Tuesday 26 September 2023

ದಾರುಣ- ಶ್ರಾವಣ

 

ಮಹಾಮಳೆಯೇ  ಈ ಇಳೆಯ ತೊಳೆದೆ

ರಕ್ಷಕಿಯಾಗಿದ್ದ ನೀ   ರಕ್ಕಸವೇಷ  ತಳೆದೆ

ಅಮ್ಮನಾದವಳೇಕೆ  ಗುಮ್ಮನಾದೆ…?

ಜುಮ್ಮುದಟ್ಟಿಸಿ  ಏಕೆ  ಸುಮ್ಮನಾದೆ…?

             ಆಕಾಶ  ಕಡಿದು ಬಿತ್ತು. ಭೂಮಿ ಸಾಗರವಾಯ್ತು

              ನರಳಿತು  ಜೀವ, ಮುಳುಗಿತು  ಬದುಕು

             ತೇಲಿತು  ಹೆಣ,  ಹಾರಿತು  ವಿಮಾನ.

ಮಹಾಪೂರವಿರಲಿ,  ಬರಲಿ  ಬರಗಾಲ

ನಾಶವಲ್ಲವಿದು   ಕೆಲವರ  ಸಾರೋದ್ಧಾರ.

ಕೋಟೆ ಎಂದೂ  ಮುಳುಗುವುದಿಲ್ಲ

ಕೋಟಿ  ಕೋಟಿ ಅಲ್ಲಿ  ಸೇರುತ್ತದೆ.

ಪುಡಿಗಾಸು  ಅಲ್ಲಲ್ಲಿ ಎರಚುತ್ತದೆ

ಹನಿಯುವುದು  ಒಂದಿಷ್ಟು   ಸಾಂತ್ವನ.

      ಕುರಿಹಿಂಡ  ಬಲಿಗೊಟ್ಟು  ಕರಿಪಡೆಯ ಬಿಟ್ಟು

      ನರಿ ತೋಳಗಳ  ಬಗಲಲ್ಲಿ  ಬಚ್ಚಿಟ್ಟು

      ಅಟ್ಟಹಾಸದಿ  ಕುಣಿದೆಯಲ್ಲ…?

      ನಮ್ಮಮೇಲೇಕಿಷ್ಟು  ಸಿಟ್ಟು….?

ಪ್ರಕೃತದಲ್ಲಿ  ಎಂಥ  ವಿಕೃತಿ,

ಪ್ರಕೃತೀ   ಹೀಗೇಕೆ  ಮಾಡುತೀ…?

ಅಹಂಕಾರ  ಹೂಂಕಾರ  ಅಲ್ಪತೆಯ  ಠೇಂಕಾರ

ದಾಹ  ದಾಹ   ರೌದ್ರಾವತಾರ.

      ಓಣಿ  ಓಣಿಯೇ  ಕಾಣೆ, ಮನೆಯೆಲ್ಲ  ದೋಣಿ.

       ಕುಸಿದ  ಗುಡ್ಡ  ಜಾರು  ಭೂಮಿ

      ಹಾರಿ  ಹೋರಿ  ಹಾಸಿ   ಹೊಸೆದು

      ಜೀವ ಹೀರಿ  ಧ್ವೇಷ  ಕಾರಿ

       ತುಳಿದು  ಬಿಟ್ಟೆ  ಹಳಿದು ಬಿಟ್ಟೆ

      ಇಲ್ಲಿ  ಯಾರು ಕೌರವರು, ಯಾರು ಪಾಂಡವರು…?

 

ಹರಿದ  ಹೊತ್ತಿಗೆಯೊಳಗೆ  ಗೆದ್ದಲು

ನುಸುಳಿದೆ  ಮೆತ್ತಗೆ……

ಹೊತ್ತು ಮುಗಿದಿದೆ    ಕತ್ತೆಗೆ

  ಸತ್ತೆಗೆ.

ಕತ್ತು  ಎತ್ತಿದೆ   ಸತ್ವ ಕೆರಳಿದೆ

ಹಿಮದ  ಒಡಲಲೂ  ಜ್ವಾಲೆ  ಹೊತ್ತಿದೆ

ಕಾಯುತಿದೆ  ಕಾಲ   ಕಾತರದಲ್ಲಿ.

ಮತ್ತಿಗೆ  ಮದ್ದೆರೆಯಲು,

ಸಿದ್ಧಗೊಂಡಿದೆ    ಸುತ್ತಿಗೆ.

                                                 ಸುಬ್ರಾಯ  ಮತ್ತೀಹಳ್ಳಿ. ತಾ, ೨-೯-೨೦೧೯

 

No comments:

Post a Comment