ಬಡ ಬಾಲಕ  ಅದಮ್ಯ  ಆಕಾಂಕ್ಷೆಯಿಂದ  ಒಂಟಿಯಾಗಿ   ಬರುತ್ತಾನೆ.  ಗ್ವಾಲಿಯರ್‌  ಖಾನದಾನಿಯ  ಸ್ಥಾಪಕರೆಂದೇ  ಹೆಸರಾದ  ಹದ್ದೂಖಾನ್‌  ಹಸ್ಸೂಖಾನ್‌  ಸಹೋದರರಲ್ಲಿ  ಸಂಗೀತ  ಕಲಿಯುವ  ಆಸೆ  ಆ ಬಾಲಕನಿಗೆ.  ಹದ್ದೂಖಾನ್‌  ಸಹೋದರರು  ಗ್ವಾಲಿಯರ್‌  ಸಂಸ್ಥಾನದ  ಮಹಾರಾಜರಾದ  ಜಿಯಾಜಿರಾವ್‌  ಸಿಂಧಿಯಾ  ರವರ  ಆಸ್ಥಾನ ಗಾಯಕರು.  ಸಂಗೀತಗಾರರ  ಮನೆಯ ಪಕ್ಕದಲ್ಲಿರುವ  ಛತ್ರದಲ್ಲಿ  ಉಳಿದುಕೊಂಡ  ಬಾಲಕ  ಹಲವು ತಿಂಗಳುಗಳ ಕಾಲ  ಸಂಗೀತದ  ಪಾಠಗಳನ್ನು  ಶ್ರದ್ಧೆಯಿಂದ ಹೊರಗೇ  ನಿಂತು  ಆಲಿಸುತ್ತಾನೆ.  ಛತ್ರದಲ್ಲಿ ಉಳಿದುಕೊಂಡು  ರಾತ್ರಿಯಿಡೀ  ಅಭ್ಯಸಿಸುತ್ತ, ರಾಗಗಳನ್ನು  ಆತ್ಮಸಾಥ್‌  ಮಾಡಿಕೊಳ್ಳುತ್ತಾನೆ.  ಅಲ್ಲಲ್ಲಿ  ಹಾಡಲೂ  ಪ್ರಾರಂಭಿಸುತ್ತಾನೆ.  ಕೆಲವೇ ದಿನಗಳಲ್ಲಿ  ಬಾಲಕನ  ಜನಪ್ರಿಯತೆಯನ್ನು  ಗಮನಿಸಿದ  ಖಾನ್‌ ಸಹೋದರರು,  ಆತ  ಹಾಡುವುದನ್ನು  ಗಮನಿಸುತ್ತಾರೆ.  ಆಶ್ಚರ್ಯಚಕಿತರಾಗುತ್ತಾರೆ.

      ತಮ್ಮ ಶಿಷ್ಯನಲ್ಲದಿದ್ದರೂ  ಈತ  ತಮ್ಮ ಪರಂಪರೆಯ  ಸಂಗೀತವನ್ನು ಇಷ್ಟು ಸುಂದರವಾಗಿ  ಹಾಡುತ್ತಾನೆ  ಎಂಬುದೇ  ಅರ್ಥವಾಗದ  ಸ್ಥಿತಿ  ಅವರಿಗೆ.  ಬಾಲಕನನ್ನು  ಬಳಿಗೆ  ಕರೆದು,  ವಿಚಾರಿಸಿ  ತಮ್ಮ ಸಂಗೀತ ಶಾಲೆಗೆ  ಸೇರಿಸಿಕೊಳ್ಳುತ್ತಾರೆ.  ಆತನೇ  ʻʻ ಬಾಬಾ ದೀಕ್ಷಿತ್‌ʼʼ

     ಹತ್ತು ವರ್ಷ  ಅವಿರತವಾಗಿ  ಖಾನ್‌ ಸಹೋದರರ  ಗರಡಿಯಲ್ಲಿ  ಸಿದ್ಧಗೊಂಡ  ಬಾಬಾ ದೀಕ್ಷಿತ್‌  ಮಹಾರಾಜರಿಂದಲೂ  ಸಮ್ಮಾನಿತಗೊಳ್ಳುತ್ತಾನೆ.  ಇಡೀ  ಗ್ವಾಲಿಯರ್‌ ನಗರದಲ್ಲಿ  ಬಾಬಾ  ಮನೆಮಾತಾಗುತ್ತಾನೆ.

     ಒಂದು ದಿನ  ಸಂಗೀತ  ಶಿಕ್ಷಣ  ಮುಗಿಸಿ  ಬಾಬಾ  ಹೊರಟು ನಿಂತಾಗ,  ಹಸ್ಸೂಖಾನ್‌  ಶಿಷ್ಯನನ್ನು ಕರೆದು  ಕುಳ್ಳಿರಿಸಿ,  ಗುರುಕಾಣಿಕೆಯನ್ನು  ಏನು  ಕೊಡುತ್ತೀಯಾ  ಎಂದು  ಕೇಳುತ್ತಾರೆ.  ಶಿಷ್ಯ  ನಾನು  ಬಡವ.  ಒಂಟಿ.  ನಾನೇನು  ಕೊಡಬಲ್ಲೆ  ಗುರುಗಳೇ   ಎಂದು  ಕೇಳುತ್ತಾನೆ. 

     ನಿನ್ನಿಂದ  ಸಾಧ್ಯವಾಗುವುದನ್ನೇ  ಕೇಳುತ್ತೇನೆ,  ಕೊಡುತ್ತೀಯಾ...?  ಎಂದು  ಕೇಳಿದಾಗ  ಖುಷಿಯಿಂದ  ಹುಡುಗ  ಹೂಂ  ಗುಡುತ್ತಾನೆ.

     ಗಂಭೀರವಾಗಿ  ಗುರು  ಹಸ್ಸೂಖಾನ್‌  ತನ್ನ ಬೇಡಿಕೆಯನ್ನು  ಮಂಡಿಸುತ್ತಾನೆ.  ʻʻ  ನೀನು  ಇಂದಿನಿಂದ  ಸಾರ್ವಜನಿಕವಾಗಿ  ಎಲ್ಲೂ  ಎಂದೂ  ಹಾಡಕೂಡದು.  ರಾಜನ ಆಸ್ಥಾನದಲ್ಲೂ  ಸಹ.   ಆದರೆ  ದೇವಾಲಯದಲ್ಲಿ  ಹಾಡಲು  ಯಾವ  ತಡೆಯಿಲ್ಲʼʼ   ಎಂಬ  ನಿಯಮವನ್ನು  ಕೇಳಿದಾಗ  ಬಾಬಾ  ಒಮ್ಮೆ ಬೆಚ್ಚಿಬೀಳುತ್ತಾನೆ.   ಅದುರುವ  ಧ್ವನಿಯಲ್ಲೇ   ʻʻ  ಯಾಕೆ  ಇಷ್ಟು ಕಠಿಣ  ನಿಯಮ  ಗುರುಗಳೇ...?ʼʼ  ಎಂದು  ಪ್ರಶ್ನಿಸಿದಾಗ,   ಹಸ್ಸೂಖಾನ್‌   ʻʻ  ಇದು  ನನ್ನ ಮಕ್ಕಳ ಭವಿಷ್ಯದ  ಪ್ರಶ್ನೆ.  ನೀನು ಹಾಡುತ್ತಿದ್ದರೆ  ನನ್ನ ಮಕ್ಕಳು  ಅನಾಥರಾಗುತ್ತಾರೆ.  ನಮ್ಮ ವಂಶದ    ಕಲೆ ಅವರಿಗೇ  ದಕ್ಕದಂತಾಗುತ್ತದೆ.  ನಾನು  ಕೇಳುತ್ತಿರುವುದು  ಗುರು ದಕ್ಷಿಣೆಯನ್ನಲ್ಲ,  ನಿನ್ನಿಂದ  ಭಿಕ್ಷೆʼʼ  ಎಂದಾಗ,  ಬಾಬಾ ದೀಕ್ಷಿತ್‌ ನ  ಕಣ್ಣಲ್ಲಿ ನೀರು ತುಂಬುತ್ತದೆ.  ಎದೆ ಭಾರವಾಗುತ್ತದೆ.  ಕೃಷ್ಣಾರ್ಪಣ  ಎಂದು ಉದ್ಗರಿಸುತ್ತ, ಗುರು ದಕ್ಷಿಣೆಯನ್ನು  ಸ್ವೀಕರಿಸಿ,  ಎಂದೆನ್ನುತ್ತ  ನಮಸ್ಕರಿಸುತ್ತಾನೆ.

     ಆಗ  ಬಾಬಾನಿಗೆ  ಕೇವಲ  ಇಪ್ಪತ್ಮೂರು  ವರ್ಷ.  ಅಲ್ಲಿಂದ  ಕಾಶಿಗೆ  ಪ್ರಯಾಣಿಸಿದ  ದೀಕ್ಷಿತ್‌  ತಮ್ಮ ತೊಂಬತ್ತು  ವರ್ಷದ  ಸುದೀರ್ಘ  ಸಂಗೀತ  ಜೀವನದಲ್ಲಿ  ಒಮ್ಮೆಯೂ  ಸಾರ್ವಜನಿಕವಾಗಿ  ಹಾಡಲೇ  ಇಲ್ಲ.  ದೀಕ್ಷಿತರ  ಅಭಿಮಾನಿ  ಗ್ವಾಲಿಯರ್‌  ಮಹಾರಾಜ  ಸಹ, ಬಾಬಾ  ಇದ್ದಲ್ಲೇ  ಬಂದು  ಕಾಶಿ  ವಿಶ್ವನಾಥ  ಮಂದಿರದಲ್ಲಿ  ಸಂಗೀತವನ್ನಾಲಿಸಿ  ತೃಪ್ತಿ ಪಟ್ಟ.  

    ನೂರಾರು  ಪ್ರತಿಭೆಗಳನ್ನು  ಸೃಷ್ಟಿಸುತ್ತ,  ಗ್ವಾಲಿಯರ್‌  ಸಂಗೀತ  ಪರಂಪರೆ  ಉಳಿದು ಬೆಳೆಯಲು  ಕೊನೆಗೂ  ಬಾಬಾ ನೇ  ಕಾರಣನಾದ.

     ವೇದ  ಉಪನಿಷತ್‌, ಕುರಾನ್‌, ಬೈಬಲ್‌ ಗಳಂತೇ  ಎಲ್ಲ ಸಂಗೀತ  ಪರಂಪರೆಗಳೂ  ಇಡೀ  ಮಾನವ ಲೋಕಕ್ಕೆ  ಸಮರ್ಪಣೆಯಾಗಬೇಕೇ  ಹೊರತು, ಯಾವುದೇ ಒಂದು ವಂಶದ  ಆಸ್ತಿಯಾಗುವುದಲ್ಲ.  ಮಹಾಭಾರತದ  ಭೀಷ್ಮಪ್ರತಿಜ್ಞೆ,  ಅಥವಾ  ಏಕಲವ್ಯ ಪ್ರಕರಣವನ್ನು  ನೆನಪಿಸುವ    ಸಂಗತಿ,  ಸಂಗೀತ ಚರಿತ್ರೆಯಲ್ಲಿ  ಒಂದು  ವಿಷಾದಪೂರ್ಣ ಘಟನೆ.

      ಕಲೆಯನ್ನೇ  ಉಸಿರಾಗಿಸಿಕೊಂಡು  ಬದುಕಿಡೀ  ಸಂಗೀತ ಸಾಧನೆಯಲ್ಲೇ  ನಿರತರಾಗಿದ್ದ,  ಪಂಡಿತ್‌  ಕುಮಾರ ಗಂಧರ್ವರು  ತಮ್ಮ ಕೃತಿಯೊಂದರಲ್ಲಿ, ಹೇಳುತ್ತಾರೆ,

      ʻʻ ನಾನೊಬ್ಬ  ಅಲೆಮಾರಿ.  ಹಾಡುಗಾರಿಕೆ  ಒಂದು   ಅಂತ್ಯವಿಲ್ಲದ  ಪಯಣ.  ರಾಗದ  ಬಗೆ ಬಗೆಯ ರೂಪಗಳನ್ನು  ನೋಡುವುದು,  ನಿರ್ಮಾಣ ಮಾಡುವುದು  ನನ್ನ ಜಾಯಮಾನ.  ಒಂದು ರಾಗ ಒಂದೇ ಬಗೆಯಲ್ಲಿ  ಸುಂದರವಾಗಿದೆ ಎಂದು ಭಾವಿಸದೇ   ರಾಗದ  ವೈವಿಧ್ಯಮಯ  ಸೌಂದರ್ಯವನ್ನು ಶೋಧಿಸುತ್ತಲೇ ಇರುತ್ತೇನೆ.  ಯಾವುದು ನನಗೆ  ಸಂಪೂರ್ಣ ಕರಗತವಾಗುವುದಿಲ್ಲವೋ  ಅದನ್ನು ಸಂಪೂರ್ಣ  ಸ್ವಾಧೀನ ಪಡಿಸಿಕೊಳ್ಳಲು  ಪ್ರಯತ್ನಿಸುತ್ತೇನೆ. ನಾನು ಎಂದು ತೃಪ್ತನಾಗುತ್ತೇನೆಯೋ  ಅಂದೇ ನನ್ನ ಹಾಡುಗಾರಿಕೆ  ಮುಕ್ತಾಯವಾಗುತ್ತದೆ.  ನಾನು  ಸದಾ ಅತೃಪ್ತ.  ಅಂತೆಯೇ  ನಾನು  ಹಾಡುತ್ತಲೇ ಇರುತ್ತೇನೆ. ʼʼ

     ಎಂದು  ಉದ್ಗರಿಸಿದ   ಕುಮಾರ ಗಂಧರ್ವರು  ಕೇವಲ  ಹಾಡಲಿಲ್ಲ.  ನಾದದ ಮೂಲಕ್ಕೆ ಸಾಗಿದರು.  ಇಪ್ಪತ್ತಕ್ಕೂ ಹೆಚ್ಚು ನವರಾಗಗಳನ್ನು  ಸೃಷ್ಟಿಸಿ,  ನಾದಲೋಕವನ್ನು ಸಮೃದ್ಧ ಗೊಳಿಸಿದರು.  ಅವುಗಳಲ್ಲಿ  ʻʻ ಗಾಂಧೀ ಮಲ್ಹಾರ್‌ʼʼ ರಾಗ  ವಿವಾದ  ಮತ್ತು ಪ್ರಸಿದ್ಧಿ ಎರಡನ್ನೂ ಪಡೆಯಿತು.  ಸಂಕೀರ್ಣವಾದ  ಮಲ್ಹಾರ್‌  ರಾಗಕ್ಕೆ  ಹೊಸ  ಆಯಾಮ, ಹೊಸ ಹೊಳಪು, ಹೊಸ ಹರಿವುಗಳನ್ನು ನೀಡಿದರು. ತೀವ್ರ ಮಧ್ಯಮ  ಸ್ವರವು  ಇಡೀ ರಾಗಕ್ಕೆ  ಸುಕೋಮಲ  ಸ್ಪರ್ಶವನ್ನು  ನೀಡಿತು.  ರಾಗದ  ಆಳದಲ್ಲಿ  ಮಹಾತ್ಮರ  ಸತ್ಯ  ಅಹಿಂಸೆ  ಮತ್ತು ಭಕ್ತಿ ಭಾವಗಳು ತುಂಬಿ  ಹರಿಯುತ್ತಿತ್ತು.

     ಭಾರತೀಯ  ಗುರುಶಿಷ್ಯ ಪರಂಪರೆಯ  ಶಿಕ್ಷಣವನ್ನು ಶಾಸ್ತ್ರೀಯ  ಕಲೆಗಳು, ಇನ್ನೂ ಜೋಪಾನವಾಗಿ  ತನ್ನ ಒಡಲೊಳಗಿಟ್ಟು  ಪೋಷಿಸುತ್ತಿದೆ.  ಸಾಕಷ್ಟು ಅತ್ಯುನ್ನತ  ಕಲಾವಿದರುಗಳನ್ನು  ನೀಡುತ್ತಿದೆ.  ಹಾಗೆಂದು,  ಆಧುನಿಕವೆಂಬ  ವರ್ತಮಾನದ  ಸಂಗೀತ ವಿಶ್ವವಿದ್ಯಾಲಯಗಳಿಂದ  ಒಂದೇ ಒಂದು  ಹೆಸರಿಸಬಹುದಾದ  ಪ್ರತಿಭೆ  ಸೃಷ್ಟಿಯಾಗಿಲ್ಲ.

      ನಾದಲೋಕಕ್ಕೆ  ಅದು ನೀಡುವ  ಮೋದಕ್ಕೆ  ನನ್ನದೊಂದು  ಸಲಾಮ್.‌

 

 

        

              ʻ ಸುಮ-ಸಂಪದʼ  ಅಂಕಣಕ್ಕೆ.  ೨೮-೨- ೨೦೨೪.     

               ಸುಬ್ರಾಯ  ಮತ್ತೀಹಳ್ಳಿ. 9483647887. Whatsup.