Saturday 13 August 2011

ಸದಾ “ಆನಂದ ” ಉಳಿಯುವುದೇ..............??

ರಜ್ಯಾದ್ಯಂತ ಸಮೃದ್ಧ ಮಳೆ ಹೊಯ್ದಂತೆ ರಾಜಧಾನಿಯಲ್ಲಿ ರಾಜಕೀಯಕ್ಕೆ ಮಹಾಪೂರವೇ ಬಂದಿತು.  ಸರಿ ಸುಮಾರು ಒಂದು ತಿಂಗಳ ಕಾಲ ಅತ್ತ ವಿಧಾನ ಸೌಧ ಸ್ಥಬ್ಧ ಗೊಂಡಿತು. ಇತ್ತ ನಗರದ ತಾರಾ ಹೊಟೆಲುಗಳಿಗೆ ಸುಗ್ಗಿ ಮೂಡಿತು. ಲೋಕಾಯುಕ್ತರು ಸಿಡಿಸಿದ ಗಣಿ ಬಾಂಬ್ ರಾಜ್ಯದ ರಾಜಕಾರಣದಲ್ಲಿ ಮೂಡಿಸಿದ ವಿಪ್ಲವ ಐತಿಹಾಸಿಕವಾಯಿತು. ಬಸವನನ್ನಾಗಿ ಬಿಟ್ಟ ತುಂಡು ಗೂಳಿಗಳು ತಮ್ಮ ಎಲ್ಲೆ ಮೀರಿ ಬೇಲಿ ಮುರಿದು ಎರ್ರಾ ಬಿರ್ರಿಮೆಂದು ದುಪಳಿ ಎಬ್ಬಿಸುತ್ತ, ಅಂಕೆಮೀರಿ ಅಂಡಲೆಯುತ್ತಿರುವ ಕ್ರಿಯೆಗೆ ಲೋಕಾಯುಕ್ತರು ತಮ್ಮ ಮಿತಿಯಲ್ಲಿ ತಡೆಯೊಡ್ಡಿದರು.  ಷಂಡ ವಿರೋಧ ಪಕ್ಷ. ಕೈಕಟ್ಟಿ ಕುಳಿತ ನ್ಯಾಯಾಂಗ, ಬಾಯಿ ಕಟ್ಟಿದ ಸಾಮಾನ್ಯ ಜನತೆಯ ತಲ್ಲಣದ ಕ್ಷಣದಲ್ಲಿ, ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ ಎಂಬುದನ್ನ ತೋರಿಸಲು ಲೋಕಾಯುಕ್ತರು ಧೈರ್ಯ ಮಾಡಿದ್ದು ನಮ್ಮ ರಾಜ್ಯದ ಸುದೈವ.
ಅರವತ್ತು ವರ್ಷವಾದರೂ ಈ ಮಣ್ಣಿನಲ್ಲಿ ಜನತಂತ್ರ ಸಮರ್ಥವಾಗಿಚಿಗುರೊಡೆದಿಲ್ಲ. ಮಂತ್ರಿ ಶಾಸಕರು ವಾಹನದ ಮೇಲೆಯೇ ಇರಲಿ, ಅದ್ದೂರಿ ಬಂಗಲೆಯಲ್ಲಿಯೇ ಪವಡಿಸಲಿ, ಹಿಂದೆ ಮುಂದೆ ಪೋಲಿಸ್ ವಾಹನಗಳು ಸುತ್ತುವರೆದಿರಲಿ, ಎಂದು ಬಯಸುವ ಜನ, ಅಪರೂಪದಲ್ಲಿ ಸರಳವಾಗಿರುವರಾಜಕಾರಣಿ ಕಂಡರೆ ಅದೇ ಜನ ಗಂಭೀರವಾಗಿ ಸ್ವೀಕರಿಸುವುದೇ ಇಲ್ಲ,
ಪ್ರತಿನಿಧಿಗಳಲ್ಲಿಯೂ ಅಷ್ಟೆ   ನಾಯಕತ್ವದ ಗುಣ ಲವ ಲೇಶವಿಲ್ಲದಿದ್ದರೂ ತಾನೇ ಮಹಾಮಾಲಿಕಎಂದು ಭ್ರಮಿಸಿಬಿಡುತ್ತಾನೆ. ಜನಸೇವಕ ತಾನುಎಂಬುದನ್ನು ಮರೆತು ರಾಜ್ಯವೇ ತನ್ನ ಜಹಗೀರೆಂದು ತಿಳಿದು ಸರ್ವಾಧಿಕಾರಿಯಾಗಿ ಪರಿವರ್ತನೆ ಗೊಂಡು ಬಿಡುತ್ತಾನೆ.    ಯಾರೊ ಒಬ್ಬ ಸಾಮಾನ್ಯ ಮನುಷ್ಯ ತನ್ನ ವಾಹನವನ್ನು ಹಿಂದೆಹಾಕಿದ ಎಂಬ ಕಾರಣಕ್ಕೆ ರಾಜಕಾರಣಿ,  ಬೀದಿಗಿಳಿದು ತೋಳು ಸೇರಿಸುತ್ತಾನೆ.
ಇಷ್ಟೆಲ್ಲ ಗೊಂದಲಗಳ ನಡುವೆ ಆಡಳಿತ ಪಕ್ಷವೇ ಬಣ ಬಣವಾಗಿ ಛಿದ್ರಗೊಂಡು  ಬೀದಿರಂಪವಾದ ಅಯೋಮಯ ಸಂದರ್ಭದಲ್ಲಿ ಯೂರಾಜ್ಯದಲ್ಲಿ ಒಂದು ಸುಂದರವಾದ ಬೆಳಗು ಮೂಡಿದೆ. ದೇವ ದಾನವರ ಸಮುದ್ರ ಮಥನದಲ್ಲಿ ಕೊಂಚ ಅಮೃತ ಚಿಮ್ಮಿದೆ.    ಈ ವರೆಗೆಲ್ಲ ಸ್ನೇಹ ಶೀಲ  ಸೌಹಾರ್ದಜೀವಿ, ಸೂಕ್ಷ್ಮ ಮನಸ್ಕ ಎಂದೆನ್ನಿಸಿಕೊಂಡ ಮಲೆನಾಡ ಮಡಿಲಿನ ರಾಜಕೀಯ ಯೋಧ  ಸದಾನಂದ ಗೌಡರುಪ್ರಥಮ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.   ಕರಾವಳಿ ಮತ್ತು ಮಲೆನಾಡು ಎರಡನ್ನೂ ಹೊಂದಿದ ಕಕ್ಷಿಣಕನ್ನಡದ  ವಿಭನ್ನ ಭೌಗೋಳಿಕ ವಾತಾವರಣದಲ್ಲಿ ಹುಟ್ಟಿ ಬೆಳೆದ ಸದಾನಂದ ಗೌಡರು ಮಧ್ಯಮ ವರ್ಗದ ಬೇಸಾಯಗಾರ ಕುಟುಂಬದವರು.
ಐದು ಗಂಡಂದಿರೊಂದಿಗೆ ಬದುಕು ನಿಭಾಯಿಸಿದ ದ್ರೌಪದಿಯ ಜವಾಬ್ದಾರಿಗಿಂತ ಸದಾನಂದರ ಹೊಣೆ ಮತ್ತೂ ಬೃಹತ್ತಾದುದು. ಅವಳ ಗಂಡಂದಿರು ಬಣಗಳಾಗಿ ಚೂರು ಚೂರಾಗಿರಲಿಲ್ಲ. ಒಗ್ಗಟ್ಟಾಗಿದ್ದರು. ದುಶ್ಶಾಸನ ಸೀರೆ ಸೆಳೆಯುವಾಗ ಕೃಷ್ಣ ಬಲಕ್ಕಿದ್ದ. ಆದರೆ ಇಲ್ಲಿ ಹೈಕಮಾಂಡ ಕೃಷ್ಣ ದುರ್ಬಲ. ಅವರನ್ನೇ ನಂಬಿದರೆ ಸಂಧಾನ ಅಥವಾ ಸಂಗ್ರಾಮ ಎರಡೂ ವಿಫಲ ಗೊಳ್ಳುವ ಸಾಧ್ಯತೆಯೇ ಹೆಚ್ಚು. ಇಂಥ ಸಂದಿಗ್ಧದಲ್ಲಿ ಸ. ಗೌಡರು ಅತ್ಯಂತ ಎಚ್ಚರ ಮತ್ತು ಸೂಕ್ಷ್ಮ ವಾಗಿಹೆಜ್ಜೆಯಿಡಬೇಕಾಗಿದೆ. ವಿದ್ಯಾರ್ಥಿ ಜೀವನದಿಂದ ರಾಜಕಾರಣದವರೆಗೆಹತ್ತು ಹಲವು ಮಜಲುಗಳಲ್ಲಿ ಯಶಸ್ವೀಯಾಗಿ ಸಾಗಿಬರಲು ಅವರ ಸಜ್ಜನಿಕೆ, ಹೊಂದಾಣಿಕೆ, ಮತ್ತು ಮುಗ್ಧ ನಗುವಿನಂಥ ಧನಾತ್ಮಕ ಗುಣಗಳೇ ಕಾರಣವಾಗಿವೆ.  ಗೌಡರ ಈಗಿನ ಸ್ಥಿತಿ ಕೆಂಡದ ಮೇಲಿನ ನಡಿಗೆಯಂತೆ. ಈ ಸವಾಲು ಅತ್ಯಂತ ಸೂಕ್ಷ್ಮದ್ದು, ಎಚ್ಚರದ್ದು, ಮತ್ತು ವೇಗದ್ದು ಕೂಡಾ. ಈ ಅಲ್ಲೋಲ ಕಲ್ಲೋಲ ಸಂದರ್ಭದಲ್ಲಿಯೇ ಸ್ವಂತಿಕೆಯ ಬೀಜ ಬಿತ್ತಬೇಕಿದೆ. ಇನ್ನು ಆರೇ ತಿಂಗಳಿಗೆ ಮತ್ತೆ ಬರುತ್ತೇನೆಂದು ಘೋಷಿಸುವವರನ್ನ ನಿಭಾಯಿಸ ಬೇಕಿದೆ.
ಎಲ್ಲ ಸಮುದಾಯಕ್ಕೂ ನ್ಯಾಯ ಸಲ್ಲಿಸುತ್ತ, ರಾಜಕೀಯ ಉರಿಗಿಚ್ಚನ್ನು ತಣಿಸುತ್ತ, ಸಾವಕಾಶವಾಗಿ ರಾಜಕೀಯ ವಿಪ್ಲವ ವಿಧ್ವೇಷ ಗಳನ್ನು ಅಡಗಿಸಬೇಕಾಗಿದೆ.        ಮಂತ್ರಿ ಸ್ಥಾನವೊಂದು ಸೇವಾ ಸಾಧನವೆಂದು ತಿಳಿಯದೇ  ಹಣ ಗಳಿಸುವ ಉದ್ಯಮವೆಂದುಕೊಂಡಿರುವ ಬಹುಪಾಲು ಆಕಾಂಕ್ಷಿಗಳಿಗೆ ಆ ಸ್ಥಾನದ ಪಾವಿತ್ರ್ಯವನ್ನು ಮನಗಾಣಿಸಿ ಕೊಡಬೇಕಾದ ಗುರುv   ಹೊಣೆ ಗಾರಿಕೆ ಗೌಡರ ಮೇಲಿದೆ.  ಕಳೆದ ಮೂರು ವರ್ಷಗಳ ಆಡಳಿತಕಾಲ ಅಂತರ್ಯುದ್ಧ, ಭೃಷ್ಟಾಚಾರ, ಮತ್ತು ದೇವಾಲಯ ಮಠಮಾನ್ಯಗಳ ಸುತ್ತಾಟದಲ್ಲಿಯೇ ಕಳೆದು ಹೋದದ್ದನ್ನು ಗಮನದಲ್ಲಿರಿಸಿಕೊಳ್ಳದೇ ಹೋದಲ್ಲಿ  ರಾಜ್ಯದ ಜನ ಇನ್ನೆಂದೂ ಕ್ಷಮಿಸಲಾರರು.
ಪ್ರಮಾಣವಚನ ಸಮಾರಂಭದ ನಂತರದ ನೂತನ ಮು. ಮ. ಯವರ ಪ್ರಥಮ ಸಂದೇಶಕ್ಕಾಗಿ ಇಡೀ ರಾಜ್ಯ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು. ಹೊಸ ಕನಸು  ಹೊಸ ಕಾರ್ಯಕ್ರಮ, ವಿಭಿನ್ನ ಶೈಲಿ ಮತ್ತು ಹೊಸ ಹರಿವನ್ನು  ಕಾತರದಿಂದ ನಿರೀಕ್ಷಿಸುತ್ತಿತ್ತು.     ಆದರೆ ಮು. ಮಂ ರ ಮಾತು ಭ್ರಮ ನಿರಸನಗೊಳಿಸಿತು, ಹಿಂದಿನ ಕಾರ್ಯಕ್ರಮಗಳನ್ನೇ ಮುಂದುವರೆಸುವ ಬಾಲಿಶ ಆಶ್ವಾಸನೆ ಮೂಡಿಬಂದಾಗಕಾತರ ನಿರೀಕ್ಷೆ ಗಳೆಲ್ಲ ಪಾತಾಳಕ್ಕಿಳಿಯಿತು.  ಈಗಾಗಲೇ ರಬ್ಬರ್ ಸ್ಟಾಂಪ್ ಎಂಬ ಮುದ್ರೆ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.   ಅನರ್ಹರೆಂದು ಗೊತ್ತಿದ್ದೂ ಇನ್ನಷ್ಟು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಯಾಯಿತು.  ಗಣಿ ಸರ್ಪ ಸರಕಾರದ ಕೊರಳ ಸುತ್ತುತ್ತಿದೆ.  ಸಾಮಾನ್ಯ ಜನತೆ ಭ್ರಷ್ಟತೆ ಬೆಲೆಯೇರಿಕೆ ಗಳಲ್ಲಿ ನರಳುತ್ತಿದ್ದಾರೆ.
ಸದಾ ನಂದನದ ಕನಸು ಮಾತ್ರ ಹೆಮ್ಮರವಾಗುತ್ತಿದೆ.
  ನಂದದನನಸು ಕನಸಲ್ಲಿಯೇ  ಕೊಳೆತು ಹೋಗುತ್ತದೆಯೇ  ??

Wednesday 10 August 2011

ಕವನವೆಂದರೆ.......................

ಕವನ ಕಟ್ಟುವುದು ಸುಲಭ ಕಾಯಕ
ಕಟ್ಟಿ ಎನ್ನುವ ಜನರಿದ್ದರೆ
 ಕವಿಯಾಗುವುದು ಸುಲಭವಲ್ಲ
 ಸಾಲದು ಒಂದಿಷ್ಟು ಶಬ್ಧವಿದ್ದರೆ


ಶಬ್ದಗಳೆಲ್ಲ ಪದ್ಯವಾದರೆ
ಸದ್ದುಗಳೆಲ್ಲ ಕಾವ್ಯಗಳೇ
ಹೃದ್ಯತೆಯಿಲ್ಲದ ಪ್ರತಿಮೆಗಳಿದ್ದರೆ
ಪದ್ಯಗಳಲ್ಲ; ಅವು ವದ್ಯಗಳೇ
   
    ಕಾವ್ಯವೆಂದರೆ ಹುಡುಗಾಟವಲ್ಲ
    ಸತ್ಯದ ಸೂಕ್ಷ್ಮ ಹುಡುಕಾಟ
    ಕವನವೆಂದರೆ ಗುಡುಗಾಟವಲ್ಲ
    ದಿವ್ಯ ಮೌನಕೆ ತಡಕಾಟ


ಕಾವ್ಯವೆಂದರೆ ಹೂದೋಟ
ಅರಳಿ ಉದುರುವ ಆಟ
ಹೂಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
ಹೀರಿ ಅರಗಿಸಿದಲ್ಲಿ  ಸವಿಜೇನು ಹುಟ್ಟು


    ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
    ತುರೀಯತೆಯ ತಾರಕಕೆ ಉಲ್ಲಂಘನ
    ಏರುತ್ತ ಎಡವುತ್ತ ಇಳಿಯುತ್ತ ಕಳಿಯುತ್ತ
    ಅಗ್ನಿ ದಿವ್ಯದ ನಡುವೆ ಒಡಲ ಹವನ


ಗೋಡೆ ಛಾವಣಿಯೊಳಗೆ ಕಾವ್ಯ ಜನಿಸುವುದಿಲ್ಲ
ಬೇಕದಕೆ  ಅವನಿ ಅಂಬಾರ
ಹೊರ ಬಂದು ನೆಲಮುಟ್ಟಿ  ತಲೆಯೆತ್ತಿ ನೋಡಿದರೆ
ತೆರೆದೀತು ನಿಗೂಡ ಮುಗಿಲ ದ್ವಾರ
ಧರೆಯ ನಿರಿ ನಿರಿ ಯೊಳಗೆ ಸುರಿದೀತು
ನವಕವನ; ಧಾರಾಕಾರ.
=========================== ಸುಬ್ರಾಯ ಮತ್ತೀಹಳ್ಳಿ
  .


--

ಓ ಕವಿತೆ; ನೀನೆಲ್ಲಿ ಅವಿತೆ ??

ಕವಿತೆಗಳ ಸೃಷ್ಟಿಯಾಗಿರುವುದೇ  ಮಾನವನ ಅಂತರಂಗ ದರ್ಶನಕ್ಕಾಗಿ ನಿಜವಾಗಿಯೂ  ಕಾವ್ಯ ಮನುಷ್ಯ ಜಗತ್ತಿನ ಅನನ್ಯ ಅನ್ವೇಷಣೆ. ಬಾಹ್ಯ ಜಗತ್ತನ್ನೇ ಅವಲಂಬಿಸಿ ಆಮೂಲಕ ಅಂತರಂಗದ ವಿಶಿಷ್ಟ ವೈವಿಧ್ಯಮಯ  ಪ್ರಪಂಚವನ್ನು ಕಾಣಿಸುವ ಕಾವ್ಯ, ಸಹೃದಯನನ್ನು ಹೊಸದೊಂದು ಅನುಭವ  ಲೋಕಕ್ಕೆ ಕೊಂಡೊಯ್ಯುವ ಅಪ್ರತಿಮ ಕೆಲಸ ಮಾಡುತ್ತದೆ.  ಮನುಷ್ಯ ಜಗತ್ತಿನಲ್ಲಿ  ಕವಿಗಳ ಸಂಖ್ಯೆ  ಎಂದಿಗೂ ಕಡಿಮೆಯೇ.
ಹಾಗೆಂದು ಕಾವ್ಯವನ್ನು ನೇರವಾಗಿ ಆಸ್ವಾದಿಸುವವರೂ ಸಹ ಅಲ್ಪಸಂಖ್ಯಾತರೆ.  ಇದೇ ಕಾರಣಕ್ಕೇ ಗಮಕಿಗಳು, ವ್ಯಾಖ್ಯಾನಕಾರರು, ಮೀಮಾಂಸಕರು, ವಿಮರ್ಶಕರು ಸೃಷ್ಟಿಯಾದರು.  ಇವರೆಲ್ಲ ಕಾವ್ಯಕ್ಕೂ ಮತ್ತು ಶ್ರೀಸಾಮಾನ್ಯರಿಗೂ  ಸಮರ್ಥ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು. ನಿರ್ವಹಿಸುತ್ತಿದ್ದಾರೆ.
ಹಾಗಾದರೆ ಕಾವ್ಯವೆಂದರೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟವೂ ಇಂದು ನಿನ್ನೆಯದಲ್ಲ. ಗೌರೀಶ ಕೈಕಿಣಿ ಯವರು ಒಂದು ಲೇಖನದಲ್ಲಿ  ಕಾವ್ಯದ ಬಗೆಗೆ ಬರೆಯುತ್ತ, ಒಂದು ರೂಪಕವನ್ನು ಉದಹರಿಸುತ್ತಾರೆ. ಸತ್ಯವೆಂದರೇನು ?” ಆಕುಚೋದ್ಯಗಾರ ಪೈಲತ ಯೇಸುಕ್ರಿಸ್ತನಿಗೆ ಸವಾಲು ಹಾಕಿದ’; ಆದರೆ ಉತ್ತರಕ್ಕಾಗಿ ಕಾಯಲೇ ಇಲ್ಲ, ಕ್ರಿಸ್ತನನ್ನು ನೇರ ಸಿಲುಬೆಗೇರಿಸಲು ಅಪ್ಪಣೆಯಿತ್ತ.
ಇದೀಗ ಕಾವ್ಯವೆಂದರೇನು ? ಎಂದು ನನಗೆ ನಾನೇ ಸವಾಲು ಹಾಕಿಕೊಳ್ಳುತ್ತಿದ್ದೇನೆ. ಆದರೆ ಈ ಸವಾಲಿಗೆ ಜವಾಬು ಕೊಡುವುದೆಂದರೆ ನನ್ನನ್ನೇ ನಾನು ಸಿಲುಬೆಗೇರಿಸಿಕೊಂಡಂತೆ.  ಏಕೆಂದರೆ ಸತ್ಯದ ವ್ಯಾಖ್ಯೆಯಷ್ಟೇ  ಕಾವ್ಯದ ವ್ಯಾಖ್ಯೆ ಗಡಚು. ಅದರ ಸ್ವರೂಪ ನಿರ್ಣಯ ಅಷ್ಟೇ ಗೊಂದಲದ್ದು.  ಮಗು ಕಿಲಕಿಲನೇ ನಗುವುದು ಕಾವ್ಯ. ಅದರ ಬಾಲಲೀಲೆ, ಲಲ್ಲೆಮಾತು ಅಂಬೆಗಾಲು ಎಲ್ಲವೂ ಕವಿತೆಯೇ. ಬೋರೆಂದು ಸುರಿಯುವ ಮಳೆ, ಧುಮುಕುವ ಜಲಪಾತ, ತುಂಬಿ ಹರಿಯುವ ನದಿ, ಭೋರ್ಗರೆವ ಸಮುದ್ರ , ನೀಲಿ ಆಕಾಶ ತಾರಾಸಮೂಹ ಎಲ್ಲವೂ ಕಾವ್ಯವೇ.  ಪ್ರಕೃತಿಯ ಯಾವ ವಸ್ತು ಯಾವ ದೃಶ್ಯ, ಅಥವಾ ಯಾವುದೇ ಸುಂದರ ಬದುಕು ನಮ್ಮ ಮನಸ್ಸನ್ನು ಕಲಕುತ್ತದೆಯೋ, ನಮ್ಮನ್ನು ಅಂತರ್ಮುಖಿ ಯಾಗಿಸುತ್ತದೆಯೋ , ಅದೇ ನಿಜವಾದ ಕಾವ್ಯ.
ಕವಿ ಉದ್ಗರಿಸುತ್ತಾನೆ-
         ಕಾವ್ಯವೆಂದರೆ ಹೂದೋಟ
         ಅರಳಿ ಉದುರುವ ಆಟ
         ಹೂ ಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
         ಹೀರಿ ಅನುಭವಿಸಿದಲ್ಲಿ; ಸವಿಜೇನ ಹುಟ್ಟು
ಕಾವ್ಯ ನಮ್ಮ ನಿಮ್ಮ ಆಡು ಭಾಷೆಯೇ ಆದರೂ  ಆಡು ಮಾತಿಗಿರುವ ವಾಚ್ಯತೆ, ಯಾಂತ್ರಿಕತೆ, ಕಾವ್ಯಕ್ಕಿರುವುದಿಲ್ಲ. ಅಲ್ಲಿ ವಾಚ್ಯಕ್ಕಿಂತ ಸೂಚ್ಯಕ್ಕೆಬೆಲೆ. ಮಾತಿಗಿಂತ ಮೌನಕ್ಕೆ ಬೆಲೆ. ಅಲ್ಲಿ ಮೌನವೇ ಮಾತಿನ ಸ್ವರೂಪ
ಪಡೆದು ಬಿಡುತ್ತದೆ. ಅದಕ್ಕಾಗಿ ಕವಿ ಹೇಳುತ್ತಾನೆ....
       ಕಾವ್ಯವೆಂದರೆ ಹುಡುಗಾಟವಲ್ಲ
        ಸತ್ಯದ ಸೂಕ್ಷ್ಮ ಹುಡುಕಾಟ
        ಕವನವೆಂದರೆ  ಗುಡುಗಾಟವಲ್ಲ
        ದಿವ್ಯ ಮೌನಕೆ  ತಡಕಾಟ,,
ಎಂದು. ನಿಜವಾದ ಕವಿತೆ ಸೃಷ್ಟಿಯಾಗುವುದು ಗಾಢ ಮೌನದಲ್ಲಿ. ಹೋಗಿ ತಲುಪುವುದೂ ಮೌನಕ್ಕೇ. ಕವಿತೆ ಯಿಂದ ಏನು ಸೃಷ್ಟಿಯಾಗುತ್ತದೆ  ಎಂದುಕೇಳಿದರೆ ಸೃಷ್ಟಿಯಾಗುವುದು ಮತ್ತೊಂದು ಕವಿತೆಯೇ  ಎಂದು ಹೇಳಬೇಕಾಗುತ್ತದೆ. ಮಾತು ಮನುಷ್ಯನಿಗೆ ಪ್ರಕೃತಿ ನೀಡಿದ ಅದ್ಭುತ ವರ.ಕೇವಲ ಮಾತು ವ್ಯವಹಾರಕ್ಕಾದರೆ  ಮಾತಿನಿಂದಲೇ ಜನಿಸಿದ ಕಾವ್ಯ ಹೃದಯ ಸಂವಾದಕ್ಕೆ ಅನುವು ಮಾಡಿಕೊಡುತ್ತದೆ.  ನಮ್ಮೊಳಗಿನ ಭಾವ ಎಂದೂ ಅಮೂರ್ತವೇ. ಅದು ಪ್ರತ್ಯಕ್ಷಗೊಳ್ಳುವುದು ಭಾಷೆಯ ಮೂಲಕ ಮಾತ್ರ. ಪ್ರಜ್ಞೆ ಪಡೆದ ಮನುಷ್ಯ ರೆಲ್ಲರಿಗೂ ಭಾವ ಇರಲೇಬೇಕಷ್ಟೆ. ಹಾಗೆಂದು ಎಲ್ಲರೂ ಕವಿಯಾಗಲಾರರು.  ಕಾಣುವ ಕೇಳುವ ಅನುಭವವೆಲ್ಲ ಅಂತರಂಗದ ಕುಲುಮೆಯಲ್ಲಿ ಕುದಿದು ಅದೊಂದು ದರ್ಶನವಾಗಿ ರೂಪುಗೊಳ್ಳುವುದು ಪ್ರತಿಭಾಶಕ್ತಿ ಪಡೆದ ವ್ಯಕ್ತಿತ್ವದಲ್ಲಿ ಮಾತ್ರ. ಈ ಸಂದರ್ಭದಲ್ಲಿ ಇಂಗ್ಲಿಶ್ ಕವಿ ಶೆಲ್ಲಿ ನೆನಪಾಗುತ್ತಾನೆ. ಅತ್ಯಂತ ಉದಾತ್ತ
ವಾದ ಮನಸ್ಸುಗಳ ಅತ್ಯುದಾತ್ತವಾದ ಅನುಭವ ಲಕ್ಷಣಗಳನ್ನು  ಆನಂದಾತ್ಮಕವಾಗಿ ಹಿಡಿದಿಡುವ ಪ್ರಯತ್ನವೇ ಕಾವ್ಯ.ಎಂದು ಹೇಳಿದರೆ, ಮ್ಯಾಥ್ಯೂ ಅರ್ನಾಲ್ಡ  ಇನ್ನೂ ಸ್ವಲ್ಪ ಮುಂದೆ ಹೋಗಿ,“ಕಾವ್ಯ ಮನುಷ್ಯನ ಭಾಷೆಯ ಅತ್ಯಂತ ಪರಿಪೂರ್ಣ ರೂಪ, ಮತ್ತು ಆ ರೂಪದಲ್ಲಿ ಅದು ಸತ್ಯಾನ್ವೇಷಣೆಯ ಅತಿ ಹತ್ತಿರಕ್ಕೆ ಬರುತ್ತದೆ. ಕಾವ್ಯ ಸತ್ಯವನ್ನೂ ಕಾವ್ಯ ಸೌಂದರ್ಯದ ಹಿನ್ನೆಲೆಯನ್ನೂ ಅವಲಂಬಿಸಿದ ಜೀವನ ವಿಮರ್ಶೆಯೇಕಾವ್ಯ ಎಂದು ಅರ್ಥಪೂರ್ಣವಾಗಿ ಉದ್ಘರಿಸುತ್ತಾನೆ. ಅತ್ಯಂತ ಉದಾತ್ತವಾದ ಮನಸ್ಸು ಸೃಷ್ಟಿಸುವ ಕಾವ್ಯ ದ ಉದ್ದೇಶ  ಮತ್ತಷ್ಟು ಉದಾತ್ತ ಮನಸ್ಸುಗಳನ್ನು ಸೃಷ್ಟಿಸುವುದೇ ಆಗಿದೆ. ದಿನದಿಂದ ದಿನಕ್ಕೆ ಜಗತ್ತು ಅತಿ ನಾಗರಿಕತೆ ಅತಿ ಭೌತಿಕತೆ ಯ ಮಹಾ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿರುವಾಗ  ಕಾವ್ಯದಂಥ ಸೂಕ್ಷ್ಮ ಸುಕೋಮಲ ವಸ್ತುವನ್ನು ಗಮನಿಸುವ ವ್ಯವಧಾನ ವಾದರೂ ಎಲ್ಲಿದೆ ?
ಕಾವ್ಯ ಸೃಷ್ಟಿಯ ಸಂದರ್ಭದಲ್ಲಿ ಕವಿ ಭಾವ ತೀವ್ರ ಸ್ಥಿತಿಗೆ ಏರುವಂತೇ  ಕಾವ್ಯದ ಆಸ್ವಾದಕನೂ ಅದೇ ಸ್ಥಿತಿಗೆ ಬರಬೇಕಾಗುತ್ತದೆ. ಸಂವೇದನಾ ಶೀಲನಾಗಬೇಕಾಗುತ್ತದೆ. ಕಾವ್ಯದ ಓದು ಅಂದರೆ ಅದೊಂದು  ಧ್ಯಾನ. ಕವಿಯ ಮಾತಿನಲ್ಲಿಯೇ ಹೇಳಬೇಕೆಂದರೆ,
         ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
         ತುರೀಯಕೆ : ತಾರಕಕೆ ಉಲ್ಲಂಘನ
         ಏರುತ್ತ ಎಡವುತ್ತ, ಇಳಿಯುತ್ತ ಕಳಿಯುತ್ತ
         ಅಗ್ನಿ ದಿವ್ಯದ ನಡುವೆ ಒಡಲ ಹವನ 

 ಕಾವ್ಯ ಸಾಮಾನ್ಯ ಓದುಗನ ದೃಷ್ಟಿಯಲ್ಲಿ  ಅದೊಂದು ಪದ್ಯ ಅದೊಂದು  ಹಾಡು ಅಷ್ಟೆ. ಆದರೆ ಅವುಗಳನ್ನೆಲ್ಲ ಒಳಗೊಂಡು ಅದನ್ನೂ ಮೀರಿದ್ದು ಕಾವ್ಯ. ಕಾವ್ಯ ಪದ್ಯದಲ್ಲಿ ಗದ್ಯದಲ್ಲಿ  ಕಲೆಯಲ್ಲಿ ನೃತ್ಯದಲ್ಲಿ ಸಂಗೀತದಲ್ಲಿ ಪ್ರಕೃತಿಯಲ್ಲಿ  ಮಾತಿನಲ್ಲಿ  ನಡೆ ನುಡಿಯಲ್ಲಿ  ಹಾಸು ಹೊಕ್ಕಾಗಿರುತ್ತದೆ.  ಆದರೆ ಅದನ್ನು ಕಾಣುವ ಮತ್ತು ಅನುಭವಿಸುವ  ವಿಶಿಷ್ಟ ದೃಷ್ಟಿ ಮತ್ತು ವಿಶಿಷ್ಟ ಮನೋಭಾವ ಇರಬೇಕಾಗುತ್ತದೆ.  ನಿಜವಾದ ಕಾವ್ಯ  ಅದರ ಭಾಷಾ ಶರೀರ ವನ್ನು ಮೀರಿ ಬೆಳೆದುಕೊಳ್ಳುತ್ತದೆ. ಶರೀರ ಅದಕ್ಕೆ ಅನಿವಾರ್ಯವಾದರೂ ಅದೇ ಕಾವ್ಯ ವಲ್ಲ.  ಕಾವ್ಯದ ಆತ್ಮವಿರುವುದು  ಕವಿಯಲ್ಲಿ ಮತ್ತು ಓದುಗನ ಹೃದಯದಲ್ಲಿ.
                      ಗೋಡೆ ಛಾವಣಿಯೊಳಗೆ  ಕಾವ್ಯ ಜನಿಸುವುದಿಲ್ಲ
                      ಬೇಕದಕೆ ಅವನಿ  ಅಂಬಾರ
                      ಹೊರ ಬಂದು ನೆಲ ಮುಟ್ಟಿ ತಲೆಯೆತ್ತಿ ನೋಡಿದರೆ
                      ತೆರೆದೀತು ನಿಗೂಢ ಮುಗಿಲ ದ್ವಾರ
                      ಧರೆಯ  ನಿರಿ ನಿರಿ ಯೊಳಗೆ ಸುರಿದೀತು  ನವಕವನ
                      ಧಾರಾಕಾರ
                                                              

   

Thursday 4 August 2011

ಅವತಾರಗಳು ಮತ್ತು ರಾಕ್ಷಸರು

ಭಾರತೀಯ ಪುರಾಣಗಳು ಮಹಾಕಾವ್ಯಗಳೊಂದೇ ಅಲ್ಲ, ಜಗತ್ತಿನಎಲ್ಲ ಮಹಾಕಾವ್ಯಗಳ ಗುರಿಯೂ ಮನುಷ್ಯನೊಳಗೆ ಇದ್ದಕ್ಕಿದ್ದಂತೇಸೃಷ್ಟಿಯಾಗುವ ರಾಕ್ಷಸ ಪ್ರವೃತ್ತಿಯನ್ನು ನಾಶ ಮಾಡುವುದೇ ಆಗಿದೆ. ಯಾವುದೋ ಒಂದು ದೇವತೆ ತಪಸ್ಸಿಗೆ ಮೆಚ್ಚಿ ವರ ನೀಡುತ್ತದೆ.ವರಪಡೆದ ಮನುಷ್ಯ ಏಕಾಏಕಿ ಮದವೇರಿ ಲೋಕಕಂಟಕನಾಗಿ ಪರಿವರ್ತನೆ ಗೊಳ್ಳುತ್ತಾನೆ. ಆಗ ಸಮಸ್ತ ಜಗತ್ತು ಸಂಕಟದಲ್ಲಿ ತಲ್ಲಣಿಸುತ್ತದೆ. ವರ ಮದದಿಂದ ರಾಕ್ಷಸನಾಗಿ ಪರಿವರ್ತಿತಗೊಂಡ ಮನುಷ್ಯನನುತಹಬಂದಿಗೆ ತರಲು ದೇವರು ವಿಶೇಷ ಅವತಾರವನ್ನೇ ಎತ್ತಿ ಬರಬೇಕಾಗುತ್ತದೆ. ನಮ್ಮ ದೇಶದ ಪುರಾಣಗಳೆಲ್ಲ ದುಷ್ಟರನ್ನ ನಿಗ್ರಹಿಸುವದೃಷ್ಟಾಂತಗಳಿಂದಲೇ ತುಂಬಿಹೋಗಿದೆ.
ಈ ವಾರ ನಮ್ಮ ರಾಜ್ಯದಲ್ಲಿ ನಡೆದ ಇನ್ನೂ ನಡೆಯುತ್ತಿರುವರಾಜಕೀಯದ ನಾಟಕೀಯ ವಿದ್ಯಮಾನಗಳನ್ನು ನೋಡಿದರೆ ಪುರಾಣಕಾಲ್ ಮತ್ತೆ ಪುನರಾವರ್ತನೆ ಗೊಳ್ಳುತ್ತಿದೆಯೇನೊ ಎಂದೆನ್ನಿಸುತ್ತದೆ. ದೇಶಾದ್ಯಂತ ಎಲ್ಲ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ವಿಜ್ರಂಭಿಸಿದ ನಮ್ಮ ರಾಜ್ಯದ ರಾಜಕೀಯ ಪ್ರಹಸನ, ಭಾರತೀಯ ಪ್ರಜಾಪ್ರಭುತ್ವವನ್ನು ಮತ್ತು ಪ್ರಜೆಗಳನ್ನು ಹಗಲಿನಲ್ಲಿಯೇ ನಗ್ನಗೊಳಿಸಿಬಿಟ್ಟಿತು.  ಭಾರತೀಯ ಸಂದರ್ಭದಲ್ಲಿ ಭೃಷ್ಟಾಚಾರ ಸ್ವಜನಪಕ್ಷಪಾv  ಅಧಿಕಾರ ಲಾಲಸೆ, ಸ್ವಾರ್ಥ ಸಂಕುಚಿತತೆ ಅಪರೂಪವೇನಲ್ಲ. ರಾಜಶಾಹಿಯಿಂದ ಈವರೆಗೂ ನಾವು ಕಂಡಿದ್ದು ಇದನ್ನೇ. ನಮ್ಮ ರಾಜ್ಯದಲ್ಲಿಯೂ ಇದು ಅಪರೂಪವೇನಲ್ಲ.  ದೇವರಾಜ ಅರಸ್ ಮತ್ತು ರಾಮಕೃಷ್ಣಹೆಗಡೆ ಯವರ ಮುಖ್ಯಮಂತ್ರಿತ್ವದ ಕಾಲದಲ್ಲಿ ಭ್ರಷ್ಟಾಚಾರದ ಆರೋಪ ಮುಗಿಲುಮುಟ್ಟಿತ್ತು. ಅಂಥ ಸಂದರ್ಭದಲ್ಲಿ ಎಲ್ಲ ಸಾಮಾನ್ಯವಾಗಿಮುಖ್ಯಮಂತ್ರಿಗಳು ತಕ್ಷಣದಲ್ಲಿ ರಾಜೀನಾಮೆ ನೀಡಿದ್ದನ್ನು ಸ್ಮರಿಸ ಬಹುದಾಗಿದೆ. sಆದರೆ ಇಲ್ಲಿ ಅದರ ತದ್ವಿರುದ್ಧ ಪರಿಸ್ಥಿತಿ. ರಾಷ್ಟ್ರೀಯ ಪಕ್ಷವೊಂದರ ಲಾಂಛನದಡಿಯಲ್ಲಿ ಬೆಳೆದ ಒಂದು ವ್ಯಕ್ತಿತ್ವ ಅಧಿಕಾರ ಮತ್ತು ಹಣದ ಪ್ರಭಾವದಲ್ಲಿ, ಅದರ ಅಮಲಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ದಾರುಣ ದುರಂತವನ್ನು ನಾವಿಂದು ಕಾಣುತ್ತಿದ್ದೇವೆ.ಎಡಿಯೂರಪ್ಪ ಇಂದು ನಿನ್ನೆಯ ವ್ಯಕ್ತಿಯಲ್ಲ. ಮೂರು ದಶಕದಿಂದ ರಾಜಕೀಯರಂಗದಲ್ಲಿಮನೆಮಾತಾದ ವ್ಯಕ್ತಿ. ಅವರ ಶಕ್ತಿ ಮತ್ತು ದೌರ್ಬಲ್ಯ ವೆರಡನ್ನೂ ಜನ ಸಮುದಾಯ ಅರಿತಿದೆ. ಅವರ ಒರಟುತನ,ಹಟಮಾರಿತನ, ಗಳ ನಡುವೆ ಹೋರಾಟದ ಪ್ರವೃತ್ತಿ ಮೆಚ್ಚುವಂಥಹದ್ದಾಗಿದೆ.
ಆದರೆ ಅವರಿಗೆ ಎಂದು ಅಧಿಕಾರ ಬಂತೊ  ಅಂದೇ ಯೆಡ್ಡಿಯ ಎರಡನೆಯ ಅವತಾರದ ಪ್ರಾದುರ್ಭಾವವಾಯಿತೆನ್ನಬಹುದು.  ಕುಮಾರಸ್ವಾಮಿ ಕೂಡ ಅಧಿಕಾರ ಮಾಯಾಜಾಲಕ್ಕೆ ಸಿಲುಕಿಯೇ ಅಲ್ಲವೇ ಯೆಡ್ಡಿಗೆ ಅಧಿಕಾರ ಬಿಡದೇ ಜನರಿಂದ ಛೀ ಥೂ ಎನ್ನಿಸಿಕೊಂಡಿದ್ದು ? ಚುನಾವಣೆಯಲ್ಲಿ ನೆಲಸಮಗೊಂಡಿದ್ದು. ಈಗ ಮತ್ತೆ ಅದೇ ಇತಿಹಾಸದ ಪುನರಾವರ್ತನೆಯಾಗಿದೆ. ಅಧಿಕಾರ ಮನುಷ್ಯನನ್ನು ಭೃಷ್ಟನನ್ನಾಗಿಸುತ್ತದೆ, ಅತಿ ಅಧಿಕಾರ ಅತಿ ಭೃಷ್ಟತೆಗೆ ನೂಕುತ್ತದೆ, ಎನ್ನುವ ಜನಪ್ರಿಯ ನಾಣ್ಣುಡಿಯೇ ಇದೆ.
ಕರ್ನಾಟಕದ ಬಿ ಜೆ ಪಿ ಗೆ ಜೀವ ಕೊಟ್ಟವನೇ ತಾನು, ತನ್ನಿಂದಮಾತ್ರ ಈ ಪಕ್ಷಕ್ಕೆ ಅಸ್ತಿತ್ವ, ತಾನೇ ಸರ್ವೋಚ್ಛ ನಾಯಕ ಎಂಬ iಹಾ ಅಹಂ, ಎಡೆಯೂರಪ್ಪನವರನ್ನು ಅದೆಷ್ಟು ಆಕ್ರಮಿಸಿತ್ತು ಎಂಬುದು  ಕಳೆದ ವಾರವಷ್ಟೇ ಇಡೀ ದೇಶ ಕಾಣುವವಂತಾಯಿತು.  ಬಿ ಜೆ ಪಿ ಯ ರಾಷ್ಟ್ರೀಯ ನಾಯಕರ ಅಂಕೆಗೂ ಸಿಗದೇ  ಪುಂಡು ಹೋರಿಯಂತೆ ಸೆಣಸಾಡಿದ ದೃಶ್ಯ ಹಾಸ್ಯಾಸ್ಪದವೆನ್ನಿಸಿತು.
ಲೋಕಾಯುಕ್ತವರದಿ  ಎಷ್ಟು ಸತ್ಯ ಅದೆಷ್ಟು ಅಸತ್ಯ ಎಂಬುದು ಮುಂದೆ ನ್ಯಾಯಾಲಯ ನಿರ್ಣಯಿಸುತ್ತಿತ್ತು,ಅವರ ಆರೋಪ ಮತ್ತು ಅದಕ್ಕೆ ಸಂಭಂಧ ಪಟ್ಟ ಘಟನೆಗಳು ಕಣ್ಣೆದುರೇ ಹರಡಿ ಬಿದ್ದಿರುವಾಗ ತಾನು ಸತ್ಯ ಹರಿಶ್ಚಂದ್ರನೆಂದು ಬಾಲಂಗೋಚಿಗಳ ಮೂಲಕ ಸಮರ್ಥನೆ ಮಾಡಿಸುತ್ತಿದ್ದ ದೃಶ್ಯ ನಗುಬರಿಸುತ್ತಿತ್ತು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ಮೆರವಣಿಯ ಮೇಲೆ ಸಾಗಿದ್ದು ಒಂದು ಅಪರೂಪದ ದೃಶ್ಯ. ಅದೊಂದು ಗಾಂಧಿಯವರ ಧಾಂಡಿ ಉಪ್ಪಿನ ಸತ್ಯಾಗ್ರಹವನ್ನು ನೆನಪಿಸುವ ಘಟನೆಎಂದು  ಎಡ್ಡಿಯವರ ಮಗಳು ಉದ್ಗಾರವೆತ್ತಿದರೆ, ಅವರ ಬಾಲಂಗೋಚಿ ಶಾಸಕರು ಲೋಕಾಯುಕ್ತರನ್ನೆ ಹಿಗ್ಗಾ ಮುಗ್ಗಾ ಹೀಗಳೆಯುತ್ತಿರುವ ದೃಶ್ಯ ಹೇಸಿಗೆ ಹುಟ್ಟಿಸಿಬಿಟ್ಟಿತು.
ಅಧಿಕಾರ ಎಂಬ ಅಮಲು ಪ್ರಜಾಪ್ರಭುತ್ವ ದ ಆಶಯವನ್ನೇ ಮರೆಸುತ್ತದೆ ಎಂಬುದಕ್ಕೆ ಈ ಎಲ್ಲ ಘಟನೆಗಳು ಸಾಕ್ಷಿಯಾಗುತ್ತವೆ. ತಾನೊಬ್ಬ ನಾಯಕ ಎಂಬುದು ಮರೆತು  ಮಾಲಿಕರಾಗಿ ಬದಲಾಗಿಬಿಡುತ್ತಾರೆ. ಸಾವಿರ ಸಾವಿರಕೋಟಿಕಪ್ಪು ಹಣ ಮತ್ತಷ್ಟು ಕತ್ತಲೆಗೆ ದೂಡುತ್ತದೆ. ತಾತ್ವಿಕವಾಗಿ ಅಕ್ಷರಶಹ ಬತ್ತಲೆಯಾಗಿ ಬಿಡುತ್ತಾರೆ. ಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರು  ಪ್ರತೀ ಪಕ್ಷದಲ್ಲಿ ಇರುತ್ತಾರೆ. ನಿಜವಾಗಿ ಜನರೆದುರು ಸಾಧನೆಯ ಸಂದೇಶವನ್ನು ಹೊತ್ತೊಯ್ಯುವವರು ಅವರು.  ಎಡ್ಡಿಯವರ ಹಟಮಾರಿತನ  ಸ್ವಜನಪಕ್ಷಪಾತ ಗಳನ್ನು ಕಣ್ಣಾರೆ ಕಂಡ, ಖಾಲಿ ಕಿಸೆಯ ಕಾರ್ಯಕರ್ತನ ಸ್ಥಿತಿಯಂತೂ ದಯನೀಯ. ಸಾವಿರ ವರ್ಷ ಗುಲಾಮಗಿರಿ ಕಂಡ ಈ ದೇಶ  ಮಾನಸಿಕವಾಗಿ ಸಾಕಷ್ಟು ಘಾಸಿಗೊಂಡಿದೆ. ಇನ್ನೂ ಪ್ರಜಾಪ್ರಭುತ್ವ
ಈಮಣ್ಣಿನಲ್ಲಿ ಬೇರು ಬಿಟ್ಟಿಲ್ಲ, ಚಿಗುರೂ ಸಹ ಒಡೆದಿಲ್ಲ. ಮನೆ ಮನೆ ಬಾಗಿಲು ಬಡಿದು ಮತ ಬೇಡಿ ತಾನು ನಾಯಕನಾಗಿದ್ದೇನೆ, ಎಂಬ ನೆನಪು ಸಹ ಬಾರದಷ್ಟು  ಅಧಿಕಾರದ ಅಮಲು ನೆತ್ತಿಗೇರುತ್ತಿರುವಾಗ, ಪ್ರಜಾಪ್ರಭುತ್ವ ಸುಪ್ತಸ್ಥಿತಿಯಲ್ಲಿ ಕುಳಿತು  ತನ್ನ ಕಾಲಕ್ಕಾಗಿ ಕಾಯುತ್ತಲೇ ಇರುತ್ತದೆಯೇನೋ ??