Monday 25 September 2023

ಪರಿಸರ ಪ್ರೀತಿಯ ʻʻಫ್ರಾಗಿ.ʼʼ

 

   ಏನೇ  ಆಗಲಿ  ಮಕ್ಕಳ  ಸಾಹಿತ್ಯಕ್ಕೆ  ಕನ್ನಡದಲ್ಲಿ  ಸುಗ್ಗಿ  ಮೂಡಿದೆ. ಹತ್ತು  ಹಲವು  ಆಸಕ್ತಿಪೂರ್ಣ  ಹೊಸತನದ  ಕೃತಿಗಳು  ಸಾಹಿತ್ಯಕ್ಕೆ  ಸೇರ್ಪಡೆಗೊಂಡು  ಖುಷಿನೀಡುತ್ತಿವೆ.  ಇದೇ  ವರ್ಷ   ಸುಪ್ರಸಿದ್ಧ  ಮಕ್ಕಳ ಸಾಹಿತಿ  ತಮ್ಮಣ್ಣ  ಬೀಗಾರ,     ʻʻಫ್ರಾಗಿ  ಮತ್ತು  ಗೆಳೆಯರುʼʼ ಎಂಬ  ಮಕ್ಕಳಿಗಾಗಿನ  ಪುಟ್ಟ  ಕಾದಂಬರಿಯೊಂದನ್ನು  ಪ್ರಕಟಿಸಿ  ಸಂಚಲನ  ಮೂಡಿಸಿದ್ದಾರೆ.  ಈಗಾಗಲೇ   ಮಕ್ಕಳ  ಕವನಸಂಕಲನ,  ಕಥಾಸಂಕಲನಗಳೆಂದು, ಇಪ್ಪತ್ತಕ್ಕೂ ಹೆಚ್ಚು  ಕೃತಿಗಳನ್ನು  ಪ್ರಕಟಿಸಿ, ಕನ್ನಡದ  ಮಕ್ಕಳ ಸಾಹಿತ್ಯವಲಯದಲ್ಲಿ,  ತಮ್ಮದೇ  ಒಂದು  ಸ್ಥಾನವನ್ನು  ನಿರ್ಮಿಸಿಕೊಂಡಿರುವ  ಲೇಖಕರು,  ಕಾದಂಬರಿ  ರಚನೆಯೊಂದಿಗೆ  ಮಕ್ಕಳ  ಸಾಹಿತ್ಯಕ್ಷೇತ್ರಕ್ಕೊಬ್ಬ, ಪ್ರಮುಖ  ಸಂಪನ್ಮೂಲವಾಗಿ  ಬೆಳೆದು  ನಿಂತಿದ್ದಾರೆ.   ವೃತ್ತಿಯಲ್ಲಿ  ಶಿಕ್ಷಕರಾಗಿ,  ಮಕ್ಕಳ  ಒಡನಾಟದಲ್ಲಿ   ಮಗುವಿನ  ಮನಸ್ಸನ್ನು  ಆಪ್ತವಾಗಿ  ಅನುಭವಿಸಿದ  ತಮ್ಮಣ್ಣ ಬೀಗಾರ್‌,  ಮಕ್ಕಳ  ಮನಸ್ಸನ್ನು  ವೈಜ್ಞಾನಿಕವಾಗಿಯೂ  ಅಧ್ಯಯನ  ಗೈದವರು. ಸದ್ಯ  ನಿವೃತ್ತರಾದರೂ  ಪ್ರವೃತ್ತಿಯಲ್ಲಿ  ಮಕ್ಕಳ  ಸಾಹಿತಿಯಾಗಿ  ದಿನದಿಂದ  ದಿನಕ್ಕೆ  ತಮ್ಮ  ಪ್ರಯೋಗಶೀಲತೆಯಿಂದ  ಸಾಹಿತ್ಯಿಕವಾಗಿ  ಹೊಸ  ಹರೆಯ  ಪಡೆಯುತ್ತಿದ್ದಾರೆ.

    ಮಕ್ಕಳ  ಸಾಹಿತ್ಯವೆಂದರೆ,  ಅಲ್ಲೊಬ್ಬಳು  ಅಜ್ಜಿಯಿರಬೇಕು.  ರಾಜ  ರಾಣಿಯರಿರಬೇಕು, ಮಕ್ಕಳು  ಏನೂ  ಅರಿಯದ  ಮುಗ್ಧರಾಗಿ,  ಹೇಳಿದಷ್ಟು  ಕೇಳಬೇಕು,  ಎಂಬ ಅಲಿಖಿತ  ನಿಯಮದಡಿಯಲ್ಲಿಯೇ  ಏಕತಾನತೆಯಲ್ಲಿ ಸೃಷ್ಟಿಗೊಳ್ಳುತ್ತಿದ್ದ  ಸಾಹಿತ್ಯರಾಶಿ ಯ  ನಡುವೆ,  ಬೀಗಾರರು  ಹೊಸಕಾಲದ  ಸೂಕ್ಷ್ಮಮತಿಗಳಾದ  ಮಕ್ಕಳೆದುರು,  ಹೊಸ ರೀತಿಯ  ಕಥನ ತಂತ್ರದಲ್ಲಿ,  ಕಿರು  ಕಾದಂಬರಿಯೊಂದನ್ನು  ಸೃಷ್ಟಿಸುವ  ಸಾಹಸಗೈದಿದ್ದಾರೆ.  ಇದು  ಈಗಾಗಲೇ  ಸಾಕಷ್ಟು  ಪ್ರಶಂಸೆಗೂ  ಒಳಗಾಗಿದೆ.

    ಕೃತಿಯ  ಭಿತ್ತಿಯಲ್ಲಿ  ಮಲೆನಾಡ  ಪರಿಸರ  ಹಚ್ಚಹಸಿರಾಗಿ  ನಲಿಯುತ್ತಿದೆ.  ಗುಡ್ಡ  ಕಾಡು, ನದಿ  ಹೆಮ್ಮರ  ಗಾಳಿ  ಬೆಳಕು  ಗಳ  ನಡುವೆ,  ಪಶು ಪಕ್ಷಿ  ಕ್ರಿಮಿ  ಕೀಟ, ಮನುಷ್ಯರು  ವಿಶಿಷ್ಟ  ಸನ್ನಿವೇಶದಲ್ಲಿ  ಸೃಷ್ಟಿಯಾಗಿದ್ದಾರೆ.  ಸರಳ  ಸುಂದರ  ಸುಲಲಿತ  ಭಾಷೆಯಲ್ಲಿ,  ಮಕ್ಕಳ  ಮುಗ್ಧಜಗತ್ತು  ಇಲ್ಲಿ  ಅನಾವರಣಗೊಳ್ಳುತ್ತದೆ.  ಆಧುನಿಕ  ಶಿಕ್ಷಣದ  ಜೊತೆಗೆ  ಸುತ್ತಲಿನ  ಪರಿಸರ ಮತ್ತು  ಜೀವವೈವಿಧ್ಯವೂ  ಅವಶ್ಯ.  ಕೇವಲ  ನಾಲ್ಕುಗೋಡೆಗಳ  ನಡುವಿನ  ಯಾಂತ್ರಿಕ  ಶಿಕ್ಷಣ  ಮಗುವನ್ನು  ಮಾಹಿತಿಯ  ಸಂಗ್ರಹಾರವನ್ನಾಗಿ  ರೂಪಿಸುತ್ತದೆಯೇ  ಹೊರತು,  ಜೀವಂತ  ಜೀವನಾನುಭವದ  ಸಮೃದ್ಧ  ವ್ಯಕ್ತಿತ್ವವನ್ನು ಅಲ್ಲ.  ಎಂಬ  ಸಂದೇಶ  ಇಡೀ  ಕೃತಿಯ  ಒಟ್ಟೂ  ಆಶಯವಾಗಿ  ಹೊರಹೊಮ್ಮುತ್ತದೆ.  ಹಾಗೆಂದು  ಕಥನಪ್ರವಾಹದಲ್ಲಿ  ಎಲ್ಲೂ  ಯಾವುದೇ  ಕೃತಕ  ಘೋಷಣೆಯಿಲ್ಲ.  ರಸಭರಿತ  ಘಟನಾವಳಿ,  ಆಸಕ್ತಿಪೂರ್ಣ  ಸಂಭಾಷಣೆಯ  ಮೂಲಕ  ಮೆಲ್ಲನೆ  ಸಾಗುವ  ನಿರೂಪಣೆ  ಮಕ್ಕಳನ್ನು  ಆಸಕ್ತಿ  ಮತ್ತು  ಕುತೂಹಲಗಳಲ್ಲಿ  ಲೀನವಾಗಿಸುತ್ತದೆ.

        ಫ್ರಾಗಿ  ಎಂಬ  ಕಪ್ಪೆ,  ರಂಗಿ  ಎಂಬ  ಚಿಟ್ಟೆ,  ಮತ್ತು  ಪೂವಿ  ಎಂಬ  ಹಕ್ಕಿ,    ಮೂರು  ಪ್ರಧಾನ  ಪಾತ್ರಗಳ  ಮೂಲಕ  ಕೃತಿ  ತೆರೆದುಕೊಳ್ಳುತ್ತದೆ.  ಪ್ರಾಗಿ ಗೆ    ಕೆರೆಯೊಂದೇ  ತನ್ನ  ಕಾರ್ಯಕ್ಷೇತ್ರವಾಗಬಾರದು,  ತಾನು  ಕೂಪಮಂಡೂಕನಾಗಬಾರದು,   ಹೊರಪ್ರಪಂಚದ  ಅರಿವಿಗೆ  ತನ್ನನ್ನೊಡ್ಡಿಕೊಳ್ಳಬೇಕೆಂಬ  ತವಕ.  ಕೂಪ ಮಂಡೂಕ  ಎಂಬ  ಮನುಷ್ಯಲೋಕದ  ಅಪವಾದಕ್ಕೆ  ಪ್ರತಿಯಾಗಿ,  ತಾನೂ  ಜಗತ್ತಿನ  ಅನುಭವಗಳನ್ನು  ಗಳಿಸಿಕೊಳ್ಳಬೇಕೆಂಬ  ಹೆದ್ದಾಸೆ.  ಅದೇ  ಕಾರಣಕ್ಕೆ  ಚಿಟ್ಟೆ  ಮತ್ತು  ಹಕ್ಕಿಗಳ  ಸಹಾಯಪಡೆದು,  ಮಾನವ  ಮಕ್ಕಳ  ಶಾಲೆಯನ್ನು  ಸಂದರ್ಶಿಸುತ್ತದೆ.   ಕಡಿದಾದ  ಗುಡ್ಡ,  ಆಕಾಶದೆತ್ತರದ  ಮರವೇರುತ್ತದೆ. ಸುಂದರ  ಸೂರ್ಯೋದಯ  ಸೂರ್ಯಾಸ್ತ,  ಅಗಾಧ  ಆಕಾಶ, ಮಿನುಗುವ  ನಕ್ಷತ್ರಗಳನ್ನು  ಕಾಣುತ್ತದೆ. ಹಲವು  ಅಪಾಯಗಳನ್ನು  ಧೈರ್ಯದಿಂದ  ಎದುರಿಸುತ್ತದೆ.   

   ಫ್ರಾಗಿ,  ಚಿಟ್ಟೆ  ಹಕ್ಕಿಗಳ  ಗೆಳೆತನದ  ಆಪ್ತ  ಅನುಭವ  ಪಡೆಯುತ್ತದೆ.  ಪರಸ್ಪರ  ಅಪಾಯದ  ಸಂದರ್ಭದಲ್ಲಿ   ಪರಸ್ಪರ  ಸಹಾಯ ವಿನಿಮಯ ಮಾಡಿಕೊಳ್ಳುತ್ತವೆ. ತಮ್ಮ  ಜ್ಞಾನದಾಹವನ್ನು  ನೀಗಿಸಿಕೊಳ್ಳುತ್ತವೆ.

    ಕೃತಿಯ  ನಿರೂಪಣೆಯಲ್ಲಿ  ಇನ್ನಷ್ಟು  ವರ್ಣನೆ,  ಭಾವ ಪೂರ್ಣ ತಿರುವುಗಳು,  ಕಥೆಯ  ಹರಿವಿನಲ್ಲಿ  ಇನ್ನೂ  ಕೊಂಚ  ನಿಧಾನತೆ,  ಒದಗಿದ್ದರೆ  ಕೃತಿಗೆ  ಮತ್ತಷ್ಟು  ಹೊಳಪು  ಮೂಡುತ್ತಿತ್ತೇನೋ  ಎಂದೆನ್ನಿಸುತ್ತದೆ. 

    ಪ್ರಸ್ತುತ  ಕೃತಿ,  ಸಾಂಪ್ರದಾಯಿಕತೆಯನ್ನು  ಹಿಂದಿಟ್ಟು,  ಪ್ರಯೋಗಶೀಲತೆಯಲ್ಲಿ  ತೊಡಗಿರುವುದು  ಶ್ಲಾಘನೀಯ.   ಮನೋವೈಜ್ಞಾನಿಕ  ನೆಲೆಯಲ್ಲಿಯೇ  ಸಾಗುವ  ಪ್ರತಿ  ಚಲನೆಗಳ  ಹಿನ್ನೆಲೆಯಲ್ಲಿ,  ಲೇಖಕರ  ಅಧ್ಯಯನ  ಶೀಲತೆ, ಮತ್ತು  ಮಕ್ಕಳ  ಸಾಹಿತ್ಯದ  ಬಗೆಗೆ  ಇರುವ ಅಗಾಧ  ಆಸಕ್ತಿ,  ಮತ್ತು  ಪರಿಸರ  ಪ್ರೇಮ  ನಿಜಕ್ಕೂ  ಖುಷಿನೀಡುತ್ತದೆ.

     ಮುಂದಿನ  ಅವರ  ಪ್ರಯೋಗಗಳು  ಇನ್ನೂ  ಯಶ  ಪಡೆಯುತ್ತವೆ  ಎಂಬುದಕ್ಕೆ  ಅವರು  ಪ್ರಯೋಗಿಸಿದ  ತಂತ್ರ  ಮತ್ತು  ಮಕ್ಕಳಮೇಲಣ  ಪ್ರೀತಿ  ಸಾಕ್ಷಿ  ನುಡಿಯುತ್ತಿವೆ.

                                                     ಸುಬ್ರಾಯ  ಮತ್ತೀಹಳ್ಳಿ.  ತಾ- ೯-೨-೨೦೨೧.

No comments:

Post a Comment