Saturday 23 July 2011

ಕುರುಡು ಆಧುನಿಕತೆ

ಮಣ್ಣಿಂದ ದೂರವಾದ ಮೇಲೆ   ಆಧುನಿಕತೆಯ ಬುಲ್ಡೋಜರ್ ಅರಣ್ಯಗಳನ್ನ ಕೃಷಿ ಭೂಮಿಗಳನ್ನ  ಮುಂದೊತ್ತುತ್ತಾ ಒತ್ತುತ್ತಾ ಸಾಗಿದಂತೆಮರುಭೂಮಿ ಆಕ್ರಮಿಸಿ ಅಪ್ಪುತ್ತಾ ಅಪ್ಪುತ್ತಾ ಬರುತ್ತದೆ. ವೈಭೋಗಲಾಲಸೆ ಯಲ್ಲಿ  ನಾವು ಲೀನವಾದಂತೆ ನಮ್ಮ ಅಂತರಂಗ ಮರುಭೂಮಿಯಾಗತೊಡಗುತ್ತದೆ. ಗ್ರಾಮಗಳನ್ನು ನಾಶಮಾಡುತ್ತ  ನಗರಗಳನ್ನು ಸೃಷ್ಟಿಸುತ್ತ ಸಾಗಿದಂತೆ ಗ್ರಾಮವೊಂದೇ ಅಲ್ಲ ಕಾಡುಗಳೂ ನೆಲಸಮ ಗೊಳ್ಳುತ್ತವೆ. ಕಾಡುತನ ಮಾತ್ರ ಮನುಷ್ಯನಲ್ಲಿ ಉಳಿದುಕೊಳ್ಳುತ್ತದೆ. ಸದ್ಯ ನಾವು ಅದೇ ಕಾಡುತನದ ಸ್ಥಿತಿಯನ್ನ ಕಾಣತೊಡಗಿದ್ದೇವೆ.
ಈ ಸಂದರ್ಭದಲ್ಲಿ ಒಂದು ರೂಪಕ ನೆನಪಾಗುತ್ತಿದೆ.  ಟಿಪ್ ಟಾಪಾಗಿ ಡ್ರೆಸ್ ಮಾಡಿದ ಒಬ್ಬ ಹುಚ್ಚ ಒಂದು ದಿನ ಬಹುಮಹಡಿ ಕಟ್ಟಡವನ್ನೇರುತ್ತಾನೆ. ಅಲ್ಲಿ ಅಂಬೆಗಾಲಿಕ್ಕುತ್ತಿದ್ದ ಒಂದು ಮಗುವನ್ನು ಎತ್ತಿಕೊಳ್ಳುತ್ತಾನೆ.  ಟೆರೇಸಿನ ಅಂಚಿಗೆ ಬಂದು ನಿಂತು ಮಗುವನ್ನು ಕೈಯಿಂದ ಎತ್ತಿ ಹಾರಿಸಿ ಹಿಡಿಯುತ್ತ ಆಟವಾಡಿಸತೊಡಗುತ್ತಾನೆ.  ಕಟ್ಟಡದಲ್ಲಿ ಮತ್ತು ಕಟ್ಟಡದ ತಳದಲ್ಲಿ ನಿಂತ ಜನ ನೋಡುತ್ತ ಚಪ್ಪಾಳೆಯಿಕ್ಕಿ ಖುಷಿಪಡತೊಡಗುತ್ತಾರೆ. ಹುಚ್ಚ ಮಗುವನ್ನು ಆಡಿಸುತ್ತ ಅಷ್ಟೆತ್ತರದಿಂದ ಕೈಬಿಟ್ಟು ಅಟ್ಟಹಾಸದಿಂದ ನಗತೊಡಗುತ್ತಾನೆ.  ಮಗು ಎತ್ತರದಿಂದ ಕೆಳಬಿದ್ದು ಸತ್ತು ಚೂರು ಚೂರಾಗುತ್ತದೆ. ಈಗ ಜಗತ್ತಿಗೆ ಆಧುನಿಕತೆಯ ಮತ್ತು ಅಭಿವೃದ್ಧಿಯ ಅದ್ಭುತ ಹುಚ್ಚು ಹಿಡಿದಿದೆ.  ಮನುಷ್ಯನ ಸಂವೇದನೆಯನ್ನೇ ಅಭಿವೃದ್ಧಿ ಎಂಬ ಹುಚ್ಚ ಎತ್ತಿ ಆಡಿಸುತ್ತಿದ್ದಾನೆ.  ಅಭಿವೃದ್ಭಿ ಮತ್ತು ವಿಕಾಸ  ಈ ಎರಡರ ನಡುವಿನ ಅಂತರವನ್ನೇ ಅರಿಯಲಾರದಷ್ಟು ಜಡ್ಡುಗಟ್ಟಿರುವ ವರ್ತಮಾನದ ಬದುಕಿಗೆ  ವಿಚಿತ್ರವಾದ ವಿಸ್ಮೃತಿ ಕಾಡುತ್ತಿದೆ. ವಿಜ್ಞಾನವೆಂಬ ಹೆಸರಿನ ತಂತ್ರಜ್ಞಾನ,   ಸೃಷ್ಟಿಸಿ ರಾಶಿಹಾಕಿರುವ ಅಸಂಖ್ಯಾತ ಐಷಾರಾಮೀ ಸಾಮಗ್ರಿಗಳೆದುರು ಮನುಷ್ಯ ಬೆರಗಿನಲ್ಲಿ ಮೈಮರೆತು ಬಿಟ್ಟಿದ್ದಾನೆ. ಕಾರು ಬಂಗಲೆ ವೇಷ ಭೂಷಣ, ಮನರಂಜನೆ, ಯ ಹಪಾಹಪಿಯಲ್ಲಿ ತನ್ನತನವನ್ನೇ ಕಳೆದುಕೊಳ್ಳತೊಡಗಿ ದ್ದಾನೆ. ಇವುಗಳನೆಲ್ಲ ಪಡೆದೇತೀರುವ ಛಲದಲ್ಲಿ ನೈತಿಕತೆಯನ್ನ ಮಾನವ ಸಂಬಂಧಗಳನ್ನ ತೊರೆದು ನಗ್ನಗೊಳ್ಳುತ್ತಿದ್ದಾನೆ. ಹಣ ಮತ್ತು ಅಧಿಕಾರ ಪಡೆಯುವ ಹೋರಾಟ ಮಾತ್ರ ಜೀವನ ಎಂದೆನ್ನಿಸಿಕೊಳ್ಳುವ ಸ್ಥಿತಿ ಈಗ ನಿರ್ಮಾಣಗೊಳ್ಳುತ್ತಿರುವುದು  ಇಂದಿನ ದುರಂತವಾಗಿದೆ. 

ಆಧುನಿಕ ಶಿಕ್ಷಣವೂ ಇದಕ್ಕೆ ಒತ್ತು ನೀಡುತ್ತಿದೆ. ಮೂಲಭೂತ ಸಂಸ್ಕೃತಿ  ಸ್ವಂತ ಪರಿಸರ ಗಳ ಬಗೆಗೆ ಕುರುಡಾಗಿರುವ ಶಿಕ್ಷಣ ವ್ಯವಸ್ಥೆ ಮಗುವಿನಲ್ಲಿ ಅಜೀರ್ಣವಾಗುವಷ್ಟು ಮಾಹಿತಿ ತುಂಬತೊಡಗಿದೆ. ವ್ಯಕ್ತಿತ್ವ ವಿಕಾಸಕ್ಕೆಒತ್ತು ಕೊಡುವ ಬದಲು  ವ್ಯಕ್ತಿಯನ್ನ ಮತ್ತೊಂದು ಯಂತ್ರವಾಗಿಸುವ ಕೈಂಕರ್ಯದಲ್ಲಿ ತೊಡಗಿದೆ. ನಮ್ಮ ಸುತ್ತಲಿನ ಪರಿಸರ ಮತ್ತು ಸಂಸ್ಕೃತಿ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಬೇಕಾದರೆ, ನಮಗೆನಮ್ಮ ನೆಲದ ಸಾನ್ನಿಧ್ಯ ಅತ್ಯಂತ ಅವಶ್ಯ. ಆಧುನಿಕತೆ ನೆಲದ ಸಂಪರ್ಕದಿಂದಲೇ ನಮ್ಮನ್ನು ದೂರಗೊಳಿಸಿದೆ.ಮನೆಯಿಂದ ಹೊರಬಿದ್ದಕೂಡಲೇ ಮಗು ವಾಹನವಿಲ್ಲದೇ ಶಾಲೆಗೆ ಹೊರಡಲಾರದು. ಮನೆಯಿಂದ ಶಾಲೆವರೆಗಿನ
ಸುತ್ತಲಿನ ಮರ ಗಿಡ ಹೂ ಬಳ್ಳಿ ಪಶು ಪಕ್ಷಿ ಮತ್ತು ಸಮುದಾಯದ ಜೀವನ ವಿಧಾನ ತನ್ನಂತಾನೇ ಮಗುವಿನ ಕಣ್ಣಿಗೆ ಬೀಳುತ್ತಿತ್ತು.  ಆಧುನಿಕತೆ ಎಂದರೆ ಐಷಾರಾಮಿತನ  ಆಧುನಿಕತೆ ಎಂದರೆ ಶ್ರಮರಹಿತ ಜೀವನ, ಎಂಬುದೇ ಪ್ರಧಾನ ಮೌಲ್ಯವಾಗಿ ಮಗುವಿನ ಮುಗ್ಧ ಕಣ್ಣಿಗೆ ಕಂಡರೆ ಆಶ್ಚರ್ಯವಿಲ್ಲ. ಅದು ಮಗುವಿನ ತಪ್ಪಲ್ಲ. ಇಡಿ ಸಮುದಾಯದ ನಡಿಗೆ ಯೇ  ಆಕಾಶದಲ್ಲಿ ನಡೆಯುತ್ತಿದೆ. ಯಾವ ಮನುಷ್ಯನೂ ದಿನಕ್ಕೆ ಒಂದು ಮೈಲಿ ನೆಲದ ಮೇಲೆ ನಡೆಯಲಾರ. ನಡೆದಾಡುವ ಮನುಷ್ಯ ಕೀಳು, ವಾಹನ ಸವಾರ ಶ್ರೇಷ್ಟ ಎಂಬ ಅಲಿಖಿತ ನಿಯಮವೇ ಸೃಷ್ಟಿಯಾಗಿರುವುದು ಕ್ರೂರ ವಾಸ್ತವ. 
ಇಂದಿನ ಮನುಷ್ಯನಿಗೆ ಈ ನೆಲ ಈ ಮಣ್ಣು ಕೇವಲ ವೈಭೋಗ ವಸ್ತು ಅಷ್ಟೆ. ಆತ ಈಗಾಗಲೇ ಕುಂಡದಲ್ಲಿಬೆಳೆಸಿಟ್ಟ ಗಿಡವಾಗಿಬಿಟ್ಟಿದ್ದಾನೆ. ಈಭೂಮಿ  ಈ ಮಣ್ಣು ಮಾನಸಿಕವಾಗಿ ದೂರಗೊಳ್ಳುತ್ತಿದೆ.ನಮ್ಮ ದೇಶದ ತತ್ವ ಸತ್ವ ಮತ್ತು ಸ್ವತ್ವ ಈಮೂರೂ ಹುಟ್ಟಿದ್ದು ಬೆಳೆದದ್ದು ಮತ್ತು ಬಾಳಿದ್ದು ಅರಣ್ಯ ಪರಿಸರದಲ್ಲಿ ಎಂಬುದನ್ನ ನಾವು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.  ಸಾಹಿತ್ಯ ಸಂಗೀತ ಕಲೆ ಗಳೆಲ್ಲ ಬೆಳೆದು ಬೆಳೆದು ಒಂದು ತುದಿ ತಲುಪಿದಾಗ ಯಾಂತ್ರಿಕಗೊಳ್ಳುತ್ತದೆ. ಮತ್ತೆ ಸತ್ವ ತುಂಬಿಕೊಳ್ಳಲು  ಜಾನಪದಕ್ಕೆ ಶರಣಾಗಬೇಕಾಗುತ್ತದೆ. ಅದೇ ರೀತಿ ಬದುಕು ಅತಿ ಆಧುನಿಕ ಗೊಳ್ಳುತ್ತ ಸಾಗಿದಂತೆ ಖಾಲಿತನ ಜಿಗುಪ್ಸೆ ನಿರಾಶೆ ಮುತ್ತಿಕೊಳ್ಳುತ್ತದೆ. ಆಗ ಮತ್ತೆ ಹೊಸ ಚೈತನ್ಯ  ಹೊಸ ಸತ್ವ ದ ಪೂರೈಕೆಯಾಗದಿದ್ದರೆ, ಅದು ಸತ್ತ ಬದುಕಾಗುತ್ತದೆ. ಆಗ ಉಳಿಯುವುದು ಒಂದೇ ಮಾರ್ಗ, ತನ್ನ ಮೂಲದ ಗ್ರಾಮ ಮತ್ತು ಅರಣ್ಯಕ್ಕೆ ಮರಳುವದು. ಶುದ್ಧ ಮಾನವೀಯ ಗಾಳಿ ಬೆಳಕುಗಳನ್ನ ಆಸ್ವಾದಿಸುವುದು.
 ಆದರೆ ಯಾವ ಪರಿಸರ ನಮ್ಮ ಮನುಷ್ಯತ್ವವನ್ನು ನೆನಪಿಸುವುದೊ, ಯಾವ ಅರಣ್ಯ ನಮ್ಮ ದೇಶೀಯ ಚಿಂತನೆಗೆ ಇಂಬಾಗುವುದೋ, ಅದೇ ನಮ್ಮ ಅಜ್ಞಾನದಿಂದ, ಕ್ಷಣಿಕ ದುರಾಸೆಯಿಂದ ಸರ್ವನಾಶವಾಗುತ್ತಿರುವುದುಬಹು ದೊಡ್ಡ ದುರಂತ.
                        ಮಂಜಾದ ಕಣ್ಣಲ್ಲೇ, ಕಟ್ಟಿದ ಕಿವಿಯಲ್ಲೇ
                        ನಾ ಒಳಗೆ ಕಟ್ಟಿರುವೆ ನಿನ್ನನ್ನು
                        ನೀ ಮತ್ತೆ ಊದಿದರೆ ನಾ ಹೇಗೆ ತಾಳಲಿ ?
                        ನಾ ಹೇಗೆ ಕಟ್ಟಲಿ ನನ್ನನ್ನು ??
                                            [ ಗ. ಸು. ಭಟ್ಟ ]


                                                              sಸುಬ್ರಾಯ ಮತ್ತೀಹಳ್ಳಿ