Tuesday 26 September 2023

ಪುರಾಣದಿಂದ ವಾಸ್ತವಕ್ಕೆ ʻʻಮಾಧವಿʼʼ

 

                ಅವಲೋಕನ-- ʻʻ ಸುಮʼʼ 28-1-2022   

ಭೀಷ್ಮಸಹಾನಿಯವರಿಂದ  ಕನ್ನಡದ  ಡಾ-ಅನುಪಮಾ  ನಿರಂಜನ  ರವರೆಗೆ,  ಮಹಾಭಾರತದ  ಪುಟ್ಟ  ಕಥೆ  ಮಾಧವಿ  ಕಾಡಿದೆ.  ದೇಶೀಭಾಷೆಗಳಲ್ಲಿ  ನಾಟಕ  ಕತೆ  ಕಾದಂಬರಿಗಳಾಗಿ,  ಪುರಾಣದ  ವಿವಿಧ ಅರ್ಥದ ಆಯಾಮಗಳನ್ನು  ಸ್ಪರ್ಶಿಸುವ  ಪ್ರಕ್ರಿಯೆ  ಅನೂಚಾನವಾಗಿ  ನಡೆದು  ಬರುತ್ತಿದೆ.  ಇತ್ತೀಚಿನ  ದಶಕಗಳಲ್ಲಿ  ಸೃಜನಶೀಲ ಕ್ಷೇತ್ರಕ್ಕೆ  ಪುರಾಣ ಪಾತ್ರಗಳ  ಅವ್ಯಾಹತ  ಆಗಮನವಾಗುತ್ತಿರುವುದು  ನಿಜಕ್ಕೂ  ಕುತೂಹಲಕಾರಿ.  ದ್ರೌಪದಿ, ಅಹಲ್ಯಾ, ಮಂಡೋದರಿ,  ಊರ್ಮಿಳೆ, ಮುಂತಾದ  ಪಾತ್ರಗಳು, ಸ್ತ್ರೀ ಜಗತ್ತಿನ  ಅದೆಷ್ಟೋ  ಗುಹ್ಯ  ಅನುಭವಗಳ  ಅನಾವರಣಕ್ಕೆ  ಸಹಾಯಸಲ್ಲಿಸುತ್ತಿವೆ.   ನಮ್ಮದೇ  ಸಂಸ್ಕೃತಿಯ  ಆಳದಲ್ಲಿ  ಹುದುಗಿರುವ  ವಿವಿಧ  ನೋವು  ತಲ್ಲಣಗಳ,  ಸುಖ  ದುಃಖಗಳ  ಶೋಧನೆಗೆ  ಪುರಾಣ ಪಾತ್ರಗಳು  ಸಹಕರಿದಷ್ಟು  ಮತ್ಯಾವ  ಕಾಲ್ಪನಿಕ  ಪಾತ್ರಗಳೂ  ನೆರವು ನೀಡಲಿಲ್ಲ.

    ಇತ್ತೀಚೆಗೆ  ಶಿರಸಿಯ  ನಯನ ಸಭಾಂಗಣದಲ್ಲಿ  ರಾಜ್ಯಪ್ರಶಸ್ತಿವಿಜೇತ, ಕಲಾನಿರ್ದೇಶಕ  ಡಾ-ಶ್ರೀಪಾದ ಭಟ್ಟರ  ನಿರ್ದೇಶನದಲ್ಲಿ, ಕೈವಲ್ಯ ಕಲಾಕೇಂದ್ರ ದ  ಆಶ್ರಯದಲ್ಲಿ, ಜರುಗಿದ  ʻʻಮಾಧವಿʼʼ ನಾಟಕ, ಹತ್ತು  ಹಲವು ಆಯಾಮಗಳಲ್ಲಿ  ಚಿಂತನೆಗೆ  ತೊಡಗಿಸಿತು.  ಕೋವಿಡ್‌ ನಿರ್ಬಂಧದ ಕಸಿವಿಸಿಯ  ಸಮಯದಲ್ಲೂ  ನಿರ್ದಿಷ್ಟ ಸಂಖ್ಯೆಯ  ಪ್ರೇಕ್ಷಕರ  ಸಮ್ಮುಖದಲ್ಲಿ  ಪ್ರಯೋಗಗೊಂಡ, ದ್ವಿವ್ಯಕ್ತಿ ರಂಗಪ್ರಯೋಗ,  ಸಾಂಸ್ಕೃತಿಕ  ನಿರ್ವಾತ ಕ್ಷಣಕ್ಕೊಂದಿಷ್ಟು ಸಾಂತ್ವನವೊದಗಿಸಿತು.

    ಸುತ್ತಲೂ ಪ್ರೇಕ್ಷಕರು, ನಡುವಣ  ನೆಲದಲ್ಲಿ  ಸರಳಾತಿ ಸರಳ ರಂಗಪರಿಕರಗಳ  ʻʻಆಪ್ತರಂಗಭೂಮಿʼʼ ಸೃಷ್ಟಿಯಾಗಿತ್ತು.  ಪ್ರೇಕ್ಷಕ ಮತ್ತು ಕಲಾವಿದರುಗಳ  ನಿಕಟ ಸಾಮೀಪ್ಯದಲ್ಲಿ,  ಪುರಾಣಕಾಲದ ಹೆಣ್ಣೋರ್ವಳ  ದಯನೀಯ  ದುರಂತವೊಂದು  ಮಾರ್ಮಿಕವಾಗಿ  ಮೂಡಿಬರುತ್ತಿರುವಂತೇ,  ವಾಸ್ತವ ಮತ್ತು ಪುರಾಣಕಾಲಗಳ  ಚಿಂತನೆ  ಮತ್ತು ಮಂಥನದೆಡೆಗೆ  ತನ್ನಂತಾನೇ  ಸೆಳೆದೊಯ್ದಿತು.

     ʻʻ ಯಯಾತಿ ಮಹಾರಾಜನ ಏಕೈಕ ಸುಂದರ ಕುವರಿ ʻʻಮಾಧವಿʼʼ ಪ್ರಾಯಪ್ರಬುದ್ಧಳಾಗಿದ್ದಾಳೆ.  ಅವಳ  ಸ್ವಯಂವರದ ಸಿದ್ಧತೆ  ಭರದಿಂದ ನಡೆಯುತ್ತಿದೆ. ಅದೇ  ಸಂದರ್ಭದಲ್ಲಿ  ವಿಶ್ವಾಮಿತ್ರ ಋಷಿಯ ಶಿಷ್ಯ ʻʻ ಗಾಲವʼʼ ರಾಜನ ಬಳಿ ಬಂದು, ಗುರುದಕ್ಷಿಣೆನೀಡಲು ತನಗೆ  ನಿರ್ದಿಷ್ಟ ಬಣ್ಣದ  ಎಂಟುನೂರು  ಕುದುರೆಗಳು  ಅವಶ್ಯವಾಗಿದೆ. ದಾನಬೇಡಲು ಬಂದಿದ್ದೇನೆ  ಎನ್ನುತ್ತಾನೆ. ಯಯಾತಿಯಲ್ಲಿ  ಕುದುರೆಗಳಿಲ್ಲ. ಹಣನೀಡಲು  ಭಂಡಾರ ಖಾಲಿಯಾಗಿದೆ.  ಋಷಿಕುಮಾರನ ಕೋರಿಕೆಯನ್ನು  ತಿರಸ್ಕರಿಸಿದರೆ  ಶಾಪಕ್ಕೆ ಒಳಗಾಗಬೇಕಾದೀತು. ಎಂಬ ಭಯದಲ್ಲಿ, ತನ್ನ ಮಗಳು ಮಾಧವಿಯನ್ನೇ  ನಿನಗೊಪ್ಪಿಸುತ್ತೇನೆ. ಅವಳನ್ನು ನೀನು  ಯಾರಿಗೆಬೇಕಾದರೂ ಒಪ್ಪಿಸಿ  ಕುದುರೆಗಳನ್ನು ಪಡೆದುಕೋ, ಎನ್ನುತ್ತಾನೆ. ಮಾಧವಿಯನ್ನು  ಕರೆದುಕೊಂಡು  ಗಾಲವ ಹೊರಡುತ್ತಾನೆ.  ಅಲ್ಲಿಂದ  ಅವಳ ದಾರುಣ ದುರಂತದ  ಅಧ್ಯಾಯ  ಅನಾವರಣಗೊಳ್ಳುತ್ತ  ಸಾಗುತ್ತದೆ.  ಯಾವರಾಜರಲ್ಲೂ  ಎಂಟುನೂರು ಕುದುರೆಗಳು ಲಭ್ಯವಿರಲಿಲ್ಲ. ಕೇವಲ ಇನ್ನೂರು  ಕುದುರೆಗಳಿಗಾಗಿ, ವಿವಿಧ  ಮೂರು ರಾಜರುಗಳಿಗೆ, ಒಂದೊಂದು ವರ್ಷದ ಅವಧಿಗಾಗಿ, ರಾಜರಿಗೊಂದು  ಮಗುವನ್ನು  ಹೆತ್ತುಕೊಡುವ ಒಪ್ಪಂದದಲ್ಲಿ  ಒಪ್ಪಿಸಲಾಗುತ್ತದೆ.  ಮೂರು  ವರ್ಷ  ಮೂರು ಮಗುವನ್ನು ಹೆತ್ತು ಕೊಟ್ಟು, ಮಾಧವಿ ಹೊರಬೀಳುತ್ತಾಳೆ. ಗಾಲವನಿಗೆ  ಇನ್ನೂ  ಇನ್ನೂರು ಕುದುರೆಗಳ  ಅವಶ್ಯಕತೆಯಿತ್ತು. ದೇಶದ ಮತ್ಯಾವ ರಾಜರುಗಳಲ್ಲೂ  ದೊರಕದೇ  ಹತಾಶಗೊಂಡು, ಗುರು ವಿಶ್ವಾಮಿತ್ರರ  ಬಳಿ ಬಂದು  ಕಷ್ಟ ಹೇಳಿಕೊಳ್ಳುತ್ತಾನೆ. ಮಾಧವಿಯ ರೂಪಕಂಡ ವಿಶ್ವಾಮಿತ್ರ, ಇನ್ನೂರು  ಕುದುರೆಯ ಪಾಲಿಗೆ. ಮಾಧವಿಯನ್ನೇ  ಒಂದುವರ್ಷದ ಲೆಕ್ಕಕ್ಕೆ  ಬಯಸುತ್ತಾನೆ. ಅವನಿಗೂ  ಒಬ್ಬ ಋಷಿಕುಮಾರನ ಅವಶ್ಯಕತೆಯಿತ್ತು.  ಅಲ್ಲಿಯೂ  ಮಾಧವಿ  ಉಳಿದು  ಒಪ್ಪಂದ ಪೂರೈಸಿ  ಹೊರಟು ನಿಂತಾಗ. ಶಿಷ್ಯ ಗಾಲವನೂ  ಅವಳನ್ನು ಬಯಸುತ್ತಾನೆ. ಮಾಧವಿ ಅವನನ್ನು ಧಿಃಕರಿಸಿ  ಅರಮನೆಗೆ ಮರಳುತ್ತಾಳೆ. ಮಾಧವಿಗೆ  ಮತ್ತೆ ಮತ್ತೆ  ಅಕ್ಷತಯೋನೀ  ಕನ್ಯೆಯಾಗುವ  ವರವಿದೆ. ಯಯಾತಿ ಮಹಾರಾಜ  ಮತ್ತೆ  ಸ್ವಯಂವರ ಏರ್ಪಡಿಸುವ  ತಯಾರಿ ನಡೆಸಿದಾಗ,  ಅವನನ್ನೂ ಧಿಃಕರಿಸಿ, ಅರಮನೆ ಬಿಟ್ಟು ಹೋಗುತ್ತಾಳೆ.

    ಇದು ಸ್ಥೂಲ ಕಥಾವಸ್ತು.      ಪ್ರಭುತ್ವ ಮತ್ತು ಧರ್ಮಗಳು,  ಸ್ವಾರ್ಥಪರವಾಗಿ,  ಹೆಣ್ಣು ಮತ್ತು   ಜನಸಾಮಾನ್ಯರನ್ನು ದುರುಪಯೋಗಿಸಿಕೊಳ್ಳುವ,  ಧಾರ್ಮಿಕ ಕಾನೂನುಗಳ  ಮೂಲಕ  ದಾರುಣವಾಗಿ  ಶೋಷಿಸುವ  ಪ್ರಕ್ರಿಯೆ  ಇಂದು ನಿನ್ನೆಯದಲ್ಲ.  ನಮ್ಮ ಪುರಾಣಗಳು ಇಂಥ ಘಟನೆಗಳನ್ನು  ನಗ್ನಗೊಳಿಸಿವೆ. ರೋಚಕ ಕಥೆಗಳ ಮೂಲಕ  ಸಾರ್ವಕಾಲಿಕವಾಗಿ,  ಎಚ್ಚರಿಸುವ ಕೆಲಸವನ್ನು  ನಡೆಸುತ್ತಲೇ  ಬಂದಿವೆ.

      ಪಾರಂಪರಿಕವಾಗಿ  ನಮ್ಮೆಲ್ಲ  ಧಾರ್ಮಿಕ  ಶಾಸ್ತ್ರ ಸಂಪ್ರದಾಯಗಳು, ಸ್ತ್ರೀಯನ್ನು  ದೇವತೆಯ  ಸ್ಥಾನಕ್ಕೆ  ಏರಿಸಿವೆ.  ವಾಸ್ತವದಲ್ಲಿ, ಅವಳೊಂದು ಭೋಗವಸ್ತು, ಗಂಡಿನ ಅಡಿಯಾಳು. ಅವನ ಆಸ್ತಿ.  ಅವಳ ಬಗೆಗೆ  ನಿರ್ಣಯಿಸುವವನು ಏಕಪಕ್ಷೀಯವಾಗಿ ಪುರುಷ.  ಹೆಣ್ಣಿನ ಆಳದಲ್ಲಿಯೂ  ಆತ್ಮವಿದೆ. ಅವಳಿಗೂ  ಆಸೆ ಕನಸು ಗುರಿಗಳಿವೆ, ವೈಚಾರಿಕತೆಯಿದೆ, ಅವಳಿಗೊಂದು ಸ್ವತಂತ್ರ ಅಸ್ತಿತ್ವವಿದೆ, ಎಂಬ ಸತ್ಯವನ್ನು  ಪುರುಷಪ್ರಭುತ್ವ  ಅರ್ಥೈಸಿಕೊಳ್ಳಲೇ  ಇಲ್ಲ.  ಇದು  ಕೇವಲ  ನಮ್ಮದೊಂದೇ  ಅಲ್ಲ, ಪಾಶ್ಚಾತ್ಯ ರಾಷ್ಟ್ರಗಳೂ  ಸೇರಿವೆ.   ಇಂಗ್ಲಿಶ್‌  ಭಾಷೆಯಲ್ಲಿ  ಪ್ರಕಟವಾದ  ʻʻದಿ. ಸೆಕೆಂಡ್‌ ಸೆಕ್ಸʼʼ  ಕೃತಿಯೂ  ಸಹ  ಇದನ್ನೇ ಧ್ವನಿಸುತ್ತದೆ.

    ಈ ವಸ್ತು  ನಾಟಕವಾಗಿ ರಂಗಭೂಮಿಯಮೇಲೆ  ಪ್ರಯೋಗಗೊಳ್ಳುವಾಗ, ಒಂದು ಪರಂಪರೆಯಮೇಲಣ  ಆರೋಪವೋ, ಆಕ್ರೋಷವೋ  ಆದರೆ, ನಿರರ್ಥಕ ಗೊಂಡೀತು.  ಮಾನವ ಬದುಕಿನ  ಸಾವಿರಾರು  ವರ್ಷಗಳ  ಸುದೀರ್ಘ ಪಯಣದಲ್ಲಿ,  ಅದೆಷ್ಟು  ಸಮೃದ್ಧಿಯಿದೆಯೋ, ಅಷ್ಟೇ  ಬರಗಾಲವೂ ಇದೆ.  ತಾತ್ವಿಕ ಎತ್ತರವಿದ್ದಂತೇ, ಶೋಷಣೆಯ ಆಳವೂ ಇದೆ. ಇಲ್ಲಿ  ಹಂಸಕ್ಷೀರ  ನ್ಯಾಯ ಅವಶ್ಯ.  ಅಂಥ  ನ್ಯಾಯದ ಪರಿಕಲ್ಪನೆಯಲ್ಲಿ, ರಂಗರೂಪಕ್ಕಿಳಿಸಿದ  ನಿರ್ದೇಶಕರ,ಮತ್ತು, ಪಠ್ಯ  ಸಿದ್ಧಗೊಳಿಸಿದ  ಸುಧಾ ಆಡುಕುಳರವರ  ಸೂಕ್ಷ್ಮತೆ  ಮೆಚ್ಚುವಂಥದ್ದಾಗಿದೆ.

   ಕೇವಲ  ಒಂದು ತಾಸಿನ ಪ್ರಸ್ತುತ ಪ್ರಯೋಗದಲ್ಲಿ, ಸಂಭಾಷಣೆ, ರಂಗಪರಿಕರ, ಸಂಗೀತ, ಮತ್ತು ಬೆಳಕುಗಳ  ಉಪಯೋಗ  ಸಾರ್ಥಕಗೊಂಡಿತು.  ಮಾತು ಮಾತುಗಳ  ನಡುವಣ  ಅರ್ಥಪೂರ್ಣ  ಮೌನಕ್ಕೆ  ಗಾಢ ತಾತ್ವಿಕತೆ ಒದಗಿತು. ತೀವ್ರ ಮಾನಸಿಕ ತುಮುಲಗಳನ್ನು  ಚಂಡೆವಾದನ  ಧ್ವನಿಸಿದರೆ, ನೆಲ  ಉಸಿರು  ದೇಹ ಮತ್ತು ಹಾಡುಗಳು, ತಾತ್ವಿಕತೆಯನ್ನು  ತತ್ವದ ದುರಂತವನ್ನು  ಸಮರ್ಥವಾಗಿ  ಧ್ವನಿಸಿತು. ರಂಗದ  ಹಿನ್ನೆಲೆಯಲ್ಲಿ  ಹಬ್ಬಿಕೊಂಡ  ಜೇಡರ ಬಲೆ, ಕುದುರೆ, ಮತ್ತು ಆಗಾಗ  ಕಾಣಿಸಿಕೊಳ್ಳುವ  ಹದ್ದು, ಮತ್ತು ಕತ್ತಲೆ ಬೆಳಕುಗಳು, ನಾಟಕದ  ಆಶಯಕ್ಕೆ ಪುಷ್ಟಿನೀಡಿದವು. 

      ಹೆತ್ತ ತಕ್ಷಣ, ಮಗುವು ಪರರಪಾಲಾಗುವ ಸಂದರ್ಭದಲ್ಲಿ, ತಾಯಿ, ಹೊಟ್ಟೆ ಮತ್ತು ಎದೆಯನ್ನು ಲಯಬಧ್ದವಾಗಿ  ಬಾರಿಸುವ ಮೂಲಕ  ತಾಯ್ತನದ ತೀವ್ರತೆಯನ್ನು  ಅಭಿವ್ಯಕ್ತಿಸಿದರೆ, ಮನಸ್ಸಿನಲ್ಲೇಳುವ  ಅಗಾಧ  ಆಕ್ರೋಶವನ್ನು  ನೆಲವನ್ನೇ ಬಾರಿಸುವಲ್ಲಿ, ತೋರ್ಪಡಿಸುತ್ತಾಳೆ. ಮಗುವಿನ ಸಂಕೇತವಾಗಿ  ಖಾಲಿಘಟ, ಅರ್ಥವಂತಿಕೆ ಸಾಧಿಸಿದೆ. ಮಗುವನ್ನು ಲಾಲಿಸುವ ದೃಶ್ಯ ಘಟಬಾರಿಸುವಲ್ಲಿ  ಸಾರ್ಥಕ ಗೊಂಡಿದೆ.  ಒಂದೇ  ಮಣ್ಣಿನ  ಕುಂಭವನ್ನು  ತಾಯಿ ನುಡಿಸುವ  ಲಯಕ್ಕೂ,  ಗಂಡು ಬಾರಿಸುವ  ಬಡಿತಕ್ಕೂ ಇರುವ  ಭಿನ್ನತೆ, ತಾಯ್ತನದ ಗಾಢ ಪ್ರಭಾವವನ್ನು  ಧ್ವನಿಸುವಲ್ಲಿ  ಸಾರ್ಥಕ ಗೊಂಡಿತು. ಸಂಭಾಷಣೆಯ  ಪುಟ್ಟ ಪುಟ್ಟ ಪಲುಕುಗಳೂ  ಪ್ರೇಕ್ಷಕರನ್ನು  ತಲುಪಿ  ಕಲಕಿವೆ.  ನಾಟಕ  ಗೆಲ್ಲುವುದು, ಮಾತುಗಳ  ನಡುವಣ  ಅರ್ಥಪೂರ್ಣ ಮೌನದಿಂದ. ಕತ್ತಲೆ  ಬೆಳಕಿನಿಂದ.  ನೆಲವನ್ನು  ಹೊಟ್ಟೆ ಮತ್ತು  ಎದೆಯನ್ನು, ಲಯಬದ್ಧವಾಗಿ  ತಡವುತ್ತ, ಬಾರಿಸುತ್ತ, ತಾನು  ಅದಾಗತಾನೇ  ಹೆತ್ತ  ಮಗುವನ್ನು  ಅಪಹರಿಸಿದ  ತಾಯ್ತನದ  ದಯನೀಯ  ಆಕ್ರೋಶವನ್ನು  ಅಭಿವ್ಯಕ್ತಿಸುವ  ಮಾಧವಿಯ  ಆಕ್ರೋಶ  ಮನಸ್ಸನ್ನು  ಕಲಕುತ್ತದೆ.

    ಒಂದೇ  ಒಂದು  ಪುರುಷಪಾತ್ರ   ರಾಜ, ಋಷಿ, ಋಷಿಕುಮಾರ, ನಾಗಿ, ಪರಿವರ್ತಿತವಾಗುವುದು    ಪುರುಷ  ಪ್ರಭುತ್ವ  ಸೃಷ್ಟಿಸಿದ  ರಾಜಕೀಯ  ಧರ್ಮ ಮತ್ತು ನ್ಯಾಯವ್ಯವಸ್ಥೆಯ  ಆಳದಲ್ಲಿಯ  ಶೋಷಣೆಯನ್ನು  ಅನಾವರಣ ಗೊಳಿಸಿದೆ.

   ಒಟ್ಟಿನಲ್ಲಿ  ಸಾಮಾನ್ಯಪ್ರೇಕ್ಷಕ  ಸಾಮಾನ್ಯವಾಗಿ ಬಯಸುವ  ರಂಜನೀಯ ಅಂಶದ  ಕೊಂಚ  ಕೊರತೆಯಿದ್ದರೂ, ಹತ್ತು ಹಲವು ಪ್ರಶ್ನೆಗಳನ್ನು ಮೂಡಿಸುವ  ಚಿಂತನೆಗೆ ತೊಡಗಿಸುವ ಸಾರ್ಥಕ ರಂಗಪ್ರಯೋಗವಾಗಿ  ರೂಪುಗೊಂಡಿರುವ  ʻʻಮಾಧವಿʼʼ  ಹಲವು ದಿನಗಳು ಕಾಡುವ ಗುಣ ಪಡೆದಿದೆ.

    ಉದಯೋನ್ಮುಖ  ಕಲಾವಿದೆ   ದಿವ್ಯಶ್ರೀ ನಾಯಕ  ಸುಳ್ಯ, ಭಾವಾಭಿನಯ, ಸಂಭಾಷಣೆಯಮೂಲಕ  ತಾನೊಬ್ಬ  ಸಮರ್ಥ  ಕಲಾವಿದೆಯಾಗುತ್ತೇನೆಂಬ ಭರವಸೆ  ಮೂಡಿಸಿದ್ದಾಳೆ.  ಅವಳು  ಯಕ್ಷಗಾನ  ಚಂಡೆವಾದನ ಪರಿಣತೆಯೂ ಸಹ.

ಇನ್ನೊಬ್ಬ ಪಾತ್ರಧಾರಿ  ಶರತ್‌ ಬೋಪಣ್ಣ, ರಾಜ ಋಷಿ ಋಷಿಕುಮಾರರಂಥ ವೈವಿಧ್ಯಮಯ   ಪಾತ್ರಗಳಲ್ಲಿ, ಅಭಿನಯಿಸುವ  ದೊಡ್ಡ ಸವಾಲನ್ನು ಎದುರಿಸಿದರು. 

ರಂಗವಿನ್ಯಾಸ  ನಿರ್ದೇಶನ  ಶ್ರೀಪಾದ ಭಟ್ಟರದ್ದಾದರೆ  ಸಹನಿರ್ದೇಶನ   ಗಣೇಶ ಭೀಮನಕೋಣೆಯವರದಾಗಿತ್ತು. 

ಪ್ರಸ್ತುತ  ಮಾಧವಿ  ನಾಟಕದ  ಪ್ರಥಮಪ್ರಯೋಗ ಇದಾದರೆ,  ಉತ್ತರಕನ್ನಡ  ಮತ್ತು  ದಕ್ಷಿಣಕನ್ನಡ ಜಿಲ್ಲೆಯಾದ್ಯಂತ  ಇನ್ನೂ  ಹದಿನೈದು  ಪ್ರಯೋಗಗಳನ್ನು ಕಾಣಲಿದೆ.

 

 

   

 

 ಪ್ರಯೋಗಾನಂತರದ  ಸಂವಾದದಲ್ಲಿ, ಮೂಡಿಬಂದ  ಸಲಹೆ  ಸೂಚನೆಗಳು.

ಡಾ- ಶಿವರಾಮ್.‌   ಪ್ರಾಯೋಗಿಕ  ನಾಟಕಗಳೆಲ್ಲ, ನಮ್ಮ ಪರಂಪರೆಯ  ಋಣಾತ್ಮಕತೆಯನ್ನೇ  ಏಕೆ  ವಿಜ್ರಂಭಿಸುತ್ತವೆ..? ಇನ್ನಿತರ  ಧರ್ಮಗಳಲ್ಲಿ  ದೌರ್ಬಲ್ಯ  ಶೋಷಣೆಗಳಿಲ್ಲವೇ?

ಡಾ-ಶ್ರೀಪಾದ ಭಟ್.‌      ಹಾಗೇನಿಲ್ಲ.  ಉಳಿದ  ಧರ್ಮದ ವಿವಿಧ ಸಮಸ್ಯೆಗಳ  ಬಗೆಗೂ  ಅದೇ ಧರ್ಮದ  ಸಮರ್ಥ  ನಿರ್ದೇಶಕರುಗಳು  ರಂಗದ  ಮೂಲಕ  ಬೆಳಕು ಚೆಲ್ಲುತ್ತಿದ್ದಾರೆ.ನಮ್ಮ ದೌರ್ಬಲ್ಯವನ್ನು  ನಾವೇ  ಹೇಳಿಕೊಂಡಾಗ  ಅರ್ಥಪೂರ್ಣ ಸಂವಾದ  ಏರ್ಪಡಲು ಸಾಧ್ಯ.ಪರಧರ್ಮದ  ಸಮಸ್ಯೆಯನ್ನು  ನಾವು ಹೇಳುವುದು  ನೈತಿಕವಾಗಿ  ಸರಿಯಲ್ಲ ವೆಂದೆನ್ನಿಸುತ್ತದೆ.

ಡಾ- ವಿಜಯ ನಳಿನಿ ರಮೇಶ್‌,     ಪ್ರಯೋಗ  ತಾತ್ವಿಕವಾಗಿ, ತಾಂತ್ರಿಕವಾಗಿ  ಕಲಾತ್ಮಕವಾಗಿ  ಯಶ  ಪಡೆದಿದೆ.

ಸುಬ್ರಾಯ  ಮತ್ತೀಹಳ್ಳಿ---  ಪುರಾಣಗಳು  ಕೇವಲ ಕಾಲ್ಪನಿಕವಲ್ಲ.  ಗತದ  ಕಟುಸತ್ಯವನ್ನು ಸಂಕೇತದ  ಮೂಲಕ  ಅಭಿವ್ಯಕ್ತಿಸುವ  ಅಪೂರ್ವ ದಾಖಲೆ. ಗತ ಜೀವನ ಪ್ರವಾಹದಲ್ಲಿ  ಘಟಿಸುವ  ಹತ್ತು  ಹಲವು  ತಪ್ಪುಗಳನ್ನು  ಅರಿತುಕೊಳ್ಳುವ  ಮೂಲಕ  ವಾಸ್ತವದ  ಬದುಕನ್ನು  ನಯಗೊಳಿಸಬಹುದಾಗಿದೆ.  ಪ್ರಯೋಗ  ಶ್ರೀಮದ್ಗಾಂಭೀರ್ಯದ ಜೊತೆಗೆ  ಕೊಂಚ  ರಂಜನೀಯತೆಯನ್ನೂ  ಒಳಗೊಂಡಿದ್ದರೆ, ಸಾಮಾನ್ಯ ಪ್ರೇಕ್ಷಕರನ್ನು ಇನ್ನೂ  ಹೆಚ್ಚು ತಲುಪುವ ಶಕ್ತಿ  ಪಡೆಯುತ್ತಿತ್ತು  ಎಂದೆನ್ನಿಸುತ್ತಿದೆ.

ಡಾಕ್ಟರ್-ರಾಯ್ಸದ್----‌   ಪುರಾಣಗಳು  ಪ್ರಾಚೀನ  ಅಸ್ತಿಪಂಜರಗಳಲ್ಲ.  ಪರಂಪರೆಯ  ನಿತ್ಯನವೀನ ಆಸ್ತಿ.  ಅದನ್ನು  ಅರ್ಥಮಾಡಿಕೊಳ್ಳುವ  ವಿಶಿಷ್ಟ  ಮನೋಸ್ಥಿತಿ  ಅವಶ್ಯ. ನಮ್ಮ ಪುರಾಣಗಳಲ್ಲಿ, ಇಂಥ ರೋಚಕ  ಸಾವಿರಾರು ಕಥೆಗಳಿವೆ, ರೂಪಕಗಳಿವೆ.  ಅದು ಇಂದಿನ ಆಧುನಿಕ ಮನಸ್ಸಿನ  ತಲ್ಲಣಗಳಿಗೆ, ಗೊಂದಲಗಳಿಗೆ  ದಾರಿದೀಪವಾಗಬಲ್ಲದು.

No comments:

Post a Comment