Wednesday 27 September 2023

ಆನೇ ತಂದು ಪೆಟ್ಗೇಲಿ ಇಟ್ಟಿದ್ದಿ(ಮುನ್ನುಡಿ)

 

             ʻಆನೇ  ತಂದು  ಪೆಟ್ಟಿಗೇಲಿಟ್ಟಿದ್ದಿ,ʼʼ   ಇದೊಂದು  ಹವಿಗನ್ನಡದ  ನುಡಿಸಾಲು.  ಉತ್ತರಕನ್ನಡ  ಜಿಲ್ಲೆಯ  ಉದಯೋನ್ಮುಖ  ಕತೆಗಾರ್ತಿಯರಲ್ಲಿ  ತಮ್ಮನ್ನೂ  ಹೆಸರಿಸಿಕೊಳ್ಳುತ್ತಿರುವ   ಕಲ್ಪನಾ  ಪ್ರಭಾಕರ್‌  ರವರ  ಪ್ರಥಮ  ಕಥಾಸಂಕಲನವನ್ನು  ಗಮನಿಸಿದಾಗ,    ನುಡಿಗಟ್ಟು  ನೆನಪಿಗೆ  ಬಂದಿತು. ಅನುಭವವೆಂಬ  ಆನೆಯನ್ನೇ  ಕಥಾಪೆಟ್ಟಿಗೆಯಲ್ಲಿ  ಸೆರೆಹಿಡಿಯುವ  ಪ್ರಯತ್ನದಲ್ಲಿ, ತೊಡಗಿರುವ  ಕಲ್ಪನಾ  ರವರ  ಮಾನವ  ಬದುಕಿನ  ಚಟುವಟಿಕೆಯಲ್ಲಿರುವ  ಅವರ  ಸೂಕ್ಷ್ಮ ಒಳನೋಟ  ನಿಜಕ್ಕೂ  ಖುಷಿಕೊಡುತ್ತಿದೆ. ಸಂಕಲನದ  ಎಲ್ಲ ರಚನೆಗಳನ್ನು  ಅವಲೋಕಿಸಿದಾಗ   ಸಮುದಾಯವೊಂದರ   ಜೀವನಪ್ರವಾಹದೊಂದಿಗೆ  ಈಜುತ್ತ  ಸಮುದಾಯದ  ಸುಖ  ದುಃಖ   ಸೋಲು  ಗೆಲುವು  ಶಕ್ತಿದೌರ್ಬಲ್ಯ, ಮತ್ತು ಪರಂಪರೆಯ  ಪ್ರಜ್ಞೆಯೊಡನೆ, ವಾಸ್ತವದೊಂದಿಗೆ  ಸಂವಾದಗೈಯ್ಯುವ  ಯಶಸ್ವೀ  ಪ್ರಯತ್ನ  ಗಮನಸೆಳೆಯುತ್ತಿದೆ.

       ತಮ್ಮದೇ  ಸಮುದಾಯದ  ಆಡುಭಾಷೆ  ಹವಿಗನ್ನಡವನ್ನು  ಅರ್ಥಪೂರ್ಣವಾಗಿ  ದುಡಿಸಿಕೊಂಡಿರುವ  ಕಥೆಗಾರ್ತಿ,     ಭಾಷೆಯ  ಹಿತಮಿತದ  ಪ್ರಯೋಗದಿಂದಲೇ  ಪರಿಣಾಮ  ಮೂಡಿಸಲು  ಶಕ್ತರಾಗಿದ್ದಾರೆ.  ಕನ್ನಡದ   ನೂರಾರು  ಉಪಭಾಷೆಗಳಲ್ಲೊಂದಾದ  ಹವಿಗನ್ನಡ  ಇನ್ನೂ  ಹಳೆಗನ್ನಡದ   ಅಸಂಖ್ಯಾತ  ಶಬ್ದಗಳ ಮೂಲಕ  ಉಸಿರಾಡುತ್ತಿದೆ.   ಅದೇ  ಭಾಷೆಯನ್ನಾಡುವ  ಕೃಷಿಮೂಲದ  ಹವ್ಯಕ  ಸಮುದಾಯದ   ಕತೆಗಾರ್ತಿ,  ತನ್ನ  ಪರಿಸರವನ್ನೇ   ಮುಖ್ಯ ಅಭಿವ್ಯಕ್ತಿಯ  ಮಾಧ್ಯಮವಾಗಿ  ಬಳಸಿಕೊಂಡು,   ಜೀವನದ  ನಿಗೂಢತೆಯನ್ನು  ಶೋಧಿಸುವ  ಪ್ರಯತ್ನದಲ್ಲಿದ್ದಾರೆ.

        ಈಗಾಗಲೇ  ಇದೇ  ಸಮುದಾಯದ   ಮಹಾಕಾವ್ಯ  ಎಂದೆನ್ನಬಹುದಾದ  ವಿ.ಟಿ.ಶೀಗೇಹಳ್ಳಿಯವರ  ಕಾದಂಬರಿ  ʻʻತಲೆಗಳಿ ʼʼ    ಶಿವಾನಂದ  ಕಳವೆಯವರ,  ʻʻಮಧ್ಯಘಟ್ಟʼʼ   ಗಜಾನನ  ಶರ್ಮರ  ʻʻಪುನರ್ವಸುʼʼ   ಎಚ್‌  ಜಿ  ಶ್ರೀಧರರ  ʻʻ  ಮಹಾಪ್ರಸ್ಥಾನ,ʼʼ  ಮುಂತಾದ  ಮಹತ್ವಪೂರ್ಣ  ಕಾದಂಬರಿಗಳು ಸಹೃದಯರ  ಗಮನ  ಸೆಳೆಯುತ್ತಿವೆ.  ಕಳೆದ  ವರ್ಷವಷ್ಟೇ   ದಕ್ಷಿಣ  ಕನ್ನಡದ  ಹಿರಿಯ  ಲೇಖಕ  ಹರಿಕೃಷ್ಣ  ಭರಣ್ಯರವರು,  ನೂರಾರು  ವೈವಿಧ್ಯಮಯ  ಹವ್ಯಕ  ಕಥಾಕೋಶವನ್ನು  ಮೂರುಸಂಪುಟಗಳಲ್ಲಿ  ಸಂಪಾದಿಸಿದ್ದಾರೆ.

        ಕಥನ ಕಲೆ  ಮನುಷ್ಯನ  ಅನನ್ಯ ಸೃಷ್ಟಿ.  ಬಹುಷಃ   ಮೊತ್ತಮೊದಲ  ಮೌಖಿಕ  ಕಲೆಯಾಗಿ  ಕತೆಯೇ  ಸೃಷ್ಟಿಯಾಗಿರಬಹುದಾಗಿದೆ.  ಮುಂದಿನೆಲ್ಲ  ಲಲಿತಕಲೆಗಳೂ  ಕಾವ್ಯವೂ  ಸೇರಿ,  ಮಾನವ  ಬದುಕಿನ  ಏಳು ಬೀಳು,  ನೋವು  ತಲ್ಲಣ,  ಸುಖದುಃಖಗಳ   ಕತೆಯಾಗಿ, ವ್ಯಥೆಯಾಗಿ,   ಸೂಕ್ಷ್ಮ  ಅಭಿವ್ಯಕ್ತಿಯಾಗಿಯೇ   ಮುಂದುವರೆದಿದೆ  ಎಂದರೆ  ತಪ್ಪಲ್ಲ.   ಬದುಕು  ಎಂಬ  ಶಬ್ದವೇ  ರೋಮಾಂಚನ  ತರುವಂಥದ್ದು.  ಅದು  ನಾಮಪದ  ವಾದಂತೇ,  ಕ್ರಿಯಾಪದವೂ  ಹೌದು.   ಏನೇ  ಆಗಲಿ,  ಏನೇ  ಬರಲಿ  ನೀನು  ಬದುಕು.  ಅನುಭವಿಸು.  ಎಂದು  ಆದೇಶ  ನೀಡುತ್ತದೆಯೇನೋ  ಎಂದೆನ್ನಿಸುತ್ತದೆ. 

             ಕತೆ  ಜೀವಂತಗೊಳ್ಳಲು  ಕತೆಗಾರ  ಎಷ್ಟು  ಅವಶ್ಯವೋ   ಕೇಳುಗನೂ  ಅಷ್ಟೇ  ಅವಶ್ಯ.  ಸುಖ ದುಃಖಗಳನ್ನು  ಹಂಚಿಕೊಳ್ಳುವ,   ಬದುಕನ್ನು  ಸಹ್ಯವಾಗಿಸುವ   ಅಸದೃಷ  ಕಲೆ  ಇದು.  ಕತ್ತಲೆ  ಬೆಳಕುಗಳ  ಸುವರ್ಣಸಂಗಮವಾದ  ಬದುಕಿಗೆ   ಸೌಂದರ್ಯವೊದಗುವುದೇ  ಅದನ್ನು  ಅನುಭವಿಸುವುದರಿಂದ..  ಆಸ್ವಾದಿಸುವುದರಿಂದ.   ಸದ್ಯ  ಜಾಗತಿಕವಾಗಿಯೇ  ಅತೀ  ಹೆಚ್ಚು  ಓದುಗರನ್ನು  ಗಳಿಸಿಕೊಂಡ   ಸಣ್ಣಕಥಾ ಸಾಹಿತ್ಯ,   ಅದರ  ಸರಳತೆ  ಸೂಕ್ಷ್ಮತೆ  ಮತ್ತು  ಸಮಗ್ರತೆ ಯಂಥ  ಗುಣಗಳಿಂದ,  ಜನಪ್ರಿಯಗೊಂಡಿದೆ. 

      ಕಲ್ಪನಾ  ಪ್ರಭಾಕರ  ರವರ  ಪ್ರಸ್ತುತ  ಕತಾ  ಸಂಕಲನವನ್ನು  ಗಮನಿಸಿದಾಗ,   ಕಥನ  ಕಲೆಯೊಂದು    ಕೇವಲ  ರಂಜನೆಗಾಗಿಯಲ್ಲ,  ಮನುಷ್ಯಜೀವನದ   ಎಲ್ಲ  ಆಯಾಮಗಳನ್ನು  ಚಿಕಿತ್ಸಕ  ದೃಷ್ಟಿಯಿಂದ  ಕಾಣುತ್ತ,   ಹೊಸ ಭವಿಷ್ಯದ  ಕನಸನ್ನು  ಸೃಷ್ಟಿಸುವುದು,  ಎಂಬ  ಸತ್ಯವನ್ನು  ಸಾಕಾರಗೊಳಿಸಿಕೊಳ್ಳಲು  ಗೈದ  ಒಂದು  ಪ್ರಾಮಾಣಿಕ  ಪ್ರಯತ್ನವಾಗಿ  ತೋರುತ್ತಿದೆ.

      ಲೇಖಕಿ  ಆಧುನಿಕ  ಶಿಕ್ಷಣ  ಪಡೆದ,  ಗ್ರಾಮಾಂತರದ  ಗ್ರಹಿಣಿ. ʻʻ ಸಾಹಿತ್ಯವೆಂದರೆ  ಬದುಕಿನಲ್ಲಿ  ತಾನು  ಕಂಡ  ಉಂಡ  ಅನುಭವಗಳಿಗೆ  ಸಾಕ್ಷಿನುಡಿಯುವುದುʼʼ  ಎಂಬ  ಪ್ರಸಿದ್ಧ  ನುಡಿಯಂತೇ  ಗ್ರಾಮದ  ಮಧ್ಯಮ  ವರ್ಗದ   ಕೃಷಿಕ  ಮಹಿಳೆಯಾಗಿ,  ಹಳ್ಳಿಯ  ಸುಖ  ದುಃಖ  ಮಿತಿಗಳನ್ನು  ಅರಿಯುತ್ತ,  ಅನುಭವಿಸುತ್ತ,  ಅದೇ  ಅನುಭವಗಳಿಗೆ  ಅಕ್ಷರದ ತಾತ್ವಿಕ  ಆಕಾರ  ತೊಡಿಸುವ  ಮಹತ್ವಾಕಾಂಕ್ಷೆಯಲ್ಲಿ,  ಬರೆಯತೊಡಗಿದಂತೆನ್ನಿಸುತ್ತದೆ.

           ಮೊದಲ ಕತೆ ʻ ಸುಕ್ಕುʼ ವಿನ  ಪ್ರಾರಂಭದಲ್ಲೇ  ಇಡೀ  ಸಂಕಲನದ   ಧ್ವನಿ  ಪ್ರಕಟವಾಗಿದೆ.  ತಿಮ್ಮಣ್ಣ  ಜನಿವಾರದ  ಸಿಕ್ಕುಗೊಂಡ, ತಳಿಕೆಯಾಗಿರುವ  ಎಳೆಗಳನ್ನು  ಬಿಡಿಸಲು  ಹೆಣಗಿದಷ್ಟೂ  ತಳಿಕೆಗೊಳ್ಳುತ್ತಲೇ ಇದೆ.   ಅನಾದಿಯಿಂದ  ನಿರ್ದಿಷ್ಟ  ಸಂಪ್ರದಾಯ  ಆಚಾರದ  ಕೋಟೆಯಲ್ಲಿ   ಸುರಕ್ಷಿತವಾಗಿ  ಸಮುದಾಯದಲ್ಲಿ  ಬದುಕಿ  ಬರುತ್ತಿದ್ದವ,  ಬದಲಾದ  ಕಾಲ,   ಮತ್ತು  ಆಕ್ರಮಿಸಿದ  ಆಧುನಿಕತೆ,  ಜೀವನದೃಷ್ಟಿಯನ್ನೇ  ಪಲ್ಲಟಗೊಳಿಸಿ   ಬದುಕನ್ನು  ಗೋಜಲಾಗಿಸಿದೆ. ಜಾತಿಬೇಲಿಯನ್ನು  ಅನಿವಾರ್ಯವಾಗಿ  ದಾಟಬೇಕಾದ  ದ್ವಂದ್ವದಲ್ಲಿ  ಬಳಲುತ್ತಾನೆ.  ಪರಂಪರೆಯ  ಸೆಳೆತ,  ಆಧುನಿಕತೆಯ  ಪ್ರವೇಶದ  ಸಂಧಿಕಾಲದ   ಅಯೋಮಯತೆ  ತಿಮ್ಮಣ್ಣನನ್ನು  ವಿಚಲಿತಗೊಳಿಸಿದೆ.  ಗೋಜಲುಗಳನ್ನು  ಬಿಡಿಸಲು  ಪ್ರಯತ್ನಿಸಿದಂತೇ   ಗೋಜಲೊಳಗೇ  ಸಿಲುಕಿ  ಒದ್ದಾಡುವ   ಸ್ಥಿತಿ,   ಒಂದು  ಸಮುದಾಯದ   ಕಟುವಾಸ್ತವವನ್ನೇ  ಧ್ವನಿಸುತ್ತದೆ. 

       ಗ್ರಾಮೀಣ  ಕೃಷಿ ಅವಲಂಬಿತ  ಯುವಕರಿಗೆ   ಹೆಣ್ಣು  ಸಿಗದೇ  ಕಂಗಾಲಾದ  ಪರಿಸ್ಥಿತಿ.  ಎಲ್ಲ  ಹೆಣ್ಣುಗಳು,  ಅವಳ  ಪಾಲಕರು,  ನಗರದಲ್ಲಿ  ಉದ್ಯೋಗದಲ್ಲಿರುವ   ಗಂಡನ್ನೇ  ಇಚ್ಛಿಸುವ  ಸ್ಥಿತಿ  ನಿರ್ಮಾಣವಾಗಿದೆ.   ಕೃಷಿಬದುಕು  ಶ್ರಮಾಧಾರಿತ.  ಅಲ್ಲಿ  ಐಷಾರಾಮೀತನ  ದೊರಕಲಾರದು.  ಸಮುದಾಯದ  ಹೆಣ್ಣು  ಸಿಗದೇಹೋದಾಗ,  ತಿಮ್ಮಣ್ಣನ  ಕುಟುಂಬ  ಹೈರಾಣುಗೊಳ್ಳುತ್ತದೆ.   ತಾಯಿ  ಜಾನಕ್ಕ  ಹೆಣ್ಣುಹುಡುಕುವ  ಪ್ರಕ್ರಿಯೆಯಲ್ಲಿ  ಸೋತಿದ್ದಳು.  ಪಕ್ಕದ  ಮನೆ ರಾಮಣ್ಣ  ಅವಳ  ಸ್ಥಿತಿಕಂಡು  ತನ್ನ  ಸಲಹೆ  ಮುಂದಿಡುತ್ತಾನೆ.

       ʻʻ ಜಾನೀ  ಸುಮ್ಮಂಗ್‌  ಕಣ್ಣೀರ್‌  ಹಾಕಡ್ದೇ.  ದೇವ್ರು  ಒಂದ್‌  ಗಂಡೀಗೆ  ಒಂದ್‌  ಹೆಣ್ಣು  ಹೇಳಿ  ಮೊದ್ಲೇ  ಬರ್ದ  ಕಳಸ್ತಾ.   ನಮ್‌  ಬ್ರಾಹ್ಮಣ್ರೇ  ಆಗವು  ಹೇಳಿ  ಹುಡುಕ  ಬದ್ಲು,  ಅನ್ಯಾಹಾರಾ  ತಿನ್ನದ್ದೇ  ಇಪ್ಪ   ಬಡವ್ರ ಮನೇ   ಹೆಣ್ಣಿದ್ರೆ  ಮದ್ವೆ  ಖರ್ಚ  ನಿಂಗನೇ  ಹಾಕಿ  ಮಾಡಿಶ್ಕ್ಯಂಡ್ರೆ  ಆಗ್ತಿಲ್ಯಾ.......  ನಿನ್‌  ಅವಸ್ಥೇ  ನೋಡಲೇ  ಆಗ್ತಿಲ್ಯಪಾ.ʼʼ  ಎಂದು  ಉದ್ಗರಿಸುತ್ತಾನೆ. 

      ಒಟ್ಟೂ  ಹದಿಮೂರು  ಕತೆಗಳನ್ನೊಳಗೊಂಡಿರುವ   ಪ್ರಸ್ತುತ  ಕೃತಿ,   ಸಮುದಾಯದ   ಆರ್ಥಿಕ  ಸಾಮಾಜಿಕ   ಧಾರ್ಮಿಕ, ಆಯಾಮಗಳ  ನಡುವೆ  ಏಳುವ  ವಿವಿಧ  ದ್ವಂದ್ವ,  ವಿಚಿತ್ರ  ಪಲ್ಲಟಗಳನ್ನು  ಗುರುತಿಸುತ್ತಾ,   ಜನಾಂಗದಲ್ಲಿ   ಹೊಕ್ಕು   ತಲ್ಲಣ  ಮೂಡಿಸುವ,  ವೈವಿಧ್ಯಮಯ  ವ್ಯಸನ,   ಜಗಳ,  ವ್ಯಾಜ್ಯ,  ಗಡಿತಂಟೆ,  ಮೂಢನಂಬಿಕೆಗಳಂಥ,  ದೌರ್ಬಲ್ಯಗಳ  ಕಡೆಗೆ  ದೃಷ್ಟಿಹರಿಸುತ್ತದೆ. 

     ಇಷ್ಟೆಲ್ಲದರ  ನಡುವೆಯೂ  ಅಂತರಂಗದಲ್ಲಿ  ಜೀವಪ್ರವಾಹವಾಗಿ  ಹರಿಯುವ,  ಮಾನವ ಸಂಬಂಧ,  ಪ್ರೀತಿ,  ಕರುಣೆ,  ಸ್ನೇಹ,  ಮಮತೆಗಳನ್ನೂ  ಸೂಕ್ಷ್ಮವಾಗಿ  ಗುರುತಿಸುವುದನ್ನು  ಕತೆಗಾರ್ತಿ  ಮರೆಯುವುದಿಲ್ಲ. 

      ಇಡೀ  ಸಂಕಲನದಲ್ಲಿ  ಒಮ್ಮೆಲೇ  ಆಕರ್ಷಿಸುವ,  ತಲ್ಲಣ ಮೂಡಿಸುವ   ರಚನೆಯೆಂದರೆ, ʻʻ ಆಟದ ಮನೆ ʼʼ  ಕತೆ.   ವಸ್ತು  ಶೈಲಿ  ವರ್ಣನೆ,  ತಂತ್ರ  ಎಲ್ಲದರಲ್ಲೂ  ಗೆದ್ದ ಕತೆಯಿದು.  ಇಡೀ  ಕತೆ  ಮಕ್ಕಳ  ಮುಗ್ಧ  ಲೋಕದಲ್ಲಿ  ಅರಳುತ್ತದೆ.  ಆರೆಂಟು  ವರ್ಷದೊಳಗಿನ  ಹೆಣ್ಣುಮಕ್ಕಳು  ಆಟವಾಡುವ  ವರ್ಣನೆಯೊಂದಿಗೆ  ಕತೆ   ಹಿರಿಯರ  ಬದುಕನ್ನು  ಅಭಿವ್ಯಕ್ತಿಸುತ್ತಾ  ಸಾಗುತ್ತದೆ.   ಮದುವೆಯ  ಆಟ,  ಅಡಿಗೆಯ  ಆಟದಲ್ಲಿ  ಲೀನವಾಗಿರುವ   ಮಕ್ಕಳನಡುವೆ,  ತಾಯಿ  ಅಜ್ಜಿಯರು,  ಅಂಬೆಗಾಲಿಡುವ  ಪುಟ್ಟ  ಹೆಣ್ಣುಮಗುವನ್ನ, ʻʻ ಎಲ್ಲಾ  ಇಲ್ಲಿದ್ರ......  ಮಕ್ಕಳ್ರಾ,  ಇಕಳಿ   ಇದನ್ನ  ಬಿಟ್ಟು ಹೋಗ್ತೆ  ಮನೆ ಒಳ್ಗೆ  ಅಳಲೆ  ಶುರುಮಾಡಿದ್ರೆ  ಅದ್ರಪ್ಪಾ,  ದೂರ್ವಾಸ  ಮುನಿಯಾಗ್ತಾ.   ಹೊಟ್ಟೆತುಂಬಾ  ಹಾಲ್‌  ಕುಡಸಿದ್ದೆ.  ತೊಂದ್ರೆಯಿಲ್ಲೆ.ʼʼ ಎಂದು  ತಂದು  ಬಿಡುತ್ತಾರೆ.   ಮನೆಯ  ಹಿರಿಯ  ಹೆಂಗಸರಿಗೆ  ಕಾರ್ಯಭಾರ.  ಮಗುವು ಕೆಲವು  ಸಮಯವಾದರೂ   ಮಕ್ಕಳ  ನಡುವೆ  ಆಡಲಿ  ಎಂಬುದು  ಅವರ  ಆಸೆ.  ಆದರೆ  ಮಕ್ಕಳೆಲ್ಲ  ತಮ್ಮ  ಆಟದಲ್ಲೇ  ತಲ್ಲೀನರಾಗಿ,  ಪುಟ್ಟ  ಮಗುವನ್ನು  ಮರೆತು  ಬಿಡುತ್ತಾರೆ.   ಮಗು  ಅವರೆಲ್ಲರಿಗೆ  ತಿಳಿಯದಂತೇ  ಮನೆಯೆದುರು  ತೋಟದಂಚಿನಲ್ಲಿರುವ   ಕೆರೆಯಲ್ಲಿ  ಬಿದ್ದು  ಅಸುನೀಗಿರುತ್ತದೆ. 

       ಎರಡು  ಹೆಣ್ಣುಮಕ್ಕಳು  ಹುಟ್ಟಿದ  ಮೇಲೆ,  ಮೂರನೆಯ  ಮಗು  ಗಂಡಾಗಲೇ  ಬೇಕೆಂದು,  ಜ್ಯೋತಿಷಿಗಳ  ಸಲಹೆಯ  ಮೇರೆಗೆ  ಸಾವಿರ  ಮೋದಕ  ಹವನವನ್ನೇ  ಮಾಡಿಸಲಾಗುತ್ತದೆ.  ಆದರೆ  ನಿರೀಕ್ಷೆ  ಹುಸಿಯಾಗಿ  ಹೆಣ್ಣೇ  ಹುಟ್ಟುತ್ತದೆ.   ಮಗುವಿನ  ತಂದೆ  ಸಣ್‌ ಮಾಂವ  ಅದೆಷ್ಟು  ವ್ಯಘ್ರಗೊಂಡನೆಂದರೆ,  ಮಗು  ಹುಟ್ಟಿ  ಎರಡು  ವರ್ಷವಾದರೂ  ಕಣ್ಣೆತ್ತಿಯೂ  ನೋಡುವುದಿಲ್ಲ.  ಅದಕ್ಕೆ  ಜ್ಯೋತಿಷಿಯೂ   ಮಗು  ಹುಟ್ಟಿದ  ಘಳಿಗೆ  ಸರಿಯಿಲ್ಲ.  ಮನೆಗೆ  ಮಾರಕ  ಎಂದು   ಬೆಂಕಿಗೆ  ಮತ್ತಷ್ಟು  ತುಪ್ಪ ಸುರಿದಾಗ, ಮಗು  ಮತ್ತಷ್ಟು  ಅಲಕ್ಷಿತಗೊಳ್ಳುತ್ತದೆ.  ಮುದ್ದಾದ  ಸುಂದರ  ಸುಪುಷ್ಟ  ಮಗು  ಏನನ್ನೂ  ಅರಿಯದೇ  ಹೆಂಗಸರ  ಒಡಲಲ್ಲಿ  ಬೆಳೆಯುತ್ತಿತ್ತು.     ಕಾಕತಾಳೀಯವಾಗಿ  ಆಕಸ್ಮಿಕ  ಸಾವನ್ನು  ಕಂಡಿತು.    ಗಂಡಾಗಲೇ ಬೇಕೆಂಬ  ಹಪಾಹಪಿ,  ಜ್ಯೋತಿಷ್ಯ  ಶಕುನ  ಸಾಲಾವಳಿಗಳ  ಅಪರಿಮಿತ   ನಂಬಿಕೆ,   ಹೇಗೆ  ಹೆಣ್ಣುಮಗುವಿನ  ದುರಂತಕ್ಕೆ  ಕಾರಣವಾಗುತ್ತದೆ,  ಎಂಬುದನ್ನು  ಲೇಖಕಿ  ಮನಕಲಕುವಂತೇ  ಚಿತ್ರಿಸಲು  ಸಫಲಗೊಂಡಿದ್ದಾರೆ. ʻ

         ಹಸಿರ  ಒಡಲಲ್ಲಿರುವ   ನಮ್ಮ  ಮಲೆನಾಡಿನ  ಹಳ್ಳಿಗಳು   ಕಣ್ಣಿಗೆ  ಸೌಂದರ್ಯ  ತೂರಿದರೂ,  ಆಂತರ್ಯದಲ್ಲಿ  ಬೆಂದು  ಬಳಲುತ್ತಿದೆ.  ಪ್ರತಿ  ಕುಟುಂಬದಲ್ಲೂ   ಉದ್ಯೋಗವನ್ನರಸಿ  ನಗರಕ್ಕೆ  ವಲಸೆಹೋಗಿ,  ಅಲ್ಲಿ  ಭದ್ರ  ಬದುಕನ್ನು  ಕಟ್ಟಿಕೊಂಡವರಿದ್ದಾರೆ.  ಆದರೆ  ಅವಿಭಕ್ತ  ಕುಟುಂಬವಾಗಿ,  ಹಳ್ಳಿಯ  ಮನೆ  ಕೃಷಿಕ್ಷೇತ್ರವನ್ನು  ನೋಡಿಕೊಳ್ಳಲೆಂದು  ಒಬ್ಬ  ಮನೆಯಲ್ಲೇ  ಸಿಕ್ಕಿಬೀಳುತ್ತಾನೆ.  ಕೃಷಿಸಂಬಂಧೀ   ಹತ್ತು  ಹಲವು  ಸಮಸ್ತೆ  ತೊಡಕುಗಳಲ್ಲಿ  ತೊಳಲಾಡುತ್ತಿರುವಾಗಲೇ  ಸಹೋದರರು  ತಮ್ಮ  ಪಾಲಿನ  ಹಕ್ಕು  ಮಂಡಿಸುತ್ತಾರೆ.   ( ಪಾಲು- ಕತೆ )  ಸಾಲ  ಸೋಲವಾದ  ಕುಟುಂಬ  ಹಿಸೆಯಾಗಿ  ಸೋಲುತ್ತದೆ.   ಆದರೆ  ಪ್ರಸ್ತುತ  ಕತೆಯಲ್ಲಿ  ಉದ್ಯೋಗದಲ್ಲಿರುವ  ಸಹೋದರರು  ತಮ್ಮ  ಅಲ್ಪಪಾಲನ್ನು  ದುಡಿದವನಿಗೇ  ನೀಡುವ  ದೊಡ್ಡ  ಮನಸ್ಸುಮಾಡುತ್ತಾರೆ.

     ಇಲ್ಲಿರುವ  ಒಂದೊಂದೂ  ಕತೆಗಳು,  ಒಂದೇ  ಕಾದಂಬರಿಯ  ವಿವಿಧ  ಅಧ್ಯಾಯಗಳೇನೋ  ಅನ್ನಿಸುವಷ್ಟು   ಬೆಸೆದುಕೊಂಡಿವೆ.   ಕತೆಗಳಲ್ಲಿ  ಸೃಷ್ಟಿಗೊಂಡ   ಜಾನಕಿ,  ಶರ್ವಾಣಿ, ಲಲಿತೆ, ಜಯಾ, ಚಿಕ್ಕತ್ತೆ,  ಅನುರಾಧ,  ಮುಂತಾದ  ಸ್ರ್ತೀಪಾತ್ರಗಳು,  ಜೀವಂತವಾಗಿ, ನಮ್ಮ ತಾಯಿಯೋ  ತಂಗಿಯೋ  ಎನ್ನುವಷ್ಟು  ಆತ್ಮೀಯವಾಗಿ  ಮೂಡಿ  ಬಂದಿವೆ.     ಕಷ್ಟಸಹಿಷ್ಣುಗಳಾಗಿ,    ಜೀವನಪ್ರೀತಿ ತುಂಬಿದ  ಸುಪುಷ್ಟ  ಪಾತ್ರಗಳಾಗಿ   ಮೂಡಿ  ಬಂದಿವೆ.   ಸಂಪ್ರದಾಯ  ಮತ್ತು  ಆಧುನಿಕತೆಯ  ನಡುವೆ  ಸಿಲುಕಿ  ಜೀವನದ  ಸಮತೋಲಕ್ಕಾಗಿ  ಹಪಾಹಪಿಸುವ  ಹಿರಿಯ  ಪುರುಷ  ಪಾತ್ರಗಳಾದ,  ತಿಮ್ಮಣ್ನ  ವೆಂಕಣ್ಣ,  ನರಸಭಟ್ಟ,  ಸುಬ್ಬಜ್ಜ ನಂಥ  ಪಾತ್ರಗಳು,  ತಮ್ಮಪರಿಸರದಲ್ಲೇ  ನೆಲೆಸಿ,    ಮನುಷ್ಯನ ಬದುಕಿನ  ಸಂದಿಗ್ಧತೆಯ  ಸಂಕೇತವಾಗುತ್ತಾರೆ. 

      ಮಹತ್ವಪೂರ್ಣ  ಸಾಮಾಜಿಕ  ಸಾಂಸ್ಕೃತಿಕ  ಆರ್ಥಿಕ  ಪಲ್ಲಟಗಳನ್ನೇ  ಗುರಿಯಾಗಿರಿಸಿಕೊಂಡಿರುವ  ಕತೆಗಾರ್ತಿಯ   ಸೋಲುತ್ತಿರುವ  ಗ್ರಾಮಗಳ  ಬಗೆಗಿನ  ಕಳಕಳಿ  ನಿಜಕ್ಕೂ  ಮನಮುಟ್ಟುತ್ತದೆ.  ಅತ್ಯಂತ  ವಾಸ್ತವವಾದಿಯಾಗಿ,  ತನ್ನಸುತ್ತಲಿನ  ಪರಿಸರವನ್ನೇ  ಕಥನ ಕೇಂದ್ರವನ್ನಾಗಿಸಿಕೊಂಡು,  ಬದಲಾದ  ಬದುಕಿನ  ವಿಚಿತ್ರ  ಚಲನೆಯನ್ನು   ಪರಿಣಾಮಕಾರಿಯಾಗಿ  ದಾಖಲಿಸುವ  ಅವರ  ಪ್ರಯತ್ನ  ಶ್ಲಾಘನೀಯ.     ಗುರಿ  ದೊಡ್ಡದಿದೆ.  ಕಥೆಗಳು  ಅತಿವಿವರ,  ವಾಚ್ಯತೆಗಳಿಂದ  ಮುಕ್ತಗೊಳ್ಳಬೇಕಿದೆ.   ಸಾಮಾನ್ಯವಾಗಿ    ಕಂಡುಬರುವ   ಪ್ರೀತಿ  ಪ್ರೇಮ  ಕಾಮಗಳ  ವೈಭವೀಕರಣವಾಗಲೀ,  ಅತಿರಂಜನೆ, ಅತಿಭಾವುಕತೆಯಾಗಲೀ  ನುಸುಳದೇ,  ತಾತ್ವಿಕನೆಲೆಯಲ್ಲೇ   ಶ್ರಮಪಟ್ಟು  ಸಾಗುತ್ತಿರುವ  ಕತೆಗಾರ್ತಿಯಲ್ಲಿ,  ಸಮಾಜವಿಜ್ಞಾನದ  ಸೂಕ್ಷ್ಮವಿದೆ.  ಮಾನವ  ವರ್ತನೆಯ  ವೈವಿಧ್ಯದ  ಅರಿವಿದೆ.   ಇನ್ನಷ್ಟು  ಕಲಾತ್ಮಕತೆ  ಮೈಗೂಡಿದರೆ, ಇನ್ನಷ್ಟು  ಮನಸೆಳೆಯುವ  ಕತೆಗಳು  ಸೃಷ್ಟಿಯಾಗಬಹುದಾಗಿದೆ.

    ನಮ್ಮ  ಮಲೆನಾಡಿನ  ಕುವರಿಯಾದ  ಕಲ್ಪನಾ   ತನ್ನ  ಕಥನ  ಚಟುವಟಿಕೆಯಲ್ಲಿ,  ಇನ್ನಷ್ಟು  ಯಶಸ್ಸನ್ನು  ತನ್ನೊಡಲಲ್ಲಿ  ತುಂಬಿಸಿಕೊಳ್ಳಲೆಂದು  ಈಮೂಲಕ  ಆತ್ಮೀಯವಾಗಿ   ಹಾರೈಸುತ್ತಿದ್ದೇನೆ.

=============================================================

                                                                 

ಗೌರವಾದರಗಳೊಂದಿಗೆ,

                                                                ಸುಬ್ರಾಯ  ಮತ್ತೀಹಳ್ಳಿ.  

                                                                ತಾ-  - ೨೦೨೩.

     

     

No comments:

Post a Comment