Wednesday 27 September 2023

ಕಥನ ಕಲರವದಲ್ಲಿ ಕಾವ್ಯ ಕಂಡೆ ( ಮುನ್ನುಡಿ)

 

             ಟಿ.ಎಂ.ರಮೇಶ್  ನಮ್ಮ  ನಡುವಣ  ಗಂಭೀರ  ಕತೆಗಾರ.   ಮಲೆನಾಡ  ಒಡಲಲ್ಲಿ  ಮಣ್ಣ ಫಲವತ್ತತೆಯನ್ನು  ಹೀರಿ,    ಮಲೆನಾಡ  ಬದುಕಿನ  ಹಸಿರು   ಮತ್ತು  ಹಸಿವನ್ನು ಅಕ್ಷರದಲ್ಲಿ  ಟಂಕಿಸುವ  ಪ್ರಕ್ರಿಯೆಯಲ್ಲಿ  ತೊಡಗಿಕೊಂಡಿರುವ  ಪ್ರಮುಖ  ಸೃಜನಶೀಲರು.   ಮಾತಿನ  ಕಲೆಯಾದ  ತಾಳಮದ್ದಲೆಯ  ಮಾತುಗಾರರಾಗಿ,   ಮಾತಿಗೆ  ಮಂತ್ರದ  ಘನತೆಯನ್ನು  ತರುವಲ್ಲೂ  ಅವರ  ಪ್ರಯತ್ನವಿದ್ದೇ  ಇದೆ.  ಈಗಾಗಲೇ  ನೂರಾರು  ಕತೆಗಳನ್ನು  ಬರೆದು   ಕಥನಕಲೆಯಲ್ಲಿ  ತಮ್ಮದೇ  ಛಾಪುಮೂಡಿಸುತ್ತಿರುವ   ಶ್ರೀಯುತರಲ್ಲಿಯ   ಉತ್ಸಾಹ,  ಅನ್ವೇಷಣಾಸಕ್ತಿ, ಖುಷಿನೀಡುತ್ತಿದೆ.

            ಮನುಷ್ಯ  ಆತ್ಯಂತಿಕವಾಗಿ  ಪ್ರಕಟಗೊಳ್ಳುವುದೇ  ಮಾತಿನಲ್ಲಿ.ಮಾತಿನ  ವಿಸ್ತರಣೆಯೇ  ಅಕ್ಷರ.  ಮಾತು  ತನ್ನ  ವಾಚ್ಯದಿಂದ  ಮುಕ್ತಗೊಂಡು  ಮಂತ್ರಸ್ಥರಕ್ಕೇರಿದಂತೇ   ಕಾವ್ಯ  ತನ್ನಂತಾನೇ  ಹರಳುಗಟ್ಟತೊಡಗುತ್ತದೆ.   ಬದುಕಿಗೊಂದು  ಮಿತಿಯಿದೆ.  ಅವನ  ಚಟುವಟಿಕೆಗೂ  ಕೂಡಾ.  ಅದೇ  ಬದುಕು  ಕಟ್ಟಿಕೊಡುವ  ವೈವಿಧ್ಯಮಯ  ಅನುಭವಗಳು   ಸಾಂದ್ರಗೊಂಡು,  ಹರಳುಗಟ್ಟುತ್ತಾ  ತಾತ್ವಿಕ  ಆಯಾಮಕ್ಕೆ  ಪ್ರವೇಶಿಸುತ್ತಿದ್ದಂತೇ,   ಹೊಸದೊಂದು  ಮಿಂಚು,   ಹೊಸದೊಂದು  ಕನಸು, ಸಾಕಾರಗೊಳ್ಳುತ್ತದೆ.  ವಾಸ್ತವದ  ಮಾನವ  ಪ್ರವೃತ್ತಿಯ  ಚಂಚಲತೆಯ  ನಡುವೆ,  ಹೀಗಿರಬೇಕಿತ್ತೇ,? ಬದಲು  ಹೀಗಿರಬಾರದಿತ್ತೇ, ? ಎಂಬ  ಪ್ರಶ್ನೆಗಳ   ಕನಸುಗಳ  ಕನವರಿಕೆಗಳು   ಸೃಜನಶೀಲ  ಸೂಕ್ಷ್ಮಮನಸ್ಸಿನಾಳದಲ್ಲಿ   ಮೂಡತೊಡಗಿದಾಗೆಲ್ಲ,   ಸೃಷ್ಟಿಯಾಗಿದ್ದೇ  ಲಲಿತಕಲೆಗಳು.   ಅವುಗಳೆಲ್ಲದರ  ಆತ್ಯಂತಿಕ  ಗುರಿ,  ಮಾನವಜೀವಿತದ   ಶಕ್ತಿ  ದೌರ್ಬಲ್ಯ,ಗಳನ್ನೆಲ್ಲ  ನಿರ್ದಿಷ್ಟ  ದೂರಕಾಯ್ದುಕೊಂಡು, ಗ್ರಹಿಕೆಯ  ಆಳಕ್ಕೆ  ಹೀರಿಕೊಳ್ಳುವುದು.  ಸರಳತೆ   ಸಂಕ್ಷಿಪ್ತತೆಗಳಲ್ಲೇ   ಸಮಗ್ರತೆಯನ್ನು  ಹಿಡಿದಿರಿಸಲು  ಹೋರಾಡುವುದು. ಸಂದರ್ಭ ಬಂದರೆ  ಸಾತ್ವಿಕವಾಗಿ  ಪ್ರತಿಭಟಿಸುವುದು.

       ವರ್ತಮಾನದ   ಗಟ್ಟಿತಳಪಾಯದಲ್ಲಿ    ಭೂತದ  ಅನುಭವಗಳನ್ನ  ಆಹಾರವಾಗಿಸಿಕೊಂಡು  ಭದ್ರವಾಗಿ  ನಿಂತ   ಸೃಷ್ಟಿಶೀಲ  ಮನಸ್ಸು  ಮಾತ್ರ,  ರಚನಾತ್ಮಕವಾದ  ಪ್ರಕ್ತಿಯೆಯಲ್ಲಿ  ತೊಡಗಿಕೊಳ್ಳಬಹುದು.  ಭವಿಷ್ಯಕ್ಕೊಂದು  ಸುಂದರ  ಗುರಿಯೊಂದನ್ನು  ನೀಡಬಲ್ಲದು.   ಇಂಥ  ಮಾನವೀಯ  ಸಂಚಲನ  ಮಾತ್ರ,  ಬದುಕಿಗೊಂದು  ಆಶಾವಾದದ  ಕೈಮರವಾದೀತು.

       ಮಾತು  ನೆನಪಾದದ್ದು,  ಇದೀಗ ಮಾತ್ರ  ನನ್ನ  ಕೈಸೇರಿದ,  ನನ್ನ  ಓದಿನ ಮಿತಿಗೆ  ಎಟುಕಿದ,  ಮಹತ್ವಪೂರ್ಣ  ತಾತ್ವಿಕ  ಕನಸನ್ನು  ಒಡಲಲ್ಲಿಟ್ಟುಕೊಂಡು,  ಬದುಕಿನ  ಸತ್ಯಶೋಧನೆಗೆ  ಆತ್ಮವಿಶ್ವಾಸದಿಂದ  ಪ್ರವೇಶಿಸುತ್ತಿರುವ,   ಕತೆಗಾರ   ಟಿ.ಎಂ.ರಮೇಶರ, ʻʻಡೆಡ್‌ ಸ್ಟಾಕ್‌ʼʼ   ಕಥಾಸಂಕಲನದ  ಹಸ್ತಪ್ರತಿಯನ್ನು  ಗಮನಿಸಿದಾಗ.

      ಕ್ರೂರ  ವರ್ತಮಾನದ  ಕಟುವಾಸ್ತವದ  ಸಾಮಾನ್ಯ ಜನಜೀವನದ  ನಡುವಣ,  ಕ್ಷುದ್ರತೆ,  ಡಂಬಾಚಾರ,  ಸ್ವಾರ್ಥ,  ಅದರ  ನಡುವೆಯೇ  ಅರಳುವ  ಪ್ರೀತಿ  ಪ್ರೇಮ  ಕಾಮಗಳ  ಅಯೋಮಯತೆಯಲ್ಲಿ      ವಿವಿಧ  ನಿಜಜೀವನದ  ಪಾತ್ರಗಳನ್ನು,   ಅವರವರ  ವಾಸ್ತವ ಸ್ಥಿತಿಯ  ನೆಲೆಯಲ್ಲೇ    ಬದುಕಿನ  ನಿಜವನ್ನು ಶೋಧಿಸುವ  ಮಹಾತ್ವಾಕಾಂಕ್ಷೆಯಲ್ಲಿ ಕತೆಗಾರರು ಸಾಗುತ್ತಿರುವಂತೇ  ತೋರುತ್ತಿದೆ,  ಪ್ರಸ್ತುತ  ಕೃತಿಯಲ್ಲಿ.   ನಿಜಕ್ಕೂ  ವಾಸ್ತವದ  ಬದುಕಿನಲ್ಲಿ  ಧರ್ಮ  ಮಾನವೀಯತೆ,  ತತ್ವಜ್ಞಾನಗಳೆಲ್ಲ  ಕೇವಲ  ಡೆಡ್ ಸ್ಟಾಕ್‌  ಆಗಿ,   ವಾಸ್ತವದ  ತುರ್ತನ್ನು  ಪೂರೈಸಿಕೊಳ್ಳಲು  ಅದೊಂದು  ಸಾಧನವಾಗಿ,  ಸಂಬಂಧಗಳೆಲ್ಲ  ವ್ಯಾಪಾರವಾಗಿ  ಪರಿಣಮಿಸಿರುವ   ದುರಂತವನ್ನು   ಗ್ರಾಮ,  ನಗರಗಳ  ಬದುಕಿನ  ವಿವಿಧ  ಆಯಾಮಗಳ  ಮೂಲಕ  ಧ್ವನಿಸುತ್ತಿರುವಂತೇ  ಅನ್ನಿಸಿದರೆ  ಆಶ್ಚರ್ಯವಿಲ್ಲ.

        ಸಂಕಲನದ  ಶೀರ್ಷಿಕೆಯ  ಕತೆ ʻ ಡೆಡ್‌ ಸ್ಟಾಕ್‌ʼ   ಪ್ರಾರಂಭದಲ್ಲೇ   ಫ್ರಾಂಜ್‌  ಕಾಫ್ಕಾ ನನ್ನು  ನೆನಪಿಸುತ್ತ,  ಸಾಮಾನ್ಯ    ಪ್ರಾಮಾಣಿಕ   ಸರಕಾರೀ ಕಾರಕೂನನ   ತಳಮಳದ  ಬದುಕನ್ನು  ಪರಿಣಾಮಕಾರಿಯಾಗಿ  ಚಿತ್ರಿಸತೊಡಗುತ್ತದೆ.   ಇಲಾಖೆಯಲ್ಲಿ  ಅರ್ಬುದದಂತೇ  ವ್ಯಾಪಿಸಿರುವ  ಘೋರ  ಭ್ರಷ್ಟಾಚಾರದ  ಗೋಜಲಿನಲ್ಲಿ,  ಅಧಿಕಾರಶಾಹೀ  ಶೋಷಣೆಯ  ಕಾಲ್ತುಳಿತದಲ್ಲಿ  ಸಿಕ್ಕು  ನಲುಗುತ್ತಿರುವ  ನೌಕರನ, ಮಾನಸಿಕ  ಸಾಂಸಾರಿಕ  ಸಾಮಾಜಿಕ ತೊಳಲಾಟ   ಮಾರ್ಮಿಕವಾಗಿ  ಚಿತ್ರಣಗೊಂಡು,  ಯಶಸ್ವೀ  ಕತೆಯಾಗಿ  ರೂಪುಗೊಂಡಿದೆ.  ಕತೆಯನ್ನು  ಓದತೊಡಗಿದಂತೇ   ಗೋಪಾಲಕೃಷ್ಣ  ಅಡಿಗರ,ʻʻಹಿಮಗಿರಿಯ  ಕಂದರ ʼʼ  ಕವನದ  ಸಾಲುಗಳು  ಬೇಡವೆಂದರೂ  ನೆನಪಾಗುತ್ತದೆ.

          ʻʻ  ಕಾಲಿಟ್ಟಲ್ಲೆಲ್ಲ  ಕೀಲುಕುದುರೆ  ಸವಾರಿ

            ಕೈಚಾಚಿದಲ್ಲೆಲ್ಲ  ಸ್ವಿಚ್ಚು  ಸ್ವಿಚ್ಚು.

             ಎಲ್ಲಿ  ತಿರುಗಿದರಲ್ಲಿ  ಅಮೃತ  ಸೂಸುವ  ನಲ್ಲಿ

               ಕಛೇರಿಗೆ  ಮನೆಗೆ  ಬೆಂಕಿ  ಹಚ್ಚು.ʼʼ

 

ಯಾರೋ   ತುಪ್ಪ  ಕಬಳಿಸಿ   ಬಡಪಾಯಿಯ  ಮುಖಕ್ಕೆ  ಒರೆಸುವ   ಬಡ  ಕುರಿಯನ್ನು  ಬಲಿಪಶುವಾಗಿಸುವ   ದಾರುಣ  ಕ್ಷಣದಲ್ಲಿ,  ಇಡೀ  ದಾಖಲೆಯ  ಗುಡಾಣಕ್ಕೇ  ಬೆಂಕಿಯಿಟ್ಟು  ತಾನೂ  ಸಾಯುವ  ಮೂಲಕ    ಭೃಷ್ಟತೆಯನ್ನು  ಪ್ರತಿಭಟಿಸುವ   ಪ್ರಕ್ರಿಯೆ  ಮನ  ಕಲಕುತ್ತದೆ.

        ಇಂಥದೇ   ಸಾಮಾಜಿಕ  ಆಶಯದ  ʻʻಬೇಟೆ  ನಾಯಿʼʼ  ಕತೆ,  ಗ್ರಾಮಾಂತರದ  ಜಾತಿ,  ಬಡತನ , ದಲಿತಸ್ಥಿತಿ ಯ  ನಡುವೆ  ಊಳಿಗಮಾನ್ಯ  ವ್ಯವಸ್ಥೆ  ಅದೆಷ್ಟು  ಅಮಾನವೀಯವಾಗಿ  ವರ್ತಿಸುತ್ತಿದೆ.  ಮಾನವೀಯ  ಮೌಲ್ಯದ  ಹನನ  ಹಾಡುಹಗಲೇ  ಹೇಗೆ  ಸಾಗುತ್ತದೆ  ಎಂಬುದರ  ವಿವರ  ಕಣ್ಣಿಗೆ  ಕಟ್ಟುತ್ತದೆ.    ಪುಟ್ಟ  ದಾಸ  ಎಂಬ  ಚುರುಕಿನ   ದಲಿತ ಮುಗ್ಧಬಾಲಕ  ಪ್ರೀತಿಯಿಂದ  ಸಾಕಿಕೊಂಡ  ನಾಯಿಮರಿ  ದಷ್ಟಪುಷ್ಟವಾಗಿ  ಬೆಳೆದು   ಬಾಲಕನ  ಜೊತೆಗೆ  ಆಟವಾಡುತ್ತಿರುತ್ತದೆ.   ನಾಯಿಯನ್ನು  ಕಂಡ,  ಊರಿನ  ಶ್ರೀಮಂತ  ಬಸವಗೌಡ  ಅಪಹರಿಸಿ  ತನ್ನಮನೆಯಲ್ಲಿ  ಕಟ್ಟಿಟ್ಟುಕೊಳ್ಳುತ್ತಾನೆ.   ಬಾಲಕ  ತನ್ನ  ನಾಯಿಯನ್ನು  ಪಡೆಯಲು  ಗೌಡರ  ಕಂಪೌಂಡ್‌  ಹಾರಿ  ಪ್ರವೇಶಿಸುತ್ತಾನೆ.  ಸಿಕ್ಕುಬಿದ್ದು  ಹೊಡೆತ  ತಿನ್ನುತ್ತಾನೆ.  ತನ್ನ  ಮಗನ  ಕಣ್ಣಿಗೆ  ಪೆಟ್ಟುಮಾಡಿದ  ಆಪಾದನೆ  ಎರಗುತ್ತದೆ.  ಕಣ್ಣಿನ  ಚಿಕಿತ್ಸೆಗೆ  ಖರ್ಚಾದ  ಹತ್ತು  ಸಾವಿರ  ರೂಪಾಯಿಗಳು  ತೀರುವ  ವರೆಗೆ  ಬಾಲಕ  ಗೌಡರ  ಜೀತದಾಳಾಗಬೇಕು.  ಬಾಲಕನ  ವಿದ್ಯೆಯ  ಕನಸು  ನುಚ್ಚುನೂರಾಗುತ್ತದೆ.

     ʻʻ ಕಸೂತಿ  ಕರವಸ್ತ್ರʼʼ  ಅತ್ಯಂತ  ಮುದ  ನೀಡುವ  ಕತೆ.  ಹಳಸಿದ  ದಾಂಪತ್ಯದ  ನಡುವೆ,  ಪ್ರೀತಿ  ಪ್ರೇಮ  ಕಾಮಗಳೆಲ್ಲ  ತಹಬಂದಿಗೆ  ಬಂದಮೇಲೆ  ಉಳಿಯುವುದು  ಅಪನಂಬಿಗೆ  ಸಂಶಯ  ಜಗಳ  ಮಾತ್ರ.  ಪ್ರಾಮಾಣಿಕ  ದಂಪತಿಗಳಾಗಿಯೂ,  storm  in  a  tea cup  ಎನ್ನುವಂತೇ   ದಾಂಪತ್ಯದ  ಪ್ರಾರಂಭದಲ್ಲಿ  ಹೆಂಡತಿ  ಪ್ರೀತಿಯಿಂದ  ಕೊಟ್ಟ  ಕಸೂತಿ  ಕರವಸ್ತ್ರ  ಕಳೆದುಹೋದ  ಸಾಮಾನ್ಯ  ಘಟನೆಯೊಂದು,  ಸಂಸಾರದಲ್ಲಿ  ಸಮರಸದೃಶ  ವಾತಾವರಣವನ್ನು  ಸೃಷ್ಟಿಸಿಬಿಡುತ್ತದೆ.

        ತಾವೇ  ಬದುಕಿನಲ್ಲಿ  ಕಂಡ,  ತಮ್ಮದೇ  ಪರಿಸರದ   ಹತ್ತು  ಹಲವು  ಪಾತ್ರಗಳು,  ಇಲ್ಲಿ  ಮತ್ತೆ  ಪುನಃಸೃಷ್ಟಿಗೊಂಡಿವೆ.   ಜೀವಂತವಾಗಿ  ತಮ್ಮ  ಕಷ್ಟಸುಖಗಳನ್ನು  ಹಂಚಿಕೊಂಡಿವೆ.  ʻʻಪದ್ಮಪತ್ರದ  ಮೇಲಿನ  ಜಲಬಿಂದುಗಳುʼʼ  ಇಂಥ  ರಚನೆಯಲ್ಲೊಂದು.   ಬದುಕಿನ  ಬೆಂಕಿಯಲ್ಲಿ  ಬೆಂದ  ಹೆಣ್ಣುಜೀವವೊಂದು  ಸಾವನ್ನು  ತಾತ್ವಿಕವಾಗಿ  ಆಹ್ವಾನಿಸುವ  ವಿಶಿಷ್ಟ ಕತೆ.  ಧರ್ಮ  ಆಚಾರ  ಪಾತಿವ್ರತ್ಯಗಳಂತ  ಪಾರಂಪರಿಕ  ಮೌಲ್ಯಗಳು  ಸ್ವಾರ್ಥದ  ಕುಲುಮೆಯಲ್ಲಿ  ಅಸಹ್ಯ  ಆವರಣಕ್ಕೆ  ಪ್ರವೇಶ  ಪಡೆದಾಗ, ಸಾತ್ವಿಕ  ಪ್ರತಿಭಟನೆ  ಅನಿವಾರ್ಯ.  ಸಾಂಪ್ರದಾಯಿಕವಾಗಿ  ಮದುವೆಯಾದ,  ದಂಪತಿಗಳು.  ಅವಿಭಕ್ತ ಕುಟುಂಬದ  ಗ್ರಾಮಜೀವನದಲ್ಲಿ   ಗಂಡನ  ಯಾಂತ್ರಿಕ  ಸ್ವಭಾವ,  ಪ್ರೇಮ  ಪ್ರೀತಿಯ  ಅರ್ಥವನ್ನೂ  ತಿಳಿಯದ,  ಕೇವಲ  ಕಾಮವೊಂದೇ  ಗಂಡ ಹೆಂಡಿರ  ಸಂಪರ್ಕಸಾಧನವಾದ,  ಬದುಕಿನಲ್ಲಿ  ಬೆಂದು  ಹೈರಾಣಾದ  ಹೆಣ್ಣು ʻʻ ಅಕ್ಕʼʼ.   ಕತೆಯ  ನಾಯಕಿಯಾದರೂ  ಅವಳಿಗೆ  ಹೆಸರಿಲ್ಲ. ಗಂಡನ  ದೃಷ್ಟಿಯಲ್ಲಿ  ಅವಳು  ಸಂಸಾರದ  ಒಂದು  ಉಪಯುಕ್ತ  ಸಾಧನವಷ್ಟೇ.  ದುಡಿಯುವುದು  ಹೆರುವುದು,  ಮಾತ್ರ  ಅವಳ  ಕೆಲಸ.   ತನಗಾದ  ಕ್ಯಾನ್ಸರ  ರೋಗ  ತನ್ನನ್ನು  ಸಾವಿನೆಡೆಗೆ  ಕೊಂಡೊಯ್ಯುತ್ತದೆಯೆಂಬ  ಅರಿವು  ಅವಳಿಗಾಗಿದೆ.  ಸಂಸಾರಕ್ಕಿಂತ  ಸಾವೇ  ಸುಖ  ಎಂಬ  ನಿರ್ಣಯಕ್ಕೆ  ಬಂದ  ಅಕ್ಕ,  ಯಾವ  ಚಿಕಿತ್ಸೆಗೂ  ಅವಕಾಶ  ನೀಡಲಾರಳು. ʻʻ ಗವ್ರಿ     ಕರ್ಮಣೀ  ಸರ  ತೆಗೆದು ಬಿಡೇ,  ಒಂದು ಕರ್ಮಣಿಗುಂಡು  ತಾಗಿದ್ರೂ  ನೋವು ಹೆಚ್ಚಾಗಿ, ಕರ್ಳು  ಕಿವಿಚಿದ  ಹಾಂಗಾಗ್ತುʼʼ ಎಂದೆನ್ನುತ್ತ, ಸುದೀರ್ಘ  ದಾಂಪತ್ಯದ  ಕೊನೆಯ  ಹಂತದಲ್ಲಿರುವ  ಅಕ್ಕ  ಕರಿಮಣಿಯನ್ನೇ  ಕಿತ್ತೊಗೆಯುವ  ನಿರ್ಣಯಕ್ಕೆ  ಬರುತ್ತಾಳೆ. ಹಾಗೆಂದು,  ಅವಳ  ಚಿಕಿತ್ಸೆಯ  ವೆಚ್ಚ  ಭರಿಸಲು  ಮನಸ್ಸಿಲ್ಲದ  ಗಂಡ,  ವಿಧಿ  ಆಯುಶ್ಯ  ಎಷ್ಟು  ನೀಡಿದೆಯೋ   ಅಷ್ಟೇ.  ನಂತರ  ನಾವೆಲ್ಲ ಹೋಗಲೇ  ಬೇಕು,  ಎಂಬ  ಒಣ  ವೇದಾಂತ  ಹೇಳುತ್ತಾನೆ.

    ಅಕ್ಕ    ತಂಗಿ  ಗವ್ರಿ,  ,  ʻʻ ಅಕ್ಕ...  ದೇಹದ  ನೋವಿನ್‌  ಜೊತೀಗೆ  ಮನಸೀನ  ಕಹಿನೆನಪಾ  ಕೆದಕ್ತ  ಹೋದ್ರೆ  ಮತ್ತಷ್ಟು  ಹಿಂಸೆಯಾಗ್ತು.  ಈಗ  ನೀನು  ಬದುಕಿನ  ರಸಗಳಿಗೇನಷ್ಟ್ನೇ  ನೆನಪ್‌  ಮಾಡ್ಕ್ಯತ್ತ  ಕಾಲ ಕಳಿʼʼ   ಎಂದು  ಹೇಳಿದಾಗ,   ಅಕ್ಕ  ಕೊಡುವ  ಉತ್ತರ,  ಅದರಲ್ಲಿಯೂ   ಹವಿಗನ್ನಡ  ಭಾಷೆಯ  ಬನಿಯಲ್ಲಿ  ನಿಜಕ್ಕೂ  ಸಾಂಪ್ರದಾಯಿಕ  ಮಹಿಳೆಯೋರ್ವಳ  ಬದುಕಿನ  ನಗ್ನಸತ್ಯವನ್ನು  ಅನಾವರಣ ಗೊಳಿಸುತ್ತದೆ. 

  ʻʻರಸಘಳಿಗೆ..ಹುಂ  ರಸಘಳಿಗೆ..!!  ಗವ್ರಿ,..  ಪೂರಾ  ಬೆತ್ಲೆಬಾನು,  ಬದುಕು  ಕತ್ಲೆಕಾನು,  ರಸ ಎಲ್ಲೀದೇ...?   ಬೆತ್ಲೆ  ಬಾನಲ್ಲಿ  ಮಳೆ  ಬತ್ತ...?  ಹಾಂಗೇ  ಕತ್ಲೆ  ಬದ್ಕಲ್ಲಿ  ರಸ  ಎಲ್ಲಿ  ಹುಟ್ತು...?   ತೀಟೆ  ತೀರ್ತು  ಅಷ್ಟೇಯಾ.  ಈಗ  ರಸ ಅಂದ್ರೆ  ಇದೇ...  ಹಾಲು ಬರ ಜಾಗ್ದಲ್ಲಿ  ಕೀವು  ಅಷ್ಟೇ ʼʼ

        ಅನಂತಮೂರ್ತಿಯವರ  ಸಂಸ್ಕಾರ  ಕಾದಂಬರಿಯನ್ನು  ಮತ್ತೆ  ಕಣ್ಣೆದುರು  ತರುವಂಥ   ಕತೆ  ʻʻಅಂತ್ಯೇಷ್ಠಿʼʼ.    ಅಲ್ಲಿ  ಜಾತಿಭೃಷ್ಟತೆಯ  ಸಮಸ್ಯೆಯಾದರೆ,  ಇಲ್ಲಿ  ಅಂತ್ಯಕ್ರಿಯೆ  ಕೇವಲ  ಗಂಡಿನ  ಹಕ್ಕಲ್ಲ,  ಮೃತನ  ಮಕ್ಕಳೇ  ಆದ   ಹೆಣ್ಣುಮಕ್ಕಳಿಗೂ  ಅಂತ್ಯೇಷ್ಟಿಯ  ಹಕ್ಕಿದೆ,  ಎಂಬ  ಪ್ರತಿಪಾದನೆ  ಕತೆಯ  ಆಂತರ್ಯದಲ್ಲಿ  ಸಮರ್ಥವಾಗಿ,  ಮೂಡಿಬಂದಿದೆ. 

     ಇನ್ನು  ಪರಾವರ್ತನ, ಮುಸ್ಸಂಜೆ  ಕಳೆದು,  ರಾಕ್ಷಸ,  ಮುಂತಾದ   ರಚನೆಗಳು  ವ್ಯಕ್ತಿ ಪ್ರಜ್ಞೆ ಮತ್ತು  ಸುತ್ತಲಿನ  ಸಮುದಾಯದ  ಸಂಸ್ಕೃತಿ  ಪರಂಪರೆಗಳ  ನಡುವಣ  ಸಂಘರ್ಷವನ್ನು  ವಿವಿಧ  ಆಯಾಮಗಳಲ್ಲಿ  ಚಿತ್ರಿಸಲು  ಪ್ರಯತ್ನಿಸುತ್ತದೆ. 

      ಹೆಚ್ಚಿನೆಲ್ಲ  ಕತೆಗಳು  ತಮ್ಮದೇ ಸಮುದಾಯದ  ಭಾಷೆ,ಯೊಂದಿಗೆ,       ಪರಿಸರದ  ಸುದೀರ್ಘ ಸುಂದರ  ವರ್ಣನೆಗಳಿಂದ,  ಸಣ್ಣ ಕತೆಮೀರಿ   ಕಾದಂಬರಿಯಂಚನ್ನು  ಸ್ಪರ್ಶಿಸಿದಂತೇ  ತೋರುತ್ತದೆ.  ವರ್ಣನಾತ್ಮಕ  ವಿವರಗಳು,  ಅದರಷ್ಟಕ್ಕೆ  ಆಕರ್ಷಕವೆಂದೆನ್ನಿಸಿದರೂ,  ಅವುಗಳಿಗೊಂದು  ರೂಪಕತೆ  ದೊರಕದಿದ್ದಲ್ಲಿ,  ವರ್ಣನೆಗಳು  ಕತೆಯ  ಸಾವಯವ  ಸ್ವರೂಪಕ್ಕೆ  ಭಾರವಾಗಬಹುದೇ  ಎಂಬ  ಆತಂಕವೂ  ಕಾಡುತ್ತದೆ.  

    ಒಟ್ಟೂ  ಸಂಕಲನದ  ಕತೆಗಳೆಲ್ಲವೂ   ವಿವಿಧ  ಪತ್ರಿಕೆಗಳಲ್ಲಿ  ಬಹುಮಾನಿತಗೊಂಡಿರುವುದೊಂದು  ವಿಶೇಷ.   ರಮೇಶರಲ್ಲಿ  ಸಶಕ್ತ  ಭಾಷೆಯಿದೆ. ಖಚಿತ  ವೈಚಾರಿಕತೆಯಿದೆ. ವಸ್ತುಗಳಲ್ಲಿ  ವೈವಿಧ್ಯತೆಯಿದೆ. ನಡು ನಡುವೆ  ಕಾವ್ಯಾತ್ಮಕ  ನುಡಿಗಟ್ಟುಗಳು   ತಾತ್ವಿಕತೆಯ  ಘನತೆ  ಪಡೆಯುತ್ತವೆ.  . ಆದರೆ  ಸಿದ್ಧ  ತಂತ್ರಗಳ  ಬದಲು  ಪರ್ಯಾಯದ  ಅನ್ವೇಷಣೆಯಾದರೆ,  ಕತೆಗಳಿಗೆ  ಇನ್ನಷ್ಟು ಹೊಸತನದ ಮಿಂಚು  ಮೂಡಬಹುದಾಗಿದೆ. 

        ಕತೆಯೆಂದರೆ .........

 ವ್ಯಥೆಯ  ಜ್ವಾಲೆ.  ತಪ್ಪು 

ಒಪ್ಪುಗಳ  ಸರಮಾಲೆ

ಬುದ್ಧಿ-ಭಾವಗಳ  ಸೆಲೆ, 

ಸಾಂತ್ವನದ  ಸಲ್ಲೀಲೆ.

       ಕತೆಯೆಂದರೆ ........

ಕವಿತೆಯ  ತೆನೆ.  ಬನಿಗೊಂಡ

 ಭಾಷೆಯ ಕೆನೆ.

       ಕತೆಯೆಂದರೆ ..........

ವಾಚ್ಯಮೀರಿ  ಸೂಚ್ಯವಾಗುವುದು.

ಮೆಚ್ಚುತ್ತಲೇ  ಚುಚ್ಚುವುದು.

ಬೆಚ್ಚನೆಯ  ಹಚ್ಚಡವ

 ಹೊಚ್ಚುವುದು.

        ಕತೆಯೆಂದರೆ.......

ಸಮರವಲ್ಲ, ಸಂಧಾನವೂ  ಅಲ್ಲ.

ಅವೆರಡರ  ನಡುವಣ  

ಅನುಸಂಧಾನ. 

===============================================

  ಮಕರ  ಸಂಕ್ರಾಂತಿಯ   ಹಾರ್ದಿಕ  ಶುಭಾಶಯಗಳೊಂದಿಗೆ

   ಸುಬ್ರಾಯ   ಮತ್ತೀಹಳ್ಳಿ..  ತಾ-  ೧೫ -೧ – ೨೩.( ಕಥಾ ಸಂಕಲನಕ್ಕೆ  ಮುನ್ನುಡಿ )

No comments:

Post a Comment