Tuesday 19 September 2023

ಭಾವದ ಬೆರಗು. - ತತ್ವದ ಮಿಂಚು. ತಲ್ಲಣಕೆ ಸಾಂತ್ವನ ;ʻʻ ಬುದ್ಧಚರಣ.ʼʼ

 

ಅನಿವಾರ್ಯವೇ  ಹಿಡಿದು ಕಾಡುವ ಶೋಕಗಳು..?  .....ಸಂಸಾರ ಸಾಗರದಿ ಮುಳುಗಿ ಮುಗಿಯದೇ  ಬೇರೆ ದಾರಿಯೇ ಇಲ್ಲವೇ....?  ಮುಗಿದಿಲ್ಲ ಯುದ್ಧ.  ಕಾಡುವ ಲೋಕಶೋಕವನು ಕಡೆಗಾಣಿಸದೆ  ಯುದ್ಧ  ಮುಗಿಯುವಂತೆಯೂ  ಇಲ್ಲ. ನಮ್ಮೊಳಗೆ  ಇರುವ  ಮಾರನೇ  ನಮ್ಮ ಎದುರಾಳಿ. ಮರುಳು ಮಾಡುತ್ತಾನೆ ಬಣ್ಣದೋಕುಳಿ ಚೆಲ್ಲಿ!   ದಿಗಿಲು ಗೊಳಿಸುತ್ತಾನೆ ಸಿಡಿಲ ಭೇರಿಯ  ಹೊಡೆದು.  ( ಬುದ್ಧಚರಣ ಮಹಾಕಾವ್ಯ )

           ಶೋಕವೇ  ಶ್ಲೋಕವಾಗಿ  ರಾಮಾಯಣ  ಸೃಷ್ಟಿಗೊಂಡಂತೆ , ಅಂತಹದೇ  ಆತಂಕಮಯ  ಬದುಕು ಕಂಡ   ಸಿದ್ಧಾರ್ಥ  ಬುದ್ಧನಾಗಿ  ರೂಪುಗೊಳ್ಳುತ್ತಾನೆ. ಅವನೇ  ಒಂದು  ತಾತ್ವಿಕ  ಕಾವ್ಯವಾಗಿ  ನಡೆದಾಡುತ್ತಾನೆ.  ಬುದ್ಧಿಯಾಚೆ  ಭಾವಜಗತ್ತಿಗೆ  ಜಿಗಿದ  ಬುದ್ಧ  ಪ್ರತಿಕಾಲ  ಪ್ರತೀ  ಕ್ಷಣ  ಪ್ರತ್ಯಕ್ಷಗೊಳ್ಳುತ್ತಲೇ  ಇರುತ್ತಾನೆ.  ಕೇವಲ  ಲೌಕಿಕವನ್ನಪ್ಪಿಕೊಂಡ  ಆಧುನಿಕನ  ಅಂತರಂಗಕ್ಕೆ,  ಯಾರನ್ನೂ  ಬಿಡದ  ಸಾವು  ನೋವು,  ಏರು ಇಳಿವು, ಮೋಸ ವಂಚನೆಗಳ  ಮೋಹಮಯ  ಬದುಕಿನ  ನಿಜವನ್ನು  ಕಣ್ಣಿಗೆರಚಲು  ಬುದ್ಧ  ತಣ್ಣಗೆ  ಆಕ್ರಮಿಸುತ್ತಾನೆ. ಮೌಲ್ಯ   ಪಲ್ಲಟದ  ಎಲ್ಲ  ಸಂದರ್ಭದಲ್ಲೂ   ಮಹಾಕಾವ್ಯ  ಜನ್ಮಿಸುತ್ತದೆ   ಎಂಬ  ಪ್ರತೀತಿಯಿದೆ.  ನಮ್ಮ    ವಾಸ್ತವದ  ಕ್ಷಣದಲ್ಲಿ  ನಿಂತು  ಸೂಕ್ಷ್ಮವಾಗಿ   ಗಮನಿಸಿದಾಗ  ಅನ್ನಿಸುವುದೂ  ಅದೇ.   ಆಧುನಿಕ  ಜೀವನವಿಧಾನ  ವೆನ್ನುವ  ಮಾಯಾ  ಮರೀಚಿಕೆ   ಜಗತ್ತಿನ  ಎಲ್ಲ  ಮನುಷ್ಯರನ್ನೂ  ವಿಚಿತ್ರವಾದ  ಮಾಯೆಯಲ್ಲಿ  ಸಿಲುಕಿಸಿ   ಅಯೋಮಯತೆಯನ್ನು  ಸೃಷ್ಟಿಸಿರುವ  ವರ್ತಮಾನದಲ್ಲಿ,   ಭೂತ  ಮತ್ತು  ಭವಿಷ್ಯದ  ಯಾವ  ಆತಂಕವೂ  ಇಲ್ಲದೇ   ಕೇವಲ  ವಾಸ್ತವವೊಂದನ್ನೇ  ಅಪ್ಪಿಕೊಂಡು,  ಬದುಕುತ್ತಿರುವ   ವಿಚಿತ್ರ   ಸನ್ನಿವೇಶದಲ್ಲಿ,   ಮತ್ತೊಂದು  ಮಹಾಕಾವ್ಯ   ತಣ್ಣಗೆ  ನಮ್ಮೆದುರು  ಪ್ರತ್ಯಕ್ಷವಾಗಿದೆ.

     ಮಹಾರೋಗ,  ಮಹಾಯುದ್ದ,  ಮಹಾ  ಹವಾಮಾನದ  ಏರಿಳಿತ,  ಚಂಡಮಾರುತ,   ರಾಜಕೀಯ  ಅಲ್ಲೋಲ  ಕಲ್ಲೋಲದಂತ  ಸಂಕಟಮಯ  ಸನ್ನಿವೇಶದಲ್ಲಿ,   ಮರುಭೂಮಿಯ   ಓಯಾಸಿಸ್‌  ನಂತೇ   ಮಹಾಕಾವ್ಯವೊಂದು ʻʻಬುದ್ಧಚರಣʼʼವಾಗಿ, ಕವಿ ಡಾ||  ಎಚ್ಎಸ್‌ ವೆಂಕಟೇಶಮೂರ್ತಿಯವರ   ಮೂಲಕ   ಸೃಷ್ಟಿಗೊಂಡು   ಸಂಚಲನ  ಮೂಡಿಸಿದೆ. 

      ಮಹಾಕಾವ್ಯಗಳ  ಕಾಲ  ಮುಗಿಯಿತು      ನುಡಿಯೇ  ಕ್ಲೀಷೆಯಾಗಿದೆ.  ಅಷ್ಟು  ದೀರ್ಘ  ಕಾವ್ಯವನ್ನು   ಇಂಥ  ಆತುರದ  ಬದುಕಿನಲ್ಲಿ   ಓದುವವರ್ಯಾರು...?  ಎಂಬ  ಪ್ರಶ್ನೆಯ  ನಡುವೆಯೇ,   ಪ್ರಾಚೀನ  ಬುದ್ದ  ಆಧುನಿಕ  ಬದುಕಿನೊಡನೆ   ಆಪ್ತಸಂವಾದಕ್ಕಾಗಿ  ಆಗಮಿಸಿರುವುದು   ನಿಜಕ್ಕೂ  ಬೆರಗು  ಮೂಡಿಸುವ  ಕ್ಷಣವಾಗಿದೆ.

      ಅದರಲ್ಲಿಯೂ    ಸಾವು  ನೋವುಗಳನ್ನೆದುರಿಸುತ್ತ,  ವಿಷಣ್ಣತೆಯ  ಚಕ್ರವ್ಯೂಹದಲ್ಲಿದ್ದ  ಕವಿಯನ್ನು  ಮಹಾಕಾವ್ಯವೇ  ಕೈಹಿಡಿದು  ಕರೆದ  ವಿಶಿಷ್ಟ ಪ್ರಸಂಗವಿದಾಗಿದೆ. ಸ್ವಂತ  ಬದುಕಿಗೆ  ಸಾಂತ್ವನವಾಗಿ  ರೂಪುಗೊಂಡ  ಪ್ರಸ್ತುತ  ಮಹಾ ಕಾವ್ಯ ʻʻ ಬುದ್ಧ ಚರಣʼʼ   ಸಹೃದಯರೆಲ್ಲರ   ಮನಸ್ಸಿಗೂ  ತಂಪೆರೆಯುವ  ತುಷಾರ ಸಿಂಚನವಾಗಿ  ನಮ್ಮೆದುರು  ಪುಟತೆರೆದು  ಕರೆದಿದೆ. ಪ್ರಾರಂಭದ   ಕವಿನುಡಿಯಲ್ಲಿಯೇ  ಕಾವ್ಯಾವತರಣದ  ಹಿನ್ನೆಲೆಯನ್ನು  ಕವಿ  ನೀಡುತ್ತಾರೆ.

       ʻʻಬುದ್ಧನ ಮನೋಧರ್ಮಕ್ಕೆ  ಯುಕ್ತವಾದ  ಲಯ ಮತ್ತು  ನುಡಿಗಟ್ಟನ್ನು  ದಕ್ಕಿಸಿಕೊಳ್ಳುವುದು  ನನ್ನ  ಮೊದಲ  ಅಗತ್ಯವಾಗಿತ್ತು. ಮನೆಯ  ಒಳಗೆ  ಹೊರಗೆ  ಅತ್ಯಾಪ್ತರನೇಕರು  ಮರಣವಶರಾಗಿ  ಗಾಢವಾದ  ವಿಷಾದ  ಆವರಿಸಿದ  ದಿನಗಳವು. ನನ್ನ  ಪತ್ನಿ ಮರಣಶಯ್ಯೆಯಲ್ಲಿರುವಾಗ  ಬುದ್ಧ ಕೃತಿಯನ್ನು  ಮುಗಿಸಲೇಬೇಕೆಂದೂ,  ಹಾಗೆ  ಮುಗಿಸಿದ  ಕೃತಿಯನ್ನು  ತನಗೇ  ಕೊಡುಗೆಯಾಗಿ  ನೀಡಬೇಕೆಂದೂ, ಆರ್ತನೋಟ  ಬೀರುತ್ತಾ  ಹೇಳಿದಾಗ  ನನಗೆ  ಕರುಳು  ಕತ್ತರಿಸಿದ  ಅನುಭವವಾಯಿತು. ......  ಅವಳೂ  ನನ್ನನ್ನು  ತೊರೆದ ಮೇಲೆ   ಆಕೆಯ  ಸಾವಿನ  ದಾರುಣ  ಪರಿಣಾಮ  ನನ್ನನ್ನು  ಸಂಪೂರ್ಣವಾಗಿ  ವಿಚಲಿತಗೊಳಿಸಿತು.    ವಿಷಾದ  ಆವರಿಸದೇ  ಪ್ರಾಯಃ  ಬುದ್ಧನ ಮಹಾಮೈತ್ರಿ  ಮತ್ತು  ಲೋಕಕಾರುಣ್ಯದ  ಸಮೀಪ  ಸುಳಿಯಲೂ  ನಾನು  ಅಸಮರ್ಥನಾಗುತ್ತಿದ್ದೇನೆಂದು  ಈಗ  ಅನ್ನಿಸುತ್ತಿದೆ.  ʼʼ

       ಕಾವ್ಯದ  ಅರ್ಪಣೆಯಲ್ಲೇ  ʻʻ ಅಷ್ಟಪದಿಯೇ  ಇಷ್ಟಪದಿಯಾಗಿ  ಮೈತಳೆದ  ಬುದ್ಧ  ಚರಣವ  ನಿನ್ನ  ಮುಡಿಯಮೇಲಿಡುವೆ/  ಮನದನ್ನೆ  ಒಪ್ಪಿಕೋʼʼ   ಎಂದೆನ್ನುತ್ತ  ʻʻ ಲೋಕನಶ್ವರತೆ  ನನ್ನನುಭವಕೆ  ತಂದವಳೆ / ಬಿಸಿಲುಂಡು  ನೆರಳ ಸೆರಗಿಲ್ಲಿಯೇ  ತೊರೆದು / ಹೇಳಿ  ವಿದಾಯ  ಮುಂದೆ  ತೆರಳಿದ  ತೊರೆಯೇ/ ಋಣಿನಾನು  ಕೊಟ್ಟ ಪ್ರೀತಿಗೆ / ಬಿಟ್ಟ ಬಳುವಳಿಗೆ /  ಚರಣವಳಿದರೂ   ಚರಿತೆಯುಳಿಸಿ  ಹೋದವಳಿಗೆ /ʼʼ   ಎಂಬ  ಕಾರುಣ್ಯಭರಿತ  ವಿಷಾದಪೂರ್ಣ  ನುಡಿಗಳಿಂದ   ಬುದ್ಧ ಚರಣದ ಪ್ರಶಾಂತ  ಹರಿವು  ಅನಾವರಣಗೊಳ್ಳುತ್ತದೆ.    

      ಬುದ್ಧನ  ಬದುಕಿನ  ಕತೆ  ಸರ್ವವೇದ್ಯ.  ಕನ್ನಡದ  ಮೇರುಲೇಖಕರಲ್ಲಿ  ಅನೇಕರು  ಬುದ್ಧಚರಣವನ್ನು  ಸ್ಪರ್ಶಿಸಿದ್ದಾರೆ.  ಆದರೂ  ಮತ್ತೆ  ಮತ್ತೆ  ಬುದ್ದ  ಅವತರಿಸುತ್ತಾನೆ. ವಾಸ್ತವದ  ಎಡ  ಬಲ  ಎರಡೂ  ಪಂಥಗಳಿಗೆ  ಸವಾಲಾದ  ಬುದ್ಧನ  ಮಧ್ಯಮ ಮಾರ್ಗ  ವರ್ತಮಾನಕ್ಕೆ  ಮತ್ತೆ  ಪ್ರಸ್ತುತವಾಗಿ  ಮಿಂಚುತ್ತಿದೆ.   ಬದುಕಿನ  ಎಲ್ಲ  ತಿರುವುಗಳಲ್ಲೂ  ಬುದ್ಧ  ಬಂದು  ಕಾಡುತ್ತಾನೆ.  ಇಲ್ಲಿಯೂ  ಅಷ್ಟೇ,  ಬುದ್ಧ  ಆಧುನಿಕ  ಬದುಕಿನ  ಅತಿ ಲೌಕಿಕತೆಯ  ಎದುರು, ಸಾತ್ವಿಕ ಆಕ್ರೋಶವಾಗಿ,  ಪ್ರತಿ  ಸಾಲು  ಸಾಲುಗಳಲ್ಲಿ  ಪ್ರತ್ಯಕ್ಷನಾಗಿದ್ದಾನೆ.  ಅತಿವೇಗಕ್ಕೆ  ತಡೆಯಾಗಿ,  ಪರಂಪರೆ  ಮತ್ತು  ಮಾನವೀಯತೆಗೆ   ವಿಸ್ಮೃತಿಯಾಗಿ  ಕಾಡುತ್ತಿರುವ   ಬದುಕಿನ  ಲಯರಹಿತ  ಚಲನೆಯನ್ನು  ನಿಯಂತ್ರಿಸುವ,   ವಿಸ್ಮರಣೆಗೊಂಡ   ಮಾನವ  ಸಂಬಂಧಗಳನ್ನು  ಮತ್ತೆ  ಜೋಡಿಸುವ  ಯತ್ನವಾಗಿ,  ಪ್ರಸ್ತುತ  ಕಾವ್ಯ  ಮೈದಳೆದಿದೆ.   ಪ್ರತೀ  ಚರಣವೂ  ನೇರ  ಹೃದಯಸಂವಾದ ಗೈಯುವ  ಶಕ್ತಿ  ಹೊಂದಿ, ಭಾವದುತ್ತುಂಗಕ್ಕೆ  ಕೊಂಡೊಯ್ಯುವ   ಮಹಾ ಭಾವಕಾವ್ಯವಾಗಿ  ಸೃಷ್ಟಿಗೊಂಡಿದೆ.   ಕೃತಿಯಲ್ಲಿ  ರಸಸ್ಥಾನಗಳನ್ನು  ಹುಡುಕ  ಹೊರಟವ  ನಿರಾಶೆಗೊಂಡಾನು.  ಏಕೆಂದರೆ  ಪ್ರತಿಯೊಂದು  ನುಡಿಗಳೂ  ರಸಪೂರ್ಣ.  ತಾತ್ವಿಕತೆಯಲ್ಲಿ  ಮೈದುಂಬಿಕೊಂಡ  ರಸೌಷಧಿ.

     ʻʻ ಹುಟ್ಟಿದವರೆಲ್ಲ  ಸಾಯಲೇಬೇಕು. ಹುಟ್ಟುಸಾವಿನ  ನಿತ್ಯನಾಟಕವ  ತೋರುತಿದೆ  ಪ್ರಕೃತಿ  ಹೂವರಳಿ  ಬಾಡುವುದು    ಮಣ್ಣಲ್ಲಿ,  ರವಿಮೂಡಿ  ಮುಳುಗುವನು  ಪ್ರತಿನಿತ್ಯ  ಬಾನಲ್ಲಿ, ..... ಯಾರಿಗೂ  ತಪ್ಪಿಸಲು  ಆಗದೀ  ಮೃತ್ಯುವನು,  ಅಪ್ಪಿಕೋ ! ಒಪ್ಪಿ    ಬಾಳ  ಕ್ಷಣಿಕತೆಯನ್ನು ʼʼ

    ʻʻ ಬುದ್ಧನೊಡನಿದ್ದರೂ   ಬುದ್ಧಿ  ಬದಲಾಗಿಲ್ಲ.ʼʼ   ಅದೇ  ನೀರು,  ಅದೇ  ಬಚ್ಚಲು,  ನಿತ್ಯ ಸ್ನಾನವಿಲ್ಲದಿದ್ದರೆ, ಮನಸ್ಸು  ರೋಗದ  ಗೂಡಾದೀತು.  ಶುದ್ಧಿಗೈಯ್ಯಲು  ಒಬ್ಬ  ಅಗಸ  ಬೇಕೇಬೇಕು.  ಬುದ್ಧಿಯಲ್ಲಿರುವ  ನೈತಿಕತೆಯನ್ನು  ಪ್ರಜ್ಞೆಯಾಳಕ್ಕೆ  ಜೋಡಿಸುವ  ಬುದ್ದನಂತವರು  ನಿತ್ಯ ಬೇಕು.  ಅಂಥ  ಅರ್ಥಪೂರ್ಣ  ಧ್ಯೇಯ    ಕಾವ್ಯದ್ದು. 

    ಬುದ್ಧ  ಕರುಣೆಯ  ಸಾಕಾರ  ಮೂರ್ತಿ.  ಅಂಗುಲಿ  ಮಾಲನಂತ  ಕ್ರೂರಿಯನ್ನೂ  ಕಾರುಣ್ಯದಿಂದಲೇ  ಶಾಂತಿಯ  ಖೆಡ್ಡಾಕ್ಕೆ  ಕೆಡವುತ್ತಾನೆ.  ರಾಜ್ಯ  ಕೋಶ  ಪದವಿ  ಬಂಧುಗಳು,  ಅದಕ್ಕೂ  ಮಿಗಿಲಾಗಿ  ಪ್ರಾಣಪ್ರಿಯೆ  ಯಶೋಧರೆಯನ್ನೂ  ತ್ಯಜಿಸಿ,  ಬರಿಗಾಲ  ವೈದ್ಯನಾಗಿ  ಸೃಷ್ಟಿಸಿದ  ತಾತ್ವಿಕ  ಸಂಚಲನ  ಸದಾ  ಜೀವಂತ.

      ʻʻ  ಸಂಸಾರ  ತ್ಯಾಗ  ಸಂಪೂರ್ಣ  ನನ್ನದೇ  ಹೊಣೆ,/ ಲೋಕಶೋಕವ  ಕಂಡಮೇಲೆ  ಸಂಸಾರದಲಿ / ಹೇಗೆ  ನೆಮ್ಮದಿಯಿಂದ  ಬಾಳಬಲ್ಲೆನು ಹೇಳು,,/   ಎಂದೆನ್ನುತ್ತ,  ʻʻ ಸಿದ್ಧಾರ್ಥ   ಹೊಂಬೆಳಗ ಹೊಳೆಗೆ  ಜಿಗಿದನು,/ ಹಾಕಿ  ಮಾರುಗೈ  ಈಜಿದನು / ಇನ್ನೊಂದು  ದಡದತ್ತ,/  ಹರಿವ  ಹೊಳೆಯಲ್ಲೊಂದು  ತೇಲು  ದೀಪದ ಹಾಗೆ  ಕಾಣುವನು  ಶಾಕ್ಯಮುನಿ./ʼʼ

           ಬಾಹ್ಯಜಗತ್ತಿನ  ಧ್ವೇಷ  ಮತ್ಸರ  ಸಾವು  ನೋವು  ಈರ್ಷೆ  ರೋಗ ರುಜಿನಗಳು  ಬಾಲಕ  ಸಿದ್ಧಾರ್ಥನ  ಕಣ್ಣಿಗೆ  ಬಿದ್ದಾಗ,  ಹುಟ್ಟಿದ  ಚಿನ್ನದ  ತೊಟ್ಟಿಲನ್ನೇ  ಮರೆಯುತ್ತಾನೆ.  ಅರಮನೆಯೇ  ಅವನ  ಸಂವೇದನೆಗೆ  ಬಂಧೀಖಾನೆಯಾಗುತ್ತದೆ.  ಪ್ರಾಯಕ್ಕೆ  ಬಂದಂತೇ  ಅವನ  ವಿರಕ್ತಿಗೂ  ಪ್ರಾಯ ಪ್ರಾಪ್ತವಾದಾಗ,  ಲೌಕಿಕತೆಯನ್ನೇ  ತೊರೆದು  ಅಲೌಕಿಕನಾಗಿಬಿಡುತ್ತಾನೆ. 

        

 

     

        ʻʻ ನೋಡುತ್ತ  ಹಾರುತ್ತಿದೆ  ಮೇಲೆ  ಸಂಕಲ್ಪವೇ  ಆಗಿ  ಶ್ವೇತ  ಮರಾಳ /

          ಮುಚ್ಚಿದ್ದ  ಶೃದ್ಧಾಮುಷ್ಠಿ  ತೆರೆದ  ಅಭಯದ  ಹಾಗೆ,  ನೀಲಿಯ  ನಿರಾಳದಲಿ /

          ತೆರೆದರೆ  ತೆರೆಯಬೇಕಣ್ಣ  ಇಲ್ಲೇ  ಕಣ್ಣ, / ದಿಕ್ಕು ದಿಕ್ಕಿಗೆ ಚಾಚಿ  ಚಡಪಡಿಕೆ  ಕರವನ್ನ /

          ಮಿಡಿವ  ಬೆರಳಿನ ಸಂಪನ್ನ  ಬಾಹುಗಳಿಂದ / ದುಃಖ  ದುಮ್ಮಾನಗಳ  ಒತ್ತು  ಮೋಡಗಳನ್ನ /

          ಒತ್ತರಿಸಿ ,  ಕಣ್ಣ  ಕಂಬನಿಯನ್ನು  ಒರೆಸಲಿಕ್ಕೆ./

 

ಬುದ್ಧ  ಬದುಕಿಗೆ    ಹೊಸ  ಆಯಾಮಕೊಟ್ಟ,  .  ಕಣ್ಣೆದುರೇ   ತನ್ನ  ಕಾರುಣ್ಯಗೋಪುರಕ್ಕೆ   ತಗುಲಿದ  ಆಘಾತವನ್ನೂ  ಎದುರಿಸಿದ.    ನಿಂತನೀರಾದ  ಧರ್ಮಗಳಿಗೆ  ಎಚ್ಚರದ  ಚಲನೆ ಸೃಷ್ಟಿಸಿದ.  ಮಾನವೀಯತೆಯ   ಬೀಜ ಬಿತ್ತಿ  ಚಿರಂಜೀವಿಯಾದ. 

     ಬುದ್ಧ  ಚರಣ,   ಕೇವಲ  ಬುದ್ಧನ  ಜೀವನ ಚರಿತ್ರೆಯಾಗದೇ  ಭಾವಗೀತಾತ್ಮಕತೆ,  ತಾತ್ವಿಕತೆ ಗಳ   ಗುಚ್ಛವಾಗಿ,  ಸಂಕೀರ್ಣ  ಜೀವನದ  ತಿರುವುಗಳ,  ಎದುರಾಗುವ  ದ್ವಂದ್ವಗಳ  ಸೂಕ್ಷ್ಮ ವಿವರಗಳು, ರೂಪಕವಾಗಿ,  ಪ್ರತಿಮೆಗಳಾಗಿ,   ಕಟುವಾಸ್ತವಕ್ಕೆ   ಆಪ್ತ  ಸಾಂತ್ವನವಾಗಿ  ಮೂಡಿ ಬಂದಿದೆ.  ಕೃತಿ  ಕೇವಲ  ಕಾಮ ಪ್ರೇಮ ಕ್ರೌರ್ಯದ  ವಿಜ್ರಂಭಣೆಯಾಗದೇ, ತಣ್ಣನೆಯ ತಾತ್ವಿಕ ಧಾರೆಯಾಗಿದೆ.  ಆಪ್ತ ಭಾವಗಳ  ಸರಳ ಸುಂದರ ಮಾಲೆಯಾಗಿದೆ. ಶಾಂತಿ ಸೌಹಾರ್ದಗಳ ವಿಶಾಲ ನೀಲಾಕಾಶವಾಗಿದೆ.

    ಮೊದಲೇ  ನಮ್ಮನ್ನ  ಆಕರ್ಷಿಸುವುದು    ಇಲ್ಲಿಯ  ಸಂಕ್ಷಿಪ್ತತೆ,  ಸರಳತೆ,  ಜೊತೆಗೆ  ಸಮಗ್ರತೆ. ಮೊದಲ  ಓದಿಗೆ  ಕಾಡುವ,  ಕೂಡುವ   ಕೆಣಕುವ   ಬುದ್ಧಚರಣ   ಮತ್ತೊಂದು  ಓದಿಗೆ ಪ್ರೇರೇಪಿಸುತ್ತದೆ.

ಕತ್ತಲೆಯ ಆಳದಲ್ಲಿ  ಬೆಳಕಾಗಿ  ಮೂಡಿದ  ಸುಂದರ  ಬುದ್ಧನ  ಮುಖಚಿತ್ರ  ರಘು  ಅಪಾರರದು.  ಒಳಪುಟಗಳ  ರೇಖಾಚಿತ್ರಗಳು, ಯುವಕಲಾವಿದ  ವಾಗೀಶ  ಹೆಗಡೆಯವರದಾದರೆ,  ಹಿಂಬದಿಯ  ಚಿತ್ರ, ಶಂಕರ  ಚಿಂತಾಮಣಿಯವರದ್ದು. 

    ====================================================================================

                                                   ಸುಬ್ರಾಯ  ಮತ್ತೀಹಳ್ಳಿ. 

 ಬುದ್ಧಚರಣ--  ಮಹಾಕಾವ್ಯ.

ಪುಟಗಳು,  280. ಬೆಲೆ- 350-00 

ಕವಿಡಾ||  ಎಚ್.ಎಸ್.‌ ವೆಂಕಟೇಶಮೂರ್ತಿ.

ಪ್ರಕಾಶಕರು ಅಂಕಿತ  ಪುಸ್ತಕ.  ಬೆಂಗಳೂರು.    

         

No comments:

Post a Comment