Saturday 23 September 2023

ಪತನವೋ………ಪ್ರಗತಿಯೋ…..?

 

      ಮಹಾಭಾರತದ  ಭೀಷ್ಮನೇ   ʻʻ    ಕಾಲ  ನನ್ನಂಥವರದಲ್ಲ.  ಎಲ್ಲ  ಕೆಟ್ಟು ಹೋಗಿದೆ ʼʼ  ಎಂದು  ಹಳಹಳಿಸಿದ್ದನಂತೆ.  ಅವನಿಂದ  ಅನತಿದೂರದಲ್ಲಿಯೇ   ಶ್ರೀ  ಕೃಷ್ಣ   ʻʻ  ಪರಿವರ್ತನೆ  ಜಗದ ನಿಯಮ ʼʼ  ಎಂದು  ಅರ್ಜುನನಿಗೆ  ಬೋಧಿಸುತ್ತಲೇ   ಇದ್ದ.   ವೃದ್ಧಾಪ್ಯ  ಪ್ರವೇಶಿಸುತ್ತಿರುವಾಗ   ಇಂಥ  ಉದ್ಗಾರಗಳು  ಮನುಷ್ಯಪ್ರಪಂಚದಲ್ಲಿ   ಮೊಳಗುವುದು,  ಪ್ರಕೃತಿನಿಯಮವೇ  ಏನೋ,    ಮುದಿತನ ವೆನ್ನುವುದು  ಕೇವಲ  ದೇಹದ, ವಯೋಮಾನದ  ಪ್ರಶ್ನೆಯಲ್ಲ.  ಕೆಲವು  ಮನಸ್ಸುಗಳು  ಅದೆಷ್ಟು  ಜಡವಾಗಿರುತ್ತದೆಯೆಂದರೆ,  ಹುಟ್ಟುವಾಗಲೇ   ವೃದ್ಧಾಪ್ಯವನ್ನು   ಸ್ವೀಕರಿಸಿಕೊಂಡು  ಬಿಡುತ್ತವೆ.

          ಸಾಮಾಜ  ಸಂಸ್ಕೃತಿ  ವೈಚಾರಿಕತೆಗಳು   ಎಂದೂ   ನಿಂತ ನೀರಲ್ಲ.   ಅದು  ನದಿಯ  ಹರಿವಿನಂತೆ.  ಬೀಸುವ  ಗಾಳಿಯಂತೆ.   ಆದರೆ  ಮಾನವ  ಮನಸ್ಸು  ಮಾತ್ರ   ಒಂದೇ  ವ್ಯವಸ್ಥೆಯಲ್ಲಿ  ಬಂಧಿಯಾಗಿರುತ್ತದೆ.   ಕಟ್ಟಿಹಾಕಿದ  ಸ್ಥಿತಿ   ಪ್ರಾಣಿಗಳಿಗೆ  ಅದೆಷ್ಟು  ರೂಢಿಯಾಗಿರುತ್ತದೆಯೆಂದರೆ,   ಕುತ್ತಿಗೆಗೆ  ಕಟ್ಟಿದ   ಸರಪಣಿಯನ್ನು  ಬಿಚ್ಚಿಟ್ಟರೂ  ಅದು  ಹಾಗೆ  ಅಲ್ಲಿಯೇ  ನಿಂತಿರುತ್ತದೆ.   ಅದು  ಬಂಧನವಾಗಲೀ   ಬಿಡುಗಡೆಯಾಗಲೀ,  ಇರುವ  ವ್ಯವಸ್ಥೆಯಲ್ಲಿಯೇ   ವಿಚಿತ್ರ  ಖುಷಿಕಾಣುವ,  ಅಲ್ಲಿಯೇ  ಸುಖ  ಹುಡುಕುವ  ಪ್ರವೃತ್ತಿ  ಪ್ರಾಣಿಗಳಿಗೆ  ಸಹಜವಾದರೂ,  ಅದೇ  ಪ್ರಾಣಿವರ್ಗಕ್ಕೆ  ಸೇರಿದ  ಮನುಷ್ಯನೂ  ಸಹ   ಅಂಥದ್ದೇ  ವರ್ತನೆಗಿಳಿಯುವುದು   ಎಲ್ಲ  ಕಾಲಗಳಲ್ಲಿ  ನಾವು  ಕಂಡ  ಸತ್ಯ.

         ಉಪನಿಷತ್ತೊಂದರಲ್ಲಿ   ಕುತೂಹಲಕಾರೀ   ರೂಪಕವೊಂದಿದೆ.    ʻʻ ಹೋಮಾʼʼ  ಎಂಬ  ಕಾಲ್ಪನಿಕ  ಹಕ್ಕಿಯ  ತೊಳಲಾಟವೊಂದು   ನಮ್ಮ  ಗಮನಸೆಳೆಯುತ್ತದೆ.   ವಿದೇಶೀ  ಪುರಾಣಗಳಲ್ಲಿ  ʻʻಫೀನಿಕ್ಷʼʼ  ಪಕ್ಷಿಯ  ಉಲ್ಲೇಖವಿದ್ದಂತೆ.    ಹೋಮಾಪಕ್ಷಿ   ಸದಾ  ಆಕಾಶವಾಸಿ.  ಅದು  ಎಂದೂ  ಭೂಮಿಯನ್ನು  ಸ್ಪರ್ಶಿಸುವುದೇ  ಇಲ್ಲ.  ಹೋಮಾ  ಮೊಟ್ಟೆಯಿಡುವುದೂ  ಆಕಾಶದಲ್ಲಿಯೇ.   ಹಾರಾಡುತ್ತಲೇ   ಮೊಟ್ಟೆಯಿಡುತ್ತದೆ.   ಮೊಟ್ಟೆ  ಗರ್ಭದಿಂದ  ಹೊರಬಂದ  ಕೂಡಲೇ   ತನ್ನ  ಭಾರದಿಂದ,   ಭೂಮಿಯ   ದಿಕ್ಕಿಗೆ   ಬೀಳಲು  ತೊಡಗುತ್ತದೆ.  ತಾಯಿಹಕ್ಕಿ,  ಮೊಟ್ಟೆ  ಬೀಳುವುದನ್ನು,  ಭೂಮಿಗೆ  ಅಪ್ಪಳಿಸಿ  ಚೂರು  ಚೂರಾಗುವುದನ್ನು  ಕಲ್ಪಿಸಿಕೊಂಡು, ಭಯದಿಂದ  ಆಕಾಶ ಮೊಳಗುವಂತೇ   ಅರಚತೊಡಗುತ್ತದೆ.   ಆದರೆ   ತಾಯಿಪಕ್ಷಿಯ  ಭಯಕ್ಕೆ  ಕಾರಣವೇ  ಇಲ್ಲ.   ಅಷ್ಟು  ಎತ್ತರದಿಂದ  ವೇಗವಾಗಿ   ಭೂಮಿಯ ದಿಕ್ಕಿಗೆ  ಧಾವಿಸುತ್ತಿರುವ   ಮೊಟ್ಟೆ   ಗಾಳಿಯಜೊತೆಗೆ  ಘರ್ಷಿಸುತ್ತಿರುವಾಗ,  ಬಿಸಿ ಉತ್ಪನ್ನವಾಗುತ್ತದೆ.   ಮೊಟ್ಟೆ  ಗಾಳಿಯಲ್ಲಿಯೇ   ಬಿರಿದು,   ಮರಿ  ಹೊರಬರುತ್ತದೆ.  ಸ್ವಚ್ಛಂದವಾಗಿ   ಹಾರಾಡತೊಡಗುತ್ತದೆ. 

         ಕಾಲ  ಮತ್ತು  ಪ್ರಕೃತಿಯ   ಸಂಯೋಗದಲ್ಲಿ  ಸಾಗುವ  ಬದುಕಿಗೆ  ತನ್ನದೇ  ಆದ  ಲಯವಿದೆ.  ಗತಿಯಿದೆ.  ಅದು  ತನ್ನನ್ನು ತಾನು   ಬೆಳೆಸಿಕೊಳ್ಳುವ,  ಉಳಿಸಿಕೊಳ್ಳುವ  ಪ್ರಕ್ರಿಯೆಯಲ್ಲಿಯೇ   ಚಲನಶೀಲವಾಗಿರುತ್ತದೆ.  ಮನುಷ್ಯನ  ಮನಸ್ಸು  ಅದಕ್ಕಿಂತ  ಭಿನ್ನ.   ಪತನ  ಯಾವುದು  ಪ್ರಗತಿಯಾವುದು,  ಪರಿವರ್ತನೆಯಾವುದು  ಎಂಬುದನ್ನು   ಅರಿಯಲಾರದ  ಜಡಮನಸ್ಸು,   ಪತನಕ್ಕೆ   ಪರಿವರ್ತನೆಗೆ  ಎರಡಕ್ಕೂ  ಭಯಪಡುತ್ತದೆ.

     ಪ್ರಗತಿ  ಎನ್ನುವುದು   ಪರಿವರ್ತನೆಯ   ಕೂಸು.   ಪರಿವರ್ತನೆಯೆಲ್ಲವೂ   ಪ್ರಗತಿಯಲ್ಲ.   ಪ್ರಗತಿಯಲ್ಲಿ  ಪರಿವರ್ತನೆಯಿದೆ.    ಹಾಗೆಂದು  ಪ್ರಗತಿಯೆಲ್ಲವೂ  ಒಳ್ಳೆಯದೇ  ಅಲ್ಲ.  ಇಂದಿನ  ಪ್ರಗತಿ  ನಾಳಿನ  ಪತನವಾಗುವುದೂ  ಸಾಧ್ಯವಿದೆ.   ವಿಜ್ಞಾನ  ಮತ್ತು  ತಂತ್ರಜ್ಞಾನಗಳು  ಪ್ರಗತಿಹೊಂದಿದಂತೇ   ಮಾನವನ  ಶ್ರಮವನ್ನು  ಕಡಿತಗೊಳಿಸುವ,  ಪ್ರಕ್ರಿಯೆ  ವೇಗಪಡೆಯಿತು.  ಮನುಷ್ಯನ  ದೇಹಕ್ಕೆ  ಕೊಂಚವೂ  ಆಯಾಸವಾಗದಂತೇ    ಎಲ್ಲ  ಕೋನಗಳಲ್ಲಿ   ಎಲ್ಲ  ಆಯಾಮಗಳಲ್ಲಿ   ಯಂತ್ರಗಳು   ಪ್ರವೇಶ  ಪಡೆದವು.  ಮನುಷ್ಯನ    ಕ್ರಿಯಾಶೀಲತೆಯನ್ನು  ಮೊಟಕುಗೊಳಿಸಿ,  ಭೋಗಲಾಲಸೆಗೆ  ವತ್ತು  ನೀಡಿತು.  .   ಸಂಪರ್ಕ  ಕ್ರಾಂತಿ, ಕೈಗಾರಿಕಾ  ಕ್ರಾಂತಿ,  ಮಾಹಿತಿ  ತಂತ್ರಜ್ಞಾನಗಳಿಂದ,    ಮಾನವನ  ದೇಹಕ್ಕೆ  ಕನಿಷ್ಠ   ವ್ಯಾಯಾಮವೂ  ದೊರೆಯದೇ   ಹಲವು  ರೋಗಗಳ  ಕೋಟೆಯಾಯಿತು.   ಅತಿಯಾದ  ಕೈಗಾರಿಕಾ  ಕ್ರಾಂತಿ,  ಭೂಮಿಯ  ಉಷ್ಣತೆಯನ್ನು  ಹೆಚ್ಚಿಸಿತು.   ಹವಾಮಾನದ  ಏರುಪೇರಿನಿಂದ   ಅತಿಮಳೆ,  ಅತಿ ಬರ,  ಚಂಡಮಾರುತ,  ಘೋರ  ರೋಗಗಳು  ಆಕ್ರಮಿಸಿದವು. ಐಷಾರಾಮಿ ತನ,   ಹಣ  ಮತ್ತು  ಅಧಿಕಾರ,   ಅತಿಯಾದ  ಸಂಪತ್ತಿನ  ಶೇಖರಣೆಯಂತ   ಕಲ್ಪಿತ  ಪ್ರತಿಷ್ಠೆಗಳಲ್ಲಿ  ಲೀನವಾಗುವ   ಸಾಮುದಾಯಿಕ  ಮನಸ್ಸಿಗೆ,  ನಿಜವಾದ  ಮಾನವನ  ಬದುಕು   ಮತ್ತು  ಮೌಲ್ಯಗಳ  ಬಗೆಗೆ  ತಿಳಿವು  ನೀಡುವುದು   ಮಾತ್ರ   ಅತ್ಯಂತ  ಕಷ್ಟದ  ಕೆಲಸ.   ಆಧುನಿಕ  ಶಿಕ್ಷಣ  ವ್ಯವಸ್ಥೆ,   ಸಾಂಸ್ಥಿಕ  ಧರ್ಮಗಳು,  ಆಡಳಿತ ವ್ಯವಸ್ಥೆ ಯಂಥ    ಕ್ಷೇತ್ರಗಳೂ,  ಹುಸಿ ಪ್ರತಿಷ್ಠೆ,   ಯಾಂತ್ರಿಕತೆ, ಮತ್ತು  ಧನದಾಹಗಳಲ್ಲಿ   ಮುಳುಗಿರುವಾಗ,  ನಿಜವಾದ  ಮಾನವ  ಬದುಕಿನ  ಬಗೆಗೆ  ಧ್ಯಾನಿಸುವವರಾರು.?  

       ಅತಿ  ತಾಂತ್ರಿಕತೆ   ಪ್ರಗತಿಯೋ,  ವಿಕಾಸವೋ,  ಅಥವಾ   ಪ್ರಕೃತಿ ವಿರೋಧಿಯೋ   ಎಂಬ  ಪ್ರಶ್ನೆ  ಇದೀಗ  ಕಾಡತೊಡಗಿದೆ. 

      ಪ್ರತಿಯೊಂದು  ಪರಿವರ್ತನೆಯೂ   ಪತನವೆಂದೇ   ತಿಳಿಯುವ,ಸಿನಿಕರಿದ್ದಾರೆ.   ಅವೆಲ್ಲವೂ  ಪ್ರಗತಿಯೆಂದೇ  ಓಲೈಸುವ   ಜನರೂ  ಇದ್ದಾರೆ.   ಎರಡೂ   ಪ್ರವೃತ್ತಿ   ಜನಮಾನಸದ  ನಡುವೆಯಿದೆ.   ಯಾವುದು  ಪರಿವರ್ತನಾಶೀಲ,  ಪ್ರಗತಿಶೀಲ,  ಎಂಬುದನ್ನು ಸೂಕ್ಷ್ಮವಾಗಿ,  ಗುರುತಿಸುವ,   ಪ್ರಕೃತಿ ವಿರೋಧಿಯಾಗಿ   ವಾಸ್ತವದಲ್ಲಿ  ಮಾತ್ರ  ಮಿಂಚುವ   ಪರಿವರ್ತನೆಗಳನ್ನು  ತಿರಸ್ಕರಿಸುವ,   ಅರಿವು   ನಮ್ಮಲ್ಲಿದ್ದರೆ  ಮಾತ್ರ    ಬದುಕು  ಸ್ವಸ್ಥವಾದೀತು.   ಸುಸ್ಥಿರಗೊಂಡೀತು. 

               ಕೆಲವು  ದಶಕಗಳ  ಹಿಂದೆ,   ದೇಶಾದ್ಯಂತ  ಗಣಕ ಯಂತ್ರಗಳು   ವ್ಯಾಪಿಸತೊಡಗಿದಾಗ,  ಹತ್ತು  ಹಲವು  ಸಂಸ್ಥೆಗಳು,  ಕಾರ್ಮಿಕ  ಸಂಘಟನೆಗಳು,  ಮಾನವ ಉದ್ಯೋಗ  ನಷ್ಠದ  ಭಯದಲ್ಲಿ   ಗಣಕ ಕ್ರಾಂತಿಯನ್ನೇ   ವಿರೋಧಿಸಿದ   ಘಟನೆಗಳು   ಇನ್ನೂ  ಹಸಿರಾಗಿವೆ.

       ಒಂದು  ಸಂದರ್ಭದಲ್ಲಿ   ನಮ್ಮ  ದೇಶ  ಆಹಾರದ  ಕೊರತೆಯಲ್ಲಿ  ನರಳಿತು.  ಒಮ್ಮೆಲೇ  ಹಸಿರು  ಕ್ರಾಂತಿಯ   ಕೂಗೆದ್ದಿತು.   ಅವ್ಯಾಹತವಾಗಿ   ಕೃತಕ  ರಾಸಾಯನಿಕ   ಕ್ರಿಮಿನಾಶಕಗಳನ್ನು  ಭೂಮಿಗೆ  ಸುರಿಯಲಾಯಿತು.   ಆಹಾರವೇನೂ   ನಮಗೆ  ದೊರಕಿತು  ನಿಜ.  ಆದರೆ   ಭೂಮಿ,  ನೀರು   ಗಾಳಿ,  ವಿಷಮಯವಾಯಿತು.  ಆಹಾರವೆಲ್ಲವೂ   ವಿಷವಾಯಿತು.   ಏಕಾಯೇಕಿ   ನಾವೆಲ್ಲ   ವಿಷಪುತ್ರರಾದೆವು.   ಪರಿವರ್ತನೆಯ   ಹೆಸರಿನಲ್ಲಿ,  ಉಂಟಾದ  ಪ್ರಗತಿಯಾಗಲಿ,   ಸಾವಿರ  ಸಾವಿರ  ಅಡಿ  ಭೂಮಿಕೊರೆದು,  ಅಂತರ್ಜಲವನ್ನು  ಅವ್ಯಾಹತವಾಗಿ  ಅಪಹರಿಸಿ  ಬೀಗಿದೆವು.    ಪಾರಂಪರಿಕವಾದ  ಕೆರೆ   ಹಳ್ಳ, ಭಾವಿಗಳನ್ನು  ನಾಶಮಾಡಿದೆವು.  ಇದೀಗ   ಜಲಕ್ಷಾಮದ  ಕಪಿಮುಷ್ಠಿಯಲ್ಲಿ  ಸಿಲುಕಿ  ತೊಳಲಾಡುತ್ತಿರುವಾಗ,   ಮತ್ತೆ   ನಮ್ಮ  ದೇಶೀಜ್ಞಾನ, ಮತ್ತು  ನಾಳಿನ  ಬಗೆಗಿನ  ಚಿಂತನೆಗಳಿಗೆ  ಶರಣಾಗುತ್ತಿದ್ದೇವೆ.    ನಮ್ಮ   ಇವೆಲ್ಲ  ದುರಂತಗಳಿಗೆ   ನಮ್ಮ  ಆತುರ,  ಮೂಢ ವಿಶ್ವಾಸ,  ಮತ್ತು,   ಮಾನವ  ವಿಕಾಸದ  ಬಗೆಗಿನ  ತಾತ್ವಿಕ  ಅರಿವಿನ  ಕೊರತೆ   ಕಾರಣವಾಯಿತು. 

      ತಾತ್ವಿಕ  ಅರಿವು   ನಮ್ಮೊಳಗೆ  ಚಿಗುರುವುದು,  ಆಧುನಿಕ  ಶಿಕ್ಷಣ    ಆಧುನಿಕ  ವಿಶ್ವವಿದ್ಯಾಲಯಗಳಿಂದಲ್ಲ.   ಅಥವಾ   ಪರದೇಶೀ  ಚಟುವಟಿಕೆಗಳನ್ನು   ಅಂಧವಾಗಿ  ಅನುಕರಿಸುವುದರಿಂದಲ್ಲ. ಪ್ರಕೃತಿಯ  ಸಹಜ  ಲಯವನ್ನು  ಗುರುತಿಸಲು  ಸೋತು,  ಕೃತಕ  ಬದುಕನ್ನು  ಅಪ್ಪಿಕೊಂಡಿದ್ದಂತೂ  ಕಟುಸತ್ಯ.    ಪ್ರಗತಿಯಾಗಲಿ   ಪರಿವರ್ತನೆಯಾಗಲಿ   ಸಹಜವಾಗಿ  ಮೂಡಲು    ಅಂತರಂಗದ   ಪ್ರಗತಿ  ಮುಖ್ಯ.   ಸ್ವಯಂ  ಚಿಂತನೆ,   ತನ್ನ  ದೇಶ  ತನ್ನ  ಸಮುದಾಯಗಳ  ಬಗೆಗೆ  ಪ್ರೀತಿ,  ಮತ್ತು  ಸ್ವಾರ್ಥರಹಿತ  ಚಿಂತನೆ  ಅವಶ್ಯ.   ಅದೇ  ಅಪರೂಪವಾದಾಗ,   ಎಲ್ಲವೂ   ನಮ್ಮ  ಪತನಗಳಿಗೇ    ಹೆದ್ದಾರಿಯಾದರೆ  ಆಶ್ಚರ್ಯವಿಲ್ಲ. 

                                

                                 ಕಲೆಗಳಲಿ  ಪರಮಕಲೆ  ಜೀವನದ  ಲಲಿತಕಲೆ

                                 ಕಲಿಸಲದನಳವಲ್ಲ  ಬಾಹ್ಯಬೋಧನೆಯಿಂ /

                                  ಒಲಿದು  ಒಲಿಸಿಕೊಳುವ  ಲೌಕಿಕ  ನಯದ  ಸೊಗಸ  ನೀಂ /

                                  ತಿಳಿವುದೊಳಹದದಿಂದ----   ಮಂಕುತಿಮ್ಮ.

                         ===================================================

                                                                         

 

                                                                              ಸುಬ್ರಾಯ  ಮತ್ತೀಹಳ್ಳಿ.   ೨೨-೯- ೨೦೨೨

No comments:

Post a Comment