Wednesday 27 September 2023

ಜನಸುನಾಮಿʼʼ ಕವನ.

 

ಹನಿ ಹನಿಯ  ಹೃದಯದಲಿ ಹೊಳಪ  ಸೂಸುತ್ತ

ತೆನೆ ತೆನೆಯ  ಒಡಲಿನಲಿ  ತುತ್ತನಡಗಿಸುತ

ಹಸಿರುಡುಗೆಯುಟ್ಟು  ಹೊಂಗಿರಣ  ಮುಡಿದು

ಹೂ  ಹಣ್ಣು  ತುಂಬಿರುವ  ಹರಿವಾಣ  ಹಿಡಿದು

                        ಬಂದೆಯಾ  ದಸರೇ..

ಹೆರುತ್ತ  ಹೇರುತ್ತ  ಹೆಗಲಮೇಲೇರುತ್ತ

ಕನಸ  ಬಿತ್ತುವೆಯಂತೆ  ಸುತ್ತ  ಮುತ್ತ.

ಅವನಮ್ಮ ಇವನಮ್ಮ  ಇಲ್ಲದೇ  ತರತಮ

ಸಮನಾಗಿ  ಕಾಣುವ  ಎಲ್ಲರಮ್ಮ .

                                                 ಯಲ್ಲಮ್ಮ  ದಸರೇ.

ನೋವು  ತಲ್ಲಣದ  ಗಾಣ  ಕಿರುಚಿದೆ

ತಗ್ಗು ದಿನ್ನೆಗಳ  ಹೆದ್ದಾರಿ  ಎದುರಿದೆ

ಭಕ್ತ ವೇಷದ ಭಕ್ಷಕರ, ರಕ್ಕಸರ

ರಥ ಸಾಗಿದೆ  ಕುದುರೆ ಕೆನೆದಿದೆ

                                          ಇಲ್ಲಿ  ಮತ್ತೇರಿದೆ  ದಸರೇ.

ಕಾಲ  ಕಂಕಾಲಕ್ಕೆ ಕೃಷವಾದೆ  ತಾಯೆ

ಮೆಳ್ಳೆಗಣ್ಣೊಳಗೆ  ಮುಸುಕಿದೆ  ಮಾಯೆ

ಮಾನವನ  ದಾನವನ  ಗುರುತಿಸದ  ನೀನು

ಕೇಳಿದ್ದು  ಕೊಟ್ಟೆ ಕೆಲವರಿಗೆ.  ಉಳಿದ ಜನಕೆ    ಕಸಬರಿಗೆ.

                                                 ಹೀಗೇಕೆ  ದಸರೇ?

ಹಸನಾದ  ಮಣ್ಣೆಲ್ಲ  ಮಸಣವಯ್ಯಯ್ಯೋ

ಬರಬಿದ್ದ  ಮಣ್ಣಲ್ಲಿ ಬೆಳಕು  ಕರಗಿತ್ತಯ್ಯೋ

ಬತ್ತಲು ಮೈಮೇಲೆ    ಕಪಿಹಸ್ತ  ವಯ್ಯೋ

ಹೆಣದ  ರಾಶಿಯಮೇಲೆ    ಹಣವು ಕುಣಿದಿತ್ತಯ್ಯೋ

                                              ಕಂಡೆಯಾ   ದಸರೇ.?

ಜನಗಣ ಮನ  ಅಧಿನಾಯಕ  ಗಣಗಳು

ಅಗಣಿತ  ಗಣಿತದ  ಗಣಕಗಳು.

ಗುಣಿಗಳು, ಹೆಗ್ಗಣಿಗಳು  ಕುಣಿದಿವೆ

ದಣಿಯಲಿಲ್ಲವೇ  ನಿನ್ನ  ಕಣ್ಣ  ಗುಣಿಗಳು?

                                               ಕಣ್ಣು  ಬಿಡು  ದಸರೇ.

ಬಿತ್ತಿ ಬೆಳೆದವರ  ಬುತ್ತಿ ಕಿತ್ತು

ಅವರ  ಕೊರಳಿಗೆ  ಉರುಳನಿತ್ತು

ಇಳೆಜೀವಗಳ  ರಸಹೀರಿ  ವಿಷ  ಕಾರಿ

ಬೆಂದಿತೋ  ಬದುಕು,  ನಂದಿತೋ  ಬೆಳಕು

                                              ಎಲ್ಲಿರುವೆ   ದಸರೇ.?

ತಾಯಿಯೇ  ಮಹದಾಯಿಯೇ

ಮಹಾ  ಬಾಯಿಯೇ   ಮಲತಾಯಿಯೇ

ಕಾವೇರಿ  ವರಕೊಟ್ಟೆ, ಕಾವಿಳಿಸಿ ಬರೆಕೊಟ್ಟೆ

ಕೈಕೊಟ್ಟು  ನೆತ್ತಿಗೇ ಕಾಲಿಟ್ಟು.  ನಡು ನೀರಲ್ಲಿ  ಬಿಟ್ಟೆ

                                                       ಏಕೆ  ದಸರೇ..?

 

 

ಹೊತ್ತುರಿವ  ಹಸಿವಿನ  ಜಠರಾಗ್ನಿಯಲ್ಲಿ

ಕೋಟಿ  ಜೀವಿಗಳ  ವಿಸ್ಫೋಟದಲ್ಲಿ

ಗುಡುಗೀತು  ಬಾನು, ನಡುಗೀತು  ಭೂಮಿ

ಜಡಸಾಗರವಲ್ಲ  ಇದು,  ಜನಸುನಾಮಿ.

                     ಕೇಳು ದಸರೇ.. ಕೇಳಿದೆಯಾ   ದಸರೇ.?

                                                                              ಸುಬ್ರಾಯ ಮತ್ತೀಹಳ್ಳಿ.    ದಿನಾಂಕ.-  1-10-2019   ಜನಮಾಧ್ಯಮ  ಪತ್ರಿಕೆಯಲ್ಲಿ  ಪ್ರಕಟಿತ.

No comments:

Post a Comment