Friday 13 May 2011

ಕೃತಿಯೊಂದಿಗೆ ಶೃತಿಯಾಗಿ

ಬರಹದ ಹುಚ್ಚು ಹೇಳುವ ಕೆಚ್ಚು ಎರಡಿದ್ದರೆ ಬದುಕಿನ ಎಲ್ಲ ಘಟನೆಗಳು ಕಾದಂಬರಿಯೇ ಆದೀತು. ಬರಹಕ್ಕೆ ಮಾತ್ರ ಭಾಷೆ ಬೇಕೇಬೇಕು, ಭಾಷೆ ಕರಗತವಾದಷ್ಟೂ ಬರಹ ಬನಿಗೊಳ್ಳುತ್ತದೆ. ಬರಹ ಬನಿಗೊಳ್ಳಲು ಭಾಷೆಯ ಕಡಗೋಲಿನಲ್ಲಿ ಭಾವದ ಕಡೆತ ಅವಶ್ಯ.  ಬರಹವೆಲ್ಲವೂ ಅನುಭವದ ಅಭಿವ್ಯಕ್ತಿಯಲ್ಲ, ಅನುಭವ ಸರಳತೆ ಸೂಕ್ಷ್ಮತೆ ಮತ್ತು ಸಮಗ್ರತೆ ಯುಳ್ಳ ವ್ಯಕ್ತಿತ್ವವನ್ನು ಬಯಸುತ್ತದೆ. ಅನುಭವದ ಮೇಲ್ಪದರದ ಸ್ಪರ್ಶಕ್ಕಿಂತ ಅದರ ಆಳದ ಅನ್ವೇಷಣೆ ಬರಹಕ್ಕೆ ಹೊಸತನ ನೀಡಬಲ್ಲದು. ತೀರಾ ಸರಳ ಅನುಭವವೂಪ್ರತಿಭೆಯ ಸ್ಪರ್ಶದಿಂದ ಹೊಸತನದಿಂದ ಮಿಂಚಬಲ್ಲದು. ಕತೆಯಾಗಲೀ ಳದನೋಟ ಕಲಾತ್ಮಕ ಸ್ಪರ್ಶ ದಿಂದ ಆಕರ್ಷಣೆ ಪಡೆಯುತ್ತದೆಬರಹಗಾರನಿಗೆಬರಹವೇ ಅಭಿವ್ಯಕ್ತಿ ಮಾಧ್ಯಮ. ಅದೇ ಅಸ್ತ್ರ , ಎಷ್ಟೆಷ್ಟು ಬರೆದನೊ ಅಷ್ಟಷ್ಟು ಪರಿಣತಿ ಒದಗುತ್ತ ಹೋಗುತ್ತದೆ.  ಅಕ್ಷರದ ಗರಡೀಮನೆಯಲ್ಲಿ ಸಾಮುಮಾಡಿದಷ್ಟೂಅಭಿವ್ಯಕ್ತಿಯಲ್ಲಿ ಸಿದ್ಧಿ ದೊರಕುತ್ತಾ ಹೋಗುತ್ತದೆ.  ಇಂಥ ಒಬ್ಬ ಅಕ್ಷರ ಪೈಲ್ವಾನ ಇಂದು ನಮ್ಮೆದುರು ನಿಂತಿದ್ದಾರೆ. ಕಿರಿ ಕಿರಿ ಕಥೆಯ ಕಥನ ಕಿರಿಕಿರಿ ಕೃತಿಯನ್ನ ಮುದ್ದಾಗಿ ಪ್ರಕಟಿಸಿ ನಮ್ಮ ಕೈಗಿಟ್ಟಿದ್ದಾರೆ
 ದತ್ತಗುರು ಕಂಠಿ ಇತ್ತೀಚೆಗೆ ಬೆಳಕಿಗೆ ಬಂದ ಪ್ರತಿಭಾವಂತಯುವ ಲೇಖಕಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಪತ್ರಿಕೆಯಿಂದಾರಂಭಿಸಿ ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿಸಣ್ಣಕಥೆ ಲೇಖನ ನುಡಿಚಿತ್ರ ಗಳನ್ನು ಪ್ರಕಟಿಸಿ ಗಮನ ಸೆಳೆದ ಉತ್ಸಾಹಿ ಯುವಕ.   ವೃತ್ತಿಯಲ್ಲಿ ಕೃಷಿಕರಾಗಿ ಕೃಷಿರಂಗದ ಹತ್ತು ಹಲವು ನೋವು ತಲ್ಲಣಗಳನ್ನುಅನುಭವಿಸುತ್ತ, ಅಕ್ಷರ ಕೃಷಿಯಲ್ಲಿಯೂ ಹೊಸ ಹೂ ಅರಳಿಸುವ ಇವರ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಸಂಗತಿ.
 ಹಸಿರು ಗುಡ್ಡಬೆಟ್ಟ ತೋಟಪಟ್ಟಿ ಹಳ್ಳಕೊಳ್ಳ ಗಳಲ್ಲಿ ಏಕಾಂತ ಸಾಧಿಸುತ್ತ ದೈಹಿಕ ಶ್ರಮದ ಜೊತೆಗೇ ಸಾಹಿತ್ಯದ ಧ್ಯಾನವನ್ನೂ ಸಾಧಿಸಿದ ಅಪರೂಪದ ವ್ಯಕ್ತಿ.ಕಂಠಿಯವರ ಅಭಿವ್ಯಕ್ತಿ ಗ್ರಾಮಮುಖಿಯಾದದ್ದು. ಇಂದಿನ ಆಧುನಿಕ ಸಂದರ್ಭದಲ್ಲಿಇಡೀ ಜಗತ್ತೇ ಹಳ್ಳಿಯಾಗಿದೆ ನಿಜ, ಆದರೆ ನಮ್ಮ ಹಳ್ಳಿಗಳೂ ಒಂದು ಜಗತ್ತು ಎಂಬುದನ್ನ ದೇಶ ಮರೆತಿದೆ. ಹಳ್ಳಿಗಳು ತಮ್ಮ ಅನನ್ಯತೆಯನ್ನು ತಾವೇ ಉಳಿಸಿಕೊಳ್ಳಬೇಕಾಗಿದೆ.ತಮ್ಮ ಪ್ರಗತಿ ತಮ್ಮಿಂದಲೇ ಎಂಬುದನ್ನ ಮನಗಾಣಬೇಕಿದೆ.
ದತ್ತಗುರು ಕಂಠಿ ಯವರ ಆಳದಲ್ಲಿ ಕೃಷಿಕನೋರ್ವನ ತುಡಿತವಿದೆ. ಏನಾದರೂ ಮಾಡಲೇಬೇಕೆಂಬ ತೀವ್ರ ಮಿಡಿತವಿದೆ. ಗ್ರಾಮ ಸಮುದಾಯದೊಂದಿಗೆ ಬೆರೆತು ಕೃಷಿ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ, ಸಾಹಿತ್ಯದ ಸಂವೇದನೆಯನ್ನು ಜೀವಂತ ಉಳಿಸಿಕೊಳ್ಳುವ ಅವರ ಹೋರಾಟ ಮೆಚ್ಚುವಂಥದ್ದು,    ನಗರದಿಂದ ದೂರವಿರುವ  ನಮ್ಮ ದೇಶದ ಗ್ರಾಮಗಳು ಇನ್ನೂ ಮುಗ್ಧತೆಯನ್ನು ಉಳಿಸಿಕೊಂಡಿವೆ. ಅವುಗಳ ಕನ್ಯತ್ವ ಇನ್ನೂ ಭಂಗವಾಗಿಲ್ಲ. ಅಲ್ಲಿ ಸೃಷ್ಟಿಯಾಗುವ ಹತ್ತುಹಲವು ಸನ್ನಿವೇಶಗಳು ನಗು ತರಿಸುತ್ತವೆ. ದುಃಖ ದುಗುಡ ದುಮ್ಮಾನಕಲಹ ಸರಸ ಗಳ ನಡುವೆ ಮುಗ್ಧ ಪ್ರೀತಿಯುಕ್ಕಿಸುತ್ತದೆ. ಗ್ರಾಮಗಳು ದಟ್ಟ ಬಡತನದಲ್ಲಿ
ನಾಗರೀಕತೆಯ ಕಣ್ಣಿಗೆ ಪೇಲವವಾಗಿ ತೋರಬಹುದು. ಅವುಗಳ ಹಬ್ಬ ಹರಿದಿನ ತೇರು ಜಾತ್ರೆ ಮದುವೆ ಮುಂಜಿ ಯಂಥ ಸಾಂಸ್ಕೃತಿಕ ಪ್ರಕ್ರಿಯೆಗಳು ಈಗಲೂ ಯಾಂತ್ರಿಕ ಗೊಂಡಿಲ್ಲ.ಅಲ್ಲಿ ಉಕ್ಕುವ ಜೀವನೋತ್ಸಾಹ, ಮನುಷ್ಯ ಸಂಬಂಧಗಳಲ್ಲಿಯ ಘಾಡತೆ, ಯನ್ನ ನೋಡಿಯೇ ಅನುಭವಿಸ ಬೇಕು. ಇದೇ ಕಾರಣಕ್ಕೆ ಈಗಲೂ ನಮ್ಮ ಗ್ರಾಮಗಳು ಅನುಭವಕ್ಕೆ ಅಭಿವ್ಯಕ್ತಿಗೆ ಅದ್ಭುತಗಣಿಗಳೇ ಆಗಿವೆ. ಇಲ್ಲಿ ಕಂಡುಬರುವ ನಿಷ್ಕಲ್ಮಷ ಬದುಕು ಸದಾ ನಗರದ ಯಾಂತ್ರಿಕತೆಗೆಸವಾಲೊಡ್ಡುತ್ತಲೇ ಇರುತ್ತದೆ.
ದತ್ತಗುರು ಕಂಠಿ ಒಂದು ಪುಟ್ಟ ಗ್ರಾಮದ ಪುಟ್ಟ ಕೃಷಿಕರಾಗಿ ತಮ್ಮ ಸುತ್ತಲಿನ ಹಳ್ಳಿಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಲ್ಲಿಯ ಅನುಭವಗಳಿಗೆ ತಮ್ಮನ್ನುಒಡ್ಡಿಕೊಂಡಿದ್ದಾರೆ. ಹಳ್ಳಿಯ ಹಲವು ರಸನಿಮಿಷಗಳನ್ನು ಸರೆಹಿಡಿದು ದಾಖಲಿಸಿದ್ದಾರೆ.ದತ್ತಣ್ಣ, ಸುಬ್ಬಣ್ಣ, ಬುಲೆಟ್ ಬಾಬಣ, ನಾಣಿ ಭಟ್ರು, ಲಬಲಬ ಲಂಬೋದರ, ಗಿರಿಗಿಟ್ಟಿ ಗಿರಿಧರ, ಪಿಕಲಾಟಿ, ಲಡ್ಡೂತಿಮ್ಮಯ್ಯ, ಕಲ್ಯಾಣಿ,ಕಡ್ಡಿಕೆರಿಯ,ಇಗ್ಗಣ್ಣ ಮುಂತಾದ ಪಾತ್ರಗಳು ಇಲ್ಲಿ ಜೀವಂತವಾಗಿ ಮೂಡಿಬಂದಿವೆ.
 ಆ ಪಾತ್ರಗಳು ಸೃಷ್ಟಿಸುವ ವೈವಿಧ್ಯಮಯ ಸನ್ನಿವೇಷಗಳು ನಗೆಯುಕ್ಕಿಸುತ್ತವೆ.ಇಲ್ಲಿಆಯ್ದುಕೊಂಡ ಘಟನೆಗಳು ಪಾತ್ರಗಳು ಅದೆಷ್ಟು ಕುತೂಹಲ ನಿರ್ಮಿಸುತ್ತದೆಯೆಂದರೆಕೇವಲ ಅವುಗಳ ವರದಿ ನೀಡಿದರೆ ಸಾಕು,  ಆ ಪಾತ್ರಗಳು ನಗುವನ್ನು ಬೀರುತ್ತಲೇಗಂಭೀರ ಪರಿಣಾಮವನ್ನೂ ಬೀರಿಬಿಡುತ್ತವೆ.  ಇಲ್ಲಿ ; ಕಿತಾಪತಿ ಅಳಿಯ : ಘಟನೆ ಗಮನಿಸಬಹುದು. ಇಳಿವಯಸ್ಸಿನ ಭಾಗಮ್ಮಳಿಗೆ ಸದಾ ಮೈಕೈ ನೋವು ಬೆನ್ನುನೋವು ಮಂಡಿನೋವು. ಅದಕ್ಕೆ ಔಷಧಕ್ಕಿಂತಅವಳಿಗೆ ದೇವರು ದಿಂಡರು ಹರಕೆ ತೀರ್ಥ ಪ್ರಸಾದದಲ್ಲಿಯೇ ನಂಬಿಕೆ. ಅವಳಿಗೆ ಅದ್ಯಾರೋಪಕ್ಕದ ಊರಿನ ಗಂಜೀಮಠ ದ ಸ್ವಾಮಿಗಳು ನೀಡುವ ತೀರ್ಥ ಸರ್ವರೋಗಗಳಿಗೆ ರಾಮಬಾಣ ಎಂಬ ಸುದ್ದಿ ತಲುಪಿಸುತ್ತಾರೆ. ಭಾಗಜ್ಜಿ ತನಗೂ ಅಲ್ಲಿಯ ತೀರ್ಥ ತಂದು ಕೊಡಲು ಮಗಳು ಮಗನಲ್ಲಿ ದುಂಬಾಲು ಬೀಳುತ್ತಾಳೆ. ಅವರಿಗೆ ನಂಬಿಕೆಯಿಲ್ಲ, ಅವರುತರುವುದಿಲ್ಲ. ಅವಳು ತನ್ನ ಅಳಿಯನಿಗೆ ಒತ್ತಾಯಿಸುತ್ತಾಳೆ. ಆತ ತಿಂಡಿಪೋತ.
ತನ್ನ ಅತ್ತೆ ತಯಾರಿಸಿ ಕೊಡುವ ವಿವಿಧ ಖಾದ್ಯಗಳಿಗೆ ಆಸೆಪಟ್ಟು ಗಂಜೀಮಠದತೀರ್ಥ ತಂದುಕೊಡಲು ಪ್ರಾರಂಭಿಸುತ್ತಾನೆ. ಮಠಕ್ಕೂ ಮಾವನ ಮನೆಗೂ ತಿರುತಿರುಗಿಆತನಿಗೆ ಬೇಸರ ಬರುತ್ತದೆ. ಪ್ರತಿವಾರವೂ ಮಠಕ್ಕೆ ಪಾದಸವೆಸುವ ಬದಲು ಬೇರೊಂದುಉಪಾಯ ಕೈಗೊಳ್ಳುತ್ತಾನೆ. ಮಾವನ ಮನೆಯ ಸನಿಹದ ತೋಟದಲ್ಲಿ ಹರಿಯುವ ನೀರನ್ನೇಮಠದ ತೀರ್ಥವೆಂದು ಕ್ಯಾನ್ ತುಂಬಿಸಿ ತರತೊಡಗುತ್ತಾನೆ. ಅಜ್ಜಿ ಅದೇ ಮಠದ ಪವಿತ್ರತೀರ್ಥವೆಂದು ಸೇವಿಸುತ್ತಾಳೆ. ಒಂದು ದಿನ ಅಜ್ಜಿ ತೋಟಕ್ಕೆ ಹೋದಾಗ ತಾನೆ ನೀಡಿದಖಾಲಿ ಪ್ಲಾಸ್ಟಿಕ್ ಕ್ಯಾನ್ ಕಂಡಾಗ ಅಳಿಯ ತರುತ್ತಿದ್ದ ಮಠದ ತೀರ್ಥದ ಗುಟ್ಟು ಬಯಲಾಗಿಬಿಡುತ್ತದೆ.
 ಭಂಗಗೊಂಡ ಸಂಘ; ಲೇಖನದಲ್ಲಿ ಊರಿನ ಆಲಸಿಗಳು ಸೇರಿ ಸ್ವಸಹಾಯ ಸಂಘ ರಚಿಸಿಕೊಂಡು ಆಲಸ್ಯದಿಂದಲೇ ಒಕ್ಕೂಟ ಚೂರಾಗುವ ಪರಿ, ;ಐದ್ಕತ್ರಿಯಲ್ಲಿ ನೋಐತ್ರಿ; ಯಲ್ಲಿ ಹಳ್ಳಿಯ ಪುಂಡ ಯುವಕರು ಲಂಚತಿನ್ನುವ ಪೋಲೀಸನಿಗೇ ಚಳ್ಳೆಹಣ್ಣು ತಿನ್ನಿಸುವ ಪ್ರಸಂಗ, : ಕುಡುಕನ ಕೋಪ; ಲೇಖನದ ಕುಡುಕನ ಆವಾಂತರ, ಮುಂತಾದ
ಸಂದರ್ಭಗಳು ನಗು ಉಕ್ಕಿಸುತ್ತವೆ, ಹಳ್ಳಿಶಾಲೆಯ ತುಂಟ ಮಕ್ಕಳ ತುಂಟಾಟ, ಖುಶಿತರುತ್ತವೆ.
ಹೀಗೆ ಗ್ರಾಮಗಳ ರಸಮಯಸನ್ನಿವೇಶ ಪ್ರತಿ ಲೇಖನ ಗಳಲ್ಲಿ ವೈವಿಧ್ಯಮಯವಾಗಿ ಮೂಡಿ ಬಂದಿವೆ. ಇಲ್ಲಿಯ ಲೇಖನಗಳೆಲ್ಲ ನಿಜ ಜೀವನದ ನಗೆ ಮೊಗ್ಗುಗಳೆಂದೇ ಕರೆಯಬಹುದಾದರೂ ಪ್ರಾರಂಭಿಕ ಪ್ರಯತ್ನದಲ್ಲಿ ಹಲವಾರು ದೋಷಗಳುತೂರಿಕೊಂಡಿವೆ. ಮುದ್ರಣ ದೋಷವನ್ನು ಇನ್ನೂ ಸುಧಾರಿಸಬಹುದಿತ್ತು, ಭಾಷೆ ಇನ್ನೂ ಒನಪು ಗೊಳ್ಳಬಹುದಿತ್ತು. ಅಲ್ಲಲ್ಲಿ ಪ್ರಯೋಗಗೊಂಡ ಪ್ರಾದೇಶಿಕ ಶಬ್ಧಗಳು ಹೊರಜಿಲ್ಲೆಓದುಗರಿಗೆ ಅರ್ಥವಾಗದಿರಬಹುದು.   ಆದರೂ ಕೃತಿ ತನ್ನ ಅನುಭವ ಸಮೃದ್ಧಿಯಿಂದ ಓದಿಸಿಕೊಳ್ಳುತ್ತದೆ. ದತ್ತಗುರು ಕಂಠಿತಮ್ಮ ಗ್ರಾಮಾನ್ವೇಷಣೆಯನ್ನು ಇಲ್ಲಿಗೇ ಬಿಡದೆ ಮುಂದುವರೆಸಲೇಬೇಕು.
 ಮಾನವೀಯ ಅನುಭವದ ಭಂಡಾರವೇ ಆದ ಹಳ್ಳಿಯ ಬದುಕಿನ ನೈಜ ಚಿತ್ರಣಇನ್ನೂ ಪರಿಣಾಮಕಾರಿಯಾಗಿ ಮೂಡಿಬರಲೇ ಬೇಕು. ಕಂಠಿಯವರಲ್ಲಿ ಉತ್ಸಾಹವಿದೆ.ಸೂಕ್ಷ್ಮನಿರೀಕ್ಷಣೆಯಿದೆ. ಅನುಭವವನ್ನ ಹಾಸ್ಯ ಮತ್ತು ವಿಡಂಬನೆಯ ಕಣ್ಣಿನಲ್ಲಿ ಕಾಣುವಗುಣವಿದೆ.
       ಮುಂದಿನ ಕೃತಿಗಳು ಇನ್ನೂ ಯಶಪಡೆಯಲಿ ಎಂದು ಹಾರೈಸುತ್ತಿದ್ದೇನೆ.