Friday 29 September 2023

ಪಾರತಂತ್ರ್ಯದ ಪುನರ್ಮನನ (ಮುನ್ನುಡಿ)

 

                                         ಗಾಂಧಿಯೇ  ಗುರು  ಹಿಂದಮಾತೆಯ

                                         ಗಾಂಧಿಯೇ ಸಿರಿ  ಮಾರ್ಗದರ್ಶಕ

                                         ಗಾಂಧಿಯೇ  ಆಸರೆಯು  ಗಾಂಧಿಯೇ  ಶಾಂತಿಯಾಗರವು |

                                         ಗಾಂಧಿಯಾದರ್ಶವನು ಮರೆಯೆನು

                                         ಅಂಧನಂದದಿ  ನಲಿವ  ನಿಜದಲಿ

                                         ಗಾಂಧಿಯಂತಿಹರಾರು  ಜಗದಲಿ  ನಮಗೆ  ಹಿತದವರು.||        

                                                                               ( ಸಗುಣ  ಹಬ್ಬು- ೧೯೩೫ )

      ಬದಲಾದ  ಜೀವನ ದೃಷ್ಟಿ,  ಜೀವನ ವಿಧಾನ,  ಆಧುನಿಕತೆಯ  ಮಹಾ ಮಾಯಾಪ್ರಪಂಚ,  ಜಾಗತೀಕರಣ,  ಮತ್ತೂ  ತಂತ್ರಜ್ಞಾನ  ನೀಡುತ್ತಿರುವ  ಅಸಂಖ್ಯಾತ  ಆಮಿಷಗಳ ನಡುವೆ,  ಮನುಷ್ಯಸಂಬಂಧ,  ಮತ್ತು ಮಾನವೀಯ ಮೌಲ್ಯಗಳನ್ನು  ಹೊಸದಾಗಿ  ಹುಡುಕಬೇಕಾದ  ಪ್ರಸ್ತುತ  ಯಾಂತ್ರಿಕ  ವಾಸ್ತವದಲ್ಲಿ,   ಮಾತೃಭೂಮಿಯ  ಮರೆತುಹೋದ  ಚರಿತ್ರೆಯನ್ನು  ಆಳವಾಗಿ  ಧ್ಯಾನಿಸುತ್ತಿರುವ  ಅಪರೂಪದ ಲೇಖಕ   ಶ್ರೀಪಾದ  ಹೆಗಡೆ  ಮಗೇಗಾರು,  ಇತ್ತೀಚಿನ  ದಿನಗಳಲ್ಲಿ  ಗಮನಸೆಳೆಯುತ್ತಿದ್ದಾರೆ.

      ಚರಿತ್ರೆಮರೆತ  ಮನಸ್ಸು  ಎಂದೂ  ಭವಿಷ್ಯವನ್ನು  ಕಟ್ಟಲಾರದು.  ಭೂತದ ಪ್ರಜ್ಞೆ, ಭವಿಷ್ಯದ  ಕನಸು    ಎರಡೂ ಇಲ್ಲದ  ವ್ಯಕ್ತಿ ಯ  ವರ್ತಮಾನ  ಶುಷ್ಕವಾಗುತ್ತದೆ.  ಬದುಕು  ಯಾಂತ್ರಿಕ ಗೊಳ್ಳುತ್ತದೆ.   ಹುಟ್ಟು  ಮತ್ತು  ಸಾವುಗಳ  ನಡುವಣ  ಬದುಕು,  ಕೇವಲ  ನಡೆದಾಡುವ  ಯಂತ್ರವಾಗುತ್ತದೆ.   ಅಂಥ  ವ್ಯಕ್ತಿತ್ವದ  ಯಾವ  ಹೆಜ್ಜೆ ಗುರುತೂ  ಮಣ್ಣಿನಲ್ಲಿ  ಮೂಡದೇ  ಜೀವನ  ವ್ಯರ್ಥಗೊಳ್ಳುತ್ತದೆ.   ಇಂಥಹ  ವಿಷಾದಪೂರ್ಣ  ಆಧುನಿಕ  ಜೀವನದ  ಬಣ್ಣ  ಬೆಡಗುಗಳ  ಮಾಯೆಯಲ್ಲಿ  ನಾವಿಂದು ಉಸಿರಾಡುತ್ತಿದ್ದೇವೆ.

       ತಾತ್ವಿಕ  ಮೌಲ್ಯದಿಂದ  ದೂರವಾಗಿ,  ಮಾನವ ಸಂಬಂಧಗಳೆಲ್ಲ ವ್ಯಾಪಾರವಾಗಿ,  ಕ್ಷಣಿಕ  ವೈಭೋಗಕ್ಕೆ  ದಾಸರಾಗಿರುವ  ಆಧುನಿಕ ಜೀವನ ಪ್ರವಾಹಕ್ಕೆ   ಕೊಂಚ  ವಿರಾಮನೀಡಿ,  ಚರಿತ್ರೆಯ  ಅಯೋಮಯ   ಅಂಗಣಕ್ಕೆ   ಕರೆದೊಯ್ಯುವ  ಅರ್ಥಪೂರ್ಣ  ಕೆಲಸ  ಇತ್ತೀಚಿನ  ದಿನಗಳಲ್ಲಿ   ಅಲ್ಲಲ್ಲಿ  ಜರುಗುತ್ತಿರುವುದು,  ನಿಜಕ್ಕೂ  ಹೊಸ ಆಶಾವಾದದ  ದೀಪವಾಗಿ  ತೋರುತ್ತಿದೆ.

      ನಮ್ಮ  ಜಿಲ್ಲೆಯ  ಇತ್ತೀಚಿನ  ಚರಿತ್ರೆಯಾಧಾರಿತ  ಸೃಜನಶೀಲ  ಚಟುವಟಿಕೆಗಳನ್ನು  ಗಮನಿಸಿದರೆ   ನಮ್ಮನ್ನು  ಆಕರ್ಷಿಸುವ,  ಬೆಚ್ಚಿಬೀಳಿಸುವ,  ಚುಚ್ಚಿ ಎಚ್ಚರಿಸುವ   ಹಲವಾರು  ಸಾಹಿತ್ಯಕೃತಿಗಳು  ಪ್ರಕಟಗೊಳ್ಳುತ್ತಿವೆ.   ಗಜಾನನ ಶರ್ಮರ   ಪುನರ್ವಸು,  ಚನ್ನಭೈರಾದೇವಿ,   ಹಿಚಕ ಡ  ಶಾಂತಾರಾಮ  ನಾಯಕರ  ಹಲವು ಕೃತಿಗಳು,    ಲಕ್ಷ್ಮೀಶ್‌  ಸೋಂದಾ ರವರ,  ಸೋದೆ  ಅರಸರ  ಚಾರಿತ್ರಿಕ  ವೈಭವ,  ವಿ.ಟಿ. ಹೆಗಡೆಯವರ  ʻʻತಲೆಗಳಿʼʼ   ಶಿವಾನಂದ  ಕಳವೆಯವರ,  ಪರಿಸರ ನಿಷ್ಠ  ಕಾದಂಬರಿ ( ಮಧ್ಯ ಘಟ್ಟ)  ಮುಂತಾದ  ಕೃತಿಗಳು   ಕುತೂಹಲ  ಕೆರಳಿಸುತ್ತಿವೆ.

     ಇವುಗಳ  ಜೊತೆ ಜೊತೆಗೇ   ಶ್ರೀಪಾದ  ಹೆಗಡೆಯವರು,   ಕರ್ನಾಟಕದ   ಬಾರ್ಡೋಲಿಯಾದ  ಸಿದ್ದಾಪುರ  ತಾಲುಕಿನ  ಸ್ವಾತಂತ್ರ್ಯ ಹೋರಾಟದ  ನೋವು  ತಲ್ಲಣದ ಮಾರ್ಮಿಕ  ಚರಿತ್ರೆಯನ್ನೇ  ತಮ್ಮ ಅಭಿವ್ಯಕ್ತಿ  ಮಾಧ್ಯಮವಾಗಿ  ಸ್ವೀಕರಿಸಿಕೊಂಡು,  ಇತಿಹಾಸದ  ತಲಸ್ಪರ್ಶೀ  ಅಧ್ಯಯನದಲ್ಲಿ  ನಿರತರಾಗಿದ್ದಾರಲ್ಲದೇ,   ʻʻ ದೇವಿಯ ದೀವಿಗೆʼʼ ಪಸರಿಸಿದ  ಬೆಳಕಿನಲ್ಲಿ,  ʻʻ ಕಂಗಿನಂಗಳದಲ್ಲಿʼʼ   ಕ್ರಾಂತಿಯ ಕಿಡಿ,  ಮುಂತಾದ  ನಾಟಕ ಕೃತಿಗಳ  ಸೃಷ್ಟಿಯ  ಮೂಲಕ,  ಇತಿಹಾಸ ಪ್ರಿಯರ  ಪ್ರೀತಿಗಳಿಸಿದ್ದಾರೆ.  ʻʻʻತೊಟ್ಟಿಲ  ತೂಗುವವರು  ಹೋರಾಟದ ಮೆಟ್ಟಲೇರಿದಾಗ ʼʼ  ಎಂಬ  ಪ್ರಬಂಧದಲ್ಲಿ,  ಸಿದ್ದಾಪುರದ  ವೀರ ವನಿತೆಯರ  ಸ್ವಾತಂತ್ರ್ಯ ಹೋರಾಟದ  ನೈಜಚಿತ್ರಣವನ್ನು  ಇದೇ  ಪ್ರಥಮಬಾರಿ  ದಾಖಲಿಸಿದ್ದಾರೆ.

     ಇತಿಹಾಸದ  ಘಟನೆಗಳು  ದಾಖಲೆ  ಸೇರುವುದು  ಸಹಜ. ಆದರೆ  ಅಷ್ಟುಮಾತ್ರಕ್ಕೆ  ಇತಿಹಾಸ  ಜನಮಾನಸದಲ್ಲಿ  ಸಂಚಲನ  ಮೂಡಿಸಲಾರದು.   ಇತಿಹಾಸ  ಬೆನ್ನೆಲುಬಾಗಿ   ಕತೆ, ಕಾವ್ಯ, ನಾಟಕ  ಕಾದಂಬರಿ   ಮಾಧ್ಯಮಗಳಲ್ಲಿ,  ಜೀವಂತವಾಗಿ  ರೋಚಕವಾಗಿ  ಮೂಡಿಬರಬೇಕು.  ಕಿತ್ತೂರ  ಚೆನ್ನಮ್ಮ, ಟೀಪೂ  ಸುಲ್ತಾನ್‌,  ಹೆಂಜಾ ನಾಯಕ,  ಮದುಕರಿ ನಾಯಕ, ಸಂಗೊಳ್ಳಿ ರಾಯಣ್ಣ....................................  ಮುಂತಾದ  ಸ್ವಾತಂತ್ರ್ಯ ಹೋರಾಟಗಾರರೆಲ್ಲ  ದಾಖಲೆಯಿಂದ  ಎದ್ದು  ಹೊಸ ಸೃಜನಶೀಲ ಹುಟ್ಟು ಪಡೆದ  ಕಾರಣದಿಂದಲೇ   ಜನಮಾನಸದಲ್ಲಿ  ಚಿರಾಯುವಾಗಿ  ಉಳಿದಿದ್ದಾರೆ.

    ಸಿದ್ದಾಪುರವೂ  ಸಹ  ಸ್ವಾತಂತ್ರ್ಯ  ಹೋರಾಟದಲ್ಲಿ  ರಾಜ್ಯದ  ಗಮನಸೆಳೆದಿದ್ದು,  ಮಹಾತ್ಮಾಗಾಂಧಿಯವರೂ  ಸೇರಿ  ರಾಷ್ಟ್ರ ನಾಯಕರುಗಳಿಂದ  ಮುಕ್ತಕಂಠದ  ಶ್ಲಾಘನೆಗೆ   ಕಾರಣವಾಗಿದ್ದು  ಇಲ್ಲಿಯ  ಸಾವಿರಾರು   ಸತ್ಯಾಗ್ರಹಿಗಳ  ತ್ಯಾಗದಿಂದ  ಎಂಬುದನ್ನು  ನಾವು  ಮರೆಯುವ  ಹಾಗಿಲ್ಲ.  

      ಹಾಗೆಯೇ  ಇಪ್ಪತ್ತನೆಯ  ಶತಮಾನದ   ಆದಿ  ಭಾಗದಲ್ಲಿ   ತಮ್ಮ ಬದುಕನ್ನೇ  ಹೋರಾಟಕ್ಕೆ  ಮೀಸಲಾಗಿಟ್ಟ,   ದೊಡ್ಮನೆ  ನಾಗೇಶ  ಹೆಗಡೆ,   ಬೇಡ್ಕಣಿಯ  ಚೌಡಾ  ನಾಯಕ,  ತ್ಯಾಗಲಿ  ಭುವನೇಶ್ವರಮ್ಮ,  ಕಲ್ಲಾಳದ  ಲಕ್ಷ್ಮೀದೇವಮ್ಮ,  ಹಸಲರ ದೇವಿ,  ನಾಗೇಶ  ಹೆಗಡೆ  ಕೆಳಗಿನಮನೆ  ನರಸಿಂಹ  ಹೆಗಡೆ  ಮಗೇಗಾರು,  ಮುಂತಾದ  ಇನ್ನೂ  ಅನೇಕರ  ಹೋರಾಟದ  ಆಸಕ್ತಿಪೂರ್ಣ  ಕತೆಗಳು   ದಂತಕತೆಗಳಾಗಿ  ಇನ್ನೂ  ಜನರ ಬಾಯಿಯಲ್ಲಿ  ನಲಿದಾಡುತ್ತಿವೆ. 

   ಈ ಸಾಲಿನಲ್ಲಿ  ತಮ್ಮ ಸೈದ್ಧಾಂತಿಕ  ನಡೆನುಡಿ,  ತಾತ್ವಿಕ ಬದ್ಧತೆ,  ಮತ್ತು ಅಂಹಿಸಾ ಮಾರ್ಗದ  ಪ್ರತಿಪಾದಕರಾಗಿ,   ಸುತ್ತಲಿನ  ಎಲ್ಲ ಸಮುದಾಯಗಳ  ಪೂಜನೀಯ ವ್ಯಕ್ತಿಯಾಗಿ  ಬದುಕಿ  ಬಾಳಿದ ʻʻ ತಿಮ್ಮಯ್ಯ  ಹೆಗಡೆ  ಹೂವಿನ ಮನೆ ʼʼ ಯವರು    ನೆಲದ  ಇತಿಹಾಸದಲ್ಲಿ  ತಮ್ಮದೇ  ಆದ  ವಿಶಿಷ್ಟಹೆಜ್ಜೆ  ಮೂಡಿಸಿದ್ದಾರೆ.

     ಅಸಾಮಾನ್ಯ  ಧೈರ್ಯ  ಸಾಹಸ  ಮೆರೆದು,  ಬ್ರಿಟಿಶರ   ದಬ್ಬಾಳಿಕೆಗೆ  ಎದೆಯೊಡ್ಡಿ  ಸ್ವಾತಂತ್ರ್ಯಕ್ಕಾಗಿ   ಹೋರಾಡಿದ   ಹತ್ತಾರು  ಅದ್ಭುತ  ವ್ಯಕ್ತಿಗಳು  ಇಲ್ಲಿ  ಆಗಿ  ಹೋಗಿದ್ದಾರೆ.  ಅವರೆಲ್ಲರೂ  ಸಹ,  ನಮ್ಮ  ಸೃಜನಶೀಲ  ಅಂಗಣಕ್ಕೆ,  ಕತೆಯಾಗಿ  ಕಾವ್ಯವಾಗಿ  ಕಾದಂಬರಿಯಾಗಿ  ಮೂಡಿಬರಬೇಕಿದೆ. 

    ಒಂದು ದೃಷ್ಟಿಯಲ್ಲಿ   ಶ್ರೀಪಾದ  ಹೆಗಡೆ  ಮಗೆಗಾರರ  ಮೂಲಕ   ಸ್ವಾತಂತ್ರ್ಯ ಹೋರಾಟಗಳ  ಮರೆತು ಹೋಗಿದ್ದ  ಅಧ್ಯಾಯಗಳು,  ಮತ್ತೆ ಮತ್ತೆ  ಜೀವ ಪಡೆಯುತ್ತಿರುವುದು  ನಿಜಕ್ಕೂ  ಸಂತಸ  ತರುವ  ಕ್ಷಣವಾಗಿದೆ.

      ತಮ್ಮ ಪ್ರಸ್ತುತ  ʻʻ ತಪ್ಪದ  ತೋಲನʼʼ  ಕೃತಿಯ  ಪ್ರಾರಂಭದಲ್ಲಿಯೇ  ʻʻ ಇತಿಹಾಸದ  ಅರಿವಿನಲ್ಲಿ, ಸಾಹಿತ್ಯದ  ಅಭಿವ್ಯಕ್ತಿಯಲ್ಲಿ,  ನಾನಿನ್ನೂ ಶಿಶುವೇ. ಭಾಷೆಯಮೇಲಿನ  ಹಿಡಿತ  ಕಥೆ,  ಕಾದಂಬರಿಯ  ತಂತ್ರಗಾರಿಕೆ  ಕಲಾತ್ಮಕ ನಿರೂಪಣೆ,  ಶೈಲಿ, .. ಇವೆಲ್ಲ ನನಗೆ ಕರಗತವಾಗಿಲ್ಲ. ಇತಿಹಾಸ ಮತ್ತು ಕಥೆ- ಸಾಹಿತ್ಯಗಳನ್ನು ಸಮನ್ವಯಗೊಳಿಸಿ  ಪುನರ್‌  ಸೃಷ್ಟಿಸುವ  ಕೌಶಲ್ಯ  ನನಗೆ ರೂಢಿಸಿಲ್ಲ.  ಬರೆಯಲೇಬೇಕೆಂಬ  ಮನದಾಳದ ತುಡಿತ ಮಾತ್ರ  ಕೃತಿಯನ್ನು ರಚಿಸಲು ನನಗೆ  ಪ್ರೇರಣೆ ನೀಡಿದೆ ʼʼ  ಎಂದು  ವಿನಮ್ರವಾಗಿ  ನಿವೇದಿಸಿಕೊಂಡ,  ಶ್ರೀಪಾದ  ಹೆಗಡೆಯವರು    ಯಶಸ್ವೀಯಾಗಿ,  ಕಾಲಯಂತ್ರದಲ್ಲಿ  ನಮ್ಮನ್ನು  ಕುಳ್ಳಿರಿಸಿ,   ಕರನಿರಾಕರಣೆಯ  ಕಾಲಕ್ಕೆ  ಕೊಂಡೊಯ್ಯುತ್ತಾರೆ.  ಇದೇ  ಮಣ್ಣಲ್ಲಿ ನಡೆದಾಡಿ,  ಇದೇ  ಗಾಳಿಯನ್ನು ಉಸಿರಾಡಿ,  ತನ್ನ ತೋಟ  ಮನೆ  ಕೈಬಿಟ್ಟರೂ,  ಕುಟುಂಬವೆಲ್ಲ  ಕಷ್ಟ ಕಾರ್ಪಣ್ಯದಲ್ಲಿ  ಬೆಂದರೂ,  ತಾವು ನೆಚ್ಚಿದ  ಸೈದ್ಧಾಂತಿಕತೆಯನ್ನು  ತೊರೆಯದೇ   ಬದುಕಿ ಬಾಳಿದ  ಸಾತ್ವಿಕ  ಹೋರಾಟಗಾರ  ʻʻ ಹೂವಿನಮನೆ  ತಿಮ್ಮಯ್ಯ  ಹೆಗಡೆ ʼʼ ಯವರ  ಪಾತ್ರವನ್ನು  ಪುನಃಸೃಷ್ಟಿಸುತ್ತಾರೆ.  

       ನಮ್ಮ ನಡುವೆ  ಉನ್ನತ  ಚಿಂತಕರಾಗಿ,  ಸಿದ್ದಾಪುರದ  ಸ್ವಾತಂತ್ರ್ಯಹೋರಾಟದ  ರೋಮಾಂಚನಕಾರೀ  ಇತಿಹಾಸದ  ಬಗೆಗೆ  ಪ್ರಭುತ್ವಪೂರ್ಣವಾಗಿ  ಮಾತನಾಡುತ್ತಿದ್ದ  ದಿ. ಆರ್.ಪಿ. ಹೆಗಡೆ  ಯವರ  ಕನಸೇ  ಇದಾಗಿತ್ತು.  ನಮ್ಮ  ಮಣ್ಣಿನ  ಅನನ್ಯ  ಹೋರಾಟದ  ಅನುಪಮ  ಸಂಗತಿಗಳು    ಕೇವಲ  ದಾಖಲೆಗಳ  ಕಡತದಲ್ಲೇ  ಕೊಳೆಯದೇ,  ಸೃಜನಶೀಲ  ಕ್ಷೇತ್ರದಲ್ಲಿ  ಜೀವಪಡೆಯಬೇಕು.  ಎಂದು ಸದಾ  ಹೇಳುತ್ತಿದ್ದರು.   ಅವರ  ಕನಸು  ಇದೀಗ  ನನಸಾಗಲು  ಪ್ರಾರಂಭಗೊಂಡಿದೆ.

     ಕೆಲವು ದಶಕದ  ಹಿಂದೆಯೇ,  ದಿ. ಆರ್  ಎಸ್.‌ ಭಟ್.‌ ಶಿರಳಗಿ  ಯವರು,  ಸ್ವಾತಂತ್ರ್ಯಹೋರಾಟಗಾರ  ಚೌಡಾ  ನಾಯಕರ  ಬಗೆಗೆ  ಲೇಖನವೊಂದನ್ನು ಪ್ರಕಟಿಸಿ  ಗಮನಸೆಳೆದಿದ್ದರು.   ನಂತರದ ದಿನಗಳಲ್ಲಿ ಇದೇ  ಎಸ್.ವಿ. ಹೆಗಡೆಯವರು ಚೌಡಾ ನಾಯಕರ  ಜೀವನ ಸಂಗ್ರಾಮದ  ಕಥನವನ್ನು  ಕಿರು ನಾಟಕವನ್ನಾಗಿ  ರೂಪಿಸಿ  ಪ್ರದರ್ಶಿಸಿದ  ಘಟನೆ  ನೆನಪಿಗೆ ಬರುತ್ತಿದೆ.  ಗೌರೀಶ್‌  ಕೈಕಿಣಿ  ಹಸಲರ್‌ ದೇವಿಯ  ತ್ಯಾಗಮಯ  ಕಥನವನ್ನು  ರೇಡಿಯೋ  ನಾಟಕವನ್ನಾಗಿ  ಸೃಷ್ಟಿಸಿದ್ದು   ಬಿಟ್ಟರೆ,  ಸಿದ್ದಾಪುರದ   ಸ್ವಾತಂತ್ರ್ಯಹೋರಾಟದ  ದಾಖಲಿಸಲೇ  ಬೇಕಾದ  ಸಾಕಷ್ಟು  ಮಾರ್ಮಿಕ  ಘಟನೆಗಳು ಇನ್ನೂ  ಕಡತದಲ್ಲೇ  ಉಳಿದಿವೆ.  ಅದೇ  ದೇವಿ  ಶ್ರೀಪಾದ  ಹೆಗಡೆಯವರ  ಮೂಲಕವೂ  ಮತ್ತೆ  ನಾಟಕವಾಗಿ,  ಹಲವು ಪ್ರದರ್ಶನಗೊಂಡಿದ್ದಲ್ಲದೇ  ಆಕಾಶವಾಣಿಯಲ್ಲೂ  ಯಶಸ್ವೀಯಾಗಿ  ಪ್ರಸಾರಗೊಂಡಿದೆ.  

      ಪ್ರಸ್ತುತ  ʻʻತಪ್ಪದ  ತೋಲನ ʼʼ  ಕಾದಂಬರಿ  ಸಿದ್ದಾಪುರ  ತಾಲೂಕಿನ  ತಿಮ್ಮಯ್ಯ  ಹೆಗಡೆ  ಕುಟುಂಬವೊಂದನ್ನು  ಕೇಂದ್ರವಾಗಿರಿಸಿಕೊಂಡು,   ಇಡೀ  ದೇಶದ  ಸ್ವಾತಂತ್ರ್ಯಹೋರಾಟದ   ದಾರುಣ  ಇತಿಹಾಸವನ್ನು  ಪುನಃಸೃಷ್ಟಿಸುವ  ಮಹತ್ವಾಕಾಂಕ್ಷೆಯನ್ನು  ಹೊಂದಿದೆ.   ತಿಮ್ಮಯ್ಯ  ಹೆಗಡೆ ಯವರ  ಅಪ್ರತಿಮ  ವ್ಯಕ್ತಿತ್ವದ   ಮೆರಗು  ಇನ್ನೂ  ಜನಮಾನಸದಲ್ಲಿ  ಮರೆಯಾಗಿಲ್ಲ. ಅವರ  ನಂತರದ  ಮೂರು  ತಲೆಮಾರುಗಳ  ಒಡಲಲ್ಲೂ  ಅನುರಣಿಸುತ್ತಲೇ  ಇದೆ.   ಅವರು  ಸಾಂಪತ್ತಿಕವಾಗಿ  ಶ್ರೀಮಂತರೊಂದೇ  ಅಲ್ಲ,  ಅಂತರಂಗದಲ್ಲೂ  ಅಷ್ಟೇ  ಸಮೃದ್ಧ  ಮಾನವ ಪ್ರೀತಿಯನ್ನು ತುಂಬಿಕೊಂಡ, ಗುಣ ಶ್ರೀಮಂತರು. ಅದರ  ಜೊತೆಗೆ  ಮಹಾತ್ಮಾಗಾಂಧಿಯವರ  ತಾತ್ವಿಕತೆ  ನಡೆ ನುಡಿಗಳನ್ನು  ಕಾಯಾ  ವಾಚಾ ಮನಸಾ ಅನ್ವಯಿಸಿಕೊಂಡವರು.  ಜಾತ್ಯತೀತವಾಗಿ  ತಮ್ಮ  ಸಂಬಂಧಗಳನ್ನು  ಸ್ಥಾಪಿಸಿ  ಕೊಂಡವರು.  ತಳವರ್ಗದ   ಬೀರ,  ಗುತ್ಯಾ  ನಂತವರ  ಕುಟುಂಬವನ್ನ  ತಮ್ಮ  ಕುಟುಂಬದಂತೇ  ತಿಳಿದು,  ಅವರ  ಬದುಕಿನಲ್ಲಿ, ವಿದ್ಯೆ ಯ  ಬೆಳಕ  ಬೀರಲು  ಹವಣಿಸಿದವರು.    ವರ್ಗದಲ್ಲಿ  ನೆಲೆಯೂರಿರುವ  ಕುಡಿತ  ಮೂಢ ನಂಬಿಕೆಗಳನ್ನು  ನಿವಾರಿಸಲು  ಪ್ರಾಮಾಣಿಕವಾಗಿ  ಪ್ರಯತ್ನಿಸಿದವರು. 

      ಅಂಥ  ಒಂದು  ಮೇರು  ವ್ಯಕ್ತಿತ್ವವನ್ನು  ಕಾದಂಬರಿಯ  ನಾಯಕನನ್ನಾಗಿ  ಆಯ್ದುಕೊಂಡ   ಕೃತಿಕಾರರು,   ಪ್ರಾರಂಭದ  ಪುಟದಲ್ಲೇ   ತಿಮ್ಮಯ್ಯಹೆಗಡೆಯವರ  ಜೀವನದೃಷ್ಟಿಯನ್ನು  ಪರಿಣಾಮಕಾರಿಯಾಗಿ  ಚಿತ್ರಿಸಿದ್ದಾರೆ.

    ಬ್ರಿಟೀಶರು   ಜಮೀನಿಗೆ  ವಿಧಿಸುವ  ಕಂದಾಯವನ್ನು  ಅದೆಷ್ಟೋ ಪಟ್ಟು  ಹೆಚ್ಚಿಸಿ,  ಕೃಷಿಕರನ್ನು ಅಮಾನವೀಯವಾಗಿ  ಶೋಷಿಸುತ್ತಿರುವ   ದುರ್ವರ್ತನೆಯನ್ನು  ಖಂಡಿಸುವ  ಪ್ರತಿಭಟಿಸುವ,  ಪ್ರಕ್ರಿಯೆ  ʻಕರನಿರಾಕರಣೆ ʼ  ಯೆಂಬ  ಚಳುವಳಿ  ನಾಡಿನಾದ್ಯಂತ   ಜ್ವಲಿಸುತ್ತಿರುವಾಗ,  ಸಿದ್ದಾಪುರವೂ  ತಣ್ಣಗೆ  ಕುಳ್ಳಿರದೇ   ಹೋರಾಟಕ್ಕೆ  ಧುಮುಕಿತು.   ತಿಮ್ಮಯ್ಯ  ತಾವು  ಕರನಿರಾಕರಿಸಿದ್ದಲ್ಲದೇ  ಸುತ್ತಮುತ್ತಲಿನ  ಕೃಷಿಕರನ್ನೂ  ಸಿದ್ಧಗೊಳಿಸುತ್ತಾರೆ.  ಸ್ವಾಭಾವಿಕವಾಗಿ  ಮನೆಮಾರು  ಜಪ್ತಿ ಪ್ರಕ್ರಿಯೆ  ಪ್ರಾರಂಭಗೊಳ್ಳುತ್ತದೆ.  ತಿಮ್ಮಯ್ಯನವರ  ಮನೆಯ  ಜಪ್ತಿ ಯಾಗತೊಡಗುತ್ತದೆ.  ಮನೆಯೊಳಗಿನ  ಪಾತ್ರೆ ಪಗಡಿ,  ಆಭರಣ,  ಬಟ್ಟೆ-ಬರೆ ಸರ್ವವೂ  ಜಪ್ತಿಯಾಗತೊಡಗಿದಾಗ,   ಅವರ  ಪುಟ್ಟ ಮಗು  ರಾಮ,  ದಿನವೂ  ತಾನು  ಹಾಲುಕುಡಿಯುತ್ತಿದ್ದ  ಬೆಳ್ಳಿಲೋಟವೂ   ಸರಕಾರದ  ಪಾಲಾಗುತ್ತಿರುವುದನ್ನು  ಕಂಡು  ಬಾಲಭಾಷೆಯಲ್ಲಿ,    ಲೋಟ  ನನಗೆ  ಬೇಕು  ಎಂದು  ಅಳತೊಡಗುತ್ತಾನೆ.   ಆಗ  ತಿಮ್ಮಯ್ಯ ನವರಿಂದ  ಬಂದ    ಉತ್ತರ ,  ಮನಕಲಕುತ್ತದೆ.   ಅವರ  ತಾತ್ವಿಕ  ವ್ಯಕ್ತಿತ್ವದ  ಎತ್ತರ, ಮತ್ತು  ಆಳ  ಅಲ್ಲಿಯೇ  ಅಭಿವ್ಯಕ್ತಗೊಳ್ಳುತ್ತದೆ.

    ʻʻ ಮನುಷ್ಯನಲ್ಲಿ  ಸುಪ್ತವಾಗಿರುವ  ನಾನು,  ನನ್ನದು, ಎನ್ನುವ  ಭಾವನೆ ಹುಟ್ಟಿನಿಂದಲೇ ಗಟ್ಟಿಯಾಗುತ್ತ  ಬರುತ್ತದೆ. ʻ ನಾನುʼ ಎನ್ನುವ ರಜ್ಜು  ಜೀವನವನ್ನು ಬಂಧಿಸಿ  ತನ್ನ  ಅಸ್ತಿತ್ವವನ್ನು ಮೆರೆಸುತ್ತದೆ.  ಮನುಷ್ಯನ  ಬದುಕುವ ಆಸೆಯನ್ನು ಮೂಡಿಸುವುದು  ಅದೇ. ತನ್ನ ತನದ ನಾಶವನ್ನು ಸಹಿಸದಿರುವುದು ಮನುಷ್ಯನಿಗೆ  ಹುಟ್ಟಿನಿಂದಲೇ  ಬರುವ  ಗುಣ. ಅಂತಹ ಗುಣ  ಪ್ರಾಣಿಗಳಲ್ಲಿಯೂ  ಜಾಗ್ರತವಾಗಿರುತ್ತದೆ.    ಬೆಳ್ಳಿಯ  ಲೋಟ  ರಾಮುವಿನದೇ..? ಅಲ್ಲ!!   ನಾನು  ತಂದಿದ್ದೂ  ಅಲ್ಲ !! ಅಪ್ಪನೋ  ಅಜ್ಜನೋ  ಮುತ್ತಜ್ಜನೋ  ಸಂಗ್ರಹಿಸಿದ್ದು.  ನಾನೂ  ಮಗುವಾಗಿದ್ದಾಗ  ಅದೇ  ಲೋಟದಲ್ಲಿ  ಹಾಲು ಕುಡಿದೆ.  ಆಗ  ನಾನು  ಅದು ನನ್ನದು ಎನ್ನುತ್ತಿದ್ದೆ.  ಗಣೇಶ  ಮಂಜು ರಾಮು  ಗೌರಿ  ಎಲ್ಲರೂ  ಹಾಗೆ  ಹೇಳಿದವರೇ.  ಅಂಗಳದಲ್ಲಿ  ರಾಶಿಹಾಕಿದ  ಪಾತ್ರೆ ಪಗಡೆ  ನನ್ನದು  ಎನ್ನಲೇ...?   ಅವೆಲ್ಲ  ಹಿಂದಿನಿಂದ  ಬಂದವೇ.  ಅಪ್ಪನೋ  ಅಜ್ಜನೋ  ಮುತ್ತಜ್ಜನೋ  ಮುಂದಿನ  ಪೀಳಿಗೆಗಾಗಿ  ಸಂಗ್ರಹಿಸಿಟ್ಟವು.   ಇದು  ನನ್ನ ಮನೆ,..... ನನ್ನ ತೋಟ,..... ನನ್ನ ಹೆಂಡತಿ,..... ನನ್ನ ಮಕ್ಕಳು....ನನ್ನ ಕೈ- ಕಾಲು, ಎನ್ನುತ್ತೇವೆ.  ನಾನು  ಯಾವುದು,.?  ನಾನು  ಹಾಗೆಂದರೇನು...?   ನಾನು  ಎಂಬ  ನಾನು  ಎಲ್ಲಿದೆ...?........................ ಈ  ರಾಶಿಯಲ್ಲಿರುವ  ಯಾವವೂ  ಸ್ವಾರ್ಜಿತವಾಗಿ  ನನಗೆ  ಕಾಣುತ್ತಿಲ್ಲʼʼ

     ಎಂದೆನ್ನುತ್ತ,  ಅಂತಹ ತಲ್ಲಣದ  ಸಂದರ್ಭದಲ್ಲೂ  ತಮ್ಮೊಳಗಿನ ಆಧ್ಯಾತ್ಮಿಕತೆಗೆ  ಒತ್ತು ಕೊಡುತ್ತಾರೆ.  ನಾವೇಕೆ ತೀರ್ವೇ ಕೊಡಲು ವಿರೋಧಿಸ ಬೇಕು ಎಂಬುದಕ್ಕೆ ಉತ್ತರವಾಗಿ,

    ʻʻತೀರ್ವೆ ವಸೂಲಿ ಸರಕಾರದ  ಹಕ್ಕು,  ಆದ್ರೆ  ಅದು ದಬ್ಬಾಳಿಕೆಯಲ್ಲ, ದೌರ್ಜನ್ಯವೂ  ಅಲ್ಲ, ಕೌಟಿಲ್ಯ  ಹೇಳಿದ ಹಾಗೇ  ಕರವಸೂಲಿ ಅಂದರೆ   ಜೇನು ಹುಳು ಹೂವಿನಿಂದ  ಮಕರಂದ  ಹೀರಿದಂತಿರಬೇಕು.  ಹುಳುವಿಗೆ ಮಕರಂದ  ಸಿಗಬೇಕು, ಹೂವಿಗೂ  ನೋವಾಗಬಾರದು.  ಸರಕಾರ  ಮಕರಂದ  ಹೀರುತ್ತಿಲ್ಲ,  ರಕ್ತವನ್ನೇ  ಹೀರುತ್ತಿದೆ.ʼʼ

       ಮಹಾತ್ಮರ  ಮಾರ್ಗಸೂಚಿಯನ್ನು  ಅನುಸರಿಸಬೇಕು. ಅಹಿಂಸೆಯ  ಅರ್ಥ ತಿಳಿಯಬೇಕು. ಅಹಿಂಸೆಯಿಂದಲೇ  ವೈರಿಯ  ಮನಪರಿವರ್ತನೆ ಗೈಯ್ಯಬೇಕು. ಅದೇ  ಸತ್ಯಾಗ್ರಹದ  ಮೂಲ ತತ್ವ.ʼʼ

        ಎಂದು  ಜನರಿಗೆ   ಮನವರಿಕೆ  ಮಾಡುತ್ತಾರೆ.  ಸ್ವಂತ ಮನೆ  ಜಮೀನು  ಲಿಲಾವಾಗಿ,  ಬರಿಗೈಯ್ಯಲ್ಲಿ,  ಹೆಂಡತಿ  ಮಕ್ಕಳೊಂದಿಗೆ,  ಮನೆಬಿಟ್ಟು ಹೊರಟಾಗಿನ  ಸನ್ನಿವೇಶ, ಸತ್ಯ ಹರಿಶ್ಚಂದ್ರನ  ಕತೆಯನ್ನು  ನೆನಪಿಸುತ್ತದೆ.

     ಕಾದಂಬರಿ  ಪುಟ್ಟದಾದರೂ,  ಹತ್ತು ಹಲವು  ರಸಸ್ಥಾನಗಳನ್ನು  ಪಡೆದು ಕೊಂಡು,  ಇಡೀ ತಾಲೂಕಿನ  ಹೋರಾಟವನ್ನು  ತೆಕ್ಕೆಗೆ  ತೆಗೆದುಕೊಳ್ಳುತ್ತದೆ.  ತಿಮ್ಮಯ್ಯ  ಹೆಗಡೆಯವರ  ಮನೆಯ  ಮಾಳಿಗೆಯ  ಮೇಲೆ  ನಡೆಯುವ   ಸಭೆ, ಅಲ್ಲಿ ಭಾಗವಹಿಸುವ  ಪ್ರಮುಖ  ಹೋರಾಟಗಾರರಾದ,  ವೆಂಕಟ ಸುಬ್ಬಯ್ಯ,  ನಾಗೇಶ  ಹೆಗಡೆ, ತಾರಖಂಡ  ಸೀತಾರಾಮ ಹೆಗಡೆ,  ಕ್ಯಾದಗಿ  ತಿಮ್ಮಣ್ಣ ಭಟ್ಟರು, ಶಿವರಾಮಣ್ಣ, ಕುಪ್ಪಯ್ಯ ಹೆಗಡೆ  ಮುಂತಾದ  ಸ್ಥಳೀಯ  ಮುಖಂಡರ  ಸಮ್ಮುಖದಲ್ಲಿ  ಜರುಗುವ  ಕರನಿರಾಕರಣೆಯ  ನಿರ್ಣಯದ  ಸಂದರ್ಭ  ಕುತೂಹಲ  ಕೆರಳಿಸುತ್ತದೆ.

       ಕೃತಿಯ  ತುಂಬೆಲ್ಲ  ಸಿದ್ದಾಪುರದ  ಪ್ರಾದೇಶಿಕ  ಆಡುನುಡಿಗಳಲ್ಲಿ ಒಂದಾದ   ಹವಿಗನ್ನಡದ  ಸೊಗಡು   ಮನಸೆಳೆಯುತ್ತದೆ.

      ರಾಜ್ಯಮಟ್ಟದಲ್ಲಿ  ಚಳುವಳಿ  ಸಂಘಟಿಸುತ್ತಿದ್ದ, ವೆಂಕಟರಾಮಯ್ಯ,  ರಂಗನಾಥ  ದಿವಾಕರ, ಮುಂತಾದ  ಮುಖಂಡರ  ಭೇಟಿ,  ಸರಕಾರದ  ದಬ್ಬಾಳಿಕೆಯಲ್ಲಿ  ಭೂಮಿ  ಮನೆ  ಕಳೆದು ಕೊಂಡು  ನಿರಾಶ್ರಿತರಾದವರಿಗೆ,  ಆಹಾರ ವಸತಿ ಏರ್ಪಡಿಸಲು  ಅವರು ಮಾಡಿದ  ಪ್ರಯತ್ನ,

     ಸಿದ್ದಾಪುರ  ಪಟ್ಟಣಕ್ಕೆ  ಮಹಾತ್ಮಾಗಾಂಧಿಯವರ  ಆಗಮನ, ಅಲ್ಲಿ  ಹಸಲರ  ದೇವಿಯ  ತ್ಯಾಗವನ್ನು  ಗಾಂಧಿಯವರು  ಶ್ಲಾಘಿಸಿದ  ಘಟನೆ, 

     ತಿಮ್ಮಯ್ಯ  ಹೆಗಡೆಯವರ  ನಿರಾಶ್ರಿತ ಸ್ಥಿತಿಯ  ವಿವರಗಳು,  ಮಗ  ಮಂಜುನಾಥನ  ಅಕಾಲಿಕ ಮರಣ,   ಮುಂತಾದ   ನೈಜ ಸನ್ನಿವೇಶಗಳು,   ಕಾದಂಬರಿಗೆ  ಭಾವನಾತ್ಮಕ  ಸ್ಪರ್ಶ  ನೀಡಿವೆ.

 

        ತಿಮ್ಮಯ್ಯನವರ   ಅಡಿಕೆತೋಟದ  ಫಸಲನ್ನು  ಕರಾವಳಿಯ  ಗುತ್ತಿಗೆದಾರ  ಹೊಸಬಯ್ಯ  ಎಂಬಾತ  ಅಡಿಕೆ  ಗೊನೆಗಳನ್ನು  ಕೊಯ್ದು  ತಿಮ್ಮಯ್ಯನವರ  ಮನೆಯಲ್ಲೇ  ಸಂಗ್ರಹಿಸಿ  ಇಟ್ಟಿರುತ್ತಾನೆ.   ಅದಕ್ಕೆ  ಪೋಲೀಸ  ಕಾವಲಿರುತ್ತದೆ.   ಫಲಭರಿತ  ಫಸಲು  ಯಾರದೋ  ಪಾಲಾಗುತ್ತಿರುವುದು,   ಸುತ್ತಲಿನ  ಊರಿನ  ಜನರನ್ನು  ಸಿಟ್ಟಿಗೇಳಿಸುತ್ತದೆ.   ಒಂದಿಷ್ಟು  ಜನ  ಸೇರುತ್ತಾರೆ.  ಮಧ್ಯರಾತ್ರಿ  ಪೋಲಿಸರ  ಕಣ್ಣು ತಪ್ಪಿಸಿ   ಸಂಗ್ರಹಿಸಿದ  ಅಡಿಕೆ ಗೊನೆಗಳನ್ನು  ಹೊತ್ತು  ಸಾಗಿಸುತ್ತಾರೆ.     ತಪ್ಪಿಗೆ   ಅಲ್ಲಿಯ  ಹತ್ತಾರು  ಜನಕ್ಕೆ  ಜೈಲುಶಿಕ್ಷೆಯಾಗುತ್ತದೆ.  ಇದು  ಯಾವುದೋ  ಊರಲ್ಲಿದ್ದ  ತಿಮ್ಮಯ್ಯನವರ  ಕಿವಿಗೆ  ಬಿದ್ದಾಗ  ನೊಂದುಕೊಳ್ಳುತ್ತಾರೆ.   ಜಪ್ತಿಯಾದ  ಮಾಲನ್ನು  ಕದಿಯುವುದು  ಸತ್ಯಾಗ್ರಹಿಯ  ಕೆಲಸವಲ್ಲ, ಎನ್ನುತ್ತಾರೆ.

       ಹೊಸಬಯ್ಯ  ಎಂಬ  ಗುತ್ತಿಗೆದಾರ   ಜಮೀನನ್ನು  ಸರಕಾರದ  ರಕ್ಷೆಯಲ್ಲಿ  ಸೂರೆಹೊಯ್ದಾಗ,  ಅವರ  ಮನೆಕೆಲಸದವರಾದ  ಬೀರ  ಗುತ್ಯ  ಮುಂತಾದ  ಊರ  ಜನರು  ಅವರ  ವಿರುದ್ಧ  ಸೇಡುತೀರಿಸಿಕೊಳ್ಳಲು  ಹೊರಟಾಗ,  ತಿಮ್ಮಯ್ಯ  ತಡೆಯುತ್ತಾರೆ.    ಮನೆ  ಜಪ್ತಿಗೆ  ಬಂದ   ಶಿರಸ್ತೇದಾರ, ಶಾನುಭೋಗ,  ಉಗ್ರಾಣಿಗಳನ್ನು  ಪ್ರೀತಿಯಿಂದಲೇ  ಆತಿಥ್ಯ  ನೀಡಿ  ಸತ್ಕರಿಸುತ್ತಾರೆ. 

      ಇಂತಹ  ಮಾನವೀಯ  ಅಂತಃಕರಣದ  ತಿಮ್ಮಯ್ಯರ  ಪಾತ್ರ ದ  ಜೊತೆಗೆ,   ದುಗ್ಗಮ್ಮ,  ಮಂಕಾಳಿ,  ಲಕ್ಷ್ಮಕ್ಕ, ಮಾದೇವಕ್ಕ, ಗಂಗಮ್ಮ ಮುಂತಾದ  ಸ್ತ್ರೀಪಾತ್ರಗಳೂ   ಹೋರಾಟಗಾರರಿಗೆ  ಬೆನ್ನೆಲುಬಾಗಿ  ನಿಂತು  ಸಹಕರಿಸಿದ  ಘಟನೆಗಳು  ಪರಿಣಾಮಕಾರಿಯಾಗಿ  ಚಿತ್ರಣಗೊಂಡಿವೆ.

      ಕಾದಂಬರಿ  ಆಸಕ್ತಿಕೆರಳಿಸುವುದು   ಅಲ್ಲಿ  ಬಳಸಿದ  ಸ್ಥಳೀಯ  ಆಡುನುಡಿಗಳ  ಪ್ರಯೋಗದಿಂದ.   ತಿಮ್ಮಯ್ಯ  ಮತ್ತು  ಇತರ  ಹೋರಾಟಗಾರರ  ಭಾಷಣಗಳೂ  ಅದೇ  ಭಾಷೆಯಲ್ಲೇ  ಪ್ರಯೋಗಗೊಂಡಿದ್ದರೆ   ಮತ್ತಷ್ಟು  ಪ್ರಾದೇಶಿಕತೆಯ  ಸ್ವಾದ  ಪ್ರಾಪ್ತವಾಗುತ್ತಿತ್ತೇನೋ  ಎಂದೆನ್ನಿಸುತ್ತಿದೆ.

      ತಿಮ್ಮಯ್ಯನವರ  ಮನೆಯಲ್ಲಿ  ನಡೆಯುವ  ಸಭೆಗೆ  ಆಗಮಿಸಿದ  ಎಲ್ಲ  ಹೋರಾಟಗಾರರಿಗೂ   ಸಮೃದ್ಧ  ಊಟ ನೀಡಿದ  ವಿವರಗಳು,    ಪ್ರದೇಶದ  ಅಡಿಗೆ  ವೈವಿಧ್ಯವನ್ನು  ದರ್ಶಿಸಿದೆ.

    ಸ್ಥಳೀಯ  ಸಂಪ್ರದಾಯ,  ಪೂಜಾವಿಧಾನಗಳ  ವರ್ಣನೆ  ಬಂದಂತೇ   ಸಾಂಪ್ರದಾಯಿಕ   ಜಾನಪದೀಯ  ಹಾಡುಗಳು,  ಯಕ್ಷಗಾನ ಪದ್ಯಗಳೂ    ಅಲ್ಲಲ್ಲಿ  ಪ್ರಕಟಗೊಂಡಿದ್ದರೆ  ಸಾಂಸ್ಕೃತಿಕ  ಸತ್ವವೂ  ಒದಗಿದಂತಾಗುತ್ತಿತ್ತು.

       ವಾಸ್ತವ  ಇತಿಹಾಸ   ಕಲೆಯಲ್ಲಿ ಅರಳುತ್ತ,   ನಮ್ಮ ಹಿರಿಯರ   ಕೆಚ್ಚು  ಕಷ್ಟಸಹಿಷ್ಣುತನ,  ರಾಷ್ಟ್ರಪ್ರೇಮ,  ಪ್ರಾಮಾಣಿಕತೆ,  ಆತ್ಮಸ್ಥೈರ್ಯ, ಮತ್ತು    ಮಣ್ಣಿನ  ಸುಂದರ  ಭವಿಷ್ಯನಿರ್ಮಿಸುವ   ಮಹಾಗುರಿಯನ್ನು  ಆಧುನಿಕ ತಲೆಮಾರಿಗೆ   ಲೇಪಿಸುವ  ಮಹತ್ವಪೂರ್ಣ  ಪ್ರಕ್ರಿಯೆಯಲ್ಲಿ  ತೊಡಗಿರುವ   ಶ್ರೀಪಾದ  ಹೆಗಡೆಯವರ   ಪ್ರಯತ್ನ  ಅಭಿನಂದನೀಯ.

     ಇನ್ನಷ್ಟು  ಇಂಥ  ಕೃತಿಗಳು  ನಮ್ಮ  ಮನಸ್ಸಿನ  ಅಂಗಣಕ್ಕೆ  ಪ್ರವೇಶಿಸಿ  ಸಂಚಲನ  ಸೃಷ್ಟಿಸಲಿ  ಎಂದು    ಮೂಲಕ   ಹಾರೈಸುತ್ತಿದ್ದೇನೆ.

                                                     

 ಗೌರವಾದರಗಳೊಂದಿಗೆ,

ಸುಬ್ರಾಯ  ಮತ್ತೀಹಳ್ಳಿ.   ತಾ-  ೮-೮- ೨೦೨೩.

     

 

Thursday 28 September 2023

ಸಹಕಾರ ಮತ್ತು ಸಮೃದ್ಧಿ.ʼʼ

 

ʻʻ ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು |

ಮೃತನ ಮಣ್ಣಿಂದ  ಹೊಸ ಹುಲ್ಲು ಮೊಳೆಯುವುದು ||

 ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ |

ಸತತ ಕೃಷಿಯೋ  ಪ್ರಕೃತಿ ----ಮಂಕುತಿಮ್ಮ || ʼʼ            

                    ಸಹಕಾರ  ಎಂಬ  ವ್ಯವಸ್ಥೆ,  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಹಿಂದಿನದು.  ಅದಕ್ಕೆ  ಪಾಶ್ಚಾತ್ಯಪರಿಕಲ್ಪನೆ ಸೇರಿ  ಮತ್ತಷ್ಟು ಫಲವತ್ತಾಗಿ  ನಮ್ಮ ನೆಲದಲ್ಲಿ  ಬೆಳೆದಿದೆ.  ನಮ್ಮ  ದೇಶದ  ಆರು ಲಕ್ಷ  ಗ್ರಾಮಗಳು  ಕೃಷಿ  ಮತ್ತು  ಕೃಷಿಪೂರಕ  ಕೈಗಾರಿಕೆಗಳಲ್ಲಿ  ಸ್ವಾವಲಂಬನೆ  ಸಾಧಿಸಿಕೊಂಡು,  ಪರಸ್ಪರ  ಕೊಡು  ಕೊಳ್ವಿಕೆಯಮೂಲಕವೇ  ಭದ್ರವಾಗಿ  ನೆಲೆಯೂರಿತ್ತು.  ಎರಡು ಶತಮಾನಗಳಷ್ಟು  ಹಿಂದೆಯೇ  ಪಾಶ್ಚಾತ್ಯ  ಸಂಶೋಧಕರು,  ಗ್ರಾಮಗಳ  ಸಾಮೂಹಿಕ ಒಕ್ಕೂಟ,  ಪರಸ್ಪರ ಸಹಾಯ,  ಆಮೂಲಕ  ಸ್ವಾವಲಂಬನೆ ಯಂತಹ  ವ್ಯವಸ್ಥೆಯನ್ನು  ಬಾಯಿತುಂಬ  ಶ್ಲಾಘಿಸಿದ್ದಾರೆ.  ಅದೆಷ್ಟೋ  ಪ್ರಭುತ್ವಗಳು  ಬದಲಾದರೂ  ಗ್ರಾಮಗಳು  ಮಾತ್ರ,  ಪ್ರಭುತ್ವದ  ಅವಲಂಬನೆಯನ್ನು  ನೆಚ್ಚಿಕೊಳ್ಳದೇ,  ತಮ್ಮ  ರೈತಾಪಿ ಚಟುವಟಿಕೆ,  ನ್ಯಾಯವ್ಯವಸ್ಥೆ,  ಸಾಮೂಹಿಕ  ತೇರು ಜಾತ್ರೆ,  ಸಂತೆ, ಮುಂತಾದ  ಸಾಮಾಜಿಕ  ಚಟುವಟಿಕೆಗಳನ್ನು  ಸ್ವತಂತ್ರವಾಗಿ  ನಿರ್ವಹಿಸಿಕೊಂಡು  ಬಂದಿದ್ದವು.  ಒಂದು ದೃಷ್ಟಿಯಲ್ಲಿ  ಅಲ್ಪತೃಪ್ತ ಸಮುದಾಯಗಳಾಗಿ  ತಮ್ಮಷ್ಟಕ್ಕೆ  ತಾವು  ಬದುಕಿಕೊಂಡು ಬಂದಿದ್ದರು. 

    ಆದರೆ   ಬ್ರಿಟೀಶರ  ಮೂಲಕ  ಆಧುನಿಕ  ಆಡಳಿತ  ವ್ಯವಸ್ಥೆ ಎಂದು ನಮ್ಮದೇಶಕ್ಕೆ  ಕಾಲಿಟ್ಟಿತೋ,  ಗ್ರಾಮಗಳ  ಸ್ವಾಯತ್ತತೆ  ನಾಶಗೊಂಡಿತು.  ಅರಣ್ಯಗಳು  ಸಾಮೂಹಿಕ  ಆಸ್ತಿಯಾಗಿದ್ದು  ಸರಕಾರಿ ಸ್ವಾಮ್ಯಕ್ಕೆ  ಬದಲಾಯಿತು.  ಸರಕಾರ  ಕೃಷಿಕಂದಾಯವನ್ನೇ  ತನ್ನ  ಆದಾಯಮೂಲವನ್ನಾಗಿಸಿಕೊಂಡು,  ಕೃಷಿಯ  ಅಭಿವೃದ್ಧಿಯನ್ನು  ಕಡೆಗಣಿಸಿ, ಶೋಷಣೆಗೈದಿದ್ದೇ  ಗ್ರಾಮಗಳ  ಅವನತಿಗೆ  ಕಾರಣವಾಯಿತು.  ಅವ್ಯವಸ್ಥಿತ  ಮಾರುಕಟ್ಟೆ,  ಅನಿಶ್ಚಿತ ಹವಾಮಾನ,  ಅಧಿಕಾರಿ ವರ್ಗದ  ದರ್ಪ,  ಮೂಲಭೂತ ಸೌಲಭ್ಯಗಳ  ಕೊರತೆ ಮತ್ತು,  ಕೃಷಿಕರಲ್ಲಿಯ  ಅಜ್ಞಾನ  ಇವೆಲ್ಲಸೇರಿ, ಭಾರತೀಯ ಗ್ರಾಮಗಳು, ಅದರಲ್ಲಿಯೂ  ಕೃಷಿ  ಮತ್ತು  ಗುಡಿಕೈಗಾರಿಕೆಗಳು  ಸೋತು  ಸೊರಗಿದವು.  ಶತಮಾನಗಳ  ಕಾಲದ  ಈ ಎಲ್ಲ  ಶೋಷಣೆ  ಮತ್ತು  ದೋಷಗಳು,  ನಮ್ಮ  ಕೃಷಿಪರಂಪರೆಯನ್ನೇ ನಾಶಗೊಳಿಸಿತು.  ಪ್ರತಿಯೊಂದಕ್ಕೂ  ಸರಕಾರದ  ಸಹಾಯವನ್ನೇ  ಅವಲಂಬಿಸಬೇಕಾದ  ದಯನೀಯ  ಪರಿಸ್ಥಿತಿಗೆ  ಕೃಷಿವ್ಯವಸ್ಥೆಯನ್ನು  ತಂದು ಇಟ್ಟಿದ್ದೇ  ನಮ್ಮೆಲ್ಲ  ದುಸ್ಥಿತಿಗೆ  ಕಾರಣವಾಯಿತು  ಎಂದೆನ್ನಲೇ  ಬೇಕಾಗಿದೆ.

    ಹೇಗೇ  ಇರಲಿ ಕೃಷಿ ಬದುಕು  ಇಂದಿಗೂ  ಉಸಿರಾಡುತ್ತಿದೆ  ಎಂದಾದರೆ  ಅದು  ಸಹಕಾರಿ ವ್ಯವಸ್ಥೆಯ  ಮೂಲಕ  ಎಂಬುದನ್ನು  ನಾವು  ಸ್ಮರಿಸಲೇಬೇಕು.  ಪ್ರತಿ ಪ್ರಜಾಪ್ರಭುತ್ವವೇ  ಆದ  ಸಹಕಾರೀ  ವ್ಯವಸ್ಥೆ  ರೈತನ ಬೆನ್ನೆಲುಬಾಗಿ,  ರೈತನ ನೋವು  ಏರಿಳಿತಗಳಿಗೆ  ಸಾಂತ್ವನವಾಗಿ,  ಆತನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ,  ಸ್ವಾಭಿಮಾನದಿಂದ  ಬದುಕಲು  ಅನುವಾಗುತ್ತಿರುವ  ಸಹಕಾರ ಎಂಬ  ಅಮೂಲ್ಯ ಚಟುವಟಿಕೆ,  ನಮ್ಮ  ಕೃಷಿಜೀವನದ  ಒಂದು  ಅನುಪಮ ವರದಾಯಿನಿಯಾಗಿ  ಬೆಳಗುತ್ತಿದೆ.

   ಸರಕಾರಗಳ ನಿಯಮಗಳು,  ಕಾನೂನು, ಆಡಳಿತಾತ್ಮಕ ದೋಷಗಳು,  ಸಹಕಾರಿ  ಪ್ರತಿನಿಧಿಗಳಲ್ಲಿಯ  ಜಾಡ್ಯತೆ,  ಮುಂತಾದ  ದೋಷಗಳು  ಇಚ್ಛಿತ ಪ್ರಗತಿಗೆ  ತೊಡಕಾಗಿ  ಪರಿಣಮಿಸುತ್ತಿದ್ದರೂ,  ಅಂಥ  ತೊಡಕುಗಳ  ನಡುವೆಯೇ  ನಮ್ಮ  ಸಾಕಷ್ಟು ಸಂಘಗಳು  ಮಾದರಿಯಾದ  ಸೇವೆಯನ್ನು  ನೀಡುತ್ತಿವೆ.  ರೈತನ  ಬದುಕಿನ  ಅಸಂಖ್ಯ ಸಂಕಷ್ಟಗಳನ್ನು  ನಿವಾರಿಸಲು  ಹೆಣಗುತ್ತಿವೆ.

   ಆದರೂ  ಬದಲಾದ  ಜೀವನವಿಧಾನ,  ಬದಲಾದ  ಸಾಮಾಜಿಕ ಪ್ರವೃತ್ತಿ,  ದಿನದಿಂದ  ದಿನಕ್ಕೆ  ನಮ್ಮ  ಕೃಷಿಬದುಕಿಗೆ  ಹೊಸ  ಹೊಸ  ಸವಾಲುಗಳನ್ನು  ತಂದೊಡ್ಡುತ್ತಿವೆ.  ಇಂದಿನ  ಕೃಷಿಕ  ಹಿಂದಿನಂತಿಲ್ಲ.  ಎಲ್ಲರಂತೇ ತಾನೂ  ಆಧುನಿಕ ನಾಗರಿಕನಾಗಿ, ಶಿಕ್ಷಿತನಾಗಿ, ವ್ಯವಸ್ಥಿತ ಬದುಕನ್ನು  ಕಟ್ಟಿಕೊಳ್ಳುವ  ಧ್ಯೇಯವನ್ನು ಹೊಂದಿದ್ದಾನೆ.  ಕೃಷಿಯಲ್ಲಿ  ಆಧುನಿಕತೆಯನ್ನು  ಅಳವಡಿಸಿಕೊಂಡು, ರಚನಾತ್ಮಕವಾಗಿ  ವ್ಯವಸಾಯ ಕೈಗೊಳ್ಳುವ  ಇಚ್ಛೆ  ಹೊಂದಿದ್ದರೂ,  ಅವೆಲ್ಲವನ್ನು  ಸಾಕಾರಗೊಳಿಸಿಕೊಳ್ಳುವಲ್ಲಿ  ಸೋಲುತ್ತಿದ್ದಾನೆ. 

     ಯಶದ  ದಾರಿಯಲ್ಲಿ ಎದುರಾಗುವ,  ಆರ್ಥಿಕ  ಕಾನೂನಾತ್ಮಕ, ಮತ್ತು  ಪರಿಸರದ  ತೊಡಕುಗಳನ್ನು  ನಿವಾರಿಸಿಕೊಳ್ಳಲು,  ಸಂಘಟನಾತ್ಮಕವಾದ  ಸಾಮೂಹಿಕ  ಪ್ರಯತ್ನ  ಮತ್ತು  ಹೋರಾಟ  ಅತ್ಯಂತ  ಅವಶ್ಯ  ಎಂಬುದನ್ನು  ಮನಗಾಣಬೇಕಾಗಿದೆ.    ಎಲ್ಲ  ಸಮಸ್ಯೆಗಳಿಗೆ  ಪರಿಹಾರ,  ಮತ್ತು  ಪರ್ಯಾಯ  ಎರಡೂ  ಸಹಕಾರೀ  ಚಳುವಳಿಯಲ್ಲಿದೆ. ಮತ್ತು ಸಹಕಾರ ಆಂಧೋಲನವನ್ನು ಬಲಪಡಿಸುವ, ಆ  ಮೂಲಕ  ಎದುರಾದ  ಸವಾಲನ್ನು  ಪರಿಹರಿಸಿ ಕೊಳ್ಳಬಹುದಾಗಿದೆ ಎಂಬ  ಸತ್ಯವನ್ನು  ಅರಗಿಸಿ ಕೊಳ್ಳಲೇ ಬೇಕಾಗಿದೆ.

  ಸಹಕಾರ ಎಂಬ ಪರಂಪರೆಯ  ಕೊಂಡಿಗಳಾದ ನಾವು,  ಇದೇ ಸಹಕಾರ ವ್ಯವಸ್ಥೆಯಡಿಯಲ್ಲೇ  ನಮ್ಮ ಕೃಷಿಬದುಕಿಗೆ  ಎದುರಾಗಿರುವ, ಹತ್ತು  ಹಲವು  ಸಮಸ್ಯೆ  ಸವಾಲುಗಳನ್ನು ಪರಿಹರಿಸಿಕೊಳ್ಳುವ, ಆಮೂಲಕ  ನಮ್ಮ ಗ್ರಾಮಗಳನ್ನು  ಇನ್ನೂ  ಪ್ರಗತಿಗೆ  ಕೊಂಡೊಯ್ಯುವ ಸಂಕಲ್ಪವನ್ನು  ತೊಡಲೇಬೇಕಾಗಿದೆ. 

      ಹಿನ್ನೆಲೆಯಲ್ಲಿ  ನಮ್ಮ ಸಹಕಾರಿ  ಸಂಘಟನೆಯ  ಆಶ್ರಯದಲ್ಲಿ  ನಾವು ಕೈಗೊಂಡ  ಕೆಲವು ರಚನಾತ್ಮಕ  ಪ್ರಯೋಗಶೀಲ  ಚಟುವಟಿಕೆಗಳ ಆಧಾರದಲ್ಲಿ,  ಒಂದಿಷ್ಟು  ಚಿಂತನೆಗಳನ್ನು  ಮಂಡಿಸುತ್ತಿದ್ದೇನೆ.

    ಸ್ಥಳೀಯ  ಜನರ  ಕಷ್ಟಸುಖಗಳ ನಿಜವಾದ  ಅನುಭವ  ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳಿಗಿರುವಷ್ಟು  ಮತ್ಯಾವ  ಸಂಸ್ಥೆಗೂ ಇರಲಾರದು.  ಕೃಷಿಕರ  ಮತ್ತು  ಕೃಷಿ ಅವಲಂಬಿತ  ಜನತೆಯ ನೇರ ಸಂಪರ್ಕ ಸಾಧ್ಯವಾಗುವುದೂ  ಪ್ರಾಥಮಿಕ ಸಹಕಾರಿಗೆ  ಮಾತ್ರ ಸಾಧ್ಯ.  ಸ್ಥಳೀಯ  ಕೃಷಿಸಮಸ್ಯೆಯ  ನಿವಾರಣೆಯ  ಹಿನ್ನೆಲೆಯಲ್ಲಿ, ಸ್ಪಂದಿಸಬೇಕಾದ  ಹೊಣೆಗಾರಿಕೆಯೂ  ಸಂಘದ್ದೇ  ಆಗಿರುತ್ತದೆ.ನನ್ನ ಕೃಷಿಕಪರ ಆಲೋಚನೆಗಳು, ಅಡಿಕೆ ಭತ್ತ ಕೃಷಿಕರ ಸಮಸ್ಯೆಗಳನ್ನು  ಹೊಂದಿದೆಯಾದರೂ, ಉಳಿದ  ಪ್ರದೇಶಗಳ  ಸಾಂಪ್ರದಾಯಿಕ  ರೈತರಿಗೂ    ವಿಚಾರಗಳು  ಸಂಬಂಧಪಡುತ್ತವೆ  ಎಂಬುದನ್ನು  ನೆನಪಿಸಬಯಸುತ್ತಿದ್ದೇನೆ.

         ಜಮೀನು ಪರಭಾರೆ

    ತಂದೆ ತಾಯಿಯರು  ವೃದ್ಧರಾಗುತ್ತಿದ್ದಾರೆ. ಮನೆಯ ಮಕ್ಕಳು ಉದ್ಯೋಗವನ್ನರಸಿ  ನಗರಗಳಿಗೆ ವಲಸೆ ಹೋಗಿದ್ದಾರೆ. ವ್ಯವಸಾಯ ಸಾಗಿಸಲು  ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದ್ದು, ಎಲ್ಲ ಗ್ರಾಮಗಳ ಸಹಜ ಸಮಸ್ಯೆಯಾದರೂ,  ಜಮೀನು ಮಾರಾಟಮಾಡುವ ಪ್ರಕ್ರಿಯೆ ಪ್ರಾರಂಭವಾದುದು  ವಿಷಾದನೀಯ.  ಅಂಥ ಪ್ರಕರಣಗಳಲ್ಲಿ, ಸ್ಥಳದಲ್ಲೇ  ವಾಸಿಸುವ ಕೃಷಿಕರೇ  ಕೊಳ್ಳುವಂತಾದರೆ ಸ್ಥಳೀಯ ಸಂಸ್ಕೃತಿಗೆ ಬಾಧಕವಾಗಲಾರದು.  ಲೀಸ್‌  ವ್ಯವಸ್ಥೆಯ ಬಗೆಗೂ ಗಮನಹರಿಸ ಬಹುದಾಗಿದೆ. ಸ್ಥಳೀಯ  ಸಂಘಗಳು  ಅಂಥ ಜಮೀನುಗಳನ್ನು  ಸ್ಥಳದ ಸಾಂಪ್ರದಾಯಿಕ ಕೃಷಿಕರಿಗೇ  ಲಭ್ಯವಾಗುವಲ್ಲಿ  ಪ್ರಯತ್ನಿಸ ಬಹುದಾಗಿದೆ.

    ಅಸಾಂಪ್ರದಾಯಿಕ  ಕೃಷಿಕ್ಷೇತ್ರ ವಿಸ್ತರಣೆ.

      ರಾಜ್ಯದಾದ್ಯಂತ  ಅವ್ಯಾಹತವಾಗಿ  ಅಸಾಂಪ್ರದಾಯಿಕ ಕ್ಷೇತ್ರದಲ್ಲಿ  ಅಡಿಕೆ ಕೃಷಿ ವಿಸ್ತರಣೆಯಾಗುತ್ತಿದ್ದು, ಸಾಂಪ್ರದಾಯಿಕ ಕೃಷಿಗೆ  ಬಾಧಕವಾಗಿ ಪರಿಣಮಿಸುತ್ತಿದೆ.  ಇತ್ತೀಚೆಗೆ  ವಿಧಾನಸೌಧದಲ್ಲೂ ಗಂಭೀರ ಚರ್ಚೆಗೆ  ಗ್ರಾಸದವಾದ ಈ ಸಮಸ್ಯೆಯ ಬಗೆಗೆ, ಜಾಗ್ರತರಾಗಬೇಕಾದ ಪರಿಸ್ಥಿತಿಯೊದಗಿದೆ.  ಧಾನ್ಯ ಬೆಳೆಯುವ ಕ್ಷೇತ್ರಗಳೆಲ್ಲ  ವಾಣಿಜ್ಯಬೆಳೆಗಳ ತಾಣವಾದಲ್ಲಿ ಮುಂದೆ ಆಹಾರಕೊರತೆಯುಂಟಾಗುವುದಲ್ಲದೇ, ಸಾಂಪ್ರದಾಯಿಕ  ಕೃಷಿಕನಿಗೆ  ಅನ್ಯಾಯವಾಗುವ ದುರಂತ ಎದುರಾಗಬಹುದಾಗಿದ್ದು,  ಕಾನೂನಾತ್ಮಕವಾಗಿ ಇಂಥ ಕೃಷಿವಿಸ್ತರಣೆಯನ್ನು ತಡೆಯುವ ನಿಟ್ಟಿನಲ್ಲಿ  ಸರಕಾರವನ್ನು ಎಚ್ಚರಿಸುವ  ಪ್ರಕ್ರಿಯೆ  ಪ್ರಾರಂಭವಾಗಬೇಕಿದೆ.

    ದಾರಿ ನಿರ್ಮಾಣ....

     ಸಾಮಾನ್ಯವಾಗಿ  ಸಾಂಪ್ರದಾಯಿಕ ತೋಟಗಳು  ಗುಡ್ಡ ಕಣಿವೆಗಳಲ್ಲೇ  ಇರುವುದರಿಂದ,  ಗೊಬ್ಬರ ಸಾಗಾಣಿಕೆ, ಕೊಯ್ದ ಫಸಲನ್ನು ತರುವಂತಹ ಕೆಲಸಗಳು,  ಅಧಿಕ ಶ್ರಮಬೇಡುವುದರಿಂದ, ಅಧಿಕ ಖರ್ಚಿಗೂ ಕಾರಣವಾಗುತ್ತಿದೆ. ಅದಕ್ಕೆ  ಕ್ಷೇತ್ರದ ಸುತ್ತಲೂ  ದಾರಿನಿರ್ಮಾಣ ಅತೀ ಅವಶ್ಯ. ಸಾಮಾನ್ಯವಾಗಿ ತುಂಡು ಕ್ಷೇತ್ರಗಳೇ  ಆಗಿರುವುದರಿಂದ, ಎಲ್ಲ ತುಂಡು ಕೃಷಿಕರ ಮನವೊಲಿಸಿ  ತೋಟದಂಚಿನಲ್ಲಿ  ದಾರಿನಿರ್ಮಾಣದಂತಹ  ಮಹತ್ವದ ಕೆಲಸವನ್ನು  ಸಹಕಾರಿ ಸಂಘಗಳು  ಕೈಗೆತ್ತಿಕೊಳ್ಳಬಹುದಾಗಿದೆ.

     ಬೆಟ್ಟ ನಿರ್ವಹಣೆ.....

      ಸಾಮಾನ್ಯವಾಗಿ  ನಮ್ಮ ಮಲೆನಾಡಿನ  ಅಡಿಕೆ ಕೃಷಿಗರಿಗೆ  ಬೆಟ್ಟ ಸೌಲಭ್ಯವಿದ್ದು, ಬೆಟ್ಟದಲ್ಲಿ  ಲಾಭದಾಯಕ  ಹಣ್ಣಿನ ಬೆಳೆ, ಬಿದಿರು ಮತ್ತು ಆಯುರ್ವೇದ ಸಸ್ಯಗಳಂತಹ  ಕೃಷಿಗೆ  ಸಾಮೂಹಿಕವಾಗಿ  ಪ್ರೋತ್ಸಾಹವನ್ನಿತ್ತರೆ,  ಪರ್ಯಾಯ ಆರ್ಥಿಕ ಮೂಲವನ್ನೂ  ಸಹಕಾರಿಸಂಘ ಸೃಷ್ಟಿಸಿದಂತಾಗುತ್ತದೆ.

    ದೀರ್ಘಾವಧಿ ಬೆಳೆ ತೋಟಗಳಿಗೆ ವಿಮಾ ರಕ್ಷಣೆ.

       ಇತ್ತೀಚಿನ ವರ್ಷಗಳಲ್ಲಿ, ನಮ್ಮ ಮಲೆನಾಡು ಪ್ರದೇಶದ  ಅಡಿಕೆ ಕ್ಷೇತ್ರಗಳಿಗೆ  ಎಲೆಚುಕ್ಕೆ ರೋಗದ  ಅಗಾಧ ಆಕ್ರಮಣ ಭಯಹುಟ್ಟಿಸಿದೆ. ಕೆಲವು  ತೋಟಗಳೇ  ರೋಗಕ್ಕೆ ತುತ್ತಾದ ದುರಂತವನ್ನು ಕಾಣುತ್ತಿದ್ದೇವೆ. ರೋಗಕ್ಕೆ ಬಲಿಯಾದ ತೋಟಗಳಿಗೆ ಪರಿಹಾರವಾಗಿ  ವಿಮೆ ಲಭಿಸುವಂತಾಗಬೇಕು.  ಆ ಬಗೆಗೆ  ಸಹಕಾರಿಗಳು  ಗಮನಹರಿಸಬೇಕಾಗಿದೆ.

     ಕೊಳೆರೋಗ ನಿವಾರಣೆ.

    ತೋಟಗಳ ರೋಗನಿವಾರಣೆಗಾಗಿ, ಸಾಮೂಹಿಕ ಪ್ರಯತ್ನ ಕೈಗೊಳ್ಳುವುದು.  ಸಾರ್ವತ್ರಿಕವಾಗಿ  ಇಡೀ  ತೋಟದ ಔಷಧಸಿಂಪರಣೆಯನ್ನು ಸಹಕಾರಿ ಸಂಘ  ಒಂದು ಅಭಿಯಾನ ಸ್ವರೂಪದಲ್ಲಿ ಕೈಗೊಳ್ಳುವುದು.

     ಮಣ್ಣು ಪರೀಕ್ಷೆ

ಸಹಕಾರಿ ಸಂಘದಡಿಯಲ್ಲಿ ಬರುವ  ಸಮಗ್ರ  ಭತ್ತ ಮತ್ತು ತೋಟಗಳ ಮಣ್ಣುಪರೀಕ್ಷೆ ಪ್ರತಿವರ್ಷ ನಡೆಯುವಂತಾಗಬೇಕು. ಇದರಿಂದ ಗೊಬ್ಬರ ನಿರ್ವಹಣೆ ವೈಜ್ಞಾನಿಕ ರೀತಿಯಲ್ಲಿ  ನಡೆಯುವಂತಾಗುವುದು. ಮತ್ತು ಅನಾವಶ್ಯಕ ಖರ್ಚನ್ನು ತಡೆಯಬಹುದಾಗಿದೆ.

ಕೊಯ್ಲು  ಮತ್ತು  ಕೊಯ್ಲೋತ್ತರ ಸಂಸ್ಕರಣೆ.

    ಅಡಿಕೆ ಮತ್ತು  ಭತ್ತದ  ಕೊಯ್ಲು  ಕೂಲಿ ಸಮಸ್ಯೆಯಿಂದ  ನರಳುತ್ತಿದ್ದು,  ಅದಕ್ಕೆ  ವ್ಯವಸ್ಥಿತ ಯಂತ್ರ ಮತ್ತು, ಆಧುನಿಕ ಸಲಕರಣೆಗಳನ್ನು ಸಹಕಾರಿ  ಸಂಘಗಳು ಒದಗಿಸಬೇಕು.  ಕೊಯ್ಲೋತ್ತರ ಸಂಸ್ಕರಣಾ ಘಟಕವನ್ನೂ  ಸಂಘ ಸ್ಥಾಪಿಸಬಹುದಾಗಿದೆ.

ಮಾರಾಟ ವ್ಯವಸ್ಥೆ.....

     ಕೊಯ್ಲಾದ  ಫಸಲನ್ನು ಸಂಸ್ಕರಿಸಲಾಗದ  ಕೃಷಿಕರ ಫಸಲಿಗೆ  ನ್ಯಾಯಯುತ ಬೆಲೆಸಿಗದೇ ಶೋಷಣೆಗೊಳಗಾಗದಂತೇ  ಸಂಘವೇ ಟೆಂಡರ್‌  ಮೂಲಕ  ಮಾರಾಟ ವ್ಯವಸ್ಥೆ  ಕೈಗೊಳ್ಳಬೇಕು.

ಯಂತ್ರ ಸಹಾಯ.....

     ರೈತರ ಫಸಲು ಕೊಯ್ಲಿಗಾಗಿ, ಸುಧಾರಿತ  ಫೈಬರ ದೋಟಿ ಸೇವೆ,  ಕಿರು ಜೆ.ಸಿ.ಬಿ. ಯಂತ್ರಗಳು, ಮತ್ತು  ವಾಹನಸೇವೆ  ಇಂದಿನ ತುರ್ತು ಅಗತ್ಯವಾಗಿದೆ.  ಅಡಿಕೆ ಸುಲಿಯುವ ಯಂತ್ರ,  ಮೆಣಸು ಶುದ್ಧಿ ಯಂತ್ರ,  ಎಣ್ಣೆ ಮಿಲ್‌, ಮತ್ತು ತೆಂಗು ಸುಲಿಯುವ ಯಂತ್ರ ಮುಂತಾದವುಗಳನ್ನು ಸ್ಥಾಪಿಸಬಹುದಾಗಿದೆ.

ಟೆಲಿಪೋನ್‌  ಇಂಟರ್ನೆಟ್‌  ಸೇವೆ.

    ದೂರವಾಣಿ  ಮತ್ತು  ಅಂತರ್ಜಾಲಗಳು  ಇಂದಿನ  ಜೀವನಕ್ಕೆ  ಅತೀ ಆವಶ್ಯಕವಾದುದರಿಂದ, ಖಾಸಗಿ ವ್ಯವಸ್ಥೆಯ ಶೋಷಣೆಗೆ ಕೃಷಿಕ ಸಿಲುಕಿದ್ದಾನೆ.  ಪ್ರಾಥಮಿಕ ಸಹಕಾರಿ  ಸಂಘಗಳು,  ಮಾಹಿತಿ ತಂತ್ರಜ್ಞಾನದ ಸೇವೆಗೆ ತೊಡಗುವುದು ಅತ್ಯಂತ ಅವಶ್ಯವಿದೆ.

    ಒಟ್ಟಿನಲ್ಲಿ  ನಮ್ಮ ಪ್ರಗತಿಗೆ ನಾವೇ ಕಾರಣಕರ್ತರಾಗಬೇಕಾದರೆ,  ಸದ್ಯದಲ್ಲಿ  ನಮಗಿರುವ  ಏಕೈಕ ಮಾರ್ಗವೆಂದರೆ  ಸಹಕಾರಿ ವ್ಯವಸ್ಥೆಯನ್ನು  ಬಲಪಡಿಸುವುದು.  ಸಹಕಾರಿ ಆಂಧೋಳನದ ಸೇವಾ ಸಾಧ್ಯತೆಯನ್ನು ವಿಸ್ತರಿಸುವುದು.  ಅತೀಯಾದ ಸರಕಾರೀ ಅವಲಂಬನೆಯನ್ನು  ನಿವಾರಿಸುವುದು. ಸರ್ವ ಸದಸ್ಯರಲ್ಲಿ  ಸಹಕಾರೀ ಪ್ರಜ್ಞೆಯನ್ನು ಜಾಗ್ರತಗೊಳಿಸುವುದು.  ಅತೀಯಾದ  ಖಾಸಗೀ ಅವಲಂಬನೆಯನ್ನು ತಪ್ಪಿಸುವುದು.

    ನಮ್ಮ ಸಹಕಾರಿಗಳಲ್ಲಿ  ಮೊದಲು ಇಚ್ಛಾಶಕ್ತಿ ಜಾಗ್ರತಗೊಳ್ಳಬೇಕು. ರಚನಾತ್ಮಕ ಸೇವಾಕಾರ್ಯಗಳಲ್ಲಿ ಇನ್ನೂ ಹೆಚ್ಚು ತೊಡಗಿಕೊಳ್ಳಬೇಕು. ಆರ್ಥಿಕ ಬಲ  ಸಾಂಸ್ಕೃತಿಕ ಬಲವನ್ನೂ ವೃದ್ಧಿಸಬಲ್ಲದು.  ದೈನ್ಯತೆಯನ್ನು ನಿವಾರಿಸಿ  ಆತ್ಮಾಭಿಮಾನವನ್ನು ಹೆಚ್ಚಿಸ ಬಲ್ಲದು.  ಸಹಕಾರ ನಮ್ಮೊಳಗಿನ  ಸಂಘರ್ಷ, ಅಸಮಾಧಾನವನ್ನು  ಕಡಿಮೆ ಮಾಡಿ, ಸ್ನೇಹವನ್ನು ವೃದ್ಧಿಸುತ್ತದೆ.  ಒಕ್ಕೂಟ ಇಡೀ ಸಮುದಾಯವನ್ನು ಎತ್ತರಿಸುತ್ತದೆ.  

    ಸಹಕಾರೀ  ಬಂಧುಗಳೇ,  ಸಹಕಾರವೆಂಬ  ಅದ್ಭುತವಾದ  ಶಕ್ತಿ  ನಮಗೆ ದೊರಕಿದೆ.  ಅದರ ಸದ್ಬಳಕೆ ಗೈಯ್ಯೋಣ. ನಮ್ಮ ಕೃಷಿ ಸಮುದಾಯದ  ಸರ್ವಾಂಗೀಣ ಪ್ರಗತಿಯ ಪಥದಲ್ಲಿ,  ಇನ್ನೂ  ಹೆಚ್ಚು ವೇಗದಿಂದ  ಕ್ರಮಿಸೋಣ.

ʻʻಸುಲಭವೇನಲ್ಲ ನರಲೋಕ ಹಿತ ನಿರ್ಧಾರ |  ಬಲಕೆ ನೋಳ್ಪರ್‌ ಕೆಲರ್‌,  ಕೆಲರ್ ಎಡಕೆ ನೋಳ್ಪರ್‌ ||

 ವಿಲವಿಲನೆ ಚಪಲಿಸುವ ಮನುಜ ಸ್ವಭಾವದಲಿ | ನೆಲೆ ಗೊತ್ತು  ಹಿತಕೆಲ್ಲಿ...?-----ಮಂಕುತಿಮ್ಮ ||ʼʼ

         ಸಮುದಾಯಂ ಬಾಳ್ಗೆ                                    ಸಹಕಾರಂ ಗೆಲ್ಗೆ.

(ಶಿರಸಿ  ತಾ-  ಬಿಸಲಕೊಪ್ಪ ಸ. ಸಂ. ಸುವರ್ಣಮಹೋತ್ಸವದ  ಸ್ಮರಣಸಂಚಿಕೆಗೆ.)