Tuesday 19 September 2023

ಆಧುನಿಕತೆಯ ಅಹಮಿಗೆ ಪ್ರಕೃತಿಯ ಪ್ರತೀಕಾರ.- ʻʻ ಪ್ಲೇಗ್ ʼʼ

 

ಅದೆಂಥ  ದಾರುಣ  ಸಂದರ್ಭ.  ಇಡೀ  ಮಾನವಕುಲವನ್ನೇ  ತಲ್ಲಣಗೊಳಿಸಿ, ಸಾವಿನೆದುರು  ಕೈಕಟ್ಟಿ ನಿಲ್ಲಿಸಿದಂತಿರುವ,   ಅಯೋಮಯ  ಕ್ಷಣ.   ಆಧುನಿಕತೆಯ,  ಸಂಪತ್ತಿನ, ಬುದ್ಧಿವಂತಿಕೆಯ, ಅಧಿಕಾರದ, ಅಜ್ಞಾನ  ಮತ್ತು  ವಿಜ್ಞಾನದ  ಎಲ್ಲ  ಅಹಮಿಕೆಗಳಿಗೂ  ಸವಾಲನ್ನೊಡ್ಡಿ,  ಎಲ್ಲರನ್ನೂ  ಏಕಕಾಲದಲ್ಲಿ  ನಗ್ನಗೊಳಿಸಿರುವ   ʻʻಕೋವಿಡ್‌ -೧೯ʼʼ ಸಾಂಕ್ರಾಮಿಕವನ್ನು,  ಮಾನವಕುಲಕ್ಕೆ  ಇದೊಂದು  ಶಾಪವೋ  ಶಿಕ್ಷೆಯೋ  ಅಥವಾ  ಪಾಠವೋ  ಎಂಬುದೂ  ಅರಿವಾಗದ  ವಿಚಿತ್ರ  ಸನ್ನಿವೇಶ  ನಮಗೆದುರಾಗಿದೆ.

     ಅದೆಷ್ಟು  ಆಪ್ತರು, ಕಲಾವಿದರು,  ಸಾಹಿತಿಗಳು, ಉದ್ಯಮಿಗಳು, ಮತ್ತು  ಮುಗ್ಧ  ಶ್ರೀಸಾಮಾನ್ಯರನ್ನು  ನಲುಗಿಸಿ,  ನುರಿದು  ನಮ್ಮಿಂದ  ದೂರವಾಗಿಸಿದ     ರೋಗ   ಒಂದು  ಶತಮಾನದ  ಎಲ್ಲ  ತಲೆಮಾರುಗಳಿಗೆ  ಆಘಾತ  ನೀಡಿದೆ.   ಯಾರೋ  ಎಂದೋ  ಹೇಳಿದ   ಮೈಲಿ, ಮಲೇರಿಯಾ  ಪ್ಲೇಗ್‌  ಮುಂತಾದ  ಸಾಂಕ್ರಾಮಿಕ  ರೋಗಗಳು  ಸೃಷ್ಟಿಸಿದ್ದ  ಭಯಾನಕ  ಸಂಗತಿಗಳು  ನಮಗೆ  ಕೇವಲ  ಚರಿತ್ರೆಯಾಗಿತ್ತು.  ಯಾವರೋಗವೇ  ಬಂದರೂ  ಹಣವೊಂದಿದ್ದರೆ  ಗೆಲ್ಲಬಹುದೆಂಬ  ಅತಿಭರವಸೆ  ನಮ್ಮ  ತಲೆಗೇರಿತ್ತು.  ಆದರೆ  ಕೋವಿಡ್‌ `` ನಾನೇರುವೆತ್ತರಕೆ  ನೀನೇರಬಲ್ಲೆಯಾ....  ನಾನಿಳಿವ  ಆಳಕ್ಕೆ  ನೀನಿಳಿಯಬಲ್ಲೆಯಾ...!!!  ಎಂಬ  ಮಹತ್ತರ  ಸವಾಲನ್ನು  ಜಗತ್ತಿನೆದುರು  ಮಂಡಿಸಿದಾಗ   ಮನುಷ್ಯನ  ಅಹಮಿನ  ಭದ್ರಕೋಟೆ  ನುಚ್ಚುನೂರಾಯಿತು.  ಸಾವು  ನೋವನ್ನು  ಕಣ್ಣಾರೆ  ಕಂಡು  ಅರಗಿಸಿಕೊಳ್ಳಲೇ  ಬೇಕಾದ  ಸ್ಥಿತಿಯನ್ನು  ಸೃಷ್ಟಿಸಿತು.

     ಇತ್ತೀಚಿನ ತಲೆಮಾರು ಕನಸಿನಲ್ಲೂ ಎಣಿಸಿರದ  ಕೋವಿಡ್‌ ನಂಥ ನಿಗೂಢ ಸಾಂಕ್ರಾಮಿಕದ ಅನಿರೀಕ್ಷಿತ ಆಕ್ರಮಣದ ಆಘಾತ ಮೂಡಿಸಿದ ತೀವ್ರ ತಲ್ಲಣ ಮತ್ತು ಗ್ರಹಬಂಧನಗಳು ಕಾಣೆಯಾಗಿದ್ದ ಅದೆಷ್ಟೋ ಅಮೂಲ್ಯ ಕೃತಿಗಳನ್ನು ಬೆಳಕಿಗೆ ತಂದಿತು. ಸದ್ಯ ಸೃಷ್ಟಿಯಾದ ಕೋವಿಡ್‌ ತಲ್ಲಣ, ಇತಿಹಾಸವನ್ನು ಮತ್ತೆ ಧ್ಯಾನಿಸುವ ಅನಿವಾರ್ಯತೆಯನ್ನು ಎದುರಾಗಿಸಿತು.    ೧೯೪೭ ರಲ್ಲಿಯೇ  ಪ್ರಕಟವಾದರೂ  ಈವರೆಗೂ  ಪ್ರಸಿದ್ಧಿಪಡೆಯದ  ಸುಪ್ರಸಿದ್ಧ  ಫ್ರೆಂಚ್‌  ಲೇಖಕ  ಅಲ್ಬರ್ಟ  ಕಾಮೂ  ರವರ ʻʻ ದಿ‌ ಪ್ಲೇಗ್ʼʼ  ಮಹಾಕಾದಂಬರಿಯನ್ನು  ಇತ್ತೀಚೆಗೆ  ಲೇಖಕ  ಎಚ್ಎಸ್‌ ರಾಘವೇಂದ್ರ ರಾವ್‌  ಕನ್ನಡಕ್ಕೆ  ಅನುವಾದಿಸಿದ್ದಾರೆ.  ಕಳೆದ  ಎಪ್ಪತ್ತೈದು  ವರ್ಷಗಳಿಂದ  ಕಣ್ಮರೆಯಾಗಿದ್ದ    ಕೃತಿ  ಕಳೆದ  ವರ್ಷದ  ಕೋವಿಡ್‌ ೧೯  ಸಾಂಕ್ರಾಮಿಕದ  ಭಯಾನಕ  ಪ್ರವೇಶದಿಂದ  ಮತ್ತೆ  ಜಗತ್ತಿನ  ಹೆಚ್ಚಿನೆಲ್ಲ  ಭಾಷೆಗಳಿಗೆ  ಅನುವಾದಗೊಳ್ಳುತ್ತ,  ಸಂಚಲನ  ಮೂಡಿಸಿದೆ.  ಕೊರೋನಾ  ಸೃಷ್ಟಿಸಿದ  ಅಯೋಮಯತೆಯ   ತಲ್ಲಣದ  ಕ್ಷಣಕ್ಕೆ  ಸಂವಾದಿಯಾಗಿ  ಪ್ಲೇಗ  ಕಾದಂಬರಿ  ಆಗಮಿಸಿ,  ಕುತೂಹಲ  ಮೂಡಿಸಿದೆ.

    ಕಳೆದ  ವರ್ಷವೆಲ್ಲ   ಸಾಕಷ್ಟು  ಲೇಖಕರು, ಪ್ಲೇಗ  ಕಾದಂಬರಿಯನ್ನು  ಉದಹರಿಸುತ್ತಲೇ  ಕೊರೋನಾ  ಅನುಭವಗಳನ್ನು  ಅಭಿವ್ಯಕ್ತಿಸುತ್ತಿದ್ದರು.  ಇತ್ತೀಚಿನ  ಹಲವು ತಲೆಮಾರಿಗೆ   ಪ್ಲೇಗ್‌  ಮೈಲಿ  ಮಲೇರಿಯಾದಂಥ  ಜಾಗತಿಕ  ಸಾಂಕ್ರಾಮಿಕಗಳ  ಕ್ರೂರ  ಅನುಭವಗಳೇ  ಆಗಿರಲಿಲ್ಲ.  ವಿಜ್ಞಾನ  ತಂತ್ರಜ್ಞಾನ,  ಕೈಗಾರಿಕಾ  ಕ್ರಾಂತಿಗಳೆಲ್ಲ  ಮನುಷ್ಯ ಪ್ರಪಂಚವನ್ನು, ಸುಸ್ಥಿರತೆಯ  ನೆಲೆಗಟ್ಟಿನಲ್ಲಿ  ಮೈಮರೆಯುವಂತೇ  ಮಾಡಿತ್ತು.  ಮಹಾರೋಗಗಳೆಲ್ಲ,  ಲಸಿಕೆ, ಮತ್ತು  ಔಷಧಗಳ  ಪರಿಣಾಮಕಾರಿ  ಅನ್ವೇಷಣೆಗಳ  ರಕ್ಷಣೆಯಲ್ಲಿ,  ಕಾಣದಂತೇ  ಮಾಯವಾಗಿತ್ತು.  ಏಕಾಏಕೀ  ಧುತ್‌  ಎಂದು  ಕೋವಿಡ್‌ ಕ್ರೂರವಾಗಿ  ಆಕ್ರಮಿಸಿದಾಗ  ಜಗತ್ತು  ಹೈರಾಣುಗೊಂಡಿತ್ತು.   ಶತಮಾನದಂಚಿನಲ್ಲಿರುವ  ಕೆಲವೇ  ಕೆಲವು  ಹಿರಿಯ ಜೀವಗಳಿಗೆ  ಇಂಥ  ಸಾಂಕ್ರಾಮಿಕಗಳ  ಅನುಭವಗಳಿದ್ದರೂ  ನಂತರದ  ತಲೆಮಾರು    ಹಿರಿಯರ  ಅನುಭವಗಳಿಗೆ  ಕಿವಿಕೊಡುವ  ವ್ಯವಧಾನವನ್ನು  ಕಳೆದುಕೊಂಡಿದ್ದರು.   ಕೊರೋನಾ  ಮತ್ತೆ  ಮನುಷ್ಯಬದುಕಿನ, ಅವನ  ಜ್ಞಾನದ  ಆವಿಷ್ಕಾರದ, ಮಿತಿಯನ್ನು  ಮತ್ತೆ  ನೆನಪಿಸಲು  ಪ್ರಾರಂಭಿಸಿದಾಗ,  ಸಹಜವಾಗಿ ಜಗತ್ತು ದಿಗ್ಭೃಮೆಗೆ ಈಡಾಯಿತು.  

   ಔಷಧೀಯ  ಜಗತ್ತು   ಸಾಂಕ್ರಾಮಿಕದೆದುರು  ಸೋತು  ತಲೆತಗ್ಗಿಸುವಂತಾದುದು  ಕಟುವಾಸ್ತವ.  ಇಂಥ  ಸಂದರ್ಭವೇ   ಹಳೆಯ  ಕೃತಿ  ಪ್ಲೇಗ್‌  ಕಾದಂಬರಿಗೆ  ಶರಣಾಗುವಂಥ  ಸ್ಥಿತಿ  ನಿರ್ಮಾಣವಾಗಿದ್ದು. 

    ಪ್ರಾನ್ಸ  ದೇಶದ   ಒಂದು  ಕಾಲ್ಪನಿಕ ಬಂದರು ನಗರ  ʻʻಒರಾನ್‌ʼʼ  ನಲ್ಲಿ, ಒಂದುದಿನ  ಸತ್ತ ಇಲಿಯೊಂದು  ಮನೆಬಾಗಿಲಿನಲ್ಲಿ, ಬಿದ್ದಿರುತ್ತದೆ.  ನೋಡಿದಾತ  ಇದು  ಯಾರದ್ದೋ  ದುಷ್ಕೃತ್ಯ.  ಎಂದು  ಸತ್ತ  ಇಲಿಯನ್ನು  ತೆಗೆದು  ದೂರ  ಬಿಸಾಡುತ್ತಾನೆ.  ತಿರುಗಿ  ಮಹಡಿಯೇರುವಾಗ  ಮೆಟ್ಟಿಲಲ್ಲಿ  ಮತ್ತೊಂದು  ಸತ್ತ  ಇಲಿ  ಕಾಣುತ್ತದೆ. ಯಾರೋ  ತನಗಾಗದವರು   ನಡೆಸುತ್ತಿರುವ  ಕೀಟಲೆ  ಎಂದು  ತಿಳಿಯುತ್ತಾನೆ.  ಆದರೆ  ಮರುದಿನ  ಎಲ್ಲರ  ಮನೆಯ  ಕತೆಯೂ  ಅದೇ  ಆದಾಗ  ಜನ  ಅಚ್ಚರಿಗೊಳಗಾಗುತ್ತಾರೆ.  ಕೃತಿಯ  ಪ್ರಧಾನ  ಪಾತ್ರ  ಡಾ||  ಬರ್ನಾಡ್‌  ರಿಯೂ,  ಇಡೀ  ಕಾದಂಬರಿಯಲ್ಲಿ  ಹಾಸುಹೊಕ್ಕಾಗಿ,  ನಗರದ  ತಲ್ಲಣ, ಭಯ, ತಿಕ್ಕಲುತನ,  ಸಾವು ನೋವುಗಳ  ಪ್ರತ್ಯಕ್ಷದರ್ಶಿಯಾಗಿ  ರೋಗದ  ಬಹುಭೀಕರ  ಪರಿಣಾಮವನ್ನು, ದರ್ಶಿಸುತ್ತಾನೆ.

     ನಗರದಲ್ಲೆಲ್ಲ  ಸಾವಿರಾರು  ಇಲಿಗಳು  ಸಾಯಲು  ಪ್ರಾರಂಭಿಸಿದಾಗ  ಡಾ  ರಿಯೂ  ಮೊದಲು    ರೋಗ  ಪ್ಲೇಗ್‌  ಎಂದು  ಗುರುತಿಸಿ, ಸರಕಾರದ  ಅಧಿಕಾರಿಗಳ  ಗಮನಕ್ಕೆ  ತಂದರೆ   ತಿರಸ್ಕರಿಸಲಾಗುತ್ತದೆ.  ಆಧಾರವಿಲ್ಲದೇ  ದೊಡ್ಡ ರೋಗದ  ಪ್ರಸ್ಥಾಪ  ತಂದು  ಜನತೆಯಲ್ಲಿ  ಭಯಬಿತ್ತಬೇಡಿ  ಎಂದು  ದಬಾಯಿಸುತ್ತಾರೆ. ಆದರೆ  ದಿನದಿಂದ  ದಿನಕ್ಕೆ  ರೋಗ ಉಲ್ಬಣಿಸಿ  ಸಾವು  ಘಟಿಸತೊಡಗಿದಾಗ, ಸರಕಾರ  ಎಚ್ಚರಗೊಳ್ಳುತ್ತದೆ.  ಇಡೀ  ನಗರದಲ್ಲಿ  ಲಾಕ್ ಡೌನ್‌  ಸಾರಲಾಗುತ್ತದೆ.  ಉಸಿರು  ಕಟ್ಟಿದಂತಾದ  ನಗರ,  ಅಸಾಧ್ಯ  ಸೆಕೆ,  ಕ್ವಾರಂಟೈನ್.‌ ಐಸೋಲೇಶನ್‌   ರೋಗಿಗಳ  ಶಿಬಿರ ಗಳಲ್ಲಿ  ಜನ  ಆತಂಕಕ್ಕೆ  ಒಳಗಾಗುತ್ತಾರೆ. 

    ಧರ್ಮಗುರುಗಳು  ಇದು  ದುಷ್ಟ  ಮಾನವನಿಗೆ  ದೇವರು  ನೀಡಿದ  ಶಿಕ್ಷೆ,  ದೇವರಿಗೆ  ಶರಣಾಗಿ  ಎಂದು  ಘೋಷಿಸಲು  ಪ್ರಾರಂಭಿಸುತ್ತಾರೆ. ರಿಯೂ  ರಂಥ  ವೈಜ್ಙಾನಿಕ  ಮನೋಭಾವದವರಲ್ಲಿ  ಸಹಜವಾಗಿ  ಪ್ರಶ್ನೆಮೂಡುತ್ತದೆ.  ದಿನ  ಕಳೆದಂತೇ  ನಿಷ್ಪಾಪದ  ಪುಟ್ಟ ಮಕ್ಕಳು, ಮುಗ್ಧ  ಜನರೂ  ಸಾಯತೊಢಗಿದಾಗ,  ಧರ್ಮಗುರುವೃಂದವೂ   ವಿಚಲಿತಗೊಳ್ಳುತ್ತದೆ.

    ಪ್ರಸ್ತುತ  ಕೃತಿ  ಪ್ಲೇಗಿನದ್ದಾದರೂ,  ಇಂದಿನ  ಕೊರೋನಾದ  ಕ್ರೂರವಾಸ್ತವವನ್ನು  ಗಾಢವಾಗಿ  ಕಣ್ಣೆದುರು  ತರುತ್ತದೆ.    ಕೃತಿಯಾನಂತರ  ಜಗತ್ತು  ಸಾಕಷ್ಟು  ಮುಂದೆಬಂದಿದೆ.  ತಂತ್ರಜ್ಙಾನ  ಸಾಕಷ್ಟು  ಬೆಳೆದಿದೆ.  ಆದರೆ  ಮಾನವ ಪ್ರವೃತ್ತಿ  ಹಾಗೆಯೇ  ಇದೆ.  ಅಧಿಕಾರಿಗಳ, ವ್ಯಾಪಾರಿಗಳ  ಜನಪ್ರತಿನಿಧಿಗಳ,ಮತ್ತು ವೈದ್ಯರುಗಳ, ಭೃಷ್ಠತೆ, ಪಕ್ಷಪಾತ, ಭೂಗತಲೋಕ,ದ  ದುಷ್ಟ  ಚಟುವಟಿಕೆಗಳು  ಗರಿಗೆದರುತ್ತವೆ.  ಲಸಿಕೆಯ  ಅನ್ವೇಷಣೆಯ  ಪ್ರಯತ್ನಸಾಗಿದರೂ  ಜನರೇ  ಸಂಶಯ  ವ್ಯಕ್ತಪಡಿಸುತ್ತಾರೆ.

     ದೇವರ  ಶಾಪ  ಈ ರೋಗ  ಎನ್ನುವ  ಧರ್ಮಗುರುವಿಗೇ  ಪ್ಲೇಗ್‌  ಆಕ್ರಮಿಸಿ  ಸಾಯುತ್ತಾನೆ.  ಮತ್ತೊಬ್ಬ  ಪಾದ್ರಿ  ರೋಗಕ್ಕೆ  ಹೆದರಿ  ಚರ್ಚಿನ  ಸುತ್ತಲೂ  ಗೋಡೆ  ಕಟ್ಟಿ  ಯಾರೂ  ಬರದಂತೇ  ಪ್ರತಿಬಂಧಿಸುತ್ತಾನೆ. ಜನ ರೊಚ್ಚಿಗೆದ್ದು   ಚರ್ಚಿನ  ಗೋಡೆಯೊಳಗೆ  ರೋಗಪೀಡಿತ  ಹೆಣವನ್ನು  ಎಸೆಯುತ್ತಾರೆ.

    ಸಾಮಾನ್ಯ  ಜನ  ರೋಗಭೀತಿ, ಏಕಾಂತದ ಶಿಕ್ಷೆ,  ದೂರದ  ಸಂಬಂಧಿಗಳಿಂದ  ಅಗಲಿರುವ  ಸ್ಥಿತಿ,  ಆಹಾರಸಾಮಗ್ರಿಯ  ಕೊರತೆ,  ಆರೈಕೆ  ಉಪಚಾರದ  ಕೊರತೆಯಿಂದ   ತಲ್ಲಣಕ್ಕೊಳಗಾಗುತ್ತಾರೆ.  ಕಣ್ಣೆದುರೆ   ಆಪ್ತರನ್ನು  ಕಳೆದು  ಕೊಂಡು  ಗೋಳಾಡುವ  ಸನ್ನಿವೇಶ  ಸೃಷ್ಟಿಯಾಗುತ್ತದೆ.  ಗಂಡ  ಹೆಂಡತಿಯಿಂದ, ಮಗು  ತಾಯಿಯಿಂದ,  ಪ್ರೇಮಿ  ಪ್ರಿಯತಮೆಯಿಂದ   ಸ್ನೇಹಿತರು  ಬಂಧುಗಳಿಂದ  ದೂರವಾಗುತ್ತಿರುವ  ದಾರುಣ  ಸನ್ನಿವೇಶ  ಸೃಷ್ಟಿಯಾಗುತ್ತದೆ.

     ಕಾದಂಬರಿ  ಇಂಥ  ಭೌತಿಕ  ವಿವರಗಳನ್ನು  ನೀಡಿ  ವಿರಮಿಸುವುದಿಲ್ಲ.  ಮನುಷ್ಯನ  ಅಂತರಂಗವನ್ನು  ಶೋಧಿಸಲು  ತೊಡಗುತ್ತದೆ.  ಧರ್ಮ  ದೇವರುಗಳನ್ನು  ಹುಟ್ಟಿನಿಂದಲೇ  ನಂಬಿ  ಬದುಕುವ, ಧರ್ಮದ  ನಿಯಮಗಳನ್ನು  ಪ್ರಶ್ನಿಸದೇ  ಪಾಲಿಸುತ್ತಿದ್ದ, ಮನುಷ್ಯ  ಇದೀಗ  ಪ್ರಶ್ನಿಸಲು  ತೊಡಗುತ್ತಾನೆ.  ಧರ್ಮ  ಮತ್ತು  ವಿಜ್ಞಾನ  ಎರಡೂ  ಅಗ್ನಿದಿವ್ಯಕ್ಕೆ  ಒಳಗಾಗುತ್ತದೆ.  ಅವೆರಡರ  ಬಗೆಗಿನ  ನಂಬಿಗೆಯ  ತಳವೂ  ಅಲುಗಾಡುತ್ತದೆ.

      ಕ್ರಮೇಣ ರೋಗದ ಬಗೆಗಿನ  ನಿರ್ಲಕ್ಷ,  ಅನುಮಾನ  ಪ್ರತಿಭಟನೆ, ಹಂತವನ್ನು  ದಾಟಿ  ವಿಷಣ್ಣತೆಯಿಂದ  ರೋಗಕ್ಕೆ  ಶರಣಾಗುವ  ನಿಸ್ಸಹಾಯಕತೆ  ವ್ಯಾಪಿಸುತ್ತದೆ.  ಸಾವನ್ನು  ಎದುರಿಸುವ  ಕೆಚ್ಚು  ಮೂಡಲು ಪ್ರಾರಂಭಗೊಳ್ಳುತ್ತದೆ. ಈ  ನಡುವೆ  ಕರುಣೆ  ಪ್ರೀತಿ  ಸೇವಾಭಾವ  ಹೊಂದಿರುವ  ಡಾ|| ರಿಯೂನಂಥ  ಸಾಕಷ್ಟು  ಜನರು  ಇದ್ದೇ  ಇರುತ್ತಾರೆ.  ಎಲ್ಲ  ಅಪಾಯಗಳ  ನಡುವೆಯೂ  ನಿಸ್ವಾರ್ಥರಾಗಿ  ಸೇವೆ  ಸಲ್ಲಿಸುತ್ತಾರೆ.

     ಒಂದು  ದಿನ  ರೋಗ  ತಹಬಂದಿಗೆ  ಬಂದಾಗ  ಜನ  ಸಂತೋಷದಿಂದ  ಕುಣಿದಾಡುತ್ತಾರೆ.  ಅಂಥ  ದೃಶ್ಯಕಂಡ  ಕೃತಿಯ  ನಿರೂಪಕ  ಕೊನೆಯ  ಪ್ಯಾರಾದಲ್ಲಿ  ಉದ್ಗರಿಸುತ್ತಾನೆ.

    ʻʻನಿಜವಾಗಿಯೂ  ಊರಿನ ಕಡೆಯಿಂದ  ಹರಿದು  ಬರುತ್ತಿದ್ದ  ಹರ್ಷೋದ್ಗಾರವನ್ನು  ಕೇಳುವಾಗಲೂ  ಅಂಥ  ಸಂತೋಷವು  ಯಾವಾಗಲೂ  ಅಪಾಯದಲ್ಲಿದೆಯೆಂದು  ರಿಯೂ  ನೆನಪು  ಮಾಡಿಕೊಂಡರು. ಸಂತೋಷದಲ್ಲಿ  ಮುಳುಗಿರುವ ಈ  ಜನಸಮುದಾಯಕ್ಕೆ  ಸತ್ಯ  ಗೊತ್ತಿರಲಿಲ್ಲ. ಪುಸ್ತಕಗಳನ್ನು  ಓದಿದ್ದರೆ  ತಿಳಿಯುತ್ತಿತ್ತು.  ಪ್ಲೇಗನ್ನು  ತರುವ  ಜೀವಾಣುಗಳು  ಎಂದಿಗೂ  ಸಂಪೂರ್ಣವಾಗಿ  ಸಾಯುವುದಿಲ್ಲ.  ಮಾಯವಾಗುವುದಿಲ್ಲ. ಅದು  ಪೀಠೋಪಕರಣದಲ್ಲಿ,  ಬಟ್ಟೆಯ  ಕಪಾಟುಗಳಲ್ಲಿ, ಹತ್ತಾರು ವರ್ಷ ಬಚ್ಚಿಟ್ಟುಕೊಂಡಿರ ಬಹುದು. ಮಲಗುವ ಕೋಣೆಯಲ್ಲಿ, ಉಗ್ರಾಣದಲ್ಲಿ, ಬಟ್ಟೆಬರೆಗಳಲ್ಲಿ, ಪುಸ್ತಕ  ಪತ್ರಿಕೆಗಳಲ್ಲಿ, ತಾಳ್ಮೆಯಿಂದ  ಸಮಯ ಕಾಯುತ್ತಿರುತ್ತದೆ.  ಮತ್ತು  ಆದಿನ  ಬಂದೇ  ಬರಬಹುದು. ಅಂದು  ಅದು  ಮನುಷ್ಯನಿಗೆ  ಪಾಠಕಲಿಸಲೆಂದೋ  ಅವನನ್ನು  ನಾಶಮಾಡಲೆಂದೋ ತನ್ನ  ಇಲಿಗಳನ್ನು  ಎಚ್ಚರಿಸಿ  ಸಂತೋಷವಾಗಿರುವ  ಯಾವುದೋ  ಊರಿನಲ್ಲಿ  ಸಾಯಲೆಂದು  ಕಳಿಸಿ  ಕೊಡುತ್ತದೆ. ʼʼ

                           ಪ್ಲೇಗ್,,,   ಅಲ್ಬರ್ಟ   ಕಾಮು  ರವರ   ಕೃತಿ 

                       ಕನ್ನಡಕ್ಕೆ-  ಎಚ್. ಎಸ್.‌  ರಾಘವೇಂದ್ರರಾವ್.‌

                       ಪುಟ-  ೩೬೫-೦೦  ಬೆಲೆ-  ೩೮೦-೦೦

                       ಪ್ರಕಾಶನ -  ಕನ್ನಡ  ಪುಸ್ತಕ  ಪ್ರಾಧಿಕಾರ.  ನಂ  ೨.  ಮುಡಾ  ಕಾಂಪ್ಲೆಕ್ಸ.

                      ಐ.  ಬ್ಲಾಕ್.‌ ರಾಮಕೃಷ್ಣ  ನಗರ.    ಮೈಸೂರು. 570022 

                                                        .ಸುಬ್ರಾಯ  ಮತ್ತೀಹಳ್ಳಿ. 

 

No comments:

Post a Comment