Monday 25 September 2023

ಅನುಸ್ಪಂದನವೆಂಬ ಅನುಭೂತಿ.

 

        ನಾನೆಂದೂ   ಬಯಸದ,  ನಿರೀಕ್ಷಿಸದ   ಅವಕಾಶವೊಂದು   ಧುತ್‌  ಎಂದು   ನನ್ನೆದುರು  ಪ್ರತ್ಯಕ್ಷಗೊಂಡು,  ಕಚಕುಳಿಯಿಡುತ್ತಲೇ   ಆತಂಕ  ಮೂಡಿಸಿದ  ಘಟನೆ   ನನ್ನ  ಜೀವನದಲ್ಲಿ  ಮರೆಯಲಾಗದ  ಘಟನೆ.  ಅದರಲ್ಲಿಯೂ   ಅತ್ಯಂತ  ಪ್ರಸಿದ್ಧಿಗೊಂಡು,  ದೇಶವಿದೇಶದ  ಹತ್ತು  ಹಲವು  ಭಾಷೆಗಳಿಗೆ  ದಾಂಗುಡಿಯಿಟ್ಟು  ಸಾಹಿತ್ಯಿಕ  ಸಾಂಸ್ಕೃತಿಕ  ಜಗತ್ತಿನಲ್ಲಿ  ವಿಶೇಷ   ಸಂಚಲನವನ್ನೇ  ಸೃಷ್ಟಿಸಿದ   ಮಹತ್ವಪೂರ್ಣ   ಕಾದಂಬರಿಯೊಂದನ್ನು   ಪ್ರಾದೇಶಿಕವಾದ  ಆಡುಭಾಷೆಯೊಂದಕ್ಕೆ  ಪರಿವರ್ತಿಸುವ   ಅವಕಾಶ  ನನ್ನನ್ನು  ಅರಸಿಕೊಂಡು  ಬಂದಿತ್ತು. 

       ಶಿಷ್ಟಭಾಷೆ, ಅಥವಾ  ಸಾಹಿತ್ಯಿಕ  ಭಾಷೆ   ಎಲ್ಲರ  ಅನುಕೂಲಕ್ಕಾಗಿ  ಸೃಷ್ಟಿಸಿಕೊಂಡಿದ್ದು.  ಅದು  ಎಂದೂ   ಸಾರ್ವತ್ರಿಕ  ಆಡುಭಾಷೆಯಾಗಲು  ಸಾಧ್ಯವಿಲ್ಲ.   ಆಡುಭಾಷೆಗೆ  ಅದರದ್ದೇ  ಆದ  ಮಿತಿಯಿದ್ದರೂ,  ಶಿಷ್ಟಭಾಷೆಯ  ಯಾಂತ್ರಿಕತೆಯಿಂದ   ದೂರವಾದ,  ಒಂದು  ಜೀವಂತ  ಸಂವಹನೆಯ  ನುಡಿಧಾರೆ  ಅದು.    ಅದೇ   ಕಾರಣಕ್ಕಿರಬಹುದು,  ಮೈಸೂರಿನ  ಬಹುಮುಖ್ಯ  ಪ್ರಕಾಶಕರಾದ   ಸಂಸ್ಕೃತಿ  ಸುಬ್ರಹ್ಮಣ್ಯರ  ಮನದಲ್ಲಿ,  ಲಕ್ಷಮೀರಿದ  ಕರ್ನಾಟಕದ   ಹವ್ಯಕ  ಸಮುದಾಯದ  ಆಡು ನುಡಿಯಾದ  ʻʻ ಹವಿಗನ್ನಡʼʼ ದಲ್ಲಿ   ಶಿಷ್ಟಕನ್ನಡದ  ಸುಪ್ರಸಿದ್ಧ  ಕೃತಿಯೊಂದನ್ನು, ಪ್ರಕಟಿಸುವ  ಉತ್ಸಾಹ  ಉದ್ಭವಿಸಿದ್ದು.   ಹಾಗೆಂದು  ಪ್ರಾದೇಶಿಕ  ಭಾಷೆಗೆ  ಅದರದ್ದೇ  ಆದ  ವೈಶಿಷ್ಟ್ಯವಿದ್ದರೂ,   ಸಾರ್ವತ್ರಿಕ  ಸಂವಹನೆಯ  ದೃಷ್ಟಿಯಲ್ಲಿ,  ಓದುಗನನ್ನು  ಕೊಂಚ  ಗಲಿಬಿಲಿಗೆ  ಒಡ್ಡುವದಂತೂ  ಸತ್ಯ.

     ಆಗಲೇ  ಅವರು  ಕನ್ನಡನಾಡಿನದ್ದೇ  ಆದ   ಸಂಕೇತಿ  ಭಾಷೆಗೆ ಡಾ-  ಎಸ್.ಎಲ್.‌ ಭೈರಪ್ಪನವರ ʻ ಸಾರ್ಥ ʼ ಕೃತಿಯನ್ನು   ಸಮರ್ಥ  ಅನುವಾದಕರಿಂದ   ಅನುವಾದಿಸಿ,  ಪ್ರಕಟಿಸಿ  ಯಶ  ಕಂಡಿದ್ದರು.     ಭಾಷಿಕರ  ಪ್ರತಿಕ್ರಿಯೆ   ಪ್ರಕಾಶಕರನ್ನು   ಪ್ರೋತ್ಸಾಹಿಸಿತ್ತು.    ಅವರು  ಅನುವಾದಕರನ್ನು  ಅನ್ವೇಷಿಸ ತೊಡಗಿದರು. ಸ್ನೇಹಿತರೂ,  ಪ್ರಜಾವಾಣಿ  ಸಂಪಾದಕರು,  ಜೊತೆಗೆ  ಹವ್ಯಕಸಮುದಾಯದವರಾದ   ರವೀಂದ್ರ ಭಟ್ಟರನ್ನು  ಸಂಪರ್ಕಿಸಿದರು..  ತಮ್ಮ  ಯೋಜನೆಯನ್ನು  ಮುಂದಿಟ್ಟು   ಅನುವಾದಿಸಿ  ಕೊಡುವಂತೇ  ಒತ್ತಾಯಿಸಿದರು. ಅವರು  ತಮ್ಮ  ಕಾರ್ಯಭಾರದಲ್ಲಿ  ಸಾಧ್ಯವಾಗದ  ಕಾರಣ  ನೀಡಿ   ನನ್ನ  ಹೆಸರನ್ನು  ಸೂಚಿಸಿದರು.

     ಅಪರಿಚಿತರಾದ   ಸುಬ್ರಹ್ಮಣ್ಯ  ಒಂದುದಿನ  ದೂರವಾಣಿಯಲ್ಲಿ   ಸಂಪರ್ಕಿಸಿ    ವಿಷಯವನ್ನು  ತಿಳಿಸಿದಾಗ  ನಾನು  ಆತಂಕಗೊಂಡೆ.   ಆದರೆ   ರವೀಂದ್ರ ಭಟ್‌  ಮತ್ತು  ಪ್ರಕಾಶಕರ  ಒತ್ತಾಸೆಗೆ  ನಾನು  ಮಣಿಯಲೇಬೇಕಾಯಿತು.  ಕಾದಂಬರಿ  ದಿಗ್ಗಜ  ಭೈರಪ್ಪನವರ  ಪ್ರತಿಭಾಮಹಲಿಗೆ  ಅನಿವಾರ್ಯವಾಗಿ  ನಾನು  ಪ್ರವೇಶಿಸಲೇ  ಬೇಕಾಯಿತು.       ಕನ್ನಡದಿಂದ  ಕನ್ನಡಕ್ಕೆ  ಅನುವಾದವೇ...?     ಪ್ರಶ್ನೆ    ಸ್ನೇಹಿತರಿಂದ   ಎರಗಿದಾಗ   ಹೌದಲ್ಲ...  ಎಂದೆನ್ನಿಸಿತು.     ಹೌದು.  ಒಂದು  ಭಾಷೆಯಿಂದ  ಮತ್ತೊಂದು  ಭಿನ್ನ ಭಾಷೆಗೆ   ಕೃತಿಯನ್ನು   ಪರಿವರ್ತಿಸುವಾಗ   ಏರ್ಪಡುವುದು  ಅನುವಾದ.   ನಾನು  ಕನ್ನಡದ್ದೇ   ಒಂದು  ವಿಶಿಷ್ಟ  ಆಡುಭಾಷೆ  ಹವಿಗನ್ನಡಕ್ಕೆ  ತರುತ್ತಿದ್ದೇನೆ.  ಎನ್ನಿಸಿದಾಗ   ನನ್ನೊಳಗೊಂದು   ಗೊಂದಲ  ಮೂಡಿತು.   ಇದು  ಅನುವಾದವಲ್ಲ.  ಅನುಸೃಷ್ಟಿಯಲ್ಲ,   ʻ ಅನುಸ್ಪಂದನ ʼ ಎಂದು. 

       ʻʻ ಸಾರ್ಥʼʼ  ಕೃತಿಗೆ  ಭಾರತೀಯ  ಕಾದಂಬರಿ ಪ್ರಕಾರದಲ್ಲಿಯೇ   ವೈಶಿಷ್ಟ್ಯಪೂರ್ಣ  ಸ್ಥಾನವಿದೆ.  ಅದು  ಏಕಕಾಲದಲ್ಲಿ   ಸಾಂಸ್ಕೃತಿಕ   ಧಾರ್ಮಿಕ   ಸಾಮಾಜಿಕ  ಐತಿಹಾಸಿಕ  ರಾಜಕೀಯ  ಮತ್ತು  ಸಾಂಸಾರಿಕ ವಾದ  ಎಲ್ಲ  ಆಯಾಮಗಳನ್ನು  ತನ್ನ  ಒಡಲಲ್ಲಿ   ಹುದುಗಿಸಿಕೊಂಡಿರುವ   ಆಳ  ಅಧ್ಯಯನದಿಂದ  ಸೃಷ್ಟಿಯಾದ   ಅಪೂರ್ವ  ಕೃತಿ.   ಎಂಟನೆಯ ಶತಮಾನದ  ಉಜ್ವಲ  ಐತಿಹಾಸಿಕ ಆವರಣಕ್ಕೆ  ಕೊಂಡೊಯ್ಯುವ  ಪ್ರಸ್ತುತ  ಕೃತಿ,  ನಮ್ಮೆಲ್ಲ  ವರ್ತಮಾನದ  ಬದುಕಿನ   ಸಂಕೀರ್ಣತೆಗೆ,  ಸಂಘರ್ಷಗಳಿಗೆ  ಮುಖಾಮುಖಿಯಾಗುತ್ತದೆ.   ಮಾನವನ  ಶಕ್ತಿ  ಮತ್ತು  ದೌರ್ಬಲ್ಯಗಳಿಗೆ  ಕನ್ನಡಿಹಿಡಿದು  ಎಚ್ಚರಿಸುವುದರೊಂದಿಗೆ,  ಭವಿಷ್ಯದ  ಬದುಕಿನ  ಕನಸಿಗೆ  ನೀರೆರೆಯುತ್ತದೆ. 

             ಸಾಹಿತ್ಯ  ಪ್ರಪಂಚದ  ಅಗಾಧ  ಅಪರಿಮಿತ  ಅಕ್ಷರ ಪ್ರವಾಹದಲ್ಲಿ  ಉಳಿಯುವವರೆಷ್ಟೋ,  ಕೊಚ್ಚಿಹೋಗುವವರೆಷ್ಟೋ,   ಪ್ರವಾಹ  ಎಂದಾಗ  ಕಸಕಡ್ಡಿ, ರಾಡಿ ಕೂಡಿಯೇ  ಪ್ರವಹಿಸುವುದು  ಸಹಜ. ಅದರಜೊತೆಗೇ  ಫಲವತ್ತಾದ  ಮಣ್ಣನ್ನೂ  ಬರಡುಭೂಮಿಗೆ  ತಂದು  ಸುರಿಯುವುದು  ಕೂಡಾ  ಅದೇ  ಪ್ರವಾಹವೇ  ಆಗಿದೆ. ಆದರೆ  ನದಿಯ  ಒಡಲಲ್ಲಿ  ಒಂದಿಷ್ಟು  ಬಂಡೆಗಲ್ಲುಗಳು  ಧ್ಯಾನಸ್ಥವಾಗಿ  ಕುಳಿತು  ಪ್ರವಾಹದ  ಏರಿಳಿತದ  ದಾಖಲೆಯನ್ನು ಒದಗಿಸುತ್ತಲೇ  ಇರುತ್ತದೆ. 

         ಆಧುನಿಕ  ಭಾರತೀಯ  ಸಾಹಿತ್ಯದ  ಪ್ರವಾಹದಲ್ಲಿ  ಡಾ. ಎಸ್.ಎಲ್. ಭೈರಪ್ಪ  ಅಂಥದೊಂದು  ಬಂಡೆಗಲ್ಲು.  ಅಸಾಮಾನ್ಯ  ಪ್ರತಿಭೆ  ಅವರು.   ಸಾಹಿತ್ಯ  ಕೇವಲ  ರಂಜನೆಯ  ಸಾಮಗ್ರಿಯಲ್ಲ.  ಅದೊಂದು  ಸತ್ಯಾನ್ವೇಷಣೆಯ  ದುರ್ಗಮ ದಾರಿ. ಮಾನವ  ಬದುಕಿನಲ್ಲಿ  ತಾನೂ  ಒಂದಾಗಿ,  ತನ್ನೊಳಗನ್ನೂ  ಶೋಧಿಸಿಕೊಳ್ಳುತ್ತಲೇ   ಸಾಂಸ್ಕೃತಿಕ  ಪಥದಲ್ಲಿ  ನಿಜದ  ಹುಡುಕಾಟ. ಅದೊಂದು  ಅದ್ಭುತ  ಸವಾಲಿನ  ಕೆಲಸ.  ಇಂಥ  ಸವಾಲನ್ನು  ಎದುರಿಸುತ್ತಲೇ   ಬೆಳೆದು  ಬಾಳಿದವರು  ಭೈರಪ್ಪನವರು.

         ಒಬ್ಬ  ವಿಜ್ಞಾನಿಗಿಂತ,  ಇತಿಹಾಸಕಾರನಿಗಿಂತ,  ತತ್ವಜ್ಞಾನಿಯ  ದಾರಿ  ಭಾರೀ  ಕಠಿಣ.  ತತ್ವಜ್ಞಾನದ  ಬೆಳಕಿನಲ್ಲಿ  ಒಬ್ಬ  ಲೇಖಕನಾಗಿ, ಕಲಾವಿದನಾಗಿ  ರೂಪುಗೊಳ್ಳುವುದಿದೆಯಲ್ಲ,   ಅದು    ಭುವನದ  ಭಾಗ್ಯ. ಆ  ಭಾಗ್ಯ  ಶ್ರೀ  ಭೈರಪ್ಪನವರ  ಮೂಲಕ  ಕನ್ನಡದ  ಮಣ್ಣಿಗೆ  ದಕ್ಕಿದೆ. 

      ಭೈರಪ್ಪ  ಅವರೊಬ್ಬ  ವ್ಯಕ್ತಿಯಲ್ಲ.  ಅವರೊಂದು  ಸಂಸ್ಥೆ.  ಮಹಾನ್‌  ಶಕ್ತಿ.  ದೈತ್ಯ  ಪ್ರತಿಭೆ  ಎಂಬ  ವಿಶೇಷಣವನ್ನೇನೂ  ನಾನು  ಉಪಯೋಗಿಸಲಾರೆ.  ಅವರ  ಒಂದೊಂದು  ಕೃತಿಯನ್ನು  ಓದುವಾಗಲೂ  ಮೂಡಿದ್ದು  ಬೆರಗು, ವಿಸ್ಮಯ,  ಅಚ್ಚರಿ, ಜೊತೆಗೆ  ರೋಮಾಂಚನ.   ಕೃತಿಗಳ  ಪಾತ್ರಗಳೆಲ್ಲ,  ನಮ್ಮ  ಕುಟುಂಬದ  ಸದಸ್ಯರುಗಳೇನೋ,  ಅದು  ನಮ್ಮದೇ  ವೃತ್ತಾಂತವೇನೋ  ಎಂದೆನ್ನಿಸುವಷ್ಟು  ಆಪ್ತವಾಗಿ, ಆವರಿಸಿಕೊಳ್ಳುತ್ತವೆ.  ಭೈರಪ್ಪನವರ  ಕೃತಿಗಳು  ಸೃಷ್ಟಿಸಿದ  ಸಂಚಲನ  ಕಡಿಮೆಯೇನಲ್ಲ.   ಹೆಚ್ಚಿನೆಲ್ಲ   ಭಾರತೀಯ  ಭಾಷೆಗಳಲ್ಲದೇ      ಇಂಗ್ಲಿಶ್‌   ರಶಿಯನ್‌   ಜರ್ಮನಿ   ಮತ್ತು   ಚೈನೀ  ಭಾಷೆಗಳಿಗೂ   ಧಾಂಗುಡಿಯಿಟ್ಟಿದೆ.  ಅಲ್ಲಿಯೂ  ಭಾರತೀಯ  ಪರಂಪರೆಯ  ಅಸ್ಮಿತೆಯನ್ನು   ಬಿತ್ತಿ,  ಪಸರಿಸಿದೆ.         ಪರವೆಂದರೆ  ಪರವಾಗಿ  ವಿರೋಧವೆಂದರೆ  ಪೂರ್ತಿ  ವಿರೋಧವಾಗಿ  ಸಾವಿರಾರು  ಪುಟಗಳಲ್ಲಿ  ಚರ್ಚೆಯ  ಮಳೆಯೇ  ಸುರಿದಿದೆ.  ವಸ್ತುನಿಷ್ಠವಾಗಿ, ಶಕ್ತಿ  ಮತ್ತು  ದೌರ್ಬಲ್ಯಗಳನ್ನು  ಭಾವಾವೇಶವಿಲ್ಲದೇ  ಗುರುತಿಸಿ  ಚರ್ಚಿಸಿದ   ಬರಹಗಳು  ಅಪರೂಪವೆಂದೇ  ಹೇಳಬಹುದಾಗಿದೆ. ಅಗಾಧ  ಸೃಷ್ಟಿ,  ಅಪರಿಮಿತ  ಚರ್ಚೆಯನ್ನು  ಹುಟ್ಟುಹಾಕುವುದು, ಸಹಜವೇ.  ಕಾಲಮಾತ್ರ  ಗಟ್ಟಿಕಾಳನ್ನು  ಉಳಿಸಬಹುದಾಗಿದೆ.

         ಕಳೆದ  ಸುಮಾರು  ಮೂವತ್ತು  ವರ್ಷಗಳಿಂದ   ಭೈರಪ್ಪನವರ  ಬಗೆಗೆ  ತೀವ್ರ  ಕುತೂಹಲವನ್ನು  ಬೆಳೆಸಿಕೊಂಡವ  ನಾನು.   ಮಹಾಕೃತಿ  ವಂಶವೃಕ್ಷದಿಂದ  ಪ್ರಾರಂಭಗೊಂಡ  ಅವರ  ಬಗೆಗಿನ  ಆಸಕ್ತಿ  ಕೃತಿಯಿಂದ  ಕೃತಿಗೆ  ಬೆಳೆಯುತ್ತಲೇ  ಹೋಯಿತು.      ಮೈಸೂರಿನಿಂದ  ಸರಿಸುಮಾರು   ನಾಲ್ಕುನೂರು  ಕಿಲೋಮೀಟರ  ದೂರದ  ಉತ್ತರಕನ್ನಡ  ಜಿಲ್ಲೆಯ   ಪುಟ್ಟ  ಗ್ರಾಮವೊಂದರ  ಕೃಷಿಕನಾದ  ನನಗೆ  ಭೈರಪ್ಪನವರನ್ನು  ಸಾಕ್ಷಾತ್‌  ಕಾಣುವ  ಯೋಗ  ಬಂದಿರಲೇ  ಇಲ್ಲ.   ಕೃತಿಯ  ರೋಚಕತೆ, ಪಾತ್ರಸೃಷ್ಟಿ,  ಕಥನತಂತ್ರ,  ಮತ್ತು  ಪಾತ್ರಗಳ  ನಡುವೆ  ಏರ್ಪಡುವ  ವಾಗ್ವಾದಗಳ ಜೊತೆಗೆ  ಅದ್ಭುತ  ತಿರುವುಗಳನ್ನು  ಆಸ್ವಾದಿಸಿದಂತೇ   ಕೃತಿಕಾರರನ್ನು  ಸಂದರ್ಶಿಸುವ  ಕಾತರ  ನನ್ನೊಳಗೇ  ಬೆಳೆಯುತ್ತಿತ್ತು.      ೨೦೦೦ ನೇ ವರ್ಷವಿರಬಹುದು.  ಭೈರಪ್ಪನವರು  ನಮ್ಮ ಜಿಲ್ಲೆಗೆ  ಬಂದಿದ್ದಾರೆ,  ನಮ್ಮ  ಸಿದ್ಧಾಪುರ  ತಾಲೂಕಾ  ಸ್ಥಳದಲ್ಲಿಯೇ  ವಾಸ್ತವ್ಯ  ಹೂಡಿದ್ದಾರೆ  ಎಂಬ  ವರ್ತಮಾನ  ಗೆಳೆಯರಮೂಲಕ  ತಿಳಿದಾಗ  ಖುಷಿಯ  ಅಲೆಯಲ್ಲಿ  ತೇಲಾಡಿದೆ. 

          ಆಗ  ಅವರು  ʻʻ ಮಂದ್ರʼʼ  ಕಾದಂಬರಿ  ಸೃಷ್ಟಿಯಲ್ಲಿ  ತೊಡಗಿಕೊಂಡಿದ್ದರು.  ಅದೊಂದು  ಸಂಗೀತಕಲೆಯ  ಆಳ  ಅಧ್ಯಯನದ  ಹಿನ್ನೆಲೆಯಲ್ಲಿ   ಸಂಗೀತಸಾಧಕನ  ಬದುಕಿನ  ಏರಿಳಿತಗಳನ್ನು  ಚಿತ್ರಿಸುವ  ಮಹತ್ವಪೂರ್ಣ  ಕಾದಂಬರಿಯಾಗಿ  ಅರಳಿಕೊಳ್ಳಲು   ಪ್ರಾರಂಭವಾಗಿತ್ತು.  ಮಾಜೀ  ಮುಖ್ಯಮಂತ್ರಿ  ದಿ.  ರಾಮಕೃಷ್ಣ  ಹೆಗಡೆಯವರ  ಸೋದರ  ಸಂಭಂಧಿಗಳಾದ   ದಿ.  ಗಣೇಶ  ಹೆಗಡೆ  ದೊಡ್ಮನೆ  ಯವರ  ಮನೆಯಲ್ಲಿ  ಭೈರಪ್ಪನವರು  ತಂಗಿದ್ದರು. 

      ಒಂದೆರಡು  ಗೆಳೆಯರೊಂದಿಗೆ  ನಾವು  ಗಣೇಶ ಹೆಗಡೆಯವರ  ಮನೆಗೇ  ಧಾಳಿಯಿಟ್ಟೆವು.  ಸೋಪಾದಮೇಲೆ  ಶಾಂತವಾಗಿ  ಕುಳಿತು  ದಿನಪತ್ರಿಕೆಯೊಂದರಲ್ಲಿ  ಮಗ್ನರಾಗಿದ್ದರು.  ಮುಗುಳು  ನಗೆಯೊಂದಿಗೆ  ನಮ್ಮನ್ನು  ಎದುರುಗೊಂಡರು. 

      ಕೃತಿಯೊಂದರ   ರಚನೆಯ  ಹಿನ್ನೆಲೆಯಲ್ಲಿ   ವರ್ಷಾನುಗಟ್ಟಲೇ   ಟಿಪ್ಪಣಿ  ಮಾಡಿಕೊಳ್ಳುತ್ತ,  ಯಾವುದಾದರೂ  ಹೊರ  ಊರಿನಲ್ಲಿ,  ಮೌನವಾಗಿ  ವಾಸ್ತವ್ಯ  ಹೂಡಿ  ತಿಂಗಳೊಳಗೆ  ಕೃತಿರಚಿಸುವ  ಪ್ರವೃತ್ತಿಯನ್ನು  ರೂಢಿಸಿಕೊಂಡಿದ್ದಾರೆಂದು  ಕೇಳಿತಿಳಿದಿದ್ದ   ನಮಗೆ  ಭೈರಪ್ಪನವರ  ಧ್ಯಾನಸ್ಥ  ಸ್ಥಿತಿಗೆ  ಭಂಗ  ತರುತ್ತಿದ್ದೇವೆಯೇನೋ   ಎಂಬ  ಭಾವದಲ್ಲಿಯೇ  ಅವರನ್ನು  ಭೇಟಿಮಾಡುವ  ಧೈರ್ಯಗೈದಿದ್ದೆವು.  ಆಗೆಲ್ಲ  ಪ್ರಸಿದ್ಧ  ಲೇಖಕರು  ಅಂದರೆ  ಒಂದು ರೀತಿಯ  ತಾರಾ ಮೌಲ್ಯವನ್ನೇ  ಪಡೆದಿದ್ದರು.ಬೇಂದ್ರೆ  ಶಿವರಾಮ ಕಾರಂತ  ಕುವೆಂಪು  ಭೈರಪ್ಪ, ಕಿ.ರಂ. ನಾಗರಾಜ ಅನಂತ ಮೂರ್ತಿ, ಲಂಕೇಶ, ತೇಜಸ್ವಿ,   ಮುಂತಾದ  ಸಾಹಿತಿಗಳನ್ನು  ನಾವು  ನೋಡದೇ ಹೋದರೂ  ಅವರ  ಬಗೆಗೆ  ಅತೀವ  ಕುತೂಹಲವನ್ನು  ಬೆಳೆಸಿಕೊಂಡಿರುವಂಥ  ಕಾಲ.  ಅವರೆಲ್ಲ  ಶ್ರೀಮದ್ಗಂಭೀರರು, ಸಾಮಾನ್ಯರೊಂದಿಗೆ  ಬೆರೆಯದವರು,  ಸದಾ  ಬರಹದ  ಗುಂಗಿನಲ್ಲಿ  ಮೈಮರೆತಿರುವವರು, ಎಂದೆಲ್ಲಾ  ಅಭಿಪ್ರಾಯಗಳನ್ನು  ನಮ್ಮಷ್ಟಕ್ಕೆ  ನಾವೇ  ಕಲ್ಪಿಸಿಕೊಳ್ಳುತ್ತಿದ್ದ  ದಿನಗಳು.

      ಅಂದು  ಭೈರಪ್ಪನವರು  ನಮ್ಮೊಂದಿಗೆ  ಸ್ಪಂದಿಸಿದ  ರೀತಿ  ನಮ್ಮನ್ನು  ನಿರಾಳವಾಗಿಸಿತು.  ಅವರ  ಬಗೆಗೆ  ನಾವು ಕಲ್ಪಿಸಿಕೊಂಡ  ಭಾವನೆಗಳೆಲ್ಲ  ಕರಗಿಹೋದವು.  ಕುಶಲೋಪರಿಯೊಂದಿಗೆ     ಜಿಲ್ಲೆಯ  ಬದುಕು,  ಜನಾಂಗೀಯ  ವೈವಿಧ್ಯತೆ,  ಭಾಷಾಸೊಗಡಿನ  ಬಗೆಗೆಯೇ   ಅಂದಿನ  ಮಾತುಕತೆ  ಸಾಗಿತು.  ಉತ್ತರಕನ್ನಡ  ಜಿಲ್ಲೆ  ಪುಟ್ಟದಾಗಿದ್ದರೂ   ಪುಟ್ಟ  ಪುಟ್ಟ  ಹತ್ತಾರು  ಸಮುದಾಯಗಳ  ವಿಭಿನ್ನ  ಭಾಷಾಸೊಗಡು,  ಮತ್ತು  ಇಲ್ಲಿಯ  ಪ್ರಕೃತಿ  ಸೌಂದರ್ಯದ   ವಿವರಗಳೇ  ಅವರ  ಮಾತುಗಳಲ್ಲಿ  ತುಂಬಿಕೊಂಡಿತ್ತು. 

          ನಮ್ಮ  ಶಿರಸಿಯಲ್ಲೊಂದು   ಒಂದೂವರೆ  ಶತಮಾನದಿಂದ  ಪುಸ್ತಕಪ್ರಿಯರ  ಪ್ರೀತಿಯ  ಸ್ಥಳವಾಗಿ,  ಅತ್ಯಮೂಲ್ಯ  ಗ್ರಂಥ ಭಂಡಾರ  ಹೊಂದಿ  ಜನಪ್ರಿಯವಾಗಿರುವ   ʻʻಪಂಡಿತ ಸಾರ್ವಜನಿಕ  ಗ್ರಂಥಾಲಯʼʼ    ಬಗೆಗೆ  ಭೈರಪ್ಪನವರು  ಯಾರಿಂದಲೋ  ತಿಳಿದು  ಕೊಂಡಿದ್ದರು.  ಕರ್ನಾಟಕದ  ಅತ್ಯಂತ  ಹಳೆಯ  ಕೆಲವೇ  ಗ್ರಂಥಾಲಯಗಳಲ್ಲಿ  ಪಂಡಿತ್‌  ಗ್ರಂಥಾಲಯವೂ  ಒಂದು.  ಮಹರ್ಷಿ  ಅರವಿಂದರ  ಪರಮ  ಆಪ್ತರಾಗಿದ್ದ, ಶಿರಸಿಯವರೇ  ಆದ  .ದಿ.ಎಂ.ಪಿ.ಪಂಡಿತ್‌  ಎಂಬ  ಮಹನೀಯರು  ಪ್ರಸ್ತುತ   ವಾಚನಾಲಯವನ್ನು  ಸ್ಥಾಪಿಸಿದ್ದರು.    ಪಂಡಿತ್‌ ರವರು  ಪಾಂಡಿಚೇರಿಯಲ್ಲಿದ್ದು, ಅರವಿಂದ  ತತ್ವಜ್ಞಾನದ  ಹಿನ್ನೆಲೆಯಲ್ಲಿ,  ಸುಪ್ರಸಿದ್ಧ  ಇಂಗ್ಲಿಶ್‌  ಲೇಖಕರಾಗಿ  ಬೆಳೆದು  ಬಾಳಿದವರು.   ಪಂಡಿತರ  ಬಗೆಗೆ  ಮತ್ತು  ಅರವಿಂದರ  ಬಗೆಗೆ  ಆಗಲೇ  ಸಾಕಷ್ಟು  ಓದಿಕೊಂಡಿದ್ದ   ಭೈರಪ್ಪನವರು     ಗ್ರಂಥಾಲಯವನ್ನು  ನೋಡಬೇಕೆಂಬ  ಅಪೇಕ್ಷೆಯನ್ನು  ವ್ಯಕ್ತಪಡಿಸಿದರು.  ಒಂದೆರಡು  ದಿನಗಳಲ್ಲಿಯೇ  ನಾವು  ಗ್ರಂಥಾಲಯದ  ಜಗುಲಿಯಮೇಲೆಯೇ   ʻʻ ಭೈರಪ್ಪನವರೊಂದಿಗೆ  ಸಂವಾದವನ್ನು  ಏರ್ಪಡಿಸಿದೆವು.

      ಸಂವಾದ  ಕಾರ್ಯಕ್ರಮಕ್ಕೆ  ಜಿಲ್ಲೆಯ  ಬಹುಪಾಲು  ಲೇಖಕರು  ಚಿಂತಕರು  ಭಾಗವಹಿಸಿದ್ದರು.  ಅಂದಿನ  ಅವರ  ವಂಶವೃಕ್ಷ ,  ತಬ್ಬಲಿಯು  ನೀನಾದೆ  ಮಗನೆ,  ಜಲಪಾತ, ನಿರಾಕರಣ, ಮುಂತಾದ  ಕಾದಂಬರಿಗಳ  ಮೇಲೆ  ತಲಸ್ಪರ್ಶೀ  ಸಂವಾದ  ಏರ್ಪಟ್ಟಿದ್ದು   ನಮಗಿನ್ನೂ  ಹಸಿರಾಗಿಯೇ  ಇದೆ.   ಅವರ  ದೃಷ್ಟಿ  ಧೋರಣೆ,  ಕೃತಿಗಳ  ಸೋಲು  ಗೆಲುವುಗಳ  ಬಗೆಗೆ   ಅದ್ಭುತ  ಚರ್ಚೆ  ವಾಗ್ವಾದಗಳು  ಎದುರಾದಾಗ   ಭೈರಪ್ಪನವರ  ಸಂಯಮಶೀಲ  ಉತ್ತರಗಳು  ಬೆರಗಾಗಿಸಿದ್ದವು.  ಆಗಲೇ  ಜಿಲ್ಲೆಯಲ್ಲಿ   ಬಲಪಂಥ  ಮತ್ತು  ಎಡಪಂಥಗಳ  ಸಾಹಿತ್ಯಿಕ  ವಾಗ್ವಾದ  ಚಾಲನೆಯಲ್ಲೇ  ಇತ್ತು. 

       ನಮ್ಮ  ಜಿಲ್ಲೆಯ  ಯಲ್ಲಾಪುರ  ತಾಲೂಕಿನಲ್ಲಿರುವ  ಪುಟ್ಟ  ಗ್ರಾಮ  ಹಾಸಣಗಿ,  ಸಂಗೀತ  ಸಾಧನೆಯಲ್ಲಿ  ದೇಶ  ಮಟ್ಟದ  ಖ್ಯಾತಿಯನ್ನು  ಆಗಲೇ  ಗಳಿಸಿತ್ತು. ಗುರುಕುಲ ಮಾದರಿಯಲ್ಲಿ  ಸ್ಥಾಪನೆಗೊಂಡಿರುವ  ಅಲ್ಲಿಯ ಹಿಂದುಸ್ಥಾನೀ  ಶಾಸ್ತ್ರೀಯ  ಸಂಗೀತ ಶಾಲೆಯಲ್ಲಿ  ರಾಜ್ಯಾದ್ಯಂತ  ವಿದ್ಯಾರ್ಥಿಗಳು  ಸಂಗೀತ ಸಾಧನೆಗಾಗಿ ಬಂದಿದ್ದರು. ಈಗಲೂ  ಬರುತ್ತಿದ್ದಾರೆ.    ಅದರ  ರೂವಾರಿಗಳಾದ   ಸುಪ್ರಸಿದ್ಧ  ಹಿಂದುಸ್ಥಾನಿ  ಸಂಗೀತ  ಕಲಾವಿದ  ಪಂಡಿತ   ಗಣಪತಿ  ಭಟ್ಟರ   ಮನೆಯಲ್ಲಿಯೇ  ಭೈರಪ್ಪನವರು,  ಸಂಗೀತ  ಕಲೆ  ಮತ್ತು  ಸಂಗೀತಗಾರರ  ಕಲಾಬದುಕಿನ  ಅಧ್ಯಯನಕ್ಕಾಗಿ  ಎರಡುವಾರಗಳ  ಕಾಲ  ವಾಸ್ತವ್ಯ  ಹೂಡಿದ್ದರು

         ನಂತರದ  ದಿನಗಳಲ್ಲಿ  ʻʻಮಂದ್ರʼʼ  ಸಾಹಿತ್ಯಲೋಕದ  ಒಂದು  ಅನನ್ಯಕೃತಿಯಾಗಿ  ಸಂಗೀತಪ್ರಪಂಚದ  ಸೂಕ್ಷ್ಮ ವನ್ನು,  ಸಂಗೀತ ಕಲೆಯ   ಆಳದಲ್ಲಿರುವ   ತಾತ್ವಿಕ  ಆಧ್ಯಾತ್ಮಿಕ, ಸಾಂಸ್ಕೃತಿಕ  ಮತ್ತು    ಸಾಮಾಜಿಕ  ಆಯಾಮವನ್ನು  ಸಮರ್ಥವಾಗಿ   ಜನಮಾನಸಕ್ಕೆ    ಬಿಂಬಿಸಿದ  ಮಹತ್ವಪೂರ್ಣ  ಕೃತಿಯಾಗಿ  ರೂಪುಗೊಂಡಿದ್ದು  ಈಗ  ಇತಿಹಾಸ.

         ದಿನಗಳಲ್ಲಿ  ಇಲ್ಲಿಯ   ಹವ್ಯಕ  ಸಮುದಾಯದ  ನೇರ  ಒಡನಾಟ  ಅವರಿಗೆ  ದಕ್ಕಿತು.  ಸಾಮಾನ್ಯವಾಗಿ  ಉತ್ತರಕನ್ನಡ,  ದಕ್ಷಿಣ ಕನ್ನಡ,ಶಿವಮೊಗ್ಗಾ,  ಕೇರಳದ  ಕಾಸರಗೋಡುಗಳಲ್ಲಿ  ನೆಲೆಸಿರುವ ,  ಅಡಿಕೆ  ಯಾಲಕ್ಕಿ  ಕೃಷಿಯಲ್ಲಿ  ತೊಡಗಿಕೊಂಡಿರುವ  ಹವ್ಯಕರ  ಆಡುನುಡಿಗೆ  ಅದರದ್ದೇ  ಆದ  ವಿಶಿಷ್ಟ  ಸೊಗಡಿದೆ.  ಅರ್ಧಕ್ಕರ್ಧ  ಹಳೆಗನ್ನಡ  ಶಬ್ದಗಳೇ  ಬೆರೆತಿರುವ ಮತ್ತು  ಮಹಾಕವಿ  ಪಂಪನ  ಭಾಷೆಯನ್ನು  ನೆನಪಿಸುವ, ಪ್ರಸ್ತುತ  ಆಡುನುಡಿ   ಭೈರಪ್ಪನವರ  ಕುತೂಹಲ  ಕೆರಳಿಸಿತ್ತು.   ಆಸಕ್ತಿಯಿಂದ  ಭಾಷೆಯನ್ನು  ಗಮನಿಸುತ್ತ,  ಪ್ರಯೋಗಿಸುವ  ವಿಶಿಷ್ಟ  ಪದಗಳ  ಅರ್ಥಗಳನ್ನು  ಕೇಳಿ  ತಿಳಿದು ಕೊಳ್ಳುತ್ತಿದ್ದರು.

        ಅಷ್ಟರಲ್ಲಾಗಲೇ   ಹವ್ಯಕ  ಸಮುದಾಯದ   ವಿವಿಧ  ಸಾಧಕರ  ಪರಿಚಯ  ಸ್ನೇಹ ಒಡನಾಟ  ಸಾಕಷ್ಟಿತ್ತು.  ರಾಜಕಾರಣಿ  ರಾಮಕೃಷ್ಣ  ಹೆಗಡೆ,  ಅವರ  ಸಹೋದರ  ಗಣೇಶ  ಹೆಗಡೆ,  ಚಿತ್ರನಟ  ರಾಮಕೃಷ್ಣ,  ಸಂಗೀತ ಕಲಾವಿದ  ಪಂ. ಗಣಪತಿ ಭಟ್‌,  ಮುಂತಾದ  ಸಾಧಕರು,  ಭೈರಪ್ಪನವರ  ಆಪ್ತವಲಯದಲ್ಲಿದ್ದರು.

      ಮತ್ತೆ   ಡಾ. ಭೈರಪ್ಪನವರನ್ನು   ನಾನು  ಸಂದರ್ಶಿಸಿದ್ದು,  ಇತ್ತೀಚೆಗೆ.   ಸಾರ್ಥ  ಕೃತಿಯ  ಅನುಸ್ಪಂದನದ  ಸಂದರ್ಭದಲ್ಲಿ.  ಅಂದರೆ  ೨೦೧೮ ರಲ್ಲಿ.   ಕಾದಂಬರಿಯ  ನಾಯಕ  ನಾಗಭಟ್ಟ  ಒಬ್ಬ  ವೈದಿಕನಾಗಿದ್ದು,  ಶಂಕರಾಚಾರ್ಯರ   ಅದ್ವೈತ ಕ್ರಾಂತಿಯ   ಪ್ರತ್ಯಕ್ಷದರ್ಶಿಯಾಗಿ   ಪಾತ್ರವಹಿಸುತ್ತಾನೆ.   ಹವ್ಯಕರೂ  ಅದ್ವೈತಿಗಳು.  ಶಂಕರಾಚಾರ್ಯರ  ಸಿದ್ಧಾಂತಕ್ಕೊಳಪಟ್ಟವರು.     ಹಿನ್ನೆಲೆಯಲ್ಲಿಯೇ   ಪ್ರಕಾಶಕರು   ಹವಿಗನ್ನಡ   ಪ್ರಸ್ತುತ  ಕೃತಿಗೆ  ಸೂಕ್ತ   ಎಂಬ  ನಿರ್ಣಯಕ್ಕೆ  ಬಂದಿರಬಹುದಾಗಿದೆ. 

        ಅವರಿಬ್ಬರ  ಒತ್ತಾಸೆಯ  ಮೇರೆಗೆ  ಒಂದು  ಅಧ್ಯಾಯವನ್ನು  ಹವಿಗನ್ನಡಕ್ಕೆ  ಅನುವಾದಿಸಿದೆ. ಮಾನ್ಯ  ಭೈರಪ್ಪನವರ  ಗಮನಕ್ಕೆ  ಸಲ್ಲಿಸುವಂತೇ  ಪ್ರಕಾಶಕರನ್ನು  ವಿನಂತಿಸಿಕೊಂಡೆ.  ಪ್ರಕಾಶಕರು  ಭೈರಪ್ಪನವರನ್ನು  ಭೇಟಿಯಾಗಿ  ಅನುವಾದಿಸಿದ  ಪಠ್ಯವನ್ನು  ಸಲ್ಲಿಸಿದಾಗ,  ಅವರು  ಸೂಕ್ಷ್ಮವಾಗಿ  ಪರಿಶೀಲಿಸಿದರುʻʻ ಆಡು  ಭಾಷೆ  ನಗರೀಕರಣದ  ಸೋಂಕಿಗೆ  ಒಳಗಾಗಿ  ತನ್ನ   ಸ್ವಾದ ಮತ್ತು  ಸೊಗಡುಗಳನ್ನು  ಕಳೆದುಕೊಳ್ಳುತ್ತಲೇ  ಇರುತ್ತದೆ. ಅದರ  ಮೂಲ  ಸೌಂದರ್ಯ  ಅಭಿವ್ಯಕ್ತ ವಾಗಬೇಕೆಂದಿದ್ದರೆ,  ಯಾವುದೇ  ಭಿನ್ನ ಭಾಷೆಯ  ಸಂಪರ್ಕದಲ್ಲಿರಬಾರದು.  ಅದೇ  ಆಡುಭಾಷೆಯ  ನಡುವೆ  ಇರುವವರಿಂದ  ಮಾತ್ರ  ಶುದ್ಧ ಅನುವಾದ  ಸಾಧ್ಯ.ʼʼ  ಎಂಬ  ಅಭಿಪ್ರಾಯವನ್ನು  ವ್ಯಕ್ತಪಡಿಸುತ್ತಲೇ,  ಅನುವಾದಕ್ಕೆ  ಉದಾರವಾಗಿ  ಒಪ್ಪಿಗೆಯನ್ನಿತ್ತರು.   ಅವರ  ಮಾತಿನ  ಸೂಕ್ಷ್ಮವನ್ನರಿತ  ಪ್ರಕಾಶಕರು,   ಮೈಸೂರಿನಲ್ಲಿರುವ  ಸಾಹಿತ್ಯಾಸಕ್ತ  ಹವ್ಯಕರ  ಗಮನಕ್ಕೆ ತಂದು  ಹವಿಗನ್ನಡ ಭಾಷಾ ಪ್ರಯೋಗದ  ಹಿನ್ನೆಲೆಯಲ್ಲಿ,  ಅವರ  ಅಭಿಪ್ರಾಯವನ್ನೂ  ಪಡೆದುಕೊಂಡರು

          ಮೂರುತಿಂಗಳಲ್ಲಿ   ಹವಿಗನ್ನಡ  ಭಾಷೆಗೆ  ರೂಪಾಂತರಿಸಿದೆ.  ಸಾರ್ಥ  ಕೃತಿಯ  ರೂಪಾಂತರಣದ  ಪ್ರಕ್ರಿಯೆ  ನನ್ನ  ಜೀವನದ  ಅನನ್ಯ  ಅನುಭೂತಿಯ  ಕ್ಷಣವಾಯಿತು. ನನ್ನ  ಬದುಕಿನ ದೃಷ್ಟಿಯನ್ನೇ  ಬದಲಾಯಿಸಿತು.  ವಿಸ್ತರಿಸಿತು. ಸುಂದರ  ಶಿಷ್ಟ  ಭಾಷೆಯ   ಒಂದೊಂದು  ವಾಕ್ಯವನ್ನೂ   ನನ್ನ  ನುಡಿಯಲ್ಲಿ  ಧ್ಯಾನಿಸುತ್ತಾ   ಮುನ್ನಡೆದೆ.   ಹೆಚ್ಚಿನೆಲ್ಲ   ಘಟನೆಗಳು  ಪಾತ್ರದ  ಸ್ವಗತದ  ನೆಲೆಯಲ್ಲಿಯೇ  ಸಾಗುವುದರಿಂದ  ಸುಲಲಿತವಾದ  ಗತಿ  ಅನುಸ್ಪಂದನಕ್ಕೆ  ದೊರಕಿತು.  ನಾಗಭಟ್ಟ,  ಚಂದ್ರಿ, ಕುಮಾರಿಲ  ಭಟ್ಟ, ಮಂಡನಮಿಶ್ರ, ಶಂಕರಾಚಾರ್ಯ,ಭಾರತೀ ದೇವಿ, ಬೌದ್ಧ  ಬಿಕ್ಕುಗಳು, ಮುಂತಾದ  ಕಾದಂಬರಿಯ  ವೈವಿಧ್ಯಮಯ  ಪಾತ್ರಗಳೆಲ್ಲ, ನನ್ನ ಕುಟುಂಬದ  ಆತ್ಮೀಯ  ಸದಸ್ಯರಾದರು.   ಎಂಟನೆಯ  ಶತಮಾನದ  ಭಾರತದೇಶದ  ಸಾಂಸ್ಕೃತಿಕ  ಧಾರ್ಮಿಕ  ರಾಜಕೀಯ, ವಾಸ್ತವವನ್ನು  ತಲಸ್ಪರ್ಶೀಯಾಗಿ  ಹಿಡಿದಿಟ್ಟ  ಅಪರೂಪದ  ಕಾದಂಬರಿ ಸಾರ್ಥದ  ವಸ್ತು  ಇತಿಹಾಸವಾದರೂ  ಮಾನವ  ಬದುಕಿನ  ನೋವು  ತಲ್ಲಣ,  ಪ್ರೀತಿ   ಪ್ರೇಮ  ಕಾಮ,  ಸ್ವಾರ್ಥ, ಮತ್ತು  ತ್ಯಾಗಗಳ  ಸುಂದರ  ಚಿತ್ರಣಗಳು, ಕೃತಿಗೆ  ಸಾರ್ವಕಾಲಿಕ  ಮೌಲ್ಯವನ್ನು  ತಂದಿತ್ತಿವೆ. ವಿದೇಶೀ  ಮ್ಲೇಚ್ಛರ  ಅತ್ಯಾಚಾರಕ್ಕೆ  ತುತ್ತಾಗಿ,  ಅಯಾಚಿತ  ಗರ್ಭಧರಿಸಿ   ತಾಯ್ನಾಡಿಗೆ  ಮರಳಿದ  ಕಥಾನಾಯಕಿ  ಚಂದ್ರಿ  ಮತ್ತು  ಅವಳ  ಪ್ರಿಯಕರ   ನಾಗಭಟ್ಟ,  ಗರ್ಭ ಕಳೆಯಬೇಕೇ  ಬೇಡವೇ  ಎಂಬ  ಗೊಂದಲಕ್ಕೊಳಗಾಗುತ್ತಾರೆ.   ಗುರುವಿನ  ಬಳಿ  ಸಾಗಿ, ತಮ್ಮ  ಗೊಂದಲವನ್ನು  ಅರುಹಿದಾಗ,  ಗುರು  ʻʻ  ಗರ್ಭಪಾತ  ಬೇಡ,  ಹುಟ್ಟಿದ  ಮಗುವಿಗೆ   ಯೋಗ್ಯ  ಸಂಸ್ಕಾರ ನೀಡಿ,  ಭಾರತೀಯನನ್ನಾಗಿ  ಮಾಡಿ ʼʼ  ಎಂದು  ಆದೇಶಿಸುತ್ತಾರೆ.  ಗುರುವಿನ  ಆದೇಶವೇ  ಕೃತಿಯ  ಮುಕ್ತಾಯವೂ  ಹೌದು.    ಚಿತ್ರಣ  ಕೇವಲ  ಕಾದಂಬರಿಯ  ಒಳಗಿನ  ಘಟನೆಯಲ್ಲ.   ನಮ್ಮ  ದೇಶವನ್ನು  ಆಕ್ರಮಿಸಿದ  ಅದೆಷ್ಟೋ  ಜನಾಂಗಗಳಿವೆ.  ಇಲ್ಲಿಯೇ  ನೆಲೆಯೂರಿದ್ದಾರೆ.  ಅವರೆಲ್ಲರಿಗೆ  ಭಾರತೀಯತೆಯ  ದೀಕ್ಷೆ ನೀಡಬೇಕು. ಸಂಘರ್ಷ ಅಡಗಿ  ಶಾಂತಿ  ನೆಲೆಸಬೇಕು,   ಎಂಬ  ಮಹತ್ವಪೂರ್ಣ  ಸಂದೇಶವನ್ನು ಸೂಚ್ಯವಾಗಿ  ನೀಡುವ ಮೂಲಕ   ಕಾದಂಬರಿ ,   ಸದ್ಯ  ನಾವು  ಎದುರಿಸುತ್ತಿರುವ   ಜನಾಂಗೀಯ,  ಮತೀಯ   ಕೋಲಾಹಲಗಳನ್ನು   ನೆನಪಿಸುತ್ತದೆ.    

          ನನ್ನ    ಅನುಸ್ಪಂದನದ   ಹಿನ್ನೆಲೆಯಲ್ಲಿ,  ಹವ್ಯಕ  ಆಡುನುಡಿಯಲ್ಲಿ  ವಿಶೇಷ  ಅಧ್ಯಯನ  ಗೈದ  ಢಾ. ಶಾಲಿನಿ  ರಘುನಾಥ್‌,  ಚಿಂತಕ  ಶ್ರೀರಾಮ ಭಟ್ಟ,  ಕವಿಸ್ನೇಹಿತ  ಪುಟ್ಟು  ಕುಲಕರ್ಣಿ,  ಅಶೋಕ  ಹಾಸ್ಯಗಾರ್‌,  ಮುಂತಾದವರ   ಆಪ್ತ  ಸಲಹೆ  ಸೂಚನೆಗಳು   ಅನುಸ್ಪಂದನಕ್ಕೆ   ಹೊಸ  ಮಿಂಚನ್ನು  ಒದಗಿಸಿದೆ  ಎನ್ನಬಹುದು.   

      ಅನುವಾದ  ಎಂಬುದೇ  ಭಾಷೆಗೆ  ಸಂಬಂಧ  ಪಟ್ಟದ್ದು.  ಪ್ರತಿಯೊಂದು  ಭಾಷೆಗೂ  ಅದರದ್ದೇ  ಆದ ವಿಶಿಷ್ಟ ಅನುಭವ ಪ್ರಪಂಚ ವಿರುತ್ತದೆ.  ಅದರ  ನುಡಿಗಟ್ಟು,  ಉಚ್ಛಾರ,  ಮತ್ತು  ದೇಹಭಾಷೆ  ಎಲ್ಲವೂ   ಭಾವಾಭಿವ್ಯಕ್ತಿಗೆ  ಸ್ಪಂದಿಸುತ್ತಿರುತ್ತದೆ.  ಅದೇ  ಕಾರಣಕ್ಕಿರಬಹುದು,  ಯಾವುದೇ  ಶ್ರೇಷ್ಠ  ಅನುವಾದವಾದರೂ   ಮೂಲ ಭಾಷೆಗೆ  ಸಂಪೂರ್ಣ  ನ್ಯಾಯ  ನೀಡಲು  ಸಾಧ್ಯವಾಗದು,  ಎಂಬ  ಮಾತಿದೆ.   ಆದರೂ   ವೈವಿಧ್ಯಮಯ  ಮಾನವ  ವಿಶ್ವವನ್ನು  ಅರ್ಥೈಸಿಕೊಳ್ಳಲು   ಅನುವಾದ  ಮತ್ತು  ಅನುಸ್ಪಂದನ  ಅನಿವಾರ್ಯ.ಎಂದು  ತಿಳಿದಿದ್ದೇನೆ.

          ಅನುವಾದಿತ  ಹಸ್ತಪ್ರತಿಯೊಂದಿಗೆ   ಪ್ರಕಾಶಕ ರೊಡಗೂಡಿ,  ಮೈಸೂರಿನ  ಭೈರಪ್ಪ ನವರ  ನಿವಾಸಕ್ಕೆ  ಅಡಿಯಿಟ್ಟೆ.  ಮತ್ತೆ  ಅದೇ  ಆತಂಕ.  ಅದೇ  ಭಯ.  ಆವರೆಗೂ  ಸಾಹಿತ್ಯದಲ್ಲಿ  ಅಂಥದ್ದೇನೂ  ಗಂಭೀರ  ರಚನೆ  ನನ್ನಿಂದ  ಆಗಿರಲಿಲ್ಲ.  ಒಂದೆರಡು  ಕಾವ್ಯ ಮತ್ತು  ಲೇಖನಗಳ  ಸಂಕಲನಗಳು  ಪ್ರಕಟವಾಗಿತ್ತಷ್ಟೆ.

         ಭೈರಪ್ಪ  ದಂಪತಿಗಳ  ಆದರಪೂರ್ವಕ  ಸ್ವಾಗತ, ಮತ್ತು  ಕುಶಲೋಪರಿ  ಸಂತಸ  ತಂದಿತು.  ಹವಿಗನ್ನಡದ  ಸಾರ್ಥ  ಕೃತಿಯ  ಮಾದರಿಯನ್ನು  ಅವರ ಕೈಗಿಟ್ಟು  ನಮಸ್ಕರಿಸಿದೆ.  ನಮ್ಮದೇ  ಜಿಲ್ಲೆಯ  ಸೃಜನಶೀಲ  ಚಿತ್ರಕಲಾವಿದ  ಸತೀಶ್‌  ಯಲ್ಲಾಪುರ  ರವರ  ಬಹುವರ್ಣದ  ಮುಖಪುಟದೊಂದಿಗೆ,  ಸಂಸ್ಕೃತ  ವಿದ್ವಾಂಸ  ಶ್ರೀರಾಮ ಭಟ್ಟರ  ಮುನ್ನುಡಿ,  ಮತ್ತು   ಅನುಬಂಧದಲ್ಲಿ  ಹವ್ಯಕ  ಸಮುದಾಯದ  ಸಂಕ್ಷಿಪ್ತ  ಚರಿತ್ರೆಗಳನ್ನೊಳಗೊಂಡ,  ಬೃಹತ್‌ ಕೃತಿ  ʻʻಸಾರ್ಥʼʼ  ವನ್ನು  ತಿರುವಿನೋಡಿ,  ಎಂಭತ್ತೈದರ  ಸೃಜನಶೀಲ  ಯುವಕರಾದ   ಭೈರಪ್ಪನವರು,  ಹಸನ್ಮುಖಿಯಾದರು.     ʻʻ  ಕ್ಲಿಷ್ಟ  ಆಡುನುಡಿಯನ್ನು    ಕಾಲದಲ್ಲಿ  ಯಾರು ಓದುತ್ತಾರೆ,  ಹೇಗೆ  ಹಣ ಹೊಂದಿಸುತ್ತೀರಿ,  ಸುಮ್ಮನೇ  ಕೈ  ಸುಟ್ಟುಕೊಳ್ಳಬೇಡಿ.    ಯೋಜನೆ  ಸ್ಥಗಿತಗೊಳಿಸಿʼʼ  ಎಂದರು  ಡಾ.ಭೈರಪ್ಪ.

        ನನ್ನಲ್ಲಿ ಮತ್ತೆ  ಆತಂಕ  ಆವರಿಸಿತು.  ಪಕ್ಕದಲ್ಲಿಯೇ  ಕುಳಿತಿದ್ದ  ಪ್ರಕಾಶಕರ  ಮುಖನೋಡಿದೆ. ಅವರ  ಮುಖದಲ್ಲಿ  ಆತ್ಮವಿಶ್ವಾಸ  ಎದ್ದು  ತೋರುತ್ತಿತ್ತು.  ತಕ್ಷಣ  ಅವರು  ಉತ್ತರಿಸಿದರು. ‍ʻʻ ಸರ್..  ಯಾವ  ಭಯವೂ  ಇಲ್ಲ.  ನಾಲ್ಕು ಲಕ್ಷ ಜನಸಂಖ್ಯೆಯ   ಹವ್ಯಕ  ಸಮುದಾಯ  ಅವಶ್ಯ  ಸ್ಪಂದಿಸುತ್ತಾರೆ,  ಪ್ರೋತ್ಸಾಹಿಸುತ್ತಾರೆ  ಎಂಬ  ಭರವಸೆಯಿದೆ.  ತಾವು  ಒಪ್ಪಿಗೆಯಿತ್ತರೆ  ನಾವು  ಪ್ರಕಟಿಸುತ್ತೇವೆ,ʼʼ   ಎಂದು  ಧೈರ್ಯದಿಂದ  ಉತ್ತರಿಸಿದರು. 

      ಭೈರಪ್ಪನವರ  ಒಪ್ಪಿಗೆಯೊಂದಿಗೆ  ಅಂದು  ನಾವು  ಸಂತಸದಿಂದ  ಮರಳಿದೆವು.  ಕೆಲವೇ  ತಿಂಗಳಲ್ಲಿ  ಪುಸ್ತಕ  ಮುದ್ರಣಗೊಂಡು  ಕೈಸೇರಿತು. ಸಂಪೂರ್ಣ  ಹವಿಗನ್ನಡ  ಉಪಭಾಷೆಯ ಲ್ಲಿ  ಪ್ರಕಟಗೊಂಡ  ಪ್ರಥಮ ಕಾದಂಬರಿ  ಎನ್ನಿಸಿಕೊಂಡಿತು.    ಪುತ್ತೂರಿನ  ವಿವೇಕಾನಂದ  ಭಾಷಾ ಸಂಶೋಧನಾ ಸಂಸ್ಥೆಯ  ಮೂಲಕ  ಲೋಕಾರ್ಪಣವನ್ನೂ  ಕಂಡಿತು.   ಜೊತೆಯಲ್ಲಿಯೇ  ಕೊರೋನಾ  ಚಂಡಮಾರುತ  ಇಡೀ  ಮಾನವ  ಜಗತ್ತನ್ನೇ  ಆಕ್ರಮಿಸಿ  ಸಹಜ  ಜೀವನದ  ಚಟುವಟಿಕೆಗಳನ್ನೇ  ಸ್ಥಗಿತ ಗೊಳಿಸುವುದರೊಂದಿಗೆ   ಪುಸ್ತಕ ವಿತರಣೆಗೂ    ತಡೆಯನ್ನೊಡ್ಡಿತು. 

        ಹೇಗೇ  ಇರಲಿ,  ಪ್ರಕಾಶಕರ  ಧೈರ್ಯವನ್ನು  ಮೆಚ್ಚಲೇ  ಬೇಕು.  ಭೈರಪ್ಪನವರ  ಬಗೆಗಿನ  ಪ್ರೀತಿ, ಹವ್ಯಕಭಾಷೆಯ ಮೇಲಣ  ಆಸಕ್ತಿ, ಪ್ರಕಾಶಕರನ್ನು  ಇಷ್ಟು  ದೊಡ್ಡ  ಸಾಹಸಕ್ಕೆ  ಪ್ರೇರೇಪಿಸಿದೆ  ಎಂದು  ತಿಳಿದಿದ್ದೇನೆ.

        ಒಟ್ಟಿನಲ್ಲಿ  ಸಾರ್ಥ  ಕೃತಿ  ನನ್ನನ್ನು  ಲೇಖಕನನ್ನಾಗಿಸಿದ್ದಲ್ಲದೇ , ಡಾ!! ಭೈರಪ್ಪನವರಂಥ  ಶ್ರೇಷ್ಟ  ಸೃಜನಶೀಲರ  ಸಾಂಗತ್ಯ ದೊರಕಿಸಿಕೊಟ್ಟಿತು        ಒಬ್ಬ  ಮಹತ್ಪಪೂರ್ಣ  ಲೇಖಕರ  ವ್ಯಕ್ತಿತ್ವಕ್ಕೆ  ತನ್ನಂತಾನೇ  ಎರಡೆರಡು  ಆಯಾಮಗಳು  ಸೃಷ್ಟಿಗೊಳ್ಳುತ್ತವೆ.  ಅವರ  ಸಾಹಿತ್ಯದ  ಮೂಲಕ  ಸಹೃದಯರ  ಮನೋಭಿತ್ತಿಯ ಮೇಲೆ  ಮೂಡುವ  ಪ್ರಭಾವಲಯ  ಒಂದಾದರೆ,  ವ್ಯಕ್ತಿಯಾಗಿ  ಒಡನಾಟದಲ್ಲಿ  ರೂಪುಗೊಳ್ಳುವ  ಭಾವಕ್ಕೆ  ಮತ್ತೊಂದು  ವಿಶಿಷ್ಟ ಪ್ರಭಾವವಿರಬಹುದಾಗಿದೆ. ಕೃತಿಯ  ಮೂಲಕ  ಲೇಖಕನ  ವ್ಯಕ್ತಿತ್ವವನ್ನು   ಅರ್ಥೈಸಿಕೊಳ್ಳುವುದಕ್ಕಿಂತಲೂ  ಭಿನ್ನವಾದ  ಅನುಭವ,   ವ್ಯಕ್ತಿ  ಮತ್ತು  ಕೃತಿಗಳೆರಡನ್ನೂ  ಏಕಕಾಲದಲ್ಲಿ  ಅನುಸಂಧಾನಿಸುವುದರಿಂದ  ದೊರಕುತ್ತದೆ.

        ಪ್ರಸ್ತುತ  ಕೃತಿಯ  ಸಂಪಾದಕಿ ಡಾ-ವಿಜಯಾ ಹರನ್‌  ರವರ   ಪರಿಕಲ್ಪನೆಯನ್ನು  ಈದೃಷ್ಟಿಯಲ್ಲಿ  ಮೆಚ್ಚಲೇ ಬೇಕು. ಡಾ!! ಭೈರಪ್ಪನವರ  ಸುದೀರ್ಘ  ಸೃಜನಶೀಲ ಪ್ರಕ್ರಿಯೆಯ  ಹಿನ್ನೆಲೆಯಲ್ಲಿ  ಸಂಪರ್ಕಕ್ಕೆ  ಬಂದ  ಹಲವಾರು  ಮನಸ್ಸುಗಳ  ಪ್ರತಿಕ್ರಿಯೆಗಳನ್ನು  ಕಲೆಹಾಕಿ  ಪ್ರಕಟಿಸುವ  ಮೂಲಕ,  ಭೈರಪ್ಪನವರ  ವ್ಯಕ್ತಿತ್ವದ  ಮತ್ತೊಂದು  ಮಾನವೀಯ  ಆಯಾಮವನ್ನು  ಬೆಳಕಿಗೆ  ತರುವ  ಪ್ರಯತ್ನ  ನಿಜಕ್ಕೂ  ಶ್ಲಾಘನೀಯ.

        ಮಾನ್ಯ  ಡಾ!! ಭೈರಪ್ಪ ರಿಂದ   ಇನ್ನಷ್ಟು  ಉತ್ಕೃಷ್ಟ  ಕೃತಿಗಳು  ಸೃಷ್ಟಿಯಾಗಲಿ,  ಕನ್ನಡದ  ಸಾರಸ್ವತ  ಕಣಜ  ಇನ್ನೂ  ಸಮೃದ್ಧ ಗೊಳ್ಳಲಿ  ಎಂದು   ಈಮೂಲಕ  ಹೃತ್ಪೂರ್ವಕವಾಗಿ  ಹಾರೈಸುತ್ತಿದ್ದೇನೆ.

  ಸುಬ್ರಾಯ  ಮತ್ತೀಹಳ್ಳಿ.                                                                                               ತಾ- ೫-೧೧- ೨೦೨೦.

(  ವಿಜಯಾ  ಹರನ್‌   ರವರ  ಸಂಪಾದಕತ್ವದಲ್ಲಿ   ಪ್ರಕಟವಾಗುವ   ಭೈರಪ್ಪ  ಅಭಿನಂದನ   ಕೃತಿಗೆ   ನೀಡಿದ  ಲೇಖನ. )

       

No comments:

Post a Comment