Saturday 23 September 2023

ಮೆರೆದೈತಿ ಮುಗದ ಎಂಬೋ ಒಂದೂರಾ

 

                  ಮೆರೆದೈತಿ  ಮುಗದ ಎಂಬೋ  ಒಂದೂರಾ

             

              ಮಲ್ಲಾಡ ಸೆರಗಿನ್ಯಾಗ / ಸುತ್ತ ಮುತ್ತ  ಬಹುದೂರಾ /

              ಸಿರಿತುಂಬಿ  ಧರಿಮ್ಯಾಗ / ದರಪೀಲಿ  ಭರಪೂರಾ /

              ಮೆರೆದೈತಿ  ಮುಗದಂಬೋ  ಒಂದೂರಾ / ಚಿತ್ತವಿಟ್ಟು ಕೇಳರಿ  ಮಜಕೂರಾ /

             ʻʻಮುಗದ ʼʼ  ಎಂಥ  ಮುಗ್ಧ  ಹೆಸರು.  ಉತ್ತರ ಕನ್ನಡ ಜಿಲ್ಲೆಗೆ    ಊರಿನ ಹೆಸರು  ಕೇಳುವುದೇ  ಒಂದು  ರೋಮಾಂಚನ.  ಅದೇ  ಊರಿನ  ಅದೇ  ಹೆಸರಿನ  ಕೆರೆಯಲ್ಲಿಯೇ ʻʻ ಬೇಡ್ತಿʼʼ  ಎಂಬ  ನದಿ  ಜನ್ಮಿಸಿ  ಉತ್ತರಕನ್ನಡ  ಜಿಲ್ಲೆಗೆ  ಪ್ರವೇಶಿಸಿ,  ಇಲ್ಲಿಯ  ಗಗನಚುಂಬೀ  ಪರ್ವತಾವಳಿಗಳನ್ನ,  ಹಚ್ಚ ಹಸಿರು  ಕಾನನವನ್ನ  ತೆಂಗು  ಕಂಗು  ಹುಂಗುಗಳ  ಕ್ಷೇತ್ರಗಳನ್ನ  ಹಸಿರಾಗಿಸುತ್ತ,  ಜನಜೀವನಕ್ಕೆ  ಉಸಿರು  ನೀಡುತ್ತ,  ಕರಾವಳಿಯನ್ನು  ಪ್ರವೇಶಿಸಿ, ಗಂಗಾವಳಿ ಎಂಬ  ಹೊಸನಾಮಧೇಯವನ್ನು  ಹೊತ್ತು,  ಸಾಗರದಲ್ಲಿ  ಲೀನವಾಗುತ್ತದೆ.

     ಮುಗದ  ವಿರುವುದು  ಬಯಲುಸೀಮೆಯ  ಧಾರವಾಡದಲ್ಲಿ.  ನದಿ  ಹರಿದಿರುವುದು  ಉತ್ತರಕನ್ನಡದ  ಮಲೆನಾಡ  ಒಡಲಲ್ಲಿ.  ಇದು  ಕೇವಲ  ನದಿಯೊಂದರ  ಕತೆಯಲ್ಲ.  ಬಯಲು ಮತ್ತು  ಮಲೆನಾಡನ್ನು  ಕಾವ್ಯದ  ನದಿಯೂ  ಬೆಸೆದಿದೆ.  ಪಂಪ,ಅಲ್ಲಮ, ಬೇಂದ್ರೆ, ಮುಂತಾದ  ಮಹಾ  ಕವಿಗಳೆಲ್ಲರ  ತವರು  ಬಯಲು ನಾಡಾದರೂ   ಮಲೆನಾಡಿನ  ಪ್ರಕೃತಿಸಿರಿ  ಅವರನ್ನು  ಕವಿಯನ್ನಾಗಿಸಿದೆ.  ಇಲ್ಲಿಯ  ವರ್ಣಮಯ  ಪ್ರಕೃತಿ  ಅಂಥ  ಪ್ರತಿಭೆಗಳಿಗೆ  ನೀರೆರೆದು  ಪೋಷಿಸಿದೆ.  ಇಲ್ಲಿಯ  ನಿಸರ್ಗ, ಸಮುದ್ರ, ಜೀವವೈವಿಧ್ಯ ಮತ್ತು  ವಿಶಿಷ್ಟ  ಸಂಸ್ಕೃತಿಯನ್ನು  ಕಂಡು  ರೋಮಾಂಚಿತಗೊಂಡಿದ್ದಾರೆ.  ತಮ್ಮ  ಕಾವ್ಯಗಳಲ್ಲಿ  ಸುಂದರವಾಗಿ, ಅಷ್ಟೇ ಅರ್ಥಪೂರ್ಣವಾಗಿ   ದಾಖಲಿಸಿದ್ದಾರೆ.

        ಆಧುನಿಕ  ಕಾಲಕ್ಕೆ  ಬಂದರೂ  ಬಯಲು ಮತ್ತು  ಮಲೆನಾಡ   ಸಂಬಂಧಗಳನ್ನು  ಸಾಂಸ್ಕೃತಿಕವಾಗಿ  ಬೆಸೆದ, ಹಲವು  ಉದಾಹರಣೆಗಳು  ಕಾಣ ಸಿಗುತ್ತವೆ.   ಕಳೆದ  ಮೂರ್ನಾಲ್ಕು  ದಶಕಗಳಿಂದ,  ಇದೇ  ಪ್ರಕೃತಿಯ  ಒಡಲಲ್ಲಿ  ಬದುಕುತ್ತ,  ಇಲ್ಲಿಯ  ಮಣ್ಣಿಗೆ  ಹೊಸ  ಜೀವವನ್ನು  ನೀಡುತ್ತಿರುವ,ಮುಗದದ  ಕವಿಗಳಾದ   ಶ್ರೀ  ಧರಣೇಂದ್ರ  ಕುರುಕುರಿ,  ಮತ್ತು  ರಾಣೆಬೆನ್ನೂರಿನ   ಮಹೋಪಾಧ್ಯಾಯ  ಪುಟ್ಟು  ಕುಲಕರ್ಣಿ,  ಇವರು  ಎದ್ದು  ಕಾಣುತ್ತಾರೆ.

      ಉತ್ತರಕನ್ನಡ ಜಿಲ್ಲೆಗೆ  ಪ್ರ ಪ್ರಥಮವಾಗಿ,  ಅನುವಾದ  ಸಾಹಿತ್ಯಕ್ಕೆ  ಲಭಿಸುವ  ರಾಷ್ಟ್ರಪತಿ  ಪದಕವನ್ನು   ತಂದಿತ್ತ  ಧರಣೇಂದ್ರ  ಕುರುಕುರಿ, ಜಿಲ್ಲೆಯ  ಸಾರಸ್ವತ  ಕೀರ್ತಿಯ  ಧ್ವಜವನ್ನು  ದಿಲ್ಲಿಯೆತ್ತರಕ್ಕೆ  ಏರಿಸಿದವರು.   ಮಹಾ ವಿದ್ಯಾಲಯದ  ಯಶಸ್ವೀ  ಉಪನ್ಯಾಸಕರಾಗಿ  ವಿದ್ಯಾರ್ಥಿಪ್ರಿಯರಾದವರು.  ತಮ್ಮ  ಸೃಜನಶೀಲ  ಚಟುವಟಿಕೆ,  ಅನುವಾದ  ಪ್ರಕ್ರಿಯೆಗಳಿಂದ  ಕನ್ನಡ  ಸಾಹಿತ್ಯಕ್ಷೇತ್ರದಲ್ಲಿ  ತಮ್ಮದೇ  ಆದ  ಛಾಪು  ಮೂಡಿಸಿದವರು.   ಕನ್ನಡದ  ಹತ್ತು  ಹಲವು  ಪ್ರಾತಿನಿಧಿಕ  ಸಾಹಿತ್ಯಕೃತಿಗಳನ್ನು  ಹಿಂದಿ ಜಗತ್ತಿಗೆ  ಕೊಂಡೊಯ್ದವರು.

       ಕುರುಕುರಿಯವರಿಗೆ  ಸಾಹಿತ್ಯವೆಂಬುದು  ಕೇವಲ  ಒಂದು  ಹವ್ಯಾಸವಲ್ಲ. ರಮ್ಯ  ಕನಸಲ್ಲ.  ಅಥವಾ  ಸ್ವವಿಜ್ರಂಭಣೆಯ  ಅಂಗಳವೂ ಅಲ್ಲ.  ನವ್ಯದ  ಕಾಲದಲ್ಲಿ  ಉದ್ಭವಿಸಿದ  ಪ್ರತಿಭೆ  ಇವರಾದರೂ  ಅತೀವ  ಅಂತರ್ಮುಖತೆ, ಆತ್ಮರತಿಯಲ್ಲಿ  ಆಟವಾಡಿದವರೂ  ಅಲ್ಲ.  ಕಾವ್ಯವಾಗಲೀ  ಅವರ  ನೆಚ್ಚಿನ  ಅನುವಾದ ಚಟುವಟಿಕೆಯಾಗಲೀ  ಅದೊಂದು  ನಿರ್ದಿಷ್ಠ  ಅನುಭವದ  ಶೋಧನಾ  ಕಾರ್ಯ.  ಮೈಯ್ಯೆಲ್ಲಾ  ಕಣ್ಣಾಗಿಸಿಕೊಂಡು  ಸುತ್ತಲಿನ  ಜಗತ್ತನ್ನು  ಸೂಕ್ಷ್ಮವಾಗಿ  ಅವಲೋಕಿಸುತ್ತಾ  ಮಾನವ ಬದುಕಿನ  ಏರು  ಇಳಿವು, ಯಾತನೆ, ಗೋಮುಖವ್ಯಾಘ್ರತನ,  ಸ್ನೇಹ  ಪ್ರೀತಿ,  ಪ್ರಕೃತಿ, ಮುಂತಾದ  ವಸ್ತುವಿನ  ಹಿನ್ನೆಲೆಯಲ್ಲಿ, ಮಾನವ  ಪ್ರವೃತ್ತಿಯ  ಅಸಂಖ್ಯ  ವೈವಿಧ್ಯತೆಗಳನ್ನು, ಪರಿಣಾಮಕಾರಿಯಾಗಿ  ಕಾವ್ಯಭಾಷೆಯಲ್ಲಿ  ಹಿಡಿದಿಡುವ  ಪ್ರಾಮಾಣಿಕ  ಯತ್ನವನ್ನು, ಅವರೆಲ್ಲ  ರಚನೆಗಳಲ್ಲಿ  ಕಾಣಬಹುದಾಗಿದೆ.

      ನವ್ಯದಿಂದ  ಪ್ರಾರಂಭಿಸಿ  ಬಂಡಾಯ  ದಲಿತ  ದಲಿತೋತ್ತರಗಳ  ಎಲ್ಲ  ಧನಾತ್ಮಕ  ಅಂಶಗಳು, ಎರಕ  ಹೊಯ್ದಂಥ  ಅರ್ಥಪೂರ್ಣ  ಕಾವ್ಯವ್ಯಕ್ತಿತ್ವ  ಸಿದ್ಧಿಸಿಕೊಂಡಿರುವ  ಕುರುಕುರಿಯವರ  ರಚನೆಗಳು,  ಅಪ್ಪಟ  ಸಮಾಜಮುಖಿ  ಸಂವೇದನೆಯನ್ನು  ಪಡೆದಿವೆ. ಹೂವು  ಹಣ್ಣು  ತಾರೆ  ಚಂದ್ರರು, ಇವರ  ಕಾವ್ಯಗಳಲ್ಲಿ  ರಮ್ಯದ  ಅಮಲಾಗಿ  ಬಾರದೇ, ವೇದನೆಗಳಿಗೆ  ಶೃತಿಯಾಗಿ,  ತಲ್ಲಣಕ್ಕೆ  ಸಾಂತ್ವನವಾಗಿ  ರೂಪುಗೊಂಡಿವೆ.

       ಅವರ  ನೂರಾರು  ಕವನಗಳ  ನಂದನದ  ನಡುವೆ, ಅವರ  ಸಮಗ್ರ  ಜೀವನಾನುಭವಗಳ  ರಸಗಟ್ಟಿಯಾಗಿ  ಮಿಂಚುತ್ತಿರುವ  ʻʻ ಶಬ್ದವಾಯಿತು  ನಕ್ಷತ್ರʼʼ  ಕೃತಿಯೊಂದರ  ಮೂಲಕ   ಇಡೀ  ಸೃಜನಶೀಲ  ಪ್ರಕ್ರಿಯೆಯನ್ನು  ಅರ್ಥೈಸಿಕೊಳ್ಳ  ಬಹುದಾಗಿದೆ. 

      ಪ್ರತೀ  ಕವಿಯೂ  ತನ್ನ  ಸೃಷ್ಟಿ ಪ್ರಕ್ರಿಯೆಯ  ಪಯಣದಲ್ಲಿ, ವಿವಿಧ  ಆಯಾಮಗಳಲ್ಲಿ,  ವಿವಿಧ  ದಿಕ್ಕುಗಳಲ್ಲಿ  ಓಂದೇ  ಸತ್ಯದ  ಹುಡುಕಾಟವನ್ನು  ನಡೆಸುತ್ತಲೆ  ಇರುತ್ತಾನಂತೆ.  ಸತ್ಯಶೋಧನೆಯ  ದಾರಿಯಲ್ಲಿ, ದಾರಿಗೂ  ಒಂದಿಷ್ಟು  ಕೊಡುತ್ತಾ,  ತಾನೂ  ಬೆಳೆಯುತ್ತಾ  ಆತ್ಯಂತಿಕ  ಸತ್ಯದ  ಗಮ್ಯಕ್ಕೆ  ಸಾಗುತ್ತಾನಂತೆ.    ಹಿನ್ನೆಲೆಯಲ್ಲಿ  ಅವರ    ʻʻಶಬ್ದವಾಯಿತು.......ʼʼ ಕೃತಿ     ಹಿಂದಿನೆಲ್ಲ  ರಚನೆಗಳ ಸಾರವನ್ನು  ಹೀರಿಕೊಂಡು, ಹೊಸ  ಅನುಭವದ  ಕ್ಷಿತಿಜವನ್ನು  ಹಿಡಿಯುವ  ಒಂದು  ತಾತ್ವಿಕ  ಪ್ರಯತ್ನವಾಗಿ  ತೋರುವುದರಿಂದ  ಕವಿ  ಇಲ್ಲಿ  ಮತ್ತಷ್ಟು  ಸ್ಪಷ್ಟವಾಗಿ, ಮುಕ್ತವಾಗಿ  ಕಾಣುತ್ತಾನೆ.

      ಕವಿ  ಆಧುನಿಕ ವಿದ್ಯೆ, ಆಧುನಿಕ  ಉದ್ಯೋಗವನ್ನಪ್ಪಿಕೊಂಡಿದ್ದರೂ, ಗ್ರಾಮಮುಖೀ ಚಿಂತನೆ, ಗ್ರಾಮದ  ರೈತರ  ಕಷ್ಟದ ಬದುಕು, ಅದರ ನಡುವೆಯೇ  ಅರಳುವ  ಮನುಷ್ಯ ಸಂಬಂಧಗಳ  ಬಗೆಗೆ  ಹೆಚ್ಚು ಸ್ಪಂದಿಸುವುದನ್ನು  ಕಾಣಬಹುದಾಗಿದೆ.  ಕವಿ  ನಗರವಾಸಿಯಾದರೂ  ಕೃಷಿಕನಸಿನಲ್ಲಿಯೇ  ಕ್ರೀಡಿಸುತ್ತಾರೆ. ಕರಿಯ, ಮರಿಯ, ಕಲ್ಲ,ಭೀಮ, ತಮ್ಮ ಬರದ  ಗದ್ದೆಯ  ಕಪ್ಪು ಮಣ್ಣಿನಲ್ಲಿ, ಬಡಕ ಎತ್ತು ಹೊಡಕೊಂಡು  ಹೋಗಿ, ಬೆವರ ಹನಿಯುದುರಿಸುತ್ತ, ಹೂಟಿ ಮಾಡುತ್ತಾರೆ,

       ʻʻ ಅಲ್ಲೇ  ನನ್ನ ಶಬ್ದಗಳು  ಬೆಳೀತಾವ /    ಅನ್ನದಾತನ  ಬಾಡಿದ ಮುಖದಿಂದ/

         ಪ್ರತಿಮೆಗಳು ಜಿಗದ  ಬರತಾವ / ನಿಟ್ಟುಸಿರಿನೊಳಗ  ಭಾಷೆ  ಹುಟ್ಟತತಿ/

         ಅವನ್ನೆಲ್ಲಾ ಸೇರಿಸಿ / ಕವಿತಾಮಾಡಿ  ಕಣ್ಣೊರಸೋದಕ್ಕ /

                ಕಳಸತೇನಿ. / ( ಶಬ್ದ ಬೆಳೀತಾವ.....)

ಎಂದು  ಆತ್ಮವಿಶ್ವಾಸದಿಂದ  ಗ್ರಾಮಪ್ರೀತಿಯನ್ನು  ಅಭಿವ್ಯಕ್ತಿಸುತ್ತಾರೆ.  ಜಗಕ್ಕೆ ಅನ್ನ ನೀಡುವ  ರೈತನ  ಬೆನ್ನೆಲುಬು ಮುರಿದಿದೆ.  ಧಾನ್ಯ ಬೆಳೆಯುವವನಿಗೆ  ರೊಟ್ಟಿಯ  ಕೊರತೆಯಿದೆ. ಕಾವ್ಯವೋ  ಹೊಟ್ಟೆತುಂಬಿದವನ  ಚಟುವಟಿಕೆ.  ರೈತ  ಕವಿಯನ್ನುದ್ದೇಶಿಸಿ  ಹೇಳುತ್ತಾನೆ. ಇಲ್ಲಿ  ಬೇಂದ್ರೆಯವರ  ʻʻಬ್ರೆಡ್‌ ತಾ  ಬೆಣ್ಣೀ  ತಾʼʼ  ಎಂಬ ಬಹುಜನಪ್ರಿಯ  ಪದ್ಯ ನೆನಪಾಗುತ್ತದೆ.

    ʻʻಆದರ  ಅವನ ಕಣ್ಣು  ಕೇಳತಾವ-/ ನಿನ್ನ    ವಣಾ  ಉಸಾಬರಿ ಬಿಟ್ಟು /

    ತಿನ್ನಾಕ  ರೊಟ್ಟಿ ತಂದಿದ್ದರ  ಕೊಡು / ಬೆಣ್ಣೀ  ಬ್ಯಾಡಾ  ಚಟ್ನೀ  ಸಾಕು /

    ನಾ  ಬದುಕಿದರ  ನೀನೂ  ಬದಕತೀ / ಇಲ್ಲದಿದ್ರ  ನಿನ್ಯಾರ್‌  ಕೇಳ್ತಾರ,,?ʼʼ  ( ಅದೇ  ಕವನ )ಎಂದು  ಸವಾಲೊಡ್ಡುತ್ತಾನೆ  ರೈತ.  ಕುರುಕುರಿಯವರ,  ತಲೆಮಾರಿನ  ಕನ್ನಡ  ಕವಿಗಳೆಲ್ಲರಲ್ಲಿ  ಇಂಥ  ಗ್ರಾಮ  ಸಂವೇದನೆಯನ್ನು  ಗಾಢವಾಗಿ  ನಾವು  ಕಂಡಂತೆ   ಇತ್ತೀಚಿನ  ಕವಿಗಳಲ್ಲಿ  ಕಾಣಲು  ಸಾಧ್ಯವಾಗದು.  ಕಾರಣ  ಇಂದಿನ  ಕವಿಗಳ  ತಲೆಮಾರು  ಸಂಪೂರ್ಣ  ನಗರಗಳಲ್ಲಿಯೇ ಹುಟ್ಟಿ  ಬೆಳೆದಿರುವ ಕಾರಣವೇನೋ,   ಗ್ರಾಮಗಳ  ಸಂಪರ್ಕ ಮತ್ತು  ಆಪ್ತತೆ ಯುವಕವಿಗಳಲ್ಲಿ  ಬಹುಷಃ  ಕಾಣದಾಗಿದೆ.

     ʻʻ ಜಗದಂಬಿ ಜಗದಾಗ  ಜಾಹೀರಾ ʼʼ  ಕವನ  ಪ್ರಸ್ತುತ  ಕೃತಿಯಲ್ಲಿ  ನನ್ನ  ಮನಸ್ಸನ್ನು  ಆಳವಾಗಿ  ತಟ್ಟಿದ  ರಚನೆಯಾಗಿದೆ.   ಇದೊಂದು ಸುದೀರ್ಘ  ಕಥನ ಕವನ.  ಧಾರವಾಡದ  ಆಡುಭಾಷೆಯ  ಅಪ್ಪಟ  ಸೊಗಡಿನಲ್ಲಿ , ಗ್ರಾಮೀಣರ  ಅತೀವ ಮುಗ್ಧತೆ, ಮಣ್ಣಿನಮೆಲಿನ  ಮಮತೆ, ಸಂಸ್ಕೃತಿ ಪ್ರೀತಿ  ಗಳನ್ನ  ವರ್ಣಿಸುತ್ತಲೇ  ಅಲ್ಲಿ  ಜರುಗುವ  ಕ್ರೂರ  ಶೋಷಣೆಯೆಡೆಗೆ  ಬೆಳಕು ಬೀರುತ್ತಾರೆ.   ಗ್ರಾಮೀಣರಲ್ಲಿರುವ  ಸಹಜವಾದ  ದೈವಭಕ್ತಿಯನ್ನೇ  ಬಂಡವಾಳವಾಗಿಸಿ ಕೊಂಡ,ಜಮೀನು ದಾರರು   ಬಡವರನ್ನು  ನಂಬಿಸಿ  ದೋಚುವ ಪ್ರಕ್ರಿಯೆಯನ್ನು  ಸುಂದರ  ಸರಳ  ಆಡುನುಡಿಯಲ್ಲಿ  ಕಟ್ಟಿಕೊಡುತ್ತಾರೆ.  ಕವಿ  ಅಲ್ಲಿಯ  ವಸ್ತುಸ್ಥಿತಿಯನ್ನ  ಕ್ರೂರ  ವಾಸ್ತವವನ್ನು, ವರ್ಣಿಸುವುದರಲ್ಲಿಯೇ  ಸುಮ್ಮನಾಗುವುದಿಲ್ಲ. 

         ಹಿಂಡಿದ  ಬಡವರು / ಕೆಂಡದ  ಉಂಡ್ಯಾಗಿ /

         ಕುಡುಗೋಲು  ಕೊಡಲೀಯ / ಕೈಯಾಗ  ಹಿಡಿದಾರ /

         ಹುಡುಕ್ಯಾಡಿ  ಕೆಡಿವ್ಯಾರ / ಗುಡಿ- ಗುಂಡಾರ / ಚಿತವಿಟ್ಟು  ಕೇಳರಿ  ಮಜಕೂರಾ // 

        ಎನ್ನುತ್ತ   ಒಂದಲ್ಲಾ  ಒಂದು  ದಿನ,    ದುರ್ದಿನಗಳಿಗೆ  ಮುಕ್ತಿಯಿದೆ.  ಜನ  ಸತ್ಯವನ್ನ  ಕಂಡುಕೊಳ್ಳುತ್ತಾರೆ.  ಶೋಷಿಸುವ  ರಕ್ಕಸರನ್ನು  ಸದೆಬಡಿಯುತ್ತಾರೆ.  ನಿಜದ  ಅರ್ಥದಲ್ಲಿ,  ಊರ  ದೇವತೆ  ದುರುಗವ್ವ  ಚಂಡಿಯಾಗಿ  ಪ್ರಕಟಗೊಳ್ಳುತ್ತಾಳೆ,  ಎಂಬ  ಆಶಾವಾದದಲ್ಲಿ, ಪ್ರತಿಭಟನೆಯ  ಕಹಳೆ  ಊದುತ್ತಾರೆ.         

        ʻʻ ಮೈಮರತ  ಕುಂತಗೊಂಡ / ಮನಸಗೊಟ್ಟ  ಕೇಳಿದೀರಿ /

          ಕುರುಕುರಿ  ರಾಯಪ್ಪನ /  ಹಿರಿಮಗ  ಹಾಡಿದರ /

          ಜಗದಂಬಿ  ಜಗದಾಗ / ಜಾಹೀರಾ....../ʼʼ

        ಹೀಗೆ  ಕವನ  ಸುಂದರ  ಸಂದೇಶದೊಂದಿಗೆ   ಕವಿಯ  ಕನಸನ್ನು  ಸಜೀವಗೊಳಿಸುತ್ತದೆ. ಕಾವ್ಯವೇ  ಮೂಲಭೂತವಾಗಿ  ಸಾತ್ವಿಕ  ಪ್ರತಿಭಟನೆ.  ಕವಿ  ಕೇವಲ  ವರ್ತಮಾನದಲ್ಲಿ  ಬದುಕಲಾರ.  ಭೂತದ ಅನುಭವದಲ್ಲಿ  ಹೊಸ  ಭವಿಷ್ಯ  ನಿರ್ಮಿಸುವ  ಕನಸುಗಾರ  ಆತ. ಹೀಗಾಗಬೇಕೆಂದು  ಹಟಹಿಡಿಯುವ  ಮಾರ್ಗ  ಅವನದಲ್ಲ.ಹೀಗಿರಬಹುದೇ... ಹೀಗಾಗಬೆಕಿತ್ತೇ ಎಂದು  ವಿನಯದಲ್ಲಿ  ಪ್ರಶ್ನಿಸುತ್ತ,  ವಿವೇಕದಲ್ಲಿ  ಅಡಿಯಿಡುವ  ಸಂವೆದನಾ ಶೀಲ  ಮನುಷ್ಯ.

       ಕುರುಕುರಿಯವರ   ಕಾವ್ಯಗಳಲ್ಲಿ  ಪ್ರತಿಭಟನೆ  ಸ್ಥಾಯೀಯಾದರೂ, ಅದನ್ನು  ಅಭಿವ್ಯಕ್ತಿಸುವಲ್ಲಿ  ಸಂಯಮವಿದೆ. 

      ʻʻ ಕಣ್ಣೀರು  ಕುಡದವರ  ನೆತ್ತರು  ಕುದ್ದೀತ / ಭೂಮಿಯ ಮ್ಯಾಗ  ಬೆವರಾಗಿ  ಬಿದ್ದೀತ /

   ಬಾಡೀದ  ಬತ್ತ...ಕ,ಚೇತನ  ತುಂಬೀತ / ನಾಡೀನ  ತುಂಬೆಲ್ಲ ಹೊಸ ಗಾಳಿ ಬೀಸ್ಯಾವೋ /

    ಕೊರಳಾಗ ಕೇಳೋ   ಹೊಸ--  ಹಾಡ  ಗೆಳೆಯಾ / (ಕೆಂಪ ಸೂರ್ಯಾನುದಯಾ ) ʼʼ

          ಕವಿ  ತಮ್ಮ  ಸಾಮಾಜಿಕ  ಸಂವೇದನೆಯ  ನಡುವೆ  ಪ್ರೀತಿ  ಪ್ರೇಮಗಳಿಗೂ  ಸ್ಪಂದಿಸುತ್ತಾರ.  ಆದರೆ  ಅದು  ಕೇವಲ  ಹದಿಹರೆಯದ  ಹಸಿ ಬಿಸಿ  ಅನುಭವವಲ್ಲ.  ಗಾಢವಾದ  ಜೀವನಿಷ್ಟೆ, ಜೀವನ ಪರತೆ.  ಅಪ್ಪಟ  ಮಾನವೀಯ  ಸ್ಪಂದನ.

       

  ಗೆಳತೀ  ನನಗ  ನಿನ್ನ  ನೆನಪಾದಾಗೆಲ್ಲ /  ಅಡಗೀ  ಮನ್ಯಾಗ  ಗಡಗೀ  ಮುಚ್ಚಳದ /

ಕೂಡ  ನೀನೂ  ಸುಟ್ಟು  ಕರಕಾಗೋದರ  ಮ್ಯಾಗ /  ಒಂದ್‌  ಕವಿತಾ /

ನಿನ್ನ  ಕಣ್ಣೀರಾಗ ....  ಅಕ್ಕಿ ಹಾಕಿ  /  ಎದೆಯಾಗಿನ  ಬೆಂಕೀಮ್ಯಾಗಿಟ್ಟು /

ಕುದಿಸಿ  ಅನ್ನಾ  ಮಾಡಿ /  ಮನಿ  ಮಂದಿಗೆಲ್ಲ  ಬಡಸೋದರ  ಮ್ಯಾಗ /

ಒಂದ  ಕವಿತಾ   ಬರಿಬೇಕಂತೀನಿ /............ ( ನಾ  ಕವಿ  ಅಲ್ಲ )

            ಹೀಗೆ  ಗಂಡು  ಹೆಣ್ಣಿನ  ಆಪ್ತತೆಯೂ  ಸಹ  ಸುತ್ತಲಿನ  ನೋವು  ತಲ್ಲಣಗಳಿಗೆ  ಸ್ಪಂದಿಸಬೇಕೆನ್ನುವ  ಕವಿಯ  ಹಾರೈಕೆ   ನಿಜಕ್ಕೂ  ಖುಷಿನೀಡುತ್ತದೆ.ಪ್ರಸ್ತುತ  ಸಂಕಲನದ  ಮೂಲಕ  ಕವಿಯ  ವಿಶಾಲ  ಮನದಂಗಳದಲ್ಲಿ  ಒಮ್ಮೆ  ಇಣುಕಿದೆ ಅಷ್ಟೆ. ಕತ್ತಲೆಯ  ನಕ್ಷತ್ರಗಳು  ಅಲ್ಲಿಯೇ  ಆಲಸ್ಯದಲ್ಲಿ  ಮಿಂಚುವುದಷ್ಟೇ  ಅಲ್ಲ.  ಅಲ್ಲಿಂದ  ಭೂತಳಕ್ಕೆ  ಎಳೆದು  ತರುವ  ದಾಷ್ಟ್ಯ  ಕವಿಯದು.  ಇಲ್ಲಿಯ  ಕತ್ತಲೆಯನ್ನು  ಹೊಡೆದೋಡಿಸುವ  ಪ್ರಯತ್ನದಲ್ಲಿ  ನಕ್ಷತ್ರಗಳೂ  ಮಿಣುಕು  ಬೆಳಕಿನೊಂದಿಗೆ  ಮಾತನಾಡುತ್ತವೆ.  ಕವಿಯ  ಕನಸಿಗೆ  ನೀರೆರೆಯುತ್ತವೆ.

        ಬೇಂದ್ರೆ  ನಾಡಿನ  ಕವಿ  ಕುರುಕುರಿಯವರ ಮೇಲೂ  ಜಾನಪದ ನುಡಿಗಟ್ಟಿನ  ಹಿನ್ನೆಲೆ  ಗಾಢವಾಗಿದೆ.  ಗಂಭೀರವಾದ  ನಮ್ಮ ಜನಗಳ  ದಯನೀಯ ಸ್ಥಿತಿ  ಕಂಡು, ಮರುಗುವಾಗಲೆಲ್ಲ   ಓತಪ್ರೋತವಾಗಿ, ಜನಪದರ  ಮೆಲುನುಡಿ  ಕಾವ್ಯವಾಗಿ  ಹರಳುಗಟ್ಟುತ್ತದೆ.

         ನಿನ  ಕಷ್ಟ  ಕೇಳವರು  ಯಾರಿಲ್ಲೋ  ಜಗದಾಗ

         ಭ್ರಷ್ಟರಾಗ್ಯಾರೋ   ಎಲ್ಲಾರೂ |  ದುಷ್ಟರು

         ಬಿಟ್ಟು ನಿಂತಾರೋ   ನಾಚಿಕೆಯ..||

          ಸಾಲದ  ಹೊರಿ  ಹೊತ್ತು  ಗಿಜಬುಳಕಿ  ಆಗೀದಿ

          ಶೂಲನೇರು  ಹಂಬಲ  ನಿನಗ್ಯಾಕ  |  ಹೊಲದಾಗ

          ಬಂಗಾರದ  ಬೆಳಿಯೂ   ಬಂದೀತು.||

ಅನ್ನದಾತನ  ಅಸಹನೀಯ  ತಲ್ಲಣ,  ಅವನಮೇಲಾಗುವ  ರಾಜಕೀಯ, ಆರ್ಥಿಕ  ಶೋಷಣೆ,  ರೈತರ  ಆತ್ಮಹತ್ಯೆ  ಇವೆಲ್ಲ  ರೈತಮೂಲದವರೇ  ಆದ  ಕವಿಗೆ  ಸಂಕಟ ತರುತ್ತದೆ.  ರೈತಾಪಿ ಜನರ  ಬಗೆಗೆ  ಅನುಕಂಪ,  ಶೋಷಿತ  ವ್ಯವಸ್ಥೆಯ  ಬಗೆಗೆ  ಅಸಹನೆ   ಕವಿತೆಗಳಲ್ಲಿ  ಮಡುಗಟ್ಟಿದೆ.

       ಇಲ್ಲಿ  ಮೂಲಭೂತವಾಗಿ  ಕವಿ  ಒಬ್ಬ  ಕತೆಗಾರ. ಅಂದರೆ  ಒಂದೊಂದು  ರಚನೆಯೂ  ಒಂದೊಂದು  ವ್ಯಥೆಯ  ಕತೆಯೇ  ಆಗಿದೆ.  ಹಾಗೆಯೆ  ಪ್ರೀತಿ,  ಪ್ರೇಮ,  ಕಾವ್ಯ  ಶೋಷಣೆ, ಮಾನವ  ಪ್ರವೃತ್ತಿ  ಮುಂತಾದವೆಲ್ಲ,  ಒಂದೊಂದು  ರೂಪಕದ  ಮೂಲಕವೇ  ಅಭಿವ್ಯಕ್ತಗೊಳ್ಳುತ್ತವೆ.  ಪರಿಚಿತ ಪ್ರತಿಮೆಗಳೇ  ಅನೂಹ್ಯ  ಸಂಗತಿಗಳನ್ನು  ಹೇಳತೊಡಗಿದಾಗ  ಒಮ್ಮೊಮ್ಮೆ  ವಾಚ್ಯವೂ  ಆಗುತ್ತದೆ.

        ಕವಿಗೆ  ತನ್ನ  ಹಳ್ಳಿಯಂತೇ    ನಗರಗಳಲ್ಲಿ  ಪ್ರಕೃತಿ  ಹಸಿರಾಗಿ  ನಗುವುದಿಲ್ಲ.  ಮುಖಕ್ಕೆ  ಕಾಂಕ್ರೀಟ್‌  ಬಳಿದುಕೊಂಡು, ಕೃತಕತೆಯಲ್ಲಿ  ಬೀಗುತ್ತಿರುವಾಗ   ಕವಿ  ನೊಂದುಕೊಳ್ಳುತ್ತಾನೆ.   ತನ್ನ  ಹಳ್ಳಿಯಿಂದಲೇ  ಪುಟ್ಟ  ಗಿಡ ತಂದು  ಕುಂಡದಲ್ಲಿ  ತುರುಕಿ  ಬೆಳೆಸತೊಡಗುತ್ತಾನೆ.  ಇಕ್ಕಟ್ಟಾದ  ಸ್ಥಳದಲ್ಲಿ  ಗಿಡ  ಕೃಷವಾಗಿ  ಎತ್ತರಕ್ಕೇರಿದರೂ  ಬೆಳೆಯುವುದಿಲ್ಲ.  ಊರಿಂದ  ಬಂದ  ರೈತ ಸಹೋದರ  ಅದನ್ನು  ಕಂಡು,  ಗಿಡವನ್ನು  ಕುಂಡದ  ಬಂಧನದಿಂದ  ಬಿಡಿಸಿ,  ಕಂಪೌಂಡಿನಾಚೆ  ಬೀದಿ  ಬದಿಯಲ್ಲಿ  ನೆಟ್ಟು  ನೀರೆರೆಯುತ್ತಾನೆ.  ಗಿಡ  ಖುಷಿಯಲ್ಲಿ  ನಗುತ್ತ,  ಬಲಿಷ್ಟವಾಗಿ  ಅಂಬಾರಕ್ಕೇರುತ್ತದೆ.  ಹೂ  ನೆರಳು  ನೀಡಿ  ಎಲ್ಲರನ್ನೂ  ಖುಷಿಪಡಿಸುತ್ತದೆ.

         ಕನಸುಗಳು  ಕಮರುವುದಿಲ್ಲ / ನಿಮಗೆ,/  ಅವುಗಳ  ಬೆಳೆಸುವ  ರೀತಿ  ಗೊತ್ತಿದ್ದರೆ /

        ..ನನ್ನ  ಕೈತಪ್ಪಿದ  ಕನಸುಗಳು / ಈಗ  ಸಾರ್ವಜನಿಕರ  ಸೊತ್ತು /

         ಆದರೇನಂತೆ   ನನಗಿಲ್ಲ  ಬಿಡಿ  ಚಿಂತೆ /

         ನನ್ನ ಮನೆಯೆದುರಿಗೇ  ಬೆಳೆದು ನಗು-ನಗುತ್ತ/

        ನಿಂತಿವೆ/ ಗುಲ್‌  ಮೊಹರಿನಂತೆ/ ( ಗುಲ್‌ ಮೊಹರ್)

          ಕವಿ  ಕೇವಲ  ಆತ್ಮರತಿಯಲ್ಲಿ  ಲೀನವಾಗದೇ  ಮತ್ತೊಬ್ಬರ  ಬದುಕನ್ನೂ  ಪರಕಾಯ ಪ್ರವೇಶಿಸಿ, ಅನ್ವೇಶಿಸಿದರೆ  ಅರರ್ಘ್ಯ  ಅನುಭವಗಳ   ಗಣಿಯನ್ನೇ  ಕಾಣಬಹುದು  ಎಂಬುದಕ್ಕೆ  ಅವರ  ʻʻಮುಖಗಳುʼʼ  ಕವನ  ಅರ್ಥಪೂರ್ಣವಾಗಿ  ಅಭಿವ್ಯಕ್ತಿಸುತ್ತಿದೆ. ʻʻಆ ಮುಖದ  ಹಿಂದ  ಹಣಿಕಿ  ಹಾಕಿದೆ,/ ಒಂದ  ಮಹಾಕಾವ್ಯನ  ಅಲ್ಲಿ  ಕಂಡೆ / ................  ಒಂದೊಂದ ಮುಖದ ಹಿಂದ  / ಒಂದೊಂದ  ರಸ   ಒಂದೊಂದ    ಕಾವ್ಯ /ʼʼ  ಎಂದು  ಉದ್ಗೋಷಿಸುತ್ತಾರೆ.

     ಹಾಗೆಯೆ  ಕರದಂಟು  ಕವಿತೆಯೂ,  ಕೂಗುವುದ ಮರೆತಿದೆ  ಕೋಗಿಲೆ,  ನೆಪ್ಪ  ಇರಲೆಪ್ಪ  ನಿಮಗ, ಕನಸುಗಳ್ಳರು,  ಮುಂತಾದ  ಕವನಗಳೂ  ಮಾನವೀಯ  ಅನುಕಂಪ,  ಬದುಕಿನ  ನೋವು  ತಲ್ಲಣ,  ಎಲ್ಲೆಲ್ಲೂ  ಕಂಡುಬರುವ  ಶೋಷಣೆ,  ಅವುಗಳ  ನಡುವೆಯೂ  ಅರಳಿಕೊಳ್ಳುವ  ಸುಖ, ಸೌಖ್ಯದ  ಮಿಂಚುಗಳನ್ನು,  ಸರಳವಾಗಿ  ಸುಂದರವಾಗಿ,  ಮತ್ತು  ಸೂಕ್ಷ್ಮವಾಗಿ  ಚಿತ್ರಿಸಿದ  ಕಲೆಗಾರಿಕೆಯನ್ನು  ಕಾಣಬಹುದಾಗಿದೆ.

         ಕೃತಿಯ  ಅನುಬಂಧದಲ್ಲಿ  ಕವಿ  ಶಾಮಸುಂದರ   ಬಿದರಕುಂದಿ  ʻʻಧರಣೇಂದ್ರರ  ಪದ್ಯಸಂವೇದನೆʼʼ  ಎಂಬ  ಶೀರ್ಷಿಕೆಯಡಿಗೆ   ಅವರ  ಕಾವ್ಯಜೀವನದ  ವೈವಿಧ್ಯಮಯ ಬೆಳವಣಿಗೆಯನ್ನು  ಸೂಕ್ಷ್ಮವಾಗಿ, ಅಷ್ಟೇ  ಆಳವಾಗಿ  ಗುರುತಿಸಿ  ಗೌರವಿಸಿದ್ದಾರೆ.

        ಕುರುಕುರಿಯವರ  ಕಾವ್ಯಗಳ  ಬಗೆಗೆ  ಪ್ರೊ-ವೃಷಭೇಂದ್ರ ಸ್ವಾಮಿಯವರು  ವ್ಯಾಖ್ಯಾನಿಸುತ್ತ,  ʻʻಹೊಸಮಾರ್ಗದ  ಜನಕವಿʼʼ  ಎಂದು  ಆತ್ಮೀಯವಾಗಿ  ಸಂಬೋಧಿಸುತ್ತ,

ʻʻಧರಣೇಂದ್ರರ  ಕವಿತೆಯ  ಪ್ರತಿಯೊಂದೂ  ಮಾತೂ  ಜನಸಾಮಾನ್ಯನೊಬ್ಬನ  ಒಳದನಿಯಾಗಿ  ಬಂದಿದೆ. ಪದ್ಯಗಳು  ಗಂಟಲಮೇಲಿನಿಂದ  ಬಂದ  ಸಾಂದರ್ಭಿಕ  ಹೇಳಿಕೆಯಾಗಿರದೇ  ಎದೆಯೊಳಗೆ  ಕಾವಾಗಿ  ಕುದ್ದು  ಹೊರಬಂದುದಾಗಿದೆ.ʼʼ  ಎಂದ  ಮಾತು  ನೂರಕ್ಕೆ  ನೂರರಷ್ಟು ನಿಜವಾದುದಾಗಿದೆ.

       ಹಿರಿಯರಾದ  ಕುರುಕುರಿಯವರು  ಇಂಥ  ವಯದಲ್ಲಿಯೂ, ತಮ್ಮ ಸೃಜನಶೀಲ  ಚಟುವಟಿಕೆಗಳನ್ನು  ನಿರಂತರವಾಗಿ  ಮುಂದುವರೆಸುತ್ತಿರುವುದು,  ಯುವ  ತಲೆಮಾರಿಗೊಂದು  ಸುಂದರ  ಸಂದೇಶ.   ಅವರಿಂದ  ಇನ್ನೂ  ಮಹತ್ವಪೂರ್ಣ  ಕೃತಿಗಳು  ಸಾರಸ್ವತ ಕ್ಷೇತ್ರಕ್ಕೆ  ದೊರೆಯಲಿ,  ಇನ್ನೂ  ಯಶಪಡೆಯಲೆಂದು    ಮೂಲಕ  ಹಾರೈಸುತ್ತಿದ್ದೇನೆ.

                                           ಗೌರವಾದರಗಳೊಂದಿಗೆ

                                           ಸುಬ್ರಾಯ  ಮತ್ತೀಹಳ್ಳಿ.   ತಾ- ೨೧-೫-೨೦೨೦.

 

 

      

       

No comments:

Post a Comment