Tuesday 26 September 2023

ಉತ್ತರ ಕನ್ನಡ ʻʻವೈಚಾರಿಕತೆ ಹೊಸ ತಲೆಮಾರು.ʼʼ

 

ಜಗತ್ತಿನ  ಜೀವಲೋಕದಲ್ಲಿ, ಅತಿಶ್ರೇಷ್ಟ  ಜೀವಿಯಾದ  ಮನುಷ್ಯನ  ವೈಶಿಷ್ಟ್ಯವೆಂದರೆ,  ಬುದ್ಧಿ.  ಮನಸ್ಸು ಎಂಬ  ವಿಶೇಷ  ಚೈತನ್ಯವನ್ನು  ಪಡೆದಿರುವುದರಿಂದಲೇ  ಮನುಷ್ಯ  ಎಂದು  ಹೆಸರಾದವ.  ನಮ್ಮ  ಕನ್ನಡ ಸಾರಸ್ವತ  ಲೋಕದ  ಬುದ್ಧಿವಾದದ  ಸಾಮ್ರಾಟರಾದ  ಗೌರೀಶ  ಕೈಕಿಣಿ, ಬರೆದ  ವಿಚಾರವಾದ  ಎಂಬ  ಅತ್ಯಂತ ಮಹತ್ವಪೂರ್ಣ  ಕೃತಿ, ವೈಚಾರಿಕತೆಯ  ಧರ್ಮಗ್ರಂಥ  ಎಂದೇ  ಹೆಸರಿಸಿದರೆ, ತಪ್ಪಾಗದು.  ಅವರು  ತಮ್ಮ  ಕೃತಿಯ  ಪ್ರಾರಂಭದಲ್ಲೇ  ಬುದ್ಧಿವಾದ  ಎಂದರೇನು ?  ಎಂಬ ಪ್ರಶ್ನೆಗೆ ಉತ್ತರಿಸ ತೊಡಗುತ್ತಾರೆ.

     ಬುದ್ಧಿಯಿದ್ದವರೆಲ್ಲ  ಬುದ್ಧಿವಂತರಲ್ಲ. ಬುದ್ಧಿವಂತರೆಲ್ಲ  ಬುದ್ಧಿವಾದಿಗಳಲ್ಲ.  ಶುದ್ಧ  ವೈಚಾರಿಕ  ಬುದ್ಧಿಯೆಂದರೆ  ಅದು  ಮರ್ಮಸ್ಪರ್ಶಿ, ಸರ್ವಸ್ಪರ್ಶಿ, ಪಾರದರ್ಶಿ, ಮತ್ತು  ಸಮದರ್ಶಿ,  ಸತ್ಯಕ್ಕೆ  ಮೂರು  ಮುಖಗಳು.  ಒಂದು  ನನ್ನ ಬದಿ.  ಇನ್ನೊಂದು  ನಿನ್ನ  ಬದಿ. ಮೂರನೆಯದು  ನಿಜವಾದ  ಬದಿ.   ವಿಜ್ಞಾನ ಸಾಧಿಸಿದ  ಜ್ಞಾನಸಾಧನೆಯ  ಎತ್ತರಕ್ಕೆ  ಅದನ್ನು  ಅನುಭವಿಸುವವರ  ಬುದ್ಧಿ  ಏರಲೇ ಇಲ್ಲ.  ವಿಜ್ಞಾನ  ಬುದ್ಧಿಯನ್ನು  ಎರಡು ವಿಧವಾಗಿ  ವಿಂಗಡಿಸುತ್ತದೆ.  ವಿನಿಯುಕ್ತ ಬುದ್ಧಿ ( Applied sence )  ಮತ್ತು  ವಿಶುದ್ಧ ಬುದ್ಧಿ  ( pure  mind )  ವಿನಿಯುಕ್ತ ಬುದ್ಧಿಯೆಂದರೆ, ವ್ಯಕ್ತಿಯ  ಪ್ರಾಣಿಹಂತದ  ಪಶುಪಾತಳಿಯ ಬದುಕಿಗೆ ಬೇಕಾದ  ಕೆಲಸಕ್ಕೆ  ಅಣಿಯಾದ  ವಿಚಾರಶಕ್ತಿ.   ಅಂದರೆ  ಕೇವಲ  ವ್ಯಾವಹಾರಿಕ  ಪ್ರಜ್ಞೆ.

     ಆದರೆ  ವಿಶುದ್ಧ ಬುದ್ಧಿಯು  ತೋರಿಕೆಯ  ಆಚೆಗೆ, ಪಾತಳಿಯ  ತಳಕ್ಕೆ, ನೋಡುತ್ತದೆ. ತಿರುಳನ್ನು  ತಿಳಿಯುತ್ತದೆ. ವಾಸ್ತವತೆಯ  ತಥ್ಯವನ್ನು,  ಅರ್ಥದ  ಮರ್ಮವನ್ನು,  ಸಂಗತಿಯ ಸತ್ಯವನ್ನು  ಗುರುತಿಸುವುದು  ವಿಶುದ್ಧ ಬುದ್ಧಿಯ  ಕೆಲಸ. ಪ್ರತ್ಯಕ್ಷ  ಜೀವನದಲ್ಲಿ,  ಒದಗಿ  ಬರುವ  ಭೌತಿಕ  ಅನುಭವಗಳನ್ನು  ಹಸಿ ಹಸಿಯಾಗಿ  ಸ್ವೀಕರಿಸುವ  ಬದಲು,  ಅನುಭವದ  ಆಳಕ್ಕೆ  ಹೋಗಿ, ಅದರೊಳಗಿನ  ಶಕ್ತಿಯನ್ನು  ಅರಿತುಕೊಂಡು,  ಅವುಗಳಿಂದ  ಭವಿಷ್ಯದ  ಅನುಮಾನಗಳನ್ನು  ಕಟ್ಟಿಕೊಡುವುದೇ   ವಿಶುದ್ಧ ಬುದ್ಧಿ  ಅಥವಾ  ಪ್ರಜ್ಞೆ  ಪ್ರಜ್ಞಾನದ  ಪ್ರಕ್ರಿಯೆ.ʼʼ

     ಹೀಗೆ  ತಾತ್ವಿಕವಾಗಿ  ಬುದ್ಧಿವಾದ  ವಿಚಾರವಾದ ವನ್ನು  ತಮ್ಮ  ತೆಕ್ಕೆಗೆ  ತೆಗೆದು  ಕೊಳ್ಳುತ್ತ,  ಪೂರ್ವ  ಪಶ್ಚಿಮಗಳ  ವಿಚಾರವಾದಿಗಳ   ವೈಚಾರಿಕ  ಸಾಧನೆಗಳನ್ನು  ಕಣ್ಣೆದುರು  ಚಿತ್ರಿಸುತ್ತಾರೆ.

ಡಿ.ಆರ್.‌ ತಮ್ಮ  ವಿಸ್ಮೃತಿಯ  ಪರಿಕಲ್ಪನೆಯನ್ನು  ವಿವರಿಸುತ್ತಾ  ವಿಚಾರಗಳೆಲ್ಲ, ಬದುಕಿನ  ವಿವಿಧ  ತಿರುವುಗಳಲ್ಲಿ  ಹೇಗೆ  ಅವಸ್ಥಾಂತರ ಗೊಳ್ಳುತ್ತವೆ  ಎಂಬುದರ  ಸೂಕ್ಷ್ಮವನ್ನು  ಅನಾವರಣ ಗೊಳಿಸುತ್ತಾರೆ..

ʻʻಸಮಾಜಗಳಿಗೆ  ವಿಚಿತ್ರ ರೀತಿಯ  ಮರೆವು  ಆವರಿಸುತ್ತದೆ. ಅದರಲ್ಲೂ  ತಾನು  ಚಿಂತಿಸುತ್ತಿದ್ದ  ಪ್ರತಿಕ್ರಿಯಿಸುತ್ತಿದ್ದ  ಭಾವಿಸುತ್ತಿದ್ದ  ಕ್ರಮಗಳು  ಮರೆತುಹೋಗುವುದು  ದೊಡ್ಡ  ದುರಂತವೇ  ಸರಿ. ವಸಾಹತು ಶಾಹಿ ನಂತರದ  ಭಾರತೀಯ  ಸಮಾಜಕ್ಕೆ  ಈ ರೀತಿಯ  ವಿಸ್ಮೃತಿ  ಈಗ  ಆವರಿಸಿಬಿಟ್ಟಿದೆ.  ನಮ್ಮ ಸಮಾಜದೊಳಗೆ  

                                                           2

ಅಂತರ್ಗತವಾಗಿದ್ದ  ವೈವಿಧ್ಯಮಯ ವೈಚಾರಿಕ  ರಚನೆಗಳು  ಮರೆತು  ಹೋಗಿರುವುದರಿಂದ, ಈಗ  ಲಭ್ಯವಿರುವ ಚಿಂತನ  ಕ್ರಮಗಳು  ಪೂರ್ಣವಾಗಿ  ಪಶ್ಚಿಮ  ಮುಖಿಯಾಗಿಬಿಟ್ಟಿವೆ.  ( ಅಕ್ಷರ  ಚಿಂತನ)

ಎಂದೆನ್ನುತ್ತಾರೆ. ಡಿ.ಆರ್.  ಭಾರತೀಯ  ಚಿಂತಕರಾದ  ಡಿ.ಆರ್.ನಾಗರಾಜ,  ಜಿ.ಎನ್.‌ ದೇವಿ.ಆಶಿಷ್‌ ನಂದಿ, ಮುಂತಾದವರು, ಬ್ರಿಟಿಶ್‌  ಸಾಮ್ರಾಜ್ಯ ಶಾಹೀ  ದೇಶಗಳಲ್ಲಿ  ಆದ  ವಿಚಿತ್ರ  ಸಾಂಸ್ಕೃತಿಕ  ಪಲ್ಲಟಗಳನ್ನು ತಮ್ಮ ತಮ್ಮ  ವೈಚಾರಿಕ ನೆಲೆಯಲ್ಲಿ  ಗುರುತಿಸಲು  ತೊಡಗುತ್ತಾರೆ.‌  ಇಡೀ ದೇಶಕ್ಕೆ  ತನ್ನದೇ  ಆದ ಸಾಂಸ್ಕೃತಿಕ  ಅಸ್ಮಿತೆಯಿದೆಯೇ  ಎಂಬ  ಹುಡುಕಾಟದಲ್ಲಿ  ತೊಡಗುತ್ತಾರೆ.

        ಜಿ.ಎನ್. ದೇವಿ,  ಮತ್ತು  ಡಿ.ಆರ್.‌  ಅವರಲ್ಲಿ,  ವಿಸ್ಮೃತಿಯ  ಪರಿಕಲ್ಪನೆಯಲ್ಲಿ  ಸಮಾನವಾಗಿರುವ  ಅಂಶ  ಪ್ರತಿರೋಧʼʼ.   ವೈದಿಕ / ಮಾರ್ಗ  ಜೀವನ  ದರ್ಶನಗಳ  / ಮೌಲ್ಯಗಳ  ಪ್ರತಿರೋಧವನ್ನು  ದೇವಿ  ಭಕ್ತಿಚಳುವಳಿಗಳಲ್ಲಿ  ಮಾತ್ರ  ಗುರುತಿಸಿದರೆ,  ಡಿ.ಆರ್‌  ಮಾತ್ರ ʻʻ ಆರ್ಷೇಯ  ಕಾಲದಿಂದಲೂ  ಇರುವ  ವೈದಿಕ ಚಿಂತನೆಯಲ್ಲಿ  ಪ್ರತಿರೋಧವನ್ನು  ಕಾಣುತ್ತಾರೆ. ಅವೆರಡರ  ನಡುವೆ  ಸಾವಯವ  ಸಂಪರ್ಕವೂ  ಇದೆ.  ವಸಾಹತು  ಶಾಹಿ ತಂದ  ವಿಸ್ಮೃತಿಯ  ಸ್ವರೂಪ  ಹೇಗಿದೆಯೆಂದರೆ, ಬ್ರಾಹ್ಮಣೇತರ  ಜಾತಿಗಳಿಗೆ, ಅವೈದಿಕ ಜನಾಂಗಗಳಿಗೆ  ದೀರ್ಘ ಸಾಂಸ್ಕೃತಿಕ  ಸ್ಮೃತಿಯಿಲ್ಲ.  ಎನ್ನುತ್ತಾರೆ.  ಆದ್ದರಿಂದ  ಅವೈದಿಕ  ಜೀವನ ದರ್ಶನಗಳ  ಸಾಂಸ್ಕೃತಿಕ ಜೀವನ ದರ್ಶನವನ್ನು  ಗಳಿಸಿಕೊಳ್ಳೋದು. ಆಧುನಿಕ  ಮೌಲ್ಯಗಳ  ಮೂಲಕ ಪರಿಷ್ಕರಿಸೋದು, ಡಿ.ಆರ್‌  ರವರ  ಗುರಿಯಾಗಿ  ತೋರುತ್ತದೆ.

    ನಮ್ಮೆಲ್ಲ  ವಿಸ್ಮೃತಿಗೂ   ವಸಾಹತು ಶಾಹಿಗೂ  ಇರುವ  ಸಂಬಂಧಗಳನ್ನು  ಗುರುತಿಸುವಲ್ಲಿ  ದೇವಿ ಮತ್ತು  ನಾಗರಾಜರಲ್ಲಿ  ಸಾಮ್ಯತೆಯಿದೆ.  ರಾಷ್ಟ್ರೀಯ  ಹೋರಾಟದ  ಸಂದರ್ಭದಲ್ಲಿ  ಅಧಿಕೃತತೆ  ಪ್ರಾಪ್ತವಾದುದು  ಕೇವಲ  ಒಂದೋ ಎರಡೋ  ಭಾರತೀಯ  ದರ್ಶನಗಳಿಗೆ  ಮಾತ್ರ.  ಉಳಿದ  ಶೂದ್ರಾತಿ ಶೂದ್ರ ದಾರ್ಶನಿಕ  ಮಾರ್ಗಗಳಿಗೆ  ನ್ಯಾಯ  ಸಿಗಲೇ  ಇಲ್ಲ. ವೇದಾಂತೀಯ  ದರ್ಶನಗಳಿಗೆ  ಸಿಕ್ಕ  ಪುರಸ್ಕಾರ  ಉಳಿದೆಲ್ಲ  ಬಹುಮುಖೀ  ಪೂಜಾಕ್ರಮಗಳಿಗೆ  ಪ್ರತಿಮಾ  ನಿರ್ಮಾಣ  ಕ್ರಮಗಳಿಗೆ  ಆದ  ಅವಗಣನೆ  ಮತ್ತು  ತಿರಸ್ಕಾರ  ಇವು  ವೆಸ್ಮೃತಿಯ  ಇನ್ನೊಂದು  ಮುಖ.

     ವಿಲಿಯಂ  ಜೋನ್ಸ, ಮ್ಯಾಕ್ಸ ಮುಲ್ಲರ್‌,  ಮುಂತಾದ  ಓರಿಯಂಟಲಿಷ್ಟರು ( ಪೌರಸ್ತ್ಯ ವಾದ )  ಪ್ರಾಯಃ  ಅಪ್ರಜ್ಞಾ  ಪೂರ್ವಕವಾಗಿ  ಬ್ರಿಟಿಶ್‌  ವಸಾಹತುವಾದವನ್ನು  ಸಮರ್ಥಿಸುವಂತಹ  ಪ್ರಾಚೀನ  ಭಾರತದ  ವೈದಿಕ  ಚಿಂತನೆ ಮತ್ತು ಸಾಹಿತ್ಯಗಳಿಗೆ  ಭಾರತೀಯ  ಸಂಸ್ಕೃತಿ  ಎಂದು ಅಧಿಕೃತ  ಮನ್ನಣೆ ಕೊಟ್ಟು,  ಮಧ್ಯಕಾಲೀನ ಭಾರತೀಯ  ಸಮಾಜವನ್ನು,  ಮತ್ತು  ಇತರ ಭಾರತೀಯ  ಚಿಂತನಾ ಕ್ರಮಗಳನ್ನು,  ಅಧಃಪತನ ಗೊಂಡ  ಸಮಾಜವೆಂದು  ಚಿತ್ರಿಸಿದರು.

                                                             3

 ಭಾರತೀಯ  ಬಹುಮುಖೀ  ಚಿಂತನೆಗಳು    ಅನಾವರಣಗೊಳ್ಳಬೇಕಾದ  ಅನಿವಾರ್ಯತೆಯಿದೆ  ಎಂಬುದನ್ನು  ಸಮರ್ಥವಾಗಿ  ಪ್ರತಿಪಾದಿಸಿದರು.

    ಜ್ಞಾನ ವಿಜ್ಞಾನ- ಶಿಕ್ಷಣ ಕೇಂದ್ರಗಳಿಗೆಲ್ಲವಕ್ಕೂ  ಗಾಢ  ವಿಸ್ಮೃತಿ  ಬಾಧಿಸಿದ್ದನ್ನು  ಸೋದಾಹರಣವಾಗಿ  ಚಿತ್ರಿಸಿದರು. ಬುಡಕಟ್ಟು  ಜನಾಂಗ, ಗುಡ್ಡಗಾಡು ಜನಾಂಗ ಮುಂತಾದ  ಅವೈದಿಕ  ಜೀವನಕ್ರಮಗಳು, ಆಚರಣೆ  ಮತ್ತು  ನಂಬಿಗೆಗಳು, ಗಂಭೀರ ಅಧ್ಯಯನಕ್ಕೆ  ಇನ್ನೂ  ವಸ್ತುವಾಗಿಲ್ಲ. ಎಂದು  ವಿಷಾದಿಸುತ್ತಾರೆ.

       ನಡುವೆ   ಒಂದು  ಭಾಷೆಯ  ಅಧಿಪತ್ಯ  ವಿವಿಧ  ಅಧೀನ  ಸಂಸ್ಕೃತಿಗಳನ್ನು  ಕತ್ತಲೆಗೆ  ದೂಡುತ್ತದೆ  ಎಂಬುದಕ್ಕೆ  ವಿಶ್ವಾದ್ಯಂತ   ಸಾಕಷ್ಟು  ಉದಾಹರಣೆಗಳು  ದೊರಕುತ್ತವೆ.

     ವಸಾಹತು  ಮಾಡುವ  ಪ್ರಮುಖ  ಕೋಲಾಹಲವೆಂದರೆ  ಭಾಷೆಯ  ಹೇರಿಕೆ.  ಆಫ್ರಿಕಾದ  ಪ್ರಮುಖ  ಕಪ್ಪು ಚಿಂತಕ,   ಎನ್ಗೂಗಿ  ವಾ  ಥಿಯಾಂಗೋ  ತನ್ನ  ʻʻ ಆಫ್ರಿಕನ್‌ ಸಾಹಿತ್ಯದ  ಭಾಷೆʼʼ  ಎಂಬ  ಲೇಖನವೊಂದರಲ್ಲಿ  ವಾದಿಸುತ್ತಾರೆ. ʻʻ ಭಾಷೆ  ಕೇವಲ  ಸಂವಹನ  ಮಾಧ್ಯಮವಲ್ಲ,  ಅದೊಂದು  ಸಂಸ್ಕೃತಿಯ  ಆಧಾರ. ಮತ್ತು  ಸಂಸ್ಕೃತಿಯನ್ನು  ಕಟ್ಟುವ  ಸಾಧನ. ಭಾಷೆಯೇ  ಒಂದು  ಸಂಸ್ಕೃತಿಯನ್ನು  ರಕ್ಷಿಸಿ  ಒಂದು ಪೀಳಿಗೆಯಿಂದ  ಮತ್ತೊಂದು  ಪೀಳಿಗೆಗೆ  ಹಸ್ತಾಂತರಿಸುತ್ತದೆ. ಆದ್ದರಿಂದ  ಶತಮಾನಗಳಿಂದ  ಉಳಿದು  ಬೆಳೆದು  ಬಂದಿರುವ  ಆಫ್ರಿಕಾದ  ಸಂಸ್ಕೃತಿಯನ್ನು  ನಾವು, ಪರಕೀಯ  ಭಾಷೆಯಿಂದ  ಅರ್ಥಮಾಡಿಕೊಳ್ಳಲು  ಸಾಧ್ಯವಿಲ್ಲ.  ರಕ್ಷಿಸಲು  ಸಾಧ್ಯವಿಲ್ಲ.  ದೈನಂದಿನ  ಸಂವಹನ  ಪ್ರಕ್ರಿಯೆಯಲ್ಲಿ,  ಮತ್ತು  ಸಾಹಿತ್ಯವಿಮರ್ಶೆಯಲ್ಲಿ,  ನಾವು  ಪರಕೀಯ  ಇಂಗ್ಲಿಶ್‌  ಭಾಷೆಯನ್ನು  ಉಪಯೋಗಿಸಿದರೆ,  ನಮ್ಮ  ಸ್ವಂತ  ಸಂಸ್ಕೃತಿಯಿಂದ  ದೂರವಾಗಿ, ಬೇರಿಲ್ಲದವರಾಗುತ್ತೇವೆ.ʼʼ

       ಅಭಿಪ್ರಾಯಕ್ಕೆ  ಸಂವಾದಿಯಾಗಿ, ನಮ್ಮ ದೇಶದ  ಗಾಯತ್ರಿ  ಸ್ಟಿವಕ್‌   ಪರಭಾಷೆಯಲ್ಲಿ  ಸಾಹಿತ್ಯಾಧ್ಯಯನದ  ಪರಿಣಾಮವನ್ನು,  ಸೂಚಿಸುತ್ತಾರೆ.   ʻʻಒಂದು  ಸಾಹಿತ್ಯದ  ಸೂಚಿತ  ಓದುಗ ( impiled  Reader)    ಸಾಹಿತ್ಯವು  ಸೃಷ್ಟಿಯಾದ  ಸಂಸ್ಕೃತಿಯಿಂದಲೇ  ರೂಪಿಸಲ್ಪಟ್ಟಿರುತ್ತಾನೆ.  ಹಾಗೆಯೇ  ಬ್ರಿಟೀಶ್‌  ಸಾಹಿತ್ಯ ಕೃತಿಯ  ಒಟ್ಟಾರೆ  ವೈಚಾರಿಕ  ಸಾಮಾಜಿಕ  ನಿಲುವಿಗೆ,    ಓದುಗನು  ತನಗರಿವಿಲ್ಲದಂತೆಯೇ  ತನ್ನ  ಒಪ್ಪಿಗೆಯನ್ನು  ಕೊಡುತ್ತಾನೆ.  ಜೊತೆಗೆ  ಮೂಲ ಸಂಸ್ಕೃತಿ  ಮತ್ತು  ಪರಕೀಯ ಸಂಸ್ಕೃತಿಗಳ  ದ್ವಂದ್ವದಲ್ಲಿ,  ಪರಕೀಯ  ಪ್ರಜ್ಞೆಗೆ  ಈಡಾಗುತ್ತಾನೆ. ʼʼ

     ಇಂಥ  ಗೊಂದಲಗಳನ್ನು  ಪರಿಹರಿಸುವ  ಉದ್ದೇಶದಿಂದಲೇ  ಶಿಕ್ಷಣ  ತಜ್ಞ  ʻʻಹರೀಶ್‌  ತ್ರಿವೇದಿʼʼ  ಇಂಗ್ಲಿಶ್‌  ಸ್ನಾತಕೋತ್ತರ  ವಿದ್ಯಾರ್ಥಿಗಳಿಗಾಗಿ,  ʻʻ ಪಂಚಧಾತು ʼʼ ಪರಿಕಲ್ಪನೆಯಲ್ಲಿ  ಸಲಹೆ  ನೀಡುತ್ತಾರೆ.

     ಬಿಟಿಶರಿಂದ  ಸೃಷ್ಟಿಯಾದ  ಆಂಗ್ಲ  ಸಾಹಿತ್ಯ.   ೨ ) ಇಂಗ್ಲೆಂಡ್‌  ಹೊರತು  ಪಡಿಸಿ  ತ್ರತೀಯ  ದೇಶಗಳಲ್ಲಿ  ಸೃಷ್ಟಿಯಾದ  ಇಂಗ್ಲಿಶ್‌  ಸಾಹಿತ್ಯ,    ೩)   ಪ್ರಪಂಚದ  ಇನ್ನಿತರ  ಇಂಗ್ಲಿಶ್‌  ಸಾಹಿತ್ಯ,  ೪ ) ಸ್ಥಳೀಯ  ಇಂಗ್ಲಿಶ್‌  ಅನುವಾದಿತ  ಕೃತಿಗಳು,    ೫)  ಸಂಸ್ಕೃತ, 

 

                                                                            4

ಪರ್ಶಿಯನ್‌,   ಗ್ರೀಕ್‌    ಲ್ಯಾಟಿನ್  ಮುಂತಾದ  ಅಭಿಜಾತ  ಭಾಷೆಗಳ  ಕೃತಿಗಳ  ಅಧ್ಯಯನ   ಮೂಲಭಾಷೆಯಲ್ಲೇ   ನಡೆಯಬೇಕು.  ಎನ್ನುತ್ತಾರೆ.

       ನಡುವೆ  ಆಧುನಿಕ ಚಿಂತಕ,  ಲೀವಿಸ್‌, 

     ʻʻ ಒಂದು  ಜೀವಂತ  ಸಮಾಜದಲ್ಲಿ  ಸಂಸ್ಕೃತಿ  ಎಂದೂ  ಜೀವಂತವಾಗಿಯೇ  ಇರುತ್ತದೆ. ಮತ್ತು  ಇಂಥಃ  ಕ್ರಿಯಾಶೀಲ  ಸಂಸ್ಕೃತಿಯನ್ನು  ಸಮಾಜದ  ಕೆಲವೇ  ಕೆಲವು  ಜನರು  ಅರಿಯಬಲ್ಲರು. ಮತ್ತು  ಉಳಿಸಬಲ್ಲವರಾಗಿರುತ್ತಾರೆ. ಕಲೆ ಸಾಹಿತ್ಯಗಳಲ್ಲಿ  ವಿಮರ್ಶಾತ್ಮಕ  ಅಭಿರುಚಿಯನ್ನು  ಹೊಂದಿರುವ ಇಂಥಃ  ಅಲ್ಪಸಂಖ್ಯಾತ  ಸುಸಂಸ್ಕೃತರು,  ಸಮಾಜದ  ಕೇಂದ್ರದಲ್ಲಿರುತ್ತಾರೆ.  ಆದರೆ  ಅವರನ್ನು  ಅಂಚಿಗೆ ತಳ್ಳುವ ಯಾವ  ಸಮಾಜವೂ   ಅರ್ಥಪೂರ್ಣವಾಗಿ  ಬೆಳೆಯಲು  ಸಾಧ್ಯವಿಲ್ಲ. ಇಡೀ ಒಂದು ಯುಗದ  ಶ್ರೇಷ್ಠ  ಮೌಲ್ಯಗಳನ್ನು  ಹಾಗೂ  ಮಾನದಂಡಗಳನ್ನು, ಪ್ರತಿನಿಧಿಸುವ    ಸಾಂಸ್ಕೃತಿಕ  ಅಲ್ಪಸಂಖ್ಯಾತ  ವರ್ಗವೇ   ಶ್ರೇಷ್ಠ  ಪರಂಪರೆಗಳನ್ನು, ಉಳಿಸುವ  ಹಾಗೂ  ಇಂದಿನ  ಬದುಕನ್ನು  ಅರ್ಥಪೂರ್ಣವಾಗಿಸುವ  ಜವಾಬ್ದಾರಿಯನ್ನು  ಹೊತ್ತಿರುತ್ತದೆ.  ಆದರೆ  ಆಧುನಿಕ  ಯುಗದಲ್ಲಿ  ಯಂತ್ರ, ಪಟ್ಟಭದ್ರ ವ್ಯವಸ್ಥೆಗಳು, ಭಾರೀ  ವಾಣಿಜ್ಯೋದ್ಯಮಗಳು,  ಸುಸಂಸ್ಕೃತ  ಅಲ್ಪಸಂಖ್ಯಾತ  ವರ್ಗಕ್ಕೆ, ಶತ್ರುಗಳಾಗಿ,    ವರ್ಗದ  ಉಳಿವೇ  ಪ್ರಶ್ನಾರ್ಹವಾಗುವ  ಸ್ಥಿತಿ  ಒದಗಿದೆ.‌ʼʼ  ಎಂದು  ಲೀವಿಸ್‌  ವಿಷಾಧಿಸುತ್ತಾರೆ.   (ಪ್ರತಿರೋಧ ಸಿ.ಎನ್.ಆರ್. ಪು--೪)

        ನಡುವೆ  ಪ್ರಖರ  ಯುವ  ವಿಚಾರವಾದಿ  ಗೆಳೆಯ  ಡಾ- ವಿಟ್ಠಲ್‌  ಭಂಡಾರಿಯವರ, ಸಂಸ್ಕೃತಿ ಬಗೆಗಿನ  ಹೇಳಿಕೆಯನ್ನು  ಇಲ್ಲಿ  ಪ್ರಸ್ಥಾಪಿಸಲೇ  ಬೇಕಾಗಿದೆ. ʻʻ ಶ್ರಮಜೀವಿಗಳು ಎಲ್ಲ  ಸಂಸ್ಕೃತಿಯ  ಸೃಷ್ಟಿಕರ್ತರು. ಸಂಸ್ಕೃತಿಯ  ಮೂಲವೇ  ಶ್ರಮ.  ಸಂಸ್ಕೃತಿಯ  ಅರ್ಥವೇ  ಸಂಸ್ಕಾರ  ಗೊಳಿಸುವುದು  ಎಂದು.  ನೆಲವನ್ನು  ಹಸನುಮಾಡಿ, ಬೀಜಬಿತ್ತಿ, ಬೆಳೆಗೆ ಆರೈಕೆ ಮಾಡುವುದು ಎಂಬುದರಿಂದಲೇ   ಸಂಸ್ಕೃತಿಯ  ಹುಟ್ಟು. ಮನುಷ್ಯ ತನ್ನ ಅಸ್ತಿತ್ವಕ್ಕಾಗಿ  ನಿಸರ್ಗದ  ಜತೆ ನಡೆಸಿದ  ಹೋರಾಟದ  ಫಲವೇ   ಸಂಸ್ಕೃತಿ. ಆತ ಎದುರಿಸಿದ  ಸಮಸ್ಯೆಗಳು  ನಿಗೂಢತೆಗಳು, ನಂಬಿಕೆಗಳು  ಹುಡುಕಿದ  ಪರಿಹಾರಗಳು, ವಿಸ್ಮಯಗಳು, ಕಂಡುಕೊಂಡ  ಕಲೆಗಳು  ಎಲ್ಲವೂ  ರೂಪಕಗಳಾದವು. ಅನುಭವ ಆಚರಣೆ  ನಂಬಿಕೆ ಕಲೆ ಕಸುಬು  ಎಲ್ಲವೂ  ಇದರೊಳಗೆ  ಸೇರಿತು. ಆದ್ದರಿಂದ  ಶ್ರಮವೇ ಸಂಸ್ಕೃತಿಯ  ತಾಯಿಬೇರು. ಇದು  ಜನಸಂಸ್ಕೃತಿಯ  ಪರಿಕಲ್ಪನೆಯ   ಹಿಂದಿರುವ ಚಿಂತನೆ.ʼʼ   ಎಂಬ  ಅವರ  ಅಭಿಪ್ರಾಯ  ನಮ್ಮ    ಕ್ರೂರ ವಾಸ್ತವದ  ಚಿತ್ರಣವನ್ನು  ಅಭಿವ್ಯಕ್ತಿಸುತ್ತದೆ.

                                           

           ಸೂರಿ  ವೆಂಕಟ್ರಮಣ  ಶಾಸ್ತ್ರಿಯವರ   ಲೇಖನಗಳು, ನಾಟಕ  ಮುಂತಾದ  ಚಟುವಟಿಕೆಗಳ  ಮೂಲಕ  ಜಿಲ್ಲೆಯ  ಬೌದ್ಧಿಕ  ಕ್ಷೇತ್ರಕ್ಕೆ  ವೈಚಾರಿಕ  ಸ್ಪರ್ಶ  ಒದಗಿಬಂದಿದ್ದಂತೂ  ಸತ್ಯ.  ನಂತರದಲ್ಲಿ  ಓತಪ್ರೋತವಾಗಿ, ಚಿಂತನೆಯ  ಪ್ರವಾಹ,  ಅಕ್ಷರದಲ್ಲಿ,  ಮೌಖಿಕವಾಗಿ   ಸಮೃದ್ಧವಾಗಿ  ಬೆಳೆದು  ಬರುತ್ತಿರುವುದು,  ಜಿಲ್ಲೆಯ  ಪ್ರಜ್ಞಾವಂತಿಕೆ  ಜೀವಂತಿಕೆಯನ್ನು  ಧ್ವನಿಸುತ್ತಿದೆ.  ಜಿಲ್ಲೆಯೇನು  ಇಡೀ  ಕನ್ನಡಸಾಹಿತ್ಯದ  ವೈಚಾರಿಕ  ಕ್ಷೇತ್ರಕ್ಕೆ  ಸಂಚಲನ  ಮೂಡಿಸಿದ   ಗೌರೀಶ್‌  ಕೈಕಿಣಿ,ಯವರ  ಅಗಾಧ  ವೈಚಾರಿಕ  ಸಾಹಿತ್ಯ  ಬೆರಗು  ಮೂಡಿಸುತ್ತದೆ.

        ಎಂ.ಎನ್.ರಾಯ್‌, ಮಾರ್ಕ್ಸ, ಎಡ್ವರ್ಡ ಸೈದ್‌,  ಪ್ಯಾನನ್‌  ಲೋಹಿಯಾ  ಮುಂತಾದ  ಚಿಂತಕರ  ನೆಲೆಯಲ್ಲಿ,  ಅತ್ಯಂತ  ಹುಲುಸಾದ  ವೈಚಾರಿಕ  ಸಾಹಿತ್ಯ  ನಮ್ಮಲ್ಲಿ  ಬೆಳೆದು  ಬಂದಿತು.  ಜಿ.ಆರ್.ಪಾಂಡೇಶ್ವರ್‌, ಗೌರೀಶ್‌  ಕೈಕಿಣಿ,, ದಿನಕರ ದೇಸಾಯಿ, ಗಂಗಾಧರ ಚಿತ್ತಾಲ್‌, ಯಶವಂತ ಚಿತ್ತಾಲ್‌, ವಿ.ಜಿ.ಭಟ್‌,  ಪಿ.ವಿ.ಶಾಸ್ತ್ರಿ  ಕಿಬ್ಬಳ್ಳಿ,  ಎಂ.ಎಸ್.ಧಾರೇಶ್ವರ,  ರಾಮಕೃಷ್ಣ  ಹೆಗಡೆ, ಬಿ.ವಿ.ನಾಯಕ್‌,  ಹಣಮಂತ ರಾವ್‌  ಮಾಂಜ್ರೇಕರ್‌,  ಬಿ.ಎಚ್‌  ಶ್ರೀಧರ,  ಕೆ.ಎಸ್.ರಾವ್‌,  ಮ.ಗ ಶೆಟ್ಟಿ, ಜಿನದತ್‌  ನಾಯಕ್‌,  ಆರ್.ವಿ.ಭಂಡಾರಿ,  ಅಮ್ಮೆಂಬಳ,  ಜಿ.ಎಸ್.ಅವಧಾನಿ,  ಬಿ.ಎ.ಸನದಿ, ರಮಜಾನ  ದರ್ಗಾ, ಟಿ.ಕೆ ಮಹಮ್ಮೂದ,  ಆರ್.‌ ಡಿ. ಹೆಗಡೆ  ಆಲ್ಮನೆ,   ಆರ್.ಪಿ.ಹೆಗಡೆ, ಸುಮುಖಾನಂದ  ಜಲವಳ್ಳಿ,   ಜಿ.ಯು.ಭಟ್‌,  ವಿಷ್ಣು  ನಾಯಕ್‌,  ಶಾಂತಾರಾಮ  ನಾಯಕ್‌, ಮೋಹನ  ಹಬ್ಬು,ಜಯರಾಮ್‌  ಹೆಗಡೆ, ಝಮೀರುಲ್ಲಾ ಷರೀಪ್‌,  ವಿಜಯನಳಿನಿ  ರಮೇಶ್‌, ಶಾಲಿನಿ ರಘುನಾಥ್‌, ವಿಘ್ನೇಶ್‌ ಭಟ್‌,  ಶ್ರೀರಾಮ ಭಟ್‌,  ಮೋಹನ ಹೆಗಡೆ, ಜಿ.ಜಿ.ಬಾಳ್ಗೋಡ್‌, ಉದಯಕುಮಾರ್‌  ಹಬ್ಬು, ಶಿವಾನಂದ  ಕಳವೆ, ಆರ್.ಜಿ.ಗುಂದಿ,  ಮುಂತಾದ  ಹಿರಿಯ  ಚಿಂತಕರು  ಸೃಷ್ಟಿಸಿದ  ವೈಚಾರಿಕ  ಮಾರ್ಗದಲ್ಲಿ,  ಸಾಗುತ್ತಿರುವ   ನಂತರದ  ತಲೆಮಾರಿನ  ಬೌದ್ಧಿಕ  ಚಟುವಟಿಕೆಯೂ   ಕುತೂಹಲ  ಮೂಡಿಸುತ್ತಿದೆ.

      ವಿಶ್ವ  ವೈಚಾರಿಕ ಸಾರವನ್ನು  ಆಳವಾಗಿ  ಹೀರಿ,  ಕನ್ನಡಕ್ಕೊಂದು  ವೈಚಾರಿಕ ಮಾರ್ಗವನ್ನು  ಸೃಷ್ಟಿಸಿ ಕೊಟ್ಟ  ಗೌರೀಶ್‌  ಕೈಕಿಣಿ,   ತಮ್ಮ  ಅಗಾಧ  ಬರಹಗಳ  ಮೂಲಕ   ಮುಂದಿನ  ತಲೆಮಾರುಗಳಿಗೆ  ದಾರಿದೀಪವಾಗಿದ್ದಾರೆ. ಅವರ  ವೈಚಾರಿಕ  ಧರ್ಮಗ್ರಂಥವೆಂದೇ  ಪ್ರಸಿದ್ಧವಾದ   ʻʻವಿಚಾರವಾದʼʼ   ಮತ್ತು  ʻʻ ಭಾರತೀಯ  ಸಂಸ್ಕೃತಿಯು  ಆಧ್ಯಾತ್ಮಿಕವೇ  ?ʼʼ ಕೃತಿಗಳಂತೂ  ಕನ್ನಡ ದ   ಕೈಗನ್ನಡಿಯಾಗಿ  ಮುನ್ನಡೆಯುತ್ತಿದೆ. 

        ಕಳೆದ  ಎರಡು ಮೂರು  ದಶಕಗಳನ್ನೇ  ಗಮನದಲ್ಲಿಟ್ಟುಕೊಂಡು   ನಮ್ಮ  ಹೊಸ  ತಲೆಮಾರಿನ  ವೈಚಾರಿಕ  ಪ್ರಕ್ರಿಯೆಗಳನ್ನು  ಗಮನಿಸುತ್ತಾ  ಸಾಗಿದರೆ,  ಸಂತಸ  ಮತ್ತು  ವಿಷಾದ  ಎರಡೂ  ಏಕಕಾಲದಲ್ಲಿ  ಆವರಿಸುತ್ತದೆ.   ವರ್ಷದಿಂದ  ವರ್ಷಕ್ಕೆ,  ಇಡೀ  ದೇಶದ  ಬಹುತ್ವ  ಮತ್ತು  ಸೌಹಾರ್ದ ವಾತಾವರಣ  ಕಲುಷಿತ  ಗೊಳ್ಳುತ್ತಿದೆ.  ಧರ್ಮ  ಸಂಸ್ಕೃತಿ  ಜಾತಿ, ಪ್ರದೇಶ  ಎಲ್ಲವೂ  ರಾಜಕೀಯ  ಹಿತಾಸಕ್ತಿಗೆ  ದುರುಪಯೋಗ  ಕಂಡು,  ಅಯೋಮಯ  ವಾತಾವರಣ  ಸೃಷ್ಟಿಯಾಗುತ್ತಿದೆ.  ಬೌದ್ಧಿಕ  ಕ್ಷೇತ್ರವೇ  ವಿಚಿತ್ರ  ತಲ್ಲಣದಲ್ಲಿ  ಸಿಲುಕಿದೆಯೇನೋ  ಎನ್ನುವಷ್ಟು   ಭಯಾನಕತೆ  ಮೂಡತೊಡಗಿದೆ. 

  

                                               6

 ನಮ್ಮ  ಜಿಲ್ಲೆಯ ಹೊಸ  ತಲೆಮಾರಿನ  ಚಿಂತಕರ   ಯಾದಿಯನ್ನು  ಗಮನಿಸಿದರೆ  ಬೆರಗಾಗುತ್ತೇವೆ.  ಆದರೆ  ವೈಚಾರಿಕ  ಮುದ್ರಿತ  ಸಾಹಿತ್ಯದ  ಪ್ರಕಟಣೆಯಲ್ಲಿ  ಅತ್ಯಂತ  ಹಿಂದುಳಿದಿದ್ದರಿಂದ,  ಹೆಚ್ಚಿನೆಲ್ಲ  ಲೇಖಕರು,  ಪತ್ರಿಕೆಗಳ  ಅಂಕಣ  ಮತ್ತು  ಲೇಖನಗಳ  ಮಿತಿಯಲ್ಲಿಯೇ  ಇನ್ನೂ  ಇರುವುದು   ವಿಷಾದನೀಯ.

     ಕಾಶ್ಯಪ ಪರ್ಣಕುಟಿ,  ಗಂಗಾಧರ  ಹಿರೇಗುತ್ತಿ,  ಸುಮುಖಾನಂದ  ಜಲವಳ್ಳಿ,  ಅಶೋಕ  ಹಾಸ್ಯಗಾರ, ರವೀಂದ್ರ  ಭಟ್.‌  ವಿಶ್ವೇಶ್ವರ  ಭಟ್‌,  ಸುಧಾ ಶರ್ಮಾ, ತಿಮ್ಮಪ್ಪ  ಭಟ್‌, ಮೋಹನ ಹೆಗಡೆ,  ಗಂಗಾಧರ ಕೊಳ್ಗಿ, ಕನ್ನೇಶ್‌  ಕೋಲಸಿರಸಿ,  ರತ್ನಾಕರ ನಾಯ್ಕ,ಹರಿಪ್ರಕಾಶ ಕೋಣೆಮನೆ, ಕೃಷ್ಣಮೂರ್ತಿ  ಹೆಬ್ಬಾರ್‌    ಮುಂತಾದ  ಜಿಲ್ಲಾ  ರಾಜ್ಯಮಟ್ಟದ  ಪತ್ರಿಕಾ  ಸಂಪಾದಕರುಗಳು  ಸಮಕಾಲೀನ  ಸಾಂಸ್ಕೃತಿಕ  ಸಾಮಾಜಿಕ  ಧಾರ್ಮಿಕ, ಮತ್ತು  ರಾಜಕೀಯ  ದ್ವಂದ್ವಗಳಿಗೆ  ಪರಿಣಾಮಕಾರಿಯಾಗಿ, ಸ್ಪಂದಿಸುತ್ತಿದ್ದರೂ,  ಹೆಚ್ಚಿನವರ  ಕೃತಿಗಳು  ಇನ್ನೂ  ಪ್ರಕಟವಾಗಿಲ್ಲ.  ಇವರಲ್ಲಿಯೂ  ಎಡ  ಬಲ  ಮಧ್ಯ ವಿಚಾರಧಾರೆಯ  ವೈವಿಧ್ಯವಿದೆ.

     ನಮ್ಮ  ನಡುವಣ  ಯುವ  ಪ್ರತಿಭೆಗಳಾಗಿ, ಸಾಕಷ್ಟು  ವೈಚಾರಿಕ ಕೃತಿಗಳನ್ನೂ  ಪ್ರಕಟಿಸಿರುವ  ದೀಪಾ  ಹಿರೇಗುತ್ತಿ,  ನಾಗಪತಿ ಹುಳಗೋಳ, ಎಸ್.ಡಿ.ಹೆಗಡೆ,  ಮಾಧವಿ ಭಂಡಾರಿ, ಯಮುನಾ ಗಾಂವಕರ್‌, ವಿಟ್ಠಲ್‌ ಭಂಡಾರಿ, ಸುನಂದಾ ಕಡಮೆ, ಕಾವ್ಯಾ ಕಡಮೆ, ಪ್ರಜ್ಞಾ ಮತ್ತೀಹಳ್ಳಿ, ಗೀತಾ ವಸಂತ್‌, ಶ್ರೀದೇವಿ ಕೆರೆಮನೆ, ರಾಜಶೇಖರ  ಜೋಗಿನ್ಮನೆ, ಶ್ರೀಧರ  ಬಳಗಾರ್‌, ಸಿಂಧು ಹೆಗಡೆ, ಉಮೇಶ ನಾಯ್ಕ, ವಿಘ್ನೇಶ್ವರ ಗುನಗಾ,  ಭಾರತಿ ಹೆಗಡೆ, ಕವಿತಾ ಕೃಷ್ಣಮೂರ್ತಿ,  ಪುಟ್ಟು ಕುಲಕರ್ಣಿ  ಇನ್ನೂ  ಮುಂತಾದ  ಲೇಖಕರು,  ವೈಚಾರಿಕತೆಯ  ದಾರಿಯಲ್ಲಿ  ಮುನ್ನಡೆಯುತ್ತಿದ್ದಾರೆ.

     ʻʻ ಹಸಿದವರ ಎದುರು  ಊಟದ ತಟ್ಟೆ  ಹರಡಿಟ್ಟ ಹಾಗೆ, ಅವರನ್ನು  ಓದುತ್ತ ಹೋದೆ. ಅವರು  ಯೋಚಿಸಲು ಹಚ್ಚಿದರು. ಏನನ್ನು  ಹೇಗೆ ಎಷ್ಟು ಯಾವಾಗ ಹೇಳಬೇಕೆಂದು  ಕೈ  ಹಿಡಿದು  ಕಲಿಸಿದರು.  ಭಾರತೀಯ  ಸಮಾಜದ ಚದುರಂಗದ ಮನೆಗಳನ್ನು  ಗೆರೆ ಕೊರೆದು  ತೋರಿಸಿದರು.  ನನ್ನ ಬದುಕಿಗಿಂತ  ಸಂಪೂರ್ಣ  ಭಿನ್ನ.  ದುರ್ಭರ  ಅನುಭವಗಳ  ಹಲವು ಬದುಕುಗಳಿವೆ, ಎಂಬ ವಾಸ್ತವವನ್ನು  ಅರ್ಥ ಮಾಡಿಸಿದರು.  ಮುದುರಿ  ವಿನೀತಗೊಂಡು  ಕುಳಿತಿದ್ದ  ನನ್ನಾಳದ  ಹೆಣ್ಣು ಪ್ರಜ್ಞೆಯನ್ನು ಎಚ್ಚರಿಸಿ  ಮುಕ್ತ  ಗೊಳಿಸಿದರು. ಮಹಾತ್ಮಾ ಗಾಂಧಿಯನ್ನು  ಗಾಂಧಿಯೆಂಬ  ಮನುಷ್ಯನನ್ನಾಗಿ  ನೋಡಲು  ಕಲಿಸಿದರು.  ಹತ್ತು  ಹಲವು  ಪ್ರಶ್ನೆಗಳಿಗೆ  ಉತ್ತರವಾದರು.  ಮತ್ತಷ್ಟು  ಪ್ರಶ್ನೆಗಳೇಳಲು  ಕಾರಣವಾದರು. ಎಲ್ಲಕ್ಕಿಂತ  ಮಿಗಿಲಾಗಿ  ಬುದ್ಧ  ಬೆಳಕಿನೆಡೆಗೆ  ಕಿಂಡಿ ತೆರೆದರು.ʼʼ  

         ಎಂದು  ಘೋಷಿಸುವ   ನಮ್ಮ ಜಿಲ್ಲೆಯ  ಪ್ರಖರ  ವೈಚಾರಿಕ  ಪ್ರತಿಭೆ  ಎಚ್ಎಸ್ ಅನುಪಮಾ,  ಹೊಸ ತಲೆಮಾರಿನ  ಅದ್ಭುತ  ಚಿಂತನ  ಚಿಲುಮೆ.  ಕಾವ್ಯ ಲೇಖನ, ಚಿಂತನ  ಅನುವಾದ  ಮುಂತಾದ  ಅವಿರತ  ಚಟುವಟಿಕೆಗಳ  ಮೂಲಕ  ಜಿಲ್ಲೆಯಿಂದ  ರಾಜ್ಯದೆತ್ತರಕ್ಕೇರಿದ  ಕನ್ನಡದ  ಬಹುಪ್ರಮುಖ  ಲೇಖಕಿ  ಎಂದು  ಹೇಳಬಹುದಾಗಿದೆ.  ಸುಪ್ರಸಿದ್ಧ  ಲೇಖಕ  ಡಿ. ಉಮಾಪತಿಯವರು,  ʻʻನಾನು  ಬಹುವಾಗಿ ಮೆಚ್ಚುವ ,ಗೌರವಿಸುವ,  ಆದರ್ಶವೆಂದು  ಭಾವಿಸುವ, ಜೀವಪರ ಚಿಂತಕಿ  ಮತ್ತು  ಚಿತ್ರದಲ್ಲಿ  ಅಚ್ಚೊತ್ತಿ  ನಿಲ್ಲುವಂತೇ  ಬರೆಯುವ 

                                             7

ಕಲಾವಿದೆ  ಡಾ-ಎಚ್ಎಸ್‌, ಅನುಪಮಾ.  ಇವರ  ಓದಿನ  ಹರವು, ಮತ್ತು  ಚಿಂತನೆಯ  ಆಳ, ಸಾಮಾಜಿಕ ಪ್ರತಿಬದ್ಧತೆಯನ್ನು  ನಾನು  ಬೆರಗಿನಿಂದ  ನೋಡುತ್ತಿರುವ  ಸಾಮಾನ್ಯ  ವರದಿಗಾರ  ನಾನುʼʼ  ಎಂದು  ಉದ್ಗರಿಸುತ್ತಾರೆ.  ಈಗಾಗಲೇ  ವೈಚಾರಿಕವಾದ  ೫೦ ಕ್ಕೂ  ಹೆಚ್ಚು  ಕೃತಿಗಳನ್ನು  ಪ್ರಕಟಿಸಿ,  ಗೌರೀಶ್‌  ಕೈಕಿಣಿಯವರ  ನಂತರದ  ಪ್ರಮುಖ  ವಿಚಾರವಾದಿಯಾಗಿ  ಮಿಂಚುತ್ತಿದ್ದಾರೆ.  ಅಂಬೇಡ್ಕರ್‌  ಬಗೆಗಿನ  ʻʻವಿಮೋಚಕನ  ಹೆಜ್ಜೆಗಳುʼʼ  ಹೆಣ್ಣು,   ಸಂವಿಧಾನ  ಮತ್ತು  ಮಹಿಳೆ,  ಮುಟ್ಟು,  ನಾನು ಕಸ್ತೂರ್‌, ಮಹಿಳೆ ಮತ್ತು ರಾಜಕೀಯ  ಪ್ರಜ್ಞೆ, ಮುಂತಾದ  ಹಲವು  ಕೃತಿಗಳು,  ಕನ್ನಡಸಾಹಿತ್ಯದ  ಅತ್ಯಂತ  ಪ್ರಮುಖ ವೈಚಾರಿಕ  ಕೃತಿಗಳಲ್ಲಿ  ಸೇರುತ್ತಿವೆ.

      ಸುನಂದಾ ಕಡಮೆ   ನಮ್ಮ  ನಡುವಣ  ಇನ್ನೊಬ್ಬ  ಗಮನಸೆಳೆದ  ಲೇಖಕಿ.  ಸ್ವಥಃ  ಕವಯತ್ರಿಯಾಗಿ, ಕತೆ  ಕಾದಂಬರಿ ಗಳನ್ನು  ಸೃಷ್ಟಿಸುತ್ತಲೇ  ತಮ್ಮ  ಪ್ರಗತಿಪರ  ಚಿಂತನೆಯನ್ನೂ  ಅಭಿವ್ಯಕ್ತಿಸುತ್ತ,  ಸದಾ  ಚಲನಶೀಲರಾಗಿದ್ದಾರೆ. ಪಿಸುಗುಡುವ  ಬೆಟ್ಟಸಾಲು, ಕತೆಯಲ್ಲದ  ಕತೆ, ಪಡುವಣದ  ಕಡಲು  ಮುಂತಾದ  ಚಿಂತನ ಪರ  ಕೃತಿಗಳನ್ನು  ಸಹೃದಯರಿಗೆ  ನೀಡಿದ  ಸುನಂದಾ  ಅವರ  ಬಗೆಗೆ  ʻವಸುಧೇಂದ್ರʼ  ನುಡಿ  ಅರ್ಥಪೂರ್ಣವಾಗಿದೆ. ʻʻ ಸುನಂದಾಳದು ಅಪರೂಪದ  ಸ್ತ್ರೀ  ಬರಹ.  ಯಾವುದೇ  ಹಠಮಾರಿತನ, ವ್ಯಗ್ರತೆ, ದ್ವೇಷಗಳಿಲ್ಲದೇ  ಕೇವಲ  ಸ್ತ್ರೀ ಸಹಜವಾದ ಪ್ರೀತಿ, ಅಂತಃಕರಣ ಮೃದುತ್ವಗಳಿಂದ,  ಬದುಕಿನ  ಚಿಕ್ಕಪುಟ್ಟ  ಸಂಗತಿಗಳನ್ನೂ, ಸಹಜವಾಗಿ, ಹಿತವಾಗಿ, ಹೇಳುವ  ಲೇಖನಗಳು, ಅಮ್ಮನ ಜೋಗುಳದಷ್ಟು  ಹಿತವಾಗಿವೆ.ʼʼ

    ಶ್ರೀಧರ  ಹೆಗಡೆ  ಭದ್ರನ್‌   ಹೊಸ ತಲೆಮಾರಿನ  ಭರವಸೆಯ  ವಿಮರ್ಶಕ. ಚಿಂತಕ. ಅಪಾರ ಅಧ್ಯಯನ, ಸತತ  ಪರಿಶ್ರಮ, ವಿನಯವಂತಿಕೆಗಳು  ಇವರ  ಬೆನ್ನಿಗಿವೆ. ಈಗಾಗಲೇ  ಆರೆಂಟು  ವಿಮರ್ಶಾಕೃತಿಗಳು  ಪ್ರಕಟಗೊಂಡು  ಗಮನಸೆಳೆದಿವೆ.

    ವಿಟ್ಠಲ  ಭಂಡಾರಿ  ಯವರ  ಹಸಿವಿನ  ಹಾಡು-ಪಾಡು, ಈ ದಶಕದಲ್ಲಿ  ಬಂದ  ಮಹತ್ವಪೂರ್ಣ ಕೃತಿ. ಸಾಹಿತ್ಯ, ಸಂಸ್ಕೃತಿ,  ಸಮಾಜ, ವನ್ನೆಲ್ಲ  ತನ್ನ  ಪ್ರಗತಿಪರ  ಚಿಂತನೆಯ  ತೆಕ್ಕೆಯಲ್ಲಿ, ತೆಗೆದುಕೊಂಡು, ಕೋಮು ಸೌಹಾರ್ದತೆಯ  ಬಾವುಟವನ್ನು  ಬೆಳಗಿಸಿದ್ದಾರೆ.

    ಉಮೇಶ  ನಾಯ್ಕ   ನಮ್ಮ  ನಡುವಿನ  ಚಿಂತನ  ಪ್ರತಿಭೆ.  ಕಾವ್ಯದ  ಜೊತೆಗೆ,  ಹಳೆಪೈಕರು  ಒಂದು  ಅಧ್ಯಯನ,  ನಾಲ್ಕೇ  ಕ್ಲಾಸು  ಓದಿದವನು,  ಮುಂತಾದ  ಅರ್ಥಪೂರ್ಣ  ಕೃತಿರಚಿಸಿದ್ದಾರೆ.

   ಎನ್ ಆರ್‌ ರೂಪಶ್ರೀ  ಇತ್ತೀಚೆಗೆ  ಬರಹಲೋಕಕ್ಕೆ  ಆಗಮಿಸಿ, ತಮ್ಮ  ಚಿಂತನಪರವಾದ, ನೆನಪಿನ  ನವಿಲುಗರಿ,  ಮೌನಕಾಲ, ಮುಂತಾದ  ಕೃತಿಗಳನ್ನು  ರಚಿಸಿದ್ದಾರೆ.

     ಯಮುನಾ  ಗಾಂವ್ಕರ್‌   ತಮ್ಮ  ಸಾಮಾಜಿಕ  ಹೋರಾಟಗಳ  ನಡುವೆಯೇ  ವೈಚಾರಿಕವಾದ  ಬರಹಗಳನ್ನೂ  ಆಗಾಗ  ನೀಡುತ್ತಿದ್ದಾರೆ.  ಉಯಿಲಿಗೆ  ಸಹಿಹಾಕಿ, ಸುತ್ತಮುತ್ತ  ಒಂದು ಸುತ್ತು, ನಿಜದನಿ,  ಮುಂತಾದ  ಕೃತಿಗಳನ್ನು  ನೀಡುತ್ತ, ಸಮಾಜವಾದೀ  ಚಿಂತನೆಗಳನ್ನು  ಜೀವಂತವಾಗಿಡಲು  ಸಹಕರಿಸುತ್ತಿದ್ದಾರೆ.

      ದೀಪಾ  ಹಿರೇಗುತ್ತಿ,  ಸುಧಾ  ಆಡುಕುಳ,  ಮಾಧವಿ  ಭಂಡಾರಿ,  ಮುಂತಾದ  ಲೇಖಕಿಯರು,  ಸ್ತ್ರೀವಾದೀ  ಚಿಂತನೆ,  ದಲಿತ ಶೋಷಣೆ,  ರಾಜಕೀಯ  ಭೃಷ್ಟತೆ,  ಅತ್ಯಾಚಾರ, ಮೌಲ್ಯಪತನ, ಕೋಮು  ಸಂಘರ್ಷ, ಮುಂತಾದ  ಜ್ವಲಂತ  ಸಮಸ್ಯೆಗಳ  ದಿಕ್ಕಿಗೆ  ನಮ್ಮಗಮನವನ್ನು  ಯಶಸ್ವೀಯಾಗಿ  ಸೆಳೆಯುತ್ತಿದ್ದಾರೆ.

      ನಾಗಪತಿ  ಹೆಗಡೆ  ಹುಳಗೋಳ್‌,   ರಮೇಶ  ಹೆಗಡೆ  ಕೆರೇಕೋಣ,  ಗಂಗಾಧರ  ಕೊಳ್ಗಿ,  ಕನ್ನೇಶ್‌,  ಇವರುಗಳ  ಕೃತಿಗಳೂ  ವೈಚಾರಿಕ  ನೆಲೆಯಲ್ಲಿ  ಭರವಸೆ  ಮೂಡಿಸುತ್ತಿವೆ.

     ಶ್ರೀದೇವಿ  ಕೆರೆಮನೆ  ಮತ್ತು  ದೀಪಾ ಹಿರೇಗುತ್ತಿ  ಇಬ್ಬರಲ್ಲಿಯೂ  ಸಾಮ್ಯತೆಯಿದೆ.  ಅಂಕಣ ಬರಹಗಳಿಂದಲೇ  ರಾಜ್ಯಮಟ್ಟದಲ್ಲಿ  ಪ್ರಸಿದ್ಧರಾದ  ಇವರ  ಬರಹಗಳಲ್ಲಿ,  ಚುರುಕು, ಲವಲವಿಕೆ,  ಸೂಕ್ಷ್ಮತೆ, ನವಿರು ಗುಣಗಳು ತುಂಬಿಕೊಂಡಿವೆ.  ಕಚಕುಳಿ  ನೀಡುವ  ಸರಳ  ಸುಂದರ  ಭಾಷೆ, ವಾಸ್ತವದ  ಬದುಕಿನ  ದ್ವಂದ್ವ  ತಲ್ಲಣ  ಖುಷಿಗಳನ್ನು  ಅಭಿವ್ಯಕ್ತಿಸುವ  ತವಕ  ಮೆಚ್ಚುವಂಥಹದ್ದಾಗಿದೆ.  ಶ್ರೀದೇವಿಯವರ  ಐದಾರು  ಕೃತಿಗಳು  ಈಗಾಗಲೇ  ಪ್ರಕಟಗೊಂಡಿವೆ.  ಅದೇ ರೀತಿ  ದೀಪಾ  ಅವರದ್ದೂ  ಸಹ.

ಗೀತಾ ವಸಂತ್‌,   ಕನ್ನಡ ಸಾಹಿತ್ಯಕ್ಕೊಂದು, ವೈಶಿಷ್ಟ್ಯಪೂರ್ಣ, ತಾತ್ವಿಕ ಘಟ್ಟಿ ತಳಪಾಯವುಳ್ಳ,  ಚಿಂತನಶೀಲ  ಪ್ರತಿಭೆಯೊಂದು  ಕನ್ನಡಸಾಹಿತ್ಯ ಪ್ರಪಂಚಕ್ಕೆ,  ಆಗಮಿಸಿರುವುದು  ನಿಜಕ್ಕೂ  ಸಂತಸ  ತರುವ  ಕ್ಷಣ.  ಸುಂದರ  ಭಾಷೆ, ಸೈದ್ಧಾಂತಿಕ ಬದ್ಧತೆ,  ಅಧ್ಯಯನ,ಗಳಿಂದ  ಸಮೃದ್ದಗೊಂಡಿರುವ, ಗೀತಾ.  ಈಗಾಗಲೇ  ಮೂರ್ನಾಲ್ಕು ಕೃತಿಗಳನ್ನು  ಪ್ರಕಟಿಸಿದ್ದಾರೆ.  ಅವರ  ʻʻ ಬೀಜದೊಳಗಣ ವೃಕ್ಷʼʼ ಬೇಂದ್ರೆ ಕಾವ್ಯದ ವಿರಾಟ್‌  ಸ್ವರೂಪವನ್ನು  ತಲಸ್ಪರ್ಶೀಯಾಗಿ  ಮನಗಾಣಿಸುವ  ಯಶಸ್ವೀ  ಕೃತಿ.  ನಂತರದಲ್ಲಿ  ಬಂದ  ʻʻಅಕ್ಷರ ದಾಹʼʼ ಕೃತಿ  ಕನ್ನಡ  ಸಾಹಿತ್ಯ  ಪರಂಪರೆಯ  ತಲಸ್ಪರ್ಶೀ  ನೋಟವಾದರೆ,  ಅಪ್ಪಟ  ಸ್ತ್ರೀವಾದೀ  ಚಿಂತನೆಯ  ಕೃತಿ  ʻʻ ಅವಳ  ಅರಿವುʼʼ.    ಪ್ರಾರಂಭದ  ಲೇಖನದಲ್ಲೇ   ಇವರ ಚಿಂತನಶೀಲತೆ   ಸಹೃದಯನ  ಮನಸ್ಸು ತಟ್ಟುತ್ತದೆ.

       ʻʻಹೆಣ್ಣು ಅನುಭವ,  ಹೆಣ್ಣು  ಅರಿವುಗಳೇ   ಬೇರೆ.  ಹೆಣ್ತನದ ಕುರಿತ  ಮಾನಸಿಕ  ಪರಿಕಲ್ಪನೆಗಳೇ  ಬೇರೆ.  ಜೈವಿಕವಾಗಿ  ಹೆಣ್ಣಾದವಳು ಹೆಣ್ಣು ತನದ  ಕುರಿತಾಗಿ,   ಸಾಮಾಜಿಕ ನಿರೀಕ್ಷೆಗಳನ್ನು  ಧಾರಣೆ ಮಾಡಬೇಕಾದ  ಒತ್ತಡವಿದೆ. ಇಂಥ  ಒತ್ತಡದಲ್ಲಿ  ʻರೂಪಿಸಲ್ಪಡುವ  ʼ  ಹೆಣ್ಣು  ಜೀವಕ್ಕೆ  ನಿಜಕ್ಕೂ  ತಾನು  ಏನಾಗಿದ್ದೇನೆ  ತನಗೇನು  ಬೇಕಾಗಿದೆ, ಎಂಬುದೇ  ತಿಳಿಯದ  ವಿಸ್ಮೃತಿ, ಕಣ್ಕಟ್ಟು  ಆವರಿಸಿದೆ.  ಹೌದು,  ನಾವು  ಹೆಣ್ಣೋ  ಗಂಡೋ  ತೃತೀಯ  ಲಿಂಗಿಯೋ  ಆಗಿರುವುದು   ಪ್ರಕೃತಿಯ  ಆಯ್ಕೆಯೇ  ವಿನಃ  ನಮ್ಮದಲ್ಲ.  ಆದರೆ  ಹೆಣ್ಣಾಗುವುದು   ಸಮಾಜೋ  ಸಾಂಸ್ಕೃತಿಕ  ಪ್ರಕ್ರಿಯೆ.ʼʼ  ಹೀಗೆ  ದಕ್ಕಿದ  ಅನುಭವಗಳನ್ನು  ಆಪ್ತವಾಗಿ, ಸೃಜನಶೀಲ  ಶೈಲಿಯಲ್ಲಿ  ವ್ಯಕ್ತಗೊಳಿಸುತ್ತಾರೆ.

     ನಮ್ಮ  ಜಿಲ್ಲೆಯ  ಆಧುನಿಕ  ರಂಗಭೂಮಿಗೆ  ಹೊಸಹುಟ್ಟು  ನೀಡಿ, ಸಂಸ್ಕೃತಿ  ಮತ್ತು  ವಿಚಾರವಾದ ಎರಡಕ್ಕೂ  ಹೊಸ ಜೀವ  ನೀಡಿದ   ಶ್ರೀಪಾದ ಭಟ್‌,  ಕಿರಣ ಭಟ್‌  ಜೋಡಿ  ರಂಗ ಕರ್ಮಿಗಳು,  ಅವಿರತ  ರಂಗ ಚಟುವಟಿಕೆಯ  ನಡುವೆಯೂ,  ʻʻನಟನೆಯ ಕೈಪಿಡಿ,  ಮತ್ತು  ರಂಗಕೈರಳಿ, ಎಂಬ  ಮಹತ್ವಪೂರ್ಣ  ಕೃತಿಗಳನ್ನು  ಪ್ರಕಟಿಸಿದ್ದಾರೆ. 

     ಕನ್ನಡದ  ಆಳ ಚಿಂತನೆಯ  ವಿಮರ್ಶಕ  ಎಂ.ಜಿ.ಹೆಗಡೆ  ಯವರು  ಕುವೆಂಪು  ಭಾಷಾಭಾರತಿ ಯಡಿಯಲ್ಲಿ,  ರಾಷ್ಟ್ರೀಯ   ಅಂತರ್ರಾಷ್ಟ್ರೀಯ  ವಿಚಾರವಾದಿಗಳ, ಪ್ರಮುಖ ವೈಚಾರಿಕ  ಲೇಖನಗಳ, ಕನ್ನಡ ಅನುವಾದಿತ  ಹಲವು  ಕೃತಿಗಳನ್ನು  ಯಶಸ್ವೀಯಾಗಿ  ಸಂಪಾದಿಸಿದ್ದಾರೆ.ʻ ಅಂತ್ಯವಿಲ್ಲದ ಹಾದಿ.ʼʼ  ಡಿ.ಡಿ.ಕೋಸಾಂಬಿಯವರ  ಆಯ್ದ  ಬರಹಗಳು, ಮುಂತಾದ   ಪುಸ್ತಕಗಳನ್ನು  ಹೆಸರಿಸಬಹುದಾಗಿದೆ. ಸಮಕಾಲೀನ  ಸಾಂಸ್ಕೃತಿಕ ವೈಚಾರಿಕ  ಪ್ರಗತಿಯನ್ನು, ತಮ್ಮ  ಸಂಪಾದನೆಯಲ್ಲಿ, ಕನ್ನಡ ಅನುವಾದದಲ್ಲಿ  ನೀಡಿ  ಉಪಕೃತರಾಗಿದ್ದಾರೆ.  ವಸಾಹತೋತ್ತರ  ಚಿಂತನೆಯ  ಹಿನ್ನೆಲೆಯಲ್ಲಿ,  ಕನ್ನಡಸಾಹಿತ್ಯಕ್ಕೆ  ಇವರ  ಕೊಡುಗೆ  ಅನನ್ಯವಾಗಿದೆ.

    ಸುಧಾ ಆಡುಕುಳ,ರ  ʻʻಬಕುಳದ  ಬಾಗಿಲಿನಿಂದʼʼ   ಮತ್ತು  ಕಾವ್ಯಾ  ಕಡಮೆ  ಯವರ, ʻʻದೂರದೇಶವೆಂಬ  ಪಕ್ಕದ ಮನೆ ʼʼ ಕೃತಿಗಳು  ಗಮನಸೆಳೆಯುತ್ತಿವೆ. ವೈಚಾರಿಕತೆಗೆ  ಹೊಸ  ಆಯಾಮ ನೀಡುತ್ತಿವೆ.

     ಪ್ರಜ್ಞಾ  ಮತ್ತೀಹಳ್ಳಿ,  ತಮ್ಮ ಉಳಿದೆಲ್ಲ  ಸೃಜನಶೀಲ ಚಟುವಟಿಕೆಗಳೊಂದಿಗೆ  ಗಂಧಗಾಳಿ  ಎಂಬ  ಚಿಂತನಪರ  ಕೃತಿಯೊಂದನ್ನು  ಪ್ರಕಟಿಸಿದ್ದಾರೆ.

     ಒಟ್ಟಿನಲ್ಲಿ  ಉ.ಕ.ಜಿಲ್ಲೆಯ ಹೊಸ ತಲೆಮಾರಿನ   ವೈಚಾರಿಕ  ಸಾಹಿತ್ಯ  ಸಂಖ್ಯೆಯಲ್ಲಿ  ಹಿಂದಿದ್ದರೂ   ಮೌಲ್ಯಾತ್ಮಕವಾಗಿ  ಎತ್ತರದೆಡೆಗೆ  ದೃಷ್ಟಿಸುತ್ತಿದೆ.  ಕಾವ್ಯ  ಕತೆ  ಕಾದಂಬರಿಗಳಲ್ಲಿಯೂ   ಕಟುವಾಸ್ತವದ  ವೈವಿಧ್ಯಮಯ  ಜನಸಮುದಾಯದ  ಸುಖ ದುಃಖ, ನೋವು ತಲ್ಲಣಗಳನ್ನು  ಆತ್ಮೀಯವಾಗಿ  ಸ್ಪಂದಿಸಿ  ರಚಿಸಿರುವುದನ್ನು  ಕಾಣುತ್ತಿದ್ದೇವೆ.    ದಶಕದ  ಮಹಾನಾಯಕರಾಗಿ  ಮತ್ತೆ  ಅಂಬೇಡ್ಕರ್‌  ಮತ್ತು  ಗಾಂಧಿ  ಎದ್ದು  ಬಂದರು.  ಭೂತದ  ನಿಜವನ್ನು  ಶೋಧಿಸುತ್ತ, ಭಾರತೀಯ  ಬಹುತ್ವದ  ಪ್ರಜ್ಞೆಗೆ  ನೀರೆರೆಯುತ್ತ,  ಕೋಮು  ದಳ್ಳುರಿಗೆ  ನೀರು ಚಿಮುಕಿಸುತ್ತ,  ಸೌಹಾರ್ದ  ಮತ್ತು  ಶಾಂತಿಯ  ಆನಂದವನ್ನು  ಸೃಷ್ಟಿಸುವ, ಜಾತ್ಯತೀತ  ಮಾನವ  ಸಂಬಂಧದ  ಸರಪಳಿಯನ್ನೇ  ನಿರ್ಮಿಸುವ  ಪ್ರಯತ್ನ  ಮುಂದುವರೆಯುತ್ತಿರುವುದು,  ಜಿಲ್ಲೆಯ  ಬದುಕಿಗೆ  ಹೊಸ  ಆಶಾವಾದದ  ಅಲೆಯನ್ನೇ  ಮೂಡಿಸುತ್ತಿದೆ.

( ಸಹಯಾನ  ಕಾರ್ಯಕ್ರಮಕ್ಕಾಗಿ   ಟಿಪ್ಪಣಿ.  ೭-೮---ಮೇ---೨೦೨೨  ಕೆರೇಕೋಣ )

No comments:

Post a Comment