Sunday 12 November 2023

`` ಸತ್ವಪೂರ್ಣ ಸಾಧಕ- ಸಿಂಧೊಳ್ಳಿ ಸನದಿ.

 

          ಕವಿತೆ  ಮಾನವ ಸೃಷ್ಟಿಸಿಕೊಂಡ ಒಂದು ವಿಶಿಷ್ಟ ಜಗತ್ತು.  ಅನನ್ಯ ಅನುಭವಗಳ ರಸಲೋಕ. ಮಾನವ ಮನಸ್ಸು ಮತ್ತು ಬದುಕು ಕಂಡ ಉಂಡ ಸೂಕ್ಷö್ಮ ಅನುಭವಗಳೆಲ್ಲ, ವಿಶಿಷ್ಟ ಅರ್ಥವಂತಿಕೆಯಿಂದ ಆಕರ್ಷಕವಾದ ಭಾಷಾಶರೀರದಲ್ಲಿ  ಅವತರಣಗೊಂಡಿರುವ ಅಕ್ಷರ ಮಾಧ್ಯಮ, ಸದಾ ಹೊಸತನದಿಂದ ಕಂಗೊಳಿಸುತ್ತವೆ. ಆವಾವ ಕಾಲದ ಗುಣ ಶೀಲ ಮತ್ತು ಬದುಕಿನ ಗತಿಬಿಂಬಗಳನ್ನು ಮೈಗೂಡಿಸಿಕೊಳ್ಳುವ ಕಾವ್ಯಕಲೆ ಅದೊಂದು ಮನಸ್ಸಿನ ಉನ್ನತ ಪ್ರತಿಭಾ ಪ್ರತಿಕ್ರಿಯೆ.  ಕಾವ್ಯದ ಭಾಷೆ ಕಾವ್ಯದ ಅಭಿವ್ಯಕ್ತಿ  ಗದ್ಯ ಅಥವಾ ಮಾತಿನ ಹಾಗಲ್ಲ. ಇದೂ ತನ್ನ ಹರಿವಿಗೆ ಭಾಷೆಯನ್ನೇ ಅವಲಂಬಿಸಿದರೂ  ಅದು ಕೇವಲ ಒಂದು ಮಾಧ್ಯಮ ಅಷ್ಟೇ. ಕವಿಯ ಅಂತರAಗದಲ್ಲಿ ಚಿಮ್ಮುವ ಭಾವ ಪ್ರವಾಹಕ್ಕೆ ಭಾಷೆ ಸಾತ್ ನೀಡುತ್ತದೆ. ವಿವಿಧ ಪ್ರತಿಮೆ ಪ್ರತೀಕ ಉಪಮೆ ಛಂದಸ್ಸು ಗಳೆಂಬ ಸಾಧನ ಬಳಸಿ ಹೊಸದೊಂದು ಆರ್ಥಪರಂಪರೆಯನ್ನು ಸೃಷ್ಟಿಸಿ ಸಹೃದಯನ ಭಾವಕೋಶವನ್ನು ಸೇರಿಕೊಳ್ಳುತ್ತದೆ. ಒಂದೊಂದು ಮನಸ್ಸಿನಲ್ಲಿಯೂ ವೈವಿಧ್ಯಮಯ ಭಾವನೆಯ ಅಲೆಗಳನ್ನು ಸೃಷ್ಟಿಸುತ್ತದೆ.  ಕಾವ್ಯ ಅಂದರೆ ಭಾವ ಭಾವಗಳ ನಡುವೆ  ಹೃದಯ ಹೃದಯಗಳ ನಡುವೆ ಐಕ್ಯತೆಯನ್ನು ನಿರ್ಮಿಸುವ ಒಂದು ಅದ್ಭುತ ಸಾಧನ. ರಂಜಿಸುವುದರೊಂದಿಗೆ ಬೌದ್ಧಿಕ ಜಾಗ್ರತಿ, ವೈಚಾರಿಕತೆಯ ಮೂಲಕ ತಾತ್ವಿಕಪ್ರೇರಣೆ ಕಾವ್ಯದಿಂದಾಗುವ ಪರಮ ಪ್ರಯೋಜನ. ಕವಿಯಾಗುವುದು ಅಂದರೆ ಮಾನವತೆಯ ಹೆಬ್ಬಾಗಿಲನ್ನು ಪ್ರವೇಶಿಸುವುದು ಎಂದೇ ಅರ್ಥ.

      ಇಂಥದೊಂದು ಸುವರ್ಣ ಹೆಬ್ಬಾಗಿಲು  ನಮ್ಮ ಪ್ರೀತಿಯ ಕವಿ  ಸನದಿ.

ಎಲ್ಲಿಹುಟ್ಟಿತೊಎಲ್ಲಿ ಮುಟ್ಟಿತೋ

ಈಅನಂತದಾರಿ!

ಬಂದರು   ಅಡೆತಡೆ,   ಇದಕೇತರಭಿಡೆ

ನಡೆವುದೊಂದೆ ಗುರಿ!

ಲೆಕ್ಕವಿಲ್ಲದೀಭೇದಗಳಳಿಯುವ

ಬದುಕಿಳಿಯಲಿಧರೆಗೆ!

ಮನುಜಕುಲದಭಾವೈಕ್ಯವೆಉತ್ತರ

ದಾರಿಯ ಮೊರೆಗೆ!

          ದಶಕಗಳ  ಹಿಂದೆಯೇ  ಆಕಾಶವಾಣಿಯಲ್ಲಿ  ಕವಿಯ ಜೀವನ ದೃಷ್ಟಿ  ಧೋರಣೆ `` ದಾರಿಯ ಮೊರೆ’’ಎಂಬ ಕವನದಲ್ಲಿ ಮೊಳಗಿತ್ತು. ಸಮಗ್ರ ಬದುಕನ್ನೇ  ಒಂದು ಮಾನವ ಸಂವೇದನಾಶೀಲ ದಾರಿಯನ್ನಾಗಿ ಕಾಣುವ ಕವಿ ಅದನ್ನೊಂದು ಅಂತ್ಯವಿಲ್ಲದ ಪ್ರಯಾಣವನ್ನಾಗಿ ಗುರುತಿಸುತ್ತಾರೆ. ಕವಿ ಅಂತರಂ ಜಗತ್ತಿನ ಕತ್ತಲೆಗೆ ಬೆಳಕು ಬೀರಿದಂತೇ ಬಾಹ್ಯಪ್ರಪಂಚಕ್ಕೂ ದಾಂಗುಡಿಯಿಡುತ್ತಾರೆ. ಸಾಮಾಜಿಕ ಪ್ರಜ್ಞೆಗೆ ಆಧುನಿಕತೆಯೆಂಬ ಮಾಯೆಯ ಗ್ರಹಣ ಆಕ್ರಮಿಸಿ ಮಾನವೀಯ ಮೌಲ್ಯಗಳಿಗೆ ಘಾಸಿಯಾದಾಗಲೆಲ್ಲ ಕವಿ ಜಾಗ್ರತರಾಗುತ್ತಾರೆ. ಕವಿ ತಮ್ಮ ಸೃಜನಶೀಲ ಬದುಕಿನ ತುಂಬ ಕನಸು ಕಂಡಿದ್ದು ಒಂದು ಸೌಹಾರ್ದಯುತ ಶಾಂತ ಸುಂದರ ಸಮಾಜವನ್ನು.  ಸ್ನೇಹ ಸೌಜನ್ಯ ಸಂತೃಪ್ತಿ ಮತ್ತು ಸಮಾನತೆಯನ್ನು.  ಅಲ್ಲಿ ಮೇಲಿಲ್ಲ ಕೀಳಿಲ್ಲ. ಶೋಷಣೆಯಿಲ್ಲ.  ಆದರೆ ವರ್ತಮಾನ ಹಾಗಿಲ್ಲ.  ಹೆಜ್ಜೆ ಹೆಜ್ಜೆಗೆ ಎದುರಾಗುವುದು ಕ್ರೂರ ವಾಸ್ತವ.

ಕವಿ ತಮ್ಮ `` ಸತ್ವ’’ ಎಂಬ ಮಹತ್ವಪೂರ್ಣ ಕವಿತೆಯಲ್ಲಿ  ತನ್ನ ಸ್ವಂತಿಕೆಯನ್ನೇ ಮರೆತು ಹತಾಶೆಯಿಂದ

ಮೇಲ್ಮೆಯಲ್ಲಿ ಕಾಣುವ ಕೃತಕ ಆಮಿಷದ  ಹಿಂದೆ ಮೂಕ ಪ್ರಾಣಿಯಂತೇ ಹಿಂಬಾಲಿಸುವುದನ್ನು ಕಂಡು ಕವಿ ಕನಲುತ್ತಾರೆ.

           ಮನುಜನೆದೆಗಾರಿಕೆಯ ಗಣಿಯಾಳಕಿಳಿಯದೆಯೇ /

           ಯಾರ ಕೈಗೆಟಕುವುದು ಯಾವ ಅದಿರು..!

           ತೇಗು ಬೆಳೆಯುವ ಛಲವ ಬೆಳೆಸಿಕೊಳ್ಳದ ಜನಕೆ /

           ಬೆಳೆದರನಿತೇ ಹಿಗ್ಗು  ಹಿತ್ತಿಲಲಿ ಬಿದಿರು.../ 

     ತಮ್ಮ ತಮ್ಮ  ಸಂಸಾರ ಉದ್ಯೋಗ ವೈಭೋಗ   ಕೊಳವೆಭಾವಿಯಲ್ಲಿ ಸಿಲುಕಿ  ತಾತ್ವಿಕತೆ ವೈಚಾರಿಕತೆ ಯಿಂದ ದೂರವಾಗಿ  ತತ್ವಭೃಷ್ಟತೆಯ ಉತ್ತುಂಗಕ್ಕೆ ಸೇರಿರುವ ಜನಮಾನಸದ ನಡಾವಳಿಯನ್ನ  ನೇರವಾಗಿ ಖಂಡಿಸುವ ಕವಿಯ ನುಡಿಯಲ್ಲಿ ಅದೆಂಥ ಋಷಿಸದೃಷ  ಉದ್ಗಾರ.? ತೇಗವೃಕ್ಷ ವನ್ನೇ ಬೆಳೆಯ ಬಹುದಾಗಿದ್ದ ಸಮರ್ಥ ಸಮುದಾಯ  ಹಿತ್ತಿಲಲ್ಲಿ ಬಿದಿರು ಬೆಳೆದು ಬೀಗುತ್ತಿದೆ.  ಬಿದಿರು  ಅದೊಂದು ಸುಂದರ ರೂಪಕ.  ಹುಟ್ಟಿಗೆ ತೊಟ್ಟಿಲಾದರೆ  ಸಾವಿಗೆ ಚಟ್ಟವಾಗುತ್ತದೆ.  ತೇಗ ಮಾನವೋಪಯೋಗಿಯಾಗಿ ಶತಮಾನಕಾಲ ಬಾಳಿದರೆ ಬಿದಿರು  ಕ್ಷಣಿಕ ಕಾಲ ಬದುಕಿ ಸಾಯುತ್ತದೆ.  ಹುಟ್ಟು ಮತ್ತು ಸಾವಿನ ನೈಸರ್ಗಿಕ ಕ್ರಿಯೆಯಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುವ ಪೊಳ್ಳು ಕೊಳವೆಯ ಬದುಕಿಗಿಂತ  ಗಟ್ಟಿ ಒಡಲ ತೇಗದ ಬದುಕಿನ ಮಹತ್ವವನ್ನು  ಎರಡು ವೃಕ್ಷಗಳ ಪ್ರತಿಮೆಗಳ ಮೂಲಕ  ಮನದಲ್ಲಿ ಮಾನವತೆಯ, ಕ್ರಿಯಾಶೀಲತೆಯ ಬೀಜ ಬಿತ್ತುತ್ತಾರೆ.

     ಆಲದಡಿಯಲ್ಲಿ ಮೊಳೆತು ಮುರುಟಿ ಹೋಗುವ ಹುಲ್ಲು

     ಯಾವ ಹಸುವಿನ ಹೊಟ್ಟೆ  ತುಂಬಿಸುವುದೋ..!

     ಸೂರ್ಯನೆದೆಯಿಂದೊಗೆವ  ಸಾರ ಸತ್ವವ ಮರೆವ

     ಇರುಳಗಣ್ಣರ ನೆಂತು  ನಂಬಿಸುವುದೋ......!  [ಸತ್ವ ಕವನ]

ಚರಣದಲ್ಲಿಯೂ  ಸಹ ಜಡಸಮುದಾಯದ ಬದುಕಿನ ಬಗೆಗಿನ  ಮಿಥ್ಯಾ ಕಲ್ಪನೆಯನ್ನು  ಗುರುತಿಸುತ್ತ

ಮೃದು ಶಬ್ದಗಳಲ್ಲಿಯೇ ಛೇಡಿಸುತ್ತಾರೆ.  ಒಂದೆಡೆ ಬ್ರಹದಾಕಾರದ ಆಲದ ಮರವಿದೆ.  ಮತ್ತೊಂದೆಡೆ ಪಾಪದ  ಹಸಿವಿನ ಗುಂಪಿದೆ.  ಆಲದ ತಳದಲ್ಲಿಯೇ  ಹೇಗಾದರೂ ಮೊಳೆತು ಬದುಕಿಕೊಳ್ಳುವ ರಣ ಹೇಡಿ ಹುಲ್ಲು ಇದೆ.  ಕವಿಯ ಮೊನಚು ದೃಷ್ಟಿ  ಆಲದಮೇಲಾಗಲೀ  ಹಸಿವಿನ ಬಳಗದ ಮೇಲಾಗಲೀ ಹರಿದಿಲ್ಲ.

ವಿದ್ಯೆಯ ಫಲವತ್ತತೆ   ಆದಾಯದ ಸಮೃದ್ಧಿ ಎರಡೂ ದೊರಕಿರುವ  ಮಧ್ಯಮವರ್ಗದ ಅಸಂಖ್ಯಾತ ಜನವರ್ಗದ ಜಡತೆಯನ್ನು ಗುರಿಯಾಗಿಸಿಕೊಂಡಿದೆ.  ಸೂರ್ಯನೆದೆಯಿಂದ ಸತ್ಯದ ಬೆಳಕು ಪ್ರವಾಹ ರೂಪದಲ್ಲಿ ಹರಿಯುತ್ತಿದ್ದರೂ  ಇರುಳು ಗಣ್ಣಿನ ರೋಗದಿಂದ ಬಳಲುತ್ತಿರುವ  ಬುದ್ಧಿವಂತರ ಜಾಣಕಿವುಡನ್ನು ವಿಡಂಬಿಸುತ್ತಾರೆ.  ಆಲ ಶೋಷಣೆಯ ಪ್ರತಿಕವಾದರೆ ಹುಲ್ಲು ಅದನ್ನೇ ಕುರುಡಾಗಿ ಅವಲಂಬಿಸುವ ಜನವರ್ಗವನ್ನು ಧ್ವನಿಸುತ್ತಿದೆ.

     ಯಾರ ಹೆಸರಿನ ಮೇಲೆ ಯಾರು ಹಾಕಲಿಕುಂಟು

     ಹೊಗಳಿಕೆಯ ಹಾರಗಳ ಹೆಣೆದು ಹೆಣೆದು...?

     ಯಾರ ಉಸುರಿನ ಮೇಲೆ ಯಾರು ಬದುಕಲಿಕುಂಟು

     ತಮ್ಮ ಅಂತಸ್ಸತ್ವವನ್ನೇ  ಮರೆದು......?

 

ತತ್ವಶೂನ್ಯ ಮನಸ್ಥಿತಿಯಲ್ಲೂ ಸಾಧಕನೆಂದು ನಾಟಕವಾಡುತ್ತ  ಗೋಸುಂಬೆತನದಲ್ಲಿ ಕೃತಕ ಬಣ್ಣದಲ್ಲಿ ಮಿಂಚುತ್ತ, ವಿವಿಧ ಸಮ್ಮಾನ ಪ್ರಶಸ್ತಿಗಳಿಗಾಗಿ ಓಲೈಸುತ್ತ ಅಲೆಯುವ ವ್ಯಕ್ತಿತ್ವಗಳು ಇಲ್ಲಿ ನಗ್ನಗೊಂಡಿವೆ.  ಭೂತ ಮತ್ತು ಭವಿಷ್ಯಗಳೆರಡರ ಬಗೆಗೂ ಕುರುಡಾಗಿ ಕೇವಲ ವರ್ತಮಾನದ ಕ್ಷಣಿಕ ಲಾಲಸೆ  ಇಡೀ ಸಮುದಾಯವನ್ನು ಕಾಡುತ್ತಿರುವ ಸಂದರ್ಭಕ್ಕೆ ಕವಿ ರೋಚಕವಾಗಿ ಸ್ಪಂದಿಸಿದ್ದಾರೆ.  ``ಬಾಹ್ಯದ ಜೊತೆಗೆ ನಾವು ಗೈಯುವ ಸಂಘರ್ಷ ಮತ್ತಷ್ಟು ವಿಷಮತೆಯನ್ನು ಸೃಷ್ಟಿಸಿದರೆ  ನಮ್ಮ ಅಂತರಂಗದ ಜೊತೆಗೆ ಕಾದಾಟಕ್ಕಿಳಿದರೆ ಕಾವ್ಯ ಜನಿಸುತ್ತದೆ’’ಎಂಬ ಯೇಟ್ಸ ಕವಿಯ ಸಾಲುಗಳು ಇಂಥ ಸಂದರ್ಭದಲ್ಲಿ ಕಾಡತೊಡಗುತ್ತದೆ.

ವಸ್ತು ಸಾಮಾಜಿಕವಿರಲಿ  ಆಂತರಂಗಿಕವಾಗಿರಲಿ ಸನದಿ ಯವರ ಗುರಿ ಸತ್ಯಶೋಧನೆ ಮತ್ತು ಮಾನವ ಬದುಕಿನ ಸುಸ್ಥಿರತೆಯ ಬಗೆಗಿನ ಕಾಳಜಿಯಾಗಿದೆ. ಕವಿ ತಮ್ಮ ಅಂತರಂಗದ ಜೊತೆಗೆ ಸಲ್ಲಾಪಿಸುತ್ತಾರೆ.  ಅವರ ಕಾವ್ಯದ ಆಳದಲ್ಲಿ ಸಾಮಾಜಿಕ ಸಾಂಸ್ಕೃತಿಕ ವೈಷಮ್ಯಗಳ ಬಗೆಗೆ ಅತೃಪ್ತಿ ಅಸಹನೆಗಳಿದ್ದರೂ ಅಭಿವ್ಯಕ್ತಿ ಮಾತ್ರ  ಕಾಂತಾ ಸಮ್ಮಿತದ ಮಾರ್ಗ. ಪ್ರತಿಭಟನೆ ಆಕ್ರೋಷ ವೆಲ್ಲ ಹುದುಗಿದ್ದರೂ ಯಾವ ಗದ್ದಲ ಯಾವ ಗಡಿಬಿಡಿಯಿಲ್ಲದೇ ನಿರ್ಲಿಪ್ತ ದಾರಿಯಲ್ಲಿಯೇ ಸಹೃದಯರನ್ನು ಕಾಡುತ್ತಾರೆ. ಕಲಕುತ್ತಾರೆ.  ಇದೇ ಸನದಿಯವರ ನಿಜವಾದ ಶಕ್ತಿ. ತಮ್ಮ ಕವನದ ಕೊನೆಯಲ್ಲಿ

     ಬೆಳೆವುದಿದ್ದರೆ ಬೆಳೆದು ಬೆಳೆದವರ ಜೊತೆಗೂಡಿ

     ನೋಡಬಾರದೇ ಹಾಕಿ ಬೀಸುಗಾಲು...?

     ಊರಗಸೆಯೊಳಗಿರುವ ಕೆರೆಯ ಕೆಸರಿಗೆ ಇಳಿದು

     ನೆನೆದುಕೊಂಡರೆ ಕಾಣಲುಂಟೇ ಕಡಲು...?

ಹಾಗೆಂದು ಕವಿ  ಸಮುದಾಯದ ಮೇಲಣ ಭರವಸೆಯನ್ನು ಕಳೆದುಕೊಂಡಿಲ್ಲ. ಈಗಲೂ ಕಾಲಮಿಂಚಿಲ್ಲ. ವಿಸ್ಮೃತಿಯ ಪೊರೆಯಿಂದ ಹೊರಬಂದು ಸಂಕುಚಿತ ಸ್ಥಿತಿಯಿಂದ ಮೇಲೆದ್ದು ಒಮ್ಮೆ ಜಗತ್ತನ್ನು ಸೂಕ್ಷö್ಮವಾಗಿ ದೃಷ್ಟಿಸಿದರೆ ಹೊಸದಾದ ಸುಂದರ ಮನುಷ್ಯಲೋಕ ಕಾಣಬಹುದು ಎಂಬ ಅತ್ಯಂತ ಆಶಾವಾದ ಕವಿಯ ಹೃದಯದಲ್ಲಿದೆ. ಜಾತಿ ಮತ ಧರ್ಮ ಪ್ರದೇಶ ಬಣ್ಣ  ಎಂದೆಲ್ಲ ಮನುಷ್ಯನೇ ಸೃಷ್ಟಿಸಿಕೊಂಡ ಬೇಲಿಗಳು ಮನುಷ್ಯತ್ವವನ್ನು ಬಂಧಿಸಿಬಿಟ್ಟಿವೆ. ಮಿಥ್ಯೆಯ ಗೋಜಲಿನ ಒಳಗೆ ನಿಜವನ್ನು ಕಂಡುಕೊಳ್ಳುವ ಮತ್ತು ಕಾಣಿಸುವ  ಅಪರೂಪದ ಶಕ್ತಿ ಕವಿ ಸನದಿಯವರಲ್ಲಿದೆ.   ಇದೇ ಶಕ್ತಿ ಅವರನ್ನು ದೇಶ ಕಾಲ ಧರ್ಮ ಗಳನ್ನೂ ಮೀರಿದ ಅಪ್ಪಟ ಮಾನವೀಯ ಕವಿಯನ್ನಾಗಿಸಿದೆ.

                `` ಹಿಮದೊಳಗೆ ಅಡಗಿರುವ ಬಿಸಿನೀರ ಚಿಲುಮೆ

                  ಪ್ರೀತಿಯೇ ಸೃಷ್ಟಿಸಿದ ಅಪ್ರತಿಮ ಪ್ರತಿಮೆ.

                  ಸನದಿಯಲ್ಲ ಇವರು ಸುನಾದಿ  ಸನಾದಿ

                  ಸತ್ಯವೇ ಉಸಿರಾದ ಸೂರ್ಯಪಾನದ ಪ್ರವಾದಿ.’’

=======================================================

      --೨೦೧೫                                   ಸುಬ್ರಾಯ  ಮತ್ತೀಹಳ್ಳಿ. [ ದೂರವಾಣಿ- ೦೮೩೮೯-೨೮೧೫೦೮]

 

 

 

Saturday 11 November 2023

ಹೃದಯವೆಂಬ ಸತ್ಯ-----ಹಾಸ್ಯವೆಂಬ ಕನಸು.

  ಹಾಸ್ಯವನ್ನೇ ಕೀಳಾಗಿ ಕಾಣುವ ಗಂಭೀರಿಗಳು ನಮ್ಮಲ್ಲಿದ್ದಾರೆ.  ತಾವೂ ನಗದೇ ನಗುವವರನ್ನು ನಗಗೊಡದೇ  ಇಢೀ ವಾತಾವರಣವನ್ನೇ  ವಿಚಿತ್ರ ಗಾಂಭೀರ್ಯದಲ್ಲಿ  ಸ್ಥಗಿತಗೊಳಿಸುವವರು ನಮ್ಮ ನಡುವಣ  ಖಳನಾಯಕರು  ಎಂದರೆ ತಪ್ಪಾಗದು.  ನಗುವುದೇ ಪ್ರತಿಷ್ಠೆಗೆ ಕುಂದು, ಘನತೆಗೆ ಧಕ್ಕೆ , ಎಂದು ತಿಳಿಯುವ ಮನಸ್ಸು ಅದೆಷ್ಟೇ ಸಾಮಾಜಿಕ ಪ್ರತಿಷ್ಠೆ ಗಳಿಸಿರಲಿ  ಆ ವ್ಯಕ್ತಿತ್ವಕ್ಕೆ ವಿಚಿತ್ರ ಮನೋರೋಗದ ಸೋಂಕು ತಗಲಿದೆ ಎಂದೇ  ಅರ್ಥ. ನವರಸಗಳಲ್ಲಿ  ಹಾಸ್ಯವೂ ಒಂದು ರಸವಾದರೂ À ವರ್ಗ  ಶ್ರೇಣಿ  ಮೇಲು ಶ್ರೇಷ್ಠ  ಎಂಬೆಲ್ಲ ಮಿಥ್ಯೆಗಳ ಬಲೆಯಲ್ಲಿ ಸಿಕ್ಕ  ಮಾನವ ಮನಸ್ಸು  ಹಾಸ್ಯ ರಸವನ್ನ ಇನ್ನೂ ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ. ದುಃಖ ಕರುಣೆ ಶ್ರಂಗಾರ ರೌದ್ರ ಗಳ ದಟ್ಟಡವಿಯಲ್ಲಿಯ ಏಕತಾನತೆಯನ್ನ ದೂರಗೊಳಿಸುವ ಸಾಧನವಾಗಿ ಮಾತ್ರ ಹಾಸ್ಯ ಬಳಕೆಯಾಗುತ್ತದೆಯೇ ಹೊರತು  ಹಾಸ್ಯದ ಸ್ಥಾನ ಔಚಿತ್ಯ ಪಡೆದಿಲ್ಲ.   ``ಶತೇಷು ಜಾಯತೇ ಶೂರಾಃ  ಸಹಸ್ರೇಶುಚ ಪಂಡಿತಃ, ವಕ್ತೃದಶ ಸಹಸ್ರೇಷುಚ ”  ನೂರರಲ್ಲಿ ಒಬ್ಬ ಶೂರ,ಸಾವಿರಕ್ಕೊಬ್ಬ ಪಂಡಿತ, ಹತ್ತು ಸಾವಿರಕ್ಕೊಬ್ಬ ಮಾತುಗಾರನಿರುತ್ತಾನಂತೆ.  ಆದರೆ ನಿಜವಾದ ಹಾಸ್ಯಗಾರ ಮಾತ್ರ ಮತ್ತೂ ಅಪರೂಪ.   ``ಲಕ್ಷೇಷು  ಜಾಯತೇ  ಹಾಸ್ಯಗಾರಃ  ಎಂಬ ಇನ್ನೊಂದು ಮಾತನ್ನು  ಈ ಸುಭಾಷಿತಕ್ಕೆ ಸೇರಿಸಬಹುದೇನೋ.   ನಗುವನ್ನು ಎಲ್ಲರೂ  ಇಷ್ಟಪಡುತ್ತಾರೆ. ಆದರೆ ನಗಿಸುವವನನ್ನು ಹಗುರವಾಗಿ ಎಣಿಸುತ್ತಾರೆ. ಎಂದೂ ನಗದ ರಾಜಕುವರಿಯೊಬ್ಬಳನ್ನು  ನಗಿಸಿದವರಿಗೆ  ರಾಜಕುವರಿಯನ್ನೇ ಮದುವೆಮಾಡಿಕೊಡುವುದಲ್ಲದೇ ಅರ್ಧ ರಾಜ್ಯಕೊಡುತ್ತೇನೆಂದು  ರಾಜ ಸಾರುತ್ತಾನೆ.  ಬಿಕ್ಷÄಕನೊಬ್ಬ ರಾಜಕುಮಾರಿಯನ್ನು ನಗಿಸಿ ಮದುವೆಯಾಗುತ್ತಾನೆ.  ಇದೊಂದು ಜಾನಪದ ಕತೆ. 

         ಭರತನ ನಾಟ್ಯಶಾಸ್ತçದಲ್ಲಿ ಹಾಸ್ಯಾಭಿನಯದ ಬಗೆಗೆ ಹೇಳಿದ್ದನ್ನು ಇಲ್ಲಿ ಪ್ರಸ್ಥಾಪಿಸಬಹುದಾಗಿದೆ. `` ಅಸ್ತವ್ಯಸ್ತ ಆಭರಣ ದಾರಣೆ, ವಿಕೃತ ವ್ಯವಹಾರ, ವಿಕೃತ ವೇಷ, ವಿಕೃತ ವಾಕ್ಯಗಳನ್ನು ಅಭಿವ್ಯಕ್ತಿಸುವುದು, ವಿಕೃತಾಂಗ ಮತ್ತು ಚೇಷ್ಟೆಗಳಿಂದ ನಗುವುಕ್ಕಿಸುವುದು ಹಾಸ್ಯ’’ಎಂಬ  ಭರತಮುನಿಯ  ಈ ಹೇಳಿಕೆ ಭರತವಾಕ್ಯವೇನಲ್ಲ. ಬದಲಾದ ಕಾಲ ಅಭಿರುಚಿಮನೋಸ್ಥಿತಿಗಳಿಗೆ  ಅನುಗುಣವಾಗಿ ಹಾಸ್ಯದ ಸ್ವರೂಪವೂ  ಬzಲಾಗಬೇಕು.  ಬದಲಾಗದಿದ್ದರೆ ಅದು ಯಕ್ಷಗಾನದ ಹಾಸ್ಯದಂತೇ  ಇಂದಿನ ಮನೋಸ್ಥಿತಿಗೆ  ಒಗ್ಗದೇ ಹೋಗಬಹುದು. ಸಡಿಲತೆ ವಾಚ್ಯತೆ ವಿಕೃತತೆಯಿಂದ ಸೋಲಲೂ ಬಹುದು. 

         ನಮ್ಮ ಪರಂಪರೆಯ ಕಾವ್ಯಗಳು  ದೇವರು  ಆಳುವದೊರೆ ಮತ್ತು ಅಧಿಕಾರಿವರ್ಗ ಗಳನ್ನು ಅತಿಯಾಗಿ ವಿಜ್ರಂಭಿಸಿವೆ. ವೈಭವೀಕರಿಸಿವೆ. ಸಾಮಾನ್ಯ ಪಾತ್ರ ಅನಿವಾರ್ಯವಾದಾಗ ಆತನನ್ನು ಹಾಸ್ಯಗಾರನನ್ನಾಗಿಸಿವೆ. ಮೂಲ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಕೂಡ  ಅತಿ ಕ್ವಚಿತ್ತಾಗಿ ಹಾಸ್ಯಪಾತ್ರಗಳು ಸೃಷ್ಟಿಗೊಂಡಿವೆ.  ನಮ್ಮೆಲ್ಲ ಶಿಷ್ಟ ಪುರಾಣಗಳು  ಮಾನವಾನುಭವಗಳನ್ನು  ದೈವತ್ವದ ಎತ್ತರಕ್ಕೇರಿಸಿದರೆ,  ಜಾನಪದ ಕಾವ್ಯ ಕಲೆಗಳು ಭೂಮಿಗೆ ಸೆಳೆದು ತರುತ್ತವೆ. ಸಾಮಾನ್ಯಮನುಷ್ಯನ ಜೊತೆಗೆ  ಪುರಾಣದ  ಪಾತ್ರಗಳು ಒಡನಾಡುತ್ತವೆ.  ಅದೇ ಕಾರಣಕ್ಕೇ ಪ್ರತೀ ಊರಿನಲ್ಲಿ ರಾಮ ನಿದ್ದ ಸ್ಥಳ, ಸೀತೆ ಹೂದಂಡೆ  ಮುಡಿದ ಸ್ಥಳ,  ಭೀಮ ಬೇಟೆಯಾಡಿದ, ಹನುಮ ಈಜಾಡಿದ  ಘಟನೆಗಳೆಲ್ಲ  ಜನಪದರ ಸುತ್ತಲೇ ಸೃಷ್ಟಿಯಾಗುತ್ತವೆ.  ಜನಪದರ ಪುರಾಣಗಳು ಅತೀ ದೈವತ್ವವನ್ನು ಧಿಃಕರಿಸಿ  ಪಾತ್ರಗಳನ್ನು ಮಾನವೀಕರಣ ಗೊಳಿಸುತ್ತವೆ. ಯಕ್ಷಗಾನ ಅತ್ತ ಮಾರ್ಗವೂ ಅಲ್ಲ  ಇತ್ತ ಪೂರ್ಣ ದೇಶೀಯವೂ ಅಲ್ಲ. ನಡುವಿನ ಸ್ಥಿತಿಯಲ್ಲಿ ದ್ದರೂ  ದಿನದಿಂದ ದಿನಕ್ಕೆ  ಸುಶಿಕ್ಷಿತರ ಬೌದ್ಧಿಕ ಸ್ಪರ್ಶದಲ್ಲಿ ಮತ್ತೆ ದೈವೀಕರಣಗೊಳ್ಳುತ್ತಿರುವುದನ್ನು  ನಾವಿಂದು ಕಾಣುತ್ತಿದ್ದೇವೆ

  ವಿವಿಧ ವಾದ  ಸಿದ್ಧಾಂತಗಳಲ್ಲಿ ಪುರಾಣ ಪಾತ್ರಗಳನ್ನು  ಎತ್ತಲೋ ಕೊಂಡೊಯ್ಯುವುತ್ತಿರುವುದು ಸಾಮಾನ್ಯ ಘಟನೆಗಳಾಗುತ್ತಿವೆ. ಉಳಿದೆಲ್ಲ ರಸಗಳ  ಪಾತ್ರಗಳೆಲ್ಲ ಬೌದ್ಧಿಕ  ತಾತ್ವಿಕ ಆಯಾಮ ಪಡೆದುಕೊಳ್ಳುತ್ತ ಶ್ರೀಮದ್ಗಾಂಭೀರ್ಯದಲ್ಲಿ  ಮಿಂಚುತ್ತಿದ್ದರೆ ಹಾಸ್ಯರಸ ಮಾತ್ರ ಏಕತಾನತೆಯಲ್ಲಿ ಸೋಲುತ್ತಿದೆ. 

     `` ಉನ್ನತ ಮನಸ್ಸೊಂದು  ಅತ್ಯುನ್ನತ ಮೌಲ್ಯವನ್ನು ಆನಂದಾತ್ಮಕವಾಗಿ ಅಭಿವ್ಯಕ್ತಿಸುವುದೇ ನಿಜವಾದ ಕಲೆ’’ ಎಂದು ಎಲ್ಲೋ ಓದಿದ ನೆನಪು.  ಇದು ಹಾಸ್ಯಪಾತ್ರಕ್ಕೆ ಮತ್ತೂ ಹೆಚ್ಚು  ಅನ್ವಯಿಸುತ್ತದೆ.  ಸಾಮಾನ್ಯವಾಗಿ ಜಗತ್ತಿನಲ್ಲಿ ಸಭ್ಯರ ಸಂಖ್ಯೆ  ಪ್ರತಿಶತ ೮೦ ರಷ್ಟಿರುತ್ತದೆಯಂತೆ.  ಅವರಿಗಾಗಿಯೇ  ಎಲ್ಲ ಲಲಿತಕಲೆಗಳಿರುವುದು.  ಸಭ್ಯರ ನಡುವಣ ಸಾಧಕರಿಗೊಂದು ಶಾಪವಿದೆ. ತಮ್ಮ ಸಾಧನೆಯ ರೋಮಾಂಚನದಲ್ಲಿ  ಅವರು  ಸ್ಮಯ   ಎಂಬ ಅಹಂಕಾರಕ್ಕೆ ಸಿಲುಕಿ  ಮಾನವಪೀಡಕರಾಗಿ ಬಿಡುತ್ತಾರೆ. ಅದೊಂದು ರೀತಿಯ ವiನೋದೌರ್ಬಲ್ಯ.  ಅದನ್ನು ತಹಬಂದಿಗೆ  ತರುವುದು   ಕಟೋಕ್ತಿ ವ್ಯಂಗೋಕ್ತಿ ವಕ್ರೋಕ್ತಿ ಗಳ ಚಿಕಿತ್ಸೆಯಿಂದ ಮಾತ್ರ, ಎಂದು ಈ ಆಧುನಿಕ ಕಾಲ ತಿಳಿದಿದೆ.  ವ್ಯಂಗ್ಯಚಿತ್ರ ಲೇಖನ ಮತ್ತು ಹಾಸ್ಯ ನಾಟಕಗಳನ್ನ ಇಲ್ಲಿ ಉದಹರಿಸಬಹುದಾಗಿದೆ.  ಯಕ್ಷಗಾನದ ವಿದೂಷಕ ಕೂಡ  ರಾಜನನ್ನೂ ಸೇರಿ ಎಲ್ಲ ಅಧಿಕಾರ ಕೇಂದ್ರಗಳ ಅಹಂಕಾರವನ್ನ ಛಿದ್ರಿಸುತ್ತಾನೆ.  ಹಾಸ್ಯದ ಅಸ್ತçವನ್ನ ಸಂದರ್ಭೋಚಿತವಾಗಿ ಬಳಸಿಕೊಳ್ಳುವ ಜಾಣ್ಮೆ ,ಸಮಯಪ್ರಜ್ಞೆ, ಪ್ರತ್ಯುತ್ಪನ್ನ ಮತಿತ್ವ, ಮತ್ತು ರಸಾನುಭೂತಿಯಂಥ ಗುಣಗಳು  ಹಾಸ್ಯಗಾರನಲ್ಲಿರಬೇಕು ಅಷ್ಟೆ. 

      ಕನ್ನಡದ ಸುಪ್ರಸಿದ್ಧ  ವಿಮರ್ಶಕ  ದಿ, ಡಿ.ಆರ್.ನಾಗರಾಜ  ತಮ್ಮ ಒಂದು ಲೇಖನದಲ್ಲಿ  ಜಾನಪದ ಕಥಾಲೋಕದಿಂದ ಸಂಗ್ರಹಿಸಿದ  ಒಂದು ಕತೆಯನ್ನು ಉದಹರಿಸುತ್ತಾರೆ. `` ಇಬ್ಬರು ರಾಜರಲ್ಲಿ ಯುದ್ಧ ಘಟಿಸುತ್ತದೆ.ಒಬ್ಬರಾಜ  ಹೇಡಿ. ಮತ್ತೊಬ್ಬ ಶೂರ. ಒಳ್ಳೆಯ ಆಡಳಿತಗಾರ. ಜನಪ್ರಿಯ.  ಹೇಡಿ ರಾಜನಿಗೆ ಅದನ್ನ ಸಹಿಸಲಾಗದು. ಶೂರರಾಜ  ತನ್ನ ಹಿತಚಿಂತಕರ ವಿದ್ರೋಹದಿಂದ  ಸೋತು  ಸೆರೆಯಾಳಾಗುತ್ತಾನೆ. ಅವನನ್ನು ಏಕಾಂತದ ಸೆರೆಮನೆಯಲ್ಲಿ ಬಂಧಿಸಿದ ರಾಜ  ಅತ್ಯಂತ ಕೀಳಾದ ಮಾತುಗಳಿಂದ ಅವಹೇಳನ  ಮಾಡತೊಡಗುತ್ತಾನೆ.  ಸೆರೆಯಾಳಿನ ಸಂಗಾತಿಯಾಗಿ ಒಂದು ಕೋತಿಯನ್ನು ಇಡಲಾಗುತ್ತದೆ. ಪ್ರತಿದಿನದ ಅವಹೇಳನ  ಮತ್ತು ಒಂಟಿತನ  ಸೆರೆಯಾಳನ್ನು  ಹಿಂಸಿಸಿ ಹುಚ್ಚನನ್ನಾಗಿಸಿ  ಸಾವಿಗೆ ದೂಡುತ್ತದೆ  ಎಂಬುದು ಹೇಡಿ ದೊರೆಯ ಹುನ್ನಾರು.  ಆದರೆ ಸೆರೆಯಲ್ಲಿರುವ ರಾಜ ಮಾತ್ರ ಹುಚ್ಚನಾಗುವುದಿಲ್ಲ. ಆರೋಗ್ಯದಿಂದ  ನಗುತ್ತಲೇ ಶಿಕ್ಷೆಯನ್ನು ಸಹಿಸುತ್ತಲಿದ್ದ.  ಹೇಡಿ ರಾಜ  ಈ ಆರೋಗ್ಯದ ಗುಟ್ಟನ್ನು ತಿಳಿದು ಕೊಳ್ಳಲು  ಮಾರುವೇಷದಲ್ಲಿ ಸೆರೆಮನೆಯ ಸಮೀಪ ಹೋದಾಗ ಒಂದು ದೃಶ್ಯ ನೋಡಿ  ಆಶ್ಚರ್ಯಚಕಿತನಾಗುತ್ತಾನೆ. ಸೆರೆಯಾಳಿನ ಜೊತೆಯಲ್ಲಿರುವ  ಕೋತಿಗೆ  ಮಾತುಕಲಿಸಲಾಗಿದೆ.  ಚಿಂದಿಬಟ್ಟೆಯಿAದ  ರಾಜಪೋಷಾಕು ರಚಿಸಿ ಅದಕ್ಕೆ ತೊಡಿಸಲಾಗಿದೆ. ಕೋತಿ  ಹೇಡಿರಾಜನ ದಿನನಿತ್ಯದ  ಅವಹೇಳನಗಳನ್ನು ವಿಕೃತವಾಗಿ ಅಭಿನಯಿಸುತ್ತ  ಸೆರೆಯಲ್ಲಿರುವ ರಾಜನಿಗೆ ಮನರಂಜನೆ ಯೊದಗಿಸುತ್ತಿರುತ್ತದೆ.  ಹೇಡಿರಾಜ ತಕ್ಷಣ ಕೋತಿಯನ್ನು ಕೊಲ್ಲಿಸುತ್ತಾನೆ.  ತಿಂಗಳು ಕಳೆಯಿತು, ಸೆರೆಯಾಳು ಈಗಲಾದರೂ  ಹುಚ್ಚನಾಗಲೇಬೇಕು. ಎಂದುಕೊಳ್ಳುತ್ತ ಸೆರೆಮನೆಯಲ್ಲಿ ಯ  ಸ್ಥಿತಿಯನ್ನ ಗಮನಿಸಲು ಮಾರುವೇಷದಲ್ಲಿಹೋಗುತ್ತಾನೆ.  ಆಗಲೂ ಆತನಿಗೆ ಆಶ್ಚರ್ಯ  ಆಘಾತಗಳುಂಟಾಗುತ್ತವೆ.  ಸೆರೆಯಲ್ಲಿರುವ ರಾಜ ಸುಖನಿದ್ದೆಯಲ್ಲಿ  ಕಾಣುವ ಕನಸಿನಲ್ಲಿ ಮೈಮರೆತಿದ್ದಾನೆ.  ಖುಷಿಯ ತುರೀಯತೆಯಲ್ಲಿದ್ದಾನೆ.  ಸತ್ತ ಕೋತಿ ಸೆರೆಯಾಳಿನ ಕನಸಿನಲ್ಲಿ ಬಂದು  ಹೇಡಿರಾಜನ ವರ್ತನೆಯನ್ನು  ಅಣಕಿಸುತ್ತಿರುತ್ತದೆ.  ಹೇಡಿರಾಜÀನಿಗೆ `` ಈತನ ಕನಸನ್ನು ಹೇಗೆ ನಾಶಮಾಡಲಿ’’ಎಂಬ ವ್ಯಥೆ ಕಾಡತೊಡಗುತ್ತದೆ.” 

       ಹಾಸ್ಯವೆಂದರೆ ಕೇವಲ ವ್ಯಂಗ್ಯವಲ್ಲ. ಮಂಗನಾಟವಲ್ಲ.  ಮೃತ್ಯುಮುಖದಿಂದ ಜೀವಚೈತನ್ಯದೆಡೆಗೆ  ಎಳೆತರುವ ಸಂಜೀವಿನಿ. ಯಕ್ಷಗಾನದ ಪೌರಾಣಿಕ ವಾತಾವರಣ ಭಕ್ತಿಯ ಅಮಲಿನೆಡೆಗೆ ಪ್ರೇಕ್ಷಕನನ್ನು ಸೆಳೆಯುತ್ತ.  ಶೃಂಗಾರದಲ್ಲಿ ಮೈಮರೆಸುತ್ತ, ರೌದ್ರ ವೀರ ಕರುಣೆ  ಭಯಾನಕ ಪ್ರವಾಹದಲ್ಲಿ ತೇಲಿಸುತ್ತ ಸಂಪೂರ್ಣ ಭಾವೋನ್ಮತ್ತತೆಯಲ್ಲಿ  ಲೀನಗೊಳಿಸುತ್ತಿರುವಾಗ  ವೈಚಾರಿಕತೆ ಮರೆಯಾಗುವ ಅಪಾಯವಿದೆ.  ಅಂಥ ಸಂದರ್ಭದಲ್ಲಿ  ಹಾಸ್ಯಗಾರ  ಸಂಪೂರ್ಣಭಾವಪ್ರಪAಚದಲ್ಲಿ ಲೀನವಾದ ಪ್ರೇಕ್ಷಕನನ್ನು  ಬುದ್ಧಿಯ ಲೋಕಕ್ಕೆ ಕರೆತರುತ್ತಾನೆ. ಕನಸಿನ ಲೋಕದಲ್ಲಿ  ವಾಸ್ತವವನ್ನು ನೆನಪಿಸುತ್ತಾನೆ. ಭಾವ ಬುದ್ಧಿಯ ಸಮನ್ವಯಕಾರನ ಪಾತ್ರವನ್ನು ಆತ ನಿರ್ವಹಿಸುತ್ತಾನೆ.

         ಇಂಥ ಸಂದರ್ಭದಲ್ಲೆಲ್ಲ ಸುಪ್ರಸಿದ್ಧ ತತ್ವಜ್ಞಾನಿ  ಸಾಕ್ರೆಟಿಸ್  ನೆನಪಾಗುತ್ತಾನೆ.   ಗ್ರೀಸ ದೇಶದಲ್ಲಿ ಕ್ರಿಸ್ತಿಶಕ ಪೂರ್ವದಲ್ಲಿಯೇ  ಪ್ರಜಾಪ್ರಭುತ್ವದ ಆರೋಗ್ಯದ ಬಗೆಗೆ ಚಿಂತಿಸಿದ  ಅಪರೂಪದ  ವ್ಯಕ್ತಿ.  ಧರ್ಮ ಮತ್ತು ಪ್ರಭುತ್ವಗಳನ್ನು  ಅವುಗಳ ದೋಷ ದೌರ್ಬಲ್ಯ  ಜನವಿರೋಧೀ ಧೋರಣೆಗಳನ್ನು ಧೈರ್ಯವಾಗಿ ಏಕಾಂಗಿಯಾಗಿ ವಿಮರ್ಶಿಸಿದ  ಟೀಕಿಸಿದ ಅಪ್ರತಿಮ ಹಾಸ್ಯಗಾರ. ಅವನ ವ್ಯಂಗ್ಯ ಟೀಕೆಗಳು ಆಸ್ಥಾನದಲ್ಲಲ್ಲ.  ಸಾಮಾನ್ಯರು ನಡೆದಾಡುವ ಬೀದಿಗಳಲ್ಲಿ. ಜನಸೇರುವ ಸಂತೆಗಳಲ್ಲಿ.  ಅವನ ವೇಷ ಭೂಷಣ ಸಾಮಾನ್ಯರಿಗಿಂತಲೂ  ಕಳಪೆಯಾಗಿತ್ತು.  ವಿಚಾರಮಾತ್ರ ಅಸಾಮಾನ್ಯತೆ  ಪಡೆದಿತ್ತು.  ಅವನ ಕಟು ವಿಮರ್ಶೆ ಧರ್ಮ ಮತ್ತು ಆಳುವ ವ್ಯವಸ್ಥೆಯನ್ನು ಬೆಚ್ಚಿ ಬೀಳಿಸಿತ್ತು.  ಅದೇ ಅವನ ಸಾವಿಗೂ ಕಾರಣವಾಯಿತು ಎಂಬುದು ಖೇದಕರ ಸಂಗತಿ.

         ಧರ್ಮ ಪ್ರಭುತ್ವ ಮತ್ತು ವಿಜ್ಞಾನ  ಮಾನವ ಜಗತ್ತಿನ ಸುಸ್ಥಿರತೆಗಾಗಿ ಸೃಷ್ಟಿಗೊಂಡ ಅತ್ಯಂತ ಪ್ರಮುಖ ಶಕ್ತಿಕೇಂದ್ರಗಳು. ಅದು ಅನಿವಾರ್ಯವೂ ಹೌದು. ಆದರೆ ಈ ಮೂರೂ ಶಕ್ತಿಕೇಂದ್ರಗಳು ತತ್ವಜ್ಞಾನದ ಕಕ್ಷೆಯಲ್ಲಿಯೇ  ಬೆಳೆದು ಬಾಳಬೇಕು. ತಾತ್ವಿಕ ಮಿತಿಯನ್ನು ಧಿಃಕರಿಸಿದರೆೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.  ಕಾವ್ಯ ಮತ್ತು ಲಲಿತಕಲೆಗಳೆಲ್ಲ ತತ್ವಜ್ಞಾನದ ಉತ್ಪನ್ನಗಳೇ ಎಂಬುದು ಗಮನಾರ್ಹ.  ಕಲೆಯ ಉದ್ದೇಶ ರಂಜನೆಯೊAದಿಗೆ  ಸಮುದಾಯದ ಕ್ಷೇಮಚಿಂತನೆಯೂ  ಸೇರಿಕೊಂಡಿರುತ್ತದೆ.  ಅದೊಂದು ಸಾತ್ವಿಕ ಪ್ರತಿಭಟನಾ ಮಾರ್ಗ.  ಸಮೂಹ ಶಿಕ್ಷಣವ್ಯವಸ್ಥೆ. 

          ಜಗತ್ತಿನ ಈ ಮೇಲಣ ಶಕ್ತಿಕೇಂದ್ರಗಳಲ್ಲಿ ಯಾವುದೇ ಒಂದು ಭೃಷ್ಟಗೊಂಡಾಗಲೂ  ಕಾವ್ಯ ಮತ್ತು ಕಲೆಗಳು ಎಚ್ಚರಗೊಂಡಿದ್ದನ್ನ ನಾವು ಕಾಣುತ್ತೇವೆ. ಕಲೆಯ ಉದ್ದೇಶ ಬೋಧನೆಯಲ್ಲ. ನಮ್ಮ ದೋಷ ದೌರ್ಬಲ್ಯಗಳಿಗೆ ಕನ್ನಡಿ ಹಿಡಿಯುವುದು ಅಷ್ಟೆ.  ಅದು ಶುದ್ಧ ಪ್ರಕೃತಿಯಂತೆ.  ರಾತ್ರಿ ಬೆಳಗು ಸಮುದ್ರ ಆಕಾಶ ವೈವಿಧ್ಯಮಯ ವರ್ಣಗಳು, ಜೀವ ವೈವಿಧ್ಯ ಇವೆಲ್ಲವೂ ನಮ್ಮೆಲ್ಲ ಪಂಚೇAದ್ರಿಯಗಳಿಗೆ  ಅನುಭವಗಳನ್ನ ತಂದು ಸುರಿಯುತ್ತವೆ. ಅನುಭವವನ್ನ ಗ್ರಹಿಸುವ ಶಕ್ತಿ ಮಾತ್ರ ನಮ್ಮ ಪ್ರಜ್ಞೆಗಿರಬೇಕು.  ನಮ್ಮ ಒಳಗಣ್ಣಿಗೆ  ಹೊಸ ದೀಪನೀಡಿ  ಹೊರಗನ್ನು ಕಂಡುಕೊಳ್ಳುವ ಶಕ್ತಿ ತನ್ನಿಂತಾನೆ ಜಾಗ್ರತವಾಗುವಂತೇ ಮಾಡುವ ಕೆಲಸ  ನಮ್ಮೆಲ್ಲ ಕಾವ್ಯ ಪುರಾಣ ಮತ್ತು ಲಲಿತಕಲೆಗಳದ್ದು. 

         ಯಕ್ಷಗಾನ ಕಲೆಯ ಬಗೆಗೆ ಯಾವ ಅಧ್ಯಯನವೂ ಇಲ್ಲದ ನನಗೆ  ಈ ಶಕ್ತಿಯುತ ಕಲಾಪ್ರಕಾರ ನನಗೊಂದು ಬೆರಗಾಗಿ   ಕಾಡಿದೆ. ಯಕ್ಷಕುತೂಹಲಿಯನ್ನಾಗಿಸಿದೆ.  ಅದರ ಸರ್ವಾಂಗ ಸೌಂದರ್ಯ  ಅದರ ಅಸಂಖ್ಯಾತ ಸಾಧ್ಯತೆ ಕಲ್ಪನಾತ್ಮಕತೆ ಮತ್ತು ಕಲಾವಿದನಿಗಿರುವ ಮುಕ್ತತೆ ಗಳು ವಿಸ್ಮಯಮೂಡಿಸಿವೆ. ಶಾಸ್ತಿçÃಯತೆಯ ಅತಿಯಾದ ಮಡಿವಂತಿಕೆ, ಜಾನಪದದಲ್ಲಿರುವ ಜಾಳುತನ ಇವೆರಡರಿಂದಲೂ  ನಿರ್ದಿಷ್ಟ  ದೂರಕಾಯ್ದುಕೊಂಡಿರುವ  ಯಕ್ಷಗಾನ  ವಾಸ್ತವದಲ್ಲಿ ಬೇರು ಬಿಡುತ್ತಲೇ  ಕಾಲಕೋಶದಲ್ಲಿ ಕುಳಿತು ಭೂತಕ್ಕೂ ಭವಿಷ್ಯಕ್ಕೂ  ಏಕಕಾಲಕ್ಕೆ ಜಿಗಿಯುವ ಸಾಮರ್ಥ್ಯ ಪಡೆದಿದೆ.   

         ಆದರೂ  ಒಂದಿಷ್ಟು ಅತೃಪ್ತಿ  ನನ್ನೊಳಗಿದೆ.  ಯಕ್ಷಗಾನ ಲಕ್ಷಣಶಾಸ್ತç ಹಾಸ್ಯರಸಕ್ಕೆ ದೇವರ ಎದುರಿನ ಸ್ಥಾನವನ್ನೆ ನೀಡಿ  ಹಾಸ್ಯಕ್ಕೊಂದು ಗಂಭೀರ ಆಯಾಮ ನೀಡಿದೆ.  ಆದರೆ ಪ್ರಯೋಗದಲ್ಲಿ  ಹಾಸ್ಯ ಉಳಿದ ರಸಗಳಷ್ಟು ಹಿರಿದಾಗಿ ಬೆಳೆದಿಲ್ಲ ಎಂಬುದು ನನ್ನ ಅನ್ನಿಸಿಕೆ.  ಶಾಸ್ತç ಅದೆಷ್ಟೇ ಪ್ರಾಮುಖ್ಯವನ್ನು ಹಾಸ್ಯಕ್ಕೆ ನೀಡಿದರೂ  ಹಾಸ್ಯ ಲಘು ರಂಜನೆಯ  ಮಟ್ಟದಿಂದ ಮೇಲೇರಿಲ್ಲ.  ವಿಕೃತ ಹಾಸ್ಯವೇ ವಿಜ್ರಂಭಿಸಿದೆ.  ಹಾಸ್ಯದ ಸಾಧ್ಯತೆ, ಅದರ ನಿಜವಾದ ಶಕ್ತಿ ಮತ್ತುಅದು ಮೂಡಿಸುವ ಗಂಭೀರ ಪರಿಣಾಮಗಳ ಬಗೆಗೆ ಧ್ಯಾನಿಸಿದಾಗ  ನಾವು  ಸಾಧಿಸುವುದು ಬಹಳ ಇದೆ ಎಂದೆನ್ನಿಸುತ್ತದೆ. ಶೃಂಗಾರ ವೀರ  ಕರುಣೆ ಗಳ ಎದುರಲ್ಲಿ  ಹಾಸ್ಯ ಭಿನ್ನವಾಗಿ ನಿಲ್ಲುತ್ತದೆ.  ಭಾವದೆದುರು ಬುದ್ಧಿಯ ಮುಖಾಮುಖಿ  ಕಲೆಯ ಆವರಣದಲ್ಲಿಯೇ  ಸಾಕಾರಗೊಳ್ಳಬೇಕಾದರೆ  ಇನ್ನಷ್ಟು ಅಧ್ಯಯನಶೀಲತೆ, ಪ್ರಯೋಗಶೀಲತೆ  ಅವಶ್ಯವಿದೆ. ಸಂಸ್ಕೃತ ರಂಗಭೂಮಿಯ  ವಿದೂಷಕ  ವಿಧ್ವಾಂಸ ಕೂಡ ಹೌದು. ವಸ್ತು ಯಾವಕಾಲದ್ದೇ ಇರಲಿ  ದೃಶ್ಯ ಅದೆಷ್ಟೇ ಭಾವತೀವ್ರತೆ ಹೊಂದಿರಲಿ ವಿದೂಷಕ ಮಾತ್ರ ವರ್ತಮಾನದಲ್ಲಿಯೇ ಇರುತ್ತಾನೆ. ಮತ್ತು ವಾಸ್ತವವನ್ನ ಪ್ರೇಕ್ಷಕರಿಗೆನೆನಪಿಸುತ್ತ ಎಚ್ಚರಿಸುತ್ತಲೇ ಇರುತ್ತಾನೆ.  ಈ ತಂತ್ರದಿAದ  ಪಾಶ್ಚಾತ್ಯ ರಂಗಭೂಮಿಯೂ ಪ್ರಭಾವಿತಗೊಂಡಿದೆ

        ಯಕ್ಷಗಾನ ಭದ್ರ ಪೌರಾಣಿಕ ಪಾತಳಿಯಲ್ಲಿ  ಸಶಕ್ತವಾಗಿ ಬೆಳೆಯುತ್ತ  ಕಾವ್ಯದ ಮೃದುತ£,À ತತ್ವಜ್ಞಾನದ ಆಳ, ಸಾಮಾಜಿಕ ಜವಾಬ್ದಾರಿ,  ರಾಜಕೀಯ ಮತ್ತು ಸಾಂಸ್ಕೃತಿಕ ಎಚ್ಚರವನ್ನು ಮೈಗೂಡಿಸಿ ಕೊಳ್ಳುತ್ತಿರುವುದು ಸತ್ಯವಾದರೂಹಾಸ್ಯದ ವಿಷಯದಲ್ಲಿ ಹಾಗೆ ಹೇಳುವ ಹಾಗಿಲ್ಲ.  ಅದು ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇರುವಂತಿದೆ.  ಸಭಾಲಕ್ಷಣ  ಹಾಸ್ಯರಸವನ್ನು ಗಂಭೀರವಾಗಿ ಗುರುತಿಸಿದ್ದರೂ  ಹಾಸ್ಯದ ಶಕ್ತಿ ಸಾಧ್ಯತೆಗಳ ಬಗೆಗೆ ಇನ್ನೂ ಗಂಭೀರವಾದ ನೆಲೆಯಲ್ಲಿ ಗಮನಿಸುವ ಪ್ರಯತ್ನ ನಡೆಯಲೇ ಇಲ್ಲವೆಂದೆನ್ನಿಸುತ್ತದೆ.  ಒಂದು ಕಾಲದ ಅಶಿಕ್ಷಿತ ಜನಸಮುದಾಯಕ್ಕೆ ಆಪ್ತವಾಗುವಲ್ಲಿ ಹಾಸ್ಯಪಾತ್ರಗಳು  ಕೀಳು ರಂಜನೆ ವಿಕೃತ ನಡೆನುಡಿ ಗಳಮೂಲಕ ಸಫಲಗೊಂಡಿರಬಹುದು. ಅದೂ ಹಾಸ್ಯದ ಒಂದು ಮುಖವೂ ಆಗಿರಬಹುದು.  ಆದರೆ ಸುಶಿಕ್ಷಿತ   ಬೌದ್ಧಿಕ ಪ್ರೇಕ್ಷಕ ಸಮುದಾಯವನ್ನ  ಹೆಚ್ಚು ಹೆಚ್ಚುಆಕರ್ಷಿಸುತ್ತಿರುವ  ಈ ವರ್ತಮಾನದಲ್ಲಿ  ಹಾಸ್ಯದ ರೀತಿ ಮಾತ್ರ ಹಾಗೆಯೇ ಉಳಿದಿದೆ. 

         ಪ್ರಭಾಕರ ಶಿಶಿಲ ರವರ`` ಯಕ್ಷಗಾನದಲ್ಲಿ ಹಾಸ್ಯ ‘’ ಎಂಬ ಲೇಖನದ ಅಭಿಪ್ರಾಯವನ್ನ  ಇಲ್ಲಿ ಮತ್ತೆ ಉಲ್ಲೇಖಿಸುವುದು ಉಚಿತ  ಎಂದು ತಿಳಿದಿದ್ದೇನೆ. 

        ``ಹಾಸ್ಯಗಾರರ ಮನೋಧರ್ಮ ಮೊದಲು ಬದಲಾಗಬೇಕು. ಕೃತಕ ಹಾಸ್ಯ ಯಾವುದು ಸಹಜ ಹಾಸ್ಯ ಯಾವುದು ಎನ್ನುವುದು ಮೊದಲು ಅವರಿಗೆ ಅರ್ಥವಾಗಬೇಕು. ಮಾಮೂಲಿನಿಂದ ಸಹಜ ಹಾಸ್ಯವನ್ನಾಗಿ ಬದಲಾಯಿಸುವ ಮಾನಸಿಕ ಸಿದ್ಧತೆ ಅವರಿಗಿರಬೇಕು. ಕಲಾವಿದ ಎಲ್ಲ ಬಗೆಯ ಪಾತ್ರ ನಿರ್ವಹಿಸುವ ಚಾಕಚಕ್ಯತೆ ಹೊಂದಿರಬೇಕು.  ಹಾಸ್ಯಗಾರರಿಗೆ ಶಿಕ್ಷಣ ಮತ್ತು ತರಬೇತಿಯ ಅಗತ್ಯವಿದೆ.  ಹಾಸ್ಯರಸಾವಿಷ್ಕಾರಕ್ಕೆ ಪ್ರಸಂಗಗಳಲ್ಲಿ ಹೆಚ್ಚಿನ ಆಸ್ಪದ ಸಿಗಬೇಕು.  ಹಾಸ್ಯರಸ ನಿರ್ಮಾಣ ಕೌಶ¯ವೂ ಹೌದು, ಪ್ರತಿಭೆಯೂ ಹೌದು. ಕುಶಲಿ  ತಾತ್ಕಾಲಿಕ ರಂಜನೆ ನೀಡಿದರೆ, ಪ್ರತಿಭಾನ್ವಿತ  ವೈಚಾರಿಕ ಎತ್ತರಕ್ಕೇರಿಸುತ್ತಾನೆ.  ಹಾಸ್ಯವನ್ನು ಭಾವದ ಮಟ್ಟದಿಂದ ಬುದ್ಧಿಯ ಮಟ್ಟಕ್ಕೆ ಏರಿಸಿ ರಸ ನಿರ್ಮಾಣ ಮಾಡುವುದು ಅಸಾಧಾರಣ ಪ್ರತಿಭೆ.  ಅದು ಹಾಸ್ಯಗಾರನೆದುರಿರುವ ದೊಡ್ಡ  ಸವಾಲು.”

ಯಕ್ಷರಂಗ  ಪತ್ರಿಕೆಗಾಗಿ.

ಗ್ರಂಥ ಋಣ-  ರಸಿಕರತ್ನ [ ಅಭಿನಂದನಾ ಗ್ರಂಥ]   ಅನೇಕ -  ತಾಳಮದ್ದಲೆ ಒಂದು ಶಬ್ದಚಿತ್ರ.                    ಸುಬ್ರಾಯ  ಮತ್ತೀಹಳ್ಳಿ.