Saturday 23 September 2023

ಗದ್ಯ ಸದ್ಯಕ್ಕೆ - ಕಾವ್ಯ ಭವಿಷ್ಯಕ್ಕೆ

 

    ಕಾವ್ಯ  ಅಂದರೇನೇ  ಅದೊಂದು  ಬೆರಗು.  ಅದೊಂದು  ವಿಸ್ಮಯ.  ಕವಿಗೊಂದೇ ಅಲ್ಲ.  ಕಾವ್ಯಪ್ರಿಯನಿಗೂ  ಕೂಡಾ.  ಕವಿತೆ  ಕವಿಯಿಂದಲೇ  ಜನ್ಮಿಸಿದರೂ, ಅವನನ್ನೂ  ಮೀರಿ  ಅವನಿಗೇ  ತಿಳಿಯದ  ನಿಗೂಢ ಸತ್ಯವನ್ನು  ಹೇಳಲು  ತೊಡಗಿಬಿಡುತ್ತದೆ.   ದಿನ  ವರ್ಷ ಕಳೆದರೂ  ನಿತ್ಯ ಸಂಜೀವಿನಿಯಾಗಿ   ಹೊಸ  ಅರ್ಥ  ಹೊಸ ಭಾವಗಳ  ಹೊಸ  ಹೊಸ  ಆಯಾಮಗಳನ್ನೇ  ಸೃಷ್ಟಿಸಿಬಿಡುತ್ತದೆ.  ಸಹೃದಯನಿಗೂ  ಅಷ್ಟೇ.  ಅವನೊಳಗಿನ  ಅನುಭವದ  ಬೀಜಕ್ಕೆ  ನೀರೆರೆದು,  ಹೊಸ  ಚಿಗುರನ್ನು   ಹೊಸ  ಅನುಭವದ  ಗಮ್ಯವನ್ನು  ಕಾಣಿಸಲು  ತೊಡಗಿಬಿಡುತ್ತದೆ. 

            ಕವಿತೆಗೆ  ಎಲ್ಲಕಾಲದಲ್ಲೂ  ಅಭಿಮಾನಿಗಳು   ಕಡಿಮೆಯೇ.  ಆದರೆ   ಕಾವ್ಯದ  ಅನುಸಂಧಾನಗೊಂಡ  ವ್ಯಕ್ತಿತ್ವ  ಮಾತ್ರ  ತನ್ನ  ವಿಶಿಷ್ಟವಾದ   ಆಪ್ತವಾದ  ಸಹೃದಯತೆಯ  ಮಡುವಾದ  ಮನೋಭೂಮಿಕೆಯಲ್ಲಿ   ನೂರಾರು  ಜನರಮೇಲೆ  ಪ್ರಭಾವ  ಬೀರಲು  ಸಾಧ್ಯ.  ಸಹೃದಯನ  ಪ್ರತಿಕ್ರಿಯೆ   ಕೇವಲ  ಕಾವ್ಯದ  ಓದು,  ವ್ಯಾಖ್ಯಾನವಲ್ಲ.  ಸಮಗ್ರ  ವ್ಯಕ್ತಿತ್ವದ  ಬದಲಾವಣೆ.  ಮಾನವೀಯ  ಮೌಲ್ಯಗಳ  ಪ್ರತಿರೂಪವಾಗಿ,  ಸಮುದಾಯದೊಂದಿಗೆ  ಒಂದಾಗುವುದು. 

          ರಾಮಾಯಣ   ಮಹಾಭಾರತ,  ಈಲಿಯಡ್‌,  ನಂಥ  ವಿಶ್ವ  ಮಹಾಕಾವ್ಯಗಳು  ತನ್ನ  ಸುದೀರ್ಘ  ಚಲನೆಯಲ್ಲಿ  ಮೂಡಿಸಿದ  ಅಸಾಧಾರಣ  ಪ್ರಭಾವವನ್ನು  ಊಹಿಸಲೂ  ಸಾಧ್ಯವಾಗದಷ್ಟು  ಅಗಾಧವಾಗಿದೆ.  ಕಾವ್ಯಕ್ಕೆ  ಕಾಲದ  ಹಂಗಿಲ್ಲ.  ಅದು  ಸುಪ್ತವಾಗಿದ್ದು  ಮತ್ಯಾವುದೋ  ಕಾಲದ  ಸಂಗಾತಿಯೂ  ಆಗಬಹುದು.  ಭವಿಷ್ಯದ  ಮತ್ಯಾವುದೋ  ಬಿಂದುವಿನಲ್ಲಿ. ಆಕಾಲದ  ತಲ್ಲಣಗಳಿಗೆ   ಸಮರ್ಥ  ಸಾಂತ್ವನವಾಗಬಹುದು.

         ನನ್ನೆದುರು  ಅತ್ಯಂತ  ಅಪರೂಪವಾದ  ಅಷ್ಟೇ  ವಿಶಿಷ್ಟವಾದ  ಕವಿತಾ ಪರ್ಜನ್ಯದ  ಪ್ರವಾಹವಿದೆ.  ಕನ್ನಡಸಾಹಿತ್ಯದ  ಸುದೀರ್ಘ  ಕಾವ್ಯಪರಂಪರೆಯ  ಎಲ್ಲ  ಧನಾತ್ಮಕ ಆಯಾಮಗಳನ್ನು ಜೀರ್ಣಿಸಿಕೊಂಡು,  ಅತ್ಯಾಧುನಿಕ  ಬದುಕಿಗೆ  ಮುಖಾಮುಖಿಯಾಗುವ  ಮಹತ್ವಾಕಾಂಕ್ಷೆ,  ಆತ್ಮವಿಶ್ವಾಸದ  ನೆಲೆಯಲ್ಲಿ  ಭದ್ರ  ಮನೋಭೂಮಿಕೆಯೊಂದಿಗೆ  ಅಭಿವ್ಯಕ್ತಗೊಳ್ಳುತ್ತಿರುವ  ಆಶಾದಾಯಕ  ರಚನೆಗಳನ್ನು  ನಾನು  ನೋಡುತ್ತಿದ್ದೇನೆ.

        ಕಟುವಾಸ್ತವದ  ದಾರುಣತೆ, ಆಧುನಿಕ  ಮನಸ್ಸಿನ  ದ್ವಂದ್ವ  ತಿಕ್ಕಲುತನಗಳ  ಆಟಾಟೋಪಗಳನ್ನ, ಮಹಾಭಾರತದ  ಊರ್ದ್ವರೋಮನಂತೇ  ನಿರ್ಲಿಪ್ತವಾದ ದೃಷ್ಟಿಯಲ್ಲಿ.  ದೃಷ್ಟಿಸುತ್ತ,  ಬದುಕಿನ  ನಿಜವನ್ನ ಅನ್ವೇಷಿಸುವ  ಮಹತ್ವಪೂರ್ಣ  ಹೋರಾಟ  ಇಲ್ಲಿ  ಕಾಣುತ್ತಿದೆ.

        ಗದ್ಯ  ಸದ್ಯಕ್ಕೆ.  ಕಾವ್ಯ  ಭವಿಷ್ಯಕ್ಕೆ   ಎಂಬಂತೇ,  ಕವಿ  ಇಲ್ಲಿ  ಮಹತ್ವಪೂರ್ಣವಾದ  ಅನ್ವೇಷಣೆಯಲ್ಲಿ  ತೊಡಗಿದ್ದಾನೆ.  ರಚನೆಗಳಲ್ಲಿ  ಚೆಲ್ಲುವರಿದಿರುವ  ಅಸಂಖ್ಯಾತವಾದ  ಉದ್ಗಾರಗಳು,  ನಿಬಿಡವಾಗಿ  ಇಡಿಕಿರಿದಿರುವ  ಪ್ರತಿಮೆಗಳು,  ಅಸಾಧ್ಯವಾದ  ಮೌನಯುದ್ದದ  ಮಹಾಸಿದ್ಧತೆಯಂತೇ  ತೋರುತ್ತಿದೆ.  ಹಲವೆಡೆ  ಕೈಗೆ  ಸಿಕ್ಕ ಎಲ್ಲ  ವಸ್ತುಗಳನ್ನೂ  ಅಪಹರಿಸಿ  ಮುರಿದು  ತೂರಾಡುವ  ಚಂಡಿಹಿಡಿದ  ಮಗುವಿನ  ತುಂಟತನವೇ  ನೆನಪಿಗೆ  ಬಂದರೆ  ಆಶ್ಚರ್ಯವಿಲ್ಲ.  ʻʻ ಕಾಲಮಿಂಚುವ  ಮುನ್ನ / ನಾಳೆಗಳು,  ಪಾತಾಳಕೆ  ಕುಸಿಯುವ  ಸದ್ದು, / ಗದ್ದಲದಿ  ಕತ್ತಲೆಯ  ತಮಸ್ಸಿನ  ಸ್ವರೂಪ ಸಾವಿರದ/  ನಾಳ  ನಾಳದಿಂದ  ಹರಿವ  ಹಾಲಾಹಲ ಹೀರಿ;/ ಇನ್ನೆಷ್ಟು ದಿನ  ಸಹನೆಯ ಕಟ್ಟೆ  ತಡೆಹಿಡಿಯಲು...?/ʼʼ    ಎಂದು  ಪ್ರಶ್ನಿಸುತ್ತ,  ಬದುಕಿನ  ಪ್ರವಾಹದೆದುರು,  ಬಂಡೆಯಂತೇ  ಸೆಟೆದು  ನಿಂತ  ಮನಸ್ಸಿನೊಂದಿಗೆ   ಸಾಗುವ  ಕಾವ್ಯ ಲಹರಿ,  ಬೆರಗು  ರೋಮಾಂಚನದ  ಲಹರಿಯನ್ನೇ  ಚಿಮ್ಮಿಸಿ  ಬಿಡುತ್ತದೆ. 

          ಕವಿ  ʻʻಗುರುನಂದನʼʼ  ನಮ್ಮನಡುವೆಯೇ  ಅನಾಮಧೇಯರಾಗಿದ್ದು.  ಒಮ್ಮೆಲೇ  ತಮ್ಮ  ವಿಶಿಷ್ಟ  ಅನನ್ಯ  ಅಭಿವ್ಯಕ್ತಿಯ  ಮೂಲಕ   ಬೆರಗು  ಮೂಡಿಸುತ್ತಿದ್ದಾರೆ.  ಮೇಲ್ನೋಟದಲ್ಲಿ   ನವ್ಯದ ವಿಸ್ತಾರದಂತೇ  ತೋರುವ   ಅವರ  ರಚನೆಗಳಲ್ಲಿ  ಆಳವಾದ  ಚಿಂತನೆ  ದೂರದೃಷ್ಟಿ  ಮತ್ತು  ಸೂಕ್ಷ್ಮ  ಸಂವೇದನಾಶೀಲತೆಯಿದೆ.

ವೃತ್ತಿಯಲ್ಲಿ  ವೈದ್ಯರಾಗಿ. ಸಂಶೋಧಕರಾಗಿ  ಜನಪ್ರಿಯರಾದರೆ,  ಪ್ರವೃತ್ತಿಯಲ್ಲಿ  ಮಹತ್ವಪೂರ್ಣ  ಕವಿಯಾಗಿಯೂ  ಹೊರಹೊಮ್ಮುತ್ತಿರುವುದು  ನಿಜಕ್ಕೂ  ಆಶಾದಾಯಕ  ಬೆಳವಣಿಗೆ.  ಒಂದಲ್ಲ  ನಾಲ್ಕು  ಬಾರಿ  ಓದಲು  ಒತ್ತಾಯಿಸುವ  ಅವರ  ರಚನೆಗಳ  ಆಳದಲ್ಲಿ  ಮತ್ತೂ  ನಿಗೂಢತೆ  ಉಳಿದು ಕೊಳ್ಳುತ್ತದೆ. ಪ್ರತೀ  ಓದಿಗೂ  ಹೊಸ  ಅರ್ಥವಲಯವನ್ನೇ  ಸೃಷ್ಟಿಸಿಕೊಳ್ಳುವ  ಕವಿತೆಗಳು, ಕುತೂಹಲ  ಮೂಡಿಸುತ್ತವೆ. ದೀಪಾವಳಿ, ನಂಜುಂಡ,  ಪ್ರತಿಬಿಂಬ,  ಮುಂತಾದ  ಕವಿತೆಗಳಲ್ಲಿ   ಹೊಸ  ಅನುಭವಗಳ  ವಿಶಿಷ್ಟ  ಆಯಾಮವನ್ನೇ  ದರ್ಶಿಸುವ  ಪ್ರಯತ್ನ  ಎದ್ದು  ತೋರುತ್ತವೆ.

         ಸಂವೇದನೆ  ಸೂಕ್ಷ್ಮಗೊಳ್ಳುತ್ತ  ಸಾಗಿದ  ಹಾಗೆ  ಭಾಷೆಯೂ  ಸೂಕ್ಷ್ಮಗೊಳ್ಳುವುದು  ಸ್ವಾಭಾವಿಕವಾದರೂ, ಅತಿಯಾದ  ಶಬ್ದಗಾರಿಕೆ,  ಅತಿಯಾದ  ಪ್ರತಿಮಾಸೃಷ್ಟಿ  ಕೆಲವೊಮ್ಮೆ  ಅರ್ಥ  ಮತ್ತು  ಭಾವಗಳ  ಸಂವಹನೆಗೆ  ತೊಡಕನ್ನೂ  ಉಂಟುಮಾಡಬಹುದಾಗಿದೆ.   ಪ್ರಸ್ತುತ  ಸಂಕಲನದ  ಕವಿತೆಗಳು.  ಹೊಸ  ಹೊಸ  ಪ್ರತಿಮಾಸೃಷ್ಟಿಯಲ್ಲಿ  ಮಿಂಚಿದರೂ,  ಪ್ರತಿಮೆಗಳ  ಅತಿಪ್ರಯೋಗದಿಂದ,  ಕೆಲವೆಡೆ  ತನ್ನ  ಚಲನೆಗೆ  ತಾನೇ  ತಡೆಯನ್ನೂ ಸೃಷ್ಟಿಸಿಕೊಂಡಿವೆ. ಭಾವಕ್ಕೆ  ಸೂಕ್ತ ಭಾಷಾಪ್ರಯೋಗ, ಅರ್ಥಸಾಧ್ಯತೆಯ  ಸಾಕಾರಕ್ಕಾಗಿ  ಪ್ರತಿಮಾಸೃಷ್ಟಿ, ಧ್ಯಾನಸ್ಥ  ಮನೋಸ್ಥಿತಿಗೆ ತಕ್ಕ ಲಯಗಾರಿಕೆ  ಮಾತ್ರ  ಕಾವ್ಯ ಸಂವಹನ ಸಾಧಿಸಲು ಶಕ್ಯ. ಇಲ್ಲಿ  ಹಲವೆಡೆ  ಭಾಷೆಯ  ಭಾರದಲ್ಲಿ  ಭಾವ ನಲುಗಿದೆ.  ಆಷಾಢದ  ಜಡಿಮಳೆಗೆ  ಮಲೆನಾಡಿನಲ್ಲಿ  ಒಮ್ಮೆಲೇ  ಜಲದೊರತೆ  ಎತ್ತರಕ್ಕೆ ಚಿಮ್ಮುತ್ತದೆ. ನಂತರ ಶಾಂತವಾಗಿ  ಸುಲಲಿತವಾಗಿ  ಎದ್ದು ತಿಳಿಯಾಗಿ  ಹರಿಯತೊಡಗುತ್ತದೆ.  ಇಲ್ಲಿಯೂ ಅಷ್ಟೇ.  ಕವಿ  ಉದ್ಭವಿಸಿ, ಕಾವ್ಯಚಿಲುಮೆಯ ಮೂಲಕ  ಎತ್ತರಕ್ಕೆ ಚಿಮ್ಮಿದ್ದಾನೆ. ಪ್ರವಾಹ ಸ್ವರೂಪದಲ್ಲಿ  ನುಗ್ಗಿದ್ದಾನೆ.  ನಂತರದ  ರಚನೆಗಳಲ್ಲಿ  ಅದು  ಸಂಯಮ ಸಾಧಿಸುತ್ತದೆ. 

          ಪ್ರಥಮ  ಸಂಕಲನವೇ  ಸಾಕಷ್ಟು  ಕುತೂಹಲ  ಮೂಡಿಸಿದೆ. ಅರ್ಥಶೋಧನೆಯ  ತಹ ತಹ  ಎದ್ದು ತೋರುತ್ತಿದೆ.  ಗಾಢ  ಅನುಭವಗಳು  ಭಾಷೆ  ಮತ್ತು  ಪ್ರತಿಮೆಗಳ  ನಿಬಿಡತೆಯಲ್ಲಿ  ಬಿಡುಗಡೆಗೊಳ್ಳುವ  ತವಕದಲ್ಲಿ  ತೊಳಲಾಡುತ್ತಿವೆ.  ಜೊತೆಗೇ  ಕವಿಯಿಂದ  ಇನ್ನೂ  ಮಹತ್ವಪೂರ್ಣ  ರಚನೆಗಳನ್ನು  ಬಯಸುವ  ಇಚ್ಛೆ  ಬಲಿಯುತ್ತಿದೆ.

            ಹಳ  ಮಧ್ಯಗನ್ನಡ  ಶಬ್ದಗಳಿಗೆ,  ಕೆಲವು  ಸಂಸ್ಕೃತ  ಶಬ್ದಗಳಿಗೆ   ಅರ್ಥನೀಡಿದ್ದರೆ,  ಕಾವ್ಯಕ್ಕೆ  ಇನ್ನಷ್ಟು  ಆಪ್ತತೆ  ದೊರಕುತ್ತಿತ್ತು   ಎಂಬುದು  ನನ್ನ  ವೈಯಕ್ತಿಕ  ಅನ್ನಿಸಿಕೆ.

          ಕಾವ್ಯಧ್ಯಾನ,  ಪ್ರತಿಮಾ ಸೃಷ್ಟಿ, ನಿರಂತರವಾಗಿರಲಿ.   ಇದು  ನಿಮ್ಮೊಬ್ಬರಿಗಾಗಿ  ಅವಸರದ  ಪ್ರತಿಕ್ರಿಯೆ. ಅವಶ್ಯ  ಉತ್ತರಿಸಿ.  ನನ್ನ  ಅನ್ನಿಸಿಕೆ  ಆಪ್ತವಾದರೆ  ಮಾತ್ರ  ಸ್ವೀಕರಿಸಿ.  ನನ್ನ  ಓದಿನ  ಮಿತಿಯಲ್ಲಿ  ತೋಚಿದಷ್ಟನ್ನು  ಗೀಚಿದ್ದೇನೆ.  

   ಕೃತಜ್ಞತೆಗಳೊಂದಿಗೆ ------   ತಮ್ಮವ .                          ಸುಬ್ರಾಯ  ಮತ್ತೀಹಳ್ಳಿ. ತಾ-೧೮-೩-೨೦.

No comments:

Post a Comment