Tuesday 26 September 2023

ಜೀವ ಬಿಂದು--ʻʻಕಾವ್ಯ ಸಿಂಧು.ʼʼ( ಮುನ್ನುಡಿ)

 

        ಹಲವು  ವರ್ಷಗಳ  ಹಿಂದಿನ  ಮಾತು.  ಹಿರಿಯ  ಮಾರ್ಗದರ್ಶಿ  ಗೆಳೆಯರಾದ  ಲೇಖಕ  ಜಯರಾಮ  ಹೆಗಡೆಯವರ  ಮನೆಗೆ  ಪ್ರಥಮಬಾರಿ  ಹೋದಾಗ  ಬಾಗಿಲಲ್ಲೇ  ಪುಟ್ಟ  ಪೋರಿಯೊಬ್ಬಳು  ನಿಂತು  ನಗುಬೀರಿ,  ಓಡಿಹೋಗಿ  ತಾಯಿಯ  ಮಡಿಲುಸೇರಿದ್ದಳು. ಪೋರಿಯ  ಚುರುಕು ಮಾತು, ತುಂಟತನ ನನ್ನನ್ನು  ಆಕರ್ಷಿಸಿತ್ತು.  ಇದೀಗ  ಅದೇ  ಪೋರಿ  ಉತ್ತರಕನ್ನಡ  ಜಿಲ್ಲೆಯ  ಪ್ರತಿಭಾವಂತ  ಕವಯತ್ರಿಯಾಗಿ,  ಅದೇ  ಚುರುಕು, ಅದೇ ತುಂಟತನ, ಅದೇ ಪ್ರೀತಿ  ಅದೇ  ಜಗಳದಿಂದ  ಮತ್ತೆ  ಮನಸ್ಸನ್ನು  ಆಕ್ರಮಿಸುತ್ತಿದ್ದಾಳೆ.    ಅವಳೇ  ತುಂಟ ಬಾಲೆಯ  ತಾಯಿ. ಸಿಂಧು ಚಂದ್ರ ಹೆಗಡೆ. ಮೂರು ಕವನ ಸಂಕಲನಗಳ  ಒಡತಿ.

       ಸ್ತ್ರೀ ಅನುಭವವೇ   ಅದೊಂದು  ವಿಶಿಷ್ಟ  ಜಗತ್ತು.  ಅಲ್ಲಿ  ಮಾತಿಗಿಂತ  ಮೌನವೇ  ಅಧಿಕ.  ಸಾವಿರಾರು  ವರ್ಷದ  ಪುರುಷ  ಆಡಳಿತ,  ಪುರುಷ  ಭಾಷೆಗಳ  ಗಡಸು  ಗದ್ದಲಗಳ  ನಡುವೆ,  ಧ್ಯಾನಸ್ಥಗೊಂಡಿದ್ದ,  ಅಹಲ್ಯೆಯ  ಶಿಲೆಯಾಗಿದ್ದ  ಸ್ತ್ರೀ  ಸಂವೇದನೆ    ದ್ರವಿಸಿ  ಮೆಲ್ಲನೆ  ಹರಿಯತೊಡಗಿದ್ದು, ತೊರೆಯಾಗಿದ್ದು, ಪ್ರವಾಹವಾಗತೊಡಗಿದ್ದು,  ಇತ್ತೀಚಿನ  ವರ್ಷಗಳಲ್ಲಿ.  ಆದರೂ  ಸ್ತ್ರೀ ಲೋಕದ  ಆಳದಲ್ಲಿ  ಇನ್ನೂ  ನಿಗೂಢತೆಯಿದೆ.  ವಿಶಿಷ್ಟ  ಅನುಭವ ಮತ್ತು  ಅನುಭಾವಗಳು, ಬೆಳಕು ಕಾಣಬೇಕಿದೆ.  ನಿಸರ್ಗಸಹಜ  ಮೃದುತ್ವ, ಸಂಕೋಚಗಳ  ಪೊರೆಯ  ಹಿಂದೆ,ಹುದುಗಿರುವ  ಬದುಕಿನ  ಹೊಸ  ಸತ್ಯ  ಅನಾವರಣ ಗೊಳ್ಳಬೇಕಿದೆ. 

         ಹೊಸ ಶತಮಾನದ  ಪ್ರಾರಂಭದ  ಯುವ ಕವಯತ್ರಿಯರ  ತಾತ್ವಿಕ ಗ್ರಹಿಕೆ, ಸಾತ್ವಿಕ ಅಭಿವ್ಯಕ್ತಿಗಳನ್ನು  ಸೂಕ್ಷ್ಮವಾಗಿ  ಗಮನಿಸಿದರೆ,  ಖುಷಿ  ಮತ್ತು  ಅಚ್ಚರಿ  ಒಮ್ಮೆಲೇ  ಉಂಟಾಗುತ್ತದೆ.  ಪುರುಷ  ಗ್ರಹಿಸಿದ  ಬದುಕಿನ  ಲಯಕ್ಕೆ, ಚಲನೆಗೆ  ಹೊಸ  ಆಯಾಮ, ಹೊಸ ವಿಸ್ತಾರ ಹೊಸ ಚಿಗುರು  ಮೂಡಲು  ಪ್ರಾರಂಭಗೊಂಡಿದೆ.  ಹೆಣ್ಣಿನ  ಬಗೆಗಿನ  ಸಿದ್ಧ ಭಾವ  ಛಿದ್ರಗೊಂಡು, ಸಮುದಾಯದಲ್ಲಿ  ಹೊಸ ಸಂಚಲನ  ಮೂಡುತ್ತಿದೆ.

       ಕರುಣೆಯೇ  ಕಾವ್ಯದ  ಆತ್ಮ. ಕರುಣೆಯ  ಮೂರ್ತರೂಪ  ತಾಯಿ. ತಾಯಿಯೇ  ಒಂದು  ಕಾವ್ಯ.  ತಾಯ್ತನವಿಲ್ಲದ  ಮನಸ್ಸು  ಎಂದೂ  ಕವಿತೆಯನ್ನು  ಸೃಜಿಸಲಾರದು. ಮಾತು  ಮಂತ್ರವಾಗಬೇಕೆಂದು  ಬಯಸಿದರು  ಕುವೆಂಪು.  ಮಂತ್ರ  ಪುರುಷಪರ. ಮಾತು  ಮಾತೆಯಾಗಬೇಕು.  ಮಾತೃತ್ವದ  ನೆಲೆಯಲ್ಲಿ  ಕಾವ್ಯ  ಜನಿಸಬೇಕು. ಕರುಣೆಯ ಶೃತಿಯಲ್ಲಿ, ಸಾತ್ವಿಕ  ಪ್ರತಿರೋಧ  ಚಿಮ್ಮಬೇಕು.  ಹೊಸ ಜೀವನದೃಷ್ಟಿ  ತಾತ್ವಿಕತೆಯನ್ನು ಮೈಗೂಡಿಸಿಕೊಂಡಾಗ  ಮಾತ್ರ,   ಅಪ್ಪಟ  ಮಾನವೀಯ ಕಾವ್ಯ ಉದ್ಭವಿಸಬಹುದಾಗಿದೆ.

      ಭಾವ ಬನಿಗೊಂಡಾಗ, ಯಾಂತ್ರಿಕತೆಯ  ಕರ್ಕಶಕ್ಕೆದುರಾಗಿ  ಕಕ್ಕುಲತೆ  ಸ್ಪರ್ಶಿಸಿದಾಗ, ಬೌದ್ಧಿಕ ಕತ್ತಲೆಯಲ್ಲಿ  ಹೊಸ  ಚಂದ್ರೋದಯ  ಸಾಧ್ಯ.

        ನೆಲೆಯಲ್ಲಿಯೇ  ಸಿಂಧೂ ರವರ  ರಚನೆಗಳನ್ನು  ಗಮನಿಸುತ್ತಾ  ಹೋದಂತೇ, ಹೊಸದೊಂದು  ಅನುಭವಲೋಕಕ್ಕೆ  ಪ್ರವೇಶಿಸಿದಂತಾಯಿತು. ಅವರ  ಹೆಚ್ಚಿನೆಲ್ಲ  ಕವಿತೆಗಳಲ್ಲಿ  ಹೆಣ್ತನವೇ  ಸ್ಥಾಯೀಯಾಗಿ  ಬೆಳಗುತ್ತಿದ್ದರೂ, ಅಲ್ಲಿ  ಯಾವುದೇ  ವ್ಯವಸ್ಥೆಯ  ವಿರುದ್ಧ  ಏಕಪಕ್ಷೀಯ  ಆಕ್ರೋಶವಿಲ್ಲ.  ಅಥವಾ  ಪುರುಷ ಪ್ರಭುತ್ವದ  ಕಟು  ವ್ಯಂಗ್ಯವೂ ಇಲ್ಲ,  ಬದಲಾಗಿ  ಆತ್ಮಾವಲೋಕನವಿದೆ.  ಆತ್ಮ ವಿಮರ್ಶೆಯಿದೆ.  ಕಾಂತಾಸಮ್ಮಿತ  ಚಿಕಿತ್ಸೆಯ  ಮೂಲಕ  ಮನವೊಲಿಸುವ,  ಸಹಬಾಳ್ವೆ, ಸಮಾನ ಬಾಳ್ವೆ,ಯ ಮೂಲಕ   ಸಹಯಾನ  ಸೃಷ್ಟಿಸುವ  ಪ್ರಯತ್ನವಿದೆ.  ʻʻಬೀಸಿದ  ಕಲ್ಲು  / ಅಡಿಪಾಯವಾಗಿ, ಕಟ್ಟಿಹಾಕಿದ / ಹಗ್ಗ  ಆಧಾರವಾಗಿ /  ಧ್ವನಿ ಅರಳಬೇಕಿದೆ /  [ಕಟ್ಟು-ಪಾಡು]    ಕವಯತ್ರಿಗೆ  ವರ್ತಮಾನದ  ತಣ್ಣಗಿನ  ಕ್ರೌರ್ಯದ  ಅರಿವಿದೆ.  ಜಡ  ಸಂಪ್ರದಾಯದ  ಅನಿವಾರ್ಯ ಸರಪಳಿಯ  ನಡುವೆ  ಜೀವಿಸಬೇಕಾದ  ಸ್ಥಿತಿ  ಗಮನದಲ್ಲಿದೆ.

       ʻʻಕಂಕುಳಲ್ಲಿ  ಕಾದ  ಕಬ್ಬಿಣದ ಸರಳ / ಸರಕ್ಕನೇ  ಹಾಕಿ ತೆಗೆದಂತಾಗಿ /  ಕುಂಕುಮ ಭಾಗ್ಯ, ತಾಳೀಭಾಗ್ಯ, ಮುತ್ತೈದೆ  ಭಾಗ್ಯ /  ಕರುಣಿಸು  ತಾಯೇ  ಎಂದು  ಬೇಡಿಕೊಳ್ಳುವ  /  ದೈನ್ಯಸ್ವರಗಳು /  ಅಸಹನೀಯವೆಂದೆನಿಸಿ /  ಅಲವರಿಕೆ /  ಹೂವು  ಕುಂಕುಮ  ಬಳೆ   ಕಾಲುಂಗುರ  ತಾಳಿ /  ಗಿರುವ  ಬೆಲೆಯನ್ನು ತುಸು /  ಮನಸ್ಸಿಗೂ  ನೀಡಬಾರದೆ  ತಾಯೇ.....? ʼʼ( ವರಮಹಾಲಕ್ಷಿ ) 

        ಚಿನ್ನದ  ಪ್ರತಿಮೆ, ರೇಶಿಮೆ ಉಡುಗೆ, ಪಾತಿವೃತ್ಯದ  ಆಡಂಬರಗಳ  ನಡುವೆ  ನಡೆಯುವ  ಸಾಂಪ್ರದಾಯಿಕ  ಧಾರ್ಮಿಕ  ಚಟುವಟಿಕೆಗಳು,  ಮುತ್ತೈದೆಯರನ್ನು  ವಿಜ್ರಂಭಿಸುತ್ತ,  ನಿಷ್ಪಾಪಿ  ವಿಧವೆಯರನ್ನು  ಅಪಮಾನಿಸುವ  ಪ್ರಕ್ರಿಯೆ,  ಕವಯತ್ರಿಯನ್ನು  ವಿಚಲಿತಗೊಳಿಸುತ್ತದೆ.  ಅಧ್ಯಾತ್ಮ,  ತತ್ವಜ್ಞಾನ, ಪರಂಪರೆ  ಸಂಸ್ಕೃತಿ, ಸಂಪ್ರದಾಯ, ಭಕ್ತಿ, ಎಂದೆಲ್ಲ  ಭಜಿಸುವ, ಭಾಷಣಿಸುವ  ವೈಭವಿಸುವ    ಧಾರ್ಮಿಕ  ವಾತಾವರಣದಲ್ಲಿ  ಕಂಡೂ  ಕಾಣದಂತೇ  ಜೀವಪಡೆದು  ಕೇಕೆಹಾಕುವ  ಅಸಂಖ್ಯಾತ  ತಾರತಮ್ಯದ  ವರ್ತನೆಗಳು  ಇಲ್ಲಿಯ  ಹಲವಾರು  ಕವನಗಳಲ್ಲಿ  ಪರಿಣಾಮಕಾರಿಯಾಗಿ  ಚಿತ್ರಣಗೊಂಡಿವೆ. ಇವೆಲ್ಲವನ್ನೂ  ಕಣ್ಣಾರೆಯಾಗಿ  ನೋಡುತ್ತ  ನಿಂತಾಗ, ಮನಸ್ಸು  ಪರಿತಪಿಸುತ್ತದೆ.  ʻʻ ನಾನಿನ್ನೂ  ಸತ್ತಿಲ್ಲ,  ನನಗಿನ್ನೂ  ಜೀವವಿದೆ ʼʼ  ಎಂದುಕೊಳ್ಳುತ್ತಾ,  ಝಲ್ಲೆನ್ನುವ  ಎದೆ,  ಸುರಿಯುವ  ಕಣ್ಣೀರ  ಮಡುವಲ್ಲಿ,  ಸಾಲುಗಳು  ಜೀವಪಡೆಯುತ್ತವೆ.

     ʻʻ ಸತ್ತೇ  ಹೋಗಿದ್ದರೆ ಅದೆಷ್ಟು /  ಚನ್ನಾಗಿತ್ತು....? / ನಿನ್ನ ಮನೆಯಂಗಳದಿ / ಗರಿಕೆಯಾಗಿ  ಪಸರಿಸಿ  ಬಿಡಬಹುದಾಗಿತ್ತು /   ನನ್ನಾತ್ಮವೆಂಬುದು ನಿನ್ನ /  ಮನೆಯ  ಬಾಗಿಲಿಗೆ  / ನೇತುಹಾಕಿದ  ಗಿಲಕಿಗೆ  /  ಬಡಿದು  ಸದ್ದು  ಮಾಡಬಹುದಿತ್ತು./  ನಿಂತ ಉಸಿರು  ಹಾಗೇ / ನಿನಗೆ  ತಾಕಿ  / ಕಚಕುಳಿ ಇಡಬಹುದಿತ್ತು. /   ........  ಈಗ  ಏನೂ  ಆಗುವಂತಿಲ್ಲ / ಏಕೆಂದರೆ  ನಾನಿನ್ನೂ  ಸತ್ತಿಲ್ಲ.ʼʼ(ನಾನಿನ್ನೂ  ಸತ್ತಿಲ್ಲ )    ಕಟು ವಾಸ್ತವ ಬೆಂಬಿಡದೇ  ಕಾಡುತ್ತಿದ್ದರೂ  ವಿಷಾದಮಯ ನಿರ್ವಾತ ಆವರಿಸಿದ್ದರೂ  ಜೀವನ  ಪ್ರೀತಿ, ಮತ್ತು  ಆಶಾವಾದ  ಖುಷಿನೀಡುತ್ತಿದೆ.

       ಕವಯತ್ರಿ  ಇದೀಗ  ಗೃಹಿಣಿ.  ದಾಂಪತ್ಯ,  ಮಗುವಿನ  ಲಾಲನೆ, ಸಂಸಾರ ನಿರ್ವಹಣೆ, ಮತ್ತು  ಉದ್ಯೋಗಗಳ  ನಡುವೆ  ಸಿಲಿಕಿರುವವಳು.  ಪ್ರೇಮ  ಪ್ರೀತಿ  ಮಮತೆ  ವಾತ್ಸಲ್ಯ ಮತ್ತು  ವ್ಯಾವಹಾರಿಕತೆ ಗಳ  ಒಟ್ಟೂ  ಮೊತ್ತವಾಗಿ, ಪ್ರಸ್ತುತ  ಸಂಕಲನ  ರೂಪುಗೊಂಡಿದೆ.  ಅಡಿಗೆಮನೆ  ಸಾಹಿತ್ಯ  ಎಂದೆನ್ನಿಸಿಕೊಂಡಿದ್ದ  ಮಹಿಳಾ  ಸಾಹಿತ್ಯ,  ಸಮಗ್ರ  ಸಮುದಾಯಕ್ಕೆ, ವೈಚಾರಿಕ ಕ್ಷೇತ್ರಕ್ಕೆ  ಪ್ರಕೃತಿಯ  ವೈಶಾಲ್ಯಕ್ಕೆ  ತಾತ್ವಿಕವಾಗಿ  ದಾಂಗುಡಿಯಿಡುತ್ತಿರುವುದನ್ನು  ನಾವಿಂದು ಕಾಣುತ್ತಿದ್ದೇವೆ.   ಅಂಥ  ಸಮಗ್ರ  ದೃಷ್ಟಿ  ಧೋರಣೆ  ಇಲ್ಲಿಯೂ ಇದೆ.  ಪ್ರೇಮ  ಇಲ್ಲಿ  ಮಾಗಿದೆ.  ಚಳಿಸಂಜೆ, ಧ್ಯಾನ, ಗ್ರಹಣ, ಕನಸಿನ ತೇರು, ಕವನಗಳಲ್ಲಿ  ಮತ್ತು ಒಂದೆರಡು  ಗಜಲ್‌  ಗಳಲ್ಲಿ  ಸುಂದರ  ರೂಪಕವಾಗಿ,  ಪ್ರತಿಮೆಗಳಾಗಿ  ಮೂಡಿಬಂದಿವೆ.

         `` ಕನಸಿನ  ತೇರಿಗೆ  ನಿನ್ನದೆ ಬಣ್ಣ / ಕಾಮನ ಬಿಲ್ಲಲಿ  ಅರಳುತಿದೆ /

          ಪ್ರೀತಿಯ  ಕಳಶವ  ಶಿರದಲಿ  ಧರಿಸಿ /ಚಕ್ರವು  ಉರುಳುತಿದೆ /’’ ( ಕನಸಿನ  ತೇರು )

`` ಮಳೆಯಿಲ್ಲದ  ರಾತ್ರಿಗಳಲೂ  ಮಳೆ / ಸುರಿಸಿದವನೇ / ಆಕಾಶದ  ದಾರಿಯಂತೇ  ಸಾಗುತ್ತಲೇ  ಇರುವ  ದೀರ್ಘ ಚುಂಬನ-/ ದ ಚುಂಬಕ  ಚಂದ್ರನೇ / ಕರಗುವ  ರಾತ್ರಿಯ ಕಟ್ಟಿಹಾಕುವ  ಬಯಕೆಯ / ಬಡಿದೆಬ್ಬಿಸುವ  ರೋಮ  ರೋಮಾಂಚನ,/ ಹಿಡಿತ  ಬಡಿತದೆದುರು  ಹಿಂದಿನ  ದಿನದ / ಕೋಪ  ಆಪೋಶನ /’’ ( ಧ್ಯಾನ )

          ಕೆಂಪೆಂದರೆ.....   ಪಾರಿವಾಳದ  ಪಾದ /  ಮತ್ತು /  ನೀನು  ಗಾಢವಾಗಿ  ಪ್ರೇಮಿಸಿ /  ಕುತ್ತಿಗೆಗೆ  ಮಾಡುವ / ಗುರುತು /  (ಕೆಂಪೆಂದರೆ )

           ನಿಜವಾದ  ಪ್ರೀತಿಯೆಂದರೆ  ಕ್ರೂರತೆಯ  ಎದುರೂ  ಮಾರ್ದವತೆಯನ್ನ  ಉಳಿಸಿಕೊಳ್ಳುವುದು,  ಎಂಬ  ಸಂದೇಶ   ಅವರ  ಎಲ್ಲ  ಪ್ರೇಮಕವನಗಳಲ್ಲಿ  ಅಭಿವ್ಯಕ್ತಗೊಂಡಿವೆ.

       ಸಂಕಲನದ  ಅಷ್ಟೆಲ್ಲ  ರಚನೆಗಳಲ್ಲಿ  ಮನಸ್ಸಿಗೆ  ಗಾಢವಾಗಿ  ತಟ್ಟಿ  ಕಲಕುವಂತಾಗಿದ್ದು  ʻʻನೆರೆಹೊರೆʼʼ  ಕವನ.   ಕವಯತ್ರಿ  ಬ್ಯಾಂಕ್‌  ಉದ್ಯೋಗಿ.  ಹೊಳೆಯಂಚಿನ  ಅವರ ಸಂಸ್ಥೆಯ  ಶಾಖೆಯೊಂದು,  ಮಹಾಮಳೆ  ಮಹಾಪ್ರವಾಹದಲ್ಲಿ  ಮುಳುಗಿಹೋಗುತ್ತದೆ.   ಜೊತೆಗೆ    ಊರಿನ  ಜನಜೀವನ  ಕೂಡಾ.   ಜಾತಿ, ವರ್ಗ, ಧರ್ಮ ವೊಂದನ್ನೂ  ಗಮನಿಸದೇ  ಎಲ್ಲವನ್ನೂ  ಕೊಚ್ಚಿಕೊಂಡು,  ಎಲ್ಲರನ್ನೂ  ನಿರಾಶ್ರಿತ  ಕೇಂದ್ರಕ್ಕೆ  ರವಾನಿಸುತ್ತದೆ. ಸರ್ವನಾಶದ  ನಡುವೆಯೂ  ಸಮಾನತೆಯ  ಸಂದೇಶಸಾರಿದ  ಪ್ರಕೃತಿಯನ್ನು  ಕಂಡು  ಕವಯತ್ರಿ  ಬೆರಗಾಗುತ್ತಾರೆ.

       ಗಾಢ  ಕತ್ತಲೆಯಲ್ಲೂ  ನಕ್ಷತ್ರವನ್ನು  ಗುರುತಿಸುವ  ಆಶಾವಾದದ  ಸಂದೇಶವನ್ನು  ನೀಡುವ   ಪ್ರಸ್ತುತ  ನೆರೆಹೊರೆ  ಸುದೀರ್ಘ  ಕವನ  ಸಿಂಧೂ  ರವರ  ಸಾರ್ಥಕ  ರಚನೆಗಳಲ್ಲಿ  ಒಂದು  ಎನ್ನಬಹುದಾಗಿದೆ.

         ಆಚೆಕೇರಿಯ   ಈಚೆ ಕೇರಿಯ / ಮೇಲಿನ ಮನೆಯ  ಕೆಳಗಿನ  ಮನೆಯ /

         ತುದಿ ಮನೆಯ  ಬುಡದ  ಮನೆಯ / ಸಾಮಾನುಗಳು / ಒಂದೇ  ಬದಿಯಲ್ಲಿವೆ./

         ತಿಳಿಗಂಜಿಯ ಪಾತ್ರೆ / ತೆಳ್ಳೇವಿನ  ಬಂಡಿ / ಮೀನು  ಸುಟ್ಟ  ಪಾತ್ರೆಗಳು /

          ಒಂದರಮೇಲೊಂದು   ಮಗುಚಿ  ಬಿದ್ದಿವೆ./  ( ನೆರೆ-ಹೊರೆ)

        ಸಿಂಧೂ  ರವರ  ಸೃಜನಶೀಲ  ಚಟುವಟಿಕೆಗಳನ್ನು  ಕಂಡಾಗ   ಅಭಿಮಾನ  ಮೂಡುತ್ತಿದೆ.  ಕವನದಿಂದ  ಕವನಕ್ಕೆ,  ಸಂಕಲನದಿಂದ  ಸಂಕಲನಕ್ಕೆ  ಅವರ  ಹೆಜ್ಜೆ  ಬಲಿಯುತ್ತಿದೆ.  ಗೆಜ್ಜೆಯ  ನಾದ  ಉಲಿಯುತ್ತಿದೆ.  ಕಳೆದೆರಡು  ಸಂಕಲನಗಳ  ಜಯಂತ  ಕೈಕಿಣಿ,  ಮತ್ತು  ಎಚ್.ಎಲ್. ಪುಷ್ಪಾ  ರವರೂ  ಸಹ  ಕವಯತ್ರಿಯ   ಅಭಿವ್ಯಕ್ತಿಯಲ್ಲಿಯ  ಲವಲವಿಕೆ, ಉತ್ಸಾಹ, ಮತ್ತು  ಹೊಸತನಗಳನ್ನು  ಗುರುತಿಸಿ  ಬೆನ್ನುತಟ್ಟಿದ್ದಾರೆ.  ಡಾ. ಎಚ್ಎಲ್ ಪುಷ್ಪಾ  ರವರ  ಮುನ್ನುಡಿಯ  ಹಾರೈಕೆ  ಇಲ್ಲಿಯೂ  ಸಲ್ಲುತ್ತದೆ.

      ʻʻ ಸಿಂಧೂ  ಅವರ  ಕವಿತೆಗಳಲ್ಲಿ  ಮುಖ್ಯವಾಗಿ  ಗಮನಿಸಬೇಕಾದ  ಸಂಗತಿಯೆಂದರೆ  ಪ್ರೇಮವಾಗಲೀ, ವಾಸ್ತವದ  ಬದುಕಾಗಲೀ,  ಅದನ್ನು  ಪ್ರಾಮಾಣಿಕವಾಗಿ  ಮುಚ್ಚುಮರೆಯಿಲ್ಲದೇ  ಅಭಿವ್ಯಕ್ತಿಸುವ  ಕ್ರಮ.  ಹೀಗಾಗಿ  ಇಲ್ಲಿನ  ಕವಿತೆಗಳು ಪ್ರೇಮದ  ತೀವ್ರತೆಯನ್ನು  ವಿವರಿಸಿದಂತೆಯೇ  ಸದ್ದಿಲ್ಲದೇ  ನಜ್ಜುಗುಜ್ಜಾಗುವ  ʻʻಮೇ  ಫ್ಲವರ್‌ʼʼ ಹೂವಿನ  ದುರಂತವನ್ನು  ಸಹ  ಚಿತ್ರಿಸುತ್ತದೆ. ʼʼ 

           ಕಾವ್ಯವೆಂದರೇನೇ   ಸತ್ಯದ  ಗಮ್ಯಕ್ಕೆ  ಸಾಗುವ  ಯತ್ನ.  ಜೀವನಾನುಭವ,  ಕಾವ್ಯಕೌಶಲ ವೃದ್ಧಿಸಿದಂತೇ ,  ತಾತ್ವಿಕ ಶೋಧನೆಯ ದಾರಿ, ನಿಚ್ಚಳಗೊಳ್ಳುತ್ತಾ  ಸಾಗುತ್ತದೆ.  ಅದರಲ್ಲಿಯೂ   ಭಾವದಲ್ಲಿ  ಬೀಜರೂಪದಲ್ಲಿರುವ  ಅನುಭವ  ಭಾಷೆಯಲ್ಲಿ ಮೊಳೆತು  ಚಿಗುರಿ  ಪಲ್ಲವಿಸಲು,  ಕಾಲ  ಮತ್ತು  ಕಾವ್ಯಧ್ಯಾನ  ಅತೀ  ಅವಶ್ಯ.    ಎಲ್ಲ  ಸಾಮರ್ಥ್ಯ  ಸಿಂಧೂ ರವರಲ್ಲಿದೆ.     ಸಂದರ್ಭದಲ್ಲಿ  ಕವಿ  ಎಚ್.ಎಸ್.ವಿ  ಯವರ  ಸಾಲುಗಳು  ಕೆಣಕುತ್ತಿವೆ.

          ʻʻಕಾವ್ಯವೆನ್ನುವುದೊಂದು  ಆಕಾಶ, ನೆತ್ತಿ ಮೇಲಿದ್ದೇ / ಇದೆ  ಆಉದ್ದ  ಈ ಉದ್ದಕೆ./

              ಲೆಕ್ಕವಿರದಷ್ಟು  ಹಕ್ಕಿ  ಹಾರಲಿ  ಎಲ್ಲ / ರೆಕ್ಕೆ  ಕಸುವಿರುವಷ್ಟು  ಎತ್ತರಕ್ಕೆ. //ʼʼ

      ಸಿಂಧೂ  ರವರ  ರಚನೆಗಳು  ವಾಚ್ಯದಿಂದ  ನಿರ್ವಾಚ್ಯದೆಡೆಗೆ  ಸಾಗಲಿ.  ತಾತ್ವಿಕ  ಶೋಧನೆ  ಇನ್ನಷ್ಟು  ಆಳ  ವಿಸ್ತಾರ  ಪಡೆಯಲಿ.  ಎಂದು    ಮೂಲಕ  ಆತ್ಮೀಯವಾಗಿ  ಹಾರೈಸುತ್ತಿದ್ದೇನೆ.

                                                        ಗೌರವಾದರಗಳೊಂದಿಗೆ

                                          ಸುಬ್ರಾಯ.  ಮತ್ತೀಹಳ್ಳಿ.  ತಾ-  ೨೬-೮-೨೦೨೦.

       

No comments:

Post a Comment