Tuesday 26 September 2023

ಧಾರ್ಮಿಕತೆ ಮತ್ತು ಮಾನವತೆಯ ನಡುವಿನ ದ್ವಂದ್ವ ʻʻಯಶೋಧರಾ..ʼʼ

 

      ಕಕ್ಕಿರಿದು  ಸೇರಿದ  ಪ್ರೇಕ್ಷಕರ  ನಡುವೆ,  ಸರಳ  ಸುಂದರ ಸಾಂಕೇತಿಕ  ರಂಗಸಜ್ಜಿಕೆ,  ನೇತ್ರಾನಂದ  ನೀಡುವ  ವರ್ಣಮಯ  ಬೆಳಕು,  ಅವಶ್ಯಕತೆಗೆ  ಎಷ್ಟು ಬೇಕೋ  ಅಷ್ಟೇ  ಸಂಗೀತ;  ಪ್ರತಿಯೊಂದು  ಪಾತ್ರಗಳ  ಮಿತಿಯರಿತ  ಅಭಿನಯ,  ಸುಪ್ರಸಿದ್ಧ  ಯುವ  ನಾಟಕ  ನಿರ್ದೇಶಕ   ಡಾ. ಶ್ರೀಪಾದ ಭಟ್ಟರ  ನಿರ್ದೇಶನದಲ್ಲಿ, ಶಿರಸಿ  ನಗರದ  ಗಣೇಶ  ನೇತ್ರಾಲಯದ   ನಯನ  ಸಭಾಂಗಣದಲ್ಲಿ  ಒಂದೇ ದಿನ  ಎರಡೆರಡು  ರಂಗಪ್ರಯೋಗಗಳಾದವು

      ʻʻ ಕೇವಲ  ದೈಹಿಕ  ಚಿಕಿತ್ಸೆಯೊಂದೇ  ಅಲ್ಲ,  ಸಾಂಸ್ಕೃತಿಕ  ಚಿಕಿತ್ಸೆಯೂ   ಸಮುದಾಯಕ್ಕೆ  ಅವಶ್ಯʼʼ   ಎಂಬ  ಅರ್ಥಪೂರ್ಣ  ಸಂದೇಶವನ್ನು   ಕಳೆದ   ಒಂದು  ದಶಕದಿಂದಲೇ   ಉತ್ತರಕನ್ನಡದ  ವೈದ್ಯಸಮುದಾಯ,  ಜನಮಾನಸದಲ್ಲಿ  ಬಿತ್ತುತ್ತಿದೆ. ಮೊನ್ನೆ  ಮೊನ್ನೆ  ಶಿರಸಿಯಲ್ಲಿ    ವೈದ್ಯಕೀಯ  ವೃತ್ತಿಯ  ಹತ್ತು  ಹಲವು  ಸವಾಲುಗಳ  ನಡುವೆಯೂ     ವೈದ್ಯ  ಬಂಧುಗಳು,  ಯಶೋಧರೆ   ನಾಟಕದ  ಅರ್ಥಪೂರ್ಣ  ಪ್ರಯೋಗದೊಂದಿಗೆ   ಮತ್ತೊಮ್ಮೆ  ಸಾಕ್ಷಿಯಾದರು.   ಕೋವಿಡ್‌  ಸೃಷ್ಟಿಸಿದ  ಶೂನ್ಯ,  ಆತಂಕ  ಭಯಗಳು   ಇದೀಗಮಾತ್ರ  ಸಡಿಲಗೊಳ್ಳುತ್ತಿರುವಂತೇ,  ಜಾಗ್ರತಗೊಂಡ  ಭಾರತೀಯ  ವೈದ್ಯ ಸಂಘ  ಮತ್ತು  ರೋಟರಿ ಸಂಸ್ಥೆ  ಶಿರಸಿ  ಇವರಮೂಲಕ    ಮತ್ತೆ   ಸಾಂಸ್ಕೃತಿಕ  ಚಟುವಟಿಕೆ  ಮೆಲ್ಲನೆ  ಅರಳಲು  ಪ್ರಾರಂಭಗೊಂಡಿದೆ.

      ಸಾಮ್ರಾಜ್ಯ ದಾಹ,  ಯುದ್ಧ  ಹಿಂಸೆ,ಯಾತನೆ  ಮಾರಕ ರೋಗ ರುಜಿನ,  ದಾರಿದ್ರ್ಯ, ಮತ  ಧರ್ಮಗಳ  ಮೂಢ  ಆಚರಣೆ ಗಳಲ್ಲಿ,  ಭಾರತೀಯ  ಜನಸಮುದಾಯ  ತಲ್ಲಣ  ಗೊಂಡ  ಕಾಲಕ್ಕೆ  ಸರಿಯಾಗಿ,  ಸಿದ್ಧಾರ್ಥನೆಂಬ  ಯುವಕ  ಬುದ್ಧನಾಗಿ  ತತ್ವ ಮತ್ತು  ಸಿದ್ಧಾಂತಗಳೊಂದಿಗೆ,  ಬದುಕಿಗೊಂದು  ಹೊಸ  ಚಲನೆ  ಹೊಸ  ಹರಿವು  ನೀಡಿದ್ದು  ಭಾರತೀಯ  ಇತಿಹಾಸದ  ಸುವರ್ಣ  ಕ್ಷಣ.   ಯಾವುದೇ  ಮಾನವೀಯ  ಸಿದ್ಧಾಂತದ  ಪ್ರವಾಹವಾದರೂ  ಅದರ  ಒಡಲಲ್ಲಿಯೇ  ದೌರ್ಬಲ್ಯ ಮತ್ತು  ಶೋಷಣೆಯ  ಬೀಜವೂ  ಅಡಗಿರುತ್ತದೆ   ಎಂಬುದಕ್ಕೆ,  ಬೌದ್ಧಧರ್ಮವೂ   ಇತಿಹಾಸದಲ್ಲಿ  ಸಾಕ್ಷಿನುಡಿಯುತ್ತದೆ.   ಎಲ್ಲ  ಸೈದ್ಧಾಂತಿಕ  ಕ್ರಾಂತಿಗಳನ್ನು   ಸೂಕ್ಷ್ಮವಾಗಿ  ಪರಿಶೀಲಿಸಿದರೆ,  ಕೊನೆಗೂ  ವ್ಯಕ್ತಿ  ತನ್ನೊಳಗೊಂದು   ಬೌದ್ಧಿಕ  ಎಚ್ಚರವನ್ನು  ಸದಾ  ಜೀವಂತವಾಗಿ  ಇರಿಸಿಕೊಳ್ಳಬೇಕೆಂಬ  ಸಂದೇಶ  ದೊರಕುತ್ತದೆ. 

     ಯಶೋಧರೆ  ನಾಟಕದ  ಸಂದೇಶವೂ  ಅದೇ  ಆಗಿದೆ.  ಸ್ವಥಃ  ಬುದ್ಧ  ಜಗತ್ತಿಗೆ  ಹೊಸ ಬೆಳಕು  ನೀಡಿದರೂ,  ತನ್ನ  ಕುಟುಂಬದ  ಮೂಲಕ್ಕೇ  ಕತ್ತಲೆಯ  ಮೊತ್ತವಾಗಿಬಿಡುತ್ತಾನೆ.  ಅದಕ್ಕೆ  ಯಶೋಧರೆಯೇ  ಸಾಕ್ಷಿಯಾಗುತ್ತಾಳೆ.

      ಮೂವತ್ತರ  ದಶಕದಲ್ಲಿ  ಮಾಸ್ತಿಯವರು  ವಿಶೇಷವಾಗಿ,  ಯಶೋಧರೆಯ  ವಿರಹ, ನೋವು, ಅಪಮಾನ  ತಲ್ಲಣಗಳನ್ನು  ಧ್ವನಿಸುತ್ತಾ,  ಹೇಳದೇ  ರಾತ್ರೋರಾತ್ರಿ ಕಟ್ಟಿಕೊಂಡ  ಹೆಂಡತಿ  ಮಕ್ಕಳನ್ನು,  ಬಿಟ್ಟುಹೋದ   ಬುದ್ಧನ  ವ್ಯಕ್ತಿತ್ವವನ್ನು     ವರ್ತಮಾನದ  ಧಾರ್ಮಿಕ  ಗೊಂದಲಗಳೊಂದಿಗೆ  ಸಮೀಕರಿಸುತ್ತಾ   ನಿಜವಾದ  ಧರ್ಮ ಅಂದರೆ  ಯಾವುದು  ಎಂಬ  ಪ್ರಶ್ನೆ  ಓದುಗರಲ್ಲಿ,  ಪ್ರೇಕ್ಷಕರಲ್ಲಿ  ಮೂಡುವಂತಾಗಲು  ಕಾರಣರಾಗುತ್ತಾರೆ.    

      ಮಾನವೀಯ   ಮೌಲ್ಯಗಳ,  ಸರಳ  ಸುಂದರ  ಪ್ರತಿಮೆ  ಬುದ್ಧ.   ವಿವಿಧ  ನಾಟಕಕಾರರ  ಸಾಕಷ್ಟು  ನಾಟಕ  ಕೃತಿಗಳು   ಕನ್ನಡದ  ಸಾಂಪ್ರದಾಯಿಕ  ರಂಗಭೂಮಿಯಲ್ಲಿ   ಪ್ರಯೋಗಗೊಂಡಿವೆ.   ಐವತ್ತರ  ದಶಕದಲ್ಲಿ  ಮಹಮ್ಮದ್‌  ಪೀರ  ಎಂಬ  ಬಹುಜನಪ್ರಿಯ  ನಟರೊಬ್ಬರು  ಗೌತಮ ಬುದ್ಧನ  ಪಾತ್ರದಲ್ಲಿ  ಅದೆಷ್ಷು  ಪ್ರಸಿದ್ಧರಾಗಿದ್ದರೆಂದರೆ,  ಮಹಮ್ಮದ  ಬುದ್ಧ  ಎಂದೇ  ಅವರನ್ನು  ಕರೆಯುತ್ತಿದ್ದರಂತೆ.          ಪ್ರಯೋಗಗೊಂಡ  ʻʻ ಯಶೋಧರಾ ʼʼ   ನಾಟಕ      ಕನ್ನಡದ  ಆಸ್ತಿ   ಮಾಸ್ತಿವೆಂಕಟೇಶ  ಅಯ್ಯಂಗಾರ  ರವರು   ತೊಂಭತ್ತು   ವರ್ಷಗಳ  ಹಿಂದೆ   ಬರೆದಿದ್ದ     ನಾಟಕ  ಕೃತಿ,   ಈವರೆವಿಗೂ   ರಂಗಪ್ರದರ್ಶನವನ್ನೇ  ಕಂಡಿಲ್ಲ   ಎಂಬುದು   ವಿಚಿತ್ರ   ಆದರೂ  ಸತ್ಯ.     ಕಾಲದಲ್ಲಿಯೇ     ಚರ್ಚೆಯ   ಬಿರುಗಾಳಿಯನ್ನೇ  ಸೃಷ್ಟಿಸಿದ್ದು    ಈಗ   ಇತಿಹಾಸ.

     ಮೇಲ್ಮಟ್ಟದಲ್ಲಿ   ಸ್ತ್ರೀವಾದೀ  ಕೃತಿಯಾಗಿ  ತೋರುವ   ಯಶೋಧರೆ   ಧರ್ಮ  ಮತ್ತು  ಶ್ರೀಸಾಮಾನ್ಯನ   ನಡುವಣ  ಸಂಬಂಧಗಳನ್ನು  ವಿಶ್ಲೇಷಿಸುತ್ತದೆ.   ಕಳೆದೊಂದು  ಶತಮಾನದಲ್ಲಿ,  ಕನ್ನಡ  ರಂಗಭೂಮಿ  ಸಾಕಷ್ಟು  ಆಯಾಮಗಳನ್ನು  ಕಂಡಿದೆ.  ದ್ರೌಪದಿ,  ಅಹಲ್ಯೆ   ಸೀತೆ,  ಊರ್ಮಿಳೆ, ಪಾತ್ರಗಳು  ರಂಗಕ್ಕೆ  ಆಗಮಿಸಿ,  ಭಾರತೀಯ  ಸ್ತ್ರೀಸಮುದಾಯದ   ತಹ ತಹ,  ತಲ್ಲಣಗಳನ್ನು  ಪರಿಣಾಮಕಾರಿಯಾಗಿ   ಮೂಡಿಸಿವೆ.  ಆದರೆ   ಮೂವತ್ತರ  ದಶಕದಲ್ಲಿ  ಇನ್ನೂ  ಸ್ತ್ರೀವಾದದ  ಯಾವ  ಹೊಳಹುಗಳೂ   ರಂಗಭೂಮಿ  ಸಾಹಿತ್ಯ  ಮತ್ತು  ಕಾವ್ಯಗಳಲ್ಲಿ   ಪ್ರವೇಶಿಸಿರಲಿಲ್ಲ.   ಅಂಥ  ಸಂದರ್ಭದಲ್ಲಿ  ಮಾಸ್ತಿ  ಯಶೋಧರೆಯ  ಮೂಲಕ   ಸಾಂಸ್ಥಿಕ  ಮತ , ಮತ್ತು  ಧರ್ಮಗಳ  ವಿವಿಧ  ಚಟುವಟಿಕೆಗಳ  ಬಗೆಗೆ  ಗಮನಸೆಳೆಯುತ್ತಾರೆ.

       ಕೌಟುಂಬಿಕತೆ,  ಅಥವಾ  ಗ್ರಹಸ್ಥ  ಧರ್ಮ   ಭಾರತೀಯವಾದ   ಎಲ್ಲ   ಮತ  ಧರ್ಮಗಳಲ್ಲಿ    ಆಳವಾಗಿ  ಬೇರೂರಿರುವುದು,  ಮತ್ತು   ಅದೇ  ಭಾರತೀಯ  ಅಸ್ಮಿತೆಯಾಗಿ   ರೂಪುಗೊಂಡಿದ್ದು   ಸತ್ಯ.   ಆದರೆ,  ಬುದ್ಧ   ಸನ್ಯಾಸಕ್ಕೆ  ಒತ್ತುಕೊಟ್ಟು,   ಸಾವಿರ  ಸಾವಿರ   ಬಿಕ್ಕುಗಳನ್ನು  ಸೃಷ್ಟಿಸಿದ್ದು,   ಭಾರತೀಯ   ಮನಸ್ಸಿನ   ಅಂತರಂಗವನ್ನು   ವಿಚಲಿತಗೊಳಿಸಿರಬೇಕು.   ಜೊತೆಗೆ    ಸಾವಿರ  ಸಾವಿರ  ವರ್ಷಗಳ,  ಬೌದ್ಧಧರ್ಮದ   ಮಹಾಪ್ರವಾಹ,   ಮೂಲ ದ, ಸ್ವಚ್ಛ  ಸುಂದರ  ತಾತ್ವಿಕ  ಧಾರೆಯನ್ನು   ಮರೆತು,   ವಿವಿಧ  ವಿಚಿತ್ರ  ಆಯಾಮಗಳನ್ನು  ಪಡೆದುಕೊಂಡಿದ್ದೂ   ಪತನಕ್ಕೆ   ಕಾರಣವಿರಬಹುದಾಗಿದೆ. 

    ಪ್ರಸ್ತುತ  ನಾಟಕದ  ಅತ್ಯಂತ  ಪ್ರಮುಖ  ಘಟ್ಟವೆಂದರೆ,  ಬುದ್ಧ  ಮತ್ತು  ಯಶೋಧರೆಯ   ಮುಖಾಮುಖಿ.   ಯಶೋಧರೆ   ತಾನು  ಕಾಲುಮುಟ್ಟಿ  ನಮಸ್ಕರಿಸಲೇ  ....?  ಎಂದು  ಕೇಳಿದಾಗ  ಬುದ್ಧ  ಉತ್ತರಿಸುತ್ತಾನೆ.   ʻʻಕಾಲು  ಮುಟ್ಟುವುದು  ಅಪರಾಧವೇನಲ್ಲ.  ಆದರೆ  ಮುಟ್ಟದಿದ್ದರೆ  ಒಳಿತು.ʼʼ    ಆವರೆಗೆ   ಧಾರ್ಮಿಕ  ಚಟುವಟಿಕೆಗಳಲ್ಲಿ  ಮಹಿಳೆಗೆ  ಮುಖ್ಯ  ಪ್ರವೇಶವೇ  ಇರಲಿಲ್ಲ.  ಅವಳು  ಕೇವಲ  ಬಾಹ್ಯ  ಸಹಾಯಕಿ.  ಹೊಸ  ಧರ್ಮವಾಗಿ   ಹೊಚ್ಚಹೊಸ  ಸಿದ್ಧಾಂತವಾಗಿ  ರೂಪುಗೊಂಡ  ಬೌದ್ಧ ಧರ್ಮವೂ   ಮಹಿಳೆಯನ್ನು   ನಿರ್ದಿಷ್ಟದೂರ  ಕಾದುಕೊಳ್ಳುವ  ನಿಯಮಕ್ಕೆ  ಬದ್ಧವಾದಾಗ,  ಯಶೋಧರೆ  ಅಂಬಪಾಲಿಯಂತ   ಪಾತ್ರಗಳು  ಸಾತ್ವಿಕವಾಗಿಯೇ  ಪ್ರತಿಭಟಿಸುತ್ತವೆ. 

    ಕಲೆ  ಮತ್ತು  ಸಾಹಿತ್ಯದ  ಮೂಲಭೂತ  ಆಶಯವೇ  ಸಾತ್ವಿಕ  ಪ್ರತಿಭಟನೆ.   ಜಡ್ಡುಗಟ್ಟಿದ  ಸಮುದಾಯದ  ತಳವನ್ನು  ಸೂಕ್ಷ್ಮವಾಗಿ  ಅಲುಗಾಡಿಸುವುದು.  ಹಾಗಿರುವುದಕ್ಕಿಂತ,  ಹೀಗಿರುವುದು  ಚನ್ನ  ಅಲ್ಲವೇ...?  ಎಂಬ  ಪ್ರಶ್ನೆಯನ್ನು  ಎದುರಿಡುವುದು.  ಮಾಸ್ತಿ   ಈಗಲೂ  ನಮಗೆ  ಮುಖ್ಯರಾಗುವುದು  ಇದೇ  ಕಾರಣಕ್ಕೆ. 

     ನಾಟಕದ   ರೋಚಕ  ತಿರುವೊಂದರಲ್ಲಿ   ಬುದ್ಧನ  ಸಂಗಾತಿ  ಆನಂದ,  ಯಶೋಧರೆಗೆ   ಬುದ್ಧನ  ಸಾಧನೆಯನ್ನು  ವರ್ಣಿಸುತ್ತಾನೆ.  ಆರೇಆರು  ವರ್ಷದಲ್ಲಿ   ಹತ್ತುಸಾವಿರ  ಜನರು  ಬುದ್ಧನ  ಅನುಯಾಯಿಗಳಾಗಿ  ಪರಿವರ್ತನೆಯಾದುದನ್ನು,  ಬಹುದೊಡ್ಡ  ಸಾಧನೆಯೆಂಬಂತೇ   ವಿವರಿಸಿದಾಗ,  ಯಶೋದೆ  ಕನಲಿಹೋಗುತ್ತಾಳೆ,

          ʻʻ  ಮನೆಯ  ಸುಟ್ಟು  ಊರಿಗೆ  ಬೆಳಕಾದರೇ...?    ಮನೆಯ  ಬೆಳಕುಗಳು   ನಂದಿದವು.  ಮಸುಕಾದವು.  ಅಯ್ಯೋ  ನನ್ನಂತೇ  ಅದೆಷ್ಟು  ಸಾವಿರ  ಮಂದಿ  ನೊಂದರೋ,  ಇದು  ಹೆಮ್ಮೆಯೆಂದುಸುರುತಿಹೆಯೇ  ನೀನು..!  ಅದು  ಸರಿ.  ಹೆಣ್ಣುಸುರಿಗಲ್ಲದೇ  ಉಮ್ಮಳದ  ಅರಿವು  ಇನ್ನು  ಯಾರಿಗಹುದು...?   ಎನಿತು  ಹೆಂಡಿರು  ನೊಂದು  ಬೆಂದರೋ,  ನಿಮ್ಮ  ಉಪದೇಶದಲಿ...!  ಇದನೇಕೆ  ನೆನೆಯಿರಿ..?  ನೋವ  ಬೀಜವ ಬಿತ್ತಿ  ಹುಲುಸಾದ  ಬೆಳೆ ತೆಗೆದು, ಬೇನೆಯನ್ನವ  ಬಡಿಸಿ  ಕಣ್ಣೀರುಗಳ  ಕುಡಿಸಿ,  ಹೆಮ್ಮೆ ಪಡುತಿರುವಿರೇ  ತಪಸಿಗಳು...? ಮನಸಿನಲಿ  ಕಲ್ಮಷಗಳಿಹವೆಂದು  ಮನೆಯ  ಮಕ್ಕಳನು ಬೇಯಿಸಲು  ತ್ಯಾಗವೇ...?  ವನದೊಳಿಹ  ಪೊದೆಗಳನು  ಜಯಿಸವೊಡೆ  ಕಿಚ್ಚಿಕ್ಕಿ  ಹುಲ್ಲೆ  ಮರಿಗಳ  ಸುಡುವ  ನೀತಿಯಿದು.ʼʼ

      ಹೆಣ್ಣೊಬ್ಬಳ  ಅಂತರಂಗವನ್ನು   ಅರ್ಥೈಸಿಕೊಳ್ಳದೇ   ಏಕಪಕ್ಷೀಯವಾಗಿ  ನಿರ್ಣಯ  ಮಂಡಿಸುತ್ತಾ,  ಪುರುಷ ಪ್ರಬುತ್ವವನ್ನೇ  ಹೇರುವ  ಕ್ರಿಯೆ   ಧರ್ಮಗಳಲ್ಲೂ   ನಡೆಯುವಾಗ   ಸಂವೇದನಾ  ಶೀಲ  ಮನಸ್ಸುಗಳು   ಕನಲುತ್ತವೆ.  ಪ್ರಶ್ನಿಸುತ್ತವೆ    ಇಂಥಹ   ಅರ್ಥಪೂರ್ಣ  ರಸಸ್ಥಾನಗಳು   ನಾಟಕದ   ತುಂಬೆಲ್ಲ  ಹರಿದಾಡಿವೆ.   ಮೊದಲೇ  ನಾಟಕದ  ಪಠ್ಯಕ್ಕೆ   ತೊಂಭತ್ತು  ವರ್ಷ  ಕಳೆದಿದೆ.  ಹಳೆ  ಮಧ್ಯಗನ್ನಡ  ಭಾಷೆಯಲ್ಲಿ   ಸಾಗುತ್ತದೆ.  ಸಂಭಾಷಣೆಯಲ್ಲಿ   ನಾವು  ಆಕಾಲಕ್ಕೇ   ಪಯಣಿಸಬೇಕಾಗುತ್ತದೆ. 

      ಬುದ್ದ ಗುರುವಿನ  ಮನಮುಟ್ಟುವ  ಉಪದೇಶ   ಸಾಮಾನ್ಯ  ಜನರನ್ನು  ಆಕರ್ಷಿಸುವ  ವೇಗವನ್ನು  ಕಂಡು,  ವೈದಿಕ  ವರ್ಗ  ಪ್ರತಿಭಟಿಸಲು  ಪ್ರಾರಂಭಿಸುತ್ತದೆ.  ಅವರಲ್ಲಿಯೇ  ಪರ ವಿರೋಧದ  ಅಲೆಯೇಳುತ್ತದೆ.  

     ಪ್ರತೀ  ಸಂಭಾಷಣೆಗೂ  ವಿಶೇಷ  ಲಕ್ಷ್ಯನೀಡಿ,  ಆಕಾಲದ  ಭಾಷೆಗೆ   ನಟರನ್ನು  ಸಜ್ಜುಗೊಳಿಸಿದ್ದು  ನಿಜಕ್ಕೂ  ಶ್ಲಾಘನೀಯ.   ಪ್ರತಿಯೊಂದು  ಪಾತ್ರಗಳೂ   ಆವಾವ  ಪಾತ್ರಗಳ  ಅರ್ಥ ಮತ್ತು  ಭಾವಗಳಿಗೆ  ನ್ಯಾಯ ಸಲ್ಲಿಸಿದ್ದಾರೆ. ಧರ್ಮ  ಮತ್ತು  ರಾಜಕಾರಣಗಳು,  ಅನೈತಿಕವಾಗಿ  ಒಗ್ಗೂಡಿ,  ಸಮುದಾಯಗಳನ್ನು  ನಯವಾಗಿ  ವಂಚಿಸುತ್ತಿರುವ     ಕ್ರೂರ  ವಾಸ್ತವದಲ್ಲಿ,  ಕಲೆಯಮೂಲಕ  ಸೂಕ್ಷ್ಮವಾಗಿ  ಎಚ್ಚರಮೂಡಿಸುತ್ತಿರುವ,  ವೈದ್ಯಕೀಯ  ಸಂಘ   ರೋಟರಿ,  ಮತ್ತು  ನಿರ್ದೇಶಕ  ಶ್ರೀಪಾದ  ಭಟ್ಟ ರವರ   ಪ್ರಯತ್ನ  ನಿಜಕ್ಕೂ  ಶ್ಲಾಘನೀಯವಾಗಿದೆ.  ಕಲಾ  ಪ್ರಕ್ರಿಯೆ  ಎಂದರೆ  ಕೇವಲ  ರಂಜನೆಯ  ವ್ಯವಸಾಯವಲ್ಲ.  ಸಮಕಾಲೀನ  ದ್ವಂದ್ವಗಳಿಗೆ,  ಸವಾಲೊಡ್ಡುತ್ತ,   ಸಮುದಾಯದ  ಸಂಸ್ಕೃತಿಯ  ಸುಸ್ಥಿರತೆಯೆಡೆಗೆ  ಗಮನಸೆಳೆಯುತ್ತ  ಸಾಗುವುದೇ  ಆಗಿದೆ.      

         ಧರ್ಮ  ಮತ್ತು  ಮಾನವೀಯ  ಮೌಲ್ಯಗಳು  ಇತಿಹಾಸದ  ಸಾಕಷ್ಟು  ಸಂದರ್ಭದಲ್ಲಿ.  ಒಂದಾಗುವ  ಬದಲು  ಪರಸ್ಪರ  ಮುಖಾಮುಖಿಯಾದದ್ದು.  ಮಾನವೀಯ  ಮೌಲ್ಯವೇ  ಸೋತುಹೋದುದನ್ನು  ಕಂಡಿದ್ದೇವೆ.  ಧರ್ಮ  ಸಾಂಸ್ಥಿಕವಾಗುತ್ತಿದ್ದಂತೇ.  ತನ್ನ  ಅಸ್ತಿತ್ವದ  ಉಳಿವಿಗಾಗಿ  ಧರ್ಮಕಾರಣಕ್ಕೆ  ಇಳಿಯುತ್ತದೆ.  ಧರ್ಮದ   ಕಾರಣಕ್ಕೆ  ನಡೆಯುವ   ಹಲವು  ಚಟುವಟಿಕೆಗಳು.  ಅದರ  ಧನಾತ್ಮಕತೆಯನ್ನೂ  ತಾತ್ವಿಕತೆಯೊಂದಿಗೆ   ಆಪೋಷನ  ಗೈಯ್ಯುತ್ತದೆ.  ಆಗ  ಧರ್ಮಗಳೂ  ಜೀವವಿರೋಧಿಯಾಗಿ  ಶೋಷಣೆಯ  ಅಸ್ತ್ರವಾಗಿಬಿಡುತ್ತದೆ.  ಹತ್ತು  ಹಲವು  ಮೂಢನಂಬಿಕೆಗಳ  ಹುತ್ತಗಳು  ಬೆಳೆದು,  ಪತನದಂಚಿಗೆ  ಸಾಗಿಬಿಡುತ್ತವೆ. ಪ್ರಸ್ತುತ  ನಾಟಕದ  ನಡುವೆ  ವೈದಿಕ  ಧರ್ಮದೆದುರು   ಬುದ್ಧ  ಸಿದ್ಧಾಂತ  ಎದುರಾದಾಗ  ಏಳುವ  ವೈಚಾರಿಕ  ಸಂಚಲನ  ಸೂಕ್ಷ್ಮವಾಗಿ,  ಮೂಡಿದೆ.

                 ಜೀವಿಗೆ  ಇರುವಂತೇ   ಧರ್ಮಗಳಿಗೂ   ಹುಟ್ಟು  ಸಾವುಗಳಿವೆ.  ವೈದಿಕತೆ  ಭೃಷ್ಠಗೊಂಡಾಗ  ಜೈನ   ಬೌದ್ಧ  ಧರ್ಮಗಳು,  ಪ್ರತಿನಾಯಕನಾಗಿ  ಜನ್ಮಿಸಿದವು.  ಅವು  ಭೃಷ್ಟಗೊಂಡಾಗ   ವೈದಿಕ  ಮತ್ತು  ವೈದಿಕೇತರ  ಭಾರತೀಯ  ಧಾರ್ಮಿಕ  ಚಟುವಟಿಕೆಗಳು  ಗರಿಗೆದರಿದವು.     ಇಂಥ  ಅರ್ಥಪೂರ್ಣ   ತಾತ್ವಿಕ  ವೈಚಾರಿಕ  ಸಂಘರ್ಷಗಳು   ಇತಿಹಾಸದಲ್ಲಿ   ಸದಾ  ಘಟಿಸುತ್ತಿರುವುದರಿಂದಲೇ    ಭಾರತ  ಇನ್ನೂ   ಜೀವಂತವಾಗಿ   ಉಸಿರಾಡುತ್ತಿದೆ.  

      ಒಂದೇ  ಒಂದು   ರಂಗ  ಪ್ರದರ್ಶನ  ಅದೆಷ್ಟು  ಚರ್ಚೆಗಳನ್ನು,  ತಾತ್ವಿಕ  ಸಂಚಲನವನ್ನು  ಹುಟ್ಟುಹಾಕಬಹುದು  ಎಂಬುದಕ್ಕೆ   ಪ್ರಸ್ತುತ  ಪ್ರಯೋಗವೇ  ಉದಾಹರಣೆಯಾಗಿ  ನಿಲ್ಲುತ್ತದೆ.

                                                                  ಸುಬ್ರಾಯ  ಮತ್ತೀಹಳ್ಳಿ.  ತಾ-  ೧೮-೧-೨೦೨೧.

No comments:

Post a Comment