Wednesday 27 September 2023

ಮೊದಲ ಹೆಜ್ಜೆಯ ಗೆಜ್ಜೆನಾದ.

 

        ಕಾವ್ಯ ಅದೊಂದು,   ಧ್ಯಾನದ  ಬನಿ.  ಸಂವೇದನೆಯ  ತಿರುಳು. ಅನುಭವದ  ಅರಳು.  ಕಾವ್ಯಸೃಷ್ಟಿಯ  ಹಿನ್ನೆಲೆಯಲ್ಲಿ  ಜೀವನಾನುಭವದ  ಜೊತೆಗೆ,  ಸೂಕ್ಷ್ಮ ಸಂವೇದನಾಶೀಲತೆಯ  ವಿಶಿಷ್ಟ ಆಯಾಮ  ಬೇಕೇ ಬೇಕು.  ಕಾವ್ಯಕ್ಕೆ  ಭಾಷೆ  ಭೌತಿಕವಾದ ಅನಿವಾರ್ಯ ಸಾಮಗ್ರಿ ಅಷ್ಟೇ.  ಅನುಭವಕ್ಕೆ  ಅಭಿವ್ಯಕ್ತಿ  ಮಾಧ್ಯಮ ಅದು.  ಕವಿಗೆ  ಮೊದಲು  ಭಾಷೆ ದಕ್ಕಬೇಕು.  ಅಮೂರ್ತ ಭಾವಗಳಿಗೆ  ಸಾಕಾರ ರೂಪಕೊಡುವ  ಕೈಂಕರ್ಯಕ್ಕೆ  ಭಾಷಾಶಕ್ತಿ  ಒಲಿದು  ಬರಬೇಕು.   ಭಾವ  ಮತ್ತು ಭಾಷೆ  ಸುವರ್ಣಮಾಧ್ಯಮದಲ್ಲಿ  ಸಂಗಮಗೊಳ್ಳಬೇಕು.  ಆಗ  ಮಾತ್ರ  ಲೌಕಿಕಾನುಭವಗಳಲ್ಲೂ  ಹೊಚ್ಚಹೊಸ  ತಾತ್ವಿಕತೆಯ  ಮಿಂಚು  ಮೂಡಲು  ಸಾಧ್ಯ.   ಯಾಂತ್ರಿಕ  ವಾಸ್ತವದಲ್ಲೂ  ಜೀವಂತಿಕೆಯ  ಸಂಜೀವಿನಿ  ಜಿನುಗೀತು.  

       ಇಂತಹ  ಜಿನುಗಿನ   ಸುಂದರ  ಉದಾಹರಣೆಯಾಗಿ,  ಉತ್ತರಕನ್ನಡ  ಜಿಲ್ಲೆಯ  ಸಿದ್ದಾಪುರದ   ಯುವ  ಉತ್ಸಾಹೀ,  ಶಶಿಧರ  ಹೆಗಡೆ  ಕೊಳಗಿ,  ತಮ್ಮ  ಕಾವ್ಯಪ್ರಕ್ರಿಯೆಯ  ʻʻಮೊದಲ  ಹೆಜ್ಜೆʼʼ ಯಲ್ಲಿಯೇ  ಹೊಸ  ಭರವಸೆ  ಮೂಡಿಸತೊಡಗಿದ್ದಾರೆ.   ತಮ್ಮ  ಚೊಚ್ಚಲು  ಸಂಕಲನಕ್ಕೆ   ಮೊದಲ  ಹೆಜ್ಜೆ  ಎಂದೇ   ನಾಮಕರಣ  ಗೈದಿದ್ದಾರೆ.  

      ಇತ್ತೀಚೆಗೆ  ಬೆಂಗಳೂರಿನಲ್ಲಿ  ಬಿಡುಗಡೆ ಗೊಂಡ  ಪ್ರಸ್ತುತ  ಕೃತಿಗೆ,   ಹಿರಿಯ  ಪ್ರತಿಭಾವಂತ  ಕವಿ,  ಡಾ||  ಚಿಂತಾಮಣಿ  ಕೊಡ್ಲೆಕೆರೆ  ಯವರ   ಸುಂದರ  ಮುನ್ನುಡಿಯೊಂದಿಗೆ,     ಕವಿಯ  ಪ್ರಾರಂಭಿಕ  ಪ್ರಯತ್ನದಲ್ಲಿಯ  ಸಹಜ  ದೋಷಗಳನ್ನೂ  ಸಮರ್ಥವಾಗಿ  ಗುರುತಿಸುತ್ತಲೇ,  ಕವಿಯ  ಪ್ರಾಮಾಣಿಕ  ಅಭಿವ್ಯಕ್ತಿ  ಸಾಮರ್ಥ್ಯವನ್ನು  ಶ್ಲಾಘಿಸಿದ  ‌ ಕನ್ನಡದ  ಜನಪ್ರಿಯ  ಅಂಕಣಕಾರ,  ವಾಗ್ಮಿ  ರೋಹಿತ್‌  ಚಕ್ರತೀರ್ಥರ   ಬೆನ್ನುಡಿ,    ನವಕವಿಗೆ   ಧೈರ್ಯ ಮತ್ತು ಆತ್ಮವಿಶ್ವಾಸ  ನೀಡಿದೆ.

    ಚಿಂತಾಮಣಿಯವರ  ಮುನ್ನುಡಿಯ  ಮಾತುಗಳನ್ನು  ಇಲ್ಲಿ ಗಮನಿಸಲೇ  ಬೇಕಿದೆ. ʻʻ ಭಾವಮಯತೆ  ಭಾವ ತನ್ಮಯತೆ  ಇವರ  ಹುಟ್ಟು ಲಕ್ಷಣಗಳೆಂದು  ತೋರುತ್ತವೆ. ಭಾಷೆಯ ವಿಷಯದಲ್ಲಿ ಹೇಳುವುದಾದರೆ  ಅವರ ಊರಿನ  ಸುತ್ತಮುತ್ತಣ ತಾಳಮದ್ದಳೆ, ಯಕ್ಷಗಾನದ  ಮಾತುಗಾರಿಕೆ ಮತ್ತು ಲಯ  ಅವರ ಕೈ ಹಿಡಿದಿದೆ.  ........ ಅಕೃತ್ರಿಮವಾದ  ಜೀವನದೃಷ್ಟಿಯನ್ನು ಇವರು ಬೆಳೆಸಿಕೊಂಡಂತೆ  ತೋರುತ್ತದೆ. ʼʼ  ಎಂದು  ಕವಿಯ  ಪ್ರಾರಂಭಿಕ  ರಚನೆಗಳಲ್ಲಿಯ  ಶಕ್ತಿಯನ್ನು ಗುರುತಿಸಿ  ಬೆನ್ನುತಟ್ಟುತ್ತಾರೆ.

    ಕೇವಲ  ಒಂದೆರಡು ವರ್ಷಗಳೀಚೆಯಿಂದ  ಕಾವ್ಯರಚನೆಗಿಳಿದ  ಶಶಿಧರ್‌   ಈವರೆಗಿನ  ರಚನೆಯಲ್ಲಿನ  ನಲವತ್ತಾರು  ಕವಿತೆಗಳನ್ನು  ಇಲ್ಲಿ  ಕಟ್ಟಿಕೊಟ್ಟಿದ್ದಾರೆ.  

ತೃಣ ಗಾತ್ರದಷ್ಟು ಏರಿಕೆ  ಸಮುದ್ರದೋಪಾದಿಯಷ್ಟು ಇಳಿಕೆ /

 ಶೀರ್ಷಿಕೆಯೇಕಿನ್ನು  ನಶೆಭರಿತ ತಲ್ಲಣಕೆ /

ಮಾತ್ರವೇ ಕನವರಿಕೆ ಭೀಭತ್ಸದ  ಮನಕೆ /  ತುಟಿ ಹೊಲಿದುದಕೆ ಹೃದಯದೊಳಗೆ  ಉಳಿದುಬಿಟ್ಟಿದೆ /

ಮಾತಾಗದ ಅಂತರ್ಧಾನದ ಮೌನಕೆ /  ( ಮೌನದ  ಪಯಣ )

      ಕವಿಯ  ಇಡೀ  ಕಾವ್ಯೋದ್ದೇಶವನ್ನೇ     ನುಡಿಸಾಲುಗಳು  ಧ್ವನಿಸುತ್ತವೆ.  ಕವಿ  ತನ್ನ  ಅನುಭವದ  ಶೋಧನಾ  ಪ್ರಕ್ರಿಯೆಯ  ಶ್ರೀಮದ್ಗಂಭೀರ  ಸಾಗರಕ್ಕೆ ಧುಮುಕಿದ್ದಾನೆ.  ಸಾಗರದ  ಆಳ ಅಗಲಗಳೆದುರು  ತಳಮಳಿಸಿ ಬೆರಗಾಗಿನಿಂತರೂ,  ಶೋಧನೆಯ  ತುಡಿತ  ಬಿಡಲಾರ.   ಹಳೆಯ  ನೆನಪು  ಎಂಬ ರಚನೆಯಲ್ಲಿ,  ʻʻ ನೆನಪು  ನುಡಿಸಿದೆ  ನೋವ ನಾದದ  ಕೊಳಲು/ ಯಾರಿಗೂ  ಹೇಳದೇ ನನ್ನೊಳಗೆ ಹೆಮ್ಮರವಾಗಿದೆ /  ಮುಚ್ಚಿಟ್ಟ ಒಳಗಿನಳಲು /   ಎಂದು  ಆತ್ಮವಿಶ್ವಾಸದಿಂದಲೇ  ಕಾವ್ಯಕರ್ಮದಲ್ಲಿ  ಮುನ್ನುಗ್ಗುತ್ತಾನೆ. ದಾರಿಯ  ಮಧ್ಯೆ  ಎಂಬ  ರಚನೆಯಲ್ಲಿ  ಅಂಧ  ಅನಾಥ  ಪುಟ್ಟ ಹೆಣ್ಣು ಮಗುವೊಂದು  ದಾರಿಬದಿಯಲ್ಲಿ  ಹೂ  ಮಾರಾಟ ಮಾಡುವ  ದಯನೀಯ  ದೃಶ್ಯ  ಕವಿಯ  ಮನಸ್ಸನ್ನು ಕಲಕುತ್ತದೆ.  ಅವಳಿಗೆ  ಕೈತುಂಬ  ಹಣಕೊಟ್ಟು  ಹೂ  ಬುಟ್ಟಿಯನ್ನೇ  ಖರೀದಿಸಿದರೂ  ಪ್ರಕೃತಿ  ಅವಳಿಗೆ  ನೀಡಿದ  ಅಂಧತೆಯ  ಶಾಪಕ್ಕೆ  ಮರುಗುವ  ಕವಿತೆ   ಮಾನವೀಯ  ಅನುಕಂಪದಿಂದ  ಗಮನಸೆಳೆಯುತ್ತದೆ. 

       ಯುವ ಅವಸ್ಥೆಯ  ಬಿಡಲಾಗದ  ಮಾಯೆಯೆಂದರೆ   ಪ್ರೀತಿ, ಪ್ರೇಮ, ಕಾಮ, ವಿರಹದಂತ  ವಿಪ್ರಲಂಬ  ಸ್ಥಿತಿ,   ಇಲ್ಲಿಯ   ಎಲ್ಲಿರುವೆ  ನಲ್ಲೆ,  ಖಾಲಿ ಕಾಗದ,  ಎಷ್ಟು ಚಂದ ಈ ರಾತ್ರಿ,   ಅವಳು  ಅರ್ಥವಾದವಳೇ  ಅಲ್ಲ, ಬಿಟ್ಟು ಹೋದವಳಿಗೊಂದು  ಶ್ರದ್ಧಾಂಜಲಿ, ಮುಂತಾದ  ಕವಿತೆಗಳಲ್ಲಿ  ಹಬ್ಬಿಕೊಂಡಿವೆ.  ಆಲಾಪ  ಪ್ರಲಾಪ ಗಳ  ನಡುವೆಯೇ   ಪ್ರೀತಿಯ  ಮೃದು  ಮಧುರ  ಆಯಾಮ  ತಲುಪುವ  ಪ್ರಯತ್ನ  ಖುಷಿ  ಕೊಡುತ್ತಿದೆ. 

     ಸಮೃದ್ಧ  ಭಾಷೆಯನ್ನು ದಕ್ಕಿಸಿಕೊಂಡಿರುವ  ಕವಿ  ರೂಪಕ ಸೃಷ್ಟಿಯ  ಹವಣಿಕೆಯಲ್ಲಿ  ಸಾಗುತ್ತಿದ್ದಾನೆ.  ಪ್ರಾರಂಭಿಕ  ಆವೇಗ  ಆವೇಶ  ಉತ್ಸಾಹಗಳು  ಒಮ್ಮೊಮ್ಮೆ  ವಾಚ್ಯವಾಗುವ,  ಕೇವಲ  ಹೇಳಿಕೆಯಾಗುವ,  ಶಬ್ದೋನ್ಮಾದದಲ್ಲಿ  ಅರ್ಥದ  ಸೆರಗು  ಹಿಡಿವಲ್ಲಿ  ವಿಫಲ  ಎಂದೆನ್ನಿಸಿದರೂ,  

ಅಂಬೆಗಾಲಿಟ್ಟ ನಿನ್ನೆಯಿಂದ  ಇಂದಿಗೆ  ಒಂದಿಷ್ಟು  ಅಂತರ / ನಡೆಯಲೆತ್ನಿಸಿ  ಮುಗ್ಗರಿಸಿ ಬಿದ್ದ    ಕ್ಷಣವೇ  ಮಧ್ಯಂತರ / ನಡೆದು  ಓಡುವೆನೆಂಬ  ಕನಸು  ಭವಿಷ್ಯದಂತೆ  ಅಗೋಚರ /  (ಮಧ್ಯಂತರ )

    ಕವಿಗೆ  ತನ್ನ ಮಿತಿಯ  ಅರಿವಿದೆ.  ಮಿತಿಯ  ಅಗ್ನಿದಿವ್ಯವನ್ನು  ದಾಟುವ  ಆತ್ಮವಿಶ್ವಾಸವೂ  ಇದೆ.  ಎಂಬುದು   ಅವರ  ಇಲ್ಲಿಯ  ಹತ್ತಾರು  ಸಮರ್ಥ  ಕವನಗಳಲ್ಲಿ  ಯಶಸ್ವೀಯಾಗಿ  ಅಭಿವ್ಯಕ್ತಗೊಂಡಿದೆ.

ರವೀಂದ್ರ ಹೆಗಡೆ  ಮುಗದೂರು, ರವರ  ಮುಖಪುಟ  ಆಕರ್ಷಕವಾಗಿ  ಮೂಡಿ ಬಂದಿದೆ.

                 -------------------------------------------------------------------

  ಸುಬ್ರಾಯ  ಮತ್ತೀಹಳ್ಳಿ. ತಾ-  ೨೫-೯-೨೦೨೩.

ವಿಶ್ವವಾಣಿ  ಪತ್ರಿಕೆಗಾಗಿ.

 

ʻʻಮೊದಲ  ಹೆಜ್ಜೆʼʼ   ಕವನ  ಸಂಕಲನ.   ಕವಿ -  ಶಶಿಧರ್  ಕೊಳಗಿ.

ಪುಟ  ೮೦.  ಬೆಲೆರೂ- ೧೦೦.

ಪ್ರ-  ಹೆಚ್ ಎಸ್.‌  ಆರ್.‌ .  ಪ್ರಕಾಶನ . ಬೆಂಗಳೂರು.

      

No comments:

Post a Comment