Tuesday 26 September 2023

ಪರ್ವತೇಶ್ವರ ಪುರಾಣವು (ಸಣ್ಣ ಕತೆ)

 

  ಶಿರಪುರದಲ್ಲಿ   ಸಂಭ್ರಮವೋ  ಸಂಭ್ರಮ.   ಸುತ್ತಲಿನ  ಹತ್ತಾರು  ಗ್ರಾಮಗಳ  ಸಾವಿರಾರು  ಭಕ್ತಶ್ರೇಷ್ಠರು   ಒಂದೆರಡು  ತಿಂಗಳಿನಿಂದಲೇ   ಅಲ್ಲಿ  ಬೀಡು  ಬಿಟ್ಟು  ಹಗಲೂ  ರಾತ್ರಿ  ತಮ್ಮ  ಕರ್ತವ್ಯದಲ್ಲಿ  ನಿರತರಾಗಿದ್ದರು.   ಎಲ್ಲರಲ್ಲೂ  ಧನ್ಯತಾ  ಭಾವ.  ಆದಿನ  ರಾಜ್ಯದ  ಇಡೀ  ಮಂತ್ರಿಮಂಡಳವೇ  ಬೀಡು  ಬಿಟ್ಟಿತ್ತು.  ಸ್ವಥಃ  ಮುಖ್ಯಮಂತ್ರಿ  ಶಂಭುಲಿಂಗಯ್ಯ ನವರೇ  ಪತ್ನೀ  ಮಕ್ಕಳೊಂದಿಗೆ  ರೇಶಿಮೆ  ಮಡಿಯುಟ್ಟು,  ವಿಶೇಷ  ಪೂಜಾಕೈಂಕರ್ಯಗಳಲ್ಲಿ  ಪಾಲ್ಗೊಂಡಿದ್ದರು.  ನೂರಾರು  ಸಂಖ್ಯೆಯ  ಪೋಲೀಸರು,  ಅಧಿಕಾರಿಗಳು  ಪಕ್ಷದ  ಕಾರ್ಯಕರ್ತರು  ರಾಜ್ಯದ  ಮಹಾ  ಮಹಾ  ಉದ್ಯಮಿಗಳು   ಉನ್ನತ ಗುಣ ಗಣಿಗಳು,  ಸಂಭ್ರಮಕ್ಕೊಂದು  ಭಯಮಿಶ್ರಿತ  ಗಾಂಭೀರ್ಯವನ್ನೊದಗಿಸಿದ್ದರು. 

        ಇಷ್ಟೆಲ್ಲ  ಸಂಭ್ರಮಕ್ಕೆ  ಕಾರಣ    ಗಗನ ಚುಂಬೀ  ಪರ್ವತಸಾಲುಗಳು,  ಹೆಮ್ಮರಗಳ  ದಟ್ಟಕಾನನದ  ನಟ್ಟ  ನಡುವೆ  ಶೋಭಾಯಮಾನವಾಗಿ   ಕಣ್ದುಂಬುತ್ತಿರುವ   ಶಿರಪುರವೆಂಬ  ಹಳ್ಳಿಯ  ಪರ್ವತೇಶ್ವರ  ದೇವಾಲಯದ  ಬೆಳ್ಳಿಮಹೋತ್ಸವದ  ಸುವರ್ಣ  ಕ್ಷಣ.     ಊರು   ಶತಮಾನಗಳಿಂದ  ಯಾವ  ರಾಜರನ್ನೂ  ಕಂಡಿಲ್ಲ.  ಮಂತ್ರಿಮಹೋದಯರು  ಬಿಡಿ, ಪುಡಿ  ರಾಜಕಾರಣಿಯೂ  ಇತ್ತ  ತಲೆಹಾಕಿರಲಿಲ್ಲ.   ದಟ್ಟ ಕಾಡು, ಭಯಂಕರ  ಮಳೆ,  ಕಾಡುಪ್ರಾಣಿಗಳ  ಜೊತೆಗೇ  ಸಂಧಾನಗೈದು  ಜೀವನಸಾಗಿಸುತ್ತಿದ್ದ  ಇಲ್ಲಿಯ  ಜನಪದಕ್ಕೆ,  ವರವಾಗಿ  ಅವತರಿಸಿದವ    ಊರಿನ  ಪರ್ವತೇಶ್ವರ.   ಪರ್ವತಗಳಲ್ಲೇ  ರಾಜನಾದ  ಇಂದ್ರಪರ್ವತದ  ತಳದಲ್ಲಿ   ವಿರಾಜಮಾನನಾಗಿರುವ  ಪರ್ವತೇಶ್ವರ  ದೇವರು  ಭಕ್ತರನ್ನು  ಆಕರ್ಷಿಸಲು ತೊಡಗಿದ್ದೇ   ಕಳೆದ  ಕೇವಲ  ಇಪ್ಪತ್ತೈದು  ವರ್ಷಗಳ  ಹಿಂದೆ  ಎಂದರೆ  ಯಾರಿಗೂ  ಆಶ್ಚರ್ಯವಾಗಬಹುದು.  ಆದರೆ  ಇದು  ಸತ್ಯ.    ಕಲಿಯುಗದಲ್ಲೂ  ಇಂಥ  ಪವಾಡ  ಸದೃಷ  ದೇವರು  ಇದ್ದಾನೆಂದರೆ  ಅದು  ಜನತೆಯ  ಸೌಭಾಗ್ಯವೇ  ಸರಿ.

       ಹೆದ್ದಾರಿಯಿಂದ   ಮೂವತ್ತು  ಮೈಲಿ  ಗುಡ್ಡ  ಹತ್ತಿಳಿದು,  ಹೊಳೆದಾಟಿ,  ಮೈತುಂಬ  ಕಚ್ಚಿ ರಕ್ತಹೀರುವ  ಉಂಬಳಗಳ  ಕಾಟದಲ್ಲೂ   ಪಾದಯಾತ್ರಿಯಾಗಿ  ಆಗಮಿಸಿದ  ಸತ್ನಾರಾಣ್‌   ಭಟ್ಟರಿಗೆ   ಸ್ವಥಃ  ಪರ್ವತೇಶ್ವರನೇ  ಕನಸಿನಲ್ಲಿ  ಬಂದು,  ʻʻತಾನು  ಇಂಥ  ಘೋರಾರಣ್ಯದಲ್ಲಿ  ಪೂಜೆ  ಪುನಸ್ಕಾರವಿಲ್ಲದೇ  ಅನಾಥವಾಗಿದ್ದೇನೆ.  ನೀನು  ಬಾ ʼʼ ಎಂದು  ಆದೇಶ  ನೀಡಿದನಂತೆ.   ಅವರು  ಬಂದು  ಅರಣ್ಯದಲ್ಲಿ  ಶೋಧಿಸಿದಾಗ   ಅದೇ  ಪರ್ವತದಿಂದ  ಎಂದೋ  ಉರುಳಿ  ಬಂದ  ಬೃಹದಾಕಾರದ,   ಪಾಣೀಪೀಠ  ಸಹಿತದ  ಲಿಂಗರೂಪಿ ಶಿಲಾಶಿವ  ದರ್ಶನವಿತ್ತನಂತೆ.   ಸುತ್ತಲಿನ  ಮರ  ಪೊದೆ  ಸವರಿದ  ಭಟ್ಟರು  ಅಂದೇ    ಉದ್ಭವ ರೂಪೀ  ಶಿವನಿಗೆ  ಪೂಜೆ  ಪ್ರಾರಂಭಿಸಿಯೇ  ಬಿಟ್ಟರು. 

     ಸುತ್ತಲಿನ  ಹಳ್ಳಿ  ಹಳ್ಳಿಗಳಲ್ಲಿ  ಸುತ್ತಾಡಿ  ಶಿವನ  ಸಂಗತಿಯನ್ನು  ವರ್ಣಿಸಿದಾಗ,  ಹಳ್ಳಿಯೂ  ಕೈಗೂಡಿಸಿತು. ʻʻಹೌದಲ್ರಾ.. ಈ  ಭಟ್ರು  ಬರ್ದೇಹೋದ್ರೆ  ನಮ್ಗೆ  ಗೊತ್ತೇ  ಆಗ್ತಿರ್ನಿಲ್ಲಾʼʼ  ಎಂದು ಹಳ್ಳಿಯ  ಗುಡಿಸಲುಗಳೆಲ್ಲಾ ವಟಗುಟ್ಟಿದವು.  ಹಿಡಿದ  ಕೆಲಸ ಬಿಟ್ಟು  ಊರಿನ  ಜನಗಳು  ಅಲ್ಲೇ  ಮರಕಡಿದು ಪುಟ್ಟ  ಗುಡಿ  ಕಟ್ಟಿಯೇ ಬಿಟ್ಟರು.     ಅರ್ಚಕರಿಗೆ  ವಸತಿ  ನಿರ್ಮಾಣಗೊಂಡಾಗ,  ಅದಕ್ಕೊಂದು  ರೂಪವೊದಗಿತು. 

      ಕೆಲವೇ  ದಿನಗಳಲ್ಲಿ  ಭಟ್ಟರಿಗೆ  ಶಿವನ  ಬುಡದಲ್ಲೇ  ಒಂದಿಷ್ಟು ತಾಡವೋಲೆಯ  ಪ್ರತಿಗಳು  ದೊರಕಿದಾಗ,  ಅದನ್ನು  ಓದಲು  ತೊಡಗಿದರು.   ಅದೊಂದು  ಅನಾದಿಕಾಲದ  ಪರ್ವತಪುರಾಣವೆಂಬ  ಗ್ರಂಥದ  ಹಾಳೆಗಳು. 

      ತ್ರೇತಾಯುಗದಲ್ಲಿ  ಪರ್ವತಗಳಿಗೆಲ್ಲ  ರೆಕ್ಕೆಗಳಿದ್ದವಂತೆ.  ಅವೆಲ್ಲ  ರೆಕ್ಕೆ  ಬೀಸಿಕೊಂಡು  ಎಲ್ಲೆಂದರಲ್ಲಿ  ಹಾರಾಡುತ್ತ,  ಜನವಸತಿಯಮೇಲೆಲ್ಲ  ಕುಳಿತು  ಬಿಡುತ್ತಿದ್ದವಂತೆ. ಜನಗಳೆಲ್ಲ  ಹುಳುಗಳಂತೇ  ಸತ್ತರಂತೆ. ಜನರೆಲ್ಲ  ಇಂದ್ರನಲ್ಲಿ  ಮೊರೆಯಿಡಲು  ತೊಡಗಿದರು.  ಇಂದ್ರ  ತನ್ನ  ವಜ್ರಾಯುಧದಿಂದ  ಪರ್ವತಗಳ  ರೆಕ್ಕೆಯನ್ನು  ತುಂಡರಿಸಿದನಂತೆ.   ಸಾಲು  ಸಾಲಾಗಿ  ಕುಳಿತಿದ್ದ  ಪರ್ವತಗಳೆಲ್ಲದರ  ರೆಕ್ಕೆ  ನಾಶವಾದುದರಿಂದ  ಅಲ್ಲಿಯೇ  ಉಳಿದುವಂತೆ.  ಅದೇ  ಈಗ  ನಾವು  ಕಾಣುವ  ಸಹ್ಯಾದ್ರಿಪರ್ವತಗಳು.

      ಹಾಗೆ  ರೆಕ್ಕೆ  ಕಳೆದುಕೊಂಡ  ಪರ್ವತಗಳಲ್ಲಿ  ಉನ್ನತವಾಗಿದ್ದ    ಪರ್ವತಕ್ಕೆ  ಇಂದ್ರಪರ್ವತವೆಂದೇ  ಹೆಸರಾಯಿತು.  ಕಡಿದ  ರೆಕ್ಕೆ  ಪಕ್ಕದ  ತಗ್ಗಿನಲ್ಲಿ  ಹೋಗಿ  ಬಿದ್ದಿತು.   ಅದೇ   ಒಂದು   ನದಿಯರೂಪ  ತಳೆಯಿತು. ನದಿಯ  ಬಂಡೆಗಳಮೇಲೆ  ಕತ್ತರಿಸಿದ  ರಕ್ಕೆಗಳು  ಹೋಗಿ ಬಿದ್ದವು.  ಆಗ  ಶಿವ  ಪ್ರತ್ಯಕ್ಷನಾಗಿ  ಅಲ್ಲಿದ್ದ  ಅತಿಯೆತ್ತರದ  ಪರ್ವತಕ್ಕೆ  ಇಂದ್ರ  ಪರ್ವತವೆಂದೂ,  ಪಕ್ಕದಲ್ಲಿ  ಹರಿಯುವ  ನದಿಗೆ  ಇಂದ್ರ ನದಿಯೆಂದೂ  ಹೆಸರಿಸಿದನಂತೆ.               

 

       ಸತ್ನಾರಾಣ್‌    ಭಟ್ರು  ರೋಮಾಂಚಿತರಾದರು.  ಶುದ್ದ  ಸುಂದರ  ಕನ್ನಡಲಿಪಿಯಲ್ಲಿ   ಪರ್ವತಪುರಾಣವನ್ನು  ಬರೆಯತೊಡಗಿದರು.  ಆಗಾಗ  ಬರುವ  ಭಕ್ತರಿಗೆ  ಮನಮುಟ್ಟುವಂತೇ  ವರ್ಣಿಸತೊಡಗಿದರು.  ಕಾಡು ಅಲೆಯಲು  ಬಂದ  ಪೇಟೆ  ಜನಗಳಿಗೆ    ವಿವರ  ತಿಳಿದದ್ದೇ  ತಡ,  ಕೊಡಿ  ನಾವು  ಇದನ್ನು  ಪುಸ್ತಕಮಾಡುತ್ತೇವೆ  ಎಂದಾಗ,  ಭಟ್ಟರು  ಒಪ್ಪಿಗೆಯಿತ್ತರು.  ಪುರಾಣ  ಪುಸ್ತಕ  ವರ್ಣಮಯವಾಗಿ  ಭಟ್ಟರ  ಕೈತಲುಪಿ   ಸುತ್ತಲೆಲ್ಲ  ಹರಡಿ  ಪರಿಮಳ  ಸೂಸಿತು.  ಜನಕ್ಕೂ  ತಮ್ಮೂರು  ಪುರಾಣಪ್ರಸಿದ್ಧವಾದುದು  ಎಂದು  ತಿಳಿದು  ಹೆಮ್ಮೆಯಿಂದ  ಬೀಗಿದರು.  ಸುಪ್ರಸಿದ್ಧ  ಪತ್ರಿಕೆಯೊಂದರ  ಸಂಪಾದಕರ  ಗಮನಕ್ಕೂ  ಪುರಾಣ  ಕಣ್ಣಿಗೆ  ಬಿದ್ದಾಗ  ಅವರೂ  ಸ್ಥಳ ಸಂಶೋಧನೆ ಗೈದು,  ಒಂದಕ್ಷರ ಬಿಡದೇ  ಪುರಾಣವನ್ನು  ಪ್ರಕಟಿಸಿದ್ದಲ್ಲದೇ,  ಸ್ವಥಃ  ಭಕ್ತರೂ  ಆದರು.

     ಪರ್ವತೇಶ್ವರ  ಹರಕೆಗೂ  ಪ್ರಸಿದ್ಧನಾದ.  ಸ್ವಥಃ  ಮುಖ್ಯಮಂತ್ರಿ  ಶಂಭುಲಿಂಗಯ್ಯನವರಿಗೆ  ನಾಲ್ಕು  ಹೆಣ್ಣುಮಕ್ಕಳಾದರೂ  ಗಂಡು  ಸಂತತಿಯಿಲ್ಲದೇ  ಜಗತ್ತಿನೆಲ್ಲ  ದೇವರಿಗೆ  ಹರಕೆ  ಹೊತ್ತಿದ್ದರು.ಇಡೀ  ರಾಜ್ಯವೇ  ನಮಗೊಬ್ಬ  ಉತ್ತರಾಧಿಕಾರಿಯಿಲ್ಲವಲ್ಲಾ  ಎಂದು  ವ್ಯಥೆಯಲ್ಲಿ  ಕೃಷರಾಗಿದ್ದರು.  ಮುಖ್ಯಮಂತ್ರಿಗಳ  ಆಪ್ತರು  ಪರ್ವತೇಶ್ವರನ  ಹರಕೆ  ಮಹಿಮೆಯನ್ನು  ಅರುಹಿ, ಪುರಾಣ  ಪುಸ್ತಿಕೆಯನ್ನೂ  ಪ್ರಸಾದರೂಪದಲ್ಲಿ  ನೀಡಿದ್ದು  ಮುಖ್ಯ  ಮಂತ್ರಿಗಳ  ಕಣ್ಣು  ತೆರೆಸಿತು.  ಮನದುಂಬಿ  ಹರಕೆ  ಹೊತ್ತು  ಹತ್ತು  ತಿಂಗಳಿಗೆ  ಸರಿಯಾಗಿ  ಸರ್ವ ಲಕ್ಷಣ  ಸಂಪನ್ನ  ವರಪುತ್ರ  ಜನಿಸಿದ.  ಮುಂದೆ  ರಾಜ್ಯಕ್ಕೆ  ಬೆಳಕಾಗುವ  ಮಹಾ ನಾಯಕನಾಗುತ್ತಾನೆಂದು  ಜ್ಯೋತಿಷಿಗಳು  ಭವಿಷ್ಯ  ನುಡಿದ  ಸಂಗತಿ  ಕೇಳಿ  ಇಡೀ  ರಾಜ್ಯದ  ಜನತೆ  ಸಂಭ್ರಮಿಸಿದರು.

   ದೇವರಲ್ಲಿ  ಹರಕೆಯಿಂದ,  ನಷ್ಟದಿಂದ  ಬಳಲುವವರು  ಲಾಭಹೊಂದತೊಡಗಿದರು.  ಎಂತೆಂಥ  ರೋಗಗಳೂ  ಶಮನಗೊಂಡವು.  ಸ್ಥಳೀಯ  ಚುನಾವಣಾ  ಅಭ್ಯರ್ಥಿಗಳೂ  ಗೆಲ್ಲತೊಡಗಿದರು.  ಕ್ರಮೇಣ   ಇಲ್ಲಿ  ಭಕ್ತಿಯಿಂದ  ನಡೆದುಕೊಂಡ  ಅಭ್ಯರ್ಥಿಗಳೂ  ಶಾಸಕರಾಗಿ  ಮಿಂಚತೊಡಗಿದಾಗ,  ದೇವರೆಡೆಗೆ  ಭಕ್ತಸಮುದಾಯದ  ದಂಡಿಗೆ  ದಂಡೇ  ಬರತೊಡಗಿತು.

     ಗೆದ್ದ  ಅಭ್ಯರ್ಥಿಗಳ್ಯಾರೂ  ಅಪ್ರಾಮಾಣಿಕರಲ್ಲ.  ಅವರ  ಪ್ರಜಾಭಕ್ತಿಗೆ  ಮೆಚ್ಚಿ  ಸುತ್ತಲಿರುವ  ಸಾವಿರಾರು  ಮರಗಳು  ಸ್ವ ಇಚ್ಛೆಯಿಂದ  ಸ್ಥಳದಾನ  ಮಾಡಿದವು. ದೇವಾಲಯಕ್ಕೆ  ಬರಲು  ರಸ್ತೆಯಾಯಿತು.  ದೇವಾಲಯಕ್ಕೆ  ಸ್ಥಳದ  ಕೊರತೆಯಾದಾಗ,  ನೆಲ ಸಮಗೊಳಿಸಿ   ಪುಟ್ಟ  ಪುಟ್ಟ ಕಟ್ಟಡಗಳ  ವ್ಯವಸ್ಥೆಯಾಯಿತು.

    ಭಕ್ತ  ಅರಣ್ಯಾಧಿಕಾರಿಗಳ  ಸಹಕಾರದಲ್ಲಿ,  ಸುತ್ತಲ  ಸ್ಥಳಗಳಲ್ಲಿ,  ಪುಷ್ಟವನ, ಔಷಧವನ,ಗಳು  ನಿರ್ಮಾಣವಾದವು.  ಆಗಮಿಸುವ  ಭಕ್ತರ ಸೇವೆಗಾಗಿ  ಸೌಲಭ್ಯಗಳ  ಕೊರತೆಯಾದಾಗ   ಮತ್ತೆ  ಪ್ರತಿನಿಧಿಗಳನ್ನೇ   ಅವಲಂಭಿಸಬೇಕಾಯಿತು.  ವಸತಿ  ಸಂಕೀರ್ಣದ  ವ್ಯವಸ್ಥೆ  ತನ್ನಂತಾನೇ   ಅಪರಿಚಿತ  ಉದ್ಯಮಿಯೊಬ್ಬನಿಂದ  ನಿರ್ಮಾಣವಾದಾಗ,  ಆಹಾ  ನಮ್ಮ  ದೇವರು  ಅದೆಷ್ಟು  ಶಕ್ತಿವಂತ  ಎಂದು  ಜನ  ಮಾತನಾಡಿಕೊಂಡರು.

    ಸತ್ನಾರಾಣ್‌  ಭಟ್ರಿಗೆ  ಈಗ  ಎಲ್ಲಿಲ್ಲದ  ಒತ್ತಡ.  ಪೂಜಾಕೈಂಕರ್ಯಕ್ಕೆ   ದೇವಾಲಯದ  ಉಸ್ತುವಾರಿಗೆ  ಎಂದು  ಅದೆಷ್ಟು  ಜನರನ್ನು  ನಿಯಮಿಸಿದರೂ  ಕಡಿಮೆಯೇ.  ದಿನದಿಂದ  ದಿನಕ್ಕೆ  ಭಕ್ತರ  ದಂಡು.  ಪರ್ವತೇಶ್ವರನ  ಆಶೀರ್ವಾದದಿಂದಲೇ  ಆಯ್ಕೆಯಾದ  ಶಾಸಕರು  ಮಂತ್ರಿಗಳನ್ನು  ಕಂಡು   ದೇವಾಲಯದ  ಸಮಸ್ಯೆ  ನಿವೇದಿಸಿಕೊಂಡರು.  ದೂರದಿಂದಲೇ  ದೇವಾಲಯ  ಕಾಣುವಂತಾಗಬೇಕೆಂದರೆ  ಎದುರಿನ  ತಗ್ಗು ದಿನ್ನೆಗಳು  ಸಮತಟ್ಟಾಗಬೇಕು   ಅದು  ವ್ಯರ್ಥವಾಗಲಿಲ್ಲ.  ಅಚ್ಚುಕಟ್ಟಾದ  ರಸ್ತೆ   ಬೇಕಷ್ಟು  ಕಟ್ಟಡಗಳು  ತಲೆಯೆತ್ತಿದವು. 

     ಸ್ಥಳೀಯ  ಜನರೂ  ಜಾಗ್ರತರಾದರು.  ಬರುವ  ಭಕ್ತರಿಗಾಗಿ  ಇಂದ್ರನದಿಯಂಚಿನಲ್ಲಿ  ನೂರಾರು  ಕುಟೀರಗಳು  ನಿರ್ಮಾಣಗೊಂಡವು.  ಸುತ್ತಮುತ್ತಲೆಲ್ಲ  ರಾಕ್ಷಸ ಯಂತ್ರಗಳ  ಪ್ರವೇಶದ  ಕರ್ಕಶ  ಶಬ್ದ  ಊರು  ಅರಣ್ಯದ  ತುಂಬೆಲ್ಲ  ಮೊಳಗತೊಡಗಿತು,    ಕಲ್ಲು  ಅರೆಗಳಿಗೆ  ಸ್ಪೋಟಕ  ಸಿಡಿಸುವ  ಭಾರೀ  ಶಬ್ಧ ವೋ  ಶಬ್ಧ. ಪ್ರಾಣಿ  ಪಕ್ಷಿಗಳು  ಸಮೂಹಕ್ಕೆ  ಸಮೂಹವೇ  ಇಲ್ಲಿ  ಇನ್ನು  ನಮಗೇನು  ಕೆಲಸ  ಎಂದು  ಕೈಲಾಸ ಕ್ಕೆ ಬಿಜಯಂಗೈದವು.

      ಇದೇ  ಸಂದರ್ಭದಲ್ಲೇ  ಶಿವಕುಮಾರ್‌ ಸಾಳ್ವೆ  ಎಂಬ  ವಿಚಿತ್ರ  ವ್ಯಕ್ತಿ  ಪ್ರವೇಶವಾದ.  ಅವರೊಂದಿಗೆ  ನಾಲ್ಕಾರು  ಸಂಗಾತಿಗಳು  ಜೊತೆಯಲ್ಲಿದ್ದರು.ʻʻ ಅದೆಷ್ಟು  ಸುಂದರ  ಅರಣ್ಯಪ್ರದೇಶವನ್ನು  ನಾಶಮಾಡುತ್ತಿದ್ದೀರಿ.  ಭೂಮಿಯನ್ನು  ಯದ್ವಾ ತದ್ವಾ ಅಗೆದು  ಧ್ವಂಸ  ಗೊಳಿಸುತ್ತಿದ್ದೀರಿ.  ದೇವರ  ಹೆಸರಿನಲ್ಲಿ  ಅರಣ್ಯ  ಸವರಿ  ತೋಟ ಪಟ್ಟಿ  ಮಾಡುತ್ತಿದ್ದೀರಿ.  ನಿಮ್ಮ  ಅಭಿವೃದ್ಧಿಯಲ್ಲ  ಇದು.  ವಿನಾಶ.  ನಿಮ್ಮ  ಸಮಾಧಿ  ನೀವೇ  ತೋಡುತ್ತಿದ್ದೀರಿʼʼ ಎಂದು  ಉಚ್ಛ ಕಂಠದಲ್ಲಿ  ಸಾಳ್ವೆ  ಹೇಳತೊಡಗಿದಾಗ,  ಅಲ್ಲಿ  ಸೇರಿದ  ಭಕ್ತವೃಂದ  ಬೆಚ್ಚಿತು. ಅಲ್ಲೇ  ಕೆಲವರು  ನಮ್ಮ    ಕುಗ್ರಾಮಗಳು  ಉದ್ಧಾರವಾಗೋದನ್ನ  ನೋಡೋಕೆ  ನಿಮಗಾಗುತ್ತಿಲ್ಲ.  ನಿಮ್ಮ  ಉಪದೇಶ  ನಮಗೆ  ಬೇಕಿಲ್ಲ.  ನಮ್ಮೂರು  ಕರೆಂಟ್‌  ಕಂಡ್ರೆ,  ರಸ್ತೆ  ಕಂಡ್ರೆ, ಅದಕ್ಕೆ    ಪರ್ವತೇಶ್ವರ  ಸ್ವಾಮಿಯೇ  ಕಾರಣ.   ಯಾವ್ದೋ  ಊರಿಂದ  ಬಂದ  ಕಿತಾಪತಿಗಳು  ನಮಗೆ ಬುದ್ಧಿಹೇಳ್ತಾರೆʼʼ  ಎಂದು  ಅರಚಿದಾಗ, ಸಾಳ್ವೆ  ಮೌನಿಯಾದ.   ಸತ್ನಾರಾಣ್‌  ಭಟ್ರು  ಸಣ್ಣದಾಗಿ  ನಕ್ಕರು.

      ಸಾಳ್ವೆ,  ಶಿರಪುರದ  ಶರವೇಗದ  ಬೆಳವಣಿಗೆಯನ್ನ  ಅದರಿಂದಾಗುವ  ಅಪಾಯವನ್ನ  ತಲಸ್ಪರ್ಶೀಯಾಗಿ  ಪತ್ರಿಕೆಗಳಲ್ಲಿ  ಬರೆದ.  ಅದಕ್ಕೆ  ಕೆಲವು  ರಾಜಕಾರಣಿಗಳು,  ಉಗ್ರವಾಗಿ  ಪ್ರತಿಭಟಿಸಲು  ಪ್ರಾರಂಭಿಸಿದರು.  ʻʻಇವರ್ಯಾರೋ  ಪರಿಸರ ವ್ಯಾಧಿಗಳು.  ನಮ್ಮನ್ನು  ಇನ್ನೂ  ಹಿಂದೆಯೇ  ಕೊಂಡೊಯ್ಯುವ  ಪ್ರಯತ್ನದಲ್ಲಿದ್ದಾರೆʼʼ ಎಂದು  ಟೀಕಿಸ ತೊಡಗಿದರು.

      ಆದಿನ    ದೊಡ್ಡ  ಉದ್ಯಮಿ  ದೇವಾಲಯಕ್ಕೆ  ಆಗಮಿಸಿದ. ಅರ್ಚಕರು  ವಿಶೇಷ  ಪೂಜೆ  ಮಾಡಿ, ಪುರಾಣವನ್ನೂ  ವರ್ಣಿಸುತ್ತ,  ಪರ್ವತೇಶ್ವರನ  ಪೂಜೆಗೆ  ನೀರಿನ  ಅವಶ್ಯಕತೆಯ  ಬಗೆಗೆ  ಬೇಡಿಕೆಯಿತ್ತರು. ಉದ್ಯಮಿಯೂ  ಕೊಡುಗೈ ದಾನಿ.  ತಜ್ಞರ ದಂಡೇ  ಆಗಮನವಾಯಿತು.  ಐದುನೂರು  ಅಡಿಎತ್ತರದ  ಇಂದ್ರ  ಪರ್ವತದ  ನೆತ್ತಿಯಮೇಲೆ  ಸರೋವರವೊಂದು  ತಿಂಗಳಲ್ಲಿಯೇ  ನಿರ್ಮಾ:ಣಗೊಂಡು, ಪರ್ವತೇಶ್ವರನ  ತಲೆಯಮೇಲೆ  ಸದಾ  ಗಂಗೆಯ ಅಭಿಷೇಕ  ವಾಗುತ್ತಿರುವ  ಅದ್ಭುತವಾದ  ದೃಶ್ಯ  ಸೃಷ್ಟಿಯಾಯಿತು.  ಪರ್ವತದ  ನೆತ್ತಿಯಮೇಲೆ  ಇಂದ್ರನದಿಯ  ನೀರು  ತಲುಪಿ  ಸುಂದರ  ಪುಷ್ಕರಣಿ  ನಿರ್ಮಾಣಗೊಂಡಮೇಲೆ,  ಗಂಗಾಂಬಿಕೆಯ  ದೇವಾಲಯವಿಲ್ಲದಿದ್ದರೆ  ದೋಷವಾದೀತಲ್ಲವೇ... ಮತ್ತೊಬ್ಬ  ಉದ್ಯಮಿಯೋ   ಉದ್ಯಮಿಯ  ಗೆಳೆಯ  ಮಂತ್ರಿಯೋ  ಗಂಗಾಂಬಿಕೆಯ  ನಯನಮನೋಹರ  ಮೂರ್ತಿಯನ್ನು  ಪರ್ವತಕ್ಕೆ  ಕರೆತಂದೇ  ಬಿಟ್ಟ.  ಪರ್ವತಕ್ಕೆ  ಸರ ತೊಡಿಸಿದಂತೇ  ಅಚ್ಚುಕಟ್ಟಾದ  ಸುರುಳಿ  ಸುರುಳಿ  ರಸ್ತೆ  ನಿರ್ಮಾಣಗೊಂಡಾಗ  ಸ್ವರ್ಗವೇ  ಇಳಿದು  ಬಂದ  ಅನುಭವ  ಭಕ್ತರಿಗಾಯಿತು.  ಪರ್ವತದ  ತುಂಬೆಲ್ಲ  ವಸತಿ  ಸಂಕೀರ್ಣ,  ಸರಕಾರೀ  ಅರಣ್ಯಾಭಿವೃದ್ದಿ ಕೇಂದ್ರ,  ಉಪಾಹಾರದ  ಕಟ್ಟಡಗಳು, ಮಹತ್ಮಾನಂದ  ಸ್ವಾಮಿಗಳ  ಅಧ್ಯಾತ್ಮಕೇಂದ್ರ,  ಎಂದು  ಇಂದ್ರ ಪರ್ವತ  ಇಂದ್ರ  ನಗರಿಯಂತೇ  ಜಗದ್ವಿಖ್ಯಾತವಾಯಿತು. 

       ದೇವಾಲಯದ  ಪಕ್ಕದಲ್ಲೇ  ನಾರ್ಣಭಟ್ಟರ  ಬಂಗಲೆಯಂತ  ವೈಭವಪೂರ್ಣ  ಅಧ್ಯಾತ್ಮ ಕುಟೀರ  ತಲೆಯೆತ್ತಿತು.  ಅಲ್ಲಿಯೇ  ಸುಭದ್ರವಾದ  ನೆಲಮಾಳಿಗೆ ಹೊಂದಿದ  ಕೋಣೆಯೊಂದು  ದೇವರ  ಬೆಲೆಬಾಳುವ  ಒಡವೆಗಳು,  ವಜ್ರವೈಢೂರ್ಯಗಳ ರಕ್ಷಣೆಗಾಗಿ  ನಿರ್ಮಾಣಗೊಂಡಿತು.

       ಪರ್ವತೇಶ್ವರ  ಮಹಾತ್ಮೆ  ಎಂಬ  ಯಕ್ಷಗಾನವನ್ನೂ  ಅದ್ಯಾವುದೋ  ಕವಿಗಳು  ರಚಿಸಿ  ಪ್ರಯೋಗಗೊಂಡಾಗ,  ಸಿನಿಮಾ  ಕ್ಷೇತ್ರವೂ  ಜಾಗ್ರತಗೊಂಡು  ಚಿತ್ರನಿರ್ಮಾಣಕ್ಕೂ  ತೊಡಗಿಕೊಂಡಿತು. ಭೂಮಿಯಿಂದ  ಧಿಗ್ಗನೆದ್ದು  ಆಕಾಶವನ್ನಪ್ಪಿಕೊಂಡಿರುವ, ರುದ್ರ ರಮ್ಯಪರ್ವತ ಪರಿಸರದ  ದೃಶ್ಯಗಳು.  ಸುಪ್ರಸಿದ್ಧ  ನಟರ  ನಟನೆಯಲ್ಲಿ  ಚಿತ್ರ  ಬಿಡುಗಡೆಯಾದಾಗ,  ರಾಜ್ಯಪ್ರಶಸ್ತಿಯನ್ನೂ  ಪಡೆದುಕೊಂಡಿತು.  ಪರ್ವತೇಶ್ವರನ  ಮಹಿಮೆಯಿಂದ  ಚಿತ್ರನಿರ್ಮಾಪಕ  ಹಿಂದೆ  ಆದ ನಷ್ಟವನ್ನೆಲ್ಲ  ತುಂಬಿಕೊಂಡ.  ದೇವರ  ಶಾಶ್ವತ  ಭಕ್ತನಾದ.

  ಪುತ್ರ  ಜನಿಸಿದರೆ  ದೇವರಿಗೆ  ಬಂಗಾರದ  ಕಿರೀಟ,  ಬೆಳ್ಳಿಯ  ಮಹಾದ್ವಾರ ನೀಡುತ್ತೇನೆಂದು  ಮುಖ್ಯಮಂತ್ರಿ  ಶಂಭುಲಿಂಗಯ್ಯ  ಹರಕೆ  ಹೊತ್ತಿದ್ದರಂತೆ.  ದೇವರು  ಅದೆಷ್ಟು  ಸಂಪ್ರೀತಗೊಂಡನೆಂದರೆ,  ಅತ್ಯಧಿಕ  ಮತದಿಂದ  ಆಯ್ಕೆಯಾದದ್ದೊಂದಲ್ಲ, ಪವಾಡ ಸದೃಷವಾಗಿ  ಮತ್ತೊಮ್ಮೆ ರಾಜ್ಯದ  ಮುಖ್ಯಮಂತ್ರಿಯೂ  ಆಗಿದ್ದರಿಂದ,  ಅನಿವಾರ್ಯವಾಗಿ  ಪರ್ವತೇಶ್ವರನ  ಸನ್ನಿಧಾನಕ್ಕೆ  ಬರಲೇ ಬೇಕಾಯಿತು. 

     ಪರಮ ಧಾರ್ಮಿಕ,  ನೀತಿನಿಷ್ಠ   ದೀನಜನಬಂಧು  ಅಭಿವೃದ್ಧಿಯ  ಹರಿಕಾರ,  ಎಂಬ  ನೂರಾರು  ಬಿರುದು  ಬಾವಲಿಗಳು  ನನಗಲ್ಲ,  ಅವೆಲ್ಲ  ಪರ್ವತೇಶ್ವರನಿಗೆ  ಸಲ್ಲತಕ್ಕದ್ದು.  ಎಂಬ  ಪ್ರಾಮಾಣಿಕ  ಅಭಿಪ್ರಾಯ  ಮಾನ್ಯ  ಮುಖ್ಯಮಂತ್ರಿಗಳದ್ದು. 

    ದಂಪತಿ ಸಮೇತ, ಆಗಮಿಸುವ  ಮುಖ್ಯ  ಮಂತ್ರಿಗಳ  ಸ್ವಾಗತಕ್ಕೆ  ದೇವಾಲಯ  ಅದ್ದೂರಿಯಾಗಿ  ಸಜ್ಜುಗೊಂಡಿತ್ತು. ರಾಷ್ಟ್ರೀಯ  ಅಂತಾರಾಷ್ಟ್ರೀಯ  ಸುದ್ದಿಮಾಧ್ಯಮಗಳು  ಮುಖ್ಯಮಂತ್ರಿಗಳ  ಬಾಲದಂತೇ   ಸಾಲುಸಾಲಾಗಿ  ಬರತೊಡಗಿದವು.

      ಮುಖ್ಯಮಂತ್ರಿಗಳ  ಸರಳ  ನಡೆನುಡಿ,  ಭಕ್ತಿ, ಕಂಡ  ಜನ  ಬೆರಗಾದರು.  ವೈಷಾಖದ  ಬಿಸಿಲಲ್ಲಿ  ತಂಗಾಳಿ  ಬೀಸಿದಂತಾಯಿತು.  ಇಡೀ  ಶಿರಪುರ  ಧನ್ಯವಾಯಿತು.

   

       ಜ್ಯೇಷ್ಠಮಾಸ  ತುಂತುರು ವಾಗಿ  ಪ್ರವೇಶವಾಯಿತು.  ಪರ್ವತದಂತ  ಮೋಡಗಳ  ಸಾಲು ಸಾಲು  ಇಂದ್ರಪರ್ವತದ  ಪ್ರದಕ್ಷಿಣೆಗೆ  ಪ್ರಾರಂಭಿಸಿದವು.  ಎಷ್ಟೆಂದರೂ  ಮಲೆನಾಡಿನ  ಮಳೆ. ಗುಡುಗು  ಸಿಡಿಲಿನಾರ್ಭಟ.  ಪ್ರಕೃತಿಯೂ  ಪರ್ವತಲಿಂಗದ  ಪೂಜೆಗೆ  ತೊಡುಗುವಂತೇ   ತನ್ನ  ಭಕ್ತಿಯನ್ನು  ತೋರ್ಪಡಿಸತೊಡಗಿತು.ʻʻ ಗುಡ್ಡ  ಗುಡ್ಡ  ಸ್ಥಾವರ  ಲಿಂಗಾ  ಅವಕೇ  ಅಭ್ಯಂಗಾʼʼ  ಎಂದು  ವಿಲಂಬಿತದಲ್ಲಿ  ಪ್ರಾರಂಭವಾದ   ಮಳೆ,  ಆಷಾಢಕ್ಕೆ  ಮಧ್ಯಲಯ  ಬಿಟ್ಟು  ನೇರ  ತಾರಕಕ್ಕೇರತೊಡಗಿತು.

ಯಾಕೋ    ವರ್ಷದ  ಆಷಾಢ  ಮೊದಲಿನ  ಹಾಗಿಲ್ಲ  ಎಂದು  ಮೊದಲು  ಸತ್ಯನಾರ್ಣಭಟ್ರೀಗೆ  ಅನ್ನಿಸತೊಡಗಿತು.  ಒಂದೊಂದು  ಮಳೆ  ಸುರಿಯತೊಡಗಿತು  ಎಂದರೆ  ಒಮ್ಮೆಲೇ  ಪರ್ವತವೇ  ನಗ್ನವಾಗುತ್ತದೆಯೇನೋ  ಅನ್ನಿಸತೊಡಗಿತ್ತು.  ಮುಂಜಾನೆ  ಮಳೆ  ಪ್ರಾರಂಭಗೊಂಡರೆ  ಹಗಲು  ರಾತ್ರಿ  ಉಧೋ  ಎಂದು  ಆಕಾಶದಿಂದಲೇ  ಜಲಪಾತವಾಗತೊಡಗಿತು. 

     ನಾರ್ಣಭಟ್ಟರ  ಎದೆಯಲ್ಲೂ  ಚಂಡಮಾರುತವೇಳ  ತೊಡಗಿತ್ತು.  ಮನೆಯಲ್ಲಿದ್ದ  ಹೆಂಡತಿಯೂ  ವಿದೇಶದಲ್ಲಿರುವ  ಮಕ್ಕಳ  ಮನೆಗೆ  ಹೋಗಿಯಾಗಿತ್ತು.  ದೂರವಾಣಿ ಯೂ  ಮಳೆಯಬ್ಬರದಲ್ಲಿ  ಬೆದರಿ  ಮೌನವಾಗಿತ್ತು. ಸುತ್ತಲೆಲ್ಲ  ತಾವೇ  ಸೃಷ್ಟಿಸಿದ   ಅಡಿಕೆ  ಕಾಪಿ  ತೆಂಗು  ಯಾಲಕ್ಕಿ  ತೋಟಗಳಿಗೆ  ಬರುವ  ಕೂಲಿಗಳೂ   ಮಳೆಗೆ  ಬೆದರಿರಬೇಕು.  ಯಾರೂ  ತಮ್ಮ  ಗುಡಿಸಲುಗಳಿಂದ   ಪರ್ವತವೇರಿ  ಬಂದಿರಲಿಲ್ಲ.

ಶಿರಪುರಕ್ಕೆ  ಬರುವ  ಘಟ್ಟದ  ಸುಭದ್ರ  ರಸ್ತೆಗಳೂ   ಇಂಥ  ಮಮ್ಮೇರಿ  ಮಳೆಗೆ  ಬಿರುಕು ಬಿಟ್ಟು  ಆಕಾಶ  ನೋಡತೊಡಗಿದಂತೇ,   ಮತ್ತೆ  ಸಾಗಾಟಕ್ಕೆ  ಕಾಲ್ನಡುಗೆಯೇ  ಗತಿಯೇನೋ  ಎನ್ನಿಸಿ,  ಭಟ್ಟರು  ಬೆಚ್ಚಿದರು.

      ನಾರ್ಣಭಟ್ಟರ  ಜೀವನದಲ್ಲೇ  ಅಂಥ  ಭೀಕರ  ಮಳೆಗಾಲವನ್ನು  ಕಂಡಿರಲಿಲ್ಲ.  ನೋಡನೋಡುತ್ತಲೇ  ಮನೆ  ದೇವಾಲಯದೆದುರಿನ   ಸಪಾಟು  ಅಂಗಳ  ಎತ್ತರದಿಂದ  ಪ್ರವಾಹದಂತೇ  ಹರಿದುಬರುತ್ತಿರುವ  ಮಳೆನೀರಲ್ಲಿ  ಕೊಚ್ಚಿಹೋಗುತ್ತಿರುವುದನ್ನು  ಕಾಣತೊಡಗಿದರು.  ಯಂತ್ರದಿಂದ  ಗುಡ್ಡಕಡಿದು  ತುಂಬಿದ  ಮಣ್ಣು  ನೀರಿನೊಂದಿಗೆ ಸೇರಿ  ಮಣ್ಣಿನದೇ  ನದಿಯಾಗಿ  ತಗ್ಗಿಗೆ  ಧುಮುಕತೊಡಗಿದಾಗ  ದೇವಾಲಯದ  ಮೆಟ್ಟಿಲವರೆಗೂ  ಬಹುದೊಡ್ಡ  ಕಂದರವೇ  ನಿರ್ಮಾಣಗೊಳ್ಳತೊಡಗಿತು.   ....................................................................................................................................

         

            ರಾತ್ರಿಯಿಡೀ  ಭಟ್ಟರಿಗೆ  ಭೀಕರ  ಮಳೆಯದ್ದೇ  ಸದ್ದಿನಲ್ಲಿ  ನಿದ್ದೆ  ಸುಳಿಯಲೇ ಇಲ್ಲ.  ಚುಮು ಚುಮು  ಬೆಳಗಾಗುತ್ತಿದ್ದಂತೇ  ಮಳೆಯ  ಸದ್ದನ್ನೂ  ಮೀರಿದ  ಧ್ವನಿಯೊಂದು  ಮನೆಯ  ಹೊರಾವರಣದಿಂದ  ಕೇಳಿಬಂದಾಗ  ಭಟ್ಟರು  ಎದ್ದು ಹೊರಗೋಡಿ  ಬಂದರು. ʻʻ ಭಟ್ರೇ  ಭಟ್ರೇ  ಗುಡ್ಡದ್‌ ತಲೇ  ಗುಡಿಂದ  ಪೂಜಾರಪ್ನೋರು  ಕೆಳಗಿಳ್ದು  ಓಡೋಗಾರೆ.  ಗಂಗಮ್ಮನ  ಕೆರೆ  ತುಂಬಿ  ಬಿರ್ಕ ಬಿಡ್ತಾ  ಐತೆ  ಮಾರಾಯ್ರೆ.  ಅದು  ಒಡ್ದೋತು  ಅಂದ್ರೆ  ತಳ್ದಾಗಿನ್‌  ದೇವಾಲ್ಯಕ್ಕೂ  ನೀರ್‌  ನುಗ್ಯಾತು.   ಬನ್ನಿ  ಬನ್ನಿ  ಭಟ್ರೇ ದೂರ  ಹೋಗಾಣ ʼʼ  ಎಂದು  ಒಂದೇ  ಉಸುರಿನಲ್ಲಿ  ಅರಚಿದ.  ದೇವಸ್ಥಾನದೆಡೆಗೆ  ಕಣ್ಣು  ಹಾಯಿಸಿದರೆ  ಯಾರ  ಸುಳಿವೂ  ಕಾಣಲಿಲ್ಲ.  ಭಟ್ಟರು  ಒಮ್ಮೆಲೇ  ದಿಗ್ಭ್ರಮೆಯಿಂದ  ಬೆವರಿದರು.  ದೇವಾಲಯ  ದೆದುರು,  ಮಣ್ಣು  ಸುರುವಿ  ನಿರ್ಮಿಸಿದ  ವಿಶಾಲ  ಅಂಗಳದ  ಸುಳಿವೂ  ಸಿಗದಷ್ಟು  ಕೊಚ್ಚಿಕೊಂಡು  ಹೋಗಿತ್ತು.  ಅದೆಷ್ಟೋ  ವರ್ಷಗಳ  ಹಿಂದಿನ  ಕಂದಕ  ಮತ್ತೆ  ನಗ್ನವಾಗಿ  ಬಿದ್ದುಕೊಂಡಿತ್ತು. 

     ಭಟ್ರು  ಒಮ್ಮೆಲೇ  ಎದ್ದು  ವಿದೇಶದಲ್ಲಿರೋ  ಮೊಮ್ಮಕ್ಕಳ  ನೆನಪಾಗಿ  ಚಿತ್ರಕರೆ ಮಾಡಲು  ಹವಣಿಸಿದರು.  ಪೋನ್‌  ಮೌನವಾಗಿತ್ತು. 

     ಅಷ್ಟರಲ್ಲಾಗಲೇ  ಅದೆಲ್ಲಿಂದಲೋ  ಒಂದಿಷ್ಟು  ಜನರೊಂದಿಗೆ  ಪೋಲೀಸರೂ  ಬಂದ  ಸನ್ನಿವೇಶವನ್ನು  ಭಟ್ಟರು  ಕಾಣತೊಡಗಿದರು.  ಸಾಹಸದಿಂದ  ಮನೆಯೆದುರಿನ  ಕಂದಕವನ್ನಿಳಿದು  ಕೆಸರು  ರಾಡಿಯಲ್ಲೇ  ಮನೆಯನ್ನು ಪೋಲೀಸರು ಪ್ರವೇಶಿಸಿ,ʻʻ ಭಟ್ರೇ ಈಗಂದೀಗ  ಇಲ್ಲಿಂದ  ಹೊರಡಿ.  ಹಿಂದಿನ  ಗುಡ್ಡವೇ  ಮಳೆಯ  ರಭಸದಲ್ಲಿ ಇಬ್ಭಾಗವಾಗುತ್ತಿದೆ.  ರಾತ್ರಿಯೇ  ಇಲ್ಲಿರುವ  ಜನರೆಲ್ಲಾ    ಸ್ಥಳ  ತೊರೆದಿದ್ದಾರೆ. ಈಗಂದೀಗ  ಜಾಗ ಖಾಲಿಮಾಡಿ.ʼʼ  ಎಂದು  ಆತುರಪಡಿಸಿದರು. 

    ʻʻ ಪರ್ವತೇಶ್ವರ  ನನ್ನನ್ನೇನೂ  ಮಾಡಲಾರ,  ನಾನು  ಬರಲಾರೆʼʼ  ಎಂದು  ಖಡಾಖಂಡಿತವಾಗಿ  ನುಡಿಯುತ್ತ  ಸತ್ನಾರಾಣ್‌  ಭಟ್ಟರು  ಅಲ್ಲಿಂದಲೇ  ಪರ್ವತೇಶ್ವರ  ಸ್ವಾಮಿ  ದೇವಾಲಯದ  ಗೋಪುರ ತುದಿಯ  ಸುವರ್ಣ ಕಲಶವನ್ನೊಮ್ಮೆ  ಆಳವಾಗಿ  ದೃಷ್ಟಿಸಿದರು.  ಅದು  ಅಂಥ  ಮಳೆಯಲ್ಲೂ  ಫಳ  ಫಳ  ಮಿಂಚುತ್ತಿತ್ತು.  ಸರಕ್ಕನೇ  ಮನೆಯೊಳ  ಹೊಕ್ಕು  ನೆಲಮಾಳಿಗೆಯೆಡೆಗೆ  ಧಾವಿಸಿದರು.  ಮಳೆ  ಪ್ರವಾಹ  ಮತ್ತು  ಮತ್ತೂ  ವೇಗ  ಪಡೆಯುತ್ತಲೇ  ಇದ್ದುದರಿಂದ,   ಭಯಪೀಡಿತ  ಪೋಲೀಸರು  ಕೆಲವು ಸಮಯ  ಕಾದು  ನಿರುಪಾಯರಾಗಿ  ಮರಳಿದರು. 

.  ನೆಲಮಾಳಿಗೆ  ಪ್ರವೇಶಿಸಿದ   ಸತ್ನಾರಾಣ್‌  ಭಟ್ರು  ಶ್ರೀದೇವರ  ಆಭರಣಗಳ  ಒಂದೆರಡು  ಕಬ್ಬಿಣದ  ಕಪಾಟುಗಳೊಂದಿಗೆ  ಮರೆಯಲ್ಲಿರುವ  ಭಟ್ಟರದ್ದೇ  ಆದ  ಇನ್ನೆರಡು  ಕಬ್ಬಿಣದ  ಭದ್ರ  ಪೆಟ್ಟಿಗೆಯನ್ನೊಮ್ಮೆ  ದೃಷ್ಟಿಸಿ  ಅಲ್ಲಿಯೇ  ಕುಸಿದು  ಕುಳಿತರು.

      ಪರ್ವತಕ್ಕೆ  ಮತ್ತೆ ರೆಕ್ಕೆ  ಮೂಡಿತ್ತು.  ಅಷ್ಟೆತ್ತರದ  ಪರ್ವತ  ಇಬ್ಭಾಗವಾಗಿ,  ಶಿರದಲ್ಲಿದ್ದ  ಗಂಗಾಂಬಿಕಾ  ಪುಷ್ಕರಣಿ  ಬಾಯಿತೆರೆದು, ಗಂಗೆ  ರೌದ್ರಾಕಾರದಿಂದ   ಪರ್ವತದ  ಸಂದಿಯಲ್ಲಿ  ನುಗ್ಗಿತು.  ನೋಡ ನೋಡುವಷ್ಟರಲ್ಲಿ   ಇಡೀ  ಪರ್ವತ  ತನ್ನ  ಮೈಮೇಲಿರುವ  ಎಲ್ಲ  ವಸತಿಗಳೊಂದಿಗೆ  ಗಂಗಾಮಾತೆಯ  ದೇಗುಲವನ್ನೂ  ಒಡಗೊಂಡು  ತಳಕ್ಕೆ  ಭೀಕರವಾಗಿ  ಜಾರತೊಡಗಿತು.  ಮಹಾ  ಸ್ಫೋಟದ  ಭಯಂಕರ  ಶಬ್ಧದೊಂದಿಗೆ  ಅಷ್ಟೆತ್ತರದ  ಒಂದು ಭಾಗ  ಇದ್ದಕ್ಕಿದ್ದಂತೇ  ತುಂಡಾಗಿ  ಪರ್ವತೇಶ್ವರದೇವಾಲಯದ  ಸಮುಚ್ಛಯವನ್ನೇ  ಮುಚ್ಚಿಹಾಕಿತು.  ನೂರಾರು ಅಡಿ  ಕೆಸರು  ಮಣ್ಣಿನಡಿಯಲ್ಲಿ  ಪರ್ವತೇಶ್ವರ ದೇವರು,  ಭಟ್ಟರು  ಮತ್ತು  ನೆಲಮಾಳಿಗೆಯಲ್ಲಿಯ  ಎಲ್ಲಪೆಟ್ಟಿಗೆಗಳೂ  ಪಾತಾಳಕ್ಕೆ  ಲಗ್ಗೆಯಿಟ್ಟವು.

 

==================================================================================

                         

                             ಸುಬ್ರಾಯ  ಮತ್ತೀಹಳ್ಳಿ. 

ತಾ-  8-8-2022                       ಅಂಚೆ- ತ್ಯಾಗಲಿ.  ತಾಲೂಕು- ಸಿದ್ದಾಪುರ.

                                    ಉತ್ತರಕನ್ನಡ   ಜಿಲ್ಲೆ.  ೫೮೧೩೪೦

                                    ಚರವಾಣಿ   9483647887  

No comments:

Post a Comment