Tuesday 19 September 2023

ಪರಂಪರೆಯ ನೆರಳಲ್ಲಿ ಆಧುನಿಕತೆಯ ಧ್ಯಾನ.ʼʼ

 

                   ʻʻ ಇರುಳಲಿ ತಾರೆಗಳಾಡವು ನೋಡವು, ಜೊನ್ನವು ಇಳಿಯಲು ಇಂಬಿಲ್ಲ

                    ಅರುಣೋದಯವೀ ವಿಪಿನದೊಳಾಗದು  ಉಷೆಯ ಕಿರಣಗಳ  ಹಂಬಿಲ್ಲ.

                    ಕುರುಡು  ಕಾವಳದ  ಹುರುಡು ಹೇವಗಳ  ಕೆಸರ ಮಿಂದ ತಿರೆಪಂಕ್ತಿ

                    ಕವಿದಾವರಿಸಿದೆ  ಸುತ್ತಲು _ ಮುತ್ತಲು  ಮೇಣೆತ್ತತ್ತಲು ತರು ಪಂಕ್ತಿ.ʼʼ                                                       (ನೃತ್ತಾವತಾರಂ )

    

   ಅತ್ತಿಮುರುಡು, ಕನ್ನಡ ಕಾವ್ಯಕ್ಷೇತ್ರದಲ್ಲಿ ಮಿಂಚುತ್ತಿರುವ  ನಕ್ಷತ್ರ.  ತಾತ್ವಿಕತೆ ಆಧ್ಯಾತ್ಮಿಕತೆ, ವೈಚಾರಿಕತೆ ಮತ್ತು ಭಾವಪೂರ್ಣತೆ ಯಂಥ ಗುಣಗಳಿಂದ ಸಮೃದ್ಧವಾಗಿರುವ ವ್ಯಕ್ತಿತ್ವ ಅವರದ್ದು. ʻʻ ಮಣ್ಣಬದುಕ ಹೊಂದಿದಾತನಿಗೇ ಕವಿಯಾಗುವ ಹಕ್ಕುʼʼ  ಎಂಬ ಕೃಷಿಋಷಿ  ಪುಕಾವೋಕಾ ಅವರ ಉದ್ಗಾರ,  ಅತ್ತಿಮುರುಡುರವರ  ಅಕ್ಷರದ ಚಟುವಟಿಕೆಯನ್ನು ಕಂಡಾಗ ನೆನಪಾಗುತ್ತದೆ. ಹಚ್ಚ ಹಸಿರು ಪ್ರಕೃತಿ, ಉನ್ನತ ಪರ್ವತಸ್ತೋಮ  ಜುಳು ಜುಳು ಹರಿಯುವ ನದಿಗಳ ಒಡಲಲ್ಲಿ ಬದುಕು ಕಟ್ಟಿಕೊಂಡ ಕವಿಯ ಪರಿಸರ, ದೂರದಿಂದ  ಕಣ್ತಣಿಸುವ ಸೌಂದರ್ಯದಿಂದ, ಸಂತಸ ನೀಡಬಹುದು. ನಗರೀಕೃತ ಬದುಕಿಗೆ ದೂರದ ಹಸಿರು ಪ್ರಕೃತಿ ಅದೊಂದು ಸ್ವರ್ಗವೇ. ಆದರೆ  ಅದೇ ಅರಣ್ಯಪರಿಸರದ ನಡುವೆಯೇ ಕೃಷಿಕನಾಗಿ ಬದುಕುವವನ ಸ್ಥಿತಿ ಭಿನ್ನ. ಸುರಿಯುವ ಮಳೆ, ಕಾಡುವ ಕೊಳೆ, ಬೆಳೆಯ ವೈಫಲ್ಯ, ಮಾರುಕಟ್ಟೆಯ ಕಣ್ಣುಮುಚ್ಚಾಲೆ, ಸೌಲಭ್ಯದ ಆಭಾವ, ಆರ್ಥಿಕ ಸಂಕಷ್ಟ, ಮುಂತಾದ ಸವಾಲುಗಳ ನಡುವೆ, ಕವಿಯಾಗಿ, ಚಿಂತನಶೀಲನಾಗಿ, ಸಮಾಜಮುಖಿಯಾಗಿ, ಸಂಸ್ಕೃತಿಪರ ವ್ಯಕ್ತಿತ್ವವನ್ನು ಜೀವಂತವಾಗಿ ಉಳಿಸಿಕೊಳ್ಳುವುದೇ, ಅದೊಂದು ಮಹಾಸಾಹಸ.  ಇಷ್ಟೆಲ್ಲ ಗೋಜಲುಗಳ ನಡುವೆ, ಒಂದು ವಿಶ್ವವಿದ್ಯಾಲಯ ಕೈಗೊಳ್ಳುವಂಥ  ಹತ್ತು ಹಲವು ಸಾಂಸ್ಕೃತಿಕ  ಬೌದ್ಧಿಕ  ಸಂಶೋಧನಾತ್ಮಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು, ವಿಶ್ವವಿದ್ಯಾವಂತರಿಗೇ  ಅಚ್ಚರಿಮೂಡಿಸಿದ  ಅತ್ತಿಮುರುಡು ವಿಶ್ವೇಶ್ವರ ರವರ  ಸಾಧನೆಗಳನ್ನು ಇನ್ನೂ ನಮ್ಮ ಕನ್ನಡದ ಬೌದ್ಧಿಕ ಸಮುದಾಯ ಗುರುತಿಸಿಲ್ಲ. ಗೌರವಿಸಿಲ್ಲ ಎಂಬುದು ವಿಷಾದನೀಯ.

   ಭಾರತೀಯ ಚಿಂತನ ಪರಂಪರೆ ಬೆಳೆದು ಬಾಳಿದ್ದು, ನಗರಗಳಲ್ಲಿಯಲ್ಲ. ರಾಜಧಾನಿಗಳಲ್ಲಿಯಲ್ಲ. ಅರಣ್ಯಪರಿಸರದ  ಋಷ್ಯಾಶ್ರಮಗಳಿಂದ.  ಪ್ರಭುತ್ವವನ್ನೇ  ಆಶ್ರಮ ಪರಿಸರ ಹಿಡಿತದಲ್ಲಿಡುತ್ತಿತ್ತು.  ತತ್ವಜ್ಞಾನ ಮತ್ತು ವಿಜ್ಞಾನಗಳು  ಪ್ರಭುತ್ವಕ್ಕೆ ಅಂಕುಶವಾಗಿತ್ತು. ಇಂದು ಪ್ರಭುತ್ವದ ಅಂಕೆಯಲ್ಲಿ ತತ್ವಜ್ಞಾನ ಧರ್ಮ ಮತ್ತು ವಿಜ್ಞಾನ ನರಳುತ್ತಿದೆ.

   ಆಶ್ರಮ ಸದೃಷ  ಅತ್ತೀಮುರುಡು ಎಂಬ  ಪುಟ್ಟಗ್ರಾಮದ  ಅಪ್ಪಟ ಕೃಷಿಕರಾದ  ವಿಶ್ವೇಶ್ವರ ಹೆಗಡೆಯವರ ಮೂರನೆಯ ಕವನಸಂಕಲನ ʻʻ ಬೆಳ್ಳಿಜಾರಿದ ಮೇಲೆʼʼ  ಇದೀಗ  ನಮ್ಮ ಕೈಸೇರುತ್ತಿದೆ. ಇದ್ದಲ್ಲೇ ವಿಶ್ವದ ಜ್ಞಾನವನ್ನು ಹೀರಿಕೊಳ್ಳುತ್ತ,  ಅಕ್ಷರಗಳಲ್ಲಿ, ನಡೆ ನುಡಿಯಲ್ಲಿ  ಸಂಶೋಧನೆಯಲ್ಲಿ, ಶ್ರೇಷ್ಠ ಗ್ರಂಥಗಳ ಅನುಸೃಷ್ಟಿಯಲ್ಲಿ, ಅನನ್ಯ ಜೀವನಾನುಭವಗಳನ್ನು  ಅಭಿವ್ಯಕ್ತಿಸುತ್ತ,  ಸಾಕ್ಷರತೆಗೆ  ಸಾಮಾಜಿಕತೆಗೆ, ಸಾಂಸ್ಕೃತಿಕತೆಗೆ  ಹೊಸ ಹರಿವು ಮತ್ತು ಹೊಸ ಎಚ್ಚರವನ್ನು  ಮೂಡಿಸುತ್ತಿರುವ ಶ್ರೀಯುತರ ಮೌನಸಾಧನೆಗೆ  ಅಭಿನಂದಿಸಲೇ ಬೇಕು.  

     ಸುವರ್ಣಸಂಖ್ಯೆಯನ್ನು ಸಂಕೇತಿಸುವ ಐವತ್ತು ಕವಿತಾ ಪುಷ್ಪಗಳ ಗುಚ್ಛವಾಗಿರುವ ಪ್ರಸ್ತುತ ಸಂಕಲನ  ʻʻಬೆಳ್ಳಿಜಾರಿದ ಮೇಲೆʼʼ ಶೀರ್ಷಿಕೆಯನ್ನು ಹೊತ್ತು ಉನ್ನತ ಆಶಾವಾದವನ್ನು ಕೃತಿ ಧ್ವನಿಸುತ್ತಿದೆ. ಖಂಡಕಾವ್ಯ ಎಂದೆನ್ನಬಹುದಾದ ಇನ್ನೂರಾ ಮೂವತ್ತು ಸಾಲುಗಳನ್ನೂ ದಾಟಿದ ಗೀತರೂಪಕ ʻʻನೃತ್ತಾವತಾರಂʼʼ ಛಂದೋಬದ್ಧ ಸಾಲುಗಳು, ಆಧ್ಯಾತ್ಮಿಕ ಆಶಯ, ಪೌರಾಣಿಕ ಆಯಾಮಗಳಲ್ಲಿ ಸಮೃದ್ಧ ಅರ್ಥವಂತಿಕೆ ಪಡೆದು ಅರಳಿಕೊಂಡಿದೆ. ಕ್ರೂರ ವಾಸ್ತವವನ್ನೂ ಧ್ವನಿಸುತ್ತಿದೆ. ಶಿವ ನಟರಾಜನಾಗಿ, ತಾಂಡವ ನೃತ್ಯಗೈದ ಪೌರಾಣಿಕ ಕಥೆಯೊಂದು ಇಲ್ಲಿ ಗೀತರೂಪಕವಾಗಿ, ನವರಸವನ್ನೂ ಮೈಗೂಡಿಸಿಕೊಂಡು ಅರಳಿ ನಿಂತಿದೆ.

    ಕವಿಗೆ ಭಾವಸಮೃದ್ಧಿ ಒಂದಿದ್ದರೆ ಸಾಲದು, ಅದಕ್ಕೆ ತಕ್ಕ ಭಾಷಾಸಮೃದ್ಧಿಯಿದ್ದರೆ ಮಾತ್ರ, ಆಶಯಕ್ಕೆ ನ್ಯಾಯ ದೊರಕಬಹುದಾಗಿದೆ. ಇಲ್ಲಿ ಭಾವ ಮತ್ತು ಭಾಷೆ ಎರಡೂ ವಿದ್ಯುದಾಲಿಂಗನದಲ್ಲಿ ಸಂಗಮ ಗೊಂಡಿದೆ.  ಸಂಕಲನದ ಪ್ರಥಮ ರಚನೆ ʻಶಬ್ದಗಳುʼ ಎಂಬ ಕವನವೇ ಶಬ್ದ ಸಾಮ್ರಾಜ್ಯದ ಅಯೋಮಯತೆಯನ್ನು ವರ್ಣಿಸುತ್ತ, ಕ್ರೂರ ವಾಸ್ತವವನ್ನು ಚಿತ್ರಿಸುತ್ತದೆ. ಜೊತೆಗೆ ಶಬ್ದಗಳ ದುಂದಿನ ದಂದುಗದ ಕಡೆಗೆ ನಮ್ಮ ಗಮನ ಸೆಳೆಯುವುದರ ಜೊತೆಗೆ, ಕವಿ ಎಚ್.ಎಸ್.ವಿ ಯವರ, ಮಹತ್ವಪೂರ್ಣ ಕವಿತೆಯ, ʻʻ ಶಬ್ದಗಳೇ ಬನ್ನಿ, ಶಬ್ದ ನಿಃಶಬ್ದಗಳ ಪ್ರಾರಬ್ಧಗಳೇ ಬನ್ನಿʼʼ  ಎಂಬ ಕವಿತೆಯ ಸಾಲುಗಳನ್ನು ನೆನಪಿಸುತ್ತದೆ.

   ಕವಿ ಮೂಲಭೂತವಾಗಿ ಭಾವಪಕ್ಷಪಾತಿ. ನವೋದಯ ಪ್ರಕಾರದ ಕಾವ್ಯಮಾರ್ಗದ ಛಂದೋವಿಲಾಸ, ಛಂದೋವೈವಿಧ್ಯಗಳನ್ನೆಲ್ಲ, ಕರಗತವಾಗಿಸಿಕೊಂಡಿರುವ ಇವರ ಪದ್ಯಗಳಲ್ಲಿ, ನವೋದಯ ಪರಂಪರೆಯ ದಿಗ್ಗಜ ಕವಿಗಳಾದ, ಬೇಂದ್ರೆ, ಪು.ತಿ.ನ. ಕುವೆಂಪು ಇವರುಗಳನ್ನೆಲ್ಲ ಏಕಕಾಲದಲ್ಲಿ ಕಣ್ಣೆದುರು ಸಜೀವಗೊಳಿಸುತ್ತಾರೆ.

ಹಾಗೆಂದು ನವ್ಯಮಾರ್ಗದಿಂದ ಕವಿ ದೂರವಾಗಿಲ್ಲ. ಶಬ್ದಗಳು, ಇದು ಹೀಗೇ, ಹುಡುಕಿ ಕೊಡಿ, ಒಳಗೆ ಬಾ ಯಾತ್ರಿಕನೆ, ಸ್ವರ್ಗಪಾತ, ಮುಂತಾದ ರಚನೆಗಳು ವ್ಯಂಗ್ಯ ಮತ್ತು ವೈಚಾರಿಕತೆಗಳನ್ನು ಸಮರ್ಥ ಪ್ರತಿಮೆಗಳಲ್ಲಿ ಹಿಡಿದಿರಿಸಿವೆ. ಅಡಿಗ ಮಾರ್ಗದಲ್ಲೇ ಸಾಗುವ ನವ್ಯ ಕವಿತೆಗಳು ವರ್ತಮಾನದ  ಸಾಮಾಜಿಕ ವೈಚಾರಿಕ ಅದಃಪತನವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿವೆ. ಅದೆಷ್ಟೋ ನವ್ಯ ಕವಿಗಳ ಪ್ರಸಿದ್ಧ ರಚನೆಗಳೂ ಸಹ, ವೈಚಾರಿಕವಾಗಿ ಮಿಂಚಿದರೂ  ಶಬ್ದದಾರಿದ್ರ್ಯದಿಂದ  ನರಳುವುದನ್ನು ಕಂಡಾಗ,  ವಿಶ್ವೇಶ್ವರರ ಶಬ್ದಸಂಪತ್ತು ಗಮನಕ್ಕೆ ಬರುತ್ತದೆ.  

   ʻʻಬಿಟ್ಟರಿಹುದೆ ಬೇರೆ ದಾರಿ ಪ್ರದಕ್ಷಿಣೆಯ ಹೊರತು/

ಬಟ್ಟೆ ಕುಣಿಯನಾಡಿ ಆಡಿ ಸುತ್ತುತಿರುವೆನಿಂತು.

ಯೆನ್ನ ಚಿತ್ತದೊಲವಿಗಿಹುದು ಆಕಾಶದ ಸಾಕ್ಷಿ/

ಅದರ ಮೇಲೆ ಹಾರುತಿಹುದು ಮೌನಿ ಕಾಲಪಕ್ಷಿ.ʼʼ ( ನಿತ್ಯ ವಿರಹ )

    ಕವಿಯ ಬದುಕಿನ ತಾತ್ವಿಕ ಪ್ರಣಾಳಿಕೆಯಂತಿರುವ ʻ ನಿತ್ಯವಿರಹʼ ಕವಿತೆ  ಮನುಷ್ಯ ಬದುಕಿನ ಮಿತಿಯನ್ನು ಗುರುತಿಸುತ್ತ, ಅದನ್ನು ಮೀರುವ ಹೋರಾಟವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಅಪ್ಪಟ ಶಿಷ್ಟಭಾಷೆಯ ನಡುವೆ ʻಬಟ್ಟೆ ಕುಣಿ ʼ ಯಂಥ ಪ್ರಾದೇಶಿಕ ಪ್ರತಿಮೆ ಮೂಡಿ ಮುದ ನೀಡುತ್ತದೆ. ನಿಂತಲ್ಲೇ ಗಿರಿ ಗಿರಿ ತಿರುಗಿ ಆಟವಾಡುವ ಮಕ್ಕಳನ್ನು ಗಮನಕ್ಕೆ ತರುತ್ತಲೇ, ಜಡಬದುಕಿನ ವ್ಯರ್ಥ ಸಮಯಾಲಾಪವನ್ನು ಲೇವಡಿ ಮಾಡುತ್ತದೆ..

     ಮತ್ತೊಂದು ಕವನ ʻʻರೊಕ್ಕ ಹಾರುತಿದೆ ʼʼ ವಿಡಂಬನಾತ್ಮಕತೆಯಲ್ಲಿ ಗಮನ ಸೆಳೆಯುತ್ತಿದೆ.  ಬೇಂದ್ರೆಯವರ ಕ್ಷಮೆಕೋರಿ  ಅವರದ್ದೇ ಜನಪ್ರಿಯ ಕವನವೊಂದನ್ನು ಅಣುಕಾಗಿಸಿದ್ದಾರೆ.

 ರೊಕ್ಕ ಹಾರುತಿದೆ ನೋಡಿದಿರಾ / ಎತ್ತರ ಎತ್ತರ ಎತ್ತರಕೇರಿ / ದಿಕ್ಕು ದಿಕ್ಕಿಗೂ ಹೊಡೆಯುತ ಭೇರಿ /

ಲೋಕದ ಶಾಂತಿಯ ಗಾಳಿಗೆ ತೂರಿ / ರೊಕ್ಕ ಹಾರುತಿದೆ ನೋಡಿದಿರಾ...?

  ಸ್ವಥಃ ಬೇಂದ್ರೆಯವರೇ ʻʻಬೆಕ್ಕು ಹಾರುತಿದೆ ನೋಡಿದಿರಾ..ʼʼ ಎಂದು ತಮ್ಮ ಕವನವನ್ನೇ ಅಣುಕಿಸಿ ಬರೆದಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ.

   ಕಾವ್ಯಪ್ರಕಾರ ಯಾವುದೇ ಇರಲಿ  ಲಯಪ್ರಜ್ಞೆ ಶಬ್ದಸಮೃದ್ಧಿ ಭಾವತೀವ್ರತೆ ಯಿಲ್ಲದಿದ್ದಲ್ಲಿ ಅದೊಂದು ಶುಷ್ಕ ಆಲಾಪವಾಗುವ ಅಪಾಯವಿದ್ದೇ ಇದೆ. ವಿಶ್ವೇಶ್ವರರಲ್ಲಿ ಈ ಎಲ್ಲ ಸಂಪತ್ತು ಸಂಗ್ರಹವಿದ್ದುದರಿಂದಲೇ ಅವರ ನವ್ಯಶೈಲಿಯ ರಚನೆಗಳೂ ಸಹ ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ʻಯಾವುದಾಶಾಕಿರಣʼ ಎಂಬ ಕವನದಲ್ಲಿ ಮಿಂಚುವ ʻʻ ಪಿಚ್ಚು ಕಣ್ಣುಗಳೊಳಗೆ  ನುಚ್ಚಾದ ನೆನಪುಗಳ / ಅಚ್ಚಿಗೊಗ್ಗಿಸಿ ಬಿಡುವ ಇಚ್ಛೆ ತಾಳಿ....ʼʼ

 

ಸಾಲನ್ನೇ ಗಮನಿಸಿದರೂ ಸಾಕು. ಆಡುನುಡಿಯ ಶಬ್ದಗಳು ಇಲ್ಲಿ ಅನುರಣನಗೊಳ್ಳುತ್ತ, ಆಳ ಅರ್ಥದ ಆವರಣಕ್ಕೆ ಲಗ್ಗೆಯಿಡುತ್ತದೆ.

   ಕನ್ನಡದ ಶ್ರೇಷ್ಠ ಅನುವಾದಕರಾಗಿಯೂ ಬೆಳೆದಿರುವ  ಇವರು, ಪ್ರಸ್ತುತ ಸಂಕಲನದಲ್ಲಿ ವಿವೇಕಾನಂದರ ನಾಸದೀಯ ಸೂಕ್ತದ ಇಂಗ್ಲೀಶ್‌ ಕಾವ್ಯಾನುವಾದವನ್ನು, ಕನ್ನಡಕ್ಕೆ ʻಸೃಷ್ಟಿಗೀತʼ ಎಂಬ ಶೀರ್ಷಿಕೆಯಲ್ಲಿ ಸಮರ್ಥವಾಗಿ ತಂದಿರಿಸಿದ್ದಾರೆ. ವೇದ ಉಪನಿಷತ್ತುಗಳ ಆಳ ಜ್ಞಾನ, ಮತ್ತು ಅನುಸಂಧಾನವಿಲ್ಲದೇ ಅನುವಾದಿಸುವ ಧೈರ್ಯ ಸಾಮಾನ್ಯವಾಗಿ ಬರದು. ಅದರಲ್ಲಿಯೂ ವಿವೇಕಾನಂದರ ಕವನವಾದುದರಿಂದ  ಜವಾಬ್ದಾರಿ ಮತ್ತೂ ಘನವಾದದ್ದು. ವಿವೇಕರ  ಸಾಕಷ್ಟು ಕವನಗಳ ಶ್ರೇಷ್ಠ ಅನುವಾದಗಳು  ಈಗಾಗಲೇ ಕು.ವೆಂ.ಪು ರವರ ಮೂಲಕ ಪರಿಚಿತಗೊಂಡಿವೆ. ಸನ್ಯಾಸಿಯ ಗೀತೆ, ಕವನವಂತೂ ಈಗಲೂ ಕಾವ್ಯಪ್ರಿಯರ ಹೃದಯದಲ್ಲಿ ಮೊಳಗುತ್ತಿದೆ. ವಿಶ್ವೇಶ್ವರರ ಪ್ರಸ್ತುತ ಮಹಾತ್ವಾಕಾಂಕ್ಷೀ ಅನುವಾದವೂ ಸಹ, ಅದರ ಆಧ್ಯಾತ್ಮಿಕ ಆಳ, ತತ್ವದ ಮಿಂಚು, ಮಂತ್ರದ ಮಾಧುರ್ಯದಿಂದ ಮನಸ್ಸನ್ನು ಆವರಿಸುವ ಶಕ್ತಿ ಪಡೆದಿದೆ.

     ಕತ್ತಲೆಯ ಬಸಿರೊಳಗೆ ಕತ್ತಲೆಯು ಮಲಗಿ / ಪಾರವಿಲ್ಲದಖಂಡ ನೀರೊಳಗೆ ಹುದುಗಿ /

     ಬೇರ್ಪಡಿಸಲಾಗದಂತಿತ್ತೊಂದೆಯಾಗಿ / ತವಸಿನಿಂದದೆ ಕಾಣಿಸಿತು ವ್ಯಕ್ತವಾಗಿ /  (ಸೃಷ್ಟಿಗೀತ )

ಅನುವಾದವೆಂದರೆ  ಕೇವಲ ಶಬ್ದವನ್ನು ಹಿಂಬಾಲಿಸುವುದಲ್ಲ. ಅದೊಂದು ಅನುಸ್ಪಂದನ. ಅನುಸೃಷ್ಟಿಯೆತ್ತರಕ್ಕೆ ಏರಬೇಕು. ಅದು ಇಲ್ಲಿ ಸಾಕಾರಗೊಂಡಿದೆ.

     ತಮ್ಮ ಪ್ರತಿಭಾಪೂರ್ಣ ಕಲಾವಂತಿಕೆ,  ಮತ್ತು ಚಿಂತನಶೀಲತೆಯ ಮೂಲಕ ನಮ್ಮ ಸಮುದಾಯಕ್ಕೆ ಇನ್ನಷ್ಟು ಕಾಲ ಸೇವೆಸಲ್ಲಿಸಬೇಕಾಗಿದ್ದ, ಮಾನವೀಯ ಅಂತಃಕರಣದ ಎರಡು ವ್ಯಕ್ತಿತ್ವಗಳು ಅಕಾಲದಲ್ಲಿ ತೊರೆದು ಹೋದ ಘಟನೆ ಕವಿಯನ್ನು ಅತ್ಯಂತ ಕಾಡಿದೆ. ಯಕ್ಷಗಾನ ಭಾಗವತ ದಿ. ಕಾಳಿಂಗ ನಾವಡ, ಮತ್ತು. ಲೇಖಕ ಚಿಂತಕ  ಡಾ|| ಆರ್.ಪಿ.ಹೆಗಡೆ ಯವರ ಅಗಲಿಕೆಯಿಂದ ನೊಂದ ಸಂದರ್ಭದಲ್ಲಿ, ಕವಿ ತಮ್ಮ ಕಾವ್ಯ ಶೃದ್ಧಾಂಜಲಿಯನ್ನರ್ಪಿಸುತ್ತಾರೆ.

          ʻʻಚಂಡೆ ಮದ್ದಲೆಯ ಗಂಡು ಪೆಟ್ಟುಗಳು ಗೆಲವ ಕಳೆದು ಕೊಂಡು

          ಹಾಡೆ ಹಾಡೆ ಹಾ! ಎಂದು ಸುಯ್ಯುವುವೋ ನಿನ್ನ ನೆನಪು ಬಂದು

          ಗೆಜ್ಜೆ ಕಾಲು ಅಡಿಯಿಡುವ ವೇಳೆ ನಾವಡಿಗತನವ ಬಯಸಿ

          ಒಜ್ಜೆಯಾಗುತಿದೆ, ಬಾರೆಯೇನು..? ಇಲ್ಲೊಮ್ಮೆ ಜೀವ ಧರಿಸಿ..? ʼʼ(ನುಡಿ ನೆನಹು)

 

ಇಬ್ಬರ ವ್ಯಕ್ತಿತ್ವದ ಸೃಜನಶೀಲ ಆಯಾಮವನ್ನು ಕಾವ್ಯಮಾಧ್ಯಮದಲ್ಲಿ ಮನಕಲಕುವಂತೇ ಸೃಷ್ಟಿಸಿದ ಪರಿ  ಓದುವಾಗಲೇ ಕಣ್ಣು ಹನಿಗೂಡುತ್ತದೆ.

    ಹೊಸ ಕನ್ನಡ ಕಾವ್ಯಪ್ರಪಂಚ  ನವೋದಯ ನವ್ಯ ಪ್ರಗತಿಶೀಲ ಬಂಡಾಯ ದಲಿತ ದಂತಹ  ಹಲವು ಆಯಾಮಗಳನ್ನ,  ಮಜಲುಗಳನ್ನ ದಾಟಿ ಒಂದು ಹಂತದಲ್ಲಿ ನಿಂತ ನೀರಾಗಿದೆಯೇನೋ ಅನ್ನಿಸುವಂಥ ಸಂದರ್ಭದಲ್ಲಿಯೇ  ವಿಶ್ವೇಶ್ವರರು,  ನವೋದಯದ ನಾದಮಯತೆ, ನವ್ಯದ ಚಿಂತನಶೀಲತೆ, ಬಂಡಾಯದ ಸಾಮಾಜಿಕತೆ ಯಂತಹ ಎಲ್ಲ ಗುಣಗಳನ್ನೂ ಸ್ವೀಕರಿಸುತ್ತ, ತಮ್ಮ ಕಾವ್ಯಪ್ರಕ್ರಿಯೆಯನ್ನು ಮುಂದುವರೆಸುತ್ತಿದ್ದಾರೆ.

ಸಮೃದ್ಧ ನಿಸರ್ಗ, ಅಧ್ಯಯನದಿಂದ ಒದಗಿದ ತಾತ್ವಿಕ ಗಟ್ಟಿತನ, ಯಕ್ಷಗಾನ ಅರ್ಥಧಾರಿಯಾಗಿ ಪುರಾಣ ಪಾತ್ರಗಳೊಂದಿಗಿನ ಅನುಸಂಧಾನ, ಮತ್ತು ಪರಂಪರೆಯ ಬಗೆಗಿನ ಪ್ರೀತಿ, ಅವರ ವ್ಯಕ್ತಿತ್ವಕ್ಕೊಂದು ವಿಶಿಷ್ಟ ಚೆಲುವನ್ನು ನೀಡಿದೆ. ಈ ಪುಟ್ಟ ಕೃತಿಯಲ್ಲಿ ದಟ್ಟ ಜೀವನಾನುಭವದ ಗಟ್ಟಿ ಕಾಳುಗಳನ್ನು ಕಾಣಬಹುದಾಗಿದೆ.   ಕಲೆ ಚಿಂತನೆ ಮತ್ತು ಕಾವ್ಯದಂಥ ಕ್ಷೇತ್ರದಲ್ಲಿ ಕವಿಯ ಸಂವೇದನಾ ಶೀಲ ಪ್ರವೃತ್ತಿ   ಅನುಭವದ ಆಳಕ್ಕೇ ಇಳಿದು ಶೋಧಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

   ವಿಶ್ವೇಶ್ವರರ ಒಟ್ಟೂ ಸೃಜನಶೀಲ ಪ್ರವೃತ್ತಿಯನ್ನು ಕಂಡಾಗ ಅಚ್ಚರಿ ಮೂಡುತ್ತದೆ. ದೂರದ ಪ್ರಕೃತಿ, ದೂರದ ಬೆಂಕಿ ಎರಡೂ ರಮ್ಯ ದೃಷ್ಯಗಳೇ ಆದರೂ, ಅವೆರಡರ ನಡುವೆ ಸ್ವಥಃ ಬದುಕು ಕಟ್ಟಿಕೊಂಡು, ಆರೋಗ್ಯ ಮತ್ತು ಬದುಕಿನ ಸವಾಲುಗಳನ್ನೆದುರಿಸುತ್ತಲೇ, ಕಾವ್ಯಸೃಷ್ಟಿಗೈಯ್ಯುತ್ತಿರುವ ಕವಿಯನ್ನು ಅಭಿನಂದಿಸಲೇ ಬೇಕು.

   ಕಾವ್ಯದ ಅಥವಾ ಸಂಶೋಧನಾ ರಂಗದ ಬಗೆಗಿನ ಕೇವಲ ಕುತೂಹಲಿಯಾದ ನನ್ನನ್ನೂ ತಮ್ಮ ಕೃತಿಯಬಗೆಗೆ ಪ್ರತಿಕ್ರಿಯೆ ನೀಡಲು ಆಪ್ತವಾಗಿ ಆಹ್ವಾನಿಸಿರುವುದು ನನ್ನ ಸುಯೋಗ. ಅವರ ಒಟ್ಟೂ ಸಾರಸ್ವತ ಚಟುವಟಿಕೆಯ ಬಗೆಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ.  ಪ್ರಸ್ತುತ ʻ ಬೆಳ್ಳಿಜಾರಿದ ಮೇಲೆʼ ಕೃತಿಯ ಪಕ್ಷಿನೋಟ ಮಾತ್ರ ಇದಾಗಿದೆ. ಇವರ ಅಂತರಂಗದಲ್ಲಿನ ತುಡಿತ, ಅಭಿವ್ಯಕ್ತಿಯಲ್ಲಿಯ ಗಾಂಭೀರ್ಯ, ಛಂದಸ್ಸಿನ ಮೇಲಣ ಪ್ರಭುತ್ವಗಳನ್ನೆಲ್ಲ  ಕಂಡಾಗ ಮಹಾಕಾವ್ಯದ ಸೃಷ್ಟಿಗೆ ಕಾಲ ಪಕ್ವವಾಗಿದೆ ಎಂದೆನ್ನಿಸುತ್ತಿದೆ.  ಆದರೆ ಆರೋಗ್ಯವೆಂಬುದು  ಬೆಂಬಿಡದೇ ನಕ್ಷತ್ರಿಕನಂತೇ ಕಾಡುತ್ತಿರುವುದು ನಿಜಕ್ಕೂ ವಿಷಾದನೀಯ.

   ಬಹುಬೇಗ ಆರೋಗ್ಯ ಮರಳಿ ಶಕ್ತವಾಗಲಿ.  ವಿಶ್ವೇಶ್ವರರ ಸೃಜನಶೀಲ ವ್ಯಕ್ತಿತ್ವ ಮತ್ತಷ್ಟು ಚೈತನ್ಯಪಡೆದು ಸಕ್ರಿಯಗೊಳ್ಳಲಿ. ಕನ್ನಡ ಕಾವ್ಯ ಜಗತ್ತಿಗೆ  ಇನ್ನಷ್ಟು ಕೊಡುಗೆ ಶ್ರೀಯುತರಿಂದಾಗಲಿ, ಎಂದು  ಆತ್ಮೀಯವಾಗಿ  ಹಾರೈಸುತ್ತಿದ್ದೇನೆ.

       ಗೌರವಾದರಗಳೊಂದಿಗೆ,   ಸುಬ್ರಾಯ  ಮತ್ತೀಹಳ್ಳಿ. ೨೭-೨-೨೦೨೩.

 

No comments:

Post a Comment