Wednesday 10 August 2011

ಕವನವೆಂದರೆ.......................

ಕವನ ಕಟ್ಟುವುದು ಸುಲಭ ಕಾಯಕ
ಕಟ್ಟಿ ಎನ್ನುವ ಜನರಿದ್ದರೆ
 ಕವಿಯಾಗುವುದು ಸುಲಭವಲ್ಲ
 ಸಾಲದು ಒಂದಿಷ್ಟು ಶಬ್ಧವಿದ್ದರೆ


ಶಬ್ದಗಳೆಲ್ಲ ಪದ್ಯವಾದರೆ
ಸದ್ದುಗಳೆಲ್ಲ ಕಾವ್ಯಗಳೇ
ಹೃದ್ಯತೆಯಿಲ್ಲದ ಪ್ರತಿಮೆಗಳಿದ್ದರೆ
ಪದ್ಯಗಳಲ್ಲ; ಅವು ವದ್ಯಗಳೇ
   
    ಕಾವ್ಯವೆಂದರೆ ಹುಡುಗಾಟವಲ್ಲ
    ಸತ್ಯದ ಸೂಕ್ಷ್ಮ ಹುಡುಕಾಟ
    ಕವನವೆಂದರೆ ಗುಡುಗಾಟವಲ್ಲ
    ದಿವ್ಯ ಮೌನಕೆ ತಡಕಾಟ


ಕಾವ್ಯವೆಂದರೆ ಹೂದೋಟ
ಅರಳಿ ಉದುರುವ ಆಟ
ಹೂಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
ಹೀರಿ ಅರಗಿಸಿದಲ್ಲಿ  ಸವಿಜೇನು ಹುಟ್ಟು


    ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
    ತುರೀಯತೆಯ ತಾರಕಕೆ ಉಲ್ಲಂಘನ
    ಏರುತ್ತ ಎಡವುತ್ತ ಇಳಿಯುತ್ತ ಕಳಿಯುತ್ತ
    ಅಗ್ನಿ ದಿವ್ಯದ ನಡುವೆ ಒಡಲ ಹವನ


ಗೋಡೆ ಛಾವಣಿಯೊಳಗೆ ಕಾವ್ಯ ಜನಿಸುವುದಿಲ್ಲ
ಬೇಕದಕೆ  ಅವನಿ ಅಂಬಾರ
ಹೊರ ಬಂದು ನೆಲಮುಟ್ಟಿ  ತಲೆಯೆತ್ತಿ ನೋಡಿದರೆ
ತೆರೆದೀತು ನಿಗೂಡ ಮುಗಿಲ ದ್ವಾರ
ಧರೆಯ ನಿರಿ ನಿರಿ ಯೊಳಗೆ ಸುರಿದೀತು
ನವಕವನ; ಧಾರಾಕಾರ.
=========================== ಸುಬ್ರಾಯ ಮತ್ತೀಹಳ್ಳಿ
  .


--

No comments:

Post a Comment