Wednesday 10 August 2011

ಓ ಕವಿತೆ; ನೀನೆಲ್ಲಿ ಅವಿತೆ ??

ಕವಿತೆಗಳ ಸೃಷ್ಟಿಯಾಗಿರುವುದೇ  ಮಾನವನ ಅಂತರಂಗ ದರ್ಶನಕ್ಕಾಗಿ ನಿಜವಾಗಿಯೂ  ಕಾವ್ಯ ಮನುಷ್ಯ ಜಗತ್ತಿನ ಅನನ್ಯ ಅನ್ವೇಷಣೆ. ಬಾಹ್ಯ ಜಗತ್ತನ್ನೇ ಅವಲಂಬಿಸಿ ಆಮೂಲಕ ಅಂತರಂಗದ ವಿಶಿಷ್ಟ ವೈವಿಧ್ಯಮಯ  ಪ್ರಪಂಚವನ್ನು ಕಾಣಿಸುವ ಕಾವ್ಯ, ಸಹೃದಯನನ್ನು ಹೊಸದೊಂದು ಅನುಭವ  ಲೋಕಕ್ಕೆ ಕೊಂಡೊಯ್ಯುವ ಅಪ್ರತಿಮ ಕೆಲಸ ಮಾಡುತ್ತದೆ.  ಮನುಷ್ಯ ಜಗತ್ತಿನಲ್ಲಿ  ಕವಿಗಳ ಸಂಖ್ಯೆ  ಎಂದಿಗೂ ಕಡಿಮೆಯೇ.
ಹಾಗೆಂದು ಕಾವ್ಯವನ್ನು ನೇರವಾಗಿ ಆಸ್ವಾದಿಸುವವರೂ ಸಹ ಅಲ್ಪಸಂಖ್ಯಾತರೆ.  ಇದೇ ಕಾರಣಕ್ಕೇ ಗಮಕಿಗಳು, ವ್ಯಾಖ್ಯಾನಕಾರರು, ಮೀಮಾಂಸಕರು, ವಿಮರ್ಶಕರು ಸೃಷ್ಟಿಯಾದರು.  ಇವರೆಲ್ಲ ಕಾವ್ಯಕ್ಕೂ ಮತ್ತು ಶ್ರೀಸಾಮಾನ್ಯರಿಗೂ  ಸಮರ್ಥ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು. ನಿರ್ವಹಿಸುತ್ತಿದ್ದಾರೆ.
ಹಾಗಾದರೆ ಕಾವ್ಯವೆಂದರೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟವೂ ಇಂದು ನಿನ್ನೆಯದಲ್ಲ. ಗೌರೀಶ ಕೈಕಿಣಿ ಯವರು ಒಂದು ಲೇಖನದಲ್ಲಿ  ಕಾವ್ಯದ ಬಗೆಗೆ ಬರೆಯುತ್ತ, ಒಂದು ರೂಪಕವನ್ನು ಉದಹರಿಸುತ್ತಾರೆ. ಸತ್ಯವೆಂದರೇನು ?” ಆಕುಚೋದ್ಯಗಾರ ಪೈಲತ ಯೇಸುಕ್ರಿಸ್ತನಿಗೆ ಸವಾಲು ಹಾಕಿದ’; ಆದರೆ ಉತ್ತರಕ್ಕಾಗಿ ಕಾಯಲೇ ಇಲ್ಲ, ಕ್ರಿಸ್ತನನ್ನು ನೇರ ಸಿಲುಬೆಗೇರಿಸಲು ಅಪ್ಪಣೆಯಿತ್ತ.
ಇದೀಗ ಕಾವ್ಯವೆಂದರೇನು ? ಎಂದು ನನಗೆ ನಾನೇ ಸವಾಲು ಹಾಕಿಕೊಳ್ಳುತ್ತಿದ್ದೇನೆ. ಆದರೆ ಈ ಸವಾಲಿಗೆ ಜವಾಬು ಕೊಡುವುದೆಂದರೆ ನನ್ನನ್ನೇ ನಾನು ಸಿಲುಬೆಗೇರಿಸಿಕೊಂಡಂತೆ.  ಏಕೆಂದರೆ ಸತ್ಯದ ವ್ಯಾಖ್ಯೆಯಷ್ಟೇ  ಕಾವ್ಯದ ವ್ಯಾಖ್ಯೆ ಗಡಚು. ಅದರ ಸ್ವರೂಪ ನಿರ್ಣಯ ಅಷ್ಟೇ ಗೊಂದಲದ್ದು.  ಮಗು ಕಿಲಕಿಲನೇ ನಗುವುದು ಕಾವ್ಯ. ಅದರ ಬಾಲಲೀಲೆ, ಲಲ್ಲೆಮಾತು ಅಂಬೆಗಾಲು ಎಲ್ಲವೂ ಕವಿತೆಯೇ. ಬೋರೆಂದು ಸುರಿಯುವ ಮಳೆ, ಧುಮುಕುವ ಜಲಪಾತ, ತುಂಬಿ ಹರಿಯುವ ನದಿ, ಭೋರ್ಗರೆವ ಸಮುದ್ರ , ನೀಲಿ ಆಕಾಶ ತಾರಾಸಮೂಹ ಎಲ್ಲವೂ ಕಾವ್ಯವೇ.  ಪ್ರಕೃತಿಯ ಯಾವ ವಸ್ತು ಯಾವ ದೃಶ್ಯ, ಅಥವಾ ಯಾವುದೇ ಸುಂದರ ಬದುಕು ನಮ್ಮ ಮನಸ್ಸನ್ನು ಕಲಕುತ್ತದೆಯೋ, ನಮ್ಮನ್ನು ಅಂತರ್ಮುಖಿ ಯಾಗಿಸುತ್ತದೆಯೋ , ಅದೇ ನಿಜವಾದ ಕಾವ್ಯ.
ಕವಿ ಉದ್ಗರಿಸುತ್ತಾನೆ-
         ಕಾವ್ಯವೆಂದರೆ ಹೂದೋಟ
         ಅರಳಿ ಉದುರುವ ಆಟ
         ಹೂ ಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
         ಹೀರಿ ಅನುಭವಿಸಿದಲ್ಲಿ; ಸವಿಜೇನ ಹುಟ್ಟು
ಕಾವ್ಯ ನಮ್ಮ ನಿಮ್ಮ ಆಡು ಭಾಷೆಯೇ ಆದರೂ  ಆಡು ಮಾತಿಗಿರುವ ವಾಚ್ಯತೆ, ಯಾಂತ್ರಿಕತೆ, ಕಾವ್ಯಕ್ಕಿರುವುದಿಲ್ಲ. ಅಲ್ಲಿ ವಾಚ್ಯಕ್ಕಿಂತ ಸೂಚ್ಯಕ್ಕೆಬೆಲೆ. ಮಾತಿಗಿಂತ ಮೌನಕ್ಕೆ ಬೆಲೆ. ಅಲ್ಲಿ ಮೌನವೇ ಮಾತಿನ ಸ್ವರೂಪ
ಪಡೆದು ಬಿಡುತ್ತದೆ. ಅದಕ್ಕಾಗಿ ಕವಿ ಹೇಳುತ್ತಾನೆ....
       ಕಾವ್ಯವೆಂದರೆ ಹುಡುಗಾಟವಲ್ಲ
        ಸತ್ಯದ ಸೂಕ್ಷ್ಮ ಹುಡುಕಾಟ
        ಕವನವೆಂದರೆ  ಗುಡುಗಾಟವಲ್ಲ
        ದಿವ್ಯ ಮೌನಕೆ  ತಡಕಾಟ,,
ಎಂದು. ನಿಜವಾದ ಕವಿತೆ ಸೃಷ್ಟಿಯಾಗುವುದು ಗಾಢ ಮೌನದಲ್ಲಿ. ಹೋಗಿ ತಲುಪುವುದೂ ಮೌನಕ್ಕೇ. ಕವಿತೆ ಯಿಂದ ಏನು ಸೃಷ್ಟಿಯಾಗುತ್ತದೆ  ಎಂದುಕೇಳಿದರೆ ಸೃಷ್ಟಿಯಾಗುವುದು ಮತ್ತೊಂದು ಕವಿತೆಯೇ  ಎಂದು ಹೇಳಬೇಕಾಗುತ್ತದೆ. ಮಾತು ಮನುಷ್ಯನಿಗೆ ಪ್ರಕೃತಿ ನೀಡಿದ ಅದ್ಭುತ ವರ.ಕೇವಲ ಮಾತು ವ್ಯವಹಾರಕ್ಕಾದರೆ  ಮಾತಿನಿಂದಲೇ ಜನಿಸಿದ ಕಾವ್ಯ ಹೃದಯ ಸಂವಾದಕ್ಕೆ ಅನುವು ಮಾಡಿಕೊಡುತ್ತದೆ.  ನಮ್ಮೊಳಗಿನ ಭಾವ ಎಂದೂ ಅಮೂರ್ತವೇ. ಅದು ಪ್ರತ್ಯಕ್ಷಗೊಳ್ಳುವುದು ಭಾಷೆಯ ಮೂಲಕ ಮಾತ್ರ. ಪ್ರಜ್ಞೆ ಪಡೆದ ಮನುಷ್ಯ ರೆಲ್ಲರಿಗೂ ಭಾವ ಇರಲೇಬೇಕಷ್ಟೆ. ಹಾಗೆಂದು ಎಲ್ಲರೂ ಕವಿಯಾಗಲಾರರು.  ಕಾಣುವ ಕೇಳುವ ಅನುಭವವೆಲ್ಲ ಅಂತರಂಗದ ಕುಲುಮೆಯಲ್ಲಿ ಕುದಿದು ಅದೊಂದು ದರ್ಶನವಾಗಿ ರೂಪುಗೊಳ್ಳುವುದು ಪ್ರತಿಭಾಶಕ್ತಿ ಪಡೆದ ವ್ಯಕ್ತಿತ್ವದಲ್ಲಿ ಮಾತ್ರ. ಈ ಸಂದರ್ಭದಲ್ಲಿ ಇಂಗ್ಲಿಶ್ ಕವಿ ಶೆಲ್ಲಿ ನೆನಪಾಗುತ್ತಾನೆ. ಅತ್ಯಂತ ಉದಾತ್ತ
ವಾದ ಮನಸ್ಸುಗಳ ಅತ್ಯುದಾತ್ತವಾದ ಅನುಭವ ಲಕ್ಷಣಗಳನ್ನು  ಆನಂದಾತ್ಮಕವಾಗಿ ಹಿಡಿದಿಡುವ ಪ್ರಯತ್ನವೇ ಕಾವ್ಯ.ಎಂದು ಹೇಳಿದರೆ, ಮ್ಯಾಥ್ಯೂ ಅರ್ನಾಲ್ಡ  ಇನ್ನೂ ಸ್ವಲ್ಪ ಮುಂದೆ ಹೋಗಿ,“ಕಾವ್ಯ ಮನುಷ್ಯನ ಭಾಷೆಯ ಅತ್ಯಂತ ಪರಿಪೂರ್ಣ ರೂಪ, ಮತ್ತು ಆ ರೂಪದಲ್ಲಿ ಅದು ಸತ್ಯಾನ್ವೇಷಣೆಯ ಅತಿ ಹತ್ತಿರಕ್ಕೆ ಬರುತ್ತದೆ. ಕಾವ್ಯ ಸತ್ಯವನ್ನೂ ಕಾವ್ಯ ಸೌಂದರ್ಯದ ಹಿನ್ನೆಲೆಯನ್ನೂ ಅವಲಂಬಿಸಿದ ಜೀವನ ವಿಮರ್ಶೆಯೇಕಾವ್ಯ ಎಂದು ಅರ್ಥಪೂರ್ಣವಾಗಿ ಉದ್ಘರಿಸುತ್ತಾನೆ. ಅತ್ಯಂತ ಉದಾತ್ತವಾದ ಮನಸ್ಸು ಸೃಷ್ಟಿಸುವ ಕಾವ್ಯ ದ ಉದ್ದೇಶ  ಮತ್ತಷ್ಟು ಉದಾತ್ತ ಮನಸ್ಸುಗಳನ್ನು ಸೃಷ್ಟಿಸುವುದೇ ಆಗಿದೆ. ದಿನದಿಂದ ದಿನಕ್ಕೆ ಜಗತ್ತು ಅತಿ ನಾಗರಿಕತೆ ಅತಿ ಭೌತಿಕತೆ ಯ ಮಹಾ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿರುವಾಗ  ಕಾವ್ಯದಂಥ ಸೂಕ್ಷ್ಮ ಸುಕೋಮಲ ವಸ್ತುವನ್ನು ಗಮನಿಸುವ ವ್ಯವಧಾನ ವಾದರೂ ಎಲ್ಲಿದೆ ?
ಕಾವ್ಯ ಸೃಷ್ಟಿಯ ಸಂದರ್ಭದಲ್ಲಿ ಕವಿ ಭಾವ ತೀವ್ರ ಸ್ಥಿತಿಗೆ ಏರುವಂತೇ  ಕಾವ್ಯದ ಆಸ್ವಾದಕನೂ ಅದೇ ಸ್ಥಿತಿಗೆ ಬರಬೇಕಾಗುತ್ತದೆ. ಸಂವೇದನಾ ಶೀಲನಾಗಬೇಕಾಗುತ್ತದೆ. ಕಾವ್ಯದ ಓದು ಅಂದರೆ ಅದೊಂದು  ಧ್ಯಾನ. ಕವಿಯ ಮಾತಿನಲ್ಲಿಯೇ ಹೇಳಬೇಕೆಂದರೆ,
         ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
         ತುರೀಯಕೆ : ತಾರಕಕೆ ಉಲ್ಲಂಘನ
         ಏರುತ್ತ ಎಡವುತ್ತ, ಇಳಿಯುತ್ತ ಕಳಿಯುತ್ತ
         ಅಗ್ನಿ ದಿವ್ಯದ ನಡುವೆ ಒಡಲ ಹವನ 

 ಕಾವ್ಯ ಸಾಮಾನ್ಯ ಓದುಗನ ದೃಷ್ಟಿಯಲ್ಲಿ  ಅದೊಂದು ಪದ್ಯ ಅದೊಂದು  ಹಾಡು ಅಷ್ಟೆ. ಆದರೆ ಅವುಗಳನ್ನೆಲ್ಲ ಒಳಗೊಂಡು ಅದನ್ನೂ ಮೀರಿದ್ದು ಕಾವ್ಯ. ಕಾವ್ಯ ಪದ್ಯದಲ್ಲಿ ಗದ್ಯದಲ್ಲಿ  ಕಲೆಯಲ್ಲಿ ನೃತ್ಯದಲ್ಲಿ ಸಂಗೀತದಲ್ಲಿ ಪ್ರಕೃತಿಯಲ್ಲಿ  ಮಾತಿನಲ್ಲಿ  ನಡೆ ನುಡಿಯಲ್ಲಿ  ಹಾಸು ಹೊಕ್ಕಾಗಿರುತ್ತದೆ.  ಆದರೆ ಅದನ್ನು ಕಾಣುವ ಮತ್ತು ಅನುಭವಿಸುವ  ವಿಶಿಷ್ಟ ದೃಷ್ಟಿ ಮತ್ತು ವಿಶಿಷ್ಟ ಮನೋಭಾವ ಇರಬೇಕಾಗುತ್ತದೆ.  ನಿಜವಾದ ಕಾವ್ಯ  ಅದರ ಭಾಷಾ ಶರೀರ ವನ್ನು ಮೀರಿ ಬೆಳೆದುಕೊಳ್ಳುತ್ತದೆ. ಶರೀರ ಅದಕ್ಕೆ ಅನಿವಾರ್ಯವಾದರೂ ಅದೇ ಕಾವ್ಯ ವಲ್ಲ.  ಕಾವ್ಯದ ಆತ್ಮವಿರುವುದು  ಕವಿಯಲ್ಲಿ ಮತ್ತು ಓದುಗನ ಹೃದಯದಲ್ಲಿ.
                      ಗೋಡೆ ಛಾವಣಿಯೊಳಗೆ  ಕಾವ್ಯ ಜನಿಸುವುದಿಲ್ಲ
                      ಬೇಕದಕೆ ಅವನಿ  ಅಂಬಾರ
                      ಹೊರ ಬಂದು ನೆಲ ಮುಟ್ಟಿ ತಲೆಯೆತ್ತಿ ನೋಡಿದರೆ
                      ತೆರೆದೀತು ನಿಗೂಢ ಮುಗಿಲ ದ್ವಾರ
                      ಧರೆಯ  ನಿರಿ ನಿರಿ ಯೊಳಗೆ ಸುರಿದೀತು  ನವಕವನ
                      ಧಾರಾಕಾರ
                                                              

   

No comments:

Post a Comment