Tuesday 26 September 2023

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ.

 

ಮನುಷ್ಯ  ಜಗತ್ತಿನ   ಕೋಟ್ಯಾಂತರ  ಜೀವ  ಪ್ರಬೇಧಗಳಲ್ಲಿ  ಒಬ್ಬ.  ಆದರೆ  ಎಲ್ಲ ಜೀವಿಗಳಿಗಿಂತ  ಶ್ರೇಷ್ಠ ವಾದ  ಮನಸ್ಸು  ಅಥವಾ  ಮಿದುಳನ್ನು  ಪಡೆದಿರುವುದರಿಂದ,  ಮನುಷ್ಯ  ಎಂದು  ಹೆಸರಿಸುತ್ತೇವೆ.  ಮನುಷ್ಯ  ಪ್ರಾಣಿಗಳಿಗಿಂತ   ದುರ್ಬಲನಾದರೂ   ಬುದ್ಧಿಯ  ವಿಷಯದಲ್ಲಿ,  ಅತ್ಯಂತ  ಚುರುಕಾಗಿದ್ದಾನೆ.  ಸ್ವಯಂ  ವಿಚಾರಶಕ್ತಿ,  ನಿರ್ಣಯ ಶಕ್ತಿ,  ನೈತಿಕತೆ, ಮತ್ತು  ಕ್ರಿಯಾಶೀಲತೆಯಂಥ   ಗುಣಗಳನ್ನು  ಪ್ರಕೃತಿ  ದಯಪಾಲಿಸಿದ್ದಾಳೆ.   ವಿಶ್ವದ  ಉಳಿದೆಲ್ಲ  ಪ್ರಾಣಿ  ಪಕ್ಷಿ  ನೀರು  ಗಾಳಿ   ಅರಣ್ಯ  ಮತ್ತೂ  ಭೂಮಿಯ  ಸುರಕ್ಷತೆಗಾಗಿಯೇ  ಪ್ರಕೃತಿ   ಮನುಷ್ಯನಿಗೆ     ಎಲ್ಲ  ವೈಶಿಷ್ಟ್ಯವನ್ನು   ನೀಡಿದ್ದಾಳೆ   ಎಂದು  ತಿಳಿದಿದ್ದೇನೆ. 

    ಆದರೆ   ವರ್ತಮಾನದ   ಮಾನವಲೋಕದ  ವರ್ತನೆಯನ್ನು  ಸೂಕ್ಷ್ಮವಾಗಿ  ಗಮನಿಸಿದರೆ,  ದಿನದಿಂದ  ದಿನಕ್ಕೆ,  ಮನುಷ್ಯ  ತನ್ನ  ಮೂಲಭೂತ  ಕರ್ತವ್ಯದಿಂದ,  ದೂರವಾಗುತ್ತಿದ್ದಾನೆ  ಎಂದೆನ್ನಿಸುತ್ತಿದೆ.

ವಾಯು  ಮಾಲಿನ್ಯ   ಜಲಮಾಲಿನ್ಯ   ಅರಣ್ಯನಾಶ,   ಅತಿಯಾದ  ವೈಭೋಗಲಾಲಸೆ, ಮತ್ತು  ಅತಿ ಹಣದ  ದಾಹ  ಎಲ್ಲೆಂದರಲ್ಲಿ  ಗೋಚರಿಸುತ್ತಿದೆ.   ದೇಶ  ದೇಶಗಳ  ನಡುವೆ,  ರಾಜ್ಯ  ರಾಜ್ಯಗಳ  ನಡುವೆ,  ಭೂಮಿಗಾಗಿ   ನೀರಿಗಾಗಿ   ಮಹಾಯುದ್ಧಗಳೇ  ಘಟಿಸುತ್ತಿವೆ.   ವೈಭೋಗಕ್ಕಾಗಿ   ಅವ್ಯಾಹತವಾಗಿ  ಅರಣ್ಯನಾಶ,  ಪೊಳ್ಳು ಪ್ರತಿಷ್ಠೆಯ  ಮೋಹಕ್ಕೆ  ವಿವಿಧ  ಕೃತಕ  ಸಾಮಗ್ರಿಗಳ  ಸೃಷ್ಟಿ,   ಅದಕ್ಕಾಗಿ   ಬೃಹತ್‌  ಕಾರಖಾನೆಗಳು,  ಅವು  ಸೂಸುವ  ವಿಷಪೂರಿತ  ಅನಿಲ,  ಮತ್ತು  ರಾಸಾಯನಿಕಗಳು,  ಇಡೀ  ಭೂಮಿಯನ್ನು   ವಿಷಮಯವಾಗಿಸುತ್ತಿವೆ.

        ಪ್ರಕ್ರಿಯೆಯ   ಮಾರಕ  ಪರಿಣಾಮ  ಈಗಾಗಲೇ  ನಮ್ಮನ್ನು  ನುಚ್ಚುನುರಿಯಾಗಿಸುತ್ತಿದೆ.   ಪ್ಲೇಗ್‌   ಫ್ಲೂ  ಮೈಲಿ,  ಸಾರ್ಸ  ಮುಂತಾದ  ಮಹಾರೋಗಗಳಿಂದ  ನಾವು   ನಮ್ಮ  ಅನ್ವೇಷಕ  ಬುದ್ಧಿಯಿಂದ  ನುಣುಚಿಕೊಳ್ಳುತ್ತಿದ್ದಂತೇ    ಕೋವಿಡ್‌  ೧೯  (ಕೊರೋನಾ)   ಮಹಾ  ಸಾಂಕ್ರಾಮಿಕ  ರೋಗ   ನಮ್ಮನ್ನು  ಆಕ್ರಮಿಸಿದೆ.  ಅದರ  ಶಾಶ್ವತ  ಪರಿಹಾರಕ್ಕಾಗಿ   ನಮ್ಮ  ವಿಜ್ಞಾನ  ಹೆಣಗಾಡುತ್ತಿದೆ.   ನಮ್ಮ  ಹಣದ  ಸಂಪತ್ತಿನ   ಚಾಣಾಕ್ಷತೆಯ  ಸೊಕ್ಕಿನ  ವಿರುದ್ಧ  ಕೊರೋನಾ  ಯುದ್ಧ  ಸಾರಿದೆ.  ಆತ್ಮವಂಚನೆ  ಮತ್ತು  ಪರಿಸರ  ವಿರೋಧೀ  ಗುಣಗಳಿಂದ  ಕೂಡಿದ   ನಮ್ಮ  ಕೃತಕ  ಜೀವನಶೈಲಿಯ  ಬಗೆಗೆ  ಮತ್ತೊಮ್ಮೆ  ಆತ್ಮವಿಮರ್ಶೆ  ಮಾಡಿಕೊಳ್ಳುವಂಥ   ದಾರುಣ  ಪರಿಸ್ಥಿತಿಯನ್ನು   ಪ್ರಕೃತಿ  ಸೃಷ್ಟಿಸಿದೆ.

     ನಮ್ಮ  ಭಾರತೀಯ  ಜೀವನ  ಶೈಲಿ  ಸದಾ  ಸರಳತೆ,  ಸ್ವಚ್ಛತೆ,  ಸದಾಚಾರ,  ಗಳನ್ನು  ಮೈಗೂಡಿಸಿಕೊಂಡಿತ್ತು.   ನೀರು  ಗಾಳಿ  ಮಣ್ಣು  ಆಕಾಶ  ಮತ್ತು  ಬೆಂಕಿ   ನಮ್ಮ  ಪೂಜಾರ್ಹವಾದ  ಪವಿತ್ರ  ವಸ್ತುಗಳಾಗಿದ್ದವು.  ಅವೆಲ್ಲವನ್ನೂ  ನಾವು  ದುರುಪಯೋಗ  ಗೈದೆವು. 

     ಪ್ರಕೃತಿ  ನಮ್ಮ  ತಾಯಿ.  ಕ್ಷಮಾಮಯಿ.  ನೂರುತಪ್ಪುಗಳನ್ನೂ  ಕ್ಷಮಿಸುತ್ತಾಳೆ.  ಆಗಾಗ  ಪ್ರೀತಿಯಿಂದಲೇ   ಮಹಾರೋಗ,  ಚಂಡಮಾರುತ,  ಬರಗಾಲಗಳನ್ನು  ಸೃಷ್ಟಿಸಿ   ಶಿಕ್ಷೆನೀಡುತ್ತ   ಎಚ್ಚರಿಸುತ್ತಾಳೆ.   ಪ್ರಕೃತಿ  ತನ್ನ  ರಕ್ಷಣೆಗಾಗಿ,  ಮಾನರಕ್ಷಣೆಗಾಗಿ,  ಸಕಲ  ಜೀವಕೋಟಿಯ  ಸುಸ್ಥಿರತೆಗಾಗಿ   ಶುದ್ಧ  ಗಾಳಿ  ಶುದ್ಧ  ಜಲ  ಸಮೃದ್ಧ  ಅರಣ್ಯಗಳನ್ನು  ಸೃಷ್ಟಿಸಿಕೊಂಡರೆ,  ಮನುಷ್ಯ  ತನ್ನ  ಸ್ವಾರ್ಥಕ್ಕಾಗಿ   ಅವೆಲ್ಲವನ್ನೂ  ದುರುಪಯೋಗ  ಪಡಿಸಿಕೊಂಡ.   ಅದೇ  ತಪ್ಪಿಗಾಗಿಯೇ  ನಾವಿಂದು  ದಿಕ್ಕೇ  ತೋಚದ  ಸ್ಥಿತಿಗೆ  ತಲುಪಿದ್ದೇವೆ. 

     ಕಳೆದೊಂದು  ಶತಮಾನದಿಂದ   ನಮ್ಮ  ಹಿರಿಯರು,  ಗೈದ  ಇಂಥ  ಪ್ರಮಾದವನ್ನು  ವಿದ್ಯಾರ್ಥಿಗಳಾದಂಥ  ನಾವು  ಅವಶ್ಯ  ಗಮನಿಸಬೇಕಿದೆ. ʻʻ ನಮ್ಮ  ಪರಿಸರ  ಮನುಷ್ಯನ  ಎಲ್ಲ  ಆಸೆಗಳನ್ನೂ  ಪೂರೈಸುತ್ತದೆ.  ಆದರೆ  ದುರಾಸೆಯನ್ನಲ್ಲ,ʼʼ  ಇದು  ಮಹಾತ್ಮಾ  ಗಾಂಧಿಯವರ  ಉದ್ಗಾರ. 

      ಒಬ್ಬ  ವಿದ್ಯಾರ್ಥಿಯ  ಜೀವನದ  ಗುರಿ  ಉದ್ಯೋಗವನ್ನೋ  ಹಣವನ್ನೋ  ಸಂಪಾದಿಸುವುದಲ್ಲ.  ನಿಜವಾದ  ಮನುಷ್ಯತ್ವವನ್ನು  ಪಡೆಯುವುದು.   ತನ್ನ  ಸುತ್ತಲಿನ,  ತನ್ನ  ದೇಶದ   ಇಡೀ  ಭೂಮಂಡಲದ  ಕ್ಷೇಮವನ್ನು  ಕಾಯ್ದುಕೊಳ್ಳುವುದರ  ಜೊತೆಗೆ   ತನ್ನ   ನೈತಿಕ  ಜೀವನವನ್ನೂ  ಕಟ್ಟಿಕೊಳ್ಳುವುದು  ವಿದ್ಯಾರ್ಥಿಯ  ಕರ್ತವ್ಯ   ಎಂದು  ನಾನು  ತಿಳಿದಿದ್ದೇನೆ. 

       ಹಿನ್ನೆಲೆಯಲ್ಲಿ   ವಿದ್ಯಾರ್ಥಿಯ  ಮೇಲೆ   ಗುರುತರವಾದ  ಜವಾಬ್ದಾರಿಯಿದೆ.   ಭೂ, ಜಲ  ವಾಯು  ಮಾಲಿನ್ಯಗಳ  ನಿವಾರಣೆಗೆ  ಪಣತೊಡುವುದರ  ಜೊತೆಗೆ,  ಜನತೆಯ   ಮನೋಮಾಲಿನ್ಯವನ್ನೂ  ಶುದ್ಧೀಕರಿಸುವಂಥ   ಮಹತ್ತರ  ಕಾರ್ಯದ  ದಿಕ್ಕಿಗೆ  ನಾವು  ತೊಡಗಿಕೊಳ್ಳಬೇಕಾಗಿದೆ.

    ಅದಕ್ಕೂ  ಮೊದಲು   ನನ್ನಲ್ಲಿ,  ನನ್ನ  ಮನೆ  ನನ್ನ  ಊರುಗಳಲ್ಲಿ   ಪರಿಸರದ  ಮಹತ್ವವನ್ನು  ಮನಗಾಣಿಸಬೇಕು.

     ಸರಳ  ಜೀವನ   ಉನ್ನತ  ವಿಚಾರ   ನಮ್ಮದಾಗಬೇಕು.

     ಅತಿಯಾದ  ಕೊಳ್ಳುಬಾಕತನ,  ಅದರಿಂದ  ಸೃಷ್ಟಿಯಾಗುವ  ಪರಿಸರ ವಿರೋಧೀ  ತ್ಯಾಜ್ಯ ಗಳ  ಅಪಾಯವನ್ನು   ಜನರಲ್ಲಿ  ಮನಗಾಣಿಸಬೇಕು. 

   ಸಸ್ಯಪ್ರೀತಿ,  ಸಸ್ಯಾಹಾರ  ಮಾತ್ರ  ಸ್ವಚ್ಛ  ಮನಸ್ಸು,  ಸ್ವಚ್ಚ ವಾತಾವರಣವನ್ನು  ಸೃಷ್ಟಿಸುವುದು. 

ವಿದ್ಯೆಯೆಂದರೆ  ಬುದ್ಧಿಯ  ಆಹಾರವೊಂದೇ  ಅಲ್ಲ.   ಲೋಕಕ್ಷೇಮದ  ಚಿಂತನೆ.

ಜ್ಞಾನವೆಂದರೆ   ಸ್ವಾರ್ಥವಲ್ಲ,   ನಿಸ್ವಾರ್ಥದ  ಆರಾಧನೆ.

ಹಸಿವು  ಅಡಗಲಿ,  ಹಸಿರು  ನಲಿದಾಡಲಿ.            (ವಿದ್ಯಾರ್ಥಿಗಳಿಗಾಗಿ )

No comments:

Post a Comment