Tuesday 26 September 2023

ಮುಕ್ತಕ ಮಣಿಗಳ ಮಡಿಲಲ್ಲಿ. (ಮುನ್ನುಡಿ)

 

           ʻʻತನು  ಬತ್ತಲೆಯಿದ್ದಡೇನೋ ,  ಮನ ಶುಚಿಯಾಗದನ್ನಕ್ಕರ..?

            ಮಂಡೆ  ಬೋಳಾದಡೇನೋ ,  ಭಾವ  ಬಯಲಾಗದನ್ನಕ್ಕರ..?

            ಭಸ್ಮವ  ಪೂಸಿದಡೇನೋ , ಕರಣಾದಿ  ಗುಣಂಗಳನೊತ್ತಿ   ಮೆಟ್ಟಿ  ಸುಡದನ್ನಕ್ಕರ..?

            ಇಂತೀ  ಆಶೆಯ  - ವೇಷದ ಭಾಷೆಗೆ , ಗುಹೇಶ್ವರ..... ನೀ  ಸಾಕ್ಷಿಯಾಗೆ  ಛೀ.....ಎಂಬೆನು.ʼʼ

                                                         ( ಅಲ್ಲಮ  ಪ್ರಭು )

       ಸೃಷ್ಟಿಶೀಲತೆಗೆ  ಕಾಲದ  ಹಂಗಿಲ್ಲ. ವಯೋಮಾನದ  ತಡೆಯಿಲ್ಲ. ಪ್ರಾದೇಶಿಕತೆಯ  ಮಿತಿಯಿಲ್ಲ.  ಅದು ಸ್ವಚ್ಛಂದ  ವಿಹಾರಿ.  ಸಹೃದಯ  ಸಂಚಾರಿ.  ಲಲಿತ  ಕಲೆಗಳೂ  ಹಾಗೆ.  ಸಂಸ್ಕೃತಿಯನ್ನು  ಜೀವಂತವಾಗಿರಿಸಿ  ಸದಾ  ಚೈತನ್ಯದಿಂದ  ನಳನಳಿಸುವಂತೇ  ಮಾಡುವ  ತಂಗಾಳಿ.  ಬರಬಿದ್ದ  ಮನಸ್ಸನ್ನು  ಮತ್ತೆ  ಚಿಗುರಿಸಿ ಪಲ್ಲವಿಸುವಂತಾಗಿಸುವ  ಸಂಜೀವಿನಿ. 

      ಮಾತು  ನೆನಪಾದದ್ದೇ   ಹೊಚ್ಚ  ಹೊಸ  ಮುಕ್ತಕಗಳ  ಸಂಕಲನವನ್ನೊಂದನ್ನು  ಕಂಡಾಗ. ಸುದೀರ್ಘ  ಬದುಕಿನ  ಶ್ರೀರಂಗದಲ್ಲಿ  ಸಿಕ್ಕ  ಅಮೂಲ್ಯ  ಜೀವನಾನುಭವಗಳ  ಮುತ್ತುಗಳನ್ನು   ಮುಕ್ತಕಗಳಲ್ಲಿ  ಕಟ್ಟಿ  ಸಹೃದಯರಿಗೆ  ವಿತರಿಸುತ್ತಿರುವ    ನಮ್ಮೆಲ್ಲರ  ಪ್ರೀತಿಯ  ʻʻ ಕಟ್ಟಿ  ಮಾಸ್ತರʼʼ  ಎಂದೇ  ಪ್ರಸಿದ್ಧರಾಗಿರುವ  ಶ್ರೀರಂಗ  ಕಟ್ಟಿ  ಯವರ  ಸೃಜನಶೀಲ  ಚಟುವಟಿಕೆಯನ್ನು  ಗಮನಿಸಿದಾಗ.

    ಮೂರು  ದಶಕಗಳಷ್ಟು  ಕಾಲ  ಅಧ್ಯಯನ  ಅಧ್ಯಾಪನ  ಪ್ರಕ್ರಿಯೆಯಲ್ಲಿ  ತಮ್ಮನ್ನು  ತೊಡಗಿಸಿಕೊಂಡು,    ಕ್ಷೇತ್ರಕ್ಕೆ  ನ್ಯಾಯ  ಒದಗಿಸಿದ   ಕಟ್ಟಿಯವರಿಗೆ   ನಿವೃತ್ತಿ  ಎಂಬುದು  ಕೇವಲ  ವೃತ್ತಿಯಿಂದ  ಬಿಡುಗಡೆ  ಮಾತ್ರ.  ಅವರೊಳಗಿನ  ಕವಿ, ದಾರ್ಶನಿಕ,  ಲೇಖಕ, ಚಿಂತಕ ಮತ್ತು ಶಿಕ್ಷಕ,   ನಿವೃತ್ತಿಯ  ಗೋಜಿಗೆ  ಹೋಗದೇ   ಮತ್ತಷ್ಟು  ಚಟುವಟಿಕೆಗಳ  ಆಯಾಮವನ್ನು   ಪಡೆದುಕೊಂಡು,ಸಂತೃಪ್ತ  ಆಲಯದಿಂದ   ಸಂಸ್ಕೃತಿಯ  ಬಯಲಿಗಿಳಿದಿದ್ದಾರೆ.

      ಇಂದು  ಬೆಳಿಗ್ಗೆ  ನನಗನಿಸಿತು /  ನಾನೆಷ್ಟು  ಶ್ರೀಮಂತ  ಎಂದು /

      ಏಕೆಂದರೆ  ನನ್ನಲ್ಲಿ  ಮಧುರ / ನೆನಪುಗಳು  ಲೆಕ್ಕವಿಲ್ಲದಷ್ಟು  ತುಂಬಿವೆ /

ಎಂಬ ಅಂತರಂಗ  ಸ್ವತ್ವದ  ಸತ್ಯ   ಅನಾವರಣ ವಾದುದನ್ನು  ತಾವೇ  ಗುರುತಿಸಿಕೊಳ್ಳುತ್ತಾರೆ. ತಕ್ಷಣ  ಜಾಗ್ರತರಾಗಿ  ಪೆನ್ನೆತ್ತಿಕೊಳ್ಳುತ್ತಾರೆ.  ಜೀವನಾನುಭವಗಳ  ಹಿಂದಿನ  ತಾತ್ವಿಕತೆಯ  ಹುಡುಕಾಟಕ್ಕೆ     ಪ್ರಾರಂಭಿಸಿ ಬಿಡುತ್ತಾರೆ.  ಬದುಕಿನ  ನಡುವಣ  ಪ್ರೀತಿ  ಸ್ನೇಹ  ಮಮತೆ  ಸಂಕುಚಿತತೆ,  ದ್ರೋಹ  ಕಾಪಟ್ಯಗಳ  ಸಂಕೀರ್ಣ  ಖಜಾನೆಯ  ಬೀಗತೆರೆದು,  ಆತ್ಮವಿಮರ್ಶೆಯೊಂದಿಗೆ,  ಸಮುದಾಯದ  ವೈವಿಧ್ಯಮಯ  ಅನುಭವಲೋಕವನ್ನು  ಪ್ರವೇಶಿಸಿಯೇ  ಬಿಡುತ್ತಾರೆ.

    ಕಟ್ಟಿಯವರು  ಅದೃಷ್ಟವಂತರು.  ತಮ್ಮ ಪರಂಪರೆಯಿಂದ, ಅದಕ್ಕೂ  ಮುಖ್ಯವಾಗಿ  ತಮ್ಮ ತಂದೆಯವರಿಂದ  ಅಪಾರ  ಸಾಮಾಜಿಕ  ರಾಜಕೀಯ, ತಾತ್ವಿಕ, ಮತ್ತು ಸಾಂಸ್ಕೃತಿಕ  ಅನುಭವ ಸಂಪತ್ತನ್ನು  ಪಿತ್ರಾರ್ಜಿತವಾಗಿ  ಪಡೆದುಕೊಂಡವರು.  ತಂದೆಯವರ  ಸ್ವಾತಂತ್ರ್ಯಹೋರಾಟದ  ಕಟು ಅನುಭವಗಳು, ಅವರ ವಿಶಾಲ  ಓದಿನ  ಆಳ, ಜೀವನರಂಗದಲ್ಲಿ  ಅವರು  ಎದುರಿಸಿದ  ಕಷ್ಟಕೋಟಲೆಗಳು,  ಜೈಲ್‌ ವಾಸದ  ಕಟು ಕ್ಷಣಗಳು, ಇಂಥ ವಿವರಗಳನ್ನು  ಶ್ರೀರಂಗರ  ಮಾತಿನಲ್ಲಿ  ಕೇಳುವಾಗಲೇ  ಮೈ  ನವಿರೇಳುತ್ತದೆ.  ಅವರ  ಸಾಹಸಮಯ ಜೀವನಗಾಥೆಯೂ   ಇನ್ನೊಂದು  ಕೃತಿಯಾಗಿ  ಮೂಡಿಬರಲಿ  ಎಂಬ  ಹಕ್ಕೊತ್ತಾಯವನ್ನು  ನಾನೀಗಾಗಲೇ  ಸಲ್ಲಿಸಿದ್ದೇನೆ.

     ಮನಸ್ಸೇ  ಅದೊಂದು  ಅಗಾಧ  ಗಣಿಯಿದ್ದಂತೆ. ನಡೆದು  ಬಂದ  ಮನೋಭೂಮಿಯ  ಆಳಕ್ಕೆ  ಅಗೆದಷ್ಟೂ  ಅನುಭವದ  ಚಿನ್ನದದಿರು  ದೊರಕುತ್ತಲೇ  ಹೋಗುತ್ತದೆ.  ಆತ್ಮಶೋಧದ  ಪ್ರವೃತ್ತಿ  ಮಾತ್ರ  ಅವಶ್ಯ..  ಇಲ್ಲದಿದ್ದರೆ  ಭೂಮಿ ಎಂಬುದು  ಬರೀ  ಮಣ್ಣು. ಬದುಕು  ಅಂದರೆ  ಇಷ್ಟೇ   ಎಂಬ  ನಿರಾಶಾವಾದಿಯ  ಹಳಹಳಿಕೆಗಿಂತ, ಅನುಭವದ  ದೊರಗು  ಮಣ್ಣಲ್ಲಿ  ಒಳಗಣ್ಣು  ತೆರೆದು  ಹುಡುಕಿದಾಗ, ಸಿಗುವ  ಅನನ್ಯ  ಅನುಭವದ  ಚಿನ್ನ ದದಿರಿಗೆ  ಬೆಲೆ  ಕಟ್ಟಲಾಗದು.  ಜೀವನ  ಕೊಡುವ   ಆಪ್ತವಾದ  ಮಾನವೀಯ  ಸಂದೇಶ  ಮಾತ್ರ  ಅಮೂಲ್ಯವಾದ  ಸಂಪತ್ತಾಗಿ  ಪರಿಣಮಿಸುತ್ತದೆ.  ಶ್ರೀರಂಗ ರಲ್ಲಿ  ಇಷ್ಟೆಲ್ಲ  ವೈವಿಧ್ಯಮಯ ವ್ಯಕ್ತಿತ್ವವಿದೆ  ಎಂಬುದು  ಅನಾವರಣವಾದದ್ದೇ   ಆಧುನಿಕ  ಸಮೂಹ ಮಾಧ್ಯಮದಲ್ಲಿ ...ವಿದ್ಯುನ್ಮಾನದ  ಒಡಲಲ್ಲಿ.   ವೃತ್ತಿಯ  ಬಂಧನದಿಂದ  ಮುಕ್ತವಾದ   ಕಟ್ಟಿಯವರ  ವ್ಯಕ್ತಿತ್ವ,  ಮಾತು  ಮತ್ತು  ಅಕ್ಷರದ  ಮೂಲಕ  ಮತ್ತೊಂದು  ಆಯಾಮಕ್ಕೆ  ದಾಂಗುಡಿಯಿಡುತ್ತಿರುವುದು  ನಿಜಕ್ಕೂ   ಸಂತಸ  ತರುವ  ಸಂಗತಿ.

 ʻʻ ಅಕ್ಷರ  ಓದಲಾರದವ  ಅನಕ್ಷರನಾದರೆ / ಭಾವನೆಯ  ಓದಲು  ಬಾರದವ ಅನಾಗರಿಕ / 

    ಅನಕ್ಷರಸ್ಥ  ಅನ್ಯರ  ಬದುಕು  ಕಟ್ಟಿಯಾನು /  ಅನಾಗರಿಕ  ಮನೆ  ಮನ  ಮುರಿದಾನು /

   ಎಂದು  ಉದ್ಗರಿಸುವ  ಮೂಲಕವೇ  ತಮ್ಮ  ಮುಕ್ತಕ ಪ್ರಕ್ರಿಯೆಯಲ್ಲಿ  ಸಾಗುವ,  ಕಟ್ಟಿಯವರ  ಗಮನವೆಲ್ಲ,  ಸುಶೀಕ್ಷಿತರು,  ನಾಗರಿಕರು  ಎಂಬ  ಅಭಿದಾನ  ಹೊತ್ತ,   ಅಕ್ಷರಸ್ಥ  ಅಶೀಕ್ಷಿತರನ್ನೇ  ಗುರಿಯಾಗಿಸಿಕೊಂಡಿದ್ದಾರೆ.  ದಿನದಿಂದ  ದಿನಕ್ಕೆ  ಅಕ್ಷರಸ್ಥರ  ಸಂಖ್ಯೆ  ಏರುತ್ತಿರುವುದು   ಶುಭಸಂಕೇತವಾದರೂ,  ಅಕ್ಷರಸ್ಥರ  ಪ್ರಪಂಚ ಮಾತ್ರ  ತಾತ್ವಿಕತೆಯನ್ನು  ಕಳೆದುಕೊಂಡು   ಶುಷ್ಕವಾಗಿ, ನಿರೀಕ್ಷೆಯನ್ನು  ಹುಸಿಗೊಳಿಸುತ್ತಿರುವುದು,  ಕಟ್ಟಿಯವರನ್ನು  ಕಾಡುತ್ತಿದೆ.

     ಕೆಲವು  ಪ್ರಾಣಿ  ಪಕ್ಷಿಗಳು  ಮರಿಯಾಗಿದ್ದಾಗಲೇ   ಕೆಲವು  ಆದೇಶಗಳನ್ನು ಸಾವಿರ ಬಾರಿ ಪುನರುಚ್ಛರಿಸಿದಾಗ ರೂಢಿಸಿಕೊಳ್ಳುತ್ತವೆ.  ಊಡಿಸಿದ  ಆದೇಶಗಳನ್ನು  ಜೀವನವಿಡೀ  ಪಾಲಿಸುತ್ತವಂತೆ.  ಮನುಷ್ಯಮಾತ್ರ  ಪ್ರಾಣಿಗಿಂತ  ಶೀಘ್ರ  ಮೌಲ್ಯಗಳನ್ನು  ಅರ್ಥೈಸಿಕೊಳ್ಳುತ್ತಾನೆ.  ಮಾಹಿತಿ  ಕೋಶದಲ್ಲಿ  ಸಂಗ್ರಹಿಸಿಕೊಳ್ಳುತ್ತಾನೆ.  ಆದರೆ  ಅದರ  ಅನ್ವಯದಿಂದ  ದೂರ  ಸರಿದುಬಿಡುತ್ತಾನೆ.  ಅವನ  ಮಾಹಿತಿಯನ್ನು  ಅರಿವಿಗೆ  ತಂದುಕೊಡುವ  ಕೆಲಸ  ಜೀವನವಿಡೀ  ಜರುಗುತ್ತಿರಬೇಕು.  ಅಂಥ  ಕೆಲಸವನ್ನು  ಧರ್ಮಗಳಲ್ಲಿರುವ  ಪ್ರಾರ್ಥನೆ,  ಮೌಲ್ಯಗಳನ್ನು  ಜೀವಂತವಾಗಿರಿಸುವ   ಲಲಿತಕಲೆಗಳು, ಕಾವ್ಯ  ಸಾಹಿತ್ಯಗಳು  ನಿರಂತರವಾಗಿ  ಮಾಡುತ್ತಿರುತ್ತವೆ.  ಸಂತಸದೊಂದಿಗೆ  ಎಚ್ಚರ  ಮೂಡಿಸುವ  ಪ್ರಕ್ರಿಯೆ   ಕಟ್ಟಿಯವರ ಮೂಲಕವೂ  ಜರುಗುತ್ತಿದೆ.

      ಎತ್ತರಕ್ಕೆ ಬೆಳೆಯಬೇಕು  ಅಂದರೆ/ ಪ್ರಯತ್ನದ  ಮೆಟ್ಟಿಲುಗಳನ್ನು  ತುಳಿದು /

       ಮೇಲೇರಬೇಕೇ  ಹೊರತು   ಇದಕ್ಕಾಗಿ /  ಬೇರೆಯವರನ್ನು  ತುಳಿಯುವುದಲ್ಲ. /

ಎಂದೆನ್ನುತ್ತ,  ಶಿಕ್ಷಣದ  ಹೆಸರಲ್ಲಿ  ಒಂದಿಷ್ಟು  ಮಾಹಿತಿಯ  ಕೃತಕ ಸಾಮಗ್ರಿಯನ್ನು  ಮಿದುಳೊಳಗೆ  ತುರುಕಿಕೊಂಡ  ಆಧುನಿಕ  ಮನುಷ್ಯ  ಎತ್ತರ ತಲುಪಲು  ಮತ್ತೊಬ್ಬರನ್ನು ತುಳಿಯತೊಡಗುತ್ತಾನೆ.  ಜೀವ ವಿರೋಧಿಯಾಗುತ್ತಾನೆ. ಆತನ  ಶೋಷಣೆ, ಸ್ವಾರ್ಥದ  ಆಯುಧ  ಮತ್ತಷ್ಟು  ಹರಿತಗೊಳ್ಳುತ್ತದೆ.

      ʻʻತನ್ನ  ಗೂಡನ್ನು ಕೈಯಾರೆ  ಕಟ್ಟಿಕೊಳ್ಳುವ / ಸಂಭ್ರಮದಲ್ಲಿರುವ  ರೇಶ್ಮೆಹುಳಕ್ಕೆ  ತನಗೆ /

          ತಾನೇ  ಮರಣ  ಮೃದಂಗ ಬಾರಿಸುವುದು / ಕೊನೆಗೂ  ಗೊತ್ತೇ  ಆಗುವುದಿಲ್ಲ. /ʼʼ

ಎಂದು  ಪರಿತಪಿಸುತ್ತಾರೆ.   ಭಯಂಕರ  ಭೋಗಾಸಕ್ತಿ,  ಸಂಗ್ರಹದ  ದಾಹ,  ಭಾರೀ  ಜಿಪುಣತನದಂತ  ಪ್ರವೃತ್ತಿ  ಕಂಡಾಗ   ಕನಲುತ್ತಾರೆ.

              ಬದುಕಿನಲಿ  ನಮಗೆ  ಎರಡೇ  ಆಯ್ಕೆ /  ಯಾರಿಗಾದರೂ  ಕೊಟ್ಟು ಹೋಗುವುದು,/

              ಇಲ್ಲವೇ  ಇಲ್ಲಿಯೇ  ಬಿಟ್ಟು ಹೋಗುವುದು / ಕೊಂಡು  ಹೋಗುವ  ಆಯ್ಕೆಯೇ  ಇಲ್ಲ./

ಎಂಬ ದಾರ್ಶನಿಕ  ಕಟು  ಸತ್ಯವನ್ನು  ನುಡಿಯುತ್ತಾರೆ.   ಪ್ರಸ್ತುತ  ಕೃತಿಯಲ್ಲಿರುವ  ಇನ್ನೂರಕ್ಕೂ  ಮಿಕ್ಕ  ಮುಕ್ತಕ ಗಳಲ್ಲಿ  ವೈವಿಧ್ಯಮಯ  ವಸ್ತುಗಳು  ಬಿಡಿಬಿಡಿಯಾಗಿ  ಮೂಡಿವೆ.   ಆಧುನಿಕ  ಬದುಕಿನ  ಯಾಂತ್ರಿಕ ಮಹಾ ಪ್ರವಾಹ  ಅರಿವಿಲ್ಲದೇ  ನಮ್ಮನ್ನು  ಕೊಚ್ಚಿಕೊಂಡು  ಹೋಗುತ್ತಿರುವ  ಕಟುವಾಸ್ತವದಲ್ಲಿ,  ಪ್ರವಾಹದ  ರಭಸಕ್ಕೆ  ತಡೆಯೊಡ್ಡುವ,  ಮಾನವೀಯ  ಮೌಲ್ಯಗಳನ್ನು  ಮತ್ತೊಮ್ಮೆ  ಅರಿವಿಗೆ  ತಂದುಕೊಡುವಂತ, ಪ್ರಕ್ರಿಯೆಗೇನೂ  ಕೊರತೆಯಿಲ್ಲ.  ಸಾಹಿತ್ಯ  ಸದಾ  ಅದೇ  ಕೆಲಸ  ಮಾಡುತ್ತಿದೆ. ಸಂಪತ್ತಿನ  ಅಹಮಿಕೆ,  ಧನಮದ , ವ್ಯಕ್ತಿಯನ್ನು  ಅದೆಷ್ಟು  ಭೃಷ್ಟನನ್ನಾಗಿಸುತ್ತದೆ,  ಎಂಬುದನ್ನು  ವಚನವೊಂದು  ವಿಡಂಬಿಸುವ  ಪರಿಯನ್ನು  ಗಮನಿಸಬಹುದಾಗಿದೆ.

           ʻʻ ಹಾವು ತಿಂದವರ ನುಡಿಸಬಹುದು    ಗರ ಹೊಡೆದವರ ನುಡಿಸಬಹುದು

            ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ

             ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು ನೋಡಾ ಕೂಡಲ ಸಂಗಮದೇವ  (ಬಸವಣ್ಣ)ʼʼ

         ಕ್ರೌರ್ಯ, ದುಷ್ಟತನ, ಶೋಷಣೆ  ಸ್ವಾರ್ಥದಂತ  ಮಾನವ  ದೌರ್ಬಲ್ಯಗಳನ್ನು  ವಿಡಂಬಿಸುವ  ಪರಂಪರೆ  ಈಗಿನದ್ದಲ್ಲ.  ಸಂಸ್ಕೃತಸಾಹಿತ್ಯದಲ್ಲಂತೂ  ಮುಕ್ತಕಗಳ  ಗುಡಾಣವೇ  ಇದೆ. ನಮ್ಮ ಹಳೆಗನ್ನಡ ಕಾವ್ಯಗಳು,  ಶಾಸನ ಗಳಿಂದ ಪ್ರಾರಂಭಗೊಂಡು,  ವಚನಸಾಹಿತ್ಯದಲ್ಲಿ  ಅಗಾಧವಾಗಿ  ಬೆಳೆದು, ಬಸವಣ್ಣ  ಅಲ್ಲಮರಿಂದ  ಡಿ.ವಿ,ಜಿ ದಿನಕರ ದೇಸಾಯಿ ಯವರೆಗೆ, ಪ್ರಗತಿಶೀಲ  ನವ್ಯ  ನವೋದಯ ಬಂಡಾಯ  ಕಾಲವನ್ನೂ  ದಾಟಿ  ಈವರೆಗೂ ಚಾಟೂಕ್ತಿ, ಹನಿಗವನ  ಮಿನಿಗವನ  ಚುಟುಕ  ಮುಂತಾದ  ನಾಮಧೇಯಗಳಿಂದ  ಅವ್ಯಾಹತವಾಗಿ  ಸಾಗುತ್ತಲೇ  ಬಂದಿದೆ. ಸರ್ವಜ್ಞ ನಂತೂ  ಮುಕ್ತಕಗಳ  ಮಹಾರಾಜ  ಎಂದರೆ  ಆಶ್ಚರ್ಯವಿಲ್ಲ.  ಸಂಕ್ಷಿಪ್ತವಾದ  ಸಾಲುಗಳಲ್ಲಿ  ಸೂಕ್ಷ್ಮ  ಅನುಭವಗಳನ್ನು  ರೋಮಾಂಚನಕಾರಿಯಾಗಿ  ಸ್ಫೋಟಿಸುತ್ತಿರುವುದನ್ನು  ಕಾಣುತ್ತಲೇ  ಇದ್ದೇವೆ.  ಶ್ರೀರಂಗ  ಕಟ್ಟಿಯವರಂತೇ  ಸಿ.ಪಿ.ಕೆ ಯವರೂ  ಸಹ  ಗದ್ಯಾತ್ಮಕ  ಸಾಲುಗಳಲ್ಲಿ  ಸಾಕಷ್ಟು  ಮುಕ್ತಕಗಳನ್ನು  ಸುರಿಸಿದ್ದಾರೆ. 

ʻʻ ಗಾಂದಿ ಜಯಂತಿಯಂದು ಮಾಂಸವನ್ನು ತಿನ್ನಬಹುದೇ ಎಂಬ ಪ್ರಶ್ನೆಯೊಮ್ಮೆ ಮನಸ್ಸಿಗೆ ಬಂತು,

 ಮರು ಕ್ಷಣದಲ್ಲಿ ಮನಸ್ಸು ಹೇಳಿತು ಅಯ್ಯೊ ಹುಚ್ಚ! ಗಾಂದಿಯನ್ನೆ ತಿಂದಿದ್ದೇವೆ, ಇನ್ನು ಮಾಂಸದಲ್ಲೇನಿದೆ (ಸಿ.ಪಿ.ಕೆ.)ʼʼ

            ಪ್ರಸ್ತುತ ʻʻ ಬದುಕ  ಪಯಣದ.ʼʼ ಕೃತಿ  ಒಂದು ದೃಷ್ಟಿಯಲ್ಲಿ  ಪ್ರಯೋಗಶೀಲತೆಯ  ಪ್ರಾರಂಭವೆನ್ನಬಹುದಾಗಿದೆ.  ವಚನಗಳಂತೇ  ವ್ಯಾಖ್ಯಾರೂಪದಲ್ಲಿ  ಸಾಗುತ್ತಿರುವ  ಇಲ್ಲಿಯ  ರಚನೆಗಳಲ್ಲಿ  ಕೆಲವು  ವಾಚ್ಯತೆಯಿಂದ  ಸೊರಗಿದರೆ,  ಹಲವು,  ಉದ್ಘಾರದ  ಆಳದಲ್ಲಿ  ತಾತ್ವಿಕತೆಯ  ಸ್ಪಂದನವನ್ನೂ  ಹೊಂದಿವೆ.  ಗದ್ಯಗಂಧೀ  ರಚನೆಗಳ  ಪರಿಣಾಮಕ್ಕಿಂತ,  ಲಯಬದ್ಧ  ಛಂದೋಬದ್ಧ  ಸಾಲುಗಳ ಪರಿಣಾಮ  ಇನ್ನೂ ಹೆಚ್ಚು. 

ಶ್ರೀರಂಗರಲ್ಲಿ  ಭಾವ ಸಮೃದ್ಧಿಯಿದೆ.  ಸುಂದರ  ಭಾಷೆಯಿದೆ.  ಅಭಿವ್ಯಕ್ತಿಸುವ  ಉತ್ಸಾಹವಿದೆ.  ಇವೆಲ್ಲಕ್ಕೂ ಕೀರೀಟವಿಟ್ಟಂತೇ  ಸಾಲುಗಳಿಗೆ  ಛಂದಸ್ವರೂಪ  ಒದಗಿದರೆ,  ಮುಕ್ತಕ  ಪರಂಪರೆಯ  ಮತ್ತೊಂದು  ಸಶಕ್ತ  ಕೊಂಬೆ  ಕನ್ನಡದಲ್ಲಿ  ಮೂಡಿಬಂದಂತಾಗುತ್ತದೆಯೆಂದು  ತಿಳಿದಿದ್ದೇನೆ.

     ಇದು  ಶ್ರೀರಂಗ  ಕಟ್ಟಿಯವರ  ಪ್ರಾರಂಭಿಕ  ಪ್ರಯತ್ನ.ಈಗಾಗಲೇ ಆಧುನಿಕ  ಕನ್ನಡ ಚುಟುಕುಗಳ  ಚಕ್ರವರ್ತಿ ಎಂದೇ  ಕರೆಯಬಹುದಾದ  ದಿನಕರದೇಸಾಯಿ, ಜೊತೆಗೆ  ವಿಡಂಬಾರಿ,  ವಿ.ಜಿ.ಭಟ್‌ ಮುಂತಾದವರು, ಕನ್ನಡ ಚುಟುಕುಗಳಿಗೆ  ಸುವರ್ಣದ  ಚೌಕಟ್ಟು ತೊಡಿಸಿದ್ದಾರೆ. 

      ಶ್ರೀರಂಗ ಕಟ್ಟಿ ಅವರ  ಶ್ರೀಮದ್‌ಗಂಭೀರ  ರಚನೆಗಳನ್ನು  ಕಂಡಾಗ  ನಮ್ಮ  ಜಿಲ್ಲೆಯ  ಸಾರಸ್ವತ ಲೋಕಕ್ಕೆ  ಇನ್ನೊಬ್ಬ  ಪ್ರತಿಭಾವಂತರ  ಆಗಮನ  ಶತಃಸಿದ್ಧ  ಎಂಬುದು  ಮನದಟ್ಟಾಗುತ್ತಿದೆ.  ಇನ್ನಷ್ಟು  ರಚನೆಗಳು  ಹೊಮ್ಮಿಬರಲೆಂದು, ಆತ್ಮೀಯವಾಗಿ  ಹಾರೈಸುತ್ತಿದ್ದೇನೆ.

                                                                   ಗೌರವಾದರಗಳೊಂದಿಗೆ,

                                                                                 ಸುಬ್ರಾಯ  ಮತ್ತೀಹಳ್ಳಿ.  ತಾ- ೨೪-೧-೨೦೨೨.

 

No comments:

Post a Comment