Tuesday 26 September 2023

ಕಥಾ ಕಮ್ಮಟಕ್ಕೆ ಶುಭಾಶಯ.

 

       ಕೇಂದ್ರ  ಕನ್ನಡಸಾಹಿತ್ಯ  ವೇದಿಕೆಯ  ಸರ್ವ  ಸಂಘಟಕರೇ,,,   ಶಿರಸಿ  ಘಟಕದ  ಎಲ್ಲ  ಗೆಳೆಯರೇ,

 ಕಥಾಸ್ಪರ್ಧೆಯಲ್ಲಿ  ಭಾಗವಹಿಸಿರುವ   ಕಥನ ಕಲಾವಿದರೇ,    ತಮಗೆಲ್ಲರಿಗೂ   ನಮಸ್ಕಾರ.

 ನಾನೂ  ಒಬ್ಬ  ಕಥನ  ಕುತೂಹಲಿ.               

ಮಾತಿನ  ಸೃಜನಶೀಲ  ವಿಸ್ತರಣೆಯೇ  ಕತೆ. ಕಾವ್ಯದ  ಮೂಲ  ಕರುಣೆಯಾದರೆ,  ಕತೆಯ  ಮೂಲ  ವ್ಯಥೆ.    ಕತೆ  ಮತ್ತು  ಕಾವ್ಯಗಳ  ಅಂತಿಮ  ಗುರಿ  ಅನುಭವ  ಶೋಧನೆ  ಮತ್ತು  ಪ್ರೀತಿಯ  ಆರಾಧನೆ.

     ಪ್ರಜ್ಞಾಪೂರ್ಣ  ಚಟುವಟಿಕೆಯಲ್ಲಿ  ಅತ್ಯಂತ  ಆಪ್ತವಾದ  ಕತೆಗಾರಿಕೆ, ಜಗತ್ತಿನಲ್ಲಿ  ಅತ್ಯಂತ  ಜನಪ್ರಿಯವಾದುದು.    ಎಲ್ಲ  ಕಾವ್ಯಗಳೂ  ಮಾನವನ  ಸುಖ  ದುಃಖ, ನೋವು  ತಲ್ಲಣ, ಶಕ್ತಿ  ದೌರ್ಬಲ್ಯಗಳ  ಕತೆಯೇ  ಆಗಿದೆ.     ಶ್ರೇಷ್ಠ  ಕತೆ, ಶ್ರೇಷ್ಠ  ಗದ್ಯ  ಕಾವ್ಯವೇ  ಆಗುತ್ತದೆ.   

       ಸಣ್ಣ  ಕತೆಯೆಂದರೆ  ಅದೊಂದು  ಸಾಂತ್ವನ.  ಅದೊಂದು  ಭರವಸೆ.  ಸ್ನೇಹಧಾರೆ.  ನವಿರು  ಭಾವಗಳ  ನಂದನ.  ಮಿತ ಮಾತು, ಸರಳ ನಿರೂಪಣೆ, ಸೂಕ್ಷ್ಮ ವಿವರಣೆ  ಕಾವ್ಯಾತ್ಮಕ  ನುಡಿಗಟ್ಟುಗಳಲ್ಲಿ  ಮಿಂಚುವ   ಸಣ್ಣ  ಕಥನ  ಮಾಧ್ಯಮ,   ಕೇವಲ  ಮಾನವೀಯ  ಮೌಲ್ಯಗಳ  ಧ್ಯಾನದಿಂದ  ಮಾತ್ರ   ಸಿದ್ಧಿಯಾಗಬಹುದಾಗಿದೆ.  ಮಾನವ  ಜಗತ್ತಿನ  ಅನುಭವ  ಸಾಗರವನ್ನು  ಮುಷ್ಠಿಯಲ್ಲಿ  ಹಿಡಿದಿಡುವ  ಅಸಾಮಾನ್ಯ  ಕಲೆಗಾರಿಕೆಯಿದು.  ಭಾಷೆ  ವಾಚ್ಯವಾಗದೇ  ಸೂಕ್ಷ್ಮವಾದಷ್ಟೂ  ಅದಕ್ಕೆ  ಸ್ಫೋಟಕ  ಗುಣ ವೊದಗುತ್ತದೆ.   ಒಂದೇ  ಒಂದು  ಗಾಢ  ಅನುಭವದ  ಮಿಂಚು,  ಇಡೀ ಮೈಯಲ್ಲಿ  ಬೆರಗಿನ, ಅಲೆ   ಹರಿದಾಡಿಸುತ್ತದೆ.   ಹೊಚ್ಚ ಹೊಸ  ಅನುಭವ  ಪ್ರಪಂಚಕ್ಕೆ  ಕೊಂಡೊಯ್ಯುತ್ತದೆ.

       ನಾವೆಲ್ಲ  ಸಂಘಜೀವಿಗಳು.  ಒಂಟಿತನವೆಂಬುದು  ಘೋರ ಶಿಕ್ಷೆ.  ಭಾವಸರಪಣಿಯ  ಒಂದೊಂದು  ಕೊಂಡಿಯಾದ  ನಮ್ಮನ್ನು  ಒಗ್ಗೂಡಿಸುವುದೇ  ಸ್ನೇಹವೆಂಬ  ಸಂಜೀವಿನಿ.  ಸ್ನೇಹವೆಂದರೆ  ಅಂಟು  ಎಂದೇ  ಅರ್ಥ.  ಸಣ್ಣ  ಕತೆಗಳು  ಕಾಂತಾಸಮ್ಮಿತದಲ್ಲಿ,  ಮಾತೃಸಮ್ಮಿತದಲ್ಲಿ,  ಹೊನಲಾಗಿ  ಹರಿಯುವಾಗ,  ನಮ್ಮೊಳಗಿನ   ಭಾವಶಕ್ತಿಯನ್ನು  ಉದ್ದೀಪಿಸುತ್ತದೆ.  ಎಲ್ಲ  ಕೃತಕ  ತಾರತಮ್ಯಗಳನ್ನು  ಕಿತ್ತೆಸೆದು,  ಸ್ನೇಹ ಸಂವೇದನೆಯಲ್ಲಿ  ಒಂದಾಗಿಸುತ್ತದೆ. 

      ಇಂದಿನ  ಯಾಂತ್ರಿಕ  ವಾಸ್ತವ,  ತಾಂತ್ರಿಕ  ಜಗತ್ತು,  ಭಾವನೆಗಳನ್ನು  ಕೊಲ್ಲುತ್ತಿದೆ.  ಬುದ್ಧಿಗೆ  ಅಪಾಯಕಾರೀ  ವೇಗ  ರಭಸಗಳನ್ನು  ನೀಡುತ್ತಿದೆ.  ಹೃದಯ  ಹೃದಯಗಳ  ನಡುವಣ  ಅಂಟು  ಆರುತ್ತಿದೆ.  ಯಂತ್ರದ  ಜೊತೆಗಿನ  ಅತಿ  ಒಡನಾಟ,  ಭಾವನೆಗಳ  ಹೂಗಳನ್ನು  ಹೊಸಕುತ್ತಿದೆ. 

       ಅತಿಮಾತು,  ಅತಿಗದ್ದಲಗಳ  ನಡುವೆ   ಮೌನ  ಛಿದ್ರವಾಗುತ್ತಿದೆ.  ಮೌನದಲ್ಲರಳುವ  ಕಲೆಗಾರಿಕೆ,  ಕತೆಗಾರಿಕೆ  ಸೋಲುತ್ತಿದೆ.   ಸಮಾನ ಮನಸ್ಕರಾದ  ನಮ್ಮ  ನಿಮ್ಮ  ನಡುವೆ   ಯಾಂತ್ರಿಕ  ಗೋಡೆಗಳು  ಸೃಷ್ಟಿಯಾಗುತ್ತಿವೆ.  ಮಾಯೆಯ,  ಮೋಹದ  ಪ್ರವಾಹದಲ್ಲಿ   ನಾವೂ  ಕೊಚ್ಚಿಹೋಗುವ  ಮೊದಲು,  ಎಚ್ಚರಗೊಳ್ಳಬೇಕಿದೆ.   ನಮ್ಮ  ಕೈಯಲ್ಲಿರುವುದು  ಕೇವಲ  ಅಕ್ಷರ.  ಅದೇ  ನಮ್ಮ  ಅಸ್ತ್ರ.  ಅದು  ಮೊದಲು  ನಮ್ಮೊಳಗನ್ನು  ಶುದ್ಧಿಗೈಯ್ಯಬೇಕು.   ಗೆಳೆತನದ  ದೀಪಬೆಳಗಿಸಿ   ಕ್ರೂರವಾಸ್ತವಕ್ಕೆ  ಬೆಳಕಾಗಬೇಕು. 

    ಕನ್ನಡದ ಪ್ರ  ಪ್ರಥಮ ಆಧುನಿಕ  ಸಣ್ಣ ಕತೆ  ʻʻನನ್ನ  ಚಿಕ್ಕತಾಯಿʼʼ ಯನ್ನು  ಬರೆದ  ಪಂ,ಮಂಗೇಶರಾಯರಿಂದ  ಪ್ರಾರಂಭಗೊಂಡ  ಪ್ರಸ್ತುತ  ಕಥನಕಲೆ  ಶತಮಾನ  ದಾಟಿದೆ.    ಕನ್ನಡದ  ಆಸ್ತಿ   ಮಾಸ್ತಿಯವರನ್ನು  ನಾವು    ಶುಭಸಂದರ್ಭದಲ್ಲಿ  ಸ್ಮರಿಸಲೇ  ಬೇಕು.  ಅವರ ಮಾತು  ಮಾತೆಯಾಗುವ,  ಮಾತು  ಮಂತ್ರವಾಗುವ,  ಮಾತು  ಕುಶಲ  ಕಲೆಯಾಗುವ,  ಮೌಲ್ಯವಾಗುವ  ಪವಾಡವನ್ನು  ಗಮನಿಸದೇ  ಹೋದರೆ  ಅಪರಾಧವಾದೀತು.  ಕನ್ನಡ  ಕತೆಗಳು  ವಿಶ್ವಕತೆಯಾಗುವ  ಅಚ್ಚರಿ   ನಮ್ಮ  ಎಲ್ಲ  ಹಿರಿಯ  ಕತೆಗಾರರಲ್ಲಿ  ಬೆರೆತಿರುವುದನ್ನು,  ನಾವು  ಗಮನಿಸಲೇ  ಬೇಕು.

     ʻʻಇಬ್ಬರಿದ್ದರೆ  ಸಾಕು,  ಮಾತು ಹುಟ್ಟುತ್ತದೆ.  ಕತೆ  ಕಟ್ಟಿಕೊಳ್ಳುತ್ತದೆ. ಮಾತಿಗೆ  ಹೇಗೆ  ವಸ್ತು ಬೇಡವೋ,  ಹಾಗೆಯೇ  ಕತೆಗೂ  ಕೂಡಾ. ಹೇಳುವವನ  ಆಸಕ್ತಿ,  ಕೇಳುವವನ  ಕುತೂಹಲ  ಇದ್ದರೆ  ಸಾಕು. ತನ್ನಂತಾನೇ  ಕತೆ  ಜೀವಪಡೆಯುತ್ತದೆ.  ಕತೆಗೆ  ಕಾಲಿಲ್ಲ.  ಕಾಲದ  ನಿರ್ಬಂಧವೂ  ಇಲ್ಲ.ʼʼ  ಇದು ವಿಮರ್ಶಕ  ಜಿ.ಪಿ. ಬಸವರಾಜರ  ನುಡಿ.

      ಹೇಳುವ  ಕತೆ  ಕೆಲವರಿಗೇ  ಆದರೆ,  ಅಕ್ಷರದಲ್ಲಿ  ರೂಪುಗೊಳ್ಳುವ ಕತೆಗೆ  ಪ್ರದೇಶದ  ಮಿತಿಯಿಲ್ಲ.  ಭಾಷೆ, ದೇಶವನ್ನೂ  ದಾಟಿ,  ಅಸಂಖ್ಯ ಜನರ  ಮನತಣಿಸಬಹುದು. 

     ಇಲ್ಲಿ  ಒಗ್ಗೂಡಿರುವ  ಕತೆಗಾರರೇ  ಸಮಾನ ಮನಸ್ಕರೇ.....   ಕತೆ  ಕಟ್ಟುವುದು  ಅಂದರೆ  ಭಾಷೆಯ  ದುಂದಲ್ಲ.  ಪ್ರೀತಿ  ಬೆಸೆಯುವ  ದಂದುಗ.  ಮಾತಿಗೆ  ಮೊನಚು ನೀಡಿ,  ಭಾಷೆಯ  ಸೂಕ್ಷ್ಮಕ್ಕೆ  ಸ್ಪಂದಿಸಿ,  ರಂಜನೆಯ  ಜೊತೆಗೇ   ಆಳ  ಅನುಭವಗಳನ್ನು  ದರ್ಶಿಸುವ ,  ನುಡಿಯ ಘನತೆಯನ್ನು  ಹೆಚ್ಚಿಸುವ ಕಾಯಕ.  ಸುತ್ತಲ  ಸಮುದಾಯದ  ಮಾನವ  ಮನಸ್ಸಿನ  ವೈವಿಧ್ಯತೆ,  ಜೀವನದ  ವಿಚಿತ್ರ  ತಿರುವುಗಳು,  ಬುದ್ಧಿ  ಭಾವಗಳ  ಸಂಘರ್ಷ,  ಬದುಕಿನ  ಶೋಷಣೆ, ತಲ್ಲಣಗಳ  ಬಗೆಗೆ   ಸಂವೇದನಾಶೀಲ  ಮನಸ್ಸೊಂದು  ಕಲೆಯ  ಪಥದಲ್ಲಿ  ಅಭಿವ್ಯಕ್ತಿಸಿದ   ಪುಟ್ಟ  ಪುಟ್ಟ  ದಾಖಲೆಯೇ  ಕತೆಯಾಗಿ  ಸೃಷ್ಟಿಗೊಳ್ಳುವ  ಪರಿಯಿದೆಯಲ್ಲ,  ಅದೇ  ಒಂದು  ಬೆರಗು.

             ಕಥನ ಕ್ಷಣ,  ಹೊಸ  ಹುಟ್ಟಿನ  ನಾಂದಿಯಾಗಲಿ.  ಕನ್ನಡದ  ಸರ್ವಶ್ರೇಷ್ಠ  ಕತೆಗಳ  ಸಾಲಿಗೆ  ಇವುಗಳೂ  ಸೇರಲಿ.   ನಿಮ್ಮೆಲ್ಲರ  ರಚನೆಗಳಲ್ಲಿಯ   ಘಟನೆ  ಘಟನೆ  ಗಳ  ನಡುವೆ,  ವಿವರ  ವರ್ಣನೆಗಳ  ನಡುವೆ  ಏರ್ಪಡುವ  ವಿಚಾರ  ಭಾವಗಳ  ಮುಖಾಮುಖಿಗಳು,  ಅರ್ಥಪೂರ್ಣತೆ  ಸಾಧಿಸಲಿ  ಎಂದು  ಈಮೂಲಕ  ಆತ್ಮೀಯವಾಗಿ   ಹಾರೈಸುತ್ತಿದ್ದೇನೆ. 

          ಹಾರ್ದಿಕ  ಶುಭಾಶಯಗಳೊಂದಿಗೆ,    ತಮ್ಮವ    ಸುಬ್ರಾಯ   ಮತ್ತೀಹಳ್ಳಿ. .

ಜನವರಿ  ೮-೯-೧೦, ೨೦೨೧ ಶಿರಸಿ.

No comments:

Post a Comment