Tuesday 26 September 2023

ಬದುಕಿಗೆ ಹಿಡಿದ ಸ್ಟೆತಾಸ್ಕೋಪು.

 

 ʻ ಧ್ವನಿ  ಮತ್ತು  ದರ್ಶನʼ  ಕಾವ್ಯದ  ಆತ್ಯಂತಿಕ  ಗುರಿಯೆಂದು  ತಿಳಿದು  ಅದರ ಬೆಂಬತ್ತುವ  ಪರಿಪೂರ್ಣ  ಪ್ರಯತ್ನದಲ್ಲಿ,  ವೈದ್ಯ ಕವಿ ʻʻ ಅಜಿತ್‌ʼʼ ಸಾಗುತ್ತಿರುವುದು  ಖುಷಿಕೊಡುವ  ಸಂಗತಿ. ಬಿಳಿಮಲ್ಲಿಗೆಯ ಬಾವುಟ,  ಸೂರು  ಸೆರೆಹಿಡಿಯದ ಹನಿಗಳು, ಎಂಬ  ಎರಡೆರಡು  ಕಾವ್ಯಕೃತಿಯ  ನಂತರ, ಆಧುನಿಕ  ಅಧ್ಯಾತ್ಮದ  ನೆಲೆಯಲ್ಲಿ,  ಇದೀಗ  ಮತ್ತೆ  ʻʻ ಕನಸಿನ ದನಿʼʼ ಯಾಗಿ  ಮತ್ತೊಂದು  ಕವನ ಸಂಕಲನ  ನಮ್ಮೆದುರು  ಮುಗುಳು  ನಗುತ್ತಿದೆ.

   ಭಾವ  ಮತ್ತು  ಭಾಷೆಗಳ  ನಡುವಣ  ಸಾಮರಸ್ಯಕ್ಕಾಗಿ  ನಡೆಸುತ್ತಿರುವ  ಸಂಘರ್ಷ   ಅವರ  ಪ್ರತಿಯೊಂದು  ರಚನೆಗಳ  ಆಳದಲ್ಲಿ  ಅಭಿವ್ಯಕ್ತವಾಗುತ್ತಿರುವುದು  ಕವಿಯ  ಹುಡುಕಾಟದ  ಪ್ರವೃತ್ತಿಯನ್ನು  ಎತ್ತಿ ತೋರಿಸುತ್ತಿದೆ.

    ಕಟು ವಾಸ್ತವದ  ಬದುಕಿನ  ಸಹಜ  ಸಂಗತಿಗಳೂ  ಇಲ್ಲಿ  ಹೊಸ  ಅರ್ಥದ  ಅನ್ವೇಷಣೆಗೆ  ಇಳಿಯುತ್ತಿವೆ.  ಕಾವ್ಯ  ಸಂಕ್ಷಿಪ್ತವಾದಷ್ಟೂ  ಸ್ಪೋಟಕ  ಗುಣ ಪಡೆಯುತ್ತವೆ  ಎಂಬುದಕ್ಕೆ  ಇಲ್ಲಿಯ  ಹಲವು  ರಚನೆಗಳು  ಮತ್ತೊಮ್ಮೆ  ಸಾಬೀತು  ಪಡಿಸುತ್ತವೆ.   ಸರಳತೆ  ಮತ್ತು  ಸೂಕ್ಷ್ಮತೆಯ  ದಾರಿಯಲ್ಲಿ  ಹೊರಟ  ಜೀವನದ ನಿಗೂಢ  ನಡೆಗಳನ್ನು ಅರ್ಥೈಸಿಕೊಳ್ಳುವ  ಅಜಿತರ  ತಾತ್ವಿಕ  ಉದ್ಗಾರಗಳು,  ವಾಚ್ಯದ  ನಡುವೆಯೂ  ಮಂತ್ರಸದೃಷವಾಗಿ  ಭಾಸವಾಗುತ್ತವೆ.

   ʻʻ ಕಲ್ಲ  ಮೈ  ನೇವರಿಸಿ / ಕಿವಿಯಲ್ಲಿ  ಪಿಸುಗುಟ್ಟಿದಳು / ಹೂವಾಯಿತು  ಕಲ್ಲರಳಿ / ( ಖೋ..) ಈ  ನುಡಿ  ರಾಮಾಯಣದ  ಅಹಲ್ಯೆಯನ್ನು  ನೆನಪಿಸುತ್ತಲೇ,  ಕಲ್ಲಾಗಿರುವ  ಇಂದಿನ  ಗಂಡನ್ನು  ಮತ್ತೆ  ಮೃದುವಾಗಿಸಲು  ಸೀತೆ  ಬರಬೇಕಾದ  ಅನಿವಾರ್ಯತೆಯನ್ನು,  ಕೆಲವೇ  ಶಬ್ದಗಳಲ್ಲಿ  ಹೇಳುತ್ತಾರೆ.  ʻʻ  ಸತ್ಯವನಷ್ಟೇ  ಬಿಂಬಿಸುವ  ಕನ್ನಡಿ/  ಬದುಕಿನಂಗಡಿಯಲಿ/ ಖರೀದಿಸಲು  ಖುಷಿಯ / ಮಾರಿಬಿಡಿ  ತರತಮದ  ತಕ್ಕಡಿ / (ವಜನು..)   ಎಲ್ಲ  ಸಾಮಾಜಿಕ  ಕ್ರೌರ್ಯಗಳು  ಅಂತರಂಗದ  ಕನ್ನಡಿಯಲ್ಲಿ  ಸಹಜವಾಗಿ  ಪ್ರತಿಬಿಂಬಿಸುತ್ತದೆ.  ಆದರೆ  ಜಡಪ್ರವೃತ್ತಿ  ಸ್ವೀಕರಿಸಲಾರದು.  ಮೊದಲು    ತರತಮದ  ಕನ್ನಡಿಯನ್ನು  ಮಾರಿಬಿಡಿ,  ಎಂಬ  ಮಾನವೀಯ  ಹಕ್ಕೊತ್ತಾಯ   ಮನದ  ಮೂಲೆಗೆ  ಚುರುಕು  ಮುಟ್ಟಿಸುತ್ತದೆ.

  ʻʻ ಗೂಡಿದೆ ಕಾವಿದೆ : ವಿಗ್ರಹ  ಚಿತ್ತದಲಿ  ಕೂತಿದೆ /  ಮನಸ್ಸು  ನಂಟಿನ  ವಕ್ರೀಭವನಕ್ಕೆ  ಬಾಗಿದೆ ʼʼ( ಭುಕ್ತಿ )   ಕವಿ  ಇಲ್ಲಿ  ಕೇವಲ  ಸುತ್ತಲಿನ  ಸಾಮಾಜಿಕ  ಮಾನಸಿಕ  ದೌರ್ಬಲ್ಯಗಳ  ಬಗೆಗೆ  ಮಾತ್ರ  ಪ್ರತಿಕ್ರಿಯಿಸುತ್ತಿಲ್ಲ.  ತನ್ನ  ಒಳಗನ್ನೂ  ಬಾಗಿಸುವ  ಪ್ರಯತ್ನದಲ್ಲಿದ್ದಾನೆ.  ದೋಷ  ಸಮಾಜದಲ್ಲೊಂದಲ್ಲ.  ಅದರ  ಭಾಗವಾಗಿರುವ  ತಾನೂ  ಅದಕ್ಕೆ  ಹೊಣೆ  ಎಂಬ  ಎಚ್ಚರ  ಮತ್ತು  ಆತ್ಮವಿಮರ್ಶೆ   ಇಲ್ಲಿ   ಚುರುಕಾಗಿ  ಅಭಿವ್ಯಕ್ತಗೊಂಡಿದೆ. 

    ಅರವಿಂದ ಚೊಕ್ಕಾಡಿಯವರ  ಬೆನ್ನುಡಿ,  ಕವಿ  ಹಿಡಿದ  ದಾರಿಯ  ಬಗೆಗೆ  ಸುಂದರ  ಒಳನೋಟ  ಬೀರಿದ್ದಾರೆ.  ʻʻ ಭಾಷಾ ಪ್ರಯೋಗದ    ಅನನ್ಯತೆಯು  ವಸ್ತುವನ್ನು  ದೃಷ್ಯೀಕರಣಕ್ಕೆ  ಒಳಪಡಿಸಿಯೂ, ಅದರ  ಮಿತಿಯ ಸಮಸ್ಯೆಗಳ  ಜಾಡಿನಿಂದ ಆಚೆಗೆ ಒಯ್ಯಲು ಸಮರ್ಥವಾಗಿವೆ.  ಆದ್ದರಿಂದಲೇ  ಇದು  ಹೊಸ  ಹೆಜ್ಜೆಯ  ಜಾಡುʼʼ.  ಏಂದು. 

    ನಿಜಕ್ಕೂ  ಸರಿ.  ಕವಿತೆಯೆಂದರೆ  ನಮ್ಮ  ಮಾತಿನ  ವಿಸ್ತರಣೆಯೇ  ಅಲ್ಲವೇ.  ಮಾತಿನಲ್ಲಿ  ಮೌನ,  ಮೌನಕ್ಕೆ  ಮಾತು,  ಮಾತು  ಮಾತೆಯಾಗುವ  ಅಚ್ಚರಿ,   ಶಬ್ದವನ್ನು  ನಾದವನ್ನಾಗಿಸುತ್ತದೆ.  ನಾದವನ್ನು  ಧ್ಯಾನವಾಗಿಸುತ್ತದೆ. 

    ʻʻವಾಚ್ಯವಿದೆ. ವಗಟಿನಂತೆಯೂ  ಇದೆ. ಪರಂಪರೆ  ಹಾಗೂ  ಆಧುನಿಕತೆಗಳಿಗೆ  ತೆರೆದುಕೊಳ್ಳುವ ಮುಕ್ತತೆಯಿದೆ. ಇದೊಂದು  ಮಲೆನಾಡಿನಲ್ಲಿ  ಮಧುರವಾಗಿ  ಹಾಡುವ  ಕೋಗಿಲೆʼʼ  ಎಂದು  ಮನತುಂಬಿ ಮುನ್ನುಡಿಯಲ್ಲಿ  ಹಾರೈಸಿದ್ದಾರೆ, ಕವಿ  ಲೇಖಕ   ಸರ್ಫರಾಜ .

    ಕವಿತೆಗಳ  ಅಂತರಂಗ  ಬಹಿರಂಗಗಳ  ಸೌಂದರ್ಯವನ್ನು  ಪರಿಣಾಮಕಾರಿಯಾಗಿ  ತಮ್ಮ  ರೇಖೆ  ಮತ್ತು  ರಂಗುಗಳಿಂದ  ತುಂಬಿಕೊಟ್ಟ  ಕಲಾವಿದ  ʻಸತೀಶ  ಯಲ್ಲಾಪುರʼ   ಅಭಿನಂದನಾರ್ಹರು.

      ಕೃತಿಯ  ಒಟ್ಟಂದ,  ವಿನ್ಯಾಸ,  ಚಲುವಾದ  ಮುದ್ರಣಗಳಿಂದ  ಕೃತಿಗೆ  ಮತ್ತಷ್ಟು  ಕಸುವು  ನೀಡಿದ  ಪ್ರಕಾಶಕರ  ಪ್ರಯತ್ನ  ಸಂತಸ  ತಂದಿದೆ. 

                                                         ಸುಬ್ರಾಯ  ಮತ್ತೀಹಳ್ಳಿ.   ೨೧-೯-೨೦೨೧

ಕನಸಿನ  ದನಿ;     ಕವನ  ಸಂಕಲನ.    ಕವಿ-  ಅಜಿತ್‌  ಹರೀಶಿ.

  ನೇಕಾರ ಪ್ರಕಾಶನ   ಸೊರಬ.    ಬೆಲೆ೧೫೦-೦೦.  ಪುಟ---  ೧೩೨.

No comments:

Post a Comment