Thursday 21 September 2023

ಅರ್ಥಪೂರ್ಣ ಕಾದಂಬರಿ ʻʻ ಗಾಂಧಾರಿʼʼ

 

      ಕಿಚ್ಚಾಗಿ  ಉರಿದ  ವರ್ತಮಾನವೇ   ಭೂತವಾಗಿ  ಕಾಡುವ,  ಭವಿಷ್ಯವನ್ನೇ  ನುಚ್ಚುನುರಿಯಾಗಿಸುವ   ದುರಂತಮಯ  ಸನ್ನಿವೇಶವನ್ನು   ಮಹಾಭಾರತದ   ವಿಸ್ತಾರದಲ್ಲಿ   ಗಾಂಧಾರಿಯ  ಪ್ರಜ್ಞಾಪ್ರವಾಹವನ್ನು  ಅರ್ಥೈಸಿಕೊಳ್ಳುವ   ಅನುಪಮ  ಪ್ರಯತ್ನದಲ್ಲಿ   ಉದಯಕುಮಾರ್‌  ಹಬ್ಬು  ತೊಡಗಿರುವುದನ್ನು  ಕಂಡು  ಬೆರಗಾದೆ. ಇದೀಗ ಲೋಕಾರ್ಪಣೆಗೊಳ್ಳುತ್ತಿರುವ  ಇವರ ಮಹಾತ್ವಾಕಾಂಕ್ಷೀ ಕೃತಿ ʻʻಗಾಂಧಾರಿ ʼʼ ಕಾದಂಬರಿ  ಕೇವಲ ಮಹಾಭಾರತದ  ಪಾತ್ರಗಳ  ಪುನರ್ವ್ಯಾಖ್ಯಾನವಾಗದೇ  ಆಧುನಿಕ  ಮನುಷ್ಯನ  ಬದುಕಿನ  ಸಂಘರ್ಷ  ಸಂಕಟವನ್ನೂ  ತನ್ನ ಒಡಲಾಳದಲ್ಲಿ  ಹುದುಗಿಸಿಕೊಂಡು, ಮಾನವ ಬದುಕಿನ ಸತ್ಯಶೋಧನೆಗೆ  ತೊಡಗುತ್ತದೆ.

    ಮನುಷ್ಯ  ಜನ್ಮಿಸುವಾಗ  ಒಂಟಿ.  ಹೊರಡುವಾಗಲೂ  ಒಂಟಿಯೇ.  ಆದರೆ  ನಡುವಣ   ಒಂದಿಷ್ಟು  ಸಮಯದಲ್ಲಿ  ಅವನಂಟಿಸಿಕೊಳ್ಳುವ  ಅಸಂಖ್ಯಾತ  ಗೋಜಲುಗಳ  ಜಾಲದಲ್ಲಿ,   ಇಡೀ  ಬದುಕನ್ನೇ  ಕೊಳಚೆಯನ್ನಾಗಿಸಿಕೊಳ್ಳುವ   ವಿಚಿತ್ರ  ದ್ವಂದ್ವವನ್ನು  ಅರ್ಥೈಸಿಕೊಳ್ಳುವುದು, ಮತ್ತು  ಬದುಕಿನ  ಆಳದಲ್ಲಿ  ಸದಾ  ಮಿನುಗುತ್ತಲೇ  ಇರುವ  ಮಾನವೀಯ  ಸಂವೇದನೆಯ  ಕ್ಷೀಣ  ಬೆಳಕನ್ನು  ಗುರುತಿಸಿಕೊಳ್ಳುವುದು,   ಹಬ್ಬುರವರ  ಮಹಾತ್ವಾಕಾಂಕ್ಷೆ   ಎಂದೆನ್ನಿಸುವ     ʻʻ  ಗಾಂಧಾರಿಯ  ಸ್ವಗತʼʼ   ಕೃತಿ   ಓದುತ್ತಿರುವಂತೆಯೇ   ಓದುಗನನ್ನೂ  ಮತ್ತೊಮ್ಮೆ  ವಿಚಲಿತ  ಗೊಳಿಸುತ್ತದೆ. 

       ನಾವು  ಯಾರು,  ಯಾಕಿಲ್ಲಿ  ಉದ್ಭವಿಸಿದ್ದೇವೆ.  ಅಪ್ಪನ  ಲಕ್ಷಾಂತರ  ವೀರ್ಯಾಣುಗಳ   ಅಸದೃಷ  ಪೈಪೋಟಿಯಲ್ಲಿ   ನನ್ನ  ಅಣುವೇ  ಹೇಗೆ  ಆಯ್ಕೆಯಾಯಿತು.   ನನ್ನ  ಹುಟ್ಟೇ  ಒಂದು  ಆಗಸ್ಮಿಕ.  ಇಂಥ  ಆಕಸ್ಮಿಕ  ಜನ್ಮಕ್ಕೆ   ಅರ್ಥಪೂರ್ಣತೆಯನ್ನು      ನೀಡದೇಇದ್ದಲ್ಲಿ,     ಹುಟ್ಟಿಗೊಂದು     ಅಸ್ತಿತ್ವಕ್ಕೊಂದು   ಅರ್ಥವಿದೆಯೇ..?    ಇದ್ದರೆ   ಯಾವ  ಅರ್ಥ...?  ಇದು  ಕತೆಗಾರ  ಯಶವಂತ  ಚಿತ್ತಾಲರಿಗೆ  ಕಾಡಿದ  ಪ್ರಶ್ನೆ.  ಮರಗಳಲ್ಲಿ  ಲಕ್ಷಾಂತರ  ಬೀಜಗಳ  ಸೃಷ್ಟಿ.  ವೀರ್ಯದಲ್ಲಿ  ಲಕ್ಷಾಂತರ  ಅಣುಗಳ  ವೃಷ್ಠಿ,   ಪ್ರಕೃತಿಗೂ  ಭಯವಿದೆ. ಆತಂಕವಿದೆ.  ಎಲ್ಲವೂ  ಯಶಪಡೆಯುವುದಿಲ್ಲ.  ಆದರೂ  ಜೀವಜಾಲ  ತುಂಡಾಗಬಾರದು.  ಏನೇ  ಆಗಲಿ  ತಾನು  ಮುನ್ನುಗ್ಗಲೇ  ಬೇಕು  ಎಂಬ  ಉತ್ಕಟ  ಛಲ  ಪ್ರಕೃತಿಯಲ್ಲಿದ್ದಂತೇ    ಜೀವಿಗಳೂ  ಹಾಗೆಯೇ  ವರ್ತಿಸುತ್ತವಲ್ಲ.   

      ಮನುಷ್ಯ  ಸಂಘಜೀವಿ  ಸರಿ.  ಆದರೂ  ಆತ ದೈಹಿಕವಾಗಿ  ಪ್ರಾಣಿಗಳಿಗಿಂತ  ದುರ್ಬಲ.  ಒಂಟಿ.  ಒಂಟಿತನದ  ಸುರಕ್ಷೆಗಾಗಿ  ಸಂಘಜೀವನ.   ಅದೇ  ಕಾರಣಕ್ಕೆ  ಸ್ವಾರ್ಥ  ಅಹಮ್.‌   ತಾನು   ಎಂಬುದರ  ಸುತ್ತು  ಗಿರಕಿ  ಹೊಡೆಯುವುದೇ  ತನ್ನದು  ತನ್ನವರು ಎಂಬ  ಗುಂಗು.  ಅದೇ  ಬದುಕಿನ  ಮೂಲ  ಬೀಜಮಂತ್ರಗಳು.  ಅದಕ್ಕೆ  ಸಂವಾದಿಯಾಗಿಯೇ  ಮತಗಳು,  ಧರ್ಮಗಳು.  ಕುಟುಂಬ,  ದೇಶಗಳು.   ಇಂಥ  ಸಂಕುಚಿತತೆಯೇ   ಹತ್ತು  ಹಲವು  ದ್ವಂದ್ವ,  ಸ್ವಾರ್ಥ  ಸಿದ್ಧಾಂತ  ನಿಯಮ  ಕಟ್ಟುಪಾಡುಗಳನ್ನು  ಸೃಷ್ಟಿಸುತ್ತವೆ.  ಅದೇ  ಅವನನ್ನು  ಕಟ್ಟಿಹಾಕುತ್ತವೆ.

    ಇಡೀ  ಮಹಾಭಾರತ  ಧ್ಯಾನಿಸುವುದೂ  ಅದನ್ನೇ.  ಅದೆಷ್ಟು  ನೀತಿಪರ  ವಾತಾವರಣವನ್ನು  ಸೃಷ್ಟಿಸಿದರೂ  ಮನುಷ್ಯ  ಉಸಿರಾಡುವುದು  ಮಾತ್ರ  ಸ್ವಾರ್ಥ  ಚಿಂತನೆಯಲ್ಲಿ.   ಎಲ್ಲ ತಿಳಿದೂ   ಮಾನವೀಯ  ಮೌಲ್ಯಗಳನ್ನು  ಗಾಳಿಗೆ  ತೂರಿ  ಕ್ಷಣಿಕ  ಲಾಭಕ್ಕಾಗಿ   ಮುನ್ನುಗ್ಗುವ  ವೈಚಿತ್ರ್ಯದ   ಆಳವನ್ನು  ಸಂಶೋಧಿಸುವ  ಮಹಾ  ಪ್ರಯತ್ನಕ್ಕೇ   ತೊಡಗಿದೆಯೇನೋ  ಮಹಾಭಾರತ,  ಎಂದೆನ್ನಿಸುತ್ತದೆ.

    ಮಹಾಭಾರತ  ಯುದ್ದ  ಆಗತಾನೆ  ಮುಗಿದಿತ್ತು.   ಪಾಂಡವರೆಲ್ಲ  ತಾವು  ಧರ್ಮವಿಜಯಿಗಳಾಗಿದ್ದೇವೆ  ಎಂಬ  ಸಂತಸದಲ್ಲಿ   ಮೈಮರೆತು  ಯುದ್ಧರಂಗದಲ್ಲೇ  ವಿಜಯೋತ್ಸವವನ್ನು  ಆಚರಿಸುತ್ತಿದ್ದರಂತೆ.  ಯುದ್ಧಮದ್ಯದಲ್ಲೇ  ಪಾಂಡವರ  ತಪ್ಪುಗಳನ್ನು  ಅಧರ್ಮವನ್ನು  ವಿರೋಧಿಸುತ್ತಿದ್ದ ʻʻ ಊರ್ಧ್ವರೋಮ ʼʼ  ಕುರುಕ್ಷೇತ್ರ  ನಿರ್ಮಾಣವಾಗಿ  ಲಕ್ಷ  ಲಕ್ಷ  ಹೆಣಗಳು  ಉರುಳಿದ್ದೇ  ಪಾಂಡವರ  ಕಾರಣದಿಂದ  ಎಂಬ  ಸತ್ಯವನ್ನು  ಘೋಷಿಸಿದಾಗ,  ಭೀಮ  ಆತನ  ತಲೆಕಡಿದು  ಬಿಡುತ್ತಾನಂತೆ.

    ಭಯ ಪೀಡಿತ  ಮನುಷ್ಯ  ಕೋಟೆ  ಕೊತ್ತಲಗಳನ್ನು,  ಭದ್ರ  ಸೈನ್ಯ  ಶಸ್ತ್ರಾಸ್ತ್ರ ಗಳನ್ನು,  ಮಠ   ಮಂದಿರಗಳನ್ನು,   ಸೃಷ್ಟಿಸಿಕೊಳ್ಳುತ್ತಾನೆ.    ಆದರೆ   ಕಾಲಕ್ಕೆ  ಅದರದ್ದೇ  ಆದ  ನಿಯತಿಯಿದೆ.  ಪ್ರಕೃತಿಗೆ  ಅದರದ್ದೇ  ಆದ  ತತ್ವವಿದೆ..   ಪ್ರಕೃತಿ  ಮತ್ತು  ಕಾಲಗಳನ್ನು  ಅರ್ಥೈಸಿಕೊಳ್ಳದ   ಮನುಷ್ಯ   ತನ್ನದೇ  ಆದ  ತಾತ್ವಿಕ  ಭದ್ರತೆಯನ್ನು  ಸೃಷ್ಟಿಸಿಕೊಳ್ಳಲು  ಹೆಣಗುತ್ತಾನೆ.  ಅದೇ  ಬಂಧನವಾಗಿ  ಅವನ  ದುರಂತಕ್ಕೂ  ಕಾರಣವಾಗಿಬಿಡುತ್ತದೆ.   ತಾನು ಸೃಷ್ಟಿಸಿದ್ದೇ  ಶಾಶ್ವತ  ಎಂಬ  ಭ್ರಮೆಯಲ್ಲಿ   ತನ್ನದೇ  ಗೋರಿ  ತೋಡಿಕೊಳ್ಳುತ್ತಿರುವ   ಅದೆಷ್ಟು  ಐತಿಹಾಸಿಕ  ಪೌರಾಣಿಕ  ದುರಂತಗಳನ್ನು  ನಾವು  ನೋಡಿಲ್ಲ..?   ಆದರೂ   ನಾವು   ನಮ್ಮ  ಭ್ರಮೆಗಳಿಂದ   ಮುಕ್ತಗೊಂಡಿಲ್ಲ.  ಮತ್ತದೇ   ನಿಂತ  ನೀರಿನಲ್ಲಿ   ಹರಿವಿನ  ಕನಸು  ಕಟ್ಟುತ್ತೇವೆ. 

        ಹಿನ್ನೆಲೆಯಲ್ಲಿ   ನಾವು  ಮತ್ತೆ  ಮಹಾಭಾರತಕ್ಕೆ  ಶರಣಾಗಬೇಕು.   ವಿಶ್ವದ  ಏಕೈಕ   ಬೃಹತ್ತಾದ ,  ಮಾನವ  ಬದುಕಿನ   ಸಾರ್ವಕಾಲಿಕ  ಹಣೆಬರಹವನ್ನು   ಟಂಕಿಸಿದ    ಈ ಜಾಗತಿಕ  ಮಹಾಕಾವ್ಯ    ಅದೆಷ್ಟು  ಸಹಸ್ರ  ಮಾನ   ಗತಿಸಿದರೂ   ಸತ್ಯವೇ..   ಗೆದ್ದವ  ಸೋತ,  ಸೋತವ  ಸತ್ತ,  ಇದು  ಮಹಾಭಾರತದ   ಮಹಾನ್‌  ವಾಕ್ಯ.  ಮನುಷ್ಯನ  ಶಕ್ತಿ  ದೌರ್ಬಲ್ಯಗಳ  ಸಾರ್ವಕಾಲಿಕ  ಸತ್ಯವನ್ನು   ಅದೆಷ್ಟು  ಪರಿಣಾಮಕಾರಿಯಾಗಿ,  ರಂಜನೀಯವಾಗಿ    ಅಂತರಂಗಕ್ಕಿಳಿಸುವ   ಸಾಮರ್ಥ್ಯಪಡೆದಿದೆ.   ಅಂದರೆ,   ಎಲ್ಲ  ಶತಮಾನಗಳಲ್ಲೂ,  ಸಂವೇದನಾ  ಶೀಲರನ್ನು   ಕೆಣಕಿ  ಕಾಡಿ   ಸಂಚಲನ  ಮೂಡಿಸಿದೆ.    ಬದುಕಿನ  ಅದಮ್ಯ  ವ್ಯಾಮೋಹದಲ್ಲಿ   ದುರ್ಯೋಧನ ನಾಗುತ್ತಿರುವ   ಆಧುನಿಕ  ಮನುಷ್ಯನನ್ನು   ಮತ್ತೆ  ಮತ್ತೆ  ಬಡಿದೆಬ್ಬಿಸುವ   ಅಸಾಧಾರಣ  ಸಾಮರ್ಥ್ಯ   ಪ್ರಸ್ತುತ  ಮಹಾಕಾವ್ಯಕ್ಕಿದೆ.

     ಧರ್ಮವೇನೆಂಬುದು  ಗೊತ್ತು.  ಅನುಸರಿಸಲಾರೆ.  ಅಧರ್ಮ  ಏನೆಂಬುದೂ  ಗೊತ್ತು  ಬಿಡಲಾರೆ,   ಈಮಾತು  ದುರ್ಯೋಧನನ  ಪ್ರಲಾಪವೊಂದೇ  ಅಲ್ಲ.  ನಮ್ಮೆಲ್ಲರದ್ದೂ  ಹೌದು.   ಅಷ್ಟಕ್ಕೂ ದೇವರು  ಧರ್ಮ  ಅಂದರೇನು  ಎಂಬ  ಪ್ರಶ್ನೆಗೆ   ಈವರೆಗೂ  ನಿಖರ  ಉತ್ತರ  ಸಿಕ್ಕಿಲ್ಲ.   ಸನ್ಯಾಸಿಗೆ  ಅವನ  ದಾರಿಯೇ  ಧರ್ಮ.   ಕಟುಕನಿಗೂ  ಅಷ್ಟೇ  ಕಟುಕತನವೇ  ಧರ್ಮ.  ಧರ್ಮ  ಎಂಬ  ಶಬ್ದ  ಶೋಷಣೆಗೊಳಗಾದಷ್ಟು  ಮಾನವ  ಜಗತ್ತಿನಲ್ಲಿ  ಮತ್ಯಾವ  ಶಬ್ದವೂ  ಆಗಿಲ್ಲವೆಂದೆನ್ನಿಸುತ್ತದೆ. 

      ಗಾಂಧಾರಿ  ಕುರುಡನ  ಮಡದಿಯಾದಂದಿನಿಂದ   ಕೊಟ್ಟ  ಕೊನೆಯ  ವಾನಪ್ರಸ್ಥ  ಮತ್ತು  ಮಹಾಪ್ರಸ್ಥಾನ ದ  ವರೆಗಿನ   ತನ್ನ  ಸುದೀರ್ಘ  ಬದುಕನ್ನು   ತನ್ನ  ಅಂತಿಮ  ಕ್ಷಣದಲ್ಲಿ  ವಿಮರ್ಶಿಸಿಕೊಳ್ಳಲು  ತೊಡಗುತ್ತಾಳೆ.     ಸಂವೇದನಾಶೀಲ ತಾಯ್ತನದ    ಅಂತರಂಗವನ್ನೂ  ಕಾಯ್ದಿಟ್ಟುಕೊಂಡ  ಗಾಂಧಾರಿ,   ಪುತ್ರಪ್ರೇಮದ  ಅಮಲಿನಲ್ಲಿ,  ತಾತ್ವಿಕತೆಯನ್ನು  ಕಳೆದುಕೊಳ್ಳುತ್ತ,   ಪಾಪ  ಘಟಿಸಿದಾಗೆಲ್ಲ  ತಾಪದಲ್ಲಿ  ನರಳುವ   ದ್ವಂದ್ವವ್ಯಕ್ತಿತ್ವ  ಆಕೆಯದು.  ಕುರುಕ್ಷೇತ್ರದ  ಮಹಾಯುದ್ಧ  ಅವಳ  ಸಂತಾನವನ್ನೆಲ್ಲ  ಬಲಿತೆಗೆದು ಕೊಂಡಿದೆ.  ಪಾಂಡವರ  ಕೈಗೆ  ಅಧಿಕಾರ ಮತ್ತು ಅರಮನೆ  ಸೇರಿದೆ.  ಅದನ್ನೆಲ್ಲ  ಕಂಡು  ಸಹಿಸಲಾರದ  ಗಾಂಧಾರಿ 

       ʻʻ  ಜಾರೆ  ಕುಂತಿ  ಮೈತೆವಲಿಗೆ  ಕರ್ಣನನ್ನು ಜನ್ಮಕೊಡುವಾಗಲೇ  ಕುಂತೀಭೋಜ  ಯಾಕೆ  ಕಡಿದು  ತುಂಡುಮಾಡಲಿಲ್ಲ...? ಕುಂತಿಭೋಜ  ಕುಲಾಂತಕಿ, ಈಕೆ  ಕುರುಕುಲಾಂತಕಿ !  ಯಾರ್ಯಾರಿಗೋ  ಮೈ ತೆತ್ತು  ಪಡೆದಳಲ್ಲಾ ಮಗುವನ್ನು ನನಗಿಂತ  ಮೊದಲೇ,  ವೇಶ್ಯೆ  !  ವಾರಾಂಗಿನಿ !  .......  ಇವಳ  ದೇಹವಿಡೀ  ಕಾಮವೇ  ತುಂಬಿಕೊಂಡಿತ್ತಲ್ಲವೇ...?  ನನಗೆ  ನನ್ನ  ಓರೆಗಿತ್ತಿ  ನನಗಿಂತ ಮೊದಲೇ  ಹೆತ್ತು  ನನ್ನ ಮಕ್ಕಳ  ಭವಿಷ್ಯತ್ತನ್ನೇ   ಚಿವುಟಿದಳಲ್ಲ  ಜಾರೆ..!  ಇವಳನ್ನು  ಇವಳ  ಮಕ್ಕಳನ್ನು  ಕಾಡಿಗೆ ಕಳಿಸಿದ್ದರಲ್ಲಿ   ನನ್ನ  ಕುಲಪುತ್ರನಲ್ಲಿ  ಯಾವ ತಪ್ಪಿದೆ..?    ಐವರಲ್ಲಿ  ಯಾವೊಬ್ಬನಾದರೂ  ತಂದೆಗೆ  ಹುಟ್ಟಿದ  ಮಕ್ಕಳಿದ್ದಾರೆಯೇ...?   ಸೂಳೆಯ  ಮಕ್ಕಳಿಗೆ    ಹಸ್ತಿನಾಪುರದ  ಚಕ್ರವರ್ತಿಗಳಾಗುವ  ಹಂಬಲ !   ಐದು  ಗ್ರಾಮಗಳಿರಲಿ  ಒಂದು  ಸೂಜಿಮೊನೆಯಷ್ಟು  ಜಾಗಕ್ಕೂ  ಇವರು  ಯೋಗ್ಯರೇ..?  ಜಾರೆಯ  ಮಕ್ಕಳು !   ನನ್ನ  ಹೊಟ್ಟೆ  ಹೊಸೆದು  ಜೀವ ತಳೆಯದ  ಪಿಂಡಗಳನ್ನು  ಮಾಂಸದ ಮುದ್ದೆಗಳನ್ನೇ  ಹೊರಗೆ  ನೆಲಕ್ಕೆ  ಚೆಲ್ಲುವಂತೇ  ನನ್ನ  ನೆತ್ತರು  ಸುರಿಸುವಂತೇ   ಮಾಡಿದ  ಜಾರಿಣಿ.    ಥೂ  ಇವಳ  ಜನ್ಮಕ್ಕೆ..!  ಅಷ್ಟೂ  ಸಾಲದು ಎಂದು  ತನ್ನ  ಐವರು  ಮಕ್ಕಳ  ಜೀವಭಿಕ್ಷೆ  ಬೇಡಿದಳಲ್ಲ  ತನ್ನದೇ  ಮಗ  ಕರ್ಣನ  ಬಲಿಕೊಟ್ಟು...!!ʼʼ

      ಹೀಗೆ  ಪ್ರಲಾಪಿಸುತ್ತಾಳೆ.

 ವಾನಪ್ರಸ್ತಕ್ಕೆ  ಬಂದಾಗ  ಋಷಿಯೋರ್ವರನ್ನು  ಸಂದರ್ಶಿಸುತ್ತಾರೆ. ಅವರ  ಬೋಧನೆಯನ್ನು  ಧ್ರತರಾಷ್ಟ್ರ  ಗಾಂಧಾರಿ, ವಿದುರ  ಕುಂತಿ, ಎಲ್ಲರೂ  ಭಯ ಭಕ್ತಿಯಿಂದ ಆಲಿಸುತ್ತಾರೆ.

      ʻʻ    ಸುಂದರ  ಪ್ರಪಂಚಕ್ಕೆ  ಮಾನವ  ಬರುವುದು  ಏಕಾಂಗಿಯಾಗಿ.  ಏಕಾಂಗಿಯಾಗಿಯೇ    ಬದುಕನ್ನು  ಬಿಟ್ಟು  ಸಾಗಬೇಕು. ಜೀವನ  ಯಾತ್ರೆಯಲ್ಲಿ  ಮನುಷ್ಯನಿಗೆ ಯಾರೊಬ್ಬರೂ  ಜೊತೆಗಾರರಿಲ್ಲ. ನೀನು  ಹೇಳಿದ  ತಂದೆ  ತಾಯಿಗಳು , ಬಂಧುಮಿತ್ರರು ಗುರು ಹಿರಿಯರು, ಎಲ್ಲರೂ  ಸತ್ತೊಡನೆ  ಮುಖ  ತಿರುಗಿಸುವವರೇ.   ನೀನು  ಬಿಟ್ಟು ಹೋಗುವ  ಶರೀರದ  ಮೇಲೆ  ಅವರಿಗೆ  ಯಾವ  ಆಸಕ್ತಿಯೂ  ಉಳಿಯದು. ಧರ್ಮ  ಅಥವಾ  ಋಜುತ್ವವೊಂದೇ  ಸಾವಿನ  ನಂತರವೂ   ಮಾನವನ ಜೊತೆಗೆ  ಬರುವುದು.ʼʼ

ಎಂದು ಋಷಿ  ನುಡಿದಾಗ,  ಧೃತರಾಷ್ಟ್ರ  ʻʻ  ಇಹವನ್ನು  ಸುಖವಾಗಿ ದಾಟಿ, ಪರದಲ್ಲೂ  ಸಲ್ಲಬಯಸುವ  ಮನುಷ್ಯನ  ಕರ್ತವ್ಯಗಳೇನು..?ʼʼ  ಎಂದು  ಪ್ರಶ್ನಿಸುತ್ತಾನೆ.

     ʻʻಪರಜೀವಿಗಳ  ಬದುಕನ್ನು  ನಾಶಗೈಯ್ಯುವುದು,  ಕದಿಯುವುದು,  ಪರಸ್ತ್ರೀಯನ್ನು  ಭೋಗಿಸುವುದು, ಈ  ಮೂರು  ದೈಹಿಕ  ಪಾಪ  ಮಾಡಬಾರದು.  ಕೆಟ್ಟ  ಮಾತು  ಕಠಿಣ ನುಡಿ, ಸುಳ್ಳು  ಇನ್ನೊಬ್ಬರ  ಗುಟ್ಟು  ರಟ್ಟುಮಾಡುವುದು,    ನಾಲ್ಕು  ಬಗೆಯ  ವಾಕ್ಕನ್ನು  ಬಿಡಬೇಕು.  ಪರವಸ್ತುವಿನ  ಮೇಲೆ  ಆಸೆ, ಪರ ಹಿಂಸೆ,  ಮತ್ತು  ಮನುಷ್ಯತ್ವದಲ್ಲಿ  ಅಪನಂಬಿಕೆ,    ಮೂರನ್ನು ಬಿಡಬೇಕು.     ಹತ್ತು  ಗುಣಗಳನ್ನು  ಬಿಟ್ಟವನು  ಇಹದಲ್ಲಿ  ಸುಖವಾಗಿ  ಜೀವಿಸುತ್ತಾನೆ.  ಪರದಲ್ಲಿಯೂ  ಸಲ್ಲುತ್ತಾನೆ.ʼʼ  ಎಂಬ  ಉತ್ತರ  ಕೇಳಿದ  ಧೃತರಾಷ್ಟ್ರ  ಗೊಂದಲಕ್ಕೊಳಗಾಗುತ್ತಾನೆ. ಬದುಕಿನ  ಅಂತಿಮ  ಕ್ಷಣದಲ್ಲಿ   ಗತದ  ತನ್ನ  ಕ್ರಿಯೆಗಳ  ನೆನಪಾಗಿ,  ತನಗೆಲ್ಲಿ  ಮೋಕ್ಷ  ಎಂದುಕೊಳ್ಳುತ್ತಾನೆ.

        ಋಷಿಗಳ  ನೀತಿಬೋಧೆಯಿಂದ  ರೋಮಾಂಚಿತಗೊಳ್ಳುವ  ಗಾಂಧಾರಿ,  ತನ್ನ  ಸ್ವಾರ್ಥದ   ತುರೀಯದಲ್ಲಿ  ಅವೆಲ್ಲವನ್ನೂ  ಗಾಳಿಗೆ  ತೂರುತ್ತಾಳೆ.  ಒಳ  ಜಗತ್ತಿನ  ಸತ್ಯ ಅವಳಲ್ಲಿ  ಅನಾವರಣ ವಾಗಲೇ  ಇಲ್ಲ.  ಕೇವಲ  ಬಾಹ್ಯಪ್ರಪಂಚದ  ಮಹಾ  ಮಾಯೆಯ  ಮೋಡಿಯಲ್ಲಿ  ತೇಲಿಹೋದಳು     ಕುಂತಿಯ  ಜಾರತನಕ್ಕೆ  ಹುಟ್ಟಿದ  ಪಾಂಡವರು,  ತನ್ನ  ವಂಶದವರೇ  ಅಲ್ಲ.  ಅವರಿಗೇಕೆ  ರಾಜ್ಯ  ಎಂದು  ಪ್ರಶ್ನಿಸುವ   ಆಕೆ,  ಸ್ವಥಃ  ಅವಳ  ಗಂಡನೇ  ಮತ್ತೊಬ್ಬನ  ವೀರ್ಯಕ್ಕೆ  ಹುಟ್ಟಿದವನು  ಎಂಬುದನ್ನು  ಮರೆಯುತ್ತಾಳೆ.   ತನ್ನವರ   ಯುದ್ಧದಾಹ,  ಸ್ವಾರ್ಥ  ಸಂಕುಚಿತತೆ,  ಕಪಟ  ಮೋಸ     ಎಲ್ಲದರ  ಅರಿವಿದ್ದೂ  ಸಹಕರಿಸುವ  ಆಕೆ,  ತನ್ನವರ  ಸರ್ವನಾಶವಾದಮೇಲೂ   ತನ್ನ  ದಾರಿಯನ್ನು  ಸಮರ್ಥಿಸಿಕೊಳ್ಳುತ್ತಾಳೆ. ಕೃಷ್ಣನಿಗೂ  ಶಾಪ  ಕಕ್ಕುತ್ತಾಳೆ. ಅತಿಮೋಹದಲ್ಲಿ   ಕಣ್ಣಿದ್ದೂ  ಕುರುಡಳಾಗುತ್ತಾಳೆ.  ತಾನೇ  ಕುರುಡುತನವನ್ನು  ಆವಾಹಿಸಿಕೊಳ್ಳುತ್ತಾಳೆ.   ಗಂಡ  ಸಹಜ  ಕುರುಡ.  ಆದರೆ   ಗಾಂಧಾರಿ  ವಿಚಿತ್ರ  ಆದರ್ಶಕ್ಕಾಗಿ,  ಗಂಡನ  ಮೇಲಣ  ಸಿಟ್ಟಿಗಾಗಿ,  ಕಣ್ಣು ಕಟ್ಟಿಕೊಳ್ಳುತ್ತಾಳೆ.  ಬಾಹ್ಯದ  ಬೆಳಕನ್ನು  ತಾನಾಗಿಯೇ  ಕಳೆದುಕೊಳ್ಳುವ  ಅವಳು,  ಅಂತರಂಗದ  ಕತ್ತಲೆಯನ್ನು  ನಿವಾರಿಸಿಕೊಳ್ಳಲೂ  ಅಸಮರ್ಥಳಾಗುತ್ತಾಳೆ.   ಅವಳ  ಪಾಲಿಗೆ  ಬಾಹ್ಯವೂ  ಶೂನ್ಯ.  ಅಂತರಂಗವೂ  ಶೂನ್ಯ. 

      ಮಹಾಭಾರತದ  ತುಂಬೆಲ್ಲ   ಅಸಂಖ್ಯಾತ  ನೀತಿ  ಬೋಧೆಗಳಿವೆ.  ನೀತಿ ಕತೆಗಳಿವೆ.   ಎಲ್ಲ  ಪಾತ್ರಗಳೂ  ಅವುಗಳನ್ನು  ಕೇಳುತ್ತವೆ.     ಕ್ಷಣದಲ್ಲಿ  ಬಿಟ್ಟೂ  ಬಿಡುತ್ತವೆ.   ನೈತಿಕತೆ   ಮತ್ತು  ಭೃಷ್ಟತೆಗಳ  ಮುಖಾಮುಖಿ  ಸದಾ  ಘಟಿಸುತ್ತಲೇ  ಇರುತ್ತವೆ.   ತಮ್ಮದೇ  ಧರ್ಮ  ತಮ್ಮದೇ  ನೀತಿ  ಎಂದು  ಪ್ರತಿಪಾದಿಸುತ್ತಲೇ  ಇರುತ್ತವೆ. 

ಸದಾ  ಸಂಘರ್ಷದಲ್ಲಿ   ಸುಖಿಸುವ  ಮಹಾಭಾರತದ  ಎಲ್ಲ  ಪಾತ್ರಗಳೂ  ಕೊನೆಯಲ್ಲಿ  ದುರಂತವನ್ನೇ  ಅಪ್ಪುತ್ತವೆ.   ಮಾನವನ  ಶಕ್ತಿ  ಅವನ  ಸೃಜನಶೀಲತೆ  ಯಾದರೆ,   ಸ್ವಾರ್ಥ  ಅವನ  ದೌರ್ಬಲ್ಯವಾಗುತ್ತದೆ.  ಇಲ್ಲಿ  ಗೆಲುವು  ಎಂಬುದೇ  ಇಲ್ಲ.  ಎಲ್ಲವೂ  ದುರಂತ.   ಸ್ವಥಃ  ದೇವರಾದ  ಶ್ರೀಕೃಷ್ಣನ   ಅಂತಿಮ  ಕ್ಷಣವೂ  ಸಹ  ದುರಂತದಲ್ಲೇ  ಅಂತ್ಯವಾಗುವ   ಸ್ಥಿತಿ   ಗಾಂಧಾರಿಯ  ಶಾಪದಿಂದಲೇ  ಪ್ರಾಪ್ತವಾಗುತ್ತದೆ. 

    ಅಪಘಾನಿಸ್ಥಾನದ ʻ (ಕಂದಹಾರʼ-  ಗಾಂಧಾರ )  ದಾರುಣ  ವಾಸ್ತವವನ್ನು  ಗಮನಿಸಿದಾಗ,  ಗಾಂಧಾರಿ   ತವರು  ನೆಲದಲ್ಲೂ  ತನ್ನ  ದುಷ್ಟ ಪ್ರವೃತ್ತಿಯನ್ನು  ಬಿತ್ತಿ  ಬೆಳೆದೇ  ಇಲ್ಲಿಗೆ  ಬಂದಿದ್ದಾಳೇನೋ  ಎಂದೆನ್ನಿಸುತ್ತಿದೆ.

      ಮಹಾಭಾರತದ  ಬಗೆಗೆ  ಸಾಕಷ್ಟು   ವಿಮರ್ಶೆ, ಲೇಖನ   ಕತೆ  ಕಾದಂಬರಿ   ಕಾವ್ಯಗಳು  ಸೃಷ್ಟಿಯಾಗಿವೆ.  ಒಂದೊಂದು  ಪಾತ್ರವೂ   ತನ್ನದೇ  ಆದ  ವೈಶಿಷ್ಟ್ಯದಿಂದ,  ಸಾಕಷ್ಟು  ಲೇಖಕರನ್ನು  ಕಾಡಿವೆ.  ಇಡೀ  ಮಹಾಭಾರತದ  ಆಧುನಿಕ  ನೋಟ   ಭೈರಪ್ಪನವರ  ʻʻಪರ್ವʼʼ  ಕಾದಂಬರಿಯಲ್ಲಿ  ಅನಾವರಣ ಗೊಂಡರೆ,  ಇರಾವತಿ  ಕರ್ವೆಯವರ  ಪ್ರಬಂಧಗಳು   ಹೊಸತೊಂದು   ತಾತ್ವಿಕ  ಆಯಾಮದೆಡೆಗೆ  ಸೆಳೆಯುತ್ತವೆ.  ವಿವಿಧ  ದೇಶ  ಭಾಷೆಗಳಲ್ಲಿ  ಬಂದ   ಸಾಕಷ್ಟು  ಕೃತಿಗಳು   ಮಹಾಭಾರತದ  ಅರ್ಥವ್ಯಾಪ್ತಿಯನ್ನು  ಮತ್ತಷ್ಟು  ಹೆಚ್ಚಿಸಿವೆ.  ʻʻಜಗತ್ತಿನಲ್ಲಿರುವುದೆಲ್ಲವೂ   ಇಲ್ಲಿದೆ.  ಇಲ್ಲಿಲ್ಲವಾದುದು   ಜಗತ್ತಿನಲ್ಲೇ  ಇಲ್ಲ. ʼʼ  ಎಂದು  ವೇದವ್ಯಾಸರೇ  ಹೆಮ್ಮೆಯಿಂದ  ಘೋಷಿಸಿದರೂ,   ಇಂಥ  ಕೃತಿಯನ್ನು  ಆಸಕ್ತಿಯಿಂದ  ಓದುವವರೂ  ಇಲ್ಲವಲ್ಲ...!!  ಎಂದು ವ್ಯಾಸರು, ಪರಿತಪಿಸುತ್ತಿರುವುದನ್ನೂ  ಕಾಣುತ್ತೇವೆ.

       ಒಳ್ಳೆಯದು  ಬಾಡುತ್ತ,  ಕೆಟ್ಟದ್ದೇ  ವಿಜ್ರಂಭಿಸುವ  ಪ್ರಸ್ತುತ  ವರ್ತಮಾನಕ್ಕೆ  ಮುಖಾಮುಖಿಯಾಗಿ,  ಗಾಂಧಾರಿಯನ್ನು  ಎದುರಾಗಿಸಿ,  ಬದುಕಿನ  ಸತ್ಯಶೋಧನೆಗೆ  ತಾತ್ವಿಕವಾಗಿ  ಹುರಿಗೊಳ್ಳುತ್ತಿರುವ   ಉದಯ ಕುಮಾರ್‌  ಹಬ್ಬೂರವರ  ಪ್ರಯತ್ನ  ನಿಜಕ್ಕೂ  ಖುಷಿಕೊಡುತ್ತಿದೆ.   ಸಾವಿನ  ಎದುರಲ್ಲಿಯಾದರೂ,  ಅವಳು  ಮತ್ತೊಮ್ಮೆ  ಆತ್ಮವಿಮರ್ಶೆಗಿಳಿದು,  ತನ್ನದೇ  ಬದುಕನ್ನು  ತಕ್ಕಡಿಯಲ್ಲಿಟ್ಟು  ತೂಗಿಕೊಳ್ಳುವ,  ಕ್ರಿಯೆಯಲ್ಲಿ  ತೊಡಗುವುದು,  ತಾನು  ಇನ್ನೂ  ಸುಂದರ  ಕ್ಷಣವನ್ನು  ಸೃಷ್ಟಿಸುವ  ಸುವರ್ಣ  ಅವಕಾಶವನ್ನು  ಅಪವ್ಯಯ  ಮಾಡಿದೆನಲ್ಲಾ  ಎಂದು  ಪರಿತಪಿಸುವುದು,  ಓದುಗನಲ್ಲೂ  ವಿಚಿತ್ರವಾದ  ತಹತಹವನ್ನು  ಸೃಷ್ಟಿಸುತ್ತದೆ.

      ಪ್ರಕ್ರಿಯೆ  ಅವರ  ಹಿಂದಿನ  ಕೃತಿ  ʻʻ ದ್ರೋಣʼʼ ದಿಂದಲೇ  ಪ್ರಾರಂಭಗೊಂಡು,  ಮತ್ತಷ್ಟು  ಸೂಕ್ಷ್ಮವಾಗಿ  ಇಲ್ಲಿ  ಹರಿಯುತ್ತಿದೆ.   ಕಾಲ ಕಾಲಕ್ಕೆ  ಬದುಕಿನ  ವ್ಯಾಖ್ಯೆ  ಪುನರ್ವಿಮರ್ಶೆ ಗೊಳ್ಳಬೇಕು.  ಸ್ವಿರವಾಗಿಯೇ  ಇರುವ  ಮಾನವೀಯ  ಮೌಲ್ಯಗಳು,  ಕಾಲದ  ಕಾಲ್ತುಳಿತಕ್ಕೆ  ಘಾಸಿಗೊಂಡಾಗೆಲ್ಲ,  ಇಂಥ  ʻʻಸಂಭವಾಮಿ  ಯುಗೇ  ಯುಗೇ ʼʼ ಘೋಷ  ಮೊಳಗುತ್ತಲೇ  ಇರಬೇಕು.   ಮೌಲ್ಯವಿಸ್ಮೃತಿ,  ಲೌಕಿಕ ವಿಜ್ರಂಭಣೆಯಂಥ   ಸಂದಿಗ್ಧ  ಕ್ಷಣಕ್ಕೆ   ಇದೊಂದು   ಔಷಧವಾಗಿ  ರೂಪುಗೊಂಡಿದೆ.

     ಉದಯ ಕುಮಾರರ   ಗತದ  ಧ್ಯಾನ,  ಮೌಲ್ಯ ಚಿಂತನೆ,  ಮತ್ತು   ಮಾನವ ಬದುಕಿನ  ವೈಚಿತ್ರ್ಯ  ವಿಷಾದ  ಗಳ  ಮೂಲದ  ಶೋಧನೆ   ಮಹಾಕಾವ್ಯಗಳ  ನೆರಳಲ್ಲಿ  ಗಂಭೀರವಾಗಿ  ಸಾಗುತ್ತಿರುವುದು  ನಿಜಕ್ಕೂ  ಖುಷಿಕೊಡುತ್ತಿದೆ. ಅಂತಿಮ  ಕ್ಷಣದಲ್ಲೂ  ಋಷಿಬೋಧನೆಯನ್ನು  ಆಲಿಸುವ ಧೃತರಾಷ್ಟ್ರ  ಗಾಂಧಾರಿಯರ ನಿರರ್ಥಕ  ಕ್ರಿಯೆಗಿಂತ,   ಜೀವನವಿಡೀ  ಕೇಳಿದ  ನೈತಿಕ  ಋಷಿವಾಕ್ಯಗಳಿಗೂ,  ತಾವು  ಬದುಕಿದ  ರೀತಿಗೂ  ತುಲನಾತ್ಮಕ   ಆತ್ಮವಿಮರ್ಶೆ   ತಾತ್ವಿಕವಾಗಿ  ಮೂಡಿ  ಬಂದಿದ್ದರೆ,  ಕೃತಿಗೆ  ಇನ್ನೂ  ಅರ್ಥಪೂರ್ಣತೆ  ಒದಗುತ್ತಿತ್ತೇನೋ  ಎಂದೆನ್ನಿಸುತ್ತದೆ.

     ಉದಯ ಕುಮಾರ  ಹಬ್ಬು ರವರ  ಪೌರಾತ್ಯ  ತತ್ವಜ್ಞಾನದ  ಆಳ  ಅಧ್ಯಯನದ  ಭಿತ್ತಿಯಲ್ಲಿ   ಇನ್ನಷ್ಟು  ಇಂಥ  ಸೃಜನಶೀಲ  ಕೃತಿಗಳು  ಮೂಡಿಬರಲೆಂದು    ಮೂಲಕ   ಹೃತ್ಪೂರ್ವಕವಾಗಿ   ಹಾರೈಸುತ್ತಿದ್ದೇನೆ.

                                             ಗೌರವಾದರಗಳೊಂದಿಗೆ 

                  ಸುಬ್ರಾಯ  ಮತ್ತೀಹಳ್ಳಿ.    ತಾ-  ೨೬- ೧- ೨೦೨೨.

(ಲೇಖಕ  ಉದಯಕುಮಾರ್‌ ಹಬ್ಬು, ಕಿನ್ನಿಗೋಳಿ.  ಇವರ  ʻʻಗಾಂಧಾರಿʼʼ ಕಾದಂಬರಿಗೆ  ಬರೆದ  ಮುನ್ನುಡಿ.)

No comments:

Post a Comment