Tuesday 19 September 2023

ತಾಯ್ತನದ ತಲ್ಲಣ, ಮಹಾತ್ಮನ ಅನಾವರಣ. ʻʻ ನಾನು ಕಸ್ತೂರ್ ʼʼ

 

      ಪ್ರಪಂಚಕ್ಕೇ  ಪಿತನಾಗಿ,  ಮಹಾತ್ಮನಾಗಿ, ಹುತಾತ್ಮನೂ  ಆದ   ಮೋಹನದಾಸನೆಂಬ  ಒಬ್ಬ  ಸಾಮಾನ್ಯ  ಹುಡುಗ  ಅಷ್ಟೆತ್ತರ  ತಲುಪಿದ್ದು  ಹೇಗೆ...?   ಸಾಮಾನ್ಯರಲ್ಲಿ  ಸಾಮಾನ್ಯನಾಗಿ   ಬಡತನವನ್ನೇ  ಎಳೆದೆಳೆದು  ಮುಚ್ಚಿಕೊಂಡ  ಈತ  ಅಸಾಮಾನ್ಯನಾಗಿ  ಬೆಳೆದಿದ್ದು   ಹೇಗೆ...?   ಇಂಥ  ಪವಾಡಸದೃಷ  ರೂಪಾಂತರವನ್ನು  ಕಂಡ  ಎರಡೇ  ಎರಡು  ವ್ಯಕ್ತಿಗಳು  ಜಗತ್ತಿನಲ್ಲಿ  ಆಗಿ  ಹೋಗಿದ್ದಾರೆ.  ಒಬ್ಬ  ಗೌತಮ ಬುದ್ಧನಾದರೆ,  ಇನ್ನೊಬ್ಬ  ಮಹಾತ್ಮಾ ಗಾಂಧಿ.

      ಬುದ್ದ  ಗಾಂಧಿಗಳಲ್ಲಿ   ಕೆಲವು  ಸಾಮ್ಯತೆಗಳಿವೆ.  ರಾಜಪದವಿ,  ಸುಂದರ  ಹೆಂಡತಿ, ಪುಟ್ಟ ಮಗು  ಎಲ್ಲವನ್ನು ತೊರೆದು  ಸನ್ಯಾಸ  ಸ್ವೀಕರಿಸಿದವ  ಬುದ್ಧನಾದರೆ,  ತನ್ನ  ಕುಟುಂಬವೂ  ಸೇರಿ  ಇಡೀದೇಶವನ್ನೇ  ತನ್ನ  ಸಂಸಾರ ವಾಗಿಸಿಕೊಂಡ,  ರಾಜಕಾರಣಿ  ಸಂತ  ಗಾಂಧಿ.

    ಇಬ್ಬರಲ್ಲೂ  ಬಾಹ್ಯದಲ್ಲಿ  ಬಹುದೊಡ್ಡ  ಮಾನವೀಯ  ಸಿದ್ಧಾಂತವಿದೆ.  ಅವರದ್ದೇ  ಕುಟುಂಬದಲ್ಲಿ  ಅಗಾಧ  ವಿಷಾದವಿದೆ.  ಬುದ್ಧನನ್ನು  ಬಾಹ್ಯವಾಗಿ  ಕಂಡು  ಕೀರ್ತಿಸಿದ  ಅಸಂಖ್ಯಾತ  ಕೃತಿಗಳಿವೆ.  ಗಾಂಧಿಯವರಿಗೂ  ಅಷ್ಟೇ,  ದೇಶ  ವಿದೇಶಗಳ   ಸಾಕಷ್ಟು  ಸುಪ್ರಸಿದ್ಧ  ಲೇಖಕರು,  ಗಾಂಧೀ  ಬದುಕನ್ನು,  ತಾತ್ವಿಕತೆಯನ್ನು  ತಲಸ್ಪರ್ಶೀಯಾಗಿ  ಕಂಡು  ಅಕ್ಷರಕ್ಕಿಳಿಸಿದ್ದಾರೆ.   ಆದರೆ  ಅವರನ್ನೇ  ದೇಶಕ್ಕಾಗಿ  ಅರ್ಪಿಸಿದ  ಪತ್ನಿ,  ಮತ್ತು  ಕುಟುಂಬ ದ  ಹಿನ್ನೆಲೆಯಲ್ಲಿ,  ಸಾಧಕರನ್ನು  ಕಾಣುವ,  ಪ್ರಯತ್ನ  ಕ್ವಚಿತ್ತಾಗಿ  ನಡೆದಿದೆ.

     ಕನ್ನಡದಲ್ಲೇ  ಉದಹರಿಸುವುದಾದರೆ   ಮೂವತ್ತರ  ದಶಕದಲ್ಲೇ  ಮಾಸ್ತಿ  ವೆಂಕಟೇಶ  ಐಯ್ಯಂಗಾರ್‌  ರವರು  ಬರೆದ  ಯಶೋಧರಾ  ನಾಟಕವೇ  ಮೊದಲಿನದ್ದೇನೋ.  ನಂತರದ  ದಿನಗಳಲ್ಲಿ,  ಊರ್ಮಿಳೆ,  ಮಂಡೋದರಿ,  ಅಹಲ್ಯೆ,  ದ್ರೌಪದಿ,  ಸೀತೆ  ಮುಂತಾದ ಪುರಾಣಗಳ  ಅಂಚಿನಲ್ಲಿರುವ  ಪಾತ್ರಗಳು  ಸ್ವಂತಂತ್ರವಾಗಿ  ಪ್ರಕಟಗೊಂಡವು.  ಪುರುಷ  ಪಕ್ಷಪಾತಿ  ಪುರಾಣಗಳಿಂದ  ಸಿಡಿದೆದ್ದು,  ಸ್ತ್ರೀ  ಪರವಾದ  ವಾಗ್ವಾದಕ್ಕೆ  ಆತ್ಮವಿಶ್ವಾಸದಿಂದ  ಯಶಸ್ವೀಯಾಗಿ  ಕಣಕ್ಕಿಳಿದಿದ್ದನ್ನು   ನಾವು  ಸಾಕಷ್ಟು  ಕಂಡಿದ್ದೇವೆ. ಪಾರಂಪರಿಕ  ತಾತ್ವಿಕತೆಗೆ,  ಆಧ್ಯಾತ್ಮಿಕತೆಗೆ  ಹೊಸ  ಸಂಕಥನವನ್ನು  ಸೃಷ್ಟಿಸಿದ್ದು   ನಮ್ಮ  ಕಣ್ಣೆದುರೇ  ಇದೆ.  ಇದೇ  ವರ್ಷ  ಎಚ್.ಎಸ್.‌ ವೆಂಕಟೇಶ ಮೂರ್ತಿಯವರ  ʻʻಬುದ್ಧ  ಚರಣʼʼ  ಮಹಾಕಾವ್ಯ  ಪ್ರಕಟಗೊಂಡಿದೆ.  ಅಲ್ಲಿಯೂ  ಯಶೋಧರೆಯ  ಆಪ್ತ ಧ್ವನಿ  ಮೊಳಗಿದೆ.

      ಇಷ್ಟೆಲ್ಲ  ಪೀಠಿಕೆಯೇಕೆಂದರೆ   ಉತ್ತರಕನ್ನಡ  ಜಿಲ್ಲೆಯ  ಅಪ್ರತಿಮ  ಪ್ರತಿಭೆ,   ಡಾ- ಎಚ್.ಎಸ್.‌ ಅನುಪಮಾ  ರವರ   ಕೃತಿ  ʻʻನಾನು  ಕಸ್ತೂರ್‌ʼʼ  ಮೂಡಿಸಿದ  ಸಂಚಲನವನ್ನು  ಕಂಡಾಗ. ಬೆರಗು ಮೂಡುತ್ತದೆ. ಈ ಕೃತಿ  ಪ್ರಕಟಗೊಂಡ  ಒಂದೇ ವರ್ಷದಲ್ಲಿ   ಎರಡು  ಮುದ್ರಣ  ಕಂಡು  ಮುನ್ನುಗ್ಗುತ್ತಿದೆ.  

      ಕಸ್ತೂರಬಾ  ರವರ  ಹುಟ್ಟಿದ  ಊರು  ಮನೆ,  ಗಾಂಧಿ ಕುಟುಂಬವಿರುವ  ಊರು  ಅಲ್ಲಿಯ  ಪರಿಸರ,ಮತ್ತು  ಮಹಾತ್ಮರು  ಸ್ಥಾಪಿಸಿದ   ಆಶ್ರಮಗಳ  ಬಳಿಗೇಹೋಗಿ,  ಗಾಂಧಿ  ಕಸ್ತೂರಬಾ ರನ್ನು   ಧ್ಯಾನಿಸಿ,  ಕೈಗೊಂಡ  ಕ್ಷೇತ್ರಕಾರ್ಯದಿಂದ  ಸೃಷ್ಟಿಯಾದ  ನಾನು  ಕಸ್ತೂರ್‌   ಪುಟ್ಟ  ಕೃತಿಯಾದರೂ  ದಟ್ಟ  ಅನುಭವ  ನೀಡುವಲ್ಲಿ  ಸಫಲವಾಗಿದೆ.

     ಭಾರತೀಯ  ಕುಟುಂಬದ  ಪರಿಕಲ್ಪನೆ  ವಿಶ್ವದಲ್ಲೇ  ವಿಶಿಷ್ಟವಾದ  ಸ್ಥಾನ  ಪಡೆದಿರುವಂಥದ್ದು.  ಅದರದ್ದೇ  ಆದ  ಶಕ್ತಿ  ದೌರ್ಬಲ್ಯಗಳೆರಡನ್ನೂ  ಹೊಂದಿದ   ಕೌಟುಂಬಿಕ  ಆಯಾಮದಲ್ಲಿಂದಲೇ   ಗಾಂಧಿ  ಮತ್ತು  ಹಿಂದು  ಧರ್ಮವನ್ನು  ಸೂಕ್ಷ್ಮವಾಗಿ  ದೃಷ್ಟಿಸಿದ,  ಅಪರೂಪದ  ಪುಸ್ತಕವಿದು.  ಮೋಹನದಾಸನ  ಪ್ರಾಯದ  ಪತಿಗಿರಿ,ಯ  ಫಲಾನುಭವಿ  ಬಾಲಕಿ  ಕಸ್ತೂರ್‌,   ಬೆಳೆದಂತೇ  ನೈತಿಕ  ಪತ್ನಿಗಿರಿಯಿಂದ  ಗಾಂಧಿಯ  ಒರಟುತನ,  ಗಡಸುತನವನ್ನು  ಸಾತ್ವಿಕ ನೆಲೆಯಿಂದಲೇ  ತಿದ್ದಿ  ತೀಡಿ   ಮಹಾತ್ಮನನ್ನಾಗಿ  ರೂಪಿಸಿದ   ಸಂಕಥನವಿದು.  ಗಾಂಧಿ  ತಮ್ಮದೇ  ಆದ  ಬದುಕಿನ  ರೀತಿ,  ವಿಶಿಷ್ಟ  ಸಿದ್ಧಾಂತ,  ನಡೆ  ನುಡಿ, ಸಿದ್ಧಿ  ಸಾಧನೆಗಳ  ಮೂಲಕ  ಜಗತ್ಪ್ರಖ್ಯಾತರಾದ  ಕತೆ  ಸರ್ವ  ವಿದಿತ.  ಆದರೆ ಜಡ ಕಲ್ಲೊಂದು  ಅದ್ಭುತ  ಪ್ರತಿಮೆಯಾಗಿ ರೂಪುಗೊಳ್ಳುವಲ್ಲಿ   ಅದೆಷ್ಟು  ಶಿಲ್ಪಿಗಳ  ಶ್ರಮ  ತ್ಯಾಗಗಳಿವೆ   ಎಂಬುದು  ಮರೆಯಾಗಿಬಿಡುತ್ತದೆ.  ನಾನು  ಕಸ್ತೂರ್‌  ಪುಸ್ತಕದ  ವೈಶಿಷ್ಟ್ಯವಿರುವುದು,  ಇಲ್ಲಿಯೇ.   ಗಾಂಧಿಯ  ನೆರಳಾಗಿ,  ಅವರ  ಎಲ್ಲ  ದೌರ್ಬಲ್ಯಗಳನ್ನು  ಹಲ್ಲು  ಕಚ್ಚಿ  ಸಹಿಸುತ್ತ,  ಜೊತೆಗೆ  ತಾನೂ  ಬದಲಾಗುತ್ತ,  ಏಕಕಾಲದಲ್ಲಿ  ತನ್ನ  ಮಕ್ಕಳ  ತಾಯಿಯಾಗುವುದರ   ಜೊತೆಗೆ,  ಇಡೀ  ದೇಶವನ್ನೇ  ತನ್ನ  ತಾಯ್ತನದ  ತೆಕ್ಕೆಗೆ  ಬಾಚಿಕೊಂಡ   ಕಸ್ತೂರಬಾ ರವರ   ಜೀವಕಥನ   ನಿಜಕ್ಕೂ  ರೋಮಾಂಚನ  ಮೂಡಿಸುತ್ತದೆ. 

    ಗಾಂಧಿಯವರ   ವಿಶಿಷ್ಟವಾದ  ಅಷ್ಟೇ  ಸೈದ್ಧಾಂತಿಕವಾದ  ಬದುಕಿನ  ರೀತಿ,  ಸಾಮಾನ್ಯರ  ಕಲ್ಪನೆಗೆ  ಮೀರಿದ್ದು.  ತಾನು  ನೆನೆದ  ಸೈದ್ಧಾಂತಿಕತೆಗೆ  ತನ್ನ  ಇಡೀ ಕುಟುಂಬ  ಸ್ಪಂದಿಸಬೇಕು,  ಅನುಸರಿಸಬೇಕು  ಎಂಬುದೇ  ಒಂದು  ಹೇರಿಕೆಯಾದಾಗ,  ಕುಟುಂಬದೊಳಗೇ  ಬಂಡಾಯ  ಸೃಷ್ಟಿಯಾಗಿಬಿಡುತ್ತದೆ.  ಸ್ವಥಃ  ಹಿರಿಯ  ಮಗ  ಹರಿಲಾಲನೇ  ಬಂಡಾಯವೇಳುತ್ತಾನೆ.  ನಾನು  ಹಿಂದೂ  ಎಂದು  ಘೋಷಿಸಿಕೊಂಡ  ಗಾಂಧಿಯವರ  ಮಗ  ಇಸ್ಲಾಮ್‌  ಧರ್ಮ  ಸ್ವೀಕರಿಸುತ್ತಾನೆ.  ಹೆಂಡ ಹೀರುತ್ತಾನೆ.  ಮಾಂಸ  ಭಕ್ಷಿಸುತ್ತಾನೆ.  

      ನಲ್ವತ್ತರ  ಹರೆಯದಲ್ಲೇ  ನಾಲ್ಕೈದು  ಮಕ್ಕಳ  ತಂದೆಯಾಗಿ,  ಒಂದು  ವಿಶಿಷ್ಟ  ಕ್ಷಣದಲ್ಲಿ  ಬ್ರಹ್ಮಚರ್ಯ  ಸ್ವೀಕರಿಸುವ  ಗಾಂಧಿ  ಯವರು,    ನಿರ್ಣಯ ಕೈಗೊಳ್ಳುವಾಗ  ಪತ್ನಿಯ  ಅಭಿಪ್ರಾಯವನ್ನಾದರೂ  ಕೇಳಬೇಕಿತ್ತಲ್ಲ...?  ಅವರು  ಕೇಳಲೇ ಇಲ್ಲ.  ಆದರೆ  ಕಸ್ತೂರಬಾ ಅದಕ್ಕೆ  ಸಹಕಾರವಿತ್ತರು.   ಕೆಲವೇ  ತಿಂಗಳಲ್ಲಿ  ಗಾಂಧಿ,  ವಿಚಿತ್ರ  ಪ್ರೇಮಪ್ರಕರಣವೊಂದರಲ್ಲಿ  ಸಿಲುಕಿಬಿಡುತ್ತಾರೆ.ಅದು  ಕಸ್ತೂರಬಾ ರವರ  ಗಮನಕ್ಕೂ  ಬರುತ್ತದೆ.  ಅದೆಂಥ  ಗೊಂದಲ.!!  ಕಸ್ತೂರಬಾ  ಮುಜುಗರಕ್ಕೊಳಗಾಗುವ  ಸನ್ನಿವೇಶ.  ಪ್ರೇಮಪ್ರಕರಣ  ಕ್ರಮೇಣ ಆಶ್ರಮದ ಹಲವು ಜನರಿಗೆ  ತಿಳಿಯುತ್ತದೆ.  ಪ್ರಸ್ತುತ  ಪ್ರಕರಣವನ್ನು  ಬಗೆಹರಿಸಲು,  ಗಾಂಧಿಕುಟುಂಬದ  ಬೀಗರು,  ಸುಪ್ರಸಿದ್ಧ  ಲೇಖಕರಾದ  ರಾಜಾಜಿ  ( ರಾಜಗೋಪಾಲಾಚಾರಿ)  ಯವರು  ಪ್ರವೇಶಿಸ ಬೇಕಾಯಿತು. 

    ನಾವೇ  ಹೇರಿಕೊಂಡ  ಸಿದ್ಧಾಂತಕ್ಕೂ,  ಪ್ರಾಕೃತಿಕ  ಚಟುವಟಿಕೆಗೂ  ಏರ್ಪಡುವ  ಸಂಘರ್ಷದ  ವಿವರಗಳು  ಇಲ್ಲಿ  ಅತ್ಯಂತ  ಪರಿಣಾಮಕಾರಿಯಾಗಿ   ಚಿತ್ರಣಗೊಂಡಿವೆ.   ರಾಜಾಜಿಯವರ  ಆಪ್ತ  ಸಲಹೆಯಿಂದ  ಬಹು  ಬೇಗ  ಎಚ್ಚರಗೊಂಡ  ಗಾಂಧಿ, ಇಂಥ  ದ್ವಂದ್ವಗಳನ್ನು  ಗೆದ್ದು  ಮತ್ತೆ ಸರಿದಾರಿಗೆ  ಬರುತ್ತಾರೆ.  ಇಲ್ಲಿ  ನಮ್ಮನ್ನು  ಆಕರ್ಷಿಸುತ್ತಾರೆ. 

  ಕಸ್ತೂರಭಾ  ಮೂಲಕ  ಮತ್ತೊಮ್ಮೆ  ಗಾಂಧಿಜಿಯವರ   ವ್ಯಕ್ತಿತ್ವದ   ವೈಶಿಷ್ಟ್ಯಪೂರ್ಣ  ಆಯಾಮಗಳನ್ನು   ಸಜೀವಗೊಳಿಸಿದ   ಡಾ- ಅನುಪಮಾರವರ  ಪ್ರಯತ್ನ  ಅಭಿನಂದನಾರ್ಹ.

                                                                    ಅವಲೋಕನ  - ಸುಬ್ರಾಯ  ಮತ್ತೀಹಳ್ಳಿ.

    ನಾನು  ಕಸ್ತೂರ್‌  ( ಕಸ್ತೂರಬಾ  ಜೀವನ  ಕಥನ )  ಲೇಖಕಿ- ಡಾ- ಎಚ್.ಎಸ್.‌ ಅನುಪಮಾ.

    ಪುಟ- ೨೬೦.   ಬೆಲೆ- ೨೨೦.  ಪ್ರಕಾಶನ -  ಲಡಾಯಿ  ಪ್ರಕಾಶನ. ಗದಗ.

 

No comments:

Post a Comment