Tuesday 26 September 2023

ಹೇಳದೇ ಕಾರಣ ಹೋದೆಯಾ ಸಹಯಾನಿ.....

 

           ಯಕ್ಷ ಕಿನ್ನರ ಲೋಕ ಪಂಚರಂಗೀ ವಾದ್ಯ ರಕ್ಕಸರೆದುರು  ನಿನ್ನ  ಮೌನ  ಕುಡುಗೋಲು. /

     ಎಷ್ಟೆಲ್ಲ  ಅವತಾರ ಆದರೂ ಅನಾಚಾರ / ದೇವರೆದುರೇ ನಿಂತೆ ಹಿಡಿದು  ಹಿಲಾಲು / 

     ಅಕ್ಕರದ ಸಕ್ಕರೆಯ ಅಕ್ಷರದಿ ಹಂಚುತ್ತ/ ಉರಿಯ ಹರಿವಲ್ಲೂ  ಅರಿವ ಬೆಳಗುತ್ತ /

     ಕೆಂಪು ಹೂಗಳ ಕಂಪ ಎಲ್ಲೆಡೆಗೆ ಬೀರುತ್ತ /  ಹೇಳದೇ ಕಾರಣ  ಹೋದೆಯಾ ಸಹಯಾನಿ. /

                ಅದೊಂದು  ಉತ್ಕಟ  ಯಾತನಾಮಯ  ಸಂದರ್ಭ.  ಐದಾರು ದಿನಗಳ  ಕಾಲ  ಕ್ಷಣ ಕ್ಷಣವೂ  ಕಾತರ  ನಿರೀಕ್ಷೆ  ಆತಂಕ ಗಳ  ಮಡುವಾಗಿದ್ದ  ಮನಸ್ಸು  ಆದಿನ  ಮಾತ್ರ  ಹೈರಾಣುಗೊಂಡಿತು. ಯಾವ  ಸುದ್ದಿ  ಬಾರದಿರಲಿ  ಎಂದು  ಮನಸ್ಸು  ಕಾತರದಿಂದ  ಮಿಡುಕಿತ್ತೋ   ಅದೇ  ಆಕ್ರಮಿಸಿ  ದಿಕ್ಕೆಡಿಸಿತು.  ಬದುಕಿನಲ್ಲಿ  ಒಂದು  ವಿಶಿಷ್ಟವಾದ, ತಲ್ಲಣಮಯ, ದಿಗ್ಭ್ರಾಂತ  ಅನುಭವದಲ್ಲಿ  ಲೀನಗೊಂಡೆ.  ತಂದೆ  ತಾಯಿಗಳನ್ನು  ಕಳೆದುಕೊಂಡು  ಅದೆಷ್ಟೋ  ವರ್ಷಗಳಾಗಿತ್ತು.  ಅಂಥ  ಆಘಾತಗಳಿಂದ  ಬಹುದೂರ  ಬಂದಿದ್ದೆ.  ಮತ್ಯಾವ  ಮಹಾಪೂರವಿಲ್ಲದೇ  ಬದುಕು  ಸಹಜಲಯದಲ್ಲಿ  ಸಾಗುತ್ತಿತ್ತು.   ನಾನು  ನನ್ನ  ಬದುಕಿನ  ಆಪ್ತ ಸ್ನೇಹಿತನೊಬ್ಬನನ್ನು  ಕಳೆದುಕೊಂಡೆ.  ಸಾವು  ಹತ್ತಿರಕ್ಕೂ  ಸುಳಿಯದ  ಮಧ್ಯವಯದ  ಸದೃಢ  ಸುಂದರ ,  ಮತ್ತೆ  ನನಗಿಂತ  ಹದಿನೈದು ವರ್ಷ  ಕಿರಿಯ  ವ್ಯಕ್ತಿ,  ಅನಿರೀಕ್ಷಿತವಾಗಿ  ನನ್ನ  ಭೌತಿಕ ಜಗತ್ತಿನಿಂದಲೇ  ದೂರವಾಗಿಬಿಟ್ಟ.  ಇನ್ನು  ನಾನು  ಯಾರೊಂದಿಗೆ  ಜಗಳಕಾಯಲಿ.  ಯಾರೊಂದಿಗೆ  ಚರ್ಚಿಸಲಿ.  ನನ್ನೊಳಗಿನ  ದುಗುಡ, ನೋವು  ತಲ್ಲಣ, ದೌರ್ಬಲ್ಯ,ಗಳನ್ನು ಎಲ್ಲಿ ಬಿಚ್ಚಿಡಲಿ. ಎಲ್ಲಿ  ಬಚ್ಚಿಡಲಿ..... ಎಂಬ  ಪ್ರಶ್ನೆಗಳೆಲ್ಲ  ಒಮ್ಮೆಲೇ  ಮುತ್ತಿಕೊಂಡಿತು.

       ಬಹುಷಃ  ಮಾನವ  ಬದುಕಿಗೆ  ಮೊದಲ ಸಂಜೀವಿನಿ  ಮಾತ್ರತ್ವವಾದರೆ,  ನಂತರದ  ಸ್ಥಾನ  ಗೆಳೆತನಕ್ಕೇ  ಇರಬಹುದು.  ಸ್ನೇಹ  ಅಂದರೇ  ನಂಟು ಎಂದರ್ಥ.  ಅದಕ್ಕೂ  ಮೂಲದಲ್ಲಿ  ಅದು  ಅಂಟು.  ಅಂಟುವ ಗುಣವಿದ್ದುದಕ್ಕೇ  ಅದು  ಭಾವನೆಯ  ಆಳದಲ್ಲಿ  ಒಂದು  ಸಾಂತ್ವನದ, ಶಕ್ತಿಯ,ಮತ್ತು   ಭರವಸೆಯ  ಮೊತ್ತವಾಗಿ  ನೆಲೆಸಿರುತ್ತದೆ.  ಗೆಳೆತನದ  ಸಾಂಗತ್ಯ  ಅದೊಂದು  ಸುಖಮಯ  ಶಾಶ್ವತ  ಅನುಭವ. ಕಾಮ್ರೇಡ್  ವಿಟ್ಠಲ್‌ ‌ ಭಂಡಾರಿ  ಅಂಥ   ಗೆಳೆತನಕ್ಕೊಂದು  ಆದರ್ಶ  ಉದಾಹರಣೆ.  

     ಡಾ!! ವಿಟ್ಠಲ್‌  ಭಂಡಾರಿ  ನೂರಾರು  ಸಾಮಾಜಿಕ  ಸಾಂಸ್ಕೃತಿಕ  ಶೈಕ್ಷಣಿಕ  ವೈಚಾರಿಕ  ಕನಸುಗಳನ್ನು  ಮೈಮನದ  ತುಂಬೆಲ್ಲ  ಧರಿಸಿಕೊಂಡು,  ತನ್ನದೇ  ಸಂಸಾರದ  ಗೊಡವೆಯೂ  ಇಲ್ಲದೇ   ಸಂಚರಿಸುತ್ತಿದ್ದ  ಅಪರೂಪದ  ವ್ಯಕ್ತಿ.  ಸೈದ್ಧಾಂತಿಕ  ಬದ್ಧತೆಯಿದ್ದರೂ, ಎಲ್ಲ  ಸಿದ್ಧಾಂತಿಗಳ  ಜೊತೆಗೂ  ಮಾನವೀಯ  ಸಂಬಂಧವನ್ನು  ಸ್ಥಾಪಿಸಿಕೊಂಡು,  ಯಾರಜೊತೆಗೂ  ಕಾದಾಟವಿಲ್ಲದೆ  ತನ್ನ  ಚಟುವಟಿಕೆಗಳನ್ನು  ಕೈಗೊಳ್ಳುತ್ತಿದ್ದ   ವಿಟ್ಠಲ್‌   ತನ್ನ  ಕಾರ್ಯಕ್ರಮಗಳಿಗೆ  ಸರ್ವರನ್ನೂ  ಆಕರ್ಷಿಸುತ್ತಿದ್ದ.  ಸಮೂಹದಲ್ಲಿದ್ದೂ  ಸಂತನಾಗಿದ್ದ.

      ಆದರೆ  ಸಭೆಯ  ಪ್ರಾರಂಭದ  ಪ್ರಸ್ಥಾವನೆಯಲ್ಲೇ   ಸಮಾಜವಾದೀ  ನೆಲೆಯಲ್ಲಿ  ಆತ  ಮಂಡಿಸುತ್ತಿದ್ದ,  ವೈಚಾರಿಕ  ನುಡಿಗಳು  ಕುತೂಹಲ  ಕೆರಳಿಸುತ್ತಿದ್ದವು.  ಅಧ್ಯಯನ ಗೈದ  ಮಹತ್ವಪೂರ್ಣ  ಗ್ರಂಥಗಳ ಉದಾಹರಣೆಯೊಂದಿಗೆ,  ಸಾಮಾನ್ಯ  ಬದುಕಿನಲ್ಲಿ,  ಧರ್ಮ  ಜಾತಿ  ಕರ್ಮಠತೆ,  ಮೇಲು  ಕೀಳುಗಳ  ಕೀಳು  ರಾಜಕಾರಣಗಳ  ಮಾರಕತೆಯನ್ನು   ಸೂಕ್ಷ್ಮವಾಗಿ  ಚಿತ್ರಿಸಿಬಿಡುತ್ತಿದ್ದರು.   ಹೇರುವ  ಮಾತುಗಳಾಗದೇ  ಮನವೊಲಿಸುವ   ನಮ್ರ  ನುಡಿಗಳು  ಕೇಳುಗರಿಗೆ  ಅಪ್ಯಾಯಮಾನವಾದ  ಅನುಭವ ನೀಡುತ್ತಿತ್ತೇ  ಹೊರತು  ಕೆರಳಿಸುತ್ತಿರಲಿಲ್ಲ.

     ಇದೇ  ಕಾರಣಕ್ಕಿರಬಹುದು,  ಕಾಲೇಜಿನ  ಪುಟ್ಟ  ಸಭೆಯಿಂದ  ರಾಜ್ಯಮಟ್ಟದ  ವಿಚಾರಸಂಕಿರಣದ  ವರೆಗೂ,  ವಿಟ್ಠಲ್‌  ಸಮಾನವಾಗಿ  ಮಿಂಚುತ್ತಿದ್ದ.  ಆತ  ಸಂಘಟಿಸುತ್ತಿದ್ದ  ವೈವಿಧ್ಯಮಯ  ಸಂಕಿರಣಗಳು  ಎಂದೂ  ಸೋಲಲಿಲ್ಲ.   ರಾಜ್ಯಾದ್ಯಂತ  ವ್ಯಾಪಿಸಿರುವ  ಎಡಪಂಥೀಯ  ಸಂಪನ್ಮೂಲ  ವ್ಯಕ್ತಿಗಳ  ಆಪ್ತ ತೆ   ಇವನಿಗೆ ದೊರಕಿತ್ತು.   ಸಾಮಾನ್ಯವಾಗಿ,   ಜಸ್ಟೀಸ್‌  ನಾಗಮೋಹನದಾಸ್‌,  ಪ್ರಕಾಶ್‌  ರೈ,  ಶಶಿಧರ ಭಟ್‌,  ಬರಗೂರು  ರಾಮಚಂದ್ರಪ್ಪ,  ಪಣಿರಾಜ್‌,  ಆರ್.ಕೆ. ಹುಡುಗಿ,  ಮಲ್ಲಿಕಾ  ಘಂಟಿ,  ಎಚ್ಎಸ್‌  ಅನುಪಮಾ,  ಎಂ.ಜಿ.ಹೆಗಡೆ,  ಶ್ರೀಪಾದ  ಭಟ್‌,  ಕೇಶವ ಶರ್ಮ, ವಿಮಲಾ  ಕಲಗಾರ್‌   ಸುರೇಂದ್ರ  ರಾವ್‌, (ಇನ್ನೂ  ಅನೇಕ)  ಮುಂತಾದ  ವಿಚಾರವಾದಿಗಳು   ಸದಾ  ಬೆನ್ನುತಟ್ಟುತ್ತಿದ್ದರು.  ಪ್ರತಿಫಲಾಪೇಕ್ಷೆಯಿಲ್ಲದೇ  ಉದಾರವಾಗಿ  ಆಗಮಿಸಿ  ಚಟುವಟಿಕೆಗಳಿಗೆ  ಜೀವತುಂಬುತ್ತಿದ್ದರು. 

    ಕಳೆದೆರಡು  ವರ್ಷಗಳಿಂದ  ಕೈಗೊಂಡ ʻʻ ಸಂವಿಧಾನ  ಓದು ʼʼ  ಕಾರ್ಯಕ್ರಮ  ರಾಜ್ಯಾದ್ಯಂತ  ಸಂಚಲನ  ಮೂಡಿಸಿತ್ತು. ರಾಜ್ಯದ  ಹತ್ತು  ಹಲವು  ಕಾಲೇಜ್‌, ವಿಶ್ವವಿದ್ಯಾನಿಲಯ,  ನ್ಯಾಯಾಲಯಗಳಲ್ಲಿ,  ಸಂವಿಧಾನದ  ಉಜ್ವಲ  ಬೆಳಕು  ಬೆಳಗಿತು.  ಸೇರುವ  ಪ್ರೇಕ್ಷಕರು,  ಖರ್ಚಾದ  ಪುಸ್ತಕಗಳು  ದಾಖಲೆ  ನಿರ್ಮಿಸಿದವು. ವಿಟ್ಠಲ್‌  ಪ್ರಕಟಿಸಿದ  ಪ್ರಸ್ತುತ ಶಿರೋನಾಮೆಯ  ಪುಸ್ತಕ   ಲಕ್ಷಸಂಖೆಯಲ್ಲಿ  ಮಾರಾಟಗೊಂಡಿತು..  ಅವರೇ  ಸ್ಥಾಪಿಸಿದ  ಬಂಡಾಯ  ಪ್ರಕಾಶನ,  ಸಮಾಜವಾದೀ  ಚಿಂತನೆಯ  ಹಲವು  ಕೃತಿಗಳನ್ನು  ಪ್ರಕಟಿಸಿ  ಮನೆಮಾತಾಯಿತು. 

      ವಿಟ್ಠಲ್‌  ಮೂಲಭೂತವಾಗಿ  ಒಬ್ಬ  ಸಾಂಸ್ಕೃತಿಕ  ವ್ಯಕ್ತಿ.  ಲಲಿತಕಲೆಗಳೆಲ್ಲವನ್ನೂ  ಮನಃಪೂರ್ವಕವಾಗಿ  ಆಸ್ವಾದಿಸುತ್ತಿದ್ದ  ಅವನ  ಮನಸ್ಸಿನಾಳದಲ್ಲಿ  ಜಿಲ್ಲೆಯ  ಜೀವಂತ ಕಲಾಪ್ರಕಾರವಾದ  ಯಕ್ಷಗಾನ, ಸದಾ ರಿಂಗಣಿಸುತ್ತಿತ್ತು.   ತಾಳಮದ್ದಲೆಯ  ಕ್ಷೇತ್ರದಲ್ಲಿ  ಕೆಲವು  ಪ್ರಮಾಣದಲ್ಲಿ  ಪರಿಣತಿಯೂ  ಇತ್ತು. ʻʻ ಸದ್ಯದ  ಯಕ್ಷಗಾನ  ಕ್ಷೇತ್ರ  ಅತಿಯಾದ  ಪುರಾಣ  ಮತ್ತು  ಧರ್ಮನಿಷ್ಠ ವಾಗುತ್ತಿದೆ.  ಪಾರಂಪರಿಕ  ಸೌಂದರ್ಯ  ಚೌಕಟ್ಟುಗಳನ್ನು  ಉಳಿಸಿಕೊಂಡೇ  ಸಮಕಾಲೀನ  ಬದುಕಿನ  ದ್ವಂದ್ವಗಳಿಗೆ  ಯಕ್ಷಕಲೆ  ಸ್ಪಂದಿಸಬೇಕಾಗಿದೆ.ʼʼ  ಎನ್ನುತ್ತಲೇ   ಹೊಸ  ಹೊಸ  ಪೌರಾಣಿಕ  ಐತಿಹಾಸಿಕ  ಘಟನೆಗಳಿಗೆ   ಯಕ್ಷಕಲೆಯ  ಸ್ಪರ್ಶಕೊಡಲು  ಹವಣಿಸುತ್ತಿದ್ದರು.  ದಾಸಸಾಹಿತ್ಯದ  ʻʻರಾಮಧಾನ್ಯ ಚರಿತೆ ʼʼ  ಪ್ರಸಂಗವನ್ನು,  ಯಕ್ಷಕವಿಗಳ  ಮೂಲಕ  ಪಠ್ಯವನ್ನಾಗಿಸಿ,  ತಮ್ಮದೇ  ಸಹಯಾನ  ವೇದಿಕೆಯಮೇಲೆ  ಪ್ರಯೋಗಿಸಿದ್ದರು. 

        ಸ್ವಥಃ  ತಾಳಮದ್ದಲೆ  ಪ್ರಸಂಗಗಳಲ್ಲಿ  ಪಾತ್ರವಹಿಸಿ,  ಪಾತ್ರಗಳಿಗೆ  ಹೊಸ ಆಯಾಮ  ಮತ್ತು  ಹೊಸ  ವೈಚಾರಿಕ  ಮಿಂಚನ್ನು  ನೀಡುವ  ಅವರ  ಪ್ರಯತ್ನ  ನಿಜಕ್ಕೂ  ಶ್ಲಾಘನೀಯ.   ಅವರ  ಚಕ್ರವ್ಯೂಹದ  ಅಭಿಮನ್ಯು  ಸದಾ  ನೆನಪಿನಲ್ಲುಳಿಯುವಂಥದ್ದು.   ಅರ್ಥಗಾರಿಕೆಯಲ್ಲಿ   ತಂದೆ  ಡಾ||  ಆರ್.ವಿ.ಭಂಡಾರಿಯವರ  ಗಾಢ ಪ್ರಭಾವವಿತ್ತು.  ಅಭಿಮನ್ಯು  ಎಡಪಂಥದ  ಪ್ರತಿನಿಧಿಯಾಗಿ,  ಕೌರವರನ್ನುದ್ದೇಶಿಸಿ   ಮಂಡಿಸಿದ   ನುಡಿಗಳು  ಎಂದೂ  ಮರೆಯಲಾಗದು.  ಸದ್ಯದ  ಪ್ರಭುತ್ವ,  ಜನಪ್ರತಿನಿಧಿಗಳು,  ಸಾಮಾನ್ಯರ  ತಿಕ್ಕಲುತನಗಳು,  ಬುದ್ಧಿಜೀವಿಗಳ  ನಯವಂಚಕತನಗಳನ್ನೆಲ್ಲ,  ಯಕ್ಷಚೌಕಟ್ಟಿನಲ್ಲಿಯೇ  ಚಿತ್ರಿಸುತ್ತಿದ್ದ   ಅವನ  ಪ್ರಯತ್ನ  ನಿಜಕ್ಕೂ  ಖುಷಿಕೊಟ್ಟಿತ್ತು.

      ವಿಟ್ಠಲ್‌  ತನ್ನ  ವಿದ್ಯಾರ್ಥಿಗಳ  ಮೂಲಕ   ಸ್ಥಳೀಯ  ವಿವಿಧ  ಜನ ಸಮುದಾಯಗಳ  ಆಡುನುಡಿಯ  ಒಡಲಲ್ಲಿ  ಹುದುಗಿರುವ   ಸಾವಿರಾರು  ಶಬ್ಧ  ಮತ್ತು  ನುಡಿಗಟ್ಟುಗಳನ್ನು  ಸಂಗ್ರಹಿಸಿ  ಅವುಗಳ  ಪ್ರಕಟಣೆಯ  ಕನಸು ಕಾಣುತ್ತಿರುವಾಗಲೇ  ಜೀವತೊರೆದಿದ್ದು  ಕನ್ನಡದ  ದುರ್ದೈವ.   ಇನ್ನಾದರೂ  ಒಂದು  ಭಾಷೆಯ  ಉಳಿವು ಮತ್ತು  ಪ್ರಗತಿಯ  ನೆಲೆಯಲ್ಲಿ,  ಅದು  ಪ್ರಕಟವಾಗಬೇಕು.  ಇನ್ನೂ  ಶಬ್ದಕೋಶ  ಸೇರದ  ಇಲ್ಲಿಯ  ಸಂಗ್ರಹ,  ಸಂಶೋಧಕರಿಗೆ  ಹೊಸ  ದಾರಿ  ತೋರೀತು. 

      ಪ್ರಾದೇಶಿಕ  ಅಂತರ,  ವೈಚಾರಿಕ  ಭಿನ್ನತೆ, ಮತ್ತು ನಿರ್ದಿಷ್ಟ  ಸಾಂಗತ್ಯವಿಲ್ಲದ  ವಿಚಿತ್ರ ಜಿಲ್ಲೆಯಾದ  ಉತ್ತರಕನ್ನಡದ  ಎಲ್ಲ  ಪ್ರದೇಶಗಳ,  ಮತ್ತು  ಜನಾಂಗದ  ಚಿರಪರಿಚಿತರಾಗಿ,  ಒಂದು  ಭಾವಸಂಬಂಧವನ್ನು  ಸ್ಥಾಪಿಸಿಕೊಂಡಿದ್ದ   ವಿಟ್ಠಲ್‌ರ   ಅಗಲುವಿಕೆ   ಜಿಲ್ಲೆಗೆ  ಬಹುದೊಡ್ಡ  ನಷ್ಟವನ್ನುಂಟುಮಾಡಿದೆ.

    ಮತ್ತೆ  ಇಂಥ  ಮತ್ತೊಬ್ಬ  ಸಮರ್ಥ  ಸಂಘಟಕರಿಗಾಗಿ  ಕಾಯಬೇಕಿದೆ.   ಕೇವಲ  ಹಳಹಳಿಕೆಯಾಗದೇ   ವಿಟ್ಠನ   ಕನಸು  ಸದಾ  ಚಿಗುರುತ್ತಿರುವಂತೇ,  ಮನ  ಮನೆಗೆ  ವ್ಯಾಪಿಸುವಂತೇ  ಮಾಡುವ  ಗುರುತರ  ಜವಾಬ್ದಾರಿ   ವಿಠ್ಠಲರ  ಬಹುದೊಡ್ಡ   ಸ್ನೇಹವಲಯದ  ಮೇಲಿದೆ.

 

                          

                                                           ಸುಬ್ರಾಯ  ಮತ್ತೀಹಳ್ಳಿ,   ತಾ- ೨೨- ೫- ೨೦೨೧.

 

No comments:

Post a Comment