Thursday 21 September 2023

ಮೈತ್ರಿ ಮಮತೆಯ ಮಡಿಲು ʻʻದಿ.ಗಣೇಶ ಹೆಗಡೆ.ʼʼ

 

ʻʻಪ್ರಜ್ಞಾನ  ನಿನದ  ವಿಜ್ಞಾನ ಮೂಲ  ನೆಲೆಯ  ದೃಷ್ಟಾರರಿವರು

ಮಾಧುರ್ಯಮಯದ, ಸಾಮರ್ಥ್ಯ  ಘನದ  ದಿವ್ಯದಾನಂದ  ಘನರು.

ಸೂರ್ಯ  ತೇಜದಲಿ   ಪಡಿಮೂಡಿಕೊಂಡ  ಸೌಂದರ್ಯ   ಪಥಗಳನ್ನು

ಸತತ  ಧ್ಯಾನದಲಿ  ಆತ್ಮಭಾವದಲಿ  ಶೋಧಕರು   ಕಂಡರಿನ್ನುʼʼ    (  ಮಹರ್ಷಿ  ಅರವಿಂದ.  ಅನು-  ಇಂಪು.)

 

      ಭೌತಿಕವಾಗಿ  ಪ್ರಕೃತಿಯ  ಎಲ್ಲ  ಜೀವಿಗಳಿಗೂ  ಮಿತಿಯಿದೆ.  ಒಂದು  ದಿನ  ಭೂತ ವಾಗಲೇ  ಬೇಕು.  ಆದರೆ   ಜೈವಿಕವಾಗಿ  ಮೂಡಿಸಿದ  ಹೆಜ್ಜೆಗುರುತಿನ  ಆಳ  ಅಗಲಗಳು  ಮಾತ್ರ  ಚಿರಂಜೀವಿಯಾಗಿಸಲು  ಸಾಧ್ಯ.  ಮನಸ್ಸು  ಬುದ್ಧಿ  ಪ್ರಜ್ಞೆ  ಕ್ರಿಯೆ  ಗಳಲ್ಲಿ  ಸಮತೋಲ  ಪಡೆದುಕೊಂಡ  ವ್ಯಕ್ತಿ  ಮಾತ್ರ  ತನ್ನ  ಗುರುತನ್ನು ಶಾಶ್ವತವಾಗಿಸಲು  ಸಾಧ್ಯ.  ವೈಯಕ್ತಿಕವಾಗಿ  ಸಾಧನೆಗೈದು   ಕೋಟಿ  ಕೋಟಿ  ಗಳಿಸಿ,  ಅಚ್ಚರಿಮೂಡಿಸಿದ   ಅದೆಷ್ಟೋ  ವ್ಯಕ್ತಿಗಳನ್ನು  ಕಂಡಿದ್ದೇವೆ.  ಕಾಣುತ್ತಿದ್ದೇವೆ.  ತಮ್ಮದೇ  ಚಿಪ್ಪಿನೊಳಗೆ,  ತನ್ನದೇ  ಸಂಸಾರಕ್ಕಾಗಿ  ದುಡಿದು  ದುಡಿದು  ಸತ್ತ  ವ್ಯಕ್ತಿಗಳು,  ಅವರು  ಸೃಷ್ಟಿಸಿದ  ಭೌತಿಕ  ಆಸ್ತಿ  ಕರಗುವ  ವರೆಗೆ  ಮಾತ್ರ  ಅದೇ  ಸಂಸಾರದ  ಸ್ಮರಣೆಯಲ್ಲಿರುತ್ತಾರೆ.  ನಂತರ  ಅವರ  ಭಾವಚಿತ್ರಕ್ಕೆ  ತೊಡಿಸಿದ  ಹಾರ  ಉದುರುತ್ತದೆ.  ಕೊನೆಯಲ್ಲಿ   ಭಾವಚಿತ್ರವೂ  ಗೋಡೆಗೆ  ಭಾರವಾಗುತ್ತದೆ.

       ವಿವೇಕಾನಂದರು  ಹಿಮಾಲಯದ  ಒಂದು  ಹಳ್ಳಿಯನ್ನು  ಸಂದರ್ಶಿಸಿದಾಗ,  ಎಲ್ಲರ  ಬಾಯಲ್ಲೂ   ಒಬ್ಬ  ಯೋಗಿಯದೇ  ಗುಣಗಾನ  ನಡೆಯುತ್ತಿರುತ್ತದೆ. ಆ  ಯೋಗಿ   ಹಳ್ಳಿಯ  ಹತ್ತಿರದ  ಒಂದು  ಗುಹೆಯಲ್ಲಿ   ಕಳೆದ  ಇಪ್ಪತ್ತು  ವರ್ಷಗಳಿಂದ  ತಪಸ್ಸಿನಲ್ಲಿ  ನಿರತನಾಗಿ,  ಗ್ರಾಮದ  ಜನತೆಯ  ಗೌರವಕ್ಕೆ  ಪಾತ್ರನಾಗಿದ್ದಾನೆ.  ವಿವೇಕಾನಂದರಿಗೂ  ಕುತೂಹಲವಾಯಿತು.  ಗುಹೆಗೆ  ಧಾವಿಸಿದರು.  ಯೋಗಿ  ಪದ್ಮಾಸನದಲ್ಲಿ   ಧ್ಯಾನಾಸಕ್ತನಾಗಿದ್ದ.   ಕೆಲವು  ಹೊತ್ತು  ಆತನನ್ನು  ದೃಷ್ಟಿಸಿ  ವಿವೇಕಾನಂದರು  ಹೊರಬಂದು  ಮೌನವಾಗಿ  ನಡೆಯತೊಡಗಿದರು.  ಜೊತೆಯಲ್ಲಿರುವವರು   ಯೋಗಿಯ ಬಗೆಗೆ  ತಮಗೇನನ್ನಿಸುತ್ತಿದೆ....?  ಎಂದು  ಕೇಳಿದರು. ಆಗ  ವಿವೇಕಾನಂದರು,  ʻʻ  ಸುತ್ತಲೆಲ್ಲ  ಎಷ್ಟೆಲ್ಲ  ಬಂಡೆಗಳು  ನಿಶ್ಚಲವಾಗಿ  ಕುಳಿತಲ್ಲೇ  ಕುಳಿತು, ಸಾವಿರಾರು  ವರ್ಷದಿಂದ  ತಪಸ್ಸು ಗೈಯ್ಯುತ್ತಿವೆಯಲ್ಲ.  ಅದರಿಂದ  ಯಾರಿಗೆ  ಯಾವ  ಪ್ರಯೋಜನವಾಗಿದೆ....?  ಎಂದು  ಕೇಳಿದರಂತೆ. 

      ಒಬ್ಬ  ವ್ಯಕ್ತಿ  ಸ್ವಂತಕ್ಕಾಗಿ  ಅದಷ್ಟೇ  ಸಾಧನೆ  ಗೈದಿರಲಿ,  ಅದು  ಶ್ರೇಷ್ಟವಾಗಿಯೂ  ಇರಬಹುದು.  ಅವನಿಂದ  ಸಮುದಾಯಕ್ಕೆ  ಯಾವ  ಕೊಡುಗೆಯೂ  ಇರದಿದ್ದರೆ   ನಿಜವಾದ  ಮನುಷ್ಯತ್ವವೇ  ನಷ್ಟವಾದಂತೆ..  ತಾನು  ಬದುಕುವುದರೊಂದಿಗೆ,  ಮತ್ತೊಬ್ಬರ  ಜೀವನಕ್ಕೂ  ಬೆಳಕಾದರೆ  ಮಾತ್ರ   ಜೀವನ  ಸಾರ್ಥಕವೆಂದೆನ್ನಿಸಿಕೊಳ್ಳುತ್ತದೆ.  ಮನುಷ್ಯ  ತನ್ನಷ್ಟಕ್ಕೆ  ತಾನಿದ್ದರೂ   ಅವನ  ಬದುಕಿಗಾಗಿ  ಮುನ್ನೂರು  ವ್ಯಕ್ತಿಗಳು  ಸಹಾಯ ಸಲ್ಲಿಸುತ್ತಿರುತ್ತಾರಂತೆ.    ಋಣ  ಪರಿಹಾರಕ್ಕಾದರೂ  ವ್ಯಕ್ತಿ   ಸಮುದಾಯದ  ಸುಖ  ದುಃಖಗಳಿಗೆ  ಸ್ಪಂದಿಸಬೇಕಾಗುತ್ತದೆ.  ಅಂಥ  ನಿಸ್ವಾರ್ಥ  ಸ್ಪಂದನದಿಂದಲೇ   ಮಾನವ  ಬದುಕು  ಸಹನೀಯವಾಗುತ್ತದೆ.

      ಇಂಥ  ಸಂದರ್ಭದಲ್ಲೆಲ್ಲ   ನಮ್ಮ  ಜಿಲ್ಲೆಯ  ಚಿರಸ್ಮರಣೀಯ  ವ್ಯಕ್ತಿತ್ವ  ʻʻ ದಿ. ಗಣೇಶ್‌  ಹೆಗಡೆ  ದೊಡ್ಮನೆʼʼ  ನೆನಪಾಗುತ್ತಾರೆ. ಇಂದಿನ  ಕಟು ವಾಸ್ತವದ  ವಿಚಿತ್ರ  ಸಂದಿಗ್ಧದಲ್ಲಿ   ಹೊಚ್ಚಹೊಸ  ಬೆಳಕಾಗಿ  ಮಿಂಚುತ್ತಾರೆ.  ಗಣೇಶ  ಹೆಗಡೆಯವರು   ಹುಟ್ಟಿದ್ದು   ದೊಡ್ಡಮನೆ  ಎಂಬ  ಪುಟ್ಟ ಗ್ರಾಮದಲ್ಲಿ.  ಅವರು  ಜನ್ಮಿಸಿದ್ದು  ಇಪ್ಪತ್ತನೇ  ಶತಮಾನದ  ಎರಡನೆಯ  ದಶಕದಲ್ಲಿ.  ಸಿದ್ದಾಪುರವೂ  ಸ್ವಾತಂತ್ರ್ಯಹೋರಾಟದಲ್ಲಿ  ತೀವ್ರವಾಗಿ  ತನ್ನನ್ನು  ತೊಡಗಿಸಿಕೊಂಡ  ಪರ್ವಕಾಲದಲ್ಲಿ.    ಅವರ  ಪ್ರಜ್ಞಾನೇತ್ರ  ತೆರೆದಾಗ  ಕಂಡಿದ್ದು  ಮಾತ್ರ  ಶೂನ್ಯ  ಶೂನ್ಯ  ಶೂನ್ಯ.   ಸಾಮಾಜಿಕ  ಸಾಂಸ್ಕೃತಿಕ  ಶೈಕ್ಷಣಿಕ  ಆರೋಗ್ಯ,  ಮತ್ತು  ರಾಜಕಾರಣ,  ಮುಂತಾದ  ಸಮುದಾಯದ  ಮೂಲಭೂತ  ಅವಶ್ಯಕತೆಗಳಲ್ಲಿ  ಒಂದೂ  ವ್ಯವಸ್ಥಿತವಾಗಿಲ್ಲದೇ,     ಬಗೆಗೆ  ಜನರಲ್ಲಿ  ಅದರ  ಅವಶ್ಯಕತೆಯ  ಬಗೆಗಿನ  ಅರಿವೂ  ಇಲ್ಲದೇ  ಒಂದು  ಸ್ಥಗಿತ  ಸಮಾಜ  ಉಸಿರಾಡುತ್ತಿತ್ತು.   ರಾಜ್ಯ  ರಾಷ್ಟ್ರೀಯ   ಪರಿಕಲ್ಪನೆಯಾಗಲೀ,  ಜಾತ್ಯತೀತ  ಮನೋಭಾವವಾಗಲೀ,  ಇಲ್ಲದ,  ಕೇವಲ  ತನ್ನ  ಜಾತಿ,  ತನ್ನ  ಸಮುದಾಯವೇ  ತನ್ನ  ಪ್ರಪಂಚವಾಗಿ,  ತನ್ನ  ಉದ್ಧಾರದ  ಬಗೆಗೇ  ಹೋರಾಟಗೈಯ್ಯುತ್ತಿದ್ದ,  ಕೂಪದ  ಮಂಡೂಕಗಳಾಗಿ  ಪರಿವರ್ತನ  ಗೊಂಡಿದ್ದ   ಜನಸಮುದಾಯವೇ  ಸುತ್ತಲೂ  ತುಂಬಿಕೊಂಡಿದ್ದನ್ನು   ದಿ. ಗಣೇಶ  ಹೆಗಡೆಯವರು  ಕಾಣುವಂತಾಯಿತು.  ಅವರ  ಸುತ್ತಲಿದ್ದ  ಜನಸಮುದಾಯದಲ್ಲಿ,  ತೀವ್ರ  ಅನಕ್ಷರತೆ,  ಮೌಢ್ಯ,   ಜಾಡ್ಯರೂಪದಲ್ಲಿ  ಬೆರೆತಿದ್ದರೆ,  ಬಡತನ  ಸ್ಥಾಯಿಯಾಗಿತ್ತು.  ತಮ್ಮ  ಬದುಕಿಗೆ  ಹೊಸದೊಂದು  ತಿರುವು  ಶಿಕ್ಷಣದಿಂದ  ಸಾಧ್ಯ,  ವ್ಯಾಪಾರ,  ಕೈಗಾರಿಕೆಯಿಂದ  ಸಾಧ್ಯ,  ವೈಜ್ಞಾನಿಕ  ಕೃಷಿಪದ್ಧತಿಯಿಂದ  ಸಾಧ್ಯ  ಎಂಬ  ಮೂಲಭೂತ  ವಿಚಾರಗಳಿಂದ  ಬಹುದೂರವಿದ್ದ   ಜನರ  ನಡುವೆ,  ಆಧುನಿಕ  ವಿದ್ಯೆಯಿಂದ  ವಂಚಿತರಾದರೂ,  ಸ್ವಯಂ  ಅಧ್ಯಯನದಿಂದ  ಸಂಪಾದಿಸಿದ  ಪ್ರಗತಿಪರ   ಜ್ಞಾನದಿಂದ   ಹೊಚ್ಚ ಹೊಸ  ಕನಸನ್ನು  ಕಾಣುವ  ಪ್ರವೃತ್ತಿ  ಹೆಗಡೆಯವರಲ್ಲಿ  ವಿಕಾಸಗೊಂಡಿತು.  ಪಟ್ಟಣದಿಂದ  ಬಹುದೂರವಿದ್ದರೂ   ಅವರ  ಜ್ಞಾನಪಿಪಾಸೆ,  ಜಿಲ್ಲೆಯಲ್ಲೇ  ಅಪರೂಪವಾದ  ಸಾಮಾಜಿಕ  ಸಾಂಸ್ಕೃತಿಕ   ಸಾಧಕನನ್ನು  ಸೃಷ್ಟಿಸಿತು.

    ಮನುಷ್ಯನಿಗೆ  ಮನಸ್ಸು  ಎಂಬುದೊಂದಿದ್ದಂತೇ,   ಆವಾವ  ಪರಿಸರಕ್ಕೂ  ಇರುತ್ತದೆ.  ಜೇನು  ತನ್ನ  ಉಳಿವಿಗಾಗಿಯೇ   ರಾಣಿಹುಳವನ್ನು  ಸೃಷ್ಟಿಸಿಕೊಂಡಂತೇ,   ಸಾಮಾಜಿಕ  ಬದುಕು  ಪತನಮುಖಿಯಾದಾಗ,  ಬುದ್ಧ,  ಶಂಕರ,  ವಿವೇಕ, ಚಾಣಕ್ಯ,  ಗಾಂಧಿ  ಬಸವಣ್ಣ  ಮುಂತಾದ  ಅನನ್ಯ  ವ್ಯಕ್ತಿತ್ವಗಳನ್ನು,  ಆವಾವ  ಕಾಲದ  ಸಮುದಾಯ  ತನ್ನ  ಉಳಿವಿಗಾಗಿ  ಸೃಷ್ಟಿಸಿಕೊಂಡಿತು.  ಒಂದೊಂದು  ಕಾಲ  ಒಂದೊಂದನ್ನು  ತೀವ್ರವಾಗಿ   ಅಪೇಕ್ಷಿಸುತ್ತದೆ.   ಅದು  ಅಧ್ಯಾತ್ಮವೋ  ಅನ್ನವೋ  ಅಕ್ಷರವೋ  ಯಾವುದೇ  ಆಗಿರಬಹುದು. 

     ಹನ್ನೆರಡನೇ  ಶತಮಾನದ  ಶರಣ ಕ್ರಾಂತಿ    ಸಂದರ್ಭದಲ್ಲಿ   ನೆನಪಾಗುತ್ತಿದೆ.  ಜಾತಿ ತಾರತಮ್ಯ,  ಅನಕ್ಷರತೆ  ದಾರಿದ್ರ್ಯ  ತಾಂಡವವಾಡುತ್ತಿರುವ   ವಿಷಮ  ವಾತಾವರಣದಲ್ಲೇ   ಬಸವಣ್ಣ  ಉತ್ತರ  ಕರ್ನಾಟಕದಲ್ಲಿ  ಧಾರ್ಮಿಕ  ಆಧ್ಯಾತ್ಮಿಕ  ವೈಚಾರಿಕ  ಸಂಚಲನ  ಮೂಡಿಸುತ್ತಾನೆ.  ವ್ಯಕ್ತಿ  ಶುದ್ಧಿ,  ಅರ್ಥಶುದ್ಧಿ   ಕಾಯಕನಿಷ್ಠೆ  ಮತ್ತು  ದಾಸೋಹ   ವೆಂಬ   ನಾಲ್ಕು  ಮಹತ್ವಪೂರ್ಣವಾದ  ತಾತ್ವಿಕ  ನೆಲೆಯಲ್ಲಿ,  ಸಮಾನತೆ,  ಬಂಧುತ್ವ,ಗಳ  ಧ್ಯೇಯದಲ್ಲಿ,  ಜಾತಿ  ಲಿಂಗ  ತಾರತಮ್ಯರಹಿತವಾದ   ಆದರ್ಶ  ಸಮಾಜವನ್ನು  ಸೃಷ್ಟಿಸಲು  ಹೋರಾಡಿದ್ದು,    ಪ್ರಯತ್ನದಲ್ಲಿ  ಯಶವನ್ನು  ಪಡೆದದ್ದು  ಈಗ  ಇತಿಹಾಸ.   ಅಲ್ಲಿ  ನಮ್ಮನ್ನು ಅತ್ಯಂತ  ಆಕರ್ಷಿಸುವ  ಘೋಷಣೆ ಹೀಗಿದೆ.  ನಾನು  ದುಡಿಯಬೇಕು. (ಕಾಯಕ)  ನಾವೆಲ್ಲ  ಉಣ್ಣಬೇಕು.(ದಾಸೋಹ). ಅದಕ್ಕೂ  ಮೊದಲು  ವ್ಯಕ್ತಿ  ಶುದ್ಧವಾಗಿರಬೇಕು.  ಆರ್ಥಿಕತೆಯಲ್ಲಿ  ನಿರ್ವಂಚನೆಯ  ಪ್ರವೃತ್ತಿಯಿರಬೇಕು.  ಸೋ...ಹಂ.  ಬದಲು   ದಾಸೋಹಂ,  ಎನ್ನಬೇಕು.   ಅದು  ಆಕಾಲದ  ಅಗತ್ಯವಾದರೆ,    ಇಪ್ಪತ್ತನೆಯ  ಶತಮಾನದಲ್ಲಿ  ಅನ್ನಕ್ಕಿಂತ  ಅಕ್ಷರದ  ಅವಶ್ಯಕತೆ  ತೀವ್ರವಾಗಿತ್ತು.  ದೇಶದಾದ್ಯಂತ  ಶಿಕ್ಷಣದ  ಬಗೆಗಿನ  ಹಸಿವು  ಒಮ್ಮೆಲೇ  ಜಾಗ್ರತವಾಗಿತ್ತು.  ಪಾರಂಪರಿಕವಾಗಿ  ಶತ ಶತಮಾನಗಳಿಂದ  ಶಿಕ್ಷಣ  ವಂಚಿತವಾದ  ವರ್ಗಗಳಲ್ಲಿ   ಶಿಕ್ಷಣದ  ಹಸಿವು  ಮೂಡತೊಡಗಿತ್ತು. ಇಂಥ  ಉತ್ಕಟ  ಹಸಿವಿಗೆ  ಅಕ್ಷರ  ನೀಡುವ  ಉನ್ನತ  ಧ್ಯೇಯವನ್ನ  ಅಂಗೀಕರಿಸಿದವರು  ದಿ.ಗಣೇಶ  ಹೆಗಡೆಯವರು.  ಸಿದ್ದಾಪುರದಂಥ  ತಾಲೂಕಾ  ಸ್ಥಳದಲ್ಲಿ  ಪ್ರೌಢಶಾಲೆಯೂ  ಇಲ್ಲದ  ಸ್ಥಿತಿಕಂಡು  ಮರುಗಿದ  ಹೆಗಡೆಯವರು,  ತಾಲೂಕಾ  ಕೇಂದ್ರವೊಂದಲ್ಲ,  ದೂರ  ದೂರದ  ಹಳ್ಳಿಗಳಲ್ಲೂ  ಪ್ರೌಢಶಾಲೆಗಳನ್ನು  ಸ್ಥಾಪಿಸುವಲ್ಲಿ  ಯಶಪಡೆದರು.  ತಾವು  ಶಿಕ್ಷಣ ವಂಚಿತರಾದರೂ,  ತಾಲೂಕಿನಲ್ಲಿ  ಮಹಾವಿದ್ಯಾಲಯದ  ಸ್ಥಾಪನೆಯ  ವರೆಗೂ  ಏಕವ್ಯಕ್ತಿಯಾಗಿ,  ಕ್ರಾಂತಿಕಾರಕ  ಅಕ್ಷರ  ದಾಸೋಹಿಯಾದರು.

     ಹಾಗೆಂದು   ಸಿದ್ದಾಪುರ  ತಾಲೂಕು  ಅನಾಮಧೇಯವಲ್ಲ.  ಸ್ವಾತಂತ್ರ್ಯಹೋರಾಟದಲ್ಲಿ,  ರಾಷ್ಟ್ರಮಟ್ಟದಲ್ಲಿ  ಗುರುತಿಸಿಕೊಂಡ,  ಇತಿಹಾಸದಲ್ಲಿ  ತನ್ನದೇಆದ  ಸ್ಥಾನವನ್ನು  ಸ್ಥಾಪಿಸಿಕೊಂಡ   ಮಣ್ಣು  ಇದು.  ಸ್ವಥಃ  ಹೆಗಡೆಯವರ  ಕುಟುಂಬ  ಸ್ವಾತಂತ್ರ್ಯಹೋರಾಟದಲ್ಲಿ  ಮುಂಚೂಣಿಯಲ್ಲಿತ್ತು.   ಸಾಮಾಜಿಕ,  ವೈಚಾರಿಕ,  ಸೈದ್ಧಾಂತಿಕವಾದ  ಸಮೃದ್ಧ   ಹಿನ್ನೆಲೆಯನ್ನೇ  ಪಡೆದುಕೊಂಡಿದ್ದ   ಗಣೇಶ  ಹೆಗಡೆಯವರ  ವ್ಯಕ್ತಿತ್ವ  ಸಹಜವಾಗಿ,  ವ್ಯಕ್ತಿನಿಷ್ಠತೆಯಿಂದ,  ಸಮಷ್ಠಿಹಿತದ   ವಿಶಾಲ  ಅಂಗಣಕ್ಕೆ   ಪ್ರವೇಶಿಸಿತ್ತು.

      ಇಪ್ಪತ್ತನೆಯ  ಶತಮಾನದ  ಐವತ್ತರ  ದಶಕದಲ್ಲೂ  ಸಿದ್ದಾಪುರ,  ಸಹಕಾರ,  ಬ್ಯಾಂಕಿಂಗ್‌, ಕೈಗಾರಿಕೆ ಯಂಥ  ಆರ್ಥಿಕ  ಪರ್ಯಾಯಗಳಿಲ್ಲದೇ,  ಜನತೆ  ಖಾಸಗಿ  ವ್ಯವಹಾರಸ್ಥರಿಂದ  ಅತೀವ  ಶೋಷಣೆಗೆ  ಒಳಗಾಗಿದ್ದರು.  ಕೇವಲ  ಕೃಷಿಯನ್ನು  ಅವಲಂಬಿಸಿದ,  ತುಂಡು  ಹೊಲಗಳ  ರೈತರ  ಬವಣೆ  ತಾರಕಕ್ಕೇರಿತ್ತು.  ತೋಟಗಾರಿಕೆ  ನೆಲಕಚ್ಚಿತ್ತು.  ವ್ಯವಸ್ಥಿತ  ಮಾರುಕಟ್ಟೆಯ  ಸೌಲಭ್ಯವೂ  ಇಲ್ಲದ  ನಿರ್ವಾತದಲ್ಲಿ,  ಕನಸುಗಾರ  ಗಣೇಶ  ಹೆಗಡೆಯವರ  ಪ್ರವೇಶದಿಂದ, ಉತ್ತರಕನ್ನಡ  ಜಿಲ್ಲೆಯ  ಸಾರ್ವಜನಿಕ  ರಂಗದಲ್ಲಿ  ವಿದ್ಯುತ್‌ ಸಂಚಾರವಾಯಿತು.

    ಸಹಕಾರ ಚಳುವಳಿಗೆ  ಹೊಸ  ಚುರುಕು ಮೂಡಿತು. ಶೈಕ್ಷಣಿಕ ಕ್ಷೇತ್ರಕ್ಕೆ  ಹೊಸ  ಆಯಾಮ ದೊರಕಿತು. ಬ್ಯಾಂಕ್‌ ಗಳ  ಸ್ಥಾಪನೆಯಿಂದ  ತಾಲೂಕಿನಲ್ಲಿ  ಆರ್ಥಿಕ  ಸಂಚಲನವುಂಟಾಯಿತು.  ಪುಸ್ತಕ ಪ್ರಕಟಣೆ,  ಪತ್ರಿಕೆಗಳ  ಸ್ಥಾಪನೆ,  ಮುದ್ರಣ ವ್ಯವಸ್ಥೆಗಳ  ಮೂಲಕ  ವೈಚಾರಿಕತೆಯ  ಹೊಸ  ಆಯಾಮ  ಪಡೆಯಿತು.  ಧಾರ್ಮಿಕ  ಆಧ್ಯಾತ್ಮಿಕ ಕ್ಷೇತ್ರದಲ್ಲಿ  ಸಿದ್ದಾಪುರ  ಇಡೀ  ರಾಜ್ಯದ  ಗಮನಸೆಳೆಯಿತು. 

    ಅವರು  ಕಟ್ಟಿದ  ಶಂಕರಮಠ  ಕೇವಲ  ಧಾರ್ಮಿಕ  ಕೇಂದ್ರವಾಗದೇ,  ಸಾಂಸ್ಕೃತಿಕ  ಆಧ್ಯಾತ್ಮಿಕ ಚಳುವಳಿಯೇ  ಆಗಿ   ರಾಜ್ಯದ  ಧಾರ್ಮಿಕ  ಕೇಂದ್ರಗಳ  ಕಣ್ಣು ತೆರೆಸುವಲ್ಲಿ  ಪರಿಣಾಮಕಾರೀ  ಪಾತ್ರ ವಹಿಸಿತು.

    ತಮಗಿರುವ  ರಾಜ್ಯ  ರಾಷ್ಟ್ರ ಮಟ್ಟದ  ರಾಜಕೀಯ ಕ್ಷೇತ್ರದ  ನಿಕಟ ಸಂಪರ್ಕದಿಂದ, ವೈಯಕ್ತಿಕವಾಗಿ  ಯಾವ ಸ್ಥಾನ, ಮಾನವನ್ನು  ಅಪೇಕ್ಷಿಸದೇ,ನೂರಾರು  ಪ್ರತಿಭಾವಂತ   ಬಡ  ನಿರುದ್ಯೋಗಿಗಳಿಗೆ  ಉದ್ಯೋಗದಾತರಾದರು.  ಸಾರ್ವಜನಿಕ  ಮೂಲಭೂತ ಸೌಲಭ್ಯಗಳು  ಗ್ರಾಮಾಂತರಗಳಿಗೆ  ತಲುಪಲು  ನೆರವಾದರು.  ಸೋದರರಾದ  ಮಾಜೀ  ಮುಖ್ಯಮಂತ್ರಿ  ರಾಮಕೃಷ್ಣ ಹೆಗಡೆಯವರು  ಸರಕಾರದಲ್ಲಿ  ಉನ್ನತ ಸ್ಥಾನಕ್ಕೇರಿದಂತೇ,  ಗಣೇಶ  ಹೆಗಡೆಯವರ  ಸಾಮಾಜಿಕ  ಪ್ರಜ್ಞೆಗೆ  ಹೊಸ  ಗರಿ ಮೂಡಿತು.  ವ್ಯವಸ್ಥಿತ  ಹೆದ್ದಾರಿ  ನಿರ್ಮಿಸುವ  ಮೂಲಕ   ಕರಾವಳಿ  ಮತ್ತು  ಘಟ್ಟ ಪ್ರದೇಶಗಳ  ನಡುವೆ  ಸೂಕ್ತ ಸಂಪರ್ಕವೇರ್ಪಡುವಲ್ಲಿ  ಹೆಗಡೆಯವರ  ಪ್ರಯತ್ನ  ಸದಾ  ಸ್ಮರಣೆಯಲ್ಲಿ  ಇರುವಂತಾಯಿತು.

     ಗಣೇಶ  ಹೆಗಡೆಯವರು, ಅದೆಷ್ಟೋ  ಸಂಸ್ಥೆಗಳ  ಅಧಿಕಾರ ಸ್ಥಾನಕ್ಕೇರಿದರು. ಅಷ್ಟೇ  ವೇಗದಲ್ಲಿ  ತ್ಯಾಗವನ್ನೂ ಗೈದರು.  ಶಾಸಕರಾಗಬಹುದಿತ್ತು.  ಸಂಸತ್ತಿಗೆ  ಪ್ರವೇಶಿಸ ಬಹುದಿತ್ತು.  ಮನಸ್ಸು ಮಾಡಿದ್ದರೆ    ಸ್ಥಾನಗಳನ್ನೂ  ದೊರಕಿಸಿ  ಕೊಳ್ಳಬಹುದಿತ್ತು.  ಆದರೆ  ಸಾಮಾಜಿಕ  ಸಾಂಸ್ಕೃತಿಕ ಮೌಲ್ಯಗಳನ್ನು  ಮೈಮನಗಳಲ್ಲಿ  ತುಂಬಿಕೊಂಡಿದ್ದ  ಹೆಗಡೆಯವರು,  ತಮ್ಮ  ಜಿಲ್ಲೆಗೇ  ತಮ್ಮನ್ನು  ಅರ್ಪಿಸಿಕೊಂಡರು. ಹೊಸ  ಹೊಸ  ಪ್ರತಿಭೆಗಳ  ಸೃಷ್ಟಿಗೆ  ಕಾರಣವಾದರು.

     ಮನಸ್ಸು ಮಾಡಿದರೆ,  ಉತ್ಕಟ  ಸ್ವಾಭಿಮಾನ  ಉನ್ನತ  ಕಾರ್ಯಶೀಲತೆ,  ಪ್ರೀತಿ  ಬಂಧುತ್ವಗಳಲ್ಲಿ  ನಂಬಿಕೆಯಿದ್ದಲ್ಲಿ,  ಒಂದು  ವ್ಯಕ್ತಿತ್ವಕ್ಕೆ  ಅದೆಷ್ಟು  ಆಯಾಮಗಳು  ಮೂಡುತ್ತವೆ  ಎಂಬುದಕ್ಕೆ  ದಿ.ಗಣೇಶ  ಹೆಗಡೆಯವರ  ಸಾಧನೆ  ಮತ್ತು  ಜೀವನ  ಸಾಕ್ಷಿನುಡಿಯುತ್ತದೆ.   ಸಹಸ್ರ ಶಿರಗಳು, ಕರಗಳು, ಸಹಸ್ರ ಪಾದಗಳ  ಮೂರ್ತಿಯನ್ನು  ಶಿಲ್ಪದಲ್ಲಿ  ಕಂಡಿದ್ದೇವೆ.  ಅಸಂಖ್ಯ  ಆಯಾಮಗಳಿರುವ,  ಎಲ್ಲ  ಆಯಾಮಗಳಲ್ಲೂ  ಒಬ್ಬನೇ  ವ್ಯಕ್ತಿ  ಸಾಧನೆಗೈದಿರುವ  ಉದಾಹರಣೆಯನ್ನು  ಕ್ವಚಿತ್ತಾಗಿ  ನಾವು  ಇತಿಹಾಸದಲ್ಲಿ  ಕಾಣುತ್ತೇವೆ.  ಅಂಥಹದ್ದೇ  ವ್ಯಕ್ತಿತ್ವವೊಂದು    ನಮ್ಮ  ಮಣ್ಣಿನಲ್ಲಿ  ಬದುಕಿದ್ದು  ಬಾಳಿದ್ದು,  ಬಾಳು ಕೊಟ್ಟಿದ್ದು,  ನಿಜಕ್ಕೂ  ಅಚ್ಚರಿಮೂಡಿಸುತ್ತದೆ.  ಅಭಿವೃದ್ಧಿಗೆ,  ವಿಕಾಸಕ್ಕೆ  ಮತ್ತೆ  ಇಂಥಹ  ವ್ಯಕ್ತಿತ್ವಕ್ಕಾಗಿ  ಹಪಾಹಪಿಸುತ್ತೇವೆ. 

       ಆದರೆ  ದಿ.ಗಣೇಶ  ಹೆಗಡೆಯವರು, ಆ ಕಾಲದ  ಜಿಲ್ಲೆಯ  ನಿರ್ವಾತಕ್ಕೊಂದು   ಹೊಸ  ಗಾಳಿಸೃಷ್ಟಿಸಿದಂತೇ,  ಹೊಸ  ಸ್ಪೂರ್ತಿಯಾದಂತೇ   ಮತ್ತೊಬ್ಬ  ಅಭಿವೃದ್ಧಿಯ  ಕನಸುಗಾರ  ಇನ್ನೂ  ಜನ್ಮಿಸಿಲ್ಲ.  ಕೇವಲ  ಸಿದ್ದಾಪುರ  ತಾಲೂಕೊಂದನ್ನೇ  ದೃಷ್ಟಿಯಲ್ಲಿಟ್ಟು ಕೊಂಡು  ಪರಿಶೀಲಿಸಿದರೆ,  ಮಾನ್ಯ  ಗಣೇಶ ಹೆಗಡೆಯವರ  ಕೊಡುಗೆಯ  ನಂತರ  ಮತ್ತೆ  ಸ್ಥಗಿತಗೊಂಡಂತೆನ್ನಿಸುತ್ತದೆ.  ಅವರ  ಮನದಲ್ಲಿ  ತನ್ನ  ತಾಲೂಕನ್ನು  ಮತ್ತೊಂದು  ಮಣಿಪಾಲನ್ನೋ,  ಉಡುಪಿಯನ್ನೋ  ಸೃಷ್ಟಿಸುವುದಾಗಿತ್ತು.  ಆರ್ಥಿಕ, ಶೈಕ್ಷಣಿಕ  ಮತ್ತು  ಆರೋಗ್ಯ ಕ್ಷೇತ್ರದಲ್ಲಿ  ಸ್ವಾವಲಂಬಿಯಾಗಿಸುವ  ಗುರಿ ಅವರಲ್ಲಿತ್ತು.  ತಾಂತ್ರಿಕ  ಮಹಾವಿದ್ಯಾಲಯ, ಸುಸಜ್ಜಿತ  ಆಸ್ಪತ್ರೆ,  ಪರಿಸರ ಸ್ನೇಹೀ  ಕೈಗಾರಿಕೆಗಳ  ಸ್ಥಾಪನೆ  ಅವರ  ಕನಸಾಗಿತ್ತು.  ಆದರೆ  ಅವರ  ಕನಸುಗಳೆಲ್ಲ  ಅವರೊಂದಿಗೆ  ಸಾಗಿ ಹೋದವು.  ನಮ್ಮ ಜಿಲ್ಲೆಯ  ಸಾವಿರಾರು  ಯುವ ಸಾಕ್ಷರ ಪ್ರತಿಭೆಗಳು  ದೇಶದಾದ್ಯಂತ  ಚದುರಿ  ಹೋದರು.  ಹಸಿರು  ಜಿಲ್ಲೆ  ಮೆಲ್ಲನೆ  ಕಪ್ಪಾಗುತ್ತಿದೆ.  ಯುವಶಕ್ತಿಯ  ಕೊರತೆಯಿಂದ  ಜಿಲ್ಲೆ  ಮತ್ತೆ  ನಿಶ್ಚಲಗೊಳ್ಳುತ್ತಿದೆ. 

     ಮತ್ತೆ    ಮಣ್ಣಿಗೆ  ಜೀವನೀಡುವ,  ಹಸಿರಿಗೆ  ಮತ್ತಷ್ಟು  ಉಸಿರು ನೀಡುವ,  ಗಣೇಶ ಹೆಗಡೆಯವರ  ಕನಸಿಗೆ  ನೀರೂಡಿಸುವ   ಮತ್ತೊಬ್ಬ  ಕ್ರಿಯಾಶೀಲ   ಸಜ್ಜನನ  ಆಗಮನಕ್ಕಾಗಿ,  ಜಿಲ್ಲೆ  ಸದಾ  ಕಾಯುತ್ತಲೇ  ಇದೆ.

      ʻʻನಮ್ಮೋಣಿ  ಮಾಣಿ, ಏಣಿ ಏರಿದ್ದಾ.  ಏರಿ  ಏರಿ ಆ ಕಾಶ  ತಡವಿದ್ದಾ.

       ಬೆಳ್ಕಿನ್‌  ಮಣಿಯಾ  ಎಣ್ಸಿ  ಗುಣ್ಸಿ   ಗೋಣಿತುಂಬಿದ್ದಾ.  

       ಒಣಾ  ಮಣ್ಣಲ್ಲಿ   ಅಗ್ದೂ  ಅಗ್ದೂ ,   ದೀಪದ   ಬೀಜಾ  ಬಿತ್ತಿದ್ದಾ. 

       ಮೈ  ಮನಸೂ  ಎರಡೂ  ತೇಯ್ದು   ರಕ್ತ  ಹರ್ಸಿದ್ದಾ.  

       ಈಗ  ಬಿಡು,  ಎಲ್ಲಾ  ಕನಸೂ  ನನಸಾಜು. 

       ಹೆರೆ  ಹೆರೆ  ಹೆಮ್ಮರ   ಅಂಬಾರಾ  ತುಂಬಿದ್ದು.

 ಬೇಕಷ್ಟ್‌  ಹಣ್ಣು   ಸಾಕಷ್ಟ್‌  ನೆರಳೂ   ಅಂಗಳದ್‌  ತುಂಬಾ  ಹರಡಿದ್ದು.    

 ಮರ್ಯಡಾ  ತಮಾ ....ನೆಟ್ಟವ್ನ. !       ಇಷ್ಟೆಲ್ಲಾ  ಕೊಟ್ಟವ್ನ.!! ʼʼ

==============================================

                                 ಸುಬ್ರಾಯ  ಮತ್ತೀಹಳ್ಳಿ.  ತಾ- ೧೭-೪-೨೦೨೨.

 

 

No comments:

Post a Comment