Tuesday 26 September 2023

ಶ್ರೀ ಗೌರೀಶ್ ಕೈಕಿಣಿ ಮತ್ತು ಮಹರ್ಷಿ ಅರವಿಂದರು,

 

           ಸ್ವಾತಂತ್ರ್ಯಾನಂತರದ  ಉತ್ತರಕನ್ನಡದ  ಗತಿಸ್ಥಿತಿಯನ್ನು  ಅವಲೋಕಿಸಿದರೆ   ಸಾಂಸ್ಕೃತಿಕವಾಗಿ  ಮೂರು  ಮಹಾಪ್ರವಾಹವನ್ನು  ಗುರುತಿಸಬಹುದಾಗಿದೆ.  ಪ್ರಜ್ಞಾ  ಪ್ರವಾಹವಾಗಿ   ಶ್ರೀ  ಗೌರೀಶ  ಕೈಕಿಣಿಯವರಾದರೆ,  ಸಾಮಾಜಿಕ  ಶೈಕ್ಷಣಿಕ ವಾಗಿ  ದಿನಕರ ದೇಸಾಯಿ,  ಮತ್ತು  ಪರಿಸರ ಪ್ರವಾಹವಾಗಿ  ಡಾ- ಕುಸುಮಾ  ಸೊರಬ  ನಮ್ಮನ್ನು  ಆಕರ್ಷಿಸುತ್ತಾರೆ.     ಮೂರೂ  ಪ್ರತಿಭೆಗಳು,  ಜಿಲ್ಲೆಯ  ಕರಾವಳಿ, ಮಲೆನಾಡು, ಮತ್ತು  ಬಯಲು ಸೀಮೆಗಳನ್ನು  ಒಟ್ಟಾಗಿಸಿ  ತಮ್ಮ  ಮಡಿಲಲ್ಲಿ  ಜೋಪಾನವಾಗಿ  ಕಾದಿಟ್ಟುಕೊಂಡಿದ್ದರು.   ಜಿಲ್ಲೆಯನ್ನೂ  ಮೀರಿ  ರಾಜ್ಯ  ರಾಷ್ಟ್ರ  ಮಟ್ಟದಲ್ಲಿ  ತಮ್ಮ  ಪ್ರಭಾವವನ್ನು  ಬೀರಿದ್ದರು.  ಜಿಲ್ಲೆಯ  ರಾಜಕೀಯ, ಪಾರಿಸಾರಿಕ, ಮತ್ತು  ಬೌದ್ಧಿಕ  ಶಕ್ತಿ  ಮತ್ತು  ದೌರ್ಬಲ್ಯಗಳನ್ನು,  ಇವರಷ್ಟು  ಸೂಕ್ಷ್ಮವಾಗಿ  ಮತ್ತು  ಸಮಗ್ರವಾಗಿ  ಅರಿತಿರುವ,  ಮತ್ತು,  ಎಲ್ಲ  ವಲಯಗಳನ್ನೂ  ಜಾಗ್ರತಗೊಳಿಸುವ  ಕಾಯಕದಲ್ಲಿ  ತಮ್ಮ  ಬದುಕನ್ನೇ  ಮೀಸಲಾಗಿಟ್ಟ  ಇನ್ನೊಂದು  ಜೀವವನ್ನ  ನಂತರದಲ್ಲಿ  ನಾವು  ಕಾಣಲಾಗಿಲ್ಲ.

     ಅವರ  ಬದುಕಿನ  ನಡುವೆಯೇ  ಜಾಗತೀಕರಣ,  ನಮ್ಮ  ಜಿಲ್ಲೆಯನ್ನೂ  ಬಿಡದೇ  ಆಕ್ರಮಿಸಿತ್ತು.  ವಯೋಸಹಜತೆಯಿಂದ   ಮಹಾ  ಪ್ರತಿಭೆಗಳು  ಒಂದೊಂದಾಗಿ  ಕಣ್ಮರೆಯಾಗುತ್ತಿದ್ದಂತೇ  ಜಿಲ್ಲೆ  ಮತ್ತೆ  ಅನಾಯಕ  ಜಿಲ್ಲೆಯಾಗತೊಡಗಿತು.  ಸಮಗ್ರ  ಜಿಲ್ಲೆಯನ್ನು  ಪ್ರತಿನಿಧಿಸುವ  ರಾಜಕೀಯ,  ಸಾಂಸ್ಕೃತಿಕ,  ಬೌದ್ಧಿಕ  ನಾಯಕತ್ವವಿಲ್ಲದೇ  ಜಿಲ್ಲೆ  ಮತ್ತೆ   ಛಿದ್ರತೆಯತ್ತ  ಸಾಗತೊಡಗಿತು. 

     ಸ್ವಾತಂತ್ರ್ಯಾನಂತರದ  ಉತ್ತರಕನ್ನಡ  ಜಿಲ್ಲೆಯಲ್ಲಿ    ಘಟ್ಟದ  ಮೇಲೆ ಕೆಳಗೆ  ಎಂಬ   ಭೌಗೋಳಿಕ  ಸಾಂಸ್ಕೃತಿಕ  ವ್ಯತ್ಯಾಸಗಳಲ್ಲಿ  ಸಾಮಾಜಿಕ  ಸಂಗತಿಗಳು  ಸುಸಂಗತವಾಗುವ  ಬದಲು  ಅಸಂಗತಗೊಳ್ಳುತ್ತ  ಬರುತ್ತಿರುವುದು,  ವಿಚಿತ್ರ  ಮತ್ತು  ವಿಷಾದನೀಯ.

        ವ್ಯತ್ಯಾಸಗಳ   ಚದುರಂಗದಾಟದಲ್ಲಿ,  ಜಿಲ್ಲೆಯ  ಸಮಗ್ರತೆಯನ್ನು   ರೂಪಿಸಲು   ಯತ್ನಿಸಿದ , ಮೂರು  ಚೇತನಗಳನ್ನು  ಜಿಲ್ಲೆ  ಸದಾ  ಸ್ಮರಿಸುತ್ತಿರಬೇಕು.   ಸದಾ  ಋಣಿಯಾಗಿರಲೇ  ಬೇಕು.

        ಮೂರೂ  ರತ್ನಗಳಲ್ಲಿ,  ಗೌರೀಶ  ಕೈಕಿಣಿ   ವಿಶಿಷ್ಟವಾದ  ನೆಲೆಯಲ್ಲಿ  ಮಿಂಚುತ್ತಾರೆ. ಜಿಲ್ಲೆಯ  ಸಮೃದ್ಧ  ಹಸಿರಿಗೆ,  ಬೌದ್ಧಿಕತೆಯ  ವೈಚಾರಿಕತೆಯ  ನವನವೀನ  ಸ್ಪರ್ಶನೀಡುತ್ತಾರೆ.  ಸಾಂಪ್ರದಾಯಿಕತೆ  ಮೂಢ ಆಚರಣೆಗಿಳಿಯದಂತೇ,   ಅತೀ  ಕರ್ಮಠತೆಯ  ಬಂಧನಕ್ಕೆ  ಸಿಲುಕದಂತೆ  ಎಚ್ಚರಿಸುತ್ತಾರೆ.

    ದಿನಕರ  ದೇಸಾಯಿ  ಪ್ರತಿಷ್ಠಾನದ   ವಾರ್ಷಿಕ  ಕಾರ್ಯಕ್ರಮದ  ಅಡಿಯಲ್ಲಿ, ಅಂಕೋಲೆಯ  ಮತ್ತೊಂದು  ಸಾಮಾಜಿಕ ಹೋರಾಟಗಾರ,  ದಿ. ಶಂಕರ ಕೇಣಿ ಯವರ  ನೆನಪಿನಲ್ಲಿ, ಜರುಗುತ್ತಿರುವ  ದತ್ತಿ  ಉಪನ್ಯಾಸ    ಬಾರಿ  ನನಗೊಲಿದಿದೆ.  ಅದೂ  ಗೌರೀಶರ  ವಿಶಿಷ್ಟವಾದ   ಶ್ರೀ  ಅರವಿಂದರ  ಜಗತ್ಪ್ರಖ್ಯಾತ ಇಂಗ್ಲಿಶ್ ಕೃತಿ, ( Future poetry )   ʻʻಭವಿಷ್ಯ ಕಾವ್ಯʼʼ  ದ ಅನುವಾದ  ಪ್ರಕ್ರಿಯೆಯ  ಹಿನ್ನೆಲೆಯಲ್ಲಿ  ಘಟಿಸಿದ  ಆಸಕ್ತಿಪೂರ್ಣ  ಘಟನೆಯೊಂದಿಗೆ,  ಅರವಿಂದ  ತತ್ವಜ್ಞಾನದ  ಆಯಾಮಕ್ಕೆ  ಗೌರೀಶರ  ಪ್ರವೇಶದ  ರೋಚಕ  ವಿವರಗಳನ್ನು  ದಾಖಲಿಸುವುದೇ  ನನ್ನ    ಉಪನ್ಯಾಸದ  ಗುರಿಯಾಗಿದೆ.

  ಉತ್ತರಕನ್ನಡ ಜಿಲ್ಲೆ   ಇತಿಹಾಸದಲ್ಲಿ  ಮೊಟ್ಟ ಮೊದಲ  ಬಾರಿ   ಪ್ರಖರ  ವೈಚಾರಿಕತೆಯ  ಸ್ಪರ್ಶಪಡೆದು   ರಾಜ್ಯಮಟ್ಟದಲ್ಲಿ  ಬೆಳಗುವಂತಾದುದು,   ಗೌರೀಶರ   ಸಾವಿರ  ಸಾವಿರ  ಪುಟಗಳ  ಅಕ್ಷರಕಾಯಕದ  ಮೂಲಕ  ವೆಂದರೆ  ಅತಿಶಯೋಕ್ತಿಯಾಗಲಾರದು.  ಧಾರ್ಮಿಕವಾಗಿ,  ಸಾಂಸ್ಕೃತಿಕವಾಗಿ  ದಕ್ಷಿಣಕಾಶಿಯೆಂದೇ  ಪ್ರಸಿದ್ಧಗೊಂಡ   ಗೋಕರ್ಣ  ಕ್ಷೇತ್ರದಲ್ಲಿ, ಗಮನಿಸಬಹುದಾದ  ವಿಶೇಷವೆಂದರೆ,  ಶಿಲ್ಪದಲ್ಲಡಗಿದ ಮಹಾಬಲೇಶ್ವರ,  ಮತ್ತು   ಪ್ರಜ್ಞೆಯ  ಉನ್ನತ  ಶಿಖರ  ಗೌರೀಶ್‌  ಕೈಕಿಣಿ ʼʼ ಇವರಿಬ್ಬರೇ  ಎಂಬ  ನುಡಿ  ಸಾಕಷ್ಟು  ಜನಪ್ರಿಯಗೊಂಡಿತ್ತು.  

    ಕನ್ನಡದ  ದಿಗ್ಗಜ  ವೈಚಾರಿಕರು,  ಕವಿಗಳು,  ಸಾಹಿತಿಗಳು  ಸದಾ  ಗೌರೀಶರ  ಸಾಂಗತ್ಯ  ಬಯಸಿ  ಗೋಕರ್ಣಕ್ಕೆ  ಆಗಮಿಸುತ್ತಿದ್ದರು.  ಸ್ವಥಃ  ಎಂದೂ  ನಾಸ್ತಿಕರು  ತಾವೆಂದು  ಹೇಳಿಕೊಳ್ಳದಿದ್ದರೂ,  ಧಾರ್ಮಿಕತೆಯನ್ನು,  ಡಾಂಭಿಕ  ಭಕ್ತಿಯನ್ನು  ಸೂಕ್ಷ್ಮವಾಗಿ  ಅಷ್ಟೇ  ಸಾತ್ವಿಕವಾಗಿ  ಖಂಡಿಸುತ್ತ,  ವೈಜ್ಞಾನಿಕ  ವಿಚಾರಧಾರೆಯಲ್ಲಿ  ಮಿಂದೇಳುತ್ತಿದ್ದ   ಕೈಕಿಣಿ,  ತಮ್ಮದೇ  ಆದ  ವೈಶಿಷ್ಟ್ಯಪೂರ್ಣ  ಬರಹಗಳಿಂದ   ಕನ್ನಡಿಗರ  ಪ್ರೀತಿಪಾತ್ರರಾಗಿ  ಬೆಳೆದು  ಬಾಳಿದರು.

              ಗೌರೀಶರು  ಒಂದು  ದೃಷ್ಟಿಯಲ್ಲಿ  ಆಸ್ತಿಕ  ಸಮುದಾಯದ  ನಡುವೆ  ಜನ್ಮಿಸಿದ  ಒಂಟಿ   ಬೃಹತ್‌   ಆಲದ ಮರ. ದೈವ  ಧಾರ್ಮಿಕ  ರಾಜಧಾನಿಯೆಂದೇ  ಪ್ರಸಿದ್ಧಿಯಾದ  ಗೋಕರ್ಣದ   ಏಕೈಕ  ನಿರೀಶ್ವರವಾದಿಯಾಗಿಯೂ,  ಆಸ್ತಿಕ ಸಮುದಾಯದ  ಗೌರವಕ್ಕೆ  ಪಾತ್ರರಾದ  ಅಪರೂಪದ  ವ್ಯಕ್ತಿತ್ವ  ಗೌರೀಶರದು.  ಅವರೇ  ಅಂದಂತೇ   ʻʻ ನಾನು  ಮಾರ್ಕ್ಸವಾದಿ.  ಆದರೆ  ಕಮ್ಯುನಿಷ್ಟನಲ್ಲ.   ವೇದಾಭ್ಯಾಸಿಯೂ  ಹೌದು, ವೈದಿಕನಲ್ಲ.   ಧರ್ಮದ  ಬಗೆಗೆ  ಮಾತನಾಡಬಲ್ಲೆ,  ಧಾರ್ಮಿಕನಲ್ಲ.   ಅವಶ್ಯ  ಪೂಜಿಸುತ್ತೇನೆ.  ಪೂಜಾರಿಯಲ್ಲ.ʻʻ  ಎಂಬ  ಮಾತುಗಳು,  ಅವರ  ಜಾತ್ಯತೀತ,  ನಿಷ್ಕಲ್ಮಷ,  ಮಾನವೀಯ  ಅಂತಃಕರಣವನ್ನು   ಎತ್ತಿತೋರಿಸುತ್ತದೆ.

      ನನ್ನ  ಜೀವನ ದೃಷ್ಟಿ  ಎಂಬ  ಅವರ  ಅಭಿಪ್ರಾಯದಲ್ಲಿ   ʻʻ ಸುಖಕ್ಕೆ  ಮೂಲ  ಮನಃಶ್ಶಾಂತಿ.  ಮನಶ್ಶಾಂತಿಗೆ  ಕಾರಣ  ನಮ್ಮಲ್ಲಿಯೇ  ಆತ್ಮವಿರೋಧಿಯಾಗದಂಥ  ಬದುಕು. ನಮ್ಮ  ಮಸಸ್ಸಿಗೇ  ನಾವು  ಹೀನವೆನಿಸದಂತೇ  ಬಾಳುವ  ಹದವೇ  ಜೀವನದಲ್ಲಿ  ಪಳಗಿಸಿಕೊಳ್ಳಬೇಕಾದ  ಸಮ್ಯಕ್‌ ದೃಷ್ಟಿ. ತನ್ನಂತೇ  ಪರರ  ಬಗೆಯುವ  ದೃಷ್ಟಿ ಒಂದು. ಪರರ  ಕಣ್ಣಿಗೆ  ತಾವು  ಹೇಗೆ  ಕಾಣುತ್ತೇವೋ  ಹಾಗೆ  ತಮ್ಮನ್ನು  ಕಂಡುಕೊಳ್ಳುವ  ದೃಷ್ಟಿ  ಇನ್ನೊಂದು.  ಅವೆರಡೂ  ಕಣ್ಣು  ನಮಗೆ  ಜೀವನದ  ಯಥಾರ್ಥ  ದರ್ಶನವನ್ನು  ನೀಡುತ್ತವೆ.  ಎಂದು  ನಾನು  ನಂಬಿ  ನಡೆದಿದ್ದೇನೆ.  ಇದಕ್ಕೆ  ದೇವರ ದಯೆ, ದೈವದ  ಭಯ  ಯಾವುದೂ  ಬೇಕಿಲ್ಲ.ʼʼ

      ಗೌರೀಶರು  ಯಾರನ್ನೂ  ತಿರಸ್ಕರಿಸಲಿಲ್ಲ..  ಯಾವುದನ್ನೂ  ಅತಿಯಾಗಿ  ಪುರಸ್ಕರಿಸಲೂ  ಇಲ್ಲ.  ಆಸ್ತಿಕನಲ್ಲಿರುವ  ಭೃಷ್ಟತೆ, ಅಂಧಶೃದ್ಧೆ,  ಅಮಾನವೀಯತೆಯನ್ನು,  ಅವರ  ಶಾಸ್ತ್ರಗಳನ್ನೇ  ಮುಖಾಮುಖಿಯಾಗಿಸಿ,  ಖಂಡಿಸಿದರು.  ನಾಸ್ತಿಕರ  ವಾದ  ಪ್ರತಿವಾದದ  ಮಿತಿಗಳ  ಪೊಳ್ಳುತನಗಳನ್ನು  ಅನಾವರಣಗೊಳಿಸಿದರು.  ಮನುಷ್ಯ  ವೈಯಕ್ತಿಕವಾಗಿ  ಯಾವುದೇ  ಸಿದ್ಧಾಂತಗಳನ್ನು  ಅಪ್ಪಿಕೊಂಡಿರಲಿ,  ಅವನಲ್ಲಿಯ  ಕರುಣೆ  ಪ್ರೀತಿ  ಸಾಮಾಜಿಕ  ಬದ್ಧತೆ  ಮತ್ತು  ಪ್ರಾಮಾಣಿಕ  ಗುಣಗಳಿದ್ದಲ್ಲಿ   ಅವರನ್ನು  ಪುರಸ್ಕರಿಸಿದರು.   ಆಸ್ತಿಕತೆ  ಅಥವಾ  ನಾಸ್ತಿಕತೆ ಯಾವುದೇ  ಇರಲಿ,  ಜೀವ ವಿರೋಧಿಯಾದಲ್ಲಿ,  ಸ್ವಾರ್ಥಸಾಧನೆಯ  ಶಸ್ತ್ರವಾದಲ್ಲಿ,  ಗೌರೀಶರು  ತಕ್ಷಣ  ಪ್ರತಿಭಟಿಸಿದರು.  ಅವರ  ತಣ್ಣನೆಯ    ಪ್ರತಿಭಟನೆಯಲ್ಲಿಯೂ   ಒಂದು  ಶಿಸ್ತು  ಸೌಂದರ್ಯ, ಮತ್ತು  ಸಾತ್ವಿಕತೆಯಿತ್ತು.

       ಕೈಕಿಣಿ  ವಿಶ್ವವಿದ್ಯಾವಂತರಲ್ಲ.  ಅಂದರೆ  ಯಾವುದೇ  ವಿಶ್ವವಿದ್ಯಾಲಯದ  ವಕ್ತಾರರಲ್ಲ.  ಯಾವ  ಡಾಕ್ಟರೇಟ್‌  ವಾರಸುದಾರರಲ್ಲ.  ಪ್ರೌಢಶಾಲಾ  ಅಧ್ಯಾಪಕರಾಗಿ,  ಮುಖ್ಯಾಧ್ಯಾಪಕರಾಗಿ  ನಿವೃತ್ತರಾದವರು.  ಆದರೆ  ಅವರೇ  ಒಂದು  ನಡೆದಾಡುವ  ವಿಶ್ವವಿದ್ಯಾಲಯವಾಗಿ  ಬೆಳೆದವರು.   ತಮ್ಮ  ಊರು  ಗೋಕರ್ಣದಿಂದ   ಕಾರ್ಯಕ್ಷೇತ್ರವಾದ  ಬಂಕೀಕೊಡ್ಲು  ವರೆಗಿನ   ನಾಲ್ಕೈದು  ಕಿಲೋಮೀಟರ್‌  ದೂರವನ್ನು  ತಮ್ಮ  ವೃತ್ತಿಬದುಕಿಡೀ  ಕಾಲ್ನಡುಗೆಯಲ್ಲೇ   ಸಾಗಿಸಿದವರು.   ನಡೆಯುತ್ತಿರುವಾಗಲೇ   ಪ್ರತಿದಿನ  ಒಂದೊಂದು  ಪುಸ್ತಕವನ್ನು  ಓದಿ  ಮುಗಿಸಿದವರು.  ಅವರ  ಓದಿಗೆ  ಯಾವುದೇ  ಮಿತಿಗಳಿರಲಿಲ್ಲ.  ಧಾರ್ಮಿಕ  ವೈಚಾರಿಕ  ಆಧ್ಯಾತ್ಮಿಕ   ಶೈಕ್ಷಣಿಕ  ಕೃತಿಗಳೊಂದೇ  ಅಲ್ಲ,  ಕೃಷಿ  ಮತ್ತು  ವಿಜ್ಞಾನ  ಸಾಹಿತ್ಯಗಳೆಲ್ಲ  ಅವರ  ಮೇಧಾಪ್ರಪಂಚದ  ಒಡನಾಡಿಗಳಾಗಿದ್ದವು.  ಎಡ  ಬಲ  ಮದ್ಯ  ಎಂಬ  ಯಾವ  ತರತಮವಿಲ್ಲದ  ಅವರ  ಅಧ್ಯಯನದ  ವ್ಯಾಪ್ತಿ  ಗೋಕರ್ಣದ  ಸಮುದ್ರವನ್ನೂ  ಮೀರಿಸಿತ್ತು   ಎಂಬುದಕ್ಕೆ   ಅವರ  ಅಕ್ಷರಕಾಯಕದ   ಸಾವಿರ  ಸಾವಿರ  ಪುಟಗಳು  ಸಾಕ್ಷಿ  ನುಡಿಯುತ್ತಿವೆ.

     ಸುದೀರ್ಘ  ವೈದಿಕ  ಇತಿಹಾಸದಲ್ಲಿ   ವೇದಕಾಲಾನಂತರ   ಆಧುನಿಕ  ಕಾಲದವರೆಗೂ  ವೇದಭಾಷೆಯಲ್ಲಿಯೇ  ವೇದದ ಋಕ್ಕುಗಳನ್ನು  ತಮ್ಮ  ಧ್ಯಾನಸ್ಥ  ಕ್ಷಣದಲ್ಲಿ  ಕಂಡುಕೊಂಡ  ಗೋಕರ್ಣದ  ʻʻ ಬ್ರಹ್ಮರ್ಷಿ  ದೈವರಾತರುʼʼ  ಭಾರತೀಯ  ವಿದ್ವಾಂಸ  ವಲಯದಲ್ಲಿ  ಗಮನಸೆಳೆದಿದ್ದರು.  ಆಗಿನ  ಭಾರತದ  ರಾಷ್ಟ್ರಪತಿ  ಬಾಬೂ ರಾಜೇಂದ್ರ  ಪ್ರಸಾದ್‌,  ಡಾ- ಎಸ್.‌ ರಾಧಾಕೃಷ್ಣನ್‌  ರವರನ್ನೂ  ದೈವರಾತರ  ಸಾಧನೆ  ಗೋಕರ್ಣಕ್ಕೆ  ಆಕರ್ಷಿಸಿತ್ತು.   ಅಂಥ  ವಿಧ್ವಾಂಸರ  ಸಂಪರ್ಕದಲ್ಲಿ  ಗೌರೀಶರೂ  ಸಂಸ್ಕೃತ  ಮತ್ತು  ವೇದೋಪನಿಷತ್ ಗಳ  ಅಧ್ಯಯನ  ಗೈದಿದ್ದರು.   ಬ್ರ- ದೈವರಾತರ  ಸಾಧನೆ  ಸಿದ್ಧಿಗಳ  ಬಗೆಗೆ  ಲೇಖನಗಳನ್ನೂ  ಬರೆದಿದ್ದರು.   ಬ್ರ- ದೈವರಾತರ  ಗುರು   ವಾಸಿಷ್ಟ ಗಣಪತಿ  ಮುನಿಗಳೊಂದಿಗೂ   ಆತ್ಮೀಯ  ಸಂಬಂಧ ವನ್ನು  ಸ್ಥಾಪಿಸಿಕೊಂಡಿದ್ದ   ಗೌರೀಶರ  ವ್ಯಕ್ತಿತ್ವದ  ರೋಚಕ  ಆಯಾಮವೇ  ವಿಶೇಷ  ಅಧ್ಯಯನಕ್ಕೆ  ಅರ್ಹವಾಗಿದೆ.

      ಕನ್ನಡದ  ನವೋದಯ  ಕಾಲದಲ್ಲಿ  ಪ್ರಾರಂಭಗೊಂಡು,  ನವ್ಯ  ನವ್ಯೋತ್ತರಗಳಲ್ಲಿ  ಸುವಿಶಾಲವಾಗಿ  ಹಬ್ಬಿ  ಆರೋಗ್ಯ ಪೂರ್ಣ   ಚಿಂತನಶೀಲತೆಯಿಂದ , ಸೂಕ್ಷ್ಮ  ಸರಳ  ಆಳ  ವಿಸ್ತಾರಗಳಿಂದ   ಕನ್ನಡದ  ಧೀಮಂತ  ವಿಮರ್ಶಕರಾಗಿ, ಕವಿಯಾಗಿ,   ಬೆಳೆದು  ಬಾಳಿದ  ಗೌರೀಶ  ಕೈಕಿಣಿ,     ಉತ್ತರಕನ್ನಡದ  ಅನನ್ಯ  ಸೃಷ್ಟಿ.  ಅದ್ಭುತ  ಆಸ್ತಿ.

   ಪಾಶ್ಚಾತ್ಯರ  ಭೌತಿಕವಾದ,  ಭಾರತೀಯ  ಆಧ್ಯಾತ್ಮಿಕ ವಾದ  ಗಳೆರಡರ   ಒಂದು  ಕೃತಕ  ಕಾಲ್ಪನಿಕ  ವೈಚಾರಿಕ  ದ್ವೀಪಗಳನ್ನು  ಸೃಷ್ಟಿಸಿಕೊಂಡು,  ಭಾರತೀಯ  ಅಧ್ಯಾತ್ಮ  ಇಡೀ  ವಿಶ್ವವನ್ನು  ಪೊರೆಯುವ  ಅಸಾಮಾನ್ಯ  ಶಕ್ತಿ  ಎಂದು   ಸದಾ  ಘೋಷಿಸುತ್ತ,  ಅದರ  ಮರೆಯಲ್ಲಿ  ನಮ್ಮೆಲ್ಲ  ದೌರ್ಬಲ್ಯ  ಹತಾಶೆಗಳನ್ನು,  ಗುಲಾಮಗಿರಿಯನ್ನು,   ಅನಾಗರೀಕತೆಯನ್ನು ಮತ್ತು  ಅಜ್ಞಾನವನ್ನು   ಮುಚ್ಚಿಕೊಳ್ಳುವ   ವಿಫಲ  ಪ್ರಯತ್ನದಲ್ಲಿ   ಭಾರತ  ಮುಳುಗಿರುವಾಗ,   ನಮ್ಮ    ನೆಲದ  ನಿಜವಾದ  ಅಸ್ಮಿತೆಯನ್ನು  ಶೋಧಿಸುವ,   ನಮ್ಮ  ನಿಜವಾದ  ಸಂಸ್ಕೃತಿಯ, ಮತ್ತು  ನಮ್ಮ  ಬಹುತ್ವದ  ಅಗಾಧ  ಶಕ್ತಿಯನ್ನು  ಗುರುತಿಸುವ  ಬಹು  ಮುಖ್ಯವಾದ  ಪ್ರಕ್ರಿಯೆಯಲ್ಲಿ   ಗೌರೀಶ  ಕೈಕಿಣಿಯವರು  ತೊಡಗಿಕೊಂಡರು. 

     ಅವರ  ಅಗಾಧ  ಅಕ್ಷರ  ಕಾಯಕದ  ಆಳದಲ್ಲಿ,  ಮಾನವೀಯ  ಮೌಲ್ಯಗಳ  ಪ್ರತಿಪಾದನೆ ಕಂಡಾಗ ,   ಸದಾ  ತೆರೆಗಳ  ಮೃದು  ನೇವರಿಕೆಯಲ್ಲಿ,  ಗಾಢವಾದ  ಜೀವನಮೌಲ್ಯವನ್ನು  ಪ್ರತಿಪಾದಿಸುತ್ತಿರುವ  ಗೋಕರ್ಣದ  ಸಮುದ್ರವೇ  ಎದುರು  ನಿಲ್ಲುತ್ತದೆ. 

     ಅವರ  ಓದಿನ  ವಿಸ್ತಾರ  ಮೈನವಿರೇಳಿಸುತ್ತದೆ.  ಆಸ್ತಿಕ  ನಾಸ್ತಿಕ  ಭೇದವಿಲ್ಲದೇ   ಜಗತ್ತಿನ  ಎಲ್ಲ  ಜ್ಞಾನಮೂಲಗಳನ್ನು  ತಲಸ್ಪರ್ಶೀಯಾಗಿ  ಅಧ್ಯಯನ ಗೈಯ್ಯುತ್ತ,  ತಮ್ಮ  ಸಾಂಪ್ರದಾಯಿಕ  ಶಿಕ್ಷಣದ  ಮಿತಿಯನ್ನೂ  ಮೀರಿ  ಗೌರೀಶಂಕರದಷ್ಟು  ಎತ್ತರ  ಬೆಳೆದ,  ಗೌರೀಶರು   ಮುಂದಿನ  ತಲೆಮಾರಿನವರಾದ   ನಮಗೆಲ್ಲ  ಅವರೊಂದು  ಬೆರಗು, ಅವರು  ವಿಸ್ಮಯ.

      ಅವರ  ವಿಸ್ತಾರವಾದ  ಬರಹದ  ಕಾಯಕದ  ನಡುವೆ,   ಅವರ  ದೃಷ್ಟಿ  ಧೋರಣೆಗಳನ್ನು  ಅರ್ಥೈಸಿಕೊಳ್ಳುತ್ತಾ  ಹೋದ  ಹಾಗೇ,  ಕೇವಲ  ಎಡನಿಲುಮೆ  ಅಥವಾ  ಕೇವಲ  ಬಲದಿಕ್ಕು  ಎನ್ನುವುದಕ್ಕಿಂತ,  ಅವೆರಡನ್ನೂ  ಮೀರಿದ  ಅಪ್ಪಟ  ಮಾನವತಾ  ವಾದದ  ಆಹ್ಲಾದಕರ  ವಾತಾವರಣ  ಸೃಷ್ಟಿಗೊಳ್ಳುತ್ತದೆ.  ಗೌರೀಶರಲ್ಲಿ  ಯಾವುದೆ  ವಿಚಾರವಾದದ  ಅಂಧಾನುಕರಣವಿಲ್ಲ.  ನಿಸ್ಪಕ್ಷಪಾತ  ನಿರ್ದಿಷ್ಟ  ಖಚಿತವಾದ  ಧೋರಣೆಯಿದೆ.  ಎಲ್ಲವನ್ನೂ  ತಡಗುವ,  ಮುರಿದು  ಕಟ್ಟುವ,  ತುಂಟ  ಮಗುವಿನ  ಚುರುಕಿದೆ. 

    ʻʻ ಆಧ್ಯಾತ್ಮಿಕ  ಸಂಸ್ಕೃತಿ  ಎಂದರೇನು..?  ಅದೊಂದು  ಹುರುಳಿಲ್ಲದ  ಮಾತೆಂದು  ನನ್ನ ಮತ.  ಅಧ್ಯಾತ್ಮ  ಅಂದರೆ  ಆತ್ಮವನ್ನು  ಒಳಪಟ್ಟ  ವಿಷಯ.  ಆತ್ಮ ಅಂದರೆ  ಮನುಷ್ಯಕೋಟಿಗೇ  ಸಮಾನವಾದ  ಅಂಶ.  ಆದುದರಿಂದ  ಆತ್ಮದ  ಕುರಿತು  ನಮ್ಮ  ಭಾರತವು  ಏನೇ  ಸತ್ಯಗಳನ್ನು  ಶೋಧಿಸಿದ್ದರೂ   ಸಿದ್ಧಾಂತಗಳನ್ನು  ಮಂಡಿಸಿದ್ದರೂ   ಅವುಗಳಮೇಲೆ  ಇಡೀ  ಮನುಷ್ಯಕೋಟಿಯ  ಹಕ್ಕು  ಇರುತ್ತದೆ.   ಅಧ್ಯಾತ್ಮವು  ಒಂದು  ವಿದ್ಯೆ. ಎಲ್ಲ  ವಿದ್ಯೆಗಳಲ್ಲಿ  ಅದು  ಮಿಗಿಲಿರಬಹುದು.  ಆದರೂ  ಅದು ವಿದ್ಯೆಯೇ.   ವಿದ್ಯೆಯೆಂದಮೇಲೆ  ಅದಕ್ಕೆ  ಗಡಿಯ  ಮಿತಿ  ಇರುವುದಿಲ್ಲ. 

     ಹಾಗೆಂದು  ಸಂಸ್ಕೃತಿಗಾದರೆ  ಸೀಮಾ  ಬ‍ದ್ಧತೆಯಿರುತ್ತದೆ.  ದೇಶವಿಶಿಷ್ಟವಿರುತ್ತದೆ.  ಆದುದರಿಂದ  ಆಧ್ಯಾತ್ಮವು  ತತ್ವಜ್ಞಾನದಂತೆ.  ಗಣಿತದಂತೆ.  ವೈದ್ಯಕೀಯದಂತೆ,  ಸಂಸ್ಕೃತಿಯ  ಲಕ್ಷಣವಾಗಲಾರದು.   ಗುರುತ್ವಾಕರ್ಷಣೆಯನ್ನು  ಭಾಸ್ಕರಾಚಾರ್ಯ  ಕಂಡುಹಿಡಿಯಲಿ, ನ್ಯೂಟನ್‌  ನೋಡಿರಲಿ  ಅದು  ನಮ್ಮದೂ  ಅಲ್ಲ, ಇಂಗ್ಲೀಷರದ್ದೂ  ಅಲ್ಲ.  ಸೃಷ್ಟಿಯ  ನಿಯಮ. ವೈಜ್ಞಾನಿಕ  ಶೋಧ  ಸಿದ್ಧಾಂತಗಳೆಲ್ಲ  ಅಖಿಲ  ಮಾನವತೆಯ  ಸೊತ್ತು.  ಅಧ್ಯಾತ್ಮವೂ  ಹಾಗೆಯೇ.   ಆದುದರಿಂದ  ಆಧ್ಯಾತ್ಮಿಕ  ಸಂಸ್ಕೃತಿ  ನಮ್ಮದೊಂದೇ  ಎಂದರೆ   ʻವದತೋವ್ಯಾಘಾತʼ  ವಾಗುವ  ಮಾತು.ʼʼ

     ಎಂದು  ಉದ್ಗರಿಸುವ  ಗೌರೀಶರ  ಆಳದ  ಸಂವೇದನೆಯನ್ನು  ತಲಸ್ಪರ್ಶೀಯಾಗಿ  ಅರಿತಿದ್ದ   ಕನ್ನಡದ  ಕತೆಗಾರ  ಯಶವಂತ  ಚಿತ್ತಾಲರು,   ಶ್ರೀ  ವಿಷ್ಣು ನಾಯ್ಕರು  ಸಂಪಾದಿಸಿ  ಪ್ರಕಟಿಸಿದ  ಗೌರೀಶರ  ಸಮಗ್ರ  ಕೃತಿ  ಸಂಪುಟಕ್ಕೆ  ಬರೆದ  ಪ್ರಸ್ಥಾವನೆಯಲ್ಲಿ  

     ʻʻ ಮನಸ್ಸು  ಪ್ರಜ್ಞೆಯ  ಸ್ಥಿತಿಯನ್ನು   ಮುಟ್ಟಿದಾಗ  ಅದಕ್ಕೆ  ಆಸಕ್ತಿ  ಹುಟ್ಟುವುದು   ಬದುಕಿನ  ʻʻಅರ್ಥʼʼ ದಲ್ಲಿ,  ಅದರ  ಅರ್ಥಪೂರ್ಣತೆಯಲ್ಲಿ.   ಹೊರತು  ಅದರ  ವಾಸ್ತವಿಕತೆಯಲ್ಲಿ  ಅಲ್ಲ.   ಕೇವಲ  ವಸ್ತುವಾದದ್ದರಿಂದ  ಅಲ್ಲ.  ʻʻ  ನಮ್ಮನ್ನು  ಕತ್ತಲೆಯಿಂದ   ಬೆಳಕಿಗೆ  ಒಯ್ಯು ʼʼ  ಎನ್ನುವ  ನಮ್ಮ  ಪುರಾತನದ  ಪ್ರಾರ್ಥನೆ ,  ಹಾಗೂ  ʻʻ ನಮ್ಮನ್ನು  ವಾಸ್ತವಿಕತೆಯಿಂದ   ಅರ್ಥಪೂರ್ಣತೆಗೆ  ಕೊಂಡೊಯ್ಯು, ʼʼ  ( lead  me  from  facticity  to  meaning )   ಎನ್ನುವ  ಮಾನವತಾವಾದಿಗಳ  ಕೋರಿಕೆ,  ಎರಡೂ  ಸಮಾನ  ಅರ್ಥವುಳ್ಳವುಗಳೆಂದು   ನಾನು  ತಿಳಿಯುತ್ತೇನೆ.      ಅರ್ಥದಲ್ಲಿ    ಮನುಷ್ಯನ   ಬೌದ್ಧಿಕ  ಸಾಹಸದ  ಗುರಿ  ಕೂಡ   ಅಂತಿಮವಾಗಿ   ʻಆಧ್ಯಾತ್ಮಿಕʼ  ವಾಗಿದೆ ಎನ್ನಬಹುದು.  ಹಾಗೆಂದೇ  ಗೌರೀಶರ  ಸಾಹಿತ್ಯವನ್ನು  ಪ್ರಶ್ನೋಪನಿಷತ್‌  ಎಂದು  ಕರೆಯುವ   ತವಕವಾಗುತ್ತಿದೆ.ʼʼ ಎಂದು  ನುಡಿದಿದ್ದಾರೆ.

    ಭಾರತೀಯ  ಸಂಸ್ಕೃತಿಯು   ಆಧ್ಯಾತ್ಮಿಕವೇ... ?  ಎಂದು  ಪ್ರಬಲವಾಗಿ  ಪ್ರಶ್ನಿಸುತ್ತ,  ಸುದೀರ್ಘ  ಲೇಖನ ವೊಂದರಲ್ಲಿ  ಅವರು,  ಆಧ್ಯಾತ್ಮಿಕಕ್ಕೂ  ಸಂಸ್ಕೃತಿಗೂ  ಇರುವ  ಸಂಬಂಧ  ಮತ್ತು  ಭಿನ್ನತೆಯನ್ನು  ವಿವರಿಸುತ್ತಾರೆ.  ಜಗತ್ತಿನಾದ್ಯಂತ  ಅಲ್ಲಲ್ಲಿ  ಆಧ್ಯಾತ್ಮಿಕ  ವಿಚಾರಧಾರೆಯ  ಸಾಧಕರು  ಜನ್ಮಿಸಿದ್ದಾರೆ.  ಅವರು  ಅಲ್ಲಿದ್ದರು  ಎಂದ  ಮಾತ್ರಕ್ಕೆ    ಪ್ರದೇಶ  ಆಧ್ಯಾತ್ಮಿಕ  ಕ್ಷೇತ್ರವಾಗಲಾರದು.  ಎನ್ನುತ್ತಾರೆ.

     ʻʻ  ಇಲ್ಲಿ  ಇನ್ನೊಂದು  ಹೋಲಿಕೆಯನ್ನು  ನೋಡಬಹುದು.  ನಮ್ಮ  ಮತದಂತೇ  ಭಾರತವು  ಜಗತ್ತಿನ  ಇತರ  ಎಲ್ಲ  ರಾಷ್ಟ್ರಗಳಿಗಿಂತ  ಹೆಚ್ಚು  ಆಧ್ಯಾತ್ಮಿಕವಿದೆ.   ಅದರಂತೆಯೇ  ಅದು  ಎಲ್ಲರಿಗಿಂತ  ಹೆಚ್ಚು  ಅಜ್ಞಾನ  ಮತ್ತು  ಅಖಂಡ  ದಾರಿದ್ರ್ಯದಲ್ಲಿ  ತೊಳಲಾಡುತ್ತಿದೆ.   ಶತಕಗಳ  ಹಿಂದೆ  ಯುರೋಪವೂ  ಸಹ  ಅತಿಹೆಚ್ಚು  ಧಾರ್ಮಿಕವೂ  ಆಧ್ಯಾತ್ಮಿಕವೂ   ಇತ್ತು.   ಆಗ  ಅದು  ಹೆಚ್ಚು  ದರಿದ್ರವೂ  ದಡ್ಡತನದ್ದೂ  ಆಗಿತ್ತು.    ಅಜ್ಞಾನ  ಅನರ್ಥ  ಐಹಿಕ ದುರವಸ್ಥೆಯೂ  ಹೆಚ್ಚಿದಾಗ   ಹೆಚ್ಚಾದಲ್ಲಿ  ಆಧ್ಯಾತ್ಮಿಕತೆಯೂ  ಪಾರಲೌಕಿಕ  ಭಾವನೆಯೂ  ಹೆಚ್ಚಾಗುತ್ತದೆ.   ಸತ್ತೆ  ಸಂಪತ್ತು  ಸ್ವಾಸ್ಥ್ಯಗಳಿದ್ದಲ್ಲಿ  ಅದು  ಕಡಿಮೆ.  ನಾವು  ಇದನ್ನು  ಅವನತಿ  ತತ್ವಭೃಷ್ಟತೆ   ಎಂದು  ಹೀಯಾಳಿಸುವೆವು.  ಅದು  ನಮ್ಮ  ಶ್ರೇಷ್ಟತೆಯಲ್ಲ.  ನಮ್ಮ  ಸಾಮಾಜಿಕ  ದುರವಸ್ಥೆದಾರಿದ್ರ್ಯಗಳ  ಪರಿಣಾಮ  ಅದು.  ಹಸಿವೆ  ಹೆಣಗಾಟಗಳ  ಬೇನೆಯಲ್ಲಿ  ಬಳಲುವವರು  ಕಲ್ಪಿಸಿಕೊಂಡ   ಪನ್ನೀರು  ಅದು.  ಆದ್ದರಿಂದ   ನಮ್ಮ  ಸಂಸ್ಕೃತಿಯು  ಸ್ವಭಾವತಃ   ಆಧ್ಯಾತ್ಮಿಕವಲ್ಲ.  ಆಗಂತುಕವಾಗಿ  ಅಂಟಿಕೊಂಡ  ಅಧ್ಯಾತ್ಮವನ್ನು  ಹೋಗಲಾಡಿಸಿಕೊಂಡ  ಹೊರತು  ನಮಗೆ  ಅಭ್ಯುದಯದ   ಆರಂಭವಿಲ್ಲ.ʼʼ

    ಎಂದು  ಆತ್ಮವಿಶ್ವಾಸದಿಂದ  ಉದ್ಗೋಷಿಸಿದ   ಗೌರೀಶರು, ಹುಸಿ ಆಧ್ಯಾತ್ಮಿಕ  ಸೋಗಿನಲ್ಲಿ   ಸ್ವಾರ್ಥಿಗಳಾಗಿ  ಮೆರೆಯುತ್ತಿದ್ದ   ಧಾರ್ಮಿಕರನ್ನು  ಸಾತ್ವಿಕವಾಗಿ  ಖಂಡಿಸುತ್ತಲೇ   ಶ್ರೀ  ಅರವಿಂದರ  ಸಾಹಿತ್ಯವನ್ನು  ಅಧ್ಯಯನ  ಕೈಗೊಳ್ಳುತ್ತಾರೆ.   

  ಸಮಕಾಲೀನ  ಒಡನಾಡಿ  ಶಿರಸಿಯ  ಶ್ರೀ  ಎಮ್‌  ಪಿ  ಪಂಡಿತರು  ಅವರ  ಸ್ನೇಹಿತ  ವಲಯದಲ್ಲಿ  ಪ್ರಮುಖರು.  ಎಮ್‌ ಪಿ ಪಂಡಿತರು  ಬಾಲ್ಯದಿಂದಲೇ  ಅರವಿಂದಾಶ್ರಮದ  ಒಡನಾಟದಲ್ಲಿ  ಬೆಳೆದವರು.  ಗೌತಮ  ಬುದ್ಧನಿಗೆ  ಆನಂದ  ಎಂಬ  ನಿಷ್ಟಾವಂತ  ಶಿಷ್ಯನಿದ್ದಂತೆ   ಪಂಡಿತರು  ಅರವಿಂದರ  ಆಪ್ತ ಶಿಷ್ಯರಾಗಿದ್ದರು.  ಉತ್ತರಕನ್ನಡ  ಜಿಲ್ಲೆಗೆ  ಅರವಿಂದ  ತತ್ವಜ್ಞಾನದ  ಪ್ರವೇಶವಾದುದು  ಇದೇ  ಪಂಡಿತರ  ಮೂಲಕ.  ಶಿರಸಿಯ  ಪಂಡಿತ್‌  ಸಾರ್ವಜನಿಕ  ಆಸ್ಪತ್ರೆ,  ಶಾಲೆ,  ಕರ್ನಾಟಕದ  ಅತ್ಯಂತ  ಹಳೆಯ   ಪಂಡಿತ್‌  ಸಾರ್ವಜನಿಕ  ವಾಚನಾಲಯ  ಇವೆಲ್ಲ   ಇದೇ  ಪಂಡಿತರ  ಕೊಡುಗೆಯಾಗಿರುವುದನ್ನು  ನಾವಿಲ್ಲಿ  ಸ್ಮರಿಸಬಹುದಾಗಿದೆ.   ಎಮ್‌. ಪಿ. ಪಂಡಿತರೂ  ಸ್ವಥಃ  ಲೇಖಕರು.  ಅವರ  ಸುಮಾರು   ಅರವಿಂದ  ತತ್ವಜ್ಞಾನವನ್ನಾಧರಿಸಿದ   ೧೮    ಇಂಗ್ಲಿಶ್‌ ಕೃತಿಗಳು  ಪ್ರಕಟವಾಗಿವೆ.

        ಪಂಡಿತರ  ಮೂಲಕ  ಅರವಿಂದರ  ಪೂರ್ಣಯೋಗದ  ಸಮಗ್ರ  ಅಧ್ಯಯನವನ್ನ  ಗೌರೀಶರು   ಕೈಗೊಳ್ಳುತ್ತಾರೆ.  ಅರವಿಂದರ  ತಾತ್ವಿಕತೆಯ  ನಿಕಟತೆ  ಪಂಡಿತರ  ಮೂಲಕವೇ  ಆಯಿತೆನ್ನಬಹುದು.   ಅರವಿಂದರ   ʻʻ  ದಿವ್ಯ ಜೀವನʼʼ (The Life  Divine )  ದಿ ಸಿಂಥೆಸಿಸ್‌  ಆಫ್‌  ಯೋಗಾ,  ಸಾವಿತ್ರಿ  ಮಹಾ  ಕಾವ್ಯ ,  ದಿ ಎಸ್ಸೇ  ಆನ್  ದಿ  ಗೀತಾ, ‌ ದಿ  ಫೌಂಡೇಶನ್‌  ಆಪ್‌  ಇಂಡಿಯನ್‌  ಕಲ್ಚರ್‌,  ಆನ್‌    ವೇದಾ,  ದಿ. ಫ್ಯೂಚರ್‌  ಪೋಯೆಟ್ರಿ,    ಮುಂತಾದ  ಕೃತಿಗಳ  ಓದು  ಸಾಗಿತು.  ಆಗಲೇ  ಅರವಿಂದರ  ಸಾವಿತ್ರಿ  ಮಹಾಕಾವ್ಯ  ಮತ್ತು  ದಿವ್ಯ ಜೀವನ  ಕೃತಿಗಳು  ಕೋ  ಚನ್ನಬಸಪ್ಪನವರಿಂದ  ಅನುವಾದಿಸಲ್ಪಟ್ಟಿತ್ತು.   ಆದರೆ  ಜಾಗತಿಕವಾಗಿ  ಆಗಲೇ  ಗಮನಸೆಳೆದಿದ್ದ, ʻʻ ಭವಿಷ್ಯ ಕಾವ್ಯʼʼ ( Future  poetry )  ಕನ್ನಡಕ್ಕೆ  ಅನುವಾದವಾಗಿರಲಿಲ್ಲ.   ಅದಾಗಲೇ  ಗೌರೀಶರು  ಪಂಡಿತರಮೂಲಕ  ಪಡೆದು  ಓದಿಯಾಗಿತ್ತು.  ಪಂಡಿತರು  ಕನ್ನಡಕ್ಕೆ  ಅನುವಾದಿಸಲು  ಗೌರೀಶರನ್ನು  ಒತ್ತಾಯಿಸ  ತೊಡಗಿದರು. ಎಮ್.ಪಿ. ಪಂಡಿತರೇ  ಕೃತಿಯ  ಪ್ರಕಟಣೆಯ  ಜವಾಬ್ದಾರಿ  ವಹಿಸಿಕೊಂಡಿದ್ದರು.   ಗೌರೀಶರೂ  ನಿರಾಕರಿಸಲಿಲ್ಲ.  ಪ್ರಸ್ತುತ  ಬ್ರಹತ್‌  ಕೃತಿ ಯನ್ನು  ಕನ್ನಡಕ್ಕೆ  ಅನುವಾದಿಸಲು  ಪ್ರಾರಂಭಿಸಿದರು.  ಒಂದು ವರ್ಷ ಕಾಲಾವಧಿಯಲ್ಲಿ  ಅನುವಾದಿಸಿ  ಮುಗಿಸಿದರು.  ಮತ್ತೆ  ಪರಿಷ್ಕರಿಸುವ  ಕೆಲಸ  ಹಾಗೆಯೇ  ಉಳಿದಿತ್ತು.  ದುರ್ದೈವವಶಾತ್‌   ಎಮ್.ಪಿ.  ಪಂಡಿತರು  ಮೃತರಾದರು.   ಪ್ರಕಾಶನದ  ಕಾರ್ಯ  ಹಿಂದುಳಿಯಿತು.  ಅನುವಾದದ  ಹಸ್ತಪ್ರತಿ  ಕೋ. ಚೆ. ಯವರ  ಬಳಿಗೂ  ಹೋಗಿ  ಹಿಂದಿರುಗಿತು.  ಕರ್ನಾಟಕ  ವಿಶ್ವವಿದ್ಯಾಲಯ  ಪ್ರಕಟಣೆಗೆ  ಸಮ್ಮತಿ  ನೀಡಿ  ಹಸ್ತಪ್ರತಿಯನ್ನು  ಪಡೆದುಕೊಂಡಿತು.  ಆದರೆ  ನಾಲ್ಕಾರು  ವರ್ಷ  ಹಾಗೆಯೇ  ಉಳಿಯಿತು.  ವಿಶ್ವವಿದ್ಯಾಲಯದಿಂದ   ಹಸ್ತಪ್ರತಿಯನ್ನು  ಮರಳಿ  ಪಡೆಯಲೂ  ಹರಸಾಹಸ  ಪಡಬೇಕಾಯಿತು.   ಹಸ್ತಪ್ರತಿಯ  ಅಲೆದಾಟ  ನಿಲ್ಲಲಿಲ್ಲ.  ಪಾಂಡೀಚೇರಿ  ಅರವಿಂದ  ಆಶ್ರಮದ  ಪ್ರಕಟಣಾ  ವಿಭಾಗಕ್ಕೆ  ಹೋದರೂ  ಅಲ್ಲಿ  ಕನ್ನಡ  ಅಚ್ಚುಮೊಳೆಯಿಲ್ಲದ  ಪ್ರಯುಕ್ತ  ವರ್ಷಕಾಲ  ಉಳಿದು  ಮರಳಿ  ಗೌರೀಶರ  ಬಳಿಗೇ  ಬಂದು  ತಲುಪಿತು.  ಸರಿಸುಮಾರು  ಐದುನೂರು  ಪುಟಗಳ  ಹಸ್ತಪ್ರತಿ  ಹತ್ತಾರು  ದಿಕ್ಕಿಗೆ  ಅಲೆದಲೆದು,  ಅರ್ಧ  ಜೀರ್ಣವಾಗಿ  ಮರಳಿತ್ತು.    

     ಸಾಕಷ್ಟು  ತಡವಾಗಿ   ಅನುವಾದ ಕೃತಿಗೆ  ಪ್ರಕಟಣಾ ಭಾಗ್ಯವೊದಗಿದ್ದು,  ಗೌರೀಶರ  ಪ್ರಿಯ  ಶಿಷ್ಯ,  ಅರವಿಂದ  ಸಾಹಿತ್ಯದ  ಅಭ್ಯಾಸಿ   ವಿಜ್ಞಾನಿ  ಡಾ|| ಮಂಗೇಶ್‌  ನಾಡಕರ್ಣಿಯವರಿಂದ.  ೭೫ ರ  ಹರೆಯದಲ್ಲಿ  ಅನುವಾದಿಸಿದ  ಕೃತಿಗೆ  ಪ್ರಕಟಣಾ ಭಾಗ್ಯವೊದಗಿದ್ದು   ಗೌರೀಶರಿಗೆ  ೮೫ ವರ್ಷ  ತುಂಬಿದಾಗ.  ಮುಂಬಯಿಯಲ್ಲಿ  ಉದ್ಯೋಗದಲ್ಲಿದ್ದ  ಡಾ- ಮಂಗೇಶರಿಗೆ ,  ಗೌರೀಶರ  ಪ್ರಸ್ತುತ  ಅನುವಾದ  ಕೃತಿಗೆ  ಬಂದ  ಸಂಕಷ್ಟದ  ವಿವರ  ತಲುಪಿದಾಗ  ಅವರೇ  ಸ್ವಥಃ  ಗೌರೀಶರನ್ನು  ಸಂಪರ್ಕಿಸಿ,   ಪ್ರಕಟಣೆಯ  ಸಾಹಸಕ್ಕೆ  ಇಳಿದರು.  ಜೊತೆಗೆ ಗೌರೀಶರ  ಪ್ರೀತಿಗೆ  ಮಣಿದು   ಕೃತಿಗೆ   ಅವರೇ  ಅಧ್ಯಯನಪೂರ್ಣ  ಮುನ್ನುಡಿಯನ್ನೂ  ಬರೆದರು.

        ಡಾ- ನಾಡಕರ್ಣಿಯವರು  ತಮ್ಮ  ಸುದೀರ್ಘ  ಮುನ್ನುಡಿಯಲ್ಲಿ, 

ʻʻ ದಿ ಫ್ಯೂಚರ್‌ ಪೋಯಟ್ರಿಯು ʼʼ ಶ್ರೀ  ಅರವಿಂದರ  ವರಿಷ್ಟ  ಗದ್ಯಕೃತಿಗಳಲ್ಲೊಂದು.  ಇಂಥ  ವೀರ್ಯವಾನ್‌ ಕೃತಿಯನ್ನು  ಕನ್ನಡಕ್ಕೆ  ಇಳಿಸಿದ್ದಕ್ಕಾಗಿ  ಕನ್ನಡಿಗರೆಲ್ಲರೂ  ಶ್ರೀ  ಗೌರೀಶ್‌  ಕೈಕಿಣಿಯವರಿಗೆ ಕೃತಜ್ಞರಾಗಬೇಕು.  ಶ್ರೀ  ಅರವಿಂದರ  ಕೃತಿಯೊಂದನ್ನು  ಭಾರತೀಯ  ಭಾಷೆಯೊಂದಕ್ಕೆ  ಇಳಿಸುವುದೆಂದರೆ  ಸಹಸಾ  ಕಠಿಣ  ಕೆಲಸವೇ.  ಶ್ರೀ  ಅರವಿಂದರು  ಬಳಸಿದ  ಶಬ್ದಗಳ   ಭಾಷೆಯ  ಮಹೋನ್ನತಿ  ಮತ್ತು  ಅವರ  ಸಂಕೀರ್ಣ  ವಿಚಾರ ಸರಣಿಗಳು  ಭಾಷಾಂತರ ಕಾರನ  ಕೌಶಲ್ಯಕ್ಕೆ  ಗಂಭೀರ  ಆಹ್ವಾನ  ನೀಡುತ್ತವೆ. ಒಂದಿಷ್ಟು  ಪರಮ  ಮೂಲದ್ದೇ  ಎನ್ನಬಹುದಾದಂಥ  ಕೃತಿಯೊಂದನ್ನು  ಭಾಷಾಂತರಿಸಲೆತ್ನಿಸುವ  ಭಾಷಾಂತರಕಾರ, ಆತ  ಎಷ್ಟೇ  ನಿಷ್ಠನಾದರೂ , ತಾನು  ಆಯ್ದುಕೊಂಡ  ಮೂಲಕೃತಿಯ  ಭಾಷಾಸೌಷ್ಠವಕ್ಕೆ,  ಅದರ  ವಿಚಾರಸರಣಿಗೆ, ಸರಿಹೋಗುವಂತೇ  ಅನುವಾದದ  ಭಾಷೆಯನ್ನು  ಅಳವಡಿಸಿ ಕೊಳ್ಳಬೇಕಾಗುತ್ತದೆ. ಭಾಷಾಂತರ  ಪ್ರಕ್ರಿಯೆಯ     ಆಹ್ವಾನವನ್ನು  ಎದುರಿಸಲು  ಅವನು  ತನ್ನ  ಭಾಷಾಂತರದ  ಭಾಷೆಗೇ  ಹೊಸತಾದ  ಪ್ರವಚನ ( discourse ) ಪ್ರಕಾರವೊಂದನ್ನೂ  ಅದಕ್ಕೆ  ತಕ್ಕುದಾದ  ನುಡಿಗಟ್ಟನ್ನೂ  ಹುಟ್ಟಿಸಿ ಕೊಳ್ಳಬೇಕಾಗುತ್ತದೆ.  ಜೀವಮಾನವಿಡೀ  ಪರಿಶ್ರಮಿಸಿ  ಪಕ್ವಗೊಳಿಸಿಕೊಂಡ  ತಮ್ಮ ಕೌಶಲ್ಯವನ್ನು   ಗೌರೀಶರು  ನಮ್ಮೆದುರಿಗಿನ    ಕೃತಿರಚನೆಯಲ್ಲಿ  ದುಡಿಸಿಕೊಂಡಿದ್ದಾರೆ.  ಅಮೂರ್ತ ವಿಚಾರ  ಮತ್ತು  ಪರಿಕಲ್ಪನೆಗಳ  ಸಮರ್ಥ ಅಭಿವ್ಯಕ್ತಿಗೆ  ತಕ್ಕುದಾದ  ಹುರಿಕಟ್ಟು  ಗದ್ಯದ  ಉಪಯೋಗಕ್ಕೆ  ಅವರು  ಹೆಸರುವಾಸಿಯಾಗಿದ್ದಾರೆ.  ಶ್ರೀ  ಅರವಿಂದರ  ಕೃತಿಯನ್ನು  ಭಾಷಾಂತರಿಸಲು  ಗೌರೀಶರನ್ನು ಮೀರಿಸುವ  ಬೇರೊಬ್ಬ ಲೇಖಕನು  ಕನ್ನಡದಲ್ಲಿ  ಸಿಗಲಾರ.ʼʼಎಂದು  ಬಾಯ್ತುಂಬಿ  ಶ್ಲಾಘಿಸಿದ್ದಾರೆ.

      ಸಾಮಾನ್ಯವಾಗಿ   ನಮ್ಮ  ಕಾವ್ಯಮೀಮಾಂಸೆಯಲ್ಲಿ   ಕಾವ್ಯ  ಸೃಷ್ಟಿಗೊಳ್ಳುವ  ಪ್ರಕ್ರಿಯೆಯ  ಬಗೆಗೆ  ಒಂದು ಸಾಮಾನ್ಯ  ನಿಲುಮೆ  ಯೊಂದು  ರೂಪುಗೊಂಡಿದೆ.  ಅದರಲ್ಲಿ   ಪೂರ್ವ  ಪಶ್ಚಿಮ  ಭೇದವಿಲ್ಲ. ಆದರೆ  ಅರವಿಂದರ  ಕಾವ್ಯದೃಷ್ಟಿ  ಅನನ್ಯವಾದುದು.   ಆವರೆಗಿನ  ಕಾವ್ಯ  ಮೀಮಾಂಸೆಯನ್ನೂ  ಮೀರಿದ   ಹೊಸ  ವಿಸ್ತಾರ  ಹೊಸ  ಎತ್ತರವನ್ನು   ಜೊತೆಗೆ   ತಾತ್ವಿಕತೆಯ  ಆಳವನ್ನು  ತಲುಪುತ್ತದೆ.  

        ಕಲಾಕೃತಿಗಳಲ್ಲಿ   ಕಂಡುಕೊಳ್ಳಬಹುದಾದ   ಸೌಂದರ್ಯಾನುಭವದ  ವಿವಿಧ  ಮುಖಗಳನ್ನು  ವಿವೇಚಿಸುತ್ತಾ  ಮಹರ್ಷಿ  ಅರವಿಂದರು  ನಾಲ್ಕು  ಹಂತಗಳನ್ನು  ಗುರುತಿಸುತ್ತಾರೆ.

Sensual  Beauty--  ಇಂದ್ರಿಯ  ಸೌಂದರ್ಯ.   ಸುತ್ತಲಿನ  ಪರಿಸರ,  ಮಾನವ  ಬದುಕಿನ  ವಿವಿಧ  ಸಮಸ್ಯೆ  ಸಂಘರ್ಷಗಳನ್ನು   ಇಂದ್ರಿಯ  ಗ್ರಾಹ್ಯವಾಗುವಂತೇ  ಪುನಃ  ನಿರ್ಮಿಸುವ  ಶಕ್ತಿ   ಕಲಾಕೃತಿಯ  ಮೊದಲ  ಆಯಾಮ.

Imaginative  Beauty-  ಕಲ್ಪನಾ ಸೌಂದರ್ಯ.

ಜೀವನಾನುಭವ  ದಟ್ಟವಾದಷ್ಟೂ  ಅದು  ಕೇವಲ  ಇಂದ್ರಿಯಗಳ  ಪರಿಮಿತಿಯೊಳಗೆ  ಉಳಿಯದೇ  ಮೇಲಿನ  ಸ್ಥರಗಳಿಗೆ  ಏರುತ್ತದೆ.  ಇಲ್ಲಿ  ಪ್ರತಿಭೆ  ವಾಸ್ತವ  ಸತ್ಯದ  ಆಚೆ  ಇರುವ  ಅನುಭಾವ  ಸತ್ಯವನ್ನು  ಕಂಡುಕೊಳ್ಳುವ  ಆದರ್ಶ  ಚಿತ್ರಗಳನ್ನು  ನಿರ್ಮಿಸುತ್ತದೆ.

Intellectual Beauty-  ಬೌದ್ಧಿಕ  ಸೌಂದರ್ಯ       ಸೌಂದರ್ಯದ  ಅನುಭವ  ಕೇವಲ  ಭಾವಾವೇಶವಲ್ಲ.  ತತ್ವಜಿಜ್ಞಾಸೆಯ  ದರ್ಶನವನ್ನು  ಹಿನ್ನೆಲೆಯಾಗಿ  ಒದಗಿಸಿದಾಗ   ಕೃತಿಗೆ  ಗಟ್ಟಿತನ  ಒದಗುತ್ತದೆ.  ಅದಕ್ಕೆ ತಾತ್ವಿಕ  ಸೌಂದರ್ಯ  ಎಂದೂ  ಕರೆಯ ಬಹುದು.

Ideal  Beauty -  ಆದರ್ಶ  ಸೌಂದರ್ಯ.       ಇದನ್ನೂ  ಮೀರಿ  ಬೆಳೆಯುವಂಥಹದ್ದು  ಆದರ್ಶ ಸೌಂದರ್ಯ.   ಅಥವಾ  ದಾರ್ಶನಿಕ  ಸೌಂದರ್ಯ.   ಅದೇ   ಆತ್ಮಸೌಂದರ್ಯ..

   ಇವೆಲ್ಲ  ಬೇರೆ  ಬೇರೆಯಲ್ಲ.  ಕವಿ  ಬೆಳೆದಂತೇ  ಒಂದರೊಳಗೊಂದು  ವಿಲೀನಗೊಂಡು, ಅನನ್ಯತೆ  ಪಡೆಯುತ್ತವೆ.     ಎಲ್ಲ  ಚತುರ್ಮುಖ  ಸೌಂದರ್ಯವನ್ನು  ಪಡೆದ  ಕೃತಿಗಳು  ಚಿರಂತನವಾದ,  ಸಾರ್ವಕಾಲಿಕ  ಸೃಷ್ಟಿಯಾಗಿ  ಪರಿಣಮಿಸುತ್ತವೆ.   ( ಶ್ರೀ  ಅರವಿಂದ.)  (  ಅನು- ತಿಪ್ಪೇರುದ್ರ  ಸ್ವಾಮಿ)

      ಅರವಿಂದರ  ಫ್ಯೂಚರ್‌  ಪೋಯೆಟ್ರಿ  ಕೃತಿಯ  ವಿಶೇಷವಿರುವುದು   ಭಾರತೀಯ  ಕಣ್ಣಿನಲ್ಲಿ  ಪಾಶ್ಚಾತ್ಯ  ಕಾವ್ಯವನ್ನು  ಅರ್ಥೈಸಿದ್ದು.   ಆವರೆಗೆ     ನಂತರವೂ   ಮೆಕಾಲೆ  ಶಿಕ್ಷಣ  ಪಡೆದ  ಭಾರತೀಯ  ಇಂಗ್ಲಿಶ್‌  ವಿದ್ಯಾವಂತರು,  ಇಂಗ್ಲಿಶ್‌  ವಿಮರ್ಶಾ  ಮಾನದಂಡದಲ್ಲಿ  ಭಾರತೀಯ  ಕಾವ್ಯ  ಸಾಹಿತ್ಯಗಳನ್ನು, ಮೀಮಾಂಸೆಗಳನ್ನು,  ದೃಷ್ಟಿಸುವ,  ಪರಿಪಾಠ  ಬೆಳೆದಿತ್ತು.  ಭಾರತೀಯ  ಸಂಸ್ಕೃತಿ,  ಭಾರತೀಯ ಭಾಷೆ  ಮತ್ತು ಸಾಹಿತ್ಯಗಳೆಲ್ಲ  ದ್ವಿತೀಯ  ದರ್ಜೆಯದಾಗಿ  ಕಾಣತೊಡಗಿತ್ತು.  ಏಕಕಾಲದಲ್ಲಿ   ಸ್ವಾಮೀ  ವಿವೇಕಾನಂದರು,  ಮತ್ತು  ಅರವಿಂದರು,  ಬ್ರಿಟಿಶ್‌  ದಾಸ್ಯದಲ್ಲಿ  ಭಾರತೀಯ  ಅಸ್ಮಿತೆಯೇ  ಘಾಸಿ  ಗೊಂಡ  ಅಂದಿನ  ವಿಷಾದಮಯ  ವಾಸ್ತವದಲ್ಲಿ,  ವಿಸ್ಮೃತಿಗೆ  ಸೇರಿದ  ಭಾರತೀಯ  ತಾತ್ವಿಕ  ಸತ್ವವನ್ನು  ಪುನಃ  ಜಾಗ್ರತ ಗೊಳಿಸುವಲ್ಲಿ   ಪರಿಣಾಮಕಾರೀ  ಪಾತ್ರ  ವಹಿಸಿದ್ದು  ಉಜ್ವಲ  ಇತಿಹಾಸವಾಗಿದೆ. 

      ಇಂಗ್ಲಿಶ್‌  ಸಾಹಿತ್ಯವೊಂದೇ  ಸರ್ವಶ್ರೇಷ್ಠ ವೆಂದು   ಜಾಗತಿಕವಾಗಿ  ಬಿಂಬಿಸುತ್ತಿದ್ದ  ಬ್ರಿಟಿಶ್‌  ಮನೋಭಾವಕ್ಕೆ, ವಿರುದ್ಧವಾಗಿ   ಇಂಗ್ಲಿಶ್‌  ಸಾಹಿತ್ಯದ  ಮಿತಿ  ಮತ್ತು  ದೌರ್ಬಲ್ಯವನ್ನು  ಸಮರ್ಥವಾಗಿ  ಪ್ರತಿಪಾದಿಸಿದ  ಪ್ರಥಮ  ಭಾರತೀಯ  ಇಂಗ್ಲಿಶ್‌ ಲೇಖಕರಾಗಿ  ಅರವಿಂದರು  ಹೊರಹೊಮ್ಮಿದರು.  ಇಂಗ್ಲಿಶ್‌  ಕಾವ್ಯಗಳು  ಭಾಷೆ  ಛಂದಸ್ಸು  ತಂತ್ರ  ಮತ್ತು  ಸೌಂದರ್ಯದಲ್ಲಿ  ಔನ್ನತ್ಯ  ಸಾಧಿಸಿದರೂ  ಕಾವ್ಯದ  ಆತ್ಯಂತಿಕ  ಸ್ಥಿತಿಯನ್ನು  ತಲುಪಲು  ಸೋತಿವೆ  ಎಂಬುದನ್ನು  ಅರವಿಂದರು  ಪ್ರತಿಪಾದಿಸಿದರು.  ಗ್ರೀಕ್‌  ಲ್ಯಾಟೀನ್‌  ಪ್ರೆಂಚ್‌  ಭಾಷಾ ಪರಿಣತರಾದ  ಅರವಿಂದರು,    ಭಾಷೆಗಳ  ಆಧ್ಯಾತ್ಮಿಕ  ಸಾಧನೆಗಳು  ಇಂಗ್ಲಿಶ್‌  ಕಾವ್ಯಕ್ಕೆ  ಮಾದರಿಯಾಗಬೇಕು  ಎಂಬ  ಕಿವಿಮಾತನ್ನು   ತಮ್ಮ  ಕೃತಿಯಲ್ಲಿ  ನೀಡಿದ್ದಾರೆ. 

     ಗೌರೀಶ್‌  ಕೈಕಿಣಿಯವರು  ಸಹ   ಅರವಿಂದರ  ಆಳದಲ್ಲಿರುವ  ತಾತ್ವಿಕತೆ,  ಮಾನವೀಯತೆ  ಮತ್ತು  ಆಧ್ಯಾತ್ಮಿಕತೆ ಗಳ  ಆಳವನ್ನು  ಅರಿತಿರುವುದರಿಂದಲೇ   ಅಂಥದೊಂದು  ಅಪರೂಪದ  ಕೃತಿಯನ್ನು  ಕನ್ನಡಕ್ಕೆ  ಅನುವಾದಿಸುವ  ಪ್ರಕ್ರಿಯೆಯಲ್ಲಿ  ತೊಡಗಿಕೊಂಡರೆನ್ನಿಸುತ್ತಿದೆ.

   ಅರವಿಂದರು  ಕೇವಲ  ಸನ್ಯಾಸಿಗಳಲ್ಲ.  ದೇಶದ  ದಾಸ್ಯವನ್ನು  ಮುಕ್ತಗೊಳಿಸುವಲ್ಲಿ,  ತೀವ್ರಗಾಮಿಗಳಾದವರು.  ಅನಿವಾರ್ಯವಾದರೆ  ಹಿಂಸಾಮಾರ್ಗಿಗಳಾಗಲೂ  ಹಿಂಜರಿಯದವರು.   ರಾಜಕಾರಣಕ್ಕೂ  ಹೊಸ  ಹರಿವುನೀಡಿದವರು.   ವಂದೇ ಮಾತರಂ,   ಆರ್ಯ, ಮುಂತಾದ  ಪತ್ರಿಕೆಗಳ  ಸಂಪಾದಕರಾಗಿ,  ರಾಷ್ಟ್ರ  ಅಂತರರಾಷ್ಟ್ರ  ಮಟ್ಟದಲ್ಲಿ  ಗಮನಸೆಳೆದವರು.  ವಿಶ್ವದ  ಆರನೆಯ  ಮಹಾಕಾವ್ಯವೆಂದೆನ್ನಿಸಿಕೊಂಡಿರುವ   ಸಾವಿತ್ರಿ  ಮಹಾಕಾವ್ಯವನ್ನು   ಜಗತ್ತಿಗೆ  ನೀಡಿದವರು.

     ಭವಿಷ್ಯಕಾವ್ಯ  ಕಳೆದ  ಶತಮಾನದಲ್ಲಿ  ಜಾಗತಿಕ  ಸಾಹಿತ್ಯದಮೇಲೆ  ಮಾಡಿದ  ಪರಿಣಾಮ  ಚಿಕ್ಕದಲ್ಲ.  ಪಾಶ್ಚಾತ್ಯ  ಕವಿ  ವಿಮರ್ಶಕರಿಂದ  ಶ್ಲಾಘನೆಗೆ  ಒಳಗಾದ,  ಅತ್ಯಂತ  ಚರ್ಚಿತಗೊಂಡ  ಭಾರತೀಯ  ಇಂಗ್ಲಿಶ್‌  ಕೃತಿಗಳಲ್ಲಿ  ʻʻ ಫ್ಯೂಚರ್‌  ಪೋಯಟ್ರಿʼʼ  ಮೊದಲ  ಸಾಲಿಗೆ  ಸೇರುತ್ತದೆ.  ಭಾರತೀಯ  ಏಲ್ಲ  ಪ್ರಾದೇಶಿಕ  ಭಾಷೆಯ  ನವೋದಯ  ಸಾಹಿತ್ಯದ  ಮೇಲೆ  ಗಾಢ  ಪ್ರಭಾವಬೀರಿದ  ಏಕೈಕ  ಕೃತಿಯಿದು.  ಕನ್ನಡದ  ನವೋದಯದ  ಪ್ರಮುಖ  ಕವಿಗಳಾದ   ಬೇಂದ್ರೆ,  ಪುಟ್ಟಪ್ಪ,  ಗೋಕಾಕ , ಮಧುರ ಚನ್ನ,  ಮುಂತಾದ  ಅಸಂಖ್ಯ  ಕವಿಗಳ  ಸಂವೇದನೆಯನ್ನು  ಜಾಗ್ರತಗೊಳಿಸಿದ  ಕೃತಿಯಿದು.  ಬೇಂದ್ರೆಯವರು   ಮಹರ್ಷಿ  ಅರವಿಂದರ  ಕಾವ್ಯಗಳನ್ನು  ಕನ್ನಡಕ್ಕೆ  ಅನುವಾದಿಸಿದ್ದಾರೆ.  ನೋಬೆಲ್‌  ವಿಜೇತ   ಮಹಾಕವಿ   ರವೀಂದ್ರನಾಥ  ಠಕೂರ್‌  ಸ್ವಥಹ   ಅರವಿಂದರನ್ನು  ತಮ್ಮ  ಗುರುವಾಗಿ  ಪರಿಗಣಿಸಿದ್ದರು.

       ಅರವಿಂದರು  ತಮ್ಮ  ಭವಿಷ್ಯ ಕಾವ್ಯ  ಕೃತಿಯಲ್ಲಿ   ಕಾವ್ಯವೆಂದರೇನು,  ಕವಿಯೆಂದರೆ  ಯಾರು  ಎಂಬುದರ  ಬಗೆಗೆ  ನೀಡಿದ  ಅಭಿಪ್ರಾಯವನ್ನು  ಕೈಕಿಣಿಯವರ ಸುಂದರ  ಅನುವಾದದಲ್ಲಿ  ಸವಿಯುವಂತಿದೆ.  

     ʻʻ ಕವಿಯು  ದಾರ್ಶನಿಕನಿಂದ,  ಪವಾದಿಯಿಂದ, ಬೇರೆಯಾಗಿಯೇ  ನೋಡುವನು.  ಬೇರೇ ರೀತಿಯಲ್ಲಿ  ವಿಚಾರ  ಮಾಡುವನು. ಬೇರೊಂದು  ಬಗೆಯಲ್ಲಿ  ಧ್ವನಿಗೈಯ್ಯುವನು.  ಪ್ರವಾದಿ  ಸತ್ಯವನ್ನು  ದೇವರ ಆಜ್ಞೆಯಾಗಿ  ಘೋಷಿಸುವನು.  ಅವನು ಕೇವಲ ಸಂದೇಶ ವಾಹಕ.  ಆದರೆ  ಕವಿಯು ಸತ್ಯವನ್ನು  ಅದರ  ಸೌಂದರ್ಯದ  ಶಕ್ತಿಯಲ್ಲಿ  ಅದರ  ಪ್ರತೀಕದಲ್ಲಿ  ಪ್ರತಿಮೆಯಲ್ಲಿ  ಕಾಣಿಸುತ್ತಾನೆ.  ಅಥವಾ  ನಿಸರ್ಗದ  ಪ್ರಕ್ರಿಯೆಯಲ್ಲಿ  ಜೀವನದ  ಕ್ರಿಯೆಯಲ್ಲಿ,  ಅದನ್ನು  ಆವಿಷ್ಕರಿಸುತ್ತಾನೆ.  ( ಪು-೩೫)

    ಬುದ್ಧಿಯ  ಎರಡು  ಶಕ್ತಿಗಳಾದ  ತರ್ಕ  ಮತ್ತು  ಅಭಿರುಚಿ, ಗದ್ಯಶೈಲಿಯ  ಪರಮದೇವತೆಗಳಾಗಿರುವುದು  ಯುಕ್ತವೇ  ಸರಿ. ಆದರೆ  ಕವಿಗೆ  ಅವು  ಕಿರಿಯ ದೇವತೆಗಳು. ಕವಿಯು  ಹುಡುಕುವುದು  ಕೇವಲ  ಭಾವನೆಯನ್ನಲ್ಲ. ಭಾವನೆಯ  ಆತ್ಮವನ್ನು.  ಜೀವತ್ವವನ್ನು.(೧೪)

      ಯಾರಿಗೆ  ನಿಸರ್ಗ ಜೀವನ  ಮತ್ತು  ಮಾನವನ  ವಿಶಾಲ  ಬಲಿಷ್ಟ  ಅರ್ಥಪೂರ್ಣ  ಅಂತಃಪ್ರೇರಣೆಯ  ದರ್ಶನವಿರುವುದೋ ,-ಮತ್ತು  ಯಾರ ಕಾವ್ಯವು ಅದರಿಂದ  ಅದನ್ನು  ಆವಿಷ್ಕರಿಸುವ  ಪರಮೋಚ್ಛ ಉಕ್ತಿಯಲ್ಲಿ  ಮೂಡಿ  ಬಂದಿದೆಯೋ  ಅವರೇ  ಸರ್ವಶ್ರೇಷ್ಠ  ಕವಿಗಳು.(೩೨)

   ಕಾವ್ಯವು  ಶಬ್ಧ ಮತ್ತು  ಛಂದೋಗತಿಯ  ಉತ್ಕಟಾವಸ್ಥೆಯನ್ನು  ಸಾಧಿಸಿದರೆ  ಸಾಲದು.  ಅವುಗಳಿಗೆ ಪೂರಕವಾಗಿ  ಅದಕ್ಕೆ  ಸಂವಾದಿಯಾದ  ದರ್ಶನ ಅಗತ್ಯ. ಮತ್ತು  ಅದು  ಕವಿಯ ದರ್ಶನದ  ವೈಯಕ್ತಿಕ  ಸಾಮರ್ಥ್ಯವನ್ನೇ  ಅವಲಂಭಿಸಿ  ಇರುವುದಿಲ್ಲ.. ಆದರೆ  ಅವನ ದೇಶದ  ಮತ್ತು ಯುಗದ  ಮನಸ್ಸನ್ನು  ಅದರ  ವಿಚಾರದ  ಮತ್ತು  ಅನುಭವದ  ಪಾತಳಿಯನ್ನೂ  ಅದರ  ಪ್ರತೀಕಗಳ  ಪರ್ಯಾಪ್ತತೆಯನ್ನು,  ಅಧ್ಯಾತ್ಮಿಕ ಸಾಧನೆಯ ಆಳವನ್ನೂ  ಅವಲಂಬಿಸಿರುತ್ತದೆ.

   ಕವಿಯೆಂದರೆ  ಶಬ್ದವನ್ನು ತನ್ನ ಉಪಕರಣವಾಗಿಟ್ಟು ಕೊಂಡು, ಚಲುವಿನ  ಅನವರತ  ವೈವಿಧ್ಯದ ವೈಖರಿಯಲ್ಲಿ  ಸತ್ಯ ಮತ್ತು  ಸೌಂದರ್ಯಗಳ  ಸನಾತನ  ಸತ್ವವನ್ನು  ಅಭಿವ್ಯಕ್ತಿಸುವ  ಆತ್ಮ. (ಪು- ೪೩)

   ವಿವೇಚಕ  ವಿಚಾರ ತತ್ವಜ್ಞಾನಿಯ  ಸಾರಭೂತ ಪ್ರತಿಭಾ ಗುಣ.  ವಿಶ್ಲೇಷಣಾತ್ಮಕ  ಅವಲೋಕನೆ  ವಿಜ್ಞಾನಿಯ ಸಹಜ  ಪ್ರತಿಭೆ.  ದರ್ಶನ  ಕವಿಯಲಕ್ಷಣ. ಅದೇ  ಅವನ  ಶಕ್ತಿ. (೩೧)

    ನಾವು  ಎದುರು ನೋಡುವ  ಅಂತಃಪ್ರೇರಿತ  ಆತ್ಮಪ್ರಕಾಶಕ  ಕಾವ್ಯವು  ಚಿರಂತನ ಶಕ್ತಿಗಳ   ಪರಮ ಸಾಮರಸ್ಯವನ್ನು  ಧ್ವನಿಸುವುದು.  ಸತ್ಯ ,ಸೌಂದರ್ಯ, ಆನಂದ , ಜೀವನ, ಮತ್ತು  ಅಂತಃಶ್ಚೇತನ,  ಇವೇ  ನಿಜವಾಗಿಯೂ  ಮಹಾ  ಆದರ್ಶದ  ಪಂಚ  ದೀಪಗಳು.  ಪಂಚ  ಸೂರ್ಯರು. (ಪು-೨೩೫)

    ಕವಿಯೆಂದರೆ  ಕೇವಲ  ಪ್ರಾಸ  ಕಟ್ಟುವವನಲ್ಲ. ಜಂಗಮನಲ್ಲ.  ಅಥವಾ  ಶೃಂಗಾರ  ಕತೆಯ  ಗಾಯಕನಲ್ಲ.  ಅವನು  ಮೇಲು  ಮನಸ್ಸಿನ  ಆಚೆ  ನೋಡಬಲ್ಲವನು.  ಒಳ ಸತ್ಯವನ್ನು  ಪ್ರಕಟಿಸುವ  ಶಬ್ದವನ್ನು  ಕಾಣುವವನು.  ಕೇವಲ  ರಂಜನೀಯ  ಶಬ್ದವಲ್ಲ.   ದೀಪ್ತ  ದೀಪಕ  ಸ್ಫೂರ್ತಿದಾಯಕ ವಾಗಿ,  ಗೋಚರಿಸುವಂತೇ  ನಮ್ಮನ್ನು  ಒತ್ತಾಯಿಸುವವನು.  ಅಂಥ  ಸ್ಥಿತಿ  ತಲುಪುವುದೇ  ಕಾವ್ಯದ  ಸಾಧನೆ. (೨೬)

   ಕಾವ್ಯವು  ಮಂತ್ರವೆನಿಸುವುದು  ಅದರ  ಅಂತರ್ತಮ  ಸತ್ಯದ  ದನಿಯಾದಾಗಲೇ.  ಮತ್ತು ಸತ್ಯದ  ಮಾತಿನ  ಮತ್ತು  ಲಯದ  ಅತ್ಯುನ್ನತ  ಶಕ್ತಿಯಲ್ಲಿ  ರೂಪುಗೊಂಡಾಗಲೇ. (ಪು-೨೩೦)

   ಕವಿಯು  ಮಾನವನಿಗೆ  ಅವನ  ವರ್ತಮಾನವನ್ನು ಅರ್ಥೈಸಿಕೊಡುತ್ತಾನೆ.  ಅವನ ಗತಕಾಲವನ್ನು  ದರ್ಶಿಸುತ್ತಾನೆ.  ಜೊತೆಗೆ  ಭವಿಷ್ಯವನ್ನೂ  ಸೂಚಿಸುತ್ತಾನೆ. (ಪು-೨೩೪)

       ಇದು  ಸ್ತಿತ್ಯಂತರದ  ಸಮಯ.   ಅನಿಶ್ಚಿತ  ಸಂಕ್ರಮಣಾವಸ್ಥೆ.     ಶೇಕ್ಸಪಿಯರನೂ  ಅವನ  ಸಮಕಾಲೀನರೂ  ಮಾನವನ  ಚೇತನ   ಮತ್ತು  ಆತ್ಮದ,   ಸ್ವಯಂ ದರ್ಶನ,  ಸ್ವಯಂ  ಭಾವನೆ,  ಮತ್ತು  ಸ್ವಯಂ  ಚಿಂತನೆ, ಗಳ  ಉತ್ಕಂದಕ್ಕೆ  ಅವಕಾಶವನ್ನೂ  ಆಕಾರವನ್ನೂ  ಕೊಡುವಂತೇ   ಇಂಗ್ಲಿಷ್‌  ಭಾಷೆಯ ಕವಿವಾಣಿಯನ್ನು,  ಹೊಸ  ಎರಕದಲ್ಲಿ  ಹೊಯ್ದರು.  ಆದರೆ    ಸಮಯದಲ್ಲಿ  ಅದನ್ನು  ವಿಶ್ವದ   ಏಲ್ಲ  ಭಾಷೆಗಳಲ್ಲಿ,  ಮತ್ತೆ  ಮಾಡಬೇಕಾಗಿದೆ.

   ಕಾವ್ಯ  ಇದ್ದುದನ್ನು  ಉದ್ದೀಪಿಸುತ್ತದೆ. ಮನಸ್ಸಿಗೆ ಹೊಸ ಸಂವೇದನೆ  ನೀಡುತ್ತದೆ. ಕರುಳಿನ ಒಳಗೊಂದು  ಸುಖವಾದ  ಕಳವಳ,  ಮಿದುಳಿನಲ್ಲಿ  ಕ್ಷುಬ್ದ ತೃಪ್ತಿಯನ್ನುಂಟು  ಮಾಡುವ  ಶಕ್ತಿ  ಕಾವ್ಯಕ್ಕಿದೆ.( ಪು- ೨೪೧)

    ಕಾವ್ಯೋದ್ಗಾರದ  ಪ್ರಭುತ್ವ , ದೃಷ್ಟಾರವಾದ  ಮನಸ್ಸಿನದೇ  ಆಗಿರುತ್ತದೆ. ಆದರೆ    ಪಶ್ಯಂತಿ  ವಾಣಿಗೆ  ಅಥವಾ  ನೋಡುವ  ನುಡಿಗೆ, ದರ್ಶನದ  ಶಕ್ತಿಯ  ಮತ್ತು  ಅಭಿವ್ಯಕ್ತಿಯ, ಅನೇಕ ತರಗತಿಗಳಿವೆ.  ಮೊತ್ತ ಮೊದಲಿನ  ಮತ್ತು  ಅತಿ ಸರಳವಾದ  ಶಕ್ತಿಯು  ಸ್ಪಷ್ಟವಾದ  ಕಾವ್ಯಮಯ  ಪರ್ಯಾಪ್ತತೆಗೆ ಸೀಮಿತವಾಗಿದ್ದು ,  ತೀರ  ಕೆಳಮಟ್ಟದ  ಗದ್ಯದ  ಹೇಳಿಕೆ, ಯನ್ನ  ವಿಂಗಡಿಸಿ  ತೋರಿಸಲು  ಕಾರಣವಾಗುತ್ತದೆ. (ಪು-೩೧೫)

  ಕಾವ್ಯವು  ಜೀವನಕ್ಕೆ  ಪ್ರಾಮಾಣಿಕವಾಗಿ  ಇರಬೇಕೆಂದರೆ,  ತನ್ನ  ದರ್ಶನ  ಮತ್ತು  ಅಭಿವ್ಯಕ್ತಿಗಳನ್ನು  ಮಾತ್ರವಲ್ಲ. ತನ್ನ  ಲಯಬದ್ಧ  ಗತಿಯನ್ನೂ  ನೋಡಿಕೊಳ್ಳತಕ್ಕದ್ದು.   ಜೀವನದೊಂದಿಗೆ  ಒಂದು ಭಾವನಾತ್ಮಕವಾದ ಅನುರೂಪ  ಹೊಂದಾಣಿಕೆಯನ್ನು  ಸ್ಥಾಪಿಸಿಕೊಳ್ಳಬೇಕು.  ಅದು  ಜೀವನದೊಂದಿಗೆ  ಸರಿದು  ಜಿಗಿದು  ನಡೆದು  ಸಾಗಬೇಕು.  ಜೀವಂತತೆಯ  ಪ್ರತಿಯೊಂದು  ಹೆಜ್ಜೆಯ  ಎಲ್ಲ  ಏರಿಳಿವು  ತುಳಿತವನ್ನೂ ಉಂಟುಮಾಡಬೇಕು.  ಆಗ ಮಾತ್ರ  ಅತ್ಯಂತ ಹೊಸ  ರಸಪೂರ್ಣವಾದ, ವಿಶಾಲವಾದ,  ನಾದ  ಮಾಧುರ್ಯವು  ಲಭಿಸುವುದು.  ಅದರ  ನೇರ  ಮತ್ತು  ಪ್ರಾಮಾಣಿಕ  ಸಾಮರ್ಥ್ಯದ  ಹೋಲಿಕೆಯಲ್ಲಿ  ಹಳೆಯ  ಕೃತಕತೆ  ಸುಳ್ಳುಗಳು  ಕರಗಿ ಬಾಡುತ್ತವೆ.   ಇಲ್ಲಿ  ನಮ್ಮ ಬೇಡಿಕೆ  ಸೌಂದರ್ಯದ್ದಲ್ಲ.    ಸಾಮರ್ಥ್ಯದ್ದು.   ಪ್ರೀತಿಯದ್ದು.  (೨೪೨)

ಕಾವ್ಯದ  ದನಿಯು  ನಮಗಿಂತಲೂ  ಎತ್ತರವಾದ  ಒಂದು  ಸೀಮೆಯಿಂದ  ಬರುತ್ತದೆ. ಅದು  ನಮ್ಮ  ವೈಯಕ್ತಿಕ  ಬುದ್ಧಿಗಿಂತ  ಆಚೆಯ  ಮೇಲಿನ  ನಮ್ಮದೇ  ಜೈವಿಕ  ಪಾತಳಿ  ವಸ್ತುಗಳನ್ನು  ಅವುಗಳ  ಅಂತರ್ತಮ   ಅತಿ ವಿಶಾಲ ಸತ್ಯದಲ್ಲಿ  ಆಧ್ಯಾತ್ಮಿಕ  ತಾದಾತ್ಮ್ಯತೆಯಿಂದ   ಸಮುಜ್ವಲ  ಪ್ರಭಾಸ್ಫೋಟ ಮತ್ತು  ಪರಮಾನಂದದ  ಉದ್ರೇಕದೊಂದಿಗೆ  ಕಂಡುಕೊಳ್ಳುವ  ಅಧಿಮಾನಸವದು.  ಅದರ  ಸಹಜ  ಭಾಷೆಯೇ  ಆತ್ಮಪ್ರಕಾಶಿತವಾದ,  ಉತ್‌ ಸ್ಫೂರ್ತವಾದ,  ಅಂತಃಪ್ರೇರಿತವಾದ  ಶಬ್ದ  ಅಷ್ಟೆ..(೩೨೫)

      ಕವಿಯ  ದರ್ಶನವು ಮಾನವೀಯ  ಮನಸ್ಸಿನ  ವಿಕಾಸವನ್ನು  ಅನುಸರಿಸುತ್ತದೆ.  ತನ್ನ  ಯುಗ  ಮತ್ತು  ಪರಿಸ್ಥಿತಿಗೆ  ಹೊಂದಿಕೊಂಡು ತನಗೆ  ತಕ್ಕ ಪಾತಳಿಗಳನ್ನು  ಆರೋಹ   ಅವರೋಹಗಳ  ತಿರುವುಗಳನ್ನು  ಹೊಂದಿರುತ್ತದೆ.(೩೯)

    ಕಾವ್ಯವು  ಜೀವನಕ್ಕೆ  ಪ್ರಾಮಾಣಿಕವಾಗಿರಬೇಕೆಂದರೆ,  ತನ್ನ  ದರ್ಶನ  ಮತ್ತು  ಅಭಿವ್ಯಕ್ತಿಗಳನ್ನು ಮಾತ್ರವಲ್ಲ,  ತನ್ನ  ಲಯಬದ್ಧ  ಗತಿಯನ್ನೂ  ನೋಡಿಕೊಳ್ಳತಕ್ಕದ್ದು.  ಜೀವನದೊಂದಿಗೆ  ಭಾವನಾತ್ಮಕ  ಅನುರೂಪ ವಾದ  ಹೊಂದಾಣಿಕೆಯನ್ನು  ಸ್ಥಾಪಿಸಿಕೊಳ್ಳಲೇ  ಬೇಕು.   ಅದು  ಬದುಕಿನೊಂದಿಗೆ, ಸರಿದು  ಜಿಗಿದು  ಜೊತೆಸಾಗಬೇಕು.   ಜೀವಂತತೆಯ  ಪ್ತತಿಯೊಂದು  ಹೆಜ್ಜೆಯ  ಧಡಾರ  ಎಡವು  ದಟ್ಟಡಿ  ಮತ್ತು  ತುಳಿತವನ್ನೂ  ಅನುಭವಕ್ಕೆ  ತರಲೇ ಬೇಕು.  (ಪು- ೨೪೨)

,    ಶ್ರೇಷ್ಠ  ಕಾವ್ಯ  ಬುದ್ಧಿಯ  ವಿಚಾರಗಳನ್ನು  ಮಾತ್ರವಲ್ಲ,  ಅವನಲ್ಲಿಯ  ಇನ್ನೂ  ಉನ್ನತವಾದ  ವಿಶಾಲವಾದ ಆತ್ಮದ  .   ಕಾವ್ಯವು  ಶಬ್ದದ  ಮುಖಾಂತರ  ಆತ್ಮಸತ್ವದ  ದ್ವಾರವನ್ನು  ತೆರೆಯುತ್ತದೆ. ( ಪು- ೧೪)

       ಮೂರುನೂರಾ  ಮೂವತ್ತೇಳು  ಪುಟಗಳಲ್ಲಿ  ಅರವಿಂದರ    ಕಾವ್ಯದ ಕನಸು  ಅಪ್ಯಾಯಮಾನವಾಗಿ  ಪ್ರವಹಿಸುತ್ತವೆ.  ಪ್ರತೀ  ಪುಟ ಪುಟದಲ್ಲೂ  ಆಕರ್ಷಿಸುವ   ಕಾವ್ಯದ  ಮೇಲಣ  ಉದ್ಘೋಷ, ಮನಸ್ಸಿನಲ್ಲಿ  ಮತ್ತೆ  ಮತ್ತೆ  ಅನುರಣನಗೊಳ್ಳುತ್ತದೆ. 

    ಮಹಾಕವಿ, ತತ್ವಜ್ಞಾನಿ ಶ್ರೀ-  ಅರವಿಂದರ  ಗಾಢ  ಪ್ರಭಾವಕ್ಕೊಳಗಾದ  ಕುವೆಂಪು,  ಹೃದಯಪೂರ್ವಕವಾಗಿ  ನಮನ ಸಲ್ಲಿಸಿರುವುದನ್ನು ಇಲ್ಲಿ  ಉದಹರಿಸಲೇ  ಬೇಕು.

    

 

ʻʻ ಕಂಡೆ ನಾನೊಂದು ನವ ಹಿಮಾಲಯದ ಉದಯಂ / ಈಂಟಿತಾಟ್ಲಾಂಟಿಕಾಂಭೋದಿಯಂ., ಪೀರ್ದುದಾ  /

ಫೆಸಿಪಕ್‌ ಮಹಾಸಾಗರದ  ದೈತ್ಯ ಜೀವಮಂ / ಮೂಡಿ  ಮುಡಿಯೆತ್ತಿತಾ  ಬಂಗಾಳ  ಕೊಲ್ಲಿಯಿಂ /

ಏರಿದುದು ಭಾರತಾಂಬೆಯ ದಕ್ಷಿಣಾಂಕಮಂ / ಮಸ್ತಕದ  ರಜತ ಶೀತಲ ಮಹದ್‌  ಗೋಪುರಾಗ್ರದ /

ಉಗ್ರ ಬಿಜಯಕೆ ದ್ಯುಮಂಡಳಂ ಬಿರಿಯೆ, ಸ್ವರ್ಗಾಗ್ನಿ / ಮರ್ತ್ಯ ಹೃದಯಕೆ ಸುರಿಯೆ ಚತ್ತಪೋ ಜ್ವಾಲೆಯಂ.ʼʼ

 ( ದಿವ್ಯಜೀವನ  ಕೃತಿಗೆ  ಪ್ರತಿಕ್ರಿಯೆ )

      ಹೇ  ಪೂರ್ಣ  ಯೋಗೀಂದ್ರ / ಕೊನೆಗೆ  ನಿನ್ನೀ ಮೇರು ಕೃತಿಯ ದರ್ಶನ ಶಿರದ /  

ಮೇರುವುನ್ನತ ಮತಿಯ / ಮಾನಸ  ಸರೋವರದಿ/ ಪೂರ್ಣ ತೃಪ್ತಿಯನೀಂಟಿ ಶಾಂತವಾದುದು ನನ್ನ ಧೀತೃಷ್ಣೆ./

 ( ʻʻಶ್ರೀ  ಅರವಿಂದರಿಗೆʼʼ ಕವನ )

    ದಿ. ಗೌರೀಶ್‌  ಕೈಕಿಣಿ   ಪ್ರಸ್ತುತ  ಅರವಿಂದರ  ಕೃತಿಯನ್ನು  ಅನುವಾದಿಸುವ  ಮೂಲಕ  ನಮ್ಮೊಳಗೆ  ಸದಾ  ಜೀವಂತವಾಗಿರುತ್ತಾರೆ.  ಆದರೆ  ಅವರ ಹೆಸರಿನಲ್ಲಿಯೇ  ಸೃಷ್ಟಿಯಾದ  ಕೈಕಿಣಿ  ಪ್ರತಿಷ್ಠಾನ  ಸದ್ಯ  ಸ್ಥಗಿತಗೊಂಡಿದೆ.  ಇಡೀ  ಕನ್ನಡ  ನಾಡು  ಅವರನ್ನು  ಒಂದು  ದೃಷ್ಟಿಯಲ್ಲಿ  ವಿಸ್ಮೃತಿಯ  ಕತ್ತಲಿಗೆ  ಸೇರಿಸುತ್ತಿದೆ.  ಗೌರೀಶರ  ಸಿದ್ಧಿ  ಸಾಧನೆಯನ್ನು  ಜೀವಂತವಾಗಿರಿಸಲು,  ಅಗಾಧವಾದ  ಅವರ  ಅಕ್ಷರ ಸೇವೆಯನ್ನು  ಮುಂದಿನ  ತಲೆಮಾರಿಗೆ  ಪರಿಚಯಿಸಲು  ಇನ್ನೂ  ಹಸ್ತಪ್ರತಿಯಲ್ಲೇ  ಇರುವ ಸಾಹಿತ್ಯವನ್ನು  ಪ್ರಕಟಿಸುವ,   ವೈಚಾರಿಕತೆ  ಮತ್ತು  ಸಾಂಸ್ಕೃತಿಕತೆಯನ್ನು  ಆಮೂಲಕ  ಜೀವಂತವಾಗಿಸುವ   ಪ್ರಕ್ರಿಯೆ  ಇನ್ನಾದರೂ  ಪ್ರಾರಂಭವಾಗಬೇಕಿದೆ.  ಗೌರೀಶರನ್ನು  ನಿಜವಾದ  ಅರ್ಥದಲ್ಲಿ   ಜೀವಂತವಾಗಿರಿಸುವ  ಅರ್ಥಪೂರ್ಣ  ಪ್ರಕ್ರಿಯೆಯನ್ನು,  ತಮ್ಮ  ಮಿತಿಯಲ್ಲಿ,  ಕವಿ  ವಿಷ್ಣುನಾಯಕರು   ಪ್ರಾರಂಭಿಸಿದ್ದು  ನಿಜಕ್ಕೂ  ಶ್ಲಾಘನೀಯ.  ಅದು  ಅವರ  ಏಕವ್ಯಕ್ತಿ  ಸಾಹಸ.  ಸಮಗ್ರ ಜಿಲ್ಲೆ    ನಿಟ್ಟಿನಲ್ಲಿ  ಒಟ್ಟಾಗಿ  ವಿಷ್ಣುನಾಯಕರ  ಬೆನ್ನಿಗೆ  ನಿಲ್ಲಬೇಕಿದೆ.  ಕೈಕಿಣಿಯವರ  ಅಗಾಧ  ಸಾಹಿತ್ಯಿಕ  ಸಾಧನೆಯನ್ನು, ಮತ್ತು  ಅವರ  ಅಪೂರ್ವ  ವ್ಯಕ್ತಿತ್ವವನ್ನು   ಮರೆತರೆ,  ನಮ್ಮ  ತಲೆಮಾರು  ಬಹುದೊಡ್ಡ  ಅಪರಾಧ  ಗೈದಂತೆ.  ನಮ್ಮ  ಅಸ್ಮಿತೆಯನ್ನೇ  ನಾವು  ಕಳೆದು  ಕೊಂಡಂತೆ.

-------------------------               --------------------------------------

        ೧-೧೧-೨೦೨೧.

    ಕನ್ನಡ  ರಾಜ್ಯೋತ್ಸವ.                                       ಸುಬ್ರಾಯ  ಮತ್ತೀಹಳ್ಳಿ.

No comments:

Post a Comment