Tuesday 26 September 2023

ದತ್ತಜ್ಜ (ಸಣ್ಣ ಕತೆ )

 

                      ʻʻನನ್ನ  ದೇಹದ  ಬೂದಿ  ಗಾಳಿಯಲಿ  ತೂರಿಬಿಡಿ / 

                  ಹೋಗಿ  ಬೀಳಲಿ  ಭತ್ತ  ಬೆಳೆಯುವಲ್ಲಿʼʼ ( ದಿನಕರ  ದೇಸಾಯಿ )

           ʻ

ʻ  ದತ್ತಜ್ಜ  ಜೀವಬಿಟ್ಟ.  ಊರವೆಲ್ಲರೂ   ಬರವಡಾʼʼ

            ರಾಮ್‌  ಮಾಣಿ  ಊರಿನ  ಕೇರಿ  ಕೇರಿ  ಬಾಗಿಲಲ್ಲಿ  ನಿಂತು  ನಿಂತು   ಕೂಗುತ್ತಾ  ಸಾಗಿದ.  ಅದು  ನಿರೀಕ್ಷಿತವೇ,  ಊರಿಗೆಲ್ಲ  ಗೊತ್ತು. ಗುಣವಾಗದ  ರೋಗ  ಅವನಿಗಂತೆ, ಆರು  ಮೂರು  ತಿಂಗಳೇ  ಅಂತೆ.  ಆಸ್ಪತ್ರೆಯವರು  ಮನೆಗೇ  ಕಳುಹಿಸಿದ್ದಾರೆ.  ಇದ್ದಷ್ಟು  ದಿನ  ಚನ್ನಾಗಿ  ನೋಡಿಕೊಳ್ಳಿ  ಎಂದು  ಹೇಳಿ  ಕಳುಹಿಸಿದ್ದಾರಂತೆ.  ಎಂಬ  ಸುದ್ದಿ  ತಿಂಗಳಿನಿಂದ  ಜನಜನಿತವಾಗಿತ್ತು.

         ಆದರೆ  ಸಮಸ್ಯೆ  ಅದಾಗಿರಲಿಲ್ಲ.  ಮೊದಲೇ  ಆಷಾಢಮಾಸ.  ಹಿಂದಿನದಿನದಿಂದಲೇ  ಮಳೆ  ಕುಂಭದ್ರೋಣವಾಗಿ  ಒಂದೇ ಸಮನೆ  ಸುರಿಯುತ್ತಿತ್ತು.  ಭಾರೀ  ಬಿರುಗಾಳಿ.  ಎತ್ತರೆತ್ತರ  ಅಡಿಕೆಮರಗಳ  ಸಾಲಿಗೆ ಸಾಲೇ  ಇನ್ನೇನು  ಬಿದ್ದೇಹೋಗುತ್ತವೆಯೇನೋ  ಅನ್ನಿಸುವಷ್ಟು  ತೂರಾಡುತ್ತಿದ್ದವು.  ಊರಿನ  ತೋಟದ ಸರುವಿನಲ್ಲಿ, ಹಲವಾರು ಮರಗಳು ಮುರಿ ಮುರಿದು  ಬೀಳುವ ಸದ್ದು ನಿರಂತರವಾಗಿ  ಕೇಳುತ್ತಿತ್ತು.  ತೋಟಕ್ಕೆ  ಇಳಿಯುವ  ಧೈರ್ಯ  ಯಾರಿಗೂ  ಭಾರದಂತ  ಸ್ಥಿತಿ.  ಸುತ್ತಲಿನ  ಹಳ್ಳ  ಹೊಳೆಗಳು  ಕೆಂಪು ನೀರಿಂದ  ತುಂಬಿಕೊಂಡು  ದಡಮೀರಿ  ಹರಿಯುತ್ತಿತ್ತು.   ರಾಮ ಮಾಣಿ  ಸುರಿಯುವ  ಮಳೆಯಲ್ಲೇ  ಕಂಬಳಿ  ಕೊಪ್ಪೆ  ಮುಚ್ಚಿಕೊಂಡು  ಅರಚುವ  ಧ್ವನಿಯಲ್ಲೇ   ಸುದ್ದಿ ಕೊಡುತ್ತಾ   ಸಾಗುತ್ತಿದ್ದ.

         ಥೋ  ದತ್ತಜ್ಜ  ಇಷ್ಟೆಲ್ಲಾ  ದಿನ  ಘಟ್ಟಿಯಾಗಿಯೇ  ಇದ್ದಿದ್ದ.  ಇನ್ನೊಂದೆರಡು  ತಿಂಗಳಾದರೂ  ಇದ್ದಿದ್ದರೆ,  ಮಳೆಗಾಲವಾದ್ರೂ  ಮುಗಿಯುತ್ತಿತ್ತು. ʻʻ  ನಮ್ನಿ  ಹುಚ್‌  ರೂಪ್ದಲ್ಲಿ  ಮಳೆ  ಸುರೀತಾ  ಇದ್ದು.  ಹ್ಯಾಂಗ್‌  ಸುಡದು....?  ಹ್ಯಾಂಗ್‌  ಹೊರದು...?   ಗುಡ್ಡಕ್ಕೆ  ಹೋಪ  ದಾರ್ಯಾದ್ರೂ  ಸರಿಯಾಗಿದ್ದ...  ಅದೂ  ಇಲ್ಲೆʼʼ   ಎಂದು  ಊರಿನ  ಜನ  ತಮ್ಮ ತಮ್ಮೊಳಗೇ  ಮಾತನಾಡಿಕೊಳ್ಳಲು  ಪ್ರಾರಂಭಿಸಿದರು.    ಕೇರಿಯ  ಹಿರೇ  ಮನುಷ್ಯ   ತಿಮ್ಮೂ ಚಿಕ್ಕಯ್ಯ  ʻʻ ಏನೇ  ಆಗ್ಲಿ  ಸಾವು  ಹೇಳದು  ನಾವ್‌  ಹೇಳ್ದಾಗ  ಬಪ್ಲೆ  ಅದೆಂಥಾ  ನಮ್ಮ  ಕೂಲಿಯಾಳ..?  ಅದು  ಬಂದಾಗ  ನಾವು  ಶರಣಾಗವು  ಅಷ್ಟೇಯಾ,,  ಯೋಳಿ  ಯೋಳಿ  ಮುಂದಿನ  ಕೆಲಸ  ಶುರುಮಾಡನ,   ಎನ್ನುತ್ತ   ಆಚೀಚೆ ಮನೆಯವರನ್ನು  ಗಡಬಡಿಸಿದ.

           ಅವನಿಗೆ  ಆಗದ  ಜನರೂ  ಬಂದು  ಬಂದು  ಆರೋಗ್ಯ  ವಿಚಾರಿಸಿ  ಹೋಗುತ್ತಿದ್ದರು.  ಹಾಗೆಂದು  ಆತ  ಸಂಪೂರ್ಣ  ಹಾಸಿಗೆ  ಹಿಡಿದಿರಲಿಲ್ಲ.  ಮನೆಯ  ಒಳಗೆ  ಆಚೆ  ಈಚೆ  ನಡೆದಾಡುತ್ತ,  ಬಂದ  ಜನರೊಂದಿಗೆ  ಮಾತನಾಡುತ್ತ  ಕಾಲ  ಕಳೆಯುತ್ತಿದ್ದ.  ಅವನ  ಹಾಸಿಗೆ  ಸುತ್ತಲೂ  ಪೇಪರು  ಪುಸ್ತಕಗಳು  ರಾಶಿ  ರಾಶಿ ಬಿದ್ದಿದ್ದವು.  ಅದರಲ್ಲಿಯೂ  ಸಮುದ್ರ  ಮತ್ತು  ಮುದುಕ  ಎಂಬ  ಯಾವುದೋ  ಇಂಗ್ಲಿಶ್‌  ಕಾದಂಬರಿಯ  ಕನ್ನಡಾನುವಾದ  ಮೇಲೆ  ಎದ್ದು  ಕಾಣುತ್ತಿತ್ತು.     ಕಾದಂಬರಿಯನ್ನ  ದತ್ತಜ್ಜ  ಕನಿಷ್ಠ  ನೂರು  ಬಾರಿ  ಓದಿದ್ದನೇನೋ,   ಅದೂ  ಯಾರಿಂದಲೋ  ಓದಲು  ತಂದಿದ್ದು.  ಕೊಟ್ಟವರೂ  ಸ್ವಲ್ಪ  ತುಂಟರೇನೋ,,! ʻʻ ಈ ಪುಸ್ತಕ  ಸುಬ್ಬಣ್ಣನಿಂದ  ಕದ್ದಿದ್ದು.ʼʼ  ಎಂದು   ಎದುರು  ಪುಟದ ಮೇಲೆಯೇ  ಬರೆದು  ಬಿಟ್ಟಿದ್ದರು.  ಒಂದಷ್ಟು  ದಿನ  ಅದಕ್ಕಾಗಿಯೇ  ದತ್ತಣ್ಣ  ಕೂಗಾಡಿದ್ದ.  ʻʻ ಏನ್‌  ಮಹಾ  ಲಕ್ಷಾಂತ್ರ  ರೂಪೈ  ಕಿಮ್ಮತ್ತಿನ  ಬಂಗಾರದ  ವಸ್ತುವೇನೋ,   ಯಾರೇನು  ತಿಂತ್ವ...?ʼʼ  ಎಂದು  ಗೊಣಗಾಡಿದರೂ  ಮರಳಿ ಕೊಡಲು  ಮನಸ್ಸಾಗದೇ   ತನ್ನಲ್ಲಿಯೇ  ಇರಿಸಿಕೊಂಡಿದ್ದ.

           ಪುಟ್ಟ ಪುಸ್ತಕದಿಂದ  ಅವನೆಷ್ಟು ಪ್ರಭಾವಿತನಾಗಿದ್ದನೆಂದರೆ ಪುಸ್ತಕದ  ಅಂಗಡಿಯಲ್ಲಿ  ಹೊಸದೊಂದು ಪುಸ್ತಕವನ್ನು  ತನಗಾಗಿ  ತರಿಸಿಕೊಡಿ  ಎಂದು  ಹೋದಾಗಲೆಲ್ಲ ದುಂಬಾಲು  ಬೀಳುತ್ತಿದ್ದ.

         ಅಷ್ಟೆಲ್ಲ  ಪ್ರಭಾವಿತನಾಗಲು  ಬಹುಷಃ  ಕೃತಿಯ  ನಾಯಕ  ಒಬ್ಬ  ಹಣ್ಣು  ಹಣ್ಣು  ಮುದುಕ.  ಭಾರೀ  ಛಲವಂತ. ಆತನೊಬ್ಬ  ಮೀನುಗಾರ.  ಸಮುದ್ರ  ದಂಡೆಯಲ್ಲಿ  ಕುಳಿತು,  ಯುವ  ಮೀನುಗಾರರೆದುರು,  ತನ್ನ  ಪ್ರಾಯಕಾಲದ  ಸಮುದ್ರಸಾಹಸವನ್ನು  ಬಣ್ಣಿಸುತ್ತಿದ್ದ.  ಯುವಕರೆಲ್ಲ  ಮುದುಕನ  ಮಾತು  ಕೇಳಿ,  ನಗುತ್ತಿದ್ದರು.  ಲೇವಡಿ ಮಾಡುತ್ತಿದ್ದರು. ಮುದುಕ ಮಾತ್ರ  ಗಂಭೀರವಾಗಿ  ತನ್ನ  ಸಾಹಸಗಳನ್ನು  ಮೆಲುಕು ಹಾಕುತ್ತ  ಖುಷಿಪಡುತ್ತಿದ್ದ.   ಮುದುಕ  ಹೇಳುವುದೆಲ್ಲ  ಬರೇ  ಪೊಳ್ಳು  ಸಂಗತಿ.  ʻʻ ಅಜ್ಜಾ  ನೀನು  ಬರೀ  ಸುಳ್ಳುಗಾರ.  ಮೀನುಗಾರನಲ್ಲವೇ  ಅಲ್ಲ. ʼʼ  ಎಂದು  ಒಂದುದಿನ  ಅಲ್ಲಿ  ಸೇರಿದ  ಯುವಕರು  ಗೇಲಿಮಾಡತೊಡಗಿದರು.  ಅಜ್ಜ  ಏಕಾಏಕಿ  ಮೌನಿಯಾದ   ಅವರ  ಗೇಲಿಗೆ  ಏನೂ  ಉತ್ತರಿಸಲಿಲ್ಲ.

       ಮಾರನೆಯ  ದಿನವೇ  ಒಂದು  ಪುಟ್ಟ  ದೋಣಿಯಲ್ಲಿ  ಸಮುದ್ರಕ್ಕೆ  ಪ್ರವೇಶಿಸಿಯೇ  ಬಿಟ್ಟ.  ಹುಟ್ಟು ಹಾಕುತ್ತ   ಸಮುದ್ರದಲ್ಲಿ   ಹತ್ತಾರು  ಮೈಲಿ  ಸಾಗಿದ.  ಅಲ್ಲಿಂದ  ಅವನ ವೃದ್ಧಾಪ್ಯದ  ಬದುಕಿನ  ನಿಜವಾದ  ಅಧ್ಯಾಯ  ಪ್ರಾರಂಭವಾಗುತ್ತದೆ.

       ತನ್ನ  ಪುಟ್ಟ ದೋಣಿಯಲ್ಲೇ  ಕುಳಿತು  ತಿಮಿಂಗಿಲವೊಂದನ್ನು  ಬೇಟೆಯಾಡುತ್ತಾನೆ. ಮುದುಕನ  ಗಾಳಕ್ಕೆ  ಸಿಕ್ಕ  ತಿಮಿಂಗಿಲ   ಆ ಕ್ಷಣ  ಸೋಲಲಿಲ್ಲ.  ಗಾಳಕ್ಕೆ ಸಿಕ್ಕಿಕೊಂಡೇ  ಸಮುದ್ರದಲ್ಲಿ  ನಾಲ್ಕಾರು  ಮೈಲಿ  ಎಳೆದುಕೊಂಡೊಯ್ಯುತ್ತದೆ. ದೋಣಿಯೇ  ಮಗುಚಿ  ಬೀಳುವಷ್ಟು  ಶಕ್ತಿಯಿಂದ  ದೋಣಿಯನ್ನೂ  ನೂಕುತ್ತದೆ. ದಿನಗಟ್ಟಲೇ  ತನ್ನ  ಜೀವ ಉಳಿಸಿಕೊಳ್ಳಲು   ಹೋರಾಡಿ  ಪ್ರಾಣ ಬಿಡುತ್ತದೆ.  ದೋಣಿಯ  ಮೂರುಪಟ್ಟು  ಬೃಹತ್ತಾದ  ತಿಮಿಂಗಿಲವನ್ನು  ದೋಣಿಯ  ಹೊರಭಾಗಕ್ಕೆ  ಬಿಗಿದು   ಮರಳಿ  ದಂಡೆಗೆ  ಪ್ರಯಾಣಿಸಲು  ಪ್ರಾರಂಭಿಸುತ್ತಾನೆ. ಮುದುಕನ  ದುರ್ದೈವ.  ಶಾರ್ಕ ಗಳು  ಗಂಟುಬೀಳುತ್ತವೆ.  ಒಂದಲ್ಲ  ಎರಡಲ್ಲ.  ನಾಲ್ಕಾರು  ಶಾರ್ಕ  ಮೀನುಗಳು  ಮುದುಕನ  ತಿಮಿಂಗಲವನ್ನು  ತುಂಡು  ತುಂಡಾಗಿ  ಕಬಳಿಸುತ್ತವೆ.  ಅವನು  ಜೀವ ಒತ್ತೆಯಿಟ್ಟು  ಶಾರ್ಕಗಳ  ಜೊತೆಗೆ  ಹೋರಾಟ  ಮಾಡಿದರೂ,  ತಿಮಿಂಗಿಲದ  ಮಾಂಸವನ್ನು  ಚೂರೂ  ಬಿಡದೇ  ತಿಂದು  ಮುಗಿಸುತ್ತವೆ.   ಮುದುಕ  ದಂಡೆಗೆ  ಬಂದು  ತಲುಪಿದಾಗ  ವಾರವೇ  ಕಳೆದು  ಹೋಗಿರುತ್ತದೆ.  ದೋಣಿಯ  ಅವನ  ಅರ್ಧದಿನಗಳು  ಉಪವಾಸದಲ್ಲಿಯೇ  ಕಳೆದಿರುತ್ತದೆ.   ಮುದುಕ  ಹಸಿವು  ಆಯಾಸದಿಂದ  ಕಂಗೆಟ್ಟು  ದಂಡೆ  ತಲುಪಿದಾಗ   ದೋಣಿಗೆ  ತಿಮಿಂಗಿಲದ  ಅಸ್ತಿಪಂಜರ  ಮಾತ್ರವಿತ್ತು.  ದಂಡೆಗೆ  ಕಾಲಿರಿಸಿ  ಮುದುಕ  ಪ್ರಾಣ  ಬಿಟ್ಟ..  ಮಾರನೆಯ  ದಿನ  ಯುವಕ  ಮೀನುಗಾರರಿಗೆ   ದೋಣಿ  ಅಸ್ತಿಪಂಜರ  ಮತ್ತು  ಸತ್ತ  ಮುದುಕ  ಮಾತ್ರ  ಕಂಡರು.  ಅವನ  ಮಹಾಸಾಹಸಕಂಡು  ಭಯಾಶ್ಚರ್ಯಗೊಂಡರು.

       ದತ್ತಜ್ಜ ನೆಂದರೆ  ಊರಿನ  ಜನಗಳಿಗೆ  ಅದೇನೋ  ಒಂಥರ  ಭಯ, ಎದುರು  ಬಂದರೆ  ಆತಂಕ.  ಕಂಡದ್ದನ್ನು  ಕಂಡಂತೇ  ಯಾವ  ಮುಲಾಜಿಲ್ಲದೇ  ಖಂಡಿಸಿಬಿಡುತ್ತಿದ್ದ.  ಮೊದಲೇ  ಬೆಳ್ಳಗಿದ್ದ.  ಸಿಟ್ಟಾದಾಗ  ಕೆಂಪಾಗಿಬಿಡುತ್ತಿದ್ದ.  ಆಗ  ಅವನ  ಭಾಷೆಯೇ  ಬದಲಾಗಿಬಿಡುತ್ತಿತ್ತು.  ಸಭ್ಯ  ಬೈಗುಳ,  ಅದೂ ವೈವಿಧ್ಯಮಯವಾಗಿರುತಿತ್ತು.  ಸಾಮಾನ್ಯವಾಗಿ  ಊರಿನ  ಸಾಮಾನ್ಯ ಜನರು  ಶ್ರೀಮಂತರೆದುರು  ಮಾತನಾಡುತ್ತಿರಲಿಲ್ಲ.   ದತ್ತಜ್ಜ  ತುಂಡು  ಕೃಷಿಕನಾದರೂ,  ಸತ್ಯದೆದುರು  ಆತ  ನ್ಯಾಯ  ನಿಷ್ಠುರಿ. ಯಾವ ಮುಲಾಜಿಲ್ಲದೇ  ಅನ್ಯಾಯವನ್ನು  ಖಂಡಿಸಿ ಬಿಡುತ್ತಿದ್ದ.  

        ದತ್ತಜ್ಜ  ಅಷ್ಟೆಲ್ಲ  ಶಾಲೆಗೆ  ಹೋದವನಲ್ಲ.    ಆದರೆ  ಕಂಡ  ಕಂಡದ್ದನ್ನು  ಓದುವ  ಹುಚ್ಚು.  ಅದರಲ್ಲಿಯೂ  ಕಾದಂಬರಿಗಳೆಂದರೆ  ಪಂಚಪ್ರಾಣ.   ಅವನ  ಕೈ  ನಡೆವಾಗಲೆಲ್ಲ  ಪುಸ್ತಕ ಕಂಡಲ್ಲಿ  ಖರೀದಿಸಿಯೇ  ತರುತ್ತಿದ್ದ.     

        ಶಾಲೆಯಲ್ಲಿ  ನಾಲ್ಕನೇ  ತರಗತಿಯವರೆಗೆ  ಕಲಿತಿರಬಹುದೇನೋ,   ಆದರೂ  ತಾನು ಕಲಿತ  ಶಾಲೆ, ತನ್ನ  ಊರ  ಶಾಲೆ  ಎಂಬ  ಅಭಿಮಾನ  ಅವನಲ್ಲಿ  ತುಂಬಿ ತುಳುಕುತ್ತಿತ್ತು.  ಧ್ವಜಾರೋಹಣದ  ಎಲ್ಲ  ದಿನಗಳಲ್ಲಿ  ಶಾಲೆಗೆ  ಬಂದು  ಧ್ವಜವಂದನೆ ಗೈಯುತ್ತಿದ್ದ.   ಇತ್ತೀಚಿನ  ವರ್ಷಗಳಲ್ಲಿ  ವಿದ್ಯಾರ್ಥಿಗಳ  ಸಂಖ್ಯೆ  ಕಡಿಮೆಯಾಗುತ್ತ  ಆಗುತ್ತ   ಒಂದು  ದಿನ  ಶಾಲೆಯನ್ನು  ಇಲಾಖೆಯವರು  ಮುಚ್ಚಿಬಿಟ್ಟರು.  ಅಂದು  ದತ್ತಣ್ಣನ  ಆಟಾಟೋಪವನ್ನು  ನೋಡಬೇಕಿತ್ತು.  ʻʻ ನಿಂಗಕ್ಕಗೆ  ಊರು  ಮನೆ  ಎಂಬ  ಅಭಿಮಾನಾ  ಹೇಳದು  ಸ್ವಲ್ಪ ಆದ್ರೂ  ಇದ್ದೂ  ಹೇಳಾದ್ರೆ  ಬನ್ನಿ,  ಆ ಮಂತ್ರಿ ಮನೆಯೆದ್ರು  ಧರಣಿ  ಮಾಡನʼʼ  ಎಂದು  ಹೇಳುತ್ತ  ಮನೆ ಮನೆಗೆ  ಲಗ್ಗೆಯಿಟ್ಟ.  ಯಾರೂ  ಅವನ ಜೊತೆಗೂಡಲೇ  ಇಲ್ಲ. 

      ಯಾಕೋ  ಆದಿನದಿಂದಲೇ  ಆಗಿರಬೇಕು.  ಮೊದಲಿನ  ಕೂಗಾಟವೇ ಸ್ತಬ್ಧ ಗೊಳ್ಳತೊಡಗಿತು.   ಶಾಲೆಯ  ಮುಚ್ಚಿದ  ಬಾಗಿಲೆದುರು  ದಿನಾಲೂ  ಒಂಟಿಯಾಗಿ  ಕೂತಿರುತ್ತಿದ್ದ. 

      ಊರಿಗೊಂದು  ಸರಿಯಾದ  ರಸ್ತೆ  ಬೇಕಿತ್ತು.  ಎಲ್ಲರೂ  ಸೇರಲು  ಒಂದಾದರೂ  ಸಾರ್ವಜನಿಕ  ಕಟ್ಟಡ  ಬೇಕಿತ್ತು.  ʻʻದದ್ದೋಡಿಗಳು  ನೀವು,  ನಿಮ್ಮ  ಕಲಿಕೆ  ನಿಮ್ಮ ಪ್ರಾಯ  ವ್ಯರ್ಥ.ʼʼ  ಎಂದು  ದೂಷಿಸುತ್ತಿದ್ದ.

        ಯಾಕೋ   ದತ್ತಜ್ಜ  ಮೃತನಾದಮೇಲೆ  ಒಮ್ಮೆಲೇ  ಕಾಡತೊಡಗಿದ.  ಜೀವಂತವಿದ್ದಾಗ  ಎಂದೂ  ಯಾರಮಾತನ್ನೂ  ಕೇಳದೇ,  ತಾನು  ಕಂಡ  ಮೊಲಕ್ಕೆ  ನಾಲ್ಕೇಕಾಲು   ಎಂದೇ  ಸಾಧಿಸುತ್ತ,  ಕೌಟುಂಬಿಕವಾಗಿ,  ಊರಿನ  ನಾಗರಿಕರಲ್ಲಿ  ಬರೇ  ಜಗಳಗಂಟಿ  ಅಜ್ಜ,  ತರಲೆ  ಕಿರಿ ಕಿರಿ  ಎಂದೆಲ್ಲಾ  ಕರೆಯಿಸಿಕೊಂಡ  ದತ್ತಜ್ಜ,  ಯಾವತ್ತೂ  ಯಾರಿಂದಲೂ  ತಿರಸ್ಕೃತ ಗೊಂಡಿರಲಿಲ್ಲ.  ಅವನ  ಜಗಳಕ್ಕೆ ಅದರದ್ದೇ  ಆದ  ಸ್ವಂತಿಕೆಯಿತ್ತು.

          ಮುಖ್ಯರಸ್ತೆಯಿಂದ  ಊರಿಗೆ  ಬರಲು  ಕಚ್ಛಾರಸ್ತೆ.  ಮಳೆಗಾಲ  ಮುಗಿಯುವುದೊಂದೇ  ತಡ.  ರಸ್ತೆ  ರಿಪೇರಿಯೊಂದು  ಗಂಟುಬೀಳುತ್ತಿತ್ತು.  ಪ್ರತೀ  ಮನೆಗೆ  ಇಷ್ಟಿಷ್ಟು ದೂರ  ಎಂದು  ಅಳೆದು ಕೊಡುತ್ತಿದ್ದರು. ತಗ್ಗು  ದಿನ್ನೆಗೆ  ಮಣ್ಣು ತುಂಬಿ  ರಸ್ತೆ ಸುಗಮಗೊಳಿಸಿ ಕೊಡುವುದು  ಅವರವರ  ಜವಾಬ್ದಾರಿ.  ಕೆಲವು  ಜನ ತಮ್ಮ  ಕೆಲಸ ಮುಗಿಸುತ್ತಿದ್ದರು.  ಒಂದಷ್ಟು  ಹಾಗೆಯೇ  ಉಳಿದುಬಿಡುತ್ತಿತ್ತು.  ರಸ್ತೆ  ಸರಿಯಾದ  ಹೊರತು  ವಾಹನ  ಊರಿಗೆ  ಪ್ರವೇಶಿಸುವಂತಿಲ್ಲ.   ರಸ್ತೆ  ಮಾಡದ  ಪಾಲುದಾರರಲ್ಲಿ  ದತ್ತಜ್ಜನೂ  ಒಬ್ಬನಾಗಿರುತ್ತಿದ್ದ.  ʻʻ ರಸ್ತೆ  ಮಾಡು  ಮರಾಯಾʼʼ  ಎಂದು  ಯಾರಾದರೂ  ಹೇಳಿದರೆ ಸಾಕು.  ರೌದ್ರಾವತಾರಿಯಾಗುತ್ತಿದ್ದ.  ಊರೊಟ್ಟಿನ  ಅನಿವಾರ್ಯ  ಕೆಲಸಗಳಿಗೆ  ಊರೆಲ್ಲ  ಸಹಕರಿಸಿದರೂ , ದತ್ತಣ್ಣನ  ಸಿದ್ಧಾಂತ  ಬೇರೆ. ತಿರುಗಿ  ಕುಳಿತು  ಬಿಡುತ್ತಿದ್ದ.  ಯುವಕರೊಂದಿಗೆ  ಹೊಯ್ಕೈ ಪ್ರಾರಂಭವಾಗುತ್ತಿತ್ತು.  ಅದೊಂದು  ಬಾರಿ  ಊರೊಟ್ಟಿನ  ಯಾವುದೋ    ಆವಶ್ಯಕ  ಕೆಲಸಕ್ಕೆ  ಶ್ರಮದಾನಕ್ಕೆಂದು  ಒಂದಿಷ್ಟು  ಯುವಕರು  ಕರೆಯ ಬಂದರು.    ಎಂದಿನಂತೆ  ದತ್ತಜ್ಜ ವಿರೋಧಿಸಿದ. ಇದಕ್ಕೆ  ನನ್ನ  ತಕರಾರಿದೆ  ಎಂದ.  ಯುವಕಸಂಘದವರು  ನೀನು  ಬರಬೇಕು,  ಇಲ್ಲಾ  ಅದಕ್ಕೆ  ಸಂಬಂಧ  ಪಟ್ಟು  ದೇಣಿಗೆ  ನೀಡಬೇಕು  ಎಂದು  ಒತ್ತಾಯಿಸಲು  ತೊಡಗಿದರು.   ಸತ್ತರೂ  ನಾನು  ಬರುವುದಿಲ್ಲ, ಎಂದು  ಉತ್ತರಿಸಿದ.     ಮಾತಿಗೆ ಮಾತು  ಬೆಳೆದು  ʻʻನೀನು  ಸತ್ತರೆ  ಹೊರಲು  ನಾವೇ  ಬರಬೇಕುʼʼ  ಎಂದು  ಯಾರೋ  ಒಬ್ಬ  ಹುಡುಗ  ಉಚಾಯಿಸಿ ಬಿಟ್ಟ.  ಅಂಥ  ಮಾತಿಗೆ  ಅರಚಾಡಬೇಕಿದ್ದ  ದತ್ತಣ್ಣ,   ಆದಿನ  ಮಾತ್ರ  ಉತ್ತರಿಸುವ  ಗೋಜಿಗೇ  ಹೋಗಲಿಲ್ಲ..

        ಅವನು  ಜಗಳಕಾಯದ  ಜನರೇ ಇಲ್ಲ. ಹಾಗೆಂದು  ಹಗೆ  ಎನ್ನುವುದು  ಅವನ  ಜಾಯಮಾನದಲ್ಲೇ  ಇರಲಿಲ್ಲ. ಸಿಟ್ಟು  ತಣಿದಮೇಲೆ  ಅವನೇ  ಮಾತನಾಡಲು  ಪ್ರಾರಂಭಿಸಿ ಬಿಡುತ್ತಿದ್ದ.  ಜಗಳ  ಭಾರೀ  ಜೋರಾಗಿದ್ದರಂತೂ  ಮಾರನೆಯ ದಿನವೇ  ಅವರ  ಮನೆಗೆ  ನುಗ್ಗಿ  ಸಾಂಪ್ರಾಣಿಕೆಯ  ಮಾತನಾಡಿ,  ಚಹ  ಮಾಡ್ಸು,  ಎಂದು  ಆದೇಶನೀಡುತ್ತಿದ್ದ. 

        ಯಾರೂ  ಸರಕಾರದಿಂದ  ಸರ್ವರುತು  ರಸ್ತೆ ಮಂಜೂರು  ಮಾಡಿಸುವ  ಪ್ರಯತ್ನಗೈದಿರಲಿಲ್ಲ.  ʻʻನಾವೇ  ಪ್ರತಿವರ್ಷ  ಹಣ  ಬಿಚ್ಚವು  ಹೇಳಾದ್ರೆ  ಸರ್ಕಾರ  ಎಂತಕ್ಕೆ,  ಸುಡುಗಾಡ್‌  ಪಂಚಾಯ್ತ  ಎಂತಕ್ಕೆ ʼʼ  ಎಂದು  ಕೇಳುತ್ತಿದ್ದ.        ಅದ್ಯಾವ   ಆಲೋಚನೆ  ದತ್ತಣ್ಣನ  ಮನಸ್ಸಿನಾಳಕ್ಕೆ  ಪ್ರವೇಶಿಸಿತೋ,  ಒಂದು  ಶುಭ  ಮುಂಜಾನೆ  ಒಬ್ಬನೇ  ಪಕ್ಕದ  ಪಟ್ಟಣಕ್ಕೆ  ಹೊರಟೇಬಿಟ್ಟ.  ಶಾಸಕರ  ಮನೆಯೆದುರು  ಹೋಗಿ  ಕುಳಿತುಬಿಟ್ಟ. ನಮ್ಮೂರಿಗೆ  ರಸ್ತೆ  ಕೊಡಿ. ಮಂಜೂರಿಯಾಗದ  ಹೊರತು  ಇಲ್ಲಿಂದ  ಕದಲುವುದೇ  ಇಲ್ಲ, ಎಂದು  ಹಟ ಹಿಡಿದು  ಬಿಟ್ಟ.  ಶಾಸಕನನ್ನು  ಬಾಲ್ಯದಿಂದಲೇ  ಕಂಡವ  ದತ್ತಜ್ಜ. ಎಂಭತ್ತು  ವರ್ಷದ  ವೃದ್ಧ  ಬೇರೆ.  ಶಾಸಕನಿಗೆ  ಅಲ್ಲಗಳೆಯಲಾಗಲೇ ಇಲ್ಲ.

      ಕೆಲವೇ  ದಿನಗಳಲ್ಲಿ  ಟಾರು  ರಸ್ತೆ  ಮಂಜೂರಾಗಿ  ಕೆಲಸ  ಪ್ರಾರಂಭವಾಯಿತು.   ಯಲಾ  ಅಜ್ಜಾ ...  ಕೇವಲ  ಅರಚಾಡುವುದೊಂದೇ  ಅಲ್ಲ.  ಭಾರೀ  ಹಟವಿದೆ.  ಎಂದೆನ್ನಿಸತೊಡಗಿತು  ಊರಿನ  ಜನರಿಗೆ.  ಅಜ್ಜನ  ಮನೆಯೆಂದರೆ  ಅದೊಂದು  ಮಠವಿದ್ದ  ಹಾಗೆ.  ಮೂರ್ನಾಲ್ಕು  ಗಂಡುಮಕ್ಕಳು, ಸೊಸೆಯಂದಿರು  ಮೊಮ್ಮಕ್ಕಳು  ಎಂದು  ಪುಟ್ಟ  ಮನೆ  ತುಂಬಿಕೊಂಡಿರುತ್ತಿತ್ತು. 

        ಪ್ರಾಯದ  ಗಂಡುಮಕ್ಕಳಿಗೆ  ಹಗಲು  ಮನೆಯಲ್ಲಿ  ಕುಳಿತಿರಲೂ ಕೊಡುತ್ತಿರಲಿಲ್ಲ.  ತೋಟದ ಕೆಲಸ ಹಿಂದೆ  ಬಿದ್ದಿದೆ. ಸಪ್ಪು ಕಡಿಯಬೇಕು, ಹುಲ್ಲು  ತರಬೇಕು, ಮನೆ ಹೊಚ್ಚಬೇಕು, ಮಳೆಗಾಲಕ್ಕೆ ಕಟ್ಟಿಗೆ  ಪೇರಿಸಬೇಕು,  ಒಂದೊಂದು ದಿಕ್ಕಿಗೆ  ಒಬ್ಬೊಬ್ಬರು  ಹೊರಟು  ಹೋಗಿ.  ಎಂದು  ಧಭಾಯಿಸುತ್ತಿದ್ದ.   ಊರಿನ  ಯಾರೇ  ಚನ್ನಾಗಿ  ತೋಟ  ಮಾಡಿದ್ದಾರೆಂದರೆ  ಕೋಲೂರುತ್ತ  ಅಲ್ಲಿಗೇ  ಹೋಗಿ   ಶಾಭಾಸ್‌  ಎನ್ನುತ್ತಿದ್ದ.

      ಸುಮಾರು  ಮೂವತ್ತು  ವರ್ಷಗಳೇ  ಕಳೆದಿರಬಹುದು.   ಪಾಕಿಸ್ಥಾನ  ಭಾರತದ ಮೇಲೆ  ಯುದ್ಧ ಸಾರಿತ್ತು.  ಅದು ಬಂಗ್ಲಾ ವಿಮೋಚನೆಯ  ಕಾಲ. ಅದೇ  ಸಮಯದಲ್ಲಿ  ಅಡಿಕೆ  ಭತ್ತ  ಬಾಳೆ ಗಳ  ಬೆಲೆಗಳೂ  ಪಾತಾಳಕ್ಕಿಳಿದಿದ್ದವು.  ತುಂಡು ತೋಟಗಾರರೆಲ್ಲ,  ಕಂಗಾಲು ಸ್ಥಿತಿಯಲ್ಲಿ  ತೊಳಲಾಡುತ್ತಿದ್ದರು.  ಊಟಕ್ಕೆ  ಅಕ್ಕಿ ಹುಡುಕುವ  ಪರಿಸ್ಥಿತಿ.  ಅಂಗಡಿಗಳಲ್ಲಿ  ಉದ್ರಿಯೂ   ಹುಟ್ಟದೇ  ಊರಿನ  ಅರೆವಾಸಿ ಕುಟುಂಬಗಳು  ಉಪವಾಸವನ್ನು  ಅನುಭವಿಸುತ್ತಿದ್ದರು.  ದತ್ತಣ್ಣನೂ  ಅವರಲ್ಲೊಬ್ಬ.  ಪ್ರತಿದಿನ  ಪಟ್ಟಣದ  ಒಂದೊಂದು  ಅಂಗಡಿಗೆ  ನುಗ್ಗುತ್ತಿದ್ದ.  ಉದ್ರಿ  ದಿನಸಿ ಎಬ್ಬಿಸಿ ತರುತ್ತಿದ್ದ.  ತನ್ನಂತೇ  ಉಪವಾಸ  ಬಿದ್ದ   ಕುಟುಂಬಗಳಿಗೆ  ತಾನು ತಂದಿದ್ದರಲ್ಲಿಯೇ  ಅರ್ಧದಷ್ಟನ್ನು  ಅವರಿಗೂ  ಕೊಟ್ಟು ಬಿಡುತ್ತಿದ್ದ.  ಮತ್ತೆ  ಉದ್ರಿಗಾಗಿ  ಅಂಡಲೆತ  ಇದ್ದದ್ದೇ. ಅವನ  ಪ್ರಾಯಕಾಲದಲ್ಲಿ  ಅದೇ  ಪಟ್ಟಣದ  ಕೆಲವು  ಅಂಗಡಿಗಳಲ್ಲಿ  ದತ್ತಜ್ಜ  ಕೆಲಸಕ್ಕೆ  ಇದ್ದಿದ್ದನಂತೆ.    ಪರಿಚಯ  ಅವನಿಗೆ  ಉದ್ರಿ  ಕೇಳುವ  ಸ್ವಾತಂತ್ರ್ಯ  ನೀಡಿತ್ತು.  ಕೆಲವು ದಿನ  ಹೀಗೆ  ಕಳೆಯುತ್ತಿತ್ತು.  ಉದ್ರಿಕೊಟ್ಟ  ಸಾಹುಕಾರರು  ವಸೂಲಿಗಾಗಿ  ಮನೆಬಾಗಿಲಿಗೇ  ಬರುತ್ತಿದ್ದರು.  ಆಗ  ಮಾತ್ರ  ದತ್ತಜ್ಜ ನ  ಆಟಾಟೋಪ  ನೋಡಬೇಕಿತ್ತು.  ದತ್ತಜ್ಜನ  ಉಗ್ರರೂಪ, ರೋಷದ  ಮಾತಿಗೇ  ಬೆದರಿ  ಮರಳುತ್ತಿದ್ದರು.  ನಿಮ್ಮ  ಹಣ  ನ್ಯಾಯದ್ದೇ  ಆದರೆ  ಮರಳಿಬಂದೇ ಬರುತ್ತದೆ.  ನಮ್ಮ  ಆರ್ಥಿಕ  ಸ್ಥಿತಿ  ಹೀಗೇ  ಇರುವುದಿಲ್ಲ.   ಏನೋ  ದೇಶದ  ಸ್ಥಿತಿ, ರೈತರ  ಗೋಳು  ನಿಲುಗಡೆಗೆ ಬಂದಾಗ  ನಿಮ್ಮ  ಹಣ  ಸುರಕ್ಷಿತವಾಗಿ  ಮರಳುತ್ತದೆ.  ಈಗ  ನೀವು  ಹೊರಟುಬಿಡಿ,  ಎಂದು   ಉತ್ತರಿಸಿದ್ದ.

       ಅವನ  ಅಡಿಕೆ  ತೋಟವೆಂದರೆ  ಅದೊಂದು  ಮಾದರಿ  ಕ್ಷೇತ್ರ.  ಹಚ್ಚ ಹಸಿರಿಂದ  ಫಲಭರಿತವಾಗಿ  ತಲೆತೂಗುತ್ತಿತ್ತು. ಆದರೇನು  ಮಾಡುವುದು,  ತುಂಡು  ತೋಟ.  ಅದರ  ಅಲ್ಪ ಆದಾಯವೇ  ದೊಡ್ಡ ಕುಟುಂಬವನ್ನ  ಸಲಹಬೇಕಿತ್ತು.  ಸ್ವಂತ  ಕೆಲಸ  ಮಾಡಿದರೇನೆ  ಬದುಕಲು  ಸಾಧ್ಯವಾಗುವುದು.  ʻʻತ್ವಾಟಕ್ಕೆ ಗೊಬ್ರಾ,  ಆಟಕ್ಕೆ  ಅಬ್ರಾʼʼ  ಎಂದು   ಯಾವಾಗಲೂ  ಮಂತ್ರದ  ಹಾಗೆ  ಉಸುರುತ್ತಿದ್ದ.  ತೋಟವನ್ನ  ಮಕ್ಕಳಂತೇ  ಸಲಹುತ್ತಿದ್ದ.

      ಏನೇ  ಆಗಲಿ  ಭಾರೀ  ನರಳಾಡದೇ  ಜೀವ  ಬಿಟ್ಟ. ಯಾರಿಂದಲೂ ವಿಶೇಷ  ಸೇವೆಯನ್ನೂ  ಅಪೇಕ್ಷೆಪಡದ, ಸತ್ತರೆ  ಗಟ್ಟಿಯಾಗಿದ್ದಾಲೇ  ಸಾಯಬೇಕು, ಎಂದು  ಆಗಾಗ  ಹೇಳುತ್ತಿದ್ದ  ದತ್ತಜ್ಜ  ಹಾಗೆಯೇ  ಜೀವತೊರೆದಿದ್ದ.  ಸುದ್ದಿ  ತಿಳಿದ ಕೂಡಲೇ  ಊರಿನ  ಎಲ್ಲ  ಮನೆಯವರೂ  ಬಂದು  ಸೇರಿದ್ದರು.  ಸಾಮಾನ್ಯವಾಗಿ  ಊರಲ್ಲಿ  ಯಾರದ್ದೇ  ಮರಣವಾದರೂ  ಊರ  ಜನರೇ  ಕಟ್ಟಿಗೆ ವ್ಯವಸ್ಥೆ,  ಪಾರ್ಥಿವ  ಶರೀರವನ್ನು  ಕೊಂಡೊಯ್ಯುವ  ಕೆಲಸವನ್ನು  ವ್ಯವಸ್ಥಿತವಾಗಿ  ಮಾಡುತ್ತಿದ್ದರು.   ಧೋ  ಎಂದು  ಸುರಿಯುತ್ತಿರುವ  ಮಳೆಯಲ್ಲಿ   ಶವ  ದಹನವೇ  ಸಮಸ್ಯೆಯಾಗುವುದರಿಂದ   ಒಂದು  ಚಪ್ಪರವಂತೂ  ಆಗಲೇ  ಬೇಕು.  ಕಂಬ  ನೆಟ್ಟು  ಬಾಳೆಎಲೆಯ  ಮುಚ್ಚಿಗೆ  ಮಾಡಿ   ಅದರಡಿಯಲ್ಲಿ   ಚಟ್ಟ  ನಿರ್ಮಿಸಬೇಕಾಗಿ   ಬಂತು.   ಎಂದೋ  ದತ್ತಣ್ಣ  ಸಿಟ್ಟಿನ  ಭರದಲ್ಲಿ  ನನ್ನನ್ನು  ಯಾರೂ  ಹೊರುವ  ಅವಶ್ಯಕತೆಯಿಲ್ಲ  ಎಂದು   ಹಲವು  ವರ್ಷಗಳ  ಹಿಂದೆಯೇ   ಕೂಗಾಡಿದ  ಘಟನೆಯನ್ನು  ತಮ್ಮ ತಮ್ಮಲ್ಲಿಯೇ  ನೆನಪಿಸಿಕೊಂಡು, ಮಾತನಾಡ  ತೊಡಗಿದರೂ,   ಕಟ್ಟಿಗೆ  ವ್ಯವಸ್ಥೆಗೆ  ಯಾರು,   ಚಟ್ಟ ಕಟ್ಟುವ  ಕೆಲಸ  ಯಾರು      ಚಪ್ಪರತಯಾರಿ  ಯಾರಿಂದ ,  ಎಂಬ    ಬಗ್ಗೆ  ಚರ್ಚೆ  ನಡೆಯುತ್ತಿದ್ದಂತೇ  ಪಕ್ಕದ ಮನೆಯ  ರಾಮ ಮಾಣಿ,  ʻʻ ಸ್ವಲ್ಪ  ತಡಕಳ್ರೋ...  ನಾಕೈದ್‌  ದಿನದ  ಹಿಂದೆ  ಸಂಜೇ ಕಡೀಗೆ  ರಾಮ್‌  ಮಾಣಿ  ಇಲ್ಬಾ,,  ಹೇಳಿ  ದತ್ತಜ್ಜ  ಕರ್ದಾ.  ಆನು  ಓಡಿಬಂದು  ಯಂತದಾ  ಅಜಾ   ಕೇಳ್ದಿ.   ಆವಾಗಾ  ಯನ್ನಾ  ಒಂದ್‌  ಮೂಲೀಗೆ  ಕರ್ದು    ಕವರ್‌  ಎನ್‌  ಕೈಯಲ್ಲಿಟ್ಟು,  ಇದನ್ನ  ನೀನು  ಸುಮ್ಮಂಗೆ  ಇಟ್ಗಳವು.  ಯಾರೆದ್ರಿಗೂ  ಬಾಯಿ  ಬಿಡಲಿಲ್ಲೆ.  ಅಕಸ್ಮಾತ್  ಆನು  ಜೀವಬಿಟ್ರೆ,  ಊರವೆಲ್ಲಾ  ಸೇರ್ತ್ವಲಾ   ಆವಾಗಾ ‌,     ಕವರ  ಒಡ್ದು  ಓದಲೆ  ಹೇಳವು  ತೆಳ್ತಾ.....   ಮತ್ತೆ  ನೀನೂ  ಒಡೆಯಲಿಲ್ಲೆ.  ಯಾರಿಗೂ  ಹೇಳಲೂ  ಇಲ್ಲೆ.    ಹಾಂಗೇ  ಯಂಗೆ  ಭಾಷೆಕೊಡು,  ಹೇಳ್ದಾ.   ಆನು  ಸ್ವಲ್ಪಹೊತ್ತು  ಆಲೋಚ್ನೆ ಮಾಡ್ದಿ.   ಅಲ್ಲಾ  ದತ್ತಜ್ಜಾನೀನು  ಕಲ್ಗುಂಡು  ಇದ್ದಾಂಗಿದ್ದೆ.  ಈಗೆಂತಕ್ಕೆ  ಸಾವಿನ  ವಿಚಾರ  ಮಾತಾಡ್ತೆ,,,,?   ಕೇಳ್ದಿ. 

      ಹೇಳ್ದಷ್ಟು  ಮಾಡು.   ಇದನ್‌  ತಗಂಡು    ನೀ  ಸುಮ್ಮಂಗೆ  ಮನೀಗೆ  ಹೋಗು  ಹೇಳ್ಬುಟಾ,    ತಗಳಿ,  ಈಗ  ಆನು  ಯನ್‌  ಜವಾಬ್ದಾರಿ  ಮುಗಸ್ತಿ.  ಯಾರು  ಹೇಳಿ     ಕಾಗದ  ಪತ್ರಾ  ಒಡ್ದು  ಓದಿ. ʼʼ   ಎನ್ನುತ್ತ  ಪಕ್ಕದ  ಮನೆ  ರಾಮ್‌  ಮಾಣಿ  ತುದೀ  ಕಟ್ಟೇಮ್ಯಾಲೆ  ಕುಂತ್ಕಂಡು,  ಸಂಚೀ  ತೆಗದು  ಕವಳ  ಹಾಕಲೆ  ಶುರುಮಾಡ್ದ.

       ಸೇರಿದ್ದ  ಎಲ್ಲರಿಗೂ  ಆಶ್ಚರ್ಯ.  ʻʻ  ದತ್ತಜ್ಜ,  ಸಾಮಾನ್ಯ ಜನಾ  ಅಲ್ದೋ,   ಅವಂಗೆ  ಆದ  ರೋಗವಾ,  ಹೇಳದೇಹೋದ್ರೂ   ತಂಗೆ  ಸಾವು  ಹತ್ರ  ಬಂಜು  ಹೇಳದು  ಅವಂಗೆ  ಗೊತ್ತಾಗ್ಹೋಜು.ʼʼ 

          ಎಂದು  ಸೇರಿದ  ಜನ  ಮಾತನಾಡಿಕೊಳ್ಳುತ್ತ,  ದತ್ತಜ್ಜನ  ಒಡನಾಟವಿದ್ದ   ಶಂಭೂ  ಭಾವನಿಗೆ   ಅಜ್ಜ  ನೀಡಿದ  ಕವರನ್ನು  ಒಡೆದು  ಓದಿಹೇಳಲು  ಕೇಳಿಕೊಂಡರು. 

        ತಾನು  ಸತ್ತಾಗ,  ಹೀಗೆಯೇ  ಅಂತ್ಯಕ್ರಿಯೆ  ಆಗ್ಬೇಕು.  ಕ್ರಿಯೆ  ಕರ್ಮಾಚರಣೆ  ಇದೇ  ಪದ್ಧತಿಯಲ್ಲಿಯೇ  ಸಾಗಿಸಬೇಕು,  ಎನ್ನುವ  ಶರತ್ತು  ಹಾಕಿರಬೇಕು,  ಸಾಮಾನ್ಯ  ಅಜ್ಜ ಅಲ್ಲ, ಅಂವಾ,   ಎಂದು  ಸೇರಿದ  ಜನರು  ಮಾತನಾಡಿಕೊಳ್ಳಲು  ಪ್ರಾರಂಭಿಸಿದರು.

        ಶಂಭೂ ಭಾವ  ದತ್ತಜ್ಜ  ಬರೆದ  ಪತ್ರವನ್ನು  ಹೊರ  ತೆಗೆದು  ಒಮ್ಮೆ  ಮನಸ್ಸಿನಲ್ಲಿಯೇ  ಓದತೊಡಗಿದ.  ಅವನ  ಮುಖವನ್ನೇ  ಮೌನವಾಗಿ   ಕುತೂಹಲದಿಂದ  ನೋಡುತ್ತಿದ್ದರು.   ಅಂತೂ  ಒಮ್ಮೆ  ದೊಡ್ಡ  ಧ್ವನಿಯಲ್ಲಿ   ಆತ  ಓದಿ  ಹೇಳತೊಡಗಿದ.    

        ʻʻ ನನ್ನನ್ನು  ಸುಡಬೇಡಿ.  ನನ್ನ  ದೇಹವನ್ನು  ನಾನು  ಸ್ವ ಖುಷಿಯಿಂದ  ದಾನಮಾಡಿದ್ದೇನೆ.  ಪತ್ರದ  ಜೊತೆಗಿರುವ  ದಾನಪತ್ರದಲ್ಲಿ  ದೇಹವನ್ನು  ತಲುಪಿಸುವ  ಆಸ್ಪತ್ರೆಯ  ವಿಳಾಸವಿದೆ.  ಅವರಿಗೆ  ಬೇಗ  ತಿಳಿಸುವಂತೇ  ಮಾಡಿ, ಅವರೇ  ಕೊಂಡೊಯ್ಯುತ್ತಾರೆ.   ಸೊಸೈಟಿಯಲ್ಲಿ  ನನ್‌  ಖಾತೆಲ್ಲಿರೋ   ಎಂಟ್‌  ಸಾವ್ರ  ರೂಪಾಯಿಯ,  ನಮ್‌  ಭಾಗ್ದಲ್ಲೊಂದು  ವೃದ್ಧಾಶ್ರಮ  ಮಾಡಲೆ  ಉಪಯೋಗ  ಮಾಡಿ.ʼʼ  ನನ್ನ  ಅಪರ  ಕರ್ಮಕ್ಕೇ  ಅಂತ  ಯಾವ  ಖರ್ಚೂ  ಮಾಡಬೇಕಿಲ್ಲ.ʼʼ

          ಅಜ್ಜ  ತನ್ನದೇ  ಶೈಲಿಯಲ್ಲಿ  ಮೋಡಿ  ಅಕ್ಷರದಲ್ಲಿ  ನಾಲ್ಕೇ  ನಾಲ್ಕು  ಸಾಲು  ಬರೆದಿದ್ದ. 

---------------------------------------------------------------------------------------

 

No comments:

Post a Comment