Monday 25 September 2023

ಸಂವೇದನಾಶೀಲ ಕವಿ ʻʻ ಉಮೇಶ ನಾಯಕ ʼʼ

 

          ಕಾವ್ಯ  ಮನುಷ್ಯನ  ಆತ್ಮದ  ಮಾತು  ಎನ್ನುತ್ತಾರೆ.  ಬರ ಬಿದ್ದ  ಮನಸ್ಸಿನ  ಓಯಾಸಿಸ್  ಎಂದರೆ  ನಿಜಕ್ಕೂ  ಕವಿತೆಯೇ.   ಕಾವ್ಯಾಸಕ್ತರು  ಒಂದು ದೃಷ್ಟಿಯಲ್ಲಿ  ಅಲ್ಪಸಂಖ್ಯಾತರು.  ಆದರೆ  ಕಾವ್ಯದ  ಅನುಸಂಧಾನ ಗೈಯ್ಯುವ  ಶಕ್ತಿಯಿರುವ  ವ್ಯಕ್ತಿತ್ವಕ್ಕೆ   ಕಾವ್ಯ  ನೀಡುವ  ಹೊಳಪು, ಮಾತ್ರ  ಅಸಾಧಾರಣವಾದದ್ದು.  ಕಾವ್ಯಾನುಸಂಧಾನಿ  ತನ್ನ  ವ್ಯಾವಹಾರಿಕ  ಬದುಕನ್ನೂ  ಸಹ   ಕಾವ್ಯವಾಗಿಸುತ್ತಾನೆ.  ತನ್ನ  ಸುತ್ತಲಿನ  ಪರಿಸರದಲ್ಲಿ  ಕಾವ್ಯದ  ಪರಿಮಳ  ಬೀರುತ್ತಾನೆ.   ಮನುಷ್ಯಸಂಬಂಧಗಳ  ಸರಪಣಿಯನ್ನು  ಪ್ರೀತಿಯ  ಮೂಲಕ   ಬಿಗಿಗೊಳಿಸುತ್ತಾನೆ.  ಅದಕ್ಕೇ  ಕಾವ್ಯ  ಸಾರ್ವಕಾಲಿಕವಾದ  ಸಾಂತ್ವನದ  ಶಕ್ತಿಯನ್ನು  ಪಡೆದುಕೊಂಡಿರುತ್ತದೆ.   ಸಹೃದಯರೇ  ..... ಅದೇ  ಕಾರಣಕ್ಕೆ  ಅಪರೂಪವಾಗಿ   ಒಂದಿಷ್ಟು ಕಾವ್ಯ  ಕ್ಷಣವನ್ನು  ಸೃಷ್ಟಿಸಿಕೊಂಡು   ಕಾವ್ಯವನ್ನು  ಧ್ಯಾನಿಸಲು  ತೊಡಗುತ್ತಿದ್ದೇನೆ.  ಕಾವ್ಯ  ಅದು  ಅನುಭವಕ್ಕೆ  ನಿಲುಕುವ,   ಮಾತಿನಲ್ಲಿ   ಸೋಲುವ  ವಿಚಿತ್ರ  ವಸ್ತು.   ಅರ್ಥೈಸ  ಹೊರಟಂತೇ,  ತನ್ನ  ಅರ್ಥವಂತಿಕೆಯನ್ನು  ವಿಸ್ತರಿಸಿಕೊಳ್ಳುತ್ತಲೇ,  ಕೊನೆಗೂ  ಹೇಳಬೇಕಾದುದು  ಹೊರಗೆ  ಉಳಿದು  ಬಿಡುವಂತೇ  ಮಾಡುವ   ಮಾಯಕದ  ಮಾಧ್ಯಮ  ಅದು. 

               ʻʻ ನಮ್ಮ  ವೀರ್ಯ  ದೇವರನ್ನು  ಹುಟ್ಟಿಸದಿರಲಿ. ʼʼ  

       ವಿವೇಕವಿಲ್ಲದ  ಸಮುದಾಯವಾಗಲೀ  ಪ್ರಭುತ್ವವಾಗಲೀ  ವಿಷಾದವನ್ನೇ  ಬಿತ್ತುತ್ತದೆ. ವಿಷಾದ ತುಂಬಿದ  ವಾತಾವರಣದಲ್ಲಿ  ಸಂಸ್ಕೃತಿ  ವಿಸ್ಮೃತಿಗೆ  ಈಡಾಗುತ್ತದೆ. ವಿಸ್ಮೃತಿ  ಸಮುದಾಯವನ್ನೇ  ತಪ್ಪುದಾರಿಗೆಳೆಯುತ್ತದೆ.  ಅಕ್ಷರಸ್ಥ  ಅಶೀಕ್ಷಿತರೇ  ಬಹುಸಂಖ್ಯಾತರಾದಾಗ  ಸಂಸ್ಕೃತಿಗೆ  ಮಂಕುಕವಿಯುತ್ತದೆ.  ಇಂಥ  ಸಂದಿಗ್ಧ  ಸಂದರ್ಭದಲ್ಲಿ  ಸತ್ಯದ  ಪದರಿನೆಡೆಗೆ  ಗಮನಸೆಳೆಯುವ,  ನಿಜವಾದ  ಮನುಷ್ಯತ್ವವನ್ನು  ಬೆಳಕಿಗೊಡ್ಡುವ  ಪ್ರಕ್ರಿಯೆ ಪ್ರಾರಂಭಗೊಂಡರೆ  ಮಾತ್ರ,  ಸಮುದಾಯ  ಜೀವಂತವಾಗಿ  ಇರಲು  ಸಾಧ್ಯ.  ಅಂಥ  ಬೆಳಕು ಬೀರುವ ಪ್ರಕ್ರಿಯೆಯಲ್ಲಿ, ಕೆಲವಾದರೂ  ಸಂವೇದನಾಶೀಲ  ಮನಸ್ಸು  ತೊಡಗಿಕೊಂಡಿರುವುದು, ನಿಜಕ್ಕೂ ಆಶಾದಾಯಕ  ಬೆಳವಣಿಗೆಯಾಗಿದೆ.

    ಉಮೇಶ  ನಾಯಕ್  ಮಣ್ಣ  ಬಗೆದು  ಸತ್ಯದ  ಶೋಧಕ್ಕಿಳಿದಿದ್ದಾರೆ.  ಭೂತದ  ಬೆನ್ನುಹತ್ತಿ, ಆಳದ  ಕತ್ತಲೆಯಲ್ಲಿ  ಕಳೆದು  ಹೋದ  ಸತ್ಯದ  ಅನ್ವೇಷಣೆಗೆ  ಪಣ  ತೊಟ್ಟಿದ್ದಾರೆ.  ಅವರ  ಮೈ  ಮನದ  ತುಂಬೆಲ್ಲ,  ಮಾನವತಾವಾದದ   ವಿಚಾರವಾದದ  ಸಾತ್ವಿಕ  ಅಸ್ತ್ರಗಳಿವೆ.  ಪ್ರೀತಿ, ಸ್ನೇಹ ಬಾಂಧವ್ಯದ  ಸಹಜ  ಕವಿ  ಇವರು.  ತನ್ನ  ಸುತ್ತಲಿನ  ಸಾಮಾಜಿಕ  ಸಾಂಸ್ಕೃತಿಕ ಮತ್ತು  ರಾಜಕಾರಣದ   ವಿಚಿತ್ರ ಬೆಳವಣಿಗೆಗಳನ್ನು  ಕೇವಲ  ಪ್ರೇಕ್ಷಕರಾಗಿ  ನೋಡದೇ  ಅಂಥ  ಸಮಸ್ಯೆಯ  ತಳಶೋಧನೆಗೆ  ತೊಡಗಿಕೊಂಡಿದ್ದಾರೆ.  ಕಣ್ಣೇದುರಿನ  ಕಲ್ಲು  ದೇವರಿಗೇ  ಸವಾಲೊಡ್ಡುತ್ತಿದ್ದಾರೆ.  ಭಾವತೀವ್ರತೆ  ಮತ್ತು  ವೈಚಾರಿಕತೆ  ಎರಡನ್ನೂ  ಪಡೆದುಕೊಂಡ  ಉಮೇಶ್  ಈಗಾಗಲೇ  ತಮ್ಮ  ಕವಿತೆ  ಮತ್ತು  ಲೇಖನಗಳ  ಮೂಲಕ   ಹೆಜ್ಜೆ ಮೂಡಿಸುತ್ತಿದ್ದಾರೆ.

      ಪ್ರಕೃತಿ  ದೇವರನ್ನು  ಸೃಷ್ಟಿಸಿದೆ.  ದೇವರು  ದೈತ್ಯರನ್ನು  ಸೃಷ್ಟಿಸಿದ..  ದೈತ್ಯರೆಲ್ಲ  ಮತದ ಹುಚ್ಚುಹಿಡಿದು  ಎಲ್ಲೆಲ್ಲೂ  ಕಿಚ್ಚು  ಹಚ್ಚುತ್ತಿರುವಾಗ,  ನಮ್ಮ    ಕವಿ,  ಪ್ರೀತಿಯ  ದೀಪಬೆಳಗುತ್ತಿದ್ದಾರೆ.

   ಧರ್ಮ  ದೇವರು  ಎಂಬ  ಮನುಷ್ಯನ  ಅನಾದಿ  ನಂಬಿಕೆಗಳು, ನಮ್ಮ  ನಡುವಣ  ಸಂಘರ್ಷದ  ಕಂದಕಗಳನ್ನು  ಮುಚ್ಚಬೇಕಿತ್ತು.  ಅದರ  ಬದಲು  ಮಹಾ  ಕಂದರಗಳನ್ನು  ಸೃಷ್ಟಿಸುತ್ತಿದೆ.  ತಾತ್ವಿಕ  ಎತ್ತರಕ್ಕೆ  ಕೊಂಡೊಯ್ಯಬೇಕಿತ್ತು,  ಅಮಾನವೀಯತೆಯ  ಕತ್ತಲೆಗೆ  ದೂಡುತ್ತಿದೆ.  ಎಲ್ಲೆಂದರಲ್ಲಿ,  ಮತೀಯವಾದದ  ಅಮಲು  ನೆತ್ತಿಗೇರುತ್ತಿದೆ.  ಮಂದಿರ  ಮಸೀದಿಯೆಂಬ  ಸ್ಥಾವರಗಳಿಗಾಗಿ,  ಸುಸ್ಥಿರ  ಬದುಕಿಗೇ  ಬೆಂಕಿಯಿಡುತ್ತಿದೆ. 

     ರಾಷ್ಟ್ರವಾದ,  ಬಹುಸಂಖ್ಯಾತವಾದ,  ಮತೀಯವಾದ, ಧರ್ಮಾಂಧತೆ,  ಮುಂತಾದ  ಮಾರಕ  ಸೋಂಕುರೋಗ,  ಜಗತ್ತಿನಾದ್ಯಂತ  ವಿಸ್ತರಿಸುತ್ತಿದೆ.  ಕೇವಲ  ಧರ್ಮಯುದ್ಧವೊಂದೇ  ಹರಿಸಿದ  ರಕ್ತ,  ಪ್ರಪಂಚದಲ್ಲಿ  ಹರಿದ  ನದಿನೀರನ್ನೂ  ಮೀರಿಸುತ್ತಿದೆ.  ಮಾಡಿದ  ನರಸಂಹಾರ  ಕ್ಯಾನ್ಸರ್  ಏಡ್ಸ ನ್ನೂ  ಮೀರಿಸಿದೆ.  ಅದೇ  ಒಂದು  ಮಾನವತೆಗೆ  ಶಾಪವಾಗಿ  ಪರಿಣಮಿಸುತ್ತಿದೆ.

      ಎಲ್ಲ  ದುರಂತಗಳನ್ನು  ತಮ್ಮ  ಸಂವೇದನಾಶೀಲ  ಮನಸ್ಸಿನಿಂದ  ದೃಷ್ಟಿಸುವ  ಕವಿ,

 ʻʻನಮ್ಮ  ವೀರ್ಯ  ದೇವರನ್ನು  ಹುಟ್ಟಿಸದಿರಲಿʼʼ ಎಂದು  ಸಾತ್ವಿಕ  ಆಕ್ರೋಶದಿಂದ  ಘೋಷಿಸುತ್ತಾರೆ.

   ʻʻ ಮಣ್ಣಾಗುವ  ಮುನ್ನ  ಸತ್ಯ / ಹೂತ  ಹೆಣ ಎಬ್ಬಿಸಿ / ನಮ್ಮಾತ್ಮ ದಾಖಲಿಸ ಬೇಕಿದೆ ಹೆಣದ  ಮಾತು /  ಹೊಸ ಹರಿವು  ನಲಿವಿನಲಿ /  ಸುಳ್ಳಾಗಬೇಕಿದೆ ಗೋರಿಯ ಮೇಲಿನ  ಕೆತ್ತನೆ /ʼʼ  ಎಂದು.

    ಕವಿ  ಉಮೇಶರಲ್ಲಿ  ಕನ್ನಡ  ಕಾವ್ಯದ  ಪ್ರತಿರೋಧದ  ಪರಂಪರೆ  ನಿರಂತರ  ಸಾಗುತ್ತಿದೆ  ಎಂಬುದಕ್ಕೆ, ಅವರ  ಕಾವ್ಯದ    ಸಾಲುಗಳೇ  ಸಾಕ್ಷಿನುಡಿಯುತ್ತವೆ.  ಬೇಂದ್ರೆಯವರ  ಸುಪ್ರಸಿದ್ಧ  ಕವಿತೆ  ತುತ್ತಿನ ಚೀಲ  ನೆನಪಾಗುತ್ತದೆ.

ಸಾವಿನ  ನೋವಿಗೆ  ಕಲಮಲವೆದ್ದು /  ನೆಲವನ್ನೆಲ್ಲಾ  ತುತ್ತುವೆನೆಂದು / ಗದರುತ್ತಿಹುದು,    ʻʻದೇವರದೊಂದು  ಗೋರಿಯ ಕಟ್ಟಿ /  ಧರ್ಮದ  ದೂಪಕೆ  ಬೆಂಕಿಯನಿಕ್ಕಿ /  ಗಣಗಣ  ಬಾರಿಸಿ  ಪ್ರಾಣದ  ಗಂಟೆಯ /  ಗರ್ಜಿಸುತಿಹುದು, / ಬಡವರ  ಬಗ್ಗರ  ತುತ್ತಿನ  ಚೀಲದ  / ಒಳಗಿನ  ಒಳಗಿನ  ಒಳದನಿಯೊಂದು //  ಇಲ್ಲಿಯೂ  ಹಸಿವಿನ ಆಕ್ರಂದನ  ಕರುಳನ್ನು  ಚುಚ್ಚುತ್ತದೆ.

   ಮನುಷ್ಯ  ಅದೆಷ್ಟು  ಪ್ರಗತಿ  ಸಾಧಿಸಿದ್ದಾನೆ.  ತಾನು  ಅತ್ಯಾಧುನಿಕ  ಎಂಬ  ಅಹಮ್  ನಲ್ಲಿ  ಮೆರೆಯುತ್ತಿದ್ದಾನೆ.  ಇದು  ಪ್ರಗತಿಯೋ  ವಿಕಾಸವೋ...?   ಆಧುನಿಕತೆ  ವ್ಯಾಪಿಸಿದಂತೇ  ವಿವೇಕವನ್ನೇ  ಕಳೆದುಕೊಳ್ಳುತ್ತಿರುವ  ಮನುಷ್ಯರ  ನಡುವೆ,

    ʻʻಸತ್ತರೆ  ತಾಯಿ,/ ಅತ್ತರೆ  ಕೂಸು / ಹತ್ತರ  ಕರೆಯಲು  ಯಾರಿಲ್ಲಾ / ಸುತ್ತಲು  ಮುತ್ತಲು  ಹೆಣವೆಲ್ಲಾ /ʼʼ  ಎಂಬ  ದಿನಕರ  ದೇಸಾಯಿಯವರ  ಕೂಗಾಗಲಿ,

     ʻʻಬಡವರು ಸತ್ತರೆ  ಸುಡಲಿಕ್ಕೆ  ಸೌದಿಲ್ಲೋ /  ಒಡಲ  ಬೆಂಕೀಲಿ  ಹೆಣ ಬೆಂದೋ  ದೇವರೇ /  ಬಡವಗೆ  ಸಾವ  ಕೊಡಬೇಡೋ...ʼʼ ಎಂಬ  ಜನಪದರ  ಆಕ್ರೋಶವನ್ನು  ಯಾರೂ  ಕೇಳುವವರೇ  ಇಲ್ಲ.    ಇಂಥ  ಕಿವುಡು  ದೇವರೆದುರು,  ನಮ್ಮ  ಹಿರಿಯ  ಕವಿಗಳೆಲ್ಲರೂ,  ಪ್ರತಿಭಟಿಸಿದ್ದಾರೆ.  ಗತಿ ಯಿಲ್ಲದ  ಮತಿ  ತಪ್ಪಿದ  ಮಾನವ  ಮಂದೆಯ  ಕಣ್ಣು  ಕಿವಿ  ತೆರೆಸಲು  ಹೆಣಗಾಡಿದ್ದಾರೆ.

    ಪ್ರಸ್ತುತ  ನಮ್ಮ  ಯುವ  ಕವಿ  ಉಮೇಶ್‌,  ಅದೇ  ಪ್ರತಿರೋಧದ  ಹೆದ್ದಾರಿ  ಹಿಡಿದಿದ್ದಾರೆ.

     ʻʻ ಮೊರೆಯಿಡುತ್ತಿದ್ದಾರೆ ;/  ಹಗಲಲ್ಲಿ  ಕತ್ತಲ ದೀಪ ಉರಿದು, / ಅವರ  ಸುಖ  ಸಾವಾದ  ಕುರಿತು / ಮತ್ತಾರಿದ್ದಾರೆ  ದೂರಲು /  ಆಗಸ  ವ್ಯಾಪಿಸಿದ    ಜಾಣನ ಹೊರತು, /  ಕೈಲಾಸ ವಾಸಿ ಆತ /  ಕುಂಡೆಯಾನಿಸಿ  ಕುಳಿತಿದ್ದಾನೆ ʼʼ

     ಎಂದು  ಅದು  ಹೇಗೋ  ನಮ್ಮ  ನಡುವೆ  ಹುಟ್ಟಿಕೊಂಡ  ಆಲಸಿ, ಬೇಜವಾಬ್ದಾರಿ  ದೇವರನ್ನು  ಉದ್ದೇಶಿಸಿ  ಚುರುಕು  ತಟ್ಟಿಸುತ್ತಾರೆ.

     ಮೂಲಭೂತವಾಗಿ  ಉಮೇಶ್‌,  ಅರ್ಥಶಾಸ್ತ್ರದ  ವಿದ್ಯಾರ್ಥಿಯಾದರೂ,  ತಾತ್ವಿಕವಾಗಿ  ಮಾನವತಾವಾದ, ಜಾತ್ಯತೀತವಾದದ  ನೆಲೆಯಲ್ಲಿ,  ಉಸಿರಾಡುತ್ತಿರುವ  ಅಪರೂಪದ  ಕವಿ.  ಕ್ರೂರ  ವರ್ತಮಾನದಲ್ಲಿ,  ಜರುಗುತ್ತಿರುವ   ಧರ್ಮಾಂಧತೆಯ  ಕೋಲಾಹಲ  ಕಂಡು.  ವಿಚಲಿತಗೊಂಡ, ಯುವಕ.  ಅವರ  ಗದ್ಯ  ಮತ್ತು  ಪದ್ಯಗಳೆಲ್ಲದರ  ಆಳದಲ್ಲಿ.  ಮಾನವೀಯ  ಕಳಕಳಿ, ತುಡಿಯುತ್ತಿದೆ.   ಶೋಷಿತ  ಸಮುದಾಯದ  ಬಗೆಗೆ  ಹೃದಯ  ಮಿಡಿಯುತ್ತಿದೆ.

    ಪ್ರಭುತ್ವವೇ  ಎದ್ದು,  ಬಹುತ್ವ,ಮತ್ತು ವೈವಿಧ್ಯತೆಯ  ವಿರುದ್ಧ  ಸಂಚು ರೂಪಿಸುತ್ತಿರುವ  ವಿಷಾದನೀಯ  ಕ್ಷಣದಲ್ಲಿ, ಕವಿಯ   ಸಂವೇದನಾಶೀಲ  ಮನಸ್ಸು  ತಹ ತಹಗೊಂಡು  ಕುದಿಯುತ್ತಿದೆ.  ಸತ್ಯಕ್ಕಾಗಿ  ಹಪಹಪಿಸುತ್ತಿದೆ. ಇಲ್ಲಿ  ಮತ್ತೆ  ಕುವೆಂಪು ರವರ  ಕಲ್ಕಿ  ಕವಿತೆ  ಕಾಡತೊಡಗುತ್ತದೆ.  

       ʻʻಬಡವರ  ಹಸಿವಿಗೆ  ಮೌಢ್ಯವ  ಕೊಟ್ಟು / ಸುಖ  ಸಂಪತ್ತನು  ಕೊಂಡವರು /  ಮೃಷ್ಟಾನ್ನವನೇ  ಉಂಡವರು /  ಗುರುಗಳು  ಶಿಷ್ಯರು  ಮನೆಗಳು  ಮಠಗಳು /  ಎಲ್ಲರು  ಬೆಂದರು  ಬಡಬಾಗ್ನಿಯಲಿ / ಬಡವರ  ಬಗ್ಗರ  ಜಠರಾಗ್ನಿಯಲಿ /  ಬಡವನೇ  ಕಲಿಯುಗದಂತ್ಯದ  ಕಲ್ಕಿ!!  ( ಕಲ್ಕಿ)  ಕುವೆಂಪು.

     ಕವಿತೆಯೆಂಬುದು    ಜಡತೆಯ ವಿರುದ್ಧ  ಸಾರುವ  ಯುದ್ಧವಿದ್ದಂತೆ.  ಹಲವು  ಕೊಳೆಗಳು  ಮನಸ್ಸನ್ನು  ಸದಾ  ಆಕ್ರಮಿಸುತ್ತಲೇ  ಇರುವಾಗ, ಕವಿತೆ  ಮನಸ್ಸಿಗೆ ನಿತ್ಯ ಸ್ನಾನ  ಮಾಡಿಸುತ್ತದೆ.  ಶುದ್ಧೀ ಕರಿಸುತ್ತದೆ.  ಎಚ್ಚರ  ತಪ್ಪಿದ  ಸಮುದಾಯಕ್ಕೆ  ಚುಚ್ಚು ಮದ್ದು  ನೀಡುತ್ತದೆ.   ಹಿನ್ನೆಲೆಯಲ್ಲಿ  ಉಮೇಶ್  ನಾಯಕರ   ಪ್ರಸ್ತುತ  ರಚನೆ  ʻʻನಮ್ಮ ವೀರ್ಯ  ದೇವರನ್ನು  ಹುಟ್ಟಿಸದಿರಲಿʼʼ  ಕವನ  ವೈವಿಧ್ಯಮಯ  ಪ್ರತಿಮೆಗಳ  ಮೂಲಕ,  ವರ್ತಮಾನದ  ನಮ್ಮ  ನಡುವಣ  ಸ್ವಾರ್ಥಪರ  ರಾಜಕಾರಣ, ಕೋಮು  ಧರ್ಮಗಳ  ದುರುಪಯೋಗ,  ದೇವರ  ಬಗೆಗಿನ  ಮುಗ್ಧ ನಂಬಿಗೆಯನ್ನು  ಮತದ  ಸರಕಾಗಿ  ಪರಿವರ್ತಿಸಿಕೊಳ್ಳುವ  ಹುನ್ನಾರಗಳನ್ನು  ಪರಿಣಾಮಕಾರಿಯಾಗಿ  ಬಿಂಬಿಸುತ್ತಿದೆ. 

      ಕ್ಷಣದಲ್ಲಿ  ಬರಗೂರರ  ಅಭಿಪ್ರಾಯ  ನಮ್ಮೆಲ್ಲರ  ಕಣ್ಣು  ತೆರೆಸುವಂಥದ್ದಾಗಿದೆ. 

         ʻʻ ದೇವರನ್ನು ಕುರಿತ ಬುದ್ಧ ಗುರುವಿನ 'ಮೌನ'ಮಾತು ನಾಸ್ತಿಕರಿಗೆ ಆದರ್ಶವಾಗಬೇಕು. ಬಸವಣ್ಣನವರ 'ದೇಹವೇ ದೇಗುಲ'ವೆಂಬ ಪರಿಕಲ್ಪನೆ ಆಸ್ತಿಕರಿಗೆ ಆದರ್ಶವಾಗಬೇಕು. ಆಗ'ದೇವರುಗಳೂ' ಪಾರಾಗುತ್ತಾರೆ; ಜನಗಳೂ ಪಾರಾಗುತ್ತಾರೆ!ʼʼ

(  ಯೂ  ಟ್ಯೂಬ್  ಚಾನಲ್  ಗಾಗಿ,   ಕವಿ  ಉಮೇಶ  ನಾಯ್ಕರ  ಕವನದ  ವಿಶ್ಲೇಷಣೆ )         

 

    

No comments:

Post a Comment