ತತ್ವದ ಸಲೆ - ತರ್ಕದ ಬಲೆ. ʻʻ ತಾಳಮದ್ದಳೆʼʼ

 

                                                             ತತ್ವದ  ಸಲೆ -  ತರ್ಕದ  ಬಲೆ.

                                                               ʻʻ ತಾಳಮದ್ದಳೆʼʼ

        

          ಮಾನವ  ಬದುಕಿನ ಮುಖ್ಯವಾದ  ಸಂಪತ್ತೇ  ಮಾತು.  ಮನುಷ್ಯನ ನಿಜವಾದ  ಅಸ್ತಿತ್ವ ರೂಪುಗೊಂಡಿರುವುದೇ  ಮಾತಿನಿಂದ. ಮಾತು ಉಸಿರು,  ಮಾತು ಅಸ್ತ್ರ. ಮಾತೇ ಅನುಪಮ  ಅಸ್ಮಿತೆ. ಮಾನವ ಸಂಬಂಧಗಳ ಸುವರ್ಣ ಸೇತುವೆ. ಮಾತನ್ನೇ  ಪ್ರಧಾನ ಸಂವಹನೆಯ ಮಾಧ್ಯಮವನ್ನಾಗಿಸಿ, ಅದನ್ನೇ ಅತ್ಯುನ್ನತ  ಕಲಾಮಾಧ್ಯಮವನ್ನಾಗಿಸಿದ  ಮಲೆನಾಡು ಮತ್ತು ಕರಾವಳಿಗಳ  ತಾಳ ಮದ್ದಳೆ  ಎಂಬ ಕಲಾಪ್ರಕಾರ,  ಕನ್ನಡ ಭಾಷೆಗೊಂದು ಅನನ್ಯ ಕೊಡುಗೆ.  ಉನ್ನತ  ಮನಸ್ಸುಗಳು ಒಗ್ಗೂಡಿ, ಅತ್ಯುನ್ನತ ಮೌಲ್ಯಗಳನ್ನು ಅನುಸಂಧಾನಿಸಿಕೊಂಡು,  ಸಂಸ್ಕೃತಿ  ಪರಂಪರೆಯ ಆಳ  ಎತ್ತರ  ವಿಸ್ತಾರಗಳನ್ನು ಸಮಕಾಲೀನ ಸಂದರ್ಭಕ್ಕೆ  ಅನ್ವಯಿಸಿಕೊಳ್ಳುತ್ತ, ಭೂತ ವರ್ತಮಾನ ಮತ್ತು ಭವಿಷ್ಯಗಳ ಅಂಗಳದಲ್ಲಿ ಮಾನವ ಬದುಕಿನ ನಿಜದ ಶೋಧನೆಗಿಳಿದ    ನೆಲದ  ಕಲಾವಿದರುಗಳ ಸಾಹಸ ಜಗತ್ತಿನಲ್ಲೇ  ಅಪರೂಪ.

   ಅಂಥಹದ್ದೊಂದು ವಿಶಿಷ್ಟ ಕಲಾಪ್ರಕಾರದ  ಬಗೆಗೆ  ಇತ್ತೀಚಿನ  ವರ್ಷಗಳಲ್ಲಿ,  ಸಾಕಷ್ಟು ಕೃತಿಗಳು ಪ್ರಕಟಗೊಳ್ಳುತ್ತಿವೆ.  ಡಾ. ಶಿವರಾಮ ಕಾರಂತರಂತಹ  ದಿಗ್ಗಜ ಸಾಹಿತಿಗಳ ಗಮನಸೆಳೆದ,  ಅಮೇರಿಕಾ ದೇಶದ  ಮಾರ್ಥಾ ಆಸ್ಟಿನ್ನಂತಹ  ಕಲಾಸಂಶೋಧಕಿಯನ್ನು ಆಕರ್ಷಿಸಿದ  ಯಕ್ಷಗಾನ ರಂಗಭೂಮಿ, ಜಾಗತಿಕ ಮನ್ನಣೆ ಪಡೆದುಕೊಳ್ಳುತ್ತಿರುವುದರ  ಜೊತೆಗೇ  ಹತ್ತು ಹಲವು ವಿವಾದಗಳಿಗೂ ಸಿಲುಕಿರುವುದು ವಿಷಾದನೀಯ.  ಬಣ್ಣ  ಗಾನ ವಾದನ ನೃತ್ಯ ಅರ್ಥ ಮತ್ತು ಅಭಿನಯಗಳಿಂದ  ಸಮೃದ್ಧಗೊಂಡಿರುವ  ಯಕ್ಷಗಾನ, ಮತ್ತು, ಅದಕ್ಕೆ ಸರಿದೊರೆಯಾಗಿ ಬೆಳೆದು ಬಾಳುತ್ತಿರುವ  ಆಪ್ತ ರಂಗಭೂಮಿಯ   ತಾಳಮದ್ದಳೆ  ಎಂಬ ಕಲಾ ಮಾಧ್ಯಮ, ಸುಶೀಕ್ಷಿತರ ಆಗಮನದೊಂದಿಗೆ, ತಾತ್ವಿಕತೆ, ಸಾಂಸ್ಕೃತಿಕತೆ,  ವೈಚಾರಿಕತೆ, ಮತ್ತು ಪಾರಂಪರಿಕತೆಗಳನ್ನ ತನ್ನ ಒಡಲೊಳಗೆ ಹೀರುತ್ತ, ಸಮಕಾಲೀನ  ಮಾನವ ಬದುಕಿನ ದ್ವಂದ್ವ  ಸಂಘರ್ಷಗಳಿಗೂ  ಸಮರ್ಥವಾಗಿ ಸ್ಪಂದಿಸುತ್ತಿದೆ. 

    ಇತ್ತೀಚೆಗೆ  ಪ್ರಕಟವಾಗಿರುವ  ತಾಳಮದ್ದಳೆ ಅರ್ಥಧಾರಿ, ಸಂಸ್ಕೃತ ಭಾಷಾತಜ್ಞ,  .ನಾ.ಭಟ್ಮೈಸೂರು ರವರ ತಾಳಮದ್ದಳೆಯನ್ನೇ  ಕೇಂದ್ರೀಕರಿಸಿ ರಚಿಸಿದ  ʻʻ ಮಾತು ಮದ್ದಳೆ ಕೃತಿ  ಗಮನ ಸೆಳೆಯುತ್ತಿದೆ.   

ನಮ್ಮ ಜನಪದ-ಸಾಂಸ್ಕೃತಿಕ ಪರಂಪರೆಯಲ್ಲಿ ಮಾತಿನ ವೈಭವವನ್ನು ಶ್ರವ್ಯ ರಸದೊಂದಿಗೆ ಜೀವಂತವಾಗಿಟ್ಟಿರುವ ವಿಶಿಷ್ಟ ಕಲಾರೂಪವೆಂದರೆ ತಾಳಮದ್ದಲೆ.ಯೇ.  ಇದು ಕೇವಲ ಮನರಂಜನೆಯ ಸಾಧನವಲ್ಲ; ಸಂವಾದ, ತತ್ವಚಿಂತನೆ, ಸಾಹಿತ್ಯ, ಸಂಗೀತ, ಪುರಾಣಜ್ಞಾನ ಮತ್ತು ಮಾನವಸ್ವಭಾವಗಳ ಸಂಯೋಜನೆಯಾದ ಅಪೂರ್ವ ಕಲಾಸಾಧನೆ. ಯಕ್ಷಗಾನದ ದೇಹಕ್ಕೆ ನಾಟ್ಯ-ವೇಷಭೂಷಣಗಳಿದ್ದರೆ, ತಾಳಮದ್ದಲೆಯ  ಆತ್ಮವೇ ಮಾತು. ಇಲ್ಲಿ ಕಲಾವಿದನ ಶಕ್ತಿ ಅವನ ವಾಕ್ಚಾತುರ್ಯದಲ್ಲಿ, ಸಾಹಿತ್ಯಪಾಂಡಿತ್ಯದಲ್ಲಿ, ಸಂದರ್ಭಗ್ರಹಣದಲ್ಲಿ ಮತ್ತು ತರ್ಕಬದ್ಧ ಅಭಿವ್ಯಕ್ತಿಯಲ್ಲಿ ಅಡಗಿದೆ.

          ತಾಳ ಮದ್ದಳೆ,  ಕೃತಿ,   ಕಲಾತ್ಮಕ ವಿನ್ಯಾಸ, ಪಾತ್ರಪ್ರವೇಶ, ಭಾಗವತಿಕೆಯ ಮಹತ್ವ, ಅರ್ಥ ಧ್ವನಿ, ಭಾಷಾ ವೈಭವ ಮತ್ತು ಸಮಾಜದೊಂದಿಗೆ ಅದರ ಜೀವಂತ ಸಂಬಂಧವನ್ನು ಸಮಗ್ರವಾಗಿ ಪರಿಚಯಿಸುವ ಪ್ರಯತ್ನವಾಗಿದೆ    ಮೌಖಿಕ ಪರಂಪರೆಯಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಕಲೆಯು, ಕೇವಲ ವೇದಿಕೆಯ ಪ್ರದರ್ಶನವಲ್ಲ; ಅದು ಚಿಂತನೆಯ ಸಂಸ್ಕೃತಿ. ಇಲ್ಲಿ ಮಾತು ಕೇವಲ ಉಚ್ಚಾರಣೆಯಲ್ಲ ಅದು ವ್ಯಕ್ತಿತ್ವದ ಪ್ರಕಾಶ, ಜ್ಞಾನದ ಹರಿವು ಮತ್ತು ಶ್ರೋತೃಮನಸ್ಸನ್ನು ಆವರಿಸುವ ಕಲಾತ್ಮಕ ಅನುಭವ.     ಎಂಬುದನ್ನು  ವರ್ತಮಾನದ  ತಾಳಮದ್ದಲೆಯ   ಪ್ರಯೋಗಗಳನ್ನು   ಗಮನದಲ್ಲಿಟ್ಟು ಕೊಂಡು,   ರಾಮಾಯಣ  ಪ್ರಸಂಗಗಳು,  ಮತ್ತು,  ಮೂಲ  ವಾಲ್ಮೀಕಿ ರಾಮಾಯಣದ  ತುಲನಾತ್ಮಕ  ಅಭ್ಯಾಸ  ಗೈದ  ಮಹತ್ವಪೂರ್ಣ  ಗ್ರಂಥವಿದು. 

    ಯಕ್ಷಗಾನದ  ಆದಿಕವಿ ಎಂದೇ  ಕರೆಯಬಹುದಾದ  ಪಾರ್ಥಿಸುಬ್ಬನ,  ಹಲವು  ಮಹತ್ವಪೂರ್ಣ  ರಾಮಾಯಣಾಧಾರಿತ  ಕೃತಿಗಳನ್ನು  ತುಲನಾತ್ಮಕವಾಗಿ  ವಿಶ್ಲೇಷಣೆಗೈದ   ಲೇಖಕರು,  ಮೂಲಕ್ಕೂ  ಯಕ್ಷಕೃತಿಗೂ  ಏರ್ಪಟ್ಟ ದ್ವಂದ್ವಗಳನ್ನೂ  ಗಮನಕ್ಕೆ  ತರುತ್ತಾರೆ.  ಗೌರಿಶ್  ಕೈಕಿಣಿಯವರು,  ವಾಲ್ಮೀಕಿ ತೂಕಡಿಸಿದಾಗ,  ಎಂಬ  ರಾಮಾಯಣ ಕೃತಿವಿಮರ್ಶೆಗೈದಂತೇ,   .ನಾ. ಭಟ್ಟರೂ,  ಯಕ್ಷಕವಿಗಳ   ರಚನೆಯಲ್ಲಿ  ಸಂಭವಿಸಿದ  ಬದಲಾವಣೆ,  ಪಾತ್ರಗಳಿಗಾದ  ಸೋಲು ಗೆಲುವು,  ಹೊಸ  ಹೊಳಹುಗಳನ್ನು  ಮೂಲ ರಾಮಾಯಣ ಕೃತಿಗಳಲ್ಲಿಯ  ಉದಾಹರಣೆಯೊಂದಿಗೆ  ವಿವರಿಸುತ್ತಾರೆ. 

   ಕೃತಿಕಾರರು  ಕನ್ನಡ  ಮತ್ತು  ಸಂಸ್ಕೃತ  ಭಾಷೆಗಳ  ಪ್ರಾಚೀನ  ಕೃತಿಗಳನ್ನು  ತಲಸ್ಪರ್ಶೀ  ಅಧ್ಯಯನಗೈದವರು.     ಬಗೆಗೆ   ಪ್ರಭುತ್ವಪೂರ್ಣವಾಗಿ  ಮಾತನಾಡಬಲ್ಲವರು.  ರಾಮಾಯಣ  ಮಹಾಕಾವ್ಯವನ್ನಾಧರಿಸಿದ,  ಶ್ರೀರಾಮ ಪಟ್ಟಾಭಿಷೇಕ ದಿಂದ  ಆರಂಭಿಸಿ  ಶ್ರೀರಾಮನಿರ್ಯಾಣದ  ವರೆಗಿನ  ೧೫  ವೈವಿಧ್ಯಮಯ  ಯಕ್ಷಗಾನ  ಪ್ರಸಂಗಗಳ  ರಂಗಪ್ರಯೋಗಗಳನ್ನು  ಸೂಕ್ಷ್ಮವಾಗಿ  ಅವಲೋಕಿಸುತ್ತ,  ಅಲ್ಲಿ ಸೃಷ್ಟಿಯಾಗುವ  ಪೌರಾಣಿಕ  ಆವರಣ,  ತಾತ್ವಿಕ  ಜಿಜ್ಞಾಸೆ,  ಆಧ್ಯಾತ್ಮಿಕ ಅನುಭೂತಿಯನ್ನು,  ಗುರುತಿಸುತ್ತ,  ಒಟ್ಟೂ  ಪ್ರಯೋಗದ  ಯಶಸ್ಸು,  ಅರ್ಥಧಾರಿಗಳ ಸೋಲು ಗೆಲುವು,  ಮತ್ತು  ಮೂಲಕೃತಿಯಿಂದ  ಅದು  ಭಿನ್ನವೋ  ಅಭಿನ್ನವೋ  ಎಂಬುದನ್ನು  ಗುರುತಿಸಲು  ಪ್ರಯತ್ನಿಸುತ್ತಾರೆ.

    ಲೇಖಕರ  ನುಡಿಯಲ್ಲಿ ತಾಳಮದ್ದಲೆ  ಕಲಾರಂಗದ  ವಾಸ್ತವ  ಸ್ಥಿತಿಯನ್ನು ಕಂಡರಿಸುತ್ತ,  ಕಲಾಪ್ರೇಮಿಯಾಗಿ,  ಕಲಾವಿದರಾಗಿ, ತಮ್ಮ ಖಚಿತ  ಅಭಿಪ್ರಾಯವನ್ನು ಮಂಡಿಸುತ್ತಾರೆ.

      ʻʻ ಪ್ರಸಂಗ ಪಠ್ಯ ಮತ್ತು ವಾಲ್ಮೀಕಿರಾಮಾಯಣವನ್ನು ತೌಲನಿಕ ಮತ್ತು ಗಂಭೀರವಾಗಿ  ಅಧ್ಯಯನ  ಮಾಡುವುದರೊಂದಿಗೆ, ಅರ್ಥಧಾರಿಗಳ ಅರ್ಥವನ್ನೂ ಕೇಳಿದಾಗ,  ತಾಳಮದ್ದಳೆ  ಒಂದು  ಕಲಾಕೃತಿ ಯಾಗಿ   ರಸಸಂಪನ್ನವಾಗಿ,  ಮೌಲ್ಯ ಸಂದೇಶಕವಾಗಿ ಮೂಡಿಬರುತ್ತಿಲ್ಲ ಅಂತಲೇ  ಅನ್ನಿಸಿತು.  ಒಬ್ಬನು ಹೃಸ್ವವಾಗಿ, ಸಂಕ್ಷಿಪ್ತವಾಗಿ  ಹೇಳಿದರೆ, ಇನ್ನೊಬ್ಬ ಅತಿ ದೀರ್ಘವಾಗಿ ವಿಸ್ತಾರವಾಗಿ  ಹೇಳುವುದು , ಒಬ್ಬನು  ಪುರಾಣವನ್ನಾಧರಿಸಿ  ಹೇಳಿದರೆ ಇನ್ನೊಬ್ಬ  ದೈನಂದಿನ  ವಿಚಾರವನ್ನೇ  ಪದ್ಯಾರ್ಥಕ್ಕೆ  ಪೋಣಿಸುವುದು,  ಒಬ್ಬನು  ಭಾವುಕನಾಗಿ  ಹೇಳಿದರೆ, ಮತ್ತೊಬ್ಬ ವೈಚಾರಿಕತೆಯನ್ನೇ  ಮೆರೆಸುವುದು, ……. ಪಾತ್ರವಾಗದೇ  ಪಾತ್ರದ  ಪರ ವಕಾಲತ್ತು ವಹಿಸುವುದು, ಶ್ರುತಿ  ಬಿಟ್ಟು ರಸ-ಭಾವ ಹೀನವಾಗಿ  ಅರ್ಥ ಹೇಳುವುದು,  ದುರ್ವಾದ  ಕುತರ್ಕಕ್ಕಿಳಿಯುವುದು,  ತಾನೇ  ಗೆಲ್ಲಬೇಕೆಂಬ  ಜಿದ್ದಿಗೆ  ಬೀಳುವುದು,   ಮುಂತಾದ  ಅನೇಕ  ಅಪಸವ್ಯಗಳು  ನನ್ನ ಗಮನಕ್ಕೆ ಬಂತು.  ಇವನ್ನೆಲ್ಲ  ನೋಡಿದ  ನನಗೆ   ಕುರಿತು  ಯಾಕೆ  ವಿಮರ್ಶಾತ್ಮಕವಾಗಿ  ಬರೆಯಬಾರದು  ಎಂದು ಎನ್ನಿಸಿತು. ʼʼ

   ಲೇಖಕರ  ವಿಚಾರ  ಕಟುವಾಗಿ  ತೋರಿದರೂ   ವಾಸ್ತವದಲ್ಲಿ  ಇದು  ನಿಜವೇ.  ರಾವಣ, ಶೂರ್ಪನಖಿ, ಕೀಚಕ, ಕೌರವ, ಮುಂತಾದ  ಖಳ ಪಾತ್ರಗಳನ್ನು  ಉದಾತ್ತೀಕರಿಸಿ,  ಖಳನಾಯಕರ  ಬದಲಿಗೆ  ಪ್ರತಿನಾಯಕನನ್ನಾಗಿ  ರೂಪಿಸುವ  ಪ್ರವೃತ್ತಿ  ಇಂದು ನಿನ್ನೆಯದಲ್ಲ.  ರನ್ನನ  ದುರ್ಯೋಧನನಿಂದ,  ಕುವೆಂಪುರವರ  ರಾವಣನ  ವರೆಗೆ  ಕಾವ್ಯದಲ್ಲೂ  ಇದನ್ನು  ಕಾಣುತ್ತೇವೆ,  ಎಂದೆನ್ನುವ  ಕೃತಿಕಾರರು,  ದುಷ್ಟನೊಬ್ಬನನ್ನು  ಉದಾತ್ತೀಕರಿಸಿದಾಕ್ಷಣ   ಆತ ಗೈದ  ದುಷ್ಟತನಕ್ಕೆ  ಸಹಾನುಭೂತಿ  ದೊರಕದು ಎಂದೆನ್ನುತ್ತಾರೆ.  

    ʻʻಲೇಖಕರ  ಮಾತನ್ನೇ  ಗಮನಿಸಿದರೆ  .ʻʻ  ರಾಮಾಯಣ  ದರ್ಶನದಂತೇ  ಖಳರನ್ನು ಉದಾತ್ತೀಕರಿಸುವ,  ಸಜ್ಜನರನ್ನು ಖಳರನ್ನಾಗಿಸುವ,  ಮತ್ತು  ಮೂಲಕ್ಕೆ  ಮಸಿಬಳಿಯುವ  ವಿಚಿತ್ರ  ಫ್ಯಾಶನ್ಆಗಿದೆ  ಎಂದೇ ಹೇಳಬಹುದು. ಇದು  ಸ್ವಲ್ಪವೂ  ಹಿತಕರವಾಗಿಲ್ಲ(  ಪು. ೨೧೭)

    ʻʻ  ಗೋಪಾಲಕೃಷ್ಣ ಶೇಣಿಯವರ  ಹಾಗೆ  ಪಾತ್ರವೊಂದರ  ಪರಕಾಯ ಪ್ರವೇಶ  ಮಾಡಿ  ಭಾವ  ತಾದಾತ್ಮ್ಯವನ್ನೋ   ಪಾತ್ರಶಿಲ್ಪವನ್ನೋ,    ಪಾತ್ರೌಚಿತ್ಯವನ್ನೋ,  ಕಡೆದು ನಿಲ್ಲಿಸುವ  ಅರ್ಥಧಾರಿಗಳು  ಈಗ  ಬೆರಳೆಣಿಕೆಯಲ್ಲಿದ್ದಿರಬಹುದು.   ಒಂದೋ  ಪಾತ್ರದ  ಪರವಾಗಿ  ನಿಲ್ಲುತ್ತಾರೆ.  ಇಲ್ಲ  ವಾದ ವಿವಾದ,  ತರ್ಕ  ಕುತರ್ಕಕ್ಕೆ  ಬೀಳುತ್ತಾರೆ.  ಒಂದು  ಪಾತ್ರವಾಗಿ  ಕಾಣಿಸಿಕೊಳ್ಳುವುದಕ್ಕಿಂತ   ವ್ಯಕ್ತಿಯಾಗಿ  ಕಾಣಿಸಿಕೊಳ್ಳುವುದೇ  ಹೆಚ್ಚು.ʼʼ( ಪು- ೧೨೫)

   ತಾಳಮದ್ದಲೆಯ ವೈಶಿಷ್ಟ್ಯವೆಂದರೆ, ಅದು ಶ್ರೋತೃವಿನ ಕಲ್ಪನೆಗೆ ಅವಕಾಶ ನೀಡುತ್ತದೆ. ವೇಷವಿಲ್ಲದೆ, ದೃಶ್ಯ ವೈಭವವಿಲ್ಲದೆ, ಕೇವಲ ಪದಗಳ ಮೂಲಕವೇ ಪಾತ್ರಗಳು ನಮ್ಮ ಕಣ್ಣ ಮುಂದೆ ಜೀವಂತವಾಗುತ್ತವೆ. ರಾಮಾಯಣ, ಮಹಾಭಾರತ, ಪುರಾಣಗಳು ಮತ್ತು ಜನಪದ ಕಥನಗಳ ಅಂತರಾಳದಲ್ಲಿರುವ ಧರ್ಮಸಂಕಟ, ನೈತಿಕ ಪ್ರಶ್ನೆಗಳು, ರಾಜಕೀಯ ಕುತಂತ್ರಗಳು, ಮಾನವೀಯ ದೌರ್ಬಲ್ಯಗಳು ಮತ್ತು ಮೌಲ್ಯಗಳ ಸಂಘರ್ಷ ಇವೆಲ್ಲವೂ ತಾಳಮದ್ದಲೆಯ ಸಂವಾದಗಳಲ್ಲಿ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತವೆ.

     ಆದರೆ  ವಾಸ್ತವದಲ್ಲಿ  ಹಾಗಿಲ್ಲ.  ಅರ್ಥಧಾರಿ  ವೈಚಾರಿಕವಾಗಿ  ಪಳಗಿದಂತೇ  ಪಾತ್ರಗಳನ್ನು  ತನ್ನ ಧೋರಣೆಗೆ ನೂಕಿ,  ಮೂಲಕವಿಯ  ಆಶಯಕ್ಕೆ  ಭಂಗತರುವಂತಹ  ಉದಾಹರಣೆಗಳೂ  ಸಾಕಷ್ಟು  ಘಟಿಸುತ್ತಿವೆ.  ಮಾತು -ತರ್ಕಗಳ  ಸಂಘರ್ಷದಲ್ಲಿ,  ವೈಯಕ್ತಿಕ  ಹಿತಾಸಕ್ತಿಗಳೂ  ಸೇರಿ,  ಸ್ವಯಂ  ಪ್ರತಿಷ್ಠೆಯ  ಕುಸ್ತಿಕಣವಾಗಿ  ಮಾರ್ಪಟ್ಟ ಘಟನೆಗಳು  ಅಪರೂಪವಲ್ಲ.

     ಎರಡು  ದಿಗ್ಗಜ  ಅರ್ಥಧಾರಿಗಳಲ್ಲಿ  ಏರ್ಪಟ್ಟ ತರ್ಕ ಸಂಘರ್ಷವೊಂದು,  ತಾಳಮದ್ದಲೆ  ಕಾರ್ಯಕ್ರಮವೇ  ಅರ್ಧಕ್ಕೆ  ಸ್ಥಗಿತಗೊಂಡ  ಘಟನೆ ನಮ್ಮ ಭಾಗದಲ್ಲಿ ದಶಕದ  ಹಿಂದೆ  ಘಟಿಸಿದ್ದನ್ನು  ಇಲ್ಲಿ ನೆನಪಿಸಿ  ಕೊಳ್ಳಬಹುದಾಗಿದೆ. 

      ಅಂದು  ಕೃಷ್ಣಸಂಧಾನ   ಪ್ರಸಂಗ.  ಕೌರವ  ಮತ್ತು ಕೃಷ್ಣರ  ನಡುವೆ  ವಾಗ್ವಾದವೇರ್ಪಟ್ಟಿತ್ತು.  ಒಂದು  ಸಂದರ್ಭದಲ್ಲಿ  ಕೌರವ  ಕೃಷ್ಣನನ್ನು ದೂಷಿಸುತ್ತಾನೆ.  ʻʻನಿನಗೆ  ಪಾಯಸವೂ  ಒಂದೇ  ಪಾಯಖಾನೆಯೂ   ಒಂದೇ,ʼʼ  ಎಂದುಬಿಡುತ್ತಾನೆ.  ಪ್ರೇಕ್ಷಕರು  ಚಪ್ಪಾಳೆಯಿಕ್ಕುತ್ತಾರೆ.    ಕೃಷ್ಣ  ಉಗ್ರವಾಗಿ  ಪ್ರತಿಭಟಿಸುತ್ತಾನೆ.  ಆಗ  ಕೌರವ  ಅದಕ್ಕೆ  ಸಮಜಾಯಿಷಿ  ನೀಡುತ್ತಾನೆ.   ಕೃಷ್ಣಾ  ನೀನು  ನಿನ್ನ ತಾಯಿಗೆ  ಬಾಯಿಯಲ್ಲೇ   ಮೂರು  ಲೋಕವನ್ನು  ತೋರಿಸಿದ್ದೀಯ.    ಲೋಕಗಳಲ್ಲೆಲ್ಲೂ   ಕಕ್ಕಸೇ ಇಲ್ಲವೇ?   ಎಂದು  ತನ್ನ ಪ್ರಶ್ನೆಯಿಂದಲೇ  ಉತ್ತರಿಸಿದಾಗ,  ಮತ್ತೆ  ಪ್ರೇಕ್ಷಕರಿಂದ  ಕರತಾಡನ. 

    ಮಾತುಗಳಲ್ಲಿ  ಭಾವಸೌಂದರ್ಯಕ್ಕಿಂತ   ಬುದ್ಧಿಚಮತ್ಕಾರವೇ  ವಿಜ್ರಂಭಿಸತೊಡಗಿದಾಗ,   ತಾತ್ವಿಕತೆಗಿಂತ   ತಾರ್ಕಿಕತೆಯೇ  ಮಿಂಚಿದಾಗ,  ಇಂತಹ  ಅವಗಢಗಳು  ಸೃಷ್ಟಿಯಾಗುತ್ತವೆ. 

ಇಂದಿನ ತ್ವರಿತ ತಂತ್ರಜ್ಞಾನ ಯುಗದಲ್ಲಿ ಮಾತಿನ ಸಂಸ್ಕೃತಿ ಕುಂದುತ್ತಿರುವ ಸಂದರ್ಭದಲ್ಲಿ, ತಾಳಮದ್ದಲೆ ನಮ್ಮ ಭಾಷಾ ಸಂವೇದನೆ, ಶ್ರವಣಶಕ್ತಿ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಪುನರುಜ್ಜೀವಗೊಳಿಸುವ ಕಲೆಯಾಗಬೇಕಿದೆ. ಕಾರಣದಿಂದಲೇ ಕಲಾಪ್ರಕಾರದ ಅಧ್ಯಯನ,  ವಿಮರ್ಶೆ, ಸಂರಕ್ಷಣೆ ಮತ್ತು ಪ್ರಸಾರ ಅತ್ಯಂತ ಅಗತ್ಯವಾಗಿವೆ.  

     ಪುಸ್ತಕವು ತಾಳಮದ್ದಲೆಯ ಬಗೆಗೆ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು, ಕಲಾವಿದರು, ಸಂಶೋಧಕರು ಮತ್ತು ಸಾಮಾನ್ಯ ರಸಿಕರಿಗೆ ಒಂದು ಪ್ರವೇಶದ್ವಾರವಾಗುವ  ಶಕ್ತಿ ಹೊಂದಿದೆ.   ಅದಕ್ಕಿಂತಲೂ  ಸದ್ಯದ  ಅರ್ಥಧಾರಿಗಳಿಗೆ  ಸೂಕ್ತ  ಕಿವಿಮಾತಾಗಿದೆ.   ರಾಮಾಯಣದ  ತಾತ್ವಿಕ ಸೌಂದರ್ಯವನ್ನು  ಕವಿಭಾವದಲ್ಲೇ  ವರ್ಣಿಸುವುದರ  ಜೊತೆಗೆ,  ವರ್ತಮಾನದ   ತಾಳಮದ್ದಳೆಯ   ಅಯೋಮಯ  ಸ್ಥಿತಿಯೆಡೆಗೆ ವಿಮರ್ಶಾತ್ಮಕವಾಗಿ  ದೃಷ್ಟಿಸುತ್ತಾರೆ.   ಕವಿ  ವಾಲ್ಮೀಕಿಯ  ತಾತ್ವಿಕ  ಮಾನವೀಯ  ಮತ್ತು  ಆಧ್ಯಾತ್ಮಿಕ  ಸೂಕ್ಷ್ಮವನ್ನು  ಕವಿಮನಸ್ಸಿನಿಂದಲೇ  ಅರ್ಥೈಸಿಕೊಂಡು,  ನಮ್ಮ   ನೆಲದ  ಅಸ್ಮಿತೆಯಾದ  ತಾಳಮದ್ದಳೆಯಲ್ಲಿ  ಅವುಗಳನ್ನು ಅನ್ವಯಿಸಿಕೊಳ್ಳಬೇಕೆಂಬ   ಹಕ್ಕೊತ್ತಾಯವನ್ನು  ಮಂಡಿಸುತ್ತಿರುವ   .ನಾ ಭಟ್ಟರ  ಕಳಕಳಿ  ಮೆಚ್ಚುವಂತಹದ್ದಾಗಿದೆ.   ಮಾತಿನ ಕಲೆಯ ಅಪೂರ್ವ ಪರಂಪರೆಯನ್ನು ಅರಿಯುವ ಪ್ರಯಾಣದಲ್ಲಿ ಕೃತಿ ಸಣ್ಣದಾದರೂ ಅರ್ಥಪೂರ್ಣ ಹೆಜ್ಜೆಯಾಗಿದೆ.

 

 

  ಸುಬ್ರಾಯ  ಮತ್ತೀಹಳ್ಳಿ.    ತಾ;- ೨೪--೨೦೨೬.

ಕೃತಿ;-  ಮಾತು  ಮದ್ದಳೆ.  

ಲೇ;-  .ನಾ.ಭಟ್ಟ.   ಪು;- ೨೭೬.

ಬೆಲೆ;- ರೂ- ೩೦೦-೦೦. 

ಮಹಿಮಾ  ಪ್ರಕಾಶನ  ಮೈಸೂರು.

Top of Form

 

Bottom of Form

 

Comments

Popular posts from this blog

ಕವನವೆಂದರೆ.......................

ದೇವರು ಧರ್ಮ ಮಾನವೀಯತೆ ಇತ್ಯಾದಿ

Vishwambhara ---3