Tuesday 26 September 2023

ಆಡುಭಾಷೆಯ ಬನಿಯಲ್ಲಿ, ನಾಡಭಾಷೆಗೆ ಸೇರಿದ ಕಾದಂಬರಿ ಮಳಾವ್- ನಸಾಬ-ಪಂಚಾತ್

 

  ಒಂದು  ಭಾಷೆ  ಅತಿಶಿಷ್ಟತೆಯಲ್ಲಿ  ಸವಕಲಾಗುತ್ತ, ತನ್ನ ರೂಪಕ ಶಕ್ತಿಯನ್ನು  ಕಳೆದುಕೊಳ್ಳುತ್ತ  ಸಾಗಿದಂತೇ  ಜೀವಉಳಿಸಿಕೊಳ್ಳಲು  ಜಾನಪದೀಯತೆಗೆ  ಮತ್ತೆ  ಶರಣಾಗುವ  ಪ್ರಕ್ರಿಯೆಯ ಸಹಜ..  ಕನ್ನಡ ಭಾಷೆ  ಸದಾ  ಮತ್ತೆ ಮತ್ತೆ  ತನ್ನನ್ನು  ತಾನು ಆಡು ನುಡಿಯ ಆಸರೆಯಲ್ಲಿ ಪರಿಷ್ಕರಿಸಿಕೊಳ್ಳುತ್ತ  ಸಾಗಿರುವುದನ್ನು  ಸಾಹಿತ್ಯ  ಚರಿತ್ರೆಯಲ್ಲಿ  ದಾಖಲಾಗುತ್ತಲೇ  ಇದೆ.  ಕುಸುಮಬಾಲೆ, ಒಡಲಾಳ,ದಂತ  ಪ್ರಾದೇಶಿಕ  ಭಾಷಾ  ಪ್ರಯೋಗವಾಗಲಿ,  ಶಿವರಾಮ  ಕಾರಂತರ  ಪ್ರಾದೇಶಿಕ ಜನಜೀವನದ  ದಟ್ಟ  ಚಿತ್ರಣವಾಗಲಿ, ರಾವ್‌  ಬಹದ್ದೂರ, ಬಸವರಾಜ ಕಟ್ಟಿಮನಿ  ಕುವೆಂಪು  ರವರಂಥ  ಹಿರಿಯ  ಲೇಖಕರ  ಪ್ರಾದೇಶಿಕ  ಮಾನವೀಯ  ಅನುಭವಗಳು,  ನಮ್ಮನ್ನು  ಇಡೀ  ಕನ್ನಡದ  ನೆಲಮೂಲದ  ಅನುಭವಗಳಿಗೆ  ಕೊಂಡೊಯ್ದ  ಸಮರ್ಥ  ಉದಾಹರಣೆಗಳಾಗಿವೆ.

    ಇಂಥ  ಒಂದು  ಪ್ರಾದೇಶಿಕ  ದಟ್ಟ  ಅನುಭವವನ್ನು  ಕಟ್ಟಿಕೊಡುವ  ಮತ್ತೊಂದು  ಮಹತ್ವಪೂರ್ಣ  ಚಟುವಟಿಕೆ, ಉತ್ತರಕನ್ನಡ  ಜಿಲ್ಲೆಯ  ಹಿರಿಯ ಲೇಖಕ, ಜನಪ್ರಿಯ  ವೈದ್ಯ, ಕವಿ, ಡಾ||  ಕೆ.ಬಿ. ಪವಾರ್‌ ರವರಿಂದ  ಜರುಗಿದ್ದು  ನಿಜಕ್ಕೂ  ಖುಷಿಕೊಡುವ  ಸಂಗತಿ.

   ಈಗಾಗಲೇ  ನೋಬೆಲ್‌ ಕವಿ  ರವೀಂದ್ರನಾಥ  ಟಾಕೂರರ  ʻʻಗೀತಾಂಜಲಿʼʼ  ಕಾವ್ಯವನ್ನು  ಕನ್ನಡಕ್ಕೆ  ಯಶಸ್ವೀಯಾಗಿ  ಅನುವಾದಿಸಿದ, ಮತ್ತು  ಕವನಸಂಕಲನ  ಪ್ರವಾಸಕಥನ, ಗಳಂತ  ಕೃತಿಯಿಂದ  ಸುಪ್ರಸಿದ್ಧರಾದ  ಡಾ-ಪವಾರರು, ಇದೇ  ವರ್ಷ  ಮತ್ತೊಂದು   ʻʻ ಬಂಜಾರಾʼʼ ಸಮುದಾಯದ  ಪ್ರಾದೇಶಿಕ  ಭಾಷಾಸೊಗಡಿನ  ಹಿನ್ನೆಲೆಯ  ಕಾದಂಬರಿಯೊಂದನ್ನು ( ಮಳಾವ್-‌ ನಸಾಬ್-‌ ಪಂಚಾತ್‌ )  ಸಹೃದಯರ  ಎದುರು  ತೆರೆದಿಟ್ಟಿದ್ದಾರೆ.

    ಬಂಜಾರಾ- ಲಂಬಾಣಿ  ಸಮುದಾಯದ  ಅವರದ್ದೇ  ಆದ  ವಿಶಿಷ್ಟ  ಭಾಷೆ ʻʻಗೋರ್‌ ಬೋಲಿʼʼ ಯಲ್ಲಿ  ಬಹುಷಃ  ಮೊದಲ  ಕಾದಂಬರಿಯಾಗಿ  ಕಳೆದ ವರ್ಷವೇ  ಪ್ರಕಟವಾದ    ಕೃತಿಯನ್ನು. ಅವರ  ಅಭಿಮಾನಿಗಳ  ಒತ್ತಾಸೆಯಿಂದ  ಈವರ್ಷ  ಕನ್ನಡಭಾಷೆಗೆ  ಲೇಖಕರೇ  ಅನುವಾದಿಸಿದ್ದಾರೆ. 

    ಕನ್ನಡ ನೆಲ, ಉಪಭಾಷೆ, ಉಪಪಂಗಡಗಳಿಂದ  ಸಮೃದ್ಧವಾಗಿದ್ದರೂ, ಆಧುನಿಕತೆ  ಅತಿಶಿಷ್ಟತೆ, ನಗರೀಕರಣಗಳ  ಆಕ್ರಮಣದಲ್ಲಿ,  ಇನ್ನೂ  ಬೆಳಕಿಗೆ ಬಾರದ  ಸಾಕಷ್ಟು  ಸಂಗತಿಗಳು  ಭೂಗತವಾಗಿಯೇ  ಇವೆ.  ಹಾಲಕ್ಕಿಸಮುದಾಯದ   ಅಧ್ಯಯನಪೂರ್ಣ  ಸಾಂಸ್ಕೃತಿಕ  ಕಾದಂಬರಿಯೊಂದು,(ಜಂಗುಂ,,ಜಕ್ಕುಂ) ಕೆಲವು ವರ್ಷಗಳ  ಹಿಂದೆಯೇ   ಕವಿ ವಿಷ್ಣುನಾಯ್ಕ ರ  ಮೂಲಕ  ಪ್ರಕಟವಾಗಿದ್ದನ್ನು  ಇಲ್ಲಿ  ನೆನಪಿಸಿಕೊಳ್ಳಬಹುದಾಗಿದೆ. ಆದರೆ  ಕನ್ನಡನಾಡಿನ  ರಾಜಧಾನಿಯಿಂದ  ಬಹುದೂರವಿರುವ  ನಮ್ಮ ಜಿಲ್ಲೆಯಂಥ  ಸ್ಥಳದಲ್ಲಿ  ರಚನೆಯಾದ  ಮಹತ್ವದ  ಕೃತಿಗಳೂ  ಸಹ,  ಸಮಗ್ರ  ರಾಜ್ಯಕ್ಕೆ  ತಲುಪಲು   ಅದೇಕೋ  ಸೋಲುತ್ತಿವೆ. 

   ಬಂಜಾರಾ  ಸಮುದಾಯದಲ್ಲಿ,  ಈವರೆಗೂ  ಅನೂಚಾನವಾಗಿ  ನಡೆದುಬರುತ್ತಿರುವ  ನ್ಯಾಯದಾನ  ಪದ್ಧತಿಯನ್ನು  ಕೇಂದ್ರವಾಗಿಸಿಕೊಂಡು,  ಸಮುದಾಯದಲ್ಲೇ  ಎದ್ದ  ಮಹತ್ವಪೂರ್ಣ  ಪ್ರೇಮಪ್ರಕರಣದ  ವಿಚಾರಣಾ  ವ್ಯವಸ್ಥೆಯಮೂಲಕ  ಆಕರ್ಷಕವಾಗಿ  ಹರಿಯುವ  ಸಾಮುದಾಯಿಕ  ಚಟುವಟಿಕೆಗಳು,  ಕುತೂಹಲ  ಕೆರಳಿಸುತ್ತವೆ. ಅಲ್ಲಲ್ಲಿ  ಬಂಜಾರಾ  ಉಪಭಾಷೆಯ  ಸರಳ  ಶಬ್ದಗಳನ್ನು  ಪೋಣಿಸುತ್ತ,  ಸಾಮುದಾಯಿಕ  ಸಾಂಪ್ರದಾಯಿಕ  ಚಟುವಟಿಕೆಗಳನ್ನು  ಸುಂದರವಾಗಿ  ವರ್ಣಿಸುತ್ತ  ಸಾಗುವ  ಕೃತಿ,  ನಮ್ಮೊಂದಿಗೇ  ಬೆಳೆದು  ಬಾಳುತ್ತಿರುವ  ಜನಾಂಗದ  ಬಗೆಗೆ  ಹೊಸ  ಬೆಳಕನ್ನು  ಬೀರುತ್ತದೆ.

   ಕನ್ನಡನಾಡಿನಲ್ಲಿ  ತಮ್ಮದೇ  ಆದ  ವೈಶಿಷ್ಟ್ಯಪೂರ್ಣ  ಸಂಸ್ಕೃತಿ, ಬಟ್ಟೆಬರೆ ಮತ್ತು  ಭಾಷೆಯಮೂಲಕ ಗಮನಸೆಳೆಯುವ  ಪ್ರಸ್ತುತ  ಲಂಬಾಣಿ  ಜನಾಂಗಕ್ಕೆ  ಗೋರ-ಬಂಜಾರಾ, ಲಮಾಣಿ, ಲಭಾಣ, ಲದೇಣಿಯಾ, ಗಮಾರ, ಗವಾರ, ಮುಂತಾದ ಅನೇಕ  ಹೆಸರುಗಳಿಂದ  ಕರೆಯಿಸಿಕೊಳ್ಳುವ     ಬುಡಕಟ್ಟು ಜನಾಂಗದ  ಇತಿಹಾಸ  ಹರಪ್ಪಾಮಹೋಂಜೇದಾರೋ  ಕಾಲಕ್ಕೂ  ಕರೆದೊಯ್ಯುತ್ತದೆ, ಎನ್ನುತ್ತಾರೆ  ಲೇಖಕರು.  ಇವರ  ಮೂಲವೃತ್ತಿ  ಗೋಪಾಲನೆಯಾಗಿತ್ತು.  ನಂತರದಲ್ಲಿ  ವ್ಯಾಪಾರ ವ್ಯವಹಾರದಲ್ಲಿ  ತೊಡಗಿಕೊಂಡು  ದೇಶ ವಿದೇಶಗಳಿಗೆ  ವಲಸೆಹೋಗಲು  ಪ್ರಾರಂಭಿಸಿದರಂತೆ.  ಭಾರತದ  ಉತ್ತರದಿಂದ  ದಕ್ಷಿಣದ  ತುದಿಯವರೆಗೂ  ಬಂಜಾರಾ  ಜನಾಂಗ  ಚದುರಿಕೊಂಡಿದೆ.

      ಇವರ  ತಾಂಡಾದ  ಹಿರಿಯನಿಗೆ  ನಾಯಕ ನೆಂದೆನ್ನುತ್ತಾರೆ.  ಅವನೇ  ಮುಖ್ಯ ನ್ಯಾಯಾಧೀಶ. ಅವನಿಗೆ  ಸಹಾಯಕರಾಗಿ, ಕಾರಭಾರಿಗಳಿರುತ್ತಾರೆ. ಅವರಿಗೆ  ಡಾವಸಾಣ  ಎನ್ನುತ್ತಾರೆ. ಈ  ಎಲ್ಲ  ಹಿರಿಯರ ಸಮ್ಮುಖದಲ್ಲಿ  ನಡೆಯುವ  ನ್ಯಾಯದಾನ ಪ್ರಕ್ರಿಯೆಯ  ವಿವರಪೂರ್ಣ  ವರ್ಣನೆ  ಇಲ್ಲಿ  ಚಿತ್ರಣಗೊಂಡಿದೆ.  ಪಿರ್ಯಾದಿದಾರ  ಮತ್ತು  ಆರೋಪಿಗಳ  ಹೇಳಿಕೆ  ಪಡೆದ    ಹಿರಿಯರು, ಅವರ  ಹೇಳಿಕೆಗಳ  ಸತ್ಯಾಸತ್ಯತೆಯನ್ನು  ಶೋಧಿಸಲು  ವಿಶೇಷ  ಜನರನ್ನು  ನೇಮಕಗೊಳಿಸುತ್ತಾರೆ.  ಅವರು  ಸಾಕ್ಷಿಯನ್ನು ಕಲೆಹಾಕಿ, ನಡೆದ ಘಟನೆಯ ಬಗೆಗೆ  ನಿಖರ  ಮಾಹಿತಿ ನೀಡುತ್ತಾರೆ.  ಸಮುದಾಯದ  ವಿವಿಧ  ಪಂಗಡಗಳ  ನಾಯಕರುಗಳನ್ನು  ಆಹ್ವಾನಿಸಿ  ಎಲ್ಲರ  ಅಹವಾಲು  ಅಭಿಪ್ರಾಯಗಳನ್ನು  ಕ್ರೋಢೀಕರಿಸಿ   ನ್ಯಾಯದಾನ ಗೈಯ್ಯಲಾಗುತ್ತದೆ.  ಅವರು  ನೀಡಿದ  ತೀರ್ಪನ್ನು  ಅಮಾನ್ಯ  ಮಾಡಿದರೆ,  ತಿರಸ್ಕರಿಸಿದರೆ  ಅವನನ್ನು  ಸಮುದಾಯದಿಂದ  ಹೊರಹಾಕಲಾಗುತ್ತದೆ.  ಕಳೆದ  ಶತಮಾನದ  ಮಧ್ಯಭಾಗದ ವರೆಗೂ  ನಡೆಯುತ್ತಿದ್ದ  ಈ ನ್ಯಾಯದಾನ  ಪ್ರಕ್ರಿಯೆ ( ಮಳಾವ್-‌ ನಸಾಬ್‌)ಇತ್ತೀಚಿನ  ವರ್ಷಗಳಲ್ಲಿ  ಆಧುನಿಕತೆಯ  ಪ್ರಭಾವದಲ್ಲಿ, ತನ್ನ  ಸತ್ವ  ಮತ್ತು  ಸ್ವತ್ವಗಳನ್ನು  ಕಳೆದುಕೊಳ್ಳುತ್ತಿದೆ, ಎಂದು  ಲೇಖಕರು  ವಿಷಾಧಿಸುತ್ತಾರೆ.

     ನ್ಯಾಯದಾನದ  ಸಂದರ್ಭದಲ್ಲಿ, ಆರೋಪಿ  ಧಂಜ್ಯಾ  ತನ್ನಮೇಲಿರುವ  ಆರೋಪವನ್ನು  ಅಲ್ಲಗಳೆದು, ಪಿರ್ಯಾದಿದಾರನನ್ನು  ಅವಾಚ್ಯಶಬ್ದಗಳಲ್ಲಿ  ನಿಂದಿಸುತ್ತಾನೆ. ಆಗ  ಬಂದ  ಪ್ರತಿಕ್ರಿಯ  ಅದೆಷ್ಟು  ರೋಚಕವಾಗಿತ್ತು  ಎಂಬುದರ  ಉದಾಹರಣೆ  ಇಲ್ಲಿದೆ.

     ʻʻ ರೂಪಸಿಂಗ್--‌  ಲೇ  ಹಲ್ಕಟ್‌  ನನ್‌ ಮಗನ,  ನಿಲ್ಸನಿಲ್ಸಲೇ  ಭದ್ಮಾಸ್‌, ಸಲುಪಾರ  ನಾಚೀಗಿ ಇರ್ಬೇಕಲೇ  ಹಲ್ಕಟ್‌ ಭಾಡ್ಯಾ,  ನೀನ  ನನ್‌  ಮಗಳ್ನ  ಕಿವಿತುಂಬ್ಸಿ ಕರ್ಕೊಂಡ್‌  ಹೋಗೀದಿ, ಮತ್ತ  ಅದರ ಮ್ಯಾಲೆ  ಏನೇನರ  ಕತೀ ಕೂಡ್ಸಾಕತ್ತೀಯೇನಲೇ   ಬೋ.....ಮಗನೇ..  ನಿಮ್ಮ  ಮನೆತನಾ ಇಂತಾ  ಕೆಲಸದಾಗ  ಪರಸೀದ  ಆಗೈತಿ  ಅನ್ನೋದು  ಇಡೀ  ಜಗತ್ತೀಗೇ   ಗೊತ್ತೈತಿ.  ಭಾಡಕಾವುಗಳದೀರಿ  ನೀವು. ನಾಚಿಗ್ಗೇಡಿಗಳು  ನೀವು.  ಮನೆಹಾಳ್‌  ಸೂ...ಮಕ್ಕಳು.ʼʼ

     ನ್ಯಾಯಪಂಚಾಯತಿಯ  ತುರೀಯದಲ್ಲಿದ್ದಾಗ  ಇಂಥ  ಮಾತುಗಳು ಬಂದರೆ, ಆ ಕ್ಷಣದಲ್ಲಿ  ತಹಬಂದಿಗೆ  ತರಲು  ಕಮಾಂಢೋಗಳಾಗಿ  ಜನರೇ  ಭಾಗವಹಿಸುತ್ತಾರೆ.  ತಮ್ಮ  ಪರಂಪರೆಯ  ಭೋಜರಾಜ, ಮತ್ತು  ಶ್ರೀರಾಮನ  ನ್ಯಾಯಪರಿಪಾಲನೆಯ  ಪ್ರತಿಜ್ಞೆಗೈದ  ಪಂಚರು, ಮಾತುಗಳಲ್ಲಿ  ನೈತಿಕತೆ  ಕಾಯ್ದುಕೊಳ್ಳುವ  ಎಚ್ಚರವನ್ನು  ಮನಗಾಣಿಸುತ್ತಾರೆ.

     ಪಂಚರಿಂದ  ನ್ಯಾಯ ತೀರ್ಮಾನ  ಘೋಷಣೆಯ  ನಂತರ, ಪ್ರಮುಖ  ನಾಯಕ  ಧರ್ಮಸಿಂಗ  ಹೇಳುವ  ಮಾತು  ಆಕರ್ಷಕವಾಗಿದೆ.

     ʻʻನೋಡ್‌  ಧಂಜ್ಯಾ...  ಎಲ್ಲಾ  ವಿಚಾರ  ಅಲ್ಲಿಂದಲ್ಲೇ  ಸರ್ಯಾಗಿ  ಕುಂತ್‌  ಬಿಟ್ಟೈತೆ. ಹಾಲಿನ ಲೆಕ್ಕಾ ಹಾಲಿಗೆ,  ನೀರಿನ  ಲೆಕ್ಕಾ  ನೀರಿಗೆ  ಆಗೈತೆ. ಈಗಾದ್ರೂ   ಯಾವ್ದೇ  ವಿಚಾರಾನಾ  ತಲ್ಯಾಗ್‌  ಇಟ್ಕೊಂಡ್‌  ಏನಾರಾ  ಭಾನಗಡೀ   ಮಾಡ್ದೇ  ಅಂದ್ರ  ಚೊಲೋ  ಇರಾದಿಲ್ಲ.  ಸಭಾ  ಐದು ತಾಂಡಾದ  ಡಾವಸಾಣ, ಕಾರಬಾರಿಗಳ  ಮುಂದೆ  ನಡದೈತೆ. ಈ  ಇಚಾರ  ಸುತ್ತ್‌ ಎಲ್ಲಾ  ತಾಂಡಾಗಳ್ಗೂ   ಹೋಗತೈತೆ.   ಮತ್‌  ನಿಂದೇನಾರಾ  ಅಂತಾ  ಭಾನಗಡಿ  ಶುರು  ಆದ್ರ  ತಾಂಡಾದವ್ರು  ನಿನ್‌  ಸಮಾಜದಿಂದ  ಹೊರಗ್‌  ಹಾಕ್ತಾರಾ.  ಹಂಗಾದ್ರ  ನಿನ್‌  ಮನ್ಯಾಗ  ಯಾವ್ದ... ಮದವಿ, ಮುಂಜ್ವಿ, ಸುಕಾ, ಸಾವು  ಆದ್ರ  ನೀ  ಒಬ್ನ  ಆಗ್ತಿ.   ನೀ  ಒಬ್ನ..  ಸಾಯ್ಬೇಕಾಗತೈತಿ  ನೋಡ...ʼʼಎಂದು  ಎಚ್ಚರಿಸಲಾಗುತ್ತದೆ.

     ಸಮುದಾಯದ ಸುಶಿಕ್ಷಿತ  ಯುವತಿಯೋರ್ವಳು,  ತನ್ನ ಅಭಿಪ್ರಾಯವನ್ನು  ಕೇಳದೇ  ಏಕಪಕ್ಷೀಯವಾಗಿ  ಮನಸ್ಸಿಲ್ಲದ  ತರುಣನಿಗೆ  ಮದುವೆಮಾಡಿಕೊಡಲು  ತಂದೆ ನಿರ್ಣಯಿಸಿದಾಗ,  ಪ್ರತಿಭಟಿಸುತ್ತಾಳೆ. ತಾನೇ ಇಷ್ಟಪಟ್ಟ ಯುವಕನನ್ನು  ವರಿಸುವ  ನಿರ್ಣಯಕ್ಕೆ  ಬರುತ್ತಾಳೆ. ಅದು  ವಿವಾದಕ್ಕೆ  ಕಾರಣವಾಗುತ್ತದೆ.

   ನ್ಯಾಯಪಂಚಾಯತಿಯಲ್ಲಿ  ಮಹಿಳೆಯರಿಗೂ  ಸಮಾನ ಸ್ಥಾನ  ನೀಡುತ್ತಾರೆ.  ಮತ್ತು  ಅವರ ಅಭಿಪ್ರಾಯವನ್ನು  ಗೌರವಿಸುತ್ತಾರೆ.  ಪ್ರಾಚೀನ  ಕಾಲದಿಂದಲೂ  ಸ್ತ್ರೀಮರ್ಯಾದೆ  ಕಾಯುತ್ತ,  ಸಮಾನವಾಗಿ  ಅವಕಾಶ  ನೀಡುತ್ತ  ಬಂದ  ಬಂಜಾರಾ  ಸಮುದಾಯ  ಉಳಿದೆಲ್ಲ  ಸಮುದಾಯಕ್ಕೆ  ಮಾದರಿಯಾಗಿ  ನಿಲ್ಲುತ್ತದೆ.

    ಇಲ್ಲಿ  ಬರುವ   ಬಾಮಣಿಬಾಯಿ, ಗಂಗಾ, ಸುವಾ ಡೋಕರಿ, ರೂಪಲಿಬಾಯಿ, ಮುಂತಾದ ಸ್ತ್ರೀ ಪಾತ್ರಗಳು,  ಬಂಜಾರಾ  ಸಮುದಾಯದ  ಸಂಸ್ಕೃತಿ, ಮತ್ತು  ನೈತಿಕತೆಯ  ಶಕ್ತಿಯುತ  ಪ್ರತಿಮೆಗಳಾಗಿ  ಚಿತ್ರಣಗೊಂಡಿವೆ.

   ಹಾಗೆಯೇ  ಪುರುಷ ಪಾತ್ರಗಳಲ್ಲಿ,  ಕುತಂತ್ರಿಯಾಗಿ  ಧಂಜ್ಯಾ, ಲಕಮಣ್‌, ಗಮನಸೆಳೆದರೆ, ಧರಮಸಿಂಗ ನಾಯಕ, ಚಾಂಪ್ಲಾನಾಯಕ, ಸೋಮಲಾ, ಹೀರಾಸಿಂಗ್‌, ಖೇಮಾನಾಯಕ, ಮುಂತಾದವರು, ಅಶಿಕ್ಷಿತರಾಗಿಯೂ,ತಮ್ಮ  ಮಾತು  ವರ್ತನೆ, ಚಟುವಟಿಕೆಗಳ  ಮೂಲಕ  ಪ್ರಜ್ಞಾವಂತಿಕೆಯನ್ನು  ದರ್ಶಿಸುತ್ತಾರೆ.

    ನಸಾಬ್‌  ಪಂಚಾತ್‌    ಕ್ಷಣವನ್ನು, ಗ್ರಾಮೀಣ  ಸೌಂದರ್ಯದೊಂದಿಗೆ   ಕಲಾವಿದ ಬಿ.ಎಲ್‌ ಚವ್ಹಾಣ್‌ ರಿಂದ  ರಚಿತವಾದ  ಮುಖಪುಟ, ಆಕರ್ಷಕವಾಗಿದೆ.

   ಮುನ್ನುಡಿಯಲ್ಲಿ  ಹಾವೇರಿಯ  ಕವಿ  ಲೇಖಕ  ಸತೀಶ್‌ ಕುಲಕರ್ಣಿ, ಈವರೆಗೂ ಅಪರಿಚಿತವಾದ  ಜೀವನವಿಧಾನವೊಂದನ್ನು  ಲೇಖಕರು  ಸಮರ್ಥವಾಗಿ  ಪರಿಚಯಿಸಿದ್ದಾರೆ  ಎಂದು  ನುಡಿದರೆ. ಹಿನ್ನುಡಿಯಲ್ಲಿ  ಜನಮಾಧ್ಯಮ ಪತ್ರಿಕೆಯ  ಸಂಪಾದಕ  ಅಶೋಕ  ಹಾಸ್ಯಗಾರರು, ʻʻ ಕನ್ನಡದ  ಮಹಾನದಿಗೆ  ಸೇರುವ  ನಿಷ್ಕಲ್ಮಷ ತೊರೆʼʼ  ಎಂದು  ಶ್ಲಾಘಿಸಿದ್ದಾರೆ. ಧಾರವಾಡದ  ಲೇಖಕ  ಮಲ್ಲಿಕಾರ್ಜುನ  ಹಿರೇಮಠ ರವರು, ʻʻ ಆದರ್ಶ ಪ್ರಜಾಪ್ರಭುತ್ವದ  ದಾಖಲೆʼʼ ಎಂದು  ಮನತುಂಬಿ  ಹಾರೈಸಿದ್ದಾರೆ.

  ಪ್ರೊ- ಧರಣೇಂದ್ರ ಕುರಕುರಿ, ತಮ್ಮ  ಸುದೀರ್ಘ  ಬೆನ್ನುಡಿಯಲ್ಲಿ, ʻʻ ಸಂಭಾಷಣೆಯ  ಮೂಲಕವೇ  ಕಥನ ಸಾಗುತ್ತದೆ.  ಎಲ್ಲಿಯೂ  ಲೇಖಕರು  ಮೂಗು ತೂರಿಸುವುದಿಲ್ಲ.  ಹಾಗಾಗಿಯೇ  ಪ್ರತಿಯೊಂದು ಪಾತ್ರವೂ  ಜೀವಂತಿಕೆಯಿಂದ  ನಳನಳಿಸುತ್ತದೆ. ಪಾತ್ರಗಳು ಲೇಖಕನ  ಅಪ್ಪಣೆಗೆ ಕಾಯದೇ  ಸ್ವತಂತ್ರವಾಗಿ  ಕಾರ್ಯನಿರ್ವಹಿಸುತ್ತವೆʼʼ   ಎಂದಿದ್ದಾರೆ.

   ಒಟ್ಟಿನಲ್ಲಿ  ಡಾ||  ಪವಾರ್‌  ಗದ್ಯದಲ್ಲೂ  ತಮ್ಮ  ವೈಶಿಷ್ಟ್ಯವನ್ನು  ಮೆರೆದಿದ್ದಾರೆ.  ಕಾವ್ಯಕ್ಕಿಂತಲೂ  ಕಾದಂಬರಿಯಂತ  ಮಾಧ್ಯಮವನ್ನು  ಗದ್ಯಕಾವ್ಯವಾಗಿಸುವ  ಅವರ  ಪ್ರಯತ್ನ  ನಿಜಕ್ಕೂ  ಸಹೃದಯರ  ಗಮನಸೆಳೆಯುತ್ತದೆ.

  ತಾ೨೦-  ೬-೨೦೨೧                                                      ಸುಬ್ರಾಯ  ಮತ್ತೀಹಳ್ಳಿ.

-------------------------------------------------------------------------------

No comments:

Post a Comment