Tuesday 26 September 2023

ಸಂಸ್ಕೃತಿಯ ಕಣಜ - ಉತ್ತರ ಕನ್ನಡ ಜಿಲ್ಲೆ

 

ʻʻಒಂದು  ಬದಿ  ಸಹ್ಯಾದ್ರಿ, ಒಂದು ಬದಿ  ಕಡಲು./

ನಡು  ಮಧ್ಯದಲಿ  ಅಡಕೆ, ತೆಂಗುಗಳ  ಮಡಿಲು.  

ಸಿರಿಗನ್ನಡದ  ಚಪ್ಪರವೇ  ನನ್ನ  ಜಿಲ್ಲೆ /

ಇಲ್ಲಿಯೇ  ಮತ್ತೊಮ್ಮೆ  ಹುಟ್ಟುವೆನು  ನಲ್ಲೆʼʼ  ( ದಿನಕರ  ದೇಸಾಯಿ )  

              

 ʻʻ ಆರಂಕುಸವಿಟ್ಟೊಡಂ   ನೆನೆವುದೆನ್ನ  ಮನಂ   ಬನವಾಸಿ  ದೇಶಮಂ. ʼʼ    ಎಂದು  ಉದ್ಗೋಷಿಸಿದ್ದ   ಮಹಾಕವಿ  ಪಂಪನ    ಮನೋಭಿತ್ತಿಯ ಮೇಲೆ   ಉತ್ತರ ಕನ್ನಡ  ಜಿಲ್ಲೆಯ  ಸಮೃದ್ಧ   ಪ್ರಕೃತಿ   ಆಳವಾಗಿ   ಅಚ್ಚೊತ್ತಿತ್ತು.   ವರಕವಿ  ಬೇಂದ್ರೆ   ಜಿಲ್ಲೆಯ   ಸುಂದರ  ಕರಾವಳಿಗೆ   ಆಗಮಿಸಿ   ವಿಶಾಲ  ಸಮುದ್ರದೆದುರು  ನಿಂತು   ʻʻ ಇದು  ಉಪ್ಪು  ನೀರ  ಕಡಲಲ್ಲೋ,  ನಮ್ಮೊಡಲಲ್ಲೂ  ಇದರ  ನೆಲೆಯು ʼʼ  ಎಂದು  ಉದ್ಗರಿಸಿದ್ದರು.

           ಹನ್ನೆರಡನೇ  ಶತಮಾನದಲ್ಲಿ,  ವಚನಸಾಹಿತ್ಯದ  ಅಗ್ರಗಣ್ಯ,  ಬಸವಣ್ಣನ  ಅನುಭವ ಮಂಟಪದ  ಅಧ್ಯಕ್ಷ,  ಅನುಭಾವಿ, ಮತ್ತು  ಆಧ್ಯಾತ್ಮಿಕ  ಕವಿ  ಅಲ್ಲಮ ಪ್ರಭು, ಉತ್ತರ ಕನ್ನಡ  ಜಿಲ್ಲೆಯ  ಮಹಾನ್‌  ಪ್ರತಿಭೆ, ಎಂಬುದು  ಇತ್ತೀಚೆಗೆ ಸಂಶೋಧಿತ  ಗೊಂಡ,  ರೋಮಾಂಚಕಾರೀ  ಸಂಗತಿ.  ಆತ  ಶಿರಸಿ ತಾಲೂಕಿನ  ಕರೂರು  ಎಂಬ  ಊರಿನವನಾಗಿದ್ದ, ಎಂಬುದನ್ನು  ನಮ್ಮ  ಅರಿವಿಗೆ  ತಂದವರು,  ದಿ.  ಎಂ.ಎಂ  ಕಲ್ಬುರ್ಗಿಯವರು.   ಅಲ್ಲಮ  ಪ್ರಭು  ಇಲ್ಲಿಯೇ  ಜನಿಸಿ,     ಮೃದಂಗವಾದಕನಾಗಿ,  ನಂತರದಲ್ಲಿ  ಅನುಭಾವಿಯಾಗಿ   ಕನ್ನಡ  ಹೃದಯದಲ್ಲಿ  ಆಧ್ಯಾತ್ಮಿಕ  ಅನುಭೂತಿಯನ್ನು  ಸೃಷ್ಟಿಸಿದ  ಮಹಾನ್‌  ಸಾಧಕ.ʻʻ

        ಕನ್ನಡದ  ಮೊದಲ  ಮಹಾ  ಸಾಮ್ರಾಟನಾದ  ಮಯೂರ ವರ್ಮ,    ಮಣ್ಣಿನ   ಅಸಾಮಾನ್ಯ  ಆಡಳಿತಗಾರ.  ನಂತರದಲ್ಲಿ  ಸಾಕಷ್ಟು  ರಾಜರು  ಸಂಸ್ಥಾನಿಕರು, ಆಳಿದರು  ಅಳಿದರು.  ಸೋದೆಅರಸರು,  ಚನ್ನಭೈರಾದೇವಿ, ಮುಂತಾದ  ಆಳರಸರು, ಸುದೀರ್ಘಕಾಲ  ಆಳಿ  ಇತಿಹಾಸದಲ್ಲಿ  ಛಾಪು  ಮೂಡಿಸಿದರು.  

        ವಿಜಯನಗರ  ಸಾಮ್ರಾಜ್ಯದ  ಸಂಸ್ಥಾಪಕರಾದ   ಶ್ರೀ  ವಿಜಯ ವಿದ್ಯಾರಣ್ಯರು,  ಇದೇ  ಜಿಲ್ಲೆಯ  ಹೊನ್ನಾವರ  ತಾಲೂಕಿನ,  ಮಹದೇವ  ಭಟ್ಟ, ಎಂಬ   ತಪಸ್ವಿಯಾಗಿದ್ದರು,  ಶ್ರಂಗೇರಿ  ಸಂಸ್ಥಾನದಲ್ಲಿ, ಸನ್ಯಾಸ  ದೀಕ್ಷೆ  ಪಡೆದು  ವಿಜಯವಿದ್ಯಾರಣ್ಯ  ಎಂದು  ಹೆಸರಾಗಿದ್ದರು, ಎಂಬುದು, ಕೆಲವು  ಸಂಶೋಧಕರ  ಅಭಿಪ್ರಾಯ, ಇನ್ನಷ್ಟು ಖಚಿತ  ವಿವರಗಳನ್ನು  ಹೊಂದಬೇಕಾಗಿದೆ.

         ಆದರೆ  ಬ್ರಿಟಿಶ್‌  ಆಡಳಿತ  ಪ್ರಾರಂಭವಾದ  ಹತ್ತೊಂಭತ್ತನೆಯ   ಶತಮಾನದ  ಪೂರ್ವಾರ್ಧದ   ನಂತರದ   ಕರ್ನಲ್‌  ಮೆಕೆಂಝಿ,   ಬುಕಾನಿನ್‌,   ಮುಂತಾದ   ಸಂಶೋಧಕರ  ಕೈಫಿಯತ್ತು,  ಮತ್ತು  ಸಂಶೋಧನಾ  ವರದಿಗಳಲ್ಲಿಯ  ಕೆಲವು  ವಿವರಗಳನ್ನು  ಬಿಟ್ಟರೆ, ಅದಕ್ಕೂ  ಹಿಂದಿನ   ಸಾಂಸ್ಕೃತಿಕ  ವಿವರಗಳು  ನಮಗೆ  ಸಿಗುತ್ತಿಲ್ಲ.    ನಂತರ  ಇಪ್ಪತ್ತನೆಯ  ಶತಮಾನದ   ಮಧ್ಯಭಾಗದಲ್ಲಿ,  ನಮ್ಮ  ಜಿಲ್ಲೆಯ   ಹತ್ತಾರು   ಸಂಸ್ಕೃತಿ  ಶೋಧಕರು,  ವಿ.ವೇ.ತೊರ್ಕೆ,  ಮ.ಗ.ಶೆಟ್ಟಿ,  ಜಿ.ಆರ್‌  ಹೆಗಡೆ,  ಎಲ್.ಆರ್.‌ ಹೆಗಡೆ,  ಎನ್.ಆರ್‌  ನಾಯ್ಕ,  ಶಾಂತಿ  ನಾಯ್ಕ,  ಶಾಲಿನಿ  ಹೆಗಡೆ, ಎಲ್‌  ಜಿ. ಭಟ್‌,  ವಿ.ಗ.ನಾಯ್ಕ, ಮುಂತಾದವರು  ಜಿಲ್ಲೆಯ   ಕಲೆ, ಜಾನಪದಗಳ  ತಲಸ್ಪರ್ಶೀ  ಅಧ್ಯಯನಗಳ  ಮೂಲಕ    ನಮ್ಮ  ಉತ್ತರಕನ್ನಡದ  ಅನನ್ಯತೆಯನ್ನು  ಬಿಂಬಿಸಲು  ಪ್ರಯತ್ನಿಸಿದ್ದು  ನಿಜಕ್ಕೂ  ಅಭಿನಂದಾರ್ಹ  ಸಂಗತಿ.

         ನಮ್ಮ  ಜಾನಪದರೇನೂ  ಕಡಿಮೆಯಿಲ್ಲ.  ಶಿಷ್ಟ  ಸಂಸ್ಕೃತಿಯ   ನೂರಾರು ದೇವರು ಮತ್ತು  ದೇವಾಲಯಗಳಿದ್ದರೂ   ನಮ್ಮ  ಜನಪದ   ತಾಯಿ,   ಮುಂಜಾನೆಯೆದ್ದು,  ನೆನೆಯುವುದು   ಭೂ  ತಾಯಿಯನ್ನ. 

                         ಬೆಳಗಾಗಿ  ನಾನೆದ್ದು  ಯಾರ್ಯಾರ  ನೆನೆಯಾಲಿ

                         ಯಳ್ಳು  ಜೀರಿಗೆ  ಬೆಳೆಯೋಳ/ ಭೂಮ್ತಾಯಿ

                          ಎದ್ದೊಂದು  ಗಳಿಗೆ  ನೆನೆದೇನು.

                    ಕೃಷಿ    ಇದು  ಕೇವಲ  ಜೀವನ  ಮಾರ್ಗವಲ್ಲ. ಸಂಸ್ಕೃತಿಯ ಜೀವಕೋಶ.  ಶತ ಶತಮಾನಗಳ  ಮಾನವನ   ಏಳು  ಬೀಳು  ಪ್ರಗತಿ  ವಿಕಾಸದ   ಅಮೂಲ್ಯ  ಧಾಖಲೆ.  ಹಸಿರಿನೊಂದಿಗೆ  ಒಡನಾಟ.  ಭೂಮಿ, ನೀರು, ಗಾಳಿ,  ಬೆಂಕಿ,  ರೋಗ  ರುಜಿನಗಳೊಂದಿಗಿನ   ಬದುಕು.   ಅದೇ  ಕಾರಣಕ್ಕೆ  ಕನ್ನಡ  ಜನಪದ   ಮುಂಜಾವಿನ   ಮೊದಲ ಉದ್ಗಾರವಾಗಿ   ನೆನೆಯುವುದು,  ಇದೇ  ಭೂಮಿಯನ್ನ.  ಇದೇ  ಮಣ್ಣನ್ನ.   ಅದೆಷ್ಟು  ಅರ್ಥಪೂರ್ಣ  ಉದ್ಗೋಷ,,,!!  ಭೂಮಿತಾಯಿ   ಎಳ್ಳು  ಮತ್ತು  ಜೀರಿಗೆಯನ್ನು  ಬೆಳೆಯುತ್ತಾಳೆ. ಎಂಬ  ಪ್ರಸ್ಥಾಪ  ಮೊದಲೇ  ಬರುತ್ತದೆ.   ಅದೇಕೆ  ಉಳಿದ  ಧಾನ್ಯ,  ಹಣ್ಣು  ಹಂಪಲುಗಳನ್ನು  ಧ್ಯಾನಿಸಲಿಲ್ಲ,,?   ಜೀರಿಗೆ  ಹುಟ್ಟಿನ  ಸಂಕೇತ.    ಜನಿಸಿದ  ಕೂಡಲೇ  ಮಗುವಿನ  ಬಾಯಿಗೆ  ಜೀರಿಗೆ  ನೀರನ್ನು  ಬಿಡಲಾಗುತ್ತದೆ.   ಸಾವು  ಸಂಭವಿಸಿದ  ಕೂಡಲೇ  ಎಳ್ಳು  ನೀರನ್ನು  ಸತ್ತವರ  ಬಾಯಿಗೆ   ಹನಿಸಲಾಗುತ್ತದೆ.  ಅಂದರೆ,  ಭೂಮಿ  ತಾಯಿ   ಹುಟ್ಟು  ಮತ್ತು  ಸಾವುಗಳೆರಡನ್ನೂ  ಸೃಷ್ಟಿಸುತ್ತಾಳೆ.  ಅವೆರಡರ  ಮಿತಿಯಲ್ಲಿ,  ನಾವು  ನಮ್ಮ ಬದುಕನ್ನು  ಕಟ್ಟಿಕೊಳ್ಳಬೇಕು   ಎಂಬ  ತಾತ್ವಿಕ  ಸಂದೇಶ     ಪದ್ಯದಲ್ಲಿ  ಅನಾವರಣ  ಗೊಂಡಿದೆ.  ಹುಟ್ಟು  ಮತ್ತು  ಸಾವುಗಳೆರಡನ್ನೂ  ಸಹಜವಾಗಿ  ಸ್ವೀಕರಿಸಬೇಕೆಂಬ  ನಿರ್ಲಿಪ್ತ  ದೃಷ್ಟಿ  ಇಲ್ಲಿ  ಗೋಚರಿಸುತ್ತದೆ.

       ಇಡೀ  ಮಾನವ  ಬದುಕನ್ನೇ   ಕಾಡು ಜೀವನ,  ಅನಾಗರಿಕತೆ,  ಮತ್ತು  ನಾಗರಿಕತೆ   ಎಂದು  ಮೂರುವಿಭಾಗವಾಗಿ  ಕಂಡು  ಅಧ್ಯಯನ  ಗೈಯಲಾಗುತ್ತಿದೆ.   ಕಾಡುತನ, ಅಲೆಮಾರಿತನದಿಂದ  ನಾವು  ಒಂದೆಡೆ  ನೆಲೆನಿಂತಿದ್ದೇ  ಕೃಷಿಯನ್ನು  ಅಪ್ಪಿಕೊಂಡಿದ್ದಕ್ಕೆ.   ಅಲ್ಲಿಂದ  ಪ್ರಾರಂಭಗೊಂಡ  ಮಾನವ  ಬದುಕು,  ಅದೆಷ್ಟು  ರೋಮಾಂಚಕ  ತಿರುವುಗಳನ್ನ  ಪಡೆದಿದೆ   ಅದೆಷ್ಟು  ಪ್ರಯೋಗಶೀಲತೆ,  ಸೃಷ್ಟಿಶೀಲತೆಯ  ಗುಣಗಳನ್ನು  ವಿಕಾಸಗೊಳಿಸಿಕೊಂಡಿದೆ  ಎನ್ನುವುದನ್ನು  ಗಮನಿಸಿದರೆ  ಬೆರಗು  ಮೂಡುತ್ತದೆ. 

                        ಮಣ್ಣಾಲಿ  ಹುಟ್ಟೋಳೆ, ಮಣ್ಣಾಲಿ  ಬೆಳೆಯೋಳೆ / 

                        ಎಣ್ಣೇಲಿ  ಕಣ್ಣಾ  ಬಿಡುವೋಳೇ,-- ಜಗಜ್ಯೋತಿ /          

                        ಸತ್ಯಾದಿಂದುರಿಯೇ  ನಮುಗಾಗಿ /

ಎಂದು  ದೇವರ  ನಂದಾದೀಪವನ್ನು  ಬೆಳಗಿಸುತ್ತಾ,  ಜ್ಞಾನ  ಜ್ಯೋತಿಯನ್ನು,  ಜೀವದ  ಬೆಳಕನ್ನು  ಪ್ರಾರ್ಥಿಸುತ್ತಾ   ತಮ್ಮ  ದಿನದ  ಬೆಳಗನ್ನು   ಸ್ವಾಗತಿಸುವ   ಕೃಷಿ ಸಂಸ್ಕೃತಿ ,  ಅದೊಂದು  ಮಹಾಸಾಗರ.  ಮೊಗೆದಷ್ಟೂ  ಜಗತ್ತಿನ  ಇತಿಹಾಸದ  ಸಂಪತ್ತು  ಕೈಗೆಟಕುವ   ಮಹಾ ಗಣಿ. 

          ಬಿತ್ತಿದ  ಬೀಜ  ಮೊಳೆಯುವುದು,  ಗಿಡವಾಗಿ  ಬೆಳೆಯುವುದು,  ಹೂವಾಗಿ  ತೆನೆಯಾಗಿ  ಕಾಯಾಗಿ  ಹಣ್ಣಾಗಿ  ಮಾಗುವುದು,  ಅದೆಂಥ  ಪವಾಡ.  ಅದೆಂಥ  ಬೆರಗು.  ಅವೆಲ್ಲ  ಪ್ರಕೃತಿಯ  ವರ.  ನಾವು  ಕೇವಲ  ಬೊಗಸೆ ಚಾಚುವ  ಕಂದಮ್ಮಗಳು.  ಭೂಮಿ  ನಮ್ಮನ್ನು  ಸಲಹುತ್ತಾಳೆ.  ನಾವು  ತಪ್ಪಿದಾಗ  ತಿದ್ದುತ್ತಾಳೆ. ಅಪರಾಧ ಗೈದಾಗ  ಶಿಕ್ಷಿಸುತ್ತಾಳೆ, ಅದೇ  ಕಾರಣಕ್ಕೆ  ಭುವಿಗೆ  ಶರಣಾಗಿ  ಬದುಕುವುದೇ   ನಿಜವಾದ  ಜೀವನ  ಎಂದು   ತಿಳಿಯಲಾಗಿತ್ತು. 

           ಬೇಸಾಯದ  ಬದುಕಿನಲ್ಲಿ  ಪ್ರಧಾನ  ಪಾತ್ರ  ವಹಿಸುವುದೇ    ಮಣ್ಣು,  ನೀರು,  ಗಾಳಿ,  ಬೆಂಕಿ, ಮತ್ತು  ರೋಗ.  ಜನಪದರು  ಇವುಗಳನ್ನೇ  ಮುಖ್ಯವಾಗಿ  ಸ್ವೀಕರಿಸಿ, ಆರಾಧಿಸಲು  ತೊಡಗಿದ್ದು   ಕಂಡುಬರುತ್ತದೆ.  ಅವೆಲ್ಲವೂ   ಜನರ ದೃಷ್ಟಿಯಲ್ಲಿ   ಮಹಾಶಕ್ತಿವಂತ  ದೈವಗಳೇ  ಆಗಿವೆ.     ದೈವಗಳನ್ನು  ತೃಪ್ತಿ  ಪಡಿಸಿದಷ್ಟೂ  ಅವು  ಸಂಪ್ರೀತಗೊಳ್ಳುತ್ತವೆ.  ತಮ್ಮ  ಜೀವನ  ಹಸನಾಗುತ್ತದೆ, ಎಂಬ  ನಂಬುಗೆಯಲ್ಲಿ,   ತಮ್ಮ  ಬದುಕನ್ನು  ಕಟ್ಟಿಕೊಳ್ಳತೊಡಗಿದರು. 

       ಅವರ  ನಂಬುಗೆ   ನಿತ್ಯದ  ಅನುಭವ,  ನೋವು,  ತಲ್ಲಣ,  ಸುಖ  ದುಃಖ,  ಪ್ರೀತಿ  ಪ್ರೇಮ  ಕಾಮ, ಸ್ನೇಹ  ಇವೆಲ್ಲವೂ   ಕತೆಯಾಗಿ  ಹಾಡಾಗಿ  ನೃತ್ಯವಾಗಿ,  ಆರಾಧನೆಯಾಗಿ,  ಮಾಟ  ಮೋಡಿ,  ಮಂತ್ರ  ತಂತ್ರಗಳಾಗಿ  ವಿಕಾಸಗೊಂಡಿತು.  ಸಾವಿರ  ಸಾವಿರ  ವರ್ಷಗಳ   ಅನುಭವಗಳ  ಕನ್ನಡಿಗಳಾಗಿ   ನಮ್ಮ  ಈಕಾಲಕ್ಕೂ, ದಾರಿದೀಪವಾಗಿ  ಬೆಳಗುತ್ತಿವೆ.

          ಭೂಮಿಯೊಂದಿಗಿನ  ನೂರಾರು  ವರ್ಷದ  ಒಡನಾಟ,  ಸೋಲು  ಸಾಫಲ್ಯ, ಪ್ರಯೋಗ  ಕುತೂಹಲಗಳೇ  ದೇಶೀ  ಜ್ಞಾನ  ವಿಕಾಸಗೊಳ್ಳಲು   ಸಹಕಾರಿಯಾಯಿತೆನ್ನಬಹುದು.   ಪ್ರಕೃತಿಯಲ್ಲಿಯ  ಸೂಕ್ಷ್ಮ  ಬದಲಾವಣೆ,  ಪ್ರಾಣಿ  ಪಕ್ಷಿ  ಕ್ರಿಮಿ  ಕೀಟಗಳಲ್ಲಿ   ವೈವಿಧ್ಯಮಯ  ವರ್ತನೆ,  ನಕ್ಷತ್ರ  ಸೂರ್ಯ  ಚಂದ್ರ ರ   ವೀಕ್ಷಣೆ,  ಕೃಷಿಗೆ  ಬೇಕಾದ  ಸಾಕಷ್ಟು  ಮಾಹಿತಿಗಳನ್ನು,  ಮುಂದಾಲೋಚನೆಗಳನ್ನು  ಒದಗಿಸಿದೆ.   ಹೀಗೆ  ಸಂಪಾದಿಸಿದ  ಜ್ಞಾನ  ಜನಪದರ  ನುಡಿಗಳಲ್ಲಿ, ಗಾದೆ  ಒಗಟು, ಹಾಡು  ಚಿತ್ರಕಲೆ  ಮತ್ತು  ಕತೆಗಳಲ್ಲಿ  ದಾಖಲಾಗಿವೆ.

         ಕೋಟಿ ವಿದ್ಯೆಗಿಂತ   ಮೇಟಿ  ವಿದ್ಯೆಯೇ  ಮೇಲು,   ಭರಣಿ ಮಳೆ-  ಧರಣೆಲ್ಲ  ಬೆಳೆ,  ನವಣೆ ಬೆಳಿ,- ಬವಣೆ ಕಳಿ,  ಆರ್ದ್ರಾ  ಮಳೆ  ಆರ್ದೇ  ಹೊಯ್ತದೆ,   ಆರದ್ರೆ  ಹನಿ  ಕಲ್ಲು,  ಅಮ್ಮನ  ಮನಸು  ಬೆಲ್ಲ,   ಮಳೆ ಬಂದ್ರೆ  ಕೇಡಲ್ಲ- ಮಗ ಉಂಡ್ರೆ  ಕೇಡಲ್ಲ,  ಬಂದ್ರೆ  ಮಗೆ- ಹೋದ್ರೆ  ಹೊಗೆ,  ಸ್ವಾತಿ ಮಳೆ  - ಮುತ್ತಿನ  ಬೆಳೆ,  ಅಶ್ವಿನಿ ಮಳೆ ಊರೆಲ್ಲ ಕೊಳೆ,  ಚಿತ್ತೆ  ಮಳೆ- ಬಿತ್ತಿದಷ್ಟೂ ಬೆಳೆ, ಗಾದೆ  ಹಲವರ  ಜ್ಞಾನ  ಒಬ್ಬನ  ವಿವೇಕ  ಎಂಬ  ನುಡಿಗಟ್ಟೇ  ಪ್ರಚಲಿತದಲ್ಲಿದೆ.

        ನಮ್ಮ  ದೇಶೀಜ್ಞಾನದ  ಒಡಲಲ್ಲಿ, ಪ್ರಕೃತಿಯ  ಅವಲೋಕನವಿದೆ.  ಸೂರ್ಯ  ಚಂದ್ರರಿಗೆ   ಕಂಕಣ  ಕಟ್ಟಿದರೆ,  ಪ್ರಾಣಿ  ಪಕ್ಷಿಗಳ  ವರ್ತನೆಯಲ್ಲಿ  ವಿಶೇಷ  ಬದಲಾವಣೆಯಾದರೆ,  ಕ್ರಿಮಿಕೀಟಗಳ  ಚಲನೆ, ಮತ್ತು  ಸಂತಾನ ವೃದ್ಧಿಯಲ್ಲಿ  ಏರುಪೇರಾದರೆ,  ಪ್ರಕೃತಿಯ  ಮಳೆ  ಬಿಸಿಲು ಗಳಲ್ಲೂ  ಏರುಪೇರಿನ  ಬದಲಾವಣೆಗಳನ್ನು, ಇಲ್ಲಿನ  ಜನರು  ಗಮನಿಸಿದ್ದರು.  ಅಡವಿಯ  ಮರಗಳು  ಒಮ್ಮೆಲೇ  ಅತಿಯಾಗಿ  ಫಲಬಿಟ್ಟರೆ,  ಸಾಯತೊಡಗಿದರೆ,  ಅದರ  ಪ್ರಭಾವ  ಕೃಷಿಯಮೇಲಾಗುವುದನ್ನು  ಕಂಡುಕೊಂಡಿದ್ದರು.

      ``ಕುರಿತೋದದೆಯುಂ  ಕಾವ್ಯಪ್ರಯೋಗ  ಪರಿಣತ  ಮತಿಗಳ್‌ʼ ʼʼ   ಎಂದು  ಶ್ಲಾಘಿಸಿಕೊಂಡ  ನಮ್ಮ  ಪೂರ್ವಜರ   ಸಾಹಿತ್ಯ  ಸೃಷ್ಟಿ  ಅಳೆಯಲಾಗದಷ್ಟು  ಆಳ  ಮತ್ತು  ಅಗಲವಾಗಿದೆ.  ಸಾಮಾನ್ಯವಾಗಿ  ಅಧ್ಯಯನ  ದೃಷ್ಟಿಯಿಂದ  ಗದ್ಯ  ಪದ್ಯ  ಮತ್ತು  ಪ್ರದರ್ಶನ  ಸಾಹಿತ್ಯಗಳೆಂದು  ವಿಭಾಗಿಸಲಾಗಿದೆ.  ಸಂಪೂರ್ಣ  ಮೌಖಿಕವಾಗಿ  ಹೊರಹೊಮ್ಮಿ,  ತಲೆಮಾರಿಂದ  ತಲೆಮಾರಿಗೆ  ಸಾಗುತ್ತಾ ಬಂದ  ಜಾನಪದ  ಸಾಹಿತ್ಯದ  ಆಳದಲ್ಲಿ, ಗ್ರಾಮಜೀವನದ  ಸಮಗ್ರ  ಮಾಹಿತಿ  ಅಡಗಿದೆ.  ಆಧುನಿಕರು  ಎಂದು  ನಮಗೆ  ನಾವೇ   ವೈಭವೀಕರಿಸಿಕೊಳ್ಳುತ್ತಿರುವ   ವರ್ತಮಾನದಲ್ಲಿ,  ಜಾನಪದ  ಸಂಸ್ಕೃತಿಯ  ಬಗೆಗೆ  ಅಲಕ್ಷ್ಯವಿದೆ.  ಅದರ  ಒಡಲಲ್ಲಿರುವ  ಅನುಭವದ  ತಿರುಳನ್ನು  ಆಸ್ವಾದಿಸುವ  ಮನೋಸ್ಥಿತಿಯನ್ನೇ  ಕಳೆದುಕೊಂಡಿದ್ದೇವೆ. ಈ  ನಡುವೆ  ಉತ್ತರ  ಕನ್ನಡಜಿಲ್ಲೆಗೆ   ಸೀಮಿತವಾಗಿ  ಕೃಷಿಸಂಸ್ಕೃತಿಯ  ಸ್ಥೂಲ  ನೋಟವನ್ನು`  ಕೈಗೊಳ್ಳುತ್ತಿದ್ದೇನೆ.

            ಕನ್ನಡ ನಾಡಿನಲ್ಲಿ  ಉತ್ತರಕನ್ನಡ ಜಿಲ್ಲೆ  ಭೌಗೋಲಿಕವಾಗಿ   ಮತ್ತು  ಸಾಂಸ್ಕೃತಿಕವಾಗಿಯೂ   ವಿಶಿಷ್ಟವಾಗಿದೆ.   ತೆಂಗು   ಕಂಗು   ಹುಂಗು   ಅಂದರೆ   ಕರಾವಳಿ   ಮಲೆನಾಡು  ಮತ್ತು  ಬಯಲುಪ್ರದೇಶಗಳನ್ನು  ಒಳಗೊಂಡ  ಅತ್ಯಂತ  ವೈವಿಧ್ಯಮಯ  ಪ್ರಕೃತಿಯನ್ನು  ಹೊಂದಿರುವ     ಜಿಲ್ಲೆಯ   ಸಂಸ್ಕೃತಿಯೂ   ಸಹ  ವಿಭಿನ್ನವಾಗಿಯೇ  ಇದೆ.  ಪ್ರತಿಶತ  ಎಪ್ಪತ್ತರಷ್ಟು ಜನರು ಈಗಲೂ  ಗ್ರಾಮವಾಸಿಗಳಾಗಿಯೇ  ಇದ್ದಾರೆ.   ಹವ್ಯಕರು  ಹಾಲಕ್ಕಿಗಳು,  ಗೊಂಡರು,  ನಾಡವರು,  ನಾಮಧಾರಿಗಳು,  ಸಾರಸ್ವತರು,  ಗೌಡಸಾರಸ್ವತರು,  ಗ್ರಾಮೊಕ್ಕಲಿಗರು, ಅಂಬಿಗರು, ದೈವಜ್ಞರು, ಬಡಿಗರು  ಮುಕ್ರಿಗಳು, ಮರಾಠಿಗರು,  ಪಟಗಾರರು,  ಸಿದ್ಧಿಗಳು, ಗೌಳಿಗಳು, ಕ್ರಿಶ್ಚಿಯನ್ನರು, ಗೌಳಿಗರು, ಮಡಿವಾಳರು,  ಮುಸ್ಲಿಮರು, ನವಾಯತರು, ಮುಂತಾದ   ಹತ್ತು  ಹಲವು  ಸಮುದಾಯಗಳನ್ನು  ತನ್ನ  ಒಡಲಲ್ಲಿ  ಸಲಹುತ್ತಿರುವ     ಜಿಲ್ಲೆಯ   ಜನಾಂಗೀಯ  ಸಾಮರಸ್ಯ   ಮಾದರಿಯಾದದ್ದು. 

ಪ್ರತಿಯೊಂದು  ಸಮುದಾಯಕ್ಕೂ  ಅದರದ್ದೇ  ಆದ  ಭಾಷಾಶೈಲಿಯಿದೆ.  ಕನ್ನಡವೇ  ಆದರೂ   ಪ್ರತ್ಯೇಕ  ಉಪಭಾಷೆಯೆನ್ನುವಂತೇ   ವಿಭಿನ್ನವಾಗಿದ್ದು,  ಆಡು ನುಡಿಗಳಲ್ಲಿ  ಅಡಗಿರುವ      ಶಬ್ದಕೋಶ  ಸೇರದ ಇನ್ನೂ  ಸಾವಿರಾರು  ಶಬ್ದಗಳಿವೆ. ದಾಖಲೆಗೊಳ್ಳದ  ಹಾಡು, ಕತೆಗಳು  ಇನ್ನೂ  ಸಾಕಷ್ಟಿವೆ.   .  ಪ್ರಸ್ತುತ  ಪ್ರಸ್ಥಾಪಿಸಿದ     ಎಲ್ಲ  ಜನಸಮುದಾಯಗಳೂ   ಕೃಷಿಯನ್ನೇ  ಅವಲಂಬಿಸಿಕೊಂಡು   ಶತಮಾನಗಳಿಂದ   ಬದುಕು  ನಡೆಸುತ್ತಿದ್ದಾರೆ.

                     ಇಲ್ಲಿಯ  ಕೃಷಿ ಬದುಕು  ಕೇವಲ  ಜೀವನ  ನಿರ್ವಹಣೆಯನ್ನ  ಮಾತ್ರ  ಅವಲಂಬಿಸದೇ   ತನ್ನೆಲ್ಲ   ನೋವು  ತಲ್ಲಣ  ಸುಖ  ದುಃಖಗಳನ್ನು   ಕಲೆ   ಹಾಡು  ನೃತ್ಯ  ಕತೆಗಳಲ್ಲಿ   ಸಾಂಸ್ಕೃತಿಕ  ಸತ್ವಗಳನ್ನು  ದಾಖಲಿಸಿದೆ.  ಇತ್ತೀಚಿನ  ವರ್ಷಗಳಲ್ಲಿ   ದಾಖಲೆಗೊಂಡ   ಗೊಂಡ  ರಾಮಾಯಣ  ಸಾಕಷ್ಟು  ಕುತೂಹಲ  ಮೂಡಿಸುತ್ತದೆ.   ಮೌಖಿಕವಾಗಿ  ಮಾತ್ರ  ಅಸ್ತಿತ್ವದಲ್ಲಿದ್ದ  ಗೊಂಡ  ರಾಮಾಯಣ   ಕಾಲದಿಂದ  ಕಾಲಕ್ಕೆ  ಕಾಲದ  ಬದಲಾವಣೆಯೊಂದಿಗೆ  ತಾನೂ  ಬದಲಾಗುತ್ತಾ    ಆಧುನಿಕ  ಕಾಲದ  ಸಂಘರ್ಷ  ಸಂಧಿಗ್ಧವನ್ನೂ  ಮೈಗೂಡಿಸಿಕೊಂಡು   ಹಾಡಾಗಿ  ಹರಿಯುತ್ತಿದ್ದ   ಗೊಂಡ  ರಾಮಾಯಣ,   ನೂರಾರು  ವರ್ಷದ   ಜನಾಂಗದ  ಅನುಭವಗಳನ್ನು  ತನ್ನ  ಒಡಲಲ್ಲಿ  ಹುದುಗಿಸಿಕೊಂಡೇ   ಹರಿದು  ಬಂದಿದ್ದನ್ನು,  ಸೂಕ್ಷ್ಮವಾಗಿ  ಗುರುತಿಸಬಹುದಾಗಿದೆ. 

ಉತ್ತರಕನ್ನಡ  ಜಿಲ್ಲೆಯ  ಕೃಷಿಮೂಲ  ಸಂಸ್ಕೃತಿ  ಸೃಷ್ಟಿಸಿದ  ಆಚರಣೆ   ಬಂಡಿಹಬ್ಬ, ಇಡೀ  ರಾಜ್ಯದ  ಗಮನಸೆಳೆದಿದೆ.  ಇತ್ತೀಚೆಗೆ  ಸಂಶೋಧಕ   ಡಾ- ದೇವೀದಾಸ  ನಾಯಕ  ಪ್ರಕಟಿಸಿದ   ಜಿಲ್ಲೆಯ    ಆಚರಣೆ  ಬಂಡಿಹಬ್ಬದ  ಬಗೆಗೆ  ʻʻ ಹೊನ್ನ  ಹರಿವಾಣʼʼ  ಎಂಬ   ಅಧ್ಯಯನಪೂರ್ಣ  ಗ್ರಂಥವನ್ನೇ  ಪ್ರಕಟಿಸಿದ್ದಾರೆ.  ಕರಾವಳಿಯ  ಕುಮಟಾ   ಹೊನ್ನಾವರ  ಭಟ್ಕಳ  ಅಂಕೋಲಾ  ಕಾರವಾರ  ತಾಲೂಕುಗಳಲ್ಲಿಯ   ಮಾತೃಮೂಲ  ಸಮುದಾಯಗಳು  ಒಟ್ಟಾಗಿ  ಆಚರಿಸುವ   ಬಂಡಿಹಬ್ಬ  ಚೈತ್ರ  ವೈಷಾಖ  ಮಾಸಗಳಲ್ಲಿ,  ಅತ್ಯಂತ  ವಿಜ್ರಂಭಣೆಯಿಂದ  ಆಚರಿಸಲ್ಪಡುತ್ತದೆ.  ಸುಗ್ಗಿ  ಬೆಳೆ  ಬಂದ  ಹೊತ್ತು,  ಮುಂಗಾರು  ಅಡಿಯಿಡುವ  ಕ್ಷಣದಲ್ಲಿ,   ಕೃಷಿಕೆಲಸವನ್ನು  ಆರಂಭಿಸುವ  ಪರ್ವಸಮಯದಲ್ಲಿ, ಜರುಗುವ  ಬಂಡಿಹಬ್ಬ  ಬಹುವರ್ಣರಂಜಿತವಾಗಿ,   ಇಡೀ  ಕರಾವಳಿಗೆ  ಹೊಸಹರೆಯವನ್ನು  ಹೊತ್ತು  ತರುತ್ತದೆ.

                  ಕ್ರಿಸ್ತ  ಶಕ ೧೭೪೩ ರಲ್ಲಿʻʻ ಜ್ಯೂಲಿಯಸ್‌ ವೆಲೆಂಟೈನ್‌  ಸ್ಟೇನ್‌  ವಾನ್‌ ಗೊಲೋನೆಸ್‌ ʼʼ ಎಂಬ  ಪೋರ್ಚುಗೀಜ  ಅಧಿಕಾರಿ  ಉತ್ತರಕನ್ನಡವನ್ನು  ಭತ್ತದ  ಕಣಜವೆಂದು  ಕರೆದಿದ್ದಾನೆ.  ಇಲ್ಲಿ  ಬೆಳೆಯುವ  ಶ್ರೇಷ್ಠದರ್ಜೆಯ  ಭತ್ತ ವನ್ನು  ಶ್ಲಾಘಿಸಿದ್ದಾನೆ.   ಅಂದರೆ    ಜಿಲ್ಲೆಯಲ್ಲಿ  ವ್ಯವಸ್ಥಿತ  ತೋಟಗಾರಿಕೆ    ನಂತರದಲ್ಲಿ  ಪ್ರಾರಂಭಗೊಂಡಿರ ಬಹುದು.  ಇಲ್ಲಿಯ  ಜಾನಪದ  ಹಾಡುಗಳು,  ಕತೆಗಳು,  ಮತ್ತು  ವಿವಿಧ  ನೃತ್ಯಗಳೆಲ್ಲವೂ  ಭತ್ತದ  ಕ್ಷೇತ್ರದ  ಸುತ್ತಲೇ  ಬೆಳೆದು  ಬಾಳಿಕೊಂಡು  ಬಂದಿವೆ. 

               ಜಿಲ್ಲೆಯ  ಜನಪದ ರಂಗಭೂಮಿಯನ್ನು  ತಲಸ್ಪರ್ಶೀ  ಅಧ್ಯಯನಗೈದ  ಡಾ-ಶ್ರೀಪಾದ  ಭಟ್   ಪ್ರಮುಖವಾಗಿ  ಜಾನಪದ ಅರೆ ರಂಗ ಕಲೆಗಳು, ಮತ್ತು  ಪೂರ್ಣ ರಂಗಕಲೆಗಳೆಂದು   ವಿಭಾಗಿಸಿ  ವಿವರಿಸಿದ್ದಾರೆ.  ಪೂರ್ಣ  ರಂಗವಾಗಿ  ಯಕ್ಷಗಾನ  ಬೆಳೆದುಕೊಂಡು, ಇಂದು  ರಾಷ್ಟ್ರ  ಅಂತರ್ರಾಷ್ಟ್ರಮಟ್ಟದಲ್ಲಿ  ಮಿಂಚುತ್ತಿದ್ದರೆ,  ಅರೆರಂಗಪ್ರಕಾರಗಳು   ಇನ್ನೂ  ಆರಾಧನಾ  ಕ್ಷೇತ್ರಕ್ಕೇ  ತನ್ನನ್ನು  ಮಿತಿಗೊಳಿಸಿಕೊಂಡಿದೆ.

              ಹೊಲವನ್ನು  ಹದಗೊಳಿಸುವುದರೊಂದಿಗೆ  ಪ್ರಾರಂಭಗೊಳ್ಳುವ    ಎಲ್ಲ  ನೃತ್ಯಪ್ರಕಾರಗಳು,  ಫಸಲು  ಕಣಜಕ್ಕೆ  ಬರುವವರೆಗಿನ  ಎಲ್ಲ  ಹಂತಗಳನ್ನು  ಸಂಕೇತಿಸುತ್ತವೆ.   ಎಲ್ಲ  ಸಮೂಹ  ನೃತ್ಯಗಳೂ,  ಕೃಷಿ, ಬೇಟೆಗಳ  ಸುತ್ತಲೇ  ಸೃಷ್ಟಿಯಾಗಿವೆ.  ಪ್ರಕೃತಿಯನ್ನೇ  ನಂಬಿ  ಕೃಷಿಕಾಯಕವನ್ನು  ನಡೆಸುವ  ಜನರು  ತಮ್ಮ  ಗೆಲುವಿಗಾಗಿ,  ತಾವೇ  ಸೃಷ್ಟಿಸಿಕೊಂಡ  ಮಾತೃದೇವತೆಗಳೆದುರು, ಕುಣಿತದ  ಮೂಲಕ ಆರಾಧನೆ ಸಲ್ಲಿಸುತ್ತಾರೆ.  ʻʻ ಪ್ರಕೃತಿಯನ್ನು  ಒಲಿಸಿಕೊಳ್ಳಲು  ದುಡಿಸಿಕೊಳ್ಳಲು, ಪ್ರಪಂಚದ  ಎಲ್ಲ  ಆದಿಮ  ಸಮುದಾಯಗಳೂ, ನೃತ್ಯದ  ಮೊರೆಹೊಕ್ಕಿದ್ದನ್ನು  ನಾವು  ಗಮನಿಸ ಬಹುದಾಗಿದೆ.  ಇಂಥ  ಮನಸ್ಥಿತಿಯನ್ನು ನಾವು  ಮಾಂತ್ರಿಕ  ಕ್ರಿಯೆ, ಮಾಟಕ್ರಿಯೆ,  ಹೋಮಿಯೋ  ಪ್ಯಾಥಿಕ್‌  ಮ್ಯಾಜಿಕ್‌  ಎಂದು  ಗುರುತಿಸುತ್ತೇವೆ.ʼʼ  (ಶ್ರೀಪಾದ  ಭಟ್ಟ)

           ಹೂವಿನ  ಮಕ್ಕಳ  ಕುಣಿತ,   ಹಾಲಕ್ಕಿಗಳ  ಸುಗ್ಗಿಕುಣಿತ,  ಗೊಂಡರ  ಕುಣಿತ,  ಮರಾಠಿಗರ  ಕುಣಿತ,  ಪುಗಡಿಕುಣಿತ,  ಕುಣುಬಿ  ಕುಣಿತ,  ಹಗರಣ, ಬೇಡರವೇಷ,  ಸಿಂಹ ನೃತ್ಯ,  ಗುಮಟೇ  ಪಾಂಗು, ಮತ್ತು ಸಿಧ್ದಿಯರ  ಢಮಾಮಿ  ಕುಣಿತ  ಮುಂತಾದ  ಜಾನಪದ ರಂಗಕಲೆಗಳ  ಬಗೆಗೆ  ಅವರು  ಆಳವಾದ  ಅಧ್ಯಯನವನ್ನು  ಮಂಡಿಸಿದ್ದಾರೆ.

             ನಮ್ಮ  ಜಿಲ್ಲೆಯ  ಮಲೆನಾಡಿನ   ದೀಪಾವಳಿಯನ್ನು   ಪ್ರಸ್ಥಾಪಿಸಲೇ  ಬೇಕು.  ಅಪ್ಪಟ  ಜಾನಪದೀಯ   ಕೃಷಿಮೂಲ  ಹಬ್ಬವಾದ     ಉತ್ಸವಕ್ಕೆ   ದೊಡ್ಡ  ಹಬ್ಬವೆಂದೇ  ಕರೆಯುತ್ತಾರೆ.   ಬಲಿಚಕ್ರವರ್ತಿ,  ಮತ್ತು  ಗೋವು     ಹಬ್ಬದಲ್ಲಿ  ಪ್ರಮುಖವಾಗಿ  ಪೂಜೆಗೊಳ್ಳುತ್ತದೆ.   ಮೂರುದಿನ  ಬಲಿವೇಂದ್ರ  ಮತ್ತು  ಅವನ  ರಾಣಿ  ವಿಂಧ್ಯಾವಳಿ  ಯನ್ನು  ಪಾತಾಳದಿಂದ  ಆಹ್ವಾನಿಸಿ   ದೇವರ  ಪೀಠದೆದುರು   ಪ್ರತಿಷ್ಠಾಪಿಸುತ್ತಾರೆ.   ಸ್ಥಳೀಯವಾಗಿ  ಬೆಳೆಯುವ   ಮೊಗೆಕಾಯಿಗೆ   ಬಲಿವೇಂದ್ರನ   ಮುಖವನ್ನು   ಕಾಡಿಗೆಯಿಂದ   ಮಹಿಳೆಯರೇ  ಚಿತ್ರಿಸುತ್ತಾರೆ.  ವಿವಿಧ  ಹೂ,  ಅಡಿಕೆ  ಮತ್ತು  ಅಡಿಕೆ  ಸಿಂಗಾರದಿಂದ   ಸಿಂಗರಿಸುತ್ತಾರೆ.  ಬಲಿಯ   ಹೆಂಡತಿ  ವಿಂದ್ಯಾವಳಿ,  ಸವತೆಯ  ಕಾಯಾಗಿ   ಬಲಿಯ  ಪಕ್ಕದಲ್ಲಿ  ವಿರಾಜಿಸುತ್ತಾಳೆ. 

              ಬಲಿಪಾಡ್ಯಮಿಯ  ದಿನ  ನಸುಕಿನಲ್ಲಿಯೇ   ಊರಿನ  ಜನರೆಲ್ಲ  ಶುಚರ್ಭೂತರಾಗಿ,  ಆಹಾರ  ಸೇವಿಸದೇ   ಹುಲಿಯ  ಬಾನಿಗೆ   ಮೆರವಣಿಗೆಯಂತೇ  ಸಾಗಿ   ಪೂಜೆಸಲ್ಲಿಸಿ,  ತಮ್ಮ  ಗೋವುಗಳನ್ನು  ಕಾಪಾಡು  ಎಂದು  ಪ್ರಾರ್ಥಿಸುತ್ತಾರೆ.   ಹುಲಿಪೂಜೆಯ  ತೀರ್ಥ  ಪ್ರಸಾದಾದಿಗಳನ್ನು   ತಂದು  ಗೋವಿನ  ಮೈಮೇಲೆ  ಸಿಂಪಡಿಸುತ್ತಾರೆ. ಎತ್ತು  ಆಕಳುಗಳನ್ನು  ಪೂಜಿಸಿ,  ಸಿಂಗರಿಸುತ್ತಾರೆ. 

             ಹಂಡಿಯ  ಕರುನೋಢೆ,  ಹುಂಡಿಯ  ಕರುನೋಡೆ,

             ಹಂಡಿಯ   ಹಿಂದೆ   ಐನೂರು, / ಸಾವಿರ/

             ಮತ್ತಾಗಲಿ   ನಮ್ಮ  ಮನೆಯಲ್ಲಿ. //

ಹೊಸ್ತಿಲಿನ  ಮುಂದಿನ   ಹತ್ತು  ಕಂಡುಗ  ಹೊಲವ, /

ಮುಟ್ಟದ್ದೆ   ಬಾರೆ  ಪಶುತಾಯೆ, /  ನಿನ್ನ  ಪಾದಕ್ಕೆ /

ಮುತ್ತೇರಿಸಿ   ಕೈಯಾ   ಮುಗಿದೇವು.  //

       ಅದೇ ದಿನ  ಶುಭಘಳಿಗೆಯಲ್ಲಿ,  ಊರಿನ  ಎಲ್ಲ  ದನಕರುಗಳನ್ನು  ದನಬಯಲಿಗೆ  ಎಲ್ಲ  ಜನಸೇರಿ   ಕೊಂಡೊಯ್ದು   ಅಲ್ಲಿಯೂ  ಸಾಮೂಹಿಕ  ಪೂಜೆಗೈದು,  ಸಿಡಿಮದ್ದು, ಕುಶಾಲುತೋಪು  ಹಾರಿಸಿ   ದನಕರುಗಳನ್ನು  ಓಡಿಸುತ್ತಾರೆ.  ಮನೆಗೆ  ಮರುಳುವಾಗ   ಭತ್ತದ  ಹೊಸ  ಕದಿರನ್ನು  ( ತೆನೆ )  ಗಂಡಸರು   ಹೊತ್ತು  ತರುತ್ತಾರೆ.

               ʻʻ ಹೋಪಾಗ  ಬುಟ್ಟಿಯಲಿ / ಬಪ್ಪಾಗ  ಬಂಡಿಯಲಿ / ಧಾನ್ಯವೇ  ನಿನ್ನಾ  ಹೆಸರೇನು / 

                        ಹೆಸರೇನು  ಜೀರಿಗೆ  ಸಾಲೇ / ಓಲ್ಯಾಡು  ನಮ್ಮ  ಮನೆಯಲ್ಲಿ. /

                       ತಗ್ಗಿನ ಗದ್ದೆ  ಭತ್ತ /ಒಡ್ಡಾಗಿ  ಫಲ ಬಂದ / ಆಯ್ದಾಯ್ದು  ಮೆಟ್ಟಿ  ಗಿಳಿ ಮೇಯ್ದ / 

                      ಗಿಳಿ ಮೇಯ್ದ  ಅಪ್ಪಯ್ಯ / ಮುಂಚೆ  ಕಟ್ಟಿಸು  ನೀ  ಪಣತವ /

                     ಹಣಿಗ್ಯಂತೆ  ಸಿಗುರೊಡೆದು / ಸಿಗುರೊಡೆದು  ಕದಿರ್‌  ಬಾಗಿ / ಮಧು ಮಕ್ಕಳಂತೆ  ತಲೆಬಾಗಿ /

                     ತಲೆಬಾಗನ್ನಪೂರ್ಣೇ /  ಓಲ್ಯಾಡು  ನಮ್ಮ  ಮನೆಯಲ್ಲಿ. /ʼʼ

ಎಂದು   ಹಾಡುತ್ತ,ಮನೆಯ  ಹೆಂಗಳೆಯರು  ಹೊಸ  ಕದಿರನ್ನು,  ಹಾನಸುಳಿದು,  ಎದಿರು  ಗೊಂಡು,  ಹೊಸ ಫಸಲನ್ನು  ತಂದ  ಗಂಡಸರಿಗೆ  ಆರತಿ ಬೆಳಗಿ  ದೇವರೆದುರು  ಕೊಂಡೊಯ್ದು  ಇಡುತ್ತಾರೆ.   ಹಬ್ಬದ  ಕೊನೆಯದಿನ  ಮುಸ್ಸಂಜೆ  ಪ್ರತಿಯೊಬ್ಬ  ರೈತನೂ,  ತನ್ನ  ಕೃಷಿಕ್ಷೇತ್ರದ  ನಡುವೆ,  ದೀವಟಿಗೆ  ಕೋಲು  ನೆಟ್ಟು, ತುದಿಯಲ್ಲಿ  ಎಣ್ಣೆಅರಿವೆ  ಬಿಗಿದು  ದೀಪ  ಉರಿಸುತ್ತಾನೆ.  ಬಲಿ  ಚಕ್ರವರ್ತಿಯನ್ನು  ಅವನ  ರಾಜ್ಯಕ್ಕೆ  ಬೀಳ್ಕೊಡುವ  ಕ್ಷಣವದು.   ದೀಪವುರಿಸಿ,  ʻʻ ದಿಪ್ಪಡ್‌  ದಿಪ್ಪಡ್‌  ದಿವಾಳಿಯೋ,  ಇಂದು  ನಾಳೇ  ಹಾಲಬ್ಬೋʼʼ  ಎಂದು  ಇಡೀ  ಸಮೂಹ  ಉಚ್ಛ ಸ್ವರದಲ್ಲಿ  ಉದ್ಗರಿಸಿ,  ಬಲಿಯನ್ನು  ಕಳುಹಿಸಿಕೊಡುತ್ತಾರೆ.   ಅಂದೇ    ಕೃಷಿಕೂಲಿಕಾರ  ಸಮೂಹ ದ   ಗಾಯಕರು,  ಹಬ್ಬಹಾಡುವುದು( ಬಿಂಗಿ  ಪದ-  ಬಿಂಗಿ  ಕುಣಿತ)  ಎಂಬ  ನೃತ್ಯಸಹಿತದ   ಚಟುವಟಿಕೆಯೊಂದನ್ನು  ಪ್ರತಿಯೊಂದು  ಕೃಷಿಕನ  ಮನೆಬಾಗಿಲಿಗೆ  ಹೋಗಿ  ನಡೆಸುತ್ತಾರೆ.

        ʻʻಬಲ್ಲಾಳಾ  ಬಲಿವೇಂದ್ರನಾ   ರಾಜಾ,  ಎಲ್ಲಾರಾ  ಸಲಹಂತನಾ /  ಬಲ್ಲಾಳಾ  ಬಂದು  ಬಾಗ್ಲಲ್ಲಿ  ನಿಂದು   ಕಲ್ಲಂತಾ  ಮಳೆಯಾ  ಸುರಿದಾನಾ / ಹಸನಾದ  ಮಳೆಯೇ  ಸುರಿದಾ  ಕಾರಣದಿಂದಾ / ಜೆಡು  ಜಬರೆಲ್ಲಾ  ಹಯನಾದೋ/   ನೀತಿಯುಳ್ಳಾರ  ಮನೆಯಾ  ಜ್ಯೋತಿಯು  ಬಂದೈತಿ /  ಜ್ಯೋತಿಗಾರೆಣ್ಣೆ  ಎರೆಬನ್ನಿ // 

                ಎಂದು  ಹಾಡುತ್ತಾರೆ.  ಅವರು  ತಂದ  ಬೃಹತ್‌  ದೀವಟಿಗೆಗೆ  ಎಣ್ಣೆಯೆರೆದು,  ಹೋಳಿಗೆ  ನೀಡಿ  ಸತ್ಕರಿಸುವುದು,  ಕೃಷಿಕರ   ಪದ್ಧತಿಯಾಗಿದೆ.  ಮನುಷ್ಯ  ಮೂಲಭೂತವಾಗಿ  ತನ್ನ  ಕಾಡುತನದಿಂದ   ಕೃಷಿತನಕ್ಕೆ  ಪ್ರವೇಶಗೊಂಡಾಗಲೇ  ನಿಜವಾದ  ಸಮೂಹಜೀವನ  ಪ್ರಾರಂಭಗೊಂಡಿತೆನ್ನಬಹುದು.  ಗ್ರಾಮಗಳು  ನಿರ್ಮಾಣಗೊಂಡು,  ವ್ಯವಸ್ಥಿತ  ಕೃಷಿ  ವಿಸ್ತರಣೆಯಾದಾಗ, ಕೃಷಿಯನ್ನು  ಅವಲಂಬಿಸಿ  ಅದಕ್ಕೆ  ಪೂರಕವಾಗಿ   ಗ್ರಾಮ  ಕೈಗಾರಿಕೆಗಳು  ಸೃಷ್ಟಿಯಾದವು.  ಗ್ರಾಮವೆಂದರೆ  ಕೃಷಿ,  ಗ್ರಾಮವೆಂದರೆ  ಕೈಗಾರಿಕೆ,  ಕೌಶಲ್ಯ  ಎಂಬಂತಾಯಿತು.   ಪರಸ್ಪರ  ಕೊಡಕೊಳ್ಳುವ  ಪದ್ಧತಿಯಿಂದ  ವ್ಯಾಪಾರ  ಪ್ರವೃತ್ತಿ  ಹೆಚ್ಚಿದಂತೇ  ಕ್ರಮೇಣ  ಪೇಟೆ  ಪಟ್ಟಣ  ನಗರಗಳು  ನಿರ್ಮಾಣವಾಗತೊಡಗಿದವು.  ಇವೆಲ್ಲ   ಇಡೀ  ಮಾನವ  ಜಗತ್ತಿನ   ಜನಪದಕ್ಕೆ  ಸಾಮಾನ್ಯವಾಗಿ   ಅನ್ವಯಿಸಿದರೂ,  ಒಂದೊಂದು  ಪ್ರದೇಶ,  ಜನಾಂಗಗಳಲ್ಲಿ   ಸೃಷ್ಟಿಗೊಂಡ  ಸಂಸ್ಕೃತಿಯಲ್ಲಿ, ಸೂಕ್ಷ್ಮ ವಿಭಿನ್ನತೆಯಿದೆ.  ವೈವಿಧ್ಯತೆಯಿದೆ 

                ಮಲೆನಾಡಿನ  ಗೌರಿ  ಗಣೇಶ  ಹಬ್ಬ   ಕೃಷಿಮೂಲ  ಸಂಸ್ಕೃತಿಯ  ಮತ್ತೊಂದು   ಸುಂದರ  ಉದಾಹರಣೆಯಾಗಿದೆ.   ಮಳೆಗಾಲದ  ನಟ್ಟನಡುವೆ   ಜರುಗುವ  ಗೌರಿ  ಹಬ್ಬದಲ್ಲಿ,  ಗೌರಿ  ಮತ್ತು  ಬಾಲಗಣೇಶರನ್ನು   ಹಬ್ಬಕ್ಕೆ  ಆಹ್ವಾನಿಸಲಾಗುತ್ತದೆ.   ಆಗ   ಮಹಿಳೆಯರು   ಹಾಡುವ     ಹಾಡು  ಗಮನಸೆಳೆಯುತ್ತದೆ.

                ಕಾಡ  ಕೆಸುವಿನ  ಸೊಪ್ಪು,  ಮೂಡ  ಹಾಗಲ /  ಕಾಡಿನೊಳಗಿರುವ  ಬಿದಿರಿನ   ಕಳಲೆಯ /

                ತಂದು  ಶೋಧಿಸಿ  ಮಾಡೆ   ಹಡೆದಮ್ಮಾ //

               ಅಡಕೆ   ನೂರಾಗಲಿ,  ಮೆಣಸು  ತೂಕೇರಲಿ,  /  ಹರಿವಾಣಕೆ  ಲಕ್ಷ್ಮಿ  ಒಲಿಯಾಲಿ/  ಯೆಂದೇಳಿ /

                ಪದಕದಾರತಿಯಾ   ಬೆಳಗೀರೆ.//       

 ಎಷ್ಟೆಂದರೂ  ಕೃಷಿ  ಎನ್ನುವುದು   ಪ್ರಕೃತಿಯ  ವರ.   ಪ್ರಕೃತಿ  ಮುನಿದರೆ  ರೈತ  ದಿವಾಳಿ.  ಕಾಲಕ್ಕೆ  ತಕ್ಕಹಾಗೇ  ಮಳೆ   ಬಿಸಿಲು  ಚಳಿ ಬೀಳಬೇಕು.  ಅತಿಮಳೆ,  ಅತಿ  ಬರಗಳು  ಶಾಪದಂತೇ  ಕೃಷಿಕನ ಮೇಲೆರಗುತ್ತದೆ.  ಅದೇ  ಕಾರಣಕ್ಕೆ  ಜನರು  ಆವಾವ  ಅಪಾಯಗಳಿಗೆಲ್ಲವಕ್ಕೂ  ಒಂದೊಂದು  ದೈವಗಳನ್ನು  ಸೃಷ್ಟಿಸಿ  ಪೂಜಿಸುತ್ತಾರೆ.

            ಉತ್ತರಕನ್ನಡ  ಜಿಲ್ಲೆಯ  ವೈವಿಧ್ಯಮಯ  ಸಮುದಾಯಗಳ,  ಹಬ್ಬ ಹರಿದಿನ, ಮದುವೆ,  ಉರುಟಣೆ,  ಮುಂತಾದ  ವಿಶೇಷ  ಕ್ಷಣಗಳಲ್ಲಿ  ಸೃಷ್ಟಿಯಾದ  ಅಸಂಖ್ಯಾತ   ಅನನ್ಯ  ಹಾಡುಗಳನ್ನು  ದಾಖಲಿಸುತ್ತಾ  ಹೋದರೆ  ಬ್ರಹದ್‌  ಗ್ರಂಥವೇ  ಆದೀತು.  ಉದಾಹರಣೆಗಾಗಿ,  ನಾಡವರ  ಮದುವೆಯ  ದಿಬ್ಬಣದ ಸಡಗರದ  ವರ್ಣನೆಯನ್ನು  ಗಮನಿಸಬಹುದಾಗಿದೆ.

ʻʻ  ಗಿಂಡೇ  ಗಿಡಬಿಡಿಯೇ  ಎಂಬತ್ತೂ ದಂಡೂಗೇ /  ಮುಂದೆ  ಭಾರತದ  ಸಮಜೋಡ /  ದಿನಿಕೇಳೇ /  

ಬಾರದಿದ್ದವರ  ಬರುವಾರೇ //

 ಕಾಳೇಯೋ  ಕರ್ನಿಯೋ  ಬೋರಂಬು  ಮದ್ದಾಳೇ /  ಆಲೀಸಿ  ನುಡುವಾ ಸುರತೀಯೇಯ / ದಿನಿಕೇಳೇ /  ಬಲ್ಲೆನೆಂಬವ್ರು  ಬರುವಾರೇ //

ಕುದ್ರೇ  ಕುದ್ರೇ  ಮುಂದೆ  ಕುದ್ರಿಯಾ  ಮರಿಮುಂದೆ /  ಚಿದ್ರೆ  ನನ್ನಮ್ಮಾ  ಮಗ ಮುಂದೇ /  ಹೋಗುವಾಗೇ /

ಪಟ್ನಾದಲ್‌   ದ್ಯೇವರೊಲದಾಂಗೇ //

ದೊರಗೋಳ್‌  ದಿಬ್ಬಣ್ವೇ   ಕಿತ್ತಿಟ್ಟೇ  ಬರುವಾಗೇ /  ಗ್ವೋವಿಯಲೆದ್ದಾ  ಸರ್ಪಾನೇ /  ಬೋರೆಟ್ಟಾಂಗೇ /

ಮಾರಾಯ್ರ  ಹಡಗ್ಹತ್ತೇ   ಬರುವಾರ //  

 ಮಹಾರೋಗ,  ಬರಗಾಲ,

ಪ್ಲೇಗು,  ಮೈಲಿ, ಸಿಡುಬು,  ಮುಂತಾದ  ಮಹಾರೋಗಗಳು  ಇಡೀ  ಇಡೀ  ಗ್ರಾಮವನ್ನೇ  ಆಕ್ರಮಿಸಿ  ಅಸಂಖ್ಯ  ಸಾವು  ನೋವಿಗೆ  ನೂಕುತ್ತಿರುವಾಗ,   ಪ್ಲೇಗಮ್ಮ,  ಮೈಲಿಯಮ್ಮ  ನಂಥ   ದೈವಗಳು  ಸೃಷ್ಟಿಯಾಗುತ್ತವೆ.  ಸಾರ್ವತ್ರಿಕವಾಗಿ   ಗ್ರಾಮಗಳು  ಒಗ್ಗಟ್ಟಾಗಿ   ಅಂಥ  ದೇವತೆಗಳ  ಆರಾಧನೆಗೆ  ತೊಡಗಿಕೊಳ್ಳುತ್ತವೆ.  ನಿರ್ದಿಷ್ಟ  ದಿನದಂದು, ಊರ  ಯಜಮಾನ  ಕಂಕಣತೊಟ್ಟು  ಪೂಜೆಸಲ್ಲಿಸುತ್ತಾನೆ.  ಕುರಿ  ಕೋಳಿಗಳ  ಬಲಿ  ನೀಡಲಾಗುತ್ತದೆ.  ಬಡಗಿಯ  ಮನೆಯಿಂದ  ತರಲಾದ   ಮಾರಿಯಮ್ಮನ  ಮೂರ್ತಿಗೆ  ಪೂಜೆ  ಬಲಿಸಲ್ಲಿಸಿ,  ಅದಕ್ಕಾಗಿಯೇ  ನಿರ್ಮಿಸಲಾದ  ಪುಟ್ಟ  ಗುಡಿಸ್ವರೂಪದ  ಗಾಡಿಯಲ್ಲಿ  ಕೆಂಪು  ಮಾರಿಯಮ್ಮನನ್ನು  ಕೂಡಿಸಿ  ಊರಿನ  ಜನರೆಲ್ಲರ  ಮೆರವಣಿಗೆಯ  ಮೂಲಕ  ಮತ್ತೊಂದು  ಊರಿನ  ಗಡಿಗೆ  ತಲುಪಿಸಲಾಗುತ್ತದೆ.    ಊರಿನವರು  ಮುಂದಿನೂರಿಗೆ.  ಮೆರವಣಿಗೆ  ಏಳು  ಗ್ರಾಮ  ದಾಟಿ,  ಹೊಳೆ  ಅಥವಾ  ಕೆರೆಯಲ್ಲಿ  ಮಾರಿಯಮ್ಮನ  ಮೂಗು  ಮತ್ತು  ಮೊಲೆಯನ್ನು  ಕೊಯ್ದು  ವಿಸರ್ಜಿಸುವುದರೊಂದಿಗೆ   ಗಡಿಮಾರಮ್ಮನ  ಹಬ್ಬ  ಮುಕ್ತಾಯವಾಗುತ್ತದೆ.   ಅದು    ಕೊರೋನಾ  ರೋಗದ  ವಿರುದ್ಧವೂ   ಕೆಲವು  ಗ್ರಾಮಗಳಲ್ಲಿ  ಜರುಗಿದ  ವದಂತಿಯಿದೆ.

                                   

          ಮಾಟ  - ಮಂತ್ರ.- ಮರೂಡಿ.    

        ತಲೆ  ತಲಾಂತರದಿಂದ  ಗ್ರಾಮೀಣರಲ್ಲಿ  ಮಾಟ  ಮಂತ್ರಗಳ  ಬಗೆಗೆ  ಭಯ  ಮತ್ತು  ಭಕ್ತಿ  ನೆಲೆನಿಂತಿದೆ.  ಹೀಗಾಗಿಯೇ   ಪ್ರತಿ  ಗ್ರಾಮಗಳಲ್ಲೂ  ಮಾಟಗಾರರು  ನೆಲೆ ನಿಂತಿದ್ದಾರೆ. ಜಾನಪದ  ಕತೆಗಳಲ್ಲಿಯಂತೂ  ಮಾಟ  ಮಂತ್ರಗಳು  ಹಾಸುಹೊಕ್ಕಾಗಿವೆ.  ಮನುಷ್ಯನನ್ನು  ಪ್ರಾಣಿಯನ್ನಾಗಿಸುವುದು,  ವೈರಿಯನ್ನು  ಮಾಟಮಾಡಿಯೇ  ಕೊಲೆಗೈಯ್ಯುವುದು,  ಮಳೆ ಬರಿಸುವುದು,  ಬೆಂಕಿಯನ್ನು  ಸೃಷ್ಟಿಸುವಂಥ   ವೈವಿಧ್ಯಮಯ  ಪವಾಡಗಳು  ಕತೆಗಳಲ್ಲಿ  ಜರುಗುತ್ತವೆ.  ಪ್ರಕೃತಿಯ  ಅನಿರೀಕ್ಷಿತ  ಆಘಾತ,  ವೈಪರೀತ್ಯಗಳು  ಸೃಷ್ಟಿಸುವ  ಭಯಾನಕ  ಪರಿಸ್ಥಿತಿಯನ್ನು  ಎದುರಿಸುವ,  ಮತ್ತು  ನಿಸರ್ಗವನ್ನೇ  ನಿಯಂತ್ರಿಸುವ  ಪ್ರಯತ್ನ  ಇಂಥ  ಮಾಟ  ಮಂತ್ರಗಳ  ಪ್ರಕ್ರಿಯೆಗಳಲ್ಲಿ  ನಾವು  ಕಾಣಬಹುದಾಗಿದೆ.    ಕರ್ನಾಟಕದ  ಸರಿಸುಮಾರು  ಎಲ್ಲ  ಹಿಂದುಳಿದ  ವರ್ಗಗಳಲ್ಲಿ  ಈಗಲೂ  ಬಳಕೆಯಲ್ಲಿರುವ  ʻʻ ಮಾಟʼʼ ಎಂಬ  ಪದ್ಧತಿ ಯಲ್ಲಿ  ಎರಡು  ವಿಧ  ಎಂದು  ಗುರುತಿಸಿದ್ದಾರೆ.( ಪ್ರೊ- ಅಂಬಳಿಕೆ  ಹಿರಿಯಣ್ಣ )   ಅನುಕರಣ  ಮಾಟ  ಮತ್ತು  ಸಂಕರ ಮಾಟ  ಎಂದು.   ವೈರಿಯೊಬ್ಬನ  ಪ್ರತಿಕೃತಿಯನ್ನು  ಮಣ್ಣು  ಮರ  ಅಥವಾ  ಮೇಣದಲ್ಲಿ  ರಚಿಸಿ,  ವಿಧಿಯುಕ್ತವಾಗಿ  ಆಘಾತಕ್ಕೆ  ಒಳಪಡಿಸಿದರೆ, ಅದರ  ಪರಿಣಾಮ  ವೈರಿಗೆ  ತಾಕುತ್ತದೆ.  ಇದಕ್ಕೆ  ದುಷ್ಟಮಾಟ  ಎನ್ನುತ್ತಾರೆ.

        ಒಬ್ಬ  ವ್ಯಕ್ತಿಗೆ  ಸಂಬಂಧಿಸಿದ  ಯಾವುದೇ  ಬಳಕೆ ವಸ್ತುವನ್ನು  ಸಂಪಾದಿಸಿ, ಅದರಮೂಲಕ    ವ್ಯಕ್ತಿಗೆ  ಕೆಡುಕನ್ನುಂಟು  ಮಾಡುವುದು  ಸಂಕರ ಮಾಟದ  ಪದ್ಧತಿ.  ವೈರಿಯ  ಉಗುರು  ಬಟ್ಟೆ  ಕೂದಲು  ಯಾವುದೇ  ಒಂದನ್ನು  ಮಂತ್ರಿಸಿ, ಅವನು  ನಡೆದಾಡುವ  ದಾರಿಯಲ್ಲಿ  ಚೆಲ್ಲಲಾಗುತ್ತದೆ.  ಅವನು    ವಸ್ತುವನ್ನು  ತುಳಿದ ಕ್ಷಣದಿಂದಲೇ  ಆ ವ್ಯಕ್ತಿಯ  ಅವನತಿ  ಪ್ರಾರಂಭವಾಗುತ್ತದೆ   ಎಂದು  ನಂಬಲಾಗುತ್ತದೆ.

              ಅಮಾವಾಸ್ಯೆಯ  ಮಧ್ಯರಾತ್ರಿಗಳಲ್ಲಿ ,   ಮಾಟಗಾರ  ಅದರ  ಸಿದ್ಧಿಪಡೆಯುತ್ತಾನಂತೆ. ಉದ್ದೇಶಿತ  ವ್ಯಕ್ತಿಯ  ಕೂದಲು  ಬಟ್ಟೆ  ಮುಂತಾದ  ವಸ್ತುವನ್ನು  ಸಂಗ್ರಹಿಸಿ,  ಬಸರಿ  ಮರದಿಂದ  ತಯಾರಿಸಿದ  ವ್ಯಕ್ತಿಯ  ಗೊಂಬೆಗೆ  ಬಿಗಿದು, ಸ್ಮಶಾನದಲ್ಲಿ  ಪೂಜೆಗೈದು, ಗೊಂಬೆಗೆ  ಆಯುಧದಿಂದ  ಘಾಸಿಗೊಳಿಸಲಾಗುತ್ತದೆ.  ಆಗ  ಉದ್ದೇಶಿತ   ವ್ಯಕ್ತಿಗೂ  ತಟ್ಟುತ್ತದೆ  ಎಂದು  ಅವರು  ನಂಬುತ್ತಾರೆ. ಮಾಟಕ್ಕೆ  ಒಳಗಾದ  ವ್ಯಕ್ತಿಯ ಮೇಲಾದ  ದುಷ್ಟಪರಿಣಾಮಗಳನ್ನು  ನಿವಾರಿಸುವ  ಕ್ರಮವೂ  ಇದೆ. ರಾಜ್ಯದ  ತುಂಬೆಲ್ಲ  ಇಂಥ  ಮಾಟ  ಮರೂಡಿಗಳು  ಕ್ಷೀಣವಾಗಿಯಾದರೂ  ಪ್ರಚಲಿತದಲ್ಲಿಯೇ  ಇವೆಯಂತೆ.  ಅದಕ್ಕೆ    ಜಿಲ್ಲೆಯೂ  ಹೊರತಾಗಿಲ್ಲ.  ಇಂಥ  ಕ್ರೂರ  ಪದ್ಧತಿಗಳು  ಸಾಮಾಜಿಕವಾಗಿ  ಬಹಿಷ್ಕೃತಗೊಂಡಿರುವುದರಿಂದ  ಅಲ್ಲಲ್ಲಿ  ಗುಟ್ಟಾಗಿ  ನಡೆಸುತ್ತಿರುವ   ಸಂಗತಿ  ಆಗಾಗ  ಕೇಳಬರುತ್ತದೆ.

            ಮಾಟದಲ್ಲಿ  ಸೌಮ್ಯ ಮಾರ್ಗಗಳೂ  ಇವೆ.  ದೃಷ್ಟಿದೋಷ,  ಖಾಯಿಲೆ  ಕಸಾಲೆ, ಭೂಮಿದೋಷ,  ಬೆಳೆಗಳ ರೋಗ, ಮುಂತಾದ  ಸಮಸ್ಯೆಗಳ  ನಿವಾರಣೆಗೆ,  ಸೌಮ್ಯ  ಚಿಕಿತ್ಸಕರು  ಎಲ್ಲೆಂದರಲ್ಲಿ  ಕಾಣಸಿಗುತ್ತಾರೆ.  ಹಾವು  ಕಡಿದರೆ  ಪಂಚಲೋಹದ  ತಗಡಿನಲ್ಲಿ  ತಾಯತಿ  ಬರೆದು, ಗರುಡ  ಮಂತ್ರವನ್ನು  ಪಠಿಸುತ್ತಾರೆ.

      ಮಕ್ಕಳಿಗೆ  ದೃಷ್ಟಿಯಾದರೆ  ಕಡ್ಡಿನೀವಳಿಸುವುದು, ಸಾಮಾನ್ಯವಾಗಿ  ನಡೆಯುವ  ವಾಡಿಕೆ.  ಮೂರು ಬಾರಿ  ಕಡ್ಡಿ  ನೀವಳಿಸಿ  ಕಾದ  ಬಿಳಿಕಲ್ಲಿನ  ಮೇಲೆ  ಕೂದಲು  ಮೆಣಸು  ಉಪ್ಪು  ಕಸಕಡ್ಡಿಗಳನ್ನು  ಚೆಲ್ಲಿ  ಚಟ್‌  ಎನ್ನಿಸುವುದು  ಸಂಪ್ರದಾಯ. 

             ಹಾದಿಕಣ್‌, ಬೀದಿಕಣ್‌ / ಬಂದರ್‌  ಕಣ್‌  ಹೋದರ್‌  ಕಣ್ ಕೂತರ್‌  ಕಣ್‌,  ನಿತ್ತರ್‌ ಕಣ್‌ /       

             ಅಪ್ಪನ್‌  ಕಣ್‌  ಅವ್ವನ್‌   ಗುಬ್ಬಿಕಣ್‌   ಬೆಕ್ಕಿನ್‌  ಕಣ್‌ / ನಾಯಿ  ಕಣ್‌   ನರಿಕಣ್‌ / 

             ಎಲ್ಲಾರ್ದು  ಹೊಟ್ಟಾರಿ   ಚಟ್‌   ಅನ್ಲಿ // ಕೆಟ್‌  ಕಣ್‌   ಕೀಳ್‌  ಕಣ್‌ / ನಾಯಿ  ಕಣ್‌   ನರಿಕಣ್‌ / 

             ಬಸ್ರಿಕಣ್‌  ಬಾಣಂತಿ  ಕಣ್‌ /  ಎಲ್ಲಾರ್ದು  ಹೊಟ್ಟಾರಿ /  ಸಟ್‌ ಅಂದು   ಸಿಡೀಲಿ. //

       ಮಗುವಿಗೆ  ಖಾಯಿಲೆಯಾದಾಗ  ಕೆಟ್ಟ  ಕಣ್ಣು  ಬಿದ್ದಿದೆ  ಎಂದು  ನಂಬುತ್ತಾರೆ. ತಟ್ಟೆಯೊಂದರಲ್ಲಿ  ಅರಿಷಿಣ  ನೀರು  ತುಂಬಿ, ಉರಿಯುವ  ಕೆಂಡವನ್ನು  ಅದರಲ್ಲಿ  ಮುಳುಗಿಸಿ  ಮಗುವಿಗೆ  ಮೂರುಬಾರಿ  ಸುಳಿದು   ನೀರಿಗೆ ಚೆಲ್ಲುತ್ತಾರೆ.    ನೀರು  ಕೆಂಪಗಾದರೆ  ದೃಷ್ಟಿ  ತಗುಲಿದೆಯೆಂದರ್ಥ.  ಮಂತ್ರಿಸಿದ  ಲಿಂಬೂ, ಮೆಣಸಿನಕಾಯಿ,  ಕುಂಕುಮ  ಮುಂತಾದ  ವಸ್ತುವನ್ನು  ಮೂರುದಾರಿ  ಸೇರುವಲ್ಲಿ  ಚೆಲ್ಲುತ್ತಾರೆ. ಅಲ್ಲಿ  ಸಂಚರಿಸುವವರಿಗೆ  ಅದು  ತಾಗಿ,  ದೃಷ್ಟಿ  ಅವರಿಗೆ  ತಾಗುತ್ತದೆ  ಎಂಬುದು  ಜನಪದರ  ನಂಬುಗೆ.  ಸಾಮಾನ್ಯವಾಗಿ  ಹಿಂದುಳಿದ  ಎಲ್ಲ  ಸಮುದಾಯಗಳಲ್ಲಿ  ಈಗಲೂ  ಬಳಕೆಯಲ್ಲಿರುವ    ಮಂತ್ರ ಚಿಕಿತ್ಸೆ  ಮೇಲ್ವರ್ಗದಲ್ಲೂ   ಕ್ವಚಿತ್ತಾಗಿ  ಕಾಣಿಸುತ್ತದೆ.  ಮೇಲೆ  ಉದಹರಿಸಿದ  ಆಕರ್ಷಕ  ಕನ್ನಡ  ಮಂತ್ರವನ್ನು  ಹಿರಿಯರಿಂದ  ಉಪದೇಶ  ಪಡೆದು  ಪ್ರಯೋಗಿಸುತ್ತಾರೆ.

                  

                       ಪ್ರಾಣಿ  ಮತ್ತು  ಮನುಷ್ಯ  ಸಂಬಂಧ  (  ಆಕಳು  ಎತ್ತು.)  

          ಪ್ರಾಣಿ  ಮತ್ತು  ಮನುಷ್ಯ  ಸಂಬಂಧಕ್ಕೆ  ಮಾನವನಿಗಿರುವಷ್ಟೇ  ಇತಿಹಾಸವಿದೆ.  ಅದರಲ್ಲಿಯೂ  ಭಾರತೀಯ  ಕೃಷಿಕನಿಗೂ  ಆಕಳು  ಎತ್ತುಗಳಿಗೂ  ಅವಿನಾಭಾವ  ಸಂಬಂಧವಿದೆ.  ಗೋವು  ಎಂಬುದು  ಕೇವಲ  ಪ್ರಾಣಿಯಲ್ಲ.  ಅದು  ಸಾಕ್ಷಾತ್‌  ದೈವವೇ  ಆಗಿದೆ.  ಗೋ  ಮಹಿಮೆಯ  ಬಗೆಗಂತೂ   ಜಾನಪದದಲ್ಲಿ  ಸಾವಿರಾರು  ಹಾಡುಗಳು  ರಚನೆಯಾಗಿವೆ. 

               ದೃಷ್ಟಿಸಿ  ಕರೆದರೆ  ಹೊಸ್ತಿಲಿಗೆ  ನಾ  ಬರುವೆ, /  ಹಾದಿ  ಕಸವನೆ  ತಿಂದು /

               ಮನೆಗೆ ಬಂದರೆ / ಅಮೃತವನೆ  ಕರೆವರೋ /ಎನ್ನ  ಅಮೃತವನುಂಡು  /

               ಎನಗೆರಡು  ಬಗೆವರೋ / ಅನ್ಯಾಯ  ಪಾಪಿಗಳ  ನೋಡಿರಯ್ಯಾ/

               ಹಾಕಿದರೆ  ಹೆಂಟ್ಯಾದೆ / ತಟ್ಟಿದರೆ  ಕುಳ್ಳಾದೆ/ ಸುಟ್ಟರೆ  ನೊಸಲಿಗೆ  ಗಂಗರವಾದೆ/

               ಭೂತ  ಪ್ರೇತಗಳಿಗೆ  ಕಟ್ಟು  ಕಾವಲು ಆದೆ./  ದಾನವರಿಗಾದೆ  ಮಾನವರಿಗಾದೆ/

               ಜಯಮಂಗಲೆ  ನಿತ್ಯ  ಶುಭ ಮಂಗಲೆ //                                                                                                                                  ಹವ್ಯಕರ  ಹಾಡುಗಳ  ಸಂಗ್ರಹದಿಂದ )

             ಹೀಗೆ  ಗೋವನ್ನ  ಹೊಗಳುತ್ತಲೇ   ಸತ್ಯಕ್ಕಾಗಿ  ಪ್ರಾಣಕೊಡಲು  ಸಿದ್ದಗೊಂಡ  ಪುಣ್ಯಕೋಟಿ  ಗೋವಿನ  ಕಥೆಯನ್ನು  ಹಾಡಿ  ಹೊಗಳುತ್ತಾರೆ.  ಕನ್ನಡ ನಾಡಿನಾದ್ಯಂತ  ಸರ್ವಜನಪ್ರಿಯವಾದ  ಗೋವಿನ ಹಾಡು,  ಪ್ರತಿಯೊಬ್ಬ  ಕೃಷಿಕನಿಗೂ  ಚಿರ ಪರಿಚಿತ.

              ಕೃಷಿಯಲ್ಲಿಯ  ಹೊಲದ  ಹೂಟಿಗೆ.  ಬೆಳೆಯನ್ನು  ಒಕ್ಕಿ  ಮನೆಗೆ ಸಾಗಿಸಲು,  ಏತದಲ್ಲಿ  ನೀರೆತ್ತಲು,  ಎತ್ತುಗಳು  ಅನಿವಾರ್ಯ.  ಎತ್ತು  ರೈತನ  ಜೀವವಿದ್ದಂತೆ.  ಅದೂ  ಸಹ  ಅವನಿಗೆ  ಪ್ರಮುಖ  ದೈವವೇ  ಆಗಿದೆ.  ಶಿವನ  ವಾಹನವನ್ನಾಗಿಸಿ,  ಬಸವನೆಂದು  ಕರೆಯಿಸಿಕೊಂಡ  ಎತ್ತು   ಜನಪದರ  ಹಾಡುಗಳಲ್ಲಿ  ಹಾಸುಹೊಕ್ಕಾಗಿವೆ.

                 ʻʻ ಬೆಳ್ಳಾನ  ಎರಡೆತ್ತು  ಬೆಳ್ಳಿಯ  ಬಾರಕೋಲ /

              ಬಂಗಾರ  ಮಂಡಿ  ಬಲಗೈಗೆ / ಹಿಡಕೊಂಡು /

              ಹೊನ್ನ  ಬಿತ್ಯಾರಾ  ಹೊಳಿಸಾಲೋ //ʼʼ

              ಕರುಣ   ಬಂದರೆ  ಕಾಯೋ   ಮರಣ  ಬಂದರೆ  ಒಯ್ಯೋ  /

               ಕರುಣಿ  ಕಲ್ಯಾಣಿ   ಬಸವಣ್ಣ / ಶಿವಲಿಂಗ /

               ಕಡೆತನಕ  ಕಾಯೋ   ಅಭಿಮಾನ //ʼʼ

      ಮಳೆಗಾಲ  ಮತ್ತು  ಚಳಿಗಾಲ  ಬಿಟ್ಟರೆ ಬೇಸಿಗೆಯ  ಸಮಯ  ಗ್ರಾಮ ಜೀವನಕ್ಕೆ  ಕೊಂಚ  ಬಿಡುವು  ನೀಡುತ್ತದೆ.  ಆಗ  ಪ್ರದರ್ಶನ  ಕಲೆಗಳು  ಗರಿಗೆದರುತ್ತವೆ.  ಬಯಲಾಟ, ಕೋಲಾಟ, ದೊಡ್ಡಾಟ, ಸಣ್ಣಾಟ, ಯಕ್ಷಗಾನ  ಮುಂತಾದ  ರಂಗ  ಪ್ರದರ್ಶನಗಳು  ಸಂಭ್ರಮದಿಂದ  ಪ್ರಾರಂಭಗೊಳ್ಳುತ್ತವೆ. 

         ಅದರಲ್ಲಿಯೂ  ಯಕ್ಷಗಾನ  ಒಂದು  ಜನಪದ  ಕಲಾಪ್ರಕಾರವಾಗಿ,  ಸುಶೀಕ್ಷಿತರ  ರಂಗಪ್ರವೇಶದಿಂದ,  ರಾಷ್ಟ್ರ ಅಂತರ್ರಾಷ್ಟ್ರ  ಮಟ್ಟದಲ್ಲಿ  ಮಿಂಚುತ್ತಿದೆ.  ನಮ್ಮ  ರಾಜ್ಯದ  ಪ್ರಾತಿನಿಧಿಕ  ಕಲಾಪ್ರಕಾರವಾಗಿ  ಶಾಸ್ತ್ರೀಯತೆಯ  ದಿಕ್ಕಿಗೆ  ದಾಂಗುಡಿಯಿಡುತ್ತಿದೆ.  ರಾಷ್ಟ್ರಮಟ್ಟದ  ಹಲವು  ಪ್ರಶಸ್ತಿ  ಪುರಸ್ಕಾರಗಳನ್ನು  ಪಡೆಯುವುದರೊಂದಿಗೆ,  ವಿಕಾಸಗೊಳ್ಳುತ್ತಿರುವ  ಯಕ್ಷಗಾನ   ಗೀತ, ವಾದನ,  ನೃತ್ಯ  ಮಾತು, ಮತ್ತು  ಬಣ್ಣಗಾರಿಕೆಗಳಿಂದ  ಸಮೃದ್ಧವಾಗಿ  ರೂಪುಗೊಂಡಿರುವ    ಕಲೆ  ಜಗತ್ಪ್ರಖ್ಯಾತ  ಗೊಳ್ಳುತ್ತಿದೆ.   ಮಲೆನಾಡು  ಮತ್ತು  ಕರಾವಳಿಯ  ಮಣ್ಣಿನಲ್ಲಿ  ಹುಟ್ಟಿ  ಬೆಳೆದರೂ, ಇಡೀ  ವಿಶ್ವವನ್ನು  ವ್ಯಾಪಿಸುವ  ಶಕ್ತಿಯನ್ನು  ಪಡೆದುಕೊಳ್ಳುತ್ತಿದೆ.  ವೃತ್ತಿ ಮೇಳ,  ಹವ್ಯಾಸೀ  ಮೇಳಗಳ, ವರ್ಷದ  ಆರುತಿಂಗಳಿನ   ಅನುದಿನದ  ಪ್ರದರ್ಶನಗಳಲ್ಲಿ  ಪಾಲ್ಗೊಳ್ಳುವ  ಅಸಂಖ್ಯಾತ  ಪ್ರೇಕ್ಷಕ  ಗಣಗಳ  ಸಂಖ್ಯೆ  ವಿಶ್ವದಾಖಲೆ  ನಿರ್ಮಿಸಿದೆ.   ಯಕ್ಷಕಲೆ  ಕೇವಲ  ಮನರಂಜನೆಗಾಗಿ  ಮಾತ್ರ  ಸೃಷ್ಟಿಯಾಗಿಲ್ಲ.  ಅದೊಂದು  ಅನೌಪಚಾರಿಕವಾಗಿ, ತಾತ್ವಿಕ. ಪೌರಾಣಿಕ, ಐತಿಹಾಸಿಕ   ಶಿಕ್ಷಣಸಂಘಟನೆಯಾಗಿಯೂ   ವರ್ತಿಸಿದ್ದರಿಂದ,  ಜನತೆಯಲ್ಲಿ,  ಪೌರಾಣಿಕ  ತಾತ್ವಿಕ ಪ್ರಜ್ಞೆಯನ್ನು  ಜಾಗ್ರತ ಗೊಳಿಸಿದೆ. ಜಿಲ್ಲೆಯ  ಪ್ರತಿಯೊಂದು  ಸಮುದಾಯದ ಆಡುಮಾತಿಗೆ   ಅದರಲ್ಲಿಯೂ  ಕನ್ನಡ ಭಾಷೆಗೆ  ಘನತೆ  ತಂದುಕೊಟ್ಟ  ಕೀರ್ತಿಗೆ  ಯಕ್ಷಗಾನ  ಭಾಜನವಾಗಿದೆ.

ಹತ್ತೊಂಭತ್ತನೆಯ   ಶತಮಾನದ  ಪ್ರಾರಂಭದ  ದಶಕದಲ್ಲಿ   ಕರ್ಕಿ ಯಕ್ಷಗಾನ ಮೇಳ   ಮುಂಬಯಿಪ್ರಾಂತ  ಪ್ರವೇಶಿಸುತ್ತದೆ.  ಅಲ್ಲಿಯ  ಕಲಾಸಕ್ತರನ್ನು  ತನ್ನ  ಸಂಗೀತ, ನೃತ್ಯ, ವೇಷವರ್ಣಿಕೆ  ಮತ್ತು  ಅರ್ಥಗಾರಿಕೆಯಿಂದ  ಆಕರ್ಷಿಸುತ್ತದೆ.   ಯಕ್ಷಕಲೆಯ  ಅಸದೃಷ  ಪರಿಣಾಮ  ಮುಂಬಯಿರಾಜ್ಯದ  ಮೇಲೆ  ಅದೆಷ್ಟು  ಗಾಢ  ಪರಿಣಾಮ  ಬೀರಿತೆಂದರೆ,  ಅಲ್ಲಿ  ಹೊಸದೊಂದು  ರಂಗಭೂಮಿಯೇ  ಸೃಷ್ಟಿಯಾಯಿತು.  ಅದೊಂದು  ಹೊಸ  ನಾಟ್ಯ ಪ್ರಕಾರವಾಗಿ  ಯಕ್ಷಗಾನಕ್ಕಿಂತಲೂ  ಹಿರಿದಾದ  ಜನಪ್ರಿಯತೆಯನ್ನು  ಪಡೆಯಿತು.  ಇದೇ  ಶತಮಾನದಲ್ಲಿ,  ಕರ್ಕಿಮೇಳ   ಮೈಸೂರು  ಮಹಾರಾಜರ  ಆಸ್ಥಾನದಲ್ಲೂ  ತನ್ನ  ಹಿರಿಮೆ  ಮೆರೆದಿದ್ದು  ಮೈನವಿರೇಳಿಸುವ   ಇತಿಹಾಸವಾಗಿದೆ.  

        ಒಟ್ಟೂ  ನಮ್ಮ  ಜಿಲ್ಲೆಯ  ಜನಪದ  ಸಂಸ್ಕೃತಿಯನ್ನು  ಗಮನಿಸಿದಾಗ,  ಒಂದು  ಸತ್ಯ  ಹೊರಹೊಮ್ಮುತ್ತದೆ.  ಅದೆಂದರೆ,  ಗಾದೆ,  ಕತೆ  ಹಾಡುಗಳೆಲ್ಲವೂ  ಎಲ್ಲ  ಜಿಲ್ಲೆಗಳಲ್ಲಿ  ಪರಸ್ಪರ  ಕೊಡಕೊಳ್ಳುವಿಕೆಯಿಂದ  ಸಮೃದ್ಧಗೊಂಡಿವೆ.  ಉತ್ತರಕರ್ನಾಟಕದ  ಅದೆಷ್ಟೋ  ಹಾಡುಗಳು  ಇಲ್ಲಿಯ  ಭಾಷೆಗೆ  ಅನುವಾದಗೊಂಡಿವೆ.  ಸ್ತ್ರೀದೇವತೆಯ  ಬಗೆಗಿನ  ಜಾತ್ರೆ  ತೇರುಗಳ  ಹಿನ್ನೆಲೆಯ  ಕತೆಗಳಂತೂ  ರಾಜ್ಯಾದ್ಯಂತ  ಒಂದೇ ರೀತಿಯಲ್ಲಿ  ರಚಿತಗೊಂಡಿವೆ.   ಆಕಾಲದ  ಸಂಪರ್ಕದ  ಕೊರತೆ,  ಸಂವಹನದ  ಸಮಸ್ಯೆಯಲ್ಲೂ  ಆಳದ  ಕೃಷಿಸಂವೇದನೆ  ಪರಸ್ಪರರಲ್ಲಿ  ಬೆಸೆದಿರುವುದು   ಅಚ್ಚರಿ  ಮೂಡಿಸುತ್ತದೆ. 

         ಜನಪದದ  ಕಲಾಸೃಷ್ಟಿ  ಅದೊಂದು   ಮಹಾಸಾಗರ.  ಕೇವಲ  ಒಂದು  ಲೇಖನದ  ಮಿತಿಯಲ್ಲಿ,  ಎಲ್ಲ  ಸಮುದಾಯದ  ಒಡಲಲ್ಲಿ  ಹುದುಗಿರುವ  ಜನಪದ  ರತ್ನಗಳನ್ನು  ಸಂಗ್ರಹಿಸಿ  ಕೊಡಲಾಗದು.  ಅದರಲ್ಲಿಯೂ  ನಮ್ಮ  ಜಿಲ್ಲೆಯ  ಇನ್ನೂ  ಸಾಕಷ್ಟು  ಸಮುದಾಯದ  ಜನಪದ  ಸಾಹಿತ್ಯ  ಕಲೆಯನ್ನು  ಸಂಗ್ರಹಿಸಲು  ಸಾಧ್ಯವಾಗಿಲ್ಲ.  ಇನ್ನಾದರೂ    ಪ್ರಯತ್ನ  ನಡೆಯಬೇಕು.

     ನಮ್ಮ   ಜನಪದರಿಗೆ  ಕೃಷಿ  ಕೇವಲ  ವೃತ್ತಿಯಲ್ಲ.  ಪ್ರಕೃತಿಯೊಂದಿಗೆ  ಒಂದಾಗಿ,  ಪ್ರಕೃತಿಯೇ  ಆಗಿ, ಬದುಕುವ, ಜೀವಂತ  ಮಾರ್ಗ.  ಸಂಸ್ಕೃತಿ  ಅಂದರೇನೆ  ತಿದ್ದಿ  ತೀಡಿದ  ನಡವಳಿಕೆ.  ಶತಮಾನಗಳ  ಬದುಕಿನ  ದಾರಿಯಲ್ಲಿ, ತಾವು  ಅನುಭವಿಸಿದ  ಸುಖ  ದುಃಖ,  ನೋವು  ನಲಿವು, ಜಗಳ  ಪ್ರೀತಿ  ಯಂತ  ಎಲ್ಲ  ಮಾನವ  ಚಟುವಟಿಕೆಗಳನ್ನು   ಕಲೆಯಲ್ಲಿ  ಎರಕಹೊಯ್ದು  ಮುಂದಿನ  ತಲೆಮಾರಿಗೆ  ದಾರಿ ದೀಪವನ್ನು  ಬೆಳಗಿಸಿದ  ನಮ್ಮ  ಜನಪದರು  ಧನ್ಯರು. 

            ===================================================

   

ಆಧಾರ  ಪಠ್ಯ--    ಉತ್ತರಕನ್ನಡದ  ಜನಪದ  ರಂಗಭೂಮಿ. ( ಡಾ- ಶ್ರೀಪಾದ  ಭಟ್‌ )

                          ಡಾ || ಎನ್ ಆರ್‌  ನಾಯಕ್.

                  ಜಾನಪದ  ಸಮಾಗಮ. ( ಪ್ರೊ-  ಅಂಬಳಿಕೆ  ಹಿರಿಯಣ್ಣ )

 

            =====================================================                                                                  

 

                                                              ಸುಬ್ರಾಯ  ಮತ್ತೀಹಳ್ಳಿ. 

 ತಾ-  ೨೦-೮- ೨೦೨೨.

ಪ್ರಮೋದ  ಹೆಗಡೆ  ಯಲ್ಲಾಪುರ,   ಅಭಿನಂದನಾ  ಸಂಚಿಕೆಗೆ .

No comments:

Post a Comment