Sunday 12 November 2023

`` ಸತ್ವಪೂರ್ಣ ಸಾಧಕ- ಸಿಂಧೊಳ್ಳಿ ಸನದಿ.

 

          ಕವಿತೆ  ಮಾನವ ಸೃಷ್ಟಿಸಿಕೊಂಡ ಒಂದು ವಿಶಿಷ್ಟ ಜಗತ್ತು.  ಅನನ್ಯ ಅನುಭವಗಳ ರಸಲೋಕ. ಮಾನವ ಮನಸ್ಸು ಮತ್ತು ಬದುಕು ಕಂಡ ಉಂಡ ಸೂಕ್ಷö್ಮ ಅನುಭವಗಳೆಲ್ಲ, ವಿಶಿಷ್ಟ ಅರ್ಥವಂತಿಕೆಯಿಂದ ಆಕರ್ಷಕವಾದ ಭಾಷಾಶರೀರದಲ್ಲಿ  ಅವತರಣಗೊಂಡಿರುವ ಅಕ್ಷರ ಮಾಧ್ಯಮ, ಸದಾ ಹೊಸತನದಿಂದ ಕಂಗೊಳಿಸುತ್ತವೆ. ಆವಾವ ಕಾಲದ ಗುಣ ಶೀಲ ಮತ್ತು ಬದುಕಿನ ಗತಿಬಿಂಬಗಳನ್ನು ಮೈಗೂಡಿಸಿಕೊಳ್ಳುವ ಕಾವ್ಯಕಲೆ ಅದೊಂದು ಮನಸ್ಸಿನ ಉನ್ನತ ಪ್ರತಿಭಾ ಪ್ರತಿಕ್ರಿಯೆ.  ಕಾವ್ಯದ ಭಾಷೆ ಕಾವ್ಯದ ಅಭಿವ್ಯಕ್ತಿ  ಗದ್ಯ ಅಥವಾ ಮಾತಿನ ಹಾಗಲ್ಲ. ಇದೂ ತನ್ನ ಹರಿವಿಗೆ ಭಾಷೆಯನ್ನೇ ಅವಲಂಬಿಸಿದರೂ  ಅದು ಕೇವಲ ಒಂದು ಮಾಧ್ಯಮ ಅಷ್ಟೇ. ಕವಿಯ ಅಂತರAಗದಲ್ಲಿ ಚಿಮ್ಮುವ ಭಾವ ಪ್ರವಾಹಕ್ಕೆ ಭಾಷೆ ಸಾತ್ ನೀಡುತ್ತದೆ. ವಿವಿಧ ಪ್ರತಿಮೆ ಪ್ರತೀಕ ಉಪಮೆ ಛಂದಸ್ಸು ಗಳೆಂಬ ಸಾಧನ ಬಳಸಿ ಹೊಸದೊಂದು ಆರ್ಥಪರಂಪರೆಯನ್ನು ಸೃಷ್ಟಿಸಿ ಸಹೃದಯನ ಭಾವಕೋಶವನ್ನು ಸೇರಿಕೊಳ್ಳುತ್ತದೆ. ಒಂದೊಂದು ಮನಸ್ಸಿನಲ್ಲಿಯೂ ವೈವಿಧ್ಯಮಯ ಭಾವನೆಯ ಅಲೆಗಳನ್ನು ಸೃಷ್ಟಿಸುತ್ತದೆ.  ಕಾವ್ಯ ಅಂದರೆ ಭಾವ ಭಾವಗಳ ನಡುವೆ  ಹೃದಯ ಹೃದಯಗಳ ನಡುವೆ ಐಕ್ಯತೆಯನ್ನು ನಿರ್ಮಿಸುವ ಒಂದು ಅದ್ಭುತ ಸಾಧನ. ರಂಜಿಸುವುದರೊಂದಿಗೆ ಬೌದ್ಧಿಕ ಜಾಗ್ರತಿ, ವೈಚಾರಿಕತೆಯ ಮೂಲಕ ತಾತ್ವಿಕಪ್ರೇರಣೆ ಕಾವ್ಯದಿಂದಾಗುವ ಪರಮ ಪ್ರಯೋಜನ. ಕವಿಯಾಗುವುದು ಅಂದರೆ ಮಾನವತೆಯ ಹೆಬ್ಬಾಗಿಲನ್ನು ಪ್ರವೇಶಿಸುವುದು ಎಂದೇ ಅರ್ಥ.

      ಇಂಥದೊಂದು ಸುವರ್ಣ ಹೆಬ್ಬಾಗಿಲು  ನಮ್ಮ ಪ್ರೀತಿಯ ಕವಿ  ಸನದಿ.

ಎಲ್ಲಿಹುಟ್ಟಿತೊಎಲ್ಲಿ ಮುಟ್ಟಿತೋ

ಈಅನಂತದಾರಿ!

ಬಂದರು   ಅಡೆತಡೆ,   ಇದಕೇತರಭಿಡೆ

ನಡೆವುದೊಂದೆ ಗುರಿ!

ಲೆಕ್ಕವಿಲ್ಲದೀಭೇದಗಳಳಿಯುವ

ಬದುಕಿಳಿಯಲಿಧರೆಗೆ!

ಮನುಜಕುಲದಭಾವೈಕ್ಯವೆಉತ್ತರ

ದಾರಿಯ ಮೊರೆಗೆ!

          ದಶಕಗಳ  ಹಿಂದೆಯೇ  ಆಕಾಶವಾಣಿಯಲ್ಲಿ  ಕವಿಯ ಜೀವನ ದೃಷ್ಟಿ  ಧೋರಣೆ `` ದಾರಿಯ ಮೊರೆ’’ಎಂಬ ಕವನದಲ್ಲಿ ಮೊಳಗಿತ್ತು. ಸಮಗ್ರ ಬದುಕನ್ನೇ  ಒಂದು ಮಾನವ ಸಂವೇದನಾಶೀಲ ದಾರಿಯನ್ನಾಗಿ ಕಾಣುವ ಕವಿ ಅದನ್ನೊಂದು ಅಂತ್ಯವಿಲ್ಲದ ಪ್ರಯಾಣವನ್ನಾಗಿ ಗುರುತಿಸುತ್ತಾರೆ. ಕವಿ ಅಂತರಂ ಜಗತ್ತಿನ ಕತ್ತಲೆಗೆ ಬೆಳಕು ಬೀರಿದಂತೇ ಬಾಹ್ಯಪ್ರಪಂಚಕ್ಕೂ ದಾಂಗುಡಿಯಿಡುತ್ತಾರೆ. ಸಾಮಾಜಿಕ ಪ್ರಜ್ಞೆಗೆ ಆಧುನಿಕತೆಯೆಂಬ ಮಾಯೆಯ ಗ್ರಹಣ ಆಕ್ರಮಿಸಿ ಮಾನವೀಯ ಮೌಲ್ಯಗಳಿಗೆ ಘಾಸಿಯಾದಾಗಲೆಲ್ಲ ಕವಿ ಜಾಗ್ರತರಾಗುತ್ತಾರೆ. ಕವಿ ತಮ್ಮ ಸೃಜನಶೀಲ ಬದುಕಿನ ತುಂಬ ಕನಸು ಕಂಡಿದ್ದು ಒಂದು ಸೌಹಾರ್ದಯುತ ಶಾಂತ ಸುಂದರ ಸಮಾಜವನ್ನು.  ಸ್ನೇಹ ಸೌಜನ್ಯ ಸಂತೃಪ್ತಿ ಮತ್ತು ಸಮಾನತೆಯನ್ನು.  ಅಲ್ಲಿ ಮೇಲಿಲ್ಲ ಕೀಳಿಲ್ಲ. ಶೋಷಣೆಯಿಲ್ಲ.  ಆದರೆ ವರ್ತಮಾನ ಹಾಗಿಲ್ಲ.  ಹೆಜ್ಜೆ ಹೆಜ್ಜೆಗೆ ಎದುರಾಗುವುದು ಕ್ರೂರ ವಾಸ್ತವ.

ಕವಿ ತಮ್ಮ `` ಸತ್ವ’’ ಎಂಬ ಮಹತ್ವಪೂರ್ಣ ಕವಿತೆಯಲ್ಲಿ  ತನ್ನ ಸ್ವಂತಿಕೆಯನ್ನೇ ಮರೆತು ಹತಾಶೆಯಿಂದ

ಮೇಲ್ಮೆಯಲ್ಲಿ ಕಾಣುವ ಕೃತಕ ಆಮಿಷದ  ಹಿಂದೆ ಮೂಕ ಪ್ರಾಣಿಯಂತೇ ಹಿಂಬಾಲಿಸುವುದನ್ನು ಕಂಡು ಕವಿ ಕನಲುತ್ತಾರೆ.

           ಮನುಜನೆದೆಗಾರಿಕೆಯ ಗಣಿಯಾಳಕಿಳಿಯದೆಯೇ /

           ಯಾರ ಕೈಗೆಟಕುವುದು ಯಾವ ಅದಿರು..!

           ತೇಗು ಬೆಳೆಯುವ ಛಲವ ಬೆಳೆಸಿಕೊಳ್ಳದ ಜನಕೆ /

           ಬೆಳೆದರನಿತೇ ಹಿಗ್ಗು  ಹಿತ್ತಿಲಲಿ ಬಿದಿರು.../ 

     ತಮ್ಮ ತಮ್ಮ  ಸಂಸಾರ ಉದ್ಯೋಗ ವೈಭೋಗ   ಕೊಳವೆಭಾವಿಯಲ್ಲಿ ಸಿಲುಕಿ  ತಾತ್ವಿಕತೆ ವೈಚಾರಿಕತೆ ಯಿಂದ ದೂರವಾಗಿ  ತತ್ವಭೃಷ್ಟತೆಯ ಉತ್ತುಂಗಕ್ಕೆ ಸೇರಿರುವ ಜನಮಾನಸದ ನಡಾವಳಿಯನ್ನ  ನೇರವಾಗಿ ಖಂಡಿಸುವ ಕವಿಯ ನುಡಿಯಲ್ಲಿ ಅದೆಂಥ ಋಷಿಸದೃಷ  ಉದ್ಗಾರ.? ತೇಗವೃಕ್ಷ ವನ್ನೇ ಬೆಳೆಯ ಬಹುದಾಗಿದ್ದ ಸಮರ್ಥ ಸಮುದಾಯ  ಹಿತ್ತಿಲಲ್ಲಿ ಬಿದಿರು ಬೆಳೆದು ಬೀಗುತ್ತಿದೆ.  ಬಿದಿರು  ಅದೊಂದು ಸುಂದರ ರೂಪಕ.  ಹುಟ್ಟಿಗೆ ತೊಟ್ಟಿಲಾದರೆ  ಸಾವಿಗೆ ಚಟ್ಟವಾಗುತ್ತದೆ.  ತೇಗ ಮಾನವೋಪಯೋಗಿಯಾಗಿ ಶತಮಾನಕಾಲ ಬಾಳಿದರೆ ಬಿದಿರು  ಕ್ಷಣಿಕ ಕಾಲ ಬದುಕಿ ಸಾಯುತ್ತದೆ.  ಹುಟ್ಟು ಮತ್ತು ಸಾವಿನ ನೈಸರ್ಗಿಕ ಕ್ರಿಯೆಯಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುವ ಪೊಳ್ಳು ಕೊಳವೆಯ ಬದುಕಿಗಿಂತ  ಗಟ್ಟಿ ಒಡಲ ತೇಗದ ಬದುಕಿನ ಮಹತ್ವವನ್ನು  ಎರಡು ವೃಕ್ಷಗಳ ಪ್ರತಿಮೆಗಳ ಮೂಲಕ  ಮನದಲ್ಲಿ ಮಾನವತೆಯ, ಕ್ರಿಯಾಶೀಲತೆಯ ಬೀಜ ಬಿತ್ತುತ್ತಾರೆ.

     ಆಲದಡಿಯಲ್ಲಿ ಮೊಳೆತು ಮುರುಟಿ ಹೋಗುವ ಹುಲ್ಲು

     ಯಾವ ಹಸುವಿನ ಹೊಟ್ಟೆ  ತುಂಬಿಸುವುದೋ..!

     ಸೂರ್ಯನೆದೆಯಿಂದೊಗೆವ  ಸಾರ ಸತ್ವವ ಮರೆವ

     ಇರುಳಗಣ್ಣರ ನೆಂತು  ನಂಬಿಸುವುದೋ......!  [ಸತ್ವ ಕವನ]

ಚರಣದಲ್ಲಿಯೂ  ಸಹ ಜಡಸಮುದಾಯದ ಬದುಕಿನ ಬಗೆಗಿನ  ಮಿಥ್ಯಾ ಕಲ್ಪನೆಯನ್ನು  ಗುರುತಿಸುತ್ತ

ಮೃದು ಶಬ್ದಗಳಲ್ಲಿಯೇ ಛೇಡಿಸುತ್ತಾರೆ.  ಒಂದೆಡೆ ಬ್ರಹದಾಕಾರದ ಆಲದ ಮರವಿದೆ.  ಮತ್ತೊಂದೆಡೆ ಪಾಪದ  ಹಸಿವಿನ ಗುಂಪಿದೆ.  ಆಲದ ತಳದಲ್ಲಿಯೇ  ಹೇಗಾದರೂ ಮೊಳೆತು ಬದುಕಿಕೊಳ್ಳುವ ರಣ ಹೇಡಿ ಹುಲ್ಲು ಇದೆ.  ಕವಿಯ ಮೊನಚು ದೃಷ್ಟಿ  ಆಲದಮೇಲಾಗಲೀ  ಹಸಿವಿನ ಬಳಗದ ಮೇಲಾಗಲೀ ಹರಿದಿಲ್ಲ.

ವಿದ್ಯೆಯ ಫಲವತ್ತತೆ   ಆದಾಯದ ಸಮೃದ್ಧಿ ಎರಡೂ ದೊರಕಿರುವ  ಮಧ್ಯಮವರ್ಗದ ಅಸಂಖ್ಯಾತ ಜನವರ್ಗದ ಜಡತೆಯನ್ನು ಗುರಿಯಾಗಿಸಿಕೊಂಡಿದೆ.  ಸೂರ್ಯನೆದೆಯಿಂದ ಸತ್ಯದ ಬೆಳಕು ಪ್ರವಾಹ ರೂಪದಲ್ಲಿ ಹರಿಯುತ್ತಿದ್ದರೂ  ಇರುಳು ಗಣ್ಣಿನ ರೋಗದಿಂದ ಬಳಲುತ್ತಿರುವ  ಬುದ್ಧಿವಂತರ ಜಾಣಕಿವುಡನ್ನು ವಿಡಂಬಿಸುತ್ತಾರೆ.  ಆಲ ಶೋಷಣೆಯ ಪ್ರತಿಕವಾದರೆ ಹುಲ್ಲು ಅದನ್ನೇ ಕುರುಡಾಗಿ ಅವಲಂಬಿಸುವ ಜನವರ್ಗವನ್ನು ಧ್ವನಿಸುತ್ತಿದೆ.

     ಯಾರ ಹೆಸರಿನ ಮೇಲೆ ಯಾರು ಹಾಕಲಿಕುಂಟು

     ಹೊಗಳಿಕೆಯ ಹಾರಗಳ ಹೆಣೆದು ಹೆಣೆದು...?

     ಯಾರ ಉಸುರಿನ ಮೇಲೆ ಯಾರು ಬದುಕಲಿಕುಂಟು

     ತಮ್ಮ ಅಂತಸ್ಸತ್ವವನ್ನೇ  ಮರೆದು......?

 

ತತ್ವಶೂನ್ಯ ಮನಸ್ಥಿತಿಯಲ್ಲೂ ಸಾಧಕನೆಂದು ನಾಟಕವಾಡುತ್ತ  ಗೋಸುಂಬೆತನದಲ್ಲಿ ಕೃತಕ ಬಣ್ಣದಲ್ಲಿ ಮಿಂಚುತ್ತ, ವಿವಿಧ ಸಮ್ಮಾನ ಪ್ರಶಸ್ತಿಗಳಿಗಾಗಿ ಓಲೈಸುತ್ತ ಅಲೆಯುವ ವ್ಯಕ್ತಿತ್ವಗಳು ಇಲ್ಲಿ ನಗ್ನಗೊಂಡಿವೆ.  ಭೂತ ಮತ್ತು ಭವಿಷ್ಯಗಳೆರಡರ ಬಗೆಗೂ ಕುರುಡಾಗಿ ಕೇವಲ ವರ್ತಮಾನದ ಕ್ಷಣಿಕ ಲಾಲಸೆ  ಇಡೀ ಸಮುದಾಯವನ್ನು ಕಾಡುತ್ತಿರುವ ಸಂದರ್ಭಕ್ಕೆ ಕವಿ ರೋಚಕವಾಗಿ ಸ್ಪಂದಿಸಿದ್ದಾರೆ.  ``ಬಾಹ್ಯದ ಜೊತೆಗೆ ನಾವು ಗೈಯುವ ಸಂಘರ್ಷ ಮತ್ತಷ್ಟು ವಿಷಮತೆಯನ್ನು ಸೃಷ್ಟಿಸಿದರೆ  ನಮ್ಮ ಅಂತರಂಗದ ಜೊತೆಗೆ ಕಾದಾಟಕ್ಕಿಳಿದರೆ ಕಾವ್ಯ ಜನಿಸುತ್ತದೆ’’ಎಂಬ ಯೇಟ್ಸ ಕವಿಯ ಸಾಲುಗಳು ಇಂಥ ಸಂದರ್ಭದಲ್ಲಿ ಕಾಡತೊಡಗುತ್ತದೆ.

ವಸ್ತು ಸಾಮಾಜಿಕವಿರಲಿ  ಆಂತರಂಗಿಕವಾಗಿರಲಿ ಸನದಿ ಯವರ ಗುರಿ ಸತ್ಯಶೋಧನೆ ಮತ್ತು ಮಾನವ ಬದುಕಿನ ಸುಸ್ಥಿರತೆಯ ಬಗೆಗಿನ ಕಾಳಜಿಯಾಗಿದೆ. ಕವಿ ತಮ್ಮ ಅಂತರಂಗದ ಜೊತೆಗೆ ಸಲ್ಲಾಪಿಸುತ್ತಾರೆ.  ಅವರ ಕಾವ್ಯದ ಆಳದಲ್ಲಿ ಸಾಮಾಜಿಕ ಸಾಂಸ್ಕೃತಿಕ ವೈಷಮ್ಯಗಳ ಬಗೆಗೆ ಅತೃಪ್ತಿ ಅಸಹನೆಗಳಿದ್ದರೂ ಅಭಿವ್ಯಕ್ತಿ ಮಾತ್ರ  ಕಾಂತಾ ಸಮ್ಮಿತದ ಮಾರ್ಗ. ಪ್ರತಿಭಟನೆ ಆಕ್ರೋಷ ವೆಲ್ಲ ಹುದುಗಿದ್ದರೂ ಯಾವ ಗದ್ದಲ ಯಾವ ಗಡಿಬಿಡಿಯಿಲ್ಲದೇ ನಿರ್ಲಿಪ್ತ ದಾರಿಯಲ್ಲಿಯೇ ಸಹೃದಯರನ್ನು ಕಾಡುತ್ತಾರೆ. ಕಲಕುತ್ತಾರೆ.  ಇದೇ ಸನದಿಯವರ ನಿಜವಾದ ಶಕ್ತಿ. ತಮ್ಮ ಕವನದ ಕೊನೆಯಲ್ಲಿ

     ಬೆಳೆವುದಿದ್ದರೆ ಬೆಳೆದು ಬೆಳೆದವರ ಜೊತೆಗೂಡಿ

     ನೋಡಬಾರದೇ ಹಾಕಿ ಬೀಸುಗಾಲು...?

     ಊರಗಸೆಯೊಳಗಿರುವ ಕೆರೆಯ ಕೆಸರಿಗೆ ಇಳಿದು

     ನೆನೆದುಕೊಂಡರೆ ಕಾಣಲುಂಟೇ ಕಡಲು...?

ಹಾಗೆಂದು ಕವಿ  ಸಮುದಾಯದ ಮೇಲಣ ಭರವಸೆಯನ್ನು ಕಳೆದುಕೊಂಡಿಲ್ಲ. ಈಗಲೂ ಕಾಲಮಿಂಚಿಲ್ಲ. ವಿಸ್ಮೃತಿಯ ಪೊರೆಯಿಂದ ಹೊರಬಂದು ಸಂಕುಚಿತ ಸ್ಥಿತಿಯಿಂದ ಮೇಲೆದ್ದು ಒಮ್ಮೆ ಜಗತ್ತನ್ನು ಸೂಕ್ಷö್ಮವಾಗಿ ದೃಷ್ಟಿಸಿದರೆ ಹೊಸದಾದ ಸುಂದರ ಮನುಷ್ಯಲೋಕ ಕಾಣಬಹುದು ಎಂಬ ಅತ್ಯಂತ ಆಶಾವಾದ ಕವಿಯ ಹೃದಯದಲ್ಲಿದೆ. ಜಾತಿ ಮತ ಧರ್ಮ ಪ್ರದೇಶ ಬಣ್ಣ  ಎಂದೆಲ್ಲ ಮನುಷ್ಯನೇ ಸೃಷ್ಟಿಸಿಕೊಂಡ ಬೇಲಿಗಳು ಮನುಷ್ಯತ್ವವನ್ನು ಬಂಧಿಸಿಬಿಟ್ಟಿವೆ. ಮಿಥ್ಯೆಯ ಗೋಜಲಿನ ಒಳಗೆ ನಿಜವನ್ನು ಕಂಡುಕೊಳ್ಳುವ ಮತ್ತು ಕಾಣಿಸುವ  ಅಪರೂಪದ ಶಕ್ತಿ ಕವಿ ಸನದಿಯವರಲ್ಲಿದೆ.   ಇದೇ ಶಕ್ತಿ ಅವರನ್ನು ದೇಶ ಕಾಲ ಧರ್ಮ ಗಳನ್ನೂ ಮೀರಿದ ಅಪ್ಪಟ ಮಾನವೀಯ ಕವಿಯನ್ನಾಗಿಸಿದೆ.

                `` ಹಿಮದೊಳಗೆ ಅಡಗಿರುವ ಬಿಸಿನೀರ ಚಿಲುಮೆ

                  ಪ್ರೀತಿಯೇ ಸೃಷ್ಟಿಸಿದ ಅಪ್ರತಿಮ ಪ್ರತಿಮೆ.

                  ಸನದಿಯಲ್ಲ ಇವರು ಸುನಾದಿ  ಸನಾದಿ

                  ಸತ್ಯವೇ ಉಸಿರಾದ ಸೂರ್ಯಪಾನದ ಪ್ರವಾದಿ.’’

=======================================================

      --೨೦೧೫                                   ಸುಬ್ರಾಯ  ಮತ್ತೀಹಳ್ಳಿ. [ ದೂರವಾಣಿ- ೦೮೩೮೯-೨೮೧೫೦೮]

 

 

 

No comments:

Post a Comment