Thursday 28 September 2023

ಸಹಕಾರ ಮತ್ತು ಸಮೃದ್ಧಿ.ʼʼ

 

ʻʻ ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು |

ಮೃತನ ಮಣ್ಣಿಂದ  ಹೊಸ ಹುಲ್ಲು ಮೊಳೆಯುವುದು ||

 ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ |

ಸತತ ಕೃಷಿಯೋ  ಪ್ರಕೃತಿ ----ಮಂಕುತಿಮ್ಮ || ʼʼ            

                    ಸಹಕಾರ  ಎಂಬ  ವ್ಯವಸ್ಥೆ,  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಹಿಂದಿನದು.  ಅದಕ್ಕೆ  ಪಾಶ್ಚಾತ್ಯಪರಿಕಲ್ಪನೆ ಸೇರಿ  ಮತ್ತಷ್ಟು ಫಲವತ್ತಾಗಿ  ನಮ್ಮ ನೆಲದಲ್ಲಿ  ಬೆಳೆದಿದೆ.  ನಮ್ಮ  ದೇಶದ  ಆರು ಲಕ್ಷ  ಗ್ರಾಮಗಳು  ಕೃಷಿ  ಮತ್ತು  ಕೃಷಿಪೂರಕ  ಕೈಗಾರಿಕೆಗಳಲ್ಲಿ  ಸ್ವಾವಲಂಬನೆ  ಸಾಧಿಸಿಕೊಂಡು,  ಪರಸ್ಪರ  ಕೊಡು  ಕೊಳ್ವಿಕೆಯಮೂಲಕವೇ  ಭದ್ರವಾಗಿ  ನೆಲೆಯೂರಿತ್ತು.  ಎರಡು ಶತಮಾನಗಳಷ್ಟು  ಹಿಂದೆಯೇ  ಪಾಶ್ಚಾತ್ಯ  ಸಂಶೋಧಕರು,  ಗ್ರಾಮಗಳ  ಸಾಮೂಹಿಕ ಒಕ್ಕೂಟ,  ಪರಸ್ಪರ ಸಹಾಯ,  ಆಮೂಲಕ  ಸ್ವಾವಲಂಬನೆ ಯಂತಹ  ವ್ಯವಸ್ಥೆಯನ್ನು  ಬಾಯಿತುಂಬ  ಶ್ಲಾಘಿಸಿದ್ದಾರೆ.  ಅದೆಷ್ಟೋ  ಪ್ರಭುತ್ವಗಳು  ಬದಲಾದರೂ  ಗ್ರಾಮಗಳು  ಮಾತ್ರ,  ಪ್ರಭುತ್ವದ  ಅವಲಂಬನೆಯನ್ನು  ನೆಚ್ಚಿಕೊಳ್ಳದೇ,  ತಮ್ಮ  ರೈತಾಪಿ ಚಟುವಟಿಕೆ,  ನ್ಯಾಯವ್ಯವಸ್ಥೆ,  ಸಾಮೂಹಿಕ  ತೇರು ಜಾತ್ರೆ,  ಸಂತೆ, ಮುಂತಾದ  ಸಾಮಾಜಿಕ  ಚಟುವಟಿಕೆಗಳನ್ನು  ಸ್ವತಂತ್ರವಾಗಿ  ನಿರ್ವಹಿಸಿಕೊಂಡು  ಬಂದಿದ್ದವು.  ಒಂದು ದೃಷ್ಟಿಯಲ್ಲಿ  ಅಲ್ಪತೃಪ್ತ ಸಮುದಾಯಗಳಾಗಿ  ತಮ್ಮಷ್ಟಕ್ಕೆ  ತಾವು  ಬದುಕಿಕೊಂಡು ಬಂದಿದ್ದರು. 

    ಆದರೆ   ಬ್ರಿಟೀಶರ  ಮೂಲಕ  ಆಧುನಿಕ  ಆಡಳಿತ  ವ್ಯವಸ್ಥೆ ಎಂದು ನಮ್ಮದೇಶಕ್ಕೆ  ಕಾಲಿಟ್ಟಿತೋ,  ಗ್ರಾಮಗಳ  ಸ್ವಾಯತ್ತತೆ  ನಾಶಗೊಂಡಿತು.  ಅರಣ್ಯಗಳು  ಸಾಮೂಹಿಕ  ಆಸ್ತಿಯಾಗಿದ್ದು  ಸರಕಾರಿ ಸ್ವಾಮ್ಯಕ್ಕೆ  ಬದಲಾಯಿತು.  ಸರಕಾರ  ಕೃಷಿಕಂದಾಯವನ್ನೇ  ತನ್ನ  ಆದಾಯಮೂಲವನ್ನಾಗಿಸಿಕೊಂಡು,  ಕೃಷಿಯ  ಅಭಿವೃದ್ಧಿಯನ್ನು  ಕಡೆಗಣಿಸಿ, ಶೋಷಣೆಗೈದಿದ್ದೇ  ಗ್ರಾಮಗಳ  ಅವನತಿಗೆ  ಕಾರಣವಾಯಿತು.  ಅವ್ಯವಸ್ಥಿತ  ಮಾರುಕಟ್ಟೆ,  ಅನಿಶ್ಚಿತ ಹವಾಮಾನ,  ಅಧಿಕಾರಿ ವರ್ಗದ  ದರ್ಪ,  ಮೂಲಭೂತ ಸೌಲಭ್ಯಗಳ  ಕೊರತೆ ಮತ್ತು,  ಕೃಷಿಕರಲ್ಲಿಯ  ಅಜ್ಞಾನ  ಇವೆಲ್ಲಸೇರಿ, ಭಾರತೀಯ ಗ್ರಾಮಗಳು, ಅದರಲ್ಲಿಯೂ  ಕೃಷಿ  ಮತ್ತು  ಗುಡಿಕೈಗಾರಿಕೆಗಳು  ಸೋತು  ಸೊರಗಿದವು.  ಶತಮಾನಗಳ  ಕಾಲದ  ಈ ಎಲ್ಲ  ಶೋಷಣೆ  ಮತ್ತು  ದೋಷಗಳು,  ನಮ್ಮ  ಕೃಷಿಪರಂಪರೆಯನ್ನೇ ನಾಶಗೊಳಿಸಿತು.  ಪ್ರತಿಯೊಂದಕ್ಕೂ  ಸರಕಾರದ  ಸಹಾಯವನ್ನೇ  ಅವಲಂಬಿಸಬೇಕಾದ  ದಯನೀಯ  ಪರಿಸ್ಥಿತಿಗೆ  ಕೃಷಿವ್ಯವಸ್ಥೆಯನ್ನು  ತಂದು ಇಟ್ಟಿದ್ದೇ  ನಮ್ಮೆಲ್ಲ  ದುಸ್ಥಿತಿಗೆ  ಕಾರಣವಾಯಿತು  ಎಂದೆನ್ನಲೇ  ಬೇಕಾಗಿದೆ.

    ಹೇಗೇ  ಇರಲಿ ಕೃಷಿ ಬದುಕು  ಇಂದಿಗೂ  ಉಸಿರಾಡುತ್ತಿದೆ  ಎಂದಾದರೆ  ಅದು  ಸಹಕಾರಿ ವ್ಯವಸ್ಥೆಯ  ಮೂಲಕ  ಎಂಬುದನ್ನು  ನಾವು  ಸ್ಮರಿಸಲೇಬೇಕು.  ಪ್ರತಿ ಪ್ರಜಾಪ್ರಭುತ್ವವೇ  ಆದ  ಸಹಕಾರೀ  ವ್ಯವಸ್ಥೆ  ರೈತನ ಬೆನ್ನೆಲುಬಾಗಿ,  ರೈತನ ನೋವು  ಏರಿಳಿತಗಳಿಗೆ  ಸಾಂತ್ವನವಾಗಿ,  ಆತನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ,  ಸ್ವಾಭಿಮಾನದಿಂದ  ಬದುಕಲು  ಅನುವಾಗುತ್ತಿರುವ  ಸಹಕಾರ ಎಂಬ  ಅಮೂಲ್ಯ ಚಟುವಟಿಕೆ,  ನಮ್ಮ  ಕೃಷಿಜೀವನದ  ಒಂದು  ಅನುಪಮ ವರದಾಯಿನಿಯಾಗಿ  ಬೆಳಗುತ್ತಿದೆ.

   ಸರಕಾರಗಳ ನಿಯಮಗಳು,  ಕಾನೂನು, ಆಡಳಿತಾತ್ಮಕ ದೋಷಗಳು,  ಸಹಕಾರಿ  ಪ್ರತಿನಿಧಿಗಳಲ್ಲಿಯ  ಜಾಡ್ಯತೆ,  ಮುಂತಾದ  ದೋಷಗಳು  ಇಚ್ಛಿತ ಪ್ರಗತಿಗೆ  ತೊಡಕಾಗಿ  ಪರಿಣಮಿಸುತ್ತಿದ್ದರೂ,  ಅಂಥ  ತೊಡಕುಗಳ  ನಡುವೆಯೇ  ನಮ್ಮ  ಸಾಕಷ್ಟು ಸಂಘಗಳು  ಮಾದರಿಯಾದ  ಸೇವೆಯನ್ನು  ನೀಡುತ್ತಿವೆ.  ರೈತನ  ಬದುಕಿನ  ಅಸಂಖ್ಯ ಸಂಕಷ್ಟಗಳನ್ನು  ನಿವಾರಿಸಲು  ಹೆಣಗುತ್ತಿವೆ.

   ಆದರೂ  ಬದಲಾದ  ಜೀವನವಿಧಾನ,  ಬದಲಾದ  ಸಾಮಾಜಿಕ ಪ್ರವೃತ್ತಿ,  ದಿನದಿಂದ  ದಿನಕ್ಕೆ  ನಮ್ಮ  ಕೃಷಿಬದುಕಿಗೆ  ಹೊಸ  ಹೊಸ  ಸವಾಲುಗಳನ್ನು  ತಂದೊಡ್ಡುತ್ತಿವೆ.  ಇಂದಿನ  ಕೃಷಿಕ  ಹಿಂದಿನಂತಿಲ್ಲ.  ಎಲ್ಲರಂತೇ ತಾನೂ  ಆಧುನಿಕ ನಾಗರಿಕನಾಗಿ, ಶಿಕ್ಷಿತನಾಗಿ, ವ್ಯವಸ್ಥಿತ ಬದುಕನ್ನು  ಕಟ್ಟಿಕೊಳ್ಳುವ  ಧ್ಯೇಯವನ್ನು ಹೊಂದಿದ್ದಾನೆ.  ಕೃಷಿಯಲ್ಲಿ  ಆಧುನಿಕತೆಯನ್ನು  ಅಳವಡಿಸಿಕೊಂಡು, ರಚನಾತ್ಮಕವಾಗಿ  ವ್ಯವಸಾಯ ಕೈಗೊಳ್ಳುವ  ಇಚ್ಛೆ  ಹೊಂದಿದ್ದರೂ,  ಅವೆಲ್ಲವನ್ನು  ಸಾಕಾರಗೊಳಿಸಿಕೊಳ್ಳುವಲ್ಲಿ  ಸೋಲುತ್ತಿದ್ದಾನೆ. 

     ಯಶದ  ದಾರಿಯಲ್ಲಿ ಎದುರಾಗುವ,  ಆರ್ಥಿಕ  ಕಾನೂನಾತ್ಮಕ, ಮತ್ತು  ಪರಿಸರದ  ತೊಡಕುಗಳನ್ನು  ನಿವಾರಿಸಿಕೊಳ್ಳಲು,  ಸಂಘಟನಾತ್ಮಕವಾದ  ಸಾಮೂಹಿಕ  ಪ್ರಯತ್ನ  ಮತ್ತು  ಹೋರಾಟ  ಅತ್ಯಂತ  ಅವಶ್ಯ  ಎಂಬುದನ್ನು  ಮನಗಾಣಬೇಕಾಗಿದೆ.    ಎಲ್ಲ  ಸಮಸ್ಯೆಗಳಿಗೆ  ಪರಿಹಾರ,  ಮತ್ತು  ಪರ್ಯಾಯ  ಎರಡೂ  ಸಹಕಾರೀ  ಚಳುವಳಿಯಲ್ಲಿದೆ. ಮತ್ತು ಸಹಕಾರ ಆಂಧೋಲನವನ್ನು ಬಲಪಡಿಸುವ, ಆ  ಮೂಲಕ  ಎದುರಾದ  ಸವಾಲನ್ನು  ಪರಿಹರಿಸಿ ಕೊಳ್ಳಬಹುದಾಗಿದೆ ಎಂಬ  ಸತ್ಯವನ್ನು  ಅರಗಿಸಿ ಕೊಳ್ಳಲೇ ಬೇಕಾಗಿದೆ.

  ಸಹಕಾರ ಎಂಬ ಪರಂಪರೆಯ  ಕೊಂಡಿಗಳಾದ ನಾವು,  ಇದೇ ಸಹಕಾರ ವ್ಯವಸ್ಥೆಯಡಿಯಲ್ಲೇ  ನಮ್ಮ ಕೃಷಿಬದುಕಿಗೆ  ಎದುರಾಗಿರುವ, ಹತ್ತು  ಹಲವು  ಸಮಸ್ಯೆ  ಸವಾಲುಗಳನ್ನು ಪರಿಹರಿಸಿಕೊಳ್ಳುವ, ಆಮೂಲಕ  ನಮ್ಮ ಗ್ರಾಮಗಳನ್ನು  ಇನ್ನೂ  ಪ್ರಗತಿಗೆ  ಕೊಂಡೊಯ್ಯುವ ಸಂಕಲ್ಪವನ್ನು  ತೊಡಲೇಬೇಕಾಗಿದೆ. 

      ಹಿನ್ನೆಲೆಯಲ್ಲಿ  ನಮ್ಮ ಸಹಕಾರಿ  ಸಂಘಟನೆಯ  ಆಶ್ರಯದಲ್ಲಿ  ನಾವು ಕೈಗೊಂಡ  ಕೆಲವು ರಚನಾತ್ಮಕ  ಪ್ರಯೋಗಶೀಲ  ಚಟುವಟಿಕೆಗಳ ಆಧಾರದಲ್ಲಿ,  ಒಂದಿಷ್ಟು  ಚಿಂತನೆಗಳನ್ನು  ಮಂಡಿಸುತ್ತಿದ್ದೇನೆ.

    ಸ್ಥಳೀಯ  ಜನರ  ಕಷ್ಟಸುಖಗಳ ನಿಜವಾದ  ಅನುಭವ  ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳಿಗಿರುವಷ್ಟು  ಮತ್ಯಾವ  ಸಂಸ್ಥೆಗೂ ಇರಲಾರದು.  ಕೃಷಿಕರ  ಮತ್ತು  ಕೃಷಿ ಅವಲಂಬಿತ  ಜನತೆಯ ನೇರ ಸಂಪರ್ಕ ಸಾಧ್ಯವಾಗುವುದೂ  ಪ್ರಾಥಮಿಕ ಸಹಕಾರಿಗೆ  ಮಾತ್ರ ಸಾಧ್ಯ.  ಸ್ಥಳೀಯ  ಕೃಷಿಸಮಸ್ಯೆಯ  ನಿವಾರಣೆಯ  ಹಿನ್ನೆಲೆಯಲ್ಲಿ, ಸ್ಪಂದಿಸಬೇಕಾದ  ಹೊಣೆಗಾರಿಕೆಯೂ  ಸಂಘದ್ದೇ  ಆಗಿರುತ್ತದೆ.ನನ್ನ ಕೃಷಿಕಪರ ಆಲೋಚನೆಗಳು, ಅಡಿಕೆ ಭತ್ತ ಕೃಷಿಕರ ಸಮಸ್ಯೆಗಳನ್ನು  ಹೊಂದಿದೆಯಾದರೂ, ಉಳಿದ  ಪ್ರದೇಶಗಳ  ಸಾಂಪ್ರದಾಯಿಕ  ರೈತರಿಗೂ    ವಿಚಾರಗಳು  ಸಂಬಂಧಪಡುತ್ತವೆ  ಎಂಬುದನ್ನು  ನೆನಪಿಸಬಯಸುತ್ತಿದ್ದೇನೆ.

         ಜಮೀನು ಪರಭಾರೆ

    ತಂದೆ ತಾಯಿಯರು  ವೃದ್ಧರಾಗುತ್ತಿದ್ದಾರೆ. ಮನೆಯ ಮಕ್ಕಳು ಉದ್ಯೋಗವನ್ನರಸಿ  ನಗರಗಳಿಗೆ ವಲಸೆ ಹೋಗಿದ್ದಾರೆ. ವ್ಯವಸಾಯ ಸಾಗಿಸಲು  ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದ್ದು, ಎಲ್ಲ ಗ್ರಾಮಗಳ ಸಹಜ ಸಮಸ್ಯೆಯಾದರೂ,  ಜಮೀನು ಮಾರಾಟಮಾಡುವ ಪ್ರಕ್ರಿಯೆ ಪ್ರಾರಂಭವಾದುದು  ವಿಷಾದನೀಯ.  ಅಂಥ ಪ್ರಕರಣಗಳಲ್ಲಿ, ಸ್ಥಳದಲ್ಲೇ  ವಾಸಿಸುವ ಕೃಷಿಕರೇ  ಕೊಳ್ಳುವಂತಾದರೆ ಸ್ಥಳೀಯ ಸಂಸ್ಕೃತಿಗೆ ಬಾಧಕವಾಗಲಾರದು.  ಲೀಸ್‌  ವ್ಯವಸ್ಥೆಯ ಬಗೆಗೂ ಗಮನಹರಿಸ ಬಹುದಾಗಿದೆ. ಸ್ಥಳೀಯ  ಸಂಘಗಳು  ಅಂಥ ಜಮೀನುಗಳನ್ನು  ಸ್ಥಳದ ಸಾಂಪ್ರದಾಯಿಕ ಕೃಷಿಕರಿಗೇ  ಲಭ್ಯವಾಗುವಲ್ಲಿ  ಪ್ರಯತ್ನಿಸ ಬಹುದಾಗಿದೆ.

    ಅಸಾಂಪ್ರದಾಯಿಕ  ಕೃಷಿಕ್ಷೇತ್ರ ವಿಸ್ತರಣೆ.

      ರಾಜ್ಯದಾದ್ಯಂತ  ಅವ್ಯಾಹತವಾಗಿ  ಅಸಾಂಪ್ರದಾಯಿಕ ಕ್ಷೇತ್ರದಲ್ಲಿ  ಅಡಿಕೆ ಕೃಷಿ ವಿಸ್ತರಣೆಯಾಗುತ್ತಿದ್ದು, ಸಾಂಪ್ರದಾಯಿಕ ಕೃಷಿಗೆ  ಬಾಧಕವಾಗಿ ಪರಿಣಮಿಸುತ್ತಿದೆ.  ಇತ್ತೀಚೆಗೆ  ವಿಧಾನಸೌಧದಲ್ಲೂ ಗಂಭೀರ ಚರ್ಚೆಗೆ  ಗ್ರಾಸದವಾದ ಈ ಸಮಸ್ಯೆಯ ಬಗೆಗೆ, ಜಾಗ್ರತರಾಗಬೇಕಾದ ಪರಿಸ್ಥಿತಿಯೊದಗಿದೆ.  ಧಾನ್ಯ ಬೆಳೆಯುವ ಕ್ಷೇತ್ರಗಳೆಲ್ಲ  ವಾಣಿಜ್ಯಬೆಳೆಗಳ ತಾಣವಾದಲ್ಲಿ ಮುಂದೆ ಆಹಾರಕೊರತೆಯುಂಟಾಗುವುದಲ್ಲದೇ, ಸಾಂಪ್ರದಾಯಿಕ  ಕೃಷಿಕನಿಗೆ  ಅನ್ಯಾಯವಾಗುವ ದುರಂತ ಎದುರಾಗಬಹುದಾಗಿದ್ದು,  ಕಾನೂನಾತ್ಮಕವಾಗಿ ಇಂಥ ಕೃಷಿವಿಸ್ತರಣೆಯನ್ನು ತಡೆಯುವ ನಿಟ್ಟಿನಲ್ಲಿ  ಸರಕಾರವನ್ನು ಎಚ್ಚರಿಸುವ  ಪ್ರಕ್ರಿಯೆ  ಪ್ರಾರಂಭವಾಗಬೇಕಿದೆ.

    ದಾರಿ ನಿರ್ಮಾಣ....

     ಸಾಮಾನ್ಯವಾಗಿ  ಸಾಂಪ್ರದಾಯಿಕ ತೋಟಗಳು  ಗುಡ್ಡ ಕಣಿವೆಗಳಲ್ಲೇ  ಇರುವುದರಿಂದ,  ಗೊಬ್ಬರ ಸಾಗಾಣಿಕೆ, ಕೊಯ್ದ ಫಸಲನ್ನು ತರುವಂತಹ ಕೆಲಸಗಳು,  ಅಧಿಕ ಶ್ರಮಬೇಡುವುದರಿಂದ, ಅಧಿಕ ಖರ್ಚಿಗೂ ಕಾರಣವಾಗುತ್ತಿದೆ. ಅದಕ್ಕೆ  ಕ್ಷೇತ್ರದ ಸುತ್ತಲೂ  ದಾರಿನಿರ್ಮಾಣ ಅತೀ ಅವಶ್ಯ. ಸಾಮಾನ್ಯವಾಗಿ ತುಂಡು ಕ್ಷೇತ್ರಗಳೇ  ಆಗಿರುವುದರಿಂದ, ಎಲ್ಲ ತುಂಡು ಕೃಷಿಕರ ಮನವೊಲಿಸಿ  ತೋಟದಂಚಿನಲ್ಲಿ  ದಾರಿನಿರ್ಮಾಣದಂತಹ  ಮಹತ್ವದ ಕೆಲಸವನ್ನು  ಸಹಕಾರಿ ಸಂಘಗಳು  ಕೈಗೆತ್ತಿಕೊಳ್ಳಬಹುದಾಗಿದೆ.

     ಬೆಟ್ಟ ನಿರ್ವಹಣೆ.....

      ಸಾಮಾನ್ಯವಾಗಿ  ನಮ್ಮ ಮಲೆನಾಡಿನ  ಅಡಿಕೆ ಕೃಷಿಗರಿಗೆ  ಬೆಟ್ಟ ಸೌಲಭ್ಯವಿದ್ದು, ಬೆಟ್ಟದಲ್ಲಿ  ಲಾಭದಾಯಕ  ಹಣ್ಣಿನ ಬೆಳೆ, ಬಿದಿರು ಮತ್ತು ಆಯುರ್ವೇದ ಸಸ್ಯಗಳಂತಹ  ಕೃಷಿಗೆ  ಸಾಮೂಹಿಕವಾಗಿ  ಪ್ರೋತ್ಸಾಹವನ್ನಿತ್ತರೆ,  ಪರ್ಯಾಯ ಆರ್ಥಿಕ ಮೂಲವನ್ನೂ  ಸಹಕಾರಿಸಂಘ ಸೃಷ್ಟಿಸಿದಂತಾಗುತ್ತದೆ.

    ದೀರ್ಘಾವಧಿ ಬೆಳೆ ತೋಟಗಳಿಗೆ ವಿಮಾ ರಕ್ಷಣೆ.

       ಇತ್ತೀಚಿನ ವರ್ಷಗಳಲ್ಲಿ, ನಮ್ಮ ಮಲೆನಾಡು ಪ್ರದೇಶದ  ಅಡಿಕೆ ಕ್ಷೇತ್ರಗಳಿಗೆ  ಎಲೆಚುಕ್ಕೆ ರೋಗದ  ಅಗಾಧ ಆಕ್ರಮಣ ಭಯಹುಟ್ಟಿಸಿದೆ. ಕೆಲವು  ತೋಟಗಳೇ  ರೋಗಕ್ಕೆ ತುತ್ತಾದ ದುರಂತವನ್ನು ಕಾಣುತ್ತಿದ್ದೇವೆ. ರೋಗಕ್ಕೆ ಬಲಿಯಾದ ತೋಟಗಳಿಗೆ ಪರಿಹಾರವಾಗಿ  ವಿಮೆ ಲಭಿಸುವಂತಾಗಬೇಕು.  ಆ ಬಗೆಗೆ  ಸಹಕಾರಿಗಳು  ಗಮನಹರಿಸಬೇಕಾಗಿದೆ.

     ಕೊಳೆರೋಗ ನಿವಾರಣೆ.

    ತೋಟಗಳ ರೋಗನಿವಾರಣೆಗಾಗಿ, ಸಾಮೂಹಿಕ ಪ್ರಯತ್ನ ಕೈಗೊಳ್ಳುವುದು.  ಸಾರ್ವತ್ರಿಕವಾಗಿ  ಇಡೀ  ತೋಟದ ಔಷಧಸಿಂಪರಣೆಯನ್ನು ಸಹಕಾರಿ ಸಂಘ  ಒಂದು ಅಭಿಯಾನ ಸ್ವರೂಪದಲ್ಲಿ ಕೈಗೊಳ್ಳುವುದು.

     ಮಣ್ಣು ಪರೀಕ್ಷೆ

ಸಹಕಾರಿ ಸಂಘದಡಿಯಲ್ಲಿ ಬರುವ  ಸಮಗ್ರ  ಭತ್ತ ಮತ್ತು ತೋಟಗಳ ಮಣ್ಣುಪರೀಕ್ಷೆ ಪ್ರತಿವರ್ಷ ನಡೆಯುವಂತಾಗಬೇಕು. ಇದರಿಂದ ಗೊಬ್ಬರ ನಿರ್ವಹಣೆ ವೈಜ್ಞಾನಿಕ ರೀತಿಯಲ್ಲಿ  ನಡೆಯುವಂತಾಗುವುದು. ಮತ್ತು ಅನಾವಶ್ಯಕ ಖರ್ಚನ್ನು ತಡೆಯಬಹುದಾಗಿದೆ.

ಕೊಯ್ಲು  ಮತ್ತು  ಕೊಯ್ಲೋತ್ತರ ಸಂಸ್ಕರಣೆ.

    ಅಡಿಕೆ ಮತ್ತು  ಭತ್ತದ  ಕೊಯ್ಲು  ಕೂಲಿ ಸಮಸ್ಯೆಯಿಂದ  ನರಳುತ್ತಿದ್ದು,  ಅದಕ್ಕೆ  ವ್ಯವಸ್ಥಿತ ಯಂತ್ರ ಮತ್ತು, ಆಧುನಿಕ ಸಲಕರಣೆಗಳನ್ನು ಸಹಕಾರಿ  ಸಂಘಗಳು ಒದಗಿಸಬೇಕು.  ಕೊಯ್ಲೋತ್ತರ ಸಂಸ್ಕರಣಾ ಘಟಕವನ್ನೂ  ಸಂಘ ಸ್ಥಾಪಿಸಬಹುದಾಗಿದೆ.

ಮಾರಾಟ ವ್ಯವಸ್ಥೆ.....

     ಕೊಯ್ಲಾದ  ಫಸಲನ್ನು ಸಂಸ್ಕರಿಸಲಾಗದ  ಕೃಷಿಕರ ಫಸಲಿಗೆ  ನ್ಯಾಯಯುತ ಬೆಲೆಸಿಗದೇ ಶೋಷಣೆಗೊಳಗಾಗದಂತೇ  ಸಂಘವೇ ಟೆಂಡರ್‌  ಮೂಲಕ  ಮಾರಾಟ ವ್ಯವಸ್ಥೆ  ಕೈಗೊಳ್ಳಬೇಕು.

ಯಂತ್ರ ಸಹಾಯ.....

     ರೈತರ ಫಸಲು ಕೊಯ್ಲಿಗಾಗಿ, ಸುಧಾರಿತ  ಫೈಬರ ದೋಟಿ ಸೇವೆ,  ಕಿರು ಜೆ.ಸಿ.ಬಿ. ಯಂತ್ರಗಳು, ಮತ್ತು  ವಾಹನಸೇವೆ  ಇಂದಿನ ತುರ್ತು ಅಗತ್ಯವಾಗಿದೆ.  ಅಡಿಕೆ ಸುಲಿಯುವ ಯಂತ್ರ,  ಮೆಣಸು ಶುದ್ಧಿ ಯಂತ್ರ,  ಎಣ್ಣೆ ಮಿಲ್‌, ಮತ್ತು ತೆಂಗು ಸುಲಿಯುವ ಯಂತ್ರ ಮುಂತಾದವುಗಳನ್ನು ಸ್ಥಾಪಿಸಬಹುದಾಗಿದೆ.

ಟೆಲಿಪೋನ್‌  ಇಂಟರ್ನೆಟ್‌  ಸೇವೆ.

    ದೂರವಾಣಿ  ಮತ್ತು  ಅಂತರ್ಜಾಲಗಳು  ಇಂದಿನ  ಜೀವನಕ್ಕೆ  ಅತೀ ಆವಶ್ಯಕವಾದುದರಿಂದ, ಖಾಸಗಿ ವ್ಯವಸ್ಥೆಯ ಶೋಷಣೆಗೆ ಕೃಷಿಕ ಸಿಲುಕಿದ್ದಾನೆ.  ಪ್ರಾಥಮಿಕ ಸಹಕಾರಿ  ಸಂಘಗಳು,  ಮಾಹಿತಿ ತಂತ್ರಜ್ಞಾನದ ಸೇವೆಗೆ ತೊಡಗುವುದು ಅತ್ಯಂತ ಅವಶ್ಯವಿದೆ.

    ಒಟ್ಟಿನಲ್ಲಿ  ನಮ್ಮ ಪ್ರಗತಿಗೆ ನಾವೇ ಕಾರಣಕರ್ತರಾಗಬೇಕಾದರೆ,  ಸದ್ಯದಲ್ಲಿ  ನಮಗಿರುವ  ಏಕೈಕ ಮಾರ್ಗವೆಂದರೆ  ಸಹಕಾರಿ ವ್ಯವಸ್ಥೆಯನ್ನು  ಬಲಪಡಿಸುವುದು.  ಸಹಕಾರಿ ಆಂಧೋಳನದ ಸೇವಾ ಸಾಧ್ಯತೆಯನ್ನು ವಿಸ್ತರಿಸುವುದು.  ಅತೀಯಾದ ಸರಕಾರೀ ಅವಲಂಬನೆಯನ್ನು  ನಿವಾರಿಸುವುದು. ಸರ್ವ ಸದಸ್ಯರಲ್ಲಿ  ಸಹಕಾರೀ ಪ್ರಜ್ಞೆಯನ್ನು ಜಾಗ್ರತಗೊಳಿಸುವುದು.  ಅತೀಯಾದ  ಖಾಸಗೀ ಅವಲಂಬನೆಯನ್ನು ತಪ್ಪಿಸುವುದು.

    ನಮ್ಮ ಸಹಕಾರಿಗಳಲ್ಲಿ  ಮೊದಲು ಇಚ್ಛಾಶಕ್ತಿ ಜಾಗ್ರತಗೊಳ್ಳಬೇಕು. ರಚನಾತ್ಮಕ ಸೇವಾಕಾರ್ಯಗಳಲ್ಲಿ ಇನ್ನೂ ಹೆಚ್ಚು ತೊಡಗಿಕೊಳ್ಳಬೇಕು. ಆರ್ಥಿಕ ಬಲ  ಸಾಂಸ್ಕೃತಿಕ ಬಲವನ್ನೂ ವೃದ್ಧಿಸಬಲ್ಲದು.  ದೈನ್ಯತೆಯನ್ನು ನಿವಾರಿಸಿ  ಆತ್ಮಾಭಿಮಾನವನ್ನು ಹೆಚ್ಚಿಸ ಬಲ್ಲದು.  ಸಹಕಾರ ನಮ್ಮೊಳಗಿನ  ಸಂಘರ್ಷ, ಅಸಮಾಧಾನವನ್ನು  ಕಡಿಮೆ ಮಾಡಿ, ಸ್ನೇಹವನ್ನು ವೃದ್ಧಿಸುತ್ತದೆ.  ಒಕ್ಕೂಟ ಇಡೀ ಸಮುದಾಯವನ್ನು ಎತ್ತರಿಸುತ್ತದೆ.  

    ಸಹಕಾರೀ  ಬಂಧುಗಳೇ,  ಸಹಕಾರವೆಂಬ  ಅದ್ಭುತವಾದ  ಶಕ್ತಿ  ನಮಗೆ ದೊರಕಿದೆ.  ಅದರ ಸದ್ಬಳಕೆ ಗೈಯ್ಯೋಣ. ನಮ್ಮ ಕೃಷಿ ಸಮುದಾಯದ  ಸರ್ವಾಂಗೀಣ ಪ್ರಗತಿಯ ಪಥದಲ್ಲಿ,  ಇನ್ನೂ  ಹೆಚ್ಚು ವೇಗದಿಂದ  ಕ್ರಮಿಸೋಣ.

ʻʻಸುಲಭವೇನಲ್ಲ ನರಲೋಕ ಹಿತ ನಿರ್ಧಾರ |  ಬಲಕೆ ನೋಳ್ಪರ್‌ ಕೆಲರ್‌,  ಕೆಲರ್ ಎಡಕೆ ನೋಳ್ಪರ್‌ ||

 ವಿಲವಿಲನೆ ಚಪಲಿಸುವ ಮನುಜ ಸ್ವಭಾವದಲಿ | ನೆಲೆ ಗೊತ್ತು  ಹಿತಕೆಲ್ಲಿ...?-----ಮಂಕುತಿಮ್ಮ ||ʼʼ

         ಸಮುದಾಯಂ ಬಾಳ್ಗೆ                                    ಸಹಕಾರಂ ಗೆಲ್ಗೆ.

(ಶಿರಸಿ  ತಾ-  ಬಿಸಲಕೊಪ್ಪ ಸ. ಸಂ. ಸುವರ್ಣಮಹೋತ್ಸವದ  ಸ್ಮರಣಸಂಚಿಕೆಗೆ.)

 

 

No comments:

Post a Comment