Thursday 28 September 2023

ಛಲದ ಚಾವಣಿ – ಚರಿತ್ರೆಯ ನಕ್ಷತ್ರ ``ಕಿಲಾರ ಗಣೇಶ ಹೆಗಡೆ.ʼʼ

 

                                 ʻʻ ಮಾಸ್ತಿ  ಚೌಡಮ್ಮ ಭೂತಗಳ  ಒಟ್ಟು ಕುಣಿತ

                            ಹುಲಿ ಕರಡಿ ಕಾಡೆಮ್ಮೆ ಹೆಬ್ಬಾವುಗಳ  ರಾಜ್ಯ.

                           ಕುಗ್ರಾಮ  ಕಟ್ಟಡವಿ , ಯೋಚಿಸಲು  ಕೂಡ  ಹೆದರಿಕೆ

                           ಅಜ್ಜಾ  ಸಾಹಸವೇ  ನಿನ್ನ ಹೆಸರು,  ನಿನಗೇನು  ಅಂಜಿಕೆ....? ʼʼ  (  ವಿಜಯನಳಿನಿ, ರಮೇಶ್ ) 

 

              ಆಧುನಿಕತೆಯೆಂದರೆ   ಚರಿತ್ರೆಮರೆತ  ವರ್ತಮಾನವಲ್ಲ.  ಅಭಿವೃದ್ಧಿಯೆಂದರೆ  ವಿಕಾಸವನ್ನು  ಕಡೆಗಣಿಸುವುದಲ್ಲ.  ಆಧುನಿಕತೆ  ಎಂಬುದು    ಇತಿಹಾಸದ  ಫಲವತ್ತಾದ  ಮಣ್ಣಿನಮೇಲೆ  ಬೆಳೆಯುವ  ಜೀವಂತ  ನಂದನವಾದರೆ  ಮಾತ್ರ  ಅದಕ್ಕೊಂದು  ತಾತ್ವಿಕ  ಅರ್ಥದ  ಆಯಾಮದೊರೆಯುತ್ತದೆ.   ಸುಂದರ  ಭವಿಷ್ಯದ  ಕೈಮರವಾಗುತ್ತದೆ.   ಆದರೆ  ಭೂತದ   ಧ್ಯಾನವಿಲ್ಲದ,   ಇತಿಹಾಸದ ನೆನಪಿಲ್ಲದ,  ಶುಷ್ಕ  ವರ್ತಮಾನದಲ್ಲಿ  ಯಾಂತ್ರಿಕ  ಮನುಷ್ಯರಾಗಿ  ನಾವು  ರೂಪುಗೊಳ್ಳುತ್ತಿದ್ದೇವೆಯೇನೋ,  ಎನ್ನಿಸುವಷ್ಟು  ನಿರಾಶಾಜನಕ  ವಾತಾವರಣ  ಇಂದು  ನಮಗೆದುರಾಗುತ್ತಿದೆ.   ನಮ್ಮ  ನಮ್ಮ  ಸಮುದಾಯ  ಸಾವಿರಾರು  ವರ್ಷಗಳಿಂದ,  ಹೇಗೆ  ಬದುಕಿ  ಬಾಳಿತು.  ಯಾವ  ಯಾವ  ತಿರುವುಗಳನ್ನ,  ಯಾವ  ಏರಿಳಿತಗಳನ್ನ,  ಎಷ್ಟು  ಕಷ್ಟ  ನೋವು  ತಲ್ಲಣಗಳನ್ನ,  ಎದುರಿಸಿ     ವರೆಗೆ  ಹರಿದು  ಬಂದಿದೆ   ಎಂಬ  ಅರಿವಿರುವ  ಯಾವ  ಮನಸ್ಸೂ  ಇಂದಿನ  ವೈಭೋಗದ  ಐಷಾರಾಮದ,  ಹಣ  ಅಧಿಕಾರ  ಸಂಪತ್ತಿನ  ಅಮಲಿನಲ್ಲಿ  ಕಳೆದು ಹೋಗಲಾರದು. 

        ಚಿಂತನೆಗೆ   ಕಿಡಿಮೂಡಿಸಿದ್ದು,  ಇತ್ತೀಚೆಗೆ  ಉತ್ತರಕನ್ನಡ  ಜಿಲ್ಲೆಯ   ಪುಟ್ಟಗ್ರಾಮವೊಂದರಲ್ಲಿ,  ಒಂದೂವರೆ  ಶತಮಾನದ  ಪೂರ್ವದಲ್ಲೇ  ಜನಿಸಿ,  ಶತಮಾನ ನಂತರದ  ಭವಿಷ್ಯದ  ಕನಸನ್ನು  ಕಂಡು,  ಕೃತಿಗಿಳಿಸಿದ   ಅಪೂರ್ವ  ಸಾಧಕರೋರ್ವರ   ಸಂಸ್ಮರಣಾ  ಕಾರ್ಯಕ್ರಮ.      ಸಾಧಕರ   ಸಾಧನೆ  ಸಿದ್ದಿಗಳ,   ವೈವಿಧ್ಯಪೂರ್ಣ  ಚಿಂತನೆಯ,   ನೋವು  ತಲ್ಲಣಗಳ  ಬದುಕಿನ  ತಲಸ್ಪರ್ಶೀ  ಅಧ್ಯಯನದ  ಸಂಸ್ಮರಣ  ಗ್ರಂಥವೊಂದನ್ನು  ಲೋಕಾರ್ಪಣೆ  ಗೊಳಿಸಿದಾಗ.

      ಹತ್ತೊಂಬತ್ತನೆಯ  ಶತಮಾನದ  ಪ್ರಾರಂಭದ  ಕಾಲ.  ಇಡೀ  ದೇಶ,  ದಾಸ್ಯ  ಅನಕ್ಷರತೆ   ದಾರಿದ್ರ್ಯ ದಲ್ಲಿ  ನರಳುತ್ತಿರುವಾಗ,  ದೇಶಾದ್ಯಂತ  ಕೆಲವೇ  ಕೆಲವು  ಜಾಗ್ರತ ಮನಸ್ಸುಗಳು,  ಸ್ವಾಭಿಮಾನ,  ದೇಶಪ್ರೇಮ, ಮತ್ತು  ಆಧುನಿಕ  ಅರಿವನ್ನು ಮೂಡಿಸಿಕೊಂಡು, ಸಮುದಾಯದ  ದೌರ್ಬಲ್ಯ  ಮೂಢನಂಬಿಕೆಗಳ  ವಿರುದ್ಧ  ಸಾತ್ವಿಕ  ಹೋರಾಟಗೈದ  ಇತಿಹಾಸ  ಮಾತ್ರ,  ಗಾಂಧಿ  ನೆಹರೂರವರ  ಮಹಾ ನಾಮಗಳ  ನಡುವೆ   ಮರೆವಿನ  ಗುಹೆ  ಸೇರಿಕೊಂಡಿದೆ. 

         ಕಾಲದ  ಮಲೆನಾಡು  ಜಿಲ್ಲೆಗಳಂತೂ   ಮಲೇರಿಯಾ ಮಹಾರೋಗ,  ದಟ್ಟಡವಿ,  ಕಾಡುಪ್ರಾಣಿಗಳ  ಕಾಟ,  ಸರಕಾರದ  ದೌರ್ಜನ್ಯಗಳಂತ  ಸಂಕಟದಲ್ಲಿ   ನರಳುತ್ತಿತ್ತು.  ಮಹಾರೋಗಗಳು  ಸೃಷ್ಟಿಸಿದ  ಮಹಾಮರಣ,  ಅಧಿಕಾರಿಗಳ  ದಬ್ಬಾಳಿಕೆಗಳಲ್ಲಿ  ಬೆಂದ   ನೂರಾರು  ಗ್ರಾಮಗಳ  ಜನತೆ  ಊರನ್ನೇ  ಕಾಲಿಮಾಡಿ  ಸಿಕ್ಕಿದಲ್ಲಿ  ಗುಳೇಹೋದ  ಘಟನೆಗಳು   ಘಟಿಸತೊಡಗಿ  ಶತಮಾನವೇ  ಕಳೆದಿತ್ತು. 

     ಇಂಥ  ದುರ್ಬರ  ಕ್ಷಣದಲ್ಲಿ ( ೧೮೮೩- ೧೯೬೮) ಉತ್ತರಕನ್ನಡ  ಜಿಲ್ಲೆಯ  ಐನಕೈ  ಎಂಬ  ಪುಟ್ಟಗ್ರಾಮದಲ್ಲಿ,  ಗಣೇಶ  ಹೆಗಡೆ  ಎಂಬ  ಅಸಾಮಾನ್ಯ  ಸಾಹಸಿ  ಜನ್ಮತಾಳುತ್ತಾರೆ.  ಕೇವಲ  ನಾಲ್ಕುತರಗತಿ  ಶಿಕ್ಷಣಪಡೆದ  ಇವರು,  ಗಳಿಸಿಕೊಂಡ  ಸಾಮಾಜಿಕ  ಸಾಂಸ್ಕೃತಿಕ  ವೈಚಾರಿಕ  ವೈಜ್ಞಾನಿಕ  ಅರಿವಿನ  ಅಗಾಧತೆಯನ್ನು  ಗಮನಿಸಿದರೆ,  ಇಂದಿನ  ಆಧುನಿಕರು  ಬೆರಗಾಗಬೇಕು.   ಸ್ವಯಂ  ಅಧ್ಯಯನದಿಂದಲೇ  ಇಂಗ್ಲಿಶ್‌  ಸಂಸ್ಕೃತ  ಮರಾಠಿ  ಹಿಂದಿ  ಭಾಷಾ  ಪರಿಣತರಾಗಿ,  ಜೀವನವಿಡೀ  ವೈವಿಧ್ಯಮಯ  ಪ್ರಯೋಗಗಳಲ್ಲಿ  ನಿರತರಾಗಿ,   ಸುತ್ತಲಿನ  ಸಮುದಾಯದ  ಮಿದುಳಲ್ಲಿ  ವೈಜ್ಞಾನಿಕತೆಯ  ದೀಪಬೆಳಗುತ್ತಲೇ   ಕಾಲವಾದ  ದಿ. ಗಣೇಶ ಹೆಗಡೆ  ಕಿಲಾರ  ರವರ   ಸಿದ್ದಿ  ಸಾಧನೆಗಳು,  ಗೆಜೆಟಿಯರ್‌  ಗಳಲ್ಲಿ,  ರಾಜ್ಯದ  ವಿವಿಧ  ಪತ್ರಿಕೆಗಳಲ್ಲಿ  ದಾಖಲಾದರೂ,  ಜನಮಾನಸದ  ಮರೆವಿನ  ಗುಡಾಣ  ಸೇರಿದ್ದು  ವಿಷಾದನೀಯ. 

      ಅದೇನೇ  ಇರಲಿ,  ಗಣೇಶ  ಹೆಗಡೆಯವರು  ಕಾಲವಾಗಿ  ಅರ್ಧಶತಮಾನ  ಗತಿಸಿದ  ನಂತರವಾದರೂ  ಅವರ  ಬಂಧು  ಬಳಗಗಳ   ಅಭಿಮಾನಿಗಳ  ತೀವ್ರ  ಆಸಕ್ತಿ  ಇತಿಹಾಸಪ್ರೀತಿ,  ಮತ್ತೆ  ದಿವಂಗತರನ್ನು  ಅರ್ಥಪೂರ್ಣವಾಗಿ  ಸ್ಮರಿಸಿಕೊಂಡ  ಪ್ರಕ್ರಿಯೆ  ಅಭಿನಂದನೆಗೆ  ಪಾತ್ರವಾಗಿದೆ..   ಸಮಗ್ರ  ಅಧ್ಯಯನದ  ಸಂಸ್ಮರಣ ಗ್ರಂಥವೊಂದನ್ನು,  ಕಿಲಾರ  ಗಣೇಶ  ಹೆಗಡೆಯವರ  ಕರ್ಮಭೂಮಿಯಾದ   ಕಿಲಾರ  ಗ್ರಾಮದಲ್ಲಿ,ನೂರಾರು  ಜನರ  ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದೆ.

     ಗಣೇಶ  ಹೆಗಡೆಯವರ  ಮೊಮ್ಮಗ  ಜಯಪ್ರಕಾಶ  ಹೆಗಡೆಯವರ  ಪ್ರಧಾನ  ಸಂಪಾದಕತ್ವದಲ್ಲಿ  ರಚನೆಗೊಂಡ  ಪ್ರಸ್ತುತ  ಗ್ರಂಥ,  ಬೆಂಗಳೂರಿನ  ವಿಕಾಸ  ಪ್ರಕಾಶನದ  ಆರ್‌  ಪೂರ್ಣಿಮಾ  ರವರಿಂದ  ಪ್ರಕಾಶಿತಗೊಂಡಿದೆ.   

       ಕನ್ನಡದ  ಸುಪ್ರಸಿದ್ದ  ಲೇಖಕ  ನಾ.ಡಿಸೋಜ,   ವಿಮರ್ಶಕ   ಟಿ.ಪಿ. ಅಶೋಕ,  ಪ್ರಖ್ಯಾತ  ಛಾಯಾಚಿತ್ರ ಪರಿಣತ,  ಕೆ.ಎಸ್.ರಾಜಾರಾಮ್‌,  ಬೆಂಗಳೂರು  ವಿ.ವಿ. ಉಪಕುಲಪತಿ   ಡಾ- ನಿರಂಜನ  ವಾನಳ್ಳಿ,  ಸಹಕಾರಿ  ಸಾಧಕ  ಎಚ್  ಎಸ್‌  ಮಂಜಪ್ಪ,     ಪ್ರಜಾವಾಣಿ  ಸಂಪಾದಕ   ರವೀಂದ್ರ  ಭಟ್‌,  ಪರಿಸರವಾದಿ   ಶಿವಾನಂದ  ಕಳವೆ,   ಲೇಖಕ,  ಅಶೋಕ  ಹಾಸ್ಯಗಾರ್‌, ಡಾ- ವಿಜಯಾ  ಶ್ರೀಧರ್. ಮುಂತಾದವರ  ಉಪಸ್ಥಿತಿಯಲ್ಲಿ,   ʻʻ ಕೆಚ್ಚೆದೆಯ  ಪ್ರಗತಿ ಪುರುಷ  ಕಿಲಾರ  ಗಣೇಶ  ಹೆಗಡೆʼʼ  ಸಂಸ್ಮರಣ  ಗ್ರಂಥ  ಬಿಡುಗಡೆಗೊಂಡಿತು. 

     ಛಲವೊಂದಿದ್ದರೆ   ಸಾಧನೆಗೆ  ಯಾವಕಾಲವೂ  ಕೀಳಲ್ಲ  ಎಂಬುದಕ್ಕೆ  ಹೆಗಡೆಯವರೇ  ಸಾಕ್ಷಿ. ಶಿಕ್ಷಣದ  ಯಾವ  ಸೌಲಭ್ಯವೂ  ಇಲ್ಲದ  ಕಾಲದಲ್ಲಿ   ಸ್ವಾಧ್ಯಾಯದಿಂದಲೇ   ಜ್ಞಾನಗಳಿಕೆ. ಇಂಗ್ಲಿಶ್‌  ಮರಾಠಿ  ಹಿಂದಿ  ಭಾಷೆಗಳಲ್ಲಿ  ಪರಿಣತಿ.   ಕೃಷಿ  ಆಯುರ್ವೇದ  ಶಾಸ್ತ್ರ  ಪರಿಣತಿ.   ಮಕ್ಕಳಿಗೆ  ತಾವೇ  ಶಿಕ್ಷಕರಾಗಿ  ಬೋಧನೆ.    ತನ್ನ  ಗ್ರಾಮದ   ದಲಿತರಿಗಾಗಿ  ಶಾಲೆ  ಸ್ಥಾಪನೆ.    ಸಾರಾಯಿವಿರೋಧಿ  ಆಂಧೋಲನ,    ಸ್ವಂತ  ಊರಿನಲ್ಲೇ  ಸಹಕಾರಿ  ಸಂಘ  ಸ್ಥಾಪನೆ,   ನೂರಾರು  ಹಳ್ಳಿಗಳಲ್ಲಿ,  ಸಾರಾಯಿ  ನಿಷೇಧ,  ಶಿಕ್ಷಣದ  ಅವಶ್ಯಕತೆ,  ನೈತಿಕತೆಯ  ಬಗೆಗೆ  ಉದ್ಭೋಧಕ  ಭಾಷಣ,   ಮುಂತಾದ  ಚಟುವಟಿಕೆಗಳಲ್ಲಿ   ನಿರಂತರ  ತೊಡಗಿಕೊಂಡಿದ್ದ  ಹೆಗಡೆಯವರ   ಸಾಹಸ   ಇಂದಿಗೂ  ಅನುಕರಣೀಯ.

     ತಾಲೂಕಿನ   ಬಹುಕಾಲದಿಂದ  ಹಾಳುಬಿದ್ದ  ಸರಕಾರಿ  ಪಡವಾಗಿ  ಪರಿವರ್ತನೆಗೊಂಡಿದ್ದ  ಕಿಲಾರ  ಎಂಬ  ಗ್ರಾಮವನ್ನೇ   ಖರೀದಿಸಿದ್ದು.

     ಗ್ರಾಮದ  ಬಂಜರುಬಿದ್ದ  ಭೂಮಿಯಲ್ಲಿ  ಕಬ್ಬು  ಬೆಳೆದು    ಕಾಲದಲ್ಲೇ  ಸಕ್ಕರೆ  ಕಾರ್ಖಾನೆಯೊಂದನ್ನು  ಸ್ಥಾಪಿಸಿ   ಖಂಡಸಾರಿ  ಸಕ್ಕರೆ  ತಯಾರಿಸಿದ್ದು.

     ಪ್ರಧಾನಿ  ನೆಹರೂ  ರವರನ್ನು  ಸಂದರ್ಶಿಸಿ,  ತಾವು  ತಯಾರಿಸಿದ  ಸಕ್ಕರೆಯನ್ನು,  ಬೆಳೆದ  ಯಾಲಕ್ಕಿಯನ್ನು  ಉಡುಗೊರೆಯಾಗಿ  ನೀಡಿದ್ದು,

      ರಾಜ್ಯದಲ್ಲೇ  ಪ್ರಪ್ರಧಮವಾಗಿ    ಜೋಗಾ  ಜಲವಿದ್ಯುತ್  ಉತ್ಪಾದನೆಗೂ  ಹದಿನಾರು  ವರ್ಷ  ಮೊದಲೇ  ಸ್ವಂತ  ಬಳಕೆಗೆ  ಜಲವಿದ್ಯುತ್  ಉತ್ಪಾದಿಸಿದ್ದು, 

       ವಿದ್ಯುತ್  ಸಾಧನೆಗೆ   ಎಮ್.‌ ವಿಶ್ವೇಶ್ವರಯ್ಯನವರಿಂದಲೇ  ಶಹಬ್ಬಾಸ್  ಪಡೆದಿದ್ದು,

ಅತ್ಯಧಿಕ  ಕಂದಾಯ  ಹೇರಿಕೆಯಲ್ಲಿ  ನಲುಗಿದ  ರೈತರ  ಪರವಾಗಿ  ಬ್ರಿಟಿಶ್  ಸರಕಾರದೊಂದಿಗೆ   ಕದನಕ್ಕಿಳಿದಿದ್ದು,

     ವಿಧವಾ  ವಿವಾಹ  ಆಂದೋಲನವನ್ನು  ಸಂಘಟಿಸಿ   ಕೆಲವು  ವಿವಾಹಕ್ಕೂ  ಕಾರಣರಾದದ್ದು,

       ಕಾಲದಲ್ಲಿ   ಅಪರೂಪವಾಗಿದ್ದ,  ಆತ್ಮಚರಿತ್ರೆಯನ್ನು   ಹೆಗಡೆಯವರು  ಬರೆದಿದ್ದು

     ಜೊತೆಗೇ  ಉತ್ತರಕನ್ನಡ  ಜಿಲ್ಲೆಯ  ಅಭಿವೃದ್ಧಿಯ  ಹಿನ್ನೆಲೆಯಲ್ಲಿ,  ತಮ್ಮ  ವಿಚಾರವನ್ನು  ಅಂಕೆ ಸಂಖ್ಯೆ  ಸಹಿತವಾಗಿ   ಮಂಡಿಸಿ  ಕೃತಿ  ರಚನೆಯೂ,   ಸೇರಿ  ಐದು  ಕೃತಿಗಳನ್ನು  ಪ್ರಕಟಿಸಿದ್ದು,   ಮುಂತಾದ  ಅವರ  ಸಾಧನೆಗಳ  ಪಟ್ಟಿ  ಬೆಳೆಯುತ್ತದೆ.

        ಹೆಗಡೆಯವರ   ಗ್ರಾಮಾಭಿವೃದ್ಧಿಯ   ನಿರಂತರ ಪ್ರಯೋಗಶೀಲ ಚಟುವಟಿಕೆ      ಕಾಲದ   ರಾಜ್ಯದ   ದೇಶದ   ಹಲವು  ನಾಯಕರನ್ನು  ಆಕರ್ಷಿಸಿತ್ತು.    ಮುರಾರ್ಜಿ  ದೇಸಾಯಿ,  ಶಿವರಾಮಕಾರಂತ, ಕರಮರಕರ್‌,   ಮತ್ತು  ಹಲವು  ಬ್ರಿಟಿಶ್‌  ಅಧಿಕಾರಿಗಳು,  ಕಿಲಾರಕ್ಕೆ  ಭೇಟಿಯಿತ್ತಿದ್ದರು.  

        ʻʻ  ಗಾಂಧಿಯವರ  ಗ್ರಾಮಮುಖಿ  ಚಿಂತನೆ,  ನೆಹ್ರೂರವರ  ಕೈಗಾರಿಕಾ  ಕನಸು, ಎರಡನ್ನೂ  ಮೈಗೂಡಿಸಿಕೊಂಡ  ಗಣೇಶ ಹೆಗಡೆಯವರಂಥ,  ಸಾವಿರಾರು  ಗ್ರಾಮಪ್ರತಿಭೆಗಳೇ   ನಮ್ಮ  ದೇಶದ  ಪ್ರಗತಿಗೆ ಮತ್ತು ಭವಿಷ್ಯದ  ಸೃಷ್ಟಿಗೆ  ಕಾರಣವಾಗಿದೆ.ʼʼ    ಎಂಬ  ವಿಮರ್ಶಕ  ಟಿ.ಪಿ. ಅಶೋಕರ  ನುಡಿ,  ಮತ್ತು

 ಬೆಂ .ವಿ.ವಿ.  ಕುಲಪತಿ  ಡಾ- ನಿರಂಜನ  ವಾನಳ್ಳಿ ಯವರ   ʻʻ ನಮ್ಮ ಗ್ರಾಮಾಂತರದ  ವಿಕಾಸಕ್ಕೆ  ಹೆಗಡೆಯವರಂತಹ   ರಾಜಕೀಯೇತರ  ನಾಯಕತ್ವ  ಇಂದಿಗೂ  ಅವಶ್ಯವಿದೆʼʼ   ಎಂಬ  ಮಾತು  ಅಕ್ಷರಶಃ  ಸತ್ಯವಾಗಿ  ಗೋಚರಿಸುತ್ತಿದೆ.

                                                         ʻʻ ಎನಿತು  ಜನ್ಮದಲಿ  ಎನಿತು  ಜೀವರಿಗೆ

                                                             ಎನಿತು  ನಾವು  ಋಣಿಯೋ .

                                                            ತಿಳಿದು  ನೋಡಿದರೆ ಬಾಳು  ಎಂಬುದಿದು

                                                             ಋಣದ  ರತ್ನ  ಖಣಿಯೋ. ʼʼ    ( ಜಿ.ಎಸ್.ಶಿವರುದ್ರಪ್ಪ )  

 

 

ಸುಮ ಸಂಪದ.  7.      ತಾ-  21-1-2023,              ಸುಬ್ರಾಯ   ಮತ್ತೀಹಳ್ಳಿ.                   

    

No comments:

Post a Comment