Thursday 21 September 2023

ಸಾರ್ವಕಾಲಿಕ ದಾರ್ಶನಿಕ ಪ್ರತಿಭೆ ʻʻ ಅಲ್ಲಮ ಪ್ರಭುʼʼ

 

           ʻʻಅಲ್ಲಮ ಪ್ರಭುʼʼ  ಎಂಬ    ಹೆಸರು  ಭಾರತೀಯ  ತತ್ವಾಕಾಶದಲ್ಲಿ  ಹೊಳೆ ಹೊಳೆವ  ಉಜ್ವಲ  ನಕ್ಷತ್ರ.  ಭಾರತೀಯ  ತತ್ವಶಾಸ್ತ್ರ  ಯೋಗಶಾಸ್ತ್ರ,  ಅಧ್ಯಾತ್ಮ  ವಿಜ್ಞಾನ   ಮತ್ತು  ಭಕ್ತಿಯನ್ನೆಲ್ಲ  ಎರಕ ಹೊಯ್ದ  ಸುವರ್ಣಮೂರ್ತಿ  ಅಲ್ಲಮ. ʻʻ ಕೆಂಡದಾ  ಗಿರಿಯಮೇಲೆ,  ಅರಗಿನ  ಕಂಬ  ನೋಡಾ,  ಅದರಮೇಲೊಂದು  ಹಂಸೆ  ಕೂತಿದೆ  ನೋಡಾ.   ಕಂಬ  ಉರಿದಿತ್ತು,  ಹಂಸೆ ಹಾರಿತ್ತು. ʼʼ  ಇದೊಂದು   ಅಲ್ಲಮ ಮಹಾ ಶರಣನ   ಸುಪ್ರಸಿದ್ಧ  ಉಕ್ತಿ.    ಕೆಂಡದುಂಡೆಯ  ಮೇಲಣ  ಉರಿವ  ಬದುಕನ್ನು  ಉಂಡು,  ಶಿರದಲ್ಲಿ  ಕುಳಿತ  ಜ್ಞಾನದ  ಹಂಸವನ್ನು   ಹಾರಿ  ಹೋಗದಂತೇ   ತನ್ನ  ದಾರ್ಶನಿಕ  ಮಾತುಗಳಲ್ಲಿ,  ಭದ್ರವಾಗಿ  ಹಿಡಿದಿಟ್ಟ   ಸಾಧಕ  ಅಲ್ಲಮ,  ಭಾರತೀಯ  ದಾರ್ಶನಿಕರಲ್ಲಿ,  ವಿಶಿಷ್ಟವಾಗಿ  ಮಿಂಚುತ್ತಾರೆ.   ಮಾನವ  ಬದುಕಿನ  ಶಕ್ತಿ  ದೌರ್ಬಲ್ಯ,  ನೋವು  ಹತಾಶೆ  ತಲ್ಲಣಗಳನ್ನೆಲ್ಲದರ   ಸಮೂಲಾಗ್ರ  ಅಧ್ಯಯನವನ್ನು,  ಒಬ್ಬ  ಶ್ರೇಷ್ಠ  ಮನೋವಿಜ್ಞಾನಿಯಾಗಿ,    ತನ್ನ  ಮಂತ್ರ ಸದೃಷ  ವಚನಗಳ ಮೂಲಕ, ಎರಕ ಹೊಯ್ದು   ಸಾರ್ವಕಾಲಿಕ  ಗುರುವಾಗಿ  ರಾರಾಜಿಸುತ್ತಿರುವ  ಅಲ್ಲಮ  ಪ್ರಭುವಿನ  ವಚನ  ಸಾಗರದಲ್ಲಿ  ಈಜಾಡುವುದೇ  ಅದೊಂದು  ರೋಮಾಂಚನದ  ಕ್ಷಣ. 

        ಹಲವು  ವರ್ಷಗಳಿಂದ   ಅಲ್ಲಮನ  ಒಗಟಿನಂತಹ   ಬೆಡಗಿನ  ವಚನಗಳನ್ನು,  ಓದುತ್ತಾ  ಆಸ್ವಾದಿಸುತ್ತಾ,  ಅರ್ಥವಾಗದೆಯೂ  ಬೆರಗು ಗೊಳ್ಳುತ್ತ,  ಬಿಟ್ಟರೂ  ಬಿಡದ  ಅಲ್ಲಮನ  ಚುಂಬಕತೆಯಿಂದ   ದೂರವಾಗದೇ  ಇರುವಾಗ,  ಇತ್ತೀಚೆಗೆ,  ಕನ್ನಡ  ಭಾಷೆಯಲ್ಲೇ  ಅತ್ಯಂತ  ಅಪರೂಪವಾದ,  ಅರ್ಥವಾಗದೇ  ಎಲ್ಲ  ಕಾವ್ಯಾಸಕ್ತರನ್ನು  ಕಾಡಿದ  ಅಲ್ಲಮ  ಆಧುನಿಕ  ಪರಿಭಾಷೆಯಲ್ಲಿ   ಯಶಸ್ವೀಯಾಗಿ   ಅರ್ಥಪೂರ್ಣವಾಗಿ  ಮೂಡಿ  ಬಂದಿದ್ದನ್ನು  ಕಂಡು ,   ದಿಗ್ಭ್ರಮೆಗೊಂಡೆ. 

      ಎರಡು  ದಶಕಗಳ  ಹಿಂದೆಯೇ   ಅಲ್ಲಮನ   ಆರುನೂರಕ್ಕೂ  ಮಿಕ್ಕ  ಅಪೂರ್ವ  ವಚನಗಳ,  ಭಾಷ್ಯ  ಮತ್ತು  ಸುಂದರ  ವ್ಯಾಖ್ಯಾನದ   ಬೃಹತ್‌  ಗ್ರಂಥವೊಂದು  ಕನ್ನಡದಲ್ಲಿ  ಪ್ರಕಟಗೊಂಡಿದ್ದರೂ   ನನ್ನ ತೆಕ್ಕೆಗೆ  ಸಿಗಲು  ಇಷ್ಟುವರ್ಷ  ಕಾಯಬೇಕಾಗಿ  ಬಂತಲ್ಲ  ಎಂದು  ಹಳಹಳಿಸಿದೆ.   ಅಂತಹ  ಒಂದು  ಅಪೂರ್ವ  ಕಾರ್ಯ   ವಿಜಾಪುರದ ದಿ. ಸ್ವಾಮಿ  ಸಿದ್ದೇಶ್ವರರಿಂದ  ಯಶಸ್ವೀಯಾಗಿ  ಸಿದ್ಧಿಸಿದೆ.   ಕನ್ನಡಿಗರ  ಪ್ರತಿ  ಮನೆಯಲ್ಲಿ  ಇರಬೇಕಾದಂತಹ   ಕ್ಷಣ ಕ್ಷಣಕ್ಕೆ  ಎಚ್ಚರಿಸುತ್ತಿರುವಂತಹ  ಅದ್ಭುತ  ಗ್ರಂಥವಾಗಿ  ಪ್ರಸ್ತುತ  ಕೃತಿ  ಅರಳಿಕೊಂಡಿದೆ.

      ಅಲ್ಲಮ,  ಹನ್ನೆರಡನೇ  ಶತಮಾನ  ಮಾನವ ಜಗತ್ತಿಗೆ  ನೀಡಿದ  ಮಹಾನ್‌ ಶೈವ ತತ್ವಜ್ಞಾನಿ.  ದೇಶವನ್ನೆಲ್ಲ  ಸುತ್ತಿ,  ಆಕಾಲದ  ಬೌದ್ಧ  ವೈದಿಕ  ಜೈನ  ಶೈವ  ಶಾಕ್ತ, ಪಂಥಗಳನ್ನೆಲ್ಲ  ಜೀರ್ಣಿಸಿಕೊಂಡು,  ದಶಕಗಳ ಕಾಲ,  ಕಾಶ್ಮೀರದಲ್ಲಿ  ವಾಸಿಸಿ,  ಅಲ್ಲಿಯ  ಅನುಭಾವೀ  ಸಾಹಿತ್ಯದಲ್ಲೂ  ಸಮರ್ಥವಾಗಿ  ದಾಖಲೆಗೊಂಡು,  ಮತ್ತೆ ತಾಯಿನೆಲಕ್ಕೆ  ಮರಳುತ್ತಾನೆ.   ತಾಯ್ನೆಲದ  ಆಡುಭಾಷೆಯಲ್ಲಿ  ಸಾವಿರಾರು  ವಚನಗಳ  ಮೂಲಕ   ಮಠೀಯತೆ,  ಮತೀಯತೆ,  ಅಹಂಕಾರ,  ದಾಷ್ಠ್ಯ,  ಭೃಷ್ಠತೆ, ಗಳಂತಹ  ಸಾಮಾಜಿಕ  ಸಾಂಸ್ಕೃತಿಕ  ಅನಿಷ್ಟಗಳ  ವಿರುದ್ಧ  ಸಾತ್ವಿಕ  ಸಮರವನ್ನೇ  ಸಾರುತ್ತಾನೆ.  ಆ ಕಾಲದ  ಸಾಮಾಜಿಕ  ವಾಸ್ತವ  ಇಂದಿನಕ್ಕಿಂತ  ಭಿನ್ನವಾಗಿಯೇನಿರಲಿಲ್ಲ. 

       ʻʻ ಲೋಕದವರನೊಂದು  ಭೂತ  ಹಿಡಿದಡೆ /  ಭೂತದಿಚ್ಛೆಯಲಿ  ನುಡಿವುತಿಪ್ಪರು.

            ಲಾಂಛನಧಾರಿ  ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ...?

      ಆನೆಯ  ಚೋಹವ  ತೊಟ್ಟು,  ನಾಯಾಗಿ  ಬೊಗಳುವ /, ಮಾನವರನೇನೆಂಬೆ  ಗುಹೇಶ್ವರಾ...?ʼʼ

   ಇಡೀ  ಪ್ರಪಂಚಕ್ಕೇ  ವಿಚಿತ್ರವಾದ  ಅಪಾಯಕಾರೀ  ಮತವೆಂಬ  ಭೂತವೊಂದು  ಆಕ್ರಮಿಸಿಕೊಂಡಿದೆ.     ಭೂತದ  ಅಮಲಿನಲ್ಲಿ,    ಭೂತದ  ವಿಚ್ಛಿದ್ರಕಾರೀ  ಆದೇಶಕ್ಕೆ  ಜ್ಞಾನಿಗಳೆಂಬುವವರೇ  ತಲೆಯೊಡ್ಡಿದ್ದಾರೆ.   ಜನಿವಾರ, ಶಿವದಾರ,  ವಿವಿಧ  ನಾಮಗಳೆಂಬ  ಲಾಂಛನಧಾರಿಗಳು  ತಮ್ಮ  ದುರಾಸೆಯಿಂದಲೇ  ಸಮಾಜವನ್ನು  ಘಾಸಿಗೊಳಿಸುತ್ತಿರುವ  ಪರಿಸ್ಥಿತಿಯ  ದುರಂತವನ್ನು  ಕಂಡ  ಅಲ್ಲಮ  ತಹತಹಿಸುತ್ತಾನೆ. ಆನೆಯ  ಪೋಷಾಕು  ಧರಿಸಿ,  ನಾಯಿಯಾಗಿ  ಬೊಗಳುತ್ತಿದ್ದಾರಲ್ಲ,    ಕೀಳು  ಮಾನವರು,  ಎಂದು  ಆಕ್ರೋಷಿಸುತ್ತಾನೆ.

   ಜ್ಞಾನದ  ಉಬ್ಬು ಕೊಬ್ಬಿನಲ್ಲಿ ಉಲಿವುತ್ತಿಪ್ಪವರೆಲ್ಲರು :

   ನಾಮ  ನಾಸ್ತಿಯಾಗದು, ತನುಗುಣ  ನಾಸ್ತಿಯಾಗದು

   ಕರಣಂಗಳು  ನಾಸ್ತಿಯಾಗವು, ಕರಸ್ಥಲ  ನಾಸ್ತಿಯಾಗದು,

   ಇದೆತ್ತಣ  ಉಲುಹೋ  ಗುಹೇಶ್ವರಾ....?

ಎಂದು ಕೇಳುತ್ತಾನೆ.   ನಮ್ಮ  ನೆಲದಲ್ಲಿ ಬುದ್ಧಿವಂತರಿಗೇನೂ ಕೊರತೆಯಿಲ್ಲ.  ಧಾರ್ಮಿಕ  ತಾತ್ವಿಕ ಆಧ್ಯಾತ್ಮಿಕ  ಶಾಸ್ತ್ರವನ್ನು  ಆಳವಾಗಿಯೇ  ಅಧ್ಯಯನ ಗೈದಿದ್ದಾರೆ. ಆದರೆ  ಸ್ವಮತ  ಮಂಡನದಲ್ಲಿ  ಪರಮತ ಖಂಡನದಲ್ಲಿ  ನಿರತರಾಗಿದ್ದಾರೆ.  ಅವರಿಗೆ  ಸತ್ಯವಾಗಲೀ  ತತ್ವವಾಗಲೀ  ಗೌಣ.  ಅವರಿಗೆ  ವಾದಜಯ,  ಮತ ಮಂಡನ, ಮಾತ್ರ  ಮುಖ್ಯ.   ಅದು  ಅವರ  ಅನುಭವಕ್ಕೆ  ಇಳಿಯದು.   ಇದೆಂತ  ಬೌದ್ಧಿಕ  ಲೋಕವೋ  ಗುಹೇಶ್ವರಾ...?  ಎಂದು  ಅಲ್ಲಮ  ಪರಿತಪಿಸುತ್ತಾನೆ.

     ʻʻ ಶಬ್ದವೇದಿಗಳೆಂದು  ನುಡಿದು  ನಡೆವರು  ನೋಡಾ !   ನಿಃಶಬ್ದ  ವೇದಿಸದಿದ್ದೊಡೆ  ಗುಹೇಶ್ವರ  ನೋಡಿ  ನಗುತ್ತಿಪ್ಪ  ನೋಡಾ ʼʼ

      ಎಲ್ಲೆಂದರಲ್ಲಿ,  ಜ್ಞಾನದ  ಅಹಂಕಾರದಲ್ಲಿ,  ಭಾಷಣ , ಬೋಧನೆ. ಶಬ್ದ ಸೂತಕ, ಶಬ್ದ ಮಾಲಿನ್ಯ.  ಗದ್ದಲ  ಗದ್ದಲ.!! ಇದೀಗ  ಅವಶ್ಯವಿರುವುದು, ನಿಃಶಬ್ದ.  ಶಾಂತವಾದ  ಮೌನ.  ಧ್ಯಾನಸ್ಥ ವಾತಾವರಣ.   ಇದನ್ಯಾರು  ಹೇಳಬೇಕು.  ಇದಕ್ಕೆಲ್ಲ  ಕೊನೆಯೆಲ್ಲಿ,,,,,?   ಗುಹೇಶ್ವರ  ಮಾತ್ರ  ನೋಡಿ  ನಗುತ್ತಿರಬೇಕು  ಅಲ್ಲವೇ ?  ಎಂದು  ಅಲ್ಲಮ  ಕೇಳುತ್ತಾನೆ.

ʻʻಬರಿಮಾತಿನ  ಉಯ್ಯಲೆಯನೇರಿ,  ಒದೆದು  ಒರಲಿ, ಕೆಡೆವ  ದರಿದ್ರರು, ಡಂಬಕವ  ನುಡಿವ  ಉದ್ದಂಡರ  ಗುಹೇಶ್ವರ  ಕಂಡಡೆ  ಕನಲುವʼʼ

    ಭೌತಿಕ  ವಿದ್ಯೆ  ಎಂಬುದು,  ಕೇವಲ  ವೈಭೋಗಕ್ಕಲ್ಲ,  ಬದುಕಿನ  ನಿಜದ  ಶೋಧಕ್ಕೆ  ಮೀಸಲಾಗಬೇಕು. ಸಮುದಾಯದಲ್ಲಿ  ವೈವಿಧ್ಯಮಯವಾದ,  ದೇವರು, ಮತಗಳು  ಸಿದ್ಧಾಂತಗಳು ಎಷ್ಟೇ  ಇದ್ದರೂ,  ಸಂಘರ್ಷವಾಗದೆ  ಸಮನ್ವಯಸಾಧಿಸಲು,  ವಿದ್ಯೆ  ಜ್ಞಾನ   ಸದುಪಯೋಗವಾಗ  ಬೇಕು.  ಸಮಾಜದ  ಜನರಲ್ಲಿಯ  ಅಜ್ಞಾನ   ಮೂಢ ನಂಬಿಕೆ,   ಆಧ್ಯಾತ್ಮಿಕತೆಯಿಲ್ಲದ  ಆಚಾರ,  ತೋರಿಕೆಯ  ಭಕ್ತಿ,  ಅಂತರಂಗದಲ್ಲಿ  ಕಪಟ   ವೈಭೋಗ,  ಹಣ  ಕೀರ್ತಿಯ  ಹಪಾಹಪಿ   ಅಂದೂ  ಇತ್ತು, ಇಂದೂ  ಇದೆ.  ಮನುಷ್ಯನ  ಹುಟ್ಟಿನ  ನಿಜವಾದ  ಉದ್ದೇಶವೇನು  ಎಂಬ  ಪ್ರಶ್ನೆಗೆ  ಉತ್ತರವಾಗಿ  ಪಡೆದ  ವಿದ್ಯೆ   ಅರಳಿಕೊಳ್ಳಬೇಕು  ಎಂಬ  ತೀವ್ರ  ತುಡಿತ  ಅಲ್ಲಮ  ಪ್ರಭುವಿನ ಲ್ಲಿ   ಜೀವಂತವಾಗಿತ್ತು.   ಹನ್ನೆರಡನೆಯ ಶತಮಾನದ  ಸಂದರ್ಭದಲ್ಲಿ  ಕಿಚ್ಚಾಗಿ  ಕಾಡುತ್ತಿದ್ದ,  ಶೈವ  ವೈಷ್ಣವ  ಸಂಘರ್ಷ ದ  ಆಟಾಟೋಪವನ್ನು  ಕಂಡುಂಡ  ಅಲ್ಲಮ,  ಆಗ  ಪ್ರಚಲಿತದಲ್ಲಿದ್ದ  ಎಲ್ಲ  ದಾರ್ಶನಿಕ  ಪ್ರವಾಹಗಳ  ವಿರುದ್ಧ  ಬಂಡಾಯವನ್ನೇ  ಹೂಡಿ,  ತನ್ನದೇ  ಆದ   ಮಾನವೀಯ  ಮಾರ್ಗವನ್ನು  ನಿರ್ಮಾಣ  ಮಾಡಿದ.  ಜಾತ್ಯತೀತವಾಗಿ,  ಸರ್ವರಿಗೂ   ಲೌಕಿಕ  ಜೀವನದಲ್ಲೇ  ದೇವರನ್ನು  ತಲುಪುವ   ಶೈವ ಸಿದ್ಧಾಂತದ  ಹೆದ್ದಾರಿಯನ್ನೇ  ನೀರ್ಮಿಸಿದ.  ಸಾಂಪ್ರದಾಯಿಕವಾದ  ಅಂಧಶೃದ್ಧೆಯನ್ನು  ತಿರಸ್ಕರಿಸಿದ.   ಮತೀಯ  ತಾರತಮ್ಯ  ಶ್ರೇಣೀಕರಣ,   ಧಾರ್ಮಿಕ  ಡಾಂಭಿಕತೆ,  ಆಚರಣೆಗಳ ಸರಳೀಕರಣ,   ಸಾಮಾಜಿಕ ಸುಧಾರಣೆ,  ವೈಯಕ್ತಿಕ  ಜಾಗ್ರತಿ,   ಮುಂತಾದ   ಕ್ರಾಂತಿಕಾರಕ  ಬದಲಾವಣೆಗಳಿಗೆ  ಶ್ರಮಿಸಿದಂತಹ   ಅನುಭಾವಿ,   ನಮ್ಮ  ದೇಶದಲ್ಲಿ  ಮತ್ತೊಬ್ಬ  ಸಿಗಲಾರ.  ಅಲ್ಲಮ  ರೂಪಕಗಳ  ಸಾಮ್ರಾಟ.  ಕೇವಲ  ಕವಿಸಮಯದ  ಅಮೂರ್ತ  ಪ್ರತಿಮೆಗಳ  ಬದಲು  ನಿಜ ಜೀವನದ  ದೃಷ್ಟಾಂತಗಳನ್ನೇ  ರೂಪಕವಾಗಿಸಿ,  ಪ್ರತಿಮೆಗಳನ್ನು  ಸೃಷ್ಟಿಸಿ,  ಸಾಮಾನ್ಯರಲ್ಲೂ  ಆಧ್ಯಾತ್ಮಿಕ  ಜ್ವಾಲೆಯನ್ನು  ಉದ್ದೀಪಿಸಿದವ   ಮುಂದಿನೆಲ್ಲ  ಕವಿಗಳ ಮೇಲೆ  ಗಾಢ  ಪ್ರಭಾವ  ಬೀರಿದವ.  ದೇವಾಲಯ  ಸಂಸ್ಕೃತಿಯ  ಬದಲಾಗಿ, ದೇಹವೇ  ದೇವಾಲಯ ವೆಂಬ, ಉಪನಿಷತ್‌  ಸಿದ್ಧಾಂತವನ್ನು,  ಜನತೆಯ  ಹೃದಯದಲ್ಲಿ  ಬಿತ್ತಿ  ಬೆಳೆದವ.

 ʻʻಬಯಲು  ಬಯಲನೆ  ಬಿತ್ತಿ, ಬಯಲು  ಬಯಲನೆ  ಬೆಳೆದು,

ಬಯಲು  ಬಯಲಾಗಿ  ಬಯಲಾಯಿತ್ತಯ್ಯ./ಬಯಲ ಜೀವನ, ಬಯಲ  ಭಾವನೆ,

ಬಯಲು  ಬಯಲಾಗಿ  ಬಯಲಾಯಿತ್ತಯ್ಯ./  ನಿಮ್ಮ  ಪೂಜಿಸಿದವರು  ಮುನ್ನವೇ  ಬಯಲಾದರು.

ನಾ  ನಿಮ್ಮ  ನಂಬಿ  ಬಯಲಾದೆ   ಗುಹೇಶ್ವರಾ. ʼʼ

 ಅಲ್ಲಮನಿಗೆ  ಅತ್ಯಂತ  ಪ್ರೀತಿಯ  ಪ್ರತಿಮೆ  ಬಯಲು.   ಅಂತರಂಗದ  ಅಜ್ಞಾನದ  ಕಶ್ವಲವನ್ನು, ಗಾಢ  ಕತ್ತಲೆಯನ್ನು   ಚೊಕ್ಕಗೈದು  ಬಯಲಾಗಬೇಕು.  ಮನಸ್ಸು  ಹತ್ತು  ಹಲವು  ಲೌಕಿಕ  ಮೋಹ   ಸುಖಾಭಿಲಾಷೆ,  ಕಾಮದಾಹ ಗಳನ್ನೆಲ್ಲ  ನಾಶ  ಪಡಿಸಿ  ಶುದ್ಧಗೊಂಡರೆ  ಮಾತ್ರ  ದೇವರು  ದೊರಕಿಯಾನು   ಎಂದು  ಘೋಷಿಸುವ  ಅಲ್ಲಮ,  ಕಾಶ್ಮೀರದಿಂದ  ಕನ್ಯಾಕುಮಾರಿಯ  ವರೆಗೂ  ತನ್ನ  ಆಧ್ಯಾತ್ಮಿಕ   ಬೆಳಕನ್ನ  ಬೀರಿದವ.  ತನ್ನ  ಕಾಲದ  ಸಂಸ್ಕೃತ  ಪ್ರಾಕೃತ  ಮತ್ತು  ಭಾರತೀಯ  ಎಲ್ಲ ಭಾಷೆಗಳಲ್ಲಿಯೂ  ಪರಿಣತನಾದ  ಆತ,  ತನ್ನೆಲ್ಲ  ಸಾಧನೆಯನ್ನು  ಸರಳ  ಸುಂದರ  ಕಾವ್ಯದ  ಮೂಲಕ  ದಾಖಲಿಸಿದ.  ವಿಶ್ವ ಸಾಹಿತ್ಯಕ್ಕೆ  ಸರಿಹೆಗಲಾದ  ಅಲ್ಲಮನ  ವಚನಗಳು,  ಕೇವಲ  ಕನ್ನಡ ಭಾಷಾ ಮಿತಿಯಲ್ಲೇ  ಉಸಿರಾಡುವಂತಾದುದು  ವಿಷಾದನೀಯ.

       ಕವಿಯ  ವ್ಯಾಖ್ಯಾನಕಾರರಾದ   ಸ್ವಾಮಿ  ಸಿದ್ದೇಶ್ವರರು   ಕವಿಯ ಬಗೆಗೆ  ಉದ್ಘರಿಸಿದ  ನುಡಿಗಳನ್ನು  ಇಲ್ಲಿ  ದಾಖಲಿಸಲೇ  ಬೇಕು.

            ʻʻಅಲ್ಲಮನ  ವಚನಗಳು  ಸಾವಿರಾರು. ಆಳಕ್ಕೆ ಆಳ, ವಿಸ್ತಾರಕ್ಕೆ  ವಿಸ್ತಾರ, ಎತ್ತರಕ್ಕೆ ಎತ್ತರ,   ಮಾತಿಂಗೆ  ಮೀರಿದ  ಅನುಭೂತಿ, ಅದಕ್ಕೆ  ತಕ್ಕ  ಭಾಷೆ, ಶಬ್ದಂಗಳಲ್ಲಿ  ಸೊಬಗು-ಸವಿ.  ಅಭಿವ್ಯಕ್ತಿಯಲ್ಲಿ  ಅಲಂಕಾರ, ಬೆಡಗು  ಬಿನ್ನಾಣ.  ಸುಂದರ ರೂಪಕಗಳು, ಸು ಸೂಚ್ಯವಾದ  ಚಿತ್ರಕ ಶಕ್ತಿ,  ಮಂತ್ರ ಮುಗ್ಧರಾಗುವಂಥ   ಕಥನ ವೈಖರಿ, ತತ್ವಜ್ಞಾನ, ತತ್ವಾನುಭವ,  ಜೊತೆಗೆ  ಕಾವ್ಯಮಾಧುರ್ಯಗಳೆಲ್ಲ  ಸಂಗಮಗೊಂಡು, ಒಂದಾಗಿ  ಹರಿದಿವೆ  ಅಲ್ಲಮನ  ನುಡಿಗಡಣದಲ್ಲಿʼʼ

 

       ಸ್ವಾಮಿಯವರ   ವಚನಗಳ,  ತಾತ್ವಿಕ  ಅನುಸಂಧಾನದ  ನೆಳಲಲ್ಲಿ,  ಸಮಕಾಲೀನ  ವಿದ್ವಾಂಸರು  ಅಲ್ಲಮನಿಗೆ  ನೀಡಿದ  ಹಿರಿಮೆಯನ್ನು  ಉದಹರಿಸುತ್ತಾರೆ.

      ʻʻ  ಘನಕ್ಕೆ  ಘನಮಹಿಮ, ಭುವನ ಹದಿನಾಲ್ಕರೊಳಗೆ  ಪರಿಪೂರ್ಣ  ನಿರಂಜನ  ಜ್ಯೋತಿ,  ಅನುಪಮ ಚರಿತ,  ಬಟ್ಟ ಬಯಲು  ಗಟ್ಟಿಗೊಂಡ  ನಿಲುವು,  ಮಾತಿಂಗೆ ಅಳವಡದ  ಮಹಿಮ, ಸ್ಥೂಲ ಕಂಥೆ,  ಸೂಕ್ಷ್ಮ ಟೊಪ್ಪರ,  ಸತ್ಯ ದಂಡ, ಶಾಂತಿ ಭಸಿತ,  ಸುಚಿತ್ತ ಮಣಿ, ತತ್ವ ಕರ್ಪುರ, ವೈರಾಗ್ಯ  ಹಾವುಗೆ, ದೃಢ  ಮನವು  ಕೌಪೀನ,  ಆಚಾರವೇ  ಕಂಕಣ, ಕ್ಷಮೆ  ದಮೆಯೇ  ಕರ್ಣಕುಂಡಲ,  ಜಗತ್ಪಾವನ  ಮೂರ್ತಿ ʼʼʼ 

     ಇನ್ನೂ  ನೂರಾರು  ಉದ್ಗಾರಗಳು,  ನಂತರದ  ಶತಮಾನಗಳಲ್ಲಿ,  ಅಲ್ಲಮನ  ಬಗೆಗೆ  ಪ್ರಶಂಸಾರೂಪವಾಗಿ  ಹರಿದು  ಬಂದವು.   ಎಂಟು ನೂರು  ವರ್ಷ ಗತಿಸಿದರೂ  ಅಲ್ಲಮ  ಮತ್ತೆ ಮತ್ತೆ  ಜೀವ  ಪಡೆದು  ಮುನ್ನುಗ್ಗುತ್ತಿದ್ದಾನೆ.   ಆಂಗ್ಲಭಾಷೆಗೆ  ಅನುವಾದ  ಗೊಂಡಮೇಲಂತೂ  ವಿದೇಶೀ  ವಿದ್ವಾಂಸರನ್ನೂ  ಆಕರ್ಷಿಸಿ,   ವಚನಸಾಗರಕ್ಕೆ  ಆಹ್ವಾನಿಸುತ್ತಿದ್ದಾನೆ.

      ಅಲ್ಲಮನ  ಬದುಕಿನ  ಬಗೆಗೆ  ಹೆಚ್ಚು ವಿವರಗಳು  ದೊರಕುವುದಿಲ್ಲವಾದರೂ,  ಶಿವಮೊಗ್ಗಾ ಜಿಲ್ಲೆಯ  ಬಳ್ಳಿಗಾವಿಯ   ಮದ್ದಲೆ ಕಲಾವಿದನಾಗಿದ್ದ  ಎಂಬುದು, ಈವರೆಗೆ   ನಂಬಿಕೊಂಡಿದ್ದರೂ,  ಇತ್ತೀಚಿನ  ಒಂದು  ಸಂಶೋಧನೆಯ  ಪ್ರಕಾರ,  ಅಲ್ಲಮ  ಉತ್ತರಕನ್ನಡ  ಜಿಲ್ಲೆಯ   ಕರೂರು  ಎಂಬ  ಹಳ್ಳಿಯಲ್ಲಿ  ಜನಿಸಿದ್ದ  ಎಂಬ  ವಾದವೂ  ಇದೆ.   ಅಪ್ರತಿಮ  ಮೃದಂಗ  ಕಲಾವಿದನಾಗಿದ್ದ  ಅಲ್ಲಮ  ಬನವಾಸಿಯ  ಮಧುಕೇಶ್ವರ  ದೇವಾಲಯದಲ್ಲಿ  ಸಂಗೀತ  ಸೇವೆ  ಸಲ್ಲಿಸುತ್ತಿದ್ದನಂತೆ.  ಅವನ  ಕಲಾಪ್ರೌಢಿಮೆಯ  ಮೋಡಿಗೆ  ಮರುಳಾದ  ಸುಂದರ  ನರ್ತಕಿ,  ಅಲ್ಲಮನನ್ನು  ಪ್ರೇಮಿಸಿ,  ಅವನನ್ನೇ  ಮದುವೆಯಾಗುತ್ತಾಳೆ.  ಅಲ್ಲಮನೂ  ಜೀವಕ್ಕಿಂತ  ಹೆಚ್ಚಾಗಿ  ಪ್ರೀತಿಸುತ್ತಾನೆ.  ಆದರೆ  ಐದಾರು  ತಿಂಗಳಲ್ಲೇ  ಅನಾಮಿಕ  ರೋಗಕ್ಕೀಡಾಗಿ  ಅನಿರೀಕ್ಷಿತವಾಗಿ  ಮರಣಹೊಂದುತ್ತಾಳೆ.   ಅಲ್ಲಮ  ಅದೆಷ್ಟು  ದುಃಖಕ್ಕೀಡಾದನೆಂದರೆ,  ಆತ್ಮಹತ್ಯೆಗೂ  ಪ್ರಯತ್ನಿಸಿದ.  ವೃತ್ತಿ  ಬಿಟ್ಟು  ಅಲೆಮಾರಿಯಾದ.  ಅನಿಮಿಷ ರೆಂಬ  ಗುರುವಿನ  ಪ್ರಭಾವದಲ್ಲಿ,  ಆಧ್ಯಾತ್ಮಿಕತೆಯ   ಅಂಗಳಕ್ಕೆ  ಪ್ರವೇಶಿಸಿದ.   ಕಾಶ್ಮೀರಕ್ಕೂ  ಸಾಗಿ  ಶೈವತತ್ವಜ್ಞಾನದ  ಮೇರು  ಪ್ರತಿಭೆಯಾಗಿ,   ಕನ್ನಡದ  ಮಣ್ಣಿಗೆ  ಮರಳಿ,  ಬಸವಣ್ಣನ  ಅನುಭವ  ಮಂಟಪದ  ಅಧ್ಯಕ್ಷನಾಗಿ,  ಸಾಮಾಜಿಕ  ಸಾಂಸ್ಕೃತಿಕ  ವೈಚಾರಿಕ,  ಮತ್ತು  ತಾತ್ವಿಕತೆಯ   ಮೇರು ಪರ್ವತವಾಗಿ  ಬೆಳೆದು  ಬಾಳಿದ.

 

      ಸರಳವಾಗಿ  ಸಂವಹನ  ಸಾಧಿಸುವ  ಅಲ್ಲಮನ    ಸುದೀರ್ಘ  ವಚನದ  ಆಯ್ದ ಭಾಗವೊಂದನ್ನು  ಉದಾಹರಣೆಯಾಗಿ  ನೀಡುತ್ತ,     ಪ್ರಸ್ತುತ  ಆಧುನಿಕ  ಬದುಕಿನ  ಮಹಾ  ಮಾಯೆಯಲ್ಲಿ  ತೇಲುತ್ತಿರುವ  ಕಾವ್ಯಪ್ರೇಮಿಗಳ   ಗಮನಕ್ಕೆ  ಅಲ್ಲಮನ  ತಾತ್ವಿಕ  ಹೂಮಾಲೆಯ ನ್ನು   ಸೂಸುತ್ತಿದ್ದೇನೆ.

 

         ʻʻ ಕಾಯವೆಂಬ  ಮಹಾಕದಳಿಯ ಗೆಲ್ಲಬಲ್ಲವರನಾರನೂ  ಕಾಣೆ / ಸಂಸಾರವೆಂಬ  ಸಪ್ತಸಮುದ್ರ ಬಳಸಿ  ಬಂದಿಪ್ಪವು /

 ಭವವೆಂಬ  ಮಹಾರಣ್ಯದೊಳು / ಪಂಚೇಂದ್ರಿಯವೆಂಬ  ವಿಷಯದ  ಮಳೆ  ಸುರಿವುತಿಪ್ಪುದು./  ಕೋಪವೆಂಬ  ಪೆರ್ಬುಲಿ  ಮೊರೆಯುತಿರ್ಪುದು,/  ಅಷ್ಟಮದವೆಂಬ  ಮದಗಜಂಗಳು ಬೀದಿವರಿಯುತಿರ್ಪವು, /

      ಕಾಮವೆಂಬ  ಕೆಂಡದ ಮಳೆ  ಅಡಿಯಿಡುತಿಪ್ಪುದು,/ ಮತ್ಸರವೆಂಬ  ಮಹಾಸರ್ಪಂಗಳು, ಕಿಡಿಯನುಗುಳು  ತಿಪ್ಪವು /   ಆಸೆಯೆಂಬ  ಪಾಪಿಯ ಕೂಸು  ಹಿಸಿ ಹಿಸಿ  ತಿನ್ನುತಿಪ್ಪುದು /     ತಾಪತ್ರಯವೆಂಬ ಮೂರಂಬಿನ  ಸೋನೆ  ಸುರಿಯುತಿಪ್ಪುದು /   ಅಹಂಕಾರವೆಂಬ  ಗಿರಿಗಳು  ಅಡ್ಡ ಬಿದ್ದಿಪ್ಪವು /  ಮಾಯೆಯೆಂಬ  ರಕ್ಕಸಿ  ಹಸಿಯ ತಿನ್ನುತಿಪ್ಪಳು,/

       ವಿಷಯವೆಂಬ  ಕೂಪವ  ಬಳಸ ಬಾರದು./  ಮೋಹವೆಂಬ ಬಳ್ಳಿ  ಕಾಲು  ಕುತ್ತಬಾರದು /

ಲೋಭವೆಂಬ  ಮಸೆದೊಡಾಯುಧವನು  ಒಡೆಯುಚ್ಚಬಾರದು./

         ಇಂತಪ್ಪ  ಕದಳಿಯ  ಹೊಗಲರಿಯದೇ /  ದೇವ ದಾನವ  ಮಾನವರೆಲ್ಲ  /  ಮತಿಗೆಟ್ಟು  ಮರುಳಾಗಿ  ಹೆರೆದೆಗೆದು  ಓಡಿದರು./

 

      ನಮ್ಮ  ದೇಹ  ಬಾಳೆಯ  ವನದಂತೆ.  ಮೃದು ಸೂಕ್ಷ್ಮ.  ಅಲ್ಪ ಕಾಲಿಕ.  ಹುಟ್ಟಿನ  ಹಿಂದೆ  ಸಾವಿನ  ಆಚೆ,  ಯಾರೂ  ಕಂಡಿಲ್ಲ.  ನಡುವಣ  ಅಲ್ಪಕಾಲದಲ್ಲಿ   ಆಕ್ರಮಿಸಿ  ಕಾಡುವ  ಅಸಂಖ್ಯ  ದೌರ್ಬಲ್ಯಗಳು,  ಸುಂದರ  ಬದುಕನ್ನೇ  ರಣಾಂಗಣವಾಗಿಸುವ  ಪರಿಯನ್ನು  ಕಂಡು  ಅಲ್ಲಮ  ಬೆರಗಾಗಿದ್ದಾನೆ.    ಪುಟ್ಟ ಬದುಕಿನ  ಅವಧಿಯನ್ನೂ  ಸಹ್ಯವಾಗಿಸಲು  ಸೋಲುವ  ಸಮುದಾಯ  ಕಂಡು  ಕನಲಿದ್ದಾನೆ. 

ಬದುಕು  ಸಹ್ಯವಾಗಲು,  ಶಾಂತಿ  ಸೌಹಾರ್ದ ನೆಲೆಸಲು,  ಶುದ್ಧ ಸ್ವಚ್ಛ ಮನಸ್ಸು,  ನೈತಿಕತೆಯ  ಅನುಷ್ಠಾನ,  ಮತ್ತು  ಆಧ್ಯಾತ್ಮಿಕ  ವ್ಯಕ್ತಿತ್ವ  ಮಾತ್ರ   ಮಾನವ  ಜಗತ್ತನ್ನು  ಜೀವಂತವಾಗಿ  ಇಡಬಲ್ಲದು  ಎಂಬ  ಮಾನವೀಯ  ಆಶಯವನ್ನು  ಬಿತ್ತರಿಸಿ,  ಕದಳೀ ವನದಲ್ಲಿ   ಲೀನವಾದ  ಅಲ್ಲಮ  ನಮ್ಮ  ಕನ್ನಡದ   ಮಹಾನ್‌  ಚಿಂತಕ  ಎಂಬುದು,  ನಮ್ಮ  ಹೆಮ್ಮೆ.

 

 

                                                                                ಸುಬ್ರಾಯ  ಮತ್ತೀಹಳ್ಳಿ.  ತಾ- ೨೦-೯- ೨೩.  

 

No comments:

Post a Comment