Tuesday 26 September 2023

ಜಯ್ ಹೋ.......ಜಯರಾಮ್.!!

 

ನಮ್ಮೋಣಿ  ಮಾಣಿ  ಏಣಿಯೇರಿದ್ದು

ಹಣಕಿ  ತಿಣಕಿ  ಬಾನ ತಡಗಿದ್ದು,

ಗಾಳಿ  ಬರಗಿ  ಗೋಣಿ  ತುಂಬಿದ್ದು 

ಮಿಣಿ ಮಿಣಿ  ದೀಪ ಹಿಡ್ದು     ಮಿಂಚ  ಬೀರಿದ್ದು.

ಸಸಾರದ  ಮಾತಲ್ಲ.  ಇದು  ಶ್ರೀ  ಸಂಸಾರಿ  ಮಾತು.

   ಹೂಕನಸು  ತುಂಬಿದ  ಮನಸು,

ಖಾಲಿಕಿಸೆ  ಬುದ್ಧಿಭಾವದ  ಕಣಜ. 

ಬಗ್ಗದ  ಬೆನ್ನು, ತಗ್ಗದ  ಪೆನ್ನು,  ಇದು  ತಣ್ಣನೆಯ  ಗನ್ನು.

   ಕೆಂಪಲ್ಲ  ಕೇಸರಿಯೂ  ಅಲ್ಲ.   ಅಪ್ಪಟ  ಮಣ್ಣಿನ  ವರ್ಣ.

ತಪ್ಪಿನ  ಗುಪ್ಪೆ  ಕಂಡತಕ್ಷಣ, ಬಾಣ  ಬೀರುವ  ಕರ್ಣ.

   ಮಧ್ಯಮ  ಮಾಧ್ಯಮ   ಅಸಮ  ಸುಮ.

ಪದ್ಯ ಗದ್ಯ  ಗದ್ಯಪದ್ಯ, ಗದ್ದಿಗೆಗೆ  ಬಲುದೂರ,

ಸದ್ದಿಲ್ಲದ  ಗುದ್ದಿಗೆ  ಸದಾಸಿದ್ಧ.

    ಮಂತ್ರವೆಲ್ಲ್‌  ಕುತಂತ್ರವಾಗಿ, ಗುಡಿಯೆಲ್ಲ  ಗಡಂಗಾಗಿ,

ಪೂಜೆ  ಪಾಪದ  ಮಡುವಾಗಿ,  ಹೂವು  ಹಾವಾಗಿ,  ಹರೆಯುವಲ್ಲಿ

ಅರಿವ  ಮರೆಸಿ ರಕ್ತ  ಹೀರುವಲ್ಲಿ,  ಚೀರುತ್ತದೆ  ಅಕ್ಷರ

ಎಚ್ಚರದ  ಚಾವಟಿಯಲ್ಲಿ.

   ಬಂಡಲ್ಲ  ಬಂಡಾಯಿ.  ತಂಟೆಯಿಲ್ಲ  ಬರೀ  ತುಂಟ.

ಮೊಂಡಲ್ಲ  ಗಟ್ಟಿತುಂಡು.  ಸಿಡಿಗುಂಡು.

ಕಂಡ  ಬ್ರಹ್ಮಾಂಡವ, ಕಾಕ

ಕನಕ  ಕಿಂಡಿಯಲ್ಲಿ.

    ಈರಾಮ  ಆ ರಾಮನಲ್ಲ/  ಐಷಾರಾಮ  ಬಳಿ  ಸುಳಿಯಲಿಲ್ಲ.

ಭೀಮ ಭಾವದ  ಧರ್ಮನೀತ. 

ಕೈಯೆತ್ತಿ  ಕೊಟ್ಟನಷ್ಟೇ  ಕಿಂಚಿತ್ತೂ  ಕೊಂಡಿಲ್ಲ.

================================================================

            ೧೪-೪- ೨೦೨೧.  ಉಪಾಯನ  ಪ್ರಶಸ್ತಿಪ್ರದಾನದ  ಕ್ಷಣದಲ್ಲಿ

             ಓದಿದ  ಕವನ.

No comments:

Post a Comment