Saturday 13 August 2011

ಸದಾ “ಆನಂದ ” ಉಳಿಯುವುದೇ..............??

ರಜ್ಯಾದ್ಯಂತ ಸಮೃದ್ಧ ಮಳೆ ಹೊಯ್ದಂತೆ ರಾಜಧಾನಿಯಲ್ಲಿ ರಾಜಕೀಯಕ್ಕೆ ಮಹಾಪೂರವೇ ಬಂದಿತು.  ಸರಿ ಸುಮಾರು ಒಂದು ತಿಂಗಳ ಕಾಲ ಅತ್ತ ವಿಧಾನ ಸೌಧ ಸ್ಥಬ್ಧ ಗೊಂಡಿತು. ಇತ್ತ ನಗರದ ತಾರಾ ಹೊಟೆಲುಗಳಿಗೆ ಸುಗ್ಗಿ ಮೂಡಿತು. ಲೋಕಾಯುಕ್ತರು ಸಿಡಿಸಿದ ಗಣಿ ಬಾಂಬ್ ರಾಜ್ಯದ ರಾಜಕಾರಣದಲ್ಲಿ ಮೂಡಿಸಿದ ವಿಪ್ಲವ ಐತಿಹಾಸಿಕವಾಯಿತು. ಬಸವನನ್ನಾಗಿ ಬಿಟ್ಟ ತುಂಡು ಗೂಳಿಗಳು ತಮ್ಮ ಎಲ್ಲೆ ಮೀರಿ ಬೇಲಿ ಮುರಿದು ಎರ್ರಾ ಬಿರ್ರಿಮೆಂದು ದುಪಳಿ ಎಬ್ಬಿಸುತ್ತ, ಅಂಕೆಮೀರಿ ಅಂಡಲೆಯುತ್ತಿರುವ ಕ್ರಿಯೆಗೆ ಲೋಕಾಯುಕ್ತರು ತಮ್ಮ ಮಿತಿಯಲ್ಲಿ ತಡೆಯೊಡ್ಡಿದರು.  ಷಂಡ ವಿರೋಧ ಪಕ್ಷ. ಕೈಕಟ್ಟಿ ಕುಳಿತ ನ್ಯಾಯಾಂಗ, ಬಾಯಿ ಕಟ್ಟಿದ ಸಾಮಾನ್ಯ ಜನತೆಯ ತಲ್ಲಣದ ಕ್ಷಣದಲ್ಲಿ, ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ ಎಂಬುದನ್ನ ತೋರಿಸಲು ಲೋಕಾಯುಕ್ತರು ಧೈರ್ಯ ಮಾಡಿದ್ದು ನಮ್ಮ ರಾಜ್ಯದ ಸುದೈವ.
ಅರವತ್ತು ವರ್ಷವಾದರೂ ಈ ಮಣ್ಣಿನಲ್ಲಿ ಜನತಂತ್ರ ಸಮರ್ಥವಾಗಿಚಿಗುರೊಡೆದಿಲ್ಲ. ಮಂತ್ರಿ ಶಾಸಕರು ವಾಹನದ ಮೇಲೆಯೇ ಇರಲಿ, ಅದ್ದೂರಿ ಬಂಗಲೆಯಲ್ಲಿಯೇ ಪವಡಿಸಲಿ, ಹಿಂದೆ ಮುಂದೆ ಪೋಲಿಸ್ ವಾಹನಗಳು ಸುತ್ತುವರೆದಿರಲಿ, ಎಂದು ಬಯಸುವ ಜನ, ಅಪರೂಪದಲ್ಲಿ ಸರಳವಾಗಿರುವರಾಜಕಾರಣಿ ಕಂಡರೆ ಅದೇ ಜನ ಗಂಭೀರವಾಗಿ ಸ್ವೀಕರಿಸುವುದೇ ಇಲ್ಲ,
ಪ್ರತಿನಿಧಿಗಳಲ್ಲಿಯೂ ಅಷ್ಟೆ   ನಾಯಕತ್ವದ ಗುಣ ಲವ ಲೇಶವಿಲ್ಲದಿದ್ದರೂ ತಾನೇ ಮಹಾಮಾಲಿಕಎಂದು ಭ್ರಮಿಸಿಬಿಡುತ್ತಾನೆ. ಜನಸೇವಕ ತಾನುಎಂಬುದನ್ನು ಮರೆತು ರಾಜ್ಯವೇ ತನ್ನ ಜಹಗೀರೆಂದು ತಿಳಿದು ಸರ್ವಾಧಿಕಾರಿಯಾಗಿ ಪರಿವರ್ತನೆ ಗೊಂಡು ಬಿಡುತ್ತಾನೆ.    ಯಾರೊ ಒಬ್ಬ ಸಾಮಾನ್ಯ ಮನುಷ್ಯ ತನ್ನ ವಾಹನವನ್ನು ಹಿಂದೆಹಾಕಿದ ಎಂಬ ಕಾರಣಕ್ಕೆ ರಾಜಕಾರಣಿ,  ಬೀದಿಗಿಳಿದು ತೋಳು ಸೇರಿಸುತ್ತಾನೆ.
ಇಷ್ಟೆಲ್ಲ ಗೊಂದಲಗಳ ನಡುವೆ ಆಡಳಿತ ಪಕ್ಷವೇ ಬಣ ಬಣವಾಗಿ ಛಿದ್ರಗೊಂಡು  ಬೀದಿರಂಪವಾದ ಅಯೋಮಯ ಸಂದರ್ಭದಲ್ಲಿ ಯೂರಾಜ್ಯದಲ್ಲಿ ಒಂದು ಸುಂದರವಾದ ಬೆಳಗು ಮೂಡಿದೆ. ದೇವ ದಾನವರ ಸಮುದ್ರ ಮಥನದಲ್ಲಿ ಕೊಂಚ ಅಮೃತ ಚಿಮ್ಮಿದೆ.    ಈ ವರೆಗೆಲ್ಲ ಸ್ನೇಹ ಶೀಲ  ಸೌಹಾರ್ದಜೀವಿ, ಸೂಕ್ಷ್ಮ ಮನಸ್ಕ ಎಂದೆನ್ನಿಸಿಕೊಂಡ ಮಲೆನಾಡ ಮಡಿಲಿನ ರಾಜಕೀಯ ಯೋಧ  ಸದಾನಂದ ಗೌಡರುಪ್ರಥಮ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.   ಕರಾವಳಿ ಮತ್ತು ಮಲೆನಾಡು ಎರಡನ್ನೂ ಹೊಂದಿದ ಕಕ್ಷಿಣಕನ್ನಡದ  ವಿಭನ್ನ ಭೌಗೋಳಿಕ ವಾತಾವರಣದಲ್ಲಿ ಹುಟ್ಟಿ ಬೆಳೆದ ಸದಾನಂದ ಗೌಡರು ಮಧ್ಯಮ ವರ್ಗದ ಬೇಸಾಯಗಾರ ಕುಟುಂಬದವರು.
ಐದು ಗಂಡಂದಿರೊಂದಿಗೆ ಬದುಕು ನಿಭಾಯಿಸಿದ ದ್ರೌಪದಿಯ ಜವಾಬ್ದಾರಿಗಿಂತ ಸದಾನಂದರ ಹೊಣೆ ಮತ್ತೂ ಬೃಹತ್ತಾದುದು. ಅವಳ ಗಂಡಂದಿರು ಬಣಗಳಾಗಿ ಚೂರು ಚೂರಾಗಿರಲಿಲ್ಲ. ಒಗ್ಗಟ್ಟಾಗಿದ್ದರು. ದುಶ್ಶಾಸನ ಸೀರೆ ಸೆಳೆಯುವಾಗ ಕೃಷ್ಣ ಬಲಕ್ಕಿದ್ದ. ಆದರೆ ಇಲ್ಲಿ ಹೈಕಮಾಂಡ ಕೃಷ್ಣ ದುರ್ಬಲ. ಅವರನ್ನೇ ನಂಬಿದರೆ ಸಂಧಾನ ಅಥವಾ ಸಂಗ್ರಾಮ ಎರಡೂ ವಿಫಲ ಗೊಳ್ಳುವ ಸಾಧ್ಯತೆಯೇ ಹೆಚ್ಚು. ಇಂಥ ಸಂದಿಗ್ಧದಲ್ಲಿ ಸ. ಗೌಡರು ಅತ್ಯಂತ ಎಚ್ಚರ ಮತ್ತು ಸೂಕ್ಷ್ಮ ವಾಗಿಹೆಜ್ಜೆಯಿಡಬೇಕಾಗಿದೆ. ವಿದ್ಯಾರ್ಥಿ ಜೀವನದಿಂದ ರಾಜಕಾರಣದವರೆಗೆಹತ್ತು ಹಲವು ಮಜಲುಗಳಲ್ಲಿ ಯಶಸ್ವೀಯಾಗಿ ಸಾಗಿಬರಲು ಅವರ ಸಜ್ಜನಿಕೆ, ಹೊಂದಾಣಿಕೆ, ಮತ್ತು ಮುಗ್ಧ ನಗುವಿನಂಥ ಧನಾತ್ಮಕ ಗುಣಗಳೇ ಕಾರಣವಾಗಿವೆ.  ಗೌಡರ ಈಗಿನ ಸ್ಥಿತಿ ಕೆಂಡದ ಮೇಲಿನ ನಡಿಗೆಯಂತೆ. ಈ ಸವಾಲು ಅತ್ಯಂತ ಸೂಕ್ಷ್ಮದ್ದು, ಎಚ್ಚರದ್ದು, ಮತ್ತು ವೇಗದ್ದು ಕೂಡಾ. ಈ ಅಲ್ಲೋಲ ಕಲ್ಲೋಲ ಸಂದರ್ಭದಲ್ಲಿಯೇ ಸ್ವಂತಿಕೆಯ ಬೀಜ ಬಿತ್ತಬೇಕಿದೆ. ಇನ್ನು ಆರೇ ತಿಂಗಳಿಗೆ ಮತ್ತೆ ಬರುತ್ತೇನೆಂದು ಘೋಷಿಸುವವರನ್ನ ನಿಭಾಯಿಸ ಬೇಕಿದೆ.
ಎಲ್ಲ ಸಮುದಾಯಕ್ಕೂ ನ್ಯಾಯ ಸಲ್ಲಿಸುತ್ತ, ರಾಜಕೀಯ ಉರಿಗಿಚ್ಚನ್ನು ತಣಿಸುತ್ತ, ಸಾವಕಾಶವಾಗಿ ರಾಜಕೀಯ ವಿಪ್ಲವ ವಿಧ್ವೇಷ ಗಳನ್ನು ಅಡಗಿಸಬೇಕಾಗಿದೆ.        ಮಂತ್ರಿ ಸ್ಥಾನವೊಂದು ಸೇವಾ ಸಾಧನವೆಂದು ತಿಳಿಯದೇ  ಹಣ ಗಳಿಸುವ ಉದ್ಯಮವೆಂದುಕೊಂಡಿರುವ ಬಹುಪಾಲು ಆಕಾಂಕ್ಷಿಗಳಿಗೆ ಆ ಸ್ಥಾನದ ಪಾವಿತ್ರ್ಯವನ್ನು ಮನಗಾಣಿಸಿ ಕೊಡಬೇಕಾದ ಗುರುv   ಹೊಣೆ ಗಾರಿಕೆ ಗೌಡರ ಮೇಲಿದೆ.  ಕಳೆದ ಮೂರು ವರ್ಷಗಳ ಆಡಳಿತಕಾಲ ಅಂತರ್ಯುದ್ಧ, ಭೃಷ್ಟಾಚಾರ, ಮತ್ತು ದೇವಾಲಯ ಮಠಮಾನ್ಯಗಳ ಸುತ್ತಾಟದಲ್ಲಿಯೇ ಕಳೆದು ಹೋದದ್ದನ್ನು ಗಮನದಲ್ಲಿರಿಸಿಕೊಳ್ಳದೇ ಹೋದಲ್ಲಿ  ರಾಜ್ಯದ ಜನ ಇನ್ನೆಂದೂ ಕ್ಷಮಿಸಲಾರರು.
ಪ್ರಮಾಣವಚನ ಸಮಾರಂಭದ ನಂತರದ ನೂತನ ಮು. ಮ. ಯವರ ಪ್ರಥಮ ಸಂದೇಶಕ್ಕಾಗಿ ಇಡೀ ರಾಜ್ಯ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು. ಹೊಸ ಕನಸು  ಹೊಸ ಕಾರ್ಯಕ್ರಮ, ವಿಭಿನ್ನ ಶೈಲಿ ಮತ್ತು ಹೊಸ ಹರಿವನ್ನು  ಕಾತರದಿಂದ ನಿರೀಕ್ಷಿಸುತ್ತಿತ್ತು.     ಆದರೆ ಮು. ಮಂ ರ ಮಾತು ಭ್ರಮ ನಿರಸನಗೊಳಿಸಿತು, ಹಿಂದಿನ ಕಾರ್ಯಕ್ರಮಗಳನ್ನೇ ಮುಂದುವರೆಸುವ ಬಾಲಿಶ ಆಶ್ವಾಸನೆ ಮೂಡಿಬಂದಾಗಕಾತರ ನಿರೀಕ್ಷೆ ಗಳೆಲ್ಲ ಪಾತಾಳಕ್ಕಿಳಿಯಿತು.  ಈಗಾಗಲೇ ರಬ್ಬರ್ ಸ್ಟಾಂಪ್ ಎಂಬ ಮುದ್ರೆ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.   ಅನರ್ಹರೆಂದು ಗೊತ್ತಿದ್ದೂ ಇನ್ನಷ್ಟು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಯಾಯಿತು.  ಗಣಿ ಸರ್ಪ ಸರಕಾರದ ಕೊರಳ ಸುತ್ತುತ್ತಿದೆ.  ಸಾಮಾನ್ಯ ಜನತೆ ಭ್ರಷ್ಟತೆ ಬೆಲೆಯೇರಿಕೆ ಗಳಲ್ಲಿ ನರಳುತ್ತಿದ್ದಾರೆ.
ಸದಾ ನಂದನದ ಕನಸು ಮಾತ್ರ ಹೆಮ್ಮರವಾಗುತ್ತಿದೆ.
  ನಂದದನನಸು ಕನಸಲ್ಲಿಯೇ  ಕೊಳೆತು ಹೋಗುತ್ತದೆಯೇ  ??

No comments:

Post a Comment