Thursday 28 September 2023

ಕನ್ನಡದ ಪೆಂಪು `` ಕುವೆಂಪು.ʼʼ

 

                                                     ಭಕ್ತಿಯಡಿಯ  ಹುಡಿ  ಕುವೆಂಪು /  ಗುರು ಹಸ್ತದ  ಕಿಡಿ  ಕುವೆಂಪು /

                                                     ನುಡಿರಾಣಿಯ  ಗುಡಿ  ಕುವೆಂಪು /  ಸಿರಿಗನ್ನಡ ಮುಡಿ  ಕುವೆಂಪು /

                                                                ಇರ್ದುಮಿಲ್ಲದೀ  ಕುವೆಂಪು /

 

                           ಇದು  ಕವಿ  ತನ್ನಬಗೆಗೇ  ತಾನು  ಉದ್ಗರಿಸಿದ   ಕಾವ್ಯೋದ್ಗಾರ. 

                ಭಾರತೀಯ  ಭಾಷೆಗಳಲ್ಲೇ    ಆಧುನಿಕ  ಕಾಲದ ಮಹಾಕಾವ್ಯಗಳ  ಮಹಾರಾಣಿಯಾಗಿ ಇಂದಿಗೂ  ಮೆರೆಯುತ್ತಿರುವ   ʻʻ  ಶ್ರೀ  ರಾಮಾಯಣ  ದರ್ಶನಂ ʼʼ   ಕನ್ನಡ  ಭಾಷೆಯಲ್ಲಿದೆ  ಎಂಬುದೇ  ಕನ್ನಡಿಗರಿಗೆ  ಹೆಮ್ಮೆ  ತರುವ  ವಿಷಯ.   ಆಧ್ಯಾತ್ಮಿಕತೆ, ತಾತ್ವಿಕತೆ, ಭಕ್ತಿ, ಮತ್ತು  ವೈಚಾರಿಕತೆಗಳು   ಮಹಾಕಾವ್ಯದ  ಒಡಲಲ್ಲಿ, ಬೆರೆತು  ಒಂದಾಗಿ,   ಹಳೆಯ  ಕತೆಯಾಗಿಯೂ,  ಹೊಸಕಾಲದ  ಮಾನವ  ಬದುಕಿನ  ತಲ್ಲಣ, ನೋವು,  ಶಕ್ತಿ  ದೌರ್ಬಲ್ಯ, ಗಳೆಲ್ಲದಕ್ಕೂ  ಸಮರ್ಥ  ಪ್ರತಿಕ್ರಿಯೆಯಾಗಿ,  ರೂಪುಗೊಂಡಿರುವ   ವಿಸ್ಮಯವನ್ನು   ಪ್ರಸ್ತುತ  ಮಹಾಕಾವ್ಯದಲ್ಲಿ  ನಾವು  ಕಾಣುತ್ತೇವೆ.

           ಭೂತ  ಭವಿಷ್ಯಗಳ  ಸಮರ್ಥ  ಹಸ್ತಗಳಿಲ್ಲದ  ವರ್ತಮಾನ   ಜೀವವಿಲ್ಲದ  ಶರೀರವಿದ್ದಂತೆ.  ಭೂತದ  ಪ್ರಜ್ಞೆ  ಮಾತ್ರ  ವಾಸ್ತವಕ್ಕೆ  ಚೈತನ್ಯ  ನೀಡಬಲ್ಲದು.  ಭದ್ರ  ಭವಿಷ್ಯವನ್ನು  ಕಟ್ಟಬಲ್ಲದು.  ರಾಮಾಯಣ  ಮಹಾಭಾರತ   ಮಹಾಕಾವ್ಯಗಳು   ಕೇವಲ  ಭಾರತೀಯರದ್ದಲ್ಲ.  ಇಡೀ  ಏಶಿಯಾ  ಖಂಡದ  ಅಸ್ಮಿತೆ.  ಮಾನವ  ಜನಾಂಗದ   ಸಾರ್ವಕಾಲಿಕ  ಹಣೆಬರಹ  ಬರೆದಿರುವ,  ಅಮೂಲ್ಯ  ಶಾಸನ. 

       ಇದೇ  ಕಾರಣಕ್ಕಿರಬಹುದು,  ಕುವೆಂಪು  ತಮ್ಮ  ಜೀವಿತದಲ್ಲಿ  ದೊರಕಿಸಿಕೊಂಡ,  ತಾತ್ವಿಕ  ಆಧ್ಯಾತ್ಮಿಕ   ಅನುಭವರಾಶಿಗಳ   ಅಭಿವ್ಯಕ್ತಿಗೆ,   ರಾಮಾಯಣ   ಕೃತಿಯನ್ನೇ  ಆಧರಿಸಿದರು.   ಮತ್ತೆ  ಹೊಸಕಾಲದ   ಹೊಸ  ಮಾನವನ   ದ್ವಂದ್ವಗಳಿಗೆ,  ಉತ್ತರಿಸಲು   ರಾಮನನ್ನೇ  ಕರೆತಂದರು.  ತಾವು  ಹುಟ್ಟಿ  ಬೆಳೆದ, ಕಂಡು  ಉಂಡ,  ಸಾಗರ  ಮಲೆನಾಡುಗಳ   ರುದ್ರ  ರಮ್ಯ  ಸೌಂದರ್ಯವನ್ನು,  ಅಕ್ಷರದಲ್ಲಿ  ಪುನಃಸೃಷ್ಟಿಸಿದರು.  ಸೃಷ್ಟಿಸಿತು  ಕುವೆಂಪು   ಶ್ರೀ  ರಾಮಾಯಣ  ದರ್ಶನಂ.  ಎಂದು  ಉದ್ಗರಿಸಿದರು.

          ಶರಧಿ  ದರ್ಶನಂ /  ತಾರಕಿತ ರಾತ್ರಿಯಾಕಾಶ ಸಂದರ್ಶನಂ /  

          ತುಂಗ ಶೃಂಗದ  ತುಹಿನ  ಶೈಲವನ ಶಿವ  ಉಮಾ  ದರ್ಶನಂ /

          ದಂತುರ  ದಿಗಂತ  ಚುಂಬಿತ ಉದಯ   ಮೇಣ್‌,  ಅಸ್ತರವಿ  ದರ್ಶನಂ /

          ವರ್ಷ  ಭೈರವನ   ಸಿಡಿಲು  ಮಿಂಚಿನ  ರುದ್ರ  ನಟ  ನಾಟವಿಯ

          ಸಹ್ಯಾದ್ರಿ  ದರ್ಶನಂ.//

ಮಾತೆಲ್ಲ  ಮಂತ್ರವಾಗಬೇಕು  ಕಣಾ,  ಎಂದೆನ್ನುತ್ತಿದ್ದ   ಕುವೆಂಪು,,  ಕನ್ನಡ  ಭಾಷೆಗೆ  ಮಂತ್ರದ  ಮಹಾಶಕ್ತಿಯನ್ನೇ  ನೀಡಿದರು.   ಹಳೆಗನ್ನಡದ  ಭವ್ಯತೆ,  ಹೊಸಗನ್ನಡದ  ಸೌಂದರ್ಯ, ಸಂಸ್ಕೃತದ  ಚೆಲುವು,  ವಿಶ್ವಸಾಹಿತ್ಯದ  ಆಳ,   ಉನ್ನತ  ವೈಚಾರಿಕತೆ,   ಮಾನವೀಯ  ಮೌಲ್ಯಗಳ  ಸುವರ್ಣಸಂಗಮವಾಗಿ   ಬೆಳೆದು  ಬಾಳಿದ   ರಸಋಷಿ  ಕುವೆಂಪು,   ಬಿಟ್ಟುಹೋದ,  ಗದ್ಯ  ಪದ್ಯಗಳು   ಕನ್ನಡದ  ಘನತೆಯನ್ನು  ಹೆಚ್ಚಿಸಿವೆ.  ಅವರು  ಸೃಷ್ಟಿಸಿದ   ಕಾವ್ಯಗಳು,  ಕಾದಂಬರಿಗಳು  ಜಾಗತಿಕ  ಸಾಹಿತ್ಯದ  ಎತ್ತರದಲ್ಲಿ  ನಲಿಯುತ್ತಿರುವುದನ್ನು   ನಾವು  ಮರೆತರೆ,  ಕವಿಗೊಂದೇ  ಅಲ್ಲ,  ಇಡಿಯ   ಕನ್ನಡದ  ನೆಲಕ್ಕೇ  ನಾವು  ಗೈಯ್ಯುವ  ದ್ರೋಹವಾದೀತು.

      ಕುವೆಂಪು  ಮಹಾಕಾವ್ಯದ  ಹತ್ತು  ಹಲವು  ವಿಶೇಷಗಳನ್ನು  ವರ್ಣಿಸಲು  ತೊಡಗಿದರೆ  ಮತ್ತೊಂದು  ಗ್ರಂಥವೇ  ಆದೀತು.   ಕನ್ನಡ  ಮಹಾಕಾವ್ಯಕ್ಕೆ ಪ್ರ ಪ್ರಥಮವಾಗಿ  ಮಹೋಪಮೆಯನ್ನು  ತಂದು ಯಶಸ್ವೀಯಾಗಿ  ಪ್ರಯೋಗಿಸಿದ  ಕುವೆಂಪು,  ರಾಮಾಯಣಕ್ಕೆ  ಹೊಸ  ಶೋಭೆ,  ಹೊಸ  ಅರ್ಥವಂತಿಕೆಯನ್ನು  ಒದಗಿಸಿದ್ದಾರೆ.  ಉನ್ನತ  ಕ್ಷಣವನ್ನು  ಅತ್ಯುನ್ನತಿಗೇರಿಸಿದ್ದಾರೆ.  ಕವಿತೆಗೆ  ಉಪಮೆ  ಹೇಗೋ   ಮಹಾಕಾವ್ಯಕ್ಕೆ  ಮಹೋಪಮೆ.   ಅವರು  ಪ್ರಯೋಗಿಸಿದ  ಮಹೋಪಮೆಗಳು,  ಇಡೀ  ಮಹಾಕಾವ್ಯಕ್ಕೆ ಭವ್ಯತೆಯ  ಸ್ಪರ್ಶ  ನೀಡಿವೆ.  ರಸಕ್ಷಣಗಳನ್ನು  ಸೃಷ್ಟಿಸಿವೆ.

      ಕವಿ  ಮಲೆನಾಡ  ಮಣ್ಣಿನ  ಮಗ.  ಅವರ  ಬಾಲ್ಯದ  ದಿನಗಳಲ್ಲಿ  ಮಲೆನಾಡು  ಇನ್ನೂ  ಕನ್ಯೆಯಾಗಿಯೇ  ಮಿಂಚುತ್ತಿತ್ತು.  ಬೆಟ್ಟಗಳಿಗೆ  ಕಾಳ್ಗಿಚ್ಚು  ಆಕ್ರಮಿಸಿದಾಗಿನ  ಬಹುಭೀಕರ  ಸ್ಥಿತಿಯನ್ನು  ಅವರು  ಕಣ್ಣಾರೆ  ಕಂಡಿದ್ದರು.   ಅದೇ  ಕಾರಣಕ್ಕಿರಬಹುದು,  ಸಂದರ್ಭಸಿಕ್ಕಾಗೆಲ್ಲ  ಕಾಳ್ಗಿಚ್ಚಿನ  ರುದ್ರ ತಾಂಡವವನ್ನು  ಮನದಣಿ  ವರ್ಣಿಸುತ್ತಾರೆ.    ಮಂಥರೆ  ಕಾಳ್ಗಿಚ್ಚಿಗೆ  ಸಿಲುಕಿ  ಸುಟ್ಟು  ಬೂದಿಯಾಗುವ  ಭೀಕರ  ಸನ್ನಿವೇಶವನ್ನು ಮಹೋಪಮೆಯ  ಮೂಲಕ  ನಾವು    ನೋಡಬಹುದು.

         ʻʻನಿರಿ ನಿರಿ  ನಿಟಿಲ್ಲೆಂದು  ಮುರಿದರೆದು,  ಬೂದಿಯಂ / ಬುತ್ತಿಗೂಳ್  ಮಾಡಿ ಮುಕ್ಕಿದುದು   ಕಾಡೆಲ್ಲ ವುದುರಿ  ನುಂಗಿ ನೊಣೆಯುತ್ತೆ,  ನಾಡೆಲ್ಲವಂ  ನೆಕ್ಕುತ್ತೆ /  ನಗಜಗದ  ಖಗಮೃಗದ  ಬನಸೊಗದ, ಜೀವಮಂ /  ಪಾರಿಸುತೆ  ಚೀರಿಸುತೆ ಕೊಲ್ಲುತ್ತೆ  ಮೆಲ್ಲುತ್ತೆ,  /  ಪ್ರಳಯ  ಫಣಿಯಗ್ನಿತನು  ತಾಂ,  ಲಯ  ಭೋಜನಮೆ  ನೀಳ್ದ /  ಶತಕೋಟಿ  ಯೋಜನದ  ಮಿಂಚಿನ  ಮಹಾ ಜಿಹ್ವೆ / ನುಗ್ಗಿ  ಮುಂಬರಿವಂತೆ    ಮೇಲ್ವಾಯ್ದು  ಬೀಳ್ವಂತೆ, /   ಬಂದಪ್ಪಳಿಸಿತಗ್ನಿಗಾ  ಮಂಥರೆಯ  ಮೂರ್ತಿ  ಹಾ....  ಸುಟ್ಟು  ಸೀದುದೋ  ಚಿಟ್ಟೆ  ಸೀವಂತೆ./ ʼʼ

        ಬದುಕಿನ  ಅನೂಹ್ಯ ಆಘಾತ,  ಆಕಸ್ಮಿಕ ತಿರುವುಗಳ  ತೆರೆಗಳಾಟಗಳ  ನಡುವೆ, ಅನುಭವಾಮೃತದ  ಮೂಲವಿರುವುದನ್ನು   ಮಹಾಕಾವ್ಯದ  ಪ್ರತಿ  ಸಂದರ್ಭದಲ್ಲಿ  ಮನಗಾಣಿಸುತ್ತ,  ಆದಿಶಕ್ತಿ  ಬ್ರಹ್ಮಸೃಷ್ಟಿಯ  ಲೀಲೆಯನ್ನು,  ಅಧ್ಯಾತ್ಮದ  ತಾರಕಕ್ಕೇರುವ  ಕೈಮರವಾಗಿ  ಬಿಂಬಿಸುತ್ತ  ಸಾಗುವ   ಕಾವ್ಯ   ಆದಿಯಿಂದ   ಅನಂತದ  ವರೆಗೆ  ನಮ್ಮನ್ನೂ  ಕೊಂಡೊಯ್ಯುತ್ತದೆ. 

      ಕುವೆಂಪು  ರಾಮಾಯಣದ  ತುಂಬೆಲ್ಲ  ವೈಶಿಷ್ಟ್ಯಪೂರ್ಣ  ರಸ ಸ್ಥಾನಗಳು  ಕಿಕ್ಕಿರಿದಿವೆ.  ಅದರಲ್ಲಿಯೂ   ಕಾವ್ಯದ  ಕೊನೆಯಲ್ಲಿ   ಬರುವ   ʻʻ ದಶಾನನ   ಸ್ವಪ್ನ  ಸಿದ್ಧಿʼʼ   ಅಧ್ಯಾಯ,  ಮನಸ್ಸಿನಲ್ಲಿ  ಅಚ್ಚಳಿಯದೇ  ಉಳಿಯುತ್ತದೆ.   ಇಡೀ  ರಾಮಾಯಣ  ಕೃತಿಯ   ಮಹಾದರ್ಶನ  ಇಲ್ಲಿ  ನಮಗೆದುರಾಗುತ್ತದೆ.

     ರಾಮ  ರಾವಣರ  ಯುದ್ಧ  ಒಂದು  ನಿರ್ಣಾಯಕ  ಹಂತ  ತಲುಪಿದೆ.   ರಾವಣನ  ಸಾವಿನ   ಹಿಂದಿನ  ರಾತ್ರಿ, ಕನಸಿನಲ್ಲಿ  ಮಹಾಕಾಳಿಯನ್ನೊಲಿಸಿ,  ರಾವಣ  ವರ  ಬೇಡುತ್ತಾನೆ.

       ʻʻ ಸೀತೆ  ತನಗೊಲಿಯಬೇಕು,  ರಾಮ  ಸೋಲಬೇಕು,ʼʼ   ಎಂಬ  ಬೇಡಿಕೆಯನ್ನು  ಮಂಡಿಸುತ್ತಾನೆ.    ಮಹಾಕಾಳಿ   ʻʻತಥಾಸ್ತುʼʼ  ಎನ್ನುತ್ತಾಳೆ.  ಜೊತೆಗೆ     ವರ  ನಿನ್ನ    ಜನ್ಮಕ್ಕಲ್ಲ,  ಮುಂದಿನ  ಜನ್ಮಕ್ಕೆ.....   ಎಂದು  ಹೇಳುತ್ತಲೇ  ಮಾಯವಾಗುತ್ತಾಳೆ. 

      ಆಗ  ರಾವಣನಿಗೆ   ರೋಚಕ   ಕನಸೊಂದು  ಕಾಣತೊಡಗುತ್ತದೆ.   ಅದೊಂದು  ದೇವಾಲಯ.  ದೇವಪೀಠ.  ಆದರೆ  ಪೀಠದಲ್ಲಿ  ವಿಗ್ರಹವಿಲ್ಲ.  ಬದಲು  ಭಾರಿಯಾದ  ಗಂಡು  ಕುದುರೆಯೊಂದು  ಮುಂಗಾಲೆತ್ತಿ  ಹಿಂಗಾಲಮೇಲೆ  ನಿಂತು, ಭೀಕರವಾಗಿ  ಕೆನೆಯುತ್ತಿತ್ತು.  ಅದರ  ಶಿಶ್ನ  ನಿಗುರಿತ್ತು.  ಕಾಲನ್ನಪ್ಪಳಿಸುವ  ವೇಗಕ್ಕೆ  ರಾವಣನ  ಪ್ರಾಣ  ಥರ ಥರ  ನಡುಗತೊಡಗಿತು.  ಆಕಾಶದಿಂದ   ಬೃಹತ್ತಾದ  ಹಸ್ತವೊಂದು  ದೀರ್ಘವಾದ  ಖಡ್ಗಹಿಡಿದು  ಧುತ್ತೆಂದು  ಕೆಳಗಿಳಿಯುತ್ತದೆ.  ಕುದುರೆಯ  ರುಂಡ  ಚಂಡಾಡುತ್ತದೆ.  ಪೀಠದಿಂದ  ಹರಿಯುವ  ಕುದುರೆಯ  ರಕ್ತದ  ಘೋರ ಪ್ರವಾಹ,  ರಾವಣನೆಡೆಗೆ  ನುಗ್ಗತೊಡಗುತ್ತದೆ.  ರಾವಣ  ಭಯಭೀತನಾಗಿ  ಓಡತೊಡಗುತ್ತಾನೆ.  ರುಂಡವಿಲ್ಲದ  ಕುದುರೆಯ  ಮುಂಡ ಮಾತ್ರ,  ರಾವಣನನ್ನು  ಬೆನ್ನಟ್ಟುತ್ತದೆ.   ರಾವಣ  ನದಿಯತ್ತ  ಧಾವಿಸಿ  ದೋಣಿಹಿಡಿದು  ಧಾವಿಸುವುದನ್ನು  ಗಮನಿಸಿದ   ಕುದುರೆಯೂ   ನದಿಗೆ  ಧುಮುಕುತ್ತದೆ.  ನದಿ  ರಕ್ತದ  ನದಿಯಾಗಿಬಿಡುತ್ತದೆ. ನರಕದ  ವೈತರಣಿಯಾಗುತ್ತದೆ.  ನದಿಯಲ್ಲಿ  ಅಲ್ಲೋಲ  ಕಲ್ಲೋಲ  ಸೃಷ್ಟಿಯಾಗುತ್ತದೆ.  ರಾವಣನ  ದೋಣಿ  ಮಗುಚಿ  ನೀರುಪಾಲಾದಾಗ   ರಾವಣ   ಈಜತೊಡಗುತ್ತಾನೆ.   ನದಿಯಲ್ಲಿ  ಮುಳುಗುತ್ತ  ಏಳುತ್ತ,  ದಂಡೆಯೆಡೆಗೆ  ಧಾವಿಸತೊಡಗಿದಾಗ  ಜೋತೆಯಲ್ಲೇ   ಹಿಂದೆ  ಸತ್ತ  ಕುಂಭಕರ್ಣನೂ  ಈಜಿ  ದಡದೆಡೆಗೆ  ಬರುತ್ತಿದ್ದಾನೆ.  ರಾವಣ  ಎಚ್ಚರ ತಪ್ಪುತ್ತಾನೆ.  ಎಚ್ಚರವಾದಾಗ,    ರಾವಣ  ಕುಂಭಕರ್ಣರಿಬ್ಬರೂ  ಶಿಶುಗಳಾಗಿ,  ಮಹಿಳೆಯೊಬ್ಬಳ  ತೊಡೆಯಮೇಲೆ   ಮಲಗಿದ್ದರು.   ಆತನ  ಉದ್ವೇಗವನ್ನು  ಮೈದಡವಿ  ಸಂತೈಸುತ್ತಿದ್ದ  ಮಹಿಳೆ   ಸೀತೆಯಾಗಿದ್ದಳು.

        ಒಮ್ಮೆಲೇ  ಕನಸಿನಿಂದ   ಎಚ್ಚೆತ್ತ  ರಾವಣ,  ಪಕ್ಕದಲ್ಲಿದ್ದ  ಮಂಡೋದರಿಯನ್ನುದ್ದೇಶಿಸಿ   ಕಿರುಚುತ್ತಾನೆ.

       ʻʻನಿನಗಿಂ  ಮಿಗಿಲ್  ಸೀತೆ,  ನನಗೆ  ದೇವತೆ  ಮಾತೆ !! 

ಶೃದ್ಧೆಗೆಟ್ಟಿದ್ದೆನಗೆ  ಶ್ರದ್ಧೆಯಂ  ಮರುಕೊಳಿಸುತ  ಆತ್ಮದುದ್ಧಾರಮಂ /

ತಂದ  ದೇವತೆ   ಪುಣ್ಯಮಾತೆ...!!

      ಯಾವ  ರಾಮಾಯಣವೂ  ಸೃಷ್ಟಿಸದ  ಉದಾತ್ತ  ದುರಂತ  ನಾಯಕನನ್ನ  ರಾವಣನಲ್ಲಿ  ಕಂಡ  ಕುವೆಂಪುರವರ   ಸೃಜನಶೀಲ  ಸಾಮರ್ಥ್ಯಕ್ಕೆ   ಬೆರಗು  ಮೂಡುತ್ತದೆ.  ರಾವಣ  ಮರುಜನ್ಮದಲ್ಲಿ  ಕುಶನಾಗಿ,  ಕುಂಭಕರ್ಣ  ಲವನಾಗಿ  ಜನಿಸುತ್ತಾರೆ.  ಸೀತೆಯನ್ನು  ತಾಯಿಯಾಗಿ  ಪಡೆದುದಲ್ಲದೇ  ಕುಶ ಲವರು,  ರಾಮನನ್ನು  ಯುದ್ಧದಲ್ಲಿ  ಸೋಲಿಸುತ್ತಾರೆ. 

     ರಾವಣ  ಕಂಡ  ಕನಸಿನಲ್ಲಿ,  ನಿಗುರಿದ  ಶಿಶ್ನದ  ಗಂಡುಕುದುರೆಯ  ತಲೆ ತುಂಡಾಗುವ  ಘಟನೆ, ರಾವಣನ  ಅತಿಕಾಮದ  ಪ್ರವೃತ್ತಿಯನ್ನು ನಾಶಗೈಯ್ಯುವ  ಸಂಕೇತವಾಗಿ  ಚಿತ್ರಣಗೊಂಡಿದೆ.

ಪ್ರಭುತ್ವದ  ಭೃಷ್ಟತೆ,  ಅಹಂಕಾರದ  ವಿರುದ್ಧ  ತಾತ್ವಿಕ  ಯುದ್ಧಸಾರಿದ  ಕುವೆಂಪು, ನಿಜಕ್ಕೂ

           ಭುವನದ   ಭಾಗ್ಯ.

                                                             

ʻʻಸುಮ  ಸಂಪದʼʼ ೬     

ಸುಬ್ರಾಯ   ಮತ್ತೀಹಳ್ಳಿ.

  ೩೦ -೧೨ -೨೦೨೨

No comments:

Post a Comment